ಎ.ಕೆ. ರಾಮಾನುಜನ್ ರ ಹೆಸರನ್ನು ದಿನಪತ್ರಿಕೆಗಳ ಓದುಗರಿಗೆ ಪರಿಚಯಿಸುವಂತೆ ಮಾಡುವುದಕ್ಕೆ ನಡೆದ ಭಾರತದ ಕೊನೆಯಿಲ್ಲದ ‘ಸಂಸ್ಕೃತಿ ಸಮರ’ಗಳಲ್ಲಿ ಒಂದು, ಕಳೆಗುಂದಿದ ಕಾಳಗವಾಗಿ ಬದಲಾದ ಪರಿಯು, ಈ ಕಾಲದ ಬಗ್ಗೆ ಏನನ್ನೋ ಹೇಳುತ್ತದೆ. ರಾಮಾನುಜನ್ 1991ರಲ್ಲಿ ಬರೆದಿದ್ದ ದಕ್ಷಿಣ ಏಷ್ಯಾ ಹಾಗೂ ಆಗ್ನೇಯ ಏಷ್ಯಾದ ಹಲವು ರಾಮಾಯಣಗಳ ಕುರಿತ ವಿದ್ವತ್ಪೂರ್ಣ ಪ್ರಬಂಧವನ್ನು ದೆಹಲಿ ವಿಶ್ವವಿದ್ಯಾಲಯದ ಬಿ.ಎ. ಚರಿತ್ರೆ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಸೇರಿಸಿದ್ದು ಒಳ್ಳೆಯ ಆಲೋಚನೆಯಲ್ಲ ಎಂದು ಯಾರೋ ನಿರ್ಧರಿಸಿದರು. ಆ ಪ್ರಬಂಧವನ್ನು ಅಕ್ಟೋಬರ್ 2011ರಲ್ಲಿ ಪಠ್ಯಕ್ರಮದಿಂದ ತೆಗೆದುಹಾಕಲಾಯಿತು. ಇದರ ಬೆನ್ನಲ್ಲೇ, ಎಂದಿನಂತೆ ಒಂದರ ಹಿಂದೊಂದು ಪ್ರತಿಭಟನೆಗಳು ನಡೆದರೆ, ಸ್ವಸಂತುಷ್ಟ Op-Edಗಳು ಪ್ರಕಟವಾದವು.
ಈಗ, ಮರ್ಯಾದಾ ಪುರುಷೋತ್ತಮ ರಾಮನ ವ್ಯಕ್ತಿತ್ವಕ್ಕೆ ಕುಂದುತರುವಂತಹ ರಾಮಾಯಣ ಪರಂಪರೆಗಳ ಕಥನಗಳನ್ನೊಳಗೊಂಡ ಪ್ರಬಂಧವು ವಿವಾದದ ಮೂಲವಾಗುವುದಾದರೂ ಏಕೆ ಎಂಬುದನ್ನು ಕಾಣಬಹುದು. ರಾಮಾನುಜನ್ ರ ಶೈಕ್ಷಣಿಕ ವಲಯದ ಸಮರ್ಥಕರು ಕೂಡ ಅದ್ಭುತ ಒಳನೋಟಗಳನ್ನು ನೀಡಲು ಸೂಕ್ತವಾದ ಸಂದರ್ಭದಲ್ಲೂ ಏನನ್ನೂ ಮಾಡಲಾಗದೇ ಹೋದದ್ದು ನಾಚಿಕೆಗೇಡು.
ಪಠ್ಯಕ್ರಮದಿಂದ ಈ ಪ್ರಬಂಧವನ್ನು ಕಿತ್ತುಹಾಕಬೇಕು ಎಂಬುವ ನಿರ್ಧಾರವನ್ನು ವಿಶ್ವವಿದ್ಯಾಲಯ ತೆಗೆದುಕೊಂಡ ಕೆಲವೇ ಕ್ಷಣಗಳಲ್ಲಿ, ಸಮಾಜ ವಿಜ್ಞಾನಿ ಪ್ರತಾಪ್ ಭಾನು ಮೆಹ್ತಾ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಹೀಗೆ ಬರೆದರು:
ದೆಹಲಿ ವಿಶ್ವವಿದ್ಯಾಲಯದ ಪಠ್ಯಕ್ರಮದಿಂದ ಎ ಕೆ ರಾಮಾನುಜನ್ ರ ಪ್ರಸಿದ್ಧ ಪ್ರಬಂಧವನ್ನು ತೆಗೆದುಹಾಕಿರುವುದು ಎಡ ಹಾಗೂ ಬಲ ಪಂಥಗಳು ಒಂದು ಮಹಾನ್ ಪರಂಪರೆಯನ್ನು ಸತ್ವಹೀನ ರಾಜಕೀಯ ಕುರುಹಿನ ಮಟ್ಟಕ್ಕಿಳಿಸಿದ್ದಾರೆನ್ನುವುದನ್ನು ಎತ್ತಿತೋರಿಸಿದೆ. ಈ ಪ್ರಕ್ರಿಯೆಯಲ್ಲಿ, ಎರಡೂ ಪಂಥಗಳು ದೊಡ್ಡದಾದ ಪ್ರಶ್ನೆಗಳನ್ನು ಬಿಟ್ಟುಬಿಟ್ಟಿವೆ. ಆಳದಲ್ಲಿರುವ ಬಿಕ್ಕಟ್ಟೇನೆಂದರೆ, ನಮ್ಮ ಸಾರ್ವಜನಿಕ ಸಂಸ್ಕೃತಿಯು ರಾಮಾಯಣದ ಭಿನ್ನ “ಅರ್ಥಗಳ” ಬಗ್ಗೆ ಒಂದು ಗಂಭೀರವಾದ ಸಂವಾದವನ್ನುನಡೆಸಲು ಬೇಕಾದ ಕನಿಷ್ಟ ಬೌದ್ಧಿಕ ಸಂಪನ್ಮೂಲಗಳನ್ನು ಹೊಂದಿಲ್ಲ ಎನ್ನುವುದು. ಎಡಪಂಥೀಯ ಪರಂಪರೆಗಳ ವೈವಿಧ್ಯತೆಯನ್ನು ಕರೆದಿರುವುದು ತಾಂತ್ರಿಕವಾಗಿ ಸರಿ. ಆದರೆ, ಈ ಆವಾಹನೆಯಲ್ಲಿ ವೈವಿಧ್ಯತೆಯೆನ್ನುವುದು ಒಂದು ಔಪಚಾರಿಕ ಸೂಚನೆಯಷ್ಟೆ. ಭಿನ್ನಬಗೆಯ ರಾಮಾಯಣಗಳಿರುವ ಬಗ್ಗೆ ನಮಗೆ ಹೆಮ್ಮೆಯಿದೆಯಾದರೂ, ನಾವು ಅದನ್ನು ಚರ್ಚಿಸಲು ಬೇಕಾದ ಒಂದು ಆವರಣವಿಲ್ಲ.
ಐದು ದಶಕಗಳು, ಎರಡು ದೇಶಗಳು, ಹಾಗೂ ಕನಿಷ್ಟ ಮೂರು ಶಾಸ್ತ್ರಗಳವರೆಗೆ ಹರಡಿಕೊಂಡಿರೋ ರಾಮಾನುಜನ್ ರ ಕೆಲಸವನ್ನು ರಾಜಕೀಯ ಮಹತ್ವಕ್ಕೆ ಇಳಿಸಿಬಿಟ್ಟಿರುವುದು ಅದೇ ಮೊದಲೇನಾಗಿರಲಿಲ್ಲ. ಅದಿರಲಿ. ಜುಲೈ 1966ರಲ್ಲಿ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಕಲಿಸುತ್ತಿದ್ದ ಹಾಗೂ ಅದಷ್ಟೇ ತಮ್ಮ ಇಂಗ್ಲಿಶ್ ಕವನ ಸಂಕಲನವೊಂದಕ್ಕೆ ಅದ್ಭುತವಾದ ರಿವ್ಯೂಗಳನ್ನು ಸ್ವೀಕರಿಸಿದ್ದ ರಾಮಾನುಜನ್, ನ್ಯೂಯಾರ್ಕ್ ನ ಏಷ್ಯಾ ಸೊಸೈಟಿಯಲ್ಲಿದ್ದ ತನ್ನ ಗೆಳೆಯ ಹಾಗೂ ಸಂಪಾದಕ ಬೊನಿ ಕ್ರೌನ್ ರವರಿಗೆ ಸಡಗರದಿಂದ ಪತ್ರ ಬರೆದರು.
ನಾನು ಇಲ್ಲಿಯವರೆಗೆ ಕನ್ನಡದಲ್ಲಿ ಓದಿದ್ದಕ್ಕಿಂತಲೂ ಭಿನ್ನವಾದ ಕಾದಂಬರಿಯೊಂದನ್ನು ಕಳೆದ ವಾರ ಓದಿದೆ. ಯುವ ಸಾಹಿತಿಯೊಬ್ಬ ಬರೆದಿರುವ ಈ ಕಾದಂಬರಿ ಕಳೆದ ವಾರವಷ್ಟೆ ಪ್ರಕಟವಾಗಿದೆ. ಇದು ಬ್ರಾಹ್ಮಣರ ಕೇರಿಯಲ್ಲಾದ ಪಾಪಿಷ್ಟ ಬ್ರಾಹ್ಮಣನೊಬ್ಬನ ಸಾವಿನ ಕುರಿತಾದುದು. ಇವನ ಅಂತ್ಯ ಸಂಸ್ಕಾರವನ್ನು ಯಾರು ಮಾಡಬೇಕೆನ್ನುವ ಪ್ರಶ್ನೆ ತಲೆದೋರುತ್ತದೆ. ಇಡೀ ಬ್ರಾಹ್ಮಣ ಈ ಬಗ್ಗೆ ಎಲ್ಲ ರೀತಿಯ ಸಂಕೀರ್ಣವಾದ, ಮೂಲಭೂತವಾದ ಪ್ರಶ್ನೆಗಳನ್ನು ಕೇಳುತ್ತಾರೆ. ನಾನು ಈ ಕಾದಂಬರಿಯನ್ನು ಅನುವಾದಿಸಬೇಕೆಂದಿದ್ದೇನೆ. ಆದರೆ ಈ ಕತೆಯಲ್ಲಿ ಬೆರೆತಿರುವ ಬ್ರಾಹ್ಮಣ ಪೌರಾಣಿಕತೆ ಹಾಗೂ ದಿನನಿತ್ಯದ ಕರ್ಮಗಳ ಕಾರಣದಿಂದಾಗಿ ಇದು ತುಂಬ ಕ್ಲಿಷ್ಟವಾದ ಕೆಲಸ. ಆದರೆ ಇದೊಂದು ತೀವ್ರ, ಸಂಕೀರ್ಣ, ಶ್ರೀಮಂತ ಹಾಗೂ ಸಂಪೂರ್ಣವಾಗಿ ನೈಜವಾದ ಕತೆಯಾಗಿರುವುದರಿಂದ ಇದನ್ನು ಅನುವಾದಿಸಿದರೆ, ಖಂಡಿತವಾಗಿಯೂ ಮುಖ್ಯವಾಗುತ್ತದೆ. ನನ್ನ ಗೆಳೆಯರಾದ, ಸದ್ಯ ಡಾಕ್ಟೊರಲ್ ಫೆಲೊಶಿಪ್ ನ ಮೇಲೆ ಇಂಗ್ಲೆಂಡ್ ನಲ್ಲಿ ನೆಲೆಸಿರುವ ಕಾದಂಬರಿಕಾರನಿಗೆ ನಾನು ಬರೆಯಬೇಕೆಂದಿದ್ದೇನೆ. ನಿಮಗೆ ಆಸಕ್ತಿಯಿದಯೇ?
ಕ್ರೌನ್ ಗೆ ತುಂಬ ಆಸಕ್ತಿಯಿತ್ತು. ಆ ಕಾದಂಬರಿಯ ಹೆಸರು ಸಂಸ್ಕಾರ. ರಾಮಾನುಜನ್ ಬಮಿಂಗ್ ಹ್ಯಾಮ್ ನಲ್ಲಿದ್ದ ಯು ಆರ್ ಅನಂತಮೂರ್ತಿಯವರಿಗೆ ಪತ್ರ ಬರೆದರು.
ನಾನು ನಿಮಗೆ ಬಹಳ ಸಲ ಬರೆಯಬೇಕೆಂದುಕೊಂಡಿದ್ದೆ. ಅದರಲ್ಲೂ ನಿಮ್ಮ ಇತ್ತೀಚಿನ ಕಾದಂಬರಿಯನ್ನು ಓದಿದ ಮೇಲೆ. ಅದು ನನ್ನನ್ನು ತುಂಬ ಕಾಡಿತು. ನಿಮ್ಮ ಹೊಸ ಕಾದಂಬರಿಯನ್ನು ಇಂಗ್ಲಿಶ್ ಗೆ ಅನುವಾದಿಸಲು ಅನುಮತಿಯನ್ನು ಕೊಡುವಿರಾ? ನೀವು ಇಂಗ್ಲೆಂಡ್ ನಲ್ಲಿ ಸಂಭ್ರಮದಿಂದ ಸೃಜನಶೀಲವಾಗಿ ಸಮಯವನ್ನು ಕಳೆಯಲು ಸಾಧ್ಯವಾಗಿದೆಯೆಂದು ನಂಬಿದ್ದೇನೆ. ಶುಭ ಹಾರೈಕೆಗಳೊಂದಿಗೆ,
‘ಸಂಸ್ಕಾರ’ ದ ಅನುವಾದ 1976ರಲ್ಲಿ ‘A Rite for a Dead Man'(ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ) ಎಂಬ ಉಪಶೀರ್ಷಿಕೆಯೊಂದಿಗೆ ಪ್ರಕಟವಾಯಿತು. ಸಂಸ್ಕೃತ ಮೂಲದ ಶೀರ್ಷಿಕೆ ಕೊಡುವ ಅರ್ಥಗಳಲ್ಲಿ ಅನಂತಮೂರ್ತಿಯವರು ಆಯ್ಕೆ ಮಾಡಿದ ಒಂದನ್ನು ಈ ಉಪಶೀರ್ಷಿಕೆಯನ್ನಾಗಿರಿಸಿಕೊಂಡರು. ಅನುವಾದದ ಕೊನೆಯಲ್ಲಿ ರಾಮಾನುಜನ್ ಬರೆದಿರುವ ಹಿನ್ನುಡಿ, ಅವರ ವಿಮರ್ಶಾತ್ಮಕ ಪ್ರಬಂಧಗಳಲ್ಲೇ ಅತ್ಯಂತ ಜಾಣ್ಮೆಯಿಂದ ಕೂಡಿದೆ. ಕಾದಂಬರಿಯ ಕೇಂದ್ರ ಪಾತ್ರವಾದ ಬ್ರಾಹ್ಮಣ ಪಂಡಿತನಾದ ಪ್ರಾಣೇಶಾಚಾರ್ಯನ ಬದುಕಿನಲ್ಲಿ ತಲ್ಲಣ ಮೂಡಿಸುವಂತಹ ಘಟನೆಗಳು ಎದುರಾಗುತ್ತವೆ. ಅವು ಆತನನ್ನು ಅಪರಿಚಿತವಾದ ರೀತಿಯ ಸ್ವಮನನಕ್ಕೊಡ್ಡಿದಾಗ ಆತ ಎದುರಿಸುವ ಬಿಕ್ಕಟ್ಟು ಅವರನ್ನು ಸೆಳೆಹಿಡಿದಿತ್ತು. ರಾಮಾನುಜನ್ ಕಂಡ ಹಾಗೆ, ಪ್ರಾಣೇಶಾಚಾರ್ಯ ಎಂಬ ವ್ಯಕ್ತಿಯಲ್ಲಿ, “ಬ್ರಾಹ್ಮಣವಾದಿ ಆಧುನಿಕ ಅಸ್ತಿತ್ವವಾದಿ ವಿಧಾನದಲ್ಲಿ(ಹಾಗೆ ಹೇಳುವುದಾದರೆ, ಬ್ರಾಹ್ಮಣವಾದಕ್ಕೆ ಅನ್ಯವಾದುದು) ಪ್ರಶ್ನಿಸುತ್ತಾನೆ. ಹಾಗೆ ಪ್ರಶ್ನಿಸಿಕೊಳ್ಳುವುದು ಹೊಸ ಮತ್ತು ಸಾಧಾರಣ ಜಗತ್ತುಗಳೆಡೆ ಕರೆದೊಯ್ಯುತ್ತದೆ.” ಕೆಳಜಾತಿಯ ಮಹಿಳೆಯೊಂದಿಗೆ ಮಲಗುವಂತಹ ಘೋರ ಅಪರಾಧವನ್ನು ಮಾಡಿದ ನಂತರ, ಅವನು ಬಲವಂತವಾಗಿ ಎದುರಿಸಬೇಕಾದ ಪ್ರಶ್ನೆಗಳಿಗೆ ಅವನ ಕಲಿಕೆಯಲ್ಲಿ ಸರಳ ಉತ್ತರಗಳಿಲ್ಲ. “ಅವನು ಎಂದಾದರೂ ತನ್ನ ಹಿಂದಿನ ರೀತಿನೀತಿಗಳೊಂದಿಗೆ, ಸಂಸ್ಕಾರಗಳೊಂದಿಗೆ, ಒಂದಾಗಲು ಸಾಧ್ಯವಾಗುವುದೇ? ನಮಗೆ ತಿಳಿದಿಲ್ಲ.”
ರಾಮಾನುಜನ್ ರ ಅನುವಾದವು ಆಗ ಖುಶ್ವಂತ್ ಸಿಂಗ್ ಅವರು ಸಂಪಾದಿಸುತ್ತಿದ್ದ Illustrated Weekly of India ದಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಬೆನ್ನಲ್ಲೇ ಅಪಾರ್ಥಕ್ಕೊಳಗಾಗಿತ್ತು. ಕಾದಂಬರಿಯ ಬಗ್ಗೆ ಸಂಪಾದಕರಿಗೆ ಬರೆಯಲಾಗಿದ್ದ ಪತ್ರವೊಂದರಲ್ಲಿ “ಬ್ರಾಹ್ಮಣರನ್ನು ದಂಡಿಸುವಂತಹ… ಗರ್ವದ, ಇದಿರಾಡುವಂತಹ, ಗೇಲಿ ಮಾಡುವಂತಹ ಹಾಗೂ ತನ್ನದೇ ಸರಿಯೆನ್ನುವಂತೆ ಮಾತನಾಡುವ ಶೈಲಿಯಲ್ಲಿ ಬರೆಯಲಾದ” ಪುಸ್ತಕ ಇದು ಎಂದು ದೂರಲಾಗಿತ್ತು. ಖಂಡಿತವಾಗಿಯೂ ಆ ಪುಸ್ತಕಕ್ಕೆ ಇಂತಹ ಆರೋಪಗಳು ಬರಬೇಕಿರಲಿಲ್ಲ. ಯಾಕೆಂದರೆ, ಈ ಕಾದಂಬರಿಯಲ್ಲಿ ಬ್ರಾಹ್ಮಣ ಪಾತ್ರಗಳು ಹಾಗೂ ಅವರ ಪ್ರಪಂಚದ ಕುರಿತ ಲೇಖಕನ ಸಹಾನುಭೂತಿಯು ರಾಜಕೀಯ ವಿಡಂಬನೆಗಿಂತ ಭಿನ್ನವಾಗಿಸುತ್ತದೆ. ಪತ್ರ ಬರೆದವರಿಗೆ ಅನಂತಮೂರ್ತಿಯವರ ಗುರಿಗಳು ರಾಜಕೀಯವಾದುವಲ್ಲ, ನೈತಿಕವಾದುವು, ಹಾಗಾಗಿಯೇ ಕಾದಂಬರಿಗೂ, ಚರ್ಚಾಸ್ಪದ ವಿಷಯಕ್ಕೂ ವ್ಯತ್ಯಾಸ ತಿಳಿದ ಹಾಗೆ ಕಾಣುವುದಿಲ್ಲ. ಅವರ ಪಾತ್ರಕ್ಕೆ ಸಂಬಂಧಿಸಿದಂತೆ ಹೇಳುವುದಾರೆ, ರಾಮಾನುಜನ್ ಕಾದಂಬರಿಯ ರಾಜಕೀಯದ ಬಗ್ಗೆ ನಿರ್ಲಿಪ್ತವಾಗಿರುವುದು ಕಾಣುತ್ತದೆ. ಅವರ ಮನಸ್ಸಿನಲ್ಲಿ, ಸಂಸ್ಕಾರ ಬ್ರಾಹ್ಮಣ ಪರ ಅಥವಾ ವಿರೋಧಿಯಲ್ಲ. ಅದು ಆಧುನಿಕ ಜಗತ್ತಿನಲ್ಲಿ ‘ಸ್ವ’ದ ನಿಯತಿಗೆ ಸಂಬಂಧಿಸಿದ್ದು.
ರಾಮಾನುಜನ್ ರ ಹಿನ್ನುಡಿ ಹೇಳುವ ಹಾಗೆ, ಪ್ರಾಣೇಶಾಚಾರ್ಯ ಸಂಪೂರ್ಣವಾಗಿ ವಿಕಾಸಗೊಂಡ ಸಾಮಾಜೀಕೃತ ಬ್ರಾಹ್ಮಣನಿಂದ ತನ್ನ ಪರಂಪರೆಗಳೊಂದಿಗೆ ಒಂದಾದ–ತನ್ನನ್ನು ತಾನು ಆಯ್ದುಕೊಂಡ, ತನ್ನನ್ನು ತಾನು ವ್ಯಕ್ತಿಗತವಾಗಿಸಿಕೊಂಡ, ಹಾಗೂ ತನ್ನಿಂದ ಅನ್ಯವಾಗಿಸಿಕೊಂಡ–ಹೊಸ ಬಗೆಯ ವ್ಯಕ್ತಿಯಾಗಿ ಬದಲಾಗುತ್ತಾನೆ. ಕಾದಂಬರಿಯ ಕೊನೆಯಲ್ಲಿ ನಾವು ಕೂಡ ಆಚಾರ್ಯನ ಹಾಗೆಯೇ “ವ್ಯಾಕುಲ, ನಿರೀಕ್ಷಕ”ನಾಗಿ ಉಳಿದುಬಿಡುತ್ತೇವೆ.
ಸಂಸ್ಕಾರ ರಾಮಾನುಜನ್ ರನ್ನು ಕಾಡಿತ್ತೆಂಬುದು ಸಹಜವೇ. ಕಾದಂಬರಿಯ ಜಗತ್ತು ಕೂಡ ದೃಢವಾಗಿ ವಾಸ್ತವಿಕ ಎಂದು ಕರೆಯಬಹುದಾದಷ್ಟು ಪೌರಾಣಿಕ ಸಾಂಕೇತಿಕತೆಯನ್ನು ಹೊಂದಿತ್ತು. ಹಾಗೆಯೇ, ರಾಮಾನುಜನ್ ರ ಆರಂಭಿಕ ಕಾವ್ಯದ ಜಗತ್ತಿನ ನೇರವಾದ ಮುಂದುವರಿಕೆಯೇ ಆಗಿತ್ತು. ಅವರ ಮೊದಲ ಕವನ ಸಂಕಲನ The Striders (1966)ನಲ್ಲಿ ‘Still Another View of Grace’ ಕಾದಂಬರಿಯ ನಿರೂಪಕ “Bred Brahmin among singers of shivering hymns” (“ಕಂಪಿಸುವ ಸ್ತೋತ್ರಗಳ ಗಾಯಕರಲ್ಲಿ ಕಾಣಸಿಗುವ ಮೇಲ್ಮಟ್ಟದ ಬ್ರಾಹ್ಮಣರು”) “shudder[ing] to the bone at hungers that roam the street / beyond the constable’s beat ಬೀದಿಯಲ್ಲಿ ತಿರುಗುವ ಹಸಿವಿನಿಂದ ಮೂಳೆಯಾಳದಲ್ಲಿ ಕಂಪಿಸುವುದು/ಕಾನ್ ಸ್ಟೇಬಲ್ ಗಳ ಬೀಟ್ ಗಳನ್ನು ಮೀರಿದ್ದು) ತುಂಬ ಅನುರಣಿಸುತ್ತದೆ. ಪದ್ಯ ನಂತರ ಮುಂದಕ್ಕೆ ಹಿಂಸಾತ್ಮಕವಾದ, ಕದಡುವ ಮುಗಿತಾಯಕ್ಕೆ ಬರುತ್ತದೆ:
ಆದರೆ ಅವಳು ಅಲ್ಲಿ ನಿಂತಳು
…ನೋಟವೊಂದನ್ನು ಕೊಟ್ಟಳು. ಆಜ್ಞೆಗಳು
ನೆಲಕ್ಕುರುಳಿದವು.
ನನ್ನ ಅಪ್ಪನ ಗತದಲ್ಲಿದ್ದಂತೆ. ಅವಳ ಉರುಳು ಕೂದಲು
ನನ್ನ ಸಿಡುಕು ಕೈಗಳಲ್ಲಿ ಇದ್ದಕ್ಕಿದ್ದಂತೆ ರೇಶ್ಮೆಯಂತೆ, ನಾನವಳ ಕೈ ಕುಲುಕಿ
ಬರಸೆಳೆದೆ, ನನ್ನ ನಾಡಿನ ರೀತಿರಿವಾಜುಗಳನು ಮೀರಿ.
ಇದೊಂದು ರಾಜಕೀಯ ಪದ್ಯವೇ? ಅಥವಾ ಬ್ರಾಹ್ಮಣಿಕೆಯ ಮೇಲಿನ ದಾಳಿಯೇ? ಈ ಪ್ರಶ್ನೆ ಇಲ್ಲಿ ಅಷ್ಟು ಮುಖ್ಯವಾಗುವುದಿಲ್ಲ. ರಾಮಾನುಜನ್ ರ ಬದುಕು–ಇಂಗ್ಲಿಶ್ ಮತ್ತು ಕನ್ನಡದಲ್ಲಿನ ಕಾವ್ಯ, ತಮಿಳು ಮತ್ತು ಕನ್ನಡದಿಂದ ಅನುವಾದಗಳು, ದಕ್ಷಿಣ ಭಾರತದಿಂದ ಜಾನಪದ ಸಾಹಿತ್ಯವನ್ನು ಸಂಗ್ರಹಿಸುವುದು–ಎಲ್ಲವೂ ಅವುಗಳ ರಾಜಕೀಯವನ್ನು ಬೇಕೆಂತಲೇ ತಡೆಯುವುದರೊಂದಿಗೆಯೇ ರಾಜಕೀಯ ಅನ್ನಿಸಿಕೊಂಡಂತಹವು.
20 ವರ್ಷಗಳ ಹಿಂದೆ, ಒಂದು ಸಣ್ಣ ಶಸ್ತ್ರ ಚಿಕಿತ್ಸೆಗಾಗಿ ನೀಡಲಾದ ಅರಿವಳಿಕೆಯಿಂದ ಉಂಟಾದ ಪ್ರತಿಕೂಲ ಪರಿಣಾಮದಿಂದಾಗಿ ರಾಮಾನುಜನ್ ಕೊನೆಯುಸಿರೆಳೆದರು. ಅವರ ಗೌರವಾರ್ಥ ಅವರು 30 ವರ್ಷಗಳ ಕಾಲ ಕೆಲಸ ಮಾಡಿದ್ದ ಚಿಕಾಗೋ ವಿಶ್ವವಿದ್ಯಾಲಯದ ಮುಖ್ಯ ಚತುಷ್ಟಯದಲ್ಲಿದ್ದ ಬಾವುಟವನ್ನು ಅರ್ಧಕ್ಕಿಳಿಸಿ ಹಾರಿಸಲಾಗಿತ್ತು. ಶೋಕಾಚರಣೆಯಲ್ಲಿ, ಅವರ ಆರಂಭಿಕ ಕವನಗಳಲ್ಲೊಂದಾದ, ‘Prayers to Lord Murugan’ ಓದಲಾಯ್ತು:
Lord of the headlines,
help us read
the small print.
Lord of the sixth sense,
give us back
our five senses.
ರಾಮಾನುಜನ್ ರದ್ದು ಒಂದು ಚಿಂತನಾವ್ಯವಸ್ಥೆಯಲ್ಲ. ಅವರು ಹೆಚ್ಚಾಗಿ ವ್ಯವಸ್ಥಿತವಾದುದನ್ನು ತಿರಸ್ಕರಿಸಿದರು. ಅವರದು ಇರುವಿಕೆಯ, ನೋಡುವಿಕೆಯ ಕ್ರಮ. ಅವರು ತಾನು ಬರೆದಿದ್ದಕ್ಕಿಂತ ಹಾಗೂ ಬದುಕಿದ್ದ ಬದುಕಿಗಿಂತ ಪ್ರತ್ಯೇಕವಾದ ದರ್ಶನವಾವುದೂ ಇರಲಿಲ್ಲ. ‘Prayers to Lord Murugan’ ಪದ್ಯ ಅವರ ಉಳಿದೆಲ್ಲ ಪದ್ಯಗಳಿಗಿಂತ ಅಭಿವ್ಯಕ್ತಿಗೆ–ಅವರ ದರ್ಶನ ಎಂದು ಹೇಳಲಾಗದಿದ್ದರೂ, ಸಂವೇದನೆ ಎಂದು ನಾವು ಕರೆಯಬಹುದಾದುದರ ಹತ್ತಿರತ್ತಿರ ಬರುತ್ತದೆ.
ತನ್ನ ಸಂವೇದನೆಯಿಂದಾಗಿ ಅವರು ಮಾನವಶಾಸ್ತ್ರಜ್ಞರು ‘ವಿರಾಟ್’ ಗಿಂತ ‘ಕಿರು ಪರಂಪರೆ’ಯನ್ನು ಎಂದು ಕರೆಯುವ ಹಾಗೆ, ದೊಡ್ಡ ತಲೆಬರೆಹಗಳಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಸಣ್ಣ ಅಕ್ಷರಗಳಲ್ಲಿ ಕಾಣಿಸಿಕೊಳ್ಳುವುದರೆಡೆ ವಾಲುತ್ತಿದ್ದರು. ಈ ಸಂವೇದನೆಯೇ ಅವರನ್ನು ಸಂಸ್ಕೃತ ಮಹಾಕಾವ್ಯಗಳ ಬದಲು ಕ್ಲಾಸಿಕಲ್ ಹಾಗೂ ಮಧ್ಯಕಾಲೀನ ತಮಿಳು ಮತ್ತು ಕನ್ನಡ ಕಾವ್ಯವನ್ನು, ವೈದಿಕ ಋಷಿಮುನಿಗಳ ಬದಲು ವಿರಕ್ತರನ್ನು ಅನುವಾದಿಸುವ ಆಯ್ಕೆ ಮಾಡಲು ಪ್ರೇರೇಪಿಸಿತು. ಸಂವೇದನೆ ಅನ್ನುವುದು ಅವರ ಕಾವ್ಯಮೀಮಾಂಸೆಯ ಕೇಂದ್ರದಲ್ಲಿದೆ: ಸಾರ್ವತ್ರಿಕವಾದ ತತ್ವಕ್ಕೆ ಬದಲು ಒಂದು ನಿರ್ದಿಷ್ಟವಾದ ಪ್ರತಿಮೆಯನ್ನು ಮೆಚ್ಚುವುದು, “ನಮ್ಮ ಪಂಚೇಂದ್ರಿಯ”ಗಳೊಂದಿಗೆ ಕಾಣುವ ಜಗತ್ತನ್ನು ವಶವಾಗಿಸಿಕೊಳ್ಳುವ ಒಂದು ಸರಳ ಕ್ರಿಯೆ, ಅದನ್ನು ಮೀರಿ ಹೋಗುವ ಯಾವುದೇ ರೀತಿಯ ಮೂರ್ತತೆ, “ಆರನೇ ಇಂದ್ರಿಯ” ಪ್ರಯತ್ನ.
ಸಂವೇದನೆ ಅನ್ನುವುದು ಒಂದು ತತ್ವಸಿದ್ಧಾಂತವಲ್ಲ. ಹಾಗಾಗಿಯೇ, ರಾಮಾನುಜನ್ ರ ಬದುಕು ಹಾಗೂ ಬರೆಹಗಳು ಭಾರತೀಯ ರಾಜಕೀಯ ಬದುಕಿನ ‘ಎಡ’ ಹಾಗೂ ‘ಬಲ’, ‘ಕೋಮುವಾದಿ’ ಹಾಗೂ ‘ಸೆಕ್ಯುಲರ್’ ಮುಂತಾದ ಒಣ ತತ್ವಗಳಡಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಹಿಂಜರಿಯುತ್ತವೆ. ಅವರನ್ನು ಆಧುನಿಕತಾವಾದಿ ಎಂದು, ಪ್ರಾಯಃ ಭಾರತದ ಆಧುನಿಕತಾವಾದಿಗಳಲ್ಲೇ ಅತ್ಯಂತ ಶ್ರೇಷ್ಠರಲ್ಲೊಬ್ಬರು ಎಂದು ಯಾರಾದರೂ ಕರೆಯಬಹುದೇನೋ. ಆದರೆ ಅವರನ್ನು ದೈವತ್ವದ ಮಟ್ಟಕ್ಕೇರಿಸುವ ಆವಶ್ಯಕತೆಯಿಲ್ಲ. ಅವರನ್ನು ಅರ್ಥಮಾಡಿಕೊಳ್ಳಬೇಕಾದ ಆವಶ್ಯಕತೆಯಿದೆ. ನಾವಿನ್ನೂ ಅವರನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಬೇಕಾದುದರಿಂದ ಸಾಕಷ್ಟು ದೂರ ಉಳಿದಿದ್ದೇವೆ.
ಇದು ನಮ್ಮನ್ನು ಅಚ್ಚರಿಗೊಳಿಸಬಾರದು; ಭಾರತದ ಆಧುನಿಕ ಚರಿತ್ರೆಯನ್ನು ಅದರ ಚರಿತ್ರೆಕಾರರು ಅಷ್ಟು ಉತ್ತಮವಾಗೇನೂ ಕಟ್ಟಿಲ್ಲ. ಕವಿ ಅರವಿಂದ ಕೃಷ್ಣ ಮೆಹ್ರೊತ್ರ ಆಗಾಗ್ಗೆ ದೂರುವ ಹಾಗೆ, ನಮ್ಮ ಸಾಹಿತ್ಯದ ಅತ್ಯಂತ ದೊಡ್ಡ ವಂಚನೆಯೆಂದರೆ… ನಮ್ಮ ದೇಶದಲ್ಲಿ ಇಂಗ್ಲಿಶ್ ವಿಭಾಗದಲ್ಲಿ ಕಲಿಸುವವರು, ಅಕಾಡೆಮಿಕ್ ಸಮುದಾಯ. ಆತ್ಮಕತೆಗಳು, ವಿದ್ವತ್ತಿನ ಆವೃತ್ತಿಗಳು, ಆಯ್ಕೆಗಳಿಂದ ಬೆಟ್ಟದ ಬದಿಗಳನ್ನು ಹಸಿರಿನಿಂದ ಮೆತ್ತಬೇಕಿದ್ದವರು…” ಅವರ ಬರೆಹಗಳ ಬೃಹತ್ ಭಾಗ ಇಂದು ಉತ್ತಮವಾಗಿ ಸಂಪಾದಿಸಲಾಗಿರುವ ಅನೇಕ ಆವೃತ್ತಿಗಳಲ್ಲಿ ಕಾಣಿಸಿಕೊಂಡು ಇನ್ನೂ ಅಚ್ಚಿನಲ್ಲಿವೆ. ರಾಮಾನುಜನ್ ಅವರ ಜೀವನ ಕಾಲಾವಧಿಯಲ್ಲಿದ್ದ ಹಾಗೆಯೇ, ಸಾವಿನ ನಂತರವೂ ಅವರೆಡೆಗೆ ಅತೀವ ಆಸಕ್ತಿ ತೋರಿಸಿದ ಅವರ ಪತ್ನಿ ಮೊಳಿ ಡೇನಿಯಲ್ಸ್ ರಾಮಾನುಜನ್ ಹಾಗೂ ಅವರ ವಿದ್ಯಾರ್ಥಿ ಹಾಗೂ ಸ್ನೇಹಿತ ವಿನಯ್ ಧಾರವಾಡಕರ್-ರನ್ನು ಹೆಸರಿಸಬಹುದು.
ಆದರೂ, ಚಿಕಾಗೋದ ರೆಗೆನ್ ಸ್ಟೈನ್ ಲೈಬ್ರರಿಯಲ್ಲಿ ಬಹಳ ಶ್ರದ್ಧೆಯಿಂದ ಸಂರಕ್ಷಿಸಿ ಕ್ಯಾಟಲಾಗ್ ಮಾಡಿಡಲಾದ ಅವರ ಸುದೀರ್ಘ ಪತ್ರಗಳು ಹಾಗೂ ಇತರೆ ಪತ್ರಗಳನ್ನು ಹೆಚ್ಚಿನ ಓದುಗರಿಗೆ ತಲುಪಿಸುವಂತಹ ಸಂಪಾದಕ ಅಥವಾ ಜೀವನಚರಿತ್ರೆಕಾರನಿಗಾಗಿ ಕಾಯುತ್ತಿವೆ. ಉದಾಹರಣೆಗೆ, ಈ ಮುಂಚೆ ಹೆಸರಿಲಾದ ಅನಂತಮೂರ್ತಿಯವರಿಗೆ ಬರೆದ ಪತ್ರವನ್ನು ಓದುವುದೆಂದರೆ, ಹಲವು ದಶಕಗಳು ಸ್ನೇಹಸಂಬಂಧದ ನೋಟವನ್ನು ಪಡೆದ ಹಾಗೆ. ಅದು ಹಾಗೆಯೇ ಸಾಹಿತ್ಯ ಚರಿತ್ರೆಯಲ್ಲಿ ನಾವು ಕಂಡರಿಯದ ಅಧ್ಯಾಯವೊಂದನ್ನು ಕಾಣುವ ಕೆಲಸ ಕೂಡ. ರಾಮಾನುಜನ್ ರ ಪ್ರಬಂಧಗಳು, ಬರೆಹಗಳು, ಕಾಳಜಿಗಳು, ಹಾಗೂ ಸ್ನೇಹಸಂಬಂಧಗಳು ಆಧುನಿಕ ಭಾರತೀಯ ಸಾಹಿತ್ಯದದ ಗಮನ ಸೆಳೆಯಲಿದೆಯೇನೋ.
ಮುಂದುವರೆಯುವುದು…
ಕೃಪೆ : Caravan Magazine
1 ಆಗಸ್ಟ್ 2013 ರಂದು ಪ್ರಕಟವಾದ ಇಂಗ್ಲೀಷ್ ನ ಮೂಲ ಲೇಖನವನ್ನು ಕ್ಯಾರವ್ಯಾನ್ ಮ್ಯಾಗಜಿನ್ ಅನುಮತಿ ಪಡೆದು ಅನುವಾದಿಸಿ ಪ್ರಕಟಿಸಲಾಗಿದೆ . ಮೂಲ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
ಅನುವಾದ : ಶಶಿಕುಮಾರ್
ಶಶಿಕುಮಾರ್ ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಮೈಸೂರಿನಲ್ಲಿ. ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಕೆಲಕಾಲ ಇಂಗ್ಲಿಶ್ ಅನುವಾದಗಳ ಸಂಪಾದಕರಾಗಿದ್ದರು. ಸದ್ಯ ಕನ್ನಡ ಕಾದಂಬರಿಯ ಇಂಗ್ಲಿಶ್ ಅನುವಾದ ಹಾಗೂ ಕನ್ನಡ ವಿಮರ್ಶಾತ್ಮಕ ಸಂಕಥನದ ಸಂಪಾದನೆಯಲ್ಲಿ ತೊಡಗಿಕೊಂಡಿದ್ದಾರೆ. ಅನುವಾದ ಅಧ್ಯಯನ ಇವರ ಸಂಶೋಧನಾ ಕ್ಷೇತ್ರ.
ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರ ಉಪನ್ಯಾಸಕರು. ನೀತಿಶಾಸ್ತ್ರ, ರಾಜಕೀಯ ತತ್ತ್ವಶಾಸ್ತ್ರ, ಸೌಂದರ್ಯಶಾಸ್ತ್ರ, ಜ್ಞಾನ ಮೀಮಾಂಸೆ ಮತ್ತು ಪಶ್ಚಿಮದ ತತ್ತ್ವಶಾಸ್ತ್ರದ ಇತಿಹಾಸ ಇವರ ಆಸಕ್ತಿಯ ಕ್ಷೇತ್ರಗಳು. ಇಪ್ಪತ್ತನೇ ಶತಮಾನದ ಬೌದ್ಧಿಕ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ, ಅದರಲ್ಲೂ ಬಗೆಬಗೆಯ ಸಾಹಿತ್ಯಿಕ, ಕಲಾತ್ಮಕ, ವಾಸ್ತುಶಿಲ್ಪ ಮತ್ತು ಸಂಗೀತದ ಆಧುನಿಕತಾವಾದದಲ್ಲಿ ವಿಶೇಷ ಆಸಕ್ತಿ.
Pingback: ಋತುಮಾನ | ಕನ್ನಡಿಯ ಪಾದರಸದಾಚೆ ನಕ್ಕ ಮುಖ – ಭಾಗ ೨
Pingback: ಕನ್ನಡಿಯ ಪಾದರಸದಾಚೆ ನಕ್ಕ ಮುಖ – ಭಾಗ ೩ – ಋತುಮಾನ