ಬಯೋಪಿಕ್ ೨ : ಜೀವನಕಥನ ಚಿತ್ರಶೈಲಿ,ಆಕೃತಿ – ಆಶಯ

ವ್ಯಕ್ತಿಗಳ ಜೀವನಾಧಾರಿತ ಚಿತ್ರಗಳ ಕುರಿತ ಲೇಖನ ಸರಣಿಯ ಈ ಎರಡನೇ ಲೇಖನದಲ್ಲಿ ಡೇವಿಡ್ ಬಾಂಡ್ ಕೆಲವು ಚಿತ್ರದ ಉದಾಹರಣೆಯೊಂದಿಗೆ ಬಯೋಪಿಕ್ ಗಳ ರಚನಾ ವಿನ್ಯಾಸದ ಕುರಿತು ಚರ್ಚಿಸಿದ್ದಾರೆ.

ಬಯೋಪಿಕ್ ೧ : https://wp.me/p7FWQO-1mc

divderspa

ಜೀವನಕಥನ ಅಥವಾ biopic ಎಂಬ ಅಸೂಕ್ಷ್ಮ ಪದ ಬಳಕೆಯಾದದ್ದು ೧೯೫೦ರ ಆಸುಪಾಸಿನಲ್ಲಿ. ಅದನ್ನು ಮೊದಲು ಹುಟ್ಟುಹಾಕಿ ನಂತರ ಪುನಃ ಬಳಸುತ್ತ ಹೋಗಿದ್ದು ಅಮೆರಿಕದ bill board ಪತ್ರಿಕೆ ಅನ್ನಿಸುತ್ತದೆ. ಈ ಹೆಸರಿನಡಿನಲ್ಲಿ ವರ್ಗೀಕರಿಸಲಾಗಿದ್ದ ಚಿತ್ರಗಳ ಪಟ್ಟಿಯನ್ನು ನೋಡಿದರೆ – ಒಂದಕ್ಕಿಂತ ಒಂದು ಭಿನ್ನವೇ ಆದ ಅನೇಕ ಬಗೆಯ ಚಿತ್ರಗಳು ಈ ಶೈಲಿಯ ಅಡಿಯಲ್ಲಿ ಪಟ್ಟಿಯಾದದ್ದು ಅರಿವಿಗೆ ಬರುತ್ತದೆ. ನಾನು ಹುಟ್ಟಿದ (೧೯೫೨) ರ ಆಸುಪಾಸಿನಲ್ಲಿ ಬಹಳ ಪ್ರಸಿದ್ಧವಾಗಿದ್ದ ಎರಡು ಬಯೋಪಿಕ್ ಗಳು The Great Caruso ಮತ್ತು Calamity Janeಸಂಗೀತ ಚಿತ್ರಗಳಾಗಿದ್ದ ಈ ಎರಡರ ಹಾಡುಗಳು ನನ್ನ ಬಾಲ್ಯದುದ್ದಕ್ಕೂ ಕಿವಿಯ ಮೇಲೆ ಬೀಳುತ್ತಲೇ ಇದ್ದಂತವು.

The Great Caruso ಚಿತ್ರ ಇಟಲಿಯ ಪ್ರಸಿದ್ಧ ಏರುದನಿಯ ಹಾಡುಗಾರನೊಬ್ಬನ ಕುರಿತಾಗಿದ್ದು, ಅವನ ಪಾತ್ರವನ್ನು ಮಾರಿಯೋ ಲೂಂಝಾ ನಿರ್ವಹಿಸಿದ್ದರೆ , Calamity Jane ನಲ್ಲಿ ಡೊರಿಸ್ ಡೇ – ಮೊದಲ ಮಹಿಳಾ ಶಾರ್ಪ್ ಶೂಟರ್ ಅನ್ನೆ ಓಕ್ಲೆಯ ಪಾತ್ರ ನಿರ್ವಹಿಸಿದ್ದಳು. ಆ ಚಿತ್ರವೇನೂ ಆನಿಯ ಬದುಕಿನಿಂದ ನೇರವಾಗಿ ಎತ್ತಿಕೊಂಡ ಕಥೆಯಾಗಿರದೇ ಅದರ ಹಂದರವನ್ನು ಮಾತ್ರ ಅಳವಡಿಸಿಕೊಂಡಿತ್ತು. ವಾಸ್ತವವಾಗಿ ಹೇಳಬೇಕೆಂದರೆ ಈ ಎರಡೂ ಚಿತ್ರಗಳಲ್ಲೂ ಜೀವನಕಥನದ ಮೌಲ್ಯವಾಗಲೀ ಅಥವಾ ಸಿನೆಮಾದ ನಾಟಕೀಯತೆಯ ಅಂಶಗಳಾಗಲೀ ಇರದೇ, ಅವುಗಳು ಜನಪ್ರಿಯವಾಗಲು ಇದ್ದ ಕಾರಣಗಳು – ಅವುಗಳಲ್ಲಿನ ಸಂಗೀತಮಯತೆ ಮಾತ್ರವೇ. ೫೦ರ ದಶಕದ ಭಾರತದಲ್ಲಿ ನಿರ್ಮಾಣವಾದ “ಜೀವನಕಥನದ ಚಿತ್ರಗಳು” ಬಹುವಾಗಿ ನಾವು “ಮುಸ್ಲಿಂ ಸಾಮಾಜಿಕ ಚಿತ್ರಗಳು” ಎಂದು ಗುರುತಿಸಬಹುದಂಥ ಬಗೆಯವು. ಈ ಬಗೆಯ ಚಿತ್ರಗಳ ನಿರ್ಮಾಣವು ದಶಕದ ಅಂತ್ಯದ ವೇಳೆಯಲ್ಲಿ ಉತ್ತುಂಗ ತಲುಪಿದ್ದು ಕೆ. ಆಸೀಫ್ ರ ಮುಘಲ್-ಎ-ಅಝಂ ನ ಮೂಲಕ ಎನ್ನಬಹುದು. ಬಯೋಪಿಕ್ ಒಂದು ರೀತಿಯಲ್ಲಿ ನನಗೆ ವಯಕ್ತಿಕವಾಗಿ ಇಷ್ಟವಾಗುವ ಚಿತ್ರಗಳೂ ಹೌದು. ಅವುಗಳ ಪೈಕಿ ಸೋಹ್ರಬ್ ಮೋದಿಯವರ ಮಿರ್ಝಾ ಗಾಲಿಬ್ (೧೯೫೪) ನನ್ನ ಮಟ್ಟಿಗೆ ಹೆಚ್ಚು ಮುಖ್ಯವಾದ್ದಾಗಿ ಕಾಣುತ್ತದೆ. ಅದೇನೇ ಇದ್ದರೂ, ಸರಿಯಾಗಿ ಯೋಚಿಸಿ ನೋಡುವವರು ಯಾರೂ ಈ ಚಿತ್ರಗಳನ್ನು “ಬಯೋಪಿಕ್” ಎಂದು ಒಪ್ಪಿಕೊಳ್ಳಲಾರರು. ಅವುಗಳನ್ನು ವಾಸ್ತವವಾದ ಜೀವನಕಥೀಯ ನಿರೂಪಣೆಗಳು ಎಂದೂ ಪರಿಗಣಿಸಲಾರರು. ಅಥವಾ ಈ ಚಿತ್ರಗಳನ್ನು ನಿರ್ಮಿಸಿದ ಯಾರಿಗೂ ಅವು ವಾಸ್ತವಕ್ಕೆ ಹೆಚ್ಚು ಸಮೀಪವಾದ ಬಯೋಪಿಕ್ ಗಳು ಆಗಿರುವುದೂ ಬೇಕಾಗಿರಲಿಲ್ಲ ಎಂದು ಹೇಳುವುದೇ ಹೆಚ್ಚು ಸರಿ.

Picture22

 

ವಿಪರ್ಯಾಸದ ಸಂಗತಿ ಎಂದರೆ “ಬಯೋಪಿಕ್” ಎಂಬ ಪದ ಚಾಲ್ತಿಗೆ ಬಂದ ದಶಕದಲ್ಲಿಯೇ ಅತೀಹೆಚ್ಚಾಗಿ ನಿಜವಾದ ಜೀವನಕಥನಗಳೇ ಅಲ್ಲದ – ಆದರೆ ತಮ್ಮನ್ನು ಬಯೋಪಿಕ್ ಗಳೆಂದು ಹೊರಗಿನಿಂದ ಕರೆದುಕೊಂಡು ಶೃಂಗರಿಸಲ್ಪಟ್ಟ ಚಿತ್ರಗಳೇ ಹೊರಬಂದವು. ಅವುಗಳಲ್ಲಿ ಬಹುಪಾಲು ಚಿತ್ರಗಳು ಹುಸಿ-ಜೀವನಚರಿತ್ರೆಯ ಚಿತ್ರಗಳಷ್ಟೇ ಅಲ್ಲದೇ ಚಾರಿತ್ರಿಕ ಸತ್ಯಗಳನ್ನೂ ಅರೆಬರೆಯಾಗಿ ಮಾತ್ರವೇ ಅಳವಡಿಸಿಕೊಂಡಿದ್ದ ಚಿತ್ರಗಳೂ ಆಗಿದ್ದವು. ಇನ್ನೊಂದು ಬಗೆಯಲ್ಲಿ ಹೇಳುವುದಾರೆ, ವಾಸ್ತವತೆಯನ್ನು ಹೇಳುತ್ತಿದ್ದೇವೆ ಎಂದು ಬಿಂಬಿಸಿಕೊಂಡು ಹೊರಟ ಈ ಚಿತ್ರಗಳು ತಮ್ಮಲ್ಲಿ ಆ ವಾಸ್ತವತೆಯ ಅಂಶವನ್ನೇ ಇಟ್ಟುಕೊಳ್ಳದೇ ಹೋದವು. ಈ ಕಾರಣದಿಂದಾಗಿ, ತಮ್ಮ ಸುಳ್ಳನ್ನು ಮುಚ್ಚಿಕೊಳ್ಳಲು ಬಯೋಪಿಕ್ ಎಂಬ ಈ ಪದಪುಂಜವನ್ನು ಹುಟ್ಟುಹಾಕಿ ಬಳಸಿಕೊಂಡವು. ಇದಕ್ಕಿಂತ ಎರಡು ದಶಕ ಮುಂಚೆ, ೧೯೩೦ರ ದಶಕದಲ್ಲಿ ನಾಝೀ ಜರ್ಮನಿಯಿಂದ ಪಾರಾಗಿ ಅಮೇರಿಕಾಕ್ಕೆ ವಲಸೆ ಬಂದ ನಿರ್ದೇಶಕರಲ್ಲಿ ಒಬ್ಬನಾಗಿದ್ದ ವಿಲ್ಹೆಮ್ ಡಯಟ್ರೆಲ್ ಎರಡು ಬಯೋಪಿಕ್ ಗಳನ್ನು ನಿರ್ದೇಶಿಸಿದ. ಅವುಗಳು ಹೆಚ್ಚು ಮಟ್ಟಿಗೆ ವಾಸ್ತವಕ್ಕೆ ಸಮೀಪವಾಗಿದ್ದವು ಎಂದು ಹೇಳಬೇಕು. ಪೌಲ್ ಮುನಿ ಮುಖ್ಯ ನಟನಾಗಿ ಅಭಿನಯಿಸಿದ್ದ ಈ ಎರಡು ಚಿತ್ರಗಳು – The Life of Pasteur ಮತ್ತು The Life of Zola. ಎರಡೂ ಚಿತ್ರಗಳು ಬಹುವಾಗಿ ಪ್ರಸಿದ್ಧಗೊಂಡವು ಮತ್ತು ಒಂದಕ್ಕೆ ಆಸ್ಕರ್ ಕೂಡಾ ದೊರಕಿತು. ಅತ್ಯುತ್ತಮ ಅಭಿನಯವನ್ನು ಹೊಂದಿದ್ದ ಮತ್ತು ಉತ್ತಮವಾಗಿ ತಯಾರಿಸಲಾಗಿದ್ದ ಈ ಎರಡೂ ಚಿತ್ರಗಳೂ ಈಗ ಮರೆಯಾಗಿ ಹೋಗಿವೆ. ಮತ್ತು ಜನರೂ, ವಿಧ್ವಾಂಸರೂ ಅವುಗಳ ಕುರಿತು ಹೆಚ್ಚು ಆಸ್ಥೆ ತೋರದೇ ಅವುಗಳು ಧೂಳಾಗಿ ಹೋಗಿವೆ.

ಸಂಗೀತಚಿತ್ರಗಳ ಹೊರತಾಗಿ “ಬಯೋಪಿಕ್” ಗಳು ಯಾವ ಕಾಲದಲ್ಲಿಯೂ – ಇತರ ಝಾನ್ರ್ ಗಳಿಗೆ ಹೋಲಿಸಿದರೆ – ಹೆಚ್ಚು ಪ್ರಸಿದ್ಧಿಯನ್ನು ಪಡೆದವುಗಳಲ್ಲ. ಸಂಗೀತಮಯ ಚಿತ್ರಗಳು ಅವುಗಳ ಸಂಗೀತದಿಂದಾಗಿ ಜನರನ್ನು ಆಕರ್ಷಿಸಿ ಉಳಿದವೇ ಹೊರತು, ಬಯೋಪಿಕ್ ನ ವಾಸ್ತವತೆಯ ಕಾರಣದಿಂದಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ಅವುಗಳನ್ನು ಹಳೆಯ ಲೇಖನಗಳಲ್ಲಿ ಚರ್ಚಿಸಲಾಗಿದೆ. ೧) ಅವುಗಳು ಯಾವಾಗಲೂ ತಮ್ಮ ನಾಯಕಿ/ನಾಯಕ ರನ್ನು ಟೀಕೆಗೆ ಗುರಿಪಡಿಸುವುದೇ ಇಲ್ಲ. ಹೊಗಳಿಕೆಯ, ದೈವತ್ವಕ್ಕೇರಿಸುವ ಚಿಮ್ಮುಹಲಗೆಗಳಾಗಿ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತವೆ. ೨) ಆ ಚಿತ್ರಗಳು ಅಳವಡಿಸಿಕೊಳ್ಳುವ ದೃಷ್ಟಿಕೋನ ತನ್ನ ಕಾಲದಿಂದ ಮುಂದಿನದ್ದಲ್ಲದೇ – ಸೀಮಿಪದೃಷ್ಟಿಯನ್ನು ಹೊಂದಿರುತ್ತವೆ. ಹೀಗಾದಾಗ, ಸ್ವಲ್ಪವೇ ಸಮಯದಲ್ಲಿ ಅವು ತಮ್ಮ ಮೌಲಿಕತೆಯನ್ನು ಕಳೆದುಕೊಂಡು ಹಳತಾಗುತ್ತವೆ. ೩) ಮತ್ತು ಅವು “ವಾಸ್ತವವನ್ನು ಆಧರಿಸಿದ” ನಿರೂಪಣೆಯನ್ನು ನೀಡಲು ಪ್ರಯತ್ನಿಸುತ್ತಿದ್ದಾವೋ ಅಥವಾ, ತಮ್ಮ ಕೇಂದ್ರಪಾತ್ರದ ಸುತ್ತ ಒಂದು ನಾಟಕೀಯತೆಯ ರಂಜಕತೆಯನ್ನು ಮಾತ್ರವೇ ಸುತ್ತುತ್ತಿದ್ದಾವೋ ಹೇಳುವುದು ದುಸ್ತರ.

ಅವುಗಳಲ್ಲಿ ಬಹುಪಾಲು ಸಹಜವಾಗಿಯೇ ರಾಷ್ಟಮಟ್ಟದಲ್ಲಿ ಮುಖ್ಯವಾದ ವ್ಯಕ್ತಿಗಳ ಕುರಿತಾಗಿ ಇರುವಂಥವು. (ಇಂಗ್ಲೆಂಡಿಗೆ ಅದು ರಾಜಮನೆತನದ ಕುರಿತೋ ಚರ್ಚಿಲ್ ಕುರಿತೋ ಆಗಿದ್ದರೆ, ಜರ್ಮನಿಯ ವಿಷಯದಲ್ಲಿ ಅದು ಫ್ರೆಡರಿಕ್ ದ ಗ್ರೇಟ್ ಅಥವಾ ಬಿಸ್ಮಾರ್ಕ್ ಸ ಸುತ್ತ ಇರುವಂಥದ್ದು. ಹಾಗೆಯೇ ಅಮೇರಿಕಾಕ್ಕೆ ಅಬ್ರಾಹಂ ಲಿಂಕನ್ ಮುಖ್ಯ ಕೇಂದ್ರ ಪಾತ್ರ). ಅದು ಬಿಟ್ಟರೆ ಅಸಮಾನ್ಯ ಸಾಧನೆಗಳನ್ನು ಮಾಡಿದ ವ್ಯಕ್ತಿಗಳು. ಉದಾಹಾರಣೆಗೆ ಡಿಗ್ರಿ ಪಡೆದ ಮೊದಲ ಕುರುಡು-ಕಿವುಡು ವ್ಯಕ್ತಿಯಾಗಿದ್ದ ಹೆಲೆನ್ ಕೆಲ್ಲರ್ ಳ ಕುರಿತು ೧೯೧೯ ಹಾಗೂ ಮತ್ತೆ ೧೯೬೨ರ ರಲ್ಲಿ ಮಾಡಲ್ಪಟ್ಟ ಸಿನೆಮಾಗಳು. ಹಾಗೆಯೇ ಅಂತರಾಷ್ಟ್ರೀಯ ಪ್ರಸಿದ್ಧಿ ಪಡೆದ ವ್ಯಕ್ತಿತ್ವಗಳಾದ ಲೇಖಕರು, ವಿಜ್ನಾನಿಗಳು ಕಲಾವಿದರು (ಪಾಶ್ಚರ್, ಝೋಲಾ, ರೆಂಬ್ರಾಂಟ್) ಕೂಡಾ ಈ ಬಗೆಯ ಚಿತ್ರಗಳಿಗೆ ವಸ್ತುಗಳು. ಇಂಥ ಸಂದರ್ಭಗಳಲ್ಲಿ ಈ ಚಿತ್ರಗಳು ಜೀವನಚರಿತ್ರೆಗಳಾಗುವುದಕ್ಕಿಂತ ಹೆಚ್ಚು ಹೇಜಿಯೋಗ್ರಫಿ ಅಥವಾ ವ್ಯಕ್ತಿಗಳನ್ನು ಕೆಡುಕುರಹಿತ ಮನುಷ್ಯರನ್ನಾಗಿ ಉನ್ನತೀಕರಿಸಿದ ಮಾದರಿಗಳಾಗುವುದೇ ಹೆಚ್ಚು. ಈಗಾಗಲೇ ಆಯಾ ಸಾಮಾಜಿಕ ಮನೋಭೂಮಿಕೆಯಲ್ಲಿ ಊರಲ್ಪಟ್ಟ ಕಲ್ಪನೆಗಳನ್ನು ಚಿತ್ರದಲ್ಲಿ ನಿರ್ದಿಷ್ಟೀಕರಿಸಿ ಬಿಂಬಿಸುವುದೇ ಇವುಗಳ ಗುಣ ಮತ್ತು ಗುರಿ.

ಜರ್ಮನಿಯನ್ನು ಬಿಡುವ ಮೊದಲು ಡಿಟರೇಲ್ ಒಂದು ಬಯೋಪಿಕ್ ಅನ್ನು ನಿರ್ದೇಶಿಸಿದ್ದ. ಮೊದಮೊದಲ ಬಯೋಪಿಕ್ ಚಿತ್ರಗಳಲ್ಲಿ ಅದು ಒಂದು ಹಾಗೂ ೧೯೨೯ ರಲ್ಲಿ ಚಿತ್ರಿತವಾದ ಮೂಕೀ ಚಿತ್ರಗಳ ಪೈಕಿ ಕಡೆಯ ಚಿತ್ರವೂ ಅದೇ. ಈ ಚಿತ್ರ ಬವೇರಿಯಾದ ಎರಡನೇ ಕಿಂಗ್ ಲುಡ್ವಿಗ್ ನ ಕುರಿತದ್ದು. ಇಂಪ್ರೆಷನಿಸ್ಟಿಕ್ ಎಂದು ಕರೆಯಬಹುದಾದ ಈ ಚಿತ್ರ ಅತ್ಯಂತ ಪ್ರತಿಭಾಪೂರ್ಣವಾದದ್ದು ಹಾಗೂ ಸುಂದರವಾದದ್ದು ಕೂಡಾ. ೨೦ನೇ ದಶಕದ ಜರ್ಮನ್ ಚಿತ್ರಗಳು ಅನೇಕ ಬಗೆಯ ತಂತ್ರ, ನಿರ್ಮಾಣಕ್ರಮ, ಸಿದ್ಧಾಂತಗಳನ್ನು ಬಳಸಿ ಪ್ರಯೋಗಗಳನ್ನು ನಡೆಸಿದ್ದವು. ವಾಸ್ತವವಾದೀ ಚಿತ್ರಗಳಿಂದ ಮೊದಲುಗೊಂಡು, ಸಹಜವಾದೀ ( naturalist ) ಗಳನ್ನೂ ಸೇರಿ ಅವಾಸ್ತವ (expressionist) ಮಾದರಿಯ ಚಿತ್ರಗಳೂ ಅಲ್ಲಿ ತಯಾರಿಸಲ್ಪಟ್ಟವು. ಇನ್ನೂ ಒಂದು ತಂತ್ರ-ಸಿದ್ಧಾಂತವಾದ Impressionism ಅನ್ನು ನಾವು ವಾಸ್ತವವಾದೀ ಕ್ರಮವನ್ನೇ ಹೆಚ್ಚು ಸಾಂದ್ರೀಕರಿಸಿದ ಕ್ರಮ ಎಂದು ಕರೆಯಬಹುದು. ಅಂದರೆ ವಾಸ್ತವವನ್ನು ಉದ್ದೀಪಿಸಿ ಅದರ ಗಾಢತೆಯನ್ನು ಹೆಚ್ಚಿಸುವ ಮೂಲಕ ಒಂದು ಪರಿಣಾಮವನ್ನು ಉಂಟುಮಾಡುವುದು ಈ ಬಗೆಯ ತಾತ್ವಿಕತೆಯ ಉದ್ದೇಶ. ಲುಡ್ವಿಗ್ ಚಾರಿತ್ರಿಕವಾಗಿ ಬಹಳ ಕುತೂಹಲಕಾರಿಯಾದ ಮತ್ತು ಮುಖ್ಯವಾದ ವ್ಯಕ್ತಿಯಾಗಿದ್ದ. ರೆನ್ ನದಿಯ ತಟಗಳಲ್ಲಿ ಅದ್ಬುತ ವಿನ್ಯಾಸದ ಹಾಗೂ ಅಪಾರ ವಚ್ಚದ ಅರಮನೆಗಳನ್ನು ಕಟ್ಟಿಸಿದ್ದು ಆತನೇ. ವೈರಿಗಳು ಅವನನ್ನ ಹುಚ್ಚನಂದು ಕರೆದು ಆಸ್ಥಾನದಿಮ್ದ ಹೊರಗಟ್ಟಿ, ಅರಮನೆಯಿಂದಲೇ ಓಡಿಸಿದರು. ಇಂಪ್ರಷನಿಸ್ಟ್ ಮಾದರಿಯ ಕಲಾವಿದರು ವಾಸ್ತವವನ್ನು ನವೀನವಾದ ಬಗೆಯಲ್ಲಿ ಸೆರಹಿಡಿಯಲು ಪ್ರಯತ್ನಪಟ್ಟವರು. ಅವರ ಪ್ರಕಾರ ಕಣ್ಣಿಗೆ ತೋರುವ ವಾಸ್ತವಕ್ಕಿಂತಲೂ ಮನೋಬುದ್ಧಿಗಳಿಗೆ ಕಾಣಸಿಗುವ ವಾಸ್ತವ ಭಿನ್ನವಾದದ್ದು. ಅದು ಇದ್ದದ್ದನ್ನು ಇದ್ದ ಹಾಗೆ ತೋರಿಸುವುದಕ್ಕಿಂತಲೂ, ಅಸ್ಪಷ್ಟ ಚಹರೆಗಳ ಸಮೇತವಾದ ನಿಜವನ್ನು ವರ್ಣಿಸುವುದು ಅವರ ಉದ್ದೇಶ. ಲುಡ್ವಿಗ್ ನ ಮನೋಭೂಮಿಕೆಯನ್ನು ಸೆರೆಹಿಡಿಯಲು ದಿಟೆರೇಲ್ ಗೆ ಈ ವಿಧಾನ ಹೆಚ್ಚು ಸಮರ್ಪಕ ಮತ್ತು ಪರಿಣಾಮಕಾರಿ ಎನ್ನಿಸಿ ಅದನ್ನು ಆತ ಲುಡ್ವಿಗ್ ನ ಪರಿಸ್ಥಿಯನ್ನು ಹೇಳಲು ಬಳಸಿಕೊಂಡ. ಆ ಚಿತ್ರದಲ್ಲಿ ತಾನೂ ಆ ಪಾತ್ರವನ್ನು ನಿರ್ವಹಿಸಿದ.

ಈ ಎಲ್ಲ ಕಾರಣದಿಂದಾಗಿ ಫಿರೋಝ್ ಅಬ್ಬಾಸ್ ಖಾನ್ ರ Gandhi my Father (2007) ಚಿತ್ರ, ನನ್ನ ದೃಷ್ಟಿಯಲ್ಲಿ, ರಿಚರ್ಡ್ ಅಟೆನ್ಬರೋ (Richard Attenborough) ೧೯೮೩ ರಲ್ಲಿ ನಿರ್ದೇಶಿಸಿದ ಗಾಂಧಿ ಚಿತ್ರಕ್ಕಿಂತ ಹೆಚ್ಚು ಮುಖ್ಯವಾದ್ದೆಂದು ಅನ್ನಿಸುತ್ತದೆ. ಅಟೆನ್ಬರೋ ನ ಗಾಂಧಿ ನಿಸ್ಸಂಶಯವಾಗಿಯೂ ಸುಂದರವಾಗಿ ತಯಾರಿಸಲ್ಪಟ್ಟ, ನೀಟಾದ ನಟನೆಯನ್ನು ಹೊಂದಿದ ಚಿತ್ರವೇನೋ ಸರಿ. ವಸ್ತ್ರವಿನ್ಯಾಸಕ್ಕೆ ಭಾನು ಅಥಯ್ಯಾಗೆ ಆಸ್ಕರ್ ದೊರೆತಿದ್ದು – ಅದು ಭಾರತಕ್ಕೆ ದೊರಕಿದ ಮೊದಲ ಆಸ್ಕರ್ ಸಹ – ಅರ್ಹವಾದ ಆಯ್ಕೆಯೇ ಎಂಬುದರಲ್ಲಿಯೂ ತಕರಾರಿಲ್ಲ. ಬೆಂಗಾಲೀ ಚಿತ್ರವಿಮರ್ಷಕ ಚಿದಾನಂದ ದಾಸ್-ಗುಪ್ತಾ “ಈ ಚಿತ್ರಕ್ಕೆ ದೊರಕಿದ ೮ ಆಸ್ಕರ್ ಗಳಲ್ಲಿ ೬ ತಂತ್ರಜ್ನಾನ ವಿಭಾಗಕ್ಕೇ ಸಂದಿದ್ದು ತನಗೆ ಆಶ್ಚರ್ಯ ಉಂಟುಮಾಡಿತು” ಎನ್ನುತ್ತಾರೆ. ಆದರೆ ನನ್ನ ಮಟ್ಟಿಗೆ ಇದು ಅಂಥ ಅಚ್ಚರಿಯ ಸಂಗತಿಯೇ ಅಲ್ಲ. ತಾಂತ್ರಿಕವಾಗಿ ಈ ಚಿತ್ರ ಎಲ್ಲ ದೃಷ್ಟಿಯಿಂದಲೂ ಸಶಕ್ತವಾಗಿರುವುದು ಹೌದಾದರೂ ವಸ್ತುವಿನ ನಿರ್ವಹಣೆ ಮಾತ್ರ ನಿರೀಕ್ಷಿತವಾಗಿದ್ದು ಮತ್ತು ಬಯಕೆಯನ್ನು ತಣಿಸುವ ಗುಣವನ್ನು ಮಾತ್ರವೇ ಹೊಂದಿದೆ. ಗಾಂಧಿಯ ಕುರಿತು ನಮಗೆ ತಿಳಿದಿರದ ಯಾವ ಹೊಸ ಸಂಗತಿಯನ್ನಾಗಲೀ ಒಳನೋಟವವನ್ನಾಗಲೀ ಅದು ನಮಗೆ ನೀಡುವುದಿಲ್ಲ. ಫ್ರೆಂಚ್ ಭಾಷೆಯಲ್ಲಿ ಬೆನ್ವಾ ಮಾರ್ಕೋಂ  ರಚಿಸಿದ ೪೪ ಪುಟಗಳ ಒಂದು ಮಕ್ಕಳ ಚಿತ್ರಕತೆಯಿದೆ. ಅಟೆನ್ಬರೋ ಗಾಂಧಿ ಚಿತ್ರ ಕಟ್ಟಿಕೊಡುವಷ್ಟೇ ಗಾಂಧಿಯ ಬದುಕಿನ ಮುಖ್ಯ ಘಟ್ಟಗಳನ್ನು ಈ ಚಿತ್ರಕತೆಯೂ ಅಷ್ಟೇ ಕುತೂಹಲಕಾರಿಯಾಗಿ ತೋರಿಸುತ್ತದೆ: ಎರಡರಲ್ಲಿಯೂ ಅದಕ್ಕಿಂಥ ಹೆಚ್ಚೇನದೇನೂ ಇಲ್ಲ.

ದಾಸ್-ಗುಪ್ತಾರಿಗೆ ಆ ಚಿತ್ರದ ತಾಂತ್ರಿಕ ಶ್ರೀಮಂತಿಕೆಯ ಕಾರಣದಿಂದ ಅದು “ಚರಿತ್ರೆಯನ್ನೇ ಪುನರ್-ದರ್ಶಿಸಿದಂತೆ” ಕಾಣಿಸಿತಂತೆ. ಆದರೆ “..ಅಂತೆ” ಎಂದು ಹೇಳುವುದರಲ್ಲಿಯೇ ಸಮಸ್ಯೆಯಿದೆ. ಅದು “ಚರಿತ್ರೆಯಂತೆ” ಕಾಣಿಸುವ ಮಟ್ಟಿಗೆ ಮಾತ್ರ ಯಶಸ್ವಿಯಾಗಿದೆಯೇ ಹೊರತು ಮತ್ತೇನೂ ಇಲ್ಲ. ಆ ಕಾಲವನ್ನು ತುಂಬಿ, ಸಿರಿವಂತ ಅನುಭವವನ್ನಾಗಿ ಕಾಣುವಂತೆ ಆ ಚಿತ್ರ ಮಾಡುತ್ತದೆನೋ ಸರಿ, ಆದರೆ ಅದರಲ್ಲಿನ ವ್ಯಕ್ತಿಗಳು, ಅವರ ಮಾತು-ನೋಟಗಳು ಅತ್ಯಂತ ಮೇಲ್ಪದರದ ಚಿತ್ರಣಗಳಾಗಿ ಮಾತವೇ ಇವೆ. ಆ ಚಿತ್ರದ ದೃಷ್ಟಿಕೋನ ಬ್ರಿಟೀಷರಿಗೂ ಅಗತ್ಯವಾಗಿದ್ದ ಹಾಗೆ, ಆಗ ಆಳ್ವಿಕೆಯಲ್ಲಿದ್ದ ನೆಹರು-ಗಾಂಧಿ ಕುಟುಂಬಕ್ಕೂ ಆಪ್ಯಾಯಮಾನವಾಗಿದ್ದಾಗಿತ್ತು.  ಆ ಚಿತ್ರದ ನಿರೂಪಣೆಯ ತಂತ್ರದಲ್ಲಿ  ಗಾಂಧಿ ಒಬ್ಬ ಸಂತ ಮತ್ತು ಜಿನ್ನಾ ಪ್ರತಿಯಾದ ವಿಲನ್ ಆಗಿದ್ದರೆ; ಬ್ರಿಟನ್ ಗೆ ಒಬ್ಬ ಹೀರೋ ಆಗಿ ಮೌಂಟ್-ಬ್ಯಾಟನ್ ಮತ್ತು ಭಾರತಕ್ಕೆ ನೆಹರುವಿನ ರೂಪದಲ್ಲೊಬ್ಬ ನಾಯಕ ದೊರಕಿದಂತಾಯಿತು. ವಿಭಜನೆಯ ಬಳಿಕ ಉಂಟಾದ ದುರ್ಭರ ನೋವು ಮತ್ತು ಧ್ವಂಸಾಚರಣೆಗಳು ಯಾರೂ ಊಹಿಸಿರದಿದ್ದ ಮತ್ತು ತಡೆಯಲು ಸಾಧ್ಯವಿರದ ಅನಿವಾರ್ಯ ಘಟನೆಗಳಾಗಿದ್ದವು – ಎಂದು ಗಾಂಧಿಯ ನೆಪದಲ್ಲಿ ಚಲನಚಿತ್ರ ಪ್ರತಿಪಾದಿಸುತ್ತದೆ. ಈ ನಿರೂಪಣೆಯಲ್ಲಿ ಪ್ರತಿಯೊಬ್ಬರೂ ತೃಪ್ತಿಪಡಬಲ್ಲ ಅಂಶಗಳಿದ್ದು – ಚಿತ್ರಕ್ಕೆ ಊನವೇ ಇಲ್ಲದ ಅದ್ವಿತೀಯ “ಸೌಂದರ್ಯ” ಪಾಪ್ತವಾಯಿತು.

ಗಾಂಧಿ ಚಿತ್ರ ದೃಷ್ಟಿಯಲ್ಲಿಟ್ಟುಕೊಂಡಿದ್ದು ಮುಖ್ಯವಾಗಿ ಅಂತರಾಷ್ಟ್ರೀಯ ವೀಕ್ಷಕರನ್ನು. ಗಾಂಧಿಯ ನೋಟ, ಮಾತುಗಳನ್ನು ಅಮೇರಿಕಾ ಮತ್ತು ಯುರೋಪಿಯನ್ ಪಾತ್ರಗಳು ಅನುಮೋದಿಸುತ್ತ, ಅದಕ್ಕೆ ಮಾನವೀಯವಾಗಿ ಸ್ಪಂದಿಸುತ್ತಿರುವಂತೆ ಈ ಚಿತ್ರದ ಒಳಾಂಗಣವನ್ನು ಹೆಣೆಯಲಾಗಿದೆ. ಪಶ್ಚಿಮ ದೇಶಗಳನ್ನು ಓಲೈಸುವಂತೆ ಚಿತ್ರದ ಆಂತರಿಕ ರಚನೆ ಇದ್ದರೂ ಸಹ ೬ ರಿಂದ ೧೦ ಮಿಲಿಯನ್ ಡಾಲರ್ ಗಳಷ್ಟು ಹಣವನ್ನು ಇಂಧಿರಾ ಗಾಂಧಿ ಈ ಚಿತ್ರಕ್ಕೆ ಒದಗಿಸಿದರು. ಚಿತ್ರದ ಶೀರ್ಷಿಕೆಯಲ್ಲಿ ಆಕೆಯ ಸರ್ ನೇಮ್ ಇತ್ತು ಎಂಬ ಅಂಶ, (ಅದು ಅಷ್ಟು ಮುಖ್ಯವಲ್ಲ) ಕಾಕಾತಾಳಿಯವಾಗಿದ್ದರೂ, ಮಾಜೀಪ್ರಧಾನಿಯ ತಂದೆಯನ್ನು ಆ ಚಿತ್ರ ಉದ್ದೀಪಿಸಿ ಒಳ್ಳೆಯ ಬೆಳಕಿನಲ್ಲಿಯೇ ತೋರಿಸಿತು ಎಂಬುದು ನೆನಪಿಡಬೇಕಾದ್ದು. ನಾಲ್ಕು ಲಕ್ಷ ಜನ ಭಾರತೀಯ ಕಾರ್ಮಿಕ-ನಟರಿಗೆ ಈ ಚಿತ್ರ ಕೆಲಸ ಒದಗಿಸಿತು ಎಂಬುದು ಇಂಧಿರಾ ಗಾಂಧಿ ಆ ಬಳಿಕ ಖರ್ಚನ್ನು ಸಮರ್ಥಿಸಿಕೊಳ್ಳಲು ಕೊಟ್ಟ ಕಾರಣ, ಒಂದು ಅರ್ಥದಲ್ಲಿ ಸಮರ್ಪಕವಾದ್ದೂ ಹೌದು. ಅದು ಆಕೆಯ ಜಾಣ್ಮೆಯೂ ಹೌದು.

ಆದರೆ ಕೇವಲ ಭಾರತೀಯ ಉಪನಟರಿಗೆ ಮಾತ್ರ ಈ ಚಿತ್ರದಲ್ಲಿ ಕೆಲಸ ಸಿಕ್ಕಿತ್ತು ಎಂಬುದನ್ನು ಮರೆಯಬಾರದು. ಕಸ್ತೂರ್ ಬಾ ಆಗಿ ರೋಹಿಣಿ ಹಟ್ಟಂಗಡಿ, ಜಿನ್ನಾ ಆಗಿ ರಂಗನಟ ಜೆಫರ್-ಶೇಟ್ ಪದಂಸಿ ಕಾಣಿಸಿಕೊಂಡದ್ದು ಬಿಟ್ಟರೆ ಅಮರೀಶ ಪುರಿ ಒಂದು ಸಣ್ಣ ಪಾತ್ರದಲ್ಲಿ ನಟಿಸಲು ಅವಕಾಶವಾಯಿತು. ಭಾರತೀಯ ಮೂಲದ ಮೂವರು ಬ್ರಿಟಿಶ್ ನಟರನ್ನು ಹೊರತುಪಡಿಸಿದರೆ ಇನ್ನುಳಿದ ಅಷ್ಟೂ ತಾರಾಗಣ ತುಂಬಿಹೋಗಿದ್ದು ಬ್ರಿಟೀಶ್ ನಟರಿಂದಲೇ ಎಂಬುದನ್ನು ಗಮನಿಸಬೇಕು. ೧೯೭೭ ರಲ್ಲಿ ಸತ್ಯಜಿತ್ ರೇ ಸಿನೆಮಾದಲ್ಲಿ ಕೆಲಸ ಮಾಡಿದ್ದ ಅಟೆನ್-ಬರೋ ಗೆ ಹಾಗೂ ಶತರಂಜ್ ಕೆ ಕಿಲಾಡಿಯಲ್ಲಿ (೧೯೭೭) ಒಂದು ಪಾತ್ರವನ್ನೂ ಮಾಡಿದ್ದ ಅಟೆನ್ಬರೋ ಗೆ ಭಾರತದಲ್ಲೇ ಅತ್ಯಂತ ಪ್ರತಿಭಾಶಾಲಿಯಾದ ನಟರ ದಂಡೇ ಇದೇ ಎಂಬ ಸಂಗತಿ ತಿಳಿದಿರದ್ದೇನಲ್ಲ. ಇದು ಆಶ್ಚರ್ಯದ ವಿಷಯ. ಚಿತ್ರೀಕರಣಕ್ಕೆ ವರ್ಷಗಟ್ಟಲೇ ಸಮಯ ತೆಗೆದುಕೊಂಡ ಈ ಚಲನಚಿತ್ರದ ಯಾವ ಸಂದರ್ಭದಲ್ಲಿಯೂ ಗಾಂಧಿಯ ಪಾತ್ರಕ್ಕೆ ಭಾರತದ್ದೇ ಒಬ್ಬ ನಟ ಸೂಕ್ತನಾಗಬಹುದು ಎಂದು ಹೊಳೆಯದೇ ಇದ್ದದ್ದೂ ಆಶ್ಚರ್ಯವೇ. ಅನೇಕ ಜನ ಅಮೇರಿಕನ್ ಹಾಗೂ ಬ್ರಿಟೀಶ್ ನಟರನ್ನು ಗಾಂಧಿಯ ಪಾತ್ರಕ್ಕೆ ಸಂಪರ್ಕಿಸಲಾಯಿತಾದರೂ ಕಡೆಗೆ ಬೆನ್ ಕಿಂಗ್ಸ್ಲೆ ಗೆ ಆ ಅವಕಾಶ ಒದಗಿ ಬಂದದ್ದು ಕೇವಲ ಆಕಸ್ಮಿಕ ಮಾತ್ರ. ಅರ್ಧ ಭಾರತೀಯ ಮೂಲದ ಕಿಂಗ್ಸ್ಲೆ (ಗುಜರಾತಿ ಮೂಲ) ಯ ಹಿಂದಿನ ಮೂರು ತಲೆಮಾರು ಪೂರ್ತಿಯಾಗಿ ಜೀವಿಸಿದ್ದು ಇಂಗ್ಲೆಂಡಿನಲ್ಲಿ. ಸ್ವತಃ ಕಿಂಗ್ಸ್ಲೆಯೇ ಹೇಳುವಂತೆ “ತಾನು ಬೆಳೆದದ್ದು ಒಬ್ಬ ಇಂಗ್ಲಿಷ್ ಮನುಷ್ಯನಾಗಿಯೇ”. ಇದೇನೇ ಇದ್ದರೂ, ಗಾಂಧಿಯಾಗಿ ಕಿಂಗ್ಸ್ಲೆ ನೀಡಿದ ಪ್ರದರ್ಶನ. ಅದಕ್ಕೆ ಮಾಡಿಕೊಂಡ ತಯಾರಿಯನ್ನು ಅನುಮಾನಿಸುವುದು ಸರಿಯಾಗುವುದಿಲ್ಲ. ಅದಿಲ್ಲದೇ ಹೋಗಿದ್ದರೆ, ಇಡೀ ಚಿತ್ರ ಆತ್ಮವಿಲ್ಲದ ಸುಂದರ ಮ್ಯಾನಿಕೀನ್ ಆಗುವ ಎಲ್ಲ ಸಾಧ್ಯತೆಯೂ ಇತ್ತು.

ಆದರೆ, “ಗಾಂಧಿ ಮೈ ಫಾದರ್” ಚಿತ್ರದ ವಿಷಯಕ್ಕೆ ಬಂದರೆ, ಆ ಚಿತ್ರ ಬಿಡುಗಡೆಯಾದಾಗ ವಾಷಿಗ್ಟನ್ ಪೋಸ್ಟ್ ನಲ್ಲಿ ಪ್ರಕಟವಾದ ವಿಮರ್ಷೆ ಈ ಎರಡು ಚಿತ್ರಗಳ ನಡುವಿರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ. “೨೫ ವರ್ಷದ ಹಿಂದಿನ ಅಟೆನ್ಬರೋ ನ ಆಸ್ಕರ್ ಪ್ರಶಸ್ತಿ ವಿಜೇತ ಗಾಂಧಿ ಚಿತ್ರಕ್ಕಿಂತಲೂ ಇದು ಹೆಚ್ಚು ಸ್ಪಷ್ಟವಾಗಿ ಮತ್ತು ಸಮಸ್ಯಾತ್ಮಕವಾಗಿ ಗಾಂಧಿಯ ವ್ಯಕ್ತಿತ್ವದ ಕೋರೆಗಳನ್ನು ತೋರಿಸುತ್ತದೆ.” “… ಮೈ ಫಾದರ್” ತನ್ನನ್ನು “ಐತಿಹಾಸಿಕ” ಚಿತ್ರ ಎಂದೂ ಕರೆದುಕೊಳ್ಳುವುದಿಲ್ಲ. ಗುಜರಾತಿ ಬರಹಗಾರ ದಿಕರ್ ಜೋಶಿಯವರ ಪ್ರಕಾಶ್ ನೋ ಪಡ್ಚಾಯೋ ಕಾದಂಬರಿಯನ್ನು ಆಧರಿಸಿ ನಂತರ ಖಾನ್ ಅವರು ಮಹಾತ್ಮಾ ವರ್ಸಸ್ ಗಾಂಧಿ ಹೆಸರಿನಲ್ಲಿ ನಾಟಕವನ್ನಾಗಿ ನಿರ್ದೇಶಿಸಿದ್ದನ್ನೇ ನಂತರ ಚಲನಚಿತ್ರವನ್ನಾಗಿ ಪುನರ್-ನಿರ್ಮಿಸಲಾಯಿತು. (ಮೊದಲ ಪ್ರದರ್ಶನ ಮುಂಬೈ ನ ಪೃಥ್ವಿ ಥಿಯೇಟರ್). ಗಾಂಧಿಯ ಮಗ ಹರಿಲಾಲ್ ನ ದೃಷ್ಟಿಕೋನದಿಂದ ಗಾಂಧಿಯನ್ನು ಕಾಣಿಸುವ ಈ ಚಿತ್ರ ಸೂಕ್ಷ್ಮತೆ ಹಾಗೂ ಸಮಸ್ಯಾತ್ಮಕತೆಗಳನ್ನು ದಟ್ಟವಾಗಿ ಹೊಂದಿದೆ. ಆ ಮೂಲಕ ಗಾಂಧಿಯನ್ನು ಭಿನ್ನ ಆಯಾಮಗಳಿಂದ ತಡಕಲು, ವರ್ಣಿಸಲು ಪ್ರಯತ್ನಿಸುತ್ತದೆ. ಇದರ ಮುಂದೆ ಅಟೆನ್ಬರೋ ನ ಗಾಂಧಿ ಗೋಡೆಚಿತ್ರಗಳ ಮೂಲಕ ಹೇಳಲಾದ ಇತಿಹಾಸದಂತೆ ಕಾಣಿಸುತ್ತದೆ.

ಅನೇಕ ಭಾರತೀಯ ಬರಹಗಾರರು ಗಾಂಧಿಯ ಬಹು ಆಯಾಮದ ವ್ಯಕ್ತಿತ್ವವನ್ನು ಹೆಚ್ಚು ಅನುಮಾನದಿಂದ, ಆಳವಾಗಿ ಸಂಶೋಧಿಸುವ ಮೂಲಕ, ಆ ವ್ಯಕ್ತಿಯ ಸುತ್ತ ಹಬ್ಬಿದ ಪ್ರಭಾವಳಿಯನ್ನು ಸರಿಸಿ ನೋಡುವುದರ ಮೂಲಕ ಮತ್ತು ಆ ಪ್ರಭಾವಳಿಯನ್ನೇ ಅರ್ಥಮಾಡಿಕೊಂಡು ಅವಲೋಕಿಸುವ ಮೂಲಕ ಗಾಂಧಿಯನ್ನು ಕಾಣುವ ಪ್ರಯತ್ನಗಳನ್ನೂ ಮಾಡಿದ್ದಾರೆ. ಹೀಗಾಗಿ ಪಿ.ಶೇಶಾದ್ರಿಯವರ, ಗಾಂಧಿಯ ಬಾಲ್ಯದ ಕುರಿತ ಮೋಹನದಾಸ ಮತ್ತು ಕನ್ನಡ ನಾಟಕಾಧಾರಿತ “ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ” (೨೦೧೧ – ಬೋಳುವಾರು ಮೊಹಮದ್ ಕುಂಝ್ಜ಼ಿ) ಗಳನ್ನು ನೋಡುವ ಕುತೂಹಲದಲ್ಲಿದ್ದೇನೆ.

ಈ ಬರಹದ ಮುಂದಿನ ಭಾಗದಲ್ಲಿ , ಇತ್ತೀಚಿನ ಬಯೋಪಿಕ್ ಗಳ ಉದಾಹಾರಣೆಗಳನ್ನು ಅವಲೋಕಿಸಿ ವಿಮರ್ಷಿಸುವ ಮೊದಲು, ತನ್ನ ಬಹುಪಾಲು ಜೀವನವನ್ನು ಬಯೋಪಿಕ್ ಗಳ ತಯಾರಿಕೆಗೇ ಮಿಸಲಿಟ್ಟು ಕೆಲಸ ಮಾಡಿದ ಬ್ರಿಟಿಶ್ ನಿರ್ದೇಶಕನೊಬ್ಬನ ಕುರಿತು ಚರ್ಚಿಸಲು ಬಯಸುತ್ತೇನೆ. ೧೯೬೦ ಮತ್ತು ೭೦ ರ ದಶಕಗಳಲ್ಲಿ ಆತನ ಚಿತ್ರಗಳ ಮೂಲಕ ಬಯೋಪಿಕ್ ಗಳ ಸಿನೆಮಾ ಪ್ರಕಾರವನ್ನು ದೊಡ್ಡ ಮಟ್ಟದಲ್ಲಿ ಹಿಗ್ಗಿಸಿದ್ದಷ್ಟೇ ಅಲ್ಲದೇ, ಅದರ ಸಾಧ್ಯತೆಗಳ ತುದಿಯನ್ನು ಮೀರಲೂ ಆತ ಯತ್ನಿಸಿದ. ಈ ಪ್ರಕಾರವನ್ನು ಕೇವಲ ಐತಿಹಾಸಿಕ ಘಟನಾವಳಿಗಳ ನಿರೂಪಣೆಯನ್ನಾಗಿ ಮಾತ್ರವೇ ಗಣಿಸದೆ, ಅದಕ್ಕೆ ಒಂದು ಕ್ರಿಯಾತ್ಮಕ ನಾಟಕೀಯ ಸ್ವರೂಪವನ್ನೇ ಹಚ್ಚಿ ಚಿಂತನಶೀಲಗೊಳಿಸಲು ಮುಂದಾದ ಆ ನಿರ್ದೇಶಕನ ಹೆಸರು ಕೆನ್ ರಸೆಲ್.

ಪ್ರತಿಕ್ರಿಯಿಸಿ