ಕನ್ನಡಿಯ ಪಾದರಸದಾಚೆ ನಕ್ಕ ಮುಖ – ಭಾಗ ೨

ನನ್ನನ್ನು ಬಿಟ್ಟು ಉಳಿದೆಲ್ಲರನ್ನೂ ಹೋಲುತ್ತೇನೆ ನಾನು …

ಎ. ಕೆ. ರಾಮಾನುಜನ್ ರ ಪ್ರಬಂಧಗಳ ಡಜನ್ ಡಬ್ಬಗಳಲ್ಲಿ ಕಾಣಿಸಿಕೊಂಡಿದ್ದು ಒಂದು 1950ರ ದಶಕದ ಹಳದಿ ಕಾಗದ. ಅದರ ಮೇಲೆ ಒಂದು ಕಿರು ಆತ್ಮಕತೆಯನ್ನು ಗೀಚಿದ್ದಾರೆ ಮೂವತ್ತರ ಹರೆಯದ ರಾಮಾನುಜನ್. ಅಮೆರಿಕದಲ್ಲಿ ಭಾಷಾಶಾಸ್ತ್ರದಲ್ಲಿ ಪಿಎಚ್ಡಿ ಮಾಡಲು ಸಲ್ಲಿಸುತ್ತಿದ್ದ ಅರ್ಜಿಯೊಂದಿಗೆ ಸೇರಿಸಲಾಗಿದ್ದ ಆ ಕಾಗದದ ಮೊದಲ ಪ್ಯಾರಾ ಹೀಗಿದೆ:

ಮೈಸೂರಿನ ತಮ್ಮ ಮನೆಯಲ್ಲಿ ರೇಡಿಯೋ ಕೇಳುತ್ತಿರುವ ರಾಮಾನುಜನ್ . ಭಾರತದ ತಮ್ಮ ವೃತ್ತಿಯ ಆರಂಭಿಕ ದಿನಗಳಲ್ಲಿ ಅವರು ರೇಡಿಯೋ ನಾಟಕಗಳನ್ನು ಬರೆದಿದ್ದಾರೆ . | ಕೃಪೆ : ರಾಮಾನುಜನ್ ಎಸ್ಟೇಟ್

ನಾನು 1929ರಲ್ಲಿ ಮೈಸೂರಿನಲ್ಲಿ ಹುಟ್ಟಿದೆ. ಆರು ಮಕ್ಕಳಲ್ಲಿ ನಾನು ಎರಡನೆಯವನು. ಮೈಸೂರು ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರಗಳ ಪ್ರಾಧ್ಯಾಪಕರಾಗಿದ್ದ ನನ್ನ ತಂದೆ ಆರಂಭದಲ್ಲಿ ಬೌದ್ಧಿಕ ಬದುಕಿನ ಹರ್ಷಗಳಿಗೆ ನನ್ನನ್ನು ಪರಿಚಯಿಸಿದರು. (ನನ್ನ ತಾಯಿ, ಕಾಲೇಜಿಗೆ ಹೋಗದಿದ್ದರೂ, ಕನ್ನಡ ಮತ್ತು ತಮಿಳಿನಲ್ಲಿ ಚೆನ್ನಾಗಿ ಓದಿಕೊಂಡಿದ್ದರು). ಸಂಪ್ರದಾಯಸ್ಥರಾದರೂ, ತಮಗರಿವಿಲ್ಲದೆಯೇ ಕರ್ಮಠ ಧಾರ್ಮಿಕ ಆಚರಣೆಗಳಿಂದ ದೂರವಿಟ್ಟು ನನಗೆ ಶಿಕ್ಷಣ ಕೊಡಿಸಿದ್ದರು. ಮೈಸೂರಿನಲ್ಲಿದ್ದ ಏಕೈಕ ಕಿಂಡರ್ ಗಾರ್ಟನ್ ಶಾಲೆಗೆ ನನ್ನನ್ನು ಕಳಿಸಿದ್ದರು. ಆನಂತರ ಕ್ರಿಶ್ಚಿಯನ್ ಮಿಶನ್ ಶಾಲೆಗೆ. ಎರಡರಲ್ಲೂ, ನಾನು ಬೇರೆಲ್ಲದಕ್ಕಿಂತ ಮೊದಲು ಇಂಗ್ಲಿಶ್ ಕಲಿತೆ. ಹತ್ತನೇ ವಯಸ್ಸಿಗಾಗಲೇ ಮಕ್ಕಳ ವಿಶ್ವಕೋಶದಲ್ಲಿದ್ದ ಗೋಲ್ಡನ್ ಡೀಡ್ಸ್ ಹಾಗೂ ಮತ್ತಿತರ ಕತೆಗಳಲ್ಲಿ ಹೆಚ್ಚಿನವನ್ನು ಓದಿಮುಗಿಸಿದ್ದೆ.

 

ಅವರ ಆತ್ಮಕತೆಯ ಪರಿಚಿತ ಅಂಶಗಳೆಲ್ಲವೂ ಇಲ್ಲಿವೆ: ಬಾಲ್ಯದ ಮೂರು ಭಾಷೆಗಳು, ಹೆಸರು ಹೇಳದಿದ್ದರೂ ತಿಳಿಯಬಹುದಾದ ಸಂಪ್ರದಾಯಸ್ಥರ ಭಾಷೆಯಾದ ಸಂಸ್ಕೃತ. ಹಾಗೆಯೇ ಸಂಪೂರ್ಣವಾಗಿ ಇಲ್ಲವಾಗಿದ್ದ ಧಾರ್ಮಿಕ ಭಾವನೆಗಳು. ಬ್ರ್ಯಾಕೆಟ್ ಗಳಲ್ಲಿ ಕೊಡಲಾಗಿದೆಯಾದರೂ, ಈ ಕತೆಯಲ್ಲಿ ಅವರ ತಾಯಿಗೂ ಪಾತ್ರವಿದೆ. ಆದರೆ, ಅವರ ತಂದೆಯದೇ ಪ್ರಧಾನ ಪಾತ್ರ.

ಎ.ಕೆ. ರಾಮಾನುಜನ್ ರ ಮೊದಲ ಸಂಕಲನ, The Striders ನಲ್ಲಿರುವ ಈ ಪದ್ಯ(‘Self-portrait’) ಈ ಪ್ರತಿಮೆಯೊಂದಿಗೆ ಕೊನೆಯಾಗುತ್ತದೆ:

ನನ್ನನ್ನು ಬಿಟ್ಟು ಉಳಿದೆಲ್ಲರನ್ನೂ ಹೋಲುತ್ತೇನೆ

ನಾನು, ಹಾಗೂ ಕೆಲವೊಮ್ಮೆ ನೋಡುವೆನು

ಅಂಗಡಿ-ಕಿಂಡಿಗಳಲ್ಲಿ…

ಮೂಲೆಯಲಿ ನನ್ನ ತಂದೆ

ರುಜುಮಾಡಿದ,

ಅಸ್ಪಷ್ಟ ದಿನಾಂಕದ,

ಅಪರಿಚಿತನೊಬ್ಬನ ತಸ್ವೀರು.

ರಾಮಾನುಜನ್ ರ ಹೆಸರಲ್ಲಿ ತಂದೆಯ ಕೊಡುಗೆ ನಿಚ್ಚಳವಾಗಿದೆ. ಶ್ರೀವೈಷ್ಣವ ಜಾತಿಯ ತಮಿಳು ಬ್ರಾಹ್ಮಣನಾದ ರಾಮಾನುಜನ್ ರ ಹೆಸರು ಸಾಂಪ್ರದಾಯಿಕ ಮಾದರಿಯನ್ನೇ—ಪೂರ್ವಿಕರ ಹಳ್ಳಿ, ತಂದೆಯ ಹೆಸರು, ಇಡಲಾದ ಹೆಸರು, ಅನುಸರಿಸುತ್ತದೆ. ರಾಮಾನುಜನ್ ರ ಹೆಸರಿನಲ್ಲಿರುವ ಎ ಅಂದರೆ ಅತ್ತಿಪೇಟ್(ಅವರು ಹಾಗೆಯೇ ಕರೆಯಲು ಇಷ್ಟಪಡುತ್ತಿದ್ದರು), ಈಗ ಚೆನ್ನೈನ ಹೊರವಲಯದಲ್ಲಿರುವ ಒಂದು ಸಣ್ಣ ಪಟ್ಟಣ. ಕೆ ಎಂದರೆ ಕೃಷ್ಣಸ್ವಾಮಿ, ರಾಮಾನುಜನ್ ರ ತಂದೆಗೆ ಇಡಲಾದ ಹೆಸರು, ಎಎ ಕೃಷ್ಣಸ್ವಾಮಿ. ಕೃಷ್ಣಸ್ವಾಮಿಯವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಗಣಿತದ ಪ್ರಾಧ್ಯಾಪಕರಾಗಿದ್ದವರು. ರಾಮಾನುಜನ್ ಬೆಳೆದ ಪಟ್ಟಣಗಳಲ್ಲೇ ಮೈಸೂರು ಎಲ್ಲದಕ್ಕಿಂತ ದೊಡ್ಡದು. ಕೃಷ್ಣಸ್ವಾಮಿಯವರ ಎದ್ದುಕಾಣುವ ವ್ಯಕ್ತಿತ್ವದ ಬಗ್ಗೆ ನಮಗೆ ಪರಿಚಯವಾಗುವುದು ರಾಮಾನುಜನ್ 1980ರಲ್ಲಿ  ಬರೆದ  ‘Is There an Indian Way of Thinking?’ ಪ್ರಬಂಧದಿಂದ.

ಅವರು ವಿಶ್ವವಿದ್ಯಾನಿಲಯಕ್ಕೆ ಹೋಗುವಾಗಲೆಲ್ಲ ಜಾತಿಸೂಚಕವಾದ(ತಮ್ಮ ಮುಂಚಿನ ಚಿತ್ರಗಳಲ್ಲಿ, ಕಿವಿಗೆ ವಜ್ರದೋಲೆ) ಬಿಳಿಯ ಪೇಟ, ಟೂಟಲ್ ಟೈಗಳು, ಕ್ರೊಮೆಂಟ್ಜ್ ಬಟನ್ ಗಳು, ಹಾಗೂ ಕಾಲರ್ ಸ್ಟಡ್ ಗಳನ್ನು ಧರಿಸುತ್ತಿದ್ದರು. ಜೊತೆಗೆ ಪಾರಂಪರಿಕ ಬ್ರಾಹ್ಮಣ ಶೈಲಿಯ ತಮ್ಮ ಮಸ್ಲಿನ್ ಧೋತಿಯ ಮೇಲೆ ಇಂಗ್ಲಿಶ್ ಕೋಟನ್ನು ಧರಿಸುತ್ತಿದ್ದರು. ಅವರು ಹೆಚ್ಚಾಗಿ ಟರ್ಟನ್ ನಮೂನೆಯ ಕಾಲುಚೀಲಗಳನ್ನು ಹಾಗೂ ಚೆನ್ನಾಗಿ ಪಾಲಿಶ್ ಮಾಡಿದ ಶೂಗಳನ್ನು ಹಾಕಿಕೊಳ್ಳುತ್ತಿದ್ದರಾದರೂ, ಮನೆಗೆ ಹಿಂದಿರುಗುತ್ತಿದ್ದ ಹಾಗೆಯೇ ಒಳಗೆ ಹೋಗುವ ಮುನ್ನ ಶೂಗಳನ್ನು ಕಳಚಿಯೇ ಹೋಗುತ್ತಿದ್ದರು.

ಹಾಗೆಯೇ ಈ ಪ್ರಬಂಧ ತರುಣ ರಾಮಾನುಜನ್ ರನ್ನು ಕೊನೆಯವರೆಗೆ ಒಗಟಿನಂತೆ ಕಾಡಿದ್ದ ಅವರ ತಂದೆಯ ಚಿಂತನೆ ಹಾಗೂ ಆಚರಣೆಯ ನಡುವೆ ತಪ್ಪಿದ್ದ ಸಾಮರಸ್ಯವನ್ನೂ ಚಿತ್ರಿಸುತ್ತದೆ.

ಅವರೊಬ್ಬ ಗಣಿತಶಾಸ್ತ್ರಜ್ಞ, ಖಗೋಳಶಾಸ್ತ್ರಜ್ಞ. ಹಾಗೆಯೇ ಅವರೊಬ್ಬ ಸಂಸ್ಕೃತ ವಿದ್ವಾಂಸ, ನುರಿತ ಜ್ಯೋತಿಷಿ ಕೂಡ… ನಾನು ಆಗಷ್ಟೇ ರಸೆಲ್ ರ ‘ವೈಜ್ಞಾನಿಕ ಧೋರಣೆ’ಗೆ ಮತಾಂತರ ಹೊಂದಿದ್ದೆ. ಅವರು ಒಂದೇ ಮೆದುಳಲ್ಲಿ ಜ್ಯೋತಿಷ್ಯ ಹಾಗೂ ಖಗೋಳಶಾಸ್ತ್ರವನ್ನು ಹಿಡಿದಿಟ್ಟಿರುವುದನ್ನು ಕಂಡು ನಾನು (ಹಾಗೂ ನನ್ನ ತಲೆಮಾರು) ಕಕ್ಕಾಬಿಕ್ಕಿಯಾಗಿದ್ದೆವು; ನಾನು ಅವರಲ್ಲಿ ಒಂದು ಸಾಮರಸ್ಯತೆಯನ್ನು ಹುಡುಕಲು ನೋಡಿದೆ. ಆದರೆ, ಅವರದಕ್ಕೆ ಕಿವಿಗೊಡುವ ವ್ಯಕ್ತಿಯಾಗಿರಲಿಲ್ಲ. ಅವರದರ ಬಗ್ಗೆ ಯೋಚಿಸುತ್ತಲೂ ಇರಲಿಲ್ಲ.

ರಾಮಾನುಜನ್ ರ ಕಾವ್ಯದಲ್ಲಿ ಅವರು ಬಳುವಳಿಯಾಗಿ ಪಡೆದುಕೊಂಡು ಬಂದಿದ್ದ ಅಗಾಧತೆಯಿಂದ ಏನಾದರೂ ಮಾಡಬೇಕೆಂಬ ಒಂದು ನಿರಂತರವಾದ ಪ್ರಯತ್ನವಿದೆ. ಆದರದು ಅವರ ತಂದೆ ತನ್ನ ಅರಿವಿನ ಒಡಂಬಡದತನದೊಂದಿಗೆ(cognitive dissonance) ಬದುಕುವ ಸಾಮರ್ಥ್ಯವನ್ನು ಮೀರಿಹೋಯಿತು. ನಂತರದ ವರ್ಷಗಳಲ್ಲಿ, ಅವರು ತಮ್ಮ ಧಾರ್ಮಿಕ ನಿಲುವುಗಳ ಬಗ್ಗೆ ಕುತೂಹಲ ತಾಳಿದ್ದ ಒಬ್ಬ ಅಕಾಡೆಮಿಕ್ ಗೆ ಬರೆದ ಪ್ರತಿಕ್ರಿಯೆಯಲ್ಲಿ ಹೀಗೆ ಬರೆದಿದ್ದರು:

ನನ್ನ ಹದಿಹರೆಯದಲ್ಲಿ ನಾನು “ಧರ್ಮ, ಜಾತಿ, ಸಮುದಾಯ”ಗಳನ್ನು ತಿರಸ್ಕರಿಸಿದೆ. ಬೇರೆಯವರ ಹಾಗೆಯೇ ನಾನು ಕೂಡ ಅವಾವೂ ಇಲ್ಲದೆ ಪರಿಣಾಮಕಾರಿಯಾಗಿ ಬದುಕುವುದನ್ನು ಕಲಿತಿದ್ದೆನೆಂದು ಕಾಣುತ್ತೆ. ಆದರೆ, ಅವೆಲ್ಲವೂ ”ಸ್ವಯಂನ ಭಾಷೆ” ಎಂಬುದೂ ನನಗೆ ತಿಳಿದಿದೆ… ಅವುಗಳಲ್ಲಿ ನನಗಿರುವ ಆಸಕ್ತಿಗೆ ಕಾರಣ ಅವು ನನ್ನ ನರನಾಡಿಗಳಲ್ಲಿ ಬೆರೆತುಹೋಗಿದೆ. ನನಗೆ ಯಾವ ಧರ್ಮವಿರದಿದ್ದರು ಕೂಡ ಮಂದಿರಗಳಿಗೆ ಹೋಗುವುದು, ಧಾರ್ಮಿಕ ಆಚರಣೆಗಳನ್ನು ಅನುಸರಿಸುವುದು, ಅವುಗಳೊಂದಿಗೆ ಬಂದಿರುವ ಸಂಗೀತ ಹಾಗೂ ಕಾವ್ಯವನ್ನು ತಪ್ಪಿಸಿಕೊಳ್ಳಲಾರೆ. ನಾನು ಕೆಲವೊಮ್ಮೆ ಸಣ್ಣ g ಯಿರುವ “grace”ನ ಬಗ್ಗೆ ಕೂಡ ಮಾತನಾಡುತ್ತೇನೆ.

ಧರ್ಮದ ಮೇಲೆ ಸೆಳೆತ, ಆದರೆ ಧರ್ಮ ಶ್ರದ್ಧೆಯಿಲ್ಲ, ಕ್ಲಾಸಿಕಲ್ ಸಾಹಿತ್ಯದಲ್ಲಿ ವಿದ್ವತ್ ಜೀವನ, ಆದರೆ ಸಾಹಿತ್ಯಕ ನವ್ಯತೆಯ ಮೇಲೆ ಪ್ರೇಮ, ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಸಂಸ್ಕೃತ ಅನುರಣನ ಕಾಡಿದರೂ, ತಾಯ್ನುಡಿಗಳ “ದೇಸಿ ಹಕ್ಕಿಕೂಗು“(ಮಿಲ್ಟನ್ ನ ನುಡಿಗಟ್ಟಾದ native woodnotes ಬಳಸಿಕೊಳ್ಳುವುದಾದರೆ) ರಾಮಾನುಜನ್ ರನ್ನು ಸೆಳೆಯುತ್ತಿತ್ತು. ಹೀಗೆ ಅವರ ಜೀವನ ಮತ್ತು ಕೃತಿ ಹಲವು ತುಯ್ತಗಳ ವಿಪುಲತೆಯನ್ನು ಮಂಡಿಸುತ್ತದೆ. ಆದರೂ, ಅವರ ಪ್ರತಿಕ್ರಿಯೆಯೇನೆಂದರೆ,  ಅವರ ತಂದೆ ಮಾಡಿದ ಹಾಗೆ, ಎರಡೂ ವೈರುಧ್ಯಗಳನ್ನು ಬೇರೆಬೇರೆ ಮಾಡುವುದಲ್ಲ, ಬದಲಿಗೆ ಒಂದು ಬೌದ್ಧಿಕ  ಇಬ್ಬಗೆಯನ್ನು ಉಳಿಸಿಕೊಂಡು ಹೋಗುವುದಾಗಿತ್ತು.

ಅವರಿಗೆ ಇಬ್ಬಗೆತನವಿದ್ದ ಬಹಳಷ್ಟು ವಿಷಯಗಳಲ್ಲಿ ಅವರ ಕುಟುಂಬದ ಕುರಿತ ಧೋರಣೆಯನ್ನು ಆಯ್ಕೆಮಾಡಿಕೊಳ್ಳೋಣ. ರಾಮಾನುಜನ್ ರ ಇಂಗ್ಲಿಶ್ ಪದ್ಯಗಳ ಎರಡನೆಯ ಸಂಕಲನ, Relations (1971) ಅವರು ಪ್ರಾಚೀನ ತಮಿಳು ಸಂಕಲನವೊಂದರಿಂದ ಅನುವಾದಿಸಿದ್ದ ಕವನವು ಕಣ್ಸೆಳೆವ, ವ್ಯಾಕುಲತೆಯ ಪ್ರತೀಕವನ್ನು ಹೊಂದಿದ  ಉಲ್ಲೇಖನದೊಂದಿಗೆ ಆರಂಭವಾಗುತ್ತದೆ.

ವಿಶಾಲ ಬಿಳಿ

ಉಪ್ಪಿನ ನಾಡಲಿ

ಬೇಟೆಯಾಡಿದ ಜಿಂಕೆಯಂತೆ,

ಅಡಗಿದ್ದ ತೊಗಲು

ಒಳಗಿನಿಂದ ಹೊರಗೆ ತಿರುಗಿತು,

ಯಾರಾದರೂ ಓಡಬಹುದು

ತಪ್ಪಿಸಿಕೊಳ್ಳಬಹುದು

ಆದರೆ ಸಂಬಂಧಗಳ

ನಡುವೆ ಜೀವಿಸುವುದು

ಅಡಿಗಳನು

ಕಟ್ಟಿಹಾಕುವುದು.

ರಾಮಾನುಜನ್ ರ ಕಾವ್ಯವು. ಕೊನೆಕೊನೆಯಲ್ಲಿ, ರಕ್ತಸಂಬಂಧಗಳ ಪ್ರತಿಮೆಗಳಿಂದ ಆವರಿಸಿಕೊಂಡುಬಿಟ್ಟಿತ್ತು. ವೈಶಿಷ್ಟ್ಯವೆಂಬಂತೆ, ಉಲ್ಲೇಖನಗಳನ್ನು ಆಯ್ಕೆಮಾಡಿಕೊಳ್ಳುವಲ್ಲಿನ ಅವರ ಚತುರತೆಯು ಅವರ ಇಬ್ಬಗೆತನದ ಮೂಲವನ್ನು ಆಧುನಿಕಕ್ಕಾಗಲಿ, ಅಮೆರಿಕಕ್ಕಾಗಲಿ ಕರೆದೊಯ್ಯದೆ ಭಾರತದ ಹಳಮೆಗೆ ಕರೆದೊಯ್ಯುವುದನ್ನು ಕಾಣಬಹುದು. ಅವರ ಪತ್ರವೊಂದು ಅವರ “ಕೌಟುಂಬಿಕ ಪ್ರಜ್ಞೆ, ಭಾರತೀಯ ಎನ್ನುವುದೆಲ್ಲವನ್ನು ನಾನು ಅರಿಯುವಲ್ಲಿ ಅದು ವಹಿಸುವ ಪಾತ್ರ,  ಪತ್ರವೊಂದು ಒಳಿತುಕೆಡಕುಗಳ, ಸಭ್ಯಾಸಭ್ಯಗಳ, ಸೃಜನಶೀಲ ಹಾಗೂ ಹತ್ತಿಕ್ಕುವುದರೆಲ್ಲವುಗಳ ಮೂಲ” ಯಾವುವೆಂಬುದನ್ನು ಹೇಳುತ್ತದೆ.

ಎ ಕೆ ರಾಮಾನುಜನ್ ಒಬ್ಬ ಕವಿ, ವಿದ್ವಾಂಸ, ಹಾಗೂ ಅನುವಾದಕನಾಗಿ ರೂಪುಗೊಂಡಿದ್ದು ಅವರು ಕಾವ್ಯಾತ್ಮಕ ಧ್ವನಿಯನ್ನು ಹುಡುಕಿಕೊಂಡ ರೀತಿಯಿಂದಲೇ ಎಂದು ಹೇಳಬಹುದು. ಅದು ಅವರ ಇಬ್ಬಗೆತನ, ಇಂಗ್ಲಿಶ್ ಅಲ್ಲದ ಪ್ರತಿಧ್ವನಿಗಳ ರೂಪಗಳು ಹಾಗೂ ಭಾಷೆಗಳು, ವ್ಯಂಗ್ಯ, ಸುತ್ತುಬಳಸಿನ ಧ್ವನಿಗಳಿಂದ ಕೂಡಿದ ಸರಿಯಾದ ಗುಣವನ್ನು ಅಭಿವ್ಯಕ್ತಿಸಲು ಅನುವು ಮಾಡಿಕೊಟ್ಟಿತು. ರಾಮಾನುಜನ್ ರ ಕಾವ್ಯಕ್ಕೆ ಕವಿ ಹಾಗೂ ವಿಮರ್ಶಕ ಆರ್ ಪಾರ್ಥಸಾರಥಿಯವರು ಬರೆದಿರುವ ತಮ್ಮ apologiaದಲ್ಲಿ ಹೇಳುವ ಹಾಗೆ, ಅವರು “ಪೂರ್ವಪರಂಪರೆಯ—ಅಂದರೆ, ಇಂಗ್ಲಿಶ್ ನೊಂದಿಗೆ ಬೆರೆತುಹೋದ ಕನ್ನಡ ಮತ್ತು ತಮಿಳಿನಲ್ಲಿ ಇಡುಗಂಟನ್ನು ಹೊಂದಿರುವ ಉಪಖಂಡದ ಪರಂಪರೆಯ ವಾರಸುದಾರ.”

40ರ ದಶಕದ ಕೊನೆ ಹಾಗೂ 50ರ ದಶಕದ ಮೊದಲು ಅಸಾಧಾರಣವಾಗಿದ್ದ ಮೈಸೂರು  ಈ ಭಾಷೆಗಳು ಹಾಗೂ ಅವುಗಳ ಪರಂಪರೆಗಳ ಮೇಲೆ ಅತೀವ ಪ್ರಭಾವ ಬೀರಿದ್ದವು. ಇದರ ಮೇಲಿನ ಆಸಕ್ತಿಯಿಂದಲೇ ರಾಮಾನುಜನ್ ತಮ್ಮ ಕೊನೆಯ ವರ್ಷಗಳಲ್ಲಿ ಈ ವಿಷಯಗಳ ಬಗ್ಗೆ ಬರೆಯಲಾರಂಭಿಸಿದರು. ತನ್ನ ಮಗ ಇಂಗ್ಲಿಶ್ ಸಾಹಿತ್ಯವನ್ನು ಕಲಿಯಬೇಕೆಂಬ ಇಚ್ಛೆಯಿಂದ ಮೈಸೂರಿನ ಪ್ರತಿಷ್ಟಿತ ಸಂಸ್ಥೆಯಾದ ಮಹಾರಾಜ ಕಾಲೇಜಿಗೆ ಸೇರಿಸಿದ್ದರಿಂದಾಗಿ, ರಾಮಾನುಜನ್ ಆ ಕಾಲದ ಅತ್ಯುತ್ತಮ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಭೇಟಿಯಾಗಲು ಸಾಧ್ಯವಾಯಿತು.

ಗೆಳೆಯರೊಂದಿಗೆ ಎ. ಕೆ . ರಾಮಾನುಜನ್ . ಚಿತ್ರ ತೆಗೆದದ್ದು ಹಿರಿಯ ಸಹೋದರ ಎ. ಕೆ . ಶ್ರೀನಿವಾಸನ್ | ಕೃಪೆ : ರಾಮಾನುಜನ್ ಎಸ್ಟೇಟ್

ಮಹಾರಾಜ ಕಾಲೇಜಿನಲ್ಲಿ, ಡಬ್ಲ್ಯು. ಜಿ. ಈಗಲ್ ಟನ್ ಎಂಬ ಕೇಂಬ್ರಿಜ್ ಶಿಕ್ಷಿತನಿಂದಾಗಿ ತರುಣ ರಾಮಾನುಜನ್ ಇಂಗ್ಲಿಷ್ ಕಾವ್ಯದ—ರೆನೇಸಾನ್ಸ್ ನಿಂದ ಮೆಟಫಿಸಿಕಲ್ಸ್ ನಿಂದ ಥಾಮಸ್ ಹಾರ್ಡಿ ಹಾಗೂ ಡಬ್ಲ್ಯು ಬಿ ಯೇಟ್ಸ್ ವರೆಗೆ—ಗಂಭೀರ ಅಧ್ಯಯನಕ್ಕೆ ತೆರೆದುಕೊಂಡರು. ಆದರೆ ವಿ. ಸೀತಾರಾಮಯ್ಯನವರೊಂದಿಗೆ ಕನ್ನಡ ಸಾಹಿತ್ಯವನ್ನೂ ಓದುತ್ತಿದ್ದರು ರಾಮಾನುಜನ್. ಸಂಸ್ಕೃತ ಕಾವ್ಯಗಳಿಂದ ಆರಂಭಗೊಂಡು ಕೇನ್ಸ್ ನಿಂದ ಆಡೆನ್ ವರೆಗೆ ಮಾತನಾಡಬಲ್ಲವರಾಗಿದ್ದ ವೀಸಿಯವರನ್ನು ಅವರು “ಅತ್ಯಂತ ನುರಿತ ಹಾಗೂ ಅಪಾರ ಓದಿನ ಬೋಧರಲ್ಲೊಬ್ಬರು”  ಎಂದು ಕರೆದಿದ್ದರು. ಅವರ ಓದಿನ ಹರವು, ಎರಡೂ ಸಂಸ್ಕೃತಿಗಳು ಹಾಗೂ ಸಾಹಿತ್ಯಗಳಲ್ಲಿನ ಆಳವಾದ ಜ್ಞಾನವನ್ನು ಮೆಚ್ಚಿಕೊಂಡಿದ್ದು ಮಾತ್ರವಲ್ಲ, “ಈಗ ನಾನು ಅದರ ಬಗ್ಗೆ ಯೋಚಿಸಿದರೆ, ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಪಂಡಿತರಾಗಿದ್ದ ಅವರು ಟೀಚರ್ ಗಳಿಂದ ಆರಂಭವಾದ ವಿಶೇಷ ಕನ್ನಡ ಪರಂಪರೆಯ ಪ್ರತಿನಿಧಿಯಂತೆ ಕಾಣುತ್ತಾರೆ” ಎಂದು ಬರೆಯುತ್ತಾರೆ.

ಎಂ.ಎ ಇಂಗ್ಲಿಷ್ ಮುಗಿಸಿದ ನಂತರ ಕ್ವಿಲೊನ್, ಮಧುರೈನ ಕಾಲೇಜುಗಳಲ್ಲಿ, ಐದು ವರ್ಷಗಳ ಕಾಲ ಬೆಳಗಾಂನಲ್ಲಿ ಬೋಧನಾ ವೃತ್ತಿಯಲ್ಲಿ ತೊಡಗಿಕೊಂಡರು ರಾಮಾನುಜನ್. ಅವರು ತಮ್ಮ ಇಪ್ಪತ್ತರ ಹರೆಯವಿಡೀ ಇದರಲ್ಲೇ ತೊಡಗಿಕೊಂಡರು. ಬೆಳಗಾಂನ ಲಿಂಗರಾಜ ಕಾಲೇಜಿನಲ್ಲಿ ತಮ್ಮ ವಿದ್ಯಾರ್ಥಿಗಳೊಂದಿಗೆ ಅಂತರ-ಕಾಲೇಜು ಚರ್ಚಾಸ್ಪರ್ಧೆಗೆ  ಹೋಗಿದ್ದಾಗಷ್ಟೇ ತಮಗಿಂತ ಕೆಲ ವರ್ಷಗಳು ಕಿರಿಯರಾಗಿದ್ದ ತರುಣ ಗಿರೀಶ್ ಕಾರ್ನಾಡ್ ರ ಗೆಳೆತನವಾಗಿದ್ದು. ಕಾರ್ನಾಡ್ ಆಧುನಿಕ ಕನ್ನಡದ ಅತ್ಯಂತ ಪ್ರಭಾವಶಾಲಿ ನಾಟಕಕಾರನಾಗಿ ಹೊರಹೊಮ್ಮಲು ಇನ್ನೂ ಒಂದು ದಶಕ ದೂರವಿತ್ತು. ಕಾರ್ನಾಡ್ ಆ ಸಂದರ್ಭವನ್ನು ಅಂಜಲೀ ನರ್ಲೇಕರ್ ರೊಂದಿಗಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ರಾಮಾನುಜನ್…ಯಾವುದೇ ವಿಷಯದ ಬಗ್ಗೆ ಸುದೀರ್ಘವಾಗಿ ಮಾತನಾಡುವುದನ್ನು ಇಷ್ಟಪಡುತ್ತಿದ್ದರು. ಅವರಿಗೆ ಕ್ಲಾಸ್ ರೂಮ್ ಹಾಗೂ ಹೊರ ಜಗತ್ತಿ ನಡುವೆ ಯಾವ ಗಡಿರೇಖೆಯಿರಲಿಲ್ಲ. ನಾವು ಎಲಿಯಟ್, ಹಕ್ಸ್ಲಿ, ಯೇಟ್ಸ್ ಹಾಗೂ ಪೌಂಡ್ ರನ್ನ ಚರ್ಚಿಸುತ್ತಿದ್ದೆವು. ಇವರಾರೂ ಹೊರಗೆ ಕುಳಿತಿರುವ ದೇವರಲ್ಲ, ಇವರೆಲ್ಲ ತಮ್ಮ ಸಮಕಾಲೀನರೇ ಎಂಬಂತೆ ಅವರು ಚರ್ಚಿಸುತ್ತಿದ್ದರು. ಅದು ಉತ್ತೇಜಕವಾಗಿತ್ತು…ನನಗೆ ತಿಳಿದವರಲ್ಲಿ ಪೌಂಡ್ ಹಾಗೂ ಯೇಟ್ಸ್ ನ ನಂತರದ ಕಾವ್ಯದಲ್ಲಿ ಅವರ ಹಾಗೆ ಮುಳುಗಿಹೋಗಿದ್ದವರನ್ನು ಕಾಣೆ. ಅವರಿಬ್ಬರ ಕಾವ್ಯವನ್ನು ಅವರು ಹಿಮ್ಮುಖವಾಗಿಯೂ ನೆನಪಿಟ್ಟುಕೊಂಡಿದ್ದರು. ಉಳಿದ ಇಂಗ್ಲಿಷ್ ಪ್ರೊಫೆಸರ್ ಗಳು… ಶೆಲ್ಲಿಯನ್ನು ಹೆಚ್ಚು ಇಷ್ಟಪಡುತ್ತಿದ್ದರು(ಆದರೆ) ನಂತರದ ಯೇಟ್ಸ್ ನಲ್ಲಿದ್ದ ಲೈಂಗಿಕ ಗೀಳು ಕಾಣಿಸಿಕೊಂಡಿದ್ದರಿಂದಾಗಿ, ಆತನ ಆರಂಭಿಕ ರಮ್ಯ ಕಾವ್ಯವನ್ನು ತಮಗಾಗಿ ಆಯ್ದುಕೊಂಡಿದ್ದರು… ಅಲ್ಲಿ ಸಂವೇದನೆಯಲ್ಲಿ ನಿಜವಾದ ಒಡಕು ಕಾಣಿಸಿಕೊಂಡಿತ್ತು; ಅವರಿಗೆ, ನವ್ಯ ಸಾಹಿತ್ಯವೆಂದರೆ, ಇಂಗ್ಲೆಂಡ್ ನಲ್ಲಿ ನಡೆಯುತ್ತಿದ್ದುದಾಗಿತ್ತು.

ಯಾವ ನವ್ಯ ಸಾಹಿತ್ಯವೂ ಬ್ಲೂಮ್ಸ್ ಬರಿಯಲ್ಲಿ ಆದ ಹಾಗೆ ಬೆಳಗಾಂನಲ್ಲಿ ಆಗಲು ಸಾಧ್ಯ ಎಂಬುದನ್ನು ತರುಣ ರಾಮಾನುಜನ್ ಹೇಗೆ ಕಂಡುಕೊಂಡರು ಎಂಬುದು ವಿರಳವೆನಿಸುವ ಆತ್ಮವಿಶ್ವಾಸವನ್ನು ತೋರಿಸುತ್ತದೆ. ಆದರೂ, ಅವರು ತಮ್ಮ ತಲೆಮಾರಿನ ಬಹಳಷ್ಟು ಭಾರತೀಯರ ಹಾಗೆ, ವಿದೇಶಕ್ಕೆ ಹೋಗಬೇಕೆಂಬ ಬಯಕೆ ಇದ್ದೇ ಇತ್ತು. ಕಾರ್ನಾಡರು ಹೇಳುವ ಹಾಗೆ, ಇದಕ್ಕೆ ಕಾರಣ, “ನೀವು ಭಾಷೆಯ ‘ಒಳಮುಖತೆ’ಗೆ ತೆರೆದುಕೊಳ್ಳದಿದ್ದಲ್ಲಿ…ಅಂದರೆ, ಒಂದು ತಾಯ್ನುಡಿಯ ಸಂದರ್ಭದಲ್ಲಿ ಮಾತನಾಡಿದ ಹಾಗೆ, ಬರೆವಣಿಗೆಯು ಹೆಪ್ಪುಗಟ್ಟಿ ಒಂದು ಜೀವಂತ ಪರಂಪರೆಗೆ ಹಳತು ಹಾಗೂ ಅಪ್ರಸ್ತುತ ಎಂದೆನಿಸಿಕೊಳ್ಳುತ್ತದೆ” ಎಂದು ರಾಮಾನುಜನ್ ನಂಬಿದ್ದರು.

ಭಾರತೀಯ ಸಾಹಿತ್ಯದಲ್ಲಿ ಹೊಸ ಅಧ್ಯಾಯ ಆರಂಭವಾಗಿತ್ತು: ಮುಜುಗರ ತರಿಸಿದ್ದ ವಿಕ್ಟೋರಿಯನ್ ಸಾಧಾರಣತೆಯ ನಕಲುಗಳೆಂಬಂತಿದ್ದ ಭಾರತೀಯ ಇಂಗ್ಲಿಶ್ ಕಾವ್ಯ ಪ್ರಯೋಗಗಳು ಹೊಸ, ತಾಜಾ ಕಾವ್ಯಕ್ಕೆಡೆಮಾಡಿಕೊಟ್ಟಿದ್ದವು. ಬಾಂಬೆಯಲ್ಲಿ ನಿಸ್ಸಿಮ್ ಎಜೆಕಿಯಲ್ ಮಾಡಿದ ಪ್ರಯೋಗಗಳು, ಹತ್ತೊಂಬತ್ತರ ಹರೆಯದ ಡಾಮ್ ಮೊರೇಸ್ ಇಂಗ್ಲೆಂಡ್ ನಲ್ಲಿ ಪ್ರಕಟಿಸಿದ್ದ ತಮ್ಮ ಮೊದಲ ಸಂಕಲನ, A Beginning (1958) ಕೆಲವು ಉದಾಹರಣೆಗಳು. ರಾಮಾನುಜನ್ ಇದರ ಒಂದು ಪ್ರತಿಯನ್ನು ಹೇಗೋ ಗಳಿಸಿ, ಕಾರ್ನಾಡರಿಗೆ ಓದಿ ಹೇಳಿದ್ದರು. “ಯಾವ ಭಾರತೀಯ ಕವಿಯೂ ಬಳಸಿರದಿದ್ದ ನುಡಿಗಟ್ಟುಗಳನ್ನು ಎಚ್ಚರಿಕೆಯಿಂದ ತೋರಿಸಿಕೊಟ್ಟು, ‘ಇದು ತಾಯ್ನುಡಿಯ ಶಬ್ದಸಂಪತ್ತು’ ಎಂದು ನುಡಿದಿದ್ದರು.”

ಆದರೆ ಅವರಿಗೆ ಎಲ್ಲವೂ ಅಷ್ಟು ಸುಲಭವಾಗೇನೂ ಇರಲಿಲ್ಲ: ಅವರ ತಂದೆ 1953ರಲ್ಲಿ ಕಾಲವಾದರು. ರಾಮಾನುಜನ್ ಹಾಗೂ ಸೋದರರಿಗೆ ಉಳಿಸಿಹೋಗಿದ್ದು “ಸಾಲಗಳು ಹಾಗೂ ಹೆಣ್ಣುಮಕ್ಕಳು”(‘Obituary’ ಪದ್ಯದಲ್ಲಿರುವ ಹಾಗೆ) ಮಾತ್ರ. 1959ರಲ್ಲಿ ಲಿಂಗ್ವಿಸ್ಟಿಕ್ಸ್ ಗಾಗಿ ದೊರೆತ ಅನಿರೀಕ್ಷಿತವಾದ ಫುಲ್ ಬ್ರೈಟ್ ಗ್ರ್ಯಾಂಟ್ ಮಾತ್ರ ಅವರನ್ನು ವಿದೇಶಕ್ಕೆ ಕರೆದೊಯ್ಯಿತು. ಆದರೆ, ಭಾರತೀಯರ ಕನಸಿನ ಆಯ್ಕೆಯಾಗಿದ್ದ ಇಂಗ್ಲೆಂಡ್ ಗಲ್ಲ, ಅಮೆರಿಕಕ್ಕೆ.

ಮುಂದುವರೆಯುವುದು…

ಭಾಗ ೧ : http://ruthumana.com/2018/03/19/ak-ramanujan-the-literary-legacy-of-an-indian-modernist-part1/

ಕೃಪೆ : Caravan Magazine

1 ಆಗಸ್ಟ್ 2013 ರಂದು ಪ್ರಕಟವಾದ ಇಂಗ್ಲೀಷ್ ನ ಮೂಲ ಲೇಖನವನ್ನು ಕ್ಯಾರವ್ಯಾನ್ ಮ್ಯಾಗಜಿನ್ ಅನುಮತಿ ಪಡೆದು ಅನುವಾದಿಸಿ ಪ್ರಕಟಿಸಲಾಗಿದೆ . ಮೂಲ ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ


ಅನುವಾದ : ಶಶಿಕುಮಾರ್
ಶಶಿಕುಮಾರ್ ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಮೈಸೂರಿನಲ್ಲಿ. ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಕೆಲಕಾಲ ಇಂಗ್ಲಿಶ್ ಅನುವಾದಗಳ ಸಂಪಾದಕರಾಗಿದ್ದರು. ಸದ್ಯ ಕನ್ನಡ ಕಾದಂಬರಿಯ ಇಂಗ್ಲಿಶ್ ಅನುವಾದ ಹಾಗೂ ಕನ್ನಡ ವಿಮರ್ಶಾತ್ಮಕ ಸಂಕಥನದ ಸಂಪಾದನೆಯಲ್ಲಿ ತೊಡಗಿಕೊಂಡಿದ್ದಾರೆ. ಅನುವಾದ ಅಧ್ಯಯನ ಇವರ ಸಂಶೋಧನಾ ಕ್ಷೇತ್ರ.

One comment to “ಕನ್ನಡಿಯ ಪಾದರಸದಾಚೆ ನಕ್ಕ ಮುಖ – ಭಾಗ ೨”
  1. Pingback: ಕನ್ನಡಿಯ ಪಾದರಸದಾಚೆ ನಕ್ಕ ಮುಖ – ಭಾಗ ೩ – ಋತುಮಾನ

ಪ್ರತಿಕ್ರಿಯಿಸಿ