ಕೊರೋನ ವೈರಸ್ ಮತ್ತು ಬಹುಜನ ಸಮಾಜ

ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ಬಹುಜನ ದೃಷ್ಟಿಕೋನವನ್ನು ಒಟ್ಟುಗೂಡಿಸಲು ರೌಂಡ್ ಟೇಬಲ್ ಇಂಡಿಯಾ ಮಿಂದಾಣ ಸರಣಿಯೊದನ್ನುಮಾಡುತ್ತಿದೆ. ಅಂಬೇಡ್ಕರ್ ವಿಚಾರಧಾರೆಯನ್ನು ಪಸರಿಸುವ ಮತ್ತು ಬಹುಜನ ಸಮಾಜದ ನರೇಟಿವ್ ಗಳಿಗೆ ನಮ್ಮ ಮಾಧ್ಯಮಲೋಕದಲ್ಲಿ ಧ್ವನಿಯಾಗುವ ಕೆಲಸ ಮಾಡುತ್ತಿದೆ. ಅನು ರಾಮ್‌ದಾಸ್ ಮತ್ತು ಕುಫಿರ್ ( ನರೇನ್ ಬೆಡಿದೆ ) ಇಬ್ಬರೂ ರೌಂಡ್ ಟೇಬಲ್ ಇಂಡಿಯಾದ ಸ್ಥಾಪಕರು ಮತ್ತು ಪ್ರಸ್ತುತ ಸಂಪಾದಕರು. ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಸರ್ಕಾರದ ನಡಾವಳಿಗಳನ್ನು ಬಹುಜನ ಸಮಾಜ ಹೇಗೆ ನೋಡುತ್ತದೆ ಎನ್ನುವದರ ಕುರಿತಾಗಿ ಈ ಸಂದರ್ಶನ ಬೆಳಕು ಚೆಲ್ಲುತ್ತದೆ.

ಅನು ರಾಮದಾಸ್ : ನಿಮ್ಮಿಂದ ಎರಡು ಪ್ರಶ್ನೆಗಳಿಗೆ ಉತ್ತರ ಬೇಕಿದೆ. ಮೊದಲನೆಯದು, ವಿದೇಶಗಳಿಂದ ಒಳಬಂದ ಪ್ರಯಾಣಿಕರನ್ನು ಪರೀಕ್ಷಿಸಿ, ಬೇರ್ಪಡಿಸುವಲ್ಲಿ ನಿಷ್ಠುರತೆ ತೋರದ ಭಾರತದ ಮನೋಭಾವದ ಬಗ್ಗೆ ತಿಳಿಸಿದ್ದಿರಿ. ಅದನ್ನು ಸ್ವಲ್ಪ ವಿಸ್ತರಿಸಬಹುದೇ?

ಕುಫಿ಼ರ್:  ದೆಹಲಿಯಿಂದ ವಲಸೆ ಹೊರಟ ನಿರಾಶ್ರಿತ ಕೆಲಸಗಾರರನ್ನೇ ನೋಡಿ. ಅವರಿಗೆ ಯಾವುದಾದರೂ ಹಕ್ಕುಗಳಿವೆಯೇ? ಅವರು ತಮ್ಮ ದೇಶದಲ್ಲಿಯೇ ಇದ್ದಾರೆಂದು ಕಲ್ಪಿಸಿಕೊಳ್ಳಿ. ನಾಗರೀಕ ಹಕ್ಕುಗಳನ್ನು ಮರೆತುಬಿಡಿ‌. ಅಂತರಾಷ್ಟ್ರೀಯ ಮಟ್ಟದ ಯಾವುದೇ ದೇಶದ ಅಕ್ರಮ ವಲಸಿಗರಿಗೆ ದೊರಕುವ ರಕ್ಷಣೆಯೂ ಇವರಿಗೆ ದೊರಕುವುದಿಲ್ಲ. ಅದೂ ಇಂತಹ ಆಪತ್ಕಾಲದಲ್ಲಿ, ಇನ್ನಿತರೆ ಸಂದಿಗ್ಧ ಪರಿಸ್ಥಿತಿಗಳಲ್ಲಿ ಅವರುಗಳು ತಮ್ಮ ಜೀವನಾಧಾರದ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ಇದು ಸರಳ ಎನಿಸಬಹುದು. ಮೊದಲಿಗೆ ಅವರಿಗೆ ತಮ್ಮ ತವರಿನಲ್ಲಾಗಲೀ, ಅಥವಾ ವಲಸೆ ಬಂದು ಈಗ ನೆಲೆಸಿರುವ ಜಾಗದಲ್ಲಾಗಲೀ ಆ ಹಕ್ಕೇ ಇರಲಿಲ್ಲ. ಅಭಿವ್ಯಕ್ತಿಸುವ, ಸಭೆ ಸೇರುವ, ಪ್ರತಿಭಟಿಸುವ ಅವರ ಹಕ್ಕುಗಳು ನಿಃಸಂಶಯವಾಗಿ ಅಸ್ತಿತ್ವದಲ್ಲೇ ಇಲ್ಲ. ತಮ್ಮ ಸಾಮಾನುಗಳನ್ನು ಯಾವುದಾದರೂ ಬ್ಯಾಗಿಗೋ, ಗೋಣಿ ಚೀಲಕ್ಕೋ ತುಂಬಿಕೊಂಡು ಜಾಗ ಖಾಲಿ ಮಾಡಬೇಕಾಗುತ್ತದೆ. ಇಲ್ಲಾಗಲೀ, ತಮ್ಮ ಊರುಗಳಲ್ಲಾಗಲೀ ಅವರಿಗೆ ಬದುಕುವ ಹಕ್ಕುಗಳೇ ಇಲ್ಲ.

ಮೊದಲಿಗೆ ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರ ಕಾಳಜಿಯನ್ನು ವಹಿಸಬೇಕೆಂಬ ಪರಿಕಲ್ಪನೆಯೇ ಭಾರತಕ್ಕೆ ಇಲ್ಲ. ಬ್ರಿಟೀಷರು ತಮ್ಮ ಅಧಿಕಾರವನ್ನು ಮೇಲ್ವರ್ಗಕ್ಕೆ ಹಸ್ತಾಂತರಿಸಿದರು. ಬ್ರಿಟಿಷ್ ಇಂಡಿಯಾದ ಕೆಲವು ಪ್ರಾಂತೀಯ ರಾಜ್ಯಗಳಲ್ಲಿನ ಮೇಲ್ಜಾತಿಗಳೂ ಸಹ ಇವರನ್ನೇ ಆಯ್ಕೆ ಮಾಡಿದವು. ಅಧಿಕಾರದ ಪಾಲುದಾರಿಕೆಯ ಈ ಸನ್ನಿವೇಶದಲ್ಲಿ ಮಿಕ್ಕವರು ಎಲ್ಲಿಂದ ಬರಲು ಸಾಧ್ಯ?

‘ಭಾರತದ ಸ್ವಾತಂತ್ರ್ಯ ವೆಂದರೆ ಬ್ರಿಟೀಷರಿಂದ ಬ್ರಾಹ್ಮಣ ಮತ್ತು ಬನಿಯಾಗಳಿಗಾದ ಅಧಿಕಾರದ ಹಸ್ತಾಂತರ’ ಎಂದು ಪೆರಿಯಾರರು ಹೇಳಲು ಕಾರಣವಿದೆ.  ಸ್ವಾತಂತ್ರ್ಯ ಸಂಗ್ರಾಮವು ಮೇಲ್ಜಾತಿಗಳ ಯೋಜನೆ ಎಂದು ಬಾಬಾ ಸಾಹೇಬರಿಗೆ ಏಕೆ ಅನಿಸಿತ್ತು? ಅಪಾರ ಸಂಖ್ಯಾ ಬಾಹುಳ್ಯವಿದ್ದ ಬಹುಜನರು, ರಾಷ್ಟ್ರೀಯ ಚಳುವಳಿಯು ಕಲ್ಪಿಸಿಕೊಂಡಿದ್ದ ‘ಭಾರತದ ಸಮುದಾಯ’ದ ಚಿತ್ರಣದಲ್ಲಿ ಎಂದಿಗೂ ಒಂದು ಭಾಗವಾಗಿರಲಿಲ್ಲ. ಈಗ ಇದ್ದಕಿದ್ದಂತೆ, ಅದೂ 1947 ರ ನಂತರ ಪವಾಡವೆಂಬಂತೆ ಇವರು ಭಾರತ ಸಮುದಾಯದ ಭಾಗವಾಗಲು ಹೇಗೆ ಸಾಧ್ಯ?

ಹಾಗಾಗಿಯೇ, ಮೊದಲನೆಯ ಸರ್ಕಾರದಿಂದಲೂ ಅವರು ಎಂದಿಗೂ ಸಾರ್ವತ್ರಿಕ ಶಿಕ್ಷಣವನ್ನು ಉತ್ತೇಜಿಸುತ್ತೇವೆ, ಅಥವಾ ಆರೋಗ್ಯ ಅಥವಾ ಉದ್ಯೋಗ ನೀಡುತ್ತೇವೆಂದು ಹೇಳಲಿಲ್ಲ. ನೆಹರೂ ಇದ್ಯಾವುದನ್ನೂ ಮಾಡುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದರು. ಸಂವಿಧಾನದ ಪ್ರಸ್ತಾವನೆಯು ದೊಡ್ಡ ವಾಗ್ದಾನಗಳನ್ನು ಮಾಡುತ್ತದೆ, ಸಮಾನತಾವಾದದ ಸಾರ್ವತ್ರಿಕ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತದೆ. ಆದರೆ ಸರಕಾರವು ಪ್ರತಿಯೊಬ್ಬರಿಗೂ ಇದನ್ನು ಪೂರೈಸುತ್ತದೆಂದು ಭಾವಿಸಲು ಸಾಧ್ಯವಿಲ್ಲ.

ಕೇವಲ ಶೇ.15 ರಿಂದ ಶೇ.20 ರಷ್ಟು ಜನರಿಗೆ ಮಾತ್ರ ಇವುಗಳನ್ನು ತಲುಪಿಸುವಂತಹ ಸಂಸ್ಥೆಗಳನ್ನು ಅವರು ಇಲ್ಲಿಯವರೆಗೂ ಕಟ್ಟಿದ್ದಾರೆ. ಮಾನ್ಯ ಕಾನ್ಶೀರಾಂ ಸಾಹೇಬರು ಹೇಳುವ 85:15 ರ ಅನುಪಾತ ಸತ್ಯ. ಅದು ಕೇವಲ ಉಪಮೆಯಲ್ಲ. ಶೇ.15 ಕ್ಕಿಂತಲೂ ಮೀರಿ ಏನಾದರೂ ಮಾಡಿದರೆ ಅದು ಖಂಡಿತಾ ಉದ್ದೇಶಪೂರ್ವಕವಾಗಿ, ಯೋಜಿತವಾಗಿರುವುದಿಲ್ಲ. ಅವರಿಗೆ ಅಂತಹ ರಾಜಕೀಯ ಇಚ್ಛಾಶಕ್ತಿ ಇದ್ದು, ಹೃದಯ ವೈಶಾಲ್ಯತೆಯಿದ್ದರೆ, ಆಡಳಿತ ವರ್ಗದ ಆ ಒಂದು ಭಾಗ ಒಂದು ನಿರ್ದಿಷ್ಟ ಸಮಯದ ವರೆಗೆ ಏನಾದರೂ ಸ್ವಲ್ಪ ಹೆಚ್ಚು ಕೆಲಸವನ್ನು ಮಾಡಬಹುದೇ ಹೊರತು, ಎಲ್ಲರನ್ನೂ ತಲುಪಲು ಸಾಧ್ಯವಿಲ್ಲ. ಅವರು ಎಲ್ಲರನ್ನೂ ತಲುಪುವ ಯೋಚನೆಯನ್ನೂ ಮಾಡುವುದಿಲ್ಲ.

ಒಳಬರುವ ಪ್ರಯಾಣಿಕರನ್ನು  ಸರ್ಕಾರವು  ಪರೀಕ್ಷಿಸಬೇಕೆಂದು  ಹೇಗೆ ನಿರೀಕ್ಷಿಸುತ್ತೀರಿ? ಅದರಲ್ಲೂ ಬಹುಪಾಲು ಜನರು ತಮ್ಮದೇ  ಉನ್ನತ ಜಾತಿಗಳಿಗೆ ಸೇರಿದವರಾಗಿದ್ದಾಗ?

ಅನು: ಇದಕ್ಕೆ ಸಂಬಂಧಿಸಿದ ಮತ್ತೊಂದು ಪ್ರಶ್ನೆಯೆಂದರೆ ರೋಗಗಳು ಸದಾ ಬಡವರ, ಅಮಾನವೀಯ, ಇತರೆ ಜನರ ಸಹವಾಸವನ್ನೇ ಮಾಡುತ್ತಿದ್ದವು. ನಿಮ್ಮ ಮಾತುಗಳನ್ನು ಉಲ್ಲೇಖಿಸುವುದಾದರೆ ತಮ್ಮನ್ನು ತಾವು ಅಜೇಯರೆಂದು ಭಾವಿಸುತ್ತಿದ್ದ ಮೇಲ್ವರ್ಗಗಳೇ ಈಗ ತಮ್ಮನ್ನು ರೋಗ ಹರಡುವವರನ್ನಾಗಿ (disease transmitter s/ ರೋಗಪ್ರಸರಣ) ಗುರುತಿಸಿಕೊಳ್ಳುತ್ತಿದೆಯಲ್ಲ?

ಕುಫಿರ್: ತಮ್ಮ ಆಹಾರ ಪದ್ಧತಿ, ಸಾಮಾಜಿಕ ಪದ್ಧತಿ, ಜೀವನ ಪದ್ಧತಿ ಎಲ್ಲವೂ ಶುದ್ಧವಾದ ಕಾರಣ ತಮ್ಮನ್ನು ಅಜೇಯರೆಂದುಕೊಂಡಿದ್ದರು. ಅವರದ್ದು ಕೆಳಜಾತಿಗಳಂತೆ ಮಾಂಸಾಹಾರವಲ್ಲ. ಕಲ್ಮಶವಲ್ಲದ, ಮಲಿನವಲ್ಲದ ಶುದ್ಧವಾದ ಸಸ್ಯಹಾರ. ಹಾಗಾಗಿ ಅವರು ಸ್ವತಂತ್ರರು. ಅವರು ಏನೇ ಮಾಡಿದರೂ, ತಿಂದರೂ, ಹೇಗೇ ಬದುಕಿದರೂ ಅದು ಶುದ್ಧ. ಅವರು ನಿರ್ವಹಿಸುವ ವೃತ್ತಿ, ಮಾಡುವ ಎಲ್ಲಾ ಕೆಲಸಗಳೂ ಶುದ್ಧ.

ಅವರ ಆಹಾರ, ವೃತ್ತಿ, ಜೀವನಶೈಲಿ, ಸೌಕರ್ಯಗಳು, ಸಂಕ್ಷಿಪ್ತವಾಗಿ ಸಾಂಪ್ರದಾಯಿಕ ಅಂತಸ್ತು, ಅವರ ಬಳಕೆ, ಎಲ್ಲವೂ ಶುರುವಿನಿಂದಲೂ ಭಾರತದ ರಾಜಕೀಯ ಆರ್ಥಿಕತೆಯನ್ನು ಮುನ್ನಡೆಸುವ ಅಂಶವಾಗಿ ಗುರುತಿಸಲ್ಪಟ್ಟಿದೆ. ಸಮಾಜವಾದಿ ಯುಗದ ಎಲ್ಲಾ ಉತ್ಪಾದನೆಯ ಗುರಿಯು ಇವರೇ ಆಗಿದ್ದರು. ಮೇಲಂತಸ್ತಿನ ಕೆಲವರ ಬಯಕೆಗಳನ್ನು ಈಡೇರಿಸುವುದು ಎಲ್ಲಾ ಉತ್ಪಾದನೆಯ ಉದ್ದೇಶವಾಗಿತ್ತು. ಇದರಿಂದ ಸ್ವಾಭಾವಿಕವಾಗಿಯೇ ಭಾರತದ ಉತ್ಪಾದನಾ ವಲಯದ ಬೆಳವಣಿಗೆ ಕುಂಠಿತವಾಯಿತು. ಗ್ರಾಮೀಣ ಭಾಗದ ಬಗೆಹರಿಸಲಾಗದ ನಿರುದ್ಯೋಗ ಮತ್ತು ಅಪೂರ್ಣ ಉದ್ಯೋಗದ ಸಮಸ್ಯೆಗೆ ನಾಂದಿ ಹಾಡಿತು. ಆದ್ದರಿಂದಲೇ ಕೈಗಾರಿಕಾ ಕಾರ್ಮಿಕ ವರ್ಗಗಳಲ್ಲಿ, ಭಾರತದ ಆಸುಪಾಸಿನಲ್ಲೇ ಸ್ವಾತಂತ್ರ್ಯ ಹೊಂದಿದ ಚೀನಾ, ಜಪಾನ್, ಕೊರಿಯಾ ಇನ್ನಿತರೆ ದೇಶಗಳಂತೆ ಬೆಳವಣಿಗೆ ಸಾಧ್ಯವಾಗಲಿಲ್ಲ. ದೆಹಲಿ ಮತ್ತಿತರ ನಗರಗಳ ವಲಸೆ ಕಾರ್ಮಿಕರ ಹಿನ್ನೆಲೆ ಇದು. ಪ್ರತಿಯೊಂದು ಮಹಾನಗರಗಳಲ್ಲೂ ಭೂತಕಾಲಕ್ಕೂ- ವರ್ತಮಾನಕ್ಕೂ ಸಲ್ಲದ, ಕೃಷಿಕ ಸಮಾಜಕ್ಕೂ -ಕೈಗಾರಿಕಾ ವರ್ಗಕ್ಕೂ ಸೇರದ ಒಂದು ಶ್ರೇಣಿಯ ಜನರಿದ್ದಾರೆ.

ನಗರಗಳಲ್ಲಿ ವಾಸಿಸುವ ಬ್ರಾಹ್ಮಣರ, ಉನ್ನತ ಜಾತಿಯವರ ಸೇವೆ ಮಾಡುವುದು, ಮನೆ ಕಟ್ಟುವುದು, ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು, ಇಷ್ಟೇ ಅವರ ಜೀವನದ ಉದ್ದೇಶ. ಜಾತಿ ಆಧಾರಿತ ಉತ್ಪಾದನೆಯು ಕಾರ್ಯನಿರ್ವಹಿಸುವುದೇ ಹೀಗೆ. ಅವರ ಉತ್ಪಾದನೆಯೆಲ್ಲ ಈ ಅಲ್ಪಸಂಖ್ಯಾತ ಗಣ್ಯವರ್ಗದ ಬಳಕೆಗೇ ಸರಿಹೊಂದುತ್ತದೆ.

ಆದ್ದರಿಂದ ಯಾವಾಗ ಒಳಬಂದ ಅಂತರರಾಷ್ಟ್ರೀಯ ಪ್ರಯಾಣಿಕರಲ್ಲಿ ಈ ಗಣ್ಯ ವರ್ಗದ ಗ್ರಾಹಕರೇ ಹೆಚ್ಚಿನವರಾದರೋ, ಸಹಜವಾಗಿಯೇ ಸರ್ಕಾರ ಎಚ್ಚೆತ್ತುಕೊಂಡಿತು. ಸಾರ್ಸ್, ಫ್ಲೂ ಸಹಿತ ಯಾವುದೇ ರೋಗಗಳು ಇವರನ್ನು ಬಾಧಿಸುವುದಿಲ್ಲ ಎಂದು ತಿಳಿದಿದ್ದರು. ಆಡಳಿತ ವರ್ಗದ ತಾವು ಎಲ್ಲ ಸಾಂಕ್ರಾಮಿಕ ರೋಗಗಳಿಗೆ ಪ್ರತಿರೋಧ ಒಡ್ಡಬಲ್ಲವರೆಂದು ಭಾವಿಸಿದ್ದರು. ಶುದ್ಧತೆಯ ಪರಿಕಲ್ಪನೆ ಬಂದದ್ದೇ ಕರ್ಮಠ ಬ್ರಾಹ್ಮಣ್ಯ ಸಿದ್ಧಾಂತವಾದ ಸಸ್ಯಹಾರ ಪರಿಶುದ್ಧ ಎಂಬುದನ್ನು, ಮಾಂಸ ತಿನ್ನುವ ಎಡಪಂಥೀಯರು, ಲಿಬರಲ್ ಗಳು ಮತ್ತು ಇನ್ನಿತರ ಅಧಾರ್ಮಿಕ ಜನರು ಸಹ ನಂಬುವುದರಿಂದ. ಯಾರು ಮಾಂಸ ತಿನ್ನುತ್ತಾ ಅಶುದ್ಧರಾಗಿರುತ್ತಾರೆ, ಅವರಿಗೆ ಮಾತ್ರ ಈ ಖಾಯಿಲೆಗಳು ಅಂಟಿಕೊಳ್ಳುತ್ತವೆಂದು ತಿಳಿದಿದ್ದರು.

ಯಾವಾಗ ತಮ್ಮದೇ ಜನರಿಗೆ, ಹೆಮ್ಮೆಯ ಪ್ರತೀಕವಾಗಿ ವಿಶ್ವದಾದ್ಯಂತ ಹಣ -ಯಶಸ್ಸು ಗಳನ್ನು ಸಂಪಾದಿಸಿದ ವಿದ್ಯಾರ್ಥಿಗಳು, ಡಾಕ್ಟರ್ ಗಳು, ಸಾಫ್ಟ್ವೇರ್ ಇಂಜಿನಿಯರುಗಳಿಗೆ ಈ ರೋಗ ಅಂಟಿಕೊಂಡು ಅವರಿಂದಲೇ ಹರಡಲು ಶುರುವಾಯಿತೋ., ದಿಗ್ಭ್ರಮೆಗೆ ಒಳಗಾದರು. ಯೂರೋಪಿನ ಜನರಿಗೆ ಅಂಟಿಕೊಂಡದ್ದಕ್ಕೂ ಆಶ್ಚರ್ಯ ಪಟ್ಟರು. ಇಟಲಿ ನಲುಗಿದ್ದು ಮತ್ತೊಂದು ಆಘಾತ ನೀಡಿತು. ಇಟಲಿ ಇವರಿಗೆ ಹೇಳಿಮಾಡಿಸಿದ ಪಶ್ಚಿಮದ ಜಾಗವಾಗಿತ್ತು. ಕಳೆದ ಹಲವು ವರ್ಷಗಳಿಂದ ಭಾರತದ ಅನೇಕ ಸಿನಿಮಾ ನಟರು, ತಾರೆಯರು ತಮ್ಮ ಮದುವೆಗಳನ್ನು, ಪ್ರಸ್ತಗಳನ್ನು ಇಟಲಿಯಲ್ಲಿ ನೆರವೇರಿಸಿಕೊಂಡಿದ್ದರು.

ಅವರು ಆಘಾತಗೊಂಡಿದ್ದರು ಎನಿಸುತ್ತಿದೆ. ಹಾಗಾಗಿಯೇ ‌ನಿಧಾನಗತಿಯಲ್ಲಿ ಪ್ರತಿಕ್ರಿಯಿಸಿದ್ದು. ಅವರ ಪ್ರಮುಖ ‘ಮೇಧಾವಿ’ ಸುಬ್ರಮಣಿಯನ್ ಸ್ವಾಮಿ ಕೂಡಾ ಫೆಬ್ರವರಿ 1 ಕ್ಕೂ ಮುಂಚೆಯೇ  ಅಂತರಾಷ್ಟ್ರೀಯ ಪ್ರಯಾಣಿಕರನ್ನು ಏಕೆ ತಡೆಯಲಿಲ್ಲ ಎಂದು ಕೇಳಿದ್ದು. ಆತನ ಗಮನ ತಬ್ಲೀಕಿ ಜಮಾತಿನ ಅನುಯಾಯಿಗಳ ಕಡೆಗೇ ಇರಬಹುದು. ಆದರೆ ಫೆಬ್ರವರಿ ತಿಂಗಳಿನಿಂದಲೇ ಒಳಬಂದ ಎಲ್ಲಾ ಮೇಲ್ಜಾತಿಗಳ ದೇಸೀ ಜನರನ್ನು ಸ್ಕ್ರೀನಿಂಗ್ ಮಾಡಿದ್ದರೆ ವಾಸ್ತವದಲ್ಲಿ ಅತ್ಯುತ್ತಮ ಮುಂಜಾಗ್ರತಾ ಕ್ರಮವಾಗುತ್ತಿತ್ತು. ಏಕೆಂದರೆ ಭಾರತದಲ್ಲಿ ಮೊದಲ ಕೋವಿಡ್ ಪ್ರಕರಣ ದಾಖಲಾದದ್ದೇ ಜನವರಿ 30 ರಂದು.

ಈ ವೈರಸ್ ಏನಾದರೂ ಕೆಳಜಾತಿಯವರಿಗೆ ಮೊದಲು ವಕ್ಕರಿಸಿದ್ದರೆ, ಆಳುವ ವರ್ಗವು ವಾಡಿಕೆಯಂತೆ ಕೆಲವರನ್ನು ಉಳಿಸುವ ಕೆಲಸ ಮಾಡುತ್ತಿತ್ತು. ಆದರೆ ಇದು ಬೇರೆ. ಮೊತ್ತ ಮೊದಲ ಬಾರಿಗೆ ತನ್ನದೇ ಜನರನ್ನು ಮೈಲಿಗೆಯಂತೆ, ಮಲಿನಕಾರಕಗಳಂತೆ ನೋಡಬೇಕಾಯಿತು, ಕೆಳಜಾತಿಗಳನ್ನಲ್ಲ. ಇದು ಅವರನ್ನು ನಮ್ಮ ಊಹೆಗೂ ಮೀರಿ ಮಾನಸಿಕವಾಗಿ ಕುಗ್ಗಿಸಿದೆ ಎಂದೆನಿಸುತ್ತದೆ. ಹಾಗಾಗಿ ಅವರ ಪ್ರತಿಕ್ರಿಯೆ ಬಹಳ ನಿಧಾನವಾಯಿತು ಮತ್ತು ಬಾಧಿಸಿತು. ಮೋದಿಯ ಸರ್ಕಾರವಂತೂ ಅಮಲಿನಲ್ಲಿ ತೇಲುತ್ತಿತ್ತು. ಅದು ಹೇಗೆ ಅವರು ಚಪ್ಪಾಳೆಗಳನ್ನು ತಟ್ಟುತ್ತಾ, ತಟ್ಟೆ-ಶಂಖ-ಜಾಗಟೆಗಳನ್ನು ಬಾರಿಸಿದರೆಂದು ಗಮನಿಸಿ. ದೈವತ್ವಕ್ಕೇರಿದವರಂತೆ! ಕಳೆದ 3-4 ವರ್ಷಗಳಿಂದ ದೇಶದ ಆರ್ಥಿಕತೆ ಅಧಃಪತನ ಹೊಂದುತ್ತಿದ್ದರೂ, ಇವರು ಸೋಲಿಲ್ಲದ ಸರದಾರರಂತೆ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದರು. ಕನಿಷ್ಠ ಪಕ್ಷ ತಮ್ಮ ಭ್ರಮಾಲೋಕದಲ್ಲಿಯಾದರೂ ವಿಶ್ವದಾದ್ಯಂತ  ಹಿಂದೂವಾಗಿ ಛಾಪು ಮೂಡಿಸಿರುವ ಬಗ್ಗೆ  ಮೆರೆಯುತ್ತಿದ್ದರು.

ಜಾತಿಗಳ ವಿಭಜನೆ. ಇದು ಭಾರತದ ಮೊದಲ ಅಸಮಾನತೆ. ರಾಜ್ಯಗಳ, ಪ್ರದೇಶಗಳ, ನಗರ-ಹಳ್ಳಿ-ಮತ್ತಿತರ ಭೂಪ್ರದೇಶಗಳ ಎಲ್ಲಾ ಅಸಮಾನತೆಗಳೂ, ಹೆಚ್ಚಿನ ಮಟ್ಟಿಗೆ ಇದೇ ಅಡಿಪಾಯದ ಮೇಲೆ ಕಟ್ಟಲ್ಪಟ್ಟಿವೆ.

ಎರಡನೆಯದಾಗಿ, ಕೇರಳದಿಂದ ಬಿಹಾರದವರೆಗೆ ವಿವಿಧ ರಾಜ್ಯ ಸರಕಾರಗಳು ಹೇಗೆ ಸ್ಪಂದಿಸುತ್ತಿವೆ ಎಂಬುದನ್ನು ನೋಡಬಹುದು. ಬಿಹಾರದಲ್ಲಂತೂ ಕಛೇರಿಯಲ್ಲಿನ ಆಫೀಸರುಗಳಿಗೆ, ಪ್ರಮುಖ ಬಿಹಾರಿ ಬಾಬು ಗಳಿಗೆ ಕರೆ ಮಾಡಿದರೂ ವೈದ್ಯರು ಲಭ್ಯವಿಲ್ಲ. ಈ ಪರಿಸ್ಥಿತಿಯನ್ನು ತಂದಿಟ್ಟಿದ್ದು ವಿರೋಧ ಪಕ್ಷದಲ್ಲಿರುವ ಒಬ್ಬ ನಾಯಕ. ಆತ 35 ವರ್ಷಗಳವರೆಗೆ ವಿವಿಧ ಪಕ್ಷಗಳಲ್ಲಿ ಕೇಂದ್ರದಲ್ಲಿ ಮತ್ತು ಬಿಹಾರದ ರಾಜ್ಯ ಸರಕಾರದಲ್ಲಿದ್ದ. ಅವನಿಗೇ ಈ ಪರಿಸ್ಥಿತಿ ನಿಭಾಯಿಸಲು ಆಗದಿದ್ದರೆ ಇನ್ನಾರಿಗೂ ಸಾಧ್ಯವಿಲ್ಲ.

ಕೇರಳದಲ್ಲಿ ಎಲ್ಲರಿಗೂ ಎಲ್ಲವೂ ಸಲೀಸಾಗಿದೆ. ಹಾಗಾದರೆ ಇದು ಹೇಗೆ ಕಾಣುತ್ತದೆ? ಇದು ಕೇರಳಿಗರು ಉನ್ನತ ಜನಾಂಗವಾಗಿಯೂ, ಬಿಹಾರಿಗಳು ನೀಚ ಜನಾಂಗವಾಗಿಯೂ ಮತ್ತಿತರರು ಬೇರೆಯ ಜನಾಂಗವಾಗಿ ಕಾಣುವಂತೆ ಮಾಡಿತು. ಆದರೆ ಉನ್ನತ ಜನಾಂಗ ಎಂಬುದು ಇದೆಯೇ? ಖಂಡಿತಾ ಇರಲು ಸಾಧ್ಯವಿಲ್ಲ. ಒಂದೇ ದೇಶದೊಳಗೆ ಈ ವೈರಸ್ಸಿನಿಂದಾಗುತ್ತಿರುವ ಅನಾಹುತ ಮತ್ತು ವಿವಿಧ ರಾಜ್ಯ ಹಾಗೂ ಪ್ರದೇಶಗಳಲ್ಲಿ ಅವರು ಸ್ಪಂದಿಸುತ್ತಿರುವ ರೀತಿಯು ಕಣ್ಣಿಗೆ ರಾಚುವಂತೆ ಕಾಣುತ್ತಿವೆ. ನಾವು, ಒಂದೇ ದೇಶ ಎಂದು ಕುರುಡಾಗಿ ಯೋಚಿಸದೇ, ಅವುಗಳ ನಿರ್ದಿಷ್ಟ ಇತಿಹಾಸ, ರಾಜಕೀಯ, ಆರ್ಥಿಕತೆ ಮತ್ತು ಸಮಾಜಗಳನ್ನು ಮುಲಾಜಿಲ್ಲದೆ ವಿಮರ್ಶಿಸಬೇಕು.

ಕೆಲವು ಉದಾಹರಣೆಗಳನ್ನು ತೆಗೆದುಕೊಂಡರೆ ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ ಮತ್ತು ಒರಿಸ್ಸಾಗಳಲ್ಲಿ ಅಂತಹ ದೊಡ್ಡ ಅನಾಹುತವಾಗಿಲ್ಲ. ಆಂಧ್ರದಲ್ಲಿಯೂ ಸಹ. ಈ ಸ್ಥಳಗಳ ನೆಲಮೂಲವನ್ನು ಅರ್ಥೈಸಿಕೊಳ್ಳದೆ, ಎಲ್ಲಕ್ಕೂ ಸಾಮಾನ್ಯ ಪರಿಹಾರ ಸೂಚಿಸಿದರೆ ದುರಂತವೇ ಘಟಿಸಿಬಿಡುತ್ತದೆ.

ಆಂಧ್ರಪ್ರದೇಶದಲ್ಲಿ ಯಥೇಚ್ಛವಾದ ಸಂಪನ್ಮೂಲವಿದೆ ಅಮೆರಿಕ ಸೇರಿದಂತೆ ವಿಶ್ವದ ಹಲವೆಡೆ, ಫಿಜಿ ಇಂದ ಅಲಾಸ್ಕಾದವರೆಗೂ ಆಂಧ್ರದ ಡಾಕ್ಟರುಗಳಿದ್ದಾರೆ. ಆದರೆ ಈ ಸಂಪನ್ಮೂಲ ಬಳಸಲು ಅವರು ತಯಾರಿಲ್ಲ.

ಈ ಪ್ರಕರಣದಲ್ಲಿಯೂ ಸಹ ವೈರಸ್ ಭಾರತಕ್ಕೆ ಬಂದಿದ್ದು ಏಕಮುಖವಾಗಿ. ವಿದೇಶಗಳಿಂದ ಆಗಮಿಸಿದ ಅಂತರಾಷ್ಟ್ರೀಯ ಪ್ರಯಾಣಿಕರಿಂದ. ಹಲವಾರು ಪಶ್ಚಿಮ ದೇಶಗಳು, ಆಸ್ಟ್ರೇಲಿಯಾ, ಮಧ್ಯಪ್ರಾಚ್ಯ, ಲಂಡನ್, ನ್ಯೂಯಾರ್ಕ್, ಪ್ಯಾರಿಸ್, ವಾಷಿಂಗ್ಟನ್ ಹೀಗೆ ಹೊರಗಿನಿಂದ ಭಾರತಕ್ಕೆ ಬಂದ ಗಂಡಸರು-ಹೆಂಗಸರು, ಯುವಕ-ಯುವತಿಯರೇ ಪ್ರಥಮ ಸೋಂಕಿತರಾಗಿ ರೋಗವನ್ನು ಹರಡಿದವರು. ಅವರನ್ನು ಮೊದಲಿಗೇ ಪತ್ತೆ ಮಾಡಬಹುದಿತ್ತು. ಆದರೆ ನಾನು ಮೇಲೆ ತಿಳಿಸಿದ ಕಾರಣಗಳಿಂದಾಗಿ ಅದು ನಡೆಯಲಿಲ್ಲ.

ಕೊರೋನಾ ಚೀನಾದಲ್ಲಿ ಕಾಣಿಸಿಕೊಂಡದ್ದು ಡಿಸೆಂಬರ್ ನಲ್ಲಿ ಈಗ್ಗೆ 4-5 ತಿಂಗಳ ಹಿಂದೆ. ಭಾರತದ ಮೊದಲ ಪ್ರಕರಣ ಕಂಡದ್ದು ಜನವರಿ 30 ರಂದು, ಕೇರಳದ ಆಲಪ್ಪಿಯಲ್ಲಿ. ನಂತರ 5 ಜನ ವಿದ್ಯಾರ್ಥಿಗಳು ಕೂಡ ಪಾಸಿಟಿವ್ ಆಗಿ ಗುಣಮುಖರಾದರು. ಇದರಿಂದ ನಿರಾಳವಾದ ಕೇರಳ ಸರ್ಕಾರ, ಘೋಷಿಸಿದ ವಿಪತ್ತನ್ನು ಹಿಂಪಡೆದು ಮಾರ್ಚಿಯವರೆಗೆ ಸುಮ್ಮನಾಗಿಬಿಟ್ಟಿತು. ಈ ಮಧ್ಯೆ ಅದೆಷ್ಟು ಜನ ಬಂದರೋ ಲೆಕ್ಕಕ್ಕಿಲ್ಲ. ದೆಹಲಿ, ಮುಂಬಯಿ, ಬೆಂಗಳೂರು, ಹೈದರಾಬಾದ್, ಕೊಚ್ಚಿ ಮುಂತಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಯಾವ ಮಟ್ಟದ ಸ್ಕ್ರೀನಿಂಗ್ ನಡೆಯಿತು ಎಂಬುದು ತಿಳಿದಿಲ್ಲ.

ಹಾಗಾಗಿಯೇ ಕರೋನಾ ಆಘಾತಕಾರಿಯಾಗಿ ಅಪ್ಪಳಿಸಿದ ನಂತರ ಏನೇನಾಯಿತೋ ಅದಕ್ಕೆಲ್ಲವೂ ವಿಳಂಬವಾದ ಪ್ರತಿಕ್ರಿಯೆಗಳು ಶುರುವಾದವು. ಕೇರಳ ಕೂಡಾ ನಿಧಾನಕ್ಕೇ ಕೆಲಸ ಶುರುಮಾಡಿತು. ಈಗ ಈ ಎಲ್ಲ ನ್ಯೂನ್ಯತೆಗಳನ್ನು ಮುಚ್ಚಿಕೊಳ್ಳಲು ಹರಸಾಹಸ ಪಡುತ್ತಿರುವ ದೊಡ್ಡ ನಾಟಕಗಳಾಗುತ್ತಿವೆ. ಎಲ್ಲವನ್ನೂ ಮುಚ್ಚಿಸಲಾಗುತ್ತಿದೆ. ಎಲ್ಲರನ್ನೂ ಹಿಡಿದಿಡಲಾಗುತ್ತಿದೆ.

ಇಲಿ ಅದಾಗಲೇ ತಪ್ಪಿಸಿಕೊಂಡಿದೆ. ಒಂದು ತಿಂಗಳು ಸ್ಕ್ರೀನಿಂಗ್ ಮಾಡದ ಕಾರಣ ನಗರಗಳು, ತೋಟದ ಮನೆಗಳು, ಮದುವೆ ಸಮಾರಂಭಗಳು, ಪ್ರಭಾವಿ ರಾಜಕಾರಣಿಗಳ, ಸಿನಿತಾರೆಯರ, ಕೈಗಾರಿಕೋದ್ಯಮಿಗಳ ಪಾರ್ಟಿ ಗಳನ್ನು ದಾಟಿ ಆಚೆಗೆ ಹೋಗಿದೆ. ಊರು ಕೊಳ್ಳೆ ಹೋದ ಮೇಲೆ ಕೋಟೆ ಬಾಗಿಲು ಮುಚ್ಚಲಾಗಿದೆ.

ಇದು ಸಧ್ಯದ ಪರಿಸ್ಥಿತಿ. ಈಗೆನಿದ್ದರೂ ಸೋಂಕಿತರನ್ನು ಹೇಗೆ ಪ್ರತ್ಯೇಕಿಸುತ್ತಾರೆ ಮತ್ತು ಸೋಂಕಿಲ್ಲದವರಿಗೆ ಎಷ್ಟು ಯಶಸ್ವಿಯಾಗಿ ಸೇವೆ ಒದಗಿಸುತ್ತಾರೆಂಬುದನ್ನು ಕಾದು ನೋಡುವುದಷ್ಟೇ ಉಳಿದಿದೆ. ಅವರಿಗೆ ತಮ್ಮ ಜನರನ್ನು ಪ್ರತ್ಯೇಕಿಸುವುದೇ ಪ್ರಮುಖ ನಿರ್ಧಾರ. ತಮ್ಮ ಮಕ್ಕಳನ್ನು ಪ್ರತ್ಯೇಕಿಸಬೇಕಾದ ಮಾನಸಿಕ ಪೆಟ್ಟು. ಕೆಳಜಾತಿಯವರಿಗೆ ಸೋಂಕು ತಗುಲಬಾರದೆಂದರೆ ಈ ಎರಡೂ ಕಾರ್ಯವಿಧಾನಗಳು ಬಹಳ ಮುಖ್ಯ. ಕೆಳಜಾತಿಯವರು ಇಕ್ಕಟ್ಟಾದ ಪ್ರದೇಶಗಳಲ್ಲಿ ಒತ್ತೊತ್ತಾಗಿ ಬದುಕುತ್ತಾರೆ. ‘ಒಡಲೊಳಗಣ ಕಿಚ್ಚು’ ಎಂದು ಇದನ್ನೇ ನಾನು ಕರೆಯುವುದು. ನಗರಗಳಲ್ಲಿ ನಮಗೆ ಕೇವಲ 15-20% ಮಾತ್ರ ಬದುಕುವ ಜಾಗ ಸಿಗುತ್ತದೆ. ಮೇಲ್ಜಾತಿಗಳ ಜಾಗದಿಂದ ದೂರಕ್ಕೆ ಕೆಳಜಾತಿಗಳನ್ನು ಇರಿಸಬೇಕಾಗುತ್ತದೆ. ಆದರೆ ಇದು ಕಷ್ಟ. ಈ ಮೇಲ್ಜಾತಿಗಳ ಸೇವೆಗೆ ಕೆಳಜಾತಿಯ ಜನರೇ ಬೇಕು. ಇನ್ನೊಂದು ಅಂಶವೆಂದರೆ ನಗರಗಳಿಂದ ಹಳ್ಳಿಗಳನ್ನು ಬೇರ್ಪಡಿಸುವಿಕೆಯ ಕಠಿಣತೆ. ಕೇರಳದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ಗಡಿಗಳು ಬೇರ್ಪಡಿಸಲಾಗಷ್ಟು ಒಂದಾಗಿವೆ. ಇದನ್ನು ಕೇರಳ ಸದ್ಯಕ್ಕೆ ಮುಚ್ಚಿಟ್ಟಿದೆ. ಅದು ಅವರಿಗೆ ದೊಡ್ಡ ಸಮಸ್ಯೆ. ನಗರ ಮತ್ತು ಹಳ್ಳಿಗಳನ್ನು ಬೇರ್ಪಡಿಸಲೇಬೇಕು. ಏಕೆಂದರೆ ದೆಹಲಿಯಲ್ಲಿನ ಕೇಂದ್ರ ಸರಕಾರವು ವಲಸೆ ಕಾರ್ಮಿಕರ ಆರೈಕೆ ಮಾಡುವುದಿಲ್ಲ. ಅವರಿಗೆ ಗ್ರಾಮೀಣ ಪರಿಸರವೇ ಸುರಕ್ಷಿತ.

ಈ ಎರಡು ಸಂಗತಿಗಳನ್ನು ನಾವು ಸ್ಪಷ್ಟವಾಗಿ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಮೊದಲಿಗೆ ರೋಗ ಹರಡುತ್ತಿರುವವರು ಯಾರು? ಎರಡನೆಯದು ಈ ರೋಗ ಹರಡಿದರೆ ಹೆಚ್ಚು ತೊಂದರೆಗೊಳಗಾಗುವವರು ಯಾರು? ಸರಕಾರಕ್ಕಿರುವ ಉತ್ತಮ ಪರಿಹಾರ ಮಾರ್ಗವೆಂದರೆ ಇವೆರಡೂ ವರ್ಗಗಳನ್ನು ಬೇರ್ಪಡಿಸುವುದು.

ಅನು: ಮೇಲ್ಜಾತಿಗಳು ಇಲ್ಲಿಯವರೆಗೂ ಶುಭ್ರ ಜಾಗ, ಉನ್ನತ ನಾಗರೀಕತೆ, ಉತ್ತಮ ಸೇವೆಗಳನ್ನು ಪಡೆಯುತ್ತಾ ಬಹಳ ಎತ್ತರದಲ್ಲಿ ಬದುಕುತ್ತಿದ್ದರು. ಆದರೆ ಈ ಕಾಯಿಲೆ ಅವರ ಎಲ್ಲಾ ಭ್ರಮೆಗಳನ್ನು ತಿರುಗಾಮುರುಗಾ ಮಾಡಿದೆ. ಈ ರೋಗ ಕೆಳಜಾತಿಯವರಿಂದ, ಬಡವರಿಂದ ಹರಡುತ್ತಿದೆ ಎಂದು ಎಷ್ಟು ಬೇಗ ಉಲ್ಟಾ ಹೊಡೆಯಬಹುದು?

ಕುಫಿರ್: ಹೌದು. ಕೆಳಜಾತಿಗಳನ್ನು, ಬಡವರನ್ನು ತೆಗಳಲು ಬೇಕಾದ ಎಲ್ಲಾ ಹಳಸಲು ವ್ಯಾಖ್ಯಾನಗಳನ್ನೂ ಬಳಸುತ್ತಾರೆ. ಉದಾಹರಣೆಗೆ ಒಂದು ಅಂಕಿ ಅಂಶವನ್ನು ನೋಡೋಣ. ಭಾರತದಲ್ಲಿ 1000 ಜನಕ್ಕೆ ಒಬ್ಬ ವೈದ್ಯರ ಲಭ್ಯತೆ ಇದೆ ಎಂಬುದು. ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರಗಳಲ್ಲಿ ಒಬ್ಬರಿಗಿಂತ ಹೆಚ್ಚು ಜನ ವೈದರ ಲಭ್ಯತೆ ಇರಬಹುದು. ಆದರೆ ಇವೆಲ್ಲವೂ ವಂಚಿಸುವ ಅಂಕಿ ಅಂಶಗಳು. ಇದೊಂದು ರೀತಿಯ ಅಸಮಾನತೆ. ಏಕೆಂದರೆ ಭಾರತದಲ್ಲಿ 1000 ಜನರಿಗೆ ಒಬ್ಬ ವೈದ್ಯ ಸಿಗುವುದಿಲ್ಲ.

ಕೆಲವು ರಾಜ್ಯಗಳಲ್ಲಿ ಪಶ್ಚಿಮ ಯೂರೋಪ್ ಮತ್ತು ಸ್ಕಾಂಡಿನ್ವೇನಿಯಾ ರಾಷ್ಟ್ರಗಳ ಮಾಪನ ಮಟ್ಟಕ್ಕಿಂತಲೂ ಹೆಚ್ಚಿನ ವೈದ್ಯರುಗಳು ನಗರಗಳಲ್ಲಿ ಗುಂಪಾಗಿದ್ದಾರೆ. ನಾನು ಹೈದರಾಬಾದಿನಲ್ಲಿ ವಾಸವಿದ್ದೇನೆ. ಇಲ್ಲಿ ಪ್ರತಿ 2-3 ಕಿ.ಮೀ. ವ್ಯಾಸದ ಒಳಗೆ ನಾನು ಕಾಸ್ಮೆಟಿಕ್ ಸರ್ಜರಿ ಹೊಂದಬಹುದು, ಪ್ರನಾಳ ಶಿಶು ಪಡೆಯಬಹುದು, ಕಿಡ್ನಿ-ಯಕೃತ್ತಿನ ಕಸಿ ಮಾಡಿ‌ಸಿಕೊಳ್ಳಬಹುದು,ಕ್ಲಿಷ್ಟವಾದ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು. ಇವೆಲ್ಲ ಸೌಲಭ್ಯಗಳು ಹೆಚ್ಚೆಂದರೆ ಮೂರು ಕಿ.ಮೀ ಒಳಗೆ ಒಂದಕ್ಕಿಂತ ಹೆಚ್ಚು ಆಯ್ಕೆಯಿರುವ ಬೇಕಾದ ಆಸ್ಪತ್ರೆಯಲ್ಲಿ ಪಡೆಯಬಹುದು. ಆದರೆ ಒಮ್ಮೆ ನೀವು ಹೈದರಾಬಾದಿನಿಂದ ಹೊರಗೆ ಕಾಲಿಟ್ಟರೆ ಈ ಅನುಪಾತ ಕುಸಿಯತೊಡಗುತ್ತದೆ. ನಿಮಗೆ 1ಲಕ್ಷದಿಂದ 10ಲಕ್ಷ ಜನಕ್ಕೊಬ್ಬರು ವೈದ್ಯರು ಸಿಗುವುದೂ ಕಷ್ಟ.

ಸರ್ಕಾರವು ಇಂತಹ ದೃಷ್ಯವನ್ನು ಕಲ್ಪಿಸಿಕೊಳ್ಳುವುದೂ ಇಲ್ಲ. ಗ್ರಾಮಕ್ಕೊಬ್ಬರು ನುರಿತ ವೈದ್ಯರನ್ನು ನೇಮಿಸುವುದು ಅದರ ಆರೋಗ್ಯ ಕಾರ್ಯಕ್ರಮದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ಬಡ ಭಾರತದವಿದೆಯಲ್ಲ. ಅದು ಈ ಸಾಮ್ರಾಜ್ಯದ ಪೂರ್ವಿಕರ, ರಾಷ್ಟ್ರೀಯ ಚಳುವಳಿಯ ‘ಕಲ್ಪಿತ ಸಮುದಾಯದ’ ಭಾಗವಾಗಿಯೇ ಇರಲಿಲ್ಲ.

ತೆಲಂಗಾಣದ ಕೆಲವು ಹಳ್ಳಿಗಳಲ್ಲಿ 300-400 ಜನ ಇರಬಹುದು. ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ಗಳಲ್ಲಿ ಇದಕ್ಕಿಂತ ಹೆಚ್ಚು ಜನಸಂಖ್ಯಾ ಸರಾಸರಿ ಇದೆ. ಆದರೆ ಸರ್ಕಾರಕ್ಕೆ ಎಂದೂ ಇವರ ಯೋಚನೆ ಬಂದಿರಲಿಲ್ಲ. ಅದಕ್ಕೆ ನಾನು ಆಗಲೇ ಹೇಳಿದ್ದು. ಅವರು ರಚನಾತ್ಮಕವಾಗಿ 15% ಜನರಿಂದಾಚೆಗೆ ಯೋಚಿಸಲೇ ಇಲ್ಲ ಎಂದು. ಹಾಗಾಗಿ ಯಾವುದಾದರೂ ಆರೋಗ್ಯ ಸಂಬಂಧಿ ತುರ್ತುಸ್ಥಿತಿ ನಿರ್ಮಾಣವಾದರೆ, ಅದು ಈ ಬಹುಜನರನ್ನು ಕೆಲ ವರ್ಷಗಳ ವರೆಗೆ ಕಾಡಬಹುದು. ಕೆಲವೊಮ್ಮೆ ಜೀವನ ಪರ್ಯಂತ ಅವರನ್ನು ಸಂಕಷ್ಟಕ್ಕೀಡು ಮಾಡಬಹುದು.

ಆದರೆ ಮೇಲಿನ 15-20% ಜನರ ವೈದ್ಯಕೀಯ ಖರ್ಚು ಸಹ 80-90% ನಷ್ಟು ಖಾಸಗಿಯಾಗಿಯೇ ವೆಚ್ಚವಾಗುತ್ತದೆ. ಅದನ್ನು ಅವರೇ ಭರಿಸುತ್ತಾರೆ. ಒಂದಲ್ಲ ಒಂದು ರೀತಿಯಲ್ಲಿ ವಿಮೆ ಹೊಂದಿರುತ್ತಾರೆ. ಯೂರೋಪ್, ಕೆನಡಾ, ಆಸ್ಟ್ರೇಲಿಯಾ ಮತ್ತು ತಕ್ಕ ಮಟ್ಟಿಗೆ ಅಮೆರಿಕೆಯಲ್ಲಿ ಸ್ವಾಸ್ಥ್ಯ ಪಾಲನೆಗೆ ಸರ್ಕಾರಗಳ ಯೋಜನೆಗಳಿವೆ.ಆದರೆ ಅಷ್ಟೇ ಹಣಕ್ಕೆ ಭಾರತದಲ್ಲಿ ಏನೂ ಸಿಗುವುದಿಲ್ಲ. ಒಂದು ದಿನದ ಆಸ್ಪತ್ರೆಯ ಖರ್ಚು 1 ಲಕ್ಷವೂ ಆಗಬಹುದು,10 ಲಕ್ಷವೂ ಆಗಬಹುದು. ನಿಮಗೆ ಗೊತ್ತಿಲ್ಲ. ಒಬ್ಬ ರೋಗಿಗೆ ಯಾವ ಚಿಕಿತ್ಸೆ ನೀಡಬೇಕು, ಯಾವ ಔಷಧಿ ಕೊಡಬೇಕು, ಯಾವ ಶಸ್ತ್ರಚಿಕಿತ್ಸೆಗೆ ಎಷ್ಟು ಹಣ ಪಾವತಿಸಬೇಕು ಎಂಬ ನಿಯಮಗಳಿಲ್ಲ. ನಮ್ಮಲ್ಲಿ 1000ಜನರಿಗೆ ಎಷ್ಟು ವೈದ್ಯರ ಲಭ್ಯತೆ ಇದೆ ಎಂದು ವಿಶ್ವದ ಮಾನದಂಡಗಳಿಗೆ ಹೋಲಿಸಿಕೊಳ್ಳುವುದೇ ಹಾಸ್ಯಾಸ್ಪದ. ದೇಶದ 50-70% ವೈದ್ಯರುಗಳು ಹೈದರಾಬಾದ್, ಮುಂಬಯಿ, ಬೆಂಗಳೂರು, ದೆಹಲಿ, ಅಹಮದಾಬಾದ್,ಇಂದೋರ್, ಚಂಡೀಗಢ ಮುಂತಾದ ನಗರಗಳಲ್ಲಿ ನೆಲೆಸಿದ್ದಾರೆ. ಅಲ್ಲಿ 600000 ಹಳ್ಳಿಗಳಿಗೆ ಜಾಗವೆಲ್ಲಿದೆ?

ಅಮೆರಿಕೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ವೈದ್ಯರು ಅಲ್ಲಿನ ಪರಿಸ್ಥಿತಿ ಬಿಗಡಾಯಿಸಿದ್ದು ಇಲ್ಲಿ ಎಚ್ಚರ ವಹಿಸುವಂತೆ, ಅವಲತ್ತುಕೊಂಡಿರುವುದನ್ನು ವಿಡಿಯೋಗಳನ್ನು ನೋಡಿದ್ದೇನೆ. ಬಹಳಷ್ಟು ಜನರನ್ನು ನಿಭಾಯಿಸುವುದು ಕಷ್ಟ. ಒಂದು ಹಂತ ದಾಟಿದ ಮೇಲೆ ಅಪಾಯಕಾರಿಯಾಗುವ ಸಾಧ್ಯತೆಯೇ ಹೆಚ್ಚು. ಭಾರತದ ಮಟ್ಟಿಗೆ ನಾವು ಎಲ್ಲ ಚೌಕಟ್ಟುಗಳ ಆಚೆಗೆ ಬದುಕುತ್ತಿದ್ದೇವೆ.

ಭಾರತದ್ದು ಕೇವಲ ಹಣದ ಪ್ರಶ್ನೆಯಲ್ಲ. ಸಂಘಟಿತ ವಲಯಕ್ಕೆ ಸರಕಾರ ಒಂದಷ್ಟು ವಿಮೆ ಒದಗಿಸುತ್ತದೆ,ಕೆಲವು ಕಂಪೆನಿಗಳೂ ಒದಗಿಸುತ್ತವೆ. ಆದರೆ ಅವೆಲ್ಲಾ ನಿಷ್ಪ್ರಯೋಜಕ. ಈ ರೋಗಕ್ಕೆ ದುಬಾರಿ ವೆಚ್ಚದ ಪರಿಕರಗಳ ಅವಶ್ಯಕತೆ ಇಲ್ಲ. ವೆಂಟಿಲೇಟರ್ ಗಳು ಮತ್ತು ಪ್ರತ್ಯೇಕ ವಾರ್ಡುಗಳು ಸಾಕು. ಆದರೆ ಇವೂ ಕೈಗೆಟಕುವ ಪರಿಸ್ಥಿತಿ ಇಲ್ಲ. ತೆಲಂಗಾಣದ ಮುಖ್ಯಮಂತ್ರಿಗಳ ಪ್ರಕಾರ ಹೈದರಾಬಾದಿನಲ್ಲಿ ಕೇವಲ 650 ವೆಂಟಿಲೇಟರ್ ಗಳಿವೆ. ಒಂದು ವಾರದ ಅಂತರದಲ್ಲಿ ಆಗಲೇ 50ಕ್ಕೂ ಹೆಚ್ಚು ಜನರನ್ನು. ಕ್ವಾರಂಟೈನ್ ಮಾಡಲಾಗಿದೆ. ಅದರಿಂದ 3ಕಿಮೀ ಅಂತರದಲ್ಲಿರುವ ಜ್ವರದ ಆಸ್ಪತ್ರೆಯಲ್ಲಿ ಯಾವುದೇ ವೆಂಟಿಲೇಟರ್ ಗಳಿಲ್ಲ. ಅಂದರೆ, ಕೆಲವು ಸಾವಿರ ಜನರಿಗೇನಾದರೂ ಕೊರೋನಾ ಹರಡಿದರೆ, ಇಡಿಯ ತೆಲಂಗಾಣವನ್ನು ನಿಭಾಯಿಸುವುದಿರಲಿ ಕೇವಲ ಹೈದರಾಬಾದ್ ನಗರವನ್ನು ನಿಭಾಯಿಸುವುದು ಸಾಧ್ಯವಾಗುವುದಿಲ್ಲ. ಇದೇ ಮಾನದಂಡಗಳು ಅಕ್ಕ ಪಕ್ಕದ ರಾಜ್ಯಗಳಿಗೂ ಅನ್ವಯಿಸುತ್ತದೆ. ನಾವು ಇಂತಹ ಪರಿಸ್ಥಿತಿಯನ್ನು ಎದುರಿಸುವ ಆಲೋಚನೆ ಮಾಡುವುದೂ ಮೂರ್ಖತನ. ಪ್ರಾಮಾಣಿಕವಾಗಿ ಹೇಳುವುದಾದರೆ ರೋಗವನ್ನು ಹರಡುತ್ತಿರುವವರನ್ನು ಗುರುತಿಸಿ ಪ್ರತ್ಯೇಕಿಸುವುದು ಮಾತ್ರ ಏಕೈಕ ಮಾರ್ಗ. ಸಾವಿರಾರು ಜನರು ಸೇರಿಸಿ ನಡೆಸುವ ಜಾತ್ರೆ, ಮದುವೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದು ಮಾತ್ರ ಈ ಹೊತ್ತಿನ ಪರಿಹಾರ.

ವಲಸೆ ಕಾರ್ಮಿಕರ ವಿಷಯದಲ್ಲಿ ನಿರ್ಬಂಧ ಹೇರಿರುವುದು ನನ್ನ ಪ್ರಕಾರ, ಸರಕಾರವು ಕಂಡುಕೊಂಡ ಮೊಂಡು ಪರಿಹಾರ. ಮೊದಲೇ ತಿಳಿಸಿದಂತೆ ಸೋಂಕಿತರಾದ ತಮ್ಮ ಮೇಲ್ಜಾತಿಗಳ ಜನರನ್ನು ಆಸ್ಪತ್ರೆಗೆ ಸೇರಿಸುತ್ತಿರುವುದು ಅವರಿಗೆ ಆಘಾತ ತಂದಿದೆ. ಅವರು ಬಹುಜನರ ಬಗ್ಗೆ ಯೋಚಿಸಿಯೇ ಇಲ್ಲ. ಯೋಚಿಸಿದ್ದರೆ ಇನ್ನಷ್ಟು ಬುದ್ಧಿವಂತಿಕೆ ಯಿಂದ ಪರಿಸ್ಥಿತಿಯನ್ನು ನಿಭಾಯಿಸಬಹುದಿತ್ತು. ಈಗ ಮಾಡುತ್ತಿರುವಂತೆ ಈ ಬಹುಸಂಖ್ಯಾತರಿಗೆ ಒಂದಷ್ಟು ಹಣ, ಪಡಿತರ ವರ್ಗಾವಣೆಯನ್ನು ಮಾಡಬಹುದು ಎಂದು ಚಿಂತಿಸಿದ್ದಾರೆ. ಈ ಬಹುಸಂಖ್ಯಾತರು ಎಂದಿಗೂ ಸರ್ಕಾರದ ರೆಡಾರಿನಲ್ಲಿ ಇರಲಿಲ್ಲ. ಈಗ ಲಾಕ್ ಡೌನ್ ಆದಮೇಲೆ ಮಾತ್ರ ಅವರು ಬಹುಜನರ ಬಗ್ಗೆ ಚಿಂತಿ‌ಸಿರುವುದು.

ಅನುವಾದ : ಹೇಮಂತ್ ಎಲ್

ಪ್ರತಿಕ್ರಿಯಿಸಿ