ಸಂವಿಧಾನದ ರಚನಾ ಸಭೆಯು ಪೌರತ್ವವನ್ನು ಧಾರ್ಮಿಕ ಆಧಾರದ ಮೇಲೆ ವ್ಯಾಖ್ಯಾನಿಸುವ ಪ್ರಯತ್ನವನ್ನು ಮಣಿಸಿದ ಹೊತ್ತು ..

ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿದೆ ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದರೊಂದಿಗೆ ಇದಾಗಲೇ ಕಾಯಿದೆಯ ರೂಪ ತೆಳೆದಿದೆ. ಮಸೂದೆಗೆ ಅಂಕಿತ ದೊರೆಯುವ ಮುಂಚೆಯೇ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಇದನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದೆ. ನಂತರ ತ್ರಿಣಮೂಲ ಕಾಂಗ್ರೆಸ್ ಸಂಸದೆ ಮನುವಾ ಮೊಯ್ತ್ರಾ ಹಾಗೂ ಕಾನೂನು ವಿದ್ಯಾರ್ಥಿಗಳು ಸೇರಿದಂತೆ ಹಲವರು ಈ ಮಸೂದೆಯು ಭಾರತೀಯ ಸವಿಂಧಾನದ ಮೂಲ ರಚನೆಯ ಭಾಗವಾದ ಜಾತ್ಯತೀತ ತತ್ವವನ್ನು ಉಲ್ಲಂಘಿಸುತ್ತದೆ ಎಂದು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯವನ್ನು ತಲುಪಿದ್ದಾರೆ. 

ಮೂಲತಃ, ಈ ತಿದ್ದುಪಡಿ ಕಾಯಿದೆಯು ಡಿಸೆಂಬರ್ 31, 2014ರ ಮುನ್ನ ಭಾರತದಲ್ಲಿ ತಲುಪಿದ್ದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವುದನ್ನು ಉದಾರವಾಗಿಸಿದೆ. ಇದರ ಟೀಕಾಕಾರರ ದೃಷ್ಟಿಯಲ್ಲಿ ವಿವಾದವಿರುವುದು – ಈ ಮಸೂದೆಯಿಂದ ಮುಸ್ಲಿಮರನ್ನು ಹೊರಗಿರಿಸಿರುವುದು ಧರ್ಮದ ಆಧಾರದ ಮೇಲೆ ತಾರತಮ್ಯವಾಗಿದೆ, ಹಾಗೂ ಈ ಮೂಲಕ ಭಾರತೀಯ ಸಂವಿಧಾನದ 14ನೇ ಪರಿಚ್ಛೇದವನ್ನು ಉಲ್ಲಂಘಿಸುತ್ತದೆ.

ಭಾರತದ ಸಂವಿಧಾನದ ಕರಡನ್ನು ರಚಿಸಿದ ಸಂವಿಧಾನ ರಚನಾ ಸಭೆಯು ಪೌರತ್ವವನ್ನು ಧರ್ಮದ ಆದಾರದ ಮೇಲೆ ವ್ಯಾಖ್ಯಾನಿಸುವುದನ್ನು ತಿರಸ್ಕರಿಸಿತ್ತು. ಈ ಲೇಖನವು ಸಂವಿಧಾನ ರಚನಾ ಸಮಿತಿಯ ಸದಸ್ಯರು ಈ ಕುರಿತು ನೀಡಿದ ಅಭಿಪ್ರಾಯಗಳನ್ನು ಪರೀಕ್ಷಿಸುತ್ತದೆ.

ಸಂವಿಧಾನದ ಐದನೇ ಪರಿಚ್ಛೇದವನ್ನು ಕರಡು ರೂಪಕ್ಕೆ ತರುವ ಚರ್ಚೆ ಸಂವಿಧಾನ ರಚನ ಸಭೆಯಲ್ಲಿ 1949ರ ಆಗಸ್ಟ್ 10ರಿಂದ 12ರವರೆಗೆ ನಡೆಯಿತು. ಐದನೇಯ ಪರಿಚ್ಛೇದ, ಇಂದು ಕಾಣುವ ರೀತಿಯಲ್ಲಿ, ಸ್ವತಃ ಡಾ. ಬಿ. ಆರ್. ಅಂಬೇಡ್ಕರ್ ಅವರಿಂದ ರಚಿಸಲ್ಪಟ್ಟಿತ್ತು. ಪ್ರಸ್ತುತ ರೂಪದಲ್ಲಿ ಐದನೇ ಪರಿಚ್ಛೇದವು ಹೇಳುವುದೇನೆಂದರೆ,ಈ ಸಂವಿಧಾನವನ್ನು ಅಂಗೀಕರಿಸುವ ದಿನದಂದು, ಭಾರತದಲ್ಲಿ ನಿವಾಸಗೊಂಡಿರುವ ಪ್ರತಿಯೊಬ್ಬ ವ್ಯಕ್ತಿ ಮತ್ತು- (a)ಭಾರತದ ಪ್ರದೇಶದೊಳಗೆ ಹುಟ್ಟಿದವರು ; ಅಥವಾ (b) ಯಾವುದೇ ಪೋಷಕರು ಭಾರದಲ್ಲಿ ಹುಟ್ಟಿದವರಾಗಿದ್ದವರು; ಅಥವಾ (c) ಈ ಅಂಗೀಕರಿಸಿದ ದಿನದಿಂದ ಕನಿಷ್ಟ ಐದು ವರ್ಷ ಹಿಂದಿನವರೆಗೆ ಭಾರತದ ಪ್ರದೇಶದೊಳಗೆ ನೆಲೆಸಿದವರು, ಭಾರತದ ಪ್ರಜೆಯಾಗುತ್ತಾರೆ.

ಡಾ. ಪಂಜಾಬ್‍ರಾವ್ ಶಾಮ್‍ರಾವ್ ದೇಶ್‍ಮುಖ್ (ಮುಂದೆ 1952ರ ಜವಾಹರಲಾಲ್ ನೆಹರೂರವರ ಪ್ರಥಮ ಸಚಿವ ಸಂಪುಟದಲ್ಲಿ ಕೃಷಿ ಮಂತ್ರಿಯಾದವರು) ಅವರು ಈ ಕರಡಿಗೆ ತಿದ್ದುಪಡಿಯೊಂದನ್ನು ಮುಂದುಮಾಡಿದರು. ಅದು ಈ ರೀತಿ ಹೇಳುತ್ತದೆ:

“೫. (೧) ಭಾರತದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯು– ಎ) ಭಾರತೀಯ ತಂದೆ ತಾಯಿಗಳಿಗೆ ಜನಿಸಿದವನು; ಅಥವಾ ಬಿ) ದೇಶೀಕರಣ ಕಾನೂನಿನ ಅನ್ವಯ ದೇಶೀಕರಣಗೊಂಡಿರುವವನು; ಮತ್ತು ೨) ಯಾವುದಾದರೂ ಪ್ರದೇಶದಲ್ಲಿ ಜೀವಿಸುತ್ತಿರುವ ಪ್ರತಿ ವ್ಯಕ್ತಿಯು ಹಿಂದೂ ಅಥವಾ ಸಿಖ್ ಧರ್ಮದವನಾಗಿದ್ದು, ಬೇರೆ ದೇಶದ ಪ್ರಜೆಯಲ್ಲದೆ ಇದ್ದರೆ ಅಂತಹ ವ್ಯಕ್ತಿಯು ಭಾರತೀಯ ಪೌರತ್ವಕ್ಕೆ ಅರ್ಹನಾಗಿರುತ್ತಾನೆ.” 

ತಮ್ಮ ಭಾಷಣದಲ್ಲಿ ಅವರು ತಮ್ಮ ಪ್ರಸ್ತಾಪವನ್ನು ಹೀಗೆ ಸಮರ್ಥಿಸಿದರು: “ನಾವಿಲ್ಲಿ ಸಾವಿರಾರು ವರ್ಷಗಳ ಇತಿಹಾಸವುಳ್ಳ ದೇಶವಾಗಿದ್ದು ಅದನ್ನು ಹೊರಗೆಸೆಯುತ್ತಿದ್ದೇವೆ, ಹಿಂದೂ ಅಥವಾ ಸಿಖ್‍ಗಳಿಗೆ ಹೋಗಲು ಜಗತ್ತಿನಲ್ಲಿ ಬೇರೆ ಯಾವ ದೇಶವೂ ಇಲ್ಲದಿದ್ದಾಗ್ಯೂ. ಆತ ಹಿಂದೂ ಅಥವಾ ಸಿಖ್ ಅನ್ನುವ ಒಂದೇ ವಿಚಾರದ ಆಧಾರದಲ್ಲಿ ಆತನಿಗೆ ಪೌರತ್ವ ಸಿಗಬೇಕು, ಏಕೆಂದರೇ ಇದೇ ಒಂದು ಪರಿಸ್ಥಿತಿ ಇತರರು ಆತನನ್ನು ಸೇರಿಸಿಕೊಳ್ಳದಂತೆ ಮಾಡುವುದು. ಆದರೆ ನಾವೊಂದು ಜಾತ್ಯತೀತ ರಾಷ್ಟ್ರ, ಹಾಗೂ ಜಗತ್ತಿನ ಯಾವುದೇ ಭಾಗದಲ್ಲಿರುವ ಹಿಂದೂ ಮತ್ತು ಸಿಖ್ಖರಿಗೆ ತಮ್ಮದೇ ಎಂದು ಕರೆದುಕೊಳ್ಳಲು ಮನೆಯೊಂದು ಬೇಕು ಎನ್ನುವುದನ್ನು ನಾವು ಗುರುತಿಸಲು ಸಿದ್ಧರಿಲ್ಲ. ಮುಸ್ಲಿಮರಿಗೆ ತಮಗೆಂದೇ ಪ್ರತ್ಯೇಕವಾಗಿ ಪಾಕಿಸ್ತಾನವೆನ್ನುವ ಜಾಗ ಬೇಕಿದ್ದರೆ, ಹಿಂದೂ ಮತ್ತು ಸಿಖ್ಖರು ಭಾರತವನ್ನೇಕೆ ತಮ್ಮ ಮನೆಯನ್ನಾಗಿ ಹೊಂದಬಾರದು? ಬೇರೆಯವರಿಗೆ ಪೌರತ್ವ ಪಡೆದುಕೊಳ್ಳುವುದರಿಂದ ನಾವಿಲ್ಲಿ ತಡೆಯುತ್ತಿಲ್ಲ. ಪೌರತ್ವ ಹಕ್ಕನ್ನು ಪಡೆಯಲು ನಮಗೆ ಬೇರೆ ಯಾವುದೇ ದೇಶವಿರದಿದ್ದ ಕಾರಣ, ನಾವು ಹಿಂದೂ ಮತ್ತು ಸಿಖ್ಖರಿಗೆ, ಎಲ್ಲಿಯವರೆಗೆ ಈ ಧರ್ಮಗಳನ್ನು ಅನುಸರಿಸುತ್ತಿದ್ದು ಬೇರೆ ಯಾವುದೇ ದೇಶದ ಪೌರತ್ವವನ್ನು ಪಡೆಯುವುದಿಲ್ಲವೋ, ಅಲ್ಲಿಯವರೆಗೆ ಈ ರೀತಿಯ ಪೌರತ್ವವನ್ನು ಉಳಿಸಿಕೊಳ್ಳುವ ಅರ್ಹತೆ ಇರಬೇಕು ಎಂದಷ್ಟೇ ಹೇಳುತ್ತಿದ್ದೇವೆ. ಈ ಕೋರಿಕೆಯು ಯಾವುದೇ ವಿಧದಲ್ಲಿ ಜಾತ್ಯತೀತ ವಿರೋಧಿ ಅಥವಾ ಪಂಥೀಯತೆಯದ್ದು ಅಥವಾ ಕೋಮುವಾದಿ ಎಂದು ನನಗೆ ಅನ್ನಿಸುವುದಿಲ್ಲ. ಯಾರಾದರೂ ಹಾಗೆ ಹೇಳಿದರೆ, ಕನಿಷ್ಟಪಕ್ಷ, ಆತ ತಪ್ಪುಕಲ್ಪನೆ ಹೊಂದಿರುತ್ತಾನೆ. ನನ್ನ ವಿವರಣೆ (ತಿದ್ದುಪಡಿ) ಎಲ್ಲ ಸಾಧ್ಯತೆಗಳನ್ನೂ ಹೊಂದುತ್ತದೆ ಎನ್ನುವುದು ನನ್ನ ಅಭಿಪ್ರಾಯ. ನಮ್ಮ ಆಕ್ರೋಶವಿರುವುದು, ಪಾಕಿಸ್ತಾನ ಸುಖಮಯ ದೇಶವಾಗಿರುತ್ತದೆ ಎಂದು ತಿಳಿದ  ನಮ್ಮ ಜನ ಅಲ್ಲಿ ಹೋಗಿ ಮರಳಿ ಬಂದರೆ ನಾವು ಸಂವಿಧಾನದ ಒಂದಿಲ್ಲೊಂದು ನಿಬಂಧನೆಯ ಮೂಲಕ ಏಕೆ ಗುರುತಿಸಬೇಕು? ಏಕೆಂದರೆ, ಇದರ ಅಗತ್ಯವೇ ಇಲ್ಲ. ಭಾರತದ ಸಂವಿಧಾನ ಅಂಕಿತವಾದಂದು ಅವರು ಭಾರತದಲ್ಲಿ ನಿವಾಸರಾಗಿದ್ದು ಭಾರತೀಯ ಸಂಜಾತರಾಗಿದ್ದರೆ, ಯಾವುದೇ ನೂತನ ನೊಂದಣಿ ಅಥವಾ ಸಾಕ್ಷಿಗಳ ಅಗತ್ಯವಿಲ್ಲದೇ ಅವರು ಪೌರತ್ವದ ಹಕ್ಕುಗಳಿಗೆ ಅರ್ಹರಾಗಿರಬೇಕು. ನನ್ನ ವ್ಯಾಖ್ಯಾನದ ಹಿಂದಿನ ಚಿಂತನೆ ಇದು. ಇದನ್ನು ಸದನ ಒಪ್ಪಿಕೊಳ್ಳಲೆಂದು ನಾನು ಆಶಿಸುತ್ತೇನೆ.” 

ಈ ತಿದ್ದುಪಡಿಗೆ ಸಹಮತ ವ್ಯಕ್ತಪಡಿಸುತ್ತ, ಪ್ರೊ. ಶಿಬ್ಬನ್ ಲಾಲ್ ಸಕ್ಸೇನಾ ಹೇಳಿದರು: ಹಿಂದೂ ಮತ್ತು ಸಿಖ್ ಆಗಿರುವ ಹಾಗೂ ಬೇರೆ ಯಾವುದೇ ದೇಶದ ಪ್ರಜೆಯಾಗಿರದ ಪ್ರತಿಯೊಬ್ಬ ವ್ಯಕ್ತಿ ಭಾರತೀಯ ಪ್ರಜೆಯಾಗಲು ಅರ್ಹರಾಗಿರಬೇಕು ಎಂದು ಹೇಳಲು ನಾವು ಮುಜುಗರ ಪಡುವ ಅಗತ್ಯವಿಲ್ಲ.ನಾವು ಹೊಂದಬಯಸುವ ಎಲ್ಲ ವರ್ಗಗಳನ್ನು ಅದು ಹೊಂದುತ್ತದೆ ಮತ್ತು ಸಮಗ್ರವಾಗಿರುತ್ತದೆ. ‘ಜಾತ್ಯತೀತ’ ಪದವು ನಿಜಾಂಶ ಯಾವುದೆಂದು ಹೇಳಲು ನಮ್ಮಲ್ಲಿ ಭಯ ಉಂಟುಮಾಡಬಾರದು ಮತ್ತು ವಾಸ್ತವವನ್ನು ನಾವು ಎದುರಿಸಬೇಕು. ಹಾಗಾಗಿ ಡಾ. ದೇಶ್‍ಮುಖ್ ಉತ್ತಮ ಸಲಹೆ ನೀಡಿದ್ದಾರೆಂದು ನನ್ನ ಅಭಿಪ್ರಾಯ.

ಇನ್ನೋರ್ವ ಸದಸ್ಯ ಆರ್. ಕೆ. ಸಿಧ್ವಾ ಅವರು ಹೇಳಿದರು: ಮತ್ತು ನನ್ನ ಸನ್ಮಾನ್ಯನೀಯ ಗೆಳೆಯ, ಡಾ. ದೇಶ್‍ಮುಖ್‍, ಈ ಪರಿಚ್ಛೇದಕ್ಕೆ ಯಾವುದೇ ಪ್ರದೇಶದ ಸಂಜಾತರಾದ ಹಿಂದೂ ಮತ್ತು ಸಿಖ್ಖರಿಗೆ ಬಾರತದ ಪೌರತ್ವ ಹೊಂದಲು ಅರ್ಹತೆ ನೀಡುವ ತಿದ್ದುಪಡಿಯ ಸಲಹೆ ನೀಡಿದ್ದಾರೆ. ಅವರು ಈ ಸಮುದಾಯಗಳ ಹೆಸರು ಹೇಳಿರುವ ಹೊತ್ತಿನಲ್ಲಿ ನಾನು ಸರ್, ನಿಮಗೆ, ಹಾಗೂ ಈ ಸದನದ ಸದಸ್ಯರಿಗೆ ಹೇಳಬಯಸುವುದೇನೆಂದರೆ ಭಾರತದ ಹೊರಗೆ ಪಾರಸಿ ಧರ್ಮವನ್ನು ಭೋದಿಸುತ್ತಿರುವ ಸುಮಾರು 16,000 ಜನರಿದ್ದಾರೆ. ಇದರಲ್ಲಿ 12,000 ಜನ ಇರಾನಿನಲ್ಲಿದ್ದಾರೆ ಮತ್ತು ಇರಾನ್‍ನಲ್ಲಿರುವ ಜನ ಭಾರತದಲ್ಲಿರುವ ಪಾರಸಿಗಳು ಭೋದಿಸುವ ಧರ್ಮವನ್ನೇ ಭೋದಿಸುತ್ತಾರೆ.ಡಾ.ದೇಶ್‍ಮುಖ್ ಅವರು ಬಯಸುವ ವಿಚಾರ ಐದನೇಯ ಬಿ ಪರಿಚ್ಛೇದದಲ್ಲಿ ಈಗಾಗಲೇ ಇದೆಯೆಂದು ನನ್ನ ತಿಳುವಳಿಕೆ, ಇದರಲ್ಲಿ ಅಜ್ಜ ಮುತ್ತಜ್ಜರವರೆಗೆ ಭಾರತದ ಹೊರಗೆ ಜನಿಸಿದ್ದರೂ ಅವರು ಬಯಸಿದರೆ ಭಾರತೀಯ ಪ್ರಜೆಯಾಗಬಹುದು. ಡಾ. ದೇಶ್‍ಮುಖ್ ಅವರ ತಿದ್ದುಪಡಿ ಇದಕ್ಕೆಂತ ಹಿರಿದಾದ ಹಕ್ಕು ಮತ್ತು ಸವಲತ್ತನ್ನು ಕಲ್ಪಿಸುತ್ತದೆ. ಕರಡು ಸಮಿತಿಯು ಈ ತಿದ್ದುಪಡಿಯನ್ನು ಪರಿಗಣಿಸಿದರೆ ನನ್ನ ಪಾತ್ರವಿಲ್ಲವಾದವರೂ ಬೇರೆ ಸಮುದಾಯಗಳೂ ಇವೆ ಹಾಗೂ ಕೇವಲ ಹಿಂದೂ ಮತ್ತು ಸಿಖ್ಖರನ್ನು ಉಲ್ಲೇಖಿಸುವುದು ಸಮಂಜಸವಾಗಲಾರದು ಎಂಬುದನ್ನು ಗಮನದಲ್ಲಿಡಬೇಕೆಂದು ನಾನು ಬಯಸುತ್ತೇನೆ. ೧೨,೦೦೦ ಜನ ಪಾರಸಿಗಳು ಇಲ್ಲಿ ಭೋದಿಸಲಾಗುತ್ತಿರುವ ಧರ್ಮವನ್ನೇ ಭೋದಿಸುತ್ತಾರೆ; ಆದರೆ ಅವರ ಅಜ್ಜಂದಿರು ಇರಾನ್‍ನಲ್ಲಿ ಜನಿಸಿರುತ್ತಾರೆ ಹಾಗೂ ಅವರಲ್ಲಿ ಅನೇಕರು ಬಾಂಬೆ ಹಾಗೂ ಭಾರತದ ಇತರ ಜಾಗಗಳಿಗೆ ಬಂದು ಕೆಲವೊಮ್ಮೆ ಅದನ್ನು ತಮ್ಮ ಮನೆಯಾಗಿಸಿಕೊಳ್ಳ ಬಯಸುತ್ತಾರೆ. ನಾನು ಹೇಳುತ್ತಿರುವ ವಿಚಾರ ದೂರವಿರುವ ವಿಚಾರವಾಗಿದೆ, ಆದರೆ ನೀವು ಪರಿಗಣಿಸುತ್ತೀರೇ ಆದಲ್ಲಿ, ನನ್ನ ವಿಚಾರವೇನೆಂದರೆ ನಾವು ‘ಯಾವುದೇ ಸಮುದಾಯ’ವನ್ನು ಉಲ್ಲೇಖಿಸಬೇಕಿಲ್ಲ; ನಾವು ಹಾಗೆ ಮಾಡಿದಲ್ಲಿ ನಮ್ಮ ಗಮನ ಬೇಕಿರುವ ಇತರ ಸಮುದಾಯಗಳನ್ನು ಕಡೆಗೆಣಿಸಿದಂತಾಗುತ್ತದೆ. ಹಾಗಾಗಿ ಈ ತಿದ್ದುಪಡಿಯನ್ನು ಪರಿಗಣಿಸುವುದಿದ್ದರೆ, ನಾನು ಸದನದ ಮುಂದೆ ಈ ದೃಷ್ಟಿಕೋನವನ್ನು ಮುಂದಿಡುತ್ತೇನೆ. 

ಸರ್ದಾರ್ ಭೋಪಿಂದರ್ ಸಿಂಘ್ ಮಾನ್ ಈ ರೀತಿ ಹೇಳಿದರು: ಮಾನ್ಯರೇ, ಹಿಂದೂ ಮತ್ತು ಸಿಖ್ ನಿರಾಶ್ರಿತರ ದೃಷ್ಟಿಕೋನವನ್ನು ಬಹುತೇಕ ಸಮಗ್ರವಾಗಿ ಹೊಂದಿರುವ ‘ಪೌರತ್ವದ ವ್ಯಾಖ್ಯಾನ’ದ ಬೇಡಿಕೆಯನ್ನು ಕರಡು ಸಮಿತಿ ಒಂದು ಮಟ್ಟಿಗೆ ತಲುಪಿದೆ, ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಆದರೆ, ಯಾವತ್ತಿನ ಹಾಗೆ, ಒಂದು ದುರ್ಬಲ ಜಾತ್ಯತೀತತೆ ಒಳನುಸುಳಿದೆ ಹಾಗೂ ಯಾರು ಅದಕ್ಕೆ ಕನಿಷ್ಟರಾಗಿ ಅರ್ಹರೋ ಅವರಿಗೆ ತರವಲ್ಲದ ತಾರತಮ್ಯ ತೋರಿಸಲಾಗುತ್ತಿದೆ. ಹಿಂದೂ ಮತ್ತು ಸಿಖ್ ನಿರಾಶ್ರಿತರ ದೃಷ್ಟಿಕೋನ ಸ್ವಲ್ಪ ಮಟ್ಟಿಗೆ ತಲುಪಲಾಗಿದೆ ಆದರೆ ಸಂಪೂರ್ಣವಾಗಿ ಅಲ್ಲ ಎಂದು ನಾನು ಹೇಳುತ್ತಿದ್ದೆ. ಪೌರತ್ವದ ಪ್ರಶ್ನೆಗೆ ೧೯ ಜುಲೈ ೧೯೪೮ರ ದಿನ ಏಕೆ ನಿಗದಿ ಪಡಿಸಲಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಈ ನತದೃಷ್ಟ ನಿರಾಶ್ರಿತರು ಈ ದಿನಾಂಕವನ್ನು ಮುಂಗಾಣಲು ಸಾಧ್ಯವಿರಲಿಲ್ಲ. ಇಲ್ಲವಾದಲ್ಲಿ ಅವರು ಪಾಕಿಸ್ತಾನದ ಕತ್ತಿಯನ್ನು ಮೊದಲೇ ಆಹ್ವಾನಿಸಿ ಆ ಮೂಲಕ ಇಲ್ಲಿಗೆ ಬಂದು ಪೌರತ್ವದ ಹಕ್ಕನ್ನು ಪಡೆಯುತ್ತಿದ್ದರು. ೧೯ನೇ ಜುಲೈ ೧೯೪೮ರ ನಂತರ ಬಲಿಪಶುಗಳಾದವರಿಗೆ ನಮ್ಮ ಗಡಿಗಳನ್ನು ಮುಚ್ಚುವುದು ಬಹಳ ಕ್ರೂರವಾಗುತ್ತದೆ. ಮಿಕ್ಕ ಎಲ್ಲರಷ್ಟೇ ಅವರೂ ಈ ಮಣ್ಣಿನ ಮಕ್ಕಳು. ಈ ರಾಜಕೀಯ ಅವಘಡವು ಅವರು ಬಯಸಿದ್ದಲ್ಲದಾಗಿದ್ದು, ಭಾರತಮಾತೆಯತ್ತ ಅವರು ಬರಲು ಈ ರಾಜಕೀಯ ಅಡೆತಡೆಗಳನ್ನಿಡುವುದು ಬಹಳ ಕ್ರೂರವಾಗುತ್ತದೆ. ನಮ್ಮ ಬೇಡಿಕೆ ಏನೆಂದರ, ಪಾಕಿಸ್ತಾನದಲ್ಲಿ ಕೋಮು ಗಲಭೆಯಿಂದಾಗಿ ಭಾರತಕ್ಕೆ ಬಂದು ಸಂವಿಧಾನ ಅಂಕಿತಗೊಳ್ಳುವಾಗ ಭಾರತದಲ್ಲಿದ್ದರೆ ಅವರನ್ನು ಸ್ವಾಭಾವಿಕಾವಾಗಿ ಭಾರತದ ಪ್ರಜೆಯೆಂದು ಗುರುತಿಸಬೇಕು ಹಾಗೂ ಅವರಿಗೆ ಯಾವುದೇ ನೋಂದಣಿ ಅಧಿಕಾರಿಯ ಬಳಿ ಹೋಗಿ ಬೇಡುವ, ಆರು ತಿಂಗಳ ನಿವಾಸವನ್ನು ನಿರೂಪಿಸುವ ಪರಿಸ್ಥಿತಿ ಸೃಷ್ಟಿಸಬಾರದು. ನಮ್ಮ ನೆರೆಯ ರಾಷ್ಟ್ರದಲ್ಲಿ ಕೋಮು ಗಲಭೆಗೆ ಮುಂದೆಯೂ ಬಲಿಪಶುಗಳು ಇರಬಹುದು; ಇಂದಿನ ಪರಿಸ್ಥಿತಿಯಲ್ಲಿ ಇದು ಕೇವಲ ಸಾಧ್ಯತೆಯಷ್ಟೇ ಅಲ್ಲ, ಸಂಭವನೀಯ ಕೂಡ. ಸ್ಥಳಾಂತರಿತರಾದವರ ಆಸ್ತಿಗಳ ಮಾತುಕತೆಯಲ್ಲಿ ಆಗಬಹುದಾದ ಯಾವುದೇ ವೈಫಲ್ಯವು ಪಾಕಿಸ್ತಾನದಲ್ಲಿ ಹಿಂದೂ ಮತ್ತೆ ಸಿಖ್‍ಗಳ ವಿರುದ್ಧ ಭುಗಿಲೇಳಬಹುದು, ಈ ಜನ ಇಲ್ಲಿಗೆ ಬಂದು ಈ ದೇಶದ ಪ್ರಜೆಗಳಾಗುವುದನ್ನು ಯಾವುದೇ ರೀತಿಯಲ್ಲಿ ತಡೆಯದಂತೆ ನಾವು ಒಂದು ಉಪವಾಕ್ಯವಿಡಬೇಕು. 

ದೇಶ್‍ಮುಖ್ ಅವರ ಪ್ರಸ್ತಾಪವನ್ನು ತಿರಸ್ಕರಿಸುತ್ತ ಮಹಬೂಬ್ ಅಲಿ ಬೇಗ್ ಸಾಹಿಬ್, ಹೀಗೆ ಹೇಳಿದರು: ಕೇವಲ ಹಿಂದೂ ಮತ್ತು ಸಿಖ್ ಜನಗಳಿಗೆ ಪೌರತ್ವ ಹಕ್ಕುಗಳನ್ನು ನೀಡಲು ಡಾ. ದೇಶ್‍ಮುಖ್ ಅವರು ಆಲೋಚಿಸುತ್ತಿರುವುದು ಬಹು ವಿಚಿತ್ರ ಸಂಗತಿ. ಪೌರತ್ವ ನೀಡಲು ಸಂವಿಧಾನದ ಪರಿಚ್ಛೇದದಲ್ಲಿರುವ ನಿಬಂಧನೆಗಳು ಹಾಸ್ಯಾಸ್ಪದ ಹಾಗೂ ಅಗ್ಗವಾದದ್ದೆಂದು ಅವರೆ ನಿರೂಪಣೆಯಾಗಿದೆ. ಆದರೆ  ನಾನು ಇದಕ್ಕೆ ಬದಲಾಗಿ ಅವರ ಆಲೋಚನೆಗಳು ಹಾಸ್ಯಾಸ್ಪದ ಎನ್ನುತ್ತೇನೆ. ಭಾರತೀಯರು ಕೆಲ ದೇಶಗಳಲ್ಲಿ ಇದ್ದೂ ಅವರಿಗೆ ಪೌರತ್ವದ ಹಕ್ಕುಗಳು ದೊರೆಯದಿರುವುದರ ಕುರಿತು ಇಲ್ಲಿ ಹಾಗೂ ವಿಶ್ವಸಂಸ್ಥೆಯಲ್ಲಿ ಕೂಡ ಖಂಡಿಸುತ್ತ ಬಂದಿರುವ ನಾವು ಅದೇ ಉದಾಹರಣೆಯನ್ನು ಅನುಸರಿಸುವುದು ಬೇಡ.


ಜವಾಹಾರಲಾಲ್ ನೆಹರೂ ಈ ಪ್ರಸ್ತಾಪದ ಕುರಿತು ನೇರವಾಗಿ ಮಾತನಾಡದಿದ್ದರೂ, ತಮ್ಮ ಭಾಷಣದಲ್ಲಿ ಹೀಗೆ ಹೇಳಿದರು: “ಈಗ ಈ ಎಲ್ಲ ನಿಯಮಗಳು ಸ್ವಾಭಾವಿಕವಾಗಿ ಹಿಂದೂ, ಮುಸ್ಲಿಮ್, ಸಿಖ್, ಕ್ರೈಸ್ತ ಮತ್ತು ಯಾವುದೇ ಸಮುದಾಯದವರಿಗೆ ಅನ್ವಯವಾಗುತ್ತದೆ. ಹಿಂದೂ ಅಥವಾ ಮುಸ್ಲಿಂ ಅಥವಾ ಕ್ರೈಸ್ತ ಧರ್ಮದವರಿಗೆಂದು ಪ್ರತ್ಯೇಕ ನಿಯಮಗಳನ್ನು ಹೊಂದುವುದು ಸಾಧ್ಯವಿಲ್ಲ. ಇದು ಎದ್ದುಕಾಣಿಸುವಷ್ಟು ಅಸಂಬದ್ಧವಾದ ವಿಚಾರ.”

ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಹೇಳಿದರು: ಮತ ನಿರಪೇಕ್ಷ ರಾಷ್ಟ್ರದ ತತ್ವಕ್ಕೆ ನಾವು ಬೆಸೆದುಕೊಂಡಿದ್ದೇವೆ. ಈ ದೇಶದೊಡನೆ ತಮ್ಮ ಸಂಬಂಧ ಉಳಿಸಿಕೊಳ್ಳಲು ಬಯಸುವ ಜನ ಮತ್ತು ಉದ್ದೇಶಪೂರ್ವಕವಾಗಿ, ಸ್ವೈಚ್ಛೆಯಿಂದ ಇನ್ನೊಂದು ದೇಶವನ್ನು ಆಯ್ದ ಜನರ ನಡುವೆ ನಾವು ವ್ಯತ್ಯಾಸ ಕಲ್ಪಿಸಬಹುದು. ನಮ್ಮ ವಚನ ಬದ್ಧತೆ ಹಾಗೂ ನಾವೇ ವಿವಿಧ ನೀತಿಗಳನ್ನು ರಚಿಸುವಾಗ ನಡೆದುಕೊಂಡ ಆಧಾರದ ಮೇಲೆ ನೋಡುವುದಾದರೆ, ನಾವು ಜನಾಂಗೀಯ ಅಥವಾ ಧಾರ್ಮಿಕ ಅಥವಾ ಇನ್ನಿತರ ವಿಷಯಗಳ ನೆಲೆಯಲ್ಲಿ ಒಂದು ರೀತಿಯ ವ್ಯಕ್ತಿಗಳಿಂದ ಇನ್ನೊಂದು ರೀತಿಯ ವ್ಯಕ್ತಿಗಳನ್ನು ಭಿನ್ನವಾಗಿಸಲು ಬರುವುದಿಲ್ಲ.”

ತಿದ್ದುಪಡಿಯನ್ನು ಡಾ. ದೇಶ್‍ಮುಖ್ ೧೨ ಆಗಸ್ಟ್ ೧೯೪೯ರಲ್ಲಿ ಮೊದಲು ಮತಕ್ಕೆ ತೆರೆದಿಟ್ಟರು ಮತ್ತು ಮತ ನಕಾರಾತ್ಮಕವಾಗಿತ್ತು.

ಪ್ರತಿಕ್ರಿಯಿಸಿ