ಅಮೇರಿಕಾ ದೇಶದ ಅನಿವಾಸಿ ಭಾರತೀಯ ಸುಕೇತು ಮೆಹ್ತಾರ ಎರಡನೆಯ ಪುಸ್ತಕ “This land is our land: an immigrant’s manifesto” ಪ್ರಸ್ತುತ ವಿಶ್ವಾದ್ಯಂತ ಬಹು ಚರ್ಚಿತ ವಿಷಯವಾಗಿರುವ ವಲಸಿಗರ ಸಮಸ್ಯೆಯ ಮೇಲೆ ಕೇಂದ್ರಿತವಾಗಿದೆ. ಸ್ವತಃ ವಲಸಿಗ ಕುಟುಂಬಕ್ಕೆ ಸೇರಿದ ಮೆಹ್ತಾ, ತಮ್ಮ ವೈಯಕ್ತಿಕ ಅನುಭವಗಳನ್ನು ಬಳಸಿಕೊಂಡು, ಹಾಗೆಯೇ ಪ್ರಸ್ತುತ ”ಅನಿಯಂತ್ರಿತ ವಲಸೆ”ಯ ಸಮಸ್ಯೆಯ ಕೇಂದ್ರವೆನ್ನಬಹುದಾದ ಅಮೇರಿಕಾ-ಮೆಕ್ಸಿಕೋ ಗಡಿಭಾಗಕ್ಕೆ ಭೇಟಿನೀಡಿ, ಆಫ್ರಿಕಾ ಮತ್ತು ಯುರೋಪ್ ದೇಶಗಳನಡುವಿನ ವಲಸೆಯ ಸಮಸ್ಯೆಯಿರುವ ಪ್ರದೇಶಗಳಿಗೆ ಭೇಟಿ ನೀಡಿ, ಭಾರತ- ಪಾಕಿಸ್ತಾನ ಭಾರತ-ಬಂಗಾಳದೇಶಗಳ ಉದಾಹರಣೆಗಳೊಂದಿಗೆ, ತಮ್ಮ ಹುಟ್ಟೂರುಗಳಲ್ಲಿ ಬದುಕು ಕಳೆದುಕೊಂಡು ಗುಳೇ ಹೊರಟ ನಿರ್ಭಾಗ್ಯ ಜನರ ಬದುಕಿನ ಕಥಾನಕಗಳನ್ನು ಆಪ್ತವಾಗಿ ಕಟ್ಟಿಕೊಟ್ಟು, “ಅಕ್ರಮ ವಲಸೆ “ ಮತ್ತು “ಸಕ್ರಮ ವಲಸೆ “ಎಂಬುದು ಎಂತಹ ಕಣ್ ಕಟ್ಟು ಎನ್ನುವುದನ್ನು ಸ್ಪಷ್ಟವಾಗಿ ತೋರಿಸಿಕೊಡುತ್ತಾರೆ. ಇಂದಿನ ವಲಸೆಯ ಸಮಸ್ಯೆ ಹೇಗೆ ವಸಾಹತುಶಾಹಿ ವ್ಯವಸ್ಥೆಯ, ಯುದ್ಧಗ್ರಸ್ತ ಪಶ್ಚಿಮ ದೇಶಗಳ , ಬಂಡವಾಳಶಾಹಿ ವ್ಯವಸ್ಥೆಯ ಬಳುವಳಿ, ಮತ್ತು ಇಂದಿನ ಬಲಪಂಥೀಯ ರಾಜಕಾರಣ ಹೇಗೆ ಜನಪ್ರಿಯ ಅಭಿಪ್ರಾಯಗಳನ್ನು ಮಾಧ್ಯಮಗಳ ಮೂಲಕ ಅಧಿಕಾರದ ಯಂತ್ರಗಳ ಮೂಲಕ ರೂಪಿಸಿ, ಜನರ ಭಾವುಕತೆಯನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡ ಬಗೆಯನ್ನು ತಮ್ಮ ಸಂಶೋಧನಾ ವರದಿಗಳಿಂದ ನಮ್ಮ ಮುಂದೆ ಮಂಡಿಸುತ್ತಾರೆ. ಈ ಪುಸ್ತಕದ ಹದಿನಾರನೇ ಅಧ್ಯಾಯ “jobs, crime and culture: threats that aren’t” ವನ್ನು ಲೇಖಕಿ ಪಲ್ಲವಿ ಇಡೂರು ಕನ್ನಡಕ್ಕೆ ಅನುವಾದಿಸಿದ್ದಾರೆ.
ವಲಸೆಯ ವಿರುದ್ಧವಾದ ವಾದಗಳು ಯಾವಾಗಲೂ ಉದ್ಯೋಗ, ಅಪರಾಧ, ಮತ್ತು ಸಂಸ್ಕೃತಿಗಳ ಕುರಿತೇ ಇರುತ್ತವೆ. ಅಂದರೆ, ವಲಸೆ ಬಂದವರು ಮೂಲನಿವಾಸಿಗಳ ಉದ್ಯೋಗವನ್ನು ಕಸಿದು ಕೊಳ್ಳುತ್ತಾರೆ, ವಲಸಿಗರಿಂದ ಅಪರಾಧಗಳು ಹೆಚ್ಚುತ್ತವೆ ಅಥವಾ ವಲಸಿಗರಿಂದ ನಮ್ಮ ಸಂಸ್ಕೃತಿ ಹಾಳಾಗುತ್ತಿದೆ ಅನ್ನುವ ರೀತಿಯ ವಾದಗಳು.
ಇದರಲ್ಲಿ ಮೊದಲೆರಡು ವಾದಗಳು ತಾರ್ಕಿಕವಾಗಿ ತಪ್ಪು. ವಲಸೆ ಹೋದವರು ಮೂಲನಿವಾಸಿಗಳ ಜೊತೆ ಸ್ಪರ್ಧಿಸುವುದಕ್ಕಿಂತ ಮೊದಲು ತಮಗಿಂತ ಮೊದಲು ವಲಸೆ ಹೋದ ತಮ್ಮದೇ ಜನರೊಂದಿಗೆ ಸ್ಪರ್ಧೆಗೆ ನಿಲ್ಲುತ್ತಾರೆ. ಆದರೆ ಇದರಿಂದ ಮೊದಲು ವಲಸೆ ಹೋದ ಜನರೇನು ಬೇಸರಿಸಿಕೊಳ್ಳುವುದಿಲ್ಲ ಕಾರಣವಿಷ್ಟೇ, ಆಮೇಲೆ ಬಂದವರಲ್ಲಿ ಅನೇಕರು ಅವರಿಗೆ ಒಂದಿಲ್ಲೊಂದು ರೀತಿಯಲ್ಲಿ ಸಂಬಂಧಪಟ್ಟವರೇ ಆಗಿರುತ್ತಾರೆ. ಒಂದುವೇಳೆ ಉದ್ಯೋಗಕ್ಕೆ ಸ್ಪರ್ಧೆಯೊಡ್ಡಿದರೂ ಅವರ ದುಡಿಮೆಯಲ್ಲಿ ಜಾಸ್ತಿಯೇನು ವ್ಯತ್ಯಾಸವಾಗಲಾರದು.
2006ರಲ್ಲಿ ಅಂದಿನ ಮೇಯರ್ ಆಗಿದ್ದ ರಿಪಬ್ಲಿಕನ್ ಪಕ್ಷದ ಬ್ಲೂಮ್ ಬರ್ಗ್, “ನ್ಯೂಯಾರ್ಕ್ ನಲ್ಲಿ ಅರ್ಧ ಮಿಲಿಯನ್ ನಷ್ಟು ದಾಖಲೆಗಳಿಲ್ಲದ ವಲಸಿಗರು ನೆಲೆಸಿದ್ದಾರೆ. ನಾವೆಲ್ಲರೂ ಪ್ರಾಮಾಣಿಕತೆಯಿಂದ ಒಪ್ಪಿಕೊಳ್ಳಬೇಕಾದದ್ದು, ಅವರುಗಳು ನಮ್ಮ ದೇಶಕ್ಕೆ ಬರುವುದು ಒಳ್ಳೆಯ ಕಾರಣಕ್ಕೆ. ಅವರಿಗೊಂದು ಒಳ್ಳೆಯ ಜೀವನ ಬೇಕಿರುತ್ತದೆ, ಮತ್ತು ಅವರ ಕುಟುಂಬಕ್ಕೂ. ನಮ್ಮ ವ್ಯವಹಾರಗಳಿಗೂ ಅವರ ಅಗತ್ಯವಿದೆ. ಅವರು ಕಾನೂನನ್ನು ಧಿಕ್ಕರಿಸಿ ಅಕ್ರಮವಾಗಿ ದೇಶದೊಳಗೆ ನುಸುಳಿ ಅಕ್ರಮವಾಗಿ ಇಲ್ಲಿ ಬದುಕುತ್ತಿರುತ್ತಾರೆ. ನಾವೂ ಅವರಿಗೆ ಉದ್ಯೋಗ ಕೊಟ್ಟು ಕಾನೂನು ಮುರಿದಿರುತ್ತೇವೆ. ಅವರಿಲ್ಲದೇ ಹೋದರೆ ನಮ್ಮ ನಗರದ ಆರ್ಥಿಕತೆ ಮುದುಡುತ್ತದೆ. ಅವರನ್ನು ಹೊರಗೆ ಕಳುಹಿಸಿದರೆ ಆರ್ಥಿಕತೆ ಮುಗ್ಗರಿಸಬಹುದು. ಇದು ಬರೀ ನ್ಯೂಯಾರ್ಕ್ ನಗರದ್ದಲ್ಲ ಬದಲಿಗೆ ಇಡೀ ದೇಶವನ್ನು ಗಣನೆಗೆ ತೆಗೆದುಕೊಂಡರೂ ಸತ್ಯ” ಎನ್ನುವ ಮಾತನ್ನು ಹೇಳಿದ್ದರು.
ತನ್ನ ಬಿಲಿಯನ್ ಡಾಲರ್ ನ ವ್ಯವಹಾರದಿಂದ ಸ್ವತಃ ಉದ್ಯಮಿಯಾಗಿದ್ದ ಆತನ ಪ್ರಕಾರ “ಬೇರೆ ದೇಶಗಳು ಅಮೆರಿಕಾದ ನೀತಿಗೆ ವಿರುದ್ಧವಾದ ನೀತಿಯನ್ನು ಪಾಲಿಸಿ ಬೇಗನೆ ಬೆಳೆಯುತ್ತಿದೆ. ಅಮೆರಿಕಾದಲ್ಲೀಗ ಎರಡನೇ ಮಹಾಯುದ್ಧದ ಸಮಯದಲ್ಲಿ ಜನಿಸಿದವರೆಲ್ಲ ನಿವೃತ್ತರಾಗುತ್ತಿದ್ದಾರೆ, ಇಲ್ಲಿ ಹುಟ್ಟಿನ ಪ್ರಮಾಣ ಕಡಿಮೆಯಾಗುತ್ತಿದೆ, ಕೆಲಸಕ್ಕೆ ಯುವಕರ ಸಂಖ್ಯೆಯೇ ಇಳಿಮುಖವಾಗಿದೆ. ಇದರಿಂದ ನಿವೃತ್ತರಾದವರ ಪಿಂಚಣಿ ಪಾವತಿಸಲು ಸಾಧ್ಯವಾಗುವಷ್ಟೂ ಯುವಕರ ಸಂಖ್ಯೆಯಿಲ್ಲ. ಅರ್ಥಶಾಸ್ತ್ರವು ಬಹಳ ಸುಲಭ, ನಮಗಿಲ್ಲಿ ಇರುವುದಕ್ಕಿಂತ ಜಾಸ್ತಿ ಕೆಲಸಗಾರರು ಬೇಕು.”
ಅವರು ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ಅದಾಗಲೇ ಅಮೆರಿಕಾದಲ್ಲಿರುವ ವಲಸೆ ಕಾರ್ಮಿಕರನ್ನು ಕಾನೂನುಬದ್ಧಗೊಳಿಸುವುದನ್ನು ಬೆಂಬಲಿಸುತ್ತಿದ್ದರು. “ಇದಕ್ಕೆಲ್ಲ ಒಂದೇ ಒಂದು ಪರಿಹಾರವೆಂದರೆ, ಈ ನೆಲದ ಇತಿಹಾಸವನ್ನು ಗೌರವಿಸುವುದು ಮತ್ತು ವಲಸಿಗರಿಗೆ ಕಾನೂನಾತ್ಮಕ ಮಾನ್ಯತೆ ಕೊಟ್ಟು ಅವರ ಕುಟುಂಬವನ್ನು ಜೊತೆಯಿರುವಂತೆ ಮಾಡುವುದು. ಇದು ನೈತಿಕ ವಾದ. ದಶಕಗಳಿಂದ ಒಕ್ಕೂಟ ಸರಕಾರ ವಲಸಿಗರನ್ನು ಕೆಲಸಕ್ಕಾಗಿ ಬರಮಾಡಿಕೊಂಡಿದೆ, ಮೂರನೇ ಎರಡು ಭಾಗದಷ್ಟು ದಾಖಲೆಗಳಿಲ್ಲದ ವಲಸೆ ಕಾರ್ಮಿಕರಿಂದ ಸಂಗ್ರಹಿಸಲಾದ ಆದಾಯ ಮತ್ತು ಸಾಮಾಜಿಕ ಭದ್ರತೆಯ ತೆರಿಗೆಯು ದೇಶಕ್ಕೆ ಆದಾಯವಾಗಿದೆ ಮತ್ತವರುಗಳು ಈ ದೇಶಕ್ಕಾಗಿ ಕೊಟ್ಟಿದ್ದಾಗಿದೆ.”
ಆದರೆ ವಾತಾವರಣದ ಬದಲಾವಣೆಯ ಕುರಿತು ಸಂದೇಹಗಳಿರುವ ಹಾಗೆ ವಲಸೆಯ ಕುರಿತೂ ಇದೆ. 99ಶೇ. ಆರ್ಥಶಾಸ್ತ್ರಜ್ಞರು ವಲಸೆಯನ್ನು ಆರ್ಥಿಕ ದೃಷ್ಟಿಕೋನದಿಂದ ಬೆಂಬಲಿಸುತ್ತಾರಾದರೂ ವಿರೋಧಿಸುವವರೂ ಇದ್ದಾರೆ. ಜಾರ್ಜ್ ಬೋರ್ಜಸ್ ಎನ್ನುವ ಹಾರ್ವರ್ಡ್ ಅರ್ಥಶಾಸ್ತ್ರಜ್ಞರೊಬ್ಬರು ಅಂತಹ ಗಂಭೀರವಾದ ಕಾರಣಗಳನ್ನು ಕೊಟ್ಟು ವಿರೋಧಿಸಿಲ್ಲವಾದರೂ ವಲಸೆಯನ್ನು ವಿರೋಧಿಸುವವರಲ್ಲಿ ಇವರೂ ಒಬ್ಬರು. ಅವರ ಪ್ರಕಾರ “ಒಟ್ಟಾರೆ ಆರ್ಥಿಕತೆಗೆ ವಲಸಿಗರ ಕೊಡುಗೆಯೂ ಇದೆಯಾದರೂ ಮೂಲನಿವಾಸಿಗಳಿಗೆ ಅದರಿಂದಾಗುವ ನಿಜವಾದ ಲಾಭವು ಬಹಳ ಚಿಕ್ಕದು. ಅದು 1ಶೇ. ವಾರ್ಷಿಕ ಜಿಡಿಪಿಯ ಹತ್ತನೇ ಎರಡು ಭಾಗದಷ್ಟು ಅಷ್ಟೇ. ಅಮೆರಿಕಾದ ಮೂಲನಿವಾಸಿಗಳಿಗೆ ವಲಸಿಗರ ಆದಾಯದಿಂದ ಲಾಭವಾಗುತ್ತದೆ ಎನ್ನುವುದಕ್ಕೆ ಅರ್ಥಶಾಸ್ತ್ರಜ್ಞರು ನೀಡುತ್ತಿರುವುದು ಬಹಳ ಸಣ್ಣ ದಾಖಲೆಗಳು ಅಷ್ಟೇ.”
ಅಷ್ಟೇ ಅಲ್ಲದೆ ವಲಸಿಗರಿಂದ ಮೂಲನಿವಾಸಿಗಳಿಗೆ ಬಹಳಷ್ಟು ಹಾನಿಯಾಗಿದೆ ಮತ್ತು ಇನ್ನೂ ಹಾನಿಯನ್ನು ತಡೆದುಕೊಳ್ಳಲು ಮೂಲನಿವಾಸಿಗಳು ಶಕ್ತರಾಗಿಲ್ಲ. ವಲಸಿಗರಿಂದ ಅಮೆರಿಕಾದಲ್ಲಿ ಹೈಸ್ಕೂಲಿಗೇ ಶಿಕ್ಷಣ ಮೊಟಕುಗೊಳಿಸಿದ ಮೂಲನಿವಾಸಿಗಳ ದಿನಗೂಲಿಯಲ್ಲಿ 3ರಿಂದ 5 ಶೇ. ದಷ್ಟು ಕಡಿತವಾಗಿದೆ ಅಂದರೆ ವರ್ಷಕ್ಕೆ ಸುಮಾರು 1800 ಡಾಲರ್ ನಷ್ಟು. ಬಹಳಷ್ಟು ಜನರಿಗೆ 1800ಡಾಲರ್ ಎನ್ನುವುದು ಬಹಳ ದೊಡ್ಡ ಮೊತ್ತವೂ ಹೌದು ಅನ್ನುವುದು ಅವರ ಮುಂದುವರಿದ ವಾದ.
2015ರಲ್ಲಿ ಇದೇ ಬೋರ್ಜಸ್ ಪ್ರಕಟಿಸಿದ “ಮೇರಿಲಿಟೋಸ್” ಅಧ್ಯಯನದ ಮಾಹಿತಿಯ ಪ್ರಕಾರ ಕ್ಯೂಬಾದಲ್ಲಿ ಫಿಡಲ್ ಕ್ಯಾಸ್ಟ್ರೊ ಜೈಲಿನಲ್ಲಿದ್ದ 1,25,000 ಮಂದಿಯನ್ನು ಬಿಡುಗಡೆಗೊಳಿಸಿದಾಗ ಹಡಗಿನಲ್ಲಿ ಅಮೆರಿಕಾದ ಫ್ಲೋರಿಡಾಗೆ ಕಳುಹಿಸಿದ್ದರಿಂದ ಈ ಹೈಸ್ಕೂಲಿಗೇ ಶಿಕ್ಷಣವನ್ನು ಮೊಟಕುಗೊಳಿಸಿದವರ ದಿನಗೂಲಿಯು 10ರಿಂದ 30ಶೇ. ದಷ್ಟು ಕಡಿತಗೊಂಡಿತು. ಇದೇ ಅಧ್ಯಯನವನ್ನು ಟ್ರಂಪ್ ನ ಮುಖ್ಯ ಸಲಹೆಗಾರ ಸ್ಟೀಫನ್ ವಲಸೆ ನಿರ್ಬಂಧವನ್ನು ಬೆಂಬಲಿಸಲು ಉಲ್ಲೇಖಿಸಿರುವುದು.
ಆದರೆ ಅದರ ನಂತರದ ಅಧ್ಯಯನಗಳು ಸಾಬೀತುಪಡಿಸಿದ್ದೇನೆಂದರೆ ಬೋರ್ಜಸ್ ನ ಅಧ್ಯಯನವು ಕನಿಷ್ಟ ಮಟ್ಟದ, ಬಹಳಷ್ಟು ನ್ಯೂನತೆಗಳಿಂದ ಕೂಡಿದೆ ಹಾಗೂ ಆತ ತನ್ನ ಅಧ್ಯಯನಕ್ಕೆ ಬಳಸಿಕೊಂಡಿದ್ದು ವಾರ್ಷಿಕ ಕೇವಲ 17 ರಿಂದ 25 ತನ್ನ ಕಲ್ಪನೆಗೆ ಪೂರಕವಾದಂತಹ ವ್ಯಕ್ತಿಗಳನ್ನು ಎನ್ನುವುದು. ಬೋರ್ಜಸ್ ಅದರಲ್ಲಿ 91ಶೇ. ಕನಿಷ್ಟ ತಾಂತ್ರಿಕ ತರಬೇತಿ ಹೊಂದಿದ ಮಿಯಾಮಿಯ ಸ್ಪಾನಿಷ್ ಮಾತನಾಡುವ ವಲಸಿಗರನ್ನು, ಮಹಿಳೆಯರು ಮತ್ತು 25 ಮತ್ತು 59 ವರ್ಷದ ನಡುವಿನ ವ್ಯಕ್ತಿಗಳನ್ನು ಸೇರಿಸಲೇ ಇಲ್ಲ. ಯುಸಿ ಬರ್ಕಲೀ ಅರ್ಥಶಾಸ್ತ್ರಜ್ಞರಾದ ಜಿಯೊವನ್ನಿ ಪೆರಿ ಮತ್ತು ವಸಿಲ್ ಯಸನೋವ್ ಪ್ರಕಾರ ಹೊಸ ವಲಸಿಗರಿಂದ ದೇಸಿ ಮಾರುಕಟ್ಟೆಯ ಸ್ಥಳೀಯ ಉದ್ಯೋಗಗಳಲ್ಲಿ ಬಹಳಷ್ಟು ಧನಾತ್ಮಕ ಬೆಳವಣಿಗೆಗಳಾಗಿವೆ. ಏಕೆಂದರೆ ಅವರುಗಳು ಸೂಪರ್ ಮಾರ್ಕೆಟ್ ನಿಂದ ಹಿಡಿದು ಕಾರ್ ಸರ್ವೀಸಿಂಗ್ ತನಕ ಎಲ್ಲ ಕ್ಷೇತ್ರಗಳಲ್ಲೂ ಬೇಡಿಕೆ ಸೃಷ್ಟಿಯಾಗಿದೆ.
ವಲಸಿಗರು ಹಾಗಾದರೆ ನಿಜವಾಗಲೂ ಮೂಲನಿವಾಸಿಗಳ ಉದ್ಯೋಗವನ್ನು ಕಸಿದುಕೊಳ್ಳುತ್ತಾರಾ? ವರ್ಲ್ಡ್ ಬ್ಯಾಂಕ್ ಡೆವಲಪ್ ಮೆಂಟ್ ನ ಮುಖ್ಯ ಅರ್ಥಶಾಸ್ತ್ರಜ್ಞ ಕಾಗ್ಲರ್ ಓಜನ್ ಅವರ ಪ್ರಕಾರ ಖಂಡಿತವಾಗಿಯೂ ಇಲ್ಲ.ಅವರ ಪ್ರಕಾರ ವಲಸಿಗರು ಸಾಮಾನ್ಯವಾಗಿ ಮೂಲನಿವಾಸಿಗಳು ಮಾಡಲೊಪ್ಪದ ಅಥವಾ ಮೂಲ ನಿವಾಸಿಗಳಿಂದ ಭರ್ತಿಯಾಗದೇ ಉಳಿದ ಉದ್ಯೋಗಗಳನ್ನು ಒಪ್ಪಿಕೊಳ್ಳುತ್ತಾರೆ. ಅದೂ ಅಲ್ಲದೆ ತರಬೇತಿ ಹೊಂದಿಲ್ಲದ ವಲಸಿಗರಿಂದ ಮೂಲನಿವಾಸಿಗಳ ಭತ್ಯೆಯಲ್ಲೂ ಯಾವುದೇ ವ್ಯತ್ಯಾಸವಾಗಲಾರದು. ನಿಮ್ಮೊಡನೆ ಯಾರಾದರೂ ವಲಸಿಗರು ಮಕ್ಕಳನ್ನು ನೋಡಿಕೊಳ್ಳಲು ಆಯಾ ಆಗಿ ಇದ್ದರೆ ನೀವು ಮನೆಯಲ್ಲಿದ್ದು ಮಕ್ಕಳನ್ನು ನೋಡಿಕೊಳ್ಳುವ ಚಿಂತೆಯಿಲ್ಲದೆ ಡಾಕ್ಟರ್ ರೈಟರ್ ಅಥವಾ ಎಂಜಿನಿಯರ್ ಆಗಿ ಕೆಲಸಕ್ಕೆ ಹೋಗಿ ಬರಬಹುದು.
ಮಿಶೆಲ್ ಕ್ಲೆಮನ್ಸ್ ಎನ್ನುವ ಮತ್ತೊಬ್ಬ ಎಕನಾಮಿಸ್ಟ್ ‘ದ ಅಟ್ಲಾಂಟಿಕ್’ ಗೆ ಕೊಟ್ಟ ಸಂದರ್ಶನದಲ್ಲಿ ಹೀಗೆ ಹೇಳುತ್ತಾರೆ:
“ಲಭ್ಯವಿರುವ ಎಲ್ಲ ಅರ್ಥಶಾಸ್ತ್ರದ ಕುರಿತಾದ ಮಾಹಿತಿಗಳ ಅಧ್ಯಯನದಿಂದ ಕ್ಲೆಮನ್ಸ್ ಮತ್ತು ಆತನ ಸಹಲೇಖಕರು ಕಂಡುಕೊಂಡ ವಿಷಯವೇನೆಂದರೆ ವಲಸೆ ಬರುತ್ತಿರುವ ಮಿಲಿಯನ್ ಗಟ್ಟಲೆ ಕಾರ್ಮಿಕರಿಂದ ಮೂಲನಿವಾಸಿ ಅಮೇರಿಕನ್ ರ ಭತ್ಯೆಯಲ್ಲಿ ಏನಾದರೂ ವ್ಯತ್ಯಾಸವಾಗಿದ್ದರೆ ಅದು ಕೇವಲ ಅತಿ ಸಣ್ಣ ಪ್ರಮಾಣದಲ್ಲಿ ಅದೂ ಒಂದು ವೇಳೆ ಯಾವುದಾದರೂ ಕ್ಷೇತ್ರದಲ್ಲಿ ವಲಸೆ ಕಾರ್ಮಿಕರು ಮೂಲನಿವಾಸಿಗಳ ಉದ್ಯೋಗವನ್ನು ಕಸಿದಿದ್ದರಷ್ಟೇ. ಕೃಷಿಯನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ವಾರ್ಷಿಕ ಮೂರು ಬೇರೆ ಬೇರೆ ಕೃಷಿ ಚಟುವಟಿಕೆಗಳಿಗೆ ವಲಸೆ ಕಾರ್ಮಿಕರನ್ನು ಉಪಯೋಗಿಸಿಕೊಂಡರೆ ಆ ಮೂಲಕ ಅಮೇರಿಕಾದ ಮೂಲನಿವಾಸಿಗೆ ಎಲ್ಲ ಕ್ಷೇತ್ರದಲ್ಲೂ ಒಂದೊಂದು ಉದ್ಯೋಗ ಸೃಷ್ಟಿಯಾಗುತ್ತದೆ. ನೇರವಾಗಿ, ಕಾರ್ಮಿಕರಿಗೊಬ್ಬ ಮ್ಯಾನೇಜರ್ ಬೇಕು. ಆ ಮ್ಯಾನೇಜರ್ ಹುದ್ದೆಗೆ ಅತಿ ಹೆಚ್ಚು ಮೂಲನಿವಾಸಿಯನ್ನೇ ಆಯ್ಕೆ ಮಾಡುತ್ತಾರೆ. ಪರೋಕ್ಷವಾಗಿ ಕಾರ್ಮಿಕರು ವಸ್ತುಗಳನ್ನು ಕೊಳ್ಳುತ್ತಾರೆ ಅದರಿಂದ ಹೆಚ್ಚು ಹೆಚ್ಚು ಮೂಲನಿವಾಸಿಗಳು ಉತ್ಪಾದನೆ ಮಾಡಬೇಕು ಮತ್ತು ಮಾರಾಟಕ್ಕಿಡಬೇಕು. ಹೀಗೆ ಒಂದಕ್ಕೊಂದು ನೇರ ಹಾಗೂ ಪರೋಕ್ಷ ಸಂಬಂಧ ಹೊಂದಿದೆ. ಒಂದು ಬಸ್ ಅಂದರೆ ಸುಮಾರು 60 ಜನ ಮೆಕ್ಸಿಕನ್ ವಲಸಿಗರು ಸರಹದ್ದಿನಲ್ಲಿ ಒಳಬರಲು ಕಾಯುತ್ತಿರುವರೆಂದರೆ ಯಾರೂ 20 ಅಮೇರಿಕನ್ ಉದ್ಯೋಗವಿದೆ ಅನ್ನುವುದಿಲ್ಲ ಬದಲಿಗೆ ಅದು ಈ ರೀತಿಯಲ್ಲಿ ನಡೆಯುತ್ತಿರುತ್ತದೆ.”
ಅಮೆರಿಕಾದ ತೋಟಗಳಲ್ಲಿ ಕೆಲಸ ಮಾಡುವ ಅರ್ಧಕ್ಕಿಂತ ಅಧಿಕ ಕಾರ್ಮಿಕರು ಕಾನೂನುಬಾಹಿರವಾಗಿ ಅಮೆರಿಕಾದಲ್ಲಿ ನಲೆಸಿರುವವರು. ಅವರನ್ನು ಹೊರಹಾಕುವುದರಿಂದ ಅಮೆರಿಕಾದ ಕೃಷಿ ಚಟುವಟಿಕೆಯ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲದೆ ಮೂಲನಿವಾಸಿ ಕಾರ್ಮಿಕರ ಜೀವನ ಅಥವಾ ಭತ್ಯೆಯಲ್ಲಿ ಯಾವುದೇ ವ್ಯತ್ಯಾಸವಾಗಲಾರದು. 1964ರಲ್ಲಿ ಅಮೆರಿಕಾ ಫಾರ್ಮ್ ಲೇಬರ್ ಒಪ್ಪಂದವನ್ನು ಮೆಕ್ಸಿಕೊ ಜೊತೆ ಮಾಡಿಕೊಂಡು ಮೆಕ್ಸಿಕೊ ಕಾರ್ಮಿಕರನ್ನು ಬ್ರಸೆರೊ ಅತಿಥಿ ಕಾರ್ಮಿಕರ ಕಾರ್ಯಕ್ರಮದಡಿ ಕೆಲಸಕ್ಕೆ ತೆಗೆದುಕೊಂಡಿದ್ದರು. ಅದು ಮುಗಿದು ಅವರೆಲ್ಲರನ್ನೂ ದೇಶದಿಂದ ಹೊರಹಾಕಿದಾಗ ಅವರ ಬದಲಿಗೆ ಮೂಲನಿವಾಸಿಗಳನ್ನು ಕೆಲಸಕ್ಕೆ ತೆಗೆದುಕೊಂಡಿಲ್ಲ. ಬದಲಿಗೆ, ಆ ಮಾಲೀಕರು ಕಡಿಮೆ ಶ್ರಮ ಬೇಡುವ ತಳಿಗಳನ್ನು ಬೆಳೆಯಲು ಶುರುಮಾಡಿದರು ಮತ್ತು ಹೆಚ್ಚು ಹೆಚ್ಚು ಯಂತ್ರಗಳನ್ನು ಉಪಯೋಗಿಸಲು ಪ್ರಾರಂಭಿಸಿದರು. ಅದರ ಬದಲಾಗಿ ದೇಶದೊಳಗೆ ಕೆಲಸ ಮಾಡುತ್ತಿದ್ದ ಆ ಎಲ್ಲ ಕೆಲಸಗಾರರಿಗೆ, ಕನಸು ಹೊತ್ತು ದುಡಿಯಲು ಬಂದವರಿಗೆ ಕ್ಷಮಾದಾನ ನೀಡಿದ್ದರೆ ಪರಿಸ್ಥಿತಿ ಇನ್ನೂ ಚೆನ್ನಾಗಿದ್ದು ದೇಶ ಇನ್ನೂ ಬೆಳೆಯಬಹುದಿತ್ತು. 1986ರಲ್ಲಿ ರೋನಾಲ್ಡ್ ರೇಗನ್ ತಂದ ‘ರೇಗಾನ್ ಅಮ್ನೆಸ್ಟಿ’ ಎಂದು ಕರೆಸಿಕೊಳ್ಳುವ ಇಮೆಗ್ರೇಷನ್ ರಿಫಾರ್ಮ್ ಆಕ್ಟ್ 2.7 ಮಿಲಿಯನ್ ದಾಖಲೆಗಳಿಲ್ಲದ ಜನರಿಗೆ ಗ್ರೀನ್ ಕಾರ್ಡ್ ಒದಗಿಸಿತು. ಅದಾದ ನಂತರ ಕಾನೂನಾತ್ಮಕವಾಗಿ ಪ್ರಜೆಗಳಾದವರ ಭತ್ಯೆಯು ಹೆಚ್ಚಾಯಿತು, ಅವರೆಲ್ಲ ತೆರಿಗೆ ಪಾವತಿಸಲು ಪ್ರಾರಂಭಿಸಿ ತೆರಿಗೆ ಸಂಗ್ರಹವೂ ಅಧಿಕವಾಯಿತು,ಕಾನೂನುಬದ್ಧ ನಾಗರಿಕತ್ವ ಪಡೆದ ಕಾರಣದಿಂದ ದೇಶದೊಳಗೆ ಆಸ್ತಿ ಮೇಲಿನ ವ್ಯಾಜ್ಯಗಳು ಅದರಿಂದಾಗುವ ಅಪರಾಧಗಳು 5ಶೇ. ಕಡಿಮೆಯಾಯಿತು.
ಇದರಿಂದ ಕೆಲವರಿಗೆ ಲಾಭವಾದರೆ ಇನ್ನು ಕೆಲವರಿಗೆ ನಷ್ಟವಾಯಿತು. ಟೆಕ್ನಾಲಜಿ ಕಂಪೆನಿಗಳು ಮತ್ತು ಅಂತಹ ಅನೇಕ ಉದ್ದಿಮೆಗಳಿಗೆ ಲಾಭವಾದರೆ ತಾಂತ್ರಿಕ ಕೌಶಲ್ಯವನ್ನು ಹೊಂದಿರದ ಅನೇಕರಿಗೆ ಹಿನ್ನೆಡೆಯಾಯಿತು. ಆದರೆ ಲಾಭವನ್ನನುಭವಿಸಿದವರು ತೆರಿಗೆ ರೂಪದಲ್ಲಿ ಕೌಶಲ್ಯವನ್ನು ಹೊಂದಿರದವರೊಂದಿಗೆ ಲಾಭವನ್ನು ಹಂಚಿಕೊಳ್ಳಬಹುದು. ಹಾಗಾಗಿ ಆದಾಯ ತೆರಿಗೆಯ ಮೇಲಿನ ಕಡಿತಕ್ಕೂ ಇದು ದಾರಿಯಾಗುತ್ತಿತ್ತು. ಇದು ವಲಸೆ ಬಂದವರಿಗೂ ಹಾಗೂ ಹೈಸ್ಕೂಲಿಗೇ ಶಿಕ್ಷಣ ಕಡಿತಗೊಳಿಸಿದ ಕೌಶಲ್ಯವಿಲ್ಲದೆ ವಲಸಿಗರಿಂದ ಉದ್ಯೋಗ ತೊಂದರೆಗೊಳಗಾದವರಿಗೂ ಒಂದು ರೀತಿಯಲ್ಲಿ ಒಳ್ಳೆಯದೇ.
ಆದ್ದರಿಂದ ಬೋರ್ಜಸ್ ಅವರ ವಾದದಲ್ಲಿ ಯಾವುದೇ ಹುರುಳಿಲ್ಲ ಹಾಗೂ ಕಾರ್ಮಿಕ ವರ್ಗದ ಜನರನ್ನು ದೂರವಿಡುವುದರಿಂದ ಆರ್ಥಿಕವಾಗಿ ಯಾವುದೇ ಕ್ರಾಂತಿಯೂ ಸಾಧ್ಯವಿಲ್ಲ ಬದಲಿಗೆ ಅದೊಂದು ದುರಂತವಾಗಿ ಪರಿಣಮಿಸುತ್ತದೆ. ಉದಾಹರಣೆಗೆ ಹೇಳಬೇಕೆಂದರೆ, 8ರಲ್ಲಿ 4 ಮೇರಿಲ್ಯಾಂಡ್ ನ ಫಿಶರೀಸ್ ಉದ್ಯಮ ಟ್ರಂಪ್ ವಲಸಿಗರನ್ನು ನಿರ್ಭಂಧಿಸಿದ ನಂತರ ಕಾರ್ಮಿಕರ ಕೊರತೆಯಿಂದ ಮುಚ್ಚಲ್ಪಟ್ಟಿದೆ. ಅಮೆರಿಕಾದಲ್ಲಿನ ಮಕ್ಕಳು ಹೈಸ್ಕೂಲಿನ ನಂತರವೂ ಶಿಕ್ಷಣ ಮುದುವರಿಸಬೇಕಾದರೆ, ಮಕ್ಕಳನ್ನು ಆಯಾಗಳ ಸುಪರ್ದಿಗೆ ಬಿಟ್ಟು ತಾಯಂದಿರು ದುಡಿದು ಆರ್ಥಿಕವಾಗಿ ಸದೃಢರಾಗಬೇಕಾದರೆ ಕಾರ್ಮಿಕರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಮೂಲವನಿವಾಸಿಗಳು ಹಾಗೂ ವಲಸಿಗರಿಬ್ಬರೂ ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್, ಮಾತ್ರವಲ್ಲ ಅಮೆರಿಕಾದ ಅಧ್ಯಕ್ಷರಾಗುವ ಕನಸು ಕಾಣಬೇಕಾದರೆ ಮತ್ತು ದೇಶ ಬೆಳೆಯಬೇಕಾದರೆ ಈ ನಿರ್ಬಂಧವನ್ನು ತೆಗೆದು ಅದಾಗಲೇ ಇರುವ ವಲಸಿಗರನ್ನು ಕಾನೂನುಬದ್ಧಗೊಳಿಸಬೇಕು.
ವಲಸಿಗರನ್ನು ಸಾಮಾನ್ಯವಾಗಿ ರಾಜಕಾರಣಿಗಳು, ನ್ಯೂಸ್ ಮೀಡಿಯಾಗಳು ಡ್ರಗ್ ಡೀಲರ್ ಗಳು, ರೇಪಿಸ್ಟ್ ಗಳು, ಕ್ರಿಮಿನಲ್ ಗಳೆಂಬಂತೆ ಬಿಂಬಿಸುತ್ತಾರೆ. ಇದು ಎಷ್ಟರ ಮಟ್ಟಿಗೆ ನಿಜ ಹಾಗೂ ನಿಜಕ್ಕೂ ಅಂತ ಅಪರಾಧಿಗಳೇ ಈ ವಲಸಿಗರು?
ಕೇಟೊ ಇನ್ಸ್ಟಿಟ್ಯೂಟ್ ನ ಅಲೆಕ್ಸ್ ನೌರಾಸ್ತೇ ಎನ್ನುವವರು 2016ರಲ್ಲಿ ಟೆಕ್ಸಾಸ್ ನಗರದ ಅಪರಾಧಗಳ ಅಂಕಿಅಂಶಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಿದರು. ಅದರ ಪ್ರಕಾರ ಮೂಲನಿವಾಸಿಗಳಿಂದಾದ ಅಪರಾಧಗಳು 1ಲಕ್ಷ ನಾಗರಿಕರಿಗೆ 2116. ಕಾನೂನುಬದ್ಧ ವಲಸಿಗರಿಂದಾದ ಅಪರಾಧಗಳು 1ಲಕ್ಷ ಜನರಿಗೆ ಕೇವಲ 292. ಕಾನೂನುಬಾಹಿರವಾಗಿ ವಾಸಿಸುತ್ತಿರುವ ವಲಸಿಗರಿಂದಾದ ಅಪರಾಧ 879. ಅಂದರೆ ಮೂಲನಿವಾಸಿಗಳಿಂದಾದ ಅಪರಾಧಗಳು ಕಾನೂನುಬಾಹಿರ ವಲಸಿಗರಿಗೆ ಹೋಲಿಸಿದರೆ 2.4ಶೇ. ದಷ್ಟು ಹೆಚ್ಚು ಮತ್ತು ಕಾನೂನಾತ್ಮಕ ವಲಸಿಗರಿಗೆ ಹೋಲಿಸಿದರೆ 7.2ಶೇ. ಹೆಚ್ಚು.
ಕ್ರಿಮಿನಾಲಜಿ ಎನ್ನುವ ಜರ್ನಲ್ ನ 2018ರ ಅಧ್ಯಯನದ ಪ್ರಕಾರ 1990 ರಿಂದ 2014ರವರೆಗೆ ಅಮೆರಿಕಾದಲ್ಲಿ ಎಲ್ಲೆಲ್ಲಿ ಕಾನೂನೂಬಾಹಿರ ವಲಸಿಗರು ಹೆಚ್ಚಿದ್ದಾರೊ ಅಲ್ಲೆಲ್ಲ ಅಪರಾಧಗಳು ಮೊದಲಿಗಿಂತ ಕಡಿಮೆಯಾಗಿದೆ. “ವಲಸಿಗರು ಬರುವುದೇ ಒಂದೊಳ್ಳೆಯ ದುಡಿಮೆಯನ್ನು ಕಂಡುಕೊಳ್ಳಲು ಮತ್ತು ಕುಟುಂಬದವರಿಗೆ ಉತ್ತಮ ಆರೋಗ್ಯ ಮತ್ತು ಶಿಕ್ಷಣದ ಭರವಸೆಯನ್ನು ಕಂಡುಕೊಳ್ಳುವುದಕ್ಕಾಗಿ” ಎನ್ನುತ್ತಾರೆ ಮಿಶೇಲ್ ಲೈಟ್ ಎನ್ನುವ ಕ್ರಿಮಿನಾಲಜಿ ಜರ್ನಲ್ ನ ಸಹಲೇಖಕರು. ವಲಸೆಗೆ ಅದರಲ್ಲೂ ಕಾನೂನುಬಾಹಿರ ವಲಸೆಗೆ ಬಹಳಷ್ಟು ಸಿದ್ಧತೆಗಳು ಹಾಗೂ ಅತೀವ ಪ್ರೇರಣೆಯ ಅಗತ್ಯವಿರುತ್ತದೆ. ಇಂತಹ ಗುಣಗಳು ದೊಡ್ಡ ಮಟ್ಟದಲ್ಲಿ ಅಪರಾಧಗಳಿಗೆ ಹೊಂದಿಕೆಯಾಗುವುದೇ ಇಲ್ಲ ಅನ್ನುವುದು ಅವರ ವಾದ.
2018ರಲ್ಲಿ ಯೇಲ್ ಯುನಿವರ್ಸಿಟಿ ಕೈಗೊಂಡ ಸರ್ವೇಯ ಪ್ರಕಾರ ಅಮೆರಿಕಾದಲ್ಲಿ ಈಗಿರುವ ಒಟ್ಟು ಕಾನೂನುಬಾಹಿರ ವಲಸಿಗರ ಸಂಖ್ಯೆ 22.1 ಮಿಲಿಯನ್. ಇದು ಅತಿಹೆಚ್ಚು ಅಂದರೆ 29.5ಮಿಲಿಯನ್ ನಷ್ಟೂ ಆಗಿರಬಹುದು. ಅಂದರೆ ಕಾನೂನುಬಾಹಿರವಾಗಿ ನೆಲೆಸಿರುವ ವಲಸಿಗರು ನಡೆಸುವ ಅಪರಾಧಗಳು ಮೂಲದಲ್ಲಿ ಅವರಿಂದ ಊಹಿಸಿದ್ದಕ್ಕಿಂತ ಅರ್ಧಕ್ಕಿಂತಲೂ ಕಡಿಮೆಯಿದೆ. ಅಪರಾಧಗಳ ಸಂಖ್ಯೆ ಅಷ್ಟೇ ಇದ್ದರೂ ದುಪ್ಪಟ್ಟು ಜನರು ದೇಶದ ತುಂಬೆಲ್ಲ ಹಂಚಿ ಹೋಗಿರುವುದರಿಂದ ಇದರರ್ಥ ಅಪರಾಧಗಳ ಸಂಖ್ಯೆ ಕಡಿಮೆಯಿದೆ ಎಂತಲೇ ಎಂದು ಹೇಳಿದವರು ಈ ಸರ್ವಗಾಗಿ ಕೆಲಸ ಮಾಡಿ ಮಾಹಿತಿ ದಾಖಲಿಸಿದ ಎಡ್ವರ್ಡ್ ಕಪ್ಲನ್. ಹಾಗಾಗಿ ಈ ಸರ್ವೇಯ ಶರಾ ಕೂಡ ದೇಶ ಸುರಕ್ಷಿತವಾಗಿರಬೇಕೆಂದರೆ ಹೆಚ್ಚು ವಲಸಿಗರನ್ನು ಬರಮಾಡಿಕೊಂಡು ಅವರ ಕಾನೂನುಬದ್ಧಗೊಳಿಸುವುದೇ ಆಗಿದೆ.
ಮೂರನೇ ಆಪಾದನೆಯೆದರೆ, ವಲಸಿಗರು ಸಾಂಸ್ಕೃತಿಕವಾಗಿ ಮೂಲನಿವಾಸಿಗಳಿಂದ ಬೇರೆಯಾಗಿರುತ್ತಾರೆ ಎನ್ನುವುದು.ಇದು ಒಪ್ಪಿಕೊಳ್ಳಬೇಕಾದ ಸಂಗತಿ. ನೀವು ನಾರ್ಮನ್ ರಾಕ್ವೆಲ್ ನ ಕಲ್ಪನೆಯ ಅಮೆರಿಕಾದಲ್ಲಿ ಬದುಕುತ್ತಿದ್ದರೆ ಖಂಡಿತವಾಗಿಯೂ ನಿಮ್ಮ ರಸ್ತೆಯ ಕೊನೆಯಲ್ಲಿ ಅಥವಾ ಪಕ್ಕದ ಕಟ್ಟಡದಲ್ಲಿ ಸಾಲ್ಸಾ ಡಾನ್ಸ್ ನೊಂದಿಗಿನ ಬಾರ್ (ಕ್ಯಾಂಟಿನಾ) ಒಂದು ತೆರೆಯುವುದು ಒಪ್ಪಲಾರಿರಿ. ಆದರೆ ನಿಮ್ಮ ನೆರೆಯಲ್ಲಿ ವಾಸಿಸುವ ಇನ್ನೊಬ್ಬ ವ್ಯಕ್ತಿ ನಾರ್ಮನ್ ರಾಕ್ವೆಲ್ ಕಲ್ಪನೆಯ ಅಮೆರಿಕಾದಿಂದ ಬೇಸತ್ತಿರುವವರು ಕ್ಯಾಂಟಿನಾ ವನ್ನು ಪ್ರೀತಿಯಿಂದ ಒಪ್ಪಿಕೊಳ್ಳಬಹುದು.ಯಾರೊ ಒಬ್ಬ ವ್ಯಕ್ತಿಯಿಂದ ರಾಷ್ಟ್ರೀಯ ಸಂಸ್ಕೃತಿ ಹೀಗೇ ಎಂದು ಹೇಳಲಾಗುವುದಿಲ್ಲ. ಅಮೆರಿಕಾದವರಿಂದ ಆಗುವುದಿಲ್ಲ, ಬ್ರಿಟಿಷರಿಂದ ಸಾಧ್ಯವಿಲ್ಲ, ಯುರೋಪಿಯನ್ನರಿಂದ ಆಗದು ಅಥವಾ ಜರ್ಮನ್ನರಿಂದ. ಯಾವ ಆಹಾರ, ಧರ್ಮ, ಸಾಂಸ್ಕೃತಿಕ ಮೂಲದಿಂದ ಈ ಎಲ್ಲ ರಾಷ್ಟ್ರೀಯ ಸಂಸ್ಕೃತಿಗಳು ಹುಟ್ಟಿಕೊಂಡವೊ ಅವು ಈಗ ಅದೇ ರೀತಿ ಉಳಿದಿಲ್ಲ.
ಬದಲಾಗಿ ವಲಸಿಗರ ಬರುವಿಕೆಯಿಂದ ಬರೀ ಆರ್ಥಿಕತೆಯಷ್ಟೇ ಅಲ್ಲ ಸಾಂಸ್ಕತಿಕವಾಗಿಯೂ ನಾವು ಬೆಳೆಯಬಹುದು ಎಂದು ಯೋಚಿಸಿದರೆ? ಏಕೆಂದರೆ ಒಳಬರುವ ಪ್ರತೀ ಸಂಸ್ಕೃತಿಯಲ್ಲೂ ಒಳ್ಳೆಯ ಅಂಶಗಳಿರುತ್ತವೆ. ಬರೀ ಏಷ್ಯಾದ ಅಲ್ಪಸಂಖ್ಯಾತರಷ್ಟೇ ಅಲ್ಲ ಎಲ್ಲರಿಂದಲೂ ಕಲಿಯುವಂತಹ ವಿಶೇಷತೆಗಳಿರುತ್ತವೆ. ಅದು ಕೆಲಸದ ಮಾದರಿಯಾಗಿರಬಹುದು, ಕೌಟುಂಬಿಕ ಹೊಂದಾಣಿಕೆಯಿರಬಹುದು, ಅವರ ಉಡುಗೆ ತೊಡುಗೆಯಿರಬಹುದು, ಅವರ ಸಂಗೀತವಿರಬಹುದು, ಅಥವ ಅವರ ಮಸಾಲೆಗಳಿಂದ ಕೂಡಿದ ಆಹಾರ ಪದ್ಧತಿಯಿರಬಹುದು ಅಥವ ಕಠಿಣವಾದ ನಂಬಿಕೆಗಳಿರಬಹುದು. ಇದರಿಂದ ನಮ್ಮ ಹಳೆಯ ದೇವರು ಹೊಸ ದೇವರೊಂದಿಗೆ ಬೆರೆತು ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಆರಾಧಿಸಲು ಹೆಚ್ಚು ಸೂಕ್ತವಾದ ಬೇರೆಯದೊಂದು ವಿಧದ ದೇವರ ಸೃಷ್ಟಿಯೇ ಆಗಬಹುದು!
ಡೋನರ್ ಕಬಾಬ್ ಜರ್ಮನಿಯ ಅಘೋಷಿತ ರಾಷ್ಟ್ರೀಯ ಆಹಾರವಾದರೆ, ಗ್ರೇಟ್ ಬ್ರಿಟನ್ ಗೆ ಅದು ಚಿಕನ್ ಟಿಕ್ಕಾ ಮಸಾಲಾ, ಫ್ರಾನ್ಸ್ ಗೆ ಕಸ್ ಕಸ್ ಅನ್ನಬಹುದು. ಆಹಾರ ಅಧಿಕೃತವಾಗಿ ಬೇರೆ ದೇಶದ್ದಾದರೂ ಈ ಎಲ್ಲ ದೇಶದವರೊಂದಿಗೆ ಬೆರೆತು ಹೋಗಿರುವ ಪರಿ ಅಂತದ್ದು. ಪ್ಯಾರಿಸ್ ನ ಕ್ಲಬ್ ಗಳಲ್ಲಿ ಎಡಿತ್ ಪಿಯಫ್ ನ ಸಂಗೀತದ ಬದಲು ಅಫ್ರೊಪಾಪ್ ನುಡಿಸಲ್ಪಡುವುದೇ ಬಹಳ ಆಸಕ್ತಿದಾಯಕ ವಿಷಯವಾಗಿರುತ್ತದೆ.
ನನ್ನ ತಂದೆ ತನ್ನ ಕುಟುಂಬದ ವಜ್ರದ ಉದ್ಯಮವನ್ನು ಬೆಳೆಸುವ ಉದ್ದೇಶದಿಂದ ತನ್ನ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಅಮೆರಿಕಾಗೆ ವಲಸೆ ಬಂದವರು. ಆದರೆ ಅವರಿಗೆ ಅದಕ್ಕಿಂತಲೂ ಬಹಳ ಆಳವಾದ ಮತ್ತು ಹಳೆಯ ಸೆಳೆತವು ಶುರುವಾಗಿದ್ದು 1950ರ ಕಲ್ಕತ್ತಾದ ಕಾಲೇಜು ದಿನಗಳಲ್ಲಿ.ಅಂದಿನ ಅದ್ಭುತವಾದ ರಾಕ್ ಗಾಯಕರಾದ ಚಕ್ ಬೆರ್ರಿ ಮತ್ತು ಎಲ್ವಿಸ್ ರ ಗಾಯನವನ್ನು ಸೈಂಟ್ ಕ್ಸೇವಿಯರ್ ನ ಆಡಳಿತವು ನಿರ್ಬಂಧಿಸಿದ್ದರೂ ವಿದ್ಯಾರ್ಥಿಗಳು ಸೊಂಟ ಬಳುಕಿಸುವುದನ್ನು ನಿಲ್ಲಿಸಿರಲಿಲ್ಲ. ಅಲ್ಲಿಯವರೆಗೂ ಭಾರತದಲ್ಲಿ ನನ್ನ ತಂದೆ ಅಂತಹ ಅದ್ಭುತವಾದ ಸಂಗೀತವನ್ನು ಕೇಳಿರಲಿಲ್ಲವಂತೆ. ನಿಧಾನವಾಗಿ ಹೊಸ ಸಂಸ್ಕೃತಿಯ ಪುಸ್ತಕ, ಸಿನಿಮಾ, ಸಂಗೀತಗಳಿಗ ತೆರೆದುಕೊಂಡ ನನ್ನ ತಂದೆ ಆಗಲೇ ಒಂದು ದಿನ ಇಲ್ಲಿಗೆ ಸ್ಥಳಾಂತರಗೊಂಡು ಹೊಸ ಬದುಕಿಗೆ ತೆರೆದುಕೊಳ್ಳುವ ಕನಸು ಕಂಡಿದ್ದರು.
ಮತ್ತೆ ಅದೇ ತಾನೆ ಅಮೆರಿಕಾವನ್ನು ದೇಶವಾಗಿಸಿದ್ದು! ಈ ವಿಚಿತ್ರವಾದ ಬೆರಕೆ, ಕರ್ಕಶವಾದ ಕೂಗು, ಫ್ರೆಂಚ್ ಶೈಲಿಯ ಕವಿತೆಗಳು, ಇವೆಲ್ಲವೂ ಒಂದು ರೀತಿಯಲ್ಲಿ ಅಸಂಬದ್ಧ ಸಂಯೋಜನೆಗಳಲ್ಲವೇ? ಇದೇ ತಾನೆ ಇಲ್ಲಿನ ಸಿನಿಮಾ, ಪುಸ್ತಕಗಳ ಸರಕು? ಇದೇ ತಾನೇ ದೇಶ ವಿದೇಶಗಳಿಗೆ ರಫ್ತಾಗುವ ವಿಷಯಗಳು? ಈ ಅಮೆರಿಕಾ ಸಂಸ್ಕೃತಿಯ ಉದಾರತೆ, ತೆರೆದುಕೊಳ್ಳುವಿಕೆ ಮತ್ತು ಹುರುಪು ಜಗತ್ತಿನಾದ್ಯಂತ ಜನರನ್ನು ತನ್ನತ್ತ ಚಿನ್ನದ ಬಾಗಿಲಿನೊಳಗೆ ಬರುವಂತೆ ಸೆಳೆಯುವುದು.
ಈಗಿನ ವಾದವೆಂದರೆ ಹೊಸ ತಲೆಮಾರಿನ ವಲಸಿಗರು ಹಿಂದಿನಂತಲ್ಲ ಮತ್ತು ಅವರು ಇಲ್ಲಿನ ಸ್ಥಳೀಯತೆಗೆ ಹೊಂದಿಕೊಳ್ಳುವುದಿಲ್ಲ ಅನ್ನುವುದು. “ಹೆಚ್ಚಿನ ವಲಸಿಗರು ಇಲ್ಲಿನ ಸಂಸ್ಕೃತಿಯನ್ನು ಬದಲಾಯಿಸುವುದರ ಬದಲಾಗಿ ಇಲ್ಲಿಗೆ ಬಂದ ಮೇಲೆ ತಮ್ಮ ಮೂಲ ತತ್ವವನ್ನೇ ಬದಲಾಯಿಸಿಕೊಂಡು ಅಮೆರಿಕಾದ ಸಂಸ್ಕೃತಿಯನ್ನು ತನ್ನದಾಸಿಕೊಂಡಿದ್ದಾರೆ ಎನ್ನುವುದು ಸತ್ಯ. ಅವರೆಲ್ಲರೂ ಅಮೆರಿಕಾಗೆ ವಲಸೆ ಬಂದಿದ್ದು ಅಮೆರಿಕಾದವರಾಗುವುದಕ್ಕೆ, ಬರೀ ಭಾಷೆ, ಗುರುತು ಅಥವಾ ರಾಷ್ಟ್ರೀಯತೆಯ ವಿಚಾರದಲ್ಲಷ್ಟೇ ಅಲ್ಲ ಬದಲಿಗೆ ರೀತಿನೀತಿಗಳಲ್ಲೂ ಕೂಡ.” ಇದನ್ನು ರೇಡಿಯೊ ನಿರೂಪಕರಾದ ಡೆನ್ನಿಸ್ ಪ್ರೇಗರ್ ನ್ಯಾಷನಲ್ ರಿವ್ಯೂ ನಲ್ಲಿ ಬರೆದುಕೊಂಡಿದ್ದಾರೆ. ಹಾಗೆಂದ ಮಾತ್ರಕೆ ಎಲ್ಲರೂ ಅಮೆರಿಕಾದ ಸಂಸ್ಕೃತಿಯನ್ನು ಒಪ್ಪುತ್ತಾಂದಲ್ಲ. ಕೆಲವೊಂದಿಷ್ಟು ಜನ ಇಲ್ಲಿನ ಹಣ, ರಾಷ್ಟ್ರೀಯತೆ ಎಲ್ಲವನ್ನೂ ಬಯಸುತ್ತಾರೆ, ಆದರೆ ಇಲ್ಲಿಯವರಾಗಬಯಸುವುದಿಲ್ಲ. ಇತ್ತೀಚಿನ ಲ್ಯಾಟಿನ್ ಅಮೆರಿಕಾದವರನ್ನು ಉದಾಹರಣೆಗೆ ತೆಗೆದುಕೊಳ್ಳಬಹುದು, ಅವರಿಗೆ ಅಮೆರಿಕನ್ನರಾಗುವುದಕ್ಕಿಂತ ಶ್ರೀಮಂತ ಲ್ಯಾಟಿನ್ ಅಮೆರಿಕನ್ ಎನ್ನಿಸಿಕೊಳ್ಳುವುದು ಇಷ್ಟ.
ಈ ವಿಚಾರದ ಬಗ್ಗೆ ಜನ ತಮ್ಮದೇ ವಾದವನ್ನು ತಮ್ಮದೇ ರೀತಿಯಲ್ಲಿ ಮುಂದಿಡುತ್ತಾರೆ. ಆದರೆ ನಿಜವಾಗಲೂ ಆಗಬೇಕಾದದ್ದು ಒಂದಿಷ್ಟು ನಿಜವಾದ ಸತ್ಯವನ್ನು ಹೊರತೆಗೆಯುವ ಒಂದು ವಾದವನ್ನು ಎತ್ತಿಹಿಡಿಯದೆ ತಾರ್ಕಿಕವಾದ ಸಂಶೋಧನೆಗಳು.
2015ರಲ್ಲಿ ಒಕ್ಕೂಟ ಸರಕಾರದ ಯುಎಸ್ ಸಿಟಿಝನ್ ಶಿಪ್ ವಿಭಾಗ ಇಮಿಗ್ರೇಷನ್ ವಿಭಾಗ, ಹಾಗೂ ನ್ಯಾಷನಲ್ ಸೈನ್ಸ್ ಅಕಾಡೆಮಿ ಒಟ್ಟಾಗಿ ಈ ಬಗ್ಗೆ ಒಂದು ಅಧ್ಯಯನ ನಡೆಸಿತು. 18 ಜನ ಪ್ರಮುಖ ಎಕನಾಮಿಸ್ಟ್ ಗಳು, ಡೆಮೊಗ್ರಾಫರ್ಸ್, ಮೈಗ್ರೇಶನ್ ಸ್ಕಾಲರ್ಸ್ ಎಲ್ಲರೂ ಈ ತಂಡದಲ್ಲಿದ್ದರು. “500 ಪುಟಗಳ ಈ ಅಧ್ಯಯನದ ಪ್ರಕಾರ 41 ಮಿಲಿಯನ್ ವಲಸಿಗರು ಮತ್ತು 37 ಮಿಲಿಯನ್ ಮಕ್ಕಳು ವಲಸಿಗರಾಗಿದ್ದಾರೆ. ಈ ವಲಸಿಗರು ಇಂಗ್ಲೀಷ್ ಭಾಷೆಯನ್ನು ಬಹಳ ಬೇಗನೆ ಕಲಿಯುವತ್ತ ಒಲವು ತೋರಿಸುತ್ತಿದ್ದಾರೆ. ಎರಡನ್ ಜನರೇಷನ್ ನ ಮಕ್ಕಳು ವಿದ್ಯಾಭ್ಯಾಸದಲ್ಲೂ ಮೂಲನಿವಾಸಿ ಮಕ್ಕಳಿಗೆ ಸರಿಸಮನಾಗಿ ಸಾಗುತ್ತಿದ್ದಾರೆ. 3ನೇ ಜನರೇಷನ್ ನ ಮಕ್ಕಳಲ್ಲಿ ಬಹುತೇಕರಿಗೆ ಇಂಗ್ಲೀಷ್ ಮಾತ್ರ ಅವರ ಭಾಷೆಯಾಗಿದೆ. ಕೇವಲ 41ಶೇ. 3ನೇ ಜನರೇಷನ್ ನ ಮೆಕ್ಸಿಕನ್ – ಅಮೆರಿಕನ್ ಮಕ್ಕಳು ಮನಯಲ್ಲಿ ಸ್ಪಾನಿಷ್ ಮಾತನಾಡುತ್ತಿದ್ದಾರೆ. ವಲಸಿಗರಿರುವ ನಗರಗಳು ಮತ್ತು ಪರಿಸರದಲ್ಲಿ ಅತಿ ಕಡಿಮೆ ಅಪರಾಧಗಳು ನಡೆಯುತ್ತಿದ್ದು 18 ರಿಂದ 39 ವರ್ಷ ವಯಸ್ಸಿನ ಮೂಲನಿವಾಸಿಗಳಿಗೆ ಹೋಲಿಸಿದರೆ ಅವರ ಕಾಲು ಭಾಗದಷ್ಟು ಜನ ಸೆರೆವಾಸ ಅನುಭವಿಸಿದವರಾಗಿದ್ದಾರೆ.”
ಇನ್ನು ಉದ್ಯೋಗಕ್ಕೆ ಬಂದರೆ, 86 ಶೇ. ಮೊದಲನೇ ಜನರೇಷನ್ ನ ಗಂಡಸರು ಮೂಲನಿವಾಸಿಗಳಿಗೆ ಹೋಲಿಸಿದರೆ ಅತ ಹೆಚ್ಚು ಜನ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅತಿ ಕಡಿಮೆ ವಿದ್ಯಾಭ್ಯಾಸ ಹೊಂದಿರುವ ವಲಸಿಗರೇ ಮೂಲನಿವಾಸಿಗಳು ಒಪ್ಪಿಕೊಳ್ಳದೇ ಬಿಟ್ಟ ಅಥವಾ ಕೆಲಸಕ್ಕೆ ಸಿಗದ ಖಾಲಿ ಹುದ್ದೆಗಳಲ್ಲಿ ಅತಿ ಹೆಚ್ಚು ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವವರು.
ಈ ಅಧ್ಯಯನದ ಪ್ರಕಾರ ವಲಸೆ ಕಾರ್ಮಿಕರು ಎಲ್ಲ ಕ್ಷೇತ್ರಗಳಲ್ಲೂ ಮೂಲನಿವಾಸಿಗಳಿಗಿಂತ ಉತ್ತಮ ಕೆಲಸಗಾರರು. ಆರೋಗ್ಯದಲ್ಲೂ ಮೂಲನಿವಾಸಿಗಳಿಗೆ ಹೋಲಿಸಿದರೆ ಉತ್ತಮ ಆರೋಗ್ಯವನ್ನು ಹೊಂದಿರುವವರು ವಲಸಿಗರೇ. ಮತ್ತು ಅತಿ ಕಡಿಮೆ ಹೃದಯ ಅಥವಾ ಶ್ವಾಸಕೋಶ ಸಂಬಂಧಿ ಕಾಯಿಲೆಗಳನ್ನು ಹೊಂದಿರುವವರೂ ವಲಸಿಗರೇ. ಮೂಲನಿವಾಸಿಗಳಿಗೆ ಹೋಲಿಸಿದರೆ ಕಡಿಮೆ ಆಲ್ಕೋಹಾಲ್ ಸಂಬಂಧಿದ ಹಲ್ಲೆಗಳು ಮತ್ತು ಕಡಿಮೆ ವಿಚ್ಛೇದನ ಪ್ರಕರಣಗಳು ಇವರಲ್ಲೇ.
ಇದರಲ್ಲಿ ಒಂದಿಷ್ಟು ಎಚ್ಚರಿಕೆಗಳೂ ಇವೆ. ಮೊದಲು ವಲಸೆ ಬಂದವರಿಂದ ಸರಕಾರಕ್ಕೆ ತೆರಿಗೆ ಸಂಗ್ರಹವಾಗುವ ಬದಲು ಸರಕಾರವೇ ಅವರಿಗೆ ಸಹಾಯ ಮಾಡಬೇಕಾಗುತ್ತದೆ. ಅಂದರೆ, ಅವರ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಶಿಕ್ಷಣ, ಹೆಲ್ತ್ ಕೇರ್ ಮುಂತಾದ ರೀತಿಯಲ್ಲಿ. ಇದರಿಂದ ವಾರ್ಷಿಕ 57ಬಿಲಿಯನ್ ಡಾಲರ್ ನಷ್ಟು ಹೆಚ್ಚುವರಿ ಹೊಣೆ ಸರಕಾರದ ಮೇಲೆ. ಆದರೆ ಇದರ ನಂತರ ಅವರ ಮಕ್ಕಳ ತಲೆಮಾರಿನವರು ಇಲ್ಲೇ ಬೆಳೆದು ಇಲ್ಲೇ ಉದ್ಯೋಗ ಹಿಡಿದು ಸರಕಾರಕ್ಕೇ 30ಬಿಲಿಯನ್ ಡಾಲರ್ ನಷ್ಟು ತೆರಿಗೆ ರೂಪದಲ್ಲಿ ಕೊಡುತ್ತಾರೆ. ಇದು ಮೂರನೇ ತಲೆಮಾರಿನಷ್ಟರಲ್ಲಿ 223 ಬಿಲಿಯನ್ ಡಾಲರ್ ನಷ್ಟಾಗುತ್ತದೆ.
ಮೂರನೇ ತಲೆಮಾರಿನಷ್ಟರಲ್ಲಿ ಅವರು ಸಂಸ್ಕೃತಿ ಹಾಗೂ ಜೀವನಶೈಲಿಯಲ್ಲಿ ಅಮೆರಿಕನ್ನರೇ ಆಗಿಹೋಗಿರುತ್ತಾರೆ. ಅಪರಾಧ, ಆರೋಗ್ಯ, ವಿಚ್ಛೇದನ, ವಿದ್ಯಾಭ್ಯಾಸ ಎಲ್ಲವೂ ಶೇಖಡಾವಾರು ಮೂಲನಿವಾಸಿಗಳಷ್ಟೇ ಆಗಿರುತ್ತದೆ. ಅವರೂ ಅಮೆರಿಕನ್ನರ ಹಾಗೆ ಸೋಫಾಗೆ ಒರಗಿ ಟಿವಿ ನೋಡಿಕೊಂಡು ಜಂಕ್ ತಿಂದು ಸ್ಥೂಲಕಾಯ ಬೆಳೆಸಿಕೊಂಡು, ಹೊಸ ಭಾಷೆ ಕಲಿಯುವುದರಲ್ಲಿ ನಿರಾಸಕ್ತಿಯಿಂದ ಹಿಡಿದು ಬರೀ ಇಂಗ್ಲೀಷ್ ಮಾತಾಡುವುದು ಎಲ್ಲವೂ ಅಮೆರಿಕನ್ನರ ಹಾಗೇ ಆಗಿರುತ್ತದೆ.
ಈ ವರದಿ ಕೂಡ ನಿಶ್ಚಯಿಸಿದ ಹಾಗೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬಂದಿತು.
ವಲಸೆ ಎನ್ನುವುದು ದೇಶದ ಆರ್ಥಿಕ ಬೆಳವಣಿಗೆಯ ಅವಿಭಾಜ್ಯ ಅಂಗ. ದೇಶದ ಮೂಲನಿವಾಸಿಗಳ ಇಳಿವಯಸ್ಸಿನ ಸಮಸ್ಯೆ, ಕಡಿಮೆ ಜನಸಂಖ್ಯೆ, ಕಡಿಮೆ ಉತ್ಪಾದನೆ ಮತ್ತು ಬಳಕೆಯಿಂದ ನಿಂತುಬಿಟ್ಟಿದ್ದ ಅಮೆರಿಕಾದ ಆರ್ಥಿಕತೆಯು ವಲಸಿಗರ ಆಗಮನದಿಂದ ಮತ್ತು ದುಡಿಮೆಯಿಂದ ಪುನರುಜ್ಜೀವನಗೊಂಡಂತಾಗಿದೆ. ಜೊತೆಗೆ ಹೆಚ್ಚು ಹೆಚ್ಚು ತಂತ್ರಜ್ಞಾನದಲ್ಲಿ ಮುಂದುವರಿದ ವಲಸಿಗರಿಂದ ದೇಶದೊಳಗೆ ಹೊಸ ಆವಿಷ್ಕಾರಗಳು, ಉದ್ದಿಮೆ ಬೆಳೆದು ತಾಂತ್ರಿಕ ಬದಲಾವಣೆಗಳಾಗಿವೆ.
ಕೆಲವೊಮ್ಮೆ ಅಮೆರಿಕಾ ದೇಶಕ್ಕೆ ತನ್ನ ತೀರಕ್ಕೆ ಬರುವ ಪ್ರತಿಭೆಗಳ ಬಗ್ಗೆ ಅರಿವೇ ಇರುವುದಿಲ್ಲ. ಒಬ್ಬ ರೈತ ರಾಜಕೀಯ ಹೋರಾಟಗಾರನಾಗಬಹುದು, ಎಂಜಿನಿಯರ್ ಒಬ್ಬ ಹೋಟೆಲ್ ಉದ್ಯಮಿಯಾಗಬಹುದು! ಮತ್ತವರ ಮಕ್ಕಳು ವಲಸಿಗರ ಮಕ್ಕಳ ಹಾಗೆ ಬೆಳೆಯುತ್ತಾರೆ. ಈ ವರದಿಯ ಪ್ರಕಾರ ಎರಡನೇ ತಲೆಮಾರಿನ 22ಶೇ.ಮೆಕ್ಸಿಕನ್ ಮತ್ತು 31ಶೇ.ಮಧ್ಯ ಅಮೆರಿಕಾದ ವಲಸಿಗರ ಮಕ್ಕಳು 2003-2013ರ ನಡುವೆ ವ್ಯವಸ್ಥಾಪಕರ ಹುದ್ದೆಯಲ್ಲಿ ಕೂತಿದ್ದಾರೆ. ಈ ತಲೆಮಾರಿನ ವಲಸೆ ಹೆಣ್ಣುಮಕ್ಕಳ ಸಾಧನೆ ಅದಕ್ಕಿಂತ ಎತ್ತರದ್ದಾಗಿದೆ.
ವಲಸಿಗರು ಇಷ್ಟಲ್ಲದೆ ಬೇರೆ ಬೇರೆ ರೀತಿಯಲ್ಲೂ ಬೆರತು ಹೋಗಿದ್ದಾರೆ. ಅಮೆರಿಕಾದ ಅಯೋವಾ ಪ್ರತಿನಿಧಿ ಹಾಗೂ ರಾಜಕಾರಣಿ, ಸ್ಟೀವ್ ಕಿಂಗ್, ‘ನಮ್ಮ ನಾಗರಿಕತೆಯನ್ನು ಯಾರ್ಯಾರದ್ದೊ ಮಕ್ಕಳಿಂದ ತೋರಿಸಿಕೊಳ್ಳಲು ನಾವು ತಯಾರಿಲ್ಲ’ ಎನ್ನುವ ಮಾತನ್ನು ವಲಸಿಗರ ಕುರಿತು ಆಡಿದ್ದರು. ಕಿಂಗ್ ಅಂತಹ ಅನೇಕ ರಾಜಕಾರಣಿಗಳ ಪ್ರಕಾರ ‘ವಲಸಿಗರು ಅಮರಿಕಾದ ಹೆಣ್ಣುಮಕ್ಕಳಿಗಾಗಿ ಬರುತ್ತಾರೆ!’ ಹೌದು! ಬರೀ ನಿಮ್ಮ ಹೆಣ್ಣುಮಕ್ಕಳಷ್ಟೇ ಅಲ್ಲ ಗಂಡಸರಿಗಾಗಿಯೂ! ಕಳೆದ ತಲೆಮಾರಿಗೆ ಹೋಲಿಸಿದರೆ ಈಗೀಗ ಪ್ರತೀ 7ರಲ್ಲಿ ಒಂದು ಮದುವೆಯು ಬೇರೆ ಬಣ್ಣದವರೊಂದಿಗೆ, ಅಥವಾ ಬೇರೆ ಸಂಸ್ಕೃತಿಯವರೊಂದಿಗೆ ನಡೆಯುತ್ತದೆ. 1970ರಲ್ಲಿ ಕೇವಲ 1ಶೇ. ಮಕ್ಕಳು ಬೇರೆ ಬೇರೆ ಬಣ್ಣದ ಜನರ ಸಂಬಂಧಗಳಿಗೆ ಹುಟ್ಟುತ್ತಿದ್ದರು. 2013ರಷ್ಟರಲ್ಲಿ ಅದು ಹತ್ತರಷ್ಟಾಗಿತ್ತು. ಇನ್ನು ನಾಲ್ಕು ದಶಕಗಳಲ್ಲಿ ಇದು 174ಶೇ.ದಷ್ಟಾಗುತ್ತದೆ.
ಅಮೆರಿಕಾದ ಬಣ್ಣ (ರೇಸ್) ಅನ್ನುವ ಪದಕ್ಕೆ ನನಗೆ ಯಾವಾಗಲೂ ಗೊಂದಲ ಮೂಡುತ್ತದೆ. ಭಾರತದಲ್ಲಿ ಜಾತಿ, ಧರ್ಮದ ಆಧಾರದಲ್ಲಿ ವಿಭಾಗಿಸುವುದು ನೋಡಿದ್ದೇವೆ. ಆದರೆ ಅಮೆರಿಕಾದಲ್ಲಿ ಈ ‘ಕಪ್ಪು’ ಮತ್ತು ‘ಬಿಳಿ’ ಅಂದರೇನು? ಒಬಾಮಾ ಅರ್ಧ ಕಪ್ಪು ಮತ್ತು ಅರ್ಧ ಬಿಳಿ ತಾನೇ? ಬಿಳಿಯರ ಈ ಭಯಕ್ಕೆ ತಕ್ಕ ಉತ್ತರವೆಂದರೆ, 2044ರ ಹೊತ್ತಿಗೆ ಬಣ್ಣ ಒಂದು ವಿಷಯವೇ ಆಗಿ ಉಳಿಯದು.
ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ನ ವರದಿಯ ಪ್ರಕಾರ 35ಶೇ. ಗಿಂತ ಹೆಚ್ಚು ಅಮೆರಿಕನ್ನರಿಗೆ ಅವರ ಹತ್ತಿರದವರಲ್ಲಿ ಬೇರೆ ಬಣ್ಣದವರಿದ್ದಾರೆ. ‘ವಲಸಿಗರ ಏಕೀಕರಣ ಮತ್ತು ಅವರ ಮೂಲವೆನ್ನುವುದು ಈ ತರದ ಬೆರೆಯುವಿಕೆಗೆ ಮೂಲಕಾರಣ. ಮುಂದಿನ ದಿನಗಳಲ್ಲಿ ಮೂಲನಿವಾಸಿಗಳ ಈ ಬಣ್ಣದ ಸಂಸ್ಕೃತಿಯೆನ್ನುವದು ಈಗಿರುವುದಕ್ಕಿಂತ ಕಡಿಮೆಯಾಗಿ ಎಲ್ಲವೂ ಮಸುಕು ಮಸುಕಾಗುವುದು ನಿಶ್ಚಿತ. ವಲಸಿಗರು ಬರೀ ನಮ್ಮ ಶಾಲೆಗಳಲ್ಲಿ, ಕೆಲಸಕ್ಕೆ, ಅಥವಾ ನೆರೆಹೊರೆಯವರಾಗಿ ಬೆರೆಯುವುದಷ್ಟೇ ಅಲ್ಲ ನಮ್ಮ ಕುಟುಂಬದೊಳಗೂ ಸೇರಿ ಹೋಗುತ್ತಿದ್ದಾರೆ. “ಅವರು” ಅಂತಿರುವುದು ವೇಗವಾಗಿ “ನಾವು” ಎಂದಾಗುತ್ತಿದೆ. ಇದನ್ನು ಆರ್ಥಕವಾಗಿ ಅಳೆಯಲು ಸಾಧ್ಯವಿಲ್ಲದಿದ್ದರೂ ಈ ಬೆರೆಯುವಿಕೆ ಹಳೆಯ ಉದ್ಯಮ ನಗರಿಗಳನ್ನು ಕೇಂದ್ರೀಯ ನಗರಗಳನ್ನಾಗಿಸುತ್ತದೆ. ನ್ಯೂಯಾರ್ಕ್ ನಗರವು ಹೀಗೇ ನಿರಾಶ್ರಿತರಿಂದ ತುಂಬಿದೆ. ಇದೊಂದೇ ನಗರ ಕಳೆದೊಂದು ದಶಕದಲ್ಲಿ 40000 ನಿರಾಶ್ರಿತರಿಗೆ ಆಶ್ರಯ ನೀಡಿದೆ. ವಿಯೆಟ್ನಾಂ, ಬರ್ಮಾ, ಭುತಾನ್, ಬೋಸ್ನಿಯಾ, ಸೋಮಾಲಿ ಬಂಟು, ಇರಾಕ್, ಸಿರಿಯಾ, ಉಕ್ರೇನ್ ಹೀಗೆ ಹತ್ತು ಹಲವು ದೇಶಗಳ ನಿರಾಶ್ರಿತರು ಅದಾಗಲೇ ಇದ್ದ ಐರಿಷ್, ಜರ್ಮನ್, ಇಟಾಲಿಯನ್, ಪೋಲಿಶ್ ಜನರನ್ನು ಸೇರಿದ್ದಾರೆ.
ಸ್ಕೆನೆಕ್ಟಡಿ ಯುಟಿಕಾದಲ್ಲಿನ ಒಂದ ನಗರ. ಇಲ್ಲಿ 62000 ಜನಸಂಖ್ಯೆಯಲ್ಲಿ ಕಾಲು ಭಾಗದಷ್ಟು ವಲಸಿಗರು. ಅವರಲ್ಲಿ 7000 ಬೋಸ್ನಿಯನ್ ನಿರಾಶ್ರಿತರು. ಮೂಲನಿವಾಸಿಗಳು ನಗರ ತೊರೆಯಲು ಶುರುಮಾಡಿದ್ದೇ 2000-2015ರ ಒಳಗೆ ಬಹಳಷ್ಟು ವಿದೇಶಿಗರು ಬಂದು ನೆಲೆಸಲು ಪ್ರಾರಂಭಿಸಿದರು. ಇಲ್ಲಿನ ಕಡಿಮೆ ದರದ ಮನೆಗಳಿಗೆ 3500 ವಿದೇಶಿಗರು ಬಂದು ಸೇರಿಕೊಂಡರು. ಬೋಸ್ನಿಯನ್ನರು ನೂರಾರು ಕೆಟ್ಟಸ್ಥಿತಿಯಲ್ಲಿದ್ದ ಮನೆಗಳನ್ನು ಖರೀದಿಸಿ ಅದಕ್ಕೊಂದು ಹೊಸ ರೂಪ ಕೊಟ್ಟು ಬಾಡಿಗೆಗೆ ಇಟ್ಟರು. ನಗರದಲ್ಲಿದ್ದ ಹಳೆಯ ಮೆಥಾಡಿಸ್ಟ್ ಚರ್ಚ್ ಒಂದು ಕೆಡವಲು 1ಮಿಲಿಯನ್ ಖರ್ಚಾಗುತ್ತಿತ್ತು, ಬೋಸ್ನಿಯಾದ ವಲಸಿಗರು ಅದನ್ನು ಖರೀದಿಸಿ ಒಂದೊಳ್ಳೆಯ ಮಸೀದಿಯಾಗಿ ಪರಿವರ್ತಿಸಿದರು.
ಡೆಟ್ರಾಯಿಟ್ ಒಂದು 139 ಚದರ ಮೈಲಿಯಷ್ಟು ದೊಡ್ಡ ನಗರ. ಇಡೀ ಮ್ಯಾನಟ್ಟನ್, ಬೋಸ್ಟನ್, ಸ್ಯಾನ್ ಫ್ರಾನ್ಸಿಸ್ಕೊ ನಗರವನ್ನು ಹಿಡಿಸುವಷ್ಟು ದೊಡ್ಡದು. ಆದರಲ್ಲಿ ಮೂರರಲ್ಲಿ ಒಂದು ಭಾಗದಷ್ಟು ಮನೆಗಳು ಖಾಲಿ ಬಿದ್ದಿವೆ. 1960ರಿಂದೀಚೆಗೆ 60ಶೇ. ದಷ್ಟು ಈ ನಗರದ ಜನಸಂಖ್ಯೆ ಇಳಿಮುಖವಾಗಿದೆ. ಡೆಟ್ರಾಯಿಟ್ ನಗರದೊಳಗೇ 2 ಚದರ ಮೈಲಿಯ ಇನ್ನೊಂದು ಮಿನಿ ನಗರ ಹ್ಯಾಮ್ಟ್ರ್ಯಾಕ್ ನಿರ್ಮಾಣವಾಗಿತ್ತು. ಅಲ್ಲಿದ್ದ ಫ್ಯಾಕ್ಟರಿಯೊಂದು 1980ರಲ್ಲಿ ಅದರ ಕೆಲಸಗಾರರಿಗೆ ಕಾಲು ಭಾಗದಷ್ಟು ಲಾಭವನ್ನು ಹಂಚಿ ಮುಚ್ಚಿತು. ಇವತ್ತು ಪ್ರತೀ ಚದರ ಮೈಲಿಗೆ 10000 ನಾಗರಿಕರು ವಾಸಿಸುತ್ತಿದ್ದಾರೆ. ಈಗ ಹ್ಯಾಮ್ಟ್ರ್ಯಾಕ್ ನ ನಿವಾಸಿಗಳಲ್ಲಿ ಹೆಚ್ಚಿನವರು ಬಾಂಗ್ಲಾ, ಯೆಮನ್, ಪೋಲೆಂಡ್, ಅಲ್ಬೇನಿಯಾ, ಬೋಸ್ನಿಯಾದಿಂದ ಬಂದವರು. 1970ರಲ್ಲಿ 90ಶೇ.ದಷ್ಟಿದ್ದ ಪೋಲೆಂಡ್ ನ ನಾಗರಿಕರು ಇವತ್ತು 13 ಶೇ. ದಷ್ಟು ಇಳಿದಿದ್ದಾರೆ. ಅಲ್ಲಿ ಅರ್ಧದಷ್ಟು ನಾಗರಿಕರ ಭಾಷೆ ಇವತ್ತು ಇಂಗ್ಲೀಷ್ ಅಲ್ಲ. ಎರಡು ಡಜನ್ ಗೂ ಅಧಿಕ ಭಾಷೆ ಮಾತಾಡುವ ಮಕ್ಕಳು ಶಾಲೆಗಳಲ್ಲಿ ಒಟ್ಟಾಗಿ ಕಲಿಯುತ್ತಿದ್ದಾರೆ. ನಗರದ ಸಾಮಾಜಿಕ ವಿಚಾರಗಳು 5 ಭಾಷೆಯಲ್ಲಿ ಅಚ್ಚಾಗುತ್ತದೆ. 2015ರಲ್ಲಿ ಹ್ಯಾಮ್ಟ್ರ್ಯಾಕ್ ಮೊದಲ ಮುಸ್ಲಿಂ ಕೌನ್ಸಿಲ್ ನನ್ನು ಆಯ್ಕೆ ಮಾಡಿತು! ವಲಸೆಯೆನ್ನುವುದು ನಗರಗಳ ಅನ್ನಾಹಾರ. ನಾವು ಇನ್ನೂ ಹೆಚ್ಚು ವಲಸಿಗರನ್ನು ಬಯಸುತ್ತೇವೆ ಎನ್ನುತ್ತಾರೆ ನಗರದ ಕೌನ್ಸಿಲರ್ ಶಹಾಬ್ ಅಹ್ಮದ್.
ನಾಗರಿಕರನ್ನು ಕಳೆದುಕೊಳ್ಳುತ್ತಿರುವ ನಗರಗಳು ವಲಸಿಗರನ್ನು ಬರಮಾಡಿಕೊಳ್ಳಬೇಕು. ಅದಕ್ಕಾಗಿ ವಲಸೆ ಕಾನೂನಿನಲ್ಲಿ ವಿಶೇಷ ರಿಯಾಯಿತಿ ನೀಡಬೇಕು . ಕೆನಡಾದಲ್ಲಿ ಪ್ರಾವಿನ್ಶಿಯಲ್ ನಾಮಿನೀ ಪ್ರೋಗ್ರಮ್ ಮೂಲಕ ಶೀಘ್ರ ವಲಸೆ ಅನುಮತಿಯನ್ನು ವಿದೇಶಿಗರಿಗೆ ಕೊಡಲಾಗುತ್ತದೆ. ಇದರಿಂದ ಒಂಟಾರಿಯೊದಂತಹ ನಗರಗಳು ಬ್ರಿಟಿಷ್ ಕೊಲಂಬಿಯಾ ಮತ್ತು ಕ್ಯುಬೆಕ್ ನಗರಗಳೊಂದಿಗೆ ವಲಸಿಗರಿಗಾಗಿ ಸ್ಪರ್ಧಿಸುತ್ತಿವೆ. 13 ಶೇ. ಅಮೆರಿಕಾದ ವಲಸಿಗರು 40ಶೇ. ಮನೆ ಆಸ್ತಿ ಮಾಲೀಕರಾಗಿದ್ದಾರೆ ಎನ್ನುತ್ತದೆ ಅಮೇರಿಕಾದ ಮಾರ್ಟ್ ಗೇಜ್ ಬ್ಯಾಂಕರ್ ಅಸೋಸಿಯೇಷನ್ ನ ಅಧ್ಯಯನದ ವರದಿ. ಅಮರಿಕಾ ನಿವಾಸಿಗಳಾಗ ಬಯಸಿದರೆ ಸಣ್ಣ ಸಣ್ಣ ಬಾಲ್ಟಿಮೋರ್, ಬಫೆಲೊ, ಕ್ಯಾಮ್ಡನ್ ನಂತಹ ನಗರಗಳಲ್ಲಿ ನೆಲೆಸಿ ಆಸ್ತಿ ಖರೀದಿಸಿ 5 ವರ್ಷ ವಾಸಿಸಿ, ಅಮೆರಿಕಾದ ನಾಗರಿಕತ್ವ ಸಿಗುತ್ತದೆ ಎನ್ನುತ್ತಾರೆ.
ಹೊಸಬರಿಗೆ ಆಶ್ರಯ ಕೊಡುವಷ್ಟು ಜಾಗ ಅಮೆರಿಕಾದಲ್ಲಿದೆ. ಬೇಕಾದಷ್ಟು ಖಾಲಿ ಮನಗಳಿವೆ. ಅಮೆರಿಕಾ ಒಂದರಲ್ಲೇ 7 ಬಿಲಿಯನ್ ನಷ್ಟು ಮನುಷ್ಯರಿಗೆ ಆಶ್ರಯ ಕೊಡುವಷ್ಟು ಜಾಗವಿದೆ. 3.8 ಮಿಲಿಯನ್ ಚದರ ಮೈಲಿಯ ಅಮರಿಕಾದಲ್ಲಿ ಈಗ ಪ್ರತೀ ಚದರ ಮೈಲಿಗೆ ಕೇವಲ 86 ಜನರಿದ್ದಾರೆ. ಜಗತ್ತಿನೆಲ್ಲೆಡೆ ಕಣ್ಣು ಹಾಯಿಸಿದರೆ, ಮಕಾವ್ ನಗರ 52000 ಜನರನ್ನು ಪ್ರತೀ ಚದರ ಮೈಲಿಗೆ ಹೊಂದಿದೆ, ಸಿಂಗಪುರ್ 20000, ಬಾಂಗ್ಲಾದೇಶ 2980. ಅಮೆರಿಕಾ ಜನಸಾಂದ್ರತೆಯಲ್ಲಿ ಪ್ರಪಂಚದಲ್ಸಿ 191 ನೇ ಸ್ಥಾನದಲ್ಲಿದೆ. ಅಮೆರಿಕಾದಲ್ಲೇ ಅತಿ ಹಚ್ಚು ಜನಸಂಖ್ಯೆ ಇರುವ ನಗರ ನ್ಯೂಜೆರ್ಸಿ. ಅಲ್ಲಿಯೇ 1200 ಜನರು ಪ್ರತೀ ಚದರ ಮೈಲಿಗೆ ಆರಾಮವಾಗಿ ವಾಸಿಸಬಹುದು. ಅದರ ಎರಡು ಅಥವಾ ಮೂರರಷ್ಟು ಜನಸಂಖ್ಯೆ ಹಚ್ಚಿದರೂ ನಾವು ಬಾಂಗ್ಲಾ ದೇಶದಂತಾಗುವುದಿಲ್ಲ.
ನ್ಯೂಯಾರ್ಕ್ ನ ಕನ್ಸರ್ವೇಟಿವ್ ನ್ಯೂಯಾರ್ಕ್ ಟೈಮ್ಸ್ ನ ಅಂಕಣಕಾರ ಬ್ರೆಟ್ ಸ್ಟೀಫನ್ಸ್ ಹೇಳುವ ಪ್ರಕಾರ, ಅಮೆರಿಕಾ ದೊಡ್ಡದಾಗಿದೆ. ಬಹಳಷ್ಟು ಖಾಲಿ ಬಿದ್ದಿದೆ. ಒಂಟಿಯಾಗಿದೆ. 80ಶೇ. ದಷ್ಟು ಅಮೆರಿಕಾದ ಜನಸಂಖ್ಯೆಯು ನಗರಗಳಿಗೆ ಕೇವಲ 3 ಶೇ. ದಷ್ಟು ಅಮೆರಿಕಾದ ನೆಲಕ್ಕೆ ಸೀಮಿತವಾಗಿದೆ. ಹಳ್ಳಿಗಳು ಮತ್ತು ಸಣ್ಣ ನಗರಗಳು ಹೆಚ್ಚು ಕಡಿಮೆ ಬರಿದಾಗಿದೆ. ನೂರಾರು ಹಳ್ಳಿಗಳಲ್ಲಿ ಹುಟ್ಟಿಗಿಂತ ಸಾಯುವವರ ಸಂಖ್ಯೆಯೇ ಅಧಿಕವಾಗಿದೆ ಎನ್ನುತ್ತಿದೆ ಅಗ್ರಿಕಲ್ಚರ್ ವಿಭಾಗದ ವರದಿ. ಟ್ರಂಪ್ ಸರಕಾರ ಅಮೆರಿಕಾವನ್ನು ಲ್ಯಾಟಿನ್ ಅಮೆರಿಕನ್ನರಿಂದ ರಕ್ಷಿಸಬೇಕು ಅನ್ನುತ್ತಿರುವಾಗಲೇ ಅಮೆರಿಕಾದ ಹೃದಯಭಾಗವೇ ಬರಿದಾಗಿ ಕಸವಾಗುತ್ತಿದೆ.
ಬರೀ ನಗರಗಳನ್ನೇ ಗುರಿಯಾಗಿಸಿಕೊಳ್ಳದೆ ಖಾಲಿ ಇರುವ ಹಳ್ಳಿಗಳು ಸಣ್ಣ ನಗರಗಳಿಗೂ ವಾಸಸ್ಥಾನವನ್ನು ವಿಸ್ತರಿಸಿಕೊಳ್ಳುವುದು ಪ್ರತಿ ವಲಸಿಗರ ವಲಸೆಯ ಯೋಜನೆಯ ಭಾಗವಾಗಬೇಕು.
ನಾನು ಅಮೆರಿಕಾ ನಿವಾಸಿಯಾಗಿ ನನ್ನ ಮಕ್ಕಳು, ಕುಟುಂಬದವರ ಪರವಾಗಿ ಈ ವಾದವನ್ನು ಒಪ್ಪುತ್ತೇನೆ. ಈ ಭೂಮಿ ನಿಮ್ಮ ಭೂಮಿ, ಈ ಭೂಮಿ ನಮ್ಮದೂ ಕೂಡ. ಇದು ನಿಮಗೆ ಮತ್ತು ನಮಗಿಬ್ಬರಿಗೂ ಸೇರಿರುವುದು. ನಾವಿಲ್ಲಿರುವೆವು ಮತ್ತು ನಾವು ಹಿಂದಿರುಗಿ ಹೋಗಲು ಬಂದಿಲ್ಲ. ನಮ್ಮ ಮಕ್ತಳು ಇಲ್ಲಿಯೇ ಬೆಳೆಯುತ್ತಿದ್ದಾರೆ. ಇದು ನಮ್ಮ ದೇಶವೂ ಕೂಡ. ಇದು ನಮ್ಮ ಅಮೆರಿಕಾ.
ಟ್ರಂಪ್, ಮೇ, ಅಥವ ಓರ್ಬನ್ ಇಷ್ಟ ಪಡಲಿ ಬಿಡಲಿ ವಲಸಿಗರು ಬರುತ್ತಲೇ ಇರುತ್ತಾರೆ. ಹೊಸ ಕನಸನ್ನು ಹೊತ್ತು, ಉತ್ತಮ ಬದುಕು ಬಯಸಿ, ಮಕ್ಕಳಿಗೊಂದು ಒಳ್ಳೆಯ ಭವಿಷ್ಯ ರೂಪಿಸುವ ಆಸೆಯೊಂದಿಗೆ. ಪಾಪ್ಯುಲಿಸ್ಟ್ ಗಳಿಗೆ ಮತ ನೀಡಿದವರು ಹೊಸಬರ ಆಗಮನದಿಂದ ಧೃತಿಗೆಡಬೇಕಿಲ್ಲ. ಹೆಚ್ಚಿನವರು ಈಗಿನ್ನೂ ತರುಣರು. ನಾಳೆ ನಿಮ್ಮ ವಯಸ್ಸಾದ ಜನತೆಗೆ ಪಿಂಚಣಿ ನೀಡುವುದರ ಮೂಲಕ ಈ ದೇಶಕ್ಕೆ ಹೊಸ ಹುರುಪು, ಹೊಸ ಉದ್ಯಮ, ಹೊಸತನವನ್ನು ನೀಡಿ ಜೊತೆಯಾಗುತ್ತಾರೆ. ಅವರು ಕಾನೂನು ಬದ್ಧವಾಗಿ ಬರುತ್ತಾರೊ ಅಥವಾ ಅಕ್ರಮವಾಗಿ, ಆದರೆ ಸಿಗುವ ಅಲ್ಪ ಸವಲತ್ತಿನಲ್ಲೇ ಅವರ ದೇಶದ ಜನತೆಗಿಂತ ಉತ್ತಮ ಬದುಕು ಕಟ್ಟಿಕೊಳ್ಳುತ್ತಾರೆ. ಜೊತೆಗೆ ಅವರಿರುವ ಹೊಸ ದೇಶ ಅಮೆರಿಕಾವನ್ನೂ ಬೆಳೆಸುತ್ತಾರೆ.
ಅನುವಾದ : ಪಲ್ಲವಿ ಇಡೂರು
ಪಲ್ಲವಿ ಇಡೂರ್ ಮೂಲತಃ ಕುಂದಾಪುರ ತಾಲೂಕಿನ ಉಪ್ಪುಂದವೆಂಬ ಕಡಲತಡಿಯ ಊರಿನವರು. ಸಮಾನ ಮನಸ್ಕರ ತಂಡದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪಲ್ಲವಿ ಕನ್ನಡ ಸಾಹಿತ್ಯ ಲೋಕಕ್ಕೆ ಜೊಲಾಂಟಾ ಎಂಬ ಅದ್ಭುತ ಸಾಧಕಿಯನ್ನು ಮತ್ತು ಆಕೆಯ ಜೀವನಕಥನವನ್ನು ಪರಿಚಯಿಸಿದ್ದಾರೆ.