ಎಲ್ಲವನ್ನು ಮಾರುಕಟ್ಟೆಗೆ ಒಪ್ಪಿಸುವ ಸಮಯ ಇದಲ್ಲ

ನಿರ್ಣಾಯಕ ವೈದಕೀಯ ಸೇವೆಗಳ ಸರಬರಾಜಿನ ವಿಷಯ ಬಂದಾಗ ಕೆಲಸ ಮಾಡುವುದು ಪರಸ್ಪರ ಸಹಕಾರವೇ ವಿನಹಾ ಸ್ಪರ್ಧೆಯಲ್ಲ . ಅದುವೇ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಎನ್ನುವುದನ್ನು ಇತಿಹಾಸದಲ್ಲೂ ನಾವು ಕಾಣಬಹುದು.

Illustration by Doug Chayka; Photograph by claudio.arnese/E+, via Getty

ಕೊರೋನ ಮಹಾಮಾರಿಯ ಒಂದು ಲಕ್ಷಣವೆಂದರೆ ಜಗತ್ತಿನಾದ್ಯಂತ ಆರ್ಥಿಕ ರಾಷ್ಟ್ರೀಯತೆ ಸ್ಫೋಟವಾಗುತ್ತಿದೆ. ಅಮೆರಿಕಾ ಹಾಗೂ ಯುರೋಪಿಯನ್ ಯೂನಿಯನ್ನಿನ ಸದಸ್ಯ ದೇಶಗಳೂ ಸೇರಿದಂತೆ ಹಲವು ದೇಶಗಳು ತುಂಬಾ ಕೊರತೆಯಿರುವ ರಕ್ಷಣೆಗೆ ಬೇಕಾದ ಮಾಸ್ಕ್‌ಗಳು, ಗೌನುಗಳು, ಕೈಗವಸುಗಳು, ವೆಂಟಿಲೇಟರ್, ಪರೀಕ್ಷ್ಷಾ ಕಿಟ್ಟುಗಳು ಇತ್ಯಾದಿಗಳನ್ನು ವಿದೇಶಗಳಲ್ಲಿ ಮಾರಾಟಮಾಡದಂತೆ ನೋಡಿಕೊಳ್ಳುತ್ತಿದ್ದಾರೆ. ಅವುಗಳ ರಫ್ತನ್ನು ನಿಯಂತ್ರಿಸುತ್ತಿದ್ದಾರೆ. ಈ ವಸ್ತುಗಳನ್ನು ಕೊಳ್ಳುವುದಕ್ಕೆ ನಡೆಯುತ್ತಿರುವ ಸ್ಪರ್ಧೆ ಯಾವುದೋ ಕೆಟ್ಟ ಆಕ್ಷನ್ ಸಿನಿಮಾದ ದೃಶ್ಯಗಳಂತೆ ಕಾಣುತ್ತಿವೆ. ಮಾಸ್ಕುಗಳನ್ನು ತುಂಬಿಕೊಂಡು ಯುರೋಪಿಗೆ ಬರುತ್ತಿದ್ದ ವಿಮಾನವನ್ನು ಕೊನೆಯ ಕ್ಷಣದಲ್ಲಿ ಅಮೇರಿಕಾ ಕಡೆ ತಿರುಗಿಸಲಾಗುತ್ತದೆ. ಜರ್ಮನ್ ಅಧಿಕಾರಿಗಳು ಅಮೆರಿಕೆಯನ್ನು ‘ಆಧುನಿಕ ಪೈರೇಟ್ಸ್’ ಅಂತ ಆಪಾದಿಸುತ್ತಾರೆ.

ಇಂತಹ ಕೆಟ್ಟ ಸ್ಪರ್ಧೆಯಿಂದ ಈ ಅವಶ್ಯಕ ವಸ್ತುಗಳ ಬೆಲೆ ಗಗನಕ್ಕೆ ಹೋಗುತ್ತದೆ. ಅಥವಾ ಅವುಗಳನ್ನು ಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಫೆಬ್ರವರಿ ಪ್ರಾರಂಭದಲ್ಲೇ ಕೆಲವು ಸುರಕ್ಷತಾ ಸಾಧನಗಳ ಬೆಲೆ ಮಾಮೂಲಿ ಬೆಲೆಗಿಂತ ೨೦ ಪಟ್ಟು ಹೆಚ್ಚಾಗಿತ್ತು. ಈ ಬಗ್ಗೆ ಜಾಗತಿಕ ಆರೋಗ್ಯ ಸಂಘಟನೆಯ ಡೈರಕ್ಟರ್ ಜನರಲ್ ತೆಡ್ರಸ್ ಅಧನಾಮ್ ಗೆಬ್ರಿಯೆಸಸ್ ಆಗಲೇ ಎಚ್ಚರಿಸಿದ್ದರು. ಕೊರೋನಾ ವೈರಾಣು ಹರಡುವುದು ಇನ್ನೂ ಮುಂದುವರಿದಿದೆ. ಇಂತಹ ಸಂಕಷ್ಟ ಸಮಯದಲ್ಲಿ ಈ ಏರುತ್ತಿರುವ ಬೆಲೆಯನ್ನು ನಿಭಾಯಿಸಲಾರದ ದೇಶಗಳ ಸ್ಥಿತಿ ಚಿಂತಾಜನಕವಾಗುತ್ತದೆ.

ಬ್ರೆಜಿಲಿನಲ್ಲಿ ಇಂದು ಕೊರೋನಾ ಬಿಕ್ಕಟ್ಟು ತೀರಾ ಗಂಭೀರವಾಗಿದೆ. ಅಲ್ಲಿ ವ್ಯಾಪಕವಾಗಿ ಪರೀಕ್ಷೆ ಮಾಡಲಾಗುತ್ತಿಲ್ಲ. ಅದಕ್ಕೆ ಬೇಕಾದ ರಾಸಾಯನಿಕ ರೀಏಜೆಂಟ್ ಸಿಗುತ್ತಿಲ್ಲ. ಅಮೆರಿಕೆಯಂತಹ ಶ್ರೀಮಂತ ದೇಶಗಳು ಜಾಗತಿಕ ಪೂರೈಕೆಯ ಬಹುಭಾಗವನ್ನು ಕೊಂಡುಕೊಂಡಿದ್ದಾರೆ. ಆಫ್ರಿಕೆಯಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಜಗತ್ತಿನ ಅತ್ಯಂತ ಬಡರಾಷ್ಟ್ರವಾದ ಕೇಂದ್ರ ಆಫ್ರಿಕನ್ ರಿಪಬ್ಲಿಕ್‌ನಲ್ಲಿ ಕೇವಲ ಮೂರೇ ಮೂರು ವೆಂಟಿಲೇಟರುಗಳಿವೆ. ಅಲ್ಲಿರುವ ಜನಸಂಖ್ಯೆ ನಲ್ವತ್ತು ಲಕ್ಷಕ್ಕಿಂತ ಹೆಚ್ಚು. ಲೈಬೀರಿಯದಲ್ಲಿ ಒಂದೂ ಇಲ್ಲದೇ ಇರಬಹುದು. ಕೆಲವು ಆಫ್ರಿಕನ್ ದೇಶಗಳು ಅವಧಿ ಮುಗಿದ ಮಾಸ್ಕಗಳನ್ನು ಕೊಳ್ಳುವುದಕ್ಕೆ ಮಾಮೂಲಿ ಬೆಲೆಗಿಂತ ಹತ್ತು ಪಟ್ಟು ಹೆಚ್ಚು ಬೆಲೆ ತೆರುತ್ತಿವೆ. ಅದೂ ಸಿಕ್ಕರೆ.

ಇತ್ತೀಚಿನ ದಿನಗಳಲ್ಲಿ ಕೊರೋನ ವಿರುದ್ಧದ ಹೋರಾಟವನ್ನು ಎರಡನೇ ಜಾಗತಿಕ ಯುದ್ಧಕ್ಕೆ ಹೋಲಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಯುದ್ಧ ಸಮಯದಲ್ಲಿ ಕೈಗಾರಿಕೆಯ ಕ್ರೋಢೀಕರಣಕ್ಕೆ ಸಂಬಂಧಿಸಿದಂತೆ ಈ ರೀತಿಯಲ್ಲಿ ಹೋಲಿಸಿ ಮಾತನಾಡುತ್ತಿದ್ದಾರೆ. ಆದರೆ ಅದಕ್ಕಿಂತ ಮೊದಲ ಜಾಗತಿಕ ಮಹಾಯುದ್ಧಕ್ಕೆ ಹೋಲಿಸುವುದು ಒಳ್ಳೆಯದು. ಆಗ ಹಲವು ತುರ್ತು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಜನರ ಪ್ರಾಣ ಉಳಿಸುವ ವಿಷಯದಲ್ಲಿ ಅದು ಹೆಚ್ಚು ಸಹಾಯಕವಾಗಬಹುದು.

ಮೊದಲ ಜಾಗತಿಕ ಯುದ್ಧದ ಸಮಯದಲ್ಲಿ ಮಿತ್ರ ರಾಷ್ಟ್ರಗಳಿಗೆ ಇಂತಹದ್ದೇ ಸಮಸ್ಯೆ ಎದುರಾಗಿತ್ತು. ಆಗಲೂ ಅಂತರರಾಷ್ಟ್ರೀಯ ಸ್ಪರ್ಧೆ ನಿಯಂತ್ರಣವಿಲ್ಲದೆ ನಡೆದಿತ್ತು. ಖಾಸಗಿ ಮಾರುಕಟ್ಟೆಯಲ್ಲಿ ಪ್ರಮಖ ವಸ್ತುಗಳಿಗೆ ತೀವ್ರವಾದ ಕೊರತೆ ಉಂಟಾಗಿತ್ತು. ಈ ಮಿತ್ರರಾಷ್ಟ್ರಗಳು ಒಂದೇ ಶತೃವಿನ ವಿರುದ್ಧ, ಒಂದೇ ಕೇಂದ್ರ ಶಕ್ತಿಯ ವಿರುದ್ಧ ಹೋರಾಡುತ್ತಿದ್ದರು. ಆದರೆ ಗೋಧಿ, ಕಚ್ಚಾಪದಾರ್ಥಗಳು ಇತ್ಯಾದಿ ಅವಶ್ಯಕ ಪದಾರ್ಥಗಳನ್ನು ಕೊಳ್ಳುವ ವಿಷಯದಲ್ಲಿ ಅವರಲ್ಲೇ ತೀವ್ರ ಸ್ಪರ್ಧೆ ನಡೆಯುತ್ತಿತ್ತು. ಇದರಿಂದ ಅವರು ಒಟ್ಟಾಗಿ ಯುದ್ಧಮಾಡುವುದು ಸಮಸ್ಯೆಯಾಗುತ್ತಿತ್ತು. ೧೯೧೭-೧೮ರ ವೇಳೆಗೆ ಕೊರತೆ ಎಷ್ಟು ತೀವ್ರವಾಯಿತೆಂದರೆ ಹೀಗೇ ಮುಂದುವರಿದರೆ ಯುದ್ಧದಲ್ಲಿ ಸೋತು ಬಿಡಬಹುದು ಅನ್ನುವ ಭೀತಿ ಅನೇಕ ಯುರೋಪಿಯನ್ ಮಿತ್ರ ರಾಷ್ಟ್ರಗಳ ಕೆಲವು ಅಧಿಕಾರಿಗಳನ್ನು ಕಾಡತೊಡಗಿತು. ಅವರ ಆರ್ಥಿಕತೆ ಹೆಚ್ಚು ಕಡಿಮೆ ಕುಸಿಯುವ ಸ್ಥಿತಿಗೆ ತಲುಪಿತ್ತು. ನಾಗರಿಕರು ಸುಸ್ತಾಗಿದ್ದರು.

ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದಕ್ಕೆ ಮಿತ್ರ ರಾಷ್ಟ್ರಗಳು ಹಲವಾರು ಸಂಘಟನೆಗಳನ್ನು ಕಟ್ಟಿಕೊಂಡರು. ಅವುಗಳ ಮೂಲಕ ಕೊರತೆಯಿರುವ ಪದಾರ್ಥಗಳನ್ನು ಒಂದು ನಿರ್ದಿಷ್ಟ ಬೆಲೆಯಲ್ಲಿ ಕೊಂಡರು. ಅವೆಲ್ಲವನ್ನೂ ಒಟ್ಟುಮಾಡಿಕೊಂಡು ಎಲ್ಲಾ ಮಿತ್ರ ದೇಶಗಳಿಗೂ ಅವುಗಳ ಅವಶ್ಯಕತೆಗಳಿಗೆ ತಕ್ಕಂತೆ ಹಂಚಲಾಯಿತು. ಅವುಗಳನ್ನು ಸಾಗಿಸುವುದಕ್ಕೂ ವ್ಯವಸ್ಥೆ ಮಾಡಲಾಯಿತು. ತೀವ್ರ ಕೊರತೆ ಅನುಭವಿಸುತ್ತಿರುವ ದೇಶಗಳಿಗೆ ಸರಕುಗಳನ್ನು ಸರಬರಾಜು ಮಾಡಲು ಅತ್ಯಂತ ಬಲಿಷ್ಠ ರಾಷ್ಟ್ರಗಳಾದ ಅಮೆರಿಕಾ ಮತ್ತು ಬ್ರಿಟನ್ ಒಪ್ಪಿಕೊಂಡವು. ಜಗತ್ತಿನ ಚರಿತ್ರೆಯಲ್ಲೇ ಈ ಎರಡು ಅತ್ಯಂತ ಪ್ರಬಲ ರಾಷ್ಟ್ರಗಳು ಜಾಗತಿಕ ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಕೆಯ ನಿಯಮವನ್ನು ಬದಿಗೊತ್ತಿ ಅವಶ್ಯಕತೆ ಇರುವ ದೇಶಗಳಿಗೆ ಸರಕುಗಳನ್ನು ಪೂರೈಸಿದವು. ಅವಶ್ಯಕತೆ ಆದ್ಯತೆಯಾಯಿತೇ ಹೊರತು ಕೊಳ್ಳುವ ಸಾಮರ್ಥ್ಯವಲ್ಲ. ಇಂತಹ ಅಂತರರಾಷ್ಟ್ರೀಯ ಮಟ್ಟದ ಸಮನ್ವಯ ವ್ಯವಸ್ಥೆ ಮಿತ್ರರಾಷ್ಟ್ರಗಳ ಗೆಲುವಿಗೆ ಬಹುಮಟ್ಟಿಗೆ ಕಾರಣವಾಯಿತು. ಇದನ್ನು ಯುದ್ಧದ ನಂತರ ಹಲವರು ಗುರುತಿಸಿದ್ದಾರೆ.

ಯುದ್ಧದ ಸಮಯದಲ್ಲಿ ಪೂರ‍್ಯೆಕೆಯ ವ್ಯವಸ್ಥೆ ತುಂಬಾ ಯಶಸ್ವಿಯಾಯಿತು. ಇದು ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಅಂತರರಾಷ್ಟ್ರೀಯ ಸಹಕಾರ ಎಷ್ಟು ಬಲಶಾಲಿಯಾದದ್ದು ಎಂಬುದನ್ನೂ ಜಗತ್ತಿಗೆ ತೋರಿಸಿಕೊಟ್ಟಿತು. ಈ ವ್ಯವಸ್ಥೆಗೆ ಚಾಲು ನೀಡಿದ ಹಲವು ಅಧಿಕಾರಿಗಳು ಮುಂದೆ ಯುದ್ದದ ನಂತರ ಲೀಗ್ ಆಫ್ ನೇಷನ್ಸ್‌ನಲ್ಲಿ ತೀರಾ ಪ್ರಭಾವಶಾಲಿ ಸ್ಥಾನ ಪಡೆದದ್ದರಲ್ಲಿ ಆಶ್ವರ್ಯವೇನಿಲ್ಲ. ಹಾಗೆಯೇ ಅವರಲ್ಲಿ ಇನ್ನೊಬ್ಬರು ಅನಂತರ ಯುರೋಪಿಯನ್ ಯೂನಿಯನ್ ಸ್ಥಾಪಿಸುವುದಕ್ಕೆ ನೆರವಾದರು. ಲೀಗ್ ಆಫ್ ನೇಷನ್ಸ್ ಪ್ರಾರಂಭದಲ್ಲಿ ಸಾರ್ವಜನಿಕ ಆರೋಗ್ಯ, ಆರ್ಥಿಕ ನೀತಿಗಳು ಮತ್ತು ಕಳ್ಳಸಾಗಣೆ ತಡೆಯುವುದರಲ್ಲಿ ಹಲವು ರೀತಿಯಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಸ್ಥಾಪಿಸುವುದಕ್ಕೆ ಕಾರಣವಾಗಿದೆ. ೧೯೩೦ರಲ್ಲಿ ಅಂತರರಾಷ್ಟ್ರೀಯ ಸಹಕಾರ ಕುಸಿದುಬಿತ್ತು. ಹಾಗಾಗಿಯೇ ನಂತರದ ಆರ್ಥಿಕ ಹಿಂಜರಿಕೆಯನ್ನೇ ಆಗಲಿ, ಮುಂದಿನ ಯುದ್ದಗಳನ್ನೇ ಆಗಲಿ ಎದುರಿಸುವುದಕ್ಕೆ ಜಗತ್ತಿಗೆ ಸಾಧ್ಯವಾಗಲಿಲ್ಲ. ಆದರೆ ಇಂತಹ ಸಂಸ್ಥೆಗಳ ಪ್ರಯತ್ನದಿಂದಾಗಿ ಮುಂದೆ ಸಂಯುಕ್ತ ಸಂಸ್ಥಾನಗಳಂತಹ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ಬೇಕಾದ ಒಂದು ಬಹುಮುಖ್ಯ ಬುನಾದಿ ಸಾಧ್ಯವಾಯಿತು.

ಒಬ್ಬ ಸಮಾನ ಶತ್ರುವನ್ನು ಎದುರಿಸುವ ಸಂದರ್ಭದಲ್ಲಿ ನಮ್ಮ ನಡುವಿನ ಅನಾವಶ್ಯಕ ಸ್ಪರ್ಧೆಯನ್ನು ತಪ್ಪಿಸುವಂತಹ ಒಂದು ಪ್ರಯತ್ನ ಆಗ ನಡೆಯಿತು. ಅಂದರೆ ಮೊಟ್ಟಮೊದಲ ಬಾರಿಗೆ ಒಂದು ಜಾಗತಿಕ ಆಡಳಿತವನ್ನು ಪ್ರಯೋಗ ಮಾಡಿ ನೋಡುವುದಕ್ಕೆ ಅದು ಒಂದು ಅವಕಾಶ ಮಾಡಿಕೊಟ್ಟಿತು. ಮತ್ತೆ ಈಗ ಅದನ್ನು ಪ್ರಯತ್ನಿಸಿ ನೋಡಬಹುದಾ?

ಕೊರೋನ ವೈರಾಣುವನ್ನು ಮಣಿಸಲು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಅವಶ್ಯಕ ಸಂಪನ್ಮೂಲಗಳನ್ನು ಒದಗಿಸಿ ಅವುಗಳನ್ನು ಸಬಲಗೊಳಿಸಬೇಕು. ಆಗ ಅವುಗಳಿಗೆ ಎಲ್ಲಾ ದೇಶಗಳಲ್ಲೂ ಈ ಮಹಾಮಾರಿಯನ್ನು ನಿರ್ವಹಿಸುವುದಕ್ಕೆ ಬೇಕಾದ ಎಲ್ಲಾ ಅಗತ್ಯಗಳು ಲಭ್ಯವಿರುವಂತೆ ವ್ಯವಸ್ಥೆಮಾಡಲು ಸಾಧ್ಯವಾಗುತ್ತದೆ. ಇದೊಂದು ತೀರಾ ಅಸಮವಾದ ಜಾಗತಿಕ ಆರ್ಥಿಕತೆ. ಸಂಪನ್ಮೂಲಗಳ ಜಾಗತಿಕ ಮಟ್ಟದ ಮರುವಿತರಣೆ ಅನಿವಾರ್ಯ. ಮಾರುಕಟ್ಟೆಯ ಮೇಲೆ ಯಾವುದೇ ನಿಯಂತ್ರಣವೂ ಇಲ್ಲ. ಹಾಗಾಗಿ ಅವಶ್ಯಕ ಸಂಪನ್ಮೂಲಗಳು ತುಂಬಾ ದುಬಾರಿಯಾಗಿವೆ. ಅವುಗಳನ್ನು ಕೊಳ್ಳುವುದಕ್ಕೆ ಆಗದ ದೇಶಗಳು ದುರಂತದ ಸ್ಥಿತಿಯಲ್ಲಿವೆ.

ಕೆಲವು ದಾನಿಗಳು ನೀಡುವ ಮೊತ್ತ ಜಾಗತಿಕ ಅವಶ್ಯಕತೆಗೆ ಸಾಲುವುದಿಲ್ಲ. ಚೀನಾ ದೇಶ ಸ್ವತಂತ್ರವಾಗಿ ನೀಡುತ್ತಿರುವ ನೆರವಿಗೆ ತೀವ್ರ ಪ್ರತಿಕ್ರಿಯೆ ಬಂದಿದೆ. ಅವು ಇದನ್ನು ನೆಪಮಾಡಿಕೊಂಡು ಮುಂದೆ ಕೆಟ್ಟರೀತಿಯ ಪ್ರಭಾವ ಬೀರಬಹುದು ಅನ್ನುವ ಗಾಬರಿ ಕಾಡುತ್ತಿದೆ. ರಾಷ್ಟ್ರೀಯವಾದೀ ಪರಿಹಾರಗಳಿಗೆ ಪ್ರತೀಕಾರದ ಕ್ರಮಗಳು ಹುಟ್ಟಿಕೊಳ್ಳುತ್ತಿವೆ. ಎಲ್ಲಾ ದೇಶಗಳು ಅವಶ್ಯಕ ವಸ್ತುಗಳು ರಫ್ತಾಗದಂತೆ ನೋಡಿಕೊಳ್ಳುತ್ತಿವೆ. ತಮ್ಮ ಸುತ್ತ ಗೋಡೆ ಕಟ್ಟಿಕೊಳ್ಳುತ್ತಿವೆ. ಅವಶ್ಯಕ ವಸ್ತುಗಳನ್ನು ಹೊರದೇಶಗಳಿಂದ ಪಡೆದುಕೊಳ್ಳುವ ಖಾತ್ರಿ ಇಲ್ಲ. ಎಲ್ಲಾ ಕಡೆಯಲ್ಲೂ ಸೋಂಕು ಹರಡುವುದು ನಿಲ್ಲಬೇಕು. ಅದು ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಉಳಿದುಕೊಂಡರೂ ಜಗತ್ತಿನ ಉಳಿದ ಕಡೆಗೆ ಹರಡುವ ಅಪಾಯ ಇದ್ದೇ ಇರುತ್ತದೆ.
ಇದು ಬ್ರೆಕ್ಸಿಟ್ ಯುಗ. ಅಮೆರಿಕ ಹಾಗೂ ಚೀನಾ ನಡುವೆ ವ್ಯಾಪಾರ ಯುದ್ದ ನಡೆಯುತ್ತಿದೆ. ಟ್ರಂಪ್ ಡಬ್ಲ್ಯುಎಚ್‌ಒಗೆ ಸಹಾಯಧನ ನೀಡುವುದನ್ನು ನಿಲ್ಲಿಸಿದ್ದಾರೆ. ಇಂತಹ ಜಾಗತಿಕ ಸನ್ನಿವೇಶದಲ್ಲಿ ಕೊರತೆಯಿರುವ ವಸ್ತುಗಳನ್ನು ಕೊಂಡುಕೊಂಡು ಅವುಗಳನ್ನು ಹಂಚುವುದನ್ನು ಊಹಿಸಿಕೊಳ್ಳುವುದಕ್ಕೂ ಕಷ್ಟ. ಜೊತೆಗೆ ಯುರೋಪಿಯನ್ ಯೂನಿಯನ್ ಅಂತಹ ಸಂಘಟನೆಗಳು ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಒಂದು ಸಾಮೂಹಿಕ ಪ್ರಯತ್ನಕ್ಕೆ ಹೆಣಗುತ್ತಿವೆ.

ಆದರೆ ಒಂದು ಅಂಶ ಮಾತ್ರ ಸ್ಪಷ್ಟವಾಗುತ್ತದೆ. ಜಾಗತಿಕ ತುರ್ತು ಸಂದರ್ಭದಲ್ಲಿ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಮಾತ್ರ ಅದನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯ. ಅಧ್ಯಕ್ಷ ವುಡ್ ರೋ ವಿಲ್ಸನ್, ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಯುರೊಪಿಯನ್ ಒಕ್ಕೂಟದಲ್ಲಿ ಅಮೆರಿಕವನ್ನು ಸೇರಿಸುವುದಕ್ಕೆ ತಯಾರಿರಲಿಲ್ಲ. ಅವನು ಮಿತ್ರ ರಾಷ್ಟ್ರಗಳ ನಡುವೆ ಪೂರೈಕೆಯ ವ್ಯವಸ್ಥೆಯನ್ನು ಸ್ಥಾಪಿಸಲು ಒಪ್ಪಿರಲಿಲ್ಲ. ಅದರಿಂದ ಅಮೇರಿಕನ್ ಸಾರ್ವಭೌಮತ್ವಕ್ಕೆ ದಕ್ಕೆಯಾಗುತ್ತದೆ ಎಂದು ಭಾವಿಸಿದ್ದ. ಆದರೆ ಅಂದಿನ ಯುದ್ಧದ ಪರಿಸ್ಥಿತಿಯಲ್ಲಿ ಅದು ಅನಿವಾರ್ಯವಾಗಿತ್ತು. ಹಾಗಾಗಿ ಅವನು ಅದಕ್ಕೆ ಒಪ್ಪಿಕೊಳ್ಳಲೇ ಬೇಕಾಯಿತು. ಎಂದಿಗಿಂತ ಹೆಚ್ಚಾಗಿ ಇಂದು ಜಗತ್ತು ಪರಸ್ಪರ ಅವಲಂಬಿತವಾಗಿದೆ. ತೀರಾ ಪರಿಣಾಮಕಾರಿ ಅಂತರರಾಷ್ಟ್ರೀಯ ಆಳ್ವಿಕೆಯಿಂದ ಮಾತ್ರ ಪ್ರತಿಯೊಂದು ದೇಶದ ಸುರಕ್ಷೆ ಸಾಧ್ಯ. ಇದು ಬಹುಪಾಲು ರಾಷ್ಟ್ರೀಯವಾದಿ ನಾಯಕರಿಗೆ ಕೂಡ ಸಧ್ಯದಲ್ಲೇ ಮನವರಿಕೆಯಾಗಬಹುದು.
ಸರಕುಗಳ ಹಾಗೂ ಜನರ ಚಲನೆಗೆ ನಿಯಂತ್ರಣ ಹೇರಲಾಗುತ್ತಿದೆ. ಹೊರಗೆ ನಡೆಯುತ್ತಿದ್ದ ಪೂರೈಕೆಯ ಸರಪಳಿಯನ್ನು ದೇಶದೊಳಕ್ಕೆ ಸೀಮಿತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಜಾಗತೀಕರಣ ಕೊನೆಗೊಳ್ಳುತ್ತಿದೆ ಅಂತ ಕೆಲವರು ಊಹಿಸುತ್ತಿದ್ದಾರೆ. ಕೊರೋನ ಜಾಗತೀಕರಣವನ್ನು ಕೊನೆಗೊಳಿಸುತ್ತೆ ಅನ್ನುವುದು ಅವರ ಚಿಂತನೆಯಾಗಿದೆ. ಆದರೆ ಹಾಗೇನೂ ಆಗಬೇಕಾಗಿಲ್ಲ. ನಮಗೆ ಇರುವ ಆಯ್ಕೆ ಎರಡೇ ಅಂದರೆ ಈವರೆಗೂ ನಡೆದುಕೊಂಡು ಬಂದಿದ್ದ ವ್ಯವಸ್ಥೆ ಮುಂದುವರಿಯುವುದು ಅಥವಾ ರಾಷ್ಟ್ರೀಯತೆಯನ್ನು ಒಪ್ಪಿಕೊಳ್ಳುವುದು ಎಂದೇನೂ ಆಗಬೇಕಾಗಿಲ್ಲ. ಒಂದು ಮಹಾಮಾರಿಯನ್ನು ನಿಯಂತ್ರಿಸುವುದು ಅಥವಾ ಹವಮಾನ ಬದಲಾವಣೆಯನ್ನು ನಿಯಂತ್ರಿಸುವುದು ಇವೆಲ್ಲಾ ಜಾಗತಿಕ ಸಾಮೂಹಿಕ ಕ್ರಿಯೆಯ ಸಮಸ್ಯೆಗಳು. ಇಂತಹ ಜಾಗತಿಕ ಸಮಸ್ಯೆಗಳನ್ನು ಕೇವಲ ವಿಭಿನ್ನ ರೀತಿಯ ಅಂತರರಾಷ್ಟ್ರೀಯ ಸಹಕಾರದಿಂದ ಮಾತ್ರ ಪರಿಹರಿಸಲಿಕ್ಕೆ ಸಾಧ್ಯ. ಇದನ್ನು ಮನವರಿಕೆ ಮಾಡಿಕೊಡುವುದಕ್ಕೆ ಇಂದಿನ ಬಿಕ್ಕಟ್ಟಿನ ಸಂದರ್ಭ ನಮಗೆ ಒಂದು ಅವಕಾಶವನ್ನು ಒದಗಿಸಿದೆ. ಸರಕುಗಳ ವಿತರಣೆಯನ್ನು ಕೇವಲ ಮಾರುಕಟ್ಟೆಗೆ ಒಪ್ಪಿಸಿಬಿಡುವುದು ಸಾವು ಮತ್ತು ಬದುಕಿನ ಸಂಗತಿಯಾಗಿಬಿಡುತ್ತದೆ.

ಕೃಪೆ: ನ್ಯೂಯಾರ್ಕ್ ಟೈಮ್ಸ್

ಅನುವಾದ: ಟಿ. ಎಸ್. ವೇಣುಗೋಪಾಲ್

ಪ್ರತಿಕ್ರಿಯಿಸಿ