ಇಟೆಲಿಯ ತೋಟಗಳ ಮೋಡಿಗೆ, ಬಿಸಿಲಿನಲ್ಲಿನ ತರಹಾವರಿ ವರ್ಣಗಳ ನರ್ತನೆಗೆ, ಕಣ್ಣಾರೆ ಅದನ್ನು ನೋಡದೆಯೂ ಮಾರುಹೋಗದವರು ವಿರಳ. ಆದರೆ ಈ ಲಾವಣ್ಯ ಕೇವಲ ನೀಲಾಕಾಶದ ತೆಂಕಣ ನಾಡುಗಳಿಗೆ ಮಾತ್ರ ಸೀಮಿತವೆನಿಸಿದರೆ ಮೋಡಭರಿತ ಪ್ರಾಗಿನ ಬಾಂದಳದ ಈ ಸಂಭ್ರಮವನ್ನು ನೋಡಬೇಕು. ಆಜಾನುಬಾಹುವಾಗಿ ನಿಂತು ತಂಬೆಲರನ್ನು ತೀಡಿರುವ ಭವ್ಯ ಮರಗಳನ್ನು ಕಂಡು, ಅದರ ಕೆಳಗಿನ ಬಣ್ಣಬಣ್ಣದ ಗುಲಾಬಿಗಿಡಗಳ ಕಂಪನ್ನು ಸೇವಿಸಿ ತೋಟಗಾರನ ಕುಶಲತೆಗೆ ಬೆರಗಾಗಬೇಕು. ಬೀಜಕ್ಕೆ ಮೊಳಕೆ ತರಿಸಿ, ನೀರು ಹಾಯಿಸಿ, ಹಬ್ಬುವ, ಹೂಬಿಡುವ, ಕಾಯಿ ಕಳಿಯುವ ಆಯಾಕಾಲಕ್ಕೆ ತಕ್ಕ ಆರೈಕೆ ನೀಡುವವನ ಕೌಶಲ್ಯಕ್ಕೆ ಬೆರಗಾಗದಿರುವುದು ಹೇಗೆ ತಾನೇ ಸಾಧ್ಯ? ಹೂಡಿದ ಎಲ್ಲ ಸಂಕಲ್ಪವೂ ಮಾಗುವವರೆಗೆ ಕಾಯಬೇಕೆಂದು ತಿಳಿದವನ ಚಾತುರ್ಯಕ್ಕೆ ಮಾರುಹೋಗದಿರುವುದು ಸಾಧ್ಯವೇ?
ತೋಟಗಾರನ ಅರಿವು ರಾಜನಾದವನಿಗೂ ಉಪಯುಕ್ತವೆಂಬುದು ಚಕ್ರವರ್ತಿ ಮ್ಯಾಕ್ಸ್‍ಮಿಲಿಯನಿಗೆ ತಿಳಿದಿತ್ತು. ಯುವರಾಜ ರುಡಾಲ್ಫ಼ನ ಪಾಲನೆಯನ್ನು ಸಸ್ಯಜ್ಞಾನಿ ಔಜಿಯರ್ ಘಿಸೆಲಿನ್ ಡೆ ಬುಸ್ಬೆಕ್ ಹಾಗೂ ಚಿತ್ರಶಿಲ್ಪಿ ಜುಸೆಪ್ಪೆ ಆರ್ಚಿಂಬಾಲ್ಡೋ ಅವರಿಗೆ ವಹಿಸಿದ್ದ. ಒಂದೆಡೆ ಘಿಸೆಲಿನ್ ಸಸ್ಯ, ಮೂಲಿಕೆಗಳನ್ನು ಬೆಳೆಸುವ ವಿದ್ಯೆಯನ್ನೂ, ಮಗುದೊಂದೆಡೆ ಆರ್ಚಿಂಬಾಲ್ಡೋ ಲಲಿತಕಲೆಗಳ ಮಹತ್ವವನ್ನೂ ರಾಜಕುಮಾರನಲ್ಲಿ ತುಂಬಿ ಬೆಳೆಸಿದ್ದರು.
ಆಸ್ಥಾನದ ವರ್ಣಚಿತ್ರಕಾರನಾಗಿದ್ದ ಆರ್ಚಿಂಬಾಲ್ಡೋ ರಾಜಕುಮಾರನನ್ನು ಚಿಕ್ಕವನಾಗಿದ್ದಾಗಿಂದಲೂ ನೋಡಿದ್ದ. ರುಡಾಲ್‍ಫನ ಪಟ್ಟಾಭಿಷೇಕದ ಪ್ರಯುಕ್ತ ನವರಾಜನನ್ನು ಅಂದಗೊಳಿಸದೇ, ಕಣ್ಣಿಗೆ ಕಂಡ ಹಾಗೆಯೇ, ಯಾವುದೇ ಆಡಂಬರವಿಲ್ಲದೆ ಮುಖಚಿತ್ರವೊಂದನ್ನು ಬಿಡಿಸಿದ್ದ. ಸಾಮಾನ್ಯ ಸಭಿಕರಿಗಿಂತ ಭಿನ್ನವಾಗಿ, ಹೊಗಳುಭಟ್ಟನಾಗದೆಯೂ ದೊರೆಗೆ ಆಪ್ತನಾಗಿದ್ದ.
ಅವನ ಕೆಲಸ ಕೇವಲ ಚಿತ್ರ ಬಿಡುಸುವುದಷ್ಟೇ ಆಗಿರಲಿಲ್ಲ. ಆಸ್ಥಾನಕ್ಕೆ ಬಂದವರ ಮನರಂಜನೆಯ ಜವಾಬ್ದಾರಿ ಅವನದಾಗಿತ್ತು. ಕುಸ್ತಿ, ಕತ್ತಿವರಸೆಗಳ ಸ್ಪರ್ಧೆ, ಮಹಿಳೆಯರ ಕೇಶ ಹಾಗೂ ವಸ್ತ್ರವಿನ್ಯಾಸ, ಕುದುರೆ ಸವಾರಿ, ರಥ ಸಾರಥ್ಯ ಹಾಗೂ ಬಂದೂಕುಧಾರರ ಪಂದ್ಯಗಳು, ತರಹಾವರಿ ಹೂಗಿಡಗಳ ಪ್ರದರ್ಶನ, ಮದುವೆ ಮೊದಲಾದ ಔತಣಗಳು, ಪಲ್ಲಕ್ಕಿ ತೇರುಗಳ ಅಲಂಕಾರ, ಅಷ್ಟೂ ಅವನೇ ವಹಿಸಿಕೊಳ್ಳುತ್ತಿದ್ದ. ಎಲ್ಲಕ್ಕೂ ಮೀರಿ ನಿಂತಿದ್ದೆಂದರೆ ಅವನ ಚಿತ್ರಶಿಲ್ಪದ ಕಲೆ. ಬಿಡಿಸುವ ಕುಂಚ ಮುಟ್ಟಿದ್ದೆಲ್ಲಕ್ಕೂ ಚಿನ್ನದ ಬೆಲೆ. ಆಗಿನ ಕಾಲಕ್ಕೇ ಅದು ನಿಜವಾಗಿತ್ತು, ಇಂದಂತೂ ಅವುಗಳಿಗೆ ಬೆಲೆಕಟ್ಟುವುದೇ ಕಷ್ಟ.
ಮೂವರು ರಾಜರ ಸೇವೆಯಲ್ಲಿ ಹಲವು ದಶಕಗಳನ್ನು ಪ್ರಾಗಿನಲ್ಲಿ ಕಳೆದ ಆರ್ಚಿಂಬಾಲ್ಡೋ ಹುಟ್ಟುನೆಲ ಇಟೆಲಿಗೆ ಮರಳಬೇಕೆಂಬ ಹಂಬಲ ವ್ಯಕ್ತಪಡಿಸಿದಾಗ ರುಡಾಲ್‍ಫನಿಗೆ ಬೇಸರವೆನಿಸಿದರೂ ಇಲ್ಲವೆನಲಾಗಿರಲಿಲ್ಲ. ದೊರೆ ಮನಸ್ಸಿಲ್ಲದೆಯೇ ಸಮ್ಮತಿಸಿ ಅವನು ಬಿಡಿಸಿದ ಚಿತ್ರಗಳೆಲ್ಲವನ್ನೂ ತನಗೇ ಕಳಿಸಿಕೊಡಬೇಕೆಂದು ತಾಕೀತು ಮಾಡಿದ್ದ.
ಆರ್ಚಿಂಬಾಲ್ಡೋ ಮಿಲಾನಿನ ಗಣ್ಯಸಮಷ್ಠಿಯಲ್ಲಿ ಮತ್ತೆ ಮನೆಮಾಡಿದ. ಕವಿ, ಸಂಗೀತಗಾರ ಬಳಗದವರು ಅವನ ಕುಶಲತೆಯನ್ನು ಹಾಡು, ಲಾವಣಿಗಳಲ್ಲಿ ಕೊಂಡಾಡಿದ್ದರು. ಇವುಗಳ ನಡುವೆಯೂ ಚಿತ್ರಕಲೆಯನ್ನು ಅವನು ಕಡೆಗಣಿಸದೇ, ಮಾತಿಗೆ ಅನುಗುಣವಾಗಿ ಬಿಡಿಸಿದ ಚಿತ್ರಗಳನ್ನು ಒಂದೊಂದಾಗಿ ಪ್ರಾಗಿಗೆ ಕಳಿಸಿಕೊಡುತ್ತಿದ್ದ. ಕಾಲಕ್ರಮೇಣದಲ್ಲಿ ಮಹಾರಾಜನ ಮುಖಚಿತ್ರವನ್ನೂ ಕಳಿಸಿಕೊಟ್ಟ. ಅದು ಎಷ್ಟು ವಿಲಕ್ಷಣವಾಗಿತ್ತೆಂದರೆ ಅದನ್ನು ಬಿಡಿಸಲು ಬೇರಾರಿಗೂ ಸಾಧ್ಯವಿರಲಿಲ್ಲ. ಅದನ್ನು ಅರ್ಥೈಸಿಕೊಂಡು ಮೆಚ್ಚಿಕೊಳ್ಳುವ ಸಾಮರ್ಥ್ಯ ಕೂಡಾ ರುಡಾಲ್‍ಫ಼ನಿಗಲ್ಲಿದೇ ಇನ್ನಾರಿಗೂ ಇರಲಿಲ್ಲ. ಪಾಳೆಯಗಾರನ ಪಟ್ಟವನ್ನೂ, ನಾಡೋಜನೆಂಬ ಬಿರುದನ್ನೂ ಆರ್ಚಿಂಬಾಲ್ಡೋಗೆ ನೀಡಿ ಗೌರವಿಸುವುದಾಗಿ ಠರಾವು ಹೊರಡಿಸಿದ. ಕಲಾವಿದನೊಬ್ಬನಿಗೆ ಇದಕ್ಕಿಂತ ಮಿಗಿಲಾದ ಮರ್ಯಾದೆ ಇರಲಿಲ್ಲ. ಸನ್ಮಾನ ಸಮಾರಂಭಕ್ಕೋಸ್ಕರ ಆರ್ಚಿಂಬಾಲ್ಡೋ ಮತ್ತೆ ಪ್ರಾಗಿಗೆ ಆಗಮಿಸಿದ. ಅವನಿಗಾಗ ಅರವತ್ತೈದರ ವಯಸ್ಸು. ಈ ನಮ್ಮ ಸಂಗತಿ ಆಗಿನ ಸಂದರ್ಭದ್ದು.
ಇಲ್ಲಿಯವೆರೆಗೆ ಹೇಳಿದ್ದೆಲ್ಲ ಇತಿಹಾಸದ ಹೊತ್ತಗೆಗಳಿಂದ ಪ್ರಮಾಣಿಸಬಹುದಾದ ಸತ್ಯ ವೃತ್ತಾಂತ. ಈ ಮುಂದೆ ಹೇಳಹೊರಟಿರುವುದಕ್ಕೆ ಯಾವ ಪುಸ್ತಕದಲ್ಲೂ ಪ್ರಮಾಣಗಳಾಗಲೀ, ದಾಖಲೆಗಳಾಗಲೀ ಇಲ್ಲ. ಹಾಗಂತ ನಡೆದಿರಲಿಕ್ಕೆ ಅಸಾಧ್ಯವೇನೂ ಅಲ್ಲ. ಎಷ್ಟಾದರೂ ಆ ಮುಖಚಿತ್ರ ಇರುವುದು ಖಚಿತವಷ್ಟೇ?
ರಾಜಕಾರಣವೆಂದ ಮೇಲೆ ಎಲ್ಲ ರಾಜರಂತೆ ಸಾಮ್ರಾಟ ರುಡಾಲ್‍ಫನಿಗೂ ಸಂದಿಗ್ಧ ಪರಿಸ್ಥಿತಿಗಳು ಕಡಿಮೆಯೇನಿರಲಿಲ್ಲ. ಪ್ರಾಗಿಗೆ ನಿಯೋಗವೊಂದು ಆಗಮಿಸಿತ್ತೆಂದು ಇಟ್ಟುಕೊಳ್ಳೋಣ. ರಾಯಭಾರಿ ಪ್ರಭುಗಳನ್ನು ಕಾಣಲು ಅರಮನೆಗೆ ಎರವಲು ಕಳುಹಿಸಿದ. ಸಾಮ್ರಾಟನಿಗೆ ದೂತ ಬಂದ ಕಾರಣ ಮೊದಲೇ ತಿಳಿದಿತ್ತು. ಆದರೆ ಅವನ ಕೋರಿಕೆಯನ್ನು ಪೂರೈಸಲು ಮಾತ್ರ ಸಾಧ್ಯವಿರಲಿಲ್ಲ. ಸಂದರ್ಶನವಾಗದಂತೆ ನೋಡಿಕೊಳ್ಳಬೇಕು; ಹಾಗೆಯೇ ಆತನಿಗೂ, ಅವನನ್ನು ಕಳುಹಿಸಿದ ದೊರೆಗೂ ಅವಮಾನವಾಗದಂತೆ ನಡೆದುಕೊಳ್ಳಬೇಕಿತ್ತು.
ಬಂದ ದೂತನಿಗೆ ಸಕಲ ಸೌಕರ್ಯಗಳನ್ನೂ ಒದಗಿಸಿ, ಪ್ರತಿದಿನ ನಗರದ ಮಹಾಶಯರಲ್ಲೊಬ್ಬರು ನಿಯೋಗವನ್ನು ಒಂದಲ್ಲಾ ಒಂದು ಸಭೆಗೋ, ಸಮಾರಂಭಕ್ಕೋ ಆಹ್ವಾನಿಸಿದ್ದರು. ಬರಿಯ ಕೇಳಿಯಲ್ಲಿ ಬಂದ ಕಾಲವೆಲ್ಲ ಕಳೆದುಹೋಗುತ್ತಿದೆ, ಬಂದ ಕೆಲಸ ಮುಂದುವರೆಯಲೇ ಇಲ್ಲವೆನಿಸತೊಡಗಿತು. ಸಾಮ್ರಾಟನ ಹೆಸರೆತ್ತುತ್ತಿದ್ದಂತೆಯೇ ಪ್ರಭುಗಳಿಗೆ ಸ್ವಸ್ಥವಿಲ್ಲವೆಂಬ ಮಾರುತ್ತರ ಮುಂದಾಗುತ್ತಿತ್ತು. ಅದರ ಹಿಂದೆಯೇ ನವಬಿರುದಾಂಕಿತ ನಾಡೋಜನ ಹೆಸರು ಮತ್ತೆ ಮತ್ತೆ ಕೇಳಬಂದು, ತನಗೆ ನೆರವಾಗಲು ಅವನೇ ಸರಿಯೆನಿಸಿ ಆರ್ಚಿಂಬಾಲ್ಡೋಗೆ ಸಂದರ್ಶನದ ಕೋರಿಕೆ ಕಳುಹಿಸಿದ. ಅಪ್ಪಣೆಯಾಯಿತು.
ರಾಯಭಾರಿಗೆ ತನ್ನೆದುರಿಗೆ ಯಾವುದೋ ನಿಗೂಢ ವ್ಯಕ್ತಿಯೊಂದು ಕುಳಿತಿರುವಂತೆ ಭಾಸವಾಯಿತು. ಮುಖವನ್ನು ನೋಡಿದ ಕೂಡಲೇ ಅಂದುಕೊಂಡಿದ್ದಕ್ಕಿಂತ ಕ್ಲಿಷ್ಟ ಒಗಟು ಇದು ಎಂಬುದು ಸ್ಪಷ್ಟವಾಗಿತ್ತು. ಆರ್ಚಿಂಬಾಲ್ಡೋ ಕಪ್ಪು ವಸ್ತ್ರ ಧರಿಸಿದ್ದ, ತಲೆಯ ಮೇಲೆ ಗೋಪುರದಂತಹ ಉದ್ದ ಟೋಪಿ. ಎಲ್ಲಿಯೂ ಆಭರಣದ ಸುಳಿವಿಲ್ಲ, ಆಡಂಬರದ ಸೋಂಕಿಲ್ಲ. ಕೊರಳನ್ನು ಸುತ್ತಿಬರುವಂತೆ ತಲೆಯ ಹಿಂದಿನವರೆಗೂ ಒಪ್ಪವಾಗಿ ಮಡಿಸಿಕೊಂಡು ಹಾಕಿಕೊಂಡಿದ್ದ ಕತ್ತುಪಟ್ಟಿಯ ಮೇಲೆ ನೀಳವಾದ ಕೋಲುಮುಖ, ಅಲ್ಲಲ್ಲಿ ಬಿಳಿಯಾದ ಕುರುಚಲು ಗಡ್ಡ. ಎಲ್ಲಕ್ಕಿಂತ ನಿಗೂಢವೆಂದರೆ ಹಳ್ಳಗಳಂತಿದ್ದ ಕಪ್ಪು ಕಣ್ಣುಗಳು. ಒಂದೊಂದಾಗಿ ಶರೀರದ ಪದರಗಳನ್ನು ತೂರಿ ಅಂತರಂಗವನ್ನೇ ಬರಿದು ಮಾಡುವಂತಹ ತೀಕ್ಷ್ಣತೆ.
ಮನದೊಳಗಿನ ಭಾವನೆಗಳನ್ನು ಯಾರಿಗೂ ಬಿಟ್ಟುಕೊಡದಂತೆ ಎಚ್ಚರವಹಿಸುತ್ತಿದ್ದ ದೂತನಿಗೆ ಆ ಕಣ್ಣುಗಳಿಂದ ಪಾರಾಗಲು ಸಾಧ್ಯವಿಲ್ಲವೆಂದೆನಿಸಿ ಏನೂ ತೋಚದೇ ಒಮ್ಮೆ ಕೈಯೆತ್ತಿ ಮುಖವನ್ನು ಸವರಿಕೊಂಡ. ಕೈ ಎದೆಯ ಮೇಲೆ ಬಂದು ನಿಂತಿತು. ಒಂದು ಕ್ಷಣ ಆ ಮುದುಕ ತನ್ನನ್ನು ನೋಡುತ್ತಲೇ ಇಲ್ಲವೇನೋ ಎಂದೂ ಎನಿಸಿತು. ದೂರದ ಶೂನ್ಯದೆಡೆಗೆ ನೆಟ್ಟಿದಂತಿದ್ದ ಕಣ್ಣುಗಳಲ್ಲಿ ಯಾವುದೋ ಖಿನ್ನತೆ, ಗುಳಿಬಿದ್ದ ಗಲ್ಲದಲ್ಲಿ ಸಣ್ಣ ನಡುಕ. ಇಹಲೋಕದ ದುಃಖವನ್ನು ಮೀರಿದ, ಜೀವಿತಕ್ಕೇ ಅಂಟಿಕೊಂಡಂತಹ ಯಾವುದೋ ಅನಂತ ಶೋಕ ವದನದಲ್ಲಿ ಮೂಡಿದಂತಿತ್ತು.
ಕ್ಷಣಮಾತ್ರದಲ್ಲಿ ಎಲ್ಲವೂ ಮಾಯವಾಗಿ ವೃದ್ಧನ ಮುಖದಲ್ಲಿ ಮುಗುಳುನಗೆ ಇಣುಕಿತು. ರಾಯಭಾರಿಯನ್ನು ಎಂದಿಲ್ಲದ ಆತ್ಮೀಯತೆಯಿಂದ ಬರಮಾಡಿಕೊಂಡ. ಆರ್ಚೊಂಬಾಲ್ಡೋ ತೋರಿದ ನೈಜ ವಾತ್ಸಲ್ಯ ದೂತನ ಮನಸ್ಸಿಗೆ ತಾಟಿ, ಎಂದಿಗಿಂತ ಮೀರಿದ ಮುಕ್ತತೆಯಿಂದ ಮಾತನಾಡಲು ಆರಂಭಿಸಿದ. ನಾಡೋಜನ ಜೊತೆ ನೆಡೆಸಿದ ಅನೇಕ ವಿದ್ಯಮಾನಗಳ, ವಿವಿಧ ಪ್ರಾಕಾರಗಳ ಬಗೆಗಿನ ಸಂವಾದ ಆಪ್ಯಾಯಮಾನವೆನಿಸಿ ಅವನ ವಿಶಾಲ ಜ್ಞಾನಕ್ಕೆ ಬೆರಗಾಗಿಹೋದ.
ತನ್ನ ಕೆಲಸದ ವಿಷಯವನ್ನು ತೆಗೆದು, ಇನ್ನು ಮೂರು ದಿನಗಳಲ್ಲಿ ಬಂದ ಕೆಲಸ ನೆರವೇರಲಿಲ್ಲವೆಂದರೆ ಬರಿಗೈಯಲ್ಲಿ ಹಿಂದಿರುಗಬೇಕಾದೀತೆಂದು ತಿಳಿಸಿದ. ತನ್ನ ಬಗೆಗಿನ, ತನ್ನನ್ನು ಕಳಿಸಿಕೊಟ್ಟ ದೊರೆಯ ಬಗೆಗಿನ ತಾತ್ಸಾರ ಅರ್ಥವಾಗಲಾರದೆ, ಸಾಮ್ರಾಟರ ಅಸ್ವಸ್ಥತೆ ಬರಿಯ ಸಬೂಬು ಎನಿಸುತ್ತೆ ಎಂದು ತನ್ನ ಅಳಲನ್ನು ತೋಡಿಕೊಂಡ.
ಆರ್ಚಿಂಬಾಲ್ಡೋ ಅದಕ್ಕೆ, “ಪ್ರಭುಗಳ ಆರೋಗ್ಯ ಈಗ ಎಷ್ಟೋ ಸುಧಾರಿಸಿದೆ. ಗುಲಾಬಿಗಳು ಅರಳುವ ಈ ಋತುವಿನಲ್ಲಿ ಅರಮನೆಯ ತೋಟದಲ್ಲಿ ವಿಹರಿಸಿವುದು ಪ್ರಭುಗಳಿಗೆ ವಾಡಿಕೆ. ಹಾಗಂತ ಕೆಲಸವನ್ನು ಕಡೆಗಣಿಸುವಿದಿಲ್ಲ. ಗುಲಾಬಿವನದಲ್ಲೂ ರಾಜಕಾರಣ ನಡೆಸುವುದನ್ನು ರೂಢಿಸಿಕೊಂಡಿದ್ದಾರೆ” ಎಂದ.
ದೂತ “ಗುಲಾಬಿವನದಲ್ಲಿ ತನ್ನ ಕೆಲಸವೂ ಹೂವಿನಂತೆ ಹಗುರವಾಗಬಹುದು” ಎಂದು ಆಶಯಿಸಿದ.
ಆರ್ಚಿಂಬಾಲ್ಡೋ ಮುಖದಲ್ಲಿ ಮತ್ತೆ ಸಣ್ಣ ಮುಗುಳ್ನಗೆ. “ಮಹಾಪ್ರಭುಗಳು ಒಳ್ಳೆಯ ತೋಟಗಾರರೂ ಸಹ” ಎಂದಷ್ಟೇ ಅಂದ.
“ಹಾಗಾದರೆ ರಾಜೋದ್ಯಾನದಲ್ಲಿ ನಾಳೆಯ ದಿನ ಪ್ರಭುಗಳ ದರ್ಶನವಾಗಬುಹುದಲ್ಲವೇ?” ಎಂದು ಕೇಳಿದ.
“ನನಗೆ ಖಚಿತವಾಗಿ ತಿಳಿದಿಲ್ಲದಿರುವ ವಿಷಯದ ಬಗ್ಗೆ ನಿಮಗೆ ಭರವಸೆ ನೀಡಲಾರೆ. ಉದ್ಯಾನದಲ್ಲಿ ನೀವು ಕಳೆಯುವ ಸಮಯ ಸುಖಭರಿತವಾಗಿರುತ್ತದೆ ಎನ್ನುವುದರಲ್ಲಿ ನನಗೆ ಸಂದೇಹವಿಲ್ಲ”, ಎಂದು ಹೇಳಿ ಮರುದಿನ ಮತ್ತೆ ಬರಬೇಕೆಂಬ ಆಹ್ವಾನವನ್ನು ನೀಡುತ್ತಾ ರಾಯಭಾರಿಯನ್ನು ಬೀಳುಕೊಂಡ.
ಈ ಮುದುಕ ಕೇವಲ ಚಿತ್ರಕಾರ ಮಾತ್ರ ಅಲ್ಲ, ಮಾತಿನ ಗಾರುಡಿಗ ಎಂಬುದರಲ್ಲಿ ಎರಡು ಮಾತಿಲ್ಲ, ನನಗೆ ಅವನಿಂದ ಸಹಾಯವಾಗಬಹುದೆಂಬುದರಲ್ಲಿ ಸಂಶಯವಿಲ್ಲ. ಆಡಿದ ಮಾತೆಲ್ಲವೂ ನನಗೆ ಪೂರಕವಾಗಿ ತೋರಿದರೂ ನನ್ನ ಎಚ್ಚರದಲ್ಲಿ ನಾನಿರಬೇಕು. ಕೇಳಿದ್ದೆಲ್ಲವನ್ನೂ ನಂಬುವಂತಿಲ್ಲ ಅಂದುಕೊಳ್ಳುತ್ತಾ ದೂತ ನಿದ್ದೆಹೋದ.
ಮಾರನೆಯ ದಿನ ಬೆಳಗಾಗುತ್ತಿದ್ದಂತೆಯೇ ನಿಯೋಗವು ಅರಮನೆಯ ಉದ್ಯಾನವನದ ಮರಗಿಡಗಳ ನಡುವೆ ಹೆಜ್ಜೆಯಿಟ್ಟಾಗಿತ್ತು. ಅಲ್ಲಿಯೇ ಇದ್ದ ಪರಿಚಾರಕರು ಒಂದಲ್ಲಾ ಒಂದು ಸೋಜಿಗವನ್ನು ಅಥಿತಿಗಳಿಗೆ ತೋರಿಸುವುದಕ್ಕೆ ಸಹಜವಾಗಿಯೇ ಮುಂದಾದರು. ಸಾಮ್ರಾಟನು ಆ ತೋಟದಲ್ಲಿ ಪ್ರಪಂಚದ ಅನೇಕ ವಿಸ್ಮಯಗಳನ್ನು ಕಲೆಹಾಕಿದ್ದನು. ಉಷ್ಣಪ್ರದೇಶಗಳಿಂದ ತಂದು ನೆಟ್ಟ ಗಿಡಮರಗಳು ಕಾಲಕ್ರಮೇಣ ಇಲ್ಲಿನ ಹವೆಗೆ ಹೊಂದುಕೊಂಡಿದ್ದವು. ಪ್ರಾಗಿನ ಚಳಿಗಾಲವು ಅತಿಯೆನಿಸಿದವುಗಳಿಗೆ ಭವ್ಯ ಗಾಜಿನ ಮನೆಯೊಂದನ್ನು ಕಟ್ಟಿಸಿದ್ದನು. ಘಿಸೆಲಿನ್ ಡೆ ಬುಸ್ಬೆಕ್ ಟರ್ಕಿಯಿಂದ ತಂದ ವಿಚಿತ್ರ ಟ್ಯೂಲಿಪ್ ಗೆಡ್ಡೆಗಳನ್ನು ಇಲ್ಲಿನ ತೋಟಗಾರರು ಕಸಿ ಮಾಡಿ ಹೊಸ ಹೊಸ ಪ್ರಭೇದಗಳನ್ನು ಬೆಳೆಸಿದ್ದರು. ಔಷಧವೆನಿಸಿದ್ದ ಕಿತ್ತಳೆಮರ, ಪರಿಮಳಭರಿತ ಜಾಜಿಯ ಬಳ್ಳಿ, ಸಿಹಿಯಾದ ಅಂಜೂರ, ಎಲ್ಲವುದಕ್ಕೂ ಯಕ್ಷಬಲವಿದೆಯೆಂದು ರಾಜ ನಂಬಿದ್ದನು.
ಎಲ್ಲಕ್ಕಿಂತಲೂ ಶ್ರೇಷ್ಠವೆನಿಸಿದ್ದು ದಾಳಿಂಬೆ. ಗ್ರೀಕರ ಹೆಸ್ಪೆರಿಡೆಸ್ ಉದ್ಯಾನದಲ್ಲಿ ಅಪ್ಸರೆಯರು ಬೆಳೆಸುತ್ತಿದ್ದ ಅಮೃತಫಲವದು. ಪದರಗಳನ್ನು ಬಿಡಿಸಿದಂತೆ ಒಪ್ಪವಾಗಿ ಜೋಡಿಸಿದ ಒಂದೊಂದು ಕಾಳಲ್ಲೂ ಸೃಷ್ಟಿಕರ್ತನ ಅನಂತ ಲೀಲೆ ಗೋಚರಿಸುವುದಷ್ಟೇ?
ಸಾಮ್ರಾಟನಿಗೆ ಇಷ್ಟವಾದ ಎಲ್ಲಕಡೆ ಸುತ್ತಿದರೂ ಎಲ್ಲಿಯೂ ಅವನ ದರ್ಶನವಾಗಲಿಲ್ಲ. ಉದ್ಯಾನದಲ್ಲಿ ವಿಹಾರಕ್ಕೆಂದು ಬಂದ ಕುಲೀನ ವರ್ಗದವರನ್ನು ಹಿಂಬಾಲಿಸಿದ್ದ ಮೇಳದವರು ವಾದ್ಯಗಳನ್ನು ನುಡಿಸುತ್ತಿದ್ದು, ತಂಪಾದ ಗಾಳಿಯಲ್ಲಿ ಸಂಗೀತವೂ ತೇಲಿಬಂದಿತ್ತು. ಬಂದವರಿಗೆ ದಣಿವಾದಾಗ ಪರಿಚಾರಕರು ಒಂದೆಡೆ ಹರಡಿದ್ದ ಡೇರೆಗೆ ಕೊಂಡೊಯ್ದರು. ಹಾಸುಹಾಕಿದ್ದ ಮೇಜಿನ ಮೇಲೆ ತರಹಾವರಿ ತಿನಿಸುಗಳು, ನೆಲದ ಮೇಲಿದ್ದ ತಪ್ಪಲೆಗಳಲ್ಲಿ ತಣ್ಣಗಿಟ್ಟಿದ್ದ ಸವಿಯಾದ ಮದ್ಯಪಾನೀಯದ ಶೀಷೆಗಳು ಅವರಿಗೋಸ್ಕರ ತಯಾರಾಗಿದ್ದವು.
ನಿಯೋಗದವರು ಸುಧಾರಿಸಿಕೊಳ್ಳುತ್ತ ಕುಳಿತಿರಲು, ಸೊಗಸಾದ ಉಡುಪು ಧರಿಸಿದ್ದ ಚೆಲುವೆಯರ ಗುಂಪೊಂದು ಡೇರೆಗೆ ಬಂದು ಸೇರಿತು. ಎಲ್ಲರ ಕೈಯಲ್ಲಿಯೂ ಒಂದೊಂದು ಗುಲಾಬಿ. ಸ್ವತಃ ಮಹಾಪ್ರಭುಗಳೇ ಅನುಗ್ರಹಿಸಿದ್ದು ಎಂದ ಅವರ ಮಾತು ಕೇಳಿ ನಿಯೋಗದವರಿಗೆ ಪ್ರಭುಗಳು ತೋಟದಲ್ಲಿರುವುದು ಖಚಿತವಾಯಿತು. ದೊರೆಗಳು ಎಲ್ಲಿ ಸಿಕ್ಕರು ಎಂದು ಕೇಳಿದರೆ ಯಾರಿಗೂ ಸರಿಯಾಗಿ ಉತ್ತರ ಹೇಳಲು ಬರಲಿಲ್ಲ. ಒಬ್ಬೊಬ್ಬರೂ ತೋಟದ ಬೇರೆ ಬೇರೆ ಭಾಗದ ಕಡೆ ಕೈಮಾಡಿದಾಗ ರಾಯಭಾರಿಯು, “ಸರಿ ಹಾಗಾದರೆ, ನಡೆಯಿರಿ ಎಲ್ಲಿ ಸಿಕ್ಕರೆಂದು ನಮಗೆ ನೀವೇ ತೋರಿಸಿ” ಎಂದು ಕೋರಿದ. ಅಂಗನೆಯರು ನಿಯೋಗದ ಒಬ್ಬೊಬ್ಬರನ್ನೂ ತಮಗೆ ತೋರಿದ ದಾರಿಯಲ್ಲಿ ಕರೆದುಕೊಂಡು ನಡೆದರು. ಪಕ್ಕದಲ್ಲಿ ನಡೆದವಳ ಲಾವಣ್ಯಕ್ಕೆ ದೂತ ಮಾರುಹೋಗಿದ್ದ.
ಸಂಜೆ ಆರ್ಚಿಂಬಾಲ್ಡೋ ಮನೆಯ ಬಾಗಿಲಲ್ಲಿ ನಿಂತವನಿಗೆ ಏನು ಹೇಳುವುದೆಂದು ಸ್ವಲ್ಪ ಮುಜುಗರವಾಯಿತು. ಉದ್ಯಾನದಲ್ಲಿ ಕಳೆದ ಸಮಯ ಆನಂದದಾಯಕವಾಗಿತ್ತೆಂಬುದನ್ನು ಅಲ್ಲಗಳೆಯಲು ಸಾಧ್ಯವಿರಲಿಲ್ಲ.
ಎದುರಾದಾಗ ಏನೂ ಹೇಳುವುದೂ ಬೇಕಿರಲಿಲ್ಲ; ಅವನಿಗಾಗಲೇ ಎಲ್ಲವೂ ತಿಳಿದಿತ್ತು.
“ಆ ಲಲನೆಯರು…” ಏಂದು ಶುರುಮಾಡಿದ ನಾಡೋಜನ ತುಟಿಯ ಕೊನೆಯಲ್ಲಿ ಮಂದಹಾಸವಿತ್ತು. “ಅವರನ್ನು ಕಳಿಸಿದ್ದು ಸ್ವತಃ ರಾಣೀ ಸಾಹೇಬರೇ. ನಿಮ್ಮ ಮನರಂಜನೆಗೋಸ್ಕರ.”
“ಅಂತಹ ರಂಜನೆಯನ್ನು ಯಾರು ತಾನೇ ನಿರಾಕರಿಸಲು ಸಾಧ್ಯ ಹೇಳಿ” ಎಂದು ತಾನೂ ನಕ್ಕ. ಆದರೆ ಬಹುಮುಖ್ಯ ದಿನವೊಂದನ್ನು ಕಳೆದುಕೊಂಡ ಖಿನ್ನತೆ ಮುಖದಲ್ಲಿ ಮೂಡಿತ್ತು. “ಗುಲಾಬಿಗಳ ಪುರಾವೆಯೊಂದನ್ನು ಬಿಟ್ಟರೆ ಇಡೀ ತೋಟದಲ್ಲಿ ಸಾಮ್ರಾಟರ ಸುಳಿವು ಸಹ ಇರಲಿಲ್ಲ. ಅದನ್ನು ರುಜುವಾತೆಂದು ನಂಬುವುದಾದರೂ ಹೇಗೆ? ಹಾಗಾದರೆ ನೀವು ಹೇಳಿದಂತೆ ಪ್ರಭುಗಳನ್ನು ಕಾಣುವುದು ಅಸಾಧ್ಯವೆನಿಸುತ್ತದೆ.”
“ಹಾಗೇನಿಲ್ಲ. ದೊರೆಗಳು ಪ್ರತಿದಿನವೂ ಸಂದರ್ಶನ ನೀಡುವುದಿಲ್ಲ. ಆದರೆ ನಿಮಗೆ ಸಂತೋಷದ ಸುದ್ದಿಯೊಂದನ್ನು ತಂದಿರುವೆ. ನಾಳೆಯ ದಿವಸ ನಿಮಗೆ ರಾಜೋದ್ಯಾನದಲ್ಲಿ ಪ್ರಭುಗಳ ದರ್ಶನವಾಗುವುದು.” ಎಂದು ಸ್ವಲ್ಪ ತಡೆದು “ಬೇಕಾದರೆ…” ಎಂದು ಮುಂದುವರೆಸಿದ. ತುಟಿಯ ಕೊನೆಯಲ್ಲಿ ಮತ್ತೆ ಅದೇ ಮಂದಹಾಸ.
“ಬೇಕಾದರೆ?”
“ಬೇಕಾದರೆ ಸಂದರ್ಶನವೂ ಆಗಬಹುದು” ಎಂದು ನಿಲ್ಲಿಸಿದ.
ಇದೇನಿದು ವಿಪರ್ಯಾಸ? ಬೇಕಾದರೆ ಸಂದರ್ಶನವಂತೆ. ಇಷ್ಟು ದಿನ ಕಾದಿದ್ದೇಕಂತೆ? ಈ ಮುದುಕನಿಗೆಲ್ಲೋ ನಿಗೂಢ ಮಾತುಗಳೆಂದರೆ ಬಲು ಇಷ್ಟವೆನಿಸುತ್ತದೆ. ವಯಸ್ಸಾದಂತೆ ನಿಗೂಢತೆಗೂ ವಿಪರ್ಯಾಸಕ್ಕೂ ಇರುವ ವ್ಯತ್ಯಾಸ ಮರೆತುಹೋಯಿತೇನೋ ಪಾಪ ಎನಿಸಿತು.
ಮಾರನೆಯ ದಿನ ನಾಡೋಜನ ಮಾತುಗಳ ಭರವಸೆ ತುಂಬಿಕೊಂಡು ನಿಯೋಗ ಮತ್ತೆ ಉದ್ಯಾನಕ್ಕೆ ಆಗಮಿಸಿತು. ಬರಮಾಡಿಕೊಂಡ ಸೇವಕನು “ಇದೇ ದಾರಿಯಲ್ಲಿಯೇ ಹಿಂಬಾಲಿಸಿರಿ” ಎನ್ನುತ್ತಾ ಬಿರುಸುಹೆಜ್ಜೆಯಿಟ್ಟು ಬಲಕ್ಕೆ ತಿರುಗಿ ಮಾಯವಾದ. ರಾಯಭಾರಿ ತನ್ನ ಸಹಯೋಗಿಗಳೊಡನೆ ಸಾವಧಾನವಾಗಿ ಅವನು ಹೋದ ದಾರಿಯಲ್ಲಿ ಮುನ್ನಡೆದ. ಇಲ್ಲಿಯೇ ಎಲ್ಲೋ ದರ್ಬಾರು ಇರಬೇಕು ಎಂದುಕೊಳ್ಳುತ್ತಾ ಅಲ್ಲಿನ ಸಭೆಯ ಭವ್ಯತೆಯ ಮೆರುಗನ್ನು ಮನದಲ್ಲೇ ಚಿತ್ರಿಸುತ್ತಾ, ಸಭಿಕರ ಜರತಾರಿ ಉಡುಪುಗಳು, ಧರಿಸಿರಬಹುದಾದ ತರಹೇವಾರಿ ಕಿರೀಟ ಮುಕುಟಗಳು, ನೆಲಹಾಸಿನ ಹಾಗೂ ಆಸನಗಳ ಘನತೆಯ ಬಗ್ಗೆ ಒಬ್ಬರಿಗೊಬ್ಬರು ಮಾತನಾಡಿಕೊಂಡರು. ಅವರು ತೊಟ್ಟ ಉಡುಪು ಕೂಡಾ ಅದಕ್ಕೆ ಸಮನಾಗಿಯೇ ಇತ್ತು. ಮುತ್ತು ಇನ್ನಿತರ ರತ್ನಗಳನ್ನು ಪೋಣಿಸಿದ್ದ ಹಾರ, ಜರತಾರಿ ಪೇಟಗಳು, ರೇಷ್ಮೆಯ ನಿಲುವಂಗಿ, ಉತ್ಕೃಷ್ಟ ಉಣ್ಣೆಯ ಷರಾಯಿ, ಎಲ್ಲವೂ ಕಳಿಸಿಕೊಟ್ಟ ದೊರೆಯ ಸಂಪತ್ತನ್ನೂ, ಘನತೆಯನ್ನೂ ಸಾರಿ ಹೇಳಿದ್ದವು.
ನಿಯೋಗವು ಗುಲಾಬಿಗಿಡಗಳ ಪೊದೆಯೊಂದರ ಮುಂದೆ ಹಾಯಿತು. ಅಲ್ಲಿ ಕಾರ್ಯನಿರತನಾದ ತೋಟಗಾರನು ಇಟೆಲಿಯವರು ತೊಡುವಂತಹ ಅಗಲವಾದ ಬೆತ್ತದ ಟೋಪಿಯನ್ನು ಧರಿಸಿದ್ದ. ಗುಲಾಬಿಗಳನ್ನು ಒಂದೊಂದಾಗಿಯೇ ಗಿಡದಿಂದ ಕತ್ತರಸಿ ಪಕ್ಕದಲ್ಲಿ ನಿಂತಿದ್ದ ಸೇವಕನು ಕಟ್ಟುತ್ತಿದ್ದ ಹೂಗುಚ್ಛಕ್ಕೆ ಜೋಡಿಸಲು ಕೊಡುತ್ತಿದ್ದ. ಪ್ರತಿಸಲವೂ ಕೈನೀಡಿ ಹೂವನ್ನು ತೆಗೆದುಕೊಳ್ಳುವ ಮುನ್ನ ಸೇವಕ ತಲೆತಗ್ಗಿಸಿ ನಮಿಸುತ್ತಿದ್ದ. ದೂತನು ಅವನ ಶ್ರದ್ಧೆಯನ್ನೂ, ಅಲ್ಲಿದ್ದ ಅಮೋಘವಾದ ಹೂಗಳನ್ನೂ ಮೆಚ್ಚಿಕೊಂಡು ತೋಟಗಾರನ ಕೆಲಸವನ್ನು ಶ್ಲಾಘಿಸಿ ಒಂದೆರಡು ಮಾತನಾಡಿದ. ಕೆಲಸ ಮಾಡುತ್ತಿದ್ದವರನ್ನು ಮಾತನಾಡಿಸದನೋ ಅಥವಾ ಬರಿಯ ಹೂಗಳ ಸೌಂದರ್ಯವನ್ನು ವರ್ಣಿಸಿದನೋ ಗೊತ್ತಾಗದಂತಿತ್ತು. ಟೋಪಿ ಧರಿಸಿದ್ದ ತೋಟಗಾರ ತನ್ನನ್ನೇ ಮಾತನಾಡಿಸಿದ್ದೆಂದು ಬಗೆದು ಉತ್ತರಿಸಿದ.
ಧರಿಸಿದ್ದ ಟೋಪಿಯಂತೆಯೇ ಉಪಯೋಗಿಸಿದ ಭಾಷೆಯೂ ಇಟೆಲಿಯನ್. “ಈ ಹೂಗಳು ಮಹಾಪ್ರಭುಗಳಿಗೆ ಸೇರತಕ್ಕವು” ಎಂದನು.
“ಸಾಮ್ರಾಟರ ವೈಭವಕ್ಕೆ ತಕ್ಕಂತಿದೆ ಇವುಗಳ ಲಾವಣ್ಯ” ಎಂದು ತೋಟಗಾರನ ಕಡೆಗೆ ತಿರುಗಿದನು. ಹಿಂದಿನಿಂದ ಬೀಳುತ್ತಿದ್ದ ಬಿಸಿಲಿನ ಝಳ, ಅಗಲವಾದ ಟೋಪಿಯ ನೆರಳು – ಎರಡೂ ಅವನ ಮುಖವನ್ನು ಮರೆಮಾಡಿದ್ದವು. ಟೋಪಿಯ ಅಡಿಯಿಂದ ನಿಖರವಾದ, ಜೊತೆಗೇ ಸ್ವಲ್ಪ ಕುಚೋದ್ಯದಿಂದ ಕೂಡಿದ ದೃಷ್ಟಿ ತನ್ನೆಡೆಗೆ ನೆಟ್ಟಂತೆ ಭಾಸವಾಯಿತು. ಏಕೋ ಕಸಿವಿಸಿಯೆನಿಸಿ ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ “ಈ ಹೂಗಳನ್ನು ನಿಮ್ಮಂತಹ ಅಥಿತಿಗಳಿಗೆ ಕೊಟ್ಟರೆ ಪ್ರಮಾದವೇನಲ್ಲ” ಎಂದನು ತೋಟಗಾರ.
ಕೂಡಲೇ ಸೇವಕನು ಗುಚ್ಛದಿಂದ ದೊಡ್ಡದೊಂದು ಗುಲಾಬಿಯನ್ನು ಬಾಗಿ ದೂತನಿಗೆ ನಮಿಸುತ್ತಾ ನೀಡಿದ.
ರಾಯಭಾರಿಯು ಅದರ ಪರಿಮಳವನ್ನು ಗ್ರಹಿಸಿ, “ಈ ಉದ್ಯಾನದ ದೊರೆಯನ್ನು ನೋಡಿದಾಗ ಅದರ ಭವ್ಯತೆಯ ಪ್ರತೀಕವಾಗುವುದಿದು” ಎಂದ.
“ನಿಮ್ಮ ಮುಂದೆಯೇ ನಿಂತಿರುವೆ. ಈ ತೋಟಕ್ಕೆ ನಾನೇ ದೊರೆ”
ದೂತನು ಮುಗುಳ್ನಕ್ಕ. ಕೆಚ್ಚಿನ ಉತ್ತರ ನೀಡಿ ಮುಂದೆ ನಿಂತವನು ಹಿರಿಯ ತೋಟಗಾರನೆಂದು ಖಚಿತವಾಯಿತು.
“ನಾನೆಂದುಕೊಂಡದ್ದು ಮಹಾಪ್ರಭುಗಳು”
“ತೋಟಗಾರನೂ ಸಾಮ್ರಾಟನೇ. ನಿಮ್ಮ ಸಂಗತಿಯನ್ನು ಸಾಮ್ರಾಟನಂತೆಯೇ ಆಲಿಸಿ ವಿವೇಚಿಸುವನು”
ಯಃಕಶ್ಚಿತ್ ತೋಟಗಾರನೊಬ್ಬ ಚಕ್ರವರ್ತಿ ಮಹಾಪ್ರಭುಗಳಂತೆ ವರ್ತಿಸುವುದನ್ನು ಕಂಡು ನಿಯೋಗದವರು ನಿಬ್ಬೆರಗಾದರು. ಕೆಲವರಿಗೆ ಇದನ್ನು ಲೇವಡಿಯೆಂದೂ, ಇನ್ನಿತರರಿಗೆ ಕುಹಕವೆಂದೂ ತೋರಿತು. ದೂತನು ಯಾವುದೇ ಕಾರಣಕ್ಕೂ ತನ್ನ ಸ್ವಗತವನ್ನು ಬಹಿರಂಗವಾಗಿ ತೋರ್ಪಡಿಸದೇ ಕ್ಷಣಕಾಲ ಯೋಚಿಸಿದ. ಈ ನಾಡೇ ಏಕೋ ವಿಚಿತ್ರ. ಕೇವಲ ವರ್ಣಚಿತ್ರಕಾರನೊಬ್ಬ ಪಾಳೆಯಗಾರನಾಗಬಹುದಾದ ರಾಜ್ಯದಲ್ಲಿ ಮಹಾರಾಜನ ಹೂಗಳನ್ನು ಸ್ವೇಚ್ಛವಾಗಿ ವಿತರಿಸುವ ಮುಖ್ಯ ತೋಟಗಾರನೂ ದೊರೆಯ ಆಪ್ತನಾಗಿರಬಾರದೇಕೆ ಎನ್ನಿಸಿ ಸುಮ್ಮನಿದ್ದ.
“ನಡೆಯಿರಿ ಹೊತ್ತಾಯಿತು. ಮಹಾಪ್ರಭುಗಳು ನಮ್ಮನ್ನು ಎದುರುನೋಡುತ್ತಿರುವರು” ಎಂದ ಬಳಗದವರೊಡನೆ ಅಲ್ಲಿಂದ ಹೊರಟ.
ತೋಟಗಾರ ಸ್ವಗತವೇನೋ ಎಂಬಂತೆ “ಪ್ರಭುಗಳು ಇಲ್ಲದ ಜಾಗದಲ್ಲಿ ಅವರನ್ನು ಹುಡುಕಿದರೆ ಅವರಿರುವ ಕಡೆ ಹೇಗೆ ಕಾಣುವಿರಿ?” ಎಂದು ಗೊಣಗಿ ಮತ್ತೆ ತನ್ನ ಕೆಲಸದಲ್ಲಿ ಮಗ್ನನಾದ.
ದರ್ಬಾರು ಇಲ್ಲಿಯೇ ಎಲ್ಲೋ ಇರಬೇಕೆಂದು ಹುಡುಕಾಡಿದರೂ ಸಭೆ ಎಲ್ಲಿಯೂ ಕಾಣಸಿಗಲಿಲ್ಲ. ಅಲ್ಲಲ್ಲಿ ಕೆಲಸಮಾಡುತ್ತಿರುವ ತೋಟದ ಮಾಲಿಗಳನ್ನು ಬಿಟ್ಟರೆ ಯಾರೂ ಇರಲೇ ಇಲ್ಲವೆಂಬಂತಿತ್ತು. ಬರಮಾಡಿಕೊಂಡ ಸೇವಕನೂ ಎಲ್ಲಿಯೋ ಮಾಯವಾಗಿದ್ದ.
ದಾರಿ ತೋಚದೇ ಉದ್ಯಾನದಲ್ಲಿ ಸುಮ್ಮನೇ ಸುತ್ತಾಡುವಂತಾಯಿತಲ್ಲಾ, ಇದೇನಿದು? ಆ ಗಾರುಡಿಗ ತನಗೆ ಮೋಸಮಾಡಿದ, ಎನಿಸಿತು. ಆದರೂ ಮುದುಕ ಸುಳ್ಳು ಹೇಳುವಷ್ಟು ನೀಚನಲ್ಲ ಎಂದು ಕೂಡಾ ಅನಿಸಿ, ಅವನ ಮಾತುಗಳನ್ನು ಗ್ರಹಿಸುವುದರಲ್ಲಿ ತಪ್ಪು ಮಾಡಿದೆನೋ ಎಂದು ಮನಸ್ಸಿನಲ್ಲೇ ಆರ್ಚಿಂಬಾಲ್ಡೋ ಹೇಳಿದ್ದನ್ನು ನಿಧಾನವಾಗಿ ಮೆಲುಕುಹಾಕಿದ. ’ಬೇಕೆಂದರೆ ಸಂದರ್ಶನವೂ ಆಗಬಹುದು’ ಎಂದು ಅವನು ಹೇಳಿದ ಧಾಟಿ, ಅವನ ಮಂದಹಾಸ ನೆನಪಾಗಿ ಥಟ್ಟನೆ ಎಲ್ಲವೂ ಅರ್ಥವಾಯಿತು. ಅಸಾಧ್ಯವೆನಿಸಿದರೂ ಅದು ಸತ್ಯ – ಆರ್ಚಿಂಬಾಲ್ಡೋ ಹೇಳಿದ್ದ “ಸಾಮ್ರಾಟರು ಒಳ್ಳೆಯ ತೋಟಗಾರರು”, ಹಾಗೂ ಈ ಇಟೆಲಿಯವನ “ತೋಟಗಾರನೂ ಸಾಮ್ರಾಟನೇ” ಇವೆರಡೂ ಒಂದೇ ನಾಣ್ಯದ ಎರಡು ಮುಖ. ಕಣ್ಣಿಗೆ ಕಂಡದ್ದು ಭ್ರಮೆಯೆಂದು ತಿಳಿದೆ, ಭ್ರಮೆಯೆನಿಸಿದ್ದು ಸತ್ಯವಾಗಿತ್ತು. ಆ ನಾಣ್ಯ ನನ್ನ ಕೈತಪ್ಪಿತು.
ಒಮ್ಮೆಗೇ ಹಿಂತಿರುಗಿ, ಸಂದರ್ಶನವಾದ ಕಡೆಗೆ ಬಿರುಸಾಗಿ ನಡೆಯಲಾರಂಭಿಸಿದ. ಹೊತ್ತುಮೀರಿತ್ತೆಂದು ಗೊತ್ತಿದ್ದರೂ ಒಮ್ಮೆ ಪ್ರಯತ್ನ ಮಾಡುವುದು ಒಳ್ಳೆಯದು. ಬಳಗದವರು ಏನೂ ಅರ್ಥವಾಗದಂತೆ ಕಕ್ಕಾಬಿಕ್ಕಿಯಾಗಿ ಅವನನ್ನೇ ಹಿಂಬಾಲಿಸಿದರು. ಗುಲಾಬಿವನಕ್ಕೆ ಬರುವ ಹೊತ್ತಿಗೆ ಸರಿಯಾಗಿ ಅವರನ್ನು ಮೊದಲು ಮಾತನಾಡಿಸಿದ್ದ ಸೇವಕ ತಲೆಯನ್ನು ಅಲ್ಲಾಡಿಸುತ್ತಾ ಹೊರಟಿದ್ದು ಕಾಣಿಸಿತು.
ಸಂಜೆ ಮತ್ತೆ ನಾಡೋಜನ ಮನೆಗೆ ಬಂದವನ ಮುಖ ಬಾಡಿತ್ತು. ಚತುರ ಬೇಡನ ಬಲೆಗೆ ಸಿಕ್ಕಿಬಿದ್ದು ದೊರೆಯನ್ನು ಕಾಣುವ ಅವಕಾಶ ತಪ್ಪಿಸಿಕೊಂಡೆನೆಂದು ಅವನಿಗೆ ಸ್ಪಷ್ಟವಾಗಿತ್ತು. ತನ್ನನ್ನಲ್ಲದೇ ಬೇರಾರನ್ನೂ ಹಳಿಯುವಂತೆಯೂ ಇರಲಿಲ್ಲ.
ಆರ್ಚಿಂಬಾಲ್ಡೋಗೆ ಅಥಿತಿಯ ವೇದನೆ ಅರ್ಥವಾಗಿತ್ತು. ನಿಶ್ಶಬ್ದವಾಗಿ ಕೂತ ಇಬ್ಬರ ನಡುವೆ ಸಂಭಾಷಣೆ ಒಣಗಿಹೋದಂತಿತ್ತು.
ಕೊನೆಗೆ “ಇಂತಹ ಮಾರುವೇಷವನ್ನು ಕಾಣುತ್ತೇನೆ ಎಂದು ಎಣಿಸಿರಲಿಲ್ಲ” ಎಂದನು ರಾಯಭಾರಿ.
“ಅದು ಕೇವಲ ವೇಷವಲ್ಲ, ಅದು ಅವರ ವಾಸ್ತವ. ಮಹಾಪ್ರಭುಗಳು ಒಳ್ಳೆಯ ತೋಟಗಾರರೆಂದು ನಿಮಗೆ ಸ್ವತಃ ತೋರಿಸಿಕೊಟ್ಟರಷ್ಟೇ”.
“ಅಪ್ಪಟ ನಿಜ. ಹಾಗಾದರೆ ದೊರೆಗಳು ನಾಳೆಯೂ ಉದ್ಯಾನಕ್ಕೆ ಬರುವರೇ?”
“ಪ್ರಭುಗಳು ತಮ್ಮ ಉದ್ಯಾನದಲ್ಲಿ ಸದಾ ಉಪಸ್ಥಿತರು. ಹಾಗಂತ ಇದು ಅಕ್ಷರಶಃ ಸತ್ಯವೆಂದು ತಿಳಿಯಬೇಡಿ. ಇಷ್ಟು ಮಾತ್ರ ನಿಜ. ಕಳೆದುಹೋದ ಅವಕಾಶ ಮಾತ್ರ ಮರಳಿ ಬಾರದು.”
ದೊರೆಗಳನ್ನು ಕಾಣಲು ಕೊನೆಯ ಒಂದು ದಿನ ಉಳಿದಿತ್ತು. ವೇಷವಲ್ಲವಂತೆ! ಬೆತ್ತದ ಟೋಪಿ ಕಿರೀಟಕ್ಕೆ ಸಮಾನವಂತೆ! ಹಾಗೆಯೇ ಆಗಲಿ, ನಾಡೋಜನೂ ಪ್ರಭುಗಳೂ ತಮ್ಮ ನಾಟಕ ಆಡಿದ್ದು ಆಯಿತು. ಈ ರಾಜ್ಯದಲ್ಲಿ ತೋಟಗಾರನಿಗೆ ಅಷ್ಟು ಮನ್ನಣೆಯಿರುವುದಾದರೆ ಅದೇ ಆಟ ನಾನೂ ಆಡಿದರಾಯಿತು! ರಾಜೋದ್ಯಾನದಲ್ಲಿ ಮಹಾಪ್ರಭುಗಳು ಸಿಗುವರೇ ನೋಡಿಯೇಬಿಡೋಣ ಎಂದು ರಾತ್ರೋರಾತ್ರಿ ನಿಯೋಗದ ಎಲ್ಲರಿಗೂ ಮಾಲಿಗಳ ಉಡುಪು ತರಿಸಿ ಮಾರನೆಯ ದಿನ ವೇಷಮರೆಸಿಕೊಂಡು ಉದ್ಯಾನದ ತೋಟಗಾರರೊಡನೆ ಸೇರಿಕೊಂಡರು. ರಾಯಭಾರಿಯು ಬೆತ್ತದ ಟೋಪಿ ಧರಿಸಿ ಗುಲಾಬಿವನಗಳ ಕಡೆ ಗಮನ ಇಟ್ಟಿದ್ದ. ಇಡೀ ದಿನ ವೇಷಕ್ಕೆ ತಕ್ಕ ಚಾಕರಿ ಮಾಡುತ್ತಾ ಉದ್ಯಾನದ ಮೂಲೆಮೂಲೆಯನ್ನೂ ತಡಕಾಡಿಸಿ ನೋಡಿದರೂ ದೊರೆಗಳ ನೆರಳು ಸಹ ಕಾಣಲಿಲ್ಲ.
ಆ ಸಂಜೆ ಆರ್ಚಿಂಬಾಲ್ಡೋ ಮನೆಗೆ ರಾಯಭಾರಿ ಮತ್ತೆ ಆಗಮಿಸಿದ. ಬಂದ ಕೆಲಸ ನೆರವೇರುವುದಿಲ್ಲವೆಂದು ಆಗಲೇ ಗೊತ್ತಿತ್ತು. ಆದರೂ ಕೈಗೆ ಬಂದ ತುತ್ತು ಹೇಗೆ ಬಾಯಿಗೆಟುಕದೇ ಜಾರಿಹೋಯಿತು ಎಂದೊಮ್ಮೆ ಪರಾಮರ್ಶಿಸಬೇಕೆನಿಸಿತ್ತು.
ದೂತನ ಮುಖದ ಮೇಲೆ ಮೂಡಿದ್ದ ಪ್ರಶ್ನೆಯನ್ನು ಆರ್ಚಿಂಬಾಲ್ಡೋ ತಾನೇ ಉತ್ತರಿಸಿದ. “ಇಂದು ನೀವು ಯಾವ ಆಕ್ಷೇಪಣೆಯೂ ಮಾಡಬೇಕಿಲ್ಲ. ನೆನ್ನೆ ತಡಮಾಡಿದಿರಿ. ನಾನು ಹೇಳಿದ್ದನ್ನು ಹೊಗಳುಭಟ್ಟನೊಬ್ಬನ ಪರಾಕು ಎಂದುಕೊಂಡಿರಿ. ಅದು ಮಹಾಪ್ರಭುಗಳ ನಿಜರೂಪವೆಂಬ ಅರಿವಾಗಲು ಕೊಂಚ ಸಮಯ ಹಿಡಿಯಿತು. ಮೇಲುನೋಟಕ್ಕೆ ಕಂಡದ್ದೆಲ್ಲವನ್ನೂ ಹೇಗೆ ನಂಬಲಾಗುವುದಿಲ್ಲವೋ, ವಿವೇಕವೂ ಕೆಲವೊಮ್ಮೆ ನಮ್ಮನ್ನು ಅಡ್ಡದಾರಿ ಹಿಡಿಸುತ್ತದೆಯೆಂಬುದು ಅಷ್ಟೇ ಸತ್ಯ. ನೀವು ರಾಯಭಾರಿ, ಮತ್ತೊಬ್ಬರನ್ನು ನಂಬದೇ ಇರುವುದೇ ನಿಮಗೆ ರೂಢಿ. ಈ ಅಪನಂಬಿಕೆಯೊಂದಿಗೆ ಆಸ್ಥಾನದ ವೈಭವಗಳ ನಿಮ್ಮ ನಿರೀಕ್ಷೆಯು ಕೂಡಿಕೊಂಡು ನೀವು ಮೋಸಹೋದಿರಿ.”
“ಹಾಗಾದರೆ… ನಿಮಗಿದು ಮುಂಚೆಯೇ ಗೊತ್ತಿತ್ತು.”
“ಹೀಗಾಗಬಹುದೆಂದು ಊಹಿಸಿದ್ದೆನೇ ಹೊರತು, ನನಗೆ ನಿಶ್ಚಿತವಾಗಿ ಗೊತ್ತಿತ್ತೆಂದು ಹೇಳಲಾಗುವುದಿಲ್ಲ. ಏನು ಮಾಡುವುದೆಂಬ ನಿರ್ಧಾರ ನೀವೇ ತೆಗೆದುಕೊಂಡದ್ದು.”
“ಪವಾಡಸದೃಶ ಅದ್ಭುತವೊಂದನ್ನು ಸ್ವತಃ ಅನುಭವಿಸಿದಂತಾಯಿತು,” ಎಂದು ಪರಾಭವದ ಕಹಿಯನ್ನು ಮರೆಮಾಚಲೆತ್ನಿಸಿದ. “ಕಣ್ಣಿಗೆ ಕಂಡರೂ ನೋಡಲಿಲ್ಲ, ಮಾತಾಡಿಸಿದರೂ ವ್ಯವಹರಿಸಲಿಲ್ಲ, ಎದುರು ನಿಂತರೂ ಗುರುತಿಸಲಿಲ್ಲ.”
“ಗುರುತು ಹಿಡಿಯುವಿರಾ? ಈ ಬಾರಿಯಾದರೂ ಭ್ರಮೆಯೆನಿಸಿದ್ದನ್ನು ಒಮ್ಮೆ ನಂಬಿ ನೋಡಿ, ಪ್ರಾಯಶಃ ನಿಜ ಏನೆಂಬುದು ಗೋಚರವಾದೀತು” ಎನ್ನುತ್ತಾ ಎದ್ದು ಆರ್ಚಿಂಬಾಲ್ಡೋ ಸೇವಕನಿಗೆ ದೀವಟಿಗೆ ಹಿಡಿದು ತರಲು ಹೇಳಿದ.
ಪಂಜಿನ ಬೆಳಕಿನ ಹಿಂದೆಯೇ ನಡೆದು ಅಂಗಳವೊಂದನ್ನು ದಾಟಿ ಹಲವು ಹಜಾರಗಳನ್ನು ಹಾದುಹೋಗಿ ಬಾಗಿಲೊಂದರ ಎದುರಿಗೆ ಬಂದು ನಿಂತರು. ಜೇಬಿನ ಕೀಲಿಕೈಯಿಂದ ಆರ್ಚಿಂಬಾಲ್ಡೋ ದ್ವಾರವನ್ನು ತೆಗೆದು ಬಿರುನಡೆಯಲ್ಲಿ ಒಳಗೆ ಹೋದ. ಅವನನ್ನು ಹಿಂಬಾಲಿಸುತ್ತಾ ಸುತ್ತ ತಲೆಯಾಡಿಸಿದಾಗ ದೀವಟಿಗೆಯ ಮಂದ ಬೆಳಕಿನಲ್ಲಿಯೂ ಕೋಣೆಗಳಲ್ಲಿ, ಗೋಡೆಗಳ ಮೇಲೆ ಕಂಡುಬಂದ ಐಶ್ವರ್ಯವನ್ನು ನೋಡಿ ದೂತನು ನಿಬ್ಬೆರಗಾದನು.
ಹಠಾತ್ತಾಗಿ ಆರ್ಚಿಂಬಾಲ್ಡೋ ಒಂದೆಡೆ ನಿಂತು ಸೇವಕನಿಗೆ ಪಂಜನ್ನು ಹತ್ತಿರ ತರಲು ಆದೇಶಿಸಿದ.
ಹಿಂದೆಂದೂ ನೋಡಿರದ ವಿಲಕ್ಷಣ ಚಿತ್ರವೊಂದು ಬೆಳಕಿನಲ್ಲಿ ಕಣ್ಣಿಗೆ ಗೋಚರವಾಯಿತು. ಗೋಡೆಯ ಕಡೆಯಿಂದ ಯಾರೋ ನೇರವಾದ, ಶೋಧಿಸುವಂತಹ ದೃಷ್ಟಿ ಬೀರುತ್ತಲೂ, ಸಣ್ಣಗೆ ನಗುತ್ತಲೂ, ತನ್ನೆಡೆಗೆ ನೋಡಿದಂತೆ ಭಾಸವಾಯಿತು.
“ಅದು… ಅದು…”
“ವರ್ಟುಮ್ನ಼ಸ್… ಈ ದೇವನಿಗೆ ಇಲ್ಲಿಯೇ, ಈ ಫಲವತ್ತಾದ ರಾಜ್ಯದಲ್ಲಿಯೇ ವಾಸ. ಋತುಗಳು ಮರಳಿದಂತೆಲ್ಲಾ ತಾನೂ ಬದಲಾಗುತ್ತಾನೆ”
“ಅವನು ವರ್ಟುಮ್ನ಼ಸ್… ರೋಮನ್ನರ ಉದ್ಯಾನಗಳ ದೇವತೆ.”
ಉದ್ಯಾನದೇವತೆಗೆ ಕೋಸು, ಕುಂಬಳ, ಬದನೆ, ಮೂಲಂಗಿ ಕಾಯಿಗಳಿಂದ ರಚಿಸಿದ ಶರೀರ. ಸೇಬು, ಪೇರಲ, ದ್ರಾಕ್ಷಿ, ಕಲ್ಲಂಗಡಿ ಹಣ್ಣುಗಳಿಂದ ಮೂಡಿಸಿದ ಮುಖ. ನೇರಳೆಯ ಕಣ್ಣುಗಳು, ಸೇಬಿನ ಕೆನ್ನೆಗಳು, ದಾಳಿಂಬೆಯೇ ಹಲ್ಲಿನ ಸಾಲು, ಜೋಳದ ತೆನೆಯೇ ಗಡ್ಡ. ತರಹಾವರಿ ಹೂವುಗಳ ಪೋಣಿಸಿ ತೊಡಿಸಿದ್ದ ಹಾರ. ಹಣ್ಣು, ಹೂವು ಧಾನ್ಯಗಳನ್ನು ಹೆಣೆದು ಮೂಡಿದ ಕಿರೀಟದಲ್ಲಿ ತಾಮ್ರದೊಡನೆ ಬಂಗಾರದ ಬಣ್ಣ ಬೆರೆಸಿ ರಚಿಸಿದ್ದ ಅಮೃತಫಲ – ದಾಳಿಂಬೆ – ಈ ದೇವತೆ ಅಜರಾಮರವೆಂದು ಸಾರಿತ್ತು.
ರಸಭರಿತ ತಾಜಾತನದಿಂದ ಜಿನುಗುವ ಹಣ್ಣುಹಂಪಲುಗಳನ್ನು ಜೋಡಿಸಿ ರಚಿಸಿದ ಚಿತ್ರದಿಂದ ರಾಜಗಾಂಭೀರ್ಯವನ್ನೂ, ದೈವಕಳೆಯನ್ನೂ ಬೀರುತ್ತ ನಿಂತ ಧೀಮಂತ ವ್ಯಕ್ತಿಯು ವೀಕ್ಷಕನನ್ನು ನೇರವಾಗಿ ನೋಡಿದಂತಿತ್ತು.
“ಉದ್ಯಾನದೇವತೆ, ತೋಟಗಾರ, ಸಾಮ್ರಾಟ – ಎಲ್ಲರೂ ಒಬ್ಬನೇ! ಈ ರೀತಿ ಬದಲಾಗುವವನೆಂದರೆ ನಾನವನನ್ನು ಹೇಗೆ ತಾನೇ ಗುರುತು ಹಿಡಿಯಲಿ?”
“ಪರಿವರ್ತನೆಯಿಲ್ಲದೆ ಸಾಮ್ರಾಟನಾಗಲು ಸಾಧ್ಯವೇ?” ಎಂದನು ಆರ್ಚಿಂಬಾಲ್ಡೋ.
ದೂತನಿಗೆ ಚಿತ್ರದಿಂದ ಕಣ್ಣುತೆಗೆಯಲು ಸಾಧ್ಯವಾಗಲಿಲ್ಲ. “ಹಲವಾರು ಪದಾರ್ಥಗಳಿಂದ ಮಾಡಿದ್ದರೂ, ಎಷ್ಟು ಬದಲಾದರೂ ಒಬ್ಬನೇ ಮಹಾಪ್ರಭು! ದೊರೆಗಳ ನಿಜರೂಪವನ್ನು ಇದಕ್ಕಿಂತ ಯಥಾರ್ಥವಾಗಿ ಚಿತ್ರಿಸುವುದಕ್ಕೆ ಸಾಧ್ಯವಿಲ್ಲ.”
ಮತ್ತೆ ಮತ್ತೆ ಚಿತ್ರದ ಹತ್ತಿರ ಹೋಗಿ “ಎಂತಹ ವಿಸ್ಮಯ! ಏನು ದೈವತ್ವ! ಮಣ್ಣಿನಲ್ಲಿ ಬೆಳೆಯುವ ಫಲದಿಂದ ಮಾಡಿದ ಇಂದ್ರಶಾರೀರ!” ಎಂದು ಉದ್ಗರಿಸುತ್ತಿದ್ದ.
ಸಾಮ್ರಾಟನನ್ನು ಇವನಿಗಿಂತ ಮಿಗಿಲಾಗಿ ಅರ್ಥಮಾಡಿಕೊಂಡವರಿಲ್ಲ. ವೃದ್ಧನು ನಿಜಕ್ಕೂ ಮಾಂತ್ರಿಕನೆಂಬುದರಲ್ಲಿ ಸಂಶಯವಿಲ್ಲ. ನಾಡೋಜನ ಬಿರುದು ಹೆಚ್ಚು ಸಲ್ಲುವ ಇನ್ನಾರೂ ಇಲ್ಲವೆಂದು ದೂತನಿಗೆ ಮನವರಿಕೆಯಾಗಿತ್ತು.
ಮುಖದಲ್ಲಿ ವಿಸ್ಮಯ ತುಂಬಿಕೊಂಡು ಚಿತ್ರವನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದ ದೂತನ ತಲೆಯೊಳಗೆ ಆಗಲೇ ಇಲ್ಲಿ ಆದ ಪರಾಭವವನ್ನು ತನ್ನ ದೊರೆಗೆ ಹೇಗೆ ವಿಶದಪಡಿಸಬಹುದೆಂಬ ಆಲೋಚನೆ ಶುರುವಾಗಿತ್ತು. ಅಪಾಯದಿಂದ ಪಾರಾಗಲು, ಸೋಲನ್ನು ವಿಜಯವನ್ನಾಗಿ ಪರಿವರ್ತಿಸಲು ನೂರಾರು ತಂತ್ರಗಳು ಅವನಿಗೆ ತಿಳಿದಿದ್ದವು. ಆ ಕಾರ್ಯ ನೆರವೇರಿತೆಂದೇ ಅಂದುಕೊಳ್ಳೋಣ.
ಅನುವಾದ : ನಾಗವಳ್ಳಿ ಎಸ್. ಕಿರಣ್
1972ರಲ್ಲಿ ಹುಟ್ಟಿದ್ದು ಬೆಂಗಳೂರಿನಲ್ಲಿ . ಸಸ್ಯಶಾಸ್ತ್ರದಲ್ಲಿ ಡಾಕ್ಟ್ರರೇಟ್ ಪದವಿ ಗಳಿಸಿ , 2013 ರ ವರೆಗೆ ಸಸ್ಯ ವಿಜ್ಞಾದಲ್ಲಿ ಸಂಶೋಧನೆ ಮಾಡಿ , ಪ್ರಸ್ತುತ ಎಲೆಕ್ಟ್ರಾನ್ ಮೈಕ್ರೋಸ್ಕೋಪುಗಳ ತಯಾರಿಕಾ ಸಂಸ್ಥೆಯಲ್ಲಿ ಸಂಶೋಧನಾ ಪ್ರಾಯೋಜನೆಗಳ ನಿರ್ವಾಹಕರಾಗಿ ಕಾರ್ಯ . ಜೊತೆಗೆ ಸುಮಾರು 20 ವರ್ಷಗಳಿಂದ ಅನುವಾದಕರೂ ಕೂಡ . ಜಯಂತ ಕಾಯ್ಕಣಿಯವರ ‘ ಅಮೃತಬಳ್ಳಿ ಕಷಾಯ’ ಸಂಕಲನದ ಎರಡು ಕಥೆಗಳು ಇಂಗ್ಲೀಶ್ ನಲ್ಲಿ ‘Dot and Lines’ ಎಂದು 2004 ರಲ್ಲಿ ಪ್ರಕಟವಾಯಿತು . ದೆಹಲಿಯ ಕಥಾ ಸಂಸ್ಥೆ ಬ್ರಿಟೀಷ್ ಕೌನ್ಸಿಲ್ ಜೊತೆಗೆ 1997-98 ರಲ್ಲಿ ಆಯೋಜಿಸಿದ್ದ ಎರಡನೇ ಅಖಿಲ ಭಾರತ ಕಥಾನುವಾದ ಸ್ಪರ್ಧೆಯಲ್ಲಿ ಶಾಂತಿನಾಥ ದೇಸಾಯಿಯವರ ಕಥೆಯೊಂದರ ಅನುವಾದ ಅಭಿನಂದನಾ ಪ್ರಶಸ್ತಿ ಗಳಿಸಿತು . ಕಳೆದ 20 ವರ್ಷಗಳಿಂದ ಚೆಕ್ ಗಣರಾಜ್ಯದಲ್ಲಿ ನೆಲೆಸಿದ್ದಾರೆ .
ಪ್ರಾಗಿನ ಚಾರ್ಲ್ಸ್ ವಿಶ್ವವಿದ್ಯಾಲಯದಲ್ಲಿ ಕಲಾ , ಇತಿಹಾಸ ಮತ್ತು ಅಲಂಕಾರ ಶಾಸ್ತ್ರದಲ್ಲಿ 1961 ರಲ್ಲಿ ಡಾಕ್ಟರೇಟ್ ಪದವಿ ಪಡೆದರು . ಅನೇಕ ಕಲಾ ಪ್ರದರ್ಶನಗಳಿಗೆ ನಿರ್ವಾಹಕಿಯಾಗಿ ಕೆಲಸ ಮಾಡುತ್ತಾ ಜೊತೆಗೆ ಪದ್ಯ , ಕಥೆಗಳನ್ನು ಬರೆದು ಪ್ರಕಟಿಸಿದ್ದರು . ಅಂತಾರಾಷ್ಟ್ರೀಯ ಕಲಾ ಸಂಸ್ಥೆ AICA ಸದಸ್ಯೆಯಾಗಿ 2005-08 ರಲ್ಲಿ ಪುನರುಜ್ಜೀವನಗೊಂಡ ಪ್ರಾಗಿನ “ಕಲಾಭಿಮಾನಿಗಳ ಬಳಗ” ದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದರು . ಯುವ ಕಲಾಕಾರರ ಪ್ರದರ್ಶನಗಳನ್ನು ಪ್ರೋತ್ಸಾಹಿಸಲು ಹುಟ್ಟಿದ “ಹೊಲ್ಲಾರ್” ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರು . ಸಾಮ್ರಾಟ ರುಡಾಲ್‍ಫನ ಆಸ್ಥಾನದಲ್ಲಿ ಕಲೆ , ವಿಜ್ಞಾನ , ಸಾಹಿತ್ಯ ಇವೆಲ್ಲವೂ ಬೆಳೆದ ಬಗೆಯನ್ನು ತಮ್ಮ ಕಥೆಗಳಲ್ಲಿ ಮೂಡಿದಿದ್ದಾರೆ .