ಭಾರತದ ವಿಜ್ಞಾನ ರಂಗದ ಯುವ, ಪ್ರಖರ ದನಿ ಡಾ. ತೇಜಲ್ ಕನಿಟ್ಕರ್ ಅವರೊಂದಿಗಿನ ಎರಡು ಸಂವಾದವನ್ನು ನಾವಿಲ್ಲಿ ಕನ್ನಡಕ್ಕೆ ತಂದಿದ್ದೇವೆ . ಮೊದಲನೆಯದ್ದು – ಡಿಸೆಂಬರ್ ೨೦೧೭ರ ಮುಂಬೈ ಕಲೆಕ್ಟಿವ್ ನಲ್ಲಿ ನೀಡಿದ ಉಪನ್ಯಾಸ. ಜವಾಬ್ದಾರಿಯ ಸ್ಥಾನಗಳಲ್ಲಿರುವ ಜನ ಅವೈಜ್ಞಾನಿಕ ಹೇಳಿಕೆಗಳನ್ನು ನೀಡಿ ಪಾರಾಗುವುದು ನಮಗೆ ಆಶ್ಚರ್ಯ ತಂದರೂ ನಮ್ಮ ದಿನನಿತ್ಯದ ಗೊಡ್ಡುತನ ಹೇಗೆ ಇದಕ್ಕೆ ಕಾರಣವಾಗಿದೆ ಎಂದು ತೇಜಲ್ ಈ ಉಪನ್ಯಾಸದಲ್ಲಿ ವಿವರಿಸಿದ್ದಾರೆ . ನಾವು ದಿನನಿತ್ಯ ರೂಢಿಸಿಕೊಂಡಿರುವ ಗೊಡ್ಡುತನದ ಪರಿಣಾಮವನ್ನು ವಿವರಿಸುತ್ತ ಅವರು, ಇತಿಹಾಸದ ಕುರಿತು ನಮಗಿರುವ ಪೂಜ್ಯತಾಭಾವವನ್ನು ತೊರೆದು ವಿಜ್ಞಾನವನ್ನು ಬಹುರಾಷ್ಟ್ರೀಯ ಕಂಪನಿಗಳ ಕೈಗಳಿಂದ ಬಿಡಿಸಿ ನಮ್ಮದಾಗಿಸಿಕೊಳ್ಳುವ ಅಗತ್ಯದ ಕುರಿತು ಮಾತನಾಡಿದ್ದಾರೆ. ಎರಡನೆಯದ್ದು – ಎಪ್ರಿಲ್ ೨೦೧೯ರಲ್ಲಿ ನ್ಯೂಸ್ಕ್ಲಿಕ್ ಮತ್ತು ಇಂಡಿಯನ್ ರೈಟರ್ಸ್ ಫೋರಂಗೆ ನೀಡಿದ ಸಂದರ್ಶನದಲ್ಲಿ ಸಮಾನತೆಯ ಸಮಾಜಕ್ಕಾಗಿರುವ ಹೋರಾಟ ಹಾಗೂ ವಿಜ್ಞಾನಕ್ಕಾಗಿರುವ ಹೋರಾಟ ಒಂದೇ ಆಗಿದೆಯೆಂದು ವಿವರಿಸಿದ್ದಾರೆ. ತೇಜಲ್ ಕನಿಟ್ಕರ್ ಅವರು ಬೆಂಗಳೂರಿನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‍ನಲ್ಲಿ ಸಹ ಪ್ರಾಧ್ಯಾಪಕರು.
ಡಿಸೆಂಬರ್ ೨೦೧೭ರ ಮುಂಬೈ ಕಲೆಕ್ಟಿವ್‍ನಲ್ಲಿ ಡಾ. ತೇಜಲ್ ಕನಿಟ್ಕರ್ ಅವರು ‘ಜವಾಬ್ದಾರಿಯ ಸ್ಥಾನಗಳಲ್ಲಿರಿವ ಜನ ಅವೈಜ್ಞಾನಿಕ ಹೇಳಿಕೆಗಳನ್ನು ನೀಡಿ ಹೇಗೆ ಪಾರಾಗುತ್ತಾರೆ?’ ಎಂಬ ವಿಷಯದ ಕುರಿತು ನೀಡಿದ ಭಾಷಣ ಇದು. ದಿನನಿತ್ಯದ ಮೌಢ್ಯಾಚರಣೆಗಳಿಗೆ ನಮ್ಮ ಜಾಣ ಕುರುಡು ಹೇಗೆ ಈ ರೀತಿಯ ಸನ್ನಿವೇಶಗಳಿಗೆ ಅನುವು ಮಾಡಿಕೊಡುತ್ತದೆ ಹಾಗೂ ವಿಜ್ಞಾನವನ್ನು ನಮ್ಮದಾಗಿಸಿಕೊಳ್ಳುವ ಅಗತ್ಯ ಏಕಿದೆ ಎಂದು ಅವರು ಇಲ್ಲಿ ವಿವರಿಸಿದ್ದಾರೆ .
ವಿಜ್ಞಾನದ ಸಂಗತಿಗಳ ಕುರಿತು ನೀಡಿದ, ಎಲ್ಲ ರೀತಿಯ ಹಾಸ್ಯಾಸ್ಪದ ಹೇಳಿಕೆಗಳ ಕುರಿತು ಇವತ್ತು ಬಹಳಷ್ಟು ಹೇಳಲಾಗಿದೆ. ನಾನು ಅದನ್ನು ಕೇಂದ್ರವಾಗಿರಿಸುವುದಿಲ್ಲ. ಆದರೆ ಗೋವುಗಳು ಹೇಗೆ ಆಕ್ಸಿಜನ್ ಹೊರಹಾಕುತ್ತವೆ ಮತ್ತು ವಿಕಿರಣಗಳನ್ನು ಹೀರಿಕೊಳ್ಳುತ್ತವೆ ಎನ್ನುವುದೊಂದು ಬಿಟ್ಟು ಹೋಗಿತ್ತು. ಹೀಗೆ, ಗೋವುಗಳಿಗೆ ನಮಗೆ ಅರಿವಿಲ್ಲದ ಎಷ್ಟೋ ಕೆಲಸಗಳನ್ನು ಮಾಡುವ ಸಾಮರ್ಥ್ಯ ಇದೆ.
ಸಮಸ್ಯೆ ಇರುವುದು ಜವಾಬ್ದಾರಿಯುತ ಹುದ್ದೆಗಳಲ್ಲಿರುವ ವ್ಯಕ್ತಿಗಳು ಇಂತಹ ಹೇಳಿಕೆಗಳನ್ನು ನೀಡುವುದರಲ್ಲಿ. ನಾವು ಇಲ್ಲಿ ಕೇಳಬೇಕಾದ ಪ್ರಶ್ನೆ ಏನೆಂದರೆ, ಈ ರೀತಿ ಹೇಳಿಕೆಗಳನ್ನು ನೀಡಿ ನಂತರ ತಪ್ಪಿಸಿಕೊಳ್ಳಬಹುದು ಎಂದು ಅವರಿಗೆ ಏಕೆ ಅನ್ನಿಸುತ್ತದೆ? ಅವರಿಗೆ ಈ ರೀತಿಯ ಹೇಳಿಕೆಗಳನ್ನು ನೀಡಲು ಏನೂ ತಡೆಗಳಿಲ್ಲದಿರುವದಕ್ಕೆ ಕಾರಣವೇನು? ಇದು ನಮ್ಮನ್ನು, ‘ದಿನನಿತ್ಯದ ಗೊಡ್ಡುತನ’ (everyday obscurantism) ಎಂದು ನಾನು ಕರೆಯುವ ವಿದ್ಯಮಾನದೆಡೆಗೆ ಕರೆತರುತ್ತದೆ. ಇದು ನಮ್ಮ ಸುತ್ತಲೂ ಇದೆ. ನಾವಿದನ್ನು ನೋಡುತ್ತೇವೆ, ಕೆಲವು ಅತ್ಯಂತ ಹಾಸ್ಯಾಸ್ಪದ ಹೇಳಿಕೆಗಳ ಕುರಿತು ಹಾಸ್ಯ ಮಾಡುತ್ತೇವೆ. ಮೀಮ್‍ಗಳನ್ನು ರಚಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತೇವೆ. ಆದರೆ, ಬಹುತೇಕ ಬಾರಿ, ನಮ್ಮ ಸುತ್ತಲೇ ನಿತ್ಯ ಕಾಣುವ ಗೊಡ್ಡುತನವನ್ನು ಹೋಗಬಿಡುತ್ತೇವೆ.
ತಂದೆ ತಾಯಿ ಮಕ್ಕಳಿಗೆ “ಸೂರ್ಯಗ್ರಹಣ ಇದೆ, ಮನೆಯಿಂದ ಹೊರಗೆ ಹೋಗಬೇಡ” ಎನ್ನುತ್ತಾರೆ. ಇದನ್ನು ನಮ್ಮ ಅಕ್ಕಪಕ್ಕದಲ್ಲಿಯೇ ನಾವು ಬಹಳಷ್ಟು ನೋಡಿರುತ್ತೇವೆ. ಈಗೀಗ ಮನೆಯನ್ನು ಕಟ್ಟಬೇಕು, ಕೊಂಡುಕೊಳ್ಳಬೇಕು ಅಥವಾ ಬಾಡಿಗೆ ಪಡೆಯಬೇಕೆಂದಿದ್ದಲ್ಲಿ ವಾಸ್ತುವನ್ನು ನೋಡಲಾಗುತ್ತದೆ. ಇದನ್ನೂ ನಾವೆಲ್ಲರೂ ಅಕ್ಕಪಕ್ಕದಲ್ಲಿಯೇ ನೋಡಿರುತ್ತೇವೆ. ಇತ್ತೀಚಿಗೆ, ಜಾತಕ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ನಾನು ಕಲಿಸುವ ಸಂಸ್ಥೆಯಲ್ಲಿ, ವಿಶೇಷವಾಗಿ ಮೊದಲ ಸೆಮಿಸ್ಟರ್‍ನಲ್ಲಿ ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳುವುದು ನಿಮ್ಮ ಕಿವಿಗೆ ಬೀಳುತ್ತದೆ. ಇತ್ತೀಚಿನ ದಿನಗಳಲ್ಲಿ “Hi, ನಾನು ಇಂತಿಂಹಹ ವ್ಯಕ್ತಿ. ನಾನು sagittarian” ಎನ್ನುವುದು ಪರಿಚಯದ ಭಾಗವಾಗಿಬಿಟ್ಟಿದೆ. ಜಾತಕಗಳು ಬಹಳ ಪ್ರಮುಖ ಸಂಗತಿಗಳಾಗಿಬಿಟ್ಟಿವೆ. ಇದು ಗೊಡ್ಡುತನ ಹಾಗೂ ನಾವು ದಿನನಿತ್ಯ ಇದಕ್ಕೆ ಪ್ರತಿರೋಧ ಒಡ್ಡುವುದಿಲ್ಲ. ಇದಕ್ಕಿಂತ ಸ್ವಲ್ಪ ಕೆಳಗಿನ ಇನ್ನೊಂದು ವಿಚಾರವಿದೆ, ಹೆಚ್ಚು ವೈಯಕ್ತಿಕವಾದದ್ದು. ಇವೆಲ್ಲ ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ತಿರುಗಾಡುತ್ತದೆ ಕೂಡ. ಮುಂಡದ ಮೇಲೆ ಬಿಳಿಯ ದಾರವೊಂದನ್ನು ಧರಿಸುವುದು ನಿಮ್ಮ ವೈಯಕ್ತಿಕ ಸ್ವಾತಂತ್ರ್ಯ. ಇದು ಏನನ್ನು ಸಾಧಿಸಲು ಮಾಡಲಾಗುತ್ತದೋ ನನಗೆ ಗೊತ್ತಿಲ್ಲ. ಆದರೆ ನಮ್ಮ ಸುತ್ತ ಕಾಣುವ ಸಂಗತಿಗಳಲ್ಲಿ ಇದೂ ಕೂಡ ಪಾತ್ರವಾಗಿದೆ. ಮುಂಬೈ, ಪೂಣೆಯಂತಹ ನಗರಗಳಲ್ಲಿ, ಈ ಎಲ್ಲ ಶಾಸ್ತ್ರಗಳನ್ನು ನಡೆಸುವ ಪೂರ್ಣ ಮದುವೆಗಳ ಹೊಸ ಪ್ರವೃತ್ತಿ ಆರಂಭವಾಗಿದೆ. ಆದರೆ ಮಂಗಳಾಷ್ಟಕ ಓದಲಿಕ್ಕೆ ಜ್ಞಾನ ಪ್ರಭೋದಿನಿಯಂತಹ ಸಂಸ್ಥೆಗಳಿಂದ ಮಹಿಳೆಯರನ್ನು ಕರೆಸಲಾಗುತ್ತದೆ. ಹೀಗೆ ಪ್ರಗತಿಪರ ಗೊಡ್ಡುತನವೂ ಇದೆ.
ಇವೆಲ್ಲ ನಮ್ಮ ಮುಂದಿದೆ, ಆದರೆ ನಾವಿದನ್ನು ಪ್ರಶ್ನಿಸುವುದಿಲ್ಲ. ಇದನ್ನು ಹೋಗಬಿಡುತ್ತೇವೆ. ಕೆಲವೊಮ್ಮೆ ಇದು, “ನಾನು ನಂಬುವುದಿಲ್ಲ ಆದರೆ ತಂದೆ ತಾಯಿಗೆ ಬೇಕೆಂದರೆ ನಾನೇನು ಮಾಡಲಿ?” ಎನ್ನುವ ರೂಪ ತಳೆಯುತ್ತದೆ. “ನಾನಿದನ್ನು ಮಾಡಬೇಕು. ನಾನು ನಂಬದಿದ್ದರೂ ಇದನ್ನು ಮಾಡದಿದ್ದರೆ ನನ್ನ ತಂದೆ ತಾಯಿಗೆ ನೋವಾಗುತ್ತದೆ” – ಇಂತಹ ವಿಚಾರಗಳು ನಮ್ಮ ಮುಂದೆ ಯಾವಾಗಲೂ ಇದೆ. ಈ ನಡೆ ವಿಜ್ಞಾನದ ಕುರಿತು ಎಲ್ಲ ರೀತಿಯ ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡಲು ಅವಕಾಶ ಕಲ್ಪಿಸುತ್ತದೆ. ಈ ಹೇಳಿಕೆಗಳು ನಮ್ಮ ಮುಖಕ್ಕೆ ರಾಚುವಂತೆ ಬಡಿದಾಗ, ಹೇಗೆ ಅವರು ಈ ರೀತಿಯ ಹೇಳಿಕೆಗಳನ್ನು ನೀಡಬಲ್ಲರು ಎಂದು ನಾವು ಚಿಂತಿಸುತ್ತೇವೆ. ಅವರು ಈ ಹೇಳಿಕೆಗಳನ್ನು ನೀಡಬಲ್ಲರು ಏಕೆಂದರೆ ಈ ರೀತಿಯ ಸಂಗತಿಗಳು ನಿತ್ಯ ನಮ್ಮ ಸುತ್ತ ನಡೆಯುತ್ತಲೇ ಇರುತ್ತವೆ ಹಾಗೂ ನಾವು ಅವುಗಳನ್ನು ಪ್ರಶ್ನಿಸುವುದಿಲ್ಲ. ನಮ್ಮ ಹೆದರಿಕೆ ಏನೆಂದರೆ ಈ ಸಂಗತಿಗಳನ್ನು ನಿತ್ಯ ಪ್ರಶ್ನಿಸುವುದು ಆಧುನಿಕತೆಯ ಕುರಿತು ರಾಜಿಯಾಗದ ಒಪ್ಪಿಕೊಳ್ಳುವಿಕೆಯನ್ನು ಬೇಡುತ್ತದೆ. ಇದನ್ನು ಮಾಡಲು ನಾವು ಸಿದ್ಧರಿಲ್ಲ. ಏಕೆಂದರೆ, ಈ ದೇಶದಲ್ಲಿ, ಇತಿಹಾಸವನ್ನು ನಿರಾಕರಿಸಲು ನಾವು ಹೆದರುತ್ತೇವೆ.
ನಮ್ಮ ಇತಿಹಾಸದ ಕುರಿತು ಒಂದು ವಿಚಿತ್ರವಾದ ಪೂಜ್ಯತಾಭಾವ ನಮ್ಮಲ್ಲಿದೆ. ಅದನ್ನು ಸಂಪೂರ್ಣವಾಗಿ ಬಿಟ್ಟುಬಿಡಲು, ಯಾವುದೋ ಕಾರಣಕ್ಕೆ, ನಾವು ಸಿದ್ಧರಿಲ್ಲ. ಇದರ ವಿಪರೀತ ರೂಪವನ್ನು ಇತಿಹಾಸವನ್ನು ವೈಭವೀಕರಿಸುವ ನಮ್ಮ ಪ್ರಧಾನ ಮಂತ್ರಿಗಳ ತರಹದವರಲ್ಲಿ, ಪುಷ್ಪಕ ವಿಮಾನ ಇತ್ಯಾದಿ ಸಂಗತಿಗಳನ್ನು ವೈಭೇವೀಕರಿಸುವವರನ್ನು, ಕಾಣುತ್ತೇವೆ. ಮತ್ತು ನೀವು ಕೇಳಿದ್ದೀರೋ ಇಲ್ಲವೋ ನನಗೆ ತಿಳಿಯದು. ಹವಾಮಾನ ಬದಲಾವಣೆಯ ಕುರಿತು ಅವರು ಹೇಳಿಕೆಯೊಂದನ್ನು ನೀಡಿದರು. ಹವಾಮಾನ ಬದಲಾವಣೆಯೇನೂ ನಿಜವಾಗಿಯೂ ನಡೆಯುತ್ತಿಲ್ಲ ಬದಲಾಗಿ ಅದು ಕೇವಲ ಒಂದು ಮಾನಸಿಕ ಸ್ಥಿತಿ ಎಂದು. ವಾತಾವರಣದ ತಾಪವೇನೂ ಏರುತ್ತಿಲ್ಲ ಬದಲಾಗಿ ನಾವು ಸಹಿಷ್ಣುತೆ ಕಳೆದುಕೊಂಡಿದ್ದೇವೆ, ನಮ್ಮ ಪೂರ್ವಜರಾದರೋ ಶಕ್ತಿಯುತರಾಗಿದ್ದು ಇದನ್ನು ತಡೆದುಕೊಂಡು ಬದುಕಿದರು ಎಂದು. ಹೀಗೆ ಈ ರೀತಿ ನಮ್ಮ ಇತಿಹಾಸದ ವೈಭವೀಕರಿಸುವಿಕೆ ಖಂಡಿತವಾಗಿಯೂ ನಡೆಯುತ್ತದೆ. ವಿಶೇಷವಾಗಿ ಸಂಘಪರಿವಾರದಲ್ಲಿ ಈ ಗುಣವಿದ್ದರೂ, ಇದು ನಮ್ಮ ಸುತ್ತಲೂ ಕೂಡಾ ಇದೆ. “ನಮ್ಮ ಕಾಲದಲ್ಲಿ ಜನ ಹಚ್ಚು ವೈಜ್ಞಾನಿಕವಾಗಿದ್ದರು. ಆಗ ಮಾಲಿನ್ಯ ಕಡಿಮೆ ಇತ್ತು, ಈಗ ಹೆಚ್ಚಾಗಿದೆ. ಆಗ ಕ್ಯಾನ್ಸರ್ ಇರಲಿಲ್ಲ, ಈಗ ಜನಕ್ಕೆ ಕ್ಯಾನ್ಸರ್ ಬರುತ್ತದೆ. ಆಗ ಹೆಂಗಸರು ಹೆಚ್ಚು ಶಕ್ತಿಯುತರಾಗಿದ್ದರು. ಹತ್ತು ಹತ್ತು ಮಕ್ಕಳಿರುತ್ತಿದ್ದರು. ಆದರೆ ಮಿಕ್ಸರ್, ಸ್ಲೈಸರ್, ಫ್ರಿಡ್ಜ್ ಇದ್ಯಾವುದೂ ಇಲ್ಲದೇ ಇಪ್ಪತ್ತಿಪ್ಪತ್ತು ಜನಕ್ಕೆ ಅಡಿಗೆ ಮಾಡುತ್ತಿದ್ದರು” ಎಂದೆಲ್ಲ ಹೇಳುವ ಜನರನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ ಬಹುತೇಕ ಬಾರಿ ನಮ್ಮ ಪೂರ್ವಜರು ಕ್ಯಾನ್ಸರ್ ಹೊಂದದಿರಲು ಕಾರಣ ಅವರು ಬಹುಶಃ ನಲವತ್ತರ ವಯಸ್ಸಿನಲ್ಲಿ ಸಾಯುತ್ತಿದ್ದರು ಹಾಗಾಗಿ ಕ್ಯಾನ್ಸರ್ ಬರುವಷ್ಟು ವರ್ಷ ಬದುಕುತ್ತಿರಲಿಲ್ಲ ಎಂದು ನಾವು ಹೇಳದೆಯೇ ಇದ್ದು ಬಿಡುತ್ತೇವೆ. ಅದಷ್ಟೇ ಅಲ್ಲ. ಇದೇ ಇತಿಹಾಸವು ಜಾತಿ, ಪುರುಷ ಪ್ರಧಾನತೆಯಿಂದ ತುಂಬಿಕೊಂಡಿದೆ. ವಿಪರೀತ ಅಭಾವ, ಅಮಾನವೀಯತೆ ಮತ್ತು ಶೋಷಣೆಯಿಂದ ತುಂಬಿಕೊಂಡಿದೆ. ಇದನ್ನು ಬಿಟ್ಟುಬಿಡಲು ನಾವು ಸಿದ್ಧರಿಲ್ಲ. ಹಿಂದುತ್ವದಿಂದ ವಿಜ್ಞಾನದ ಮೇಲೆ ಆಗುತ್ತಿರುವ ಹಲ್ಲೆಗೆ, ನೀಡಲ್ಪಡುತ್ತಿರುವ ಹೇಳಿಕೆಗಳಿಗೆ ಅವಕಾಶ ಕಲ್ಪಿಸುವುದು ಇದೇ ಧೋರಣೆ. ನಾವು ನಮ್ಮ ಇತಿಹಾಸವನ್ನು ಬಿಡಲು ಸಿದ್ಧರಿಲ್ಲ.
ಇವತ್ತು ಬೆಳಗ್ಗೆ ಪ್ರೊ.ರಾಹೋಸಾಹೇಬ್ ಕಸ್ಬೆ ಅವರು “ವಿನಾಶ” (annihilation) ಎಂಬ ಶಬ್ದವನ್ನು ನಮಗೆ ನೆನಪಿಸಿದರು, ಜಾತಿ ವಿನಾಶದ ನಿಟ್ಟಿನಲ್ಲಿ. ಆದರೆ ಈ ಪದವನ್ನು ಈ ನಿಟ್ಟಿನಲ್ಲಿ ನೆನಪಿಡುವುದು ಕೂಡ ಬಹಳ ಅಗತ್ಯವಾಗಿದೆ. ನಮಗೆ ಅಭಾವವಿಲ್ಲದ, ಎಲ್ಲರಿಗೂ ನಿರ್ದಿಷ್ಟ ಮಟ್ಟದ ಜೀವನ ಸೌಲಭ್ಯ ಇರುವ ಆಧುನಿಕ ಸಮಾಜ ನಿರ್ಮಿಸಬೇಕೆಂದಿದ್ದರೆ ನಾವು ಈ ಯೋಗ್ಯವಲ್ಲದ ಇತಿಹಾಸವನ್ನು ತಿರಸ್ಕರಿಸಬೇಕು. ವಿಜ್ಞಾನ ನಮ್ಮನ್ನು ಕೇಳುವ ಹಾಗೆ ನಾವು ಪ್ರಶ್ನಿಸಲಾರಂಭಿಸಿದರೆ ನಾವು ಈ ಇತಿಹಾಸವನ್ನು ತಿರಸ್ಕರಿಸಬಲ್ಲೆವು. ಇದು ಆರ್‍ಎಸ್ಸೆಸ್‍ನ ಹಿಂದುತ್ವದ ದಾಳಿಯ ಬೇರುವಿಚಾರವೆಂದು ನನ್ನ ಅನಿಸಿಕೆ. ಅವರ ದಾಳಿಯ ಕೊನೆಯ ಗುರಿ ತಂತ್ರಜ್ಞಾನವನ್ನು ಖಂಡಿಸುವುದಲ್ಲ. ಅವರಿಗೆ ಬಾಂಬ್‍ಗಳು ಪ್ರಿಯವಾದದ್ದಾಗಿರಬಹುದು. ನ್ಯೂಟನ್ ಹೊರದೇಶದವನು ಹಾಗಾಗಿ ನ್ಯೂಟನ್ ಅನ್ನು ಕಲಿಸಬೇಡಿ ಎಂದು ಅವರು ಹೇಳಬಹುದು. ಅದೇ ಜನ ಅಹಮದಾಬಾದಿನಿಂದ ದಿಲ್ಲಿಗೆ ವಿಮಾನದಲ್ಲಿ ಹೋಗುತ್ತಾರೆ. ಅವರು ತಂತ್ರಜ್ಞಾನವನ್ನು ತಿರಸ್ಕರಿಸುತ್ತಿಲ್ಲ. ಆದರೆ ವೈಜ್ಞಾನಿಕ ವಿಧಾನದ ಕುರಿತು ಈ ದಾಳಿ ಅವರಿಗೆ ಅವಶ್ಯಕವಾದದ್ದು. ಏಕೆಂದರೆ ಅವರಿಗೆ ನಿಜವಾಗಿಯೂ ಬೇಕಾದದ್ದು ಸಮಾಜವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವುದರ ವಿರುದ್ಧ ದಾಳಿ. ಏಕೆಂದರೆ ಸಮಾಜವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿದ ಕ್ಷಣವೇ ಅವರು ಸರಿಪಡಿಸಲು ಬಯಸದ ಹಲವು ಪ್ರಶ್ನೆಗಳು ಏಳುತ್ತವೆ.
ಬಹಳಷ್ಟು ಜನ ವಿಜ್ಞಾನದ ವ್ಯಾಖಾನವನ್ನು ನೀಡಿದ್ದಾರೆ. ವಿಜ್ಞಾನದ ಕುರಿತು ನನಗಿರುವ ಒಂದು ಮೂಲಭೂತ ತಿಳುವಳಿಕೆ ಏನೆಂದರೆ, ವಿಜ್ಞಾನ ಕೇವಲ ಸಂಗತಿಗಳ ವೀಕ್ಷಣೆ ಹಾಗೂ ವೀಕ್ಷಿಸಿದ ಸಂಗತಿಗಳನ್ನು ದಾಖಲಿಸುವುದಷ್ಟೇ ಅಲ್ಲ. ವಿಜ್ಞಾನ ಬಹಳ ಕಾಲದಿಂದ ಇವುಗಳನ್ನು ಮೀರಿಕೊಂಡಿದೆ. ನಮ್ಮ ಸುತ್ತಲಿನ ಸಂಗತಿಗಳು ಹೇಗೆ ಗೋಚರವಾಗುತ್ತವೆ ಎಂದು ತಿಳಿದುಕೊಂಡರಷ್ಟೇ ಸಾಲದು. ಸಾಮಾಜಿಕ ಸನ್ನಿವೇಶದಲ್ಲಿ, ಏಕೆ ಅವು ಈ ತೆರನಾಗಿವೆ ಎಂದು ನೀವು ಪ್ರಶ್ನೆ ಕೇಳಿದಾಕ್ಷಣ ಗಂಡಸರು ಹೊರಹೋಗಿ ಓದಿ ದುಡಿಯುತ್ತಿರುವಾಗ ನಾವೇಕೆ ಮನೆಯಲ್ಲಿರಬೇಕೆಂದು ಪ್ರಶ್ನಿಸುವ ಹೆಂಗಸರು ಸಿಗುತ್ತಾರೆ. ನೀವು ಜನರಿಗೆ ಅವರು ಬಡವರಾಗಿ ಹುಟ್ಟಿದ್ದು ಅವರ ದುರಾದೃಷ್ಟ ಎಂದು ಹೇಳಲು ಬರುವುದಿಲ್ಲ. ಹಿಂದಿನ ಪಾಪಗಳಿಂದ ಕೆಳ ಜಾತಿಯಲ್ಲಿ ಹುಟ್ಟಿದ್ದೀರೆಂದು ಜನರಿಗೆ ಹೇಳಲಾಗುವುದಿಲ್ಲ. ವಿಜ್ಞಾನದ ಮೇಲಿನ ಈ ದಾಳಿಯು ಈ ತರಹ ಸಮಾಜವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವುದರ ವಿರುದ್ಧದ ದಾಳಿ ಎಂದು ನೀವು ತಿಳಿದುಕೊಳ್ಳಬೇಕಿದೆ.
ಈ ನಿಟ್ಟಿನಲ್ಲಿ ನಾನು ಹೇಳಬಯಸುವುದೇನೆಂದರೆ, ಸಮಾಜದ ಮೇಲಿನ ಈ ದಾಳಿ ಕೇವಲ ಬಲಪಂಥದಿಂದ ಬರುವಂತಹದ್ದಲ್ಲ. ಈ ದಾಳಿಗೆ ದೊರೆತಿರುವ ಅವಕಾಶದಲ್ಲಿ ನಾವೇ ನೀಡಿದ ಅವಕಾಶ ಕೂಡ ಇದೆ. ಎಷ್ಟೋ ಜನ, ತಮ್ಮನ್ನು ತಾವು ಬಲಪಂಥೀಯರೆಂದು ಗುರುತಿಸಿಕೊಳ್ಳದವರು, ಪ್ರಗತಿಪರ ಚಿಂತನೆಯುಳ್ಳವರು ವಿಜ್ಞಾನ ಹಾಗೂ ತಂತ್ರಜ್ಞಾನದ ಕುರಿತು ಸಂಶಯವನ್ನು ಹೊಂದಿರುವುದನ್ನು ನಾವು ಕಾಣಬಹುದು. ದುರಾದೃಷ್ಟವೆಂದರೆ ಜಾಗತೀಕರಣದ ವಿರುದ್ಧ, ಜಾಗತಿಕ ಬಂಡವಾಳಶಾಹಿಗಳ ವಿರುದ್ಧದ ಹೋರಾಟ ಹೇಗೋ ಸಲೀಸಾಗಿ ಆಧುನಿಕತೆಯ ವಿರುದ್ಧದ, ಆಧುನಿಕ ವಿಜ್ಞಾನ ಹಾಗೂ ತಂತ್ರಜ್ಞಾನದ ವಿರುದ್ಧದ ಹೋರಾಟವಾಗಿಬಿಟ್ಟಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಅಂತರಂಗದಲ್ಲಿಯೇ ಬಡವರ ವಿರೋಧಿ, ವಿಜ್ಞಾನ ಅಂತರ್ಗತವಾಗಿ ಪುರುಷ ಪ್ರಧಾನತೆಯುಳ್ಳದ್ದು ಎಂಬ ನಿಲುವುಗಳನ್ನು ತೆಳೆಯಲಾಗುತ್ತಿದೆ. ಈ ನಿಲುವುಗಳು ಸಂಘ ಪರಿವಾರದಿಂದಲೇ ಬರಬೇಕೆಂದೇನೂ ಇಲ್ಲ. ಅದಿಲ್ಲದೆಯೂ ಅವು ಬೇರೆ ಕಡೆ ನೆಲೆಸಿವೆ. ಈ ನಿಲುವುಗಳು ಅಪಾಯಕಾರಿ. ಅವು ಈ ಬೆಳವಣಿಗೆಗಳಿಗೆ ಅವಕಾಶ ಕಲ್ಪಿಸಿಕೊಡುತ್ತವೆ. ಜಾಗತೀಕರಣದ ವಿರುದ್ಧ ಹೋರಾಡುವ, ಬಂಡವಾಳಶಾಹಿಗಳ ವಿರುದ್ಧ ಹೋರಾಡುವ ಶಕ್ತಿ ನಮಗಿಲ್ಲವೆಂದೋ ಏನೋ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಬದಲಿಗಳಾಗಿ ಕೂರಿಸಿ ಅವುಗಳ ವಿರುದ್ಧ ಸಲೀಸಾಗಿ ಹೋರಾಡುತ್ತಿದ್ದೇವೆ. ನಮಗೆ ಸಮಾನತೆ ಬೇಕಿದ್ದಲ್ಲಿ, ನಮ್ಮ ಮೊದಲ ಬೇಡಿಕೆ ಈ ವಿಜ್ಞಾನವನ್ನು ವಾಪಸ್ ಪಡೆಯುವುದಾಗಬೇಕು.
ವಿಜ್ಞಾನ ನಮ್ಮದು. ಅದು ಬಹುರಾಷ್ಟ್ರೀಯ ಕಂಪನಿಗಳ ಸ್ವತ್ತಲ್ಲ. ಹೋರಾಟ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧವಾದದ್ದು. ವಿಜ್ಞಾನ ಅವರಿಗೆ ಸೇರತಕ್ಕದ್ದಲ್ಲ. ನಾವು ಆ ವಿಜ್ಞಾನವನ್ನು ವಾಪಸ್ ಪಡೆಯಬೇಕು. ವೈಜ್ಞಾನಿಕ ಸಂಸ್ಥೆಗಳು ನಮ್ಮತ್ತ ತೆರೆದುಕೊಳ್ಳುವುದಿಕ್ಕೆ ನಾವು ಹೋರಾಟ ನಡೆಸಬೇಕು. ಶ್ರಮಿಕ ವರ್ಗದ ಕೆಲಸದಿಂದಲೇ ಮೂಡಿದ ತಂತ್ರಜ್ಞಾನವನ್ನು ಮರಳಿ ಪಡೆಯಬೇಕು. ತಂತ್ರಜ್ಞಾನ ಈ ಜನಕ್ಕೆ ಸೇರಿದ್ದೇನಲ್ಲ.
ಹಾಗಾಗಿ ನಾವು ಹೋರಾಡಬೇಕಾದದ್ದು ವಿಜ್ಞಾನ ಹಾಗೂ ತಂತ್ರಜ್ಞಾನದ ವಿರುದ್ಧ ಅಲ್ಲ. ಈ ವ್ಯತ್ಯಾಸವನ್ನು ನಾವು ಗಮನದಲ್ಲಿಡಬೇಕು ಏಕೆಂದರೆ ನನ್ನ ಅನಿಸಿಕೆಯ ಪ್ರಕಾದ ದೈನಂದಿನ ಮಂಕುಬೂದಿತನದ ಜೊತೆಗೆ ಈ ತರಹದ ಧೋರಣೆ ಕೂಡ ಸಂಘ ಪರಿವಾರದ ದಾಳಿಗೆ ಅವಕಾಶವನ್ನು ಉಂಟುಮಾಡಿದೆ.
ಇನ್ನೆರಡೇ ನಿಮಿಷ ಉಳಿದಿರುವುದರಿಂದ, ಬಹುತೇಕ ಎಲ್ಲ ವಿಚಾರಗಳನ್ನು ಪ್ರಸ್ತಾಪ ಮಾಡಿ ಆಗಿದ್ದರಿಂದ, ನಾನಿನ್ನೇನು ಮುಗಿಸುತ್ತೇನೆ. ಈ ಎರಡು ವರ್ಷಗಳ ಹಿಂದೆ ತನ್ನ ಸಾವಿನಲ್ಲಿ ನಮ್ಮನ್ನು ತಟ್ಟಿದ ಯುವಕನನ್ನು ನೆನೆಯುತ್ತಾ ಮುಗಿಸಲಿಕ್ಕೆ ಬಯಸುತ್ತೇನೆ. ರೋಹಿತ್ ವೆಮುಲಾ ಅವರನ್ನು ಕೇವಲ ವಿದ್ಯಾರ್ಥಿ ಸಮುದಾಯ ಅಥವಾ ಜಾತಿ ತಾರತಮ್ಯದ ವಿರುದ್ಧದ ಹೋರಾಟ ಕಳೆದುಕೊಂಡಿದ್ದಲ್ಲ. ಆತನ ಸಾವು ವೈಜ್ಞಾನಿಕ ಸಮುದಯಕ್ಕಾದ ನಷ್ಟ ಕೂಡ. ಏಕೆಂದರೆ ಆತನಿಗೆ ಸತ್ಯ ತಿಳಿದಿತ್ತು. ದೇಶ ಕಂಡ ಕೆಲವೇ ಕೆಲವು ರಾಜಿಯಾಗದ ದಣಿವರಿಯದ ಆಧುನಿಕತೆಯ ಹರಿಕಾರರಲ್ಲೊಬ್ಬರಾಗಿದ್ದ, ಡಾ. ಅಂಬೇಡ್ಕರ್‍ರಿಂದ ಆತ ಪ್ರೇರಿತನಾಗಿದ್ದ. ರೋಹಿತ್ ಕಾರ್ಲ್ ಸಾಗನ್ ತರಹ ಆಗಲು ಬಯಸಿದ್ದ. ಆತ ವಿಜ್ಞಾನವನ್ನು ಜನಕ್ಕೆ ಕೊಂಡೊಯ್ಯಬೇಕೆಂದಿದ್ದ, ನಮ್ಮ ಸುತ್ತಲಿರುವ ಎಷ್ಟೊ ಜನರ ಬದುಕಿನಲ್ಲಿರುವ ಕತ್ತಲೆಯನ್ನು ಬೆಳಕಾಗಿಸಲು. ಅದಕ್ಕೇ ಅವರಿಗೆ ರೋಹಿತ್‍ಗಳು ಬೇಡ. ಅದಕ್ಕೇ ಇನ್ನಷ್ಟು ರೋಹಿತ್‍ಗಳು ಉದಯಿಸಬೇಕು. ಅದಕ್ಕೇ ನಾವು ವಿಜ್ಞಾನವನ್ನು ಉಳಿಸಬೇಕು.
ಅನುವಾದ: ಸುಬ್ರಹ್ಮಣ್ಯ ಹೆಗಡೆ ಅಲಹಾಬಾದ್‍ನ ಹರೀಶ್-ಚಂದ್ರ ಸಂಶೋಧನಾ ಸಂಸ್ಥೆಯಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದ ಡಾಕ್ಟರೇಟ್ಟೋತ್ತರ ಸಂಶೋಧಕರು
ಇಂಡಿಯನ್ ರೈಟರ್ಸ್ ಫೋರಂ ಹಾಗೂ ನ್ಯೂಸ್ಕ್ಲಿಕ್ಕಿಗಾಗಿ ಪ್ರಶಾಂತ್ ಆರ್ ಅವರಿಗೆ ಎಪ್ರಿಲ್ ೨೦೧೯ರಲ್ಲಿ ನೀಡಿರುವ ಸಂದರ್ಶನದಲ್ಲಿ ಡಾ. ತೇಜಲ್ ಕನಿಟ್ಕರ್ ಅವರು ವಿಜ್ಞಾನಕ್ಕಾಗಿಯ ಹೋರಾಟ ಹಾಗೂ ಸಾಮಾಜಿಕ ನ್ಯಾಯಕ್ಕಾಗಿಯ ಹೋರಾಟ ಹೇಗೆ ಒಂದಕ್ಕೊಂದು ಹೆಣೆದುಕೊಂಡಿವೆ ಎಂದು ವಿವರಿಸಿದ್ದಾರೆ. ವಿಜ್ಞಾನದ ಕುರಿತು ಇರುವ ಅಸಡ್ಡೆ ಏಕೆ ಸಲ್ಲದು ಹಾಗೂ ಭೌತವಾದದೆಡೆಗೆ ಬದ್ಧತೆಯ ಅಗತ್ಯದ ಕುರಿತು ಅವರು ಮಾತನಾಡಿದ್ದಾರೆ.
ಸಂದರ್ಶಕರು: ನಮಸ್ಕಾರ. ಇಂಡಿಯನ್ ರೈಟರ್ಸ್ ಫೋರಮ್ ಮತ್ತು ನ್ಯೂಸ್ಕ್ಲಿಕ್ಕಿಗೆ ಸ್ವಾಗತ. ದೇಶಾದ್ಯಂತ ಪ್ರಗತಿಪರರು ಹೇಳುತ್ತಿರುವ ಪ್ರಮುಖ ವಿಷಯವೆಂದರೆ ಕಳೆದ ವರ್ಷಗಳಲ್ಲಿ ತರ್ಕ ಮತ್ತು ವಿಜ್ಞಾನದ ಮೇಲಿನ ಆಕ್ರಮಣ. ಭಾರತೀಯ ವಿಜ್ಞಾನ ಕಾಂಗ್ರೆಸ್ಸುಗಳಲ್ಲಿ ಹಾಗೂ ದೈನಂದಿನ ನಿದರ್ಶನಗಳಲ್ಲಿನ ತರ್ಕಹೀನ ಘೋಷಣೆಗಳಿಂದ ಹಿಡಿದು ವಿಜ್ಞಾನಿಗಳ ಮೇಲಿನ ಮಾರಣಾಂತಿಕ ಹಲ್ಲೆಗಳವರೆಗೂ ಈ ಆಕ್ರಮಣಗಳು ಜರುಗಿವೆ. ಇವುಗಳ ಬಗ್ಗೆ ಮಾತನಾಡಲು ನಮ್ಮೊಡನೆ ಡಾ.ತೇಜಲ್ ಕನಿಟ್ಕರ್ ಇದ್ದಾರೆ. ಡಾ.ತೇಜಲ್ – ಇವರು ಟಿ.ಐ.ಎಸ್.ಎ ಸ್ ಅಲ್ಲಿರುವ ಹವಾಮಾನ ಬದಲಾವಣೆ ಮತ್ತು ಸುಸ್ಥಿರತೆ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದಾರೆ. ನಮಸ್ಕಾರ. ಮೂಲಭೂತವಾದ ಪ್ರಶ್ನೆಯಿಂದ ಆರಂಭಿಸೋಣ. ಸ್ವಾತಂತ್ರ್ಯ ಬಂದ ಕೂಡಲೇ, ಆಳುವ ವರ್ಗಗಳಲ್ಲಿ ಮಾತ್ರವಲ್ಲದೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಸಾಮಾನ್ಯರಲ್ಲೂ ಇದ್ದ ಅಭಿಪ್ರಾಯವೆಂದರೆ ವಿಜ್ಞಾನ ಮತ್ತು ವೈಜ್ಞಾನಿಕ ಮನೋವೃತ್ತಿ ದೇಶದ ಬೆಳವಣಿಗೆಗೆ ಅತ್ಯವಶ್ಯಕ. ಹಾಗಾಗಿ ಇದು ಭಾರತೀಯರ ಮೂಲಭೂತ ಕರ್ತವ್ಯ ಎಂಬುದು. ಸಂಬಂಧಪಟ್ಟ ಸಂಸ್ಥೆಗಳನ್ನು ಕಟ್ಟಲು ಬಹಳ ಗಮನವಿತ್ತು. ಹೀಗಿರುವಾಗ, ಇಂದಿನ ಪರಿಸ್ಥಿತಿಗೆ ಬಂದದ್ದು ಹೇಗೆ? ನಾವು ಎಡವಿದ್ದೆಲ್ಲಿ? ಅಥವಾ ಇದು ಮುಂಚಿನಿಂದಲೂ ಅನಿವಾರ್ಯವಾಗಿತ್ತೇ?
ಡಾ. ತೇಜಲ್ ಕನಿಟ್ಕರ್: ಇಲ್ಲ. ಅದು ಅನಿವಾರ್ಯವಾಗಿತ್ತೆಂದು ನಾನು ಹೇಳುವುದಿಲ್ಲ. ವೈಜ್ಞಾನಿಕ ಮನೋವೃತ್ತಿಯ ಅನುಷ್ಠಾನ ಅಥವಾ ಸಮಾಜದಲ್ಲಿ ಅದರ ಬೆಳವಣಿಗೆಯನ್ನು ದೇಶದ ಸ್ವಾವಲಂಬನೆಗೆ ಹೊಂದಿಕೊಂಡಂತೆ ಯೋಚಿಸಲಾಗಿತ್ತು. ಕೆಲವು ಉದಾಹರಣೆಗಳನ್ನು ಹೊರತುಪಡಿಸಿ, ಸಾರ್ವತ್ರಿಕವಾಗಿ ಅದರ ಮೇಲೆ ಬಹಳಷ್ಟು ಒತ್ತು ಕೊಟ್ಟಿದ್ದರೂ, ವೈಜ್ಞಾನಿಕ ಮನೋವೃತ್ತಿಯ ಅನುಷ್ಠಾನ ಹೇಗಾಗಬೇಕೆಂಬುದರ ಬಗ್ಗೆ ಖಂಡಿತವಾಗಿ ಭಿನ್ನಾಭಿಪ್ರಾಯಗಳಿದ್ದವು. ದೇಶದಲ್ಲಿ ವೈಜ್ಞಾನಿಕ ಸಾಮರ್ಥ್ಯ ಬೆಳೆಸುವುದು, ಆಧುನಿಕ ದೇಶಕ್ಕೆ ಪೂರಕವಾದ ಶಕ್ತಿಗಳನ್ನು, ಆಧುನಿಕ ತಂತ್ರಜ್ಞಾನವನ್ನು ಬೆಳೆಸುವುದು ನೆಹರೂ ಅವರ ಕಲ್ಪನೆಯಾಗಿತ್ತು. ಅಂಬೇಡ್ಕರರ ಕಲ್ಪನೆಯೂ ಇದೇ ಆಗಿತ್ತು. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ಜಾತಿಯ ಸರ್ವನಾಶ” (Annihilation of Caste) ಪುಸ್ತಕದಲ್ಲಿ, ಸಮಾಜದಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕೆಂದು ಪ್ರತಿಪಾದಿಸಿದರು. ಇದಲ್ಲದೇ ಬೇರೆ ಧೋರಣೆಗಳೂ ನಮ್ಮಲ್ಲಿದ್ದವು. ಗಾಂಧೀವಾದವು ಆಧುನಿಕ ರಾಜಕೀಯ ಯೋಚನೆಗಳಿಗೆ ಬೆನ್ನುಮಾಡಿಲ್ಲದಿದ್ದರೂ, ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಖಂಡಿತವಾಗಿಯೂ ತಿರೋಗಾಮಿಯಾಗಿತ್ತು . ಗೋಲ್ವಲ್ಕರರು ಆಧುನಿಕ ತಂತ್ರಜ್ಞಾನವನ್ನು ವಿರೋಧಿಸಲಿಲ್ಲವಾದರೂ, ಆಧುನಿಕ ವಿಜ್ಞಾನವನ್ನು ಪಾಶ್ಚಾತ್ಯ ಅಧಿಪತ್ಯ ಎಂದು ತೆಗೆದುಹಾಕಿದ್ದರು. ಹಾಗೆ ನೋಡಿದರೆ, ನೆಹರೂ ಮತ್ತು ಅಂಬೇಡ್ಕರರು, ವಸಾಹತುಶಾಹಿಯ ನಂತರದ ಭಾರತದಲ್ಲಿ ಗೆದ್ದರೆಂದೇ ಹೇಳಬೇಕು. ಹೀಗಾಗಿಯೇ, ನಮ್ಮ ದೇಶದಲ್ಲಿ ಆಧುನಿಕ ವೈಜ್ಞಾನಿಕ ಸಂಸ್ಥೆಗಳನ್ನು ಕಟ್ಟಲು ಸ್ವಲ್ಪವಾದರೂ ಪ್ರಯತ್ನಗಳಾಗುತ್ತಿವೆ. ಆದರೆ, ಜಾತಿಯ ಸರ್ವನಾಶ ಆಗಲೇ ಇಲ್ಲ. ಮತ್ತೆ ಶಿಕ್ಷಣ ಕೂಡ. ಮುಂದುವರಿದ ದೇಶಗಳಲ್ಲಿ ಇದ್ದಂತೆ ಭಾರತದಲ್ಲಿ ಶಿಕ್ಷಣದ ಸುವರ್ಣಕಾಲ ಬರಲೇ ಇಲ್ಲ. ಸರ್ವ ಶಿಕ್ಷಣದ ವ್ಯಾಪ್ತಿಯನ್ನು ನಾವು ವಿಸ್ತರಿಸಲೇ ಇಲ್ಲ. ಉನ್ನತ ಶಿಕ್ಷಣದ್ದಂತೂ ಇನ್ನೂ ಕಡಿಮೆ. ಆದ್ದರಿಂದ ಅದು ಬಹಳ ಜನರಿಗೆ ತಲುಪಲೇ ಇಲ್ಲ. ನಮ್ಮಲ್ಲಿ ಹಳೇ ಕಾಲದ ಸಾಮಾಜಿಕ ಸಂಬಂಧಗಳು ಇದ್ದಿದ್ದರಿಂದ, ವೈಜ್ಞಾನಿಕ ಮನೋವೃತ್ತಿಗೆ ವಿರುದ್ಧವಾಗಿ ಮಾತಾಡುವುದು ಈಗ ಸುಲಭವಾಗಿದೆ. ವಿಜ್ಞಾನ ಬೆಳೆದಂತೆ ಇವು ಮತ್ತೆ ಮೇಲೆ ಬರುತ್ತಿವೆ ಮತ್ತು ಈ ಹಿಂದೆ ದೇಶದ ಕಾರ್ಯನೀತಿಯಲ್ಲಿ ಇದೆ ಎಂದು ನಾವು ತಿಳಿದಿದ್ದ ವಿಜ್ಞಾನ ಮತ್ತು ವೈಜ್ಞಾನಿಕ ಮನೋವೃತ್ತಿಯ ತತ್ತ್ವಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ಪ್ರಶ್ನಿಸುತ್ತಿವೆ.
ಸಂ: ನಿಮ್ಮ ಭಾಷಣವೊಂದರಲ್ಲಿ ನೀವು ಚರ್ಚಿಸಿರುವ ವಿಷಯಗಳಲ್ಲೊಂದು – ‘ದಿನನಿತ್ಯದ ಗೊಡ್ಡುತನ’. ಸಮಯ ಕಳೆದು, ಸಮಾಜ ಅಭಿವೃದ್ಧಿಯಾದಂತೆ, ಮೂಢನಂಬಿಕೆ, ಅಸ್ಪಷ್ಟತೆ, ಜಾತಿ ಇವೆಲ್ಲಾ ಮರೆಯಾಗುತ್ತವೆಂದು ಬಹಳ ಜನರು ಭಾವಿಸಿದ್ದೆವು. ಆದರೆ ಕಾಲಕ್ಕೆ ತಕ್ಕಂತೆ ಇವೆಲ್ಲವೂ ಬದಲಾಗಿ ರೂಪ ಬದಲಾಯಿಸಿಕೊಂಡಿವೆ.. ದೈನಂದಿನ ಜೀವನದಲ್ಲಿ ನೀವು ಇದನ್ನು ಹೇಗೆ ನೋಡುತ್ತಿರಿ?
ಡಾ. ತೇ: ನಾವು ವಿಜ್ಞಾನದಲ್ಲಿ ಸ್ವಲ್ಪ ಬೆಳವಣಿಗೆಯನ್ನು ಕಂಡಿದ್ದೇವೆ. ಆದರೆ ನನಗನ್ನಿಸುವಂತೆ ವಿಜ್ಞಾನದ ಪ್ರಗತಿ ವೈಜ್ಞಾನಿಕ ಮನೋವೃತ್ತಿಯನ್ನು ತಾನಾಗಿಯೇ ಬೆಳೆಸುವುದಿಲ್ಲ. ಹಾಗಾಗಲು ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕು. ಈ ನಿಟ್ಟಿನಲ್ಲಿ ನಾವು ಬಹಳ ಹಿಂದಿದ್ದೇವೆ. ದೈನಂದಿನ ಜೀವನದಲ್ಲಿರುವ ಗೊಡ್ಡುತನವನ್ನು ಹೊಡೆದಾಡುವ ಶಕ್ತಿ, ಅನುಕೂಲ ಬಹುಶಃ ಜನಸಾಮಾನ್ಯರಿಗೆ ತುಂಬಾ ಕಡಿಮೆ ಇದೆ. ಆದರೆ ಯಾವ ವರ್ಗಗಳು ಈ ಹೋರಾಟದ ಮುಂಚೂಣಿಯಲ್ಲಿರಬೇಕೋ ಅವರು ಕೂಡ ಅದನ್ನು ಗಟ್ಟಿಯಾಗಿ ಮಾಡುತ್ತಿಲ್ಲ. ಏಕೆಂದರೆ ನಮ್ಮಲ್ಲಿ ಭೌತವಾದಕ್ಕೆ (materialism) ಬೇಕಾದ ಬದ್ಧತೆಯಿಲ್ಲ – ಹಾಗಾಗಿ, ಸಣ್ಣದಾಗಿ ತೊಂದರೆ ಶುರುವಾಗುತ್ತಿದಂತೇ, ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿ, ಸಂಪ್ರದಾಯದ ಪರವಾಗಿ ಮಾತಾಡುವ ಪ್ರಗತಿಪರರ ಒಂದು ವರ್ಗವೇ ನಮ್ಮಲ್ಲಿದೆ. ಇದನ್ನು ನಾವು ಶಬರಿಮಲೆಯ ವಿಷಯದಲ್ಲಿ ಈಗಷ್ಟೆ ನೋಡಿದ್ದೇವೆ. ಹಾಗಾಗಿ ಇದೊಂದು ರಾಜಕೀಯ ಚಳುವಳಿ. ಹಿಂದೆಯೂ ಭಾರತೀಯ ವಿಜ್ಞಾನಿಗಳು ವಿಜ್ಞಾನ ಆಂದೋಲನಗಳನ್ನು ಮಾಡಿದ್ದರು. ಆದರೆ, ಪ್ರಭುತ್ವವು ಇದನ್ನು ಕೈಗೆತ್ತಿಕೊಳ್ಳಲು ಬೇಕಾದಷ್ಟು ಒತ್ತಡವಿರಲಿಲ್ಲ. ಈ ಚಳುವಳಿಯ ಮುಂಚೂಣಿಯಲ್ಲಿರಬೇಕಾದ, ವಿಜ್ಞಾನ ಮತ್ತು ಸಮಾಜಶಾಸ್ತ್ರಗಳ ಭೌದ್ದಿಕ ವರ್ಗವು ಇಂದು ಇಲ್ಲವೇ ಇಲ್ಲ. ಭೌದ್ದಿಕ ಪ್ರಗತಿಪರರ ಒಂದು ಬಲಿಷ್ಠ ವರ್ಗವೇ ನಮ್ಮಲ್ಲಿ ಇಲ್ಲವಾಗಿದೆ. ಗೊಡ್ಡುತನ ಇನ್ನೂ ದೈನಂದಿನ ಜೀವನದಲ್ಲಿ ಇರುವುದಕ್ಕೆ ಇದೇ ಪ್ರಮುಖ ಕಾರಣ ಎಂದು ನನಗನ್ನಿಸುತ್ತದೆ.
ಸಂ: ಶಿಕ್ಷಣ ಕ್ಷೇತ್ರದಲ್ಲಿ ಪ್ರಸ್ತಾಪಿಸುತ್ತಿರುವ ಬದಲಾವಣೆಗಳನ್ನು ಪರಿಗಣಿಸಿದಾಗ ಮುಂಬರುವ ಕೆಲವು ವರ್ಷಗಳಲ್ಲಿ ಈ ಸನ್ನಿವೇಶ ಇನ್ನೂ ವರ್ಧಿಸುತ್ತದೆ..
ಡಾ. ತೇ: ಖಂಡಿತ. ಇದಕ್ಕೆ ನಿರ್ದಿಷ್ಟವಾದ ರಾಜಕೀಯ ಕಾರ್ಯಸೂಚಿಯಿದೆಯಲ್ಲಾ? ಆರ್.ಎಸ್.ಎಸ್, ತನ್ನ ಹಿಂದೂ ರಾಷ್ಟ್ರದ ಉದ್ದೇಶವನ್ನು ‘ಪೂರೈಸಲು ಒಂದು ಧರ್ಮವನ್ನು ಹೇರಬೇಕು; ವಿಜ್ಞಾನ, ವಿಮರ್ಶಾತ್ಮ ಕ ಚಿಂತನೆ ಇವುಗಳ ಮೇಲೆ ಧರ್ಮದ ಅಧಿಪತ್ಯ ಸಾಧಿಸಬೇಕು. ಜನರು ಚರಿತ್ರೆ ಯನ್ನು, ಈ ಹಿಂದೆ ನಡೆದಿದ್ದನ್ನು ಪ್ರಶ್ನಿಸುವಂತಿಲ್ಲ. ಹಾಗಾಗಿ, ಇಂದು ಸಮಾಜದಲ್ಲಿ ಏನಿದೆಯೋ, ಅದು ಹಾಗೇಕಿದೆಯೆಂದು ಕೇಳುವಂತಿಲ್ಲ – ತಂತ್ರಜ್ಞಾನವನ್ನು ಬಿಟ್ಟು ಬೇರೆಲ್ಲಾ ಪ್ರಶ್ನೆಗಳಿಗೆ ಧರ್ಮದಲ್ಲೇ ಉತ್ತರ ಹುಡುಕಬೇಕು. ಈ ಹಿಂದಿನ ನನ್ನ ಭಾಷಣಗಳಲ್ಲಿ ನಾನು ಇವರ ಬಗ್ಗೆ ಉದಾರವಾಗಿ ಮಾತಾಡಿದ್ದೇನೆ ಎಂದೆನಿಸುತ್ತದೆ. ನಿಜಕ್ಕೂ ಇವರಿಗೆ ತಂತ್ರಜ್ಞಾನದ ಕೆಲವೇ ಕ್ಷೇತ್ರಗಳು ಮುಖ್ಯ ಎನಿಸುತ್ತದೆ. 45/7 ಕ್ಷಿಪಣಿಗಳಿಗಿರುವ ಪ್ರಾಮುಖ್ಯ ಬೇರೆ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುವುದಕ್ಕಿಲ್ಲ. ನಮ್ಮ ಕೈಗಾರಿಕಾ ಸಾಮರ್ಥ್ಯವೂ ತುಂಬಾ ಕಡಿಮೆಯಿದೆ. ಆದರೆ, ಬಾಹ್ಯಾಕಾಶ ಮತ್ತು ಆಯುಧಗಳು ಅತಿ ಮುಖ್ಯ ಅಂದು ಅವರು ಪರಿಗಣಿಸುತ್ತಾರೆ. ಹಾಗಾಗಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ನಿರ್ದಿಷ್ಟವಾದ ರಾಜಕೀಯ ಉದ್ದೇಶವಿದೆ. ಆದರೆ ಇದನ್ನು ಹೋರಾಡಲು ಬೇಕಾದ ಸುಸಂಬದ್ಧ ಪ್ರತಿಪಾದನೆಗಳು ಇವೆಯೆಂದು ತೋರುತ್ತಿಲ್ಲ. ಆದ್ದರಿಂದ ಇದು ಅಪಾಯಕಾರಿಯಾಗಿದೆ. ಇವುಗಳ ವಿರುದ್ಧ ಒಂದಿಷ್ಟು ಆಂದೋಲನವಾಗಿದೆ. ಈ ಸರ್ಕಾರವು ಬಹುತ್ವಕ್ಕೆ ತೋರಿಸುತ್ತಿರುವ ಅಸಹಿಷ್ಣುತೆಯನ್ನು ಖಂಡಿಸಿ ವಿಜ್ಞಾನ ಅಕಾಡೆಮಿಗಳು ಒಟ್ಟಾಗಿ ಲೇಖನ ಬರೆದಿದ್ದಾರೆ. ಆದರೆ ಸುಸಂಯೋಜಿತ, ಒಗ್ಗಟ್ಟಿನ ವಿರೋಧ ವ್ಯಕ್ತಪಡಿಸಲು ಬೇಕಾದ ತತ್ತ್ವಾಧಾರಗಳು ನಮ್ಮಲಿಲ್ಲ.
ಸಂ: ಆಸಕ್ತಿಕರ ವಿಷಯವೆಂದರೆ ಹಲವು ಕಾರ್ಯಕ್ಷೇತ್ರಗಳನ್ನು ರಾಜಕೀಯದಿಂದ ಹೊರಗಿಡುತ್ತಿರುವುದು. ಉದಾಹರಣೆಗೆ ಇಂಜಿನಿಯರಿಂಗ್ ಕ್ಷೇತ್ರ. ಐ.ಐ.ಟಿಗಳಾಗಲೀ ಅಥವಾ ದೇಶಾದ್ಯಂತ ತಲೆಯೆತ್ತಿರುವ ಇತರ ಸಾವಿರಾರು ಕಾಲೇಜುಗಳಾಗಲೀ – ಇವೆಲ್ಲವನ್ನೂ ರಾಜಕೀಯದಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ ಹಾಗೂ ಇದು ಒಂದು ಅಜೆಂಡಾಕ್ಕೆ ಪೂರಕವಾಗಿದೆ ಕೂಡ..
ಡಾ. ತೇ: ಹೌದು. ಬರೀ ರಾಜಕೀಯದಿಂದಷ್ಟೇ ಹೊರಗಿಡುತ್ತಿರುವುದಲ್ಲ. ವಿಜ್ಞಾನ, ತಂತ್ರಜ್ಞಾನ ಕೇವಲ ಪ್ರಯೋಗಾಲಯಗಳಿಗೆ ಸೀಮಿತವಾಗಿವೆ. ವಿಜ್ಞಾನದ ಅರ್ಥ, ತಿಳುವಳಿಕೆಗಳು ಪ್ರಯೋಗಾಲಯದ ಹೊರಗೆ ಯಾವ ರೀತಿಯಲ್ಲೂ ಉಪಯೋಗವಾಗುತ್ತಿಲ್ಲ. ಪರಿಸ್ಥಿತಿ ಹೀಗೆ ಇರುವಂತೆ ಎಲ್ಲಾ ಪ್ರಯತ್ನಗಳಾಗುತ್ತಿವೆ. ಇದರ ಜೊತೆಗೆ ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆಹಾಕಲಾಗಿದೆ. ಐ.ಐ.ಟಿ, ಐ.ಐ.ಎಂ – ಇವುಗಳ ಶುಲ್ಕಗಳನ್ನು ನೋಡಿ. ಸಾಲಗಳ ಹೊರೆಹೊತ್ತ ಜನರ ಗುಂಪನ್ನು ನಾವು ತಯಾರಿಸುತ್ತಿದ್ದೇವೆ. ಸಾಲ ತೀರಿಸಲು ಇವರು ಕೆಲಸ ಹುಡುಕಬೇಕು. ರಾಜಕೀಯ ವಿರೋಧ ಇವರ ಕನಸು ಮನಸ್ಸಿನಲ್ಲಿಯೇ ಇರುವುದಿಲ್ಲ. ಒಂದು ಕಡೆ ಹೊಸ-ಉದಾರೀಕರಣದ ದೆಸೆಯಿಂದ ವಿದ್ಯಾರ್ಥಿಗಳು ಪ್ರಶ್ನೆ ಕೇಳುವುದನ್ನು ತಪ್ಪಿಸಲಾಗಿದೆ. ಇನ್ನೊಂದೆಡೆ ವಿಜ್ಞಾನದ ಮೇಲೆ ಧರ್ಮದ ಅಧಿಪತ್ಯ ಅಚಲವಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ. ಇವೆರಡೂ ಸೇರಿ ಇನ್ನು ಮುಂದೆ ವಿರೋಧವೇ ಇಲ್ಲದಿರುವಂತೆ ಮಾಡಲಾಗುತ್ತಿದೆ.
ಸಂ: ನೀವು ಮಾತನಾಡಿದ ಇನ್ನೊಂದು ವಿಷಯವೆಂದರೆ – ಆಧುನಿಕತೆಗೆ ಬದ್ಧರಾಗಿರುವ ಅವಶ್ಯ ಕತೆ. ಕೆಲವು ಬೌದ್ಧಿಕ ವಲಯಗಳಲ್ಲಿ ಇದರ ಬಗ್ಗೆ ಸಂದೇಹವಿದೆ. ಆಧುನಿಕತೆ ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳು ವುದಿಲ್ಲ, ಅದು ಕೇವಲ ಪ್ರಾಬಲ್ಯ ಹೊಂದಿರುವ ದೃಷ್ಟಿಕೋನಗಳನ್ನು ಮಾತ್ರ ಪ್ರಸ್ತುತಗೊಳಿಸುತ್ತದೆ ಎಂದು ಸಾಧಿಸಲಾಗುತ್ತದೆ. ಈ ಪ್ರಶ್ನೆಗಳಿಗೆ ಹೇಗೆ ಉತ್ತರಿಸುತ್ತೀರಿ?
ಡಾ. ತೇ: ಆಳುವವರ ಸಿದ್ಧಾಂತಕ್ಕೆ ಅಧೀನರಾಗಿರುವ ಬುದ್ದಿಜೀವಿಗಳ ಬಗ್ಗೆ ನಾನು ಮಾತಾಡುವಾಗ ಅದು ಕೇವಲ ವಿಜ್ಞಾನಿಗಳು, ಇಂಜಿನಿಯರ್ರುಗಳ ಬಗೆಯಲ್ಲ, ಸಮಾಜಶಾಸ್ತ್ರದವರ ಬಗ್ಗೆಯೂ ಕೂಡ. ಗೊಡ್ಡುತನದ ವಿರುದ್ಧದ ನಿಲುವುಗಳನ್ನು ತೆಗೆದುಕೊಳ್ಳುವುದಕ್ಕೆ ನಾವು ಅವರನ್ನು ವಿಜ್ಞಾನಿಗಳ ಸಮಕ್ಕೇ ಬಾಧ್ಯರಾಗಿಸುವುದಿಲ್ಲ. ಅವರು ಎಷ್ಟೂ ಗೊಡ್ಡುತನ ತೋರಿಸಬಹುದು – ಕೆಲವೊಮ್ಮೆ ಚಳುವಳಿಯ ಸೋಗಿನಲ್ಲಿ ಇದನ್ನೆಲ್ಲಾ ಮಾಡಬಹುದು ಕೂಡ. ಆದರೆ ಅವರ ನಿಲುವುಗಳು ಭೌತವಾದಕ್ಕೆ ವಿರುದ್ಧವಾದುವು. ಹಾಗಾಗಿ ಆಳುವವರ ಸಿದ್ಧಾಂತಗಳಿಗೆ ಪೂರಕವಾದುವು. ಸಮಾಜವನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಲು ಸಾಧ್ಯವಾಗುವುದಿಲ್ಲ ಎಂದರೆ ಸಮಾಜದಲ್ಲಿ ಯಾವುದೇ ನಿಲುವು ಮಾನ್ಯವಾಗುತ್ತದೆ. ಪುರುಷಪ್ರಾಧಾನ್ಯತೆ ಇಲ್ಲವೆಂದು ಸಾಧಿಸುವ ಯಾವುದೇ ಪುರುಷನ ದೃಷ್ಟಿಕೋನವು, ಪುರುಷ ಪ್ರಧಾನ ಸಮಾಜದ ತುಳಿತಕ್ಕೆ ಒಳಗಾದ ಮಹಿಳೆಯ ದೃಷಿಕೋನದಷ್ಟೇ ಮಾನ್ಯವಾಗುತ್ತದೆ. ಬಹುಶಃ ಇದು ವ್ಯಂಗ್ಯಚಿತ್ರವೇ ಇರಬಹುದು. ಇಷ್ಟು ಮುಕ್ತವಾಗಿ ಸ್ಪಷ್ಟವಾಗಿ ಎಲ್ಲೂ, ಯಾವಾಗಲೂ ಇರುವುದಿಲ್ಲ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ, ಇದು, ಲಾಭಕ್ಕಾಗಿ ತಂತ್ರಜ್ಞಾನದ ಬಳಕೆಯನ್ನು, ತಂತ್ರಜ್ಞಾನದ್ದೇ ಲಕ್ಷಣ ಎಂದು ತಿರುಚುವುದು. ಇದು ನಿಸ್ಸಂದೇಹವಾಗಿ ಗೊಂದಲಕಾರಿ. ಒಂದು ಕಡೆ ಗೊಡ್ಡುತನವನ್ನು ಸಂಪ್ರದಾಯವೆಂದು ಕರೆಯುವುದು, ಇನ್ನೊಂದೆಡೆ ಸಂಪ್ರದಾಯವನ್ನು ಸಂಸ್ಕೃತಿ, ಜೀವನದ ವಿಧಾನವೆಂದು ಹೇಳುವುದು – ಇದು ಆಳುವವರ ಸಿದ್ಧಾಂತಕ್ಕೆ ಪೂರಕವಾದುದು ಮತ್ತು ಸಮ ಸಮಾಜದ ಕಲ್ಪನೆಗೆ ವಿರುದ್ಧವಾದುದು. ಇವೆರಡೂ ಅಪಾಯಕಾರಿಯಿಂದೇ ನನಗನ್ನಿಸುತ್ತದೆ ಮತ್ತು ಇವೆರಡರ ವಿರುದ್ಧ ಹೋರಾಡಬೇಕಾಗುತ್ತದೆ. ಒಂದರ್ಥದಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಯೋಚನೆಗಳಿಗೆ ಮಾಡುವ ಹೋರಾಟ ಬೇರೆಯಲ್ಲ, ನ್ಯಾಯ, ಸಮಾನತೆಗಳಿಗೆ ಮಾಡುವ ಹೋರಾಟ ಬೇರೆಯಲ್ಲ. ಸಮ ಸಮಾಜವನ್ನು ಕಟ್ಟುವ ಯಾರೂ ಕೂಡ ಈ ಎರಡೂ ಪ್ರವೃತ್ತಿಗಳ ವಿರುದ್ಧ ಹೋರಾಡಬೇಕಾಗುತ್ತದೆ.
ಸಂ: ಹೌದು. ಹಾಗೆ ನೋಡಿದರೆ, ಇದು ಕೇವಲ ಭಾರತಕ್ಕೆಸಂಬಂಧಪಟ್ಟ ವಿಷಯವಲ್ಲ. ಉದಾಹರಣೆಗೆ ಅಮೇರಿಕಾದಲ್ಲಿ ಲಸಿಕೆ ವಿರೋಧಿ ಸಂಚಲನೆಯಿಂದಾಗಿ, ಇತ್ತೀಚಿಗೆ ದಡಾರ (measles) ಕಾಣಿಸಿಕೊಂಡಿತು ಮತ್ತು ಬಹಳ ಕಡೆಗಳಲ್ಲಿ ಹವಾಮಾನ ಬದಲಾವಣೆಯ ನಿರಾಕರಣೆ ಇನ್ನೂ ಚಾಲ್ತಿಯಲ್ಲಿದೆ. ಹಾಗಾಗಿ ಇದನ್ನು ಜಾಗತಿಕ ಹಿನ್ನೆಲೆಗೆ ಹೇಗೆ ಹೊಂದಿಸುತ್ತೀರಿ?
ಡಾ. ತೇ: ಹವಾಮಾನ ಬದಲಾವಣೆ ಮತ್ತು ಲಸಿಕೆಗಳ ವಿರೋಧ – ಇವೆರಡೂ ಬೇರೆ ಯೋಚನಾಲಹರಿಗಳಿಂದ ಬಂದಿವೆಯೆಂದು ನನಗನಿಸುತ್ತದೆ. ಹವಾಮಾನ ಬದಲಾವಣೆಯ ವಿಷಯದಲ್ಲಿ, ಅದೃಷ್ಟವಶಾತ್, ಯಾರು ವೈಜ್ಞಾನಿಕ ಫಲಿತಾಂಶಗಳನ್ನು ಸಂಶಯದಿಂದ ನೋಡುವ ಸಾಧ್ಯತೆಯಿತ್ತೋ ಅಂತಹವರು, ಡೋನಲ್ಡ್ ಟ್ರಂಪ್ ಹವಾಮಾನ ಬದಲಾವಣೆಯನ್ನು ನಂಬುವುದಿಲ್ಲ ಎನ್ನುವ ಕಾರಣಕ್ಕೆ ತಾವೂ ಅಂತಹದ್ದೇ ನಿಲುವು ಹೊಂದುವುದಕ್ಕೆ ಹಿಂಜರಿಯುತ್ತಾರೆ. ಅವರ ಸಂಶಯಗಳು ಸ್ವಲ್ಪ ಬದಲಾಗುತ್ತವೆ. ಎಷ್ಟಿದ್ದರೂ, ಹವಾಮಾನ ಬದಲಾವಣೆಯ ಬಗ್ಗೆ ನಮಗೆ ತಿಳಿದಿರುವುದೆಲ್ಲಾ ವಿಜ್ಞಾನದಿಂದಲೇ ಅಲ್ಲವೇ? ಆದರೆ, ಲಸಿಕೆಗಳಿಗೆ ವಿರೋಧದ ವಿಷಯದಲ್ಲಿ ಕಂಡುಬರುವುದು ಅಪ್ಪಟ ಗೊಡ್ಡುತನ. ಔಷಧೀಯ ಕಂಪನಿಗಳು ಅಧಿಪತ್ಯ ಸಾಧಿಸುತ್ತಿರುವುದು, ಅವುಗಳಿಗೆ ಪೂರಕವಾಗಿ ಬಲವಾದ ಗುಂಪುಗಳು ಜನರ ಮೇಲೆ ಲಸಿಕೆಗಳನ್ನು ಹೇರುತ್ತಿರುವುದು ಇವೆಲ್ಲಾ, ಭಾರತವೂ ಸೇರಿದಂತೆ, ಪ್ರಪಂಚದಲ್ಲಿ ಎಲ್ಲೇ ಇರಲಿ, ಖಂಡಿತವಾಗಿಯೂ ಗೊಡ್ಡುತನ. ವಿಜ್ಞಾನಕ್ಕಿರುವ ವಿಮೋಚನಾ ಶಕ್ತಿ ಮತ್ತು ಅದು ಜನರಿಗೆ ಕೊಟ್ಟ ಆಶ್ವಾಸನೆ ಕೇವಲ ಅಷ್ಟಾಗಿಯೇ ಉಳಿದಿದೆ. ಹಾಗಾಗಿಯೇ ಈ ರೀತಿಯ ಯೋಚನೆಗಳು, ನಿಲುವುಗಳು ಹುಟ್ಟಿವೆಯೆಂದು ನಾನು ಯಾವಾಗಲಾದರೂ ತುಂಬಾ ಉದಾರವಾಗಿ ಹೇಳಬಹುದೇನೋ. ಆದರೆ ಇವುಗಳ ಹಿಂದಿರುವುದು ಅವೇ ಗೊಂದಲ ಸೃಷ್ಟಿಸುವ ಹಂಚಿಕೆಗಳು. ಉತ್ಪಾದನೆಯಲ್ಲಿರುವ ಅಸಮಾನತೆಯನ್ನು ವಿಜ್ಞಾನದ ಗುಣಲಕ್ಷಣವೆಂಬಂತೆ ಬಿಂಬಿಸುವುದು, ಯಾರು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ನಿಯಂತ್ರಿಸುತ್ತಿದ್ದಾರೆ ಎಂದು ಹೇಳದೆ, ಅವುಗಳೇ ತೊಂದರೆಯೆಂದು ತೋರಿಸುವುದು – ಇವುಗಳಿಂದ ಈ ರೀತಿಯ ತೊಂದರೆಗಳಾಗುತ್ತವೆ. ಬಹಳಷ್ಟು ಸಲ, ಇವು ಪ್ರಾಣಾಂತಿಕವಾಗುತ್ತವೆ. ಹಾಗಾಗಿ, ನಾವು ಅತ್ಯಂತ ಜಾಗರೂಕತೆಯಿಂದ ಇವುಗಳ ವಿರುದ್ಧ ಹೋರಾಡಲೇಬೇಕು.
ಸಂ: ಇವುಗಳ ವಿರುದ್ಧ ಹೋರಾಡಲು, ಪ್ರಮುಖವಾಗಿ ಏನು ಮಾಡಬೇಕೆಂದು ನಿಮಗನಿಸುತ್ತದೆ?
ಡಾ. ತೇ: ಪ್ರಜ್ಞಾಪೂರ್ವಕವಾಗಿ ನಾವೆಲ್ಲಾ ಸಜ್ಜುಗೊಳ್ಳಬೇಕು. ಈ ದೇಶದಲ್ಲಿ ಈಗಾಗಲೇ ವಿಜ್ಞಾನ ಚಳುವಳಿಗಳಿವೆ. ಆದರೆ ಹಿಂದೊಮ್ಮೆ ಇದ್ದಷ್ಟು ಬಲಶಾಲಿಯಾಗಿಲ್ಲ. ಮೂಢನಂಬಿಕೆ, ಮರೆಮಾಚಿಕೆ, ಅಸ್ಪಷ್ಟತೆ ಇವುಗಳ ವಿರುದ್ಧ ದ ಹೋರಾಟ ಮತ್ತು ಜನಸಾಮಾನ್ಯರ ಬಳಿಗೆ ವಿಜ್ಞಾನವನ್ನು ಕೊಂಡೊಯ್ಯುವುದು ಅವುಗಳ ಆಶಯವಾಗಿತ್ತು. ಇವುಗಳನ್ನು, ಸಾಕಷ್ಟು ಅಧ್ಯಯನ ಮತ್ತು ಭೌತವಾದವನ್ನು ಪಸರಿಸುವುದರ ಮೂಲಕ ಒಂದು ಬಲಿಷ್ಠ ರಾಜಕೀಯ ಹೋರಾಟವಾಗಿ ಕ್ರೋಢೀಕರಿಸಬೇಕು. ಸಮಾಜದ ಬೇರೆ ಬೇರೆ ಕ್ಷೇತ್ರಗಳಿಂದ ಜನರನ್ನು, ಶಕ್ತಿಗಳನ್ನು ಸಂಘಟಿಸಬೇಕು. ಓದಿರುವವರು, ಬುದ್ದಿಜೀವಿಗಳು ನಿಶ್ಚಿತವಾಗಿಯೂ ಇದರಲ್ಲಿ ಪಾಲ್ಗೊಳ್ಳಬೇಕು. ತರ್ಕವಿರೋಧವನ್ನು ಹೊಡೆದೋಡಿಸುವುದೆಂದರೆ ಕೇವಲ ವಿಜ್ಞಾನದ ಬಗ್ಗೆ ಅರಿವು ಮೂಡಿಸುವುದು ಎಂದಲ್ಲ. ನಮ್ಮ ಸಮಾಜದಲ್ಲಿರುವ ತರ್ಕರಹಿತ ಜಾತಿವಾದ, ಪುರುಷಪ್ರಾಧಾನ್ಯತೆಯನ್ನೂ ಹೊಡೆದುಹಾಕಬೇಕು. ಇವರೆಡರೊಂದಿಗೆ ನಾವು ಹೊಂದಿಕೊಂಡು ಬಿಟ್ಟಿದ್ದೇವೆ. ಯಾವುದೇ ವಿಜ್ಞಾನ ಆಂದೋಲನವಾಗಲೀ, ಇವೆರಡರ ವಿರುದ್ಧ ಹೋರಾಡದಿದ್ದರೆ, ಅದು ಯಶಸ್ವಿಯಾಗುವುದಿಲ್ಲ. ಶಬರಿಮಲೆ ಇದ್ಕಕೊಂಡು ಒಳ್ಳೆಯ ನಿದರ್ಶನ. ಇದರಲ್ಲಿ ಜಾತಿ ಮತ್ತು ಲಿಂಗಭೇದ – ಇವರೆಡೂ ತಳಕುಹಾಕಿಕೊಂಡಿವೆ. ನಮ್ಮ ಸಮಾಜ ತರ್ಕಬದ್ಧವಾಗಿರುವಂತೆ ನೋಡಿಕೊಳ್ಳಲು, ಈ ರೀತಿಯ ಪ್ರವೃತ್ತಿಗಳ ವಿರುದ್ಧದ ನಮ್ಮ ಹೋರಾಟ ಇಲ್ಲಿಂದ ಆರಂಭವಾಗಬೇಕು.
ಅನುವಾದ: ಮೈಸೂರಿನವರಾದ ಯಶಸ್ವಿನಿ ಪ್ರಕಾಶ್ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಸದ್ಯ ಬೆಂಗಳೂರು ನಿವಾಸಿ.
ಉತ್ತಮ ಲೇಖನ. ಪ್ರಕರ ಪಾಂಡಿತ್ಯ. ಚಿಕ್ಕ ವಯಸ್ಸಿನಲ್ಲೇ ಎಷ್ಟೊಂದು ಪ್ರಬುದ್ಧತೆ.
ಅಭಿನಂದನೆಗಳು. ವಂದೆಗಳೊಂದಿಗೆ.
Pingback: ತೇಜಲ್ ಕನಿಟ್ಕರ್ ಲೇಖನಕ್ಕೆ ಪ್ರತಿಕ್ರಿಯೆ : ಹರೀಶ ಹಾಗಲವಾಡಿ – ಋತುಮಾನ
Pingback: ತೇಜಲ್ ಕನಿಟ್ಕರ್ ಲೇಖನ ಕುರಿತಾಗಿ ಹರೀಶ ಹಾಗಲವಾಡಿ ಮಾತುಗಳಿಗೆ ಪ್ರತಿಕ್ರಿಯೆ : ಸುಬ್ರಮಣ್ಯ ಹೆಗಡೆ – ಋತುಮಾನ