ಜಗಪದ : ಬ್ರೆಜಿಲ್ ದೇಶದ ಜನಪದ ಕಥೆ – ವಸಂತರಾಣಿ

ಬ್ರೆಜಿಲ್ ದೇಶದ ಜನಪದ ಕಥೆ

ಬಹಳ ಹಿಂದೆ, ಚಂದ್ರ ದೊರೆ, ಮಹಾನದಿಯಲ್ಲಿ ವಾಸಿಸುತ್ತಿದ್ದ ಒಬ್ಬ ಸುಂದರಿಯನ್ನು ಪ್ರೀತಿಸಿದ. ಆಕೆಯೂ ಚಂದ್ರದೊರೆಗೆ ಮನಸೋತಳು. ಮಹಾನದಿ ಸಮುದ್ರ ಸೇರುವ ಜಾಗದಲ್ಲಿ ಆಕೆಗಾಗಿ ಒಂದು ಅದ್ಭುತ ಅರಮನೆಯನ್ನೂ ಕಟ್ಟಿಸಿದ. ಚಿನ್ನ, ಬೆಳ್ಳಿ, ಮುತ್ತು ಮತ್ತು ಬೆಲೆಬಾಳುವ ರತ್ನಗಳಿಂದ ಅಲಂಕರಿಸಿದ ಅರಮನೆ ಅದಾಗಿತ್ತು. ಪ್ರಪಂಚದಲ್ಲೆಲ್ಲಿಯೂ ಅಂತಹ ವೈಭವದ ಅರಮನೆ ಯಾವ ರಾಜನಿಗಾಗಲೀ ಅಥವಾ ಅವನ ರಾಣಿಗಾಗಲೀ ಇರಲಿಲ್ಲ.

ಚಂದ್ರದೊರೆ ಮತ್ತು ಮಹಾನದಿಗಳ ರಾಣಿ – ದಂಪತಿಗಳಿಗೆ ಒಂದು ಹೆಣ್ಣುಮಗುವಾದಾಗ ಎಲ್ಲರೂ ಸೇರಿ ಒಂದು ತೀರ್ಮಾನಕ್ಕೆ ಬಂದರು. ಅದೇನೆಂದರೆ ಈ ಶಿಶುವು ವಸಂತಗಳ ರಾಜಕುಮಾರಿಯಾಗಬೇಕು ಮತ್ತು ಎಲ್ಲಾ ನದಿ, ಸರೋವರಗಳನ್ನು ಈಕೆಯೇ ಆಳಬೇಕು. ರಾಜಕುಮಾರಿಯ ಕಣ್ಣ ಬೆಳಕು ಚಂದ್ರರಶ್ಮಿಯಂತಿತ್ತು ಮತ್ತು ಆಕೆಯ ಮಂದಹಾಸ ನೀರಮೇಲೆ ಬಿದ್ದ ಚಂದ್ರನ ಕಿರಣದಂತಿತ್ತು. ಆಕೆಯ ಶಕ್ತಿ, ಆಕೆಯ ಪಾದಗಳಲ್ಲಿದ್ದ ಚುರುಕುತನ, ಎಲ್ಲವೂ ಮಹಾನದಿಯಂತೆಯೇ ಬಲಶಾಲಿ ಹಾಗೂ ಚುರುಕಾಗಿದ್ದವು.

ವಸಂತಗಳ ರಾಜಕುಮಾರಿ ವಯಸ್ಸಿಗೆ ಬರುತ್ತಿದ್ದಂತೆ ಆಕೆಗಾಗಿ ಹಾತೊರೆಯುವವರು ಅರಮನೆಯ ಕಿಟಕಿಗಳ ಬಳಿ ಬಂದು ಆಕೆಯ ಗುಣಗಾನ ಮಾಡತೊಡಗಿದರು. ಆದರೆ ರಾಜಕುಮಾರಿಗೆ ಯಾರೊಬ್ಬರೂ ಇಷ್ಟವಾಗಲಿಲ್ಲ. ಸುಂದರ ಅರಮನೆಯಲ್ಲಿ, ಪ್ರೀತಿಯ ಅಮ್ಮನೊಂದಿಗೆ ತನ್ನ ಪಾಡಿಗೆ ತಾನಿರುವುದೇ ಆಕೆಗೆ ಖುಶಿ ನೀಡುತ್ತಿತ್ತು. ಇದರಿಂದಾಗಿ ಬೇರೆಯವರ ಬಗ್ಗೆಯ ಯೋಚನೆಗಳೂ ಆಕೆಯ ಬಳಿ ಸುಳಿಯುತ್ತಿರಲಿಲ್ಲ. ಯಾವ ಮಗಳ ಪ್ರೀತಿಯೂ ವಸಂತಗಳ ರಾಜಕುಮಾರಿ, ತನ್ನ ಅಮ್ಮನೊಂದಿಗಿದ್ದ ಪ್ರೀತಿಗೆ ಸರಿ ಸಾಟಿಯಾಗಿರಲು ಸಾಧ್ಯವಿರಲಿಲ್ಲ.

ಕೊನೆಗೊಮ್ಮೆ ಸೂರ್ಯರಾಜ ವಸಂತಗಳ ರಾಜಕುಮಾರಿಯನ್ನು ಓಲೈಸಲು ಬಂದ. ಹತ್ತು ಜನರಿಗಿದ್ದಷ್ಟು ಬಲ ಸೂರ್ಯನಿಗೊಬ್ಬನಿಗೇ ಇದ್ದಿತ್ತು. ಅವನ ಶಕ್ತಿ ಸಾಮರ್ಥ್ಯಗಳು ರಾಜಕುಮಾರಿಯ ಹೃದಯ ಗೆದ್ದು ಬಿಟ್ಟವು.

ತನ್ನನ್ನು ಮದುವೆಯಾಗೆಂದು ಸೂರ್ಯ ವಿನಂತಿಸಿಕೊಂಡಾಗ, ವಸಂತಗಳ ರಾಜಕುಮಾರಿ ” ಓ ಸೂರ್ಯದೇವ, ನೀನೆಷ್ಟು ಬಲಶಾಲಿ! ನನ್ನ ಅರಮನೆಯ ಕಿಟಕಿಗಳ ಬಳಿ ಬಂದು ಪ್ರೇಮ ನಿವೇದನೆ ಮಾಡುತ್ತಿದ್ದ ಅವರೆಲ್ಲರಿಗಿಂತಲೂ ನೀನೇ ಶ್ರೇಷ್ಠ. ನಿನ್ನನ್ನು ಇನ್ನಿಲ್ಲದಂತೆ ಪ್ರೀತಿಸುತ್ತೇನೆ. ಆದರೆ… ನನಗೆ ನನ್ನ ಅಮ್ಮನ ಮೇಲೂ ಅಷ್ಟೇ ಪ್ರೀತಿಯಿದೆ. ನನ್ನ ಅಮ್ಮನನ್ನು ಬಿಟ್ಟು ನಿನ್ನೊಂದಿಗೆ ಬಂದು ಇರಲಾರೆ. “

ವಸಂತಗಳ ರಾಜಕುಮಾರಿಗಾಗಿ ಕಾಯುತ್ತಿದ್ದ ತನ್ನ ಅರಮನೆಯ ಬಗ್ಗೆ ಹೇಳುತ್ತಾ ಸೂರ್ಯ ಗೋಗರೆದಾಗ ಕೊನೆಗೂ ರಾಜಕುಮಾರಿ ಒಪ್ಪಿ, ಒಂದು ಕರಾರಿನ ಮೇರೆಗೆ ಆತನೊಂದಿಗೆ ಹೋಗಲು ನಿರ್ಧರಿಸಿದಳು. ಅದೇನೆಂದರೆ ವರ್ಷದ ಒಂಭತ್ತು ತಿಂಗಳು ಸೂರ್ಯನೊಂದಿಗೆ ಇರುವುದಾಗಿಯೂ ಉಳಿದ ಮೂರು ತಿಂಗಳು ಮಹಾನದಿಗಳ ಒಡತಿಯಾದ ತನ್ನ ತಾಯಿಯ ಅದ್ಭುತ ಅರಮನೆಯಲ್ಲಿ ಕಳೆಯುವುದಾಗಿಯೂ ಆಗಿತ್ತು.

ಬಹು ದುಖಃದಿಂದಲೇ ಸೂರ್ಯರಾಜ ಇದನ್ನು ಒಪ್ಪಿ ಮದುವೆಗೆ ಅಣಿಯಾದ. ಏಳು ರಾತ್ರಿ ಏಳು ಹಗಲುಗಳ ಕಾಲ ವಿಜೃಂಭಣೆಯಿಂದ ಮದುವೆ ನಡೆಯಿತು. ತನ್ನ ತಾಯಿಯ ಅರಮನೆಯನ್ನು ಬೀಳ್ಕೊಡಲಾರದೆ ರಾಜಕುಮಾರಿ ಸೂರ್ಯನೊಂದಿಗೆ ಹೊರಟಳು.

ಕರಾರಿನಂತೆ ಪ್ರತಿ ವರ್ಷವೂ ಮೂರು ತಿಂಗಳು ರಾಜಕುಮಾರಿ ತನ್ನ ತಾಯಿ ಮನೆಯಲ್ಲಿ ಬಂದು ಇರುತಿದ್ದಳು. ಆ ಮೂರು ತಿಂಗಳೂ ನದಿಗಳೆಲ್ಲವೂ ಹರ್ಷದ ಹಾಡನ್ನು ಹಾಡುತ್ತಿದ್ದವು, ಸೂರ್ಯನ ಕಿರಣಗಳನ್ನು ಅತಿ ಖುಷಿಯಿಂದ ಪ್ರತಿಫಲಿಸುತ್ತಿದ್ದವು.

ಹೀಗಿರಲು, ವಸಂತಗಳ ರಾಜಕುಮಾರಿಗೆ ಒಬ್ಬ ಮಗ ಜನಿಸಿದ ಮತ್ತು ತನ್ನ ತಾಯಿಯ ಬಳಿ ಮಗನನ್ನು ಕರೆದುಕೊಂಡು ಹೋಗಲು ಆಕೆ ಬಯಸಿದಳು. ಆದರೆ ಸೂರ್ಯ ಅದಕ್ಕೆ ಒಪ್ಪಿಗೆ ನೀಡಲಿಲ್ಲ. ಮಗುವನ್ನು ಜೊತೆ ಕರೆದೊಯ್ಯಲು ಸೂರ್ಯ, ಖಡಾಖಂಡಿತವಾಗಿ ನಿರಾಕರಿಸಿದ. ಪರಿಪರಿಯಾಗಿ ಬೇಡಿದ್ದೆಲ್ಲವೂ ವ್ಯರ್ಥವಾಗಿ ವಸಂತಗಳ ರಾಜಕುಮಾರಿ ತಾನೊಬ್ಬಳೇ ಹೋಗಲು ಭಾರದ ಹೃದಯದಿಂದ ಒಪ್ಪಿಕೊಂಡಳು. ಮತ್ತು ತನ್ನ ಮಗುವನ್ನು ಒಬ್ಬ ಉತ್ತಮ ದಾದಿಯ ಬಳಿ ಬಿಟ್ಟು ಹೋದಳು.

ಆದರೆ ಆ ವರುಷ, ಮಹಾನದಿಗಳ ರಾಣಿ ತನ್ನ ಮಗಳ ಬರುವಿಕೆಯನ್ನು ನಿರೀಕ್ಷಿಸಿರಲಿಲ್ಲ. ವಸಂತಗಳ ರಾಜಕುಮಾರಿಯ ಭೇಟಿಯಿಲ್ಲದಿದ್ದರೂ ನದಿ-ಸರೋವರಗಳೆಲ್ಲವೂ ಚೆನ್ನಾಗಿರಬೇಕೆಂದು ಅಪೇಕ್ಷಿಸಿ ಮುತ್ತುಗಳರಮನೆಯ ಒಡತಿ, ಮಹಾನದಿಗಳ ರಾಣಿ ಭೂಮಿಗೆ ನೀರುಣಿಸಲು ಹೊರಟು ಹೋಗಿದ್ದಳು. ಆದರೆ ಆಕೆ ಭೂಮಿ ದೈತ್ಯನಿಂದ ಭಂದಿಸಲ್ಪಟ್ಟು ಖೈದಿಯಾಗಬೇಕಾಯಿತು.

ವಸಂತಗಳ ರಾಜಕುಮಾರಿ, ಮಹಾನದಿಗಳು ಸಮುದ್ರ ಸೇರುವ ಬಳಿ ಇರುವ ತನ್ನ ತಾಯಿಯ ಭವ್ಯವಾದ ಅರಮನೆ ಬಳಿ ಬಂದಾಗ ಅಲ್ಲಿ ಯಾರೂ ಇರಲಿಲ್ಲ. ಪ್ರತಿಯೊಂದು ಕೋಣೆಗೂ ಓಡುತ್ತಾ ತನ್ನ ಅಮ್ಮನನ್ನು ಕರೆದೇ ಕರೆದಳು. ತನ್ನ ಪ್ರತಿಧ್ವನಿ ಕೇಳಿಸಿತೇ ವಿನಃ ಉತ್ತರವಿರಲಿಲ್ಲ. ಇಡೀ ಅರಮನೆಯೇ ಬಿಕೋ ಎನ್ನುತಿತ್ತು.

ಆಕೆ ಅರಮನೆಯಿಂದ ಓಡಿ ಬಂದು ನದಿಯಲ್ಲಿದ್ದ ಮೀನುಗಳನ್ನು ಕರೆದಳು, “ಓ ಮಹಾನದಿಯ ಮೀನುಗಳೇ.. ನನ್ನ ಪ್ರೀತಿಯ ಅಮ್ಮನನ್ನು ನೀವೇನಾದರೂ ನೋಡಿದ್ದೀರಾ? ”
ಸಮುದ್ರದ ಬದಿ ನಿಂತು ಕೇಳಿದಳು, “ಓ ಮರಳ ದಂಡೆಯೇ, ನೀವೇನಾದರೂ ನನ್ನ ಮುದ್ದು ಅಮ್ಮನನ್ನು ನೋಡಿದ್ದೀರಾ ?”
ಸಮುದ್ರ ತೀರದ ಚಿಪ್ಪುಗಳನ್ನು ಪ್ರಶ್ನಿಸಿದಳು, “ಓ ಚಿಪ್ಪುಗಳೇ ನನ್ನ ಅಮೂಲ್ಯ ತಾಯಿಯನ್ನು ನೀವೆಲ್ಲಾದರೂ ಕಂಡಿದ್ದೀರಾ?”

ಆದರೆ ಯಾರ ಬಳಿಯೂ ಉತ್ತರವಿರಲಿಲ್ಲ. ಮಹಾನದಿಗಳ ರಾಣಿಗೆ ಏನಾಯಿತೆಂದು ಯಾರಿಗೂ ಗೊತ್ತಿರಲಿಲ್ಲ.

ದುಖಃದಿಂದ ಆಕೆಯ ಹೃದಯ ಬಿರಿಯುವಂತಾಯಿತು. ಕೊನೆಗೆ ಆಕೆ ವಾಯುರಾಜನ ಮನೆಗೆ ಬಂದಳು. ವಾಯುರಾಜನ ವಯಸ್ಸಾದ ತಂದೆ ಮನೆಯಲ್ಲಿದ್ದರು ಮತ್ತು ಆಕೆಯ ಕಥೆ ಕೇಳಿ ಬಹು ವ್ಯಥೆ ಪಟ್ಟರು. “ನನ್ನ ಮಗ ವಾಯುರಾಜ ಖಂಡಿತವಾಗಿಯೂ ನಿನಗೆ ಸಹಾಯ ಮಾಡಬಲ್ಲ. ತನ್ನ ಕೆಲಸದ ಮೇರೆಗೆ ಹೊರ ಹೋಗಿದ್ದಾನೆ, ಇನ್ನೇನು ಬರಲಿದ್ದಾನೆ” ಎಂದು ಹೇಳಿ ಸಮಾಧಾನಪಡಿಸಿದರು.

ವಾಯುರಾಜ ಮನೆಗೆ ಹಿಂತಿರುಗುವಾಗ ಅತಿ ಕುಪಿತನಾಗಿದ್ದ. ಸಿಕ್ಕ ಸಿಕ್ಕ ವಸ್ತುಗಳ ಮೇಲೆ ರಭಸವಾದ ಗಾಳಿ ಬೀಸಿ ತನ್ನ ಕೋಪವನ್ನು ಹೊರಹಾಕುತ್ತಿದ್ದ. ಇದನ್ನರಿತ ವಾಯುರಾಜನ ತಂದೆ ವಸಂತಗಳ ರಾಜಕುಮಾರಿಯನ್ನು ಅಡಗಿಸಿಟ್ಟಿದ್ದ.

ತನ್ನ ಸ್ನಾನ, ಊಟಾದಿಗಳನ್ನು ಮುಗಿಸಿದ ಮೇಲೆ ವಾಯುರಾಜ ಸ್ವಲ್ಪ ತಣ್ಣಗಾದ. ಸಂದರ್ಭವರಿತ ವಾಯುರಾಜನ ತಂದೆ ತನ್ನ ಮಗನೊಂದಿಗೆ, ” ಓ ನನ್ನ ಪ್ರಿಯ ಪುತ್ರನೇ, ಒಬ್ಬ ಅಲೆಮಾರಿ ರಾಜಕುಮಾರಿ ನಿನ್ನ ಬಳಿ ಪ್ರಶ್ನೆಯೊಂದನ್ನು ಕೇಳಲು ಇಷ್ಟು ದೂರ ನಿನ್ನ ಹುಡುಕಿಕೊಂಡು ಬಂದಿದ್ದರೆ, ನೀ ಆಕೆಗೆ ಏನು ಮಾಡುತ್ತಿದ್ದೆ?”
“ಖಂಡಿತವಾಗಿಯೂ ನನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದೆ. ಯಾಕೆ ಈ ಮಾತು ?”
ಕೂಡಲೇ ವಾಯುರಾಜನ ತಂದೆ ವಸಂತಗಳ ರಾಜಕುಮಾರಿಯನ್ನು ತಂದು ತನ್ನ ಮಗನೆದುರು ನಿಲ್ಲಿಸಿದ. ಅವಳ ಹುಡುಕಾಟದ ದಣಿವಿನ ನಡುವೆಯೂ ಅವಳ ಸೌಂದರ್ಯ ಮಾಸಿರಲಿಲ್ಲ. ವಾಯುರಾಜನೆದುರು ಮಂಡಿಯೂರಿದಾಗ ಆತನ ಮನವೂ ಕರಗಿತು.

“ಶ್ರೇಷ್ಟನಾದ ವಾಯುರಾಜನೇ, ನಾನು ಮಹಾನದಿಗಳ ರಾಣಿಯ ಸುಪುತ್ರಿ. ನನ್ನ ಅಮ್ಮ ಇದೀಗ ಕಾಣೆಯಾಗಿದ್ದಾಳೆ. ಭೂಮಿಯೆಲ್ಲಾ ಹುಡುಕಾಡಿ ಬಳಲಿ, ಇದೀಗ ನಿನ್ನ ಸಹಾಯ ಕೇಳಲು ಬಂದಿದ್ದೇನೆ. ದಯವಿಟ್ಟು ಆಕೆಯನ್ನು ನನಗೆ ಹುಡುಕಿ ಕೊಡು. “

ಬಹು ದೀರ್ಘವಾಗಿ ಯೋಚಿಸಿದ ವಾಯುರಾಜ “ನಿನ್ನ ಅಮ್ಮ ಇದೀಗ ಒಬ್ಬ ಭೂದೊರೆಯ ಬಳಿ ಇದ್ದಾಳೆ.” ಎಂದು ಹೇಳಿದ. ” ಆಕೆಯ ಕಥೆಯೆಲ್ಲವೂ ನನಗೊತ್ತು. ಆಕೆಯನ್ನು ಅಪಹರಿಸಿ ಇಡಲಾದ ಜಾಗದ ಬಳಿ ನಿನ್ನೆಯಷ್ಟೇ ಹೋಗಿದ್ದೆ. ಆಕೆಯನ್ನು ಮರಳಿ ಕರೆತರಲು ಖಂಡಿತವಾಗಿಯೂ ನಿನಗೆ ಸಹಾಯ ಮಾಡುತ್ತೇನೆ” ಎಂದು ಭರವಸೆಯನ್ನಿತ್ತ.

ವಾಯುರಾಜ, ವಸಂತಗಳ ರಾಜಕುಮಾರಿಯನ್ನು ತನ್ನ ಕುದುರೆಯ ಮೇಲೆ ಕೂರಿಸಿಕೊಂಡು ಆಕೆಯ ಅಮ್ಮನನ್ನು ಬಂಧಿಸಲಾಗಿದ್ದ ಕೋಟೆಯ ಬಳಿ ಕರೆದುಕೊಂಡು ಹೋದ. ಮತ್ತು ಕೋಟೆಯ ಬಳಿ ನಿಂತು ಚಂಡಮಾರುತವನ್ನು ಎಬ್ಬಿಸಿದ. ನೆಲಮಾಳಿಗೆಯಲ್ಲಿ ಬಂಧಿಸಲಾಗಿದ್ದ ಮಹಾನದಿಗಳ ರಾಣಿಗೆ ತನ್ನ ಮಗಳನ್ನು ನೋಡಿದ ಕೂಡಲೇ ಇನ್ನಿಲ್ಲದ ಸಂತೋಷವಾಯಿತು.

ಕೋಟೆಯಿಂದ ಬಂಧಮುಕ್ತವಾಗಿ ಹೊರ ಬಂದ ಕೂಡಲೇ ಮಹಾನದಿಗಳ ರಾಣಿ ವಾಯುರಾಜನಿಗೆ ವಂದಿಸಿದಳು. ನಂತರ ತಾಯಿ-ಮಗಳಿಬ್ಬರೂ ತಮ್ಮ ಅದ್ಭುತ ಅರಮನೆಗೆ ವಾಪಾಸಾದರು. ಇದೇ ಸಮಯದಲ್ಲಿ ವಸಂತಗಳ ರಾಜಕುಮಾರಿಗೆ, ತಾನು ಮೂರು ತಿಂಗಳುಗಳಿಗಿಂತಲೂ ಹೆಚ್ಚು ಕಾಲ ಸೂರ್ಯರಾಜ ನಿಂದ ದೂರವಿದ್ದದ್ದು ಅರಿವಿಗೆ ಬಂತು. ತಕ್ಷಣವೇ ತನ್ನ ಅಮ್ಮನಿಗೆ ತಾತ್ಕಾಲಿಕ ವಿದಾಯ ಹೇಳಿ ತನ್ನ ಗಂಡನ ಮನೆಗೆ ಹೊರಟು ನಿಂತಳು.

ಸೂರ್ಯರಾಜನ ಅರಮನೆಗೆ ಬಂದು, ತನ್ನ ಮಗುವನ್ನು ನೋಡಿದ ಕೂಡಲೇ ವಸಂತಗಳ ರಾಜಕುಮಾರಿ ಬಹು ದುಃಖಿತಳಾದಳು. ಆಕೆಯ ಅನುಪಸ್ಥಿತಿಯಲ್ಲಿ ಮಗುವನ್ನು ಬಹಳ ಕಡೆಗಣಿಸಲಾಗಿತ್ತು. ಗುರುತು ಹಿಡಿಯಲಾರದಷ್ಟು ಬದಲಾಗಿ ಹೋಗಿತ್ತು.
ಮಗುವನ್ನು ಬಾಚಿ ಹಿಡಿದು ಹಗುರಾಗಿ ಮುದ್ದಿಸಿದಳು. ತನಗಾದ ಅನ್ಯಾಯವನ್ನು ಸಹಿಸಲಾರದೆ ನಂತರ ಕಿನಾರೆಗೆ ಹೋಗಿ ಅತ್ತಳು. ಇನ್ನಿಲ್ಲದಂತೆ ಅತ್ತಳು. ಅದರಿಂದಾಗಿ ಸಮುದ್ರದ ನೀರು ಸೂರ್ಯರಾಜನ ಅರಮನೆಯನ್ನು ತಲುಪುವಷ್ಟರ ಮಟ್ಟಿಗೂ ಏರಿತು. ಸೂರ್ಯರಾಜ, ಅವನ ಹೊಸ ಪತ್ನಿ, ಮತ್ತು ಇಡೀ ರಾಜ ಸಭಾಂಗಣ ಎಲ್ಲವೂ ಮರೆಯಾಗಿ ಹೋಯಿತು. ನಲವತ್ತು ದಿನಗಳ ಕಾಲ ಸೂರ್ಯನಿಗೆ ಭೂಮಿಯನ್ನು ನೋಡಲು ಸಾಧ್ಯವಾಗಲೇ ಇಲ್ಲ.

ವಸಂತಗಳ ರಾಜಕುಮಾರಿಯ ಮುದ್ದು ಮಗ ಬೆಳೆದು, ಮಳೆರಾಜನಾಗುತ್ತಾನೆ.. ಮಳೆಗಾಲದಲ್ಲಿ ಹಾಗೂ ಗುಡುಗಿನ ರುತುವಿನಲ್ಲಿ ಭೂಮಿಯನ್ನು ಆಳುತ್ತಾನೆ. ಅಂದು ತನ್ನ ತಾಯಿ ಸಮುದ್ರದ ಬಳಿ ಅತ್ತದ್ದು ನೆನಪಾಗಲೆಂದು ಭೂಮಿಗೆ ಕಣ್ಣೀರ ಧಾರೆಯನ್ನು ಕಳುಹಿಸುತ್ತಾನೆ.


ಅನುವಾದ : ಸಹಮತ ಬೊಳುವಾರು

ಚಿತ್ರಗಳು : ಮದನ್ ಸಿ.ಪಿ

2 comments to “ಜಗಪದ : ಬ್ರೆಜಿಲ್ ದೇಶದ ಜನಪದ ಕಥೆ – ವಸಂತರಾಣಿ”
  1. ಸೊಗಸಾದ ಕಲ್ಪನೆ,,, ನದಿ , ಸಮುದ್ರ , ಗಾಳಿ , ಮಳೆ , ವಸಂತಗಳ ಜೊತೆಗೆ ಮನುಷ್ಯ ಭಾವಗಳನ್ನು ಕೋದು ಕಟ್ಟಿದ ಸುಂದರ ಕತೆ

ಪ್ರತಿಕ್ರಿಯಿಸಿ