ತೆಲಂಗಾಣದ ಪಶುವೈದ್ಯೆಯೊಬ್ಬರ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಅವರ ಬರ್ಬರ ಕೊಲೆಗೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ನಾಲ್ವರು ಆರೋಪಿಗಳನ್ನು ಸೈದರಾಬಾದ್ ಪೋಲೀಸರು ಡಿಸೆಂಬರ್ 6ರ ಬೆಳಿಗ್ಗೆ ಎನ್‍ಕೌಂಟರ್‍ವೊಂದರಲ್ಲಿ ಕೊಂದು ಹಾಕಿದ್ದಾರೆ. ಇದಕ್ಕೆ ರಾಷ್ಟ್ರಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಇದರಲ್ಲಿ ಎನ್‍ಕೌಂಟರ್ ಮೂಲಕ ಮಾಡಿದ ಹತ್ಯೆಯನ್ನು ಬೆಂಬಲಿಸಿದವರೇ ಹೆಚ್ಚು ಎಂಬುದು ಎದ್ದು ಕಾಣುವಂತಿದೆ. ಹೈದರಾಬಾದ್-ಸಿಕಂದರಾಬಾದ್‍ನ ಜನರಂತೂ ಈ ಹತ್ಯೆಗಳನ್ನು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇನ್ನು ಮೇನಕಾ ಗಾಂಧಿಯವರ ಹೊರತಾಗಿ ಆಡಳಿತ ಪಕ್ಷದ ಕೆಲ ಸಚಿವರು ಮತ್ತು ಸಂಸತ್ ಸದಸ್ಯರೂ, ಶಾಸಕರೂ ಸೇರಿದಂತೆ ಅದರ ನಾಯಕ ಸಮೂಹ ಈ ಹತ್ಯೆಯನ್ನು ಅನಿವಾರ್ಯ ಕ್ರಮ ಎಂಬಂತೆ ಸಮರ್ಥಿಸಿದ್ದಾರೆ. ವಿರೋಧ ಪಕ್ಷಗಳ ನಾಯಕರು (ಉದಾ: ನಮ್ಮ ಸಿದ್ದರಾಮಯ್ಯನವರು) ಜನರ ಸಮೂಹಸನ್ನಿಗೆ ಶರಣಾದವರಂತೆ ಮಾಸಿಕ ಅಸ್ಥಿರತೆಗೆ ಒಳಗಾಗಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಇದು ನಿಜವಾಗಿಯೂ ಆತಂಕಕಾರಿ ಸಂಗತಿ.
ಪೋಲೀಸರ ಎನ್‍ಕೌಂಟರ್ ವರದಿಯನ್ನು ಅದರ ಸತ್ಯಾಸತ್ಯತೆ ದೃಢಗೊಳ್ಳುವ ಮುನ್ನವೇ ಆಡಳಿತಗಾರರು ಮತ್ತು ರಾಜಕಾರಣಿಗಳು ಬೆಂಬಲಿಸುವುದು, ಸಮರ್ಥಿಸುವುದು ಸಹಜವೇ ಆಗಿದೆ. ಏಕೆಂದರೆ ಇದು ತಂತಮ್ಮ ಸ್ವಹಿತಾಸಕ್ತಿಯ ರಾಜಕರಣದಿಂದಾಗಿ ಸಾರ್ವಜನಿಕ ಜನಸಾಮಾನ್ಯರ ಮಾನ-ಪ್ರಾಣಗಳಿಗೆ ರಕ್ಷಣೆಯ ಭರವಸೆ ಕೊಡಲಾಗದ ತಮ್ಮ ಆಡಳಿತದ ಅದಕ್ಷತೆಯನ್ನು ಹೀಗೆ ಮರೆಮಾಚಿಕೊಳ್ಳುವ ಪ್ರಯತ್ನವೇ ಆಗಿದೆ. ಆದರೆ ಜನಸಾಮಾನ್ಯರು ಹೀಗೆ ಮಾಡವುದು ಅವರು ತಮ್ಮ ಕಾಲುಗಳ ಮೇಲೆ ತಾವೇ ಕಲ್ಲು ಎತ್ತಿಹಾಕಿಕೊಂಡಂತೆಯೇ ಸರಿ. ಏಕೆಂದರೆ, ಯಾವುದೇ ಭಯವಿಲ್ಲದೆ ಮುಂದುವರೆದಿರುವ ಬರ್ಬರ ಅತ್ಯಚಾರಗಳು ಮತ್ತು ನಮ್ಮ ನ್ಯಾಯಾಂಗದಿಂದ ಅವಕ್ಕೆ ಸಕಾಲದಲ್ಲಿ ಸೂಕ್ತ ಶಿಕ್ಷೆಯಾಗದ ಬಗೆಗಿನ(ಉನ್ನಾಂವ್ ಅತ್ಯಾಚಾರ ಪ್ರಕರಣದ ಇತ್ತೀಚಿನ ಭಯಾನಕ ಬೆಳವಣಿಗೆಯನ್ನು ಗಮನಿಸಿ) ಅಸಹಾಯಕತೆ ಮತ್ತು ಆಕ್ರೋಶ ಸಹಜವಾದರೂ, ಅವು ಪೋಲೀಸ್ ವ್ಯವಸ್ಥೆಯ ಕೈ ಬಲಪಡಿಸುವ ದಾರಿ ಹಿಡಿಯುವುದು ಕಾನೂನು ಮತ್ತು ಶಿಸ್ತಿನ ಪರಿಸ್ಥಿತಿಯನ್ನು ಜನರಿಗೆ ಇನ್ನಷ್ಟು ಪ್ರತಿಕೂಲವಾಗುವಂತೆ ಮಾಡುವ ಅಪಾಯದಲ್ಲ್ಲಿ ಕೊನೆಗೊಳ್ಳುವುದೇ ಸರಿ.
ಅತ್ಯಾಚಾರದಂತಹ ಬರ್ಬರ ಕೃತ್ಯಗಳನ್ನು ಕಾನೂನು ಮತ್ತು ಶಿಸ್ತನ ಕ್ರಮಗಳ ಮೂಲಕ ತಡೆಗಟ್ಟುವಲ್ಲಿ ವಿಫಲವಾಗುವ ಪೋಲೀಸ್ ವ್ಯವಸ್ಥೆಯೊಂದು ಜನರ ಆಕ್ರೋಶದ ಕಾರಣದಿಂದಲೋ ರಾಜಕೀಯ ಆಡಳಿತಗಾರರ ಒತ್ತಡಕ್ಕೆ ಒಳಗಾಗಿಯೋ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಯಾರೋ ಪಾಪಿ ಪರದೇಶಿಗಳನ್ನು ಅಥವಾ ಇಂತಹ ಸಂದರ್ಭಗಳಿಗೆಂದೇ ತಮ್ಮಿಂದ ಗುರುತಿಸಲ್ಪಟ್ಟ ಜನರನ್ನು ಅಪರಾಧಿಗಳೆಂದು ಎಳೆದುತಂದು ನ್ಯಾಯಾಲಯಗಳ ಮುಂದೆ ಹಾಜರುಪಡಿಸಿ ಪರಿಸ್ಥಿತಿಯನ್ನು ಸದ್ಯಕ್ಕೆ ಶಮನಗೊಳಿಸುವ ಪ್ರಯತ್ನ ಮಾಡುವುದನ್ನು ಎಲ್ಲರೂ ಬಲ್ಲರು. ಹೀಗಾಗಬಾರದೆಂದೇ ನ್ಯಾಯ ವಿತರಣೆಯ ಜವಾಬ್ದಾರಿಯನ್ನು ಕಾನೂನು ವ್ಯವಸ್ಥೆ ಪೋಲೀಸರಿಗೆ ನೀಡದೆ, ನ್ಯಾಯಾಂಗ ವ್ಯವಸ್ಥೆಯೊಂದನ್ನು ರೂಪಿಸಿ ಪೋಲೀಸ್ ತನಿಖೆಯನ್ನೂ ಕಾನೂನು ಪ್ರಕಾರ ವಿಚಾರಣೆಗೆ ಒಳಪಡಿಸಿ ನ್ಯಾಯದಾನ ಅಥವಾ ಶಿಕ್ಷೆ ನೀಡಿಕೆಯ ಕರ್ತವ್ಯವನ್ನು ಅದಕ್ಕೆ ನೀಡಿದೆ. ಹಾಗಾಗಿ ಸದರಿ ಎನ್‍ಕೌಂಟರ್‍ಗೆ ಬಲಿಯಾದವರು ನಿಜವಾದ ಅಪರಾಧಿಗಳೆಂದು ಸಾಬೀತಾದವರಲ್ಲ ಮತ್ತು ಈ ಕಾರಣದಿಂದ ಇದು ಸಾಮೂಹಿಕ ಕೊಲೆಯೆಂದು ಸಾರ್ವಜನಿಕ ಹಿತದೃಷ್ಟಿಯಿಂದಲೂ, ಕಾನೂನಿನ ಪ್ರಕಾರವೂ ಪರಿಗಣಿತವಾಗುವ ಅವಕಾಶವಿದೆ.
ಅವಕಾಶವಿದೆ ಎಂದು ಹೇಳಲು ಕಾರಣ, ಅನಿವಾರ್ಯ ಸಂದರ್ಭಗಳಲ್ಲಿ-ಸ್ವರಕ್ಷಣೆಯ ದೃಷ್ಟಿಯಿಂದ-ಪೋಲೀಸರು ಇಂತಹ ಹತ್ಯೆಗಳನ್ನು ಮಾಡಲು ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೆ ಇಲ್ಲಿ ಸ್ವರಕ್ಷಣೆಯ ಅನಿವಾರ್ಯತೆ ಉಂಟಾಗಿತ್ತೆ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ದೊರಕುವವರೆಗೂ ಈ ಹತ್ಯೆಗಳನ್ನು ನ್ಯಾಯ ದಾನವೆಂದು ಸಮರ್ಥಿಸುವುದು, ಸಂಭ್ರ್ರಮಿಸುವುದು, ಅಪಾಯಕಾರಿ. ಇದು ಪೋಲೀಸರ ಸರ್ವಾಧಿಕಾರಕ್ಕೆ ಅವಕಾಶ ನೀಡಿ ನಿರಪರಾಧಿ-ಮುಗ್ಧ ಜನರ ಸಂಕಟ ಮತ್ತು ಹತ್ಯೆಗಳಿಗೆ ಕಾರಣವಾಗುವ ಎಲ್ಲ ಅಪಾಯವಿದೆ. ಇದರಲ್ಲಿ ಮುಂದೆ, ಇಂದು ಎನ್‍ಕೌಟಂರ್‍ನ್ನು ಸಂಭ್ರಮಿಸುತ್ತಿರುವ ಮನೆಯವರೂ ಸೇರಬಹುದು.
ಅಂದ ಮಾತ್ರಕ್ಕೆ ಸದ್ಯದ ತೆಲಂಗಾಣ ಪ್ರಕರಣವೂ ಸೇರಿದಂತೆ ಎಲ್ಲ ಸಂದರ್ಭಗಳಲ್ಲೂ ಹೀಗಾಗುವುದು ಎಂದು ಹೇಳಲಾಗದಿದ್ದರೂ, ಅದೆಂತಹ ಬರ್ಬರ ಅಪರಾಧವಾಗಿದ್ದರೂ ಪ್ರತಿಯೊಂದು ಪೋಲೀಸ್ ಎನ್‍ಕೌಂಟರ್ ಅಥವಾ ಕಸ್ಟಡಿ ಕಿರುಕುಳ ಮತ್ತು ಸಾವಿನ ಪ್ರಕರಣವನ್ನೂ ನ್ಯಾಯಾಂಗ ಪರಿಶೀಲನೆಗೆ ಒಪ್ಪಿಸದೆ ಮನ್ನಿಸಲಾಗದು. ಏಕೆಂದರೆ ಸದ್ಯದ ಪ್ರಕರಣದ ಉದಾಹರಣೆಯನ್ನೇ ತೆಗೆದುಕೊಂಡರೆ, ಪ್ರಕರಣ ನಡೆದ ಬೆಳಗಿನ ಝಾವದ ಸಮಯ, ಶಸ್ತ್ರಧಾರಿಗಳಾದ ಹತ್ತು ಜನ ಪೋಲೀಸರಿದ್ದರೂ ನಿರಾಯುಧರಾಗಿದ್ದ ಆ ನಾಲ್ವರು ಆರೋಪಿಗಳು ಆ ಪೋಲೀಸರ ಮೇಲೆ ಕಲ್ಲುಗಳಿಂದಂದ ದಾಳಿ ಮಾಡಿ ಬಂದೂಕಗಳನ್ನು ಕಸಿದುಕೊಳ್ಳಲು ಯತ್ನಿಸಿದರೆಂಬ ಪೋಲೀಸರ ಹೇಳಿಕೆ ಮತ್ತು ಯಾವ ಪೋಲೀಸರಿಗೂ ಗುಂಡು ತಗುಲಿಲ್ಲವೆಂಬ ವರದಿ ಮೇಲ್ನೋಟಕ್ಕಾದರೂ ಈ ಎನ್‍ಕೌಂಟರ್‍ನ ಸತ್ಯಾಸತ್ಯತೆಯ ಬಗ್ಗೆ ಸಂದೇಹಗಳನ್ನುಂಟು ಮಾಡುವಂತಿವೆ. ಹಾಗಾಗಿ ಎನ್‍ಕೌಂಟರ್ ಪೋಲೀಸರ ಸ್ರರಕ್ಷಣೆಯ ದೃಷ್ಟಿಯಿಂದ ಅನಿವಾರ್ಯವಾಗಿತ್ತೆಂಬುದು ನಿಷ್ಪಕ್ಷಪಾತ ವಿಚಾರಣೆಯೊಂದರಿಂದ ಸಾಬೀತಾಗುವವರೆಗೂ ಇದನ್ನು ಸಂಭ್ರಮಿಸಿ ಸಮರ್ಥಿಸುವುದು ಸಾರ್ವಜನಿಕ ಬೇಜವಾಬ್ದಾರಿತನವಾಗುವುದಲ್ಲದೆ, ಈಗಾಗಲೇ ಅನಧಿಕೃತವಾಗಿ ಭಾಗಶಃ ಜಾರಿಯಲ್ಲಿರುವ ಪೋಲೀಸ್ ಸರ್ವಾಧಿಕಾರವನ್ನು ಪೋಷಿಸಿದಂತಾಗುತ್ತದೆ. ನಮ್ಮ ರಾಜಕಾರಣಿಗಳ ವಿಕ್ಷಿಪ್ತ ವೀರಾವೇಶದ ಹೇಳಿಕೆಗಳ ಜೊತೆಗೆ ಈ ಕಾರ್ಯಾಚರಣೆ ನಡೆಸಿದ ವರಿಷ್ಠ ಪೋಲೀಸ್ ಅಧಿಕಾರಿ ಕನ್ನಡಿಗನೆಂಬ ಮಾಹಿತಿ ಹರಡಿ ಕರ್ನಾಟಕದ ಮಟ್ಟಿಗಾದರೂ ಈ ಕುರಿತ ಚರ್ಚೆಯನ್ನು ದಿಕ್ಕೆಡಿಸುವ ಪ್ರಯತ್ನ ಮತ್ತು ಆತ ಬಾಲ್ಯದಿಂದಲೂ ಆತ ನ್ಯಾಯಕ್ಕಾಗಿ ಹೋರಾಡುತ್ತಿದ್ದವನು ಎಂಬ ಆತನ ಕುಟುಂಬದ ಹಿರಿಯರ ಮಾತುಗಳ ವರದಿಯ ಮೂಲಕ ನಡೆದಿರುವ ಈ ಇಡೀ ಪ್ರಕರಣದ ವೈಭವೀಕರಣ ನಮ್ಮ ಸಮಾಜ ಅಡಿಯಿಂದ ಮುಡಿಯವರೆಗೆ ಪ್ರಜಾಪ್ರಭುತ್ವದ ವಿಷಯದಲ್ಲಿ ಇನ್ನೂ ಅನಕ್ಷರಸ್ಥವಾಗಿದೆ ಎಂಬುದನ್ನು ಅಥವಾ ಈ ಸಮಾಜಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೋಗಿದೆ ಎಂಬುದನ್ನು ಸೂಚಿಸುತ್ತದೆ,.
ಈ ಇಡೀ ಪ್ರಕರಣದಲ್ಲಿ ಅತ್ಯಾಚಾರದ ಆರೋಪಿಗಳ ಜೊತೆ ಮಹಾ ಆರೋಪಿಗಳಾಗಿ ನಿಲ್ಲುವವರೆಂದರೆ, ಈ ಪ್ರಕರಣವನ್ನು ಸಮೂಹ ಸನ್ನಿಗೆ ಇನ್ನಷ್ಟು ಕುಮ್ಮಕ್ಕು ನೀಡುವ ರೀತಿಯಲ್ಲಿ ವರದಿ ಮಾಡುತ್ತಿರುವ ಸಮೂಹ ಮಾಧ್ಯಮಗಳು ಮತ್ತು ತನ್ನ ನಿಧಾನ ಗತಿಯ ಪರಿಣಾಮಗಳ ಬಗ್ಗೆ ಅರಿವೇ ಇಲ್ಲದಂತೆ ಸಾರ್ವಜನಿಕ ಜೀವನದಿಂದ ಸಂಪೂರ್ಣ ಕತ್ತರಿಸಿಕೊಂಡಂತಿರುವ ನಮ್ಮ ನ್ಯಾಯಾಂಗ. ಆದರೆ ಮಾಧ್ಯಮಗಳಿಗೆ ಲಾಭ-ನಷ್ಟ ಅನುಭವಿಸುವ ಖಚಿತವಾಗಿ ಗುರುತಿಸಲು ಸಾಧ್ಯವಿರುವ ಒಡೆಯರೆಂಬುವವರು ಇದ್ದಾರೆ. ಆದರೆ ನ್ಯಾಯಾಂಗಕ್ಕೆ ಅಂತಹ ಒಡೆಯರಿಲ್ಲ. ಹಾಗೆ ನೋಡಿದರೆ ನಮ್ಮ ಪ್ರಜಾಪ್ರಭುತ್ವದಲ್ಲಿ ಅದಕ್ಕೆ ನಾವು 130 ಕೋಟಿ ಜನರೂ ಒಡೆಯರೇ. ಆದರೆ ಆ ಒಡೆತನವನ್ನು ನಮ್ಮ ಪ್ರತಿನಿಧಿಗಳಿಗೆ ಒಪ್ಪಿಸಿ ನಾವು ನಿರಾಳವಾಗಿದ್ದೇವೆ. ಈ ನಿರಾಳತೆಯಲ್ಲಿನ ಉಡಾಫೆತನದ ಪರಿಣಾಮವೇ ಪೋಲೀಸ್ ಸರ್ವಾಧಿಕಾರದ ಸಂಭ್ರಮಾಚರಣೆಯಾಗಿದೆ. ಇದು ಎಲ್ಲ ಆರೋಪಿಗಳನ್ನೂ ಹೀಗೆ ಹತ್ಯೆ ಮಾಡಿದರೆ ಚೆನ್ನ ಎಂಬ ಹತಾಶ ಅಪೇಕ್ಷೆಗೆ ದಾರಿ ಮಾಡಿಕೊಟ್ಟು ಅದು ಸಮೂಹ ಸನ್ನಿಯಾಗಿ ಉಲ್ಬಣಿಸುವ ಮುನ್ನ ನ್ಯಾಯಾಂಗದ ನಿಧಾನಗತಿಗೆ ಕಾರಣವಾಗಿರುವ ನಮ್ಮ ಕಾನೂನು ವ್ಯವಸ್ಥೆಯ ದೌರ್ಬಲ್ಯಗಳನ್ನು ಸರಿಪಡಿಸುವ ಶಾಸನಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಬಹು ವರ್ಷಗಳಿಂದಲೂ ಜಾರಿಯಾಗದೆ ಧೂಳು ತಿನ್ನುತ್ತಿರುವ ಪೋಲೀಸ್ ಸುಧಾರಣೆ ವರದಿಯ ಅನುಷ್ಠಾನಕ್ಕಾಗಿ ನಮ್ಮ ಪ್ರತಿನಿಧಿಗಳನ್ನು ಒತ್ತಾಯಿಸಬೇಕಿದೆ.
ಆದರೆ ನಾವು ಒತ್ತಾಯಿಸುವ ಮತ್ತು ಅವರು ನಮ್ಮ ಈ ಒತ್ತಾಯಕ್ಕೆ ಸ್ಪಂದಿಸುವ ವಾತಾವರಣ ಇಂದಿದೆಯೇ? ಇದ್ದಿದ್ದರೆ ಇದು ಎಂದೋ ಆಗಬೇಕಿತ್ತು. ಆದರೆ ಆಗಿಲ್ಲವೆಂದರೆ ಈ ಇಡೀ ಸಮಸ್ಯೆಯ ಹಿಂದೆ, ಈ ಸಮಸ್ಯೆಗೆ ಕಾರಣವಾಗಿರುವ ಎಲ್ಲ ಕಾರಣಗಳನ್ನೂ ನಿಯಂತ್ರಿಸುವ ಮತ್ತೊಂದು ಪ್ರಬಲ-ಕೇಂದ್ರ-ಕಾರಣವಿದೆ ಎಂದೇ ಅರ್ಥ. ಆ ಕಾರಣವೆಂದರೆ ನಮ್ಮನ್ನೊಂದು ಸ್ಥಿಮಿತದಲ್ಲಿರುವ ಸಮಾಜವಾಗಿ ಕಾಪಾಡಿಕೊಂಡು ಬರುತ್ತಿದ್ದ ಸಮುದಾಯ ಪ್ರಜ್ಞೆಯನ್ನು ನಾಶ ಮಾಡಿ ನಾವು ಪ್ರತಿಯೊಬ್ಬರೂ ಯಾವುದೇ ಎಗ್ಗಿಲ್ಲದೆ ಸುಲಭ ಹಣದ ರಾಶಿಯ ಹಿಂದೆ ಹೋಗಲು ಮತ್ತು ಹಲವರು ಅಂತಹ ಸುಲಭ ಹಣರಾಶಿಯ ದಿಢೀರ್ ಒಡೆಯರಾಗಲು ಹಾಗೂ ಈ ಎಲ್ಲದಕ್ಕೆ ಅಧಿಕೃತ ಮಾನ್ಯತೆ ಒದಗಿಸಲು ಅನುವು ಮಾಡಿಕೊಟ್ಟಿರುವ ಮುಕ್ತ ಮಾರುಕಟ್ಟೆ ಆರ್ಥಿಕತೆ. ಇದು ಸಮಾಜದಲ್ಲಿ ಅಂತರ್ಗತವಾಗಿದ್ದ ನೈತಿಕ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲಗೊಳಿಸಿದೆ. ಇದು ಬೇಂದ್ರೆ ಹೇಳುವ ರುದ್ರವೀಣೆಯ ಮಿಡಿತ. (‘ಯಾಕೋ ಕಾಎ ರುದ್ರವೀಣೆ ಮಿಡಿಯುತಿರುವುದು…’) ಜಗತ್ತು ಕೆರಳಿದೆ. ಎಲ್ಲ ರೀತಿಯಲ್ಲೂ ಉದ್ರೇಕವಾಸ್ಥೆಯಲ್ಲಿದೆ. ಯಾರೂ ಇದಕ್ಕೆ ಹೊರತಲ್ಲ. ಅದು ಈಗ ಎಲ್ಲರನ್ನೂ ಆಂತರಿಕವಾದ ಎಲ್ಲದರಿಂದ ಮುಕ್ತಗೊಳಿಸಿದೆ. ಹಾಗಾಗಿ ಈಗ ಅದು ನಮ್ಮ ಆರ್ಥಿಕತೆಯನ್ನಷ್ಟೇ ಅಲ್ಲ, ನಮ್ಮ ವಾಸದ ನೆಲೆಗಳನ್ನೂ ಅಲ್ಲೋಲ ಕಲ್ಲೋಲಗೊಳಿಸ ತೊಡಗಿದೆ. ಆದರೂ ಗಾಡ್ಗೀಳ್ ವರದಿ ಇರಲಿ, ಕಸ್ತೂರಿರಂಗನ್ ವರದಿಯ ಅನುಷ್ಠಾನವೂ ಬೇಡವೆನ್ನುವ ‘ಅಜ್ಞಾನ; ನಮ್ಮಲ್ಲಿ ಉಂಟಾಗಿದೆ.
ಹಾಗಾಗಿ ಇದು ಎಲ್ಲ ರೀತಿಯ ಅತ್ಯಾಚಾರಗಳ ಕಾಲ. ಅವುಗಳಲ್ಲಿ ಲೈಂಗಿಕ ಅತ್ಯಾಚಾರ ಮತ್ತು ಅದನ್ನು ಮುಚ್ಚಿಹಾಕಬಲ್ಲ ಕಾನೂನು ಅತ್ಯಾಚಾರಗಳೂ ಸೇರಿವೆಯಷ್ಟೆ. ಇದಕ್ಕೆ ‘ಮುಕ್ತ’ ಪೋಲೀಸ್ ವ್ಯವಸ್ಥೆ ಅಥವಾ ಸರ್ವಾಧಿಕಾರ ಅಗತ್ಯವಾಗಿದೆ. ಹಾಗೆಂದೇ ಸಮಾಜಕ್ಕೆ ಈಗ ಅತ್ತ ತುಡಿತ. ಇದು ಸ್ವಯಂ ನಾಶದ ತುಡಿತವೇ ಹೌದು.
ಕನ್ನಡದ ಪ್ರಮುಖ ವಿಮರ್ಶಕ ಮತ್ತು ಪ್ರಖರ ಚಿಂತಕರಲ್ಲೊಬ್ಬರಾಗಿರುವ ಡಿ ಎಸ್ ನಾಗಭೂಷಣ್ ಬೆಂಗಳೂರಿನ ತಿಮ್ಮಸಂದ್ರದವರು. ಸದ್ಯ ಶಿವಮೊಗ್ಗೆಯಲ್ಲಿ ನೆಲೆಸಿದ್ದಾರೆ. ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದಾರೆ . ’ಹೊಸ ಮನುಷ್ಯ’ ಅವರು ಸಂಪಾದಿಸುತ್ತಿರುವ ಸಮಾಜವಾದಿ ಮಾಸಿಕದ ಹೆಸರು.