ಭುವನ ಹಿರೇಮಠ ಕವಿತೆ : ನಿತ್ರಾಣ ಹಗಲುಗಳು

           ಧ್ವನಿ : ಭುವನ ಹಿರೇಮಠ

ಏನು ಹಾಡಲಿ ಹೇಳು
ನೀನು ನಿದ್ದೆಯನೆ ಗೆದ್ದ ಸೋಗು ತೊಟ್ಟರೆ,
ಬಗಲು ಚಿವುಟಿದರೆ ನವಿರೇಳದ
ಜಗದ ಹರೆಯಕ್ಕೆ
ಇಡಿ ರಾತ್ರಿ ಮಿಣುಗಿದರೂ
ಕಾಣದ ತಾರೆಗಳಿಗೆ
ಭುವಿಯ ಹುಣ್ಣಿಮೆಯೇ ಶಾಪ

ಕಾಸ್ಮಿಕ್ ಕ್ವೀನುಗಳ ಭರಾಟೆಯಲ್ಲಿ
ಯಾರು ಗಂಡು ಯಾರು ಹೆಣ್ಣು
ಎಲ್ಲವೂ ಕೈಚಳಕದ ಮಾಯೆ
ಮನಸಿಗಿಂತ ಮೈಯ್ಯನ್ನೇ ಸುಖಿಸುವ ಗ್ರಹವೊಂದರಲ್ಲಿ
ಹುಟ್ಟಿದವರು ನಾವು
ಮುಂಬರುವ ಜನ್ಮಗಳ ಮಾತು ತೆಗೆದರೆ
ಚಡ್ಡಿಯಿಲ್ಲದೆ ನಗಬಹುದು,
ತಾರೆಗಳ ಸಾಗರಗಳೆಲ್ಲ
ಉಕ್ಕಿ ಉಕ್ಕಿ ಬರಬಹುದು

ಮನಸ್ಸು ಮಾಡಿದರೆ
ಕಾಲ ಹಿಗ್ಗುತ್ತದೆ ಕುಗ್ಗುತ್ತದೆ
ಓಡುತ್ತದೆ ನಡೆಯುತ್ತದೆ
ಮಲಗಲೂಬಹುದು,
ನಿತ್ರಾಣ ಹಗಲುಗಳಿಗೆ
ಗಂಜಿಯಾಗುವ ಕತ್ತಲೆ
ಒಂದು ಎರಡು ಮೂರು
ಎಣಿಸುತ್ತಲೇ ಇದೆ ಅನಂತವನ್ನೂ,
ಹತ್ತು ಬೆರಳುಗಳ ಜೀವ
ಎಷ್ಟು ದಿನಗಳ ಎಣಿಸೀತು?

ನಿನ್ನ ರೆಪ್ಪೆಗಳ ಲೆಕ್ಕ ಮಾಡಲು
ಕಣ್ಣು ತದೇಕವಾದಾಗಲೊಮ್ಮೆ
ನನ್ನದೊಂದು ರೆಪ್ಪೆಗೂದಲು ಉದುರಿ ಬೀಳುತ್ತದೆ
ಲೆಕ್ಕ ತಪ್ಪಿಸಲು ಇದಿಷ್ಟು ರಾಜಕಾರಣ ಸಾಕು,
ಏನು ಹಾಡಲಿ ಹೇಳು
ಮತ್ತೆ ಮತ್ತೆ ನಮ್ಮ ಮಧ್ಯೆ
ಹಗಲುಗಳೇ ಹಲ್ಲು ಕಿಸಿದರೆ

***

ಚಿತ್ರ : ನಿಹಾರಿಕಾ ಶೆಣೈ


7 comments to “ಭುವನ ಹಿರೇಮಠ ಕವಿತೆ : ನಿತ್ರಾಣ ಹಗಲುಗಳು”
  1. ಆದ್ಬುತ ಕವಿತೆ
    ಪ್ರತಿ ಪ್ರತಿಮೆಗಳು ಸಾಥ€ಕತೆ ಪಡೆದಿವೆ
    ಓದುತ್ತ ಹೋದಂತೆ ಕವಿತೆ ಎದೆಯೊಳಗೆ ಹೆಚ್ಚಾಗಿ
    ಕಣ್ಣು ಒದ್ಲೆಯಾಗುತ್ತವೆ.

  2. ಕವನ ಇಷ್ಟವಾಯ್ತು ಭುವನಾ ,

    ಚಿವುಟಿದರೆ ನವಿರೇಳದ ಜಗದ ಹರೆಯ ,,,, ವಾವಾವಾವಾ

  3. ನಿಮ್ಮ ಇನ್ನಷ್ಟು ಕವನಗಳನ್ನು ಓದುವಾಸೆ. upload ಮಾಡಿ.
    ನೀವು ಭಾವನೆಗಳ ಆಳಕ್ಕೆ ಹೋಗುವುದು,ಅವುಗಳನ್ನು ಕಾವ್ಯಾತ್ಮಕವಾಗಿ ನೋಡಿ ಅಕ್ಷರ ರೂಪದಲ್ಲಿ ನಮಗೆಲ್ಲರಿಗೂ ಉಣಬಡಿಸುವ ಪರಿ ನಿಜವಾಗಲೂ ಅದ್ಭುತ.

ಪ್ರತಿಕ್ರಿಯಿಸಿ