
Jackson Pollock, “Untitled”, ca. 1943/ metmuseum.org
ನಾನು ಕೆಲವೊಮ್ಮೆ ಹೆದರುತ್ತೇನೆ ..
ಕುರೂಪಿಗಳು ಮತ್ತು ದೈತ್ಯರು ಧರಿಸಿರುವ
ಫ್ಯಾನ್ಸಿ ಡ್ರೆಸ್ನಲ್ಲಿ ಫ್ಯಾಸಿಸಂ ಬರುತ್ತದೆ
ಎಂದು ಜನ ಭಾವಿಸಿರುತ್ತಾರೆ,
ನಾಜಿಗಳ ಮುಗಿಯದ ಪ್ರದರ್ಶನದೊಳಗಿಂದ
ಎದ್ದು ಬರುವವರಂತೆ ..
ಫ್ಯಾಸಿಸಂ ನಿಮ್ಮ ಸ್ನೇಹಿತನಂತೆ ಬರುತ್ತದೆ..
ನಿಮ್ಮ ಗೌರವವನ್ನು ಪುನಃ ಸ್ಥಾಪಿಸಿ
ನೀವು ಹೆಮ್ಮೆ ಪಡುವಂತೆ ಮಾಡಿ
ನಿಮ್ಮ ಕೈಗೊಂದು ಕೆಲಸ ಕೊಟ್ಟು
ನೆರೆಹೊರೆಯವರನ್ನೇ ಇಲ್ಲವಾಗಿಸಿ
ನಿಮ್ಮ ಭವ್ಯ ಗತವನ್ನು ನೆನೆಪಿಸಿ
ನಿಮ್ಮೊಳಗಿನ ಠಕ್ಕನನ್ನು ಭ್ರಷ್ಟನನ್ನೂ ಇಲ್ಲವಾಗಿಸುತ್ತದೆ,
ನಿಮ್ಮಂತಿಲ್ಲದ ಎಲ್ಲವನ್ನೂ ಹೊಡೆದು ಹಾಕುತ್ತದೆ
ಹೊರತು ..
ಅದೆಂದೂ ಹೀಗೆ ಸಾರಿಕೊಂಡು ಬರುವುದಿಲ್ಲ,
“ನಮ್ಮ ಕಾರ್ಯಸೂಚಿ ನೈತಿಕ ಪೊಲೀಸ್ಗಿರಿ, ಸಾಮೂಹಿಕ ಜೈಲು ಶಿಕ್ಷೆ, ಸಾಗಾಣಿಕೆ, ಯುದ್ಧ ಮತ್ತು ಕಿರುಕುಳ”
ಮೈಕಲ್ ರೊಸೆನ್ -2014 | ಕನ್ನಡಕ್ಕೆ : ಮಂಜುನಾಥ್ ನರಗುಂದ
ಮೂಲತಃ ಇಂಗ್ಲೆಂಡಿನವರಾದ ಮೈಕೆಲ್ ವೇನ್ ರೋಸೆನ್ ಮಕ್ಕಳ ಕಾದಂಬರಿಕಾರರಾಗಿ ಸಾಹಿತ್ಯ ಜಗತ್ತಿಗೆ ಚಿರಪರಿಚಿತ. ಇದಲ್ಲದೇ ಅವರು ಟಿವಿ ನಿರೂಪಕ ಮತ್ತು ರಾಜಕೀಯ ಅಂಕಣಕಾರರಾಗಿಯೂ ಜನಪ್ರಿಯರಾಗಿದ್ದಾರೆ. ರೋಸೆನ್ ಅವರು 1974 ರಲ್ಲಿ ಮೊದಲ ಬಾರಿಗೆ ಮಕ್ಕಳ ಕವಿತೆಗಳ ಸಂಗ್ರಹ ‘ಮೈಂಡ್ ಯುವರ್ ಓನ್ ಬಿಸಿನೆಸ್’ ಪ್ರಕಟಿಸುವ ಮೂಲಕ ಮಕ್ಕಳ ಸಾಹಿತ್ಯಕ್ಕೆ ತೆರೆದುಕೊಂಡರು. ಅವರ ‘ಕ್ವಿಕ್, ಲೆಟ್ಸ್ ಗೆಟ್ ಔಟ್ ಆಫ್ ಹಿಯರ್, ‘ವಿ ಆರ್ ಗೋಯಿಂಗ್ ಆನ್ ಎ ಬಿಯರ್ ಹಂಟ್ ಆಂಡ್ ಚಾಕೊಲೇಟ್ ಕೇಕ್’ ಕೃತಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವದಲ್ಲದೆ ಹಲವಾರು ಪ್ರಶಸ್ತಿಗಳನ್ನು ಪಡೆದಿವೆ. ಇದರ ಜೊತೆಗೆ ಅವರು ಬಿಬಿಸಿ ರೇಡಿಯೊ 4 ನಲ್ಲಿ ನಡೆಸಿಕೊಡುವ ವರ್ಡ್ ಆಫ್ ಮೌತ್ ಕಾರ್ಯಕ್ರಮ ಕೂಡ ಸಾಕಷ್ಟು ಜನ ಮನ್ನಣೆ ಪಡೆದಿದೆ. ಇನ್ನು ಶಿಕ್ಷಣ ಹಾಗೂ ಪಾಲೆಸ್ತೀನ್ ಸಮಸ್ಯೆಗಳ ಕುರಿತ ಅಭಿಯಾನದಲ್ಲಿ ಮೈಕೆಲ್ ರೋಸೆನ್ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. 2010 ರಲ್ಲಿ ಬಂದ ರಾಜಕೀಯ ಕವಿತೆಗಳ ಸಂಗ್ರಹವನ್ನೊಳಗೊಂಡ ‘ಎಮರ್ಜೆನ್ಸಿ ವರ್ಸ್-ಪೊಯಟ್ರಿ ಇನ್ ಡಿಫೆನ್ಸ್ ಆಫ್ ವೆಲ್ಫೇರ್ ಸ್ಟೇಟ್’ ಎನ್ನುವ ಪುಸ್ತಕಕಕ್ಕೇ ಈ ವಿಚಾರವಾಗಿ ಹಲವು ಕವಿತೆಗಳನ್ನು ಬರೆದಿದ್ದಾರೆ.
Good translation