‘ನಕ್ಷತ್ರ ದೇವತೆ’ – ಎಸ್. ಮಂಜುನಾಥ್ ಕವನ ಸಂಕಲನ ಬಿಡುಗಡೆ

ಇಂದು ವರಕವಿ ಬೇಂದ್ರೆ ಜನ್ಮದಿನ; ಜೀವಯಾನದ ಕವಿ ಎಸ್.ಮಂಜುನಾಥ್ ಗತಿಸಿದ ದಿನ. ಹಕ್ಕಿಪಲ್ಟಿ, ಬಾಹುಬಲಿ, ನಂದಬಟ್ಟಲು, ಮೌನದ ಮಣಿ, ಕಲ್ಲಪಾರಿವಾಳಗಳ ಬೇಟ, ಮಗಳು ಸೃಜಿಸಿದ ಸಮುದ್ರ, ಜೀವಯಾನ, ನೆಲದ ಬೇರು ನಭದ ಬಿಳಲು (ಕವಿತೆ ಈ ತನಕ), ಬೊಗಸೆ ಜಲ ಒಂದು ಬೀಜಕ್ಕಾಗಿ – ಇವರ ಕವಿತಾ ಸಂಗ್ರಹಗಳು. ಮಂಜುನಾಥರ ಹೊಸ ಕವಿತೆಗಳ ಸಂಕಲನ `ನಕ್ಷತ್ರ ದೇವತೆ’ ಪ್ರಕೃತಿ ಪ್ರಕಾಶನದ ವತಿಯಿಂದ ಈ ದಿನ ಬಿಡುಗಡೆಯಾಗುವ ಸಂದರ್ಭದಲ್ಲಿ ಅವರ ಕುರಿತಾಗಿ ಬರೆದಿರುವ ಕೆಲವು ಕವಿತೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಪ್ರಕಾಶನದ ಪರವಾಗಿ ವಿಕ್ರಮ ಹತ್ವಾರ್, ಮಂಜುನಾಥರ ಕವಿತೆಗಳನ್ನು ವಾಚಿಸಿದ್ದಾರೆ.

ಋತುಮಾನ ಸ್ಟೋರ್ ನ ಈ ಕೆಳಗಿನ ಲಿಂಕ್ ಬಳಸಿ ನೀವಿದನ್ನು ಕೊಳ್ಳಬಹುದು.

*

ಮಂಜುನಾಥನ ಕವಿತೆ
ಜಯಂತ ಕಾಯ್ಕಿಣಿ

ಯೆಸ್, ಮಂಜುನಾಥನ ಕವಿತೆ ಥೇಟು
ಅವನಂತೆ. ಸುಮ್ಮನೆ ಕೂತಿರುತ್ತವೆ ಕಾಗದದಲ್ಲಿ.
ತೆರೆಯುವ ತನಕ

ಮತ್ತೆ ತೆರೆದ ನಂತರವೂ ಹಾಲ್‍ಚಾಲ್ ತೋರದೆ
ಇರುತ್ತವೆ ಭಂಡಿವಾಡ ಅಗಸಿಯ ಬ್ಯಾಡಗಿ ಮೆಣಸಿನ
ಸಂತೆಯಲ್ಲಿ ತಕ್ಕಡಿಯ ಪಕ್ಕ ಕೂತ

ಬಸವಣ್ಣಪ್ಪ ಹುಸೇನಿ ಎಂಬ ತಪಸ್ವಿಯಂತೆ.
ಹಲ್ಲಲ್ಲಿ ಭಿಕುಸಾ ಬೀಡಿ ಕಚ್ಚಿಕೊಂಡು ಇಲ್ಲದ ಕಿಸೆಯಲ್ಲಿ
ಬೆಂಕಿ ಪಟ್ಣಕ್ಕೆ ಪರದಾಡುವ ಆ ಸುದೀರ್ಘ ಅಪ್ರಾಪ್ತ

ಗಳಿಗೆಯಲ್ಲೆ ಅಘಟಿತವೊಂದು ಘಟಿಸಬಹುದು
ಎಂಬ ಸಣ್ಣ ನಂಬಿಕೆಯಲ್ಲಿ. ಮರದಿಂದ ನಿಸೂರಾಗಿ ಕಳಚಿ
ಬೀಳುವಾಗಲೇ ಗಾಳಿಯ ಅಲೆಗೆ ತುಸುವೇ ಸಿಕ್ಕಿ

ನಿರ್ಗಮನವನು ನರ್ತಿಸುವ ಎಲೆಯಂಥ ಕವಿತೆ.
ಸೊಂಟಕ್ಕೆ ಹೆಡಗಾಯಿ ಕಟ್ಟಿಕೊಂಡು ಅಘನಾಶಿನಿಯಲ್ಲಿ
ಈಸು ಕಲಿಯುವ ಬೆಸ್ತ ಪೋರರಂಥ ಸಾಲುಗಳು

ದಡದಿಂದ ದೂರ. ಭಾರವಾದ ಒಂದೆರಡು ಮೊಂಡು ಪದ
ಕವಿತೆಯ ತಳಕ್ಕೇ ಹೋಗಿ ಕುಳಿತುಕೊಳ್ಳುವುದುಂಟು
ಮೀನುಗಳಿಂದ ಮುದ್ದಿಸಿಕೊಳ್ಳುತ್ತ.

ಬಿಟ್ಟುಬಂದ ಬಾಡಿಗೆಮನೆಯ ಗೋಡೆಯಲ್ಲೆ
ಉಳಿದುಹೋದ ಮಗಳ ಹೀಚು ಪೆನ್ಸಿಲ್ ಗೀಚಾಟ
ಹೊಸ ಬಾಡಿಗೆದಾರರ ಸುಣ್ಣಕ್ಕೆ ಬಲಿಯಾಗದು.

ಸಂಕದಿಂದ ಸೀದಾ ನೀರಿಗೆ ನೆಗೆದು, ನೀವೆಸೆದ
ಅಮೂಲ್ಯ ನಾಣ್ಯ ಹೆಕ್ಕಿತರುವ ಸದಾ ಒದ್ದೆಗೂದಲ
ಪೋರನಿಗೆ ವಯಸ್ಸಾಗದು. ಧಡೂತಿ ಬಾಹುಬಲಿಯ

ಪದತಲದಲ್ಲಿ ನಡೆಯುವುದು ಹುಲುಮಾನವನ
ಇರುವೆ ಚಟುವಟಿಕೆ. ಮುನಿಸಿಕೊಂಡಿಲ್ಲ ಮಂಜುನಾಥ
ಬೇಕಾದಾಗ ಬೇಕೆಂದಲ್ಲಿ ಸಿಗುತ್ತಾನೆ ಪುಣ್ಯವಂತ

ಅವನ ರೂಪಕಗಳ ಮೇಲೆ ಕೂತ ಹೊಳಪು
ಅವನ ಕರುಣೆಯ ಕೃಷಿಯ ಬೆವರಿಂದ ಹೊಮ್ಮಿದ್ದು.
ಉಳಿದವರಿಗೆಂದೆ ಅಲ್ಲಿ ಇಲ್ಲಿ ಅಡಗಿಸಿಟ್ಟು ಹೋಗಿದ್ದಾನೆ ನಿಶ್ಚಿಂತ.

*

ಕವಿಯ ಅಂತಿಮ ಯಾತ್ರೆ
ರಾಮು

ದೋರಗಾಯಿಯ ತೊಟ್ಟಕಳಚಿತು ಮರ
ವಿಧಿ ಅದನು ಬಯಸಲಾಗಿ:
ಒಂದು ಚಣ ಏದಿ
ಏರಿಳಿಯಿತು ಉಸಿರು
ಹೆರಿಗೆ ಬೇನೆಯ ಹಾಗೆ,
ಮರುಕ್ಷಣವೆ ಹಾಲುಕ್ಕಿ ಬಂದಂತೆ ಶಾಂತವಾಗಿ,
ಬೇಂದ್ರೆ ಹುಟ್ಟಿದ ದಿನವೆ ಇವನ ಕೊನೆದಿನ ಬಂದು
ಹೊಕ್ಕುಳ ಹುರಿಯ ದ್ರವ ತೊಟ್ಟಿಕ್ಕಿ
ಸಾವಿನಂಗೈಗೆ ಬದುಕಿನ ಕಂಪ ಸವರಿ.

ಆ ಮಾಗಿ ಚಳಿ ತಡೆಯದೆ
ಕಂಬಳಿಹೊದ್ದು ಬಂದಿತ್ತು ಮೃತ್ಯು,
ಕವಿಮಡದಿ ಕವಿಯ ಕಿವಿಯಲ್ಲಿ ಒತ್ತಿಟ್ಟ ಕವಿತೆ
ಅದರೆದೆಗೆ ಹರಿಯಲಾಗದೆ ಹೆಪ್ಪುಗಟ್ಟಿ.

ಆ ಇರುಳು,
ಒಡಲು ಒರಗಿದೆ ಬೇಂದ್ರೆ ವೇದಿಕೆಯಲ್ಲಿ,
ಜೀವ ಕನಿಯುತಿದೆ ಎಡತೊರೆಯ ಮಂದ ಬೆಳಕುಗಳಲ್ಲಿ-
ಪಾನು ಬೀಡಾವಾಲ ಹೋಟೇಲು ಮಾಣಿ ಟೀಚರು ಕ್ಲಾರ್ಕು ಎನದೇನೆ
ಮನಮನದೊಳಗೂ ಕನ್ನ ಕೊರೆದು ತೂರಿಕೊಂಡು
ಮನಮನಗಳಾಕಾರ ಪಡೆದು ಉಸಿರಾಡೊ- ಅವನ ಕವಿತೆಯಲ್ಲಿ;
ಬಿಂಬವಿರದಿದ್ದರೂ ಮುಂದೆ,
ಕನ್ನಡಿಯ ಒಳಗುಂಟು ಅದರ ಪ್ರತಿಬಿಂಬ.

*

ಎಸ್.ಮಂಜುನಾಥ್
ವಿಕ್ರಮ ಹತ್ವಾರ್

ಜೇನುಗತಿಯಲ್ಲಿ ತಾಸುಗಟ್ಟಲೆ ಮಾತನಾಡುವ ಕವಿ
ಬೆಟ್ಟದಂಥ ಮರದೆದುರು ಕಾಲು ಚಾಚಿ
ಅಂಗಾತ ಮಲಗಿರುವನು
ಎದೆ ಮೇಲೆ ಕೈಯಿಟ್ಟು
ಇಡಿಯ ಲೋಕವನ್ನೇ ಕ್ಷಮಿಸಿ
ಭಜನೆ ಪ್ರಾರ್ಥನೆಗಳಿರದ
ಜನಜಂಗುಳಿಯ ಸಂತಾಪದಳಲು ಕೇಳದ
ಕವಿತೆಗಳ ಸದ್ದಿರದ ಸಹಜ ಮೌನ
ಇವನ ಪರಾಕು
ಇರುವುದೇ ಆದರೆ ಇವನು ಇಲ್ಲಿಯೇ
ಈಗ
ಇಂಥ ಈ ಮರವನ್ನು ನೋಡುತ್ತಿರುತ್ತಾನೆ
ಬಿಚ್ಚು ನಗುವಿನಿಂದ
ಅಥವ ಕಾಯುತ್ತಿರುತ್ತಾನೆ
ಅಲ್ಲಿ ಮಲಗಿರುವುದು ಬೇರಿಗಿಳಿಯಲೆಂದು
ಬೂದಿಯಾದ ಮೇಲೆ

One comment to “‘ನಕ್ಷತ್ರ ದೇವತೆ’ – ಎಸ್. ಮಂಜುನಾಥ್ ಕವನ ಸಂಕಲನ ಬಿಡುಗಡೆ”

ಪ್ರತಿಕ್ರಿಯಿಸಿ