ಪುಸ್ತಕ ಪರಿಚಯ : ಮ್ಯಾನ್ ಟೈಗರ್

ಸಾಹಿತ್ಯವಲಯವೂ ಸೇರಿದಂತೆ ಸಾಮಾನ್ಯ ಓದುಗರಿಗೆ ಹೆಚ್ಚೇನು ಪರಿಚಿತವಲ್ಲದ, ಆದರೆ ಕಲಾಪ್ರಕಾರ, ತಂತ್ರಗಾರಿಕೆ ಕಥಾವಸ್ತು, ಸಂಸ್ಕೃತಿಗಳಲ್ಲಿ ವಿಶಿಷ್ಠವಾಗಿಯೂ, ವಿಭಿನ್ನವಾಗಿಯೂ, ಅಸಾಮಾನ್ಯವಾಗಿಯೂ ಕಾಣುವ ಲೇಖಕರನ್ನು, ಕೃತಿಗಳನ್ನು ಕನ್ನಡದ ಓದುಗರಿಗೆ ಪರಿಚಯಿಸುವುದು ಇದರ ಮುಖ್ಯ ಉದ್ದೇಶ.

ಕ್ರೌರ್ಯ ಕೌತುಕ ಕಲಾತ್ಮಕತೆಯ ಕಥನ ಮ್ಯಾನ್ ಟೈಗರ್

ಬ್ಯೂಟಿ ಈಸ್ ಎ ವೂಂಡ್ ಎಂಬ ತಮ್ಮ ಮೊದಲ ಪ್ರಯೋಗಾತ್ಮಕ ಕಾದಂಬರಿಯ ಮೂಲಕ ವಿಶ್ವಸಾಹಿತ್ಯಕ್ಕೆ ಪರಿಚಯವಾದುದು ಇಕಾ ಕುರ್ನಿಯಾವನ್. ಇಕಾ ಜನಿಸಿದ್ದು 1975 ರ ನವೆಂಬರ್ 28 ರಂದು, ಇಂಡೋನೇಷಿಯಾದ ಪಶ್ಚಿಮ ಜಾವಾದ ತಸಿಕ್‍ಮಲಯಾ ಎಂಬಲ್ಲಿ. ಬೆಳೆದದ್ದು ಪಂಗಂದರನ್ ಎಂಬ ಸಣ್ಣ ಕರಾವಳಿ ಪಟ್ಟಣದಲ್ಲಿ. ಯೋಗ್ಯಕರ್ತದ ಗಾದ್ಜಾ ಮಾದಾ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿರುವ ಇಕಾರ ಲೇಖನಿಯಿಂದ ಒಟ್ಟು ನಾಲ್ಕು ಕಾದಂಬರಿಗಳು ಜನ್ಮ ತಳೆದಿವೆ. ಅಷ್ಟೇ ಅಲ್ಲದೇ ಹಲವು ಸಣ್ಣ ಕಥೆ, ಪ್ರಬಂಧ, ಚಿತ್ರಕಥೆಗಳನ್ನು ರಚಿಸಿ, ಬ್ಲಾಗ್‍ಗಳನ್ನೂ ಬರೆಯುತ್ತಾ ಸಕ್ರಿಯವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಲೇಖಕ ಇಕಾ. ಇಂಡೋನೇಷಿಯಾ ಸಾಹಿತ್ಯದತ್ತ ವಿಶ್ವದ ದೃಷ್ಠಿ ಹರಿಯುವಂತೆ ಮಾಡಿದ ಪ್ರಮೋದ್ಯ ಅನಂತ ತೋಯರ್‍ರ ಉತ್ತರಾಧಿಕಾರಿಯೆಂದೇ ಇಕಾ ಕುರ್ನಿಯಾವನ್‍ರನ್ನು ಗುರುತಿಸಲಾಗುತ್ತದೆ.

ಜಗತ್ತಿನ ಅತ್ಯಧಿಕ ಜನಸಂಖ್ಯೆಯುಳ್ಳ ನಾಲ್ಕನೇ ದೇಶ, ಸಾಂಸ್ಕೃತಿಕ ವೈವಿಧ್ಯತೆಯ ಬೀಡು, ಪ್ರಪಂಚದ ಅತಿ ದೊಡ್ಡ ದ್ವೀಪ ರಾಷ್ಟ್ರ ಎಂಬೆಲ್ಲಾ ವಿಶೇಷಣಗಳಿಗೆ ಹೆಸರಾಗಿರುವುದು ಇಂಡೋನೇಷಿಯಾ. ಹಲವು ರಾಜಕೀಯ ಏಳು ಬೀಳುಗಳಿಗೆ ಸಾಕ್ಷಿಯಾದ ದೇಶವದು. ಎಲ್ಲ ರೀತಿಯ ದೌರ್ಜನ್ಯಗಳನ್ನೂ ವಿರೋಧಿಸುವ, ವಾಸ್ತವವನ್ನು ರಂಜನೀಯ, ಕಟ್ಟುಕಥೆಗಳೊಂದಿಗೆ ಹದವಾಗಿ ಬೆರೆಸಲಾಗಿರುವ, ಗತಿಸಿದ್ದನ್ನು ನೆನೆಯುತ್ತಲೇ ವರ್ತಮಾನದ ಭ್ರಮೆಗಳನ್ನು ತೊರೆಯುವಂತಹ ಕಥಾವಸ್ತುಗಳನ್ನು ಪೋಷಿಸುತ್ತಾ ಬಂದಿರುವ ಇಂಡೋನೇಷಿಯಾದ ಸಾಹಿತ್ಯ ಇಂದು ಲೋಕತತ್ವಕ್ಕೆ ಮುಖಮಾಡಿದೆ. 1920-30 ರಲ್ಲಿ ಯಾವ ಭಾಷೆಯಲ್ಲಿ ಬರೆಯಬೇಕೆಂಬುದರ ಬಗ್ಗೆಯೇ ಹಲವು ಜಿಜ್ಞಾಸೆ, ವಾಗ್ಯುದ್ಧಗಳಲ್ಲಿ ತೊಡಗಿದ್ದ ಲೇಖಕರಿಂದ ಹಿಡಿದು ರಾಜಕೀಯ ಖೈದಿಯಾಗಿದ್ದು, ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ನಾಮಾಂಕಿತರಾದ, ಪ್ರಮೋದ್ಯ ಅನಂತ ತೋಯರ್‍ರವರೆಗೆ ಇಂಡೋನೇಷಿಯಾದ ಸಾಹಿತ್ಯ ಬೆಳೆದು ಬಂದಿರುವ ರೀತಿ ಅಚ್ಚರಿ ಹುಟ್ಟಿಸುವಂತದ್ದು.

ಇಂಡೋನೇಷಿಯಾದ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದ ಪ್ರಮೋದ್ಯ ಅನಂತ ತೋಯರ್‍ರಿಂದ ಬಹಳಷ್ಟು ಪ್ರಭಾವಿತನಾಗಿರುವೆನೆಂದು ಹೇಳಿಕೊಳ್ಳುವ ಇಕಾರ ಕೃತಿಗಳು ಜಗತ್ತಿನ 24 ಕ್ಕೂ ಹೆಚ್ಚಿನ ಭಾಷೆಗಳಿಗೆ ಅನುವಾದಗೊಂಡಿವೆ. ಸಣ್ಣಕಥೆಗಳಲ್ಲಿ, ತಾನು ಚಿಕ್ಕಂದಿನಲ್ಲಿ ಕೇಳಿ ಬೆಳೆದ ಕಥೆಗಳನ್ನೇ, ತನ್ನ ಸಮಾಜದ ಅಂಕು-ಡೊಂಕುಗಳನ್ನು ವಿಡಂಬನಾತ್ಮಕವಾಗಿ ಬಣ್ಣಿಸಲು ಬಳಸಿಕೊಂಡಿರುವುದು ಇಕಾರ ಕಲಾತ್ಮಕತೆಗೆ ಸಾಕ್ಷಿ. ವಿಶಿಷ್ಠ ನಿರೂಪಣಾ ಶೈಲಿ ಹಾಗೂ ಭಿನ್ನ ಮಾದರಿಯ ಕಥಾ ಹಂದರದ ಆಯ್ಕೆಯಿಂದಾಗಿ ಗಮನ ಸೆಳೆಯುತ್ತಿರುವ ಯುವ ಕಥೆಗಾರ ಇಕಾ. ತಮ್ಮ ಕೃತಿಗಳಲ್ಲಿ ಬಳಸಿದ್ದಾರೆನ್ನಲಾಗುವ ಮ್ಯಾಜಿಕ್ ರಿಯಲಿಸಂನಿಂದಾಗಿ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ನೊಂದಿಗೂ, ಸರ್ರಿಯಲಿಸಂ ಹಾಗೂ ಕಟು ವಿಡಂಬನೆಗಾಗಿ ಹರುಕಿ ಮುರಕಮಿಯೊಂದಿಗೂ ಇಕಾರನ್ನು ಹೋಲಿಸಲಾಗುತ್ತದೆ.

2016 ರ ಮ್ಯಾನ್ ಬೂಕರ್ ಪ್ರಶಸ್ತಿಯ ಸ್ಪರ್ಧೆಯಲ್ಲಿದ್ದ, ಇಕಾರ ಎರಡನೇ ಕಾದಂಬರಿ ಲೇಲಕಿ ಹರಿಮಾಂ ಪ್ರಕಟವಾದುದು 2004 ರಲ್ಲಿ. ಮಲಯ್ ಭಾಷೆಯಲ್ಲಿ ಮನುಷ್ಯನನ್ನು ಲೇಲಕಿ ಎಂದೂ, ಹುಲಿಯನ್ನು ಹರಿಮಾಂ ಎಂದೂ ಅರ್ಥೈಸಬಹುದು. ಅದೇ ಅರ್ಥ ಕೊಡುವ ಮ್ಯಾನ್ ಟೈಗರ್ ಎಂಬ ಹೆಸರಿನೊಂದಿಗೆ ಇಂಗ್ಲೀಷಿಗೆ ಅನುವಾದಗೊಂಡು ವಿಶ್ವದ ಸಾಹಿತ್ಯಾಸಕ್ತರನ್ನು ಆಕರ್ಷಿಸಿದಂತಹ ಕಾದಂಬರಿ ಲೇಲಕಿ ಹರಿಮಾಂ. ಇಂಡೋನೇಷಿಯಾದ ಪುಟ್ಟ ಪಟ್ಟಣವೊಂದನ್ನು, ಅಲ್ಲಿನ ಜೀವನ ರೀತಿಯನ್ನೂ, ಜನರ ಧಾರ್ಮಿಕ ರೀತಿ ನೀತಿಗಳನ್ನೂ, ಸುಂದರ ಪ್ರಕೃತಿಯನ್ನೂ ಪರಿಚಯಿಸುತ್ತಾ, ಆರಂಭದಲ್ಲಿ ಕೆರಳಿದ ಆಸಕ್ತಿ ಕೊನೆಯವರೆಗೂ ತಣಿಯದಂತೆ, ಸುಲಲಿತ ನಿರೂಪಣೆಯಿಂದ ಮನಸೆಳೆಯುತ್ತದೆ ಮ್ಯಾನ್ ಟೈಗರ್.

ಓರ್ವ ವ್ಯಕ್ತಿಯ ದೇಹದಲ್ಲಿ, ಇತರರ ಲಕ್ಷ್ಯಕ್ಕೆ ಬಾರದಂತೆ ಹುದುಗಿರುವ ಹುಲಿಯೊಂದು, ಅಗತ್ಯ ಬಿದ್ದಾಗ ತಾನು ಹೊಕ್ಕ ಮನುಷ್ಯ ಹಾಗೂ ಅವನ ಕುಟುಂಬವನ್ನು ರಕ್ಷಿಸಲು ಹೊರಬರುವಂತಹ ಜನಪದೀಯ ಕಥೆಗಳು ಇಂಡೋನೇಷಿಯಾದಲ್ಲಿ ಜನಜನಿತವಾಗಿವೆ. ಮ್ಯಾನ್ ಟೈಗರ್ ಸಹ ಇಂತಹುದೇ ಕಥನದ ಹೊಳಹನ್ನು ಧ್ವನಿಸುತ್ತದೆ. ಕಥಾನಾಯಕ ಮಾರ್ಗಿಯೋ ತನ್ನ ಅಜ್ಜನಲ್ಲಿಯೂ ಇಂತಹ ಹುಲಿಯೊಂದು ಅಡಗಿದೆ ಎಂಬುದನ್ನು ಕೇಳಿ, ತಾನೂ ಅಂತಹ ಹುಲಿಯ ಒಡೆಯನಾಗಬೇಕೆಂದು ಹಂಬಲಿಸಿದ್ದವನು. ಅಜ್ಜನ ಸಾವಿನ ನಂತರ ಹೊರಗೆ ಕೊರೆಯುವ ಚಳಿಯಿದ್ದಂತಹ ಒಂದು ರಾತ್ರಿಯಲ್ಲಿ, ಇದ್ದಕ್ಕಿದ್ದಂತೆ ಬೆಚ್ಚಗಿನ ಅನುಭವವಾಗುತ್ತದೆ ಮಾರ್ಗಿಯೋನಿಗೆ. ಪಕ್ಕದಲ್ಲಿಯೇ ಪವಡಿಸಿದ್ದ ಅಚ್ಚ ಬಿಳಿಯ, ದಟ್ಟ ತುಪ್ಪಳದ ಹುಲಿಯನ್ನು ನೋಡಿ, ಅಜ್ಜನ ನಂತರ ಹುಲಿ ತನ್ನ ವಶವಾಗಿದೆಯೆಂಬುದು ಖಾತ್ರಿಯಾಗುತ್ತದೆ. ಮಾರ್ಗಿಯೋಗೆ ಆ ದೃಶ್ಯ ಭಯಾನಕವಾಗಿರದೇ, ಅಪ್ಯಾಯಮಾನವೆನಿಸುತ್ತದೆ. ಅಂದಿನಿಂದ ಓರ್ವ ಸಂಗಾತಿಯಂತೆ ಮಾರ್ಗಿಯೋನ ಎದೆಯಲ್ಲಿ ಆ ಹೆಣ್ಣು ಹುಲಿ ಜೀವಿಸಲಾರಂಭಿಸುತ್ತದೆ.

ಮೊದಲ ಸಾಲಿನಲ್ಲಿಯೇ ಮಾರ್ಗಿಯೋ ಮಾಡಿದ್ದಾನೆನ್ನಲಾಗುವ ಕೊಲೆಯೊಂದಿಗೆ ಪ್ರಾರಂಭವಾಗುವ ಮ್ಯಾನ್ ಟೈಗರ್, ನಂತರ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಇದು ನೆರೆಹೊರೆಯಲ್ಲಿರುವ ಎರಡು ಕುಟುಂಬಗಳ ಸುತ್ತ ಹೆಣೆಯಲಾದ ಕಥೆ. ಅಷ್ಟೇನು ಶ್ರೀಮಂತರಲ್ಲದ, ವೃತ್ತಿಯಲ್ಲಿ ಕ್ಷೌರಿಕನಾದ ಕೋಮರ್ ಬಿನ್ ಸುಯೆಬ್ ಹಾಗೂ ನೂರೈನಿಯರಿಗೆ ಇಬ್ಬರು ಮಕ್ಕಳು. ಮಗ ಮಾರ್ಗಿಯೋ, ಮಗಳು ಮಮ್ಹೆ. ಮತ್ತೊಂದೆಡೆ ಶ್ರೀಮಂತಿಕೆಯನ್ನೇ ಹಾಸಿಹೊದ್ದ ಅನ್ವರ್ ಸಾದತ್ ಮತ್ತು ಖಸಿಯಾ ದಂಪತಿ ಹಾಗೂ ಅವರ ಲೈಲಾ, ಮೈಸಾ ದೇವಿ ಹಾಗೂ ಮಹಾರಾಣಿ ಎಂಬ ಮೂವರು ಹೆಣ್ಣುಮಕ್ಕಳ ಕುಟುಂಬ.

ಪ್ರೇಮ, ಮದುವೆ, ಸಂಸಾರಗಳ ಕುರಿತು ರಮ್ಯ ಭಾವಗಳನ್ನೊಂದಿದ್ದವಳು ನೂರೈನಿ, ಅದಕ್ಕೆ ವ್ಯತಿರಿಕ್ತನಾದವನು ಕೋಮರ್. ಆತನಿಗೆ ದೈಹಿಕ ಕಾಮನೆಗಳನ್ನು ತಣಿಸಲಷ್ಟೇ ಹೆಂಡತಿಯ ಅಗತ್ಯವಿತ್ತು. ನೂರೈನಿ ಆರಂಭದ ದಿನಗಳಿಂದಲೇ ಗಂಡನ ದೈಹಿಕ ಹಿಂಸೆಯಿಂದ ಕಂಗಾಲಾಗಿದ್ದವಳು. ಮಕ್ಕಳ ಜನನದ ನಂತರವೂ ಸಹ ಕೋಮರ್‍ನ ಮನಸ್ಸು ಮೃದುವಾಗಿರುವುದಿಲ್ಲ. ಬದಲಿಗೆ, ಕೋಮರ್ ತನ್ನ ನಿಯಂತ್ರಣವನ್ನು ಬಿಗಿಗೊಳಿಸಲು, ಮಗನ ಮೇಲೆಯೂ ದೈಹಿಕ ಬಲ ಪ್ರದರ್ಶಿಸಲು ತೊಡಗುತ್ತಾನೆ. ತಂದೆಯ ಹಿಂಸೆಗೆ ಪ್ರತಿರೋಧ ಒಡ್ಡದೇ ಸೌಮ್ಯ ಪ್ರವೃತ್ತಿಯವನಾಗಿ, ವಿನೀತನಂತೆ ಕಂಡುಬಂದರೂ, ದಿನ ಕಳೆದಂತೆ ತಂದೆಯ ಬಗೆಗೆ ವಿಚಿತ್ರ ತೆರನಾದ ಅಸಹನೆ ಹಾಗೂ ದ್ವೇಷವನ್ನು ಬೆಳೆಸಿಕೊಳ್ಳುತ್ತಾ ಸಾಗುತ್ತಾನೆ ಮಾರ್ಗಿಯೊ. ಈ ನಡುವೆ ಮೇಜರ್ ಸದ್ರಾರವರ ಹಂದಿ ಬೇಟೆ ತಂಡದ ಅಪ್ರತಿಮ ಬೇಟೆಗಾರನಾಗಿ ಹೊರಹೊಮ್ಮುವ ಆತ ಎಲ್ಲರ ಕಣ್ಮಣಿಯಾಗುತ್ತಾನೆ.

ಇತ್ತ ಹೆಂಡತಿಯ ಶ್ರೀಮಂತಿಕೆಯನ್ನು ಬಳಸಿಕೊಂಡು, ತನ್ನ ಕಲಾಸಕ್ತಿಯನ್ನು ಪೋಷಿಸಿ, ಉತ್ತಮ ಕಲಾವಿದನಾಗಲು ಬಯಸಿ, ವಿಫಲನಾಗಿದ್ದವನು ಅನ್ವರ್. ಕಾಮಾತುರ, ಲೋಭಿ, ವಿಷಯಾಸಕ್ತಿಯುಳ್ಳವನೆಂದೇ ಕುಖ್ಯಾತಿಯಾಗಿದ್ದವನು ಆತ. ಅವನ ಗುಣ ಸ್ವಭಾವವನ್ನೇ ಮೈವೆತ್ತಂತ್ತಿದ್ದ ಮೊದಲೆರಡು ಮಕ್ಕಳು ಓದನ್ನೂ ಪೂರ್ಣಗೊಳಿಸದೆ, ಸರಿಯಾದ ಜೀವನವನ್ನೂ ರೂಪಿಸಿಕೊಳ್ಳದೆ ಮನೆಯಲ್ಲಿಯೇ ಉಳಿಯುವಂತಾಗುತ್ತದೆ. ತನ್ನ ಹಿರಿಯ ಸೋದರಿಯರಂತಲ್ಲದ ಅನ್ವರ್ ಸಾದತ್ ನ ಮೂರನೆಯ ಮಗಳು ಮಹಾರಾಣಿ ತನ್ನದೇ ವಯಸ್ಸಿನ, ಚಿಕ್ಕಂದಿನಿಂದ ಬಲ್ಲ ಮಾರ್ಗಿಯೊನನ್ನು ಪ್ರೇಮಿಸಲಾರಂಭಿಸುತ್ತಾಳೆ.

ನಿರಂತರ ದೈಹಿಕ ಮತ್ತು ಮಾನಸಿಕ ಹಿಂಸೆಯಿಂದ ಜರ್ಜರಿತಳಾದ ನೂರೈನಿ, ಮತಿಭ್ರಂಶಳಂತೆ ನಿರ್ಜೀವ ವಸ್ತುಗಳಾದ ಒಲೆ, ಪಾತ್ರೆಗಳೊಟ್ಟಿಗೆ ಮಾತನಾಡತೊಡಗುತ್ತಾಳೆ. ತಾಯಿಯನ್ನು ಈ ಏಕತಾನತೆಯಿಂದ ಹೊರತರುವ ಪ್ರಯತ್ನದಲ್ಲಿದ್ದ ಮಾರ್ಗಿಯೋನಿಗೆ, ಅದೇ ಸಂದರ್ಭದಲ್ಲಿ, ಅನ್ವರ್ ಸಾದತ್ ತನ್ನ ಮನೆಗೆ ಸಹಾಯಕಳಾಗಿ ನಿನ್ನ ತಾಯಿಯನ್ನು ಕಳುಹಿಸಲು ಸಾಧ್ಯವೇ ಎಂದು ಕೇಳಿದಾಗ, ಇಲ್ಲವೆನ್ನಲು ಆಗುವುದಿಲ್ಲ. ಈ ಮೂಲಕವಾದರೂ ನೂರೈನಿಯ ಆರೋಗ್ಯ ಸುಧಾರಿಸಬಹುದೆಂದು ಭಾವಿಸಿ, ತಂದೆಯ ವಿರೋಧದ ನಡುವೆಯೂ ಮಾರ್ಗಿಯೊ, ತಾಯಿ ನೂರೈನಿ ಅನ್ವರ್ ಸಾದತ್ ನ ಮನೆಗೆ ಕೆಲಸಕ್ಕೆ ಹೋಗಲು ಸಹಕರಿಸುತ್ತಾನೆ. ತನ್ನ ಮನೆಯಲ್ಲಿ ಲವಲವಿಕೆಯಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದ ನೂರೈನಿಯ ಸೌಂದರ್ಯ ಮಧ್ಯವಯಸ್ಸಿನಲ್ಲಿಯೂ ನಳನಳಿಸುತ್ತಿದ್ದುದು ಅನ್ವರ್ ಸಾದತ್‍ನ ಕಣ್ಣು ಕುಕ್ಕುತ್ತದೆ. ಆಕೆಯೊಂದಿಗೆ ದೈಹಿಕ ಸಾಮೀಪ್ಯಕ್ಕೂ ಹವಣಿಸುತ್ತಾನೆ. ಗಂಡನ ಕ್ರೌರ್ಯದಿಂದ ಮುದುಡಿದ್ದ ನೂರೈನಿಯ ದೇಹ ಮನಸ್ಸುಗಳೆರಡೂ, ಅನ್ವರ್ ಸಾದತ್ ನ ಮೋಹಕ ಸೆಳೆತಕ್ಕೆ ಆಕರ್ಷಿತವಾದುದ್ದರ ಫಲವಾಗಿ ನೂರೈನಿ ಗರ್ಭಿಣಿಯಾಗುತ್ತಾಳೆ.

ಹೆಂಡತಿ ತನ್ನದಲ್ಲದ ಮಗುವಿಗೆ ತಾಯಿಯಾಗುತ್ತಿದ್ದಾಳೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಕೋಮರ್ ಮನಬಂದಂತೆ ಥಳಿಸುತ್ತಾನೆ. ಮುಂದುವರೆದ ಹೊಡೆತ ಹಾಗೂ ಮಾನಸಿಕ ತೊಳಲಾಟದಿಂದಾಗಿ ನೂರೈನಿ ಅವಧಿಗೆ ಮುನ್ನವೇ ಮರಿಯಂ ಎಂಬ ಹೆಣ್ಣುಮಗುವಿಗೆ ಜನ್ಮ ಕೊಟ್ಟರೂ, ಆ ಮಗು ಒಂದು ವಾರಕ್ಕೇ ಸಾವನ್ನಪ್ಪುತ್ತದೆ. ಅದಾಗಿ ಒಂದು ವಾರದ ನಂತರ ಕೋಮರ್ ಸಹ ಅನಾರೋಗ್ಯ ಪೀಡಿತನಾಗಿ ಸಾಯುತ್ತಾನೆ.

ತನ್ನ ತಾಯಿ ಮತ್ತು ಅನ್ವರ್ ಸಾದತ್ ರ ನಡುವಿನ ಸಂಬಂಧದ ಅರಿವಿದ್ದ ಮಾರ್ಗಿಯೊ, ತನ್ನೆಡೆಗೆ ಪ್ರೀತಿಯನ್ನು ನಿವೇದಿಸಿಕೊಂಡ ಮಹಾರಾಣಿಗೂ ಈ ವಿಷಯವನ್ನು ತಿಳಿಸಿ, ತನ್ನ ಪ್ರೀತಿಯನ್ನು ಕಡಿದುಕೊಳ್ಳುತ್ತಾನೆ. ತನ್ನ ತಾಯಿಯ ಚೈತನ್ಯವನ್ನು ಮರಳಿಸಲು, ಅನ್ವರ್ ಸಾದತ್ ನ ಬಳಿ ಹೋಗಿ ತನ್ನ ತಾಯಿಯನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಾನೆ ಮಾರ್ಗಿಯೋ. ಇದಕ್ಕೆ ಒಪ್ಪದ ಅನ್ವರ್ ಮುಂದುವರಿದು, ನಿನ್ನ ತಾಯಿಯ ಮೇಲೆ ನನಗೆ ಪ್ರೇಮವೇ ಇರಲಿಲ್ಲವೆಂದು ಹೇಳುತ್ತಿದ್ದಂತೆ, ಇದುವರೆಗೂ ಮಾರ್ಗಿಯೊನ ಎದೆಯಲ್ಲಿ ಅವ್ಯಕ್ತವಾಗಿ ಅಡಗಿ ಕುಳಿತಿದ್ದ, ಹುಲಿ ವ್ಯಘ್ರಳಾಗಿ ಹೊರಬಂದು ಅನ್ವರ್ ಸಾದತ್‍ನ ಕತ್ತನ್ನು ಸೀಳಿ ಸಾಯಿಸುತ್ತದೆ. ಕಾದಂಬರಿಯ ಮೊದಲಿಗೇ ಓದುಗನ ಮನದಲ್ಲಿ ಏಳುವ ಪ್ರಶ್ನೆಗೆ ಕೊನೆಯ ಸಾಲಿನಲ್ಲಿ ಉತ್ತರ ಸಿಗುತ್ತದೆ. ಒಂದು ವೃತ್ತ ಪೂರ್ಣವಾದಂತೆ ಭಾಸವಾಗುತ್ತದೆ.

ಮಾನವ-ಮೃಗೀಯ ಸಂಬಂಧವನ್ನು ಹೇಳುವ ಇಂತಹ ಕಥೆಗಳು ವಿರಳವೇನಲ್ಲ. ವಿಕಾಸವಾದದ ತತ್ವವೇ ಹೇಳುವಂತೆ, ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯೂ ಪರಸ್ಪರ ಅಂತರ್ ಸಂಬಂಧವನ್ನು ಹೊಂದಿದೆ. ಮಾನವ ಅದನ್ನು ಮೀರಿದವನು, ಮಾನವನ ನಾಗರೀಕತೆ ಪ್ರಾಣಿ ಜೀವನಕ್ಕಿಂತ ಭಿನ್ನವಾದುದು ಎಂಬ ಮನುಷ್ಯನ ನಂಬುಗೆಯನ್ನು, ಇಕಾ ಬಾಲಕನ ಎದೆಯಲ್ಲಿ ಹುಲಿಯನ್ನು ಅಡಗಿಸಿಡುವ ಮೂಲಕ ಪ್ರಶ್ನಿಸುತ್ತಾನೆ. ಆ ಮೂಲಕ ಮಾನವನಲ್ಲಿ ಸದಾಕಾಲ ಹುದುಗಿರುವ ಮೃಗತ್ವದ ಅನಾವರಣವನ್ನು ಸಾಂಕೇತಿಕವಾಗಿ ತನ್ನ ಕೃತಿಯಲ್ಲಿ ಮಾಡುತ್ತಾನೆ.

ವಾಸ್ತವವನ್ನು ರಂಜನೀಯವಾಗಿಸಿ, ಕಲ್ಪನೆಯೊಂದಿಗೆ ಪೋಣಿಸಿ ಕಥೆ ಹೆಣೆಯುವ ಪ್ರಕ್ರಿಯೆ ಹೊಸದಾಗಿರದೇ, ಕ್ರಿಸ್ತ ಪೂರ್ವದಿಂದ ಜನಮಾನಸದಲ್ಲಿ ಮೌಖಿಕವಾಗಿ ಹರಿದು ಬಂದುದೇ ಆಗಿದೆ. ಇಂದು, ಸತ್ಯ ಮಿಥ್ಯೆಗಳನ್ನು ಸಮ್ಮಿಳಿತಗೊಳಿಸುವ ಈ ತಂತ್ರಕ್ಕೆ ‘ಮ್ಯಾಜಿಕ್ ರಿಯಲಿಸಂ’ ಎಂದು ಹೆಸರಿಸಲಾಗಿದೆ. ಈ ಪದವನ್ನು ಮೂಲತಃ 1920 ರ ದಶಕದಲ್ಲಿ ಜರ್ಮನಿಯ ನವ್ಯ ಚಿತ್ರ ಕಲಾವಿದರಿಗೆ ಬಳಸಿದ್ದರೂ, ಇಂದಿನ ಲ್ಯಾಟಿನ್ ಅಮೇರಿಕಾ ಸಾಹಿತ್ಯದ ಪ್ರಮುಖ ಲಕ್ಷಣವಾಗಿಯೇ ಗುರುತಿಸಿಕೊಂಡಿರುವ ಮ್ಯಾಜಿಕ್ ರಿಯಲಿಸಂ, ಪಾಶ್ಚಿಮಾತ್ಯ ದೇಶಗಳ ಸಾಹಿತ್ಯವನ್ನು ಅರ್ಥೈಸಿಕೊಳ್ಳಲು ಸಹಾಯ ಮಾಡಿದರೂ ಕೂಡ, ಸಂಪೂರ್ಣವಾಗಿ ಸತ್ಯ ಮಿಥ್ಯೆಗಳು ವಿಲೀನವಾದ ಕಥಾಮಾದರಿಗೆ ಆಧುನಿಕ ನುಡಿಗಟ್ಟಿನಲ್ಲಿ ಸಮರ್ಥವಾಗಿ ವರ್ಣಿಸುವುದಕ್ಕಷ್ಟೇ ಸಾಧ್ಯವಾಗಿದೆ.

ಮಾರ್ಕ್ವೆಜ್ ನೊಂದಿಗೆ ತನ್ನನ್ನು ಹೋಲಿಸುವ ಕುರಿತು ಇಕಾ ಹೇಳುವುದು ಹೀಗೆ, “ನಾನು ಮಾರ್ಕ್ವೆಜ್ ಹಾಗೂ ಟೋನಿ ಮಾರಿಸನ್‍ರನ್ನು ಓದಿರುವುದು ನಿಜ. ಆದರೆ ನಾನು ಇಂಡೋನೇಷಿಯಾದ ಜನಪದೀಯ ಕಥೆಗಳನ್ನೂ ಓದಿದ್ದೇನೆಂಬುದನ್ನು ಹಾಗೂ ಲ್ಯಾಟಿನ್ ಅಮೇರಿಕಾದ ಮ್ಯಾಜಿಕ್ ರಿಯಲಿಸಂಗೆ ನನ್ನ ಕೃತಿಗಳನ್ನು ಥಳುಕು ಹಾಕುವ ಮೊದಲು, ನಾನು ಹುಟ್ಟಿ ಬೆಳೆದ ಇಂಡೋನೇಷಿಯಾದ ಸಾಂಸ್ಕೃತಿಕ ಹಿನ್ನೆಲೆಯನ್ನೂ, ನನ್ನ ವಿಮರ್ಶಕರು ಮರೆಯುತ್ತಾರೆ.” ಸ್ಥಳೀಯ ಜ್ಞಾನಮಾದರಿಗಳನ್ನು ಅರಿಯುವಾಗ, ಸ್ಥಳೀಯ ಸೊಗಡಿನ ಗಂಧವೇ ಇಲ್ಲದ ಪಶ್ಚಿಮದ ಅಥವಾ ತಮ್ಮದಲ್ಲದ ಸಾಹಿತ್ಯ ಪ್ರಕಾರದಲ್ಲಿ ಅರ್ಥೈಸುವುದು ಎಷ್ಟರ ಮಟ್ಟಿಗೆ ಸಾಹಿತ್ಯ ವಿಮರ್ಶೆ ಆಗಬಲ್ಲುದು?.

ಚಿಕ್ಕಂದಿನಿಂದ ತನ್ನ ಅಜ್ಜಿ, ದೂರದ ಸಂಬಂಧಿಯೂ ಆದ ಓರ್ವ ವಯಸ್ಸಾದ ಮಹಿಳೆ ಹಾಗೂ ಬಾನುಲಿಯಲ್ಲಿ ಅಜ್ಞಾತ ವ್ಯಕ್ತಿಯೊಬ್ಬ ಹೇಳುತ್ತಿದ್ದ ಹಲವು ಬಗೆಯ ಕಾಲ್ಪನಿಕ, ರಮ್ಯ, ರಂಜನೀಯ, ಯಕ್ಷ ಯಕ್ಷಿಯರ, ದಂತಕಥೆಗಳನ್ನು ವಿವಿಧ ರೀತಿಯಲ್ಲಿ ಕೇಳುತ್ತಾ, ಕಥೆಯ ವಿವಿಧ ಮಟ್ಟುಗಳನ್ನು ಅರಿತುಕೊಂಡಿದ್ದಾತ ಇಕಾ. ಆ ನಿಟ್ಟಿನಲ್ಲಿ ಮ್ಯಾನ್ ಟೈಗರ್ ಒಂದು ಜನಪದೀಯ ಶೈಲಿಯ ಕಥನದಂತೆಯೇ ಭಾಸವಾಗುತ್ತದೆ. ಜನಪದ ಕಥನ ಶೈಲಿಯು ವಾಸ್ತವದಲ್ಲೇ ವಿಹರಿಸುತ್ತಾ, ವಾಸ್ತವವನ್ನು ಮಿಥ್ಯಲೋಕಕ್ಕೂ ವಿಸ್ತರಿಸಿ, ಜೀವನವನ್ನು ಹಲವು ಬಗೆಯಲ್ಲಿ ಅರ್ಥೈಸಿಕೊಳ್ಳುವ ಪ್ರಕ್ರಿಯೆಯನ್ನು ಅನುಸರಿಸುತ್ತದೆ. ಇಕಾ ಈ ಮಾದರಿಯ ಕಥನದ ಹರಿಕಾರನಂತೆ ಕಂಡುಬರುತ್ತಾನೆ.

6 comments to “ಪುಸ್ತಕ ಪರಿಚಯ : ಮ್ಯಾನ್ ಟೈಗರ್”
  1. ಓದುವ ಕುತೂಹಲ ಸೃಷ್ಟಿಸುವ ಸುಂದರ ಅವಲೋಕನವಿದು. ಪ್ರಸ್ತುತ ಕೃತಿ ಶೀಘ್ರ ಕನ್ನಡಕ್ಕೂ ಅನುವಾದ ಗೊಳ್ಳಲಿ. ಧನ್ಯವಾದಗಳು.

    • ನನ್ನ ಆತ್ಮೀಯ ವಿದ್ಯಾರ್ಥಿಮಿತ್ರೆ ನನ್ನಿ ಅವರ ಸಾಹಿತ್ಯ ಕೃಷಿ ಬೆರಗು ಮತ್ತು ಸಂತೋಷ ತಂದಿದೆ.. ವಿಶ್ವ ಸಾಹಿತ್ಯಕ್ಕೆ ಅವರ ಕೊಡುಗೆ ನಿತ್ಯ ನಿರಂತರವಾಗಿರಲಿ. ಇಲ್ಲಿನ ಪಳಗಿದ ಕೈ ಬರಹ ಅವರ ವಿಮರ್ಶಾ ಪ್ರಜ್ಞೆಯ ಪ್ರತೀಕವಾಗಿದೆ…
      ಅಭಿನಂದನೆಗಳು…

  2. ಉತ್ತಮ ಪ್ರಯತ್ನ ಮೇಡಂ…. ನಿಮ್ಮ ಪ್ರಯತ್ನ ಮುಂದುವರಿಸಿ….😊

  3. ಈ ಕಾದಂಬರಿಯನ್ನು ನೀವು ವಿಮರ್ಶಿಸಿರುವ ರೀತಿ ಅದ್ಬುತವಾಗಿದೆ. ಪ್ರತಿಯೊಂದು ಮನುಷ್ಯನಲ್ಲಿ ಒಬ್ಬ ವ್ಯಾಗ್ರನಿರುವು ನಿಜ. ಆದರೆ ಅದು ಯಾವ ಸಮಯದಲ್ಲಿ ಹೊರಬರುತ್ತದೆ ಎಂಬುದರ ಅರಿವು ಮನುಷ್ಯನಿಗಿರಬೇಕು.
    👏👏👌…

ಪ್ರತಿಕ್ರಿಯಿಸಿ