ನಾಗಶ್ರೀ ಶ್ರೀರಕ್ಷ ಅವರ ‘ನಕ್ಷತ್ರ ಕವಿತೆಗಳು’ ಕುರಿತಾಗಿ ಸಿಂಧು ರಾವ್ ಮಾತು

ನಾಗಶ್ರೀ ಶ್ರೀರಕ್ಷ ಅವರ ‘ನಕ್ಷತ್ರ ಕವಿತೆಗಳು’ ಕವನ ಸಂಕಲನದ ಕುರಿತಾಗಿ ಹಲವರು ಆಡಿರುವ ಮಾತುಗಳು ಮುಂದೆ ಋತುಮಾನದಲ್ಲಿ ಪ್ರಕಟವಾಗುತ್ತದೆ . ಈ ಕವನ ಸಂಕಲನವನ್ನು ಋತುಮಾನ ಸ್ಟೋರ್ (store.ruthumana.com) ನ ಈ ಕೆಳಗಿನ ಕೊಂಡಿಯಲ್ಲಿ ಖರೀದಿಸಬಹುದು.

http://store.ruthumana.com/product/nakshathra-kavitegalu/

ನಕ್ಷತ್ರ….ಎಂದೋ ನಂದಿಹೋಗಿದ್ದರೂ ನಮ್ಮ ಲೋಕವನ್ನು ಇಂದಿಗೂ ಬೆಳಗುತ್ತಿರುತ್ತದೆ. ಇದರ ಸ್ಥಾನ ಇಲ್ಲಿಯೇ ಅಂದುಕೊಳ್ಳುತ್ತೇವೆ. ಆದರೆ ಆ ಬೆಳಕು ಎಲ್ಲಿಂದಲೋ ಹಾದು ಮತ್ತೆಲ್ಲೋ ತಿರುವು ಪಡೆದು ಈಗ ನಮಗೆ ಇಲ್ಲಿರುವಂತೆ ತೋರುತ್ತದೆ ಅಷ್ಟೇ. ಅದರ ನಿಜವಾದ ನೆಲೆ ಯಾರ ಕಣ್ಣಿಗೂ ನಿಲುಕಿಲ್ಲ. ಇರುವಿಕೆ ಮತ್ತು ಇರುವಿನ ನೆಲೆಯ ಬಗ್ಗೆ ಕಿಂಚಿತ್ತೂ ಪರಿವೆಯಿಲ್ಲದಂತೆ, ಆದರೂ ಇರುವಿಕೆಯ ಹಂಬಲವನ್ನು ಮೀರಲಾಗದ ಅಸಹಾಯಕತೆನ್ನು ತೋರುತ್ತಲೇ ನಕ್ಷತ್ರವೊಂದು ಮಿನುಗಿ ಕಳಚಿ ಬಿದ್ದಿದೆ. ಇಲ್ಲಿನ ಕವಿತೆಗಳು ತನ್ನ ಪಾಡಿಗೆ ಸುಮ್ಮನೆ ಮಿನುಗುತ್ತವೆ. ಪ್ರೀತಿ, ಕಾಮ, ಸಾವು, ಸಂಬಂಧ, ಎಲ್ಲವುದರ ಕುರಿತು ಉಮ್ಮಳಿಸಿ ಬರುವ ಕರುಳ ಕುದಿತವನ್ನು ಸದ್ದಿಲ್ಲದೆ ನಿರುಮ್ಮಳ ಅಲೆಯಲ್ಲಿ ದಡ ಸೋಕಿಸುವ ಕವಿತೆಗಳನ್ನು ಯಾವ ಉನ್ಮಾದ ತಾನೆ ಹಿಡಿಯಬಹುದು? ಓದುತ್ತಿರುವಂತೆ ನಮ್ಮೊಳಗೂ ನಿರುಮ್ಮಳ ತೇವ. ಹೊತ್ತಿ ಉರಿಯಬೇಕು, ಬೆಳಕು ರಾರಾಜಿಸಬೇಕು, ತನ್ನ ಬೆಳಕಿನಲ್ಲಿ ತಾನು ಮಾತ್ರ ಕಾಣಿಸಬೇಕು, ಎಲ್ಲರೂ ಎಲ್ಲವೂ ತನ್ನ ಬೆಳಕಿನಡಿಯಲ್ಲಿ ಇರಬೇಕೆನ್ನುವ ಯಾವ ಧಾವಂತವೂ ಇರದ ಕವಿತೆಗಳಿವು. ಎಲ್ಲ ನಕ್ಷತ್ರಗಳು ಒಂದೇ ರೀತಿ ಕಂಡರೂ ಅದರದರ ಮಿನುಗನ್ನು ತುಂವಿಕೊಳ್ಳುವುದಕ್ಕೆ ಕೊಂಚ ಸೂಕ್ಷ್ಮತೆ ಮತ್ತು ತಾಳ್ಮೆ ನಮ್ಮ ಕಣ್ಣುಗಳಿಗಿರಬೇಕು. ಇರದಿದ್ದರೂ, ಈ ಕವಿತೆಗಳು ಅದನ್ನು ತಂದುಕೊಡುತ್ತವೆ ಎಂದು ನಂಬಿದ್ದೇನೆ.

ನಕ್ಷತ್ರ ಕವಿತೆಗಳ ಕುರಿತು, ನಾಗಶ್ರೀ ಬದುಕಿರುವಾಗಲೇ ಕೆಲವರು ನೀಡಿದ ಸ್ಪಂದನೆಯ ಮಾತುಗಳನ್ನು ದಾಖಲಿಸುತ್ತಿರುವುದು ಬಿತ್ತರಿಸುತ್ತಿರುವುದು ತಡವಾಗಿದೆ. ‘ಏನೋ ಮಹಾ ವೈರಾಗಿಯ ಹಾಗೆ ಮಾತಾಡಬೇಡ, ತುಂಟಾಟಿಕೆ ಮಾಡಿಕೊಂಡು ಮಜವಾಗಿರು’ ಅನ್ನುವಳಲ್ಲಿ ಕ್ಷಮಿಸು ಅಂತ ಹೇಗೆ ಕೇಳುವುದು?

– ವಿಕ್ರಮ ಹತ್ವಾರ್ ( ಪ್ರಕೃತಿ ಪ್ರಕಾಶನದ ಪರವಾಗಿ )


ಪ್ರತಿಕ್ರಿಯಿಸಿ