ಕನ್ನಡದ ಹಿರಿಯ ಸಂಶೋಧಕರಾದ ಷಡಕ್ಷರಿ ಶೆಟ್ಟರ್ ಅವರ ಹೊಸ ಕೃತಿ ‘ಪ್ರಾಕೃತ ಜಗದ್ವಲಯ’ ವನ್ನು ಇತ್ತೀಚೆಗೆ ಅಭಿನವ ಹೊರತಂದಿದೆ . ಈ ಕೃತಿಗೆ ಜೆ. ಶಶಿಕುಮಾರ್ ಬರೆದಿರುವ ಹಿನ್ನುಡಿಯ ವಿಸ್ತೃತ ರೂಪ ಅವರ ಅಂಕಣ “ಅನುವಾದ” ದಲ್ಲಿ ನಿಮ್ಮ ಇಂದಿನ ಓದಿಗೆ .
ಜಗತ್ತು ಹೊಸ ಸಹಸ್ರಮಾನಕ್ಕೆ ಕಾಲಿಡುತ್ತಿದ್ದಂತೆಯೇ, ಜ್ಞಾನಸೃಷ್ಟಿಗೆ ಹಿಂದೆಂದೂ ಇಲ್ಲದ ಆದ್ಯತೆ ಬಂದು ಯುನೆಸ್ಕೊ “ಮನಸ್ತಾಪ ಹಾಗೂ ವಿರೋಧದ ಮೂಲಗಳಾದ ಹುಸಿ ಏಕತ್ವವಾದ/ವಿಶ್ವೈಕ್ಯವಾದ ಹಾಗೂ ಸಾಪೇಕ್ಷವಾದದ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಜ್ಞಾನ ಸಮಾಜಗಳು ಅನುವಾದ ಸಮಾಜಗಳಾಗಬೇಕು” ಎಂಬ ಕರೆಯನ್ನು ನೀಡಿತ್ತು.
ಅದರಂತೆಯೇ, ಭಾರತ ಕೂಡ ‘ರಾಷ್ಟ್ರೀಯ ಜ್ಞಾನ ಆಯೋಗ’ವನ್ನು ರಚಿಸಿ, ಹೊಸ ಸಹಸ್ರಮಾನದಲ್ಲಿ ಭಾರತವನ್ನು ಕಟ್ಟುವ ಕೆಲಸಗಳಿಗೆ ತನ್ನನ್ನು ತಾನು ಸಜ್ಜುಗೊಳಿಸಿಕೊಳ್ಳಲು ಮುಂದಾಯಿತು. ಬಹುತ್ವದ ಬಹುಮುಖ್ಯ ನೆಲೆಯಾದ ಭಾಷೆ, ಮತ್ತದರ ಇರವು-ಮರೆವು-ಅಳಿವು-ಉಳಿವುಗಳನ್ನು ಪರಿಗಣಿಸಲಿಲ್ಲ. ಹೊಸ ಸಹಸ್ರಮಾನದಲ್ಲಿ ಜಗತ್ತು ಮುಂದಣ ಹೆಜ್ಜೆಗಳೆಡೆ ತೋರಿದ ಉತ್ಸಾಹವನ್ನು ಹಿಂದಣ ಹೆಜ್ಜೆಗಳೆಡೆ ತೋರಲಿಲ್ಲ. ಇಡೀ ಜಗತ್ತಿನಲ್ಲೇ ಬಹುತ್ವಕ್ಕೆ ಹೆಸರಾದ ಭಾರತ, ಅಂತಹ ಸಮಾಜಗಳ ಸೃಷ್ಟಿಯನ್ನು ಸಾಧ್ಯಗೊಳಿಸಬೇಕಾದರೆ, ಹಿಂದಿನ ಸಹಸ್ರಮಾನಗಳ ಸಮಾಜಗಳು, ಜನಜೀವನಗಳು ಹೇಗಿದ್ದಿರಬಹುದು ಎಂಬುದನ್ನು ಮಾತ್ರ ವರದಿಗಳು ಮರೆತಿದ್ದವು. ಜಾಗತೀಕರಣ ಬಹುತ್ವದ ನೆಲೆಗಳನ್ನು ಅಲುಗಾಡಿಸುತ್ತ ಏಕತ್ವದೆಡೆಗೆ ಜಗತ್ತನ್ನು ಕೊಂಡೊಯ್ಯುತ್ತಿರುವ ಸಂದರ್ಭದಲ್ಲಿ ಬಹುಭಾಷಿಕತೆ, ಬಹುಸಾಂಸ್ಕೃತಿಕತೆ ಶೋಧಿಸಿಕೊಳ್ಳುವುದು ಹಿಂದೆಂದಿಗಿಂತಲೂ ಹೆಚ್ಚು ಮುಖ್ಯವೆನಿಸಬೇಕಿತ್ತು. ಆದರೆ, ಹಾಗಾಗಲಿಲ್ಲ.
ಈ ಸಂದರ್ಭದಲ್ಲಿ ಅಲ್ಲಿಯವರೆಗೂ ನಡೆಯದಿದ್ದ ವಿದ್ಯಮಾನವೊಂದು ಭಾರತದಲ್ಲಿ ನಡೆಯಿತು. ಅದು ‘ಕ್ಲಾಸಿಕಲ್ ಭಾಷೆ’ಗಳ ರಾಜಕೀಯ. ದೇಶದ ಪ್ರಾಚೀನ ಭಾಷೆಗಳನ್ನು “ಕ್ಲಾಸಿಕಲ್” ಭಾಷೆಗಳನ್ನಾಗಿ ಘೋಷಿಸಿ, ಆಧುನಿಕ ಭಾಷೆಗಳೊಂದಿಗೆ ಅಥವಾ ಪ್ರತ್ಯೇಕವಾಗಿ ಅಧ್ಯಯವ ಮಾಡಬೇಕೆಂಬ ಕೂಗು ಬೌದ್ಧಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸ್ವರೂಪವನ್ನು ಪಡೆಯಬೇಕಿತ್ತು. ಆದರೆ, ಈ ಬೆಳೆವಣಿಗೆ ಪ್ರಾಚೀನತೆಯ ಹೆಸರಿನಲ್ಲಿ ಭಾರತೀಯ ಭಾಷೆಗಳ ನಡುವೆಯೇ ತಾರತಮ್ಯವನ್ನು ಸೃಷ್ಟಿಸುವ ಮೂಲಕ ರಾಜಕೀಯ ಸ್ವರೂಪವನ್ನು ಪಡೆದುಕೊಂಡುಬಿಟ್ಟಿತು. ದ್ರಾವಿಡ ಭಾಷೆಗಳಲ್ಲಿ ಅತ್ಯಂತ ಪ್ರಾಚೀನವೆಂದು ಹೇಳಲಾಗುವ ತಮಿಳು, ಇಡೀ ಭಾರತೀಯ ಭಾಷೆಗಳಲ್ಲೇ ಅತ್ಯಂತ ಪ್ರಾಚೀನ ಎಂದು ಗುರುತಿಸಲಾಗಿರುವ ಸಂಸ್ಕೃತಕ್ಕಿಂತ ಮೊದಲು ಕ್ಲಾಸಿಕಲ್ ಸ್ಥಾನಮಾನ ಪಡೆದಿದ್ದು ಅದನ್ನು ಸ್ಪಷ್ಟಪಡಿಸಿತ್ತು.
ಜಾಗತಿಕ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಇಂತಹ ಬೆಳೆವಣಿಗೆಗಳು ನಡೆಯುತ್ತಿದ್ದ ಕಾಲದಲ್ಲಿಯೇ, ಕನ್ನಡ ಜಗತ್ತು ಅದಕ್ಕೆ ಸ್ಪಂದಿಸಲು ಶುರುಮಾಡಿದ ರೀತಿ ವಿಶಿಷ್ಟವಾಗಿತ್ತು. ತಮ್ಮ ಜೀವಮಾನದ ಐದು ದಶಕಗಳನ್ನು ಅಂತಾರಾಷ್ಟ್ರೀಯ ಮಟ್ಟದ ಸಂಶೋಧನೆ ಹಾಗೂ ಬರೆಹಕ್ಕೆಂದೇ ಮುಡಿಪಾಗಿಟ್ಟು ಉತ್ಕೃಷ್ಟ ಕೃತಿಗಳನ್ನು ಇಂಗ್ಲಿಷ್‍ನಲ್ಲಿ ರಚಿಸಿದ್ದ ಇಬ್ಬರು ವಿದ್ವಾಂಸರು ತಮ್ಮ ಇಂಗ್ಲಿಷ್ ಬರೆವಣಿಗೆಯನ್ನು ನಿಲ್ಲಿಸಿ, ಪೂರ್ಣಪ್ರಮಾಣದಲ್ಲಿ ಕನ್ನಡದಲ್ಲಿ ಬರೆಯುವುದಕ್ಕೆ ಆರಂಭಿಸಿದ್ದು ಆಧುನಿಕ ಕನ್ನಡದ ಸಂದರ್ಭದಲ್ಲೊಂದು ಮಹತ್ತರ ತಿರುವು. ಈ ಇಬ್ಬರು ವಿದ್ವಾಂಸರು ಸಂಶೋಧನೆ ಹಾಗೂ ಗ್ರಂಥರಚನೆಯ ಮೂಲಕ, ಸಾವಿರ ವರ್ಷಗಳಿಗೂ ಮೀರಿದ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಯ ಚರಿತ್ರೆಯ ಮರುರಚನೆಯಲ್ಲಿ ತೊಡಗಿಕೊಂಡಿದ್ದರು. ಅವರೇ ಡಿ.ಎನ್. ಶಂಕರಭಟ್ ಹಾಗೂ ಷ. ಶೆಟ್ಟರ್.
ಅಲ್ಲಿಯವರೆಗೆ ಕನ್ನಡದಲ್ಲಿ ಅವಗಣನೆಗೆ ಒಳಗಾಗಿದ್ದ ಭಾಷಾಶಾಸ್ತ್ರಕ್ಕೆ ಇವರಿಬ್ಬರೂ ಒದಗಿಸಿದ ಆಯಾಮ ಭಿನ್ನವಾಗಿತ್ತು. ಭಾಷಾಶಾಸ್ತ್ರಜ್ಞರಾದ ಶಂಕರಭಟ್ಟರು ವಿವರಣಾತ್ಮಕ ಭಾಷಾಶಾಸ್ತ್ರೀಯ ವಿಧಾನವನ್ನನುಸರಿಸಿ ‘ಕನ್ನಡಕ್ಕೆ ಬೇಕು ಕನ್ನಡದ್ದೇ ಆದ ವ್ಯಾಕರಣ’(2000) ಬರೆದರೆ, ಶೆಟ್ಟರ್ ಅವರು ಚರಿತ್ರೆ, ಶಾಸನಶಾಸ್ತ್ರ, ಸಮಾಜಶಾಸ್ತ್ರ, ಸಾಹಿತ್ಯ ಹಾಗೂ ಬರೆಹಶಾಸ್ತ್ರವನ್ನೊಳಗೊಂಡ ಅಂತರಶಾಸ್ತ್ರೀಯ ಸಂಶೋಧನಾ ವಿಧಾನವನ್ನನುಸರಿಸಿ ‘ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ: ಆರಂಭ ಕಾಲದ ದ್ರಾವಿಡ ಸಂಬಂಧದ ಚಿಂತನೆ’(2007)ಯ ಮೂಲಕ ಚಾರಿತ್ರಿಕ ಭಾಷಾಶಾಸ್ತ್ರದ ಹಾದಿ ಹಿಡಿದಿದ್ದರು. ಇವೆರಡೂ ಪುಸ್ತಕಗಳು ಕನ್ನಡದಲ್ಲಿ ಕ್ಲಾಸಿಕಲ್ ಭಾಷಾಧ್ಯಯನದಲ್ಲಿ ಹೊಸ ಸಂಚಲನೆ ಮೂಡಿಸಿದವು. ಆ ಮೂಲಕ ಈ ಇಬ್ಬರೂ ವಿದ್ವಾಂಸರು ಹೊಸ ಸಹಸ್ರಮಾನದ ಆರಂಭದಲ್ಲಿಯೇ, ಕ್ಲಾಸಿಕಲ್ ಕನ್ನಡ ಅಧ್ಯಯನಕ್ಕೆ ಬೇಕಾದ ಚಾರಿತ್ರಿಕ, ತಾತ್ವಿಕ, ಹಾಗೂ ಸಂಶೋಧನಾತ್ಮಕ ಚೌಕಟ್ಟನ್ನು ಒದಗಿಸಿದ್ದು ಕನ್ನಡ ಸಂಶೋಧನೆಗೆ ಅಗ್ಗಳಿಕೆ.
ಈ ಬೆಳೆವಣಿಗೆಗೂ, ಇಪ್ಪತ್ತನೇ ಶತಮಾನದ ಕೊನೆಯ ದಶಕದಲ್ಲಿ ಹಾಗೂ ಹೊಸ ಸಹಸ್ರಮಾನದ ಆರಂಭದಲ್ಲಿ ನಡೆದ ಅಂತಾರಾಷ್ಟ್ರೀಯ, ರಾಷ್ಟ್ರೀಯ ಹಾಗೂ ಸ್ಥಳೀಯ ವಿದ್ವತ್ ವಲಯದಲ್ಲಿ ನಡೆದ ಸೈದ್ಧಾಂತಿಕ ಚರ್ಚೆಗಳಿಗೂ ಸೂಕ್ಷ್ಮವೂ ತಾತ್ವಿಕವೂ ಆದ ಸಂಬಂಧವಿತ್ತು.
ಇಪ್ಪತ್ತನೇ ಶತಮಾನದಲ್ಲಿ ಸಂಸ್ಕೃತ ವಿದ್ವಾಂಸ ಫರ್ಡಿನೆಂಡ್ ಡಿ ಸೊಸ್ಯೊನ ‘ಸಂರಚನಾವಾದ’ದ ಮೂಲಕ ಉಂಟಾದ ಭಾಷಿಕ ಕ್ರಾಂತಿ, ಇಡೀ ಜಗತ್ತಿನ ಜ್ಞಾನಸೃಷ್ಟಿಯ ಮೇಲೆ ಅಗಾಧ ಪರಿಣಾಮವನ್ನು ಉಂಟುಮಾಡಿತ್ತಾದರೂ ಭಾರತದಲ್ಲಿ ಹೊಸ ಸಂಚಲನೆಯನ್ನೇನೂ ಮೂಡಿಸಿರಲಿಲ್ಲ. ಕನ್ನಡ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಆದರೂ, ಕಳೆದ ಸಹಸ್ರಮಾನದ ಕೊನೆಯಲ್ಲಿ ಅಮೆರಿಕಾದ ವಿದ್ವಾಂಸ ಶೆಲ್ಡನ್ ಪೊಲಾಕ್ ಬರೆದ ತಮ್ಮ ‘ದ ಕಾಸ್ಮೊಪಾಲಿಟನ್ ವೆರ್ನಾಕ್ಯುಲರ್’(1988) ಲೇಖನದ ಕನ್ನಡಾನುವಾದ ‘ವಿಶ್ವಾತ್ಮಕ ದೇಶಭಾಷೆ’(2003) ಕನ್ನಡ ಪರಿಸರದಲ್ಲಿ ಒಂದು ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತು. ಅದಕ್ಕೆ ಬಹುಮುಖ್ಯವಾದ ಕಾರಣವೆಂದರೆ, ಕೆ.ವಿ.ಸುಬ್ಬಣ್ಣನವರು ‘ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು’(2003). 1998ರಲ್ಲಿ ಕಾಲವಾದ ಕನ್ನಡ ವಿಮರ್ಶಕ ಡಿ.ಆರ್.ನಾಗರಾಜ್ ಕೂಡ ಈ ಚರ್ಚೆಗೆ ಬೇಕಾದ ತಾತ್ವಿಕ ಭಿತ್ತಿಯನ್ನೊದಗಿಸಿ ಹೋಗಿದ್ದರು. ಕನ್ನಡ ಬರೆವಣಿಗೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವವರೆಗೂ ಕನ್ನಡ ಭಾಷಾವಲಯಕ್ಕೆ ಅಷ್ಟೇನೂ ಪರಿಚಿತರಾಗಿದ್ದಿಲ್ಲದ ಶಂಕರ ಭಟ್ ಹಾಗೂ ಶೆಟ್ಟರ್, ಕನ್ನಡ ಬರೆವಣಿಗೆಯ ಮೂಲಕ ಹೊಸ ಸಹಸ್ರಮಾನದ ಆರಂಭದಲ್ಲಿಯೇ ಮೂಡಿಸಲು ಹೊರಟ ‘ಕನ್ನಡ ಗುರುತು’, ಕನ್ನಡ ಮಾತ್ರವಲ್ಲ, ಭಾರತೀಯ ಕ್ಲಾಸಿಕಲ್ ಭಾಷಾಧ್ಯಯನದ ಹಿನ್ನೆಲೆಯಲ್ಲಿ ಹೊಸ ಸ್ವರೂಪವನ್ನು ಪಡೆದುಕೊಂಡಿತ್ತು. ಇದು ಹೊಸ ಸಹಸ್ರಮಾನದ ಕನ್ನಡವನ್ನರಿಯಲು ಹಿಂದಣ, ಅಂದರೆ ಕ್ರಿ.ಶ.ದ ಮೊದಲ ಸಹಸ್ರಮಾನದಲ್ಲಿ ಕನ್ನಡ ನಡೆದುಬಂದ ದಾರಿಯನ್ನು ನೋಡಿ ಕಾಣುತ್ತ ಚರಿತ್ರೆಯ ಪುನಾರಚನೆಗೆಡೆಮಾಡಿಕೊಟ್ಟಿತ್ತು.
ಭಾರತೀಯ “ಕ್ಲಾಸಿಕಲ್” ಭಾಷೆಗಳು ಹಾಗೂ ‘ಚಾರಿತ್ರಿಕ’ ರಾಜಕೀಯ ‘ಕ್ಲಾಸಿಸಿಸಮ್’(ಅಭಿಜಾತತೆ/ಶಾಸ್ತ್ರೀಯತೆ) ಹುಟ್ಟಿದ್ದು ಯುರೋಪ್‍ನಲ್ಲಿ. ಕ್ರಿ.ಶ. ಎರಡನೇ ಶತಮಾನದ ಲ್ಯಾಟಿನ್‍ಗೆ ಸೇರಿದ ಈ ಪದ, ಫ್ರೆಂಚ್‍ಗೆ ಹೋಗಿ ಅಲ್ಲಿಂದ ಇಂಗ್ಲಿಷ್ ಭಾಷೆಗೆ ಸೇರಿ, ವಸಾಹತುಶಾಹಿ ಆಡಳಿತದ ಮೂಲಕ ಭಾರತವನ್ನು ತಲುಪಿತು. ಭಾರತದಲ್ಲಿಯೇ ಸಂಸ್ಕೃತ, ಪ್ರಾಕೃತ, ಅರೇಬಿಕ್, ಪರ್ಶಿಯನ್ ಹಾಗೂ ದ್ರಾವಿಡ ಭಾಷೆಗಳಾದ ತಮಿಳು, ಕನ್ನಡವನ್ನು ಒಳಗೊಂಡಂತೆ, ಹಲವು ಭಾಷೆಗಳು ಸಾವಿರ ವರ್ಷಗಳಿಗೂ ಮೀರಿದ ಚರಿತ್ರೆಯನ್ನು ಹೊಂದಿವೆ. ಅಂತಹ ಭಾಷೆಗಳ ಅಧ್ಯಯನ ಕೂಡ ನಡೆದಿದೆ. ಆದರೆ, ‘ಕ್ಲಾಸಿಕಲ್ ಭಾಷೆಗಳು’ ಎಂಬ ಕೆಟಗರಿ ಅಡಿಯಲ್ಲೇನಲ್ಲ. ಜನಪ್ರಿಯ ಅಭಿಪ್ರಾಯಕ್ಕೆ ವಿರುದ್ಧವಾಗಿ, ಯುನೆಸ್ಕೊ ಭಾಷೆಯೊಂದನ್ನು “ಕ್ಲಾಸಿಕಲ್” ಎಂದು ಗುರುತಿಸಲು ಯಾವುದೇ ನಿರ್ದಿಷ್ಟ ಮಾನದಂಡವನ್ನೂ ಅನುಸರಿಸುವುದಿಲ್ಲ. ಯುರೋಪಿನ ಪ್ರಭಾವದಿಂದಾಗಿ ಕ್ಲಾಸಿಕಲ್ ಭಾಷೆಗಳು ಎಂದಾಕ್ಷಣ ಗ್ರೀಕ್, ಲ್ಯಾಟಿನ್ ನೆನಪಾಗುತ್ತವೆಯೇ ಹೊರತು, ಏಷ್ಯಾದ ಸಂಸ್ಕೃತವಾಗಲಿ, ಚೈನೀಸ್ ಆಗಲಿ ಅಲ್ಲ. ಗ್ರೀಕ್ ಮತ್ತು ಲ್ಯಾಟಿನ್ ಉದಾಹರಣೆಯನ್ನು ಕೊಡುವುದಾದರೆ, ಅಲ್ಲಿನ ವಿದ್ವಾಂಸರು ಪುರಾತನತೆ, ಸಾರ್ವತ್ರಿಕತೆ, ಆದರ್ಶವಾದ, ಸಾಮರಸ್ಯ, ಪ್ರತಿರೋಧ, ಮುಂತಾದ ಗುಣಗಳನ್ನು ಆಧರಿಸಿ ಕ್ಲಾಸಿಕಲ್ ಯಾವುದು ಎಂಬುದನ್ನು ನಿರ್ಧರಿಸುತ್ತಾರೆ. ಸಾಹಿತ್ಯವನ್ನು ಆಧರಿಸಿ ಭಾಷೆಯನ್ನೂ ಕ್ಲಾಸಿಕಲ್ ಎಂದು ನಿರ್ಣಯಿಸಿದ್ದಾರೆ. ಇಂತಹವೇ ಮಾನದಂಡಗಳನ್ನನುಸರಿಸಿ ಮುಂದೆ ಭಾರತ ಸರಕಾರ ಕ್ಲಾಸಿಕಲ್ ಭಾಷೆಗಳ ಅಧಿಕೃತ ಮಾನ್ಯತೆಯನ್ನು ನಿರ್ಧರಿಸಿತು.
ಭಾರತದಲ್ಲಿ “ಕ್ಲಾಸಿಕಲ್” ಪದವನ್ನು ಮೊದಲಿಗೆ ಬಳಸಿದವರೇ ಓರಿಯೆಂಟಲಿಸ್ಟುಗಳು. ವೇದಗಳ ಕಾಲದಲ್ಲಿ ಬಳಕೆಯಲ್ಲಿದ್ದ ‘ದೇವಭಾಷೆ’ ಸಂಸ್ಕೃತದಿಂದ ಸಾಮಾನ್ಯರು ಬಳಸುತ್ತಿದ್ದ ಸಂಸ್ಕೃತವನ್ನು ಪ್ರತ್ಯೇಕಿಸಲೆಂದೇ ಇಂತಹ ಕೆಟಗರಿಯನ್ನು ಪರಿಚಯಿಸಿದ್ದರು. ಭಾರತಕ್ಕೆ ಯುರೋಪಿಯನ್ನರ ಆಗಮನವಾದ ಮೇಲೆ ಅಲ್ಲಿನ ಪ್ರಾಚೀನ ಗ್ರೀಕ್ ಮತ್ತು ರೋಮನ್ ಕಲೆ, ಸಾಹಿತ್ಯ, ಸಂಸ್ಕೃತಿಯಂಥದ್ದೇ ಒಂದು ಮಾದರಿಯನ್ನು ಈ ನೆಲದಲ್ಲಿ ಕಾಣುವ ಪ್ರಯತ್ನವಾಗಿಯೇ ಹುಟ್ಟಿದ್ದು ಈ ಕ್ಲಾಸಿಕಲ್ ಅಥವಾ ಶಾಸ್ತ್ರೀಯ/ಅಭಿಜಾತ ಸಂಸ್ಕೃತ. ಕಾಲಕ್ರಮೇಣ ಇದೇ ಯಾವುದೇ ಪುರಾತನ ಭಾಷೆ, ಸಾಹಿತ್ಯ ಪರಂಪರೆಯನ್ನು ಗುರುತಿಸಲು ಬಳಕೆಯಾಗುತ್ತ ಬಂತು.
ಹೈಡೆಲ್‍ಬರ್ಗ್ ತತ್ವಶಾಸ್ತ್ರಜ್ಞ ಹಾಗೂ ಮಾರ್ಟಿನ್ ಹೈಡೆಗರ್‍ನ ಶಿಷ್ಯ ಹ್ಯಾನ್ಸ್-ಜಾರ್ಜ್ ಗೇಡಮರ್, ತನ್ನ ಟ್ರೂತ್ ಅಂಡ್ ಮೆತಡ್ (1960) ಕೃತಿಯಲ್ಲಿ “ಕ್ಲಾಸಿಕಲ್” ಎಂದರೆ, “ತನ್ನನ್ನು ತಾನು ಸತತವಾಗಿ ಸಾಬೀತುಪಡಿಸಿಕೊಳ್ಳುವ ಮೂಲಕ ನಿಜವಾದುದೊಂದು ಅಸ್ತಿತ್ವಕ್ಕೆ ಬರುವಂತೆ ಸಂರಕ್ಷಣೆಯನ್ನು ಮಾಡುವ ಚಾರಿತ್ರಿಕ ಪ್ರಕ್ರಿಯೆ, ಚಾರಿತ್ರಿಕವಾಗಿರುವುದಕ್ಕೆ ಗುರುತಿಸಬಹುದಾದಂತಹ ವಿಧಾನ” ಎಂದು ಹೇಳುವ ಮೂಲಕ, ರಾಜಕೀಯ, ಎಥಿಕಲ್ ಹಾಗೂ ಎಸ್ತೆಟಿಕ್ ಆದರ್ಶಗಳೊಂದಿಗೆ ಚಾರಿತ್ರಿಕತೆ, ಅದರ ಚಿರಸ್ಥಾಯಿತ್ವ ಹಾಗೂ ಆದರ್ಶಪ್ರಾಯತ್ವ ಅನೇಕ ಲಕ್ಷಣಗಳನ್ನು ಚರ್ಚೆಗೆ ತರುತ್ತಾರೆಂಬುದನ್ನಿಲ್ಲಿ ಉಲ್ಲೇಖಿಸಬೇಕು.
ತಮಿಳು ಭಾಷೆಗೆ ಕ್ಲಾಸಿಕಲ್ ಸ್ಥಾನ ನೀಡಬೇಕೆಂದು ತಮಿಳು ನಾಡು ಸರಕಾರ ಕೇಂದ್ರ ಸರಕಾರದ ಮುಂದೆ ಮನವಿಯನ್ನಿಟ್ಟಿತು. ಈ ಮನವಿಯನ್ನು ಆಧರಿಸಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರನ್ನೊಳಗೊಂಡ ತಜ್ಞರ ಸಮಿತಿಯೊಂದನ್ನು ರಚಿಸಿತು. ಸೆಪ್ಟಂಬರ್ 2, 2004ರಲ್ಲಿ ನಡೆದ ಸಭೆಯಲ್ಲಿ ಸಾರ್ವತ್ರಿಕವಾಗಿ ಒಪ್ಪಿಕೊಳ್ಳಲಾದ ಪ್ರಮುಖ ಮಾನದಂಡಗಳೆಂದರೆ: ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ಪ್ರಕಾರ, ಭಾರತೀಯ ಭಾಷೆಯೊಂದನ್ನು ಕ್ಲಾಸಿಕಲ್ ಭಾಷೆಯೆಂದು ಘೋಷಿಸಬೇಕಾದರೆ, ಮಾನದಂಡಗಳು ಹೀಗಿರಬೇಕು: ಯಾವುದೇ ಭಾಷೆಯ ಅತ್ಯಂತ ಪ್ರಾಚೀನ ಪಠ್ಯ ಅಥವಾ ದಾಖಲಿತ ಚರಿತ್ರೆ 1500-2000 ವರ್ಷಗಳಷ್ಟು ಪುರಾತನವಾಗಿರಬೇಕು; ಅನೇಕ ತಲೆಮಾರುಗಳ ಭಾಷಿಕರು ತಮ್ಮ ಭಾಷೆಯ ಪ್ರಾಚೀನ ಸಾಹಿತ್ಯ/ಪಠ್ಯಗಳ ಭಂಡಾರವನ್ನು ಅಮೂಲ್ಯವೆಂದು ಪರಿಗಣಿಸಿರಬೇಕು; ಸಾಹಿತ್ಯ ಪರಂಪರೆಯು ಬೇರಾವುದೇ ಭಾಷಿಕ ಸಮುದಾಯದಿಂದ ಎರವಲು ಪಡೆಯದೆ, ತನ್ನ ಭಾಷೆಯಲ್ಲಿಯೇ ಸೃಷ್ಟಿಯಾಗಿರಬೇಕು; ಕ್ಲಾಸಿಕಲ್ ಭಾಷೆಯು ಆಧುನಿಕ ಭಾಷೆಗಿಂತ ಭಿನ್ನವೂ, ವಿಶಿಷವ್ಟೂ ಆಗಿರುವ ಹೊತ್ತಿನಲ್ಲಿಯೇ, ಕ್ಲಾಸಿಕಲ್ ಭಾಷೆ ಹಾಗೂ ಅದರ ನಂತರದ ಸ್ವರೂಪಗಳಲ್ಲಿ ಮುಂದುವರಿಕೆಯಿರಬಾರದು.
ಈ ಮಾನದಂಡಗಳಲ್ಲಿ ಭಾಷೆಯ ಪುರಾತನತೆ 2500-1500-1000 ವರ್ಷಗಳ ಅವಧಿಯದ್ದಾಗಿರಬೇಕೆಂಬ ಜಿಜ್ಞಾಸೆ ಆರಂಭದಿಂದ ನಡೆದೇ ಇತ್ತು. ಈ ಅವಧಿಗೆ ತಕ್ಕಂತೆ ತಮ್ಮ ಭಾಷೆಯ ಪುರಾತನತೆಯನ್ನು ಹಿಗ್ಗಿಸುವ ಕೆಲಸವೂ ವಿದ್ವಾಂಸರಿಂದ ನಡೆಯಿತು. ಅದೆಲ್ಲದರ ನಡುವೆಯೂ, ಇಲ್ಲಿಯವರೆಗೆ ತಮಿಳು(2004), ಸಂಸ್ಕೃತ(2005), ಕನ್ನಡ(2008), ತೆಲುಗು(2008), ಮಲಯಾಳಂ(2013) ಹಾಗೂ ಒಡಿಯ(2014) ಭಾಷೆಗಳು ಭಾರತ ಸರಕಾರದ “ಕ್ಲಾಸಿಕಲ್” ಭಾಷೆಯ ಮಾನ್ಯತೆಯನ್ನು ಪಡೆದಿವೆ. ಆದರೆ, ಸೋಜಿಗವೆಂಬಂತೆ, ಅಭಿಜಾತ ಭಾರತೀಯ ಸಂಸ್ಕೃತಿ ಯ ಪ್ರಮುಖ ಭಾಷೆಗಳಲ್ಲೊಂದು, ಹಾಗೂ ಎರಡನೆಯದಾಗಿ, ಅಭಿಜಾತ ಭಾರತದ ಭಾಷಾ ಕ್ರಮವನ್ನು ಅರ್ಥಮಾಡಿಕೊಳ್ಳಲಿಕ್ಕೆ ನಿರ್ಣಾಯಕವಾದ ಪ್ರಾಕೃತ ಈ ಪಟ್ಟಿಯಲ್ಲಿ ಸೇರಲೇ ಇಲ್ಲ. ಅದಕ್ಕೆ ಕಾರಣಗಳೇನು ಎಂಬುದನ್ನು ಸ್ಪಷ್ಟಪಡಿಸಿಯೂ ಇಲ್ಲ.
ಭಾಷಾ ಪ್ರಾಚೀನತೆಗೆ ಸಂಬಂಧಿಸಿದಂತೆ, ದ್ರಾವಿಡ ಭಾಷೆಗಳಲ್ಲಿ ತಮಿಳು-ಕನ್ನಡದ ನಡುವೆ, ಆರ್ಯ ಭಾಷೆಗಳಲ್ಲಿ ತಮಿಳು-ಸಂಸ್ಕೃತ, ಕನ್ನಡ-ಸಂಸ್ಕೃತ, ತಮಿಳು-ಕನ್ನಡಗಳ ನಡುವೆ ಒಂದು ರೀತಿಯ ಹಗೆತನ ಇದ್ದೇ ಇದೆ. ಇದರ ಚರಿತ್ರೆ ಪ್ರಾಚೀನವೇನಲ್ಲ. ಇದರ ನಡುವೆಯೇ ‘ಭಾರತೀಯ ಭಾಷೆಗಳಿಗೆಲ್ಲ ಸಂಸ್ಕೃತವೇ ಮೂಲ’ ಎಂಬ ಒಂದು ವಾದ ಇಂದಿಗೂ ಬಲವಾಗಿದೆ. ಸಾಹಿತಿಗಳೇನೋ ವಾದಿಸುತ್ತಾರೆಂದರೆ, ಭಾಷಾಶಾಸ್ತ್ರಜ್ಞರೂ ಹೀಗೆಯೇ ವಾದಿಸುವುದುಂಟು. ಈ ವಾದದ ಮೂಲವಿರುವುದು ಕಲಕತ್ತಾದಲ್ಲಿ ಸರ್ ವಿಲಿಯಂ ಜೋನ್ಸ್ ಸಂಸ್ಕೃತಕ್ಕೂ ಯುರೋಪ್ ಹಾಗೂ ಇರಾನ್ ಭಾಷೆಗಳಿಗೂ ಇರುವ ಚಾರಿತ್ರಿಕ ಸಂಬಂಧವನ್ನು ಪ್ರಸ್ತಾಪಿಸುವ ಮೂಲಕ ರೂಪಿಸಿದ ಇಂಡೋ-ಯುರೋಪಿಯನ್ ಭಾಷಾ ಕುಟುಂಬದಲ್ಲಿ ಹಾಗೂ ಭಾರತೀಯ ಭಾಷೆಗಳನ್ನು ಜನಾಂಗೀಯ ಚರಿತ್ರೆಯ ಮೂಲಕ ಅಭ್ಯಸಿಸಲು ಹೊರಟ ಓರಿಯೆಂಟಲಿಸಮ್‍ನಲ್ಲಿ. ಈ ವಾದವನ್ನು 1816ರಷ್ಟು ಹಿಂದೆಯೇ ಮದ್ರಾಸ್‍ನ ಕಲೆಕ್ಟರ್ ಆಗಿದ್ದ ಫ್ರಾನ್ಸಿಸ್ ವೈಟ್ ಎಲ್ಲಿಸ್‍ರಂತಹ ವಿದ್ವಾಂಸರು ದ್ರಾವಿಡ ಭಾಷಾ ಕುಟುಂಬದ ಪರಿಕಲ್ಪನೆಯನ್ನು ಪರಿಚಯಿಸುವ ಮೂಲಕ ಪ್ರಶ್ನಿಸಿದ್ದರು. ಥಾಮಸ್ ಟ್ರೌಟ್‍ಮನ್ ಎಂಬ ವಿದ್ವಾಂಸ ಆರ್ಯ-ದ್ರಾವಿಡ ಭಾಷಾಕುಟುಂಬಗಳ ಹುಟ್ಟಿಗೆ ಕಾರಣವಾದ ಕಲಕತ್ತಾ ಹಾಗೂ ಮದ್ರಾಸ್ ಸ್ಕೂಲ್ ಆಫ್ ಓರಿಯೆಂಟಲಿಸಮ್ ಕುರಿತು ಬರೆದಿರುವ ‘ಆರ್ಯನ್ಸ್ ಅಂಡ್ ಬ್ರಿಟಿಷ್ ಇಂಡಿಯ’ (1997) ಹಾಗೂ ‘ಲ್ಯಾಂಗ್ವೇಜಸ್ ಅಂಡ್ ನೇಶನ್ಸ್: ದಿ ದ್ರವಿಡಿಯನ್ ಪ್ರೂಫ್ ಇನ್ ಕಲೋನಿಯಲ್ ಮದ್ರಾಸ್’(2006)ನಲ್ಲಿ ಇದರ ವಿಸ್ತ್ರತ ಚರ್ಚೆಯನ್ನು ಕಾಣಬಹುದು.
ಇದೊಂದು ಕಡೆಯಾದರೆ, ರಾಬರ್ಟ್ ಕಾಲ್ಡ್‍ವೆಲ್ ಮಹತ್ವಾಕಾಂಕ್ಷೆಯಿಂದ, ರಾಜಕೀಯ ಇಂಗಿತದೊಂದಿಗೆ ‘ಎ ಕಂಪೇರೆಟಿವ್ ಗ್ರಾಮರ್ ಆಫ್ ದಿ ದ್ರವಿಡಿಯನ್ ಫ್ಯಾಮಿಲಿ ಆಫ್ ಲ್ಯಾಂಗ್ವೇಜಸ್’(1856) ರಚಿಸಿದ್ದು ಮತ್ತೊಂದೆಡೆ. ತಮಿಳು ಭಾಷೆ “ಕ್ಲಾಸಿಕಲ್” ಭಾಷೆ, ವೇದಗಳಲ್ಲಿ ತಮಿಳಿನ 20 ಪದಗಳು ಕಂಡುಬರುತ್ತವೆ ಎಂದು ಎಂ.ಕರುಣಾನಿಧಿ 2010ರಲ್ಲಿ ಕೊಯಂಬತ್ತೂರಿನಲ್ಲಿ ನಡೆದ ವಿಶ್ವ ಕ್ಲಾಸಿಕಲ್ ತಮಿಳು ಸಮಾವೇಶದಲ್ಲಿ ಮಾಡಿದ ವಾದಕ್ಕೆ ಕಾಲ್ಡ್‍ವೆಲ್ ಪುಸ್ತಕವೇ ಕಾರಣ. ಜಗತ್ತಿನ ಪ್ರಾಥಮಿಕ ಪ್ರಾಚೀನ ಭಾಷೆ ತಮಿಳು ಎಂದು ತಮಿಳು ವಿದ್ವಾಂಸ ದೇವನೆಯ ಪವನೇರ್ ಕೂಡ ವಾದಿಸಿದ್ದನ್ನು ಆ ಸಂಧರ್ಭದಲ್ಲಿ ಕರುಣಾನಿಧಿ ಒತ್ತಿಹೇಳಿದ್ದರು. ಅದನ್ನಾಧರಿಸಿಯೇ ಅವರು ವಿಶ್ವದ ಎಲ್ಲ ಭಾಷೆಗಳಿಗೂ ತಮಿಳು ತಾಯಿನುಡಿ ಎಂಬ ವಿವಾದಾಸ್ಪದ ಹೇಳಿಕೆಯನ್ನೂ ನೀಡಿದ್ದರು. ದೇವನೆಯ ಪವನೇರ್ ‘ಶುದ್ಧ ತಮಿಳು ಚಳವಳಿ’ಯನ್ನು ಆರಂಭಿಸಿದ ವಿದ್ವಾಂಸ. ತನ್ನ ‘ಪ್ರೈಮರಿ ಕ್ಲಾಸಿಕಲ್ ಲ್ಯಾಂಗ್ವೇಜ್ ಆಫ್ ದಿ ವಲ್ರ್ಡ್’(1965)ನಲ್ಲಿ ತಮಿಳು ಭಾಷೆಯೇ ಅತ್ಯಂತ ಪ್ರಾಕೃತಿಕ(ಇಯ-ಮೊಳಿ) ಹಾಗೂ ಮೂಲ ವಿಶ್ವ ಭಾಷೆ(ತೊಳ್-ಮೊಳಿ). ತಮಿಳಿನಿಂದಲೇ ಜಗತ್ತಿನ ಉಳಿದೆಲ್ಲ ಭಾಷೆಗಳೂ ಹುಟ್ಟಿದವು ಎಂದು ಮಾತ್ರವಲ್ಲ, ಶಂಗಂ ಸಾಹಿತ್ಯ ಕ್ರಿ.ಪೂ. 200-ಕ್ರಿ.ಪೂ.300ರ ನಡುವೆ ರಚನೆಯಾಗಿದ್ದಿರಬಹುದೆಂದು ಕೂಡ ವಾದಿಸಿದ್ದರು.
ತಮಿಳಿಗೆ ಕ್ಲಾಸಿಕಲ್ ಸ್ಥಾನ ದೊರಕಿಸಿಕೊಡುವುದಕ್ಕೆ ಪ್ರಬಲವಾಗಿ ವಾದ ಮಂಡಿಸಿದ ಅಮೆರಿಕನ್ ವಿದ್ವಾಂಸ ಜಾರ್ಜ್ ಎಲ್. ಹಾರ್ಟ್, ತಮಿಳನ್ನು ಹೊರತುಪಡಿಸಿ ದಕ್ಷಿಣ ಏಶ್ಯಾದ ಭಾಷೆಗಳು ಸಂಸ್ಕೃತ ಅಥವಾ ಪರ್ಶಿಯನ್/ಅರೇಬಿಕ್‍ನಿಂದ ತಮ್ಮ ಪರಂಪರೆಯನ್ನು ಪಡೆದಿವೆ ಎಂಬ ಹೇಳಿಕೆಯನ್ನು ಅದೇ ಸಮಾವೇಶದಲ್ಲಿ ಮಾಡಿದ್ದರು. ಶಂಗಂ ಸಾಹಿತ್ಯ ಸಂಸ್ಕೃತದಿಂದ ಸಂಪೂರ್ಣವಾಗಿ ಸ್ವತಂತ್ರವಾಗಿದ್ದು, ತನ್ನದೇ ಆದ ನಿಯಮಗಳು ಹಾಗೂ ಪರಂಪರೆಗಳನ್ನು ಅನುಸರಿಸುತ್ತವೆ. ತಮಿಳು ಹಾಗೂ ಸಂಸ್ಕೃತ ಭಾಷೆಗಳು ವಿಶ್ವದೆಡೆಗಿನ ತಮ್ಮ ಗಮನ ಹಾಗೂ ಪರಿಕಲ್ಪನೆಗಳಲ್ಲಿ ಭಿನ್ನವಾಗಿವೆ. ಶಂಗಂ ಸಾಹಿತ್ಯದ ಪ್ರಭಾವವನ್ನು ನಮ್ಮಾಳ್ವರ್ ಹಾಗೂ ಕಂಬನ್‍ರ ನಂತರದ ಸಾಹಿತ್ಯಕ ಸೃಷ್ಟಿಯಲ್ಲಿ ಕಾಣಬಹುದು. ವೈಷ್ಣವರ ಭಕ್ತಿ ಚಳವಳಿಯಿಂದ ಹುಟ್ಟಿದ ಆಳ್ವಾರರ ಸ್ತ್ರೋತ್ರಗಳು ತಮಿಳುನಾಡಿನಿಂದ ದೇಶದ ಉಳಿದ ಭಾಗಗಳು ಆಮದುಮಾಡಿಕೊಂಡವು. ಹಾಗಾಗಿಯೇ, ಶಂಗಂ ಸಾಹಿತ್ಯದಿಂದ ತುಳಸಿ ರಾಮಾಯಣ ಪ್ರಭಾವಕ್ಕೊಳಗಾಯಿತು. ಹೆಚ್ಚು ತಮಿಳು, ಸ್ವಲ್ಪ ಸಂಸ್ಕೃತ ಹೊಂದಿದ್ದ ‘ಕಂಬನ್ ರಾಮಾಯಣ’ ಬಹುಶಃ ಭಾರತದಲ್ಲಿ ರಚಿತವಾಗಿರುವ ಶ್ರೇಷ್ಠ ಕಾವ್ಯ ಎಂದು ಹಾರ್ಟ್ ಹೇಳುತ್ತಾರೆ.
ಕಾಲದಿಂದಲೂ ಇಂಡೊ-ಆರ್ಯನ್ ಹಾಗೂ ದ್ರಾವಿಡ ಭಾಷಾ ವಿದ್ವಾಂಸರು, ಕ್ರಮವಾಗಿ ಸಂಸ್ಕೃತ ಹಾಗೂ ತಮಿಳಿನ ಹಳಮೆಯನ್ನು ಎತ್ತಿಹಿಡಿಯಲು ಪೈಪೋಟಿ ನಡೆಸುತ್ತ ಬಂದದ್ದನ್ನು ಗಮನಿಸಬಹುದು. ನಂತರದಲ್ಲಿ ದ್ರಾವಿಡ ಭಾಷೆಗಳಾದ ಕನ್ನಡ ಹಾಗೂ ತೆಲುಗು, ಸಂಸ್ಕತಕ್ಕಿಂತ ಹೆಚ್ಚಾಗಿ ತಮಿಳಿನೊಂದಿಗೆ ಪೈಪೋಟಿಗಿಳಿದವು. ಪೊಲಾಕ್‍ರಂತಹ ವಿದ್ವಾಂಸರು ಸಂಸ್ಕೃತದ ಪರವಾಗಿ, ಜಾರ್ಜ್ ಹಾರ್ಟ್‍ರಂತಹ ವಿದ್ವಾಂಸರು ತಮಿಳಿನ ಪರವಾಗಿ ಪ್ರಬಲ ವಾದವನ್ನು ಮುಂದಿಟ್ಟಿದ್ದರು. ಆದರೆ, ಕನ್ನಡದ ಹಳಮೆ, ಹಿರಿಮೆ, ಗರಿಮೆಗಳ ಪರವಾಗಿ ವಾದ ಮಂಡಿಸಲು ಯಾರೂ ಇಲ್ಲ ಎನ್ನುವಂತಾಗಿತ್ತು. ಅದರರ್ಥ ಹಿಂದೆ ಯಾರೂ ಕನ್ನಡದ ಹಳಮೆಯ ಬಗ್ಗೆ ಬರೆದಿರಲಿಲ್ಲವೆಂದೇನಲ್ಲ. ಅವೆಲ್ಲವೂ ಕನ್ನಡ ಭಾಷೆಯನ್ನು ಭಾವನಾತ್ಮಕವಾಗಿ ನೋಡಿದ್ದವೇ ಹೊರತು, ಸಾಕ್ಷ್ಯಾಧಾರಗಳ ಸಮೇತ ವಸ್ತುನಿಷ್ಠ ವಾದವನ್ನು ಮುಂದಿಟ್ಟಿರಲಿಲ್ಲ. ಇಂತಹ ಸಂದರ್ಭದಲ್ಲೇ ಶಂಕರ ಭಟ್ ಹಾಗೂ ಶೆಟ್ಟರ್ ಕನ್ನಡದಲ್ಲೇ ಬರೆಯುತ್ತ ಅಂತಾರಾಷ್ಟ್ರೀಯ ಮಟ್ಟದ ವಾದಗಳನ್ನು ಮಂಡಿಸಲು ಶುರುವಾಗಿದ್ದು ಕನ್ನಡದ ಮಟ್ಟಿಗೆ ಚಾರಿತ್ರಿಕ ಸಂಗತಿಯಾಯಿತು.
ಶಂಕರ ಭಟ್ ಹಾಗೂ ಶೆಟ್ಟರ್ ಅವರ ಕನ್ನಡ ಭಾಷಾಶಾಸ್ತ್ರ
ಮೇಲೆ ಹೆಸರಿಸಿದ ಸಂಸ್ಕೃತ ಹಾಗೂ ತಮಿಳು ವಿದ್ವಾಂಸರ ಹಾಗೆ ಶಂಕರ ಭಟ್ ಅವರಾಗಲಿ, ಶೆಟ್ಟರ್ ಅವರಾಗಲಿ ತಮ್ಮ ಕೃತಿಗಳಲ್ಲೆಲ್ಲಿಯೂ ಬೀಸು ಹೇಳಿಕೆಗಳನ್ನು ಮಾಡಹೋಗುವುದಿಲ್ಲ. ವಾದಗಳಲ್ಲಿ ಅನಗತ್ಯವಾದ ಭಾವನಾತ್ಮಕತೆಯನ್ನು ತರಹೋಗುವುದಿಲ್ಲ. ಬದಲಿಗೆ, ವಸ್ತುನಿಷ್ಠವಾದ ಭಿನ್ನ ನೋಟಕ್ರಮಗಳ ಮೂಲಕ ಸ್ಥಾಪಿತ ಸಂಶೋಧನಾ ಸತ್ಯಗಳನ್ನು ಮುರಿದು ಕಟ್ಟುತ್ತಾರೆ. ಮೊದಲೇ ಹೇಳಿದ ಹಾಗೆ, ಶಂಕರ ಭಟ್ ಅವರದು ವಿವರಣಾತ್ಮಕ ಭಾಷಾಶಾಸ್ತ್ರವಾದರೆ, ಶೆಟ್ಟರ್ ಅವರದು ಚಾರಿತ್ರಿಕ ಭಾಷಾವಿಜ್ಞಾನ.
ಹೊಸ ಸಹಸ್ರಮಾನದ ಆರಂಭದಲ್ಲೇ ಶಂಕರಭಟ್ಟರ ಮಹತ್ವಾಕಾಂಕ್ಷೆಯ ಕನ್ನಡ ವ್ಯಾಕರಣಗಳ ಹತ್ತು ಸಂಪುಟಗಳಲ್ಲಿ ಮೊದಲ ಫಸಲಾಗಿ ಹೊರಬಂದ ‘ಕನ್ನಡಕ್ಕೆ ಬೇಕು ಕನ್ನಡದ್ದೇ ಆದ ವ್ಯಾಕರಣ’ ಹೊಸ ವಾದವನ್ನು ಮಂಡಿಸುವ ಮೂಲಕ ಕನ್ನಡ ಚಿಂತನೆಯ ಮೇಲೆ ದೊಡ್ಡ ಪ್ರಭಾವ ಬೀರಿದರು. ನಿಜಕ್ಕೂ ಹಳಗನ್ನಡ ವ್ಯಾಕರಣ ಎಂತಹದು (2005), ಕನ್ನಡ ಬರಹವನ್ನು ಸರಿಪಡಿಸೋಣ(2005) ಹಾಗೂ ಕನ್ನಡ ನುಡಿ ನಡೆದು ಬಂದ ದಾರಿ(2007) ಕೃತಿಗಳು ಕೂಡ ಈ ನಿಟ್ಟಿನಲ್ಲಿ ಪ್ರಮುಖ ಕೃತಿಗಳಾಗಿವೆ.
ಮೇಲೆ ಹೇಳಿದ್ದ ಹಾಗೆ, ಶಂಕರಭಟ್‍ರದು ವಿವರಣಾತ್ಮಕ ಭಾಷಾಶಾಸ್ತ್ರದ ವಿಧಾನವಾದರೆ, ಶೆಟ್ಟರ್‍ರದು ಚಾರಿತ್ರಿಕ ಭಾಷಾಶಾಸ್ತ್ರದ ಮಾದರಿ. ಶಂಕರಭಟ್ ಭಾಷೆ, ಬರೆಹ, ವ್ಯಾಕರಣಗಳ ಬಗ್ಗೆ ಬರೆದರೆ, ಶೆಟ್ಟರ್ ಶಾಸನಗಳು, ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ ಹಾಗೂ ಸಾಹಿತ್ಯದ ಬಗ್ಗೆ ಬರೆಯುತ್ತಾರೆ. ಇವರಿಬ್ಬರ ಕೆಲಸವೂ ಒಂದಕ್ಕೊಂದು ಪೂರಕವಾಗಿದೆ ಎಂಬುದನ್ನು ಗಮನಿಸಬೇಕು. ಆದರೆ, ಶೆಟ್ಟರ್ ಅವರು ತಮ್ಮ ಸಂಶೋಧನೆಗಳಲ್ಲಿ ಅಂತರಶಾಸ್ತ್ರೀಯ, ಅದರಲ್ಲೂ ಮುಖ್ಯವಾಗಿ ಚಾರಿತ್ರಿಕ ಹಾಗೂ ಸಮಾಜಶಾಸ್ತ್ರೀಯ ನೋಟಕ್ರಮವನ್ನು ತರುವುದು ಅವರ ಕೃತಿಗಳ ವ್ಯಾಪ್ತಿಯನ್ನು ಹಿಗ್ಗಿಸುತ್ತದೆ. ಉದಾಹರಣೆಗೆ, ಶಂಕರಭಟ್ಟರು ಕನ್ನಡ ಶಬ್ದಗಳ ಉಚ್ಚಾರಣೆ ಹಾಗೂ ಬರೆಹಗಳು ಬೇರೆಬೇರೆಯಾಗಿರುವುದರಿಂದ ಒಂದು ರೀತಿಯ ಕಂದಕ ಸೃಷ್ಟಿಯಾಗಿದೆ, ಆದ್ದರಿಂದ ಕನ್ನಡದಿಂದ ಮುಲಾಜಿಲ್ಲದೆ ಕೈಬಿಡಬಹುದೆಂದು ವಾದಿಸುತ್ತಿರುವ ‘ಋ’ ಮುಂತಾದ ಸ್ವರಾಕ್ಷರಗಳು, ವರ್ಗೀಯ ಮಹಾಪ್ರಾಣಾಕ್ಷರಗಳು, ಅವರ್ಗೀಯ ಶ, ಷ, ಹ ಮುಂತಾದವುಗಳು ಬ್ರಾಹ್ಮೀ ಹೊಕ್ಕಳ ಬಳ್ಳಿಯಿಂದ ಕ್ರಮೇಣ ಬೇರ್ಪಡುವ ಸಂಧಿಕಾಲದಲ್ಲಿ ಸಂಸ್ಕೃತದ ಬದಲು ಪ್ರಾಕೃತದಿಂದ ಪಡೆದಿರುವುದೆಂದು ಶೆಟ್ಟರ್ ಅವರು ತೋರಿಸಿಕೊಟ್ಟಿದ್ದಾರೆ.
ಶಂಕರ ಭಟ್ ಹಾಗೂ ಶೆಟ್ಟರ್ ಅವರ ಏಕತ್ವ ಹಾಗೂ ಬಹುತ್ವದ ನೆಲೆಗಳನ್ನು ಕಂಡುಕೊಳ್ಳಬೇಕೆಂದರೆ, ಪ್ರಸ್ತುತ ಕೃತಿ ‘ಪ್ರಾಕೃತ ಜಗದ್ವಲಯ: ಪ್ರಾಕೃತ, ಕನ್ನಡ, ಸಂಸ್ಕೃತ ಭಾಷೆಗಳ ಅನುಸಂಧಾನ’ದ ಎರಡನೇ ಅಧ್ಯಾಯದಲ್ಲಿ ಬರುವ ಈ ಸಾಲುಗಳನ್ನು ಗಮನಿಸಬೇಕು: “ಭಾಷೆಯ ಏಕತ್ವವನ್ನು ರೂಪಿಸುವುದು ಪ್ರಮುಖವಾಗಿ ವ್ಯಾಕರಣ ನಿಯಮಗಳು; ಬಹುತ್ವವನ್ನು ರೂಪಿಸುವುದು ಪ್ರಧಾನವಾಗಿ ಉಚ್ಚಾರ ಪ್ರಕ್ರಿಯೆಗಳು. ಮೊದಲಿನವು ಪಾಲಿಸಲೇಬೇಕಾದ ಕಟ್ಟಲೆಗಳು; ಎರಡನೆಯವು ವ್ಯಕ್ತಿ, ಸಮುದಾಯ, ಕಾಲ, ಪ್ರದೇಶ ಸಂಬಂಧಿತ ಐಚ್ಛಿಕಗಳು.”
ಶಂಕರ ಭಟ್ ಅವರು ಸಂಸ್ಕೃತದ ಹಳಮೆಯನ್ನು ಪ್ರಶ್ನಿಸುವಾಗ ಮೂಲಭೂತವಾಗಿ ದ್ರಾವಿಡ ಗುರುತು/ಅಸ್ಮಿತೆಯನ್ನು ಪ್ರತಿಪಾದಿಸಲು ಮುಂದಾಗುತ್ತಾರೆ. ಕನ್ನಡಕ್ಕೆ ಸಂಸ್ಕೃತದಿಂದ ಹೊರತಾದ ತನ್ನದೇ ಆದ ಒಂದು ಗುರುತಿದೆ ಎಂದು ನಿರೂಪಿಸುವ ಭರದಲ್ಲಿ ತಮಿಳು ತುಳಿದ ಭಾಷಾ ಕಟ್ಟಾಭಿಮಾನಿತನವನ್ನು ಮೆರೆಯುತ್ತಾರೆ. ಇದು ಒಂದು ರೀತಿಯಲ್ಲಿ ತಮಿಳು ವಿದ್ವಾಂಸ ದೇವನೆಯ ಪವನೇರ್ ಹಾಗೂ ಇನ್ನಿತರ ವಿದ್ವಾಂಸರ ದ್ರಾವಿಡವಾದ ಅಥವಾ ಅದರ ಮುಂದುವರಿಕೆಯೇ ಆಗಿದೆ. ಸಾವಿರಾರು ವರ್ಷಗಳ ಚರಿತ್ರೆಯಿರುವ ಭಾಷೆಯೊಂದರ ಚಹರೆಯನ್ನು ಸಂಪೂರ್ಣವಾಗಿ, ಏಕಾಏಕಿ ಬದಲಾಯಿಸಬೇಕು ಹಾಗೂ ಬದಲಾಯಿಸುತ್ತೇನೆ ಎಂದು ಭಾಷಾ ವಿದ್ವಾಂಸರೂ ತೀರ್ಮಾನ ತೆಗೆದುಕೊಳ್ಳಲಾಗುವುದಿಲ್ಲ. ಭಾಷೆ ತನ್ನ ಮಾತು ಹಾಗೂ ಬರೆಹಗಳಲ್ಲಿ ಹೇಗಿರಬೇಕು ಎಂಬ ನಿರ್ಣಯವನ್ನು ಆಯಾ ಭಾಷಿಕ ಸಮುದಾಯಗಳೇ ತೆಗೆದುಕೊಳ್ಳುತ್ತವೆನ್ನುವುದು ಚಾರಿತ್ರಿಕವಾಗಿ ನಿರೂಪಿತವಾಗಿರುವ ಸತ್ಯ. ಈ ವಿಷಯದಲ್ಲಿ ಶೆಟ್ಟರ್ ಅವರು ಶಂಕರ ಭಟ್ ಅವರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ.
ಶೆಟ್ಟರ್ ಅವರು ತಮ್ಮ ಚಾರಿತ್ರಿಕ ಸಂಶೋಧನ ಅಧ್ಯಯನ ಮಾದರಿಗಳ ಮೂಲಕ ಮಾಡುವ ಬಹುಮುಖ್ಯ ಕೆಲಸವೆಂದರೆ, ಹಿಂದಿನ ಭಾಷಾ ಸಮಾಜಗಳ ಭಾಷಾ ನೀತಿಗಳನ್ನು ಅಭ್ಯಸಿಸಿ ಅವು ಬಹುತ್ವದ ನೆಲೆಗಳನ್ನು ಹೇಗೆ ಕಂಡುಕೊಂಡಿದ್ದವೆಂಬುದನ್ನು ಸಾಕ್ಷ್ಯಾಧಾರಗಳ ಸಮೇತ ನಿರೂಪಿಸುವುದು. ಉದಾಹರಣೆಗೆ, ಅವರು ‘ಸಮಾಜಮುಖಿ’(ಜನವರಿ 2018) ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ “ಕನ್ನಡ ಈಸ್ ಅನ್ ಅಮಾಲ್ಗಮೇಷನ್ ಆಫ್ ಡಿಫರೆಂಟ್ ಲ್ಯಾಂಗ್ವೇಜಸ್” ಎಂದು ಹೇಳಿದ್ದರು. ಅದಕ್ಕೆ ಅವರು ನೀಡಿದ ವಿವರಣೆ ಹೀಗಿದೆ: “ಆರಂಭಕಾಲದಲ್ಲಿ ಕನ್ನಡ, ಸಂಸ್ಕೃತ, ತಮಿಳು, ಪ್ರಾಕೃತ, ಮಧ್ಯಕಾಲದಲ್ಲಿ ಪರ್ಶಿಯನ್, ಉರ್ದು, ಮರಾಠಿ ಮತ್ತು 17ನೇ ಶತಮಾನದ ನಂತರ ಪಾಶ್ಚಾತ್ಯ ಭಾಷೆಗಳು ಬೆಳೆದವು. ಜೊತೆಗೆ ಕೊಂಕಣಿ ಮತ್ತು ತುಳುಗಳಿದ್ದವು…ಹಿಂದೆ ಕನ್ನಡ ಯಜಮಾನತ್ವ ಉಳಿಸಿಕೊಂಡ ಕಾಲವಿತ್ತು. ಮೊದಲನೆಯ ಸಹಸ್ರಮಾನದಲ್ಲಿ ನಮ್ಮಲ್ಲಿ ದ್ವಿಭಾಷಾ ಶಾಸನಗಳನ್ನು ಕಾಣುತ್ತೇವೆ. ಅದರಲ್ಲಿ ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತ ಭಾಷೆ ಎರಡೂ ಇರುತ್ತದೆ. ದೇವನಾಗರಿ ಬರುವ ತನಕ ಸಂಸ್ಕೃತಕ್ಕೆ ಲಿಪಿ ಇರಲಿಲ್ಲ. ಆಗ ಕನ್ನಡ ಲಿಪಿಯಲ್ಲೇ ಸಂಸ್ಕೃತ ಬರೆಯುತ್ತಿದ್ದರು. ಹೀಗಾಗಿ ಕನ್ನಡದ ಪ್ರಭಾವ ಸಂಸ್ಕೃತದ ಮೇಲೆ ಆಗಿದೆ. ಆದರೆ ಕೆಲವರು ಸಂಸ್ಕೃತದಿಂದ ಕನ್ನಡ ಬಂದಿದೆ ಎಂದು ವಾದಿಸುತ್ತಾರೆ. ಸಂಸ್ಕೃತ ಉಚ್ಚಾರಣೆಗೆ ಪಂಡಿತರು ಕೊಡುವಷ್ಟು ಮಹತ್ವವನ್ನು ಹಳಗನ್ನಡ ಭಾಷೆಯಲ್ಲಿಯೂ ನೀಡಲಾಗುತ್ತಿತ್ತು. ಕನ್ನಡ ಲಿಪಿಯ ಪ್ರಭಾವ ಸಂಸ್ಕೃತದ ಮೇಲೆ ಆಗಿದೆ ಎಂಬುದು ವಾಸ್ತವ.”
ಇದು ಶಂಕರಭಟ್ ಹಾಗೂ ಶೆಟ್ಟರ್ ಅವರ ಭಾಷಾ ಸೈದ್ಧಾಂತಿಕತೆಯನ್ನು ಸ್ಪಷ್ಟಪಡಿಸುತ್ತದೆ. ಭಾಷೆಗಳು ಕೊಡುಕೊಳ್ಳುವಿಕೆಯಿಂದ ಬೆಳೆಯುವ ಪ್ರಕ್ರಿಯೆಯನ್ನು ಶೆಟ್ಟರ್ ಅವರು ‘ಭಾಷಾನುಸಂಧಾನ’ ಎಂದು ಕರೆಯುತ್ತಾರೆ.
ಶೆಟ್ಟರ್ ಅವರ ಸಂಶೋಧನಾ ಅನುಸಂಧಾನದ ಮಾದರಿಗಳು
ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ: ಆರಂಭ ಕಾಲದ ದ್ರಾವಿಡ ಸಂಬಂಧದ ಚಿಂತನೆ’ (2007) ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ಎಚ್.ಎಸ್.ಶಿವಪ್ರಕಾಶ್ ಅವರು ಗುರುತಿಸಿರುವ ಹಾಗೆ “ಶೆಟ್ಟರ್ ಅವರಿಗೆ ಕನ್ನಡ ನಾಡು-ನುಡಿಗಳು ಈಗಾಗಲೇ ತೀರ್ಮಾನವಾಗಿರುವ ವಿಷಯಗಳಲ್ಲ. ಬದಲಾಗಿ ಅವು ಅನ್ವೇಷಣೆ, ಆಲೋಚನೆ ಮತ್ತು ಅನುಸಂಧಾನಗಳ ಮುಂದಿರುವ ಸವಾಲುಗಳು.”
ದ್ರಾವಿಡ ಭಾಷೆಗಳಲ್ಲಿ ಹಳಮೆಯ ವಿಷಯಕ್ಕೆ ಬಂದಾಗ ತಮಿಳಿಗೆ ತುಂಬ ಹತ್ತಿರವಿದ್ದ ಭಾಷೆ ಕನ್ನಡವಾದರೂ, ಭಾರತೀಯ ಸರಕಾರದ ‘ಕ್ಲಾಸಿಕಲ್ ಭಾಷೆ’ ಅಧಿಕೃತ ಸ್ಥಾನ ಪಡೆಯಲು ತನ್ನ ಅರ್ಹತೆಯನ್ನು ಸಾಬೀತುಪಡಿಸಬೇಕಾದ ಒತ್ತಡಕ್ಕೆ ಒಳಗಾಗಿತ್ತು. ಕನ್ನಡ ವಿದ್ವತ್ ವಲಯ ತಮಿಳರಂತೆಯೇ ಭಾವೋದ್ವೇಗಕ್ಕೊಳಗಾಗಿ ತಮ್ಮ ಭಾಷೆ ಎಷ್ಟು ಹಳತು ಎಂಬುದನ್ನು ನಿರೂಪಿಸಲು ಹೊರಟು, “ಕ್ಲಾಸಿಕಲ್” ಅನ್ನುವುದನ್ನು ಕನ್ನಡದಲ್ಲಿ ‘ಶಾಸ್ತ್ರೀಯ’ ಎಂದು ಭಾಷಾಂತರಿಸಿಕೊಳ್ಳಬೇಕೇ ಅಥವಾ ‘ಅಭಿಜಾತ’ ಎಂದು ಭಾಷಾಂತರಿಸಿಕೊಳ್ಳಬೇಕೇ ಎಂಬ ಜಿಜ್ಞಾಸೆಯಲ್ಲಿ ತೊಡಗಿಕೊಂಡಿತ್ತು. ಅಲ್ಲದೆ, ಅದಾಗಲೇ ನಿರೂಪಿಸಲಾಗಿದ್ದ ಕನ್ನಡದ ಅತ್ಯಂತ ಹಳೆಯ ಶಾಸನ, ಹಳೆಯ ಪಠ್ಯ, ಹಳೆಯ ಪದ ಮುಂತಾದವುಗಳನ್ನೇ ಇಟ್ಟುಕೊಂಡು ಕ್ಲಾಸಿಕಲ್ ಮಾನದಂಡಗಳಿಗೆ ಒಗ್ಗಿಸುವ ಕೆಲಸ ಮಾಡಿತು. ಆಗ, ಚಾರಿತ್ರಿಕ ಭಾಷಾಶಾಸ್ತ್ರದ ಮೂಲಕ ಕನ್ನಡದ ಹಳಮೆಯ ಸಂಕಥನವನ್ನು ಸಂಶೋಧನೆಯ ಮೂಲಕ ಮುರಿದುಕಟ್ಟಲು ಹೊರಟಿದ್ದು ಶೆಟ್ಟರ್. ಸುದೀರ್ಘ ಇಂಗ್ಲಿಷ್ ಬರೆವಣಿಗೆಯ ನಂತರ ಪೂರ್ಣಪ್ರಮಾಣದ ಕನ್ನಡ ಬರೆವಣಿಗೆಗೆ ಹೊರಳಿದಾಗ ಅವರು ರಚಿಸಿದ ಮೊದಲ ಕೃತಿ ‘ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ’. ಇದಕ್ಕೆ ಕನ್ನಡ ವಿದ್ವತ್ ವಲಯದಿಂದ ಸಿಕ್ಕ ಸ್ಪಂದನೆ ಅಪರೂಪವೂ, ಅಪೂರ್ವವೂ ಆಗಿತ್ತು. ಈ ಕೃತಿ ಪ್ರಕಟವಾದ ಮರುವರ್ಷವೇ ಕನ್ನಡ ಅಧಿಕೃತವಾಗಿ ಕ್ಲಾಸಿಕಲ್ ಸ್ಥಾನ ಪಡೆಯಿತು. ಅದಕ್ಕೆ ಶೆಟ್ಟರ್ ಅವರ ಕೃತಿಯು ಸಕಾಲಿಕವಾಗಿ ನೆರವಾಯಿತು ಎಂಬುದು ಈಗ ನಿರ್ವಿವಾದ. ಅನೇಕ ಮರುಮುದ್ರಣಗಳನ್ನು ಕಂಡ ಈ ಕೃತಿ, ಕನ್ನಡ ಕ್ಲಾಸಿಕಲ್ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಹಳಗನ್ನಡ ಬೋಧನೆ ಮತ್ತು ಸಂಶೋಧನೆಗೆ ಮರುಚಾಲನೆ ದೊರಕಿಸಿಕೊಟ್ಟಿತು. ಆ ಮೂಲಕ ಕನ್ನಡ ಕ್ಲಾಸಿಕಲ್ ಅಧ್ಯಯನದಲ್ಲಿ ಒಂದು ಮೇರು ಕೃತಿ ಆಗಿ ಹೊರಹೊಮ್ಮಿತು.
ಹಾಗೆ ಹೇಳುವುದಾದರೆ, ಹೊಸ ಸಹಸ್ರಮಾನಕ್ಕೆ ಕಾಲಿಡುತ್ತಿದ್ದ ಹಾಗೆಯೇ ಪ್ರಕಟವಾದ ಕೆ.ವಿ.ಸುಬ್ಬಣ್ಣನವರ ‘ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು’ ಕೃತಿಗೂ ದೊಡ್ಡ ಸ್ಪಂದನೆಯೇ ದೊರಕಿತ್ತು. ಸಂಶೋಧಕರಾಗಿರದಿದ್ದ ಸುಬ್ಬಣ್ಣನವರು ವಸ್ತುನಿಷ್ಠವಾಗಿ ತಮ್ಮ ವಾದವನ್ನು ಮಂಡಿಸುವುದಕ್ಕಿಂತ ಹೆಚ್ಚಾಗಿ ಭಾವನಾತ್ಮಕವಾಗಿಯೇ ಸ್ಪಂದಿಸಿದ್ದು ಸುಬ್ಬಣ್ಣ ಹಾಗೂ ಶೆಟ್ಟರ್ ಅವರ ಕೃತಿಗಳನ್ನು ಜೊತೆಜೊತೆಗೆ ಅಭ್ಯಾಸ ಮಾಡುವುದರಿಂದ ಗೊತ್ತಾಗುವುದು. ಅದಕ್ಕೆ ಒಂದೆರಡು ಉದಾಹರಣೆಗಳನ್ನು ನೀಡುವುದಾದರೆ, ಕವಿರಾಜಮಾರ್ಗದ ಅತ್ಯಂತ ಹೆಚ್ಚು ಉಲ್ಲೇಖಿತವಾಗುವ ಸಾಲಾದ `ಕಾವೇರಿಯಿಂದಂ-ಆ-ಗೋದಾವರಿವರಂ-ಇರ್ದ-ನಾಡು-ಅದು ಆ ಕನ್ನಡದೊಳ್ ಭಾವಿಸಿದ ಜನಪದಂ’.
ಸುಬ್ಬಣ್ಣನವರು ಬರೆಯುತ್ತಾರೆ: “ಈ ನಾಡು ಮತ್ತು ಜನಪದವು ತತ್ಕಾಲದಲ್ಲಿ ಕಾಣಿಸುತ್ತಿದ್ದ ಭೌಗೋಲಿಕ ಘಟಕವಷ್ಟೇ ಅಲ್ಲ; ಅದು `ಭಾವಿತ’ವಾದದ್ದು; `ಕನ್ನಡ’ವೆಂಬುದರ ಒಳಗಡೆ-ಆ ಚಿಪ್ಪಿನ ಒಳಗೆ ಎನ್ನಿ-`ಭಾವಿತ’ವಾದದ್ದು. ಅಂದರೆ, `ಕನ್ನಡ’ವೆಂಬುದು ಒಂದು ಚಿತ್‍ಜಗತ್ತು, ಒಂದು ಕಣಸು, ದರ್ಶನ; ಮೊದಲು ಚಿತ್ ಜಗತ್ತಿನೊಳಗೆ ಮೈದಾಳಿದ್ದಾಗಿ ಅನಂತರ ನಿರ್ಮಿತಗೊಂಡಿದೆ. ಮತ್ತು ಇದು, `ವಸುಧಾ-ವಲಯ-ವಿಲೀನ, ವಿಶದ-ವಿಷಯ-ವಿಶೇಷಂ’. ವಸುಧಾ (ಭೂಮಿ) ಎನ್ನುವುದು ಅನಂತ ಬ್ರಹ್ಮಾಂಡದೊಳಗಿನ ಒಂದು `ವಲಯ’ ಅಷ್ಟೇ: ಮತ್ತು `ಕನ್ನಡ’ವೆಂಬ `ವಿಷಯ’ (ನಾಡು)ವು ಆ ವಸುಧಾವಲಯದಲ್ಲಿ `ವಿಲೀನ’ವಾಗಿದೆ, ಸಮರಸವಾಗಿ ಬೆರೆತುಕೊಂಡಿದೆ. ಹಾಗೆಂದಮಾತ್ರಕ್ಕೆ ಇದು ಸ್ವಂತಿಕೆಯ ಚಹರೆಯಿಲ್ಲದೆ ವಸುಧೆಯಲ್ಲಿ ಗುರುತು ಸಿಗದಂತೆ ಮುಳುಗಿಹೋದದ್ದಲ್ಲ; ತನ್ನದೇ `ವಿಶೇಷ’ (ವೈಶಿಷ್ಟ್ಯ) ಇರುವ ನಾಡು. ಅಷ್ಟೇ ಅಲ್ಲ-ಇದು `ವಿಶದ’ವಾದದ್ದು; ವಸುಧೆ ಅಥವಾ ಬ್ರಹ್ಮಾಂಡದಷ್ಟೇ ವ್ಯಾಪಕವಾದದ್ದು. ಯಾಕೆಂದರೆ ಇದು, `ವಸುಧಾವಲಯ ವಿಲೀನ’, ಇಲ್ಲಿ `ವಸುಧಾವಲಯವಿಲೀನ’ ಎಂಬುದರ ಇನ್ನೊಂದು ಅರ್ಥವನ್ನು (ವಸುಧಾವಲಯಗಳನ್ನು ತನ್ನೊಳಗೆ ಅರಗಿಸಿಕೊಂಡಿರುವಂಥದು ಎಂಬ ಅರ್ಥವನ್ನು) ಪರಿಭಾವಿಸಿಕೊಳ್ಳಬೇಕು. ವಸುಧೆಯ ಒಳಗಿನ ಒಂದು ಕಿರುಬಿಂದುವಾಗಿದ್ದೂ ತನ್ನೊಳಗೆ ಆ ವಸುಧೆಯನ್ನೇ ಅರಗಿಸಿಕೊಂಡಿರುವ `ಕನ್ನಡ’ದ ಇಂಥ ಪ್ರತಿಮೆಯನ್ನು `ಕವಿರಾಜಮಾರ್ಗ’ವು ಕಂಡರಿಸಿಟ್ಟಿದೆ.”
ಇದಕ್ಕೆ ಶಿವಪ್ರಕಾಶರು ತಮ್ಮ ಮುನ್ನುಡಿಯಲ್ಲಿ ಗುರುತಿಸಿರುವ, “ಶೆಟ್ಟರ್ ಅವರು ‘ನದಿಗಳ ಗೆರೆಹೊಡೆದು ನಕಾಶ ನಿರ್ದೇಶನ’’ ಮಾಡಲಿಲ್ಲವೆಂಬುದನ್ನು ಕವಿರಾಜಮಾರ್ಗಕಾರನ ‘ಕಾವೇರಿಯಿಂದಮಾ ಗೋದಾವರಿವರಮಿರ್ದ’ ಎಂಬ ವಾಕ್ಯವನ್ನು ಅಕ್ಷರಶಃ ಗಡಿರೇಖೆಯನ್ನಾಗಿ ತೆಗೆದುಕೊಂಡರೆ, ಆಗುವ ಅಪಾಯಗಳ ಬಗ್ಗೆ ಎಚ್ಚರಿಸುತ್ತ ಹೋಗುತ್ತಾರೆ” ಎಂಬ ವಾಕ್ಯವನ್ನು ಇಲ್ಲಿ ಉಲ್ಲೇಖಿಸಬಹುದು. ಇದರಿಂದಾಚೆಗೆ ನೋಡುವುದಾದರೆ, ಶೆಟ್ಟರ್ ಅವರು ತಮ್ಮ ಹೊಸ ಕೃತಿಯನ್ನೊಳಗೊಂಡಂತೆ, ತಾವು ಇಲ್ಲಿಯವರೆಗೆ ರಚಿಸಿರುವ ಮೂರೂ ಕನ್ನಡ ಕೃತಿಗಳಲ್ಲಿ ಕವಿರಾಜಮಾರ್ಗಕಾರನ `ವಸುಧಾ-ವಲಯ-ವಿಲೀನ, ವಿಶದ-ವಿಷಯ-ವಿಶೇಷಂ’ ಎಂಬುದನ್ನು ಚಾರಿತ್ರಿಕ ವಸ್ತುನಿಷ್ಠತೆಯೊಂದಿಗೆ, ಪರಿಕಲ್ಪನಾತ್ಮಕವಾಗಿ, ತಾತ್ವಿಕವಾಗಿ ವಿಸ್ತರಿಸುತ್ತಾ ಬಂದಿದ್ದಾರೆ.
ಮತ್ತೊಂದು ಉದಾಹರಣೆಯನ್ನು ನೀಡುವುದಾರೆ, ಸುಬ್ಬಣ್ಣನವರು ಅಲ್ಲಿಯೇ ಬರೆಯುವ “ತಮಿಳು ಭಾಷೆಯು ಸುಮಾರಾಗಿ ಕ್ರಿಸ್ತಪೂರ್ವ ಒಂದೆರಡು ಶತಮಾನಗಳ ಅವಧಿಯಲ್ಲಿ ತನ್ನ ಲಿಪಿವ್ಯವಸ್ಥೆಯನ್ನು ರೂಪಿಸಿಕೊಳ್ಳುವಾಗ, ಮೂಲ ಬ್ರಾಹ್ಮೀ ಲಿಪಿಯ ಐವತ್ತಕ್ಕೂ ಮಿಕ್ಕಿದ ಅಕ್ಷರಗಳ ಲಿಪಿಮಾಲೆಯಲ್ಲಿ ತನ್ನ ಉಚ್ಚಾರಣೆಗೆ ಬೇಕಾದ ಇಪ್ಪತ್ತಾರು ಅಕ್ಷರಗಳನ್ನಷ್ಟೇ ಕರಾರುವಕ್ಕಾಗಿ ಆಯ್ದುಕೊಂಡಿತು. ಅದಾಗಿ ಒಂದೆರಡು ಶತಮಾನಗಳ ಅನಂತರ ಕನ್ನಡವು ತನ್ನ ಲಿಪಿಮಾಲೆಯನ್ನು ರೂಪಿಸಿಕೊಳ್ಳುವಾಗ, ತನ್ನ ಉಚ್ಚಾರಣೆಗೆ ಅಗತ್ಯವಿಲ್ಲದಿದ್ದಾಗ್ಯೂ ಅದೇ ಬ್ರಾಹ್ಮಿಯ ಬಹುತೇಕ ಅಷ್ಟೂ ಅಕ್ಷರಗಳನ್ನೂ ಇರಲಿ ಅಂತ, ಉಳಿಸಿಕೊಂಡಿತು. ಈ ಮೂಲಕ ಕನ್ನಡವು ಅನ್ಯಭಾಷೆಗಳ ಶಬ್ದಾಕ್ಷರವ್ಯವಹಾರಗಳಿಗೂ ಯಾವತ್ಕಾಲಕ್ಕೂ ತೆರಪನ್ನು ಕಾದಿರಿಸಿಕೊಂಡಿತು. ಈಯೊಂದು ನಿರ್ಧಾರದ ಮೂಲಕ ಈ ಎರಡು ಭಾಷೆಗಳ ಅತ್ಯಂತ ಮೌಲಿಕ ಭಿನ್ನತೆಯೊಂದು ಸೃಷ್ಟಿಗೊಂಡಂತಾಯಿತು.”
ಇದಕ್ಕೆ ಶೆಟ್ಟರ್ ಅವರು ತಮ್ಮ ಮುಂದಿನ ಕೃತಿಯಾದ ‘ಹಳಗನ್ನಡ: ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ-ಸಾಹಿತ್ಯ ಚರಿತ್ರೆಯ ಒಂದು ಓದು, ಸಾಮಾಜಿಕ ಚರಿತ್ರೆಯ ಮರು ಓದು’(2014)ವಿನಲ್ಲಿ ಉತ್ತರ ಕೊಡುತ್ತ, ಪ್ರಾಕೃತ ಸ್ವಾಮ್ಯವು ಕ್ರಿ.ಶ. ಮೂರನೆಯ ಶತಮಾನದಲ್ಲಿ ಕೊನೆಗೊಂಡಾಗ ಅದರ ಸ್ಥಾನವನ್ನು ಸಂಸ್ಕೃತ ಪಡೆದುಕೊಳ್ಳಲೆತ್ನಿಸದ್ದನ್ನು, ಆಗ ಲಿಪಿರಹಿತ ಸಂಸ್ಕೃತ ಭಾಷೆಗೆ ಕನ್ನಡಲಿಪಿಯನ್ನೇ ಬಳಸುತ್ತಿದ್ದುದನ್ನು, ತಮಿಳಿಗಿಂತ ಮೊದಲೇ ಕನ್ನಡ ಲಿಪಿಯನ್ನು ಕಂಡುಕೊಂಡಿದ್ದನ್ನು ಸ್ಪಷ್ಟಪಡಿಸಿದ್ದಾರೆ. ‘ಅಶೋಕನ ಕಾಲದ ಕ್ರಿ. ಪೂ. ಮೂರನೆಯ ಶತಮಾನ ಬ್ರಾಹ್ಮೀಲಿಪಿ ಮತ್ತು ಪ್ರಾಕೃತಭಾಷಾ ಶಾಸನಗಳಿಂದ ಪ್ರಾರಂಭವಾಗುವ ಅಧ್ಯಯನ’ ಅವರ ಪ್ರಸ್ತುತ ಕೃತಿಯವರೆಗೂ ಮುಂದುವರೆದಿದೆಯೆಂದರೆ ಅದರ ಹರವು ಎಷ್ಟು ದೊಡ್ಡದು ಎಂಬುದು ತಿಳಿಯುತ್ತದೆ.
ಚರಿತ್ರೆಕಾರ, ಶಾಸನಕಾರ, ಭಾಷಾಶಾಸ್ತ್ರಜ್ಞ, ಮಾತ್ರವಲ್ಲದೆ ‘ಹಳಗನ್ನಡ’ ಕೃತಿಯಲ್ಲಿ ಶೆಟ್ಟರ್ ಅವರು ಸಮಾಜಶಾಸ್ತ್ರಜ್ಞ ಕೂಡ ಆಗಿಬಿಡುವುದು ಕನ್ನಡ ಸಂಶೋಧಕ ಏರಿದ ಎತ್ತರಕ್ಕೆ ಸಾಕ್ಷಿ. ಕೃತಿಯ ಮುನ್ನುಡಿಯಲ್ಲಿ ಕನ್ನಡದ ಪ್ರಮುಖ ಸಂಶೋಧಕರಾಗಿದ್ದ ಎಂ.ಎಂ. ಕಲಬುರ್ಗಿ ಅವರು ಗುರುತಿಸಿದ್ದ ಹಾಗೆ, ‘ಭರತ ಖಂಡದ ಲಿಪಿಕಾರರ ಚರಿತ್ರೆ ಶುರುವಾಗುವುದು ಇಲ್ಲಿಂದ, ಇಂದಿನಿಂದ, ಇವನಿಂದ’ ಎಂಬ ವಾಕ್ಯವೇ ಮೈನವಿರೇಳಿಸಿದರೆ, “ನಾವು ಶಿಲ್ಪವನ್ನು ಅಭ್ಯಸಿಸಿದ್ದೇವೆ, ಶಿಲ್ಪಿಗಳನ್ನು ಮರೆತಿದ್ದೇವೆ; ಲಿಪಿಯನ್ನು ಅಭ್ಯಸಿಸಿದ್ದೇವೆ, ಲಿಪಿಕಾರರನ್ನು ಮರೆತಿದ್ದೇವೆ” ಎಂಬ ‘ಹಳಗನ್ನಡ’ ಕೃತಿಯ ಹೇಳಿಕೆಗಳು ಎಚ್ಚರಿಕೆಯ ಗಂಟೆಗಳಾಗಿ ಕೇಳಿಸತೊಡಗುತ್ತವೆ. “ಬ್ರಾಹ್ಮಣ ಮತ್ತು ಕ್ಷತ್ರಿಯರ ಸುತ್ತ ಹೆಣೆದಿದ್ದ ಇತಿಹಾಸವನ್ನು ಮಧ್ಯಮ ಮತ್ತು ಕೆಳಸ್ತರದವರೆಗೂ ವಿಸ್ತರಿಸಿ, ಸಮಾಜಕ್ಕಾಗಿ ಜೀವತೆತ್ತ ಗೌಡ, ಮಾದಿಗ, ಚರ್ಮಕಾರ, ಇನ್ನಿತರ ಶೂದ್ರರಿಗೆ ಇತಿಹಾಸದಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ” ಶೆಟ್ಟರ್ ಎಂದು ಹೇಳುವುದು ಗಮನಾರ್ಹ. ಇದರ ಜೊತೆಗೆ, ವೈದಿಕ ಚರಿತ್ರೆಗೆ ಉತ್ತರವಾಗಿ ಅವರು ಕಟ್ಟಿಕೊಡುವ ಅವೈದಿಕ ನೋಟಕ್ರಮವುಳ್ಳ ಕಥನವನ್ನು ಅವರ ಇಲ್ಲಿಯವರೆಗಿನ ಎಲ್ಲ ಕನ್ನಡ ಬರೆಹಗಳಲ್ಲೂ ಕಾಣಬಹುದು.
ಶೆಟ್ಟರ್ ಅವರ ಸಂಶೋಧನಾ ಅಧ್ಯಯನ ಮಾದರಿ ಅವರ ತಲೆಮಾರಿನ ಸಂಶೋಧಕರಾದÀ ಕಲಬುರ್ಗಿ, ಚಿದಾನಂದಮೂರ್ತಿ, ಮುಂತಾದವರಿಗಿಂತ ಹಾಗೂ ಅವರ ಹಿರಿಯ ತಲೆಮಾರಿನ ಸಂಶೋಧಕಾರಾದ ಗೋವಿಂದ ಪೈ, ಆರ್. ನರಸಿಂಹಾಚಾರ್, ಎಂ.ವಿ. ಸೀತಾರಾಮಯ್ಯ, ಮುಳಿಯ ತಿಮ್ಮಪ್ಪಯ್ಯ, ಡಿ.ಎಲ್.ನರಸಿಂಹಾಚಾರ್ ಅವರ ಮಾದರಿಗಳಿಗಿಂತ ಹೇಗೆ ಭಿನ್ನ ಎಂಬುದನ್ನು ಇಂತಹ ನೋಟಕ್ರಮಗಳ ಮೂಲಕ ಗ್ರಹಿಸಲು ಸಾಧ್ಯ.
‘ಪ್ರಾಕೃತ ಜಗದ್ವಲಯ’ವನ್ನು ಪ್ರವೇಶಿಸುವ ಮುನ್ನ
ಪ್ರಸುತ್ತ ಕೃತಿ, ‘ಪ್ರಾಕೃತ ಜಗದ್ವಲಯ: ಪ್ರಾಕೃತ, ಕನ್ನಡ, ಸಂಸ್ಕೃತ ಭಾಷೆಗಳ ಅನುಸಂಧಾನ’ ಗಾತ್ರದಲ್ಲಿ ಶೆಟ್ಟರ್ ಅವರ ಹಿಂದಿನ ಎರಡು ಕೃತಿಗಳಿಗಿಂತ ಕಿರಿದಾದರೂ, ಅದು ಹುಟ್ಟುಹಾಕಲಿರುವ ಚರ್ಚೆ, ಹಾಗೂ ಅದು ನೀಡಲಿರುವ ಉತ್ತರ ಅನೇಕ ಕಾರಣಗಳಿಂದ ಕನ್ನಡಕ್ಕೆ ಮಹತ್ವದ್ದಾಗಲಿದೆ.
ಈ ಕೃತಿ ಹುಟ್ಟುಹಾಕಲಿರುವ ಚರ್ಚೆಯ ಬಗ್ಗೆ ಪ್ರಸ್ತಾಪಿಸಲು ಕಾರಣ, ಕಳೆದ ಸಹಸ್ರಮಾನದ ಕೊನೆಯಲ್ಲಿ ಅಮೆರಿಕದ ದಕ್ಷಿಣ ಏಶಿಯಾ ಅಧ್ಯಯನದ ವಿದ್ವಾಂಸ ಶೆಲ್ಡನ್ ಪೊಲಾಕ್ ಪ್ರಕಟಿಸಿದ ತಮ್ಮ ‘ದ ಕಾಸ್ಮೊಪಾಲಿಟನ್ ವೆರ್ನಾಕ್ಯುಲರ್’(1988) ಹಾಗೂ ‘ಕಾಸ್ಮೊಪಾಲಿಟನ್ ಎಂಡ್ ವೆರ್ನಾಕ್ಯುಲರ್ ಬಿಫೋರ್ ಮಾಡರ್ನಿಟಿ: ಕಲ್ಚರ್ ಎಂಡ್ ಪವರ್ ಇನ್ ಸೌಥ್ ಏಶಿಯಾ ಟು 1500’ ಲೇಖನಗಳ ಕನ್ನಡಾನುವಾದ ‘ವಿಶ್ವಾತ್ಮಕ ದೇಶಭಾಷೆ’(2003) ಹುಟ್ಟುಹಾಕಿದ ಒಂದು ದೊಡ್ಡ ಚರ್ಚೆ. ಪೊಲಾಕ್‍ರ ‘ದಿ ಲ್ಯಾಂಗ್ವೇಜ್ ಆಫ್ ದಿ ಗಾಡ್ಸ್ ಇನ್ ದಿ ವಲ್ರ್ಡ್ ಆಫ್ ಮೆನ್’(2006) ಪುಸ್ತಕದಲ್ಲಿ ಮೇಲೆ ಹೆಸರಿಸಿದ ಲೇಖನಗಳ ವಿಸ್ತøತ ರೂಪ ಕಾಣಬಹುದು.
ಪೊಲಾಕ್ ಅವರ ಕ್ರಿ.ಶ.ದ ಎರಡು ಸಹಸ್ರಮಾನಗಳ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ರಾಜಕೀಯ ಪ್ರಕ್ರಿಯೆಯನ್ನು ಗ್ರಹಿಸುವುದು “ವಿಶ್ವಾತ್ಮಕತೆ”(Cosmopolitanism) ಹಾಗೂ “ದೇಶಭಾಷೀಯತೆ”(Vernacularism)ಗಳ ಮೂಲಕ. ಅವರ ಪ್ರಮೇಯ “ಸಂಸ್ಕೃತ ವಿಶ್ವದ ರಚನೆ ಮತ್ತು ವಿಘಟನೆ”ಗೆ ಸಂಬಂಧಿಸಿದ್ದಾದರೆ, ಶೆಟ್ಟರ್ ಅವರ ಕಥನ ಪ್ರಾಕೃತ ಜಗದ್ವಲಯದ್ದು. ಈ ವಲಯ ಬಹುತ್ವಗಳಿಂದ ಕೂಡಿದ ಭಾಷಾನುಸಂಧಾನದ ವಲಯ. ಹಾಗಾಗಿಯೇ, ಇಲ್ಲಿ ಕೇವಲ ಒಂದು ಪ್ರಾಕೃತ ಕಂಡು ಬರುವುದಿಲ್ಲ. “ಪ್ರಾಕೃತಂಗಳ್” ಕಂಡುಬರುತ್ತವೆ. ಕವಿರಾಜಮಾರ್ಗಕಾರ ಕಂಡಂತಹ “ಕನ್ನಡಂಗಳ್” ಇದಕ್ಕೆ ಮಾದರಿ. ಹಾಗಾಗಿಯೇ, ಶೆಟ್ಟರ್ ಅವರು ಪೊಲಾಕ್ ಅವರ ಸಂಸ್ಕೃತ “ವಿಶ್ಮಾತ್ಮಕತೆ”ಗೆ ಎದುರಾಗಿ “ಪ್ರಾಕೃತ ಜಗದ್ವಲಯ”ವನ್ನು ಪರಿಚಯಿಸುತ್ತಾರೆ. ಈ ಜಗದ್ವಲಯ ಬೌದ್ಧ, ಜೈನ ಹಾಗೂ ಹಿಂದೂ(ಈ ಪದವನ್ನು ಮೊದಲು ಬಳಸಿದ್ದೇ 19ನೇ ಶತಮಾನದಲ್ಲಿ ಎಂದು ‘ಪೃಥ್ವಿಯಲ್ಲೊದಗಿದ ಘಟವು’ ಕೃತಿಯನ್ನು ರಚಿಸಿದ್ದ ಚರಿತ್ರೆಕಾರ ಮನು ದೇವದೇವನ್ ತಮ್ಮ ಹೊಸ ಕೃತಿ ‘ಎ ಪ್ರೀಹಿಸ್ಟರಿ ಆಫ್ ಹಿಂದೂಯಿಸಮ್’ ನಲ್ಲಿ ನಿರೂಪಿಸಿದ್ದಾರೆ) ಮತಗಳೊಂದಿಗೆ ಹೇಗೆ ತಳಕುಹಾಕಿಕೊಂಡಿತ್ತು ಎಂಬುದನ್ನು ಶೋಧಿಸುವ ಮೂಲಕ ದೊಡ್ಡ ಸಂಶೋಧನಾ ಮಹತ್ವಾಕಾಂಕ್ಷೆಯನ್ನು ತೋರುತ್ತಾರೆ.
ಕ್ರಿ.ಶ. ಎರಡನೇ ಶತಮಾನದಲ್ಲಿ ರೂಪುಗೊಂಡಿದ್ದ “ಸಂಸ್ಕೃತ ವಿಶ್ವಾತ್ಮಕತೆ”ಗೂ ಮುಂಚಿನ ಕಾಲದ ಹಾಗೂ ಒಂಭತ್ತನೇ ಶತಮಾನದಲ್ಲಿ ಆರಂಭಗೊಂಡ “ದೇಶಭಾಷೀಯತೆ”ಯವರೆಗೂ ಪ್ರಾಕೃತ ಸಾಗಿಬಂದ ಹಾದಿಯನ್ನು ಶೆಟ್ಟರ್ ಅವರ ಪ್ರಸ್ತುತ ಕೃತಿ ಪರಿಚಯಿಸುತ್ತದೆ. ಸಂಸ್ಕೃತ ವಿಶ್ವಾತ್ಮಕತೆಯ ಬುನಾದಿಗಳಲ್ಲೊಂದು ‘ಕಾವ್ಯ’ ಎನ್ನುವುದು ನಿರ್ವಿವಾದ. 820 ಪುಟಗಳಷ್ಟು ಹರಡಿಕೊಂಡಿರುವ 25 ಪ್ರಬಂಧಗಳ ಸಂಪಾದಿತ ಕೃತಿಯಾದ ‘ಇನ್ನೋವೇಶನ್ಸ್ ಅಂಡ್ ಟರ್ನಿಂಗ್ ಪಾಯಿಂಟ್: ಹಿಸ್ಟರಿ ಆಫ್ ಕಾವ್ಯ ಲಿಟರೇಚರ್’ ಈ ಬಗ್ಗೆ ಇಲ್ಲಿಯವರೆಗೆ ಬಂದಿರುವ ಬೃಹತ್ ಕೃತಿಗಳಲ್ಲೊಂದು. ಆದರೆ, ಈ ಮಹಾಪರಂಪರೆಗೆ ಪ್ರಾಕೃತದ ಕೊಡುಗೆಯನ್ನು ಮಾತ್ರ ಗಂಭೀರವಾಗಿ ಅಧ್ಯಯನ ಮಾಡಲಾಗಿಲ್ಲ ಎಂದೇ ಹೇಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶೆಟ್ಟರ್ ಅವರ ಪ್ರಸ್ತುತ ಕೃತಿಯಲ್ಲಿ ಪ್ರಾಸಂಗಿಕವಾಗಿ ಚರ್ಚೆಮಾಡಿರುವುದನ್ನು ಕಾಣಬಹುದು. ಶೆಟ್ಟರ್ ಅವರು ಈ ಕೃತಿಯಲ್ಲಿ ಪ್ರಾಕೃತ ಆಡುಭಾಷೆಯಾಗಿ, ಕೃತಕ ಭಾಷೆಯಾಗಿ, ಸಾಹಿತ್ಯ ಭಾಷೆಯಾಗಿ, ದೇಶಭಾಷೆಯಾಗಿ, ರಾಷ್ಟ್ರೀಯ ಭಾಷೆಯಾಗಿ, ಕೊನೆಗೆ ಜಗದ್ವಲಯವನ್ನು ನಿರ್ಮಿಸಿಕೊಳ್ಳುವವರೆಗಿನ ಪಯಣವನ್ನು ಶಾಸನಗಳಿಂದ ಹೊಕ್ಕುತೆಗೆದ ಸಾಕ್ಷ್ಯಾಧಾರಗಳನ್ನಿಟ್ಟುಕೊಂಡು ಕಥನ ಮಾದರಿಯಲ್ಲಿ ಕಟ್ಟಿಕೊಡುವುದು ಪ್ರಶಂಸನೀಯ.
‘ವಿಶ್ವಾತ್ಮಕ ದೇಶಭಾಷೆ’ಗೆ ಹಿನ್ನುಡಿ ಬರೆಯುತ್ತ, ಶೆಲ್ಡನ್ ಪೊಲಾಕ್‍ರ ಶಿಷ್ಯ ಹಾಗೂ ಡಿ.ಆರ್.ನಾಗರಾಜರ ಬರೆಹಗಳನ್ನು ‘ಲಿಸನಿಂಗ್ ಟು ದಿ ಲೂಮ್: ಎಸ್ಸೇಸ್ ಆನ್ ಲಿಟರೇಚರ್, ಪೊಲಿಟಿಕ್ಸ್ ಅಂಡ್ ವಾಯ್‍ಲೆನ್ಸ್’(2012) ಎಂಬ ಹೆಸರಿನಲ್ಲಿ ಸಂಪಾದಿಸಿದ ಚರಿತ್ರೆಕಾರ ಪೃಥ್ವಿದತ್ತ ಚಂದ್ರಶೋಭಿಯವರು ಇವರಿಬ್ಬರ ಚಿಂತನಾ ಮಾರ್ಗಗಳ ಬಗ್ಗೆ ಚರ್ಚಿಸುತ್ತಾರೆ. ಆಸಕ್ತಿಕರವಾದ ವಿಷಯವೆಂದರೆ, ಅವರು ಪೊಲಾಕ್ ವಾದದ ಬಗ್ಗೆ ಅಸಮ್ಮತಿ ವ್ಯಕ್ತಪಡಿಸುತ್ತ, ಡಿ. ಆರ್. ನಾಗರಾಜರ ವಾದವನ್ನು ಎತ್ತಿಹಿಡಿಯುತ್ತಾರೆ. ಬಹುಮುಖ್ಯವಾಗಿ, ಪೊಲಾಕ್‍ರ ‘ಚರಿತ್ರೆಯ ಸಾಮಥ್ರ್ಯದ ಬಗ್ಗೆ ನಂಬಿಕೆ’ ಹಾಗೂ ‘ಜ್ಞಾನದ ಅನಿಶ್ಚಿತತೆಯ ಬಗ್ಗೆ ನಿರ್ಲಕ್ಷ್ಯ’—ಇವೆರಡೂ ಅಂಶಗಳ ಬಗ್ಗೆ ತಕರಾರನ್ನೆತ್ತುತ್ತಾರೆ. ಡಿ. ಆರ್.ನಾಗರಾಜರ ಸಾಹಿತ್ಯ ಸಂಸ್ಕೃತಿಯ ಪ್ರಾರಂಭಗಳ ಬಗೆಗಿನ ಅನಿಶ್ಚಿತತೆಯು ನಮ್ಮ ಅರಿವನ್ನು ಹೇಗೆ ಬದಲಿಸಬಲ್ಲದು ಎಂಬ ಕುರಿತು ಇರುವ ಎಚ್ಚರವನ್ನು ಮೆಚ್ಚುತ್ತಾರೆ. ಪೊಲಾಕ್ ಸಾಹಿತ್ಯ ಚರಿತ್ರೆಯ ಸಮಸ್ಯೆಗಳಿಗೆ ಕನ್ನಡದ ವಿದ್ವಾಂಸರು ಒದಗಿಸಿದ ಉತ್ತರಗಳನ್ನು ಒಪ್ಪಿ, ಲಭ್ಯವಿರುವ ಆಧಾರ ಮತ್ತು ಪಠ್ಯಗಳಿಂದಲೇ ಒಂದು ವಿರಾಟ್ ಕಥನವನು ಸೃಜಿಸುವ ವಿಧಾನಗಳಿಂದ ಪಡೆಯಬಹುದಾದ ಕಥನಗಳ ಸ್ವರೂಪದ ಬಗ್ಗೆ ಹೇಳುತ್ತಲೇ, ಚರಿತ್ರಾಶಾಸ್ತ್ರದಲ್ಲಿ ತಮಗಿರುವ ತರಬೇತಿಯ ಮೂಲಕ ಚರಿತ್ರೆಯ ಪರಿಕಲ್ಪನೆ ಹಾಗೂ ವಿಧಾನಗಳ ಬಗ್ಗೆ ಎಚ್ಚರವಹಿಸದಿದ್ದರೆ, ಸಂಸ್ಕೃತಿಯ ಪ್ರಾರಂಭದ ಬಗೆಗಿನ ಆಲೋಚನೆಗಳು ಮತ್ತು ಕಥನಗಳು ಆತಂಕಕೇಂದ್ರಿತ ರಾಜಕಾರಣಕ್ಕೆಡೆ ಮಾಡಿಕೊಳ್ಳುವ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಇದಕ್ಕೆ ಪೂರಕವಾಗಿ ಇಲ್ಲಿ ಶೆಲ್ಡನ್ ಪೊಲಾಕ್ ಸಂಪಾದಿತ ಕೃತಿಯಾದ ‘ಲಿಟರರಿ ಕಲ್ಚರ್ಸ್ ಇನ್ ಹಿಸ್ಟರಿ: ರಿಕನ್ಸ್‍ಟ್ರಕ್ರ್ಶನ್ ಫ್ರಮ್ ಸೌತ್ ಏಶ್ಯಾ’(2003) ಹಾಗೂ ವಿಶೇಷವಾಗಿ ಅದರÀಲ್ಲಿ ಕಂಡುಬರುವ ಡಿ. ಆರ್. ನಾಗರಾಜರ ‘ಕ್ರಿಟಿಕಲ್ ಟೆನ್ಶನ್ಸ್ ಇನ್ ದಿ ಹಿಸ್ಟರಿ ಆಫ್ ಕನ್ನಡ ಲಿಟರರಿ ಕಲ್ಚರ್’ ಲೇಖನವನ್ನು ಉಲ್ಲೇಖಿಸಲೇಬೇಕು. ಇದು ‘ಲಿಸನಿಂಗ್ ಟು ದಿ ಲೂಮ್’ನಲ್ಲಿ ಕೂಡ ಸೇರಿದೆ. ಈ ಪ್ರಬಂಧವನ್ನು ಇಲ್ಲಿ ಹೆಸರಿಸಲು ಕಾರಣವಿದೆ. ನಾಗರಾಜರು ಈ ಪ್ರಬಂಧದಲ್ಲಿ ಹಲ್ಮಿಡಿ ಶಾಸನದ ಉಗಮದ ಸಂದರ್ಭವನ್ನು ಬರೆಹ, ಸಾಹಿತ್ಯೀಕರಣ ಹಾಗೂ ಶಾಸನಗಳ ನಡುವಿನ ಸಂಬಂಧಗಳ ವಿಸ್ತೃತ ಚರ್ಚೆಯ ಹಿನ್ನೆಲೆಯಲ್ಲಿ ನೋಡಬೇಕೆಂದು ಸೂಚಿಸಿದ್ದರು. ಹಾಗೆ ಹೇಳುವುದಾದರೆ, ನಾಗರಾಜರು ವಿಮರ್ಶಕರಾಗಿದ್ದರೇ ಹೊರತು ಶೆಟ್ಟರ್ ಅವರ ಹಾಗೆ ನುರಿತ ಸಂಶೋಧಕರಾಗಿರಲಿಲ್ಲ. ಆದರೂ, ಅವರು ಕನ್ನಡ ಸಂಶೋಧನೆ ಸಾಗಬೇಕಾದ ಹಾದಿಯನ್ನು ಸ್ಪಷ್ಟವಾಗಿ ಸೂಚಿಸಿದ್ದಂತೂ ಹೌದು. ಶೆಟ್ಟರ್ ಅವರ ಇಲ್ಲಿಯವರೆಗಿನ ಆಧುನಿಕಪೂರ್ವ ಕನ್ನಡ ಕುರಿತ ಸಂಶೋಧನೆ ಇದೇ ಜಾಡಿನಲ್ಲಿ ಸಾಗಿರುವುದು ಕುತೂಹಲಕರ ಅಂಶ. ಕರ್ನಾಟಕವೆಂಬ ಭೂಸಾಂಸ್ಕೃತಿಕ ಪ್ರದೇಶದಲ್ಲಿ ಸಾರ್ವಜನಿಕ ವಲಯಕ್ಕೆ ಸಂಬಂಧಿಸಿದಂತೆ ದೊರೆವ ಮೊದಲ ದಾಖಲೆಯೆಂದರೆ ಅದು ಶಾಸನವೇ ಎಂದು ನಾಗರಾಜ್ ತಮ್ಮ ಲೇಖನದಲ್ಲಿ ಬರೆದಿದ್ದರು. ಶಾಸನಗಳನ್ನು ಅವರು ‘ಸಾರ್ವಜನಿಕ ಕಥನಗಳು’(ಅಥವಾ ಲೋಕ ಕಥನಗಳು ?) ಎಂದು ಕರೆದಿದ್ದರು. ತಮ್ಮ ಬರೆಹದ ಅಧ್ಯಯನ ವಿಷಯವಾಗಿ ಕ್ರಿ.ಶ. ಎಂಟು ಅಥವಾ ಒಂಭತ್ತನೇ ಶತಮಾನಕ್ಕೆ ಸೇರಿರಬಹುದಾದ ಕಾಲನಿರ್ಣಯವಾಗದ ನಾಲ್ಕು ಶಾಸನಗಳನ್ನು—ಶ್ರವಣ ಬೆಳ್ಗೊಳದ ಮೂರು ಹಾಗೂ ಬದಾಮಿಯ ಒಂದು—ಆಯ್ದುಕೊಂಡಿದ್ದರು. ಈ ಕಾಲದಲ್ಲೇ ಕನ್ನಡದ ಮೊದಲ ಶಾಸನೇತರ ಲಿಖಿತ ಪಠ್ಯವಾದ ಕವಿರಾಜಮಾರ್ಗ ರಚನೆಯಾದದ್ದು. ನಾಗರಾಜರು ಸಾರ್ವಜನಿಕ ಕಥನಗಳಾಗಿ ಹಾಗೂ ಸಾಹಿತ್ಯಕ ಕೃತಿಗಳಾಗಿ ಶಾಸನಗಳ ನಡುವೆ ಇದ್ದಿರಬಹುದಾದ ಮಹತ್ವದ ವಿನಿಮಯವನ್ನು ಶೋಧಿಸುವ ಪ್ರಯತ್ನ ಮಾಡಿದ್ದರು. ಕಾರಣ, ಇದು ಐದು ಹಾಗೂ ಹನ್ನೆರಡನೇ ಶತಮಾನದ ನಡುವೆ ನಡೆದ ಬರೆಹ ಸಂಪ್ರದಾಯದ ವಿರಾಟ್‍ಕಲ್ಪನೆಯನ್ನು ರೂಪಿಸುವುದಕ್ಕೆ ದೊಡ್ಡ ತೊಡಕನ್ನುಂಟುಮಾಡಿತ್ತು. ನಾಗರಾಜರಿಗೆ ಶಾಸನಗಳು ಕೇವಲ ರಾಜನೀತಿಯ ಹೇಳಿಕೆಗಳಾಗದೆ, ಸಾಮಾಜಿಕ ವ್ಯವಸ್ಥೆಯ ಸೂಚಕಗಳಾಗಿದ್ದವು. ಶಾಸನಗಳು ತಿಳಿಯಪಡಿಸುವ ರಾಜಕೀಯ ಹಾಗೂ ನೈತಿಕ ವರ್ತನೆಯ ಮಾದರಿಗಳು ಸಮುದಾಯಗಳಿಗೆ ಸಂಸ್ಕೃತ ಹಾಗೂ ಪ್ರಾಕೃತ ಭಾಷಾ ದಾಖಲೆಗಳಿಂದ ಅದಾಗಲೇ ಪರಿಚಿತವಾಗಿತ್ತು. ನಾಗರಾಜರು ಕವಿ ಶಾಸನ ಬರೆಹಗಾರ ಹಾಗೂ ಸಾಹಿತ್ಯಕ ಕಲಾವಿದನಾಗಿ ವರ್ತಿಸುವುದರ ನಡುವಣ ವ್ಯತ್ಯಾಸವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದರು. ಈ ಬರೆಹದಲ್ಲಿ ನಾಗರಾಜರು ಸಿದ್ಧಾಂತದ ರೂಪದಲ್ಲಿ ಶೋಧಿಸಲು ಯತ್ನಿಸಿದ ಸಾರ್ವಜನಿಕ ಕಥನಗಳು ಹಾಗೂ ವಿರಾಟ್ ಕಲ್ಪನೆ, ಸಾಹಿತ್ಯಕ ಸಂಸ್ಕೃತಿಯ ಆಧಾರವಾಗಿ ಒಮ್ಮತಾಭಿಪ್ರಾಯ, ಸಾಹಿತ್ಯಕ ಕಲ್ಪನೆ, ಸಾಮ್ರಾಜ್ಯ ಹಾಗೂ ಸೆಕ್ಯುಲರ್ ಕಾವ್ಯಮೀಮಾಂಸೆ ಮುಂತಾದ ವಿಷಯಗಳನ್ನು ಶೆಟ್ಟರ್ ಅವರು ಪ್ರಾಕೃತ ಜಗದ್ವಲಯವನ್ನು ಕೇಂದ್ರವಾಗಿರಿಸಿಕೊಂಡು, ಶಾಸನಗಳ ಸಾಕ್ಷ್ಯಾಧಾರಗಳ ಮೂಲಕವೇ ತಮ್ಮ ಚಾರಿತ್ರಿಕ ವಿರಾಟ್ ಕಲ್ಪನೆಯೊಂದಿಗೆ ಮೀಮಾಂಸೆಯೊಂದನ್ನು ಹೆಣೆಯುವುದನ್ನು ಕಾಣಬಹುದು. ಅದು ಹೇಗೆ ಎಂಬುದನ್ನು ಪ್ರಾಕೃತ ಜಗದ್ವಲಯದ ಒಳಹೊಕ್ಕು ನೋಡುವುದು ಮಾತ್ರವಲ್ಲ, ಪ್ರಾಕೃತ ಜಗದ್ವಲಯದಾಚೆಗಿನ ವಲಯವನ್ನು ಕೂಡ ತಿಳಿಯುವ ಪ್ರಯತ್ನವನ್ನು ಇಲ್ಲಿ ಕಾಣಬಹುದು.
‘ಪ್ರಾಕೃತ ಜಗದ್ವಲಯ’ದ ಒಳಹೊರಗೆ: ಭಾಷಾಶಾಸ್ತ್ರೀಯ ಹಾಗೂ ಅನುವಾದಶಾಸ್ತ್ರೀಯ ನೆಲೆಗಳು
ಶೆಟ್ಟರ್ ಅವರು ‘ಸಮಾಜಮುಖಿ’ (ಜನವರಿ 2018) ಮಾಸಿಕ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ “ಪ್ರಾಕೃತ-ಕನ್ನಡ-ಸಂಸ್ಕೃತ ಇವುಗಳ ನಂಟಿನ ಬಗ್ಗೆ ಇನ್ನಷ್ಟು ತಿಳುವಳಿಕೆ ಬರಬೇಕಿದೆ. ಸಾಹಿತ್ಯ ಚರಿತ್ರೆಯಲ್ಲಿ ಏನೇ ಕಂದರಗಳಿದ್ದರೂ ಅವುಗಳನ್ನು ತುಂಬಲು ಸಾಧ್ಯವಾಗುವುದಿಲ್ಲ. ಆದರೆ ಭಾಷೆ ಸಾಹಿತ್ಯವನ್ನು ನಿರೂಪಿಸಿದರೂ, ಭಾಷೆಯ ಬೆಳವಣಿಗೆ ಬೇರೆ. ಅದರ ಇತಿಹಾಸವನ್ನು ಇದುವರೆಗೆ ಆಸಕ್ತಿಯಿಂದ ನೋಡಿಲ್ಲ. ಅಕ್ಷರ ಮತ್ತು ಭಾಷೆಗಳ ಬಗ್ಗೆ ಇರುವ ವಸ್ತುನಿಷ್ಠ ಸಂಗತಿಗಳನ್ನು ಸಾಹಿತ್ಯ ಚರಿತ್ರೆಯೊಳಗೆ ತರುವ ಮಾದರಿಯೊಂದನ್ನು ನೀಡಲು ಇಲ್ಲಿ ಪ್ರಯತ್ನಿಸಿದ್ದೇನೆ” ಎಂದು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಸಾಹಿತ್ಯ ಚರಿತ್ರೆಯೊಳಗೆ ಬರೆಹಶಾಸ್ತ್ರದ ಜೊತೆಜೊತೆಗೆ ಅವರು ತರುವ ಭಾಷಾಶಾಸ್ತ್ರೀಯ, ಅನುವಾದಶಾಸ್ತ್ರೀಯ, ಸಮಾಜಶಾಸ್ತ್ರೀಯ, ರಾಜ್ಯಶಾಸ್ತ್ರೀಯ, ಧರ್ಮಶಾಸ್ತ್ರೀಯ ಅಂಶಗಳು ಕನ್ನಡ ಜ್ಞಾನಲೋಕಕ್ಕೆ ದೊಡ್ಡಕೊಡುಗೆಯನ್ನು ನೀಡಬಲ್ಲವು. ಇಲ್ಲಿ ಕಾಣಸಿಗದಿರವುದು ಅರ್ಥಶಾಸ್ತ್ರೀಯ ಅಂಶಗಳು ಮಾತ್ರ ಎಂದು ಹೇಳಿದರೆ ತಪ್ಪಾಗಲಾರದು. ಭಾಷಾಶಾಸ್ತ್ರೀಯ ಹಾಗೂ ಅನುವಾದಶಾಸ್ತ್ರೀಯ ಹಿನ್ನೆಲೆಯಲ್ಲಿ ಕೆಲವಿಷಯಗಳನ್ನಿಲ್ಲಿ ಚರ್ಚಿಸಬೇಕು. ಮೊದಲಿಗೆ, ಶೆಟ್ಟರ್ ಅವರು ಚರಿತ್ರೆಯ ಕಥನದಲ್ಲಿ ಭಾಷಾಶಾಸ್ತ್ರೀಯ ಪರಿಕಲ್ಪನೆಗಳನ್ನು ಬಳಸಿಕೊಳ್ಳುವ ರೀತಿ ಕನ್ನಡದ ಮಟ್ಟಿಗೆ ಹೊಸತು.
ಇತ್ತೀಚೆಗೆ ತಾನೇ ಪ್ರಕಟಗೊಂಡಿರುವ ಆಂಡ್ರ್ಯೂ ಎಲಿಯಟ್ ಅವರ ‘ದಿ ಲ್ಯಾಂಗ್ವೇಜ್ ಆಫ್ ದಿ ಸ್ನೇಕ್ಸ್: ಪ್ರಾಕೃತ್, ಸಂಸ್ಕೃತ್, ಅಂಡ್ ದಿ ಲ್ಯಾಂಗ್ವೇಜ್ ಆರ್ಡರ್ ಆಫ್ ಪ್ರೀಮಾಡರ್ನ್ ಇಂಡಿಯ’(2017) ಕೃತಿಯಲ್ಲಿ ಆನಂತರದ ಅವಧಿಯಲ್ಲಿ ಪ್ರಾಕೃತದ ಬಗ್ಗೆ ವಿಶೇಷವಾಗಿ ಬೆಳಕು ಚೆಲ್ಲುತ್ತದೆ. ಈ ಕೃತಿಯಲ್ಲಿ ಎಲಿಯಟ್ ಭಾಷಾಶಾಸ್ತ್ರದ ಹಿನ್ನೆಲೆಯಲ್ಲಿ ಪ್ರಾಕೃತ ಭಾಷೆಯ ವಿಶ್ಲೇಷಣೆ ಮಾಡುವುದನ್ನು ಗಮನಿಸಬಹುದು. ಉದಾಹರಣೆಗೆ, ಪ್ರಸ್ತುತ ಪುಸ್ತಕದಲ್ಲಿ ‘ಭಾಷಾಕ್ರಮ’, ‘ಭಾಷಿಕ ವಲಯ’ ‘ಭಾಷಾನುಸಂಧಾನ’ ‘ಭಾಷಾ ಸ್ಥಿತ್ಯಂತರ’ ಹಾಗೂ ಇನ್ನು ಮುಂತಾದ ಭಾಷಾಶಾಸ್ತ್ರೀಯ ಪರಿಕಲ್ಪನೆಗಳು ಬಳಕೆಯಾಗಿರುವ ರೀತಿಯ ಬಗ್ಗೆ ಇಲ್ಲಿ ಪ್ರಸ್ತಾಪಿಸಲೇಬೇಕು.
ಎಲಿಯಟ್ ತಮ್ಮ ಪುಸ್ತಕದ ಮೊದಲನೇ ಅಧ್ಯಾಯ ‘ಪ್ರಾಕೃತ್ ಇನ್ ದಿ ಲ್ಯಾಂಗ್ವೇಜ್ ಆರ್ಡರ್ ಆಫ್ ಇಂಡಿಯ’ವನ್ನು ಮಿರ್ಜಾಖಾನ್ ತನ್ನ ‘ಗಿಫ್ಟ್ ಫ್ರಮ್ ಇಂಡಿಯ’ (1676) ಕೃತಿಯಲ್ಲಿ ಉಲ್ಲೇಖಿಸಿರುವ ಮುಘಲ್ ಚಕ್ರವರ್ತಿ ಔರಂಗಜೇಬ್‍ನ ಮಗನಿಗೆ ಹೇಳಿದ ಈ ಮಾತಿನ ಮೂಲಕ ಸ್ವಾರಸ್ಯಕರವಾಗಿ ಆರಂಭಿಸುತ್ತಾರೆ. “ಭಾರತದ ಜನರ ಭಾಷೆಗಳು ನೂರಾರು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಆದರೆ, ಸಹೃದಯರಿಗೆ ಪ್ರಿಯವಾಗುವಂತಹ ಕಾವ್ಯಾತ್ಮಕ ಕೃತಿಗಳ ರಚನೆಯಾದಂತಹ ಭಾಷೆಗಳು ಮೂರು ರೀತಿಯವು.” ಇದರ ಮೂಲಕ ಪ್ರಾಚೀನ ಭಾಷಾಕ್ರಮವಾದ ‘ಭಾಷಾತ್ರಯ’ವನ್ನು ಪರಿಚಯಿಸುತ್ತಾರೆ. ಇಂದಿಗೂ ಭಾರತದಲ್ಲಿ ತ್ರಿಭಾಷಾ ಸೂತ್ರವನ್ನೇ ಅನುಸರಿಸುವುದನ್ನು ಕಾಣಬಹುದು. ಮಿರ್ಝಾಖಾನ್ ಹೆಸರಿಸುವ ಮೂರು ಭಾಷೆಗಳು ಸಂಸ್ಕೃತ, ಪ್ರಾಕೃತ ಹಾಗೂ ದೇಶಭಾಷೆ(ಭಾಖಾ). ಶೆಟ್ಟರ್ ತಮ್ಮ ಪುಸ್ತಕದಲ್ಲಿ ಇದೇ ಭಾಷಾತ್ರಯದ ಮೂಲಕ ಪ್ರಾಕೃತ ಜಗದ್ವಲಯವನ್ನು ಎಲಿಯಟ್‍ಗಿಂತ ಭಿನ್ನವಾದ ಗ್ರಹಿಕೆಯೊಂದಿಗೆ ಕಟ್ಟಿಕೊಡುತ್ತಾರೆ. ಎಲಿಯಟ್ ಕುತೂಹಲ ಎಂಥದ್ದೆಂದರೆ, ಹಿಂದೆಂದೂ ಯಾರೂ ಪ್ರಾಕೃತವನ್ನು “ಹಾವುಗಳ ಭಾಷೆ” ಎಂದು ಕರೆದಿಲ್ಲವಾದ್ದರಿಂದ ಮಿರ್ಝಾಖಾನ್ ಹಾಗೆ ಕರೆಯಲು ಕಾರಣವೇನು ಎಂಬ ಪ್ರಶ್ನೆಯನ್ನು ಎತ್ತಿ ಸಂಶೋಧನೆ ನಡೆಸುವುದು. ಅದಿರಲಿ.
ಭಾಷಾಕ್ರಮವೆನ್ನುವ ಪರಿಕಲ್ಪನೆಯು ಭಾಷೆಗಳು ತಮ್ಮ ಸಾಂಸ್ಕೃತಿಕ-ಚಾರಿತ್ರಿಕ ಪರಿಧಿಯೊಳಗೆ ಬೀಳುವಂತಹ ಇತರೆ ಭಾಷೆಗಳನ್ನು ಹೊರತುಪಡಿಸಿ ವ್ಯವಹರಿಸಲು ಹೇಗೆ ಅಸಾಧ್ಯ ಎಂಬುದನ್ನು ಕೇಂದ್ರವಾಗಿರಿಸಿಕೊಂಡಿದೆ. ಹಾಗೆಯೇ, ಸಂಸ್ಕೃತಿ ಯೊಳಗೆ, ಭಾಷೆಗಳ ಅನುಕ್ರಮಣಿಕೆ ಹೇಗಿದೆ ಎಂಬುದನ್ನೂ ಸೂಚಿಸುತ್ತದೆ. ಆಧುನಿಕಪೂರ್ವ ಸಮಾಜಗಳಲ್ಲಿ ಗುಹೆಯ ಮೇಲೆ ಹೆಸರು ಕೊರೆಯುವುದರಿಂದ ಹಿಡಿದು ಕಾವ್ಯಮೀಮಾಂಸೆಯ ಪಠ್ಯ ರಚನೆಯ ತನಕ ಎಲ್ಲ ಸಾಂಸ್ಕೃತಿಕ ಆಚರಣೆಗಳು, ರೀತಿರಿವಾಜುಗಳಿಗೆ ಭಾಷಿಕ ಮಾನದಂಡಗಳೇನು ಎಂಬುದನ್ನು ತಿಳಿಸುತ್ತವೆ.
ಮಿರ್ಝಾಖಾನ್ ಪ್ರಾಕೃತವನ್ನು ವಿವರಿಸುವ ರೀತಿ ಹೀಗಿದೆ:
ಎರಡನೆಯದು, ಪರಾಕೀರ್ತ್. ಈ ಭಾಷೆಯನ್ನು ಹೆಚ್ಚಾಗಿ ರಾಜರು, ಮಂತ್ರಿಗಳು ಹಾಗೂ ಪ್ರಧಾನರ ಪ್ರಶಂಸೆಗೆ ಬಳಸಲಾಗುತ್ತದೆ. ಈ ಭಾಷೆ ಜಗತ್ತಿಗೆ ಸೇರಿದ್ದು. ಅಂದರೆ, ಭೂಮಿಯ ಕೆಳಗಿರುವ ಜಗತ್ತು; ಅವರು ಇದನ್ನು ಪಾತಾಳ್‍ಬಾಣಿ, ಹಾಗೆಯೇ ನಾಗ್-ಬಾಣಿ ಎಂದು ಕರೆಯುತ್ತಾರೆ. ಅಂದರೆ, ಕೆಳಗಿನವರಲ್ಲಿ ಕೆಳಗಿನವರ, ಪಾತಾಳದಲ್ಲಿ ವಾಸಿಸುವ ತಳಮೂಲದ ಸರೀಸೃಪಗಳ ಭಾಷೆ. ಈ ಭಾಷೆಯನ್ನು ಮೇಲೆ ಹೆಸರಿಸಿರುವ ಸಹೋಸ್ಕೀರ್ತ್, ಹಾಗೂ ಮುಂದೆ ಹೆಸರಿಸಲಾಗುವ ಭಾಖಾದ ಮಿಶ್ರಣ.
ಇಲ್ಲಿ ಪರಾಕೀರ್ತ್ ಎಂದರೆ ಪ್ರಾಕೃತ, ಹಾಗೂ ಸಹೋಸ್ಕೀರ್ತ್ ಎಂದರೆ, ಸಂಸ್ಕೃತ.
ವಿದ್ವಾಂಸರು ಶತಮಾನದ ಕಾಲ ಎತ್ತಿದ್ದ ಪ್ರಶ್ನೆಗಳಾದ ಪ್ರಾಕೃತದ ಅಥವಾ ಸಂಸ್ಕೃತದ “ವಾಸ್ತವ” ಏನಾಗಿತ್ತು, ಎಲ್ಲಿ, ಯಾವಾಗ, ಹಾಗೂ ಯಾರಿಗಾಗಿ ಈ ಭಾಷೆಗಳು ಅಸ್ತಿತ್ವದಲ್ಲಿದ್ದವು, ಅವುಗಳ ಅಸ್ತಿತ್ವದ ಬಗೆ ಏನು? ಅವು ಮೌಖಿಕವಾಗಿದ್ದವೇ ಅಥವಾ ಬರೆಹರೂಪದಲ್ಲಿದ್ದವೇ, ಪ್ರಾಕೃತಿಕವಾಗಿದ್ದವೇ ಅಥವಾ ಕೃತಕವಾಗಿದ್ದವೇ? ಅವುಗಳ ಚರಿತ್ರೆ ಏನು? ಅವು ಹೇಗೆ ಬೇರೆ ರೀತಿಯ ಚರಿತ್ರೆಗಳೊಂದಿಗೆ ಸಂಬಂಧ ಹೊಂದಿವೆ—ಉದಾಹರಣೆಗೆ, ಮೌಖಿಕ ಭಾಷೆಯಾಗಲಿ, ಅಥವಾ ಸಮಾಜ ಹಾಗೂ ರಾಜಕೀಯ, ಅಥವ ಸಾಹಿತ್ಯ ಹಾಗೂ ಕಲ್ಪನೆ? ಎಂದು ಎಲಿಯಟ್ ಕೇಳಿಕೊಳ್ಳುವ ಪ್ರಶ್ನೆಗಳು ಶೆಟ್ಟರ್ ಅವರನ್ನೂ ಕಾಡಿರುವುದು ನಿಜವಾದರೂ, ಅವರು ಎಲಿಯಟ್‍ಗಿಂತ ಹೆಚ್ಚು ಮಹತ್ವಾಕಾಂಕ್ಷೆಯನ್ನು ತೋರಿಸುವುದು ಈ ಮೊದಲು ಹೇಳಿದ ಹಾಗೆ, ಭಾಷೆ ಹಾಗೂ ಧರ್ಮದ ನಡುವಿನ ನಂಟನ್ನು ಶೋಧಿಸುವುದರಲ್ಲಿ.
ಎರಡನೆಯ ಪರಿಕಲ್ಪನೆ, ಭಾಷಾ ವಲಯಗಳು. ಆಧುನಿಕ ಭಾಷಾಶಾಸ್ತ್ರದಲ್ಲಿ ಸಾಮಾನ್ಯವಾಗಿ ಒಂದಕ್ಕೊಂದು ಸಂಬಂಧವಿಲ್ಲದ ಭಾಷೆಗಳು ಒಂದೇ ರೀತಿಯ ವ್ಯಾಕರಣಾತ್ಮಕ ಲಕ್ಷಣಗಳನ್ನು ಹಂಚಿಕೊಳ್ಳುವುದನ್ನು ಭಾಷಾ ವಲಯ ಎಂದು ಕರೆಯುತ್ತಾರೆ. ಶೆಟ್ಟರ್ ಅವರು ತಾವು ಬಳಸಿಕೊಂಡಿರುವ ಭಾಷಾತ್ರಯಗಳು ಕೇವಲ ಭಾಷಿಕವಾಗಿ ಮಾತ್ರವಲ್ಲ, ಭಾಷಾಚರಣೆಗಳು, ಸಾಹಿತ್ಯಕ, ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ ಸಂಕಥನಗಳ ಅಂತರಸಂಬಂಧವನ್ನು ಭಾಷಾಶಾಸ್ತ್ರೀಯವಾಗಿ ತಿಳಿದುಕೊಳ್ಳಲು ಈ ಪರಿಕಲ್ಪನೆ ಸಹಾಯಕ. ಪೊಲಾಕ್ ಹಾಗೂ ಎಲಿಯಟ್ ಈ ಪರಿಕಲ್ಪನೆಯನ್ನು ವಿವರಿಸಲು ಭಾರತದ ಅತ್ಯಂತ ಪ್ರಭಾವಶಾಲಿ ಪಠ್ಯವಾದ ದಂಡಿಯ ‘ಕಾವ್ಯಾದರ್ಶ’ವನ್ನು ಉದಾಹರಿಸುತ್ತಾರೆ. “ಅದಕ್ಕೆ ಕಾರಣ, ಈ ಪಠ್ಯದಲ್ಲಿ ಸಂಸ್ಕೃತ, ಪ್ರಾಕೃತ, ಅಪಭ್ರಂಶ, ಅಥವ ಮಿಶ್ರ.” ಆದರೆ, ಶೆಟ್ಟರ್ ‘ಕಾವ್ಯಾದರ್ಶ’ವನ್ನು ಆಧರಿಸಿದ ಕನ್ನಡದ ‘ಕವಿರಾಜಮಾರ್ಗ’ದ ಮೂಲಕ ಅದನ್ನು ನಿರೂಪಿಸುತ್ತಾರೆ.
‘ಕೆಳದಖ್ಖಣದ ಪ್ರಾಕೃತ ಭಾಷಾ ಬರಹ: ಬೌದ್ಧ ಮತ್ತು ಜೈನ ಕೊಡುಗೆ’ಯ ಅಧ್ಯಾಯದಲ್ಲಿ ಬುದ್ಧ, ವರ್ಧಮಾನ ಮಹಾವೀರ ಮತ್ತು ಮೊಖ್ಖಲಿ ಗೋಸಾಲರು ಕ್ರಿ.ಪೂ. ಆರನೆಯ ಶತಮಾನದ ಸುಮಾರಿನಲ್ಲಿ ತಮ್ಮ ಮತತತ್ವಗಳನ್ನು ಹಂಚಿಕೊಳ್ಳಲು ಅಶೋಕನಿಗಿಂತ ಕೆಲವು ಶತಮಾನಗಳ ಮುಂಚೆಯೇ ಪಶ್ಚಿಮೋತ್ತರ ಭಾರತದಲ್ಲಿ ಪ್ರಚಲಿತವಾಗಿದ್ದ ಪ್ರಾಕೃತ ಭಾಷೆಯನ್ನು ಆಯ್ಕೆಮಾಡಿಕೊಳ್ಳುವುದು ಅವರ ಭಾಷಾನೀತಿಯನ್ನು ಪರಿಚಯಿಸುತ್ತದೆ. ಭಾಷಾನೀತಿಗೆ ಇಡೀ ಪುಸ್ತಕದಲ್ಲಿ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ.
ಭಾಷಾ ಸ್ಥಿತ್ಯಂತರದ ಬಗ್ಗೆ ಒಂದೆರಡು ಉದಾಹರಣೆ ನೀಡುವುದಾದರೆ, “1. ಪ್ರಾಕೃತವನ್ನು ಸತತವಾಗಿ ಕಡೆಗಣಿಸುತ್ತಾ ಬಂದಿದ್ದ ವೈದಿಕರು ಕ್ರಿ.ಶ. ಮೂರು-ನಾಲ್ಕನೆಯ ಶತಮಾನಗಳಲ್ಲಿ ಇದೇ ಭಾಶೆಯನ್ನು ತಮ್ಮ ಅಭಿವ್ಯಕ್ತಿಗೆ ಆಯ್ಕೆ ಮಾಡಿಕೊಳ್ಳುವುದು; 2. ಮೊದಲಿನಿಂದಲೂ ಛಂದಃ ಮಾಧ್ಯಮವನ್ನು ದೂರವಿಟ್ಟು ವ್ಯವಹರಿಸಿದ್ದ ಬೌದ್ಧರು ಮತ್ತು ಜೈನರು ಈ ಮಾಧ್ಯಮದಲ್ಲಿ ವ್ಯವಹರಿಸಲಾರಂಭಿಸುವುದು.” ಕ್ರಿಸ್ತಶಕದಾರಂಭದಲ್ಲಿ ಬಹುತೇಕ ವೈದಿಕರಿಂದ ಪ್ರಾಕೃತವು ಮನ್ನಣೆ ಪಡೆದುಕೊಂಡರೆ, ಬಹುತೇಕ ಬೌದ್ಧ-ಜೈನರಿಂದ ಸಂಸ್ಕೃತವು ಮನ್ನಣೆ ಪಡೆದುಕೊಳ್ಳುವುದು. ಹಿಂದೊಮ್ಮೆ ಮತಗಳೊಡನೆ ಬೆಸೆದುಕೊಂಡಿದ್ದ ಭಾಷೆಗಳು ಕಾಲಾನಂತರದಲ್ಲಿ ಅದರಿಂದ ಬಿಡಿಸಿಕೊಂಡಿದ್ದಲ್ಲದೆ, ದೇವಭಾಷಾ, ದೈತ್ಯಭಾಷಾ ಭ್ರಮೆಯಿಂದ ಹೊರಬಂದದ್ದು ಉಲ್ಲೇಖನಾರ್ಹ. ಶೆಟ್ಟರ್ ಎತ್ತುವ ಎರಡು ಪ್ರಶ್ನೆಗಳು ಬಹಳ ಮುಖ್ಯವಾದವು: “(1) ಬೌದ್ಧರು ತಮ್ಮ ಆರಂಭಕಾಲದ ನಿಲುವನ್ನು ಬದಲಿಸಿ, ಸಂಸ್ಕೃತವನ್ನು ಸಂಕರ ಭಾಷೆಯನ್ನಾಗಿ ಪರಿವರ್ತಿಸಿ, ಸರ್ವಸಾಮಾನ್ಯರಿಗೆ ಅದನ್ನು ತಲುಪಿಸದಿದ್ದರೆ ಮೀಮಾಂಸಕಾರರ ಬಿಗಿಮುಷ್ಟಿಯಿಂದ ಸಂಸ್ಕೃತವು ಹೊರಬರುತ್ತಿತ್ತೇ? ಎಂಬುದು ಒಂದನೆಯದು; (2) ವೈದಿಕರ ಬಿಗಿಮುಷ್ಟಿಯಿಂದ ಹೊರಬಾರದಿದ್ದರೆ ಅದು ವಿಶ್ವದ ಉತ್ಕೃಷ್ಟ ಭಾಶೆ ಗಳಲ್ಲೊಂದೆನಿಸುತ್ತಿತ್ತೇ? ಎಂಬುದು ಎರಡನೆಯದು.”
ಭಾಷಾನುಸಂಧಾನವನ್ನು ಇಲ್ಲಿ ವಿಶೇಷವಾಗಿ ಚರ್ಚಿಸಬೇಕಿಲ್ಲ. ಕಾರಣ, ಇಡೀ ಕೃತಿಯೇ ಭಾಷಾನುಸಂಧಾನದ ಕುರಿತಾದುದಾಗಿದೆ. ಒಂದೇ ಸಾಲಲ್ಲಿ ಹೇಳುವುದಾದರೆ, ಪ್ರಾಕೃತ, ಕನ್ನಡ, ಸಂಸ್ಕೃತ ಭಾಷೆಗಳು ತಮ್ಮ ಬೆಳೆವಣಿಗೆಯ ಹಾದಿಯಲ್ಲಿ ಒಂದರಿಂದ ಮತ್ತೊಂದು ಹೇಗೆ ಪಡೆದುಕೊಂಡವು, ಆ ಮೂಲಕ ಒಂದು ಭಾಷೆ ಮತ್ತೊಂದನ್ನು ಹೇಗೆ ಬೆಳೆಸಿತು ಎಂಬುದಕ್ಕೆ ಇಡೀ ಪುಸ್ತಕದಲ್ಲಿ ಲೆಕ್ಕವಿಲ್ಲದಷ್ಟು ಉದಾಹರಣೆಗಳು ದೊರಕುತ್ತವೆ.
ಜೈನರು ಐದನೇ ಶತಮಾನದಲ್ಲಿ ಪ್ರಾಕೃತವನ್ನು ಕನ್ನಡಕ್ಕೆ ಸಮೀಕರಿಸಲು ಶುರುಮಾಡಿದವರು, ಆರನೇ ಶತಮಾನದ ವೇಳೆಗಾಗಲೇ ಕನ್ನಡದಲ್ಲಿ ಬರೆಯಲು ಶುರುಮಾಡಿ, ಎಂಟನೆಯ ಶತಮಾನದ ವೇಳೆಗೆ ಈ ಪ್ರಕ್ರಿಯೆ ಬಲಗೊಂಡಿದ್ದು; ಕ್ರಿ.ಶ. ಎಂಟನೆಯ ಶತಮಾನದಲ್ಲಿದ್ದ ಬಾದಾಮಿ ಚಾಳುಕ್ಯ ವಿಜಯಾದಿತ್ಯನ ಕಾಲದ ಶಾಸನಕವಿಯೊಬ್ಬ “ಚಾಳುಕ್ಯ ರಾಜಮಾತೆ ನಿರ್ಮಿಸಿದ ತ್ರಿಮೂರ್ತಿ ದೇವಾಲಯದ ವಿವರಗಳನ್ನೊದಗಿಸಲು ದ್ವಿಭಾಷಾ ಶಾಸನವೊಂದನ್ನು ರಚಿಸಿದ” ಎಂಬುದು; ಸಂಸ್ಕೃತದಲ್ಲಿ ಬರೆಯುತ್ತಿದ್ದವನು ‘ಪ್ರಾಕೃತ ಭಾಶೆಯ ವರ್ಣನೇತಾಣಿ’ ಎಂದು ಘೋಷಿಸಿ, ಮುಂದಿನ ಸಾಲನ್ನು ಕನ್ನಡದಲ್ಲಿ ಬರೆಯುವುದು ಭಾರತೀಯ ಭಾಷಾ ಚರಿತ್ರೆಯಲ್ಲಿಯೇ ಇದೊಂದು ಅಪೂರ್ವ ಚಾರಿತ್ರಿಕ ಘಟನೆ ಎಂದು ಶೆಟ್ಟರ್ ಹೇಳುವುದನ್ನು ಗಮನಿಸಬೇಕು. ಕಾರಣ, ಇಂತಹ ಸಮೀಕರಣ ಸಂಸ್ಕೃತವನ್ನು ಒಂದು ತಟ್ಟೆಯಲ್ಲಿ. ಉಳಿದ ಎಲ್ಲ ದೇಶೀಭಾಷೆಗಳನ್ನು ಪ್ರಾಕೃತ ಹೆಸರಿನಡಿಯಲ್ಲಿ ಮತ್ತೊಂದು ತಟ್ಟೆಯಲ್ಲಿಡುವುದು.
ಸು. 978ರಲ್ಲಿ ಗಂಗರಾಜ್ಯದ ಚಾವುಂಡರಾಯನು ಪ್ರಾಕೃತ ಪರಂಪರೆಗೆ ಕವಿರಾಜಮಾರ್ಗಕ್ಕಿಂತ ಹೆಚ್ಚು ಪ್ರಸ್ತುತವಾದ ಕೃತಿ ಎಂದು ಹೇಳಲಾಗುವ ಅರವತ್ತಮೂರು ಪುರಾತನರನ್ನು ವಸ್ತುವನ್ನಾಗಿಸಿಕೊಂಡಿರುವ ‘ತ್ರಿಷಷ್ಟಿಲಕ್ಷಣ ಮಹಾಪುರಾಣ’ವನ್ನು ರಚಿಸಿದ. ತ್ರಿಭಾಶಾಗದ್ಯಕವಿಯಾಗಿದ್ದ ಅವನು ‘ವೀರಮಾರ್ತಾಂಡೀ’ (ಪ್ರಾಕೃತ ‘ಗೊಮ್ಮಟಸಾರ’ದ ಕನ್ನಡ ಟೀಕು) ಮತ್ತು ‘ತ್ರಿಷಷ್ಟಿ ಲಕ್ಷಣ ಮಹಾಪುರಾಣ’ (ಚಾವುಂಡರಾಯ ಪುರಾಣ) ಎಂಬ ಎರಡು ಕನ್ನಡ ಕೃತಿಗಳನ್ನು, ‘ಚಾರಿತ್ರಸಾರ’ ಎಂಬ ಸಂಸ್ಕೃತ ಕೃತಿಯನ್ನು ರಚಿಸಿದ್ದನು. “ಚಾವುಂಡರಾಯನು ಮೊತ್ತಮೊದಲ ಕನ್ನಡ ಗದ್ಯಕವಿ ಮಾತ್ರವಾದಲ್ಲಿ ‘ತ್ರಿಷಷ್ಟಿ ಲಕ್ಷಣ ಮಹಾಪುರಾಣ’ವನ್ನು ದೇಶೀ ಭಾಶೆ ಗೆ ತಂದುಕೊಂಡ ಮೊತ್ತಮೊದಲ ಭಾರತೀಯನೂ ಆಗಿರುವನು. ಅಂದರೆ ಸುಮಾರು 10ನೆಯ ಶತಮಾನದವರೆಗೂ ಪ್ರಾಕೃತ ಮತ್ತು ಸಂಸ್ಕೃತ ಭಾಶೆಗಳಲ್ಲಿ ಮಾತ್ರ ಲಭ್ಯವಿದ್ದ ಶಲಾಕಾ ಪುರುಷರ ಜೀವನ ಚರಿತ್ರೆಯನ್ನು ಪ್ರಪ್ರಥಮ ಬಾರಿಗೆ ಕನ್ನಡ ಭಾಶೆಯಲ್ಲಿ ಒದಗಿಸಿಕೊಟ್ಟ ಹೆಗ್ಗಳಿಕೆ ಈತನದೆಂತಾಯಿತು” ಎಂದು ಹೇಳುವ ಶೆಟ್ಟರ್, “ಇದಾದ ನಂತರ ಬೇರೆ ಬೇರೆ ಭಾರತೀಯ ಭಾಷೆಗಳಲ್ಲಿ ಇಂತಹ ಪ್ರಯತ್ನಗಳು ನಡೆದಿದ್ದರೆ ಅವು ಈತನ ಗ್ರಂಥದೊಡನೆ ಹೇಗೆ ಹೋಲುವುವು, ಎಂಬುದು ಮತ್ತೊಂದು ಜಿಜ್ಞಾಸೆ” ಎಂಬ ಪ್ರಶ್ನೆಯನ್ನೆತ್ತುವ ಮೂಲಕ ತುಲನಾತ್ಮಕ ಅಧ್ಯಯನಕ್ಕೆಡೆ ಮಾಡಿಕೊಡುತ್ತಾರೆ.
19 ಕಥಾನಕಗಳ ಸಂಕಲನವಾದ ‘ವಡ್ಡಾರಾಧನೆ’ಯನ್ನು ರಚಿಸಿದ ಶಿವಕೋಟ್ಯಾಚಾರ್ಯ “ಆವರೆಗೂ ಪ್ರಾಕೃತ-ಸಂಸ್ಕೃತದಲ್ಲಿ ಮಾತ್ರ ಚಲಾವಣೆಯಲ್ಲಿದ್ದ ಆರಾಧನಾ ಗ್ರಂಥಗಳನ್ನು ಪ್ರಾದೇಶಿಕ ಭಾಶೆ ಗೆ ಮೊತ್ತಮೊದಲು ತಂದುಕೊಂಡ ಹಿರಿಮೆ” ಹೊಂದಿದ್ದಾನೆ ಎಂದು ಶೆಟ್ಟರ್ ಹೇಳುತ್ತಾರೆ. ಈ ಕೃತಿ ಆ ಪೂರ್ವಕಾಲದಲ್ಲಿದ್ದ ಪ್ರಾಕೃತ ಗ್ರಂಥವೊಂದರ ಅನುಕರಣೆಯಾಗಿದೆ.
ಭಾಷಾನೀತಿಯ ಹಾಗೆಯೇ ಕನ್ನಡದ ಈ ಆರಂಭಿಕ ಅನುವಾದಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದಲ್ಲಿ ಅಂದಿನ ಕಾಲದ ಅನುವಾದ ನೀತಿಗಳ ಬಗ್ಗೆ ಸಾಕಷ್ಟು ಒಳನೋಟಗಳು ಸಿಗುವ ಸಾಧ್ಯತೆಯಿದೆ. ಆರಂಭದಲ್ಲಿ ಹೇಳಿದ “…ಜ್ಞಾನ ಸಮಾಜಗಳು ಅನುವಾದ ಸಮಾಜಗಳಾಗಬೇಕು” ಎಂಬ ಯುನೆಸ್ಕೊ ಹೇಳಿಕೆಗೆ ಪೂರಕವಾಗಿ ಹೇಳುವುದಾದರೆ, ಜ್ಞಾನ ಸಮಾಜಗಳನ್ನು ಅರಿಯಲು ಅನುವಾದಗಳನ್ನು ಅರಿಯಬೇಕು. ಏಕೆಂದರೆ, ಬಹುತೇಕ ಭಾರತೀಯ ಭಾಷೆಗಳ ಚರಿತ್ರೆಯು ಆರಂಭಗೊಳ್ಳುವುದೇ ಅನುವಾದಗಳಿಂದ!
ಮುಗಿತಾಯಕ್ಕೂ ಮುನ್ನ
ಪೃಥ್ವಿ ಅವರು ಉಲ್ಲೇಖಿಸಿರುವ “ಸಾಹಿತ್ಯ ಚರಿತ್ರೆಕಾರರು, ಕನ್ನಡದ ಸಂದರ್ಭದಲ್ಲಿ ಪತ್ತೇದಾರನಂತೆ ಕೆಲಸ ಮಾಡುತ್ತ, ಕಳೆದುಹೋಗಿರುವ ಹಾಗೂ ಉಲ್ಲೇಖಿತವಾಗಿರುವ ಛಂದೋಪ್ರಕಾರಗಳು, ಬರಹಗಾರರು, ಬರವಣಿಗೆಗಳನ್ನು ಹುಡಕಬೇಕು ಮತ್ತು, ಹಾಗೆ ಸಿಗುವ ಹೊಸ ಕುರುಹುಗಳ ಮೂಲಕ, ಸಾಹಿತ್ಯಚರಿತ್ರೆಯ ಕಥನಗಳಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ” ಎಚ್ಚರವಹಿಸಬೇಕು ಎಂಬ ನಾಗರಾಜರ ವಾದವನ್ನು ಇಲ್ಲಿ ನೆನೆಯಬೇಕು. ಇದು ಶೆಟ್ಟರ್ ಅವರ ಸಂಶೋಧನಾ ವಿಧಾನಕ್ಕೆ ಹೇಳಿಮಾಡಿಸಿದಂತಿದೆ. ಪ್ರಸ್ತುತ ಕೃತಿಯಂತೂ ಪ್ರತಿ ಪುಟದಲ್ಲೂ ಇಲ್ಲಿಯವರೆಗೆ ಕಂಡುಕೇಳರಿಯದಂತಹ ಸಂಗತಿಗಳನ್ನು ಬಿಚ್ಚಿಡುತ್ತಾ ಹೋಗುತ್ತದೆ. ಹಾಗೆ ಬಿಚ್ಚಿಡುತ್ತಾ ಹೋಗುವ ಪ್ರತಿಯೊಂದು ಮಾಹಿತಿಗೂ ನಂಬಲರ್ಹ ಸಾಕ್ಷ್ಯಾಧಾರಗಳನ್ನು ಒದಗಿಸಿರುವುದು ಸಂಶೋಧನಾ ಶಿಸ್ತಿಗೆ ಅತ್ಯುತ್ತಮ ಉದಾಹರಣೆಯಾಗಿದೆ.
ಒಟ್ಟಾರೆಯಾಗಿ, ಇಲ್ಲಿ ಭಾಷೆಗಳು ಸೃಷ್ಟಿಸಿದ ಜಗದ್ವಲಯ, ಆರಂಭದಿಂದ ಕೊಂಡಿ ಕಳಚುವವರೆಗೆ ಜ್ಞಾನ ಸೃಷ್ಟಿ ಹಾಗೂ ಅಧಿಕಾರ ಕೇಂದ್ರದೊಂದಿಗೆ ನೇರವಾದ ಸಂಬಂಧವನ್ನು ಹೊಂದಿದೆಯೆನ್ನುವುದನ್ನು ಗಮನಿಸಬೇಕು. ಹತ್ತನೆಯ ಶತಮಾನದಿಂದಾಚೆಗೆ ಹೇಳಿಕೊಳ್ಳುವಂತಹ ಭಾಷಾಪಲ್ಲಟಗಳಾಗದೇ ಹೋದರೂ, ಪ್ರಾಕೃತ ಇದ್ದಕ್ಕಿದ್ದಂತೆ ಯಾವಾಗ ಕಣ್ಮರೆಯಾಯಿತು? ಹೇಗೆ ಕಣ್ಮರೆಯಾಯಿತು? ಹಾಗೆ ಕಣ್ಮರೆಯಾಗಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟ.
ಲಿಪಿ, ಬರೆಹದ ಚರಿತ್ರೆಯನ್ನೇನೋ ಶಾಸನಗಳಂತಹ ದಾಖಲೆಗಳ ಮೂಲಕ ತಿಳಿಯುವ ಪ್ರಯತ್ನ ಮಾಡಬಹುದು. ಆದರೆ, ಕೈಬರೆಹ ಪ್ರತಿಗಳನ್ನು ಜಾಡನ್ನು ಹಿಡಿಯುವುದು ಹೇಗೆ? ಕೈಬರೆಹ ಪ್ರತಿಗಳ ಪರಂಪರೆ ಎಂತದ್ದಾಗಿರಬಹುದು? ಈಗಾಗಲೇ ಈ ದಿಕ್ಕಿನಲ್ಲಿ ಕೆಲಸ ನಡೆದಿದ್ದರೂ, ಆಗಬೇಕಾದ ಕೆಲಸಗಳು ಸಾಕಷ್ಟಿವೆ. ಲಿಪಿ, ಬರೆಹ, ಶಾಸನಗಳ ಚರಿತ್ರೆಯನ್ನೇನೋ ಶೆಟ್ಟರ್‍ರಂತಹ ಚರಿತ್ರೆಕಾರರು ಕಟ್ಟಿಕೊಡುತ್ತಿದ್ದಾರೆ. ಮಾತು, ಬರೆಹದ ನಂತರ ವಸಾಹತುಶಾಹಿ ಕಾಲದಲ್ಲಿ ಮುದ್ರಣ(ಪ್ರಿಂಟಿಂಗ್ ಪ್ರೆಸ್) ಯಾವ ರೀತಿಯ ಬದಲಾವಣೆಗಳನ್ನು ಕರ್ನಾಟಕದಲ್ಲಿ ತಂದಿತು? ಪುಸ್ತಕಗಳ ಚರಿತ್ರೆಯನ್ನು ಹಾಗೆಯೇ, ಇಂದಿನ ಸಂದರ್ಭದಲ್ಲಿ ಜ್ಞಾನ ಪರಂಪರೆಯಿಂದ ವಿಮುಖವಾಗತೊಡಗಿರುವಾಗ, ಹಿಂದಿನ ಕೊಡುಕೊಳ್ಳುವ, ತೊಡಗಿಸಿಕೊಳ್ಳುವ ಅನುಸಂಧಾನದ ಮಾರ್ಗಗಳನ್ನು ಕನ್ನಡ ಕಾಸ್ಮೊಪಾಲಿಟನ್ ಪ್ರಜ್ಞೆ ಹೊಂದಿತ್ತು ಎಂಬ ಅರಿವು ಮುಂದೆ ಕನ್ನಡ ನಡೆಯಬೇಕಾದ ದಾರಿಯ ಬಗ್ಗೆ ಹೊಸ ಒಳನೋಟಗಳನ್ನು ನೀಡಬಲ್ಲದು. ಎರಡು ಸಹಸ್ರಮಾನಗಳ ಭಾಷಾನುಸಂಧಾನದ ಚರಿತ್ರೆ, ಮೂರನೆಯ ಸಹಸ್ರಮಾನದ ಡಿಜಿಟಲ್ ತಂತ್ರಜ್ಞಾನದ ಕಾಲದಲ್ಲಿ ಕನ್ನಡದಕ್ಕೆ ಯಾವ ರೀತಿಯ ವಿವೇಕವನ್ನು ತಂದುಕೊಡಬಹುದು ಎಂಬ ಕುತೂಹಲವಿದ್ದೇ ಇದೆ.
ಕಡೆಯದಾಗಿ, ‘ಪ್ರಾಕೃತ ಜಗದ್ವಲಯ’ದ ಹಾಗೆಯೇ ‘ದ್ರಾವಿಡ ಜಗದ್ವಲಯ’ವೊಂದು ಇದ್ದಿರಬಹುದೇ? ಎಂಬ ಪ್ರಶ್ನೆಯೊಂದಿಗೆ ಈ ಹಿನ್ನುಡಿಯನ್ನು ಮುಗಿಸಬಹುದೇನೋ!
ಕೆನಡಾದ ಯೂನಿವರ್ಸಿಟಿ ಆಫ್ ಆಲ್ಬರ್ಟಾದಲ್ಲಿ ಸಂಶೋಧಕರು. ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಮೈಸೂರಿನಲ್ಲಿ. ಹೊಸದೆಹಲಿಯ ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಕೆಲಕಾಲ ಇಂಗ್ಲಿಶ್ ಅನುವಾದಗಳ ಸಂಪಾದಕರಾಗಿದ್ದರು. ಸದ್ಯ ಕನ್ನಡ ಕಾದಂಬರಿಗಳ ಇಂಗ್ಲಿಶ್ ಅನುವಾದ ಹಾಗೂ ಕನ್ನಡ ವಿಮರ್ಶಾತ್ಮಕ ಸಂಕಥನದ ಸಂಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ಸಂಸ್ಕೃತಿಗಳ ಅಧ್ಯಯನ ಇವರ ಆಸಕ್ತಿಯ ಕ್ಷೇತ್ರ.
ಹೊಸ ಒಳನೋಟಗಳಿಂದ ವಿದ್ವತ್ಕೃತಿಗೆ ಬರೆದಿರವ ಬರೆದಿರುವ ಹಿನ್ನುಡಿಯು ವಿದ್ವತ್ ಪೂರ್ಣವಾಗಿದ್ದು ಇಲ್ಲಿಯವರೆಗೆ ಕನ್ನಡದಲ್ಲಿ ನಡೆದಿರುವ ಅಧ್ಯಯನದ ಹಿನ್ನೆಲೆಯಲ್ಲಿ ಷಟ್ಟರ ಕೃತಿಯ ಮಹತ್ವವನ್ನು ಬಿಂಬಿಸುವ ಅನನ್ಯ ಅನಾವರಣವಾಗಿದೆ.ಅಭಿನಂದನೆಗಳು.
ಸಾಂಪ್ರದಾಯಿಕ ಪರಿಕಲ್ಪನೆಗಳನ್ನು ಪ್ರಶ್ನಿಸುತ್ತಲೆ ಬೆಳೆಯುವ ಶಟ್ಟರ್ ರ ಅನ್ವೇಶಣೆ, ಕನ್ನಡವನ್ನು ತಲಸ್ಪರ್ಶಿಯಾಗಿ ಅರಿಯಲು ಸಹಾಯಕವಾಗುತ್ತಿದೆ.