ಸಮಾಜವಾದಿಗಳೊಂದಿಗೆ ಗಾಂಧಿ : ಗುಹಾ – ಡಿ . ಎಸ್ . ನಾಗಭೂಷಣ ಸಂವಾದ ಭಾಗ ೩

ಡಿಎಸ್ಸೆನ್ ಉತ್ತರ :

9.10.2017

ಪ್ರಿಯ ಶ್ರೀ ಗುಹಾ,

ಕ್ಷಮಿಸಿ. ನೀವು ಪುನಃ ನಾನು ಆ ದಿನ ಆಡಿದ ಮತ್ತು ಕಳೆದೆರಡು ಪತ್ರಗಳಲ್ಲಿ ಹೇಳಿದ ಮಾತುಗಳನ್ನು ತಪ್ಪಾಗಿ ಗ್ರಹಿಸುತ್ತಿರುವಿರಿ.
ನಾನು ಹೇಳುತ್ತಿರುವುದು: ಗಾಂಧಿ ಸಮಾಜವಾದಿಗಳೊಂದಿಗೆ ಯಾವುದಾದರೂ ಮಹತ್ವದ ಸಂಭಾಷಣೆಗಳನ್ನು ನಡೆಸಿದ್ದರೋ? ಇಲ್ಲವೋ? ಈ ಪ್ರಶ್ನೆಗೆ ಆ ದಿನ ನಿಮ್ಮ ಉತ್ತರ “ಇಲ್ಲ” ಎಂಬುದಾಗಿತ್ತು. ನೀವು ಗಾಂಧಿ ಮತ್ತು ನೀವು ಅವರ ಸಮೀಪವರ್ತಿಗಳೆಂದು ಗುರುತಿಸಿದವರ ಸುತ್ತ ಗಿರಕಿ ಹೊಡೆಯುತ್ತ ನಿಮ್ಮ ಉತ್ತರವನ್ನು ಸಮರ್ಥಿಸಿಕೊಂಡಿರಿ. ಹೌದು , ಕಮಲಾದೇವಿಯವರೊಂದಿಗೆ ಗಾಂಧಿ ನಡೆಸಿದ ಸತ್ಯಾಗ್ರಹದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕುರಿತಾದ ಸಂಭಾಷಣೆಗಳ ಕುರಿತು ನೀವು ಪ್ರಸ್ತಾಪಿಸಿದ್ದು ನಿಜ. ಅದೇ ಸಮಯಕ್ಕೆ ಇದನ್ನು ಹೊರತುಪಡಿಸಿ ಗಾಂಧಿ ಸಮಾಜವಾದಿಗಳೊಂದಿಗೆ ಯಾವುದೇ ಬಗೆಯ ಮಹತ್ವದ ಮಾತುಕತೆಗಳನ್ನು ನಡೆಸಿರಬಹುದಾದ ಸಾಧ್ಯತೆ ಇಲ್ಲ ಎಂದೂ ನೀವು ಸ್ಪಷ್ಟವಾಗಿ ಹೇಳಿದಿರಿ. ಆ ದಿನ ನೀವು ಎತ್ತಿಕೊಂಡ ಗಾಂಧಿಯ ನಾಲ್ಕು ಸಂಭಾಷಣೆಗಳಿಗಿಂತ ಮುಖ್ಯವಲ್ಲದಿದ್ದರೂ ಅದರಷ್ಟೇ ಪ್ರಾಮುಖ್ಯವಾದ ಮಾತುಕತೆಗಳು ಗಾಂಧಿ ಮತ್ತು ಸಮಾಜವಾದಿಗಳೊಂದಿಗೆ ನಡೆದಿದೆ ಎಂಬ ನನ್ನ ವಾದಕ್ಕೆ ಪ್ರತ್ಯುತ್ತರವಾಗಿ ನೀವು ಈ ಮಾತುಗಳನ್ನಾಡಿದ್ದು. ಅಂದು ಬಹು ಮುಖ್ಯವಾಗಿ ನಮ್ಮ ಚರಿತ್ರಕಾರರ ಕುರಿತಾಗಿ ನಾನು ಪ್ರತಿಕ್ರಿಯೆ ನೀಡುತ್ತಿದ್ದೆ. ನೀವು ಎತ್ತಿಕೊಂಡ ಆ ನಾಲ್ಕು ಸಂಭಾಷಣೆಗಳೇ ಬಹು ಮುಖ್ಯ ಎಂಬ ನಿಮ್ಮ ಆಯ್ಕೆಯ ಬಗ್ಗೆಯಷ್ಟೆ ನಾನು ಆಕ್ಷೇಪಣೆ ಎತ್ತಿದ್ದೆ. ಶ್ರೀಯುತ ಗುಹಾ ಅಥವಾ ಬೇರೆ ಯಾರಾದರೂ ಗಾಂಧಿ, ಸಮಾಜವಾದಿಗಳೊಂದಿಗೆ ನಡೆಸಿದ ಮಾತುಕತೆಗಳನ್ನು ಮಹತ್ವದ್ದೆಂದು ಪರಿಗಣಿಸುವ ಅಥವಾ ಪರಿಗಣಿಸದಿರುವ ಕುರಿತು ನನಗೆ ಹೆಚ್ಚಿನ ಆಸಕ್ತಿ ಇರಲಿಲ್ಲ.
ಕಮಲಾದೇವಿಯವರು ಗಾಂಧಿಯೊಂದಿಗೆ ನಡೆಸಿದ ಸಂಭಾಷಣೆಗಳನ್ನು ನಾನು ‘ರಾಜಕೀಯೇತರ’ ಎಂದು ಹೇಳಿದ್ದು ಹೌದು. ಈ ಸಂಭಾಷಣೆಗಳು ನೇರವಾಗಿ ರಾಜ್ಯ ಮತ್ತು ಅದರ ಕಾರ್ಯನೀತಿಗಳಿಗೆ ಸಂಬಂಧಿಸಿದ್ದಲ್ಲವಾದ್ದರಿಂದ ನಾನು ಹಾಗೆ ಹೇಳಿದೆ. ನೀವು ಆ ಮಾತುಕತೆಗಳನ್ನು ರಾಜಕೀಯವಾದದ್ದು ಎನ್ನುವುದಾದರೆ ಅದನ್ನು ನಾನು ಒಪ್ಪಲು ಸಿದ್ಧನಿದ್ದೇನೆ. ಈ ಸಂಬಂಧ ನಿಮ್ಮನ್ನು ತಪ್ಪಾಗಿ ಅರ್ಥೈಸುವ ಯಾವುದೇ ಉದ್ದೇಶ ನನಗಿಲ್ಲ.

ಲೋಹಿಯಾ ಅವರ ಭಾಷೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಹೌದು ಅವರ ಮಾತುಗಳು ಕಟುವಾಗಿರುತ್ತಿದ್ದವು. ಕೆಲವೊಮ್ಮೆ ಅಗತ್ಯಕ್ಕಿಂತಲೂ ಹೆಚ್ಚಾಗಿ . ಆದರೆ ಅವರು ಅತ್ಯಂತ ಪ್ರೀತಿ ಸೂಸುವ ಮನುಷ್ಯರೂ ಆಗಿದ್ದರೆಂದು , ಅವರ ಸಮೀಪದ ಒಡನಾಡಿಗಳಾದ ಮಧು ಲಿಮಯೆ, ಕಿಶನ್ ಪಟ್ನಾಯಕ್, ಶ್ರೀಮತಿ ರೋಮಾ ಮಿತ್ರ ಮುಂತಾದವರನ್ನು ಎಪ್ಪತ್ತು-ಎಂಬತ್ತರ ದಶಕದಲ್ಲಿ ದೆಹಲಿಯಲ್ಲಿ ಭೇಟಿಯಾದಾಗ ಕೇಳಿ ತಿಳಿದಿದ್ದೇನೆ. ಅವರ ಪ್ರಕಾರ ಮಧ್ಯಮ ವರ್ಗವನ್ನು ಓಲೈಸುವ ನೆಹರೂವಾದದ ಆ ದಿನಗಳಲ್ಲಿ ಲೋಹಿಯಾರಿಗೆ ಬಹುಶಃ ಇಂತಹ ಕಠಿಣ ಭಾಷೆಯ ಬಳಕೆ ಅನಿವಾರ್ಯವಾಗಿಬಿಟ್ಟಿತ್ತು. ಅಷ್ಟಕ್ಕೂ ಲೋಹಿಯಾ ಕೆಟ್ಟ ಮನುಷ್ಯನೇನಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಶ್ರೇಷ್ಠ ಸೇನಾನಿ ಆತ. ಆದರೆ ಈ ನೆಹರೂವಿನ ಪೊಲೀಸರು ಪ್ರತಿಭಟನೆಯ ಸಂದರ್ಭಗಳಲ್ಲಿ ಆತನನ್ನು ನಡೆಸಿಕೊಂಡ ರೀತಿ ಮಾತ್ರ ಹೀನವಾಗಿತ್ತು.

ಆಗಿನ ಪ್ರಧಾನಿ ನೆಹರೂ ಮತ್ತು ಗೃಹ ಮಂತ್ರಿ ಸರ್ದಾರ್ ಪಟೇಲ್ (ಲೋಹಿಯಾರ ಕಲೆಕ್ಟೆಡ್ ವರ್ಕ್ಸ್- ಮಸ್ತ್‍ರಾಂ ಕಪೂರ್)ರ ನಡುವಿನ ಪತ್ರಗಳನ್ನೊಮ್ಮೆ ನೀವು ನೋಡಬೇಕು. ಅಂತರ್ರಾಷ್ಟೀಯ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಲೋಹಿಯಾ ರನ್ನು ಜೈಲಿನಿಂದ ಬಿಡುಗಡೆ ಮಾಡಿದರೆ ಆಗಬಹುದಾದ ಒಳಿತು-ಕೆಡುಕುಗಳ ಕುರಿತ ಆ ಪತ್ರ ವ್ಯವಹಾರದಲ್ಲಿ ಕೆಲ ಕುಚೇಷ್ಟೆಯ ಭಾಗಗಳನ್ನು ನೀವು ಗಮನಿಸಬೇಕು. ತನ್ನ ಕಾಲದ ಇಂಗ್ಲೀಷ್ ಮಾತನಾಡುವ ವರ್ಗದಿಂದ ಅವರು ಇನ್ನೂ ಹೆಚ್ಚಿನ ಸಹಾನುಭೂತಿಯ ಪ್ರತಿಕ್ರಿಯೆಗೆ ಮತ್ತು ಸಂವಾದಕ್ಕೆ ಅರ್ಹರಿದ್ದರು ಎಂದು ನಾನು ಭಾವಿಸುತ್ತೇನೆ. ನೆನಪಿಡಿ. ನೆಹರೂ ಮತ್ತು ಜೆ.ಪಿ ತರದವರು ಚರಿತ್ರೆಯ ಭಾಗವಾಗುತ್ತಾರೆ. ಅದೇ ಲೋಹಿಯಾ ತರದವರು ಸದಾ ನಮ್ಮೊಳಗೆ ಜೀವಂತವಾಗಿರುತ್ತಾರೆ ಮತ್ತು ಎಚ್ಚರಿಸುತ್ತಿರುತ್ತಾರೆ. ಈ ಸಂದರ್ಭದಲ್ಲಿಯೇ ನಾನು ನಿಮ್ಮಂತಹವರನ್ನು ‘ಇಂಗ್ಲಿಷ್ ಭಾವಿಯಲ್ಲಿನ ಮುದ್ದು ಕಪ್ಪೆಗಳು’ ಎಂದು ಕರೆದಿದ್ದು. ಈ ಮಾತು ಅಪರಾಧವೆನ್ನುವುದಾದರೆ, ಬೆಂಗಳೂರಿನಲ್ಲಿದ್ದು ಕನ್ನಡ ಕಲಿಯುವ ಅಗತ್ಯ ನನಗೆ ಕಾಣಲಿಲ್ಲ ಎಂಬ ನಿಮ್ಮ ಸಮರ್ಥನೆ ಕೂಡ ಅಪರಾಧವೇ.

ಇಂತಿ ನಿಮ್ಮ,
ಡಿ ಎಸ್ ನಾಗಭೂಷಣ.

ಮರೆತ ಮಾತು: ಜೆಪಿ ಯವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸುವಂತೆ ಗಾಂಧಿ ನೀಡಿದ ಪ್ರಸ್ತಾಪದ ಕುರಿತು ನೀವು ಹೇಳಿದ್ದನ್ನು ಬರೆಯಲು ಮರೆತೆ. ನೀವಿದನ್ನ ನೆಹರೂ ಅವರ ಪ್ರಸ್ತಾಪ ಎಂದಿರಿ. ಇಂತಹ ಒಂದು ಪ್ರಸ್ತಾಪದ ಕುರಿತು ನಿಮಗೆ ಖಚಿತ ಅರಿವಿಲ್ಲದಿದ್ದರೂ ಈ ಮಾತನ್ನ ಹೇಳಿದಿರಿ. ನನ್ನ ಓದಿನ ಪ್ರಕಾರ ಇದು ಗಾಂಧಿಯೇ ಮುಂದಿಟ್ಟ ಪ್ರಸ್ತಾಪ. ಗಾಂಧಿ ಮುಂದಿಟ್ಟ ಈ ಪ್ರಸ್ತಾಪವನ್ನು ನೀವು ನೆಹರೂರಿಂದ ಬಂದ ಪ್ರಸ್ತಾಪವೆಂದು ನೀವೇಕೆ ತಿರುಚುವಿರೋ ನನಗೆ ತಿಳಿಯಲಿಲ್ಲ. ಆ ಸಮಯಕ್ಕಾಗಲೇ ಜೆಪಿಯವರ ಸಾಹಸಮಯತೆ ಚೆನ್ನಾಗಿ ಸ್ಥಾಪಿತವಾಗಿತ್ತು ಹಾಗೂ ಜೆಪಿ ನೆಹರೂಗೆ ಹತ್ತಿರವಾಗಿದ್ದರು ಎಂದು ನೀವು ಹೇಳಿದಿರಿ. ಇತಿಹಾಸದ ಕುರಿತ ಈ ಬಗೆಯ ನಿರೂಪಣೆಯ ಕುರಿತೇ ನನಗೆ ನಿಮ್ಮ ಮೇಲೆ ಆಕ್ಷೇಪಣೆಗಳಿರುವುದು. 1948 ರ ಬಹು ಮೊದಲೇ ದೇಶವಾಸಿಗಳ ಕಣ್ಣಿಗೆ ಜೆ.ಪಿ ನಾಯಕರಾಗಿದ್ದರು. ಅವರ ಅ ಹೊತ್ತಿನ ಧೈರ್ಯಕ್ಕೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. 1942 ರ ನವೆಂಬರಿನಲ್ಲಿ ಹಜಾರಿಬಾಗಿನ ಜೈಲಿನಿಂದ ತಪ್ಪಿಸಿಕೊಂಡದ್ದು ಒಂದು ಅಂತಹ ಉದಾಹರಣೆ. ಜೆಪಿ ಯಾವತ್ತೂ ನೆಹರೂ ಪರವಾಗಿದ್ದರು ಮತ್ತು ಎಂದೂ ಅವರ ವಿರೋಧ ಕಟ್ಟಿಕೊಳ್ಳಲಿಲ್ಲ.

ಇತಿಹಾಸದ ಕುರಿತಾದ ನನ್ನ ಓದು ಕಾಂಗ್ರೆಸ್‍ನ ಹೆಚ್ಚಿನ ನಾಯಕರ ಕಾರ್ಯವೈಖರಿಯಿಂದ ಗಾಂಧಿ ಅ ಹೊತ್ತಿಗೆ ಭ್ರಮನಿರಸನ ಗೊಂಡಿದ್ದರು ಎಂಬುದನ್ನ ದೃಢಪಡಿಸುತ್ತದೆ. ಸಮಾಜವಾದಿಗಳನ್ನು ಪಳಗಿಸಿ ದೇಶ ಕಟ್ಟುವ ಕೆಲಸದಲ್ಲಿ ಅವರನ್ನು ದುಡಿಸಿಕೊಳ್ಳುವ/ಜವಾಬ್ದಾರಿ ನೀಡುವ ಆಕಾಂಕ್ಷೆಯೂ ಗಾಂಧಿಗಿತ್ತು. ಹಾಗಾಗಿ ಈ ಪ್ರಸ್ತಾಪ ಗಾಂಧಿಯದ್ದು. ಕಾಂಗ್ರೆಸ್ಸಿನೊಳಗಿದ್ದ ಬಲಪಂಥೀಯರಿಂದ ಪ್ರಬಲ ವಿರೋಧ ಎದುರಾಗಬಹುದೆಂಬ ಭಯದಿಂದ ನೆಹರೂ ಈ ಪ್ರಸ್ತಾಪ ಒಪ್ಪಿಕೊಳ್ಳಲಿಲ್ಲ. ಪರಿಣಾಮ ಬಾಬು ರಾಜೇಂದ್ರ ಪ್ರಸಾದರ ಆಯ್ಕೆಯಾಯಿತು. ಗಾಂಧಿಯ ಸಂಗ್ರಹಿತ ಕೃತಿಗಳಾಚೆಯೂ ಸಾಕಷ್ಟು ಇತಿಹಾಸವಿದೆ ಎಂಬುದನ್ನು ನಿಮಗೆ ಹೇಳಬೇಕಾಗಿಲ್ಲ.

ಮರೆತ ಮಾತು 2: ಕನ್ನಡ ಸಾಹಿತ್ಯ ಪರಂಪರೆಯ ಕುರಿತಾದ ನಿಮ್ಮ ಸೀಮಿತ ತಿಳುವಳಿಕೆಯ ಕುರಿತಾದ ನನ್ನ ಆಕ್ಷೇಪಣೆಗೆ ನಿಮ್ಮ ಸಮರ್ಥನೆಯ ಬಗ್ಗೆ. ಈ ಕುರಿತ ನನ್ನ ಅಭಿಪ್ರಾಯಗಳು ಶಿವಮೊಗ್ಗ ಕರ್ನಾಟಕ ಸಂಘವನ್ನುದ್ದೇಶಿಸಿ ನೀವು ಮಾತನಾಡಿದ ಪತ್ರಿಕಾ ವರದಿಯನ್ನಾಧರಿಸಿದ್ದು. ಈಗಲೂ ನನಗನ್ನಿಸುವುದು, ನೀವು ಕನ್ನಡ ಸಾಹಿತ್ಯ ಪರಂಪರೆಯ ಕುರಿತು ಅಧಿಕಾರಯುತ ಧಾಟಿಯಲ್ಲಿ ಮಾತನಾಡುವುದನ್ನ ಬಿಡಬೇಕು. ಏಕೆಂದರೆ, ಈ ವಿಷಯದ ಕುರಿತಾದ ನಿಮ್ಮ ಜ್ಞಾನ ಸೀಮಿತವಾದದ್ದು ಹಾಗೂ ಈ ಜ್ಞಾನವೂ ಸಹ ಕೆಲವೇ ಸಾಹಿತಿಗಳ ಒಡನಾಟದಿಂದ ಪಡೆದಂತಹದ್ದು; ಅದೂ, ಇಂಗ್ಲಿಷಿನಲ್ಲಿ. ಶೆಲ್ಡನ್ ಪೆÇಲಾಕ್ ಸಹ ಕನ್ನಡ ಸಾಹಿತ್ಯ ಪರಂಪರೆಯ ಕುರಿತಾದ ತನ್ನ ತಿಳುವಳಿಕೆಯನ್ನು ನಿಮ್ಮ ಹಾಗೆ ಸಾರ್ವಜನಿಕವಾಗಿ ತೋರಿಸಿಕೊಳ್ಳುತ್ತ ಕೂರುವುದಿಲ್ಲ.


ಗುಹಾ ಅವರ ಪ್ರತಿಕ್ರಿಯೆ:

10.10.17

ಪ್ರೀತಿಯ ಶ್ರೀ ನಾಗಭೂಷಣ,

ನಮ್ಮ ಈ ಪತ್ರ ವ್ಯವಹಾರ , ಈ ವರ್ಷದ ಮೊದಲಿಗೆ ನಾನು ನಡೆಸಿದ ಇನ್ನೊಂದು ಪತ್ರ ವ್ಯವಹಾರವನ್ನು ನನಗೆ ನೆನಪಿಸಿತು. ಮಧು ಮತ್ತು ಪ್ರಮೀಳಾರ ಮಗ ಉದಯ್ ದಂಡವತೆಯೊಂದಿಗೆ ನಾನು ನಡೆಸಿದ ಮಾತುಕತೆ ಈ ಕೆಳಗಿನ ಕೊಂಡಿಯಲ್ಲಿದೆ. ಅಲ್ಲಿ ಸಮಾಜವಾದಿಗಳ ಕುರಿತಾದ ನನ್ನ ಮೆಚ್ಚುಗೆ ಮತ್ತು ದೇಶಕ್ಕೆ ಅವರ ಕೊಡುಗೆಗಳನ್ನು ಸರಿಯಾದ ನ್ಯಾಯ ಸಿಗಬೇಕೆ ಎಂಬ ನನ್ನ ಕಳಕಳಿಯನ್ನು ನೀವು ಈ ಪತ್ರಗಳಲ್ಲಿ ಕಾಣುತ್ತೀರಿ.

ಜೊತೆಗೆ 2005 ರಲ್ಲಿ ನಾನು ಮಧು ದಂಡವತೆಗೆ ಬರೆದಿದ್ದು ಸಹ ಇಲ್ಲಿದೆ.
http://www.thehindu.com/thehindu/mag/2005/11/20/stories/2005112000240300.htm

ನಾನಿಲ್ಲಿ ಬರೆದಿದ್ದು “ಗಮನಾರ್ಹವಾದ ರಾಜಕೀಯ ಪರಂಪರೆಯೊಂದರಲ್ಲಿ ಎದ್ದು ಕಾಣುವ ಹೆಸರು ದಂಡವತೆಯವರದ್ದು. ಸಮಾಜವಾದಿ ಚಳುವಳಿಯ ಕೊಂಬೆಗಳಿಂದ ಬೆಳೆದುಬಂದ ಕೆಲವೇ ಪ್ರತಿಭಾವಂತರಲ್ಲಿ ದಂಡಾವತೆಯವರು ಆಧುನಿಕ ಭಾರತದ ಅತ್ಯಂತ ಪ್ರಾಮಾಣಿಕ ರಾಜಕಾರಣಿ.”
ಇನ್ನೊಮ್ಮೆ ನಾನು ಒತ್ತಿ ಹೇಳಬಯಸುವುದೆಂದರೆ, ಸಮಾಜವಾದಿಗಳು ಗಾಂಧಿ ಬದುಕಿದ್ದಾಗ ಅವರಿಗೆ ಎಷ್ಟು ಹತ್ತಿರವಾಗಿದ್ದರು ಮತ್ತು ಹತ್ತಿರವಾಗಿರಲಿಲ್ಲ ಎನ್ನುವುದರ ಮೇಲೆ ಅವರ ಮಾತುಕತೆಗಳ ಮಹತ್ವ ನಿಂತಿದೆ. ನನಗಿಂತ ಹೆಚ್ಚು ಓದಿಕೊಂಡಿರುವ ನನ್ನ ಸಹೋದ್ಯೋಗಿ ಯೊಂದಿಗೆ ಈ ಕುರಿತು ಚರ್ಚಿಸಿದಾಗಲೂ ಗಾಂಧಿ, ಜೆಪಿಯ ಹೆಸರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪಿಸಿದರ ಕುರಿತು ಯಾವುದೇ ದಾಖಲೆಗಳು ಲಭ್ಯವಿಲ್ಲದಿರುವುದು ತಿಳಿದುಬಂತು. ಆತ ಗಮನಿಸಿದ ಹಾಗೆ ಒಂದೊಮ್ಮೆ ಗಾಂಧಿ, ಜೆಪಿ ಯ ಹೆಸರನ್ನು ಪ್ರಸ್ತಾಪಿಸಿದ್ದರೂ ಸರ್ದಾರ್ ಪಟೇಲ್ (ನೆಹರೂ ಅಲ್ಲ) ಒಂದೇ ಏಟಿಗೆ ಈ ಪ್ರಸ್ತಾಪವನ್ನು ನಿರಾಕರಿಸಿಬಿಡುತ್ತಿದ್ದರು. ಮತ್ತೂ ರಾಜೆಂದ್ರ ಪ್ರಸಾದ್ 1948ರಲ್ಲಿ ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದರೆ ಹೊರತು ಕಾಂಗ್ರೆಸ್ಸಿನದಲ್ಲ. ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದವರು ಬಲ ಪಂಥೀಯ ಪಟೇಲ್‍ರಿಗೆ ಹತ್ತಿರವಾಗಿದ್ದ ಪಟ್ಟಾಭಿ ಸೀತಾರಾಮಯ್ಯ.

ಉದಯ್ ರೊಂದಿಗೆ ಕಳೆದ ಏಪ್ರಿಲ್ ನಲ್ಲಿ ನಡೆಸಿದ ಮಾತುಕತೆಯಲ್ಲಿ ನಾನು ಹೇಳಿದ್ದು:
” ಸಮಕಾಲೀನ ಭಾರತದ ಅತಿ ದೊಡ್ಡ ದುರಂತಗಳಲ್ಲಿ ಸಮಾಜವಾದಿ ಚಳುವಳಿಯ ಸಾವು ಸಹ ಒಂದು. ಸಮಾಜವಾದಿಗಳು ಕಮ್ಯುನಿಷ್ಟರಂತಲ್ಲ. ಅವರು ದೇಶಭಕ್ತರಾಗಿದ್ದರು. ಅವರು ಕಾಂಗ್ರೆಸ್ಸಿನಂತಲ್ಲ. ಅವರು ಪ್ರಾಮಾಣಿಕವಾಗಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ (ಲಿಂಗ ಸಮಾನತೆಗೂ) ಹೋರಾಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಮಾಜವಾದಿಗಳ ಪಾತ್ರ ಮತ್ತು ಸ್ವಾತಂತ್ರ್ಯ ನಂತರದ ರಾಜಕೀಯ ಜೀವನದಲ್ಲಿ ಸಮಾಜವಾದಿಗಳ ಕೊಡುಗೆಗಳ ಕುರಿತು ಮಹತ್ವದ ಪುಸ್ತಕವೊಂದು ಸಂಶೋಧನೆಗಾಗಿ ಮತ್ತು ಪ್ರಕಟಣೆಗಾಗಿ ಕಾದು ಕುಳಿತಿದೆ.”

ಇಂತಹ ಪುಸ್ತಕವೊಂದು ಬರೆಯುವ ತುಡಿತ ನಿಮ್ಮೊಳಗೇ ಇರಬಹುದೆಂದು ಭಾವಿಸುವೆ. ಒಂದೊಮ್ಮೆ ಕೈಗೆತ್ತಿಕೊಂಡರೆ ಇದೊಂದು ಮಹತ್ವದ ಕಾರ್ಯವಾದೀತು.

ಇಂತಿ,
ರಾಮಚಂದ್ರ ಗುಹಾ


ಸಂವಾದದ ಮೊದಲ ಎರಡು ಭಾಗವನ್ನು ನೀವು ಇಲ್ಲಿ ಓದಬಹುದು .

http://ruthumana.com/2017/10/31/gandhi-with-socialists-ramachandra-guha-and-d-s-nagabhushana-correspondance-part1/
http://ruthumana.com/2017/10/31/gandhi-with-socialists-ramachandra-guha-and-d-s-nagabhushana-correspondance-part2/

One comment to “ಸಮಾಜವಾದಿಗಳೊಂದಿಗೆ ಗಾಂಧಿ : ಗುಹಾ – ಡಿ . ಎಸ್ . ನಾಗಭೂಷಣ ಸಂವಾದ ಭಾಗ ೩”
  1. Pingback: ಋತುಮಾನ | ಸಮಾಜವಾದಿಗಳೊಂದಿಗೆ ಗಾಂಧಿ : ಗುಹಾ – ಡಿ . ಎಸ್ . ನಾಗಭೂಷಣ ಸಂವಾದ ಭಾಗ ೪

ಪ್ರತಿಕ್ರಿಯಿಸಿ