ಮಲಯಾಳಂ ಸಾಹಿತ್ಯದ ಮೇರು ಪರ್ವತ ಎಮ್ ಮುಕುಂದನ್ ರಿಂದ ಮಲಯಾಳಂ ಸಣ್ಣ ಕಥಾ ಲೋಕದ ಸಂಭ್ರಮ ಎಂದೇ ಪ್ರಶಂಸೆ ಪಡೆದ ಕತೆ ಬಿರಿಯಾನಿ. ಯುವ ಸಾಹಿತಿ ಸಂತೋಷ ಎಚ್ಚಿಕಾನಂ ಬರೆದಿರುವ ಈ ಕತೆಯನ್ನ ಸುನೈಫ್ ಕನ್ನಡೀಕರಿಸಿದ್ದಾರೆ.
ಭಾರತದ ವಿವಿಧ ಭಾಷೆಯ ಯುವ ಕತೆಗಾರರ ವೈವಿಧ್ಯಮಯ ಕತೆಗಳು ಋತುಮಾನದಲ್ಲಿ ಆಗಾಗ ಪ್ರಕಟವಾಗಲಿದೆ. ಓದಿ ಪ್ರತಿಕ್ರಿಯಿಸಿ.
ಕದಿರೇಶನೊಟ್ಟಿಗೆ ಗೋಪಾಲ್ ಯಾದವ್ ಚೆರ್ಕಳದಿಂದ ಬಸ್ ಹತ್ತಿದ್ದಷ್ಟೇ. ಜೊತೆಗೆ ಮೂವರು ಬಂಗಾಳಿಗಳು. ಹೇಗೆ ಓಡಿಸಿದರೂ ಬಸ್ ಪೊಯಿನಾಚಿಗೆ ತಲುಪಲು ಕಮ್ಮಿಯೆಂದರೂ ಹತ್ತಿಪ್ಪತ್ತು ನಿಮಿಷ ಬೇಕು.
ಅಷ್ಟು ಹೊತ್ತು ಕಲಂದರ್ ಹಾಜಿಯ ಬಗ್ಗೆ ಮಾತಾಡೋಣ.
ಆ ಕಾಲದಲ್ಲಿ ತಳಂಗರೆಯಿಂದ ದುಬಾಯಿಗೆ ಹಡಗು ಹತ್ತಿ ಹೋದವರು ಈ ಕಲಂದರ್ ಹಾಜಿ. ಕಳೆದ ಜನವರಿಯಲ್ಲಿ ಎಂಭತ್ತಾರು ತುಂಬಿತು. ಬದುಕಿದ್ದ ನಾಲ್ಕು ಹೆಂಡತಿಯರಲ್ಲಿ ಕುಂಞೀಬಿಯನ್ನು ಮರೆತದ್ದು ಬಿಟ್ಟರೆ ಹಾಜಿಯ ನೆನಪಿನ ಶಕ್ತಿಗೆ ಹೆಚ್ಚೇನೂ ತೊಂದರೆ ಇಲ್ಲವೆನ್ನಿ. ಕಲಂದರ ನಾಲ್ಕಲ್ಲ, ನಲವತ್ತು ಹೆಂಡತಿಯರನ್ನು ಕಟ್ಟಿಕೊಂಡರೂ ಸಾಕುವಷ್ಟು ತಾಕತ್ತಿದೆ ಎಂದು ಇಡೀ ಊರಿಗೇ ಗೊತ್ತು.
ಹಾಜಿಯವರಿಗೆ ಆಮಿನಾರಲ್ಲಿ ಹುಟ್ಟಿದ ಮಗಳು ರುಖಿಯಾ. ರುಖಿಯಾಳ ಮಗ ರಿಸ್ವಾನ್. ಅಮೇರಿಕಾದಲ್ಲಿ ಕಾರ್ಡಿಯಾಕ್ ಸರ್ಜನ್. ಅವನ ನಿಕಾಹ್ ಕಳೆದ ವಾರ ಬೆಂಗಳೂರಿನಲ್ಲಿ ನಡೆದಿತ್ತು.
ಊರಲ್ಲೊಂದು ಸತ್ಕಾರ ಕೂಟ ಏರ್ಪಡಿಸಿ ಊರಿಗೆಲ್ಲ ಬಿರಿಯಾನಿ ತಿನ್ನಿಸಬೇಕು ಅಂತ ಅಜ್ಜನಿಗೊಂದು ಆಸೆ. ಎಂಭತ್ತಾರು ಬೇರೆ ಆಗಿದೆ. ಈ ಪ್ರಾಯದಲ್ಲಿ ಹಾಜತ್ ನೆರವೇರದೆ ಮಯ್ಯತ್ತಾದರೆ ಆ ಸಂಕಟ ನಮ್ಮ ಬದುಕಿಡೀ ಕಾಡತ್ತೆ ಅಂತ ಉಮ್ಮ ಹೇಳಿದ ಕಾರಣ ರಿಸ್ವಾನ್ ಒಪ್ಪಿಕೊಂಡಿದ್ದ. ಇವತ್ತು ಸಂಜೆ ಆರರಿಂದ ಒಂಭತ್ತರ ನಡುವೆ ರಿಸೆಪ್ಷನ್.
ಇದುವೇ ನೋಡಿ ಕಲಂದರ್ ಹಾಜಿಯ ಮನೆ. ಮನೆಯಲ್ಲ ಅರಮನೆ.
ಕಾರ್ಯಕ್ರಮಕ್ಕೆಂದು ಹಾಕಿದ ಚಪ್ಪರದ ಬಾಗಿಲಿಂದ ಮನೆಯ ಬಾಗಿಲಿಗೆ ತಲುಪಲು ಸುಮಾರು ನಡೆಯಬೇಕು. ನಾಲ್ಕೈದು ಸಾವಿರ ಜನರು ಸೇರುವ ಕಾರ್ಯಕ್ರಮ. ಬಿಳಿ ಬಟ್ಟೆ ಹಾಸಿದ ಮೇಜು ಕುರ್ಚಿಗಳು.
ವಿದೇಶದಿಂದ ತರಿಸಿದ ವಿಶೇಷ ಹೂಗಳಿಂದ ಅಲಂಕಾರ ಮಾಡಿದ ವೇದಿಕೆ. ಸತ್ಕಾರ ಮುಗಿದರೂ ಆ ವೇದಿಕೆಯ ಬಗ್ಗೆ ಜನರು ಮಾತಾಡುವುದನ್ನು ಬಿಡಲ್ಲ ಎಂದೆಲ್ಲ ಬಡಾಯಿ ಕೊಚ್ಚಿಕೊಳ್ಳುತ್ತಾ ಹಾಜಿಯ ವಿಶ್ವಸ್ಥ ಮತ್ತು ಜಾಗದ ವಹಿವಾಟಿನ ಮುಖ್ಯ ಪಾಲುದಾರನಾಗಿದ್ದ ಅಸೈನಾರ್ಚ ಅತ್ತಿಂದಿತ್ತ ಓಡಾಡುತ್ತಿದ್ದಾರೆ.
ನಡುವೆ ಏನೋ ನೆನಪು ಮಾಡಿಕೊಂಡವರಂತೆ ನಿಂತ ಅವರು ಮೊಬೈಲ್ ತೆಗೆದು ರಾಮಚಂದ್ರನ ನಂಬರ್ ಒತ್ತಿದರು.
ಹಸಿವಿನ ಬಗ್ಗೆ ಮತ್ತೆ ಮತ್ತೆ ಬರೆಯಬೇಕಾದಾಗ ತಲ್ಲಣಿಸಿ ಹೋಗುತ್ತೇನೆ. ಒಂದೊತ್ತಿನ ಊಟಕ್ಕೆ ಪರದಾಡುವಾಗ ಹೊಟ್ಟೆಯ ಸಂಕಟಕ್ಕಿಂತ ನೂರು ಪಟ್ಟು ನೋವು ಎದೆಯಲ್ಲಿರುತ್ತದೆ. ಪರದೇಸಿಯಾಗಿ, ತನ್ನ ಹುಟ್ಟೂರು, ಬಂಧು ಬಾಂಧವರು ಈಗ ಯಾವ ರಾಜ್ಯಕ್ಕೆ ಸೇರಿದ್ದಾರೆ ಎಂದೂ ಅರಿಯದೆ ಜೀತದಾಳಿನಂತೆ ದುಡಿಯುವ ಹೊರ ರಾಜ್ಯದ ಕಾರ್ಮಿಕರ ದಯನೀಯತೆ ‘ಬಿರಿಯಾನಿ’. ಬೆಳೆದ ರೈತರ ತುತ್ತಿಗಿಲ್ಲದ ಬಾಸ್ಮತಿಯ ಕತೆ ಇದು. ಮುಸ್ಲಿಮರೊಳಗಿನ ವರ್ಗಬೇಧಕ್ಕೆ ಹಿಡಿದ ಕನ್ನಡಿ. ಐಶಾರಾಮಿತನಕ್ಕೆ ಒಗ್ಗಿಕೊಂಡ ಹೊಸ ತಲೆಮಾರಿಗೆ ಹಸಿವಿನ ನಿಜ ಮುಖ ತೋರಿಸುವ ಪ್ರಯತ್ನವೂ ಹೌದು. ~ಸುನೈಫ್ (ಅನುವಾದಕರು )
ಪೊಯಿನಾಚ್ಚಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದ ಒಬ್ಬ ವ್ಯಾಪಾರಿ ಈ ರಾಮಚಂದ್ರನ್ ಪೆರುಂಬಳ.
ಸ್ಟೇಷನರಿ, ದಿನಪತ್ರಿಕೆ, ವಾರಪತ್ರಿಕೆ, ಶರಬತ್ತು, ಸಿಗರೇಟು, ಎಲೆಅಡಿಕೆ… ಎಂದಿಲ್ಲ ಎಲ್ಲವೂ ಸಿಗುವ ಅಂಗಡಿ ಅದು. ನ್ಯಾಷನಲ್ ಹೈವೇಯ ಸಾಧಾರಣ ಜನಜಂಗುಳಿ ಇರುವ ಆ ಜಂಕ್ಷನ್ನಿಗೆ ಬರುವ ಎಲ್ಲರಿಗೂ ರಾಮಚಂದ್ರನ್ ಪರಿಚಿತ.
ತಿಂಗಳ ಚೀಟಿ ಹಣ, ರಾತ್ರಿ ಮನೆಗೆ ಹೋಗಲು ಟಾರ್ಚ್, ಪೋಸ್ಟ್ ಕವರುಗಳು, ಎಲ್ಲಿಗೆ ಹೋಗುವುದು, ಯಾವಾಗ ಬರುವುದು… ಕೆಲವೊಮ್ಮೆ ಹೆಂಡತಿಯರ ಬಳಿ ಹೇಳಿಕೊಳ್ಳಲಾಗದಂತಹ ರಹಸ್ಯಗಳು… ಹೀಗೆ ವಿನಿಮಯಗಳ ಅಸಂಖ್ಯ ಮಾಳಿಗೆಗಳ ಹೊತ್ತುಕೊಂಡಿರುವ ಟವರ್ ಈ ರಾಮಚಂದ್ರನ್. ಆತ ಅಸೈನಾರ್ಚನ ಫೋನ್ ಅಟೆಂಡ್ ಮಾಡಿದ್ದೂ ಪೊಯಿನಾಚಿ ಜಂಕ್ಷನ್ನಿನಲ್ಲಿ ಶುಕ್ರಿಯಾ ಬಸ್ ಬಂದು ನಿಂತಿದ್ದು ಒಟ್ಟಿಗೇ ಆಗಿತ್ತು.
ಬಸ್ಸಿನಿಂದ ಮೊದಲು ಇಳಿದ ಕದಿರೇಶನ ಹಿಂದೆ ಮೂವರು ಬಂಗಾಳಿಗಳು ಇಳಿದರು. ಕೊನೆಯವನಾಗಿ ಗೊಪಾಲ್ ಯಾದವ್ ಇಳಿದ.
ಬಂಗಾಳಿಗಳು ಮೂವರೂ ರಸ್ತೆ ದಾಟಿ ಬಂದು ‘ನಮಶ್ಕಾರ್’ ಅಂದರು. ತೂಫಾನ್ ಸೇರಿಸಿ ಚೆನ್ನಾಗಿ ರುಬ್ಬಿದ ‘ಮಾವಾ’ದ ಮೂರು ಕಟ್ಟುಗಳನ್ನು ರಾಮಚಂದ್ರನ್ ಅವರಿಗೆ ನೀಡಿದ.
ಅವರು ಅದರಿಂದ ಎಂದಿನಂತೆ ಒಂದೊಂದು ಚಿಟಿಕೆ ತೆಗೆದು ಬಾಯಿಗೆ ತುರುಕಿಕೊಂಡರು. ಬೆರಳ ತುದಿಯನ್ನು ಜೀನ್ಸಿಗೆ ಉಜ್ಜಿದರು. ಅಷ್ಟರಲ್ಲಿ ಪಿಕಪ್ಪಿನಲ್ಲಿ ಬಂದ ದಡಿಯನೊಬ್ಬ ಮೂವರನ್ನೂ ಹತ್ತಿಸಿ ಪೆರಿಯ ಕಡೆಗೆ ಹೋದ.
ಸ್ವಲ್ಪ ಹೊತ್ತು ಕಳೆಯುವಾಗ ಪ್ಲಂಬಿಂಗ್ ಕೆಲಸ ಇದೆ ಅಂತ ರಾತ್ರಿ ಫೋನ್ ಮಾಡಿ ಹೇಳಿದ್ದ ತೋಮಾಚ್ಚನ ಜೀಪ್ ಕದಿರೇಶನ ಮುಂದೆ ನಿಂತು ಹಾರನ್ ಹೊಡೆಯುತ್ತಿತ್ತು. ಆತನೂ ಹೋದ ಮೇಲೆ ಗೋಪಾಲ್ ಯಾದವ್ ಒಬ್ಬಂಟಿಯಾಗಿಬಿಟ್ಟ. ಆತನ ಬೆನ್ನಿನ ಮೇಲೆ ಬಿದ್ದಿದ್ದ ಎಳೆಬಿಸಿಲು ಈಗ ನಿಧಾನಕ್ಕೆ ಬೆಳೆಯುತ್ತಿತ್ತು.
ಕಳೆದ ಎರಡು ವರ್ಷಗಳಿಂದ ಗೋಪಾಲ್ ಯಾದವ್ ಉಳಿಯತ್ತಡ್ಕದಲ್ಲಿದ್ದ. ಕದಿರೇಶನ ಬಾವ ಅಣ್ಣಾಮಲೆಯೊಂದಿಗೆ. ಅಲ್ಲಿ ಕೆಲಸ ಕಮ್ಮಿಯಾಗತೊಡಗಿದಾಗ ಕೂಲಿ ಕೆಲಸ ಬಿಟ್ಟು ಬೇರೇನೂ ಗೊತ್ತಿಲ್ಲದ ಗೋಪಾಲ್ ಯಾದವ್ ನಿಜಕ್ಕೂ ಅತಂತ್ರನಾಗತೊಡಗಿದ.
ಹಾಗೆ ಕೆಲಸ ಇಲ್ಲದೆ ನೊಣ ಓಡಿಸುತ್ತಿರಬೇಕಾದರೆ ಅಣ್ಣಾಮಲೆ ಕದಿರೇಶನ ವಿಷಯ ಹೇಳಿದ್ದ.
ಅಲ್ಲಿಂದ ಗೋಪಾಲ್ ಯಾದವ್ ಸೀದ ಚೆರ್ಕಳಕ್ಕೆ ಬಂದು ಬಿಟ್ಟ. ಕಾಞಂಗಾಡ್ ಕಡೆ ಹೋಗುವಾಗ ವಿದ್ಯಾನಗರ ದಾಟಿದರೆ ಸಿಗುವ ಸಣ್ಣದೊಂದು ಪಟ್ಟಣ ಚೆರ್ಕಳ. ಆದ್ದರಿಂದಲೇ ಉಳಿಯತ್ತಡ್ಕದಂತೆ ಕೆಲಸ ಇಲ್ಲ ಅಂತ ನೊಣ ಓಡಿಸುವ ಅವಸ್ಥೆ ಇಲ್ಲಿ ಇರಲ್ಲ ಎಂದು ಕದಿರೇಶನೂ ಹೇಳಿದ. ಈಗ ಕದಿರೇಶನ ಸಿಂಗಲ್ ರೂಂ ಮನೆಯ ಹಿಂಭಾಗದಲ್ಲಿ ಮಾಡಿಗೆ ಇಳಿಸಿದ್ದ ಜಾಗದಲ್ಲಿ ಬೆಂಚಿನ ಮೇಲೆ ಮಲಗೋದು. ಮಳೆಗಾಲಕ್ಕೆ ಮೊದಲು ಬೇರೆ ಜಾಗ ನೋಡ್ಬೇಕು.
ರೂಮಿಗೆ ಐದು ಸಾವಿರ ಅಂತೆಲ್ಲ ಬಾಡಿಗೆ ಕೇಳ್ತಾರೆ.
ಯಾರಾದರೂ ಬರುವ ತನಕ ಮೀಠಾಪಾನ್ ಜಗಿಯೋಣವೆಂದು ಅಂಗಡಿಗೆ ಹೋದಾಗ ರಾಮಚಂದ್ರನ್ ಕೇಳಿದ:
“ಇದರ್ ನಯಾ ಹೇ ತುಂ?”
“ಹಾ.. ಭಾಯಿ.”
ವೀಳ್ಯದೆಲೆಯ ತೊಟ್ಟು ಮುರಿಯುತ್ತಾ ರಾಮಚಂದ್ರನ್ ಕೇಳಿದ:
“ಕಿದರ್ ಕಾ ಹೇ ತುಂ?”
“ಬಿಹಾರ್.”
“ಓ.. ಅಪ್ನಾ ಲಾಲೂಜೀ ಕಾ ದೇಶ್ ಹೇನಾ?”
ಗೋಪಾಲ್ ಯಾದವ್ ನಕ್ಕ. ಆಗವನ ಕೆಳದವಡೆಯಲ್ಲಿ ಮೂರು ಮುಖ್ಯ ಹಲ್ಲುಗಳು ಇಲ್ಲವೆಂದು ರಾಮಚಂದ್ರನ್ ಗಮನಿಸಿದ.
“ತುಂ ಕಿತ್ನಾ ಸಾಲ್ ಹೋಗಯಾ ಇದರ್?”
“ಸಾತ್.” ಗೋಪಾಲ್ ಮೀಠಾಪಾನ್ ಬಾಯಿಗೆ ಹಾಕಿಕೊಂಡ.
“ಅಭೀ ತುಂ ಮಲಯಾಳಂ ಸೀಕಾ?”
ಆತ ವೀಳ್ಯದ ರಸ ಹೀರುತ್ತಾ “ಪಡಿಚ್ಚು” ಎಂದು ತಲೆಯಾಡಿಸಿದ.
“ಒಂದು ಕೆಲಸ ಕೊಟ್ಟರೆ ಮಾಡಬಹುದಾ?”
“ಮಾಡುತ್ತೇನೆ” ಎಂದು ಪುನಹ ತಲೆಯಾಡಿಸಿದ.
ಸುಣ್ಣದ ಬೆರಳನ್ನು ಬಟ್ಟೆಗೆ ಒರೆಸುತ್ತಾ ರಾಮಚಂದ್ರನ್ ಮೊಬೈಲ್ ತೆಗೆದ. ಅಸೈನಾರ್ಚರಿಗೆ ಫೋನ್ ಮಾಡಿ ವಿಷಯ ತಿಳಿಸಿದ.
ಅವಾಗ ಶುಕ್ರಿಯಾ ಬಸ್ ಬಂದು ನಿಂತಾಗ ಅಸೈನಾರ್ಚ ಫೋನಲ್ಲಿ ಕೇಳಿದ್ದು ಕೆಲಸಕ್ಕೊಬ್ಬ ಜನ ಸಿಗಬಹುದಾ ಅಂತ.
ಅರ್ಧ ಗಂಟೆಯಲ್ಲಿ ಅಸೈನಾರ್ಚರ ಫೋರ್ಚುನರ್ ಕಾರು ಬಂದು ನಿಂತಿತು. ಅದರಿಂದ ಇಳಿದ ಅವರು ಅಭ್ಯಾಸ ಬಲದಿಂದೆಂಬಂತೆ ಪ್ಯಾಂಟಿನ ಕಿಸೆಗೆ ಕೈ ಹಾಕಿ ತೊಡೆ ಮತ್ತು ವೃಷಣದ ಎಡೆಯಲ್ಲಿ ಕೆರೆದುಕೊಳ್ಳುತ್ತಾ ರಾಮಚಂದ್ರನ ಅಂಗಡಿಗೆ ಬಂದರು. ತನ್ನ ಕಡೆಗೆ ಭವ್ಯವಾಗಿ ನಮಸ್ಕರಿಸಿ ನಿಂತಿರುವ ಈ ಮಧ್ಯವಯಸ್ಕನೇ ರಾಮಚಂದ್ರನ್ ಗೊತ್ತು ಮಾಡಿಟ್ಟಿರುವ ಆಳು ಎಂದು ಒಂದೇ ನೋಟದಲ್ಲಿ ಅವರಿಗೆ ತಿಳಿಯಿತು.
“ಇನ್ನೂರೈವತ್ತು ರೂಪಾಯಿ ಕೊಡುತ್ತೇನೆ. ರೆಡಿಯಾ?”
ಗೋಪಾಲ್ ಯಾದವನ ಮುಖ ನೋಡದೇ ಅಸೈನಾರ್ಚ ಕೇಳಿದರು.
“ಸಾಬ್ ಮುನ್ನೂರೈವತ್ತು ಕೊಡಿ ಸಾಬ್.”
“ಲೋ ಮಲಯಾಳಿಗೆ ಆರುನೂರು, ತಮಿಳರಿಗೆ ಐನೂರು, ಬಂಗಾಳಿಗೆ ಮುನ್ನೂರೈವತ್ತು, ಬಿಹಾರಿಗೆ ಇನ್ನೂರೈವತ್ತು. ಇದು ಇಲ್ಲಿಯ ರೇಟು. ನಾಲ್ಕೈದು ಗಂಟೆಗಳ ಕೆಲಸ ಅಷ್ಟೇ ಇರೋದು. ಗಂಟೆಗೆ ಐವತ್ತಕ್ಕಿಂತ ಜಾಸ್ತಿ ಕೊಡೋದಕ್ಕೆ ಆಗುದಿಲ್ಲ. ಬರುತ್ತೀಯಾ? ಇಲ್ಲವಾ? ಅದು ಹೇಳು.”
ಅಸೈನಾರ್ಚ ಒಂದು ವಿಲ್ಸ್ ತೆಗೆದು ಹಚ್ಚಿದರು.
“ಅಲ್ಲ ಅಸೈನಾರ್ಚ… ಭಯಂಕರ ಕಾರ್ಯಕ್ರಮ ಅಂತ ಆಯ್ತು ಹಾಗಾದ್ರೆ. ಬಿರಿಯಾನಿಗೆ ದುಬೈ ಅಬುದಾಬಿಯಿಂದೆಲ್ಲ ಜನ ಬಂದಿದ್ದಾರಂತೆ.” ರಾಮಚಂದ್ರನ್ ಕೇಳಿದ.
“ಬರೀ ಬಿರಿಯಾನಿ ಅಲ್ಲ. ಕುಳಿಮಂದಿ ಉಂಟು ಮಾರಾಯ. ಇದು ಇಲ್ಲಿಯ ಲೋಕಲ್ ಇಚ್ಚಾಗಳ ಮದುವೆಗೆ ಸಿಗುವ ಲಾಯಿಲೋಟ್ಟು ಬಿರಿಯಾನಿ ಅಲ್ಲ. ನಂಬರ್ ವನ್ ಬಾಸ್ಮತಿ ಅಕ್ಕಿಯ ಬಿರಿಯಾನಿ. ಪಂಜಾಬಿನಿಂದ ಒಂದು ಲೋಡ್ ಇಳಿಸಿದ್ದೇವೆ.”
“ಒಂದು ಲೋಡಾ?” ರಾಮಚಂದ್ರನಿಗೆ ನಂಬಿಕೆ ಬರಲಿಲ್ಲ.
“ನಿನ್ನೆ ಸಂಜೆ ಲಾರಿ ಬಂದು ಮನೆ ಮುಂದೆ ನಿಂತಾಗ… ರಾಮಚಂದ್ರಾ ಹೇಳಿದ್ರೆ ನೀನು ನಂಬಲಿಕ್ಕಿಲ್ಲ. ಮಲ್ಲಿಗೆ ಬಿರಿದ ಹಾಗೆ ಊರಿಡೀ ಪರಿಮಳ. ಅದು ಈಗಲೂ ನನ್ನ ಮೂಗಿನಿಂದ ಹೋಗಿಲ್ಲ. ಅದು ಬಾಸ್ಮತಿ ಮಾರಾಯ.”
ನೂರು ರೂಪಾಯಿ ಜಾಸ್ತಿ ಕೇಳಿದ್ದರೂ ತಿರುಗಿ ಹೋಗುವಾಗ ಅಸೈನಾರ್ಚನ ಫೋರ್ಚುನರಿನ ಹಿಂಬದಿ ಸೀಟಿನಲ್ಲಿ ಗೋಪಾಲ್ ಯಾದವ್ ಕೂತಿದ್ದ.
ಪಳ್ಳಿಕೆರೆ ರಸ್ತೆ ಹತ್ತಿದ ಮೇಲೆ ಅಸೈನಾರ್ಚ ಅವನೊಂದಿಗೆ ಮಾತಿಗಿಳಿದರು.
“ಗೋಪಾಲ ಬಿಹಾರದಲ್ಲಿ ಎಲ್ಲಿ?”
“ಲಾಲ್ ಮಾತಿಯಾ.” ಆತ ಹೇಳಿದ.
“ಅಲ್ಲಿ ಎಂತ ಕೆಲಸ ಮಾಡುತ್ತಿದ್ದೆ?”
“ಕಲ್ಲಿದ್ದಲಿದ್ದು.”
ಗೋಪಾಲ್ ಯಾದವ್ ಲಾಲ್ ಮಾತಿಯಾದ ರಾಜ್ ಮಹಲ್ ಕೋಲ್ ಮೈನಿಂಗ್ ಕಂಪೆನಿಯ ಬಗ್ಗೆ ಹೇಳಿದ. ಗಣಿಗಾರಿಕೆ ನಿಲ್ಲಿಸಿ ಕಂಪೆನಿ ಹೋಗಿತ್ತಾದರೂ ಆ ಜಾಗದಲ್ಲಿ ಎರಡನೇ ದರ್ಜೆ ಕಲ್ಲಿದ್ದಲು ಬೇಕಾದಷ್ಟು ಇತ್ತು.
ಕಾನೂನು ಪ್ರಕಾರ ನಿಷೇಧ ಇದ್ದರೂ ಅದನ್ನು ಲೆಕ್ಕಿಸದೆ ಜನರು ಕಲ್ಲಿದ್ದಲು ಅಗೆಯುತ್ತಿದ್ದರು.
ಅದರಲ್ಲಿ ಹೆಚ್ಚಿನವರು ಮಹಿಳೆಯರು. ಅಲ್ಲಿಯೇ ಗೋಪಾಲ್ ಯಾದವ್ ಮಾತಂಗಿಯನ್ನು ಕಂಡದ್ದು.
ಲಾಲ್ ಮಾತಿಯಾದಿಂದ ಇನ್ನೂರೈವತ್ತು ಕಿಲೋ ಕಲ್ಲಿದ್ದಲು ತುಂಬಿಕೊಂಡು ಗೋದ್ದಾ ತನಕ ನಲವತ್ತು ಕಿಲೋಮೀಟರ್ ತಳ್ಳಿಕೊಂಡು ಹೋಗಬೇಕು. ಕೆಲವೊಮ್ಮೆ ಆ ಯಾತ್ರೆ ಮತ್ತೂ ಇಪ್ಪತ್ತು ಕಿಲೋಮೀಟರ್ ಏರುವುದಿದೆ. ಬಾಂಗ ತನಕ.
ಡೈಲಿ ಹತ್ತು ರೂಪಾಯಿ ಸಿಗುತ್ತದೆ.
“ಪಡಚ್ಚವನೇ! ಹತ್ತು ರೂಪಾಯಿಯ?”
ಅಸೈನಾರ್ಚನ ಕೈ ತಲೆ ಮೇಲೆ ಏರಿತು.
“ನೂರೈವತ್ತು ಸಿಗುತ್ತದೆ.” ಗೋಪಾಲ್ ಯಾದವ್ ಮುಂದುವರಿಸಿದ.” ಅದರಿಂದ ಪೋಲೀಸರ ರಾಂಗ್‌ದಾರಿ, ಗೂಂಡಾಗಳ ಮಾಮೂಲು, ಸೈಕಲ್ ಟ್ಯೂಬಿಗೆ, ಮತ್ತೆ ಬಾಲ್ ಬಿಯರಿಂಗ್ ಕೆಲಸ… ಎಲ್ಲ ಕಳೆದು ಹತ್ತೇ ಬಾಕಿ ಆಗುವುದು.”
“ಅದರ ಮೇಲೆ ನನ್ನೊಟ್ಟಿಗೆ ನೂರು ರೂಪಾಯಿ ಜಾಸ್ತಿ ಕೇಳ್ತೀಯಲ್ಲ ನೀನು.”
ಅಸೈನಾರ್ಚ ಕೋಪದಿಂದ ಅವನ ಕಡೆಗೆ ತಿರುಗಿ ನೋಡಿದರು.
“ನೀನು ಊರು ಬಿಟ್ಟು ಎಷ್ಟು ಕಾಲ ಆಯ್ತು ಸುಬೇರಾ?”
“ಪಂದ್ರಾ ಸಾಲ್.”
“ಹದಿನೈದು ವರ್ಷಗಳು. ಅಂದರೆ ಅವತ್ತು ಹತ್ತಾಗಿದ್ದರೆ ಈಗ ನೂರು ಇರಬಹುದು. ಇಲ್ಲಿ ಇನ್ನೂರೈವತ್ತು ಕೊಡ್ತೇನೆ ಅಂತ ಹೇಳಿದರೆ ಸಾಕಾಗುದಿಲ್ಲ ಅಂತೆ. ಚೆನ್ನಾಗಿದೆ ಇದು.”
ಕಾರು ಓಡಿಸುತ್ತಾ ಅಸೈನಾರ್ಚ ತನ್ನಲ್ಲಿ ತಾನೇ ಗೊಣಗಿಕೊಳ್ಳುತ್ತಿದ್ದರು. ತನ್ನ ಕಷ್ಟವನ್ನೆಲ್ಲ ಈತನ ಬಳಿ ಹೇಳಬೇಕಾಗಿರಲಿಲ್ಲ ಎಂದು ಗೋಪಾಲ ಯಾದವನಿಗೆ ಅನ್ನಿಸಿತು.
ಗೋದ್ದದಿಂದ ಅರ್ಧ ರಾತ್ರಿ ಸೈಕಲ್ ತುಳಿಯುತ್ತಾ ಮನೆಗೆ ಬಂದರೆ ಹಸಿದು ಮಣ್ಣು ತಿಂದು ಮಲಗುವ, ಅಲಸಂಡೆ ಬಳ್ಳಿಯ ಹಾಗೆ ಕುತ್ತಿಗೆಯ, ದೊಡ್ಡ ಹೊಟ್ಟೆಯ ಮಗಳೊಬ್ಬಳು ಅಸೈನಾರನಿಗೆ ಇಲ್ಲವಲ್ಲ.
ನಾವು ಒಬ್ಬರೊಂದಿಗೆ ನಮ್ಮ ನೋವನ್ನು ಹೇಳಿಕೊಳ್ಳುವಾಗ ಕೇಳುವಾತನಿಗೆ ಅಷ್ಟೇ ಪ್ರಮಾಣದಲ್ಲಿ ಅಲ್ಲದಿದ್ದರೂ ಚೂರಾದರೂ ಕಷ್ಟದ, ನೋವಿನ ಅನುಭವ ಆಗಿರಲೇಬೇಕು. ಅಂತವರೊಟ್ಟಿಗೆ ಅಲ್ಲದೆ ಹೇಳಬಾರದು. ಹೇಳಿದರೆ ಒಂದಾ ನಾವೇ ತಪ್ಪಿತಸ್ಥರಾಗುತ್ತೇವೆ. ಅಥವಾ ಜೋಕರುಗಳಾಗುತ್ತೇವೆ.
ಇದೆಲ್ಲ ಯಾವಾಗಲೋ ಕಲಿತ ಪಾಠಗಳು. ರಾಂಗ್‌ದಾರಿ ವಸೂಲು ಮಾಡುವಾಗ ಎಷ್ಟು ಸಲ ಪೋಲೀಸರ ಕಾಲಿಗೆ ಬಿದ್ದಿಲ್ಲ.
ಅವರು ಹುಳದಂತೆ ತುಳಿದು ಅಟ್ಟಿದ್ದರೇ ಹೊರತು ಯಾವತ್ತೂ ವಸೂಲಿಯನ್ನು ಬಿಟ್ಟಿರಲಿಲ್ಲ.
ಗಾಡಿ ಅಷ್ಟರಲ್ಲಿ ಕಲಂದರ್ ಹಾಜಿಯ ಮನೆಯ ಮುಂದೆ ನಿಂತಿತ್ತು. ಗಾಳಿಯಲ್ಲಿ ಬಾಸ್ಮತಿಯ ಗಂಧ. ಲಾಲ್ ಮಾತಿಯಾದಲ್ಲಿ ಶುಕೂರ್ ಮಿಯಾನ ಅಂಗಡಿಯಲ್ಲಿ ಮಾತಂಗಿ ಮೊದಲ ಸಲ ಬಾಸ್ಮತಿ ಅಕ್ಕಿಯನ್ನು ತೋರಿಸಿದ್ದಳು. ಆಗ ಅವಳಿಗೆ ಆರು ತಿಂಗಳು.
ಮೂಟೆಯಿಂದ ಒಂದು ಹಿಡಿ ತೆಗೆದು ಮೂಗಿನ ಬಳಿ ಹಿಡಿದವಳು ಆ ಪರಿಮಳದೊಂದಿಗೆ ನಿಧಾನಕ್ಕೆ ಕಣ್ಣು ಮುಚ್ಚಿದ್ದಳು.
ಆದರೆ ಆತ ನಿರಾಸೆಗೊಳಿಸಿರಲಿಲ್ಲ.
ಐವತ್ತು ಗ್ರಾಂ ತೂಗಿ ಕೊಡು ಅಂತ ಶುಕೂರ್ ಮಿಯಾಗೆ ಹೇಳಿದ್ದ.
ತಿರುಗಿ ಮನೆ ಸೇರುವ ತನಕ ಅವಳು ಅದನ್ನು ಜಗಿಯುತ್ತಿದ್ದಳು.
ಅಕ್ಕಿಹಿಟ್ಟು ಹಸುವಿನ ಹಾಲಿನಂತೆ ಅವಳ ತುಟಿಯಂಚಿನಲ್ಲಿ ಮೆತ್ತಿಕೊಂಡಾಗ ಒರೆಸಲು ಬಿಡದೆ ಗೋಪಾಲ್ ಅವಳ ಕಣ್ಣುಗಳನ್ನೇ ನೋಡುತ್ತಾ ನಿಂತ. ಕರುವೊಂದನ್ನು ನೋಡುವ ಹಾಗೆ.
ಗೋಪಾಲ್ ಯಾದವನ ಬೆನ್ನಿಗೆ ಯಾರೋ ತಟ್ಟಿದರು. ನೋಡಿದಾಗ ಒಬ್ಬ ಹುಡುಗ.
ಹತ್ತಿಪ್ಪತ್ತರ ಪ್ರಾಯ ಇರಬಹುದು. ಅವನು ಎದುರಿಗೆ ನಿಂತಿದ್ದಾಗ ಅತ್ತರಿನ ಬಿರಡೆ ಬಿದ್ದು ಹುಡಿಯಾದ ಹಾಗೆ ಗೋಪಾಲ್ ಯಾದವ್‌ಗೆ ಅನ್ನಿಸಿತು.
“ಅರೇ ಭಾಯಿ.. ತುಂ ಮೇರಾ ಸಾತ್ ಆವೋ.”
ಕೈಯಲ್ಲಿದ್ದ ಹಾರೆ ಪಿಕಾಸು ಗೋಪಾಲನ ಕೈಗೆ ಕೊಡುತ್ತಾ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಗಾಜಿನಲ್ಲಿ ಮುಖ ನೋಡಿಕೊಂಡ. ಮೇಲಕ್ಕೆ ವಿಚಿತ್ರವಾಗಿ ಬಾಚಿಕೊಂಡಿದ್ದ ತನ್ನ ತಲೆ ಕೂದಲಿನ ಬಗ್ಗೆ ಸಂತೃಪ್ತ ನಗೆ ಬೀರುತ್ತಾ ಕಲಂದರ್ ಹಾಜಿಯ ಮೂರನೇ ಹೆಂಡತಿ ಫಾತಿಮಾಗೆ ಹುಟ್ಟಿದ ತ್ವಾಹಾನ ಮಗ ಸಿನಾನ್ ಮುಂದೆ ನಡೆದ. ಆ ಭಾಗ ಕಾರುಗಳಿಗೆ ಪಾರ್ಕಿಂಗ್ ಮಾಡಲು ಸುಲಭ ಆಗುವಂತೆ ಸಪಾಟು ಮಾಡಲಾಗಿತ್ತು.
ಒಂದಷ್ಟು ದೂರ ನಡೆದಾಗ…
ತೆಂಗಿನ ತೋಪಿನಲ್ಲಿ ಹುಲ್ಲುಗಳು ಬೆಳೆದಿದ್ದ ಒಂದು ಜಾಗ ತೋರಿಸಿ ಹುಡುಗ ಹೇಳಿದ:
“ಇಲ್ಲಿ ಸಾಕು. ಇಲ್ಲಿ ಅಗೆಯಿರಿ ಭಾಯಿ.”
ಆಗಲೇ ತನ್ನನ್ನು ಕರೆದುಕೊಂಡು ಬಂದದ್ದು ಗುಂಡಿ ತೋಡುವ ಕೆಲಸಕ್ಕೆ ಅಂತ ಗೊಪಾಲನಿಗೆ ಗೊತ್ತಾದದ್ದು.
“ಆಳ?”
“ಭಾಯಿಯಷ್ಟು ಆಳ ಸಾಕು.” ಸಿನಾನ್ ಆತನ ಅಸಂಖ್ಯ ಪ್ರೇಯಸಿಯರಲ್ಲಿ ಒಬ್ಬಳಾದ ರಿಯಾರಾಫಿಗೆ ವಾಟ್ಸಾಪ್ ಮೆಸೇಜ್ ಕಳಿಸುತ್ತಾ ಹೇಳಿದ.
“ಅಗಲ?”
“ಭಾಯಿಯಷ್ಟು ಅಗಲ ಸಾಕು.”
ಗೋಪಾಲ್ ಪಿಕ್ಕಾಸಿನ ಮೊನೆಯಿಂದ ಮಣ್ಣಿನ ಮೇಲೆ ನಿಧಾನಕ್ಕೆ ಗೀರಿದ.
ಬೇಸಿಗೆ ಕಾಲ ಶುರುವಾಗಿದ್ದರೂ ಬಿಸಿಲು ನೆಲ ತಾಕದಂತೆ ತಡೆದಿರುವ ತೆಂಗಿನ ಗರಿಗಳಿಗೆ ಕೃತಜ್ಞತೆ ಹೇಳಿದ. ಮಣ್ಣಿನ ಲಕ್ಷಣ ನೋಡಿದರೆ ಸಂಜೆ ಹೊತ್ತಿಗೆ ಒಂದಾಳು ಆಳ ಅಗಲದ ಗುಂಡಿ ತೋಡಿ ಮುಗಿಸಬಹುದು. ಆತ ಕೆಲಸ ಶುರು ಹಚ್ಚಿದ. ಅದರೆಡೆಯಲ್ಲಿ ಆತನ ಬಗ್ಗೆ ವಿಚಾರಿಸಿದ ಹುಡುಗ ಗೂಗಲ್ ಹತ್ತಿ ಸೀದ ಲಾಲ್ ಮಾತಿಯಾಗೆ ಹೋಗಿದ್ದು ಗೋಪಾಲ್ ಅರಿಯಲಿಲ್ಲ.
“ಬಿಹಾರದಲ್ಲಿ ಲಾಲ್ ಮಾತಿಯಾ ಅಂತ ಊರೇ ಇಲ್ಲವಲ್ಲ ಭಾಯಿ.” ಸಿನಾನ್ ಹೇಳಿದ.
ಮಣ್ಣಿಗೆ ನಾಟಿದ್ದ ಪಿಕ್ಕಾಸನ್ನು ಕೀಳದೇ ಗೋಪಾಲ್ ಯಾದವ್ ಸಿನಾನನ ಮುಖ ನೋಡಿದ.
“ಲಾಲ್ ಮಾತಿಯಾ ಬಿಹಾರದಲ್ಲಿದೆ. ಯೇ ಮೇರಾ ಗಾವ್ ಹೇ.”
“ತುಂ ಜೋಕ್ ಭತ್ ಬೋಲೋ ಭಾಯಿ. ಅದು ಜಾರ್ಖಂಡಲ್ಲಿರೋದು. ಇಲ್ಲಿ ನೋಡಿ.”
ಹೆಣದ ಮುಖದಿಂದ ಬಿಳಿ ಬಟ್ಟೆ ಸರಿಸುವಂತೆ ಮೊಬೈಲ್ ಸ್ಕ್ರೀನಿನಲ್ಲಿ ಬಿಹಾದಿಂದ ಜಾರ್ಖಂಡಿಗೆ ಹೋಗಿ ಬಿದ್ದಿರುವ ಲಾಲ್ ಮಾತಿಯಾವನ್ನು ಗೋಪಾಲನಿಗೆ ತೋರಿಸಿದ. ತನ್ನಂತೆಯೇ ತನ್ನ ಊರು ಕೂಡ ಬಿಹಾರವನ್ನು ಬಿಟ್ಟಿದೆ. ಆತ ನಿಧಾನಕ್ಕೆ ದೀರ್ಘ ಶ್ವಾಸ ತೆಗೆದುಕೊಂಡ. ಹಾಗೆಯೇ ನಿಧಾನಕ್ಕೆ ಬಿಟ್ಟ. ಪ್ರೀತಿ ಪಾತ್ರರ ಸಾವಿಗೆ ಅವನು ಹಾಗೆಯೇ ಮಾಡುತ್ತಿದ್ದದ್ದು.
ಗೋಪಾಲ್ ಯಾದವ್ ಮಣ್ಣಿನಲ್ಲಿ ಹುದುಗಿದ್ದ ಪಿಕಾಸು ಎತ್ತಿದ. ಅದರ ಜೊತೆ ಬಂದ ಹಸಿ ಮಣ್ಣಿನ ಗಟ್ಟಿಯಲ್ಲಿ ಬಿಹಾರವನ್ನು ಕಲ್ಪಿಸಿಕೊಂಡ. ಆತನ ಕಣ್ಣುಗಳು ಹನಿಗೂಡಿದವು. ಕೋಪದಿಂದ ಪಿಕಾಸಿನ ಹಿಡಿಯಿಂದ ಆ ಮಣ್ಣಿನ ಗಟ್ಟಿಗೆ ಬಲವಾದ ಒಂದೇಟು ಕೊಟ್ಟ. ಅದು ತಲೆಬುರುಡೆಯಂತೆ ಎರಡು ಹೋಳಾಯಿತು. ಒಂದು ಬಿಹಾರ. ಮತ್ತೊಂದು ಜಾರ್ಕಂಡ್.
“ಇದರಲ್ಲಿ ನಾನೆಲ್ಲಿದ್ದೇನೆ?”
ಆತ ಸ್ವಗತವಾಗಿ ಕೇಳಿಕೊಂಡ.
ಮತ್ತೇನೂ ನೆನಪಿಲ್ಲ. ಅವರೆಲ್ಲ ಸಾಲು ಸಾಲಾಗಿ ಯಾತ್ರೆ ಹೊರಟಿದ್ದಾರೆ. ಯಾದವರು… ಕೊಯೇರಿಗಳು… ಸಂತಾಲರು…
ಪೆಡಲು ಕಿತ್ತ ಒಂದೊಂದು ಸೈಕಲ್ಲಿನ ಬಾರಿನ ಮೇಲೂ ಇನ್ನೂರೈವತ್ತು ಕಿಲೋ ಕಲ್ಲಿದ್ದಲು. ದುರ್ಗಮವಾದ ಬಂಡೆಕಲ್ಲುಗಳ ಏರುದಾರಿಯಲ್ಲಿದ್ದಾರೆ.
ಏದುಸಿರು. ಗಾಳಿ ತುಂಬಿದ ಶ್ವಾಸಕೋಶಗಳು ಎದೆಗೂಡನ್ನು ಪುಡಿಗಟ್ಟಿ ಹೊರ ಬರುತ್ತಿರುವಂತೆ ಗೋಪಾಲನಿಗೆ ಅನ್ನಿಸಿತು. ಬೇಯಿಸಿದ ತರಕಾರಿ ಬೆರೆಸಿದ್ದ ಸ್ವಲ್ಪ ಅನ್ನವಷ್ಟೇ ಬೆಳಿಗ್ಗೆಯಿಂದ ಹೊಟ್ಟೆ ಸೇರಿರುವುದು.
ತಲೆ ತಿರುಗುತ್ತಿದೆ. ಮುಂದೆ ನಡೆಯುತ್ತಿದ್ದ ಮನ್ಜೀ ಒಮ್ಮೆ ಅದುರಿದ.
“ಏನಾಯ್ತು” ಎಂದು ಕೇಳುವ ಮೊದಲೇ ಗಂಟು ಬಿಚ್ಚಿದ ಕಲ್ಲಿದ್ದಲು ಸಮೇತ ಆತ ಬೆಟ್ಟದಂಚಿನ ಪ್ರಪಾತಕ್ಕೆ ಬಿದ್ದು ಬಿಟ್ಟಿದ್ದ.
ಸುತ್ತಲೂ ಕತ್ತಲು. ಸಮಯ ಎಷ್ಟಾಯಿತೋ ಏನೋ. ಗುಂಡಿಯ ಆಳ ಅಗಲ ನೋಡಿದಾಗ ಗೋಪಾಲ್ ಯಾದವನಿಗೆ ಆಶ್ಚರ್ಯವಾಯಿತು. ಪಾರ್ಕಿಂಗಿಂದ ಕಾರುಗಳು ಹೋಗುತ್ತಿರುವ ಸದ್ದು. ಸತ್ಕಾರ ಸುಮಾರಾಗಿ ಮುಗಿಯುತ್ತಾ ಬಂದಿದೆ ಅಂತ ಅನ್ನಿಸಿತು. ಗಲಾಟೆ ಗದ್ದಲಗಳೊಂದೂ ಕೇಳಿಸುತ್ತಿಲ್ಲ.
ಆತ ಗುಂಡಿಯ ಆ ಹಸಿ ಮಣ್ಣಿಗೊರಗಿದ. ಆಗ ಗಾಳಿಯೊಂದಿಗೆ ಆಟವಾಡುತ್ತಿದ್ದ ತೆಂಗಿನ ಗರಿಯ ಎಡೆಯಿಂದ ಬೆಳದಿಂಗಳ ಚೂರೊಂದು ಗುಂಡಿಯೊಳಗೆ ಬಂತು.
ಜೊತೆಗೆ ಸಿನಾನೂ.
ಗುಡ್ಡೆ ಹಾಕಿದ್ದ ಮಣ್ಣಿನ ಮೇಲೆ ಕಾಲೆತ್ತಿ ಇಟ್ಟು ಅವನು ಕೇಳಿದ.
“ಹೋಗಯಾ?”
“ಹಾ… ಜೀ…”
ಗೋಪಾಲ್ ಯಾದವ್ ಎದ್ದ. ಸಿನಾನ್ ಕೈ ಚಾಚಿದ. ಅವನ ಕೈ ಹಿಡಿದು ಮೇಲೆ ಬಂದಿದ್ದೇ ತಡ ಅದೆಲ್ಲಿಂದಲೋ ಮೂರ್ನಾಲ್ಕು ಜನರು ಒಂದು ದೊಡ್ಡ ಗಡಿಗೆಯನ್ನು ಹೊತ್ತು ತಂದು ಗುಂಡಿಗೆ ಮಗುಚಿದರು. ಮಾಂಸದ ತುಂಡುಗಳೊಂದಿಗೆ ಬಿರಿಯಾನಿ ಗುಡ್ಡೆಯಾಗಿ ಗುಂಡಿಗೆ ಬೀಳುವಾಗ ಗೋಪಾಲನ ಎದೆ ಬಡಿತ ಜೋರಾಗಿತ್ತು. ತಲೆ ಎತ್ತಿ ನೋಡಿದರೆ ಮತ್ತೊಂದು ಗಡಿಗೆ ಬರುತ್ತಿದೆ. ಅದರ ನಂತರ ಬಂದದ್ದು ಎಷ್ಟೆಂದು ಆತ ಲೆಕ್ಕವಿಡಲಿಲ್ಲ. ಕೊನೆಯದಾಗಿ ಇನ್ನೂ ಧಂ ತೆಗೆಯದ ಚೆಂಬು ಬಂತು.
ಎಂಜಲಿನಿಂದ ಗುಂಡಿ ತುಂಬಿತು.
“ಇನ್ನು ಅದನ್ನು ತುಳಿದು ಲೆವೆಲ್ ಮಾಡಿ.” ಹುಡುಗ ಹೇಳಿದ.
ಗೋಪಾಲ್ ಯಾದವ್ ಮೌನವಾಗಿ ಆ ಗುಂಡಿಯ ಬಳಿ ನಿಂತೇ ಇದ್ದ.
“ತುಳಿದು ಲೆವೆಲ್ ಮಾಡು ಭಾಯಿ.”
ಸಿನಾನ್ ಜೋರಾಗಿ ಹೇಳಿದ. “ಗಂಟೆ ಹನ್ನೊಂದಾಯ್ತು”
ಗೋಪಾಲ್ ಯಾದವ್ ಕಾಲೆತ್ತಿದ.
ಬಿದ್ದಿರುವುದು ಬಾಸ್ಮತಿ.
“ತುಳಿ ಭಾಯಿ” ಸಿನಾನ್ ಜೋರು ಮಾಡಿದ.
ತುಳಿದ. ಎದೆಗೇ ತುಳಿದ.
ಮೊದಲಿಗೆ ಅಳುವಿನ ಸದ್ದು. ಮತ್ತದು ನರಳಿಕೆಯಾಯಿತು. ಕೊನೆಗೆ ಅದೂ ಇಲ್ಲವಾಯಿತು.
“ಇನ್ನು ಮುಚ್ಚಿ ಬಿಡು ಭಾಯಿ”
ಸಿನಾನ್ ಹೇಳಿದ.
ಬೆವರಿನ ಸ್ನಾನವಾಗಿತ್ತು. ಕಾಲಿನಲ್ಲಿ ತುಪ್ಪ ಮಸಾಲೆ ಎಲ್ಲ ಮೆತ್ತಿಕೊಂಡಿತ್ತು.
ಹಾರೆಯಿಂದ ಮಣ್ಣುಗೋರಿ ಗುಂಡಿಗೆ ಹಾಕುವಾಗ ಗೋಪಾಲನನ್ನೂ ಸೇರಿಸಿ ಸೆಲ್ಫಿಗೆ ಫೋಸ್ ಕೊಡುತ್ತಾ ಸಿನಾನ್ ಕೇಳಿದ.
“ಭಾಯಿ.. ಭಾಯಿಗೆಷ್ಟು ಮಕ್ಕಳು?”
“ಒಬ್ಬಳೇ ಮಗಳು.”
“ಹೆಸರೆಂತ?”
“ಬಾಸ್ಮತಿ”
“ನಿಕಾ ಆಗಿದೆಯಾ?”
“ಇಲ್ಲ.”
ಅದ ಕೇಳಿದ ಸಿನಾನ್ ಮೊಬೈಲ್ ಕಿಸೆಗೆ ಹಾಕಿಕೊಂಡು ಆಕಾಂಕ್ಷೆಯೊಂದಿಗೆ ಮುಂದಿನ ಪ್ರಶ್ನೆ ಕೇಳಿದ.
“ಕಲೀತಿದ್ದಾಳಾ?”
“ಇಲ್ಲ.”
“ಮತ್ತೆ?”
“ಸತ್ತಳು.”
“ಸತ್ತಳಾ?” ಅಷ್ಟೇನೂ ಆಘಾತವಾಗದಿದ್ದರೂ ಆ ಉತ್ತರ ಹುಡುಗನನ್ನು ತಟ್ಟಿತು.
“ಹೇಗೆ?” ಅವನು ಕೇಳಿದ.
“ಹಸಿದು!”
ಗೋಪಾಲ್ ಯಾದವ್ ಮತ್ತೊಂದು ಹಾರೆ ಮಣ್ಣು ಬಾಸ್ಮತಿಯ ಮೇಲೆ ಹಾಕಿದ. ಮತ್ತೆ ನಿಧಾನವಾಗಿ ಶ್ವಾಸ ಎಳೆದುಕೊಂಡ.
ಅನುವಾದ: ಸುನೈಫ್
ಸುನೈಫ್, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದವರು. ಸದ್ಯ ಕೇರಳದ ಕಲ್ಲಿಕೋಟೆಯಲ್ಲಿ (ಕೋಝಿಕ್ಕೋಡು) ಉದ್ಯೋಗಿ. ಅನುವಾದ ಇಷ್ಟದ ಹವ್ಯಾಸ.
ಚಿತ್ರ- ನಭಾ ಒಕ್ಕುಂದ
ಸಂತೋಷ್ ಏಚ್ಚಿಕಾನಂ, ಕೇರಳದ ಸಮಕಾಲೀನ ಕತೆಗಾರರಲ್ಲಿ ಪ್ರಮುಖ ಹೆಸರು. ಕಾಸರಗೋಡು ಜಿಲ್ಲೆಯ ಕಾಞಂಗಾಡಿನ ಏಚ್ಚಿಕಾನಂ ಹುಟ್ಟೂರು. ಒಟ್ಟವಾದಿಲ್, ಕೋಮಲ, ನರನಾಯುಂ ಪರವಯಾಯುಂ, ಕಥಾಪಾತ್ರಂಙಳುಂ ಪಂಗೆಡುತ್ತವರುಂ, ಒರು ಚಿತ್ರ ಕಥಯಿಲೆ ನಾಯಾಟ್ಟುಕಾರ್, ಮಾಂಗಲ್ಯಂ ತಂತು ನಾನ್ ದೇನಾ, ಶ್ವಾಸಂ, ಬಿರಿಯಾನಿ ಪ್ರಕಟಿತ ಕೃತಿಗಳು. ‘ಕೋಮಲ’ ಕಥಾಸಂಕಲನಕ್ಕೆ 2008ರ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಜೊತೆಗೆ ಹತ್ತಾರು ಪ್ರಶಸ್ತಿ ಪುರಸ್ಕಾರಗಳನ್ನು ಪದೆದುಕೊಂದಿರುವ ಸಂತೋಷ್ ಸಿನಿಮಾ ರಂಗದಲ್ಲೂ ತನ್ನ ಛಾಪು ಮೂಡಿಸಿದ್ದಾರೆ. ನಿದ್ರಾ, ಬ್ಯಾಚುಲರ್ ಪಾರ್ಟಿ, ಅನ್ನಯುಂ ರಸೂಲುಂ, ಇಡುಕ್ಕಿ ಗೋಲ್ಡ್, ಅಬಿ ಮೊದಲಾದವು ಸಂತೋಷ್ ಅವರ ಚಿತ್ರಕತೆಯಲ್ಲಿ ಮೂಡಿ ಬಂದ ಪ್ರಮುಖ ಸಿನಿಮಾಗಳು. ವಾಸ್ತವದ ಕಹಿ ಸತ್ಯಗಳನ್ನು ತೆರೆದಿಡುವ ‘ಬಿರಿಯಾನಿ’ ಕತೆ ವಿವಾದಕ್ಕೀಡಾದದ್ದು ವಿಪರ್ಯಾಸ.
ಓಹ್!
ಮನಸ್ಸು ಕಲಕಿದ ಕತೆ…!
ವಲಸೆ ಕಾರ್ಮಿಕರ ಹಿಂದೆ ಇರಬಹುದಾದ ಕರಾಳ ವಿವರಗಳು ಮತ್ತು ಹಸಿವು ಎಂಬ ಭೂತವನ್ನು ಬಿಚ್ಚಟ್ಟಿರುವ ಕ್ರಮ… ಅದಕ್ಕೆ ವೈರುಧ್ಯ ಎಂಬಂತೆ ಅದೇ ಬಿಹಾರದ ಕಾರ್ಮಿಕ ತೆಗೆದ ಹಳ್ಳದಲ್ಲಿ ಸಿರಿವಂತರ ಬಿರಿಯಾನಿ ಸುರಿದು ಗುಂಡಿಯಲ್ಲಿ ಮುಚ್ಚುವ ವಿವರ ನೇರವಾಗಿ ಹೃದಯಕ್ಕೆ ನಾಟುತ್ತದೆ.
ಇದು ‘ಎರಡು ಇಂಡಿಯಾ’ದ ಕತೆ
ಬಹಳ ಕಾಲ ಕಾಡುವ ಕತೆ ಇದು. ಇಡೀ ಭಾರತದ ಇವತ್ತಿನ ಚಿತ್ರ ಅಡಗಿದೆ .ಬಿಹಾರ ಆಹಾರ ಬಿರಿಯಾನಿ ಇವೆಲ್ಲ ಸಮಾನಾರ್ಥಕ ಪದಗಳೇ?
ಹಸಿವು ಮತ್ತು ಬಿರಿಯಾನಿ, ಬಡತನ ಮತ್ತು ಆಡಂಬರ ಇವೆಲ್ಲ ಸಮಾನಾಂತರ ಪದಗಳಾಗಿ ಮಾರ್ಪಡುತ್ತಿರುವ ಇಂಡಿಯಾದಲ್ಲಿದ್ದೇವೆ
ಕತೆಯೊಂದು ಸೂಚ್ಯವಾಗುವುದರ ವಿಧಾನದ ಪ್ರತೀಕದಂತಿದೆ. ಕತೆಯನ್ನು ಓದುತ್ತ ಹೋದಂತೆ ನೈಜ ಘಟನೆಗಳು ತಳುಕು ಹಾಕಿಕೊಂಡಿದೆ ಎನಿಸಿತು. ಈ ಕತೆಯಲ್ಲಿ ಬರುವ ಬಿಹಾರ್ನ ಲಾಲ್ ಮಾಟಿ ಹಾಗೂ ಕಲ್ಲಿದ್ದಲು, ಪೊಲೀಸರು, ಮುರಿದ ಪೆಡಲ್ಗಳ ವಿವರಗಳು ಸತ್ಯವೇ ಆಗಿದೆ. ಪತ್ರಕರ್ತ ಪಿ ಸಾಯಿನಾಥ್ ಟೈಮ್ಸ್ ಆಫ್ ಇಂಡಿಯಾಗೆ ಬರೆದ “Everybody loves a good draught” ಲೇಖನ ಸರಣಿಯಲ್ಲಿ ಈ ಕುರಿ ವಿವರಗಳು ಪ್ರತ್ಯೇಕವಾಗಿ ದಾಖಲಾಗಿವೆ. ಈ ಎಲ್ಲವನ್ನ ಹೊರತು ಪಡಿಸಿ ಕತೆಯಾಗಿ ಓದಿದರೆ. ಬಿರಿಯಾನಿ ನೆಲಕ್ಕೆ ಬಿದ್ದಿದ್ದ ಮಾತ್ರವೇ ಉಳಿಯುತ್ತದೆ. ಕತೆಯೂ ಉಳಿದು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ.
ಬಿಹಾರದ ಮಾಹಿತಿಗಳು ಎಷ್ಟು ನೈಜತೆಯಿಂದ ಕೂಡಿವೆಯೋ ಅಷ್ಟೇ ಸತ್ಯವಾದ ವಿವರಗಳು ಕಾಸರಗೋಡಿನ ಮುಸ್ಲಿಮರ ಆಡಂಬರದ ಬಗ್ಗೆಯೂ ಬರೆದಿದ್ದಾರೆ
ಹಸಿವು ಮತ್ತು ಸಂಭ್ರಮದ ಮುಖಾಮುಖಿಯಾದಾಗ ನಾವೆಲ್ಲಿರುತ್ತೇವೆ? ಇಂತಹ ಪ್ರಶ್ನೆಗಳನ್ನು ನನ್ನಲ್ಲಿ ಎಬ್ಬಿಸಿತು ಈ ಅದ್ಬುತ ಕತೆ. ಅನುವಾದಿಸಿದ ಸುನೈಫ್ ಗೆ ಧನ್ಯವಾದಗಳು.