‘ಭಾರತವೆಂಬ ಪರಿಕಲ್ಪನೆ’ : ರೋಮಿಲಾ ಥಾಪರ್ ಮತ್ತು ಗಾಯತ್ರಿ ಚಕ್ರವರ್ತಿ ಸ್ಪಿವಾಕ್ ಮಾತುಕತೆ

ಈ ಮಾತುಕತೆ ಆಗಸ್ಟ್ 14, 2017 ರಂದು ಕಲ್ಕತ್ತಾದ ಐಸಿಸಿಆರ್‌ನ ಸತ್ಯಜಿತ್ ರೇ ಸಭಾಂಗಣದಲ್ಲಿ, 3 ನೇ ವಾರ್ಷಿಕ ಹಿಸ್ಟರಿ ಫಾರ್ ಪೀಸ್ ಕಾನ್ಫರೆನ್ಸ್, ದಿ ಐಡಿಯಾ ಆಫ್ ಇಂಡಿಯಾದ ಅಂಗವಾಗಿ ನಡೆಯಿತು.

ಪ್ರಾಚೀನ ಭಾರತದ ಅಧ್ಯಯನದ ಕ್ಷೇತ್ರದಲ್ಲಿ ದೊಡ್ಡ ಹೆಸರನ್ನು ಮಾಡಿರುವ ರೋಮಿಲಾ ಥಾಪರ್ ಭಾರತದ ಖ್ಯಾತ ಇತಿಹಾಸಕಾರರಲ್ಲೊಬ್ಬರು. ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ್ದ ಇವರು ಅರ್ಲಿ ಇಂಡಿಯಾ, ಹಿಸ್ಟರಿ ಆಂಡ್ ಬಿಯಾಂಡ್, ದ ಪಾಸ್ಟ್ ಆಸ್ ಪ್ರೆಸೆಂಟ್ ಇತ್ಯಾದಿ ಕೃತಿಗಳ ಲೇಖಕಿಯೂ ಹೌದು. ತಮ್ಮ ಕೆಲಸಕ್ಕಾಗಿ ನೀಡಲಾಗುವ ಶೈಕ್ಷಣಿಕ ಗೌರವಗಳನ್ನು ಮಾತ್ರ ಸ್ವೀಕರಿಸುವ ನಿರ್ಧಾರವನ್ನು ಉಲ್ಲೇಖಿಸಿ ಪ್ರತಿ ಬಾರಿಯೂ ಭಾರತದ ಮೂರನೇ ಅತ್ಯುನ್ನತ ಗೌರವವಾದ ಪದ್ಮಭೂಷಣ ಪ್ರಶಸ್ತಿ ಗೌರವನ್ನು ನಿರಾಕರಿಸಿದರು.

ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಶ್ ಸಾಹಿತ್ಯ ಹಾಗೂ ತುಲನಾತ್ಮಕ ಸಾಹಿತ್ಯದ ಪ್ರಾಧ್ಯಾಪಕಿ ಗಾಯತ್ರಿ ಚಕ್ರವರ್ತಿ ಸ್ಪಿವಾಕ್ ರವರು ಸಾಹಿತ್ಯ ಸಿದ್ಧಾಂತಿ ಮತ್ತು ಸ್ತ್ರೀವಾದಿ ವಿಮರ್ಶಕರಾಗಿ ಶೈಕ್ಷಣಿಕ ವಲಯದಲ್ಲಿ ದೊಡ್ಡ ಹೆಸರು. ಅತ್ಯಂತ ಪ್ರಭಾವಶಾಲಿ ವಸಾಹತೋತ್ತರ ಚಿಂತಕರಲ್ಲಿ ಒಬ್ಬರೆಂದು ಗುರುತಿಸಲ್ಪಡುವ ಇವರು ಇನ್ಸ್ಟಿಟ್ಯೂಟ್ ಫಾರ್ ಕಂಪ್ಯಾರಿಟಿವ್ ಲಿಟರೇಚರ್ ಅಂಡ್ ಸೊಸೈಟಿಯ ಸ್ಥಾಪಕ ಸದಸ್ಯರಾಗಿದ್ದಾರೆ. ಇವರ ಹಲವು ಪುಸ್ತಕಗಳಲ್ಲಿ ದ ಪೋಸ್ಟ್ ಕೊಲೋನಿಯಲ್ ಕ್ರಿಟಿಕ್, ಡೆತ್ ಆಫ್ ಅ ಡಿಸಿಪ್ಲಿನ್, ನ್ಯಾಷನಲಿಸಂ ಆಂಡ್ ಇಮ್ಯಾಜಿನೇಷನ್ ಇತ್ಯಾದಿಗಳು ಪ್ರಮುಖ ಕೃತಿಗಳು.

ಗಾಯತ್ರಿ ಚಕ್ರವರ್ತಿ ಸ್ಪಿವಾಕ್: ಇಂದಿನ ವೇದಿಕೆಯಲ್ಲಿ ನಾವಿಬ್ಬರೂ ಅತಿಥಿಗಳಾಗಿದ್ದರೂ ನನ್ನ ಹಳೆ ಗೆಳತಿಯೋರ್ವಳನ್ನು ಕೋಲ್ಕತ್ತಾಗೆ ಆಹ್ವಾನಿಸುತ್ತಿರುವಂತೆ ನನಗಿಂದು ಭಾಸವಾಗುತ್ತಿದೆ. ಏಕೆಂದರೆ ನನ್ನ ಗೆಳತಿಯನ್ನು ನಾನಿಲ್ಲಿ ನೋಡುತ್ತಿರುವುದು ಇದೇ ಮೊದಲು. ಇನ್ನು ಗೌರವ ಡಾಕ್ಟರೇಟನ್ನು ನೀಡುತ್ತಿರುವ ಪ್ರೆಸಿಡೆನ್ಸಿ ಯೂನಿವರ್ಸಿಟಿಯ ನಡೆಯು ನಿಜಕ್ಕೂ ಉತ್ತಮವಾದದ್ದು. ಅಂದಹಾಗೆ ಈ ಬಗೆಗಿನ ಮಾತುಕತೆಯು ಶುರುವಾಗಿದ್ದು ಹಲವು ವರ್ಷಗಳ ಹಿಂದೆ…

ರೋಮಿಲಾ ಥಾಪರ್: ಹೌದು, ಬಹಳ ವರ್ಷಗಳ ಹಿಂದೆ…

ಸ್ಪಿವಾಕ್: ನೀವೆಲ್ಲಾ ಗಮನಿಸುತ್ತಿರುವಂತೆ ಇವರ ಜೊತೆ ವೇದಿಕೆಯನ್ನು ಹಂಚಿಕೊಳ್ಳುತ್ತಿರುವ ಉತ್ಸಾಹವು ನನ್ನಲ್ಲಿ ಕೊಂಚ ಹೆಚ್ಚೇ ಇದೆ. ಈ ಚರ್ಚೆಯು ಶುರುವಾಗಿ ಹಲವಾರು ವರ್ಷಗಳೇ ಕಳೆದಿವೆ. ಕೆಲವೊಮ್ಮೆ ನಮ್ಮಿಬ್ಬರ ಮಧ್ಯೆ, ಇನ್ನು ಕೆಲವೊಮ್ಮೆ ನೆರೆದಿದ್ದ ಸಭಿಕರೆದುರು, ನ್ಯೂಯಾರ್ಕಿನಲ್ಲಿ… ಹೀಗೆ ಸಾಕಷ್ಟು ಬಾರಿ. ರೋಮಿಲಾರು ನೀಡಿರುವ ಅದೆಷ್ಟೋ ಕೊಡುಗೆಗಳಲ್ಲಿ ಢಾಳಾಗಿ ಕಾಣುವ ಮಾನವಿಕ ಕಲ್ಪನೆಯನ್ನು ನ್ಯೂಯಾರ್ಕಿನಲ್ಲಿ ನಾನು ಒಪ್ಪಿಕೊಂಡಿದ್ದೆ. ಆದರೆ ಇಂದು ನನ್ನ ಪಾತ್ರವು ಪ್ರಶ್ನೆಗಳನ್ನು ಕೇಳುವುದಕ್ಕೆ ಮಾತ್ರ ಸೀಮಿತ – ಏಕೆಂದರೆ ಇಲ್ಲಿರುವುದು ಇತಿಹಾಸದ ಬಗೆಗಿನ ಬೋಧನೆ ಮತ್ತು ಈ ಬಗ್ಗೆ ನನಗೆ ಏನೆಂದರೆ ಏನೂ ತಿಳಿದಿಲ್ಲ. ರೋಮಿಲಾರೊಂದಿಗೆ ನಾನಿಂದು ಕೇಳುವ ಪ್ರಶ್ನೆಯೇನೆಂದರೆ ಭಾರತವೆಂಬ ಪರಿಕಲ್ಪನೆಯನ್ನು ಬೋಧಿಸುವುದು ಹೇಗೆ?

ರೋಮಿಲಾ: ಮೊಟ್ಟಮೊದಲಿಗೆ ಇಷ್ಟೊಳ್ಳೆಯ ಅವಕಾಶವನ್ನು ನನಗೆ ನೀಡಿದ್ದಕ್ಕಾಗಿ ಸೀಗಲ್ ಸಂಸ್ಥೆಗೆ ನನ್ನ ಧನ್ಯವಾದಗಳನ್ನು ಸಲ್ಲಿಸಬಯಸುತ್ತೇನೆ. ನಾನು ಮತ್ತೆ ಗಾಯತ್ರಿ ಹಲವು ಬಾರಿ ಖಾಸಗಿಯಾಗಿ, ದಿಲ್ಲಿ-ನ್ಯೂಯಾರ್ಕ್‍ಗಳಲ್ಲಿರುವ ನಮ್ಮ ಮನೆಯ ಖಾಸಗಿ ವಾತಾವರಣದಲ್ಲಿ ಈ ಬಗ್ಗೆ ತಾಸುಗಟ್ಟಲೆ ಚರ್ಚಿಸಿದ್ದೇವೆ. ಪರಸ್ಪರರ ಕಾಲೆಳೆದಿದ್ದೇವೆ. ನಕ್ಕು ಹಗುರಾಗಿದ್ದೇವೆ. ಆದರೆ ನನಗೆ ನೆನಪಿರುವ ಮಟ್ಟಿಗೆ ಸಭಿಕರೆದುರು ಹೀಗೆ ನಾವಿಬ್ಬರೂ ಮುಖಾಮುಖಿಯಾಗುತ್ತಿರುವುದು ಇದೇ ಮೊದಲ ಸಲ. ಹೀಗಾಗಿ ನಾವಿಬ್ಬರು ಈ ಚರ್ಚೆಯನ್ನು ನಡೆಸುತ್ತಿರುವಂತೆ ಆಗಾಗ ಕೊಂಚ ನಕ್ಕರೂ, ಪರಸ್ಪರರನ್ನು ಒಂದಷ್ಟು ಬೈದುಕೊಂಡರೂ ನೀವು ನಮ್ಮನ್ನು ದಯಮಾಡಿ ಕ್ಷಮಿಸಬೇಕಾಗಿ ನಿಮ್ಮೆಲ್ಲರನ್ನು ಕೇಳಿಕೊಳ್ಳುತ್ತಿದ್ದೇನೆ. ಇದು ನಮ್ಮಿಬ್ಬರ ನಡುವಿನ ಪರಿಶುದ್ಧ ಗೆಳೆತನವೇ ಹೊರತು ಬೇರೇನಲ್ಲ.

ಬಹಳ ಕಷ್ಟವೆನಿಸುವ ಪ್ರಶ್ನೆಯೊಂದಿಗೆ ನೀವು ಚರ್ಚೆಯನ್ನು ಆರಂಭಿಸಿದ್ದೀರಿ. ಅಷ್ಟಕ್ಕೂ ಭಾರತದ ಪರಿಕಲ್ಪನೆ ಎಂದರೇನು? ಓರ್ವ ಇತಿಹಾಸಕಾರ್ತಿಯಾಗಿ ಇದೇ ಪ್ರಶ್ನೆಯನ್ನು ನಾನೀಗ ಕೊಂಚ ಮಾರ್ಪಡಿಸಿ ಕೇಳುತ್ತಿದ್ದೇನೆ: ಭಾರತದ ಕಲ್ಪನೆಯು ಮೊಟ್ಟಮೊದಲ ಬಾರಿಗೆ ಹುಟ್ಟಿದ್ದು ಯಾವಾಗ ಎಂದು. ಖಂಡಿತವಾಗಿಯೂ ಇದನ್ನು ನಿಖರವಾದ ಒಂದು ದಿನಾಂಕದೊಂದಿಗೆ ಹೇಳುವುದು ಕಷ್ಟ. ಅವುಗಳ ಜಾಡು ಹಿಡಿದು ಹೋದರೆ ಅವುಗಳು ಎತ್ತೆತ್ತಲೋ ಸಾಗುವ ಕಾರಣದಿಂದಾಗಿ, ನಿರ್ದಿಷ್ಟವಾಗಿ ಇದೇ ಕಾಲಘಟ್ಟದಲ್ಲಿ ಹೀಗಾಯಿತು ಎಂದು ಷರಾ ಬರೆದಿಡಲು ಇಲ್ಲಿ ಸಾಧ್ಯವಿಲ್ಲ. ಇದನ್ನೊಂದು ಆಧುನಿಕ ಕಲ್ಪನೆ ಎನ್ನುತ್ತಾ ಸದ್ಯಕ್ಕೆ ನಾನು ಚರ್ಚೆಯನ್ನು ಆರಂಭಿಸುತ್ತೇನೆ. ಪ್ರಾಯಶಃ ವಸಾಹತುಶಾಹಿಯ ದಿನಗಳಲ್ಲಿ ಹುಟ್ಟಿಕೊಂಡ ಒಂದು ಕಲ್ಪನೆಯಿದು. ಹಲವು ಬಾರಿ ಜನಸಾಮಾನ್ಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಭಾರತವೆಂಬ ಕಲ್ಪನೆಯು ವೈದಿಕ ಕಾಲದಲ್ಲಿತ್ತು, ಗುಪ್ತರ ಕಾಲದಲ್ಲಿತ್ತು, ಮೊಘಲರ ಕಾಲದಲ್ಲಿತ್ತು ಇತ್ಯಾದಿಗಳನ್ನು. ಇದ್ಯಾವುದೂ ಕೂಡ ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ. ”ನಾನೆಂದರೆ ರಾಷ್ಟ್ರವೇ? ಒಂದು ರಾಜ್ಯವೇ? ಒಂದು ದೇಶವೇ?”, ಇಂಥಾ ಪ್ರಶ್ನೆಗಳ ಬಗ್ಗೆ ಜನಸಾಮಾನ್ಯರಿಗಿದ್ದ ದೃಷ್ಟಿಕೋನಗಳ ಬಗ್ಗೆ ನಮಗಿನ್ನೂ ತಿಳಿದಿಲ್ಲ. ಯಾವ ಹೆಸರುಗಳಿಂದ ಗುರುತಿಸಲಾಗುತ್ತಿತ್ತು ಎಂಬುದರ ಬಗ್ಗೆಯೂ ಮಾಹಿತಿಯಿಲ್ಲ. ನಾನೀಗ ಸುಮೇರಿಯನ್ನರ ಉದಾಹರಣೆಯನ್ನು ನೀಡುತ್ತಾ ಬಹಳ ಹಿಂದಿನ ಕಾಲಮಾನಕ್ಕೆ ಸರಿಯುತ್ತಿದ್ದೇನೆ. ಸರಿಸುಮಾರು ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಸುಮೇರಿಯನ್ನರು ಪೂರ್ವಭಾಗದಲ್ಲಿದ್ದ ದೇಶಗಳನ್ನು ದಾಖಲಿಸಿರುವ ಉಲ್ಲೇಖಗಳಿವೆ. ಇಂಥಾ ದೇಶಗಳಲ್ಲಿ ಒಂದರೊಂದಿಗೆ ಸುಮೇರಿಯನ್ನರಿಗೆ ವಾಣಿಜ್ಯ-ವಹಿವಾಟಿನ ಸಂಬಂಧಗಳಿದ್ದವು. ಹೀಗೆ ವಿನಿಮಯವಾಗುತ್ತಿದ್ದ ವಸ್ತುಗಳು ಇಂಡಸ್ ಬಯಲುಸೀಮೆಯಿಂದ ಬರುತ್ತಿದ್ದವು ಎಂದು ಹೇಳಲಾಗುತ್ತದೆ. ಹೀಗಾಗಿ ನಾವು ಇದನ್ನು ಸಿಂಧೂ ನಾಗರೀಕತೆಗೆ ಗಂಟುಹಾಕಲು ಪ್ರಯತ್ನಿಸುತ್ತೇವೆ. ಸುಮೇರಿಯನ್ನರು ಇದನ್ನು ಮೆಲೂಹಾ ಎಂದು ಕರೆದಿದ್ದರು. ಇದು ನಮಗೆ ತಿಳಿದಿರುವ ಅಥವಾ ಸಾಮಾನ್ಯವಾಗಿ ಉಲ್ಲೇಖಿಸಲಾಗುವ ಪ್ರಾಕೃತ್ ಮೆಲುಕ್ಖಾ, ಮಿಲಕ್ಖಾ ಅಥವಾ ಮಿಲಕ್ಖು ಪದಗಳ ಸುಮೇರಿಯನ್ ಪ್ರಯೋಗವೆಂದೂ ನಾವು ಅರ್ಥೈಸಿಕೊಂಡಿದ್ದೇವೆ.

ಆದರೆ ವೇದಗಳ ಅವಧಿಯಲ್ಲಿ ನಮಗೆ ”ಆರ್ಯಾವರ್ತ” ಎಂಬ ಹೆಸರಿನ ಸಹಿತವಾಗಿ, ದಾಖಲೆಗಳ ರೂಪದಲ್ಲಿ ಸಾಕ್ಷಿಗಳು ಲಭ್ಯವಾಗುತ್ತವೆ. ಆರ್ಯಾವರ್ತವು ಸಾಮಾನ್ಯವಾಗಿ ಆಗಾಗ ಬದಲಾಗುವ ಕಾರಣದಿಂದಾಗಿ ಈಗ ಅದೊಂದು ವಿಶಿಷ್ಟ ಪದವೇ ಹೌದು. ವೈದಿಕ ಕಾಲದ ದಾಖಲೆಗಳಲ್ಲಿ ಆರ್ಯಾವರ್ತವೆಂಬುದು ದೋಬ್ ನಿಂದ ಹಿಡಿದು ಬಹುತೇಕ ಗಂಗಾ ಕಣಿವೆಯ ಮಧ್ಯಭಾಗದವರೆಗೂ ಬರುತ್ತದೆ. ಇನ್ನು ಬೌದ್ಧರ ದಾಖಲಾತಿಗಳ ಪ್ರಕಾರ ಆರ್ಯಾವರ್ತವು ಕೊಂಚ ಪೂರ್ವಭಾಗದತ್ತ ಹೊರಳಿಕೊಂಡರೆ, ಜೈನರ ದಾಖಲೆಗಳಲ್ಲಿ ಮತ್ತಷ್ಟು ಪೂರ್ವಕ್ಕೆ ಸರಿದುಹೋಗುತ್ತದೆ. ಇನ್ನು ಮನುವಿನ ‘ಮಾನವ ಧರ್ಮಶಾಸ್ತ್ರ’ದ ಅವಧಿಗೆ ಬರುವಷ್ಟರಲ್ಲಿ ಆರ್ಯಾವರ್ತವು ಹಿಮಾಲಯ ಮತ್ತು ವಿಂಧ್ಯಾ ಪರ್ವತಗಳ ನಡುವಿನ ಭೂಭಾಗವೆನ್ನುವ ಮಟ್ಟಿಗೆ ಬಂದು ನಿಲ್ಲುತ್ತದೆ. ಅದು ಎರಡು ಸಮುದ್ರಗಳ ಉತ್ತರಕ್ಕಿರುವ ಭೂಭಾಗ. ಹೀಗಾಗಿ ನಾವಿಂದು ಸಾಮಾನ್ಯವಾಗಿ ಉಲ್ಲೇಖಿಸುವ ಭಾರತವು ಇದಲ್ಲ. ಇದೇ ರೀತಿ ಸಾಮ್ರಾಟ ಅಶೋಕನ ಕಾಲದ ಶಾಸನಗಳಲ್ಲಿ ಹೆಸರಿಸಲಾದ ಜಂಬೂದ್ವೀಪವು ಎಲ್ಲಿತ್ತು ಮತ್ತು ಅದರ ಸೀಮೆಗಳು ಯಾವ್ಯಾವ ಭಾಗಗಳಲ್ಲಿ ಹಬ್ಬಿಕೊಂಡಿದ್ದವು ಎಂಬುದರ ಬಗ್ಗೆ ನಮಗೆ ತಿಳಿದಿಲ್ಲ.  ಭರತವರ್ಷ. ಇನ್ನು ಸರಿಸುಮಾರು ಕ್ರಿಸ್ತಶಕ ಹನ್ನೆರಡನೇ ಶತಮಾನದ ನಂತರದ ಕಾಲಘಟ್ಟದಿಂದ ಬಳಕೆಗೆ ಬರುವ ಪದವಾದ ‘ಅಲ್-ಹಿಂದ್’ ಅಸಲಿಗೆ ಪಶ್ಚಿಮ ಏಷ್ಯಾದ ಭಾಗದಿಂದ ಕಾಣಸಿಗುವ, ಸಿಂಧೂ ನದಿಗಡ್ಡಲಾಗಿ ಬರುವ ಪ್ರದೇಶವನ್ನು ಹೆಸರಿಸುತ್ತದೆ. ನಂತರ ಬರುವ ಬ್ರಿಟಿಷರು ದೇಶದ ಈ ಭೂಭಾಗವನ್ನು ಇಂಡಿಯಾ ಎಂದು ಕರೆಯಲಾರಂಭಿಸುತ್ತಾರೆ. ಇಂಡಸ್ (ಸಿಂಧೂ) ನದಿಯನ್ನು ಆಧಾರವಾಗಿಟ್ಟುಕೊಂಡು ಹೇಳುವ ಗ್ರೀಕ್ ಪದವಾದ ಇಂಡೋಸ್ (Indós) ನ ಆಂಗ್ಲ ಅವತರಣಿಕೆ ‘ಇಂಡಸ್’ನಿಂದಾಗಿ ಬ್ರಿಟಿಷರು ಇದನ್ನು ಇಂಡಿಯಾ ಎಂದು ಕರೆದಿದ್ದರು (ವೈದಿಕ ಗ್ರಂಥಗಳಲ್ಲೂ ಸಪ್ತ-ಸಿಂಧು ಎಂಬ ಪದದ ಉಲ್ಲೇಖವಿದೆ. ಇನ್ನು ‘ಸ’ ಮತ್ತು ‘ಹ’ ಗಳನ್ನು ಪರಸ್ಪರ ಬದಲಾಯಿಸಬಹುದಾದ ಪರ್ಷಿಯನ್ ಭಾಷೆಯಲ್ಲಿ ಪರ್ಷಿಯನ್ನರು ಇದನ್ನೇ ಹಪ್ತ-ಹಿಂಧು ಎಂದು ಕರೆದಿದ್ದರು).

ಬ್ರಿಟಿಷರ ಪ್ರಕಾರ ಇದರ ಅರ್ಥವೇನಾಗಿತ್ತು? ಪೂರ್ವ ಭಾರತದ ಕೆಲ ಭಾಗಗಳನ್ನು ಆಕ್ರಮಿಸಿ ವಿಜಯವನ್ನು ಸಾಧಿಸುವ ಬ್ರಿಟಿಷರು, ನಂತರ ಇತರ ಭೂಭಾಗಗಳನ್ನು ವಶಪಡಿಸಿಕೊಳ್ಳುತ್ತಾ ಉತ್ತರದತ್ತ ಸಾಗಿದ ನಂತರ ಭಾರತದ ಬಗ್ಗೆ ಉಲ್ಲೇಖಿಸುತ್ತಾರೆ. ಹೀಗೆ ಆಂಗ್ಲರ ಪ್ರತಿಯೊಂದು ವಿಜಯದೊಂದಿಗೂ ದೇಶದ ನಕ್ಷೆಯು ಬದಲಾಗುತ್ತಾ ಸಾಗುತ್ತದೆ. ಅಂತೂ ಹತ್ತೊಂಭತ್ತನೇ ಶತಮಾನದ ಅಂತ್ಯದಲ್ಲಿ ಇಡೀ ಉಪಖಂಡವನ್ನು ಕೆಂಪು ಬಣ್ಣದಿಂದ ಗುರುತು ಮಾಡಲಾಗುತ್ತದೆ. ಅದು ಬ್ರಿಟಿಷ್ ಸಾಮ್ರಾಜ್ಯದ ಪಾಲಾದ ಭಾರತ.

ಹಾಗಿದ್ದರೆ ಭಾರತವೆಂಬ ಕಲ್ಪನೆಯು ಈ ದಿನಗಳಲ್ಲಿ ಹುಟ್ಟಿಕೊಂಡಿರಬಹುದೇ? ಬಹುಷಃ ಇರಲೂಬಹುದು. ಆದರೆ ಇದು ಪ್ರಾದೇಶಿಕ ಪರಿಕಲ್ಪನೆಯಾಗಿತ್ತು. ಭಾರತದ ಸಂಸ್ಕೃತಿ, ಭಾಷೆಗಳು, ಧರ್ಮಗಳು… ಇತ್ಯಾದಿಗಳನ್ನು ಪರಿಗಣಿಸಿದರೆ ನಿಸ್ಸಂದೇಹವಾಗಿಯೂ ಭಾರತವೆಂಬ ಕಲ್ಪನೆಯು ಅದರ ಭೌಗೋಳಿಕ ಸೀಮೆಗಿಂತಲೂ ಮಿಗಿಲಾಗಿದ್ದು. ಹಾಗಿದ್ದರೆ ಈ ಬಗೆಯ ಗುರುತಿಸುವಿಕೆಯು ಯಾವಾಗ ಆರಂಭವಾಗಿರಬಹುದು? ನಾನು ಆಧುನಿಕ ಭಾರತದ ಇತಿಹಾಸಕಾರ್ತಿಯಲ್ಲ. ಆದರೂ ಇಲ್ಲಿ ನನ್ನದೊಂದು ಊಹೆಯಿದೆ. ಈ ವಾದದಲ್ಲಿ ತಪ್ಪಿರಲೂಬಹುದು. ನಮ್ಮ ಕಾಲದ ಮಟ್ಟಿಗೆ ಬಹಳ ಸ್ವಾರಸ್ಯಕರವಾಗಿ ಕಾಣುವ ದಶಕವೆಂದರೆ 1920 ರದ್ದು. ಅಷ್ಟಕ್ಕೂ 1920 ರಲ್ಲಿ ಏನಾಗಿತ್ತು? ಮೊಟ್ಟಮೊದಲನೆಯದಾಗಿ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಈ ದಶಕದಲ್ಲೇ ಸ್ವಾತಂತ್ರ್ಯ ಹೋರಾಟವನ್ನು ದೊಡ್ಡ ಮಟ್ಟಿನ ಜನಾಂದೋಲನವಾಗಿ ಯಶಸ್ವಿಯಾಗಿ ಮಾರ್ಪಡಿಸಿದ್ದು. ಸ್ವಾತಂತ್ರ್ಯ ಹೋರಾಟವೆಂಬುದು ನಿಜಕ್ಕೂ ಒಂದು ದೈತ್ಯ ಜನಾಂದೋಲನವಾಗಿತ್ತೇ ಎಂಬುದನ್ನು ವಸಾಹತುಶಾಹಿಯ ದಿನಗಳ / ವಸಾಹತುಶಾಹಿಯ ನಂತರದ ಸಮಾಜದ ಬಗ್ಗೆ ವಿದ್ವಾಂಸರಿಂದ ದಾಖಲಿಸಲ್ಪಟ್ಟ ಅಧ್ಯಯನಗಳು ಮತ್ತು ಇತರ ಅಧ್ಯಯನಗಳ ನೆಲೆಯಲ್ಲಿ ನಾನು ಮತ್ತಷ್ಟು ಸಂಕೀರ್ಣವಾಗಿಸಲಾರೆ. ಆದರೆ ಗಾಂಧೀಜಿಯವರ ನಾಯಕತ್ವದಲ್ಲಿ ನಡೆದಿದ್ದ ಸ್ವಾತಂತ್ರ್ಯ ಹೋರಾಟವು ದೊಡ್ಡ ಮಟ್ಟಿನಲ್ಲಿ ಜನರನ್ನು ಸಂಘಟಿಸಿದ್ದಂತೂ ಸತ್ಯ. ಬಹುಷಃ ಭಾರತವೆಂಬ ಕಲ್ಪನೆಯು ಈ ಅವಧಿಯಲ್ಲೂ ರೂಪುಗೊಂಡಿರಬಹುದು. ಏಕೆಂದರೆ ಈ ಜನಾಂದೋಲನದ ಪ್ರಮುಖ ಉದ್ದೇಶವೇ ಸೃಷ್ಟಿಯಾಗುತ್ತಿದ್ದ ಭಾರತವೆಂಬ ದೇಶದ ಸ್ವಾತಂತ್ರ್ಯವಾಗಿತ್ತು.

ಆದರೆ 1920 ರ ದಶಕವು ಭಾರತವೆಂಬ ಪರಿಕಲ್ಪನೆಯ ಉಳಿದೆರಡು ಮುಖಗಳಿಗೂ ಸಾಕ್ಷಿಯಾಯಿತು. ಅದೇನೆಂದರೆ ಪಾಕಿಸ್ತಾನದ ಆಗ್ರಹವನ್ನು ಮಾಡುತ್ತಿದ್ದ ಮುಸ್ಲಿಂ ಲೀಗ್ ಈ ಮೂಲಕವಾಗಿ ನಕಾರಾತ್ಮಕವಾಗಿ ಕಾಣುತ್ತಿದ್ದ ಭಾರತದ ಬಗೆಯೊಂದನ್ನು ಇಲ್ಲಿ ಮುಂದಿಟ್ಟಿತ್ತು. ಪಾಕಿಸ್ತಾನವೆನ್ನುವುದು ಎಲ್ಲರ ನಿರೀಕ್ಷೆಯ ಭಾರತವಾಗಿರದೆ, ತನ್ನದೊಂದು ಭಾಗವನ್ನು ಕಳಚಿಕೊಂಡಂತಿದ್ದ ಬ್ರಿಟಿಷ್ ಸಾಮ್ರಾಜ್ಯದ ಪಾಲಿನ ಭಾರತವಾಗಿತ್ತು. ಭಾರತವೆಂಬ ಪರಿಕಲ್ಪನೆಯಲ್ಲಿ ನಿಧಾನವಾಗಿ ಬೇರೂರುತ್ತಿರುವ ಭಿನ್ನಾಭಿಪ್ರಾಯಗಳನ್ನು ನೀವಿಲ್ಲಿ ಗಮನಿಸಬಹುದು. ಇದಕ್ಕೆ ಪ್ರತಿಯಾಗಿ ಕಾಣುವ ಅಂಶವೆಂದರೆ ಈ ದಶಕದಲ್ಲೇ ಆದ ಹಿಂದೂ ಮಹಾಸಭಾದ ಸ್ಥಾಪನೆ. ಮುಂದೆ ಈ ಬೆಳವಣಿಗೆಯೇ ಆರೆಸ್ಸೆಸ್ ನಿಂದಾಗಿ ಭಾರತದ ಪರಿಕಲ್ಪನೆಯೆಂದರೆ ಹಿಂದೂ ರಾಷ್ಟ್ರವೆಂದು ಸ್ಪಷ್ಟ ದನಿಯಲ್ಲಿ ಬಿಂಬಿಸಲ್ಪಟ್ಟಿತು.

ಈಗಾಗಲೇ ನಿಮಗೆ ಭಾರತದ ಬಗ್ಗೆ ಮೂರು ಕಲ್ಪನೆಗಳು ಸಿಕ್ಕಿಯಾಗಿವೆ. ಒಂದಲ್ಲ, ಬದಲಾಗಿ ಅಜಮಾಸು ಮೂರು. ಇನ್ನು 1920 ರಲ್ಲಿ ಸ್ಥಾಪನೆಯಾದ, ಸಮಾಜವಾದಿ ಪರಿಕಲ್ಪನೆಯ ಭಾರತದೊಂದಿಗೆ ಹೆಜ್ಜೆಯಿಟ್ಟಿದ್ದ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾವನ್ನು ಕೂಡ ಇಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ 1920 ರ ಅವಧಿಯನ್ನು ಭಾರತವೆಂಬ ಕಲ್ಪನೆಯೊಂದರ ಉದಯದ ಬದಲಾಗಿ, ಇಂತಹ ಪರಿಕಲ್ಪನೆಗಳತ್ತ ಗಂಭೀರವಾಗಿ ಅವಲೋಕಿಸುವ ಹಲವಾರು ಸಾಧ್ಯತೆಗಳು ತೆರೆದುಕೊಂಡಂತಹ ಕಾಲವೆಂದು ನನಗನ್ನಿಸುತ್ತದೆ. ಇದರೊಂದಿಗೆ ಇವೆಲ್ಲಾ ಯಾಕಾದವು, ಇದರ ಪರಿಣಾಮಗಳೇನು ಎಂಬ ಪ್ರಶ್ನೆಗಳೂ ಹುಟ್ಟುತ್ತವೆ. ಭಾರತದ ವಿಭಜನೆಯಾಗಿ ಎರಡು ದೇಶಗಳ ಉದಯವಾಗುವುದನ್ನು ಈ ನೆಲೆಯಲ್ಲಿ ನಾವು ಅರಿತಿದ್ದೇವೆ. ಮುಂದೆ ಪಾಕಿಸ್ತಾನವು ಇಬ್ಭಾಗವಾಗಿ ಬಾಂಗ್ಲಾದೇಶವಾಗುವುದೂ ಕೂಡ ಇದರದ್ದೇ ಮುಂದುವರಿದ ಬೆಳವಣಿಗೆ. ಇವೆಲ್ಲದರ ಜೊತೆಗಿದ್ದಿದ್ದು ಸ್ವಾತಂತ್ರ್ಯದ ಕಲ್ಪನೆ ಮತ್ತು ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವ ಕಾಲಘಟ್ಟದಲ್ಲಿ ಬಯಸಲಾಗಿದ್ದ ಇಂಥದ್ದೇ ಒಂದು ಸಂಗತಿ. ಆ ಕಾಲದಲ್ಲಿ ಉತ್ತುಂಗದಲ್ಲಿದ್ದ ವಸಾಹತು ವಿರೋಧಿ ರಾಷ್ಟ್ರೀಯ ಚಳುವಳಿಗಳು ಇವುಗಳನ್ನು ಯಾವ ರೀತಿ ಪರಿಗಣಿಸಿರಬಹುದು? ಆ ಜನರ ಕಲ್ಪನೆಯಲ್ಲಿ ಸ್ವತಂತ್ರ ಭಾರತವೆಂಬುದು ಹೇಗಿದ್ದಿರಬಹುದು ಮತ್ತು ಸ್ವಾತಂತ್ರ್ಯದ ಆರಂಭವನ್ನು ಎಲ್ಲಿಂದ ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಯಾವ ನೆಲೆಯಲ್ಲಿ ಲೆಕ್ಕಹಾಕಿರಬಹುದು?

ಸ್ಪಿವಾಕ್: ಇದೊಂದು ವಿಸ್ತೃತ ನೋಟವೇ ಹೌದು. ನೀವು ಹೇಳಿರುವ ಮಾತುಗಳ ಬಗ್ಗೆ ನಾನೀಗ ನನ್ನ ಕೆಲವು ಅಭಿಪ್ರಾಯಗಳನ್ನೂ ನೀಡಲಿಚ್ಛಿಸುತ್ತಿದ್ದೇನೆ. ಈ ಪ್ರಶ್ನೆಯನ್ನು ನಾನು ನಿಮಗೆ ನವೆಂಬರ್ ತಿಂಗಳಿನಲ್ಲಿ ನಿಮ್ಮ ಮನೆಯಲ್ಲೂ ಕೇಳಿದ್ದೆ. ಮೊಟ್ಟಮೊದಲ ಸಂಗತಿಯೇನೆಂದರೆ ಇಂಥಾ ಪರಿಕಲ್ಪನೆಗಳ ಬಗ್ಗೆಯೇ ನನಗೆ ದಟ್ಟವೆನಿಸುವ ಸಂದೇಹಗಳಿವೆ. ಇಂತಹ ಪರಿಕಲ್ಪನೆಗಳಿಲ್ಲದೆ ನಾವು ಮುಂದುವರಿಯುವುದು ಕಷ್ಟವೇನೋ. ಅವುಗಳಿಗೆ ಅದರದ್ದೇ ಆದ ಅನುಕೂಲಗಳಿರುತ್ತವೆ. ಆದರೆ ಅವುಗಳು ಬಹಳ ಅಪಾಯಕಾರಿಯೂ ಹೌದು. ಕುದಿಯುತ್ತಿರುವ ಮಡಕೆಯ ಮೇಲಿಟ್ಟಿರುವ ಮುಚ್ಚಳದಂತೆ. ಆ ಮಡಕೆಯಲ್ಲಿ ಹಲವು ಬಗೆಯ ವಿಚಾರಧಾರೆಗಳನ್ನು ಹೊಂದಿರುವ ಅದೆಷ್ಟೋ ಮಂದಿಯ ಆಲೋಚನೆಗಳನ್ನು ಅವುಗಳು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತವೆ. ಬದುಕಿನುದ್ದಕ್ಕೂ ಸಾಹಿತ್ಯಿಕ ಮಾರ್ಗದಲ್ಲಿ ಇವುಗಳ ಬಗ್ಗೆ ಅಧ್ಯಯನವನ್ನು ಮಾಡಲು ಪ್ರಯತ್ನಿಸುತ್ತಾ ಬಂದಿರುವ ನನಗೆ, ಇವುಗಳ ಬಗ್ಗೆ ಒಂದಷ್ಟು ಭಯವಿದೆ. ಕೆಲವೊಮ್ಮೆ ಇವೆಲ್ಲದರಿಂದಾಗಿ, ಈ ಸಂಗತಿಯನ್ನು ಓರ್ವ ಭಾರತೀಯಳಾಗಿರುವ ನೆಲೆಯಲ್ಲಿ ನೋಡಿದರೂ, ‘ನಾನು ಭಾರತೀಯಳಲ್ಲ’ ಎಂದು ಅನ್ನಿಸಿರುವ ದಿನಗಳೂ ಇವೆ. ನೀವು ಈ ಬಗ್ಗೆ ನನ್ನನ್ನು ಬೈಯಬಹುದು. ಒಮ್ಮೆ ಬೈದಿದ್ದೀರಿ ಕೂಡ. ”ದಕ್ಷಿಣ ಏಷ್ಯಾದ ವಿದ್ಯಾರ್ಥಿಗಳಿಗೆ ನೀನೇಕೆ ಕಲಿಸುತ್ತಿರುವೆ? ಯಾವುದರ ಬಗ್ಗೆಯೂ ಜ್ಞಾನವಿರದ ಇಂಥಾ ವಿದ್ಯಾರ್ಥಿಗಳನ್ನು ನೀವೇಕೆ ನೀಡುತ್ತೀರಿ?”, ಎಂದು ನೀವು ಸ್ವತಃ ನನ್ನಲ್ಲಿ ಕೇಳಿದ್ದಿರಿ. ನಾನು ನನ್ನ ವಾದಸರಣಿಯನ್ನು ಅಲ್ಲಿಗೆ ಮುಗಿಸಿದ್ದೆ. ಈ ಜಗತ್ತಿನಲ್ಲಿ ಇಂಥದ್ದೊಂದು ಬಗೆಯ ಸಲಹೆಯನ್ನು ನಾನು ತೆಗೆದುಕೊಳ್ಳುವುದಾದರೆ ಅದು ಬೆರಳೆಣಿಕೆಯ ಮಂದಿಯಿಂದ ಮಾತ್ರ. ಎಡ್ವರ್ಡ್‍ರ ಸಾವಿನ ನಂತರ ನಾನು ಜೀವನಕಥನವೊಂದನ್ನು ಬರೆಯಬೇಕೆಂದಾಗಲೂ ನೀವು ಒಂದು ಮಾತನ್ನು ಹೇಳಿದ್ದಿರಿ. ”ಎಲ್ಲವನ್ನೂ ಐತಿಹಾಸಿಕ ನೆಲೆಯಲ್ಲೇ ನೀವು ಅಧ್ಯಯನ ಮಾಡಬೇಕೆಂದಿಲ್ಲ. ಯಾವ ಸಂಗತಿಯಾದರೂ ಸತ್ಯ ಮತ್ತು ಸರಿಯೆಂದು ನಿಮ್ಮ ಜೀವನಾನುಭವಗಳ ಮೂಲಕವಾಗಿ ನಿಮಗೆ ದಕ್ಕಿದ್ದರೆ ಖಂಡಿತವಾಗಿಯೂ ಅದನ್ನು ದಾಖಲಿಸಿ”, ಎಂದು ನೀವು ನನಗೆ ಸಲಹೆಯನ್ನು ನೀಡಿದ್ದಿರಿ. ಹೀಗಾಗಿ ಸದ್ಯಕ್ಕಿಲ್ಲಿ ಎರಡನೇ ಸಲಹೆಯನ್ನು ನಾನೀಗ ಎತ್ತಿಕೊಳ್ಳುತ್ತಿದ್ದೇನೆ. ನಾನು 1942 ರಲ್ಲಿ ಹುಟ್ಟಿದ್ದೆ. ವಯಸ್ಸಿಗೂ ಮೀರಿದ ಪ್ರೌಢತೆಯನ್ನು ಹೊಂದಿದ್ದ ಮಗುವು ನಾನಾಗಿದ್ದರಿಂದ ನನಗೆ ಆ ಅವಧಿಯಲ್ಲಿ ನಡೆದಿದ್ದ ಕ್ಷಾಮ, ದಂಗೆಗಳಂತಹ ಹಲವು ಸಂಗತಿಗಳು ನೆನಪಿವೆ. ಇದರ ಹೊರತಾಗಿಯೂ ಅಲ್ಲಿ ಬೇರೇನೋ ಇತ್ತು. ಆದರೆ ನಂತರದ ದಿನಗಳಲ್ಲಿ ನಮಗೆ ದಕ್ಕಿದ್ದು ಓರಿಯಂಟಲಿಸ್ಟ್ ಬಗೆಯ ಭಾರತದ ಅನ್ವೇಷಣೆ ಎಂದು ನನ್ನ ಗೆಳೆಯ ಎಡ್ವರ್ಡ್ ಸೆಡ್ ಹೇಳುವಂತೆ ನನಗೂ ಕ್ರಮೇಣ ಅನ್ನಿಸತೊಡಗಿತ್ತು. ಇದು ವ್ಲಾದಿಮಿರ್ ಇಲಿಚ್ ಹೇಳುವಂತೆ ದೊಡ್ಡ ಮಟ್ಟಿನ ಜನಸಮೂಹವನ್ನು ತನ್ನೊಳಗೆ ಸೇರಿಸಿಕೊಳ್ಳುವ ಉದ್ದೇಶವಿದ್ದರೂ, ತಕ್ಕಮಟ್ಟಿಗೆ ಪ್ರಗತಿಪರ ಮಧ್ಯಮವರ್ಗವು ಭಾರತವನ್ನು ಈ ಬಗೆಯ ದೃಷ್ಟಿಕೋನದಲ್ಲಿ ನೋಡುವಂತೆ ದಾರಿಮಾಡಿಕೊಟ್ಟಿತ್ತು. ಈ ಪರಿಕಲ್ಪನೆಯು ನಿಧಾನವಾಗಿ ತನ್ನ ಹೊಳಪನ್ನು ಕಳೆದುಕೊಂಡಿದ್ದರ ಹಿಂದಿನ ಕಾರಣವೂ ಇದೇ. ಇದು ಒಂದಷ್ಟು ಪುಸ್ತಕಗಳಿಂದ ಎತ್ತಿಕೊಂಡ ಅರೆಬೆಂದ ಮಾಹಿತಿಯಿಂದ ಕೂಡಿದ ಮತ್ತು ಭಾರತದ ಬಗ್ಗೆ ಏನೇನೂ ತಿಳಿದಿರದ ಭಾರತೀಯನೊಬ್ಬನ ಕಲ್ಪನೆಯಷ್ಟೇ. ಅಂದಹಾಗೆ ಇವುಗಳು ನನ್ನ ಅರಿವಿಗೆ ಬಂದ ಸಂಗತಿಗಳು. ಈ ಕಾರಣಕ್ಕಾಗಿಯೇ ನಾನು ನಿರ್ದಿಷ್ಟ ಪ್ರಶ್ನೆಯೊಂದನ್ನು ನಿಮ್ಮಲ್ಲಿ ಕೇಳಬೇಕಾಗಿದೆ. ನಾನು ಈ ಪ್ರಶ್ನೆಯನ್ನು ಇಂದು ಬರೆದುಕೊಂಡು ಬಂದಿರುವೆ. ಇದು ಕಳೆದ ನವೆಂಬರ್ ತಿಂಗಳಿನಲ್ಲಿ ನಾವು ನಿಮ್ಮ ಮನೆಯಲ್ಲಿದ್ದಾಗ ನಮ್ಮಿಬ್ಬರ ಚರ್ಚೆಯಲ್ಲಿ ಬಂದ, ನಿಮ್ಮ ಹೇಳಿಕೆಯೊಂದರ ಮೇಲೆ ಆಧರಿಸಿದೆ: ”ನಾವು ನಮ್ಮ ಆರಂಭದ ದಿನಗಳನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಕಳೆದಿದ್ದವು. ಆದರೆ ಸ್ವಾತಂತ್ರ್ಯಾನಂತರದ ವರ್ಷಗಳು ಉರುಳುತ್ತಾ ದೇಶವು ಇಂಥಾ ಅಪಾಯಕಾರಿ ಸಮಸ್ಯೆಗಳತ್ತ ಹೊರಳಿಕೊಳ್ಳುವ ಬಗ್ಗೆ ನಮಗೆ ಯಾವ ನಿರೀಕ್ಷೆಗಳೂ ಇರಲಿಲ್ಲ.” ಇಂಥದ್ದೇ ಏನನ್ನೋ ನೀವು ಹೇಳಿದ್ದಿರಿ. ನಿಮ್ಮಿಂದ ಈ ಬಗ್ಗೆ ಮತ್ತಷ್ಟು ವಿವರವಾದ ನೋಟವನ್ನು ಪಡೆದುಕೊಳ್ಳುವ ಹಂಬಲ ನನ್ನದು. ಮೊದಲು ಸಿಕ್ಕ ಸ್ವಾತಂತ್ರ್ಯ ಮತ್ತು ಅದರೊಂದಿಗೆ ಬಂದಿದ್ದ ನನಸಾಗದ ಹಲವಾರು ನಿರೀಕ್ಷೆಗಳ ಬಗ್ಗೆ ನಿಮಗೇನನ್ನಿಸುತ್ತೆ ಎಂಬುದನ್ನೂ ಖಂಡಿತವಾಗಿ ನಮ್ಮೊಂದಿಗೆ ಹಂಚಿಕೊಳ್ಳಿ. ಅಂದಹಾಗೆ ನಾನೀಗ ಬಾಂಗ್ಲಾಯುದ್ಧದ ಬಗ್ಗೆ ಯೋಚಿಸುತ್ತಿದ್ದೇನೆ. ಈ ವಿಚಾರದ ಬಗ್ಗೆ ನನಗೆ ಖಂಡಿತವಾಗಿಯೂ ಒಳ್ಳೆಯ ಅನುಭವಗಳಾಗಿವೆ. ಬಾಂಗ್ಲಾವಿಮೋಚನಾ ಚಳುವಳಿಯಲ್ಲಿ ಸಕ್ರಿಯರಾಗಿದ್ದ ನನ್ನಿಬ್ಬರು ಆಪ್ತಮಿತ್ರರಾದ ಝಫ್ರುಲ್ಲಾ ಚೌಧುರಿ ಮತ್ತು ಸಂಧ್ಯಾ ರೇ ಕೂಡ ಈ ಮಾತನ್ನು ಹೇಳುತ್ತಾರೆ (ಸಂಧ್ಯಾ ಹದಿನೈದರ ವಯಸ್ಸಿನಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಬಿಟ್ಟು ಝಫ್ರುಲ್ಲಾರ ಜೊತೆ ಸೇರಿಕೊಂಡಿದ್ದರು). ”ಸ್ವಾತಂತ್ರ್ಯವು ದೊರಕಿದ ನಂತರ ಶಾಲೆಗೆ ಮರಳಬಹುದೆಂದು ನಾವು ಅಂದುಕೊಂಡಿದ್ದೆವು. ಆದರೆ ಅಂಥದ್ದೊಂದು ನಿರೀಕ್ಷೆಯಲ್ಲಿ ಹುರುಳಿಲ್ಲವೆಂದು ನಮಗೆ ಆ ದಿನಗಳಲ್ಲಿ ಮನದಟ್ಟಾಗಿರಲಿಲ್ಲ”, ಎನ್ನುತ್ತಾರೆ ಸಂಧ್ಯಾ. ಇನ್ನು ”ಸಮಸ್ಯೆಗಳು ಆರಂಭವಾಗುವುದೇ ಇಲ್ಲಿಂದ”, ಎಂದು ವಿಮೋಚನೆಯ ಸಂದರ್ಭದಲ್ಲಿ ಫ್ರೆಡೆರಿಕ್ ಡಗ್ಲಾಸ್ ಹೇಳಿದ್ದರು. ಇಂಥಾ ಸವಾಲುಗಳನ್ನು ನೀವು ಕೂಡ ಖಂಡಿತವಾಗಿ ಎದುರಿಸಿರುತ್ತೀರಿ. ಹೀಗಾಗಿ ನಿಮ್ಮ ಅಭಿಪ್ರಾಯಗಳನ್ನು ಮತ್ತಷ್ಟು ವಿವರವಾಗಿ ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ಕೇಳಿಕೊಳ್ಳುತ್ತಿದ್ದೇನೆ. ಇನ್ನು ಈ ಬಗ್ಗೆ ತಾವಾಗಿಯೇ ಮಾತನಾಡುವ ಅನಿವಾರ್ಯತೆಗೆ ನಿಮ್ಮನ್ನು ತಳ್ಳಿದ ಸಂಗತಿಯ ಬಗ್ಗೆ ನಿಮ್ಮಿಂದಲೇ ತಿಳಿದುಕೊಳ್ಳುವುದು ಇಲ್ಲಿ ಮುಖ್ಯವೆಂದು ನನಗನ್ನಿಸುತ್ತದೆ.

ರೋಮಿಲಾ: ನಿಮ್ಮ ಮಾತನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ ಎಂದೇ ನಾನು ನನ್ನ ಮಾತನ್ನು ಆರಂಭಿಸುತ್ತೇನೆ. ಪರಿಕಲ್ಪನೆಗಳ ಬಗ್ಗೆ ನನಗೂ ಹಲವಾರು ಸಂದೇಹಗಳಿವೆ. ಇದರ ಹಿಂದಿನ ಬಹುದೊಡ್ಡ ಕಾರಣವೆಂದರೆ ಪರಿಕಲ್ಪನೆಗಳು ತಮ್ಮ ಆಕಾರ ಮತ್ತು ಅರ್ಥಗಳ ನೆಲೆಯಲ್ಲಿ ನಿರಂತರವಾಗಿ ಬದಲಾಗುವ ಕೆಟ್ಟ ಚಾಳಿಯನ್ನು ಹೊಂದಿವೆ. ಇದು ನಿಜಕ್ಕೂ ಗೊಂದಲಮಯವಾದ ಮತ್ತು ಅಪಾಯಕಾರಿ ಸಂಗತಿ. ಏಕೆಂದರೆ ನೀವು ಸಂಗತಿಯೊಂದನ್ನು ಅರ್ಥಮಾಡಿಕೊಂಡು ಅದನ್ನು ನಿರ್ದಿಷ್ಟ ಜಾಗವೊಂದರಲ್ಲಿ ಇಟ್ಟುಕೊಂಡಿರುತ್ತೀರಿ. ನಂತರ ಅದರ ಅರ್ಥವು ಬೇರೇನೋ ಆಗಿದೆಯೆಂದು ನಿಮಗೆ ತಿಳಿದು ಗೊಂದಲವಾಗಬಹುದು. ಬಹಳ ನಾಜೂಕಿನ ಲೆಕ್ಕಾಚಾರವಿದು. ಈ ಬಗ್ಗೆ ನನ್ನ ಶಾಲಾದಿನಗಳಲ್ಲಿ ನಡೆದಿದ್ದ ಕಥೆಯೊಂದನ್ನು ಹೇಳುತ್ತೇನೆ ಕೇಳಿ. 1940 ರ ಆರಂಭದ ದಿನಗಳಲ್ಲಿ ನಾವು ನಮ್ಮ ಹರೆಯದ ದಿನಗಳನ್ನು ಹೇಗೆ ಕಳೆಯುತ್ತಿದ್ದೆವು ಎಂಬುದರ ಬಗ್ಗೆಯೂ ಇಲ್ಲಿ ಬೆಳಕು ಚೆಲ್ಲಿದಂತಾಗುತ್ತದೆ. ನಾನಾಗ ಪುಣೆಯ ಸ್ಕೂಲಿನಲ್ಲಿದ್ದೆ. ನನ್ನ ತಂದೆ ಸೈನ್ಯದಲ್ಲಿದ್ದರಿಂದ ಅವರಿಗೆ ಸತತವಾಗಿ ವರ್ಗಾವಣೆಗಳಾಗುತ್ತಿದ್ದವು. ಹೀಗಾಗಿ ಪೇಷಾವರದಿಂದ ರಾವಲ್ಪಿಂಡಿಗೆ ಬಂದಿದ್ದ ನಾವು, ನಂತರ ಪುಣೆಗೆ ವರ್ಗವಾಗಿದ್ದೆವು. ನಾವು ಪುಣೆಗೆ ಆಗಮಿಸಿದ್ದು 1940 ರಲ್ಲಿ. ಆ ದಿನಗಳಲ್ಲಿ ಗಾಂಧೀಜಿಯವರು ಜೈಲು ಸೇರುವುದು, ಬಿಡುಗಡೆಯಾಗುವುದು ಇತ್ಯಾದಿಗಳು ಜೋರಾಗಿಯೇ ನಡೆಯುತ್ತಿತ್ತು. ಅಷ್ಟಕ್ಕೂ ನಾವೆಲ್ಲಾ ಕಂಟೋನ್ಮೆಂಟ್ ಸಂಸ್ಕೃತಿಯ ಭಾಗವಾಗಿದ್ದವರು. ಇದು ಭಾರತದ ಒಂದು ಬಗೆಯ ವಿಶಿಷ್ಟ ಸಂಸ್ಕøತಿಯೂ ಹೌದು. ಇಲ್ಲಿರುವ ವಿಭಿನ್ನತೆಯ ಬಗ್ಗೆ ಯಾರಾದರೂ ಸಾಂಸ್ಕೃತಿಕ ಇತಿಹಾಸಕಾರರು ವಿವರವಾಗಿ ಅಧ್ಯಯನ ನಡೆಸಿದರೆ ಅದೆಷ್ಟು ಚೆನ್ನ ಎಂದೆಲ್ಲಾ ನಾನು ಯೋಚಿಸುತ್ತಿರುತ್ತೇನೆ. ಅದು ನಗರಗಳಿಗಿಂತ ಭಿನ್ನವಾಗಿತ್ತು. ಇಲ್ಲಿ ಭಾರತೀಯರು ಮತ್ತು ಬ್ರಿಟಿಷರು ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಹಾಗಂತ ಎರಡೂ ಕಡೆಯವರು ಆತ್ಮೀಯವಾಗಿ ಬೆರೆಯುತ್ತಿದ್ದರು ಅಂತೇನಿಲ್ಲ. ಇನ್ನು ಸಂಜೆಯ ಹೊತ್ತಿಗೆ ಬಂದು ಸೇರುತ್ತಿದ್ದ ಕೆಲ ಮಂದಿಯ ಬಗ್ಗೆ ಆ ದಿನಗಳಲ್ಲೂ ನನಗೆ ಕುತೂಹಲವಿತ್ತು. ಮಾಡಲು ಬೇರೇನೂ ಕೆಲಸವಿಲ್ಲದ ಕಾರಣ ಗೆಳೆಯರ ಬಳಗದೊಂದಿಗೆ ಸೇರುವುದು, ಗುಂಪಾಗಿ ಕುಳಿತುಕೊಳ್ಳುವುದು ಇತ್ಯಾದಿಗಳೆಲ್ಲಾ ನಡೆಯುತ್ತಿದ್ದವು. ಹೀಗೆ ಬರುತ್ತಿದ್ದವರೆಲ್ಲಾ ಭಾರತೀಯರೇ. ಅದು 1940 ರ ದಿನಗಳಾದ್ದರಿಂದ ಏನೇನು ಬೆಳವಣಿಗೆಗಳಾಗುತ್ತಿವೆ ಎಂಬುದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನು ಇವರುಗಳು ಗಂಭೀರವಾಗಿ ಮಾಡುತ್ತಿದ್ದರು. ಆಗಲೂ ಇದೊಂದು ಸಂಗತಿಯು ನನ್ನನ್ನು ಸಾಕಷ್ಟು ಕಾಡಿದೆ. ಶಾಲೆಗೆ ಹೋಗುವ ನನ್ನಂತಹ ಹರೆಯದ ಮಕ್ಕಳು ದೊಡ್ಡವರ ಹಿಂದೆ ಬಾಲದಂತೆ ಹಿಂಬಾಲಿಸುತ್ತಾ ಅವರೊಂದಿಗೆ ಸೇರಿಕೊಳ್ಳುತ್ತಿದ್ದವು. ”ನಾವುಗಳು ಇಲ್ಲಿ ಚರ್ಚಿಸಿದ ಸಂಗತಿಗಳೆಲ್ಲವನ್ನೂ ನೀನು ಕೇಳಿಯಾಗಿದೆ. ಆದರೆ ನಾಳೆ ಶಾಲೆಗೆ ಹೋಗಿ ಈ ಬಗ್ಗೆ ಯಾರೊಂದಿಗೂ ಶುರುಹಚ್ಚಿಕೊಳ್ಳಬೇಡ. ಏಕೆಂದರೆ ಇಲ್ಲಿ ನಾವು ಚರ್ಚಿಸುತ್ತಿದ್ದ ಸಂಗತಿಗಳು ಭಾರತೀಯರಿಗೆ ಮಾತ್ರ ಸಂಬಂಧಪಟ್ಟಿದ್ದು”, ಎಂದು ಅಪ್ಪ ಕೂಡ ಆಗಾಗ ಹೇಳುತ್ತಿದ್ದರು. ಹೀಗೆ ಭಾರತೀಯತೆಯೆಂಬ ಪ್ರಜ್ಞೆಯು ಆ ಕಾಲಘಟ್ಟದಲ್ಲೇ ಅವರೆಲ್ಲರಲ್ಲಿ ಸಾಕಷ್ಟು ದೃಢವಾಗಿ ಮನೆಮಾಡಿಕೊಂಡಿತ್ತು.

ಇರಲಿ. ನನ್ನ ಶಾಲೆಯಲ್ಲಾದ ಘಟನೆಯತ್ತ ಮರಳಿಬರೋಣ. 1947 ರಲ್ಲಿ ನಾನು ಕಾನ್ವೆಂಟ್ ಶಾಲೆಯ ಅಂತಿಮ ವರ್ಷದಲ್ಲಿದ್ದೆ. ನಮ್ಮಂತಹ ‘ಆರ್ಮಿ ಪುಂಡ’ರಿಗೆ ಆ ದಿನಗಳಲ್ಲಿ ಆಸರೆಯಾಗಿದ್ದಿದ್ದು ಇಂಥಾ ಕಾನ್ವೆಂಟ್ ಶಾಲೆಗಳೇ. ಅದರಲ್ಲೂ ಏಕರೂಪದ ಬೋಧನಾ ಪದ್ಧತಿಗಳಿದ್ದ ಇಂತಹ ಕಾನ್ವೆಂಟ್ ಶಾಲೆಗಳು ಮಾತ್ರ. ಅಲ್ಲದೆ ಈ ಎಲ್ಲಾ ಶಾಲೆಗಳು ಆ ದಿನಗಳಲ್ಲಿ ಸೀನಿಯರ್ ಕೇಂಬ್ರಿಜ್ ಎಕ್ಸಾಮ್ ಎಂದು ಕರೆಯಲಾಗುತ್ತಿದ್ದ ಪರೀಕ್ಷೆಗಾಗಿ ನಮ್ಮನ್ನು ಸಿದ್ಧಗೊಳಿಸುತ್ತಿದ್ದವು. ಆಗಸ್ಟ್ 15 ಕ್ಕೆ ಇನ್ನೇನು ಒಂದು ತಿಂಗಳು ಬಾಕಿಯಿದೆ ಎನ್ನುವಷ್ಟರಲ್ಲಿ ಸಿಸ್ಟರ್ ಸುಪೀರಿಯರ್ ಒಬ್ಬರಿಂದ ನನಗೆ ಕರೆ ಬಂದಿತ್ತು. ಈ ಬಾರಿ ನಾನು ಏನು ಮಾಡಿದೆನಪ್ಪಾ ಎಂದು ಯೋಚಿಸುತ್ತಾ, ಭಯದಿಂದ ನಡುಗುತ್ತಾ ನಾನು ಅವರ ಬಳಿ ನಡೆದಿದ್ದೆ. ”ಆಗಸ್ಟ್ ಹದಿನೈದರಂದು ಸ್ವಾತಂತ್ರ್ಯೋತ್ಸವದ ದಿನವು ಬರಲಿದೆ. ನೀನು ಇಲ್ಲಿಯ ಸೀನಿಯರ್ ವಿದ್ಯಾರ್ಥಿಗಳಲ್ಲೊಬ್ಬಳಾದ ಕಾರಣ ಯೂನಿಯನ್ ಜಾಕ್ ಧ್ವಜವನ್ನು ಇಳಿಸಿ, ಭಾರತದ ಧ್ವಜಾವರೋಹಣವನ್ನು ಮಾಡಿ, ನಿನ್ನ ಪಾಲಿಗೆ ಸ್ವಾತಂತ್ರ್ಯದ ಅರ್ಥವೇನು ಎಂಬುದರ ಬಗ್ಗೆ ಹದಿನೈದು ನಿಮಿಷಗಳ ಕಾಲ ಭಾಷಣವನ್ನು ಮಾಡಿದರೆ ಚೆನ್ನಾಗಿರುತ್ತಿತ್ತೆಂದು ನಾವು ಯೋಚಿಸುತ್ತಿದ್ದೆವು”, ಎಂದರು ಆಕೆ. ”ನಾನು ಇಷ್ಟೆಲ್ಲಾ ಮಾಡಬೇಕಾ?”, ಎಂದು ಅಚ್ಚರಿಯಿಂದ ಅವರ ಬಳಿ ಕೇಳಿದ್ದೆ. ”ಹೌದು, ನೀನೇ ಮಾಡಬೇಕು. ನಮ್ಮನ್ನು ನಿರಾಶರನ್ನಾಗಿಸಬೇಡ. ಬೇಕಿದ್ದರೆ ಈ ಬಗ್ಗೆ ಸಾವಧಾನವಾಗಿ ಯೋಚಿಸು. ಆದರೆ ಖಂಡಿತ ನೀನೇ ಮಾಡು”, ಎಂದಿದ್ದರು ಆ ಸಿಸ್ಟರ್.

ಸಿಸ್ಟರ್ ಕೋಣೆಯಿಂದ ಹೊರನಡೆದು ಬಂದ ನಾನು ಹಲವು ರಾತ್ರಿಗಳ ಕಾಲ ನಿದ್ದೆಯನ್ನೇ ಮಾಡಿರಲಿಲ್ಲ. ”ಅಯ್ಯೋ… ನಾನು ಏನನ್ನು ಹೇಳಲಿ? ಹದಿನೈದು ನಿಮಿಷಗಳ ಕಾಲ ಮಾತಾಡುವುದಾದರೂ ಏನನ್ನು?”, ಎಂಬ ಚಿಂತೆಯಲ್ಲೇ ನನ್ನ ರಾತ್ರಿಗಳು ಕರಗುತ್ತಿದ್ದವು. ”ನಾನೇನು ಮಾತಾಡಬೇಕು?”, ಎಂಬ ಪ್ರಶ್ನೆಯೊಂದಿಗೆ ನಾನಾಗ ಹೋಗಿದ್ದು ನನ್ನ ನೆಚ್ಚಿನ ಶಿಕ್ಷಕರೊಬ್ಬರ ಬಳಿಗೆ. ಅವರು ಇತಿಹಾಸ ಮತ್ತು ಸಾಹಿತ್ಯವನ್ನು ಬೋಧಿಸುತ್ತಿದ್ದರು. ”ಗೆಳೆಯರ ಜೊತೆಗಿನ ನಿನ್ನ ಭವಿಷ್ಯದ ಬಗ್ಗೆಯೇ ನೀನು ಮಾತನಾಡು. ಹ್ಮ್… ಈ ಬಗ್ಗೆ ನಿನಗೇನು ಅನ್ನಿಸುತ್ತದೆ? ಸ್ವಾತಂತ್ರ್ಯದ ಆಗಮನದ ಬಗ್ಗೆ ನಿನ್ನ ನಿಲುವೇನು ಎಂಬುದರ ಬಗ್ಗೆ ಧೈರ್ಯವಾಗಿ ನಿನ್ನ ಮಾತುಗಳಲ್ಲಿ ವ್ಯಕ್ತಪಡಿಸು”, ಎಂದಿದ್ದರು ಅವರು. ಕೊನೆಗೂ ನಾನಂದು ಮಾತಾಡಿದ್ದೇನು? ”ನಾವಿಂದು ಭಾರತೀಯತೆಯೆಂಬ ಅಸ್ತಿತ್ವವನ್ನು ಪಡೆಯುತ್ತಿದ್ದೇವೆ”, ಎಂದು ನಾನು ಹೇಳಿದ್ದೆ. ಇಂಥದ್ದೊಂದು ಅಸ್ತಿತ್ವವು ಆ ದಿನಗಳಲ್ಲಿ ನಮಗೆ ಬಹಳ ಮುಖ್ಯವಾಗಿತ್ತು. ನಾವು ಭಾರತೀಯರು ಎಂದು ಹೇಳುವುದರ ಅರ್ಥವೇನು? ಬ್ರಿಟಿಷರ ವಸಾಹತುಶಾಹಿ ನೆಲೆಯಲ್ಲಿ ನೋಡಿದರೆ ನಾವು ಭಾರತೀಯರೆನ್ನುವುದೇನೋ ಸತ್ಯ. ಆದರೆ ಈಗ ನಾವು ಬ್ರಿಟಿಷ್ ವಸಾಹತುಶಾಹಿಯ ಹಂಗನ್ನು ಕಳಚಿಕೊಂಡ ಭಾರತೀಯರಾಗಲು ಹೊರಟಿದ್ದೆವು. ಹಾಗಿದ್ದರೆ ಇದರ ಅರ್ಥವೇನು?

ಇನ್ನು ಕೊನೆಯೇ ಇಲ್ಲವೆಂಬಂತೆ ನಾವೆಲ್ಲರೂ ಯಾವಾಗಲೂ ಮಾತನಾಡುತ್ತಿದ್ದ ಮತ್ತೊಂದು ವಿಚಾರವೂ ಇತ್ತು. ಅದೇನೆಂದರೆ ಆಂಗ್ಲರ ಆಡಳಿತವು ತೊಲಗಿದ ನಂತರ ”ನೀನು ಅಲ್ಲಿಗೆ ಹೋಗಬಾರದು. ಇಲ್ಲಿಗೆ ಬರಬಾರದು”, ”ನೀನು ಅದು ಮಾಡಬಾರದು, ಇದನ್ನು ಮಾಡಬಾರದು” ಇತ್ಯಾದಿ ಕಟ್ಟುಪಾಡುಗಳೆಲ್ಲಾ ಮಾಯವಾಗಲಿದ್ದವು. ಹೀಗಿದ್ದಾಗ ಎಲ್ಲಾ ಬಗೆಯ ಕಟ್ಟುಪಾಡುಗಳಿಂದ ಮುಕ್ತವಾಗಿದ್ದ ಸಮಾಜವು ಮುಂದೆ ಯಾವ ರೀತಿಯಲ್ಲಿ ನಮ್ಮೆದುರು ಬರಲಿತ್ತು? ಎಂದೆಲ್ಲಾ ಯೋಚಿಸುತ್ತಿದ್ದೆವು. ಇವೆಲ್ಲವನ್ನೂ ನಾವೇನೂ ಶಿಸ್ತುಬದ್ಧವಾಗಿ ಚರ್ಚೆ ಮಾಡುತ್ತಿರಲಿಲ್ಲ. ಸಹಜವಾಗಿಯೇ ಈ ಬಗ್ಗೆ ಮಾತನಾಡುತ್ತಿದ್ದೆವು. ಆಂಗ್ಲರ ಆಡಳಿತವಿಲ್ಲವೆಂದಾಗ ಹಲವು ಸಂಗತಿಗಳು ಬದಲಾಗುವುದು ಸ್ವಾಭಾವಿಕ ಎಂದೆಲ್ಲಾ ಹೇಳಿಕೊಳ್ಳುತ್ತಿದ್ದೆವು. ಹಾಗಿದ್ದರೆ ನಮ್ಮನ್ನು ಎದುರುಗೊಳ್ಳಲಿದ್ದ ಭವಿಷ್ಯದ ಸಮಾಜವು ಅದ್ಯಾವ ರೂಪದಲ್ಲಿತ್ತು? ಒಂದು ರೀತಿಯಲ್ಲಿ ಹೇಳುವುದಾದರೆ ಈ ಪ್ರಶ್ನೆಯು ಅದೆಷ್ಟೋ ವರ್ಷಗಳ ಕಾಲ, ನನ್ನ ಅರಿವಿಗೂ ಬಾರದಂತೆ ನನ್ನೊಳಗೆ ಗಟ್ಟಿಯಾಗಿ ಬೇರೂರಿತ್ತು. ಪ್ರಾಯಶಃ ಈ ಒಂದು ಪ್ರಶ್ನೆಯು, ಅದರಲ್ಲೂ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸುವಾಗ, ಇಂದಿಗೂ ನನ್ನಲ್ಲಿ ಜೀವಂತವಾಗಿದೆ ಎಂದನ್ನಿಸುತ್ತಿದೆ. ಭಾರತೀಯತೆಯೆಂಬ ಗುರುತಿನ ಹಿಂದಿನ ಅರ್ಥವೇನಿರಬಹುದು ಎಂಬುದನ್ನು ಮನದಟ್ಟುಮಾಡಿಕೊಳ್ಳಲು ನಾನು ಇಂದಿಗೂ ವಿಫಲಳಾಗಿದ್ದೇನೆ. ಇನ್ನು ನಮಗೆ ಬೇಕಿರುವ ಸಮಾಜವಾದರೂ ಯಾವ ರೀತಿಯದ್ದು ಎಂಬುದು ಇಂದಿಗೂ ಬಹುತೇಕ ಎಲ್ಲರಿಗೂ ಗಂಭೀರವಾಗಿ ಯೋಚಿಸುತ್ತಿದ್ದ ಸಂಗತಿಗಳಲ್ಲೊಂದು.

ಸ್ವಾತಂತ್ರ್ಯಾನಂತರ ಈ ಬಗ್ಗೆಯೇ ನಾವುಗಳು ನಿರಂತರವಾಗಿ ಚರ್ಚಿಸಲು ಆರಂಭಿಸಿದ್ದು. ಮುಂದೆ 1950 ರ ದಶಕದಲ್ಲೂ ಇದು ಮುಂದುವರೆದಿತ್ತು.

ಅಷ್ಟಕ್ಕೂ ಇದರಲ್ಲಿ ಏನೆಲ್ಲಾ ಅಂಶಗಳಿದ್ದವು? ಮೊದಲ ಹೆಜ್ಜೆಯಾಗಿ ನಾವು ನಮ್ಮ ಸಮಾಜಕ್ಕೊಂದು ಸ್ಪಷ್ಟ ವ್ಯಾಖ್ಯಾನವನ್ನು ನೀಡುವ ಅವಶ್ಯಕತೆಯಿತ್ತು. ಆ ದಿನಗಳಲ್ಲಿ ಸಮಾಜವಾದಿ ಚಿಂತನೆಯ ಮಾತುಗಳು ಹೆಚ್ಚಾಗಿ ಚಾಲ್ತಿಯಲ್ಲಿದ್ದವು. ಇದು ನೆಹರೂರವರ ಭಾಷಣಗಳಿಂದಲೂ, ಶ್ರೇಣಿ ಅಸಮಾನತೆಗಳಿಲ್ಲದ ಸಮಾಜವನ್ನು ಕಟ್ಟುವುದೇ ಅಸಾಧ್ಯವೆಂಬಂತೆ ವಾದಿಸುತ್ತಿದ್ದ ಕೆಲವರಿಂದಲೂ ಪ್ರಭಾವಕ್ಕೊಳಗಾಗಿತ್ತು. ಹೀಗಾಗಿ ನಾವೆಲ್ಲಾ ಆ ದಿನಗಳಲ್ಲಿ ತಕ್ಕಮಟ್ಟಿನ ಸಮಾನತೆಯ ಸಹಿತವಾದ ಸಾಮಾಜಿಕ ಸ್ಥಾನಮಾನಗಳನ್ನು ಹೊಂದಿದ್ದ ನಾಗರಿಕ ಸಮಾಜದ ಬಗ್ಗೆ ಚಿಂತನೆಯನ್ನು ಮಾಡುತ್ತಿದ್ದೆವು. ಇವೆಲ್ಲದರಿಂದಾಗಿ ನಾವು ಅರವತ್ತರ ದಶಕದಲ್ಲಿ ಸಹಜವಾಗಿ ಆರ್ಥಿಕತೆಯ ಬಗ್ಗೆ ಆಕರ್ಷಿತರಾಗಿದ್ದೆವು. ಯಾವ ಬಗೆಯ ಆರ್ಥಿಕತೆಯು ನಮಗೆ ಸಿಗಲಿದೆ ಎಂಬುದರ ಬಗ್ಗೆಯೇ ಬಹುತೇಕ ಎಲ್ಲರೂ ಗಂಭೀರವಾಗಿ ಚರ್ಚಿಸುತ್ತಿದ್ದರು. ಅರವತ್ತರ ದಶಕದುದ್ದಕ್ಕೂ ಆರ್ಥಿಕ ಬೆಳವಣಿಗೆಯೆಂಬುದು ಬಹುಚರ್ಚಿತ ವಿಷಯವಾಗಿತ್ತು. ಆರ್ಥಿಕ ಯೋಜನೆಗಳು, ರಾಜ್ಯ ಕೈಗಾರಿಕೀಕರಣ, ಉದ್ಯೋಗ ಮತ್ತು ಗ್ರಾಮೀಣಾಭಿವೃದ್ಧಿಯಂತಹ ಸಂಗತಿಗಳೂ ಇರುತ್ತಿದ್ದವು. ಒಂದಿಷ್ಟು ಬುದ್ಧಿವಂತಿಕೆಯುಳ್ಳ ಪ್ರತಿಯೊಬ್ಬ ವಿದ್ಯಾರ್ಥಿಯೂ ಅರ್ಥಶಾಸ್ತ್ರಜ್ಞನಾಗುವತ್ತ ಒಲವನ್ನು ತೋರುತ್ತಿದ್ದ. ಏಕೆಂದರೆ ಆ ದಿನಗಳಲ್ಲಿ ಎಲ್ಲರಿಗೂ ಅಗತ್ಯವಾಗಿರುವಂತೆ ಕಾಣುತ್ತಿದ್ದ ಕ್ಷೇತ್ರವೇ ಅದಾಗಿತ್ತು. ಇನ್ನು ಈ ಬೇಡಿಕೆಯ ಪಟ್ಟಿಯ ಕಟ್ಟಕಡೆಯಲ್ಲಿದ್ದಿದ್ದು ಇತಿಹಾಸ ತಜ್ಞರು ಮತ್ತು ತತ್ವಶಾಸ್ತ್ರಜ್ಞರು. ಅದರಲ್ಲೂ ಪ್ರಾಚೀನ ಇತಿಹಾಸದ ವಿಷಯವು ಯಾರಿಗೂ ಬೇಕಾಗಿರಲಿಲ್ಲ. ಇನ್ನು ಅರ್ಥಶಾಸ್ತ್ರದ ಜೊತೆಗೇ ಬೆಸೆದುಕೊಂಡಿದ್ದ ಆರ್ಥಿಕ ಬೆಳವಣಿಗೆ, ಅಂಕಿಅಂಶಗಳು, ಜನಸಂಖ್ಯಾಶಾಸ್ತ್ರ… ಹೀಗೆ ಹೆಮ್ಮೆಯ ಸಮಾಜವೊಂದನ್ನು ನಿರ್ಮಿಸಲು ಅವಶ್ಯಕವಾಗಿದ್ದ ಇವೆಲ್ಲವೂ ಕೂಡ ಆ ಕಾಲದ ಬೇಡಿಕೆಯ ವಿಷಯಗಳಾಗಿದ್ದವು.

ಅದಕ್ಕೂ ಮುಂಚಿತವಾಗಿ, ಅಂದರೆ 50 ರ ದಶಕದಲ್ಲಿ ದಿಲ್ಲಿಯಲ್ಲಿ ಇಂಥಾ ಬೆಳವಣಿಗೆಗಳು ಆರಂಭವಾಗುವ ಮುನ್ನದ ಪರಿಸ್ಥಿತಿಗಳೂ ನನಗೆ ನೆನಪಿವೆ. ನಾನಾಗ ಇಂಗ್ಲೆಂಡಿನಲ್ಲಿ ವಿದ್ಯಾರ್ಥಿಯಾಗಿದ್ದೆ. ನಾವೆಲ್ಲಾ ಕಾರ್ಮಿಕರ ಶೈಕ್ಷಣಿಕ ಸಂಘಗಳಲ್ಲಿ ನಡೆಯುತ್ತಿದ್ದ ಸಮಾಲೋಚನೆಗಳನ್ನೂ ಸೇರಿದಂತೆ ಅದೆಷ್ಟೋ ಕಡೆ, ತರಹೇವಾರಿ ವಿಷಯಗಳ ಬಗ್ಗೆ ಉಪನ್ಯಾಸಗಳನ್ನು ಆಯೋಜಿಸುತ್ತಿದ್ದೆವು. ಹಾಗಿದ್ದರೆ ನಾವು ಮಾತಾಡುತ್ತಿದ್ದಿದ್ದು ಯಾವ ಸಂಗತಿಗಳ ಬಗ್ಗೆ ಅನ್ನುತ್ತೀರಿ? ಭಾರತದಲ್ಲಿ ಹೊಸದಾಗಿ ಉದಯವಾಗುತ್ತಿದ್ದ ಬೃಹತ್ತಾದ ಸಮಾಜದ ಬಗ್ಗೆ ನಾವಂದು ಮಾತನಾಡುತ್ತಿದ್ದೆವು. ಹಾಗಿದ್ದರೆ ನಾವು ಭಾರತಕ್ಕೆ ಮರಳಿದ್ದೇಕೆ? ಏಕೆಂದರೆ ಹೊಸ ಸಮಾಜವೊಂದರ ನಿರ್ಮಾಣಕ್ಕೆ ಭಾರತವು ಅವಕಾಶವೊಂದನ್ನು ನಮಗೆ ನೀಡುತ್ತಿದ್ದಿದ್ದಷ್ಟೇ ಅಲ್ಲದೆ, ಆ ಸಮಾಜದ ಭಾಗವಾಗುವ ಅವಕಾಶವನ್ನೂ ನಮಗೆ ಕರುಣಿಸುತ್ತಿತ್ತು. ಸ್ವಾತಂತ್ರ್ಯಾನಂತರ ಇಂತಹ ಬದಲಾವಣೆಗಳು ಬರಲಿವೆಯೆಂಬ ಮುಗ್ಧ ನಂಬಿಕೆಯಲ್ಲಿ ಅಂದು ನಾವಿದ್ದೆವು. ನಮ್ಮೆದುರಿಗಿದ್ದ ಎಲ್ಲಾ ಸವಾಲುಗಳನ್ನು ನಾವು ಯಶಸ್ವಿಯಾಗಿ ಅರ್ಥೈಸಿಕೊಳ್ಳಲು ವಿಫಲರಾಗಿದ್ದು ಈ ಬಗೆಯ ಮುಗ್ಧ ನಂಬಿಕೆಗಳ ಹಿಂದಿದ್ದ ಕಾರಣಗಳಲ್ಲೊಂದು. ಆ ದಿನಗಳಲ್ಲಿ ಆರ್ಥಿಕತೆಯ ಬಗ್ಗೆ ಎಲ್ಲರ ಗಮನವು ಅದೆಷ್ಟು ಕೇಂದ್ರೀಕೃತವಾಗಿತ್ತೆಂದರೆ ಜಾತಿ ಮತ್ತು ಧರ್ಮದಂತಹ ವಿಚಾರಗಳಿಗೆ ತೀವ್ರ ಹಿನ್ನಡೆಯಾಗಿತ್ತು. ಹೀಗಾಗಿ ಜಾತಿ ಮತ್ತು ಧರ್ಮದಂತಹ ವಿಚಾರಗಳು ಅಚಾನಕ್ಕಾಗಿ ಮುನ್ನೆಲೆಗೆ ಬಂದಾಗ ಎಲ್ಲರಿಗೆ ಅಚ್ಚರಿಯಾಗುವುದು ಸಹಜವೇ ಆಗಿತ್ತು. ಇವುಗಳು ಎಲ್ಲಿಂದ ಬಂದವಪ್ಪಾ ಎನ್ನುವಂತೆ!

ಇದಕ್ಕಿಂತ ದೊಡ್ಡದಾದ ಒಂದು ಲೆಕ್ಕಾಚಾರದ ಮಾತೂ ಕೂಡ ಆಗ ಎಲ್ಲರ ನಡುವೆ ಹರಿದಾಡುತ್ತಿತ್ತು. ಅದೇನೆಂದರೆ ”ಸ್ವಾತಂತ್ರ್ಯ ಸಿಕ್ಕ ನಂತರ ನಮಗೆ ನಮ್ಮ ಅನಿಸಿಕೆಗಳನ್ನು ಮಾತುಗಳಲ್ಲಿ ವ್ಯಕ್ತಪಡಿಸುವ ಹಾಗೂ ಅವುಗಳನ್ನು ನಮ್ಮಿಷ್ಟದಂತೆ ಹೇಳುವ ಸ್ವಾತಂತ್ರ್ಯವು ನಮಗೆ ಸಿಗಲಿದೆ”, ಎಂಬುದು. ಈ ವಿಚಾರದ ಬಗ್ಗೆ ನನಗಾದ ಮೊದಲ ಆಘಾತವೆಂದರೆ ಪುಣೆಯ ಕಾಲೇಜಿನಲ್ಲಿ ಸೆನ್ಸಾರ್ ಶಿಪ್ ವಿಚಾರದ ಬಗ್ಗೆ ನಡೆದಿದ್ದ ಒಂದು ಘಟನೆ. ನನ್ನ ಸಹೋದರನಾದ ರೋಮೇಶ್ ಥಾಪರ್ ಆಗ ‘ಕ್ರಾಸ್ ರೋಡ್ಸ್’ ಎಂಬ ಪಾಕ್ಷಿಕವೊಂದನ್ನು ಬಾಂಬೆಯಲ್ಲಿ ನಡೆಸುತ್ತಿದ್ದರು. ಅದು ಕಟ್ಟರ್ ಎಡಪಂಥೀಯವೂ, ಸಮಾಜವಾದಿಯೂ, ಕ್ರಾಂತಿಕಾರಿ ಮನೋಭಾವವುಳ್ಳ ಪತ್ರಿಕೆಯೂ ಆಗಿತ್ತು. ನಾನು ನನ್ನ ರಜಾದಿನಗಳಲ್ಲಿ ಬಾಂಬೆಗೆ ಹೋದಾಗಲೆಲ್ಲಾ ಪ್ರೂಫ್ ರೀಡಿಂಗ್ ಕೆಲಸದಲ್ಲಿ ಅವರಿಗೆ ನೆರವಾಗುತ್ತಿದ್ದೆ. ಒಮ್ಮೆ ಏನಾಯಿತೆಂದರೆ ಲೇಖನವೊಂದನ್ನು ಪ್ರೂಫ್ ರೀಡ್ ಮಾಡುತ್ತಿದ್ದ ನಾನು ಲೇಖನದ ಶೀರ್ಷಿಕೆಯಲ್ಲಿ ‘ಮುಖ್ಯಮಂತ್ರಿಗಳ ನಡೆಯು ಆಕ್ಷೇಪಾರ್ಹ’ ಎಂದು ಧಿಕ್ಕರಿಸುವ ಭರದಲ್ಲಿ, ಅವರ ನಡೆಯ ಹಿಂದೆ ‘ಕ್ರಿಮಿನಲ್’ ಎಂಬ ಪದವನ್ನು ಸೇರಿಸಿದ್ದೆ. ನಿಸ್ಸಂದೇಹವಾಗಿ ಸೆನ್ಸಾರ್ ಶಿಪ್ ಹೊಡೆತವು ಬಹುಬೇಗನೇ ನಮ್ಮನ್ನು ಅಪ್ಪಳಿಸಿತ್ತು. ಪತ್ರಿಕೆಯನ್ನು ನಿಷೇಧಿಸಲಾಗಿದೆ ಎಂಬ ಸೂಚನೆಯು ನನ್ನ ಸಹೋದರನಿಗೆ ವಾರದೊಳಗೆ ಬಂದು ತಲುಪಿತ್ತು. ಇನ್ನು ನಿಷೇಧದ ಹಿಂದಿನ ಅಸಲಿ ಕಾರಣವು ನಾನಾಗಿದ್ದುದರಿಂದ ನಾನು ದುಃಖದ ಮಡುವಿನಲ್ಲಿ ಮುಳುಗಿಹೋಗಿದ್ದೆ. ಸ್ವಾತಂತ್ರ್ಯವೆಂಬುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ತನ್ನ ಜೊತೆಗೇ ತರುವುದಿಲ್ಲವೆಂದು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಹಳ ಜಾಗರೂಕತೆಯಿಂದ ಬಳಸಬೇಕೆಂದು ಮೊಟ್ಟಮೊದಲ ಬಾರಿ ನನ್ನ ಅನುಭವಕ್ಕೆ ಬಂದಿದ್ದೇ ಆಗ. ಮುಂದೆ ಈ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದ ನಂತರ ನನ್ನ ಸಹೋದರನಿಗೆ ಜಯವಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ನಿಟ್ಟಿನಲ್ಲಿ ಈ ಪ್ರಕರಣವು ಅಡಿಪಾಯವಾಗುವಲ್ಲಿ ಯಶಸ್ವಿಯಾಯಿತು. ಇಂದಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗಿನ ಮಾತುಗಳು ಬಂದಾಗಲೆಲ್ಲಾ ರೋಮೇಶ್ ಥಾಪರ್ ವರ್ಸಸ್ ಸ್ಟೇಟ್ ಆಫ್ ಮದ್ರಾಸ್ ಪ್ರಕರಣದ ಹೆಸರು ಪ್ರಸ್ತಾಪವಾಗುತ್ತದೆ.

ಹೀಗೆ ಬಹಳಷ್ಟು ಪರಿಕಲ್ಪನೆಗಳ ಪರಿಚಯವು ನಮಗಾಗಿತ್ತು. ರಷ್ಯನ್ ಮತ್ತು ಫ್ರೆಂಚ್ ಕ್ರಾಂತಿಗಳ ಬಗ್ಗೆ ನಾವೆಲ್ಲರೂ ಕೈಗೆ ಸಿಕ್ಕ ಪುಸ್ತಕಗಳನ್ನೆಲ್ಲಾ ಓದಿ ವಿಸ್ತøತವಾಗಿ ತಿಳಿದುಕೊಂಡಿದ್ದೆವು. ಹೀಗಾಗಿ ಭಾರತದ ಸಮಾಜವು ಅದೆಷ್ಟು ಪರಿಪೂರ್ಣವಾಗಿ ಮೂಡಿಬರಲಿದೆಯೆಂಬ ಕೆಲ ಕಲ್ಪನೆಗಳು ನಮಗಿದ್ದವು. ಆದರೆ ನಮ್ಮ ನಿರೀಕ್ಷೆಯಂತೇನೂ ಆಗಲಿಲ್ಲ. ಕ್ರಮೇಣ ಈ ವ್ಯವಸ್ಥೆಯಲ್ಲಿದ್ದ ಹುಳುಕುಗಳು ನಿಧಾನವಾಗಿ ನಮಗೆ ಗೋಚರಿಸಲಾರಂಭಿಸಿದ್ದವು.

ಸ್ಪಿವಾಕ್: ಹೌದು. ಈ ಹುಳುಕುಗಳು ಮತ್ತು ಸವಾಲುಗಳ ಬಗ್ಗೆ ನೀವು ವಿವರವಾಗಿ ಮಾತಾಡಬೇಕೆಂದು ನನ್ನ ಬಯಕೆ. ಆದರೆ ಈ ವಿಚಾರದ ಬಗ್ಗೆ ನನ್ನ ಒಂದೆರಡು ಅಂಶಗಳನ್ನೂ ಕೂಡ ನಾನಿಲ್ಲಿ ಸೇರಿಸುತ್ತಿದ್ದೇನೆ. ಅದೇನೆಂದರೆ ಭಾರತದ ಸಮಾಜವನ್ನು ಕಟ್ಟುವಿಕೆಯಂತಹ ಕಲ್ಪನೆಗಳು ನನ್ನಲ್ಲಿ ಮೂಡಿದ್ದು ಕೊಂಚ ತಡವಾಗಿಯೇ. ನಮ್ಮ ಅನುಭವಗಳನ್ನು ತಿಳಿದುಕೊಳ್ಳಲು ನಿಮಗಿರುವ ಆಸಕ್ತಿಯ ಬಗ್ಗೆಯೂ ನೀವು ಒಮ್ಮೆ ಉಲ್ಲೇಖಿಸಿದ್ದೀರಿ. ದಿಲ್ಲಿ, ಕಲ್ಕತ್ತಾಗಳಲ್ಲೂ ಇದು ಭಿನ್ನವಾಗಿತ್ತು. ಜ್ಞಾನ್ ಮುಜುಂದಾರ್ ನನ್ನ ಅಂಕಲ್. ಹೀಗಾಗಿ ಕಲ್ಕತ್ತಾದಲ್ಲಿ ಆಗಲೇ ಇದ್ದ ಎಡಪಂಥೀಯ ಬುದ್ಧಿಜೀವಿಗಳ ವಲಯದ ಪರಿಸರದಲ್ಲಿ ನಾನೂ ಇದ್ದೆ. ನಾನು ಎಮ್.ಎ ನಲ್ಲಿ ಪ್ರಥಮ ದರ್ಜೆಯನ್ನು ಗಳಿಸಲು ಸಾಧ್ಯವಿಲ್ಲವೆಂಬ ತಾರಕ್ ನಾಥ್ ಸೇನ್ ರವರ ಮಾತನ್ನು ಕೇಳಿ ನಾನು ಭಾರತವನ್ನು ತೊರೆದಿದ್ದೆ. ಆಗಲೇ ನನ್ನ ತಂದೆಯವರ ದೇಹಾಂತ್ಯವಾಗಿದ್ದರಿಂದ ನನ್ನ ಖರ್ಚುಗಳನ್ನು ನಾನೇ ನೋಡಿಕೊಳ್ಳಬೇಕಿತ್ತು. ಹೀಗಾಗಿ ನನ್ನ ಹೆಜ್ಜೆಗಳು ತ್ವರಿತ ಗತಿಯದ್ದಾಗಿದ್ದವು. ಒಟ್ಟಿನಲ್ಲಿ ನಾನು ಭಾರತವನ್ನು ಬಿಟ್ಟು ಮುನ್ನಡೆದಿದ್ದೆ.

ಇನ್ನು ಶ್ರೇಣಿಯಲ್ಲಂತೂ ನಮ್ಮದು ಕಟ್ಟಕಡೆಯದ್ದಾಗಿತ್ತು. ರೋಮಿಲಾ – ಬೇಡಿಕೆಯ ಕ್ಷೇತ್ರಗಳ ಪಟ್ಟಿಯಲ್ಲಿ ಇತಿಹಾಸ ತಜ್ಞರಿಗಿಂತಲೂ ಕೆಳಗಿದ್ದ ವರ್ಗವೆಂದರೆ ಅದು ಸಾಹಿತ್ಯ ಕ್ಷೇತ್ರವಾಗಿತ್ತು. ಇನ್ನು ಬೆಂಗಾಲಿ ಸಾಹಿತ್ಯವನ್ನೇನಾದರೂ ನಾನು ಓದಿಕೊಂಡಿದ್ದರೆ ನನ್ನ ಸ್ಥಿತಿಯು ಮತ್ತಷ್ಟು ಶೋಚನೀಯವಾಗಿರುತ್ತಿತ್ತೇನೋ. ಹೊರಡುವ ಮುಂಚೆ ನಮ್ಮ ಮನಸ್ಥಿತಿಯು ಗೈಡ್ ಸಿನೆಮಾದ ದೇವಾನಂದರಂತೆ ಇತ್ತು. ”ನಾವು ಬೆಂಗಾಲಿ ಮಾತಾಡುವುದಾದರೆ, ಅದ್ಭುತವಾದ ಬೆಂಗಾಲಿಯನ್ನೇ ಮಾತಾಡುತ್ತೇವೆ. ಇನ್ನು ಇಂಗ್ಲಿಷ್ ಮಾತಾಡುವುದಾದರೆ, ಅದ್ಭುತವೆನಿಸುವ ಇಂಗ್ಲಿಷ್ ಅನ್ನೇ ಮಾತಾಡುತ್ತೇವೆ”, ಎಂಬಂತಿತ್ತು ಗೊತ್ತಾ! ಅಷ್ಟಕ್ಕೂ ಸ್ವಾತಂತ್ರ್ಯಾನಂತರದ ಮೊದಲ ಯುವ ಪೀಳಿಗೆಯಾಗಿತ್ತಲ್ಲವೇ ನಮ್ಮದು?

ಹೀಗೆ ನಾನು ಹೊರಟಾದ ನಂತರದ ಭಾರತದ ಬಗೆಗಿದ್ದ ಪರಿಕಲ್ಪನೆಗಳು ನೈಜಸ್ಥಿತಿಯೊಂದಿಗೆ ಅಷ್ಟಾಗಿ ತಾಳೆಯಾಗುತ್ತಿರಲಿಲ್ಲ. ಬೀದಿಗಳಲ್ಲಿ ನಡೆಯುತ್ತಿದ್ದ ಮೆರವಣಿಗೆ ಇತ್ಯಾದಿಗಳು. ನಾನು ಅಲೆನ್ ಗಿನ್ಸ್ ಬರ್ಗ್‍ನ ಹಾಡುಗಳನ್ನು ಹಾರ್ಮೋನಿಯಂನೊಂದಿಗೆ ಹಾಡುತ್ತಿದ್ದೆ. ಅದೊಂದು ವಿಚಿತ್ರ ಬಗೆಯ ಹುಚ್ಚಾಗಿತ್ತು. ಗಾಂಜಾ, ವಜ್ರಾಯನ ಬುದ್ಧಿಸಂ, ಝೆನ್, ಗ್ಯಾರಿ ಸ್ನೈಡರ್, ಇನ್ನೂ ಏನೇನೋ… ಆದರೆ 1962 ರಲ್ಲಿ ಮಾಲ್ಕಂ ಎಕ್ಸ್ ಕಾರ್ನೆಲ್ ನಲ್ಲಿ ಮಾತನಾಡಲು ಅತಿಥಿಯಾಗಿ ಆಗಮಿಸಿದ್ದರು. ಅಂದಹಾಗೆ ಮಾಲ್ಕಂ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು. ಇನ್ನು ಆ ಕ್ಷಣವು ನನ್ನಲ್ಲಿ ಮೂಡಿಸಿದ್ದ ಭಾರತೀಯತೆಯ ನೆನಪು ಇಂದಿಗೂ ನನಗೆ ಸ್ಪಷ್ಟವಾಗಿ ನೆನಪಿದೆ. ”ಅರೇ… ಇದು ಕಲ್ಕತ್ತಾದಂತಿದೆ”, ಎಂದು ನನ್ನೊಳಗಿನ ಭಾರತದ ಪರಿಕಲ್ಪನೆಯು ನನಗೆ ಹೇಳಿತ್ತು. ಮಾಲ್ಕಂ ಎಕ್ಸ್ ಅಂದು ಭಾಷಣ ಮಾಡುತ್ತಲಿದ್ದರೆ, ಇಪ್ಪತ್ತರ ಪ್ರಾಯದ ನಾನು ಸಭಿಕರ ಗುಂಪಿನಲ್ಲಿದ್ದೆ. ಒಟ್ಟಿನಲ್ಲಿ ಆ ಭಾಷಣವನ್ನು ಕೇಳಿ ನನ್ನಲ್ಲಿ ಮೂಡಿದ್ದ ಯೋಚನೆಯು ಮಾತ್ರ ಅದುವೇ. ಏಕೆಂದರೆ ನನ್ನ ಸುತ್ತಲಿದ್ದ ಪರಿಸರವು ನನ್ನ ಮಟ್ಟಿಗೆ, ಬೇರೆಯೇ ವಿಧದಲ್ಲಿ ಸೃಷ್ಟಿಯಾಗಿದ್ದ ಅನ್ಯ ಬಗೆಯ ಭಾರತವಾಗಿತ್ತು.

ಈಗಂತೂ ವಲಸಿಗರ ಗುಂಪುಗಳ ಪ್ರಾಮುಖ್ಯತೆಯು ಹಿಂದೆಂದಿಗಿಂತಲೂ ಹೆಚ್ಚಾಗುತ್ತಿದೆ. ನೀವು 1987 ರಲ್ಲಿ ನನ್ನನ್ನು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಲು ಭಾರತಕ್ಕೆ ಆಹ್ವಾನಿಸಿದಾಗ ಸಾಹಿತ್ಯದ ವಿಭಾಗವು ನನ್ನನ್ನು ಕರೆದಿರಲಿಲ್ಲ ಎಂಬುದು ನೆನಪಿರಲಿ. ಏಕೆಂದರೆ ನಾನು ಫ್ರೆಂಚ್ ಆಗಿರಲಿಲ್ಲ. ಇದರ ಹೊರತಾಗಿಯೂ ನಾನು ಫ್ರೆಂಚ್ ಥಿಯರಿಯ ತರಗತಿಯನ್ನು ತೆಗೆದುಕೊಳ್ಳುತ್ತಿದ್ದೆ. ಸೋ ಪ್ರೊಫೆಸರ್ ಥಾಪರ್ ರವರು  ಇತಿಹಾಸಕಾರ್ತಿಯಾಗಿರದಿದ್ದ ಈ ವ್ಯಕ್ತಿಯನ್ನು (ಸ್ಪಿವಾಕ್ ತನ್ನೆಡೆಗೇ ಬೊಟ್ಟುಮಾಡಿ ತೋರಿಸುತ್ತಿದ್ದಾರೆ) ಇತಿಹಾಸದ ವಿಭಾಗದಲ್ಲಿ ಬೋಧಿಸುವಂತೆ ಆಹ್ವಾನಿಸಿದ್ದರು. ನಮ್ಮಿಬ್ಬರ ನಡುವೆ ಅಂಥದ್ದೊಂದು ಬಂಧವು ಹಲವು ವರ್ಷಗಳಿಂದ ಇತ್ತೆಂಬುದನ್ನು ದಾಖಲಿಸುವುದು ಇಲ್ಲಿ ಮುಖ್ಯ ಅಂದುಕೊಳ್ಳುತ್ತೇನೆ. ಆದರೂ 1987 ರ ಆ ಕಾಲದಲ್ಲಿ ಅದ್ಯಾವುದೋ ಅಂತರವಂತೂ ಇದ್ದೇ ಇತ್ತು. ಆಗ ಬಗಿಯಾಟಿಯಲ್ಲಿ ಬೆಂಗಾಲಿ ಭಾಷೆಯಲ್ಲಿ ನಾನು ದೀರ್ಘ ಉಪನ್ಯಾಸವೊಂದನ್ನು ನೀಡಿದ್ದೆ. ಅದು ‘ಒನಬಾಶಿ’ ಮತ್ತು ‘ಪ್ರೊಬಾಶಿ’ಗಳ ನಡುವಿನ ಅಂತರದ್ದಾಗಿತ್ತು. ಅಂದರೆ ತಮ್ಮ ದೇಶವನ್ನು ಬಿಟ್ಟು ಹೊರದೇಶಗಳಲ್ಲಿ ನೆಲೆಸಿರುವವರು ಮತ್ತು ಅನಿವಾಸಿ ಭಾರತೀಯರ ಬಗ್ಗೆ. ಅಂದಹಾಗೆ ಒನಬಾಶಿ ಎಂಬುದು ನಾನೇ ಸೃಷ್ಟಿಸಿದ್ದ ಪದ. ಅಮೆರಿಕಾದಲ್ಲಿ ಅಲ್ಪಸಂಖ್ಯಾತರೆಂಬ ಹೆಸರಿನಲ್ಲಿ ಭಾರತೀಯರ ಒಟ್ಟಾರೆ ಇಮೇಜನ್ನು ಒಪ್ಪಿಕೊಳ್ಳದಿರುವುದು ಆ ದಿನಗಳಲ್ಲಿ ನಮಗೆ ಬಹಳ ಮುಖ್ಯವಾಗಿತ್ತು. ಕೆಲವೊಮ್ಮೆ ಬಿಳಿಯರಿಂದ ಗುರುತಿಸಲ್ಪಟ್ಟಿರುವ, ಸಜ್ಜನ, ಸಕಾರಾತ್ಮಕ ಇಮೇಜ್ ಉಳ್ಳ ಅಲ್ಪಸಂಖ್ಯಾತನಾಗಿದ್ದರೂ, ಇನ್ನೊಮ್ಮೆ ಕೋಸ್ಟ್ ಆಫ್ ಫ್ರಾನ್ಸ್ ನಿಂದಾಚೆಗಿರುವ ಪುಟ್ಟ ದ್ವೀಪವೊಂದರಲ್ಲಿ ನೆಲೆಯಾಗಿರುವ ಓರ್ವ ಅಲ್ಪಸಂಖ್ಯಾತನಾಗಿದ್ದರೂ ಅದು ನಮಗೆ ಬೇಕಿರಲಿಲ್ಲ. ಇದು ಸಾಲದೆಂಬಂತೆ 86% ಬಹುಸಂಖ್ಯಾತರು ಆಗಲೇ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿದ್ದರು. ಆಗ ನನಗೆ ನೆನಪಾಗುತ್ತಿದ್ದಿದ್ದು ಗ್ರಾಮೀಣ ಭಾರತದಲ್ಲಿ ಬದುಕುತ್ತಿದ್ದ ಅದೆಷ್ಟೋ ಭೂರಹಿತ, ಅನಕ್ಷರಸ್ಥ ಮಂದಿಯ ಮಕ್ಕಳು. ತಾವು ಸ್ವತಃ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ವ್ಯಕ್ತಿಗಳಾಗಿದ್ದರೂ, ‘ದಲಿತ’ ಎಂಬ ಪದವನ್ನು ಕೇಳಿಯೇ ಇರದಿದ್ದ ಈ ಮಕ್ಕಳಿಗೆ ನಾನು ಪಾಠ ಮಾಡುತ್ತಿದ್ದೆ. ಜೊತೆಗೇ ಈ ದೇಶದ ಮತದಾರ ವರ್ಗದ ದೊಡ್ಡ ವಲಯಗಳಲ್ಲಿರುವ ಭಾರತದ ಕಲ್ಪನೆಯು ಯಾವ ಬಗೆಯದ್ದಾಗಿರಬಹುದು ಎಂದೆಲ್ಲಾ ನಾನು ಯೋಚಿಸುತ್ತಿದ್ದೆ. ನಮಗಿಂದು ನಿಮ್ಮ ಕಲ್ಪನೆಯ ಸವಾಲುಗಳು ಮತ್ತು ಇತರ ಸಂಗತಿಗಳ ಬಗ್ಗೆ ಅರಿತುಕೊಳ್ಳಲು ಹೆಚ್ಚಿನ ಆಸಕ್ತಿಯಿರುವುದರಿಂದಾಗಿ ಈ ಬಗ್ಗೆ ನಾನು ವಿವರವಾಗಿ ಹೇಳಲು ಹೊರಡುವುದಿಲ್ಲ. ಆದರೆ ಈ ಬಗ್ಗೆ ನಾನು ಹೇಳಲೇಬೇಕಿದ್ದ ಕಾರಣದಿಂದಾಗಿ ಇಲ್ಲಿ ನನ್ನ ವಿಚಾರಗಳನ್ನು ಹಂಚಿಕೊಂಡೆ.

ಏಕೆಂದರೆ ಸದ್ಯದ ಪರಿಸ್ಥಿತಿಯಲ್ಲಂತೂ ಇಂತಹ ಸಂಗತಿಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಇದರ ಹಿಂದಿನ ಕಾರಣವೇನೆಂದರೆ ಹೊರದೇಶದ ಹೊಸ ಪ್ರಭುತ್ವಗಳಲ್ಲಿ ನಡೆಯುತ್ತಿರುವ ತಪ್ಪುಗಳ ಹಿಂದಿರುವ ಇತಿಹಾಸವು ಯಾರಿಗೂ ತಿಳಿಯದಿರುವುದು. ಎಲ್ಲೋ ಕೆಲವರಿಗೆ ಈ ಬಗ್ಗೆ ಗೊತ್ತಿರಬಹುದೇನೋ. ಆದರೆ ಯುವ ಮೂಲಭೂತವಾದಿಗಳಿಗಂತೂ ಇದು ತಿಳಿದಿಲ್ಲ. ಫ್ರಾನ್ಸ್ ಮತ್ತು ಯೂರೋಪಿನ ಉಳಿದ ಭಾಗಗಳಲ್ಲಿ ತಲೆಯೆತ್ತುತ್ತಿರುವ ಬಲಪಂಥೀಯವಾದದ್ದೂ ಇದೇ ಕಥೆ. ಅಮೆರಿಕಾದ ಬಗ್ಗೆ ಮಾತಾಡದಿದ್ದರೇನೇ ವಾಸಿಯೆಂಬಂತಾಗಿದೆ. ಇನ್ನು ವಲಸಿಗರ ವಲಯದಲ್ಲಿರುವ ಮೂಲಭೂತವಾದಿಗಳಲ್ಲೂ ಒಂದು ಬಗೆಯ ಒಗ್ಗಟ್ಟನ್ನು ನಾವಿಂದು ಕಾಣಬಹುದು. ಆದರೆ ಇದು ಸಮರ್ಪಕವಾಗಿ ಸಂಘಟಿತವಾದ ಒಗ್ಗಟ್ಟಲ್ಲ. ಇದು ಎಷ್ಟರ ಮಟ್ಟಿಗಿದೆಯೆಂದರೆ ಏಷ್ಯಾ ಮತ್ತು ಆಫ್ರಿಕಾದಂತಹ ಖಂಡಗಳು ಈ ರ್ಯಾಡಿಕಲ್ ವಲಸಿಗರಿಂದ ಕಡೆಗಣಿಸಲ್ಪಟ್ಟಿವೆ. ಹೀಗಾಗಿಯೇ ಇಂದು ಹಳೆಯದೆನ್ನಿಸುವ ದೇಶ-ರಾಜ್ಯಗಳಂತಹ ಕಲ್ಪನೆಗಳ ಬಗ್ಗೆ ಮಾತನಾಡಲು ನಮಗೆ ಕಟ್ಟುಪಾಡುಗಳಿಲ್ಲ ಎಂದು ನಾವುಗಳು ಸ್ವತಃ ಅಂದುಕೊಂಡಿದ್ದೇವೆ. ನನ್ನ ಮಿತ್ರರಾದ ಬರ್ನಾರ್ಡ್ ಹರ್ಕೋರ್ಟ್ ಇದನ್ನು ರಾಷ್ಟ್ರೀಯ ಉದ್ಯಮವೆಂದು ಕರೆಯುತ್ತಾರೆ. ಹೀಗಿರುವಾಗ ಭಾರತದ ಪರಿಕಲ್ಪನೆಯು ಒಂದು ಸುರಕ್ಷಿತ ಪರಿಕಲ್ಪನೆಯೆಂದು ನಾವು ಮತ್ತೊಮ್ಮೆ ಸಮಾಲೋಚಿಸುವುದು ಹೇಗೆ? ಸದ್ಯದ ಪ್ರಧಾನಮಂತ್ರಿಗಳು ಈಚೆಗಷ್ಟೇ ಅಮೆರಿಕಾಗೆ ಬಂದಿದ್ದರು. ನನ್ನ ಅದೃಷ್ಟಕ್ಕೆ ನಾನಲ್ಲಿರಲಿಲ್ಲ. ಆದರೆ ಅಲ್ಲಿ ವಿಚಿತ್ರ ಬಗೆಯ ಒಗ್ಗಟ್ಟೊಂದು ಮೂಡಿಬರುವಂತೆ ಕಾಣುತ್ತಿತ್ತು. ಇದು ನಿಜಕ್ಕೂ ಬೆಚ್ಚಿಬೀಳಬೇಕಾಗಿರುವ ಸಂಗತಿ. ಹೀಗಾಗಿ ಹೊರಗಿನಿಂದ ಬರುವ ಸಮಸ್ಯೆಗಳು ಮರೆಯಾಗುತ್ತಿರುವುದು ಹಾಗಿರಲಿ, ಬದಲಾಗಿ ದಿನಗಳೆದಂತೆ ಹೆಚ್ಚಾಗುತ್ತಿವೆ ಎಂದು ನಾನಿಲ್ಲಿ ಹೇಳಬಯಸುತ್ತಿದ್ದೇನೆ. ಈ ಸಮಸ್ಯೆಗಳ ಪಟ್ಟಿಯಲ್ಲಿ ಯಾವ್ಯಾವ ಸಮಸ್ಯೆಗಳು ಬರಲಿವೆ ಎಂಬುದನ್ನು ನಿಮ್ಮ ಮಾತುಗಳಿಂದಲೇ ವಿವರವಾಗಿ ಕೇಳಿ ತಿಳಿದುಕೊಳ್ಳುವ ಆಸೆ ನನಗಿದೆ.

ರೋಮಿಲಾ: ಹೌದು. ಭಾರತದ ಪರಿಕಲ್ಪನೆ ಮತ್ತು ಈ ಬಗೆಯ ಇನ್ಯಾವುದೇ ಪರಿಕಲ್ಪನೆಗಳಿಗೆ ಸಂಬಂಧಪಟ್ಟಂತೆ ನೀವಿಲ್ಲಿ ಎದುರಿಸಿದ ಸವಾಲೆಂದರೆ ಅವುಗಳಲ್ಲಾಗುವ ನಿರಂತರ ಬದಲಾವಣೆ. ಇಂತಹ ಪರಿಕಲ್ಪನೆಗಳು ಸಾರ್ವಕಾಲಿಕ ಸತ್ಯಗಳಾಗಿ ಉಳಿಯುವುದಿಲ್ಲ. 1947 ರಲ್ಲಿ ನನಗಿದ್ದ ಭಾರತದ ಪರಿಕಲ್ಪನೆಯು ಈಗ ಬದಲಾಗಿಬಿಟ್ಟಿದೆ. ನೈಜಸ್ಥಿತಿಯಿಂದ ಹೊಡೆತಕ್ಕೊಳಗಾಗುವ ಪರಿಕಲ್ಪನೆಯು ಕ್ರಮೇಣ ತನ್ನ ಆಕಾರವನ್ನು ಬದಲಿಸತೊಡಗುತ್ತದೆ. 50 ಮತ್ತು 60 ರ ದಶಕಗಳಲ್ಲಿ ಸಾಮಾನ್ಯವಾಗಿ ವಲಸಿಗರ ಬಳಗವನ್ನು ಈ ದೇಶದ ಬಗ್ಗೆ ಅಸಮಾಧಾನವನ್ನು ಹೊಂದಿದ್ದ ಕೆಲ ಮಂದಿ, ಉತ್ತಮ ಉದ್ಯೋಗಾವಕಾಶ ಮತ್ತು ಅದರಿಂದಾಗಿ ಸಿಗುವ ಜೀವನಶೈಲಿಗಾಗಿ ಇತರ ದೇಶಗಳತ್ತ ತೆರಳುತ್ತಿದ್ದ ಪುಟ್ಟ ಸಮೂಹವಾಗಿಯಷ್ಟೇ ನೋಡಲಾಗುತ್ತಿತ್ತು. ಆರಂಭದ ದಿನಗಳ ಬಗ್ಗೆ ಹೇಳುವುದಾದರೆ ಹೀಗೆ ದೇಶವನ್ನು ಬಿಟ್ಟು ಹೋಗುತ್ತಿರುವವರ ವರ್ಗವೂ ಬೇರೆಯದೇ ಆಗಿತ್ತು. ಅಮೆರಿಕಾಗಿಂತಲೂ ಯು.ಕೆ ಬಗ್ಗೆ ನನಗೆ ಹೆಚ್ಚು ತಿಳಿದಿರುವುದರಿಂದ ಈ ಬಗ್ಗೆ ಹೇಳಬಲ್ಲೆ. ನಾವಿಕರು ಮತ್ತು ಕಾರ್ಮಿಕ ವರ್ಗದ ಕೆಲ ಮಂದಿ ಮಾತ್ರ ನಿರ್ದಿಷ್ಟ ವೃತ್ತಿಗಳನ್ನು ಮಾಡಲೆಂದು ಹೀಗೆ ಹೋಗುತ್ತಿದ್ದರು. ಅವರ ಇರುವಿಕೆಯೂ ಕೂಡ ನಗಣ್ಯ ಎಂಬಂತಿತ್ತು. ಆದರೆ ಯಾವಾಗ ವೃತ್ತಿಪರರು ಮತ್ತು ಮಧ್ಯಮವರ್ಗದ ಮಂದಿ ಹೀಗೆ ವಲಸೆ ಹೋಗತೊಡಗಿದರೋ, ಎರಡು ರೀತಿಯ ಬದಲಾವಣೆಗಳು ಅಲ್ಲಿ ಗೋಚರಿಸತೊಡಗಿದವು. ಅವುಗಳನ್ನು ಇಂದಿಗೂ ಕಾಣಬಹುದು: ಹೀಗೆ ಬಂದವರು ತಮ್ಮ ಕ್ಷೇತ್ರದಲ್ಲಿ ಎಷ್ಟು ದೊಡ್ಡ ಯಶಸ್ಸನ್ನು ಪಡೆದರೆಂದರೆ ಕ್ರಮೇಣ ಅವರು ಇಲ್ಲಿಯ ಮಧ್ಯಮವರ್ಗದ ಮಂದಿಯ ಆದರ್ಶಗಳೆಂಬಂತೆ ಬದಲಾಗಿ ಮತ್ತಷ್ಟು ಪ್ರಭಾವಿಗಳಾದರು. ಇದರೊಂದಿಗೆ ಇವರುಗಳು ಹೀಗೆ ಬಂದಿರುವ ಸ್ಥಳದಲ್ಲಿ ತಮ್ಮದೇ ಆದ ಹೊಸ ಸಂಸ್ಕøತಿಯನ್ನೂ ಕೂಡ ಬೆಳೆಸತೊಡಗಿದರು. ಆದರೆ ಈ ಹೊಸ ಸಂಸ್ಕøತಿಯು ಆತಿಥೇಯ ನೆಲದ ಸಂಸ್ಕøತಿಗಿಂತ ತೀರಾ ವಿಭಿನ್ನವಾಗಿತ್ತು. ವಲಸಿಗರು ಹುಟ್ಟುಹಾಕಿದ ಈ ಸಂಸ್ಕøತಿಯು ಆತಿಥೇಯ ನೆಲದ ಸಂಸ್ಕøತಿಯಿಂದ ಸಾಮಾನ್ಯವಾಗಿ ಏನನ್ನೂ ತೆಗೆದುಕೊಳ್ಳುವುದೂ ಇಲ್ಲ ಮತ್ತು ಆ ಸಂಸ್ಕøತಿಗೆ ಹೊಸದಾಗಿ ಕೊಡುವುದೂ ಇಲ್ಲ. ಕನಿಷ್ಠಪಕ್ಷ ಆರಂಭದ ದಿನಗಳಲ್ಲಾದರೂ ಆತಿಥೇಯ ನೆಲದ ಸಂಸ್ಕøತಿಯಿಂದ ಅದು ತಕ್ಕಮಟ್ಟಿನ ಅಂತರವನ್ನು ಕಾಯ್ದುಕೊಂಡಿರುತ್ತದೆ. ನನ್ನ ಲೆಕ್ಕಾಚಾರದ ಪ್ರಕಾರ ಅಮೆರಿಕನ್ ಮತ್ತು ಬ್ರಿಟಿಷ್ ರಾಜಕೀಯ ವ್ಯವಸ್ಥೆಯಲ್ಲಿ ಹೇಳಿಕೊಳ್ಳುವಂಥಾ ಸಂಖ್ಯೆಯ ಭಾರತೀಯರಿಲ್ಲದಿದ್ದರೆ ಅಥವಾ ಸಾಕಷ್ಟು ಸಂಖ್ಯೆಯ ಅಂತರ್ದೇಶೀಯ ವಿವಾಹಗಳು ಆಗಿಲ್ಲವಾದರೆ, ಮುಂದೆಯೂ ವಲಸಿಗರ ಗುಂಪು ಪ್ರತ್ಯೇಕ ಗುಂಪಾಗಿಯೇ ಉಳಿದುಕೊಳ್ಳಲಿದೆ. ನನ್ನ ಊಹೆಯು ತಪ್ಪಾಗಿರಲೂಬಹುದು. ಆದರೆ ವಲಸಿಗರ ಬದುಕಿನಲ್ಲಾಗುತ್ತಿರುವ ಬದಲಾವಣೆಗಳನ್ನು ಸಾರಾಸಗಾಟಾಗಿ ತಳ್ಳಿಹಾಕಲಾಗುವುದು ಸಾಧ್ಯವಿಲ್ಲ. ಇನ್ನು ವಲಸಿಗ ಸಮೂಹದ ಸಾಂಸ್ಕøತಿಕ ಮತ್ತು ಧಾರ್ಮಿಕ ಮನೋಭಾವಗಳು ಆಯಾ ಜಾಗದ ಮಧ್ಯಮವರ್ಗದ ಮೇಲೆ ನಿಸ್ಸಂದೇಹವಾಗಿಯೂ ತಮ್ಮ ನೇರ ಪರಿಣಾಮಗಳನ್ನು ಬೀರುತ್ತವೆ. 1960 ರ ಮಧ್ಯಮವರ್ಗಕ್ಕೆ ಇದ್ದಂತಹ ಪರಿಕಲ್ಪನೆಗಳು ಮತ್ತು ಆದರ್ಶಗಳು ಈಗಿನ ಮಧ್ಯಮವರ್ಗಕ್ಕಿಲ್ಲ. ನಾನು ಸಮಾಚಾರಗಳನ್ನು ನೋಡಲೆಂದು ಅಪರೂಪಕ್ಕೊಮ್ಮೆ ಟಿ.ವಿ ಆನ್ ಮಾಡಿದಾಗಲೆಲ್ಲಾ ಸಾಮಾನ್ಯವಾಗಿ ಕಾಣಸಿಗುವ ಖಾಸಗಿ ವಿದ್ಯಾಸಂಸ್ಥೆಗಳ ಜಾಹೀರಾತುಗಳು ನನ್ನಲ್ಲಿ ವಿಚಿತ್ರ ಕುತೂಹಲಗಳನ್ನು ಹುಟ್ಟಿಸುತ್ತವೆ. ಅದ್ದೂರಿಯಾಗಿ ಕಾಣುವ ಪ್ರಯೋಗಾಲಯಗಳನ್ನು, ಉಪನ್ಯಾಸಗಳನ್ನು ನೀಡಲೆಂದೇ ಬರುವ ವಿದೇಶಿ ವಿದ್ವಾಂಸರನ್ನೆಲ್ಲಾ ಅಲ್ಲಿ ತೋರಿಸಲಾಗುತ್ತದೆ. ವಿಶ್ವವಿದ್ಯಾಲಯಗಳನ್ನು ಹಲವು ರೀತಿಗಳಲ್ಲಿ ವರ್ಣಿಸುತ್ತಾ ‘ನಿಮ್ಮ ಗುರಿ: ಯಶಸ್ಸು’ ಅಂತೆಲ್ಲಾ ಈ ಜಾಹೀರಾತುಗಳಲ್ಲಿ ದೊಡ್ಡದಾಗಿ ಹೇಳುತ್ತಾರೆ. ಇಂಥವುಗಳನ್ನು ನೋಡಿ ನನಗೆ ನಾನೇ ಕೆಲವೊಮ್ಮೆ ಪ್ರಶ್ನೆಗಳನ್ನು ಹಾಕಿಕೊಳ್ಳುವುದುಂಟು. ನಿಸ್ಸಂದೇಹವಾಗಿಯೂ ವಿಶ್ವವಿದ್ಯಾಲಯಗಳೆಂದರೆ ಕಲಿಕೆ, ಜ್ಞಾನ ಮತ್ತು ಚಿಂತನೆಗಳ ತಾಣ. ಆದರೆ ಇದು ಯಶಸ್ಸು ಹೇಗಾಗುತ್ತದೆ? ಅಷ್ಟಕ್ಕೂ ಯಶಸ್ಸು ಎಂದರೇನು? ಧನ ಸಂಪಾದನೆ ಮತ್ತು ಅಧಿಕಾರವನ್ನು ಪಡೆಯುವುದೇ? ಕಳೆದುಹೋದ ದಿನಗಳಿಗೆ ಹೋಲಿಸಿದರೆ ಚಿಂತನೆಯ ಮಟ್ಟಿನಲ್ಲಿ ಇದೊಂದು ದೊಡ್ಡ ಬದಲಾವಣೆಯೇ ಹೌದು.

ನಾನೀಗ ಕೊಂಚ ವಿಷಯಾಂತರವನ್ನು ಮಾಡುತ್ತಿದ್ದೇನೆ. ಅಷ್ಟಕ್ಕೂ ಇಂಥಾ ಬದಲಾವಣೆಗಳಿಗೆ ಕಾರಣಗಳೇನು, ನಮ್ಮ ಹಾದಿಗಳು ತಪ್ಪುವಂಥದ್ದೇನಾಯಿತು ಇತ್ಯಾದಿಗಳ ಬಗ್ಗೆ ನಾವು ಚರ್ಚಿಸುತ್ತಿದ್ದೆವು. ಆರ್ಥಿಕ ಬೆಳವಣಿಗೆ ಮತ್ತು ಆರ್ಥಿಕ ಬದಲಾವಣೆಗಳ ಬಗ್ಗೆ ಆ ದಿನಗಳಲ್ಲಿ ಜನರಿಗಿದ್ದ ಆಕರ್ಷಣೆಯು ತಕ್ಕಮಟ್ಟಿಗೆ ಒಪ್ಪುವ ಸಂಗತಿಯಾಗಿದ್ದರೂ ಇದರ ಭರದಲ್ಲಿ ಜಾತಿ-ಭಾಷೆಗಳಂತಹ ವಿಚಾರಗಳಿಗೆ ಸಿಗಬೇಕಾಗಿದ್ದ ಪ್ರಾಮುಖ್ಯತೆಗಳು ಸಿಗದೇಹೋಗಿದ್ದು, ಇವೆಲ್ಲವನ್ನೂ ಒಟ್ಟಾರೆಯಾಗಿ ಸಾಂಸ್ಕøತಿಕ ಅಭಿವ್ಯಕ್ತಿ ಎಂದು ಹೇಳಲಾಗುವ ಪರಿ… ಇತ್ಯಾದಿಗಳ ಬಗ್ಗೆಯೂ ನಾನು ಈಗಾಗಲೇ ಹೇಳಿದ್ದೇನೆ. ಭಾರತದಲ್ಲಿ ರಾಜಕೀಯ ಸಂದೇಶವು ಮುಖ್ಯವೇ ಹೊರತು ಧರ್ಮವಲ್ಲ ಎಂದು ಭಾವಿಸುತ್ತಿದ್ದ ದಿನಗಳಿದ್ದವು. ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿದ ಮಾತ್ರಕ್ಕೆ ದೇಶದ ಎಲ್ಲಾ ಸಮಸ್ಯೆಗಳೂ ತನ್ನಷ್ಟಕ್ಕೆ ನಿವಾರಣೆಯಾಗುತ್ತವೆ ಎಂಬ ಯೋಚನಾಕ್ರಮವೂ ಇತ್ತು. ಭಾಷೆಯು ಸಮಸ್ಯೆಯಾಗಿ ಎದ್ದು ನಿಂತಿದ್ದು ಸತ್ಯವಾದರೂ ಅದನ್ನು ಸಾಂವಿಧಾನಿಕ ವಿಧಾನದಲ್ಲೇ ಪರಿಹರಿಸಲಾಗಿತ್ತು. ಅಂದರೆ ಭಾಷಾವಾರು ಪ್ರಾಂತ್ಯಗಳಿಗಿದ್ದ ಬೆಂಬಲವನ್ನು ಸಂಖ್ಯೆಗಳಲ್ಲಿ ಪರಿಗಣಿಸಿ, ಬಹುಮತದ ನಿರ್ಧಾರವನ್ನು ಒಪ್ಪಿಕೊಳ್ಳಲಾಯಿತು. ಮುಂದೆ ಭಾಷಾವಾರು ಪ್ರಾಂತ್ಯಗಳು ಏನು ಮಾಡಿದವು ಎಂಬುದು ಬೇರೆ ಪ್ರಶ್ನೆ. ಇನ್ನು ಭಾಷಾವಾರು ಪ್ರಾಂತ್ಯಗಳು ಈ ದೇಶದ ರಾಷ್ಟ್ರೀಯತೆಯ ಪರಿಕಲ್ಪನೆಗೆ ನೀಡಿದ ಹೊಡೆತವು ಕಮ್ಮಿಯೇನಲ್ಲ.

ಇನ್ನು ನಮ್ಮಲ್ಲಿ ಧಾರ್ಮಿಕತೆಯ ಒಳಗೊಳ್ಳುವಿಕೆಯೊಂದಿಗೆ ಹುಟ್ಟಿಕೊಳ್ಳುವ ಸಾಂಸ್ಕøತಿಕ ಭಾಷಾವೈಶಿಷ್ಟ್ಯದ ವಿಚಾರವೂ ಇದೆ. ಅಂದರೆ ಜನರು ಭಾರತೀಯ ಸಂಸ್ಕøತಿಯ ಬಗ್ಗೆ ವ್ಯಾಖ್ಯಾನವನ್ನು ನೀಡುವಾಗಲೆಲ್ಲಾ, ನೀವು ಈ ಮೊದಲು ಹೇಳಿರುವಂತೆ, ”ಇಡೀ ಭಾರತೀಯ ಸಮಾಜದ ಸಂಸ್ಕøತಿಯು ಹೇಗಿದೆ? ದೇಶದ ಉದ್ದಗಲಕ್ಕೂ ಇರುವ ಸಂಸ್ಕøತಿ ಯಾವ ಬಗೆಯದ್ದು?” ಎಂದು ಕೇಳುವ ರೂಢಿಗಳಿಲ್ಲ. ಭಾರತದ ವಿಚಾರಕ್ಕೆ ಬಂದರೆ ದೇಶದ ಮೇಲ್ಭಾಗದಲ್ಲಿರುವ ಸಂಸ್ಕøತಿಯು ಆ ಭಾಗಕ್ಕಷ್ಟೇ ಸತ್ಯ. ಈ ಅಂಶವೇ ಅಲ್ಲಿಯ ಒಂದು ಗುರುತಾಗುತ್ತದೆ. ಮುಂದೆ ಅದುವೇ ಭಾರತೀಯತೆಯ ಗುರುತೂ ಆಗುತ್ತದೆ. ಆದರೆ ಈ ಗುರುತೆನ್ನುವುದು ಸಾಕಷ್ಟು ವಿಶಾಲವಾಗಿಲ್ಲ ಎಂಬುದೇ ಇಂದು ನಮ್ಮ ನಡುವಿನ ಬಹಳಷ್ಟು ಸಮಸ್ಯೆಗಳ ಹಿಂದಿರುವ ಮುಖ್ಯ ಕಾರಣವಾಗಿದೆ. ”ಹೌದು. ಬಹುಷಃ ಇದೊಂದು ಪರಿಪೂರ್ಣ ಎನ್ನಿಸುವಂತಹ ಗುರುತಲ್ಲ. ಆದರೆ ನಾನೊಬ್ಬ ಭಾರತೀಯ ಎಂದು ಹೇಳುವಾಗ ಬಹಳಷ್ಟು ಮಂದಿಯ ಮನದಲ್ಲಿರುವ ಕಲ್ಪನೆಗೆ, ನನ್ನ ಕಲ್ಪನೆಯ ಗುರುತು ಸಾಕಷ್ಟು ತಾಳೆಯಾಗುತ್ತದೆ”, ಎಂಬ ನಿರ್ಧಾರಕ್ಕೆ ವ್ಯಕ್ತಿಯೊಬ್ಬ ಬರುವಂತಾಗಲೂ, ಗುರುತಿನ ಬಗ್ಗೆ ಹೇಳಿಕೊಳ್ಳುವಂತಹ ಮಟ್ಟಿನ ಚರ್ಚೆಗಳು ನಮ್ಮಲ್ಲೆಂದೂ ನಡೆಯಲೇ ಇಲ್ಲ.

ಸ್ಪಿವಾಕ್: ನನಗನ್ನಿಸುವಂತೆ ಭಾರತವೆಂಬ ಪರಿಕಲ್ಪನೆಯು ಆಯಾ ಭಾಷಾವಾರು ಗುಂಪುಗಳ ಗುಣಲಕ್ಷಣಗಳ ನೆಲೆಯಲ್ಲಿ ಒಂದೊಂದು ಅರ್ಥವನ್ನು ಹೊಮ್ಮಿಸುವಂಥದ್ದು. ವಿದೇಶಗಳಲ್ಲಿ ನೆಲೆಸಿರುವ ಬಹಳಷ್ಟು ಭಾರತೀಯರಿಗೆ ಭಾರತವೆಂಬ ಪರಿಕಲ್ಪನೆಯ ಬಗ್ಗೆ ಮಾತನಾಡುವಾಗ ಈ ದೇಶವು ಎಲ್ಲಾ ವಿಧದಲ್ಲೂ ಬಹುತ್ವವನ್ನು ಮೈತುಂಬಿಕೊಂಡ ದೇಶ ಎಂಬ ಸತ್ಯದ ಬಗ್ಗೆ ಅರಿವಿರುವುದಿಲ್ಲ. ಶ್ರೇಣಿ ಮತ್ತು ಜಾತಿವ್ಯವಸ್ಥೆಯ ಮಾತುಗಳು ಹಾಗಿರಲಿ. ಸಾಂಸ್ಕøತಿಕ ವೈವಿಧ್ಯದ ವಿಚಾರದಲ್ಲೂ ಇದು ಸತ್ಯ. ರಾಷ್ಟ್ರೀಯತೆಯನ್ನು ಸಾರುವ ಪುಸ್ತಕವೊಂದರಲ್ಲಿ ಬೆಂಗಾಲ್ ಅನ್ನು ಇಂಡಿಯಾ ಎಂದೂ, ಇಂಡಿಯಾವನ್ನು ಜಗತ್ತೆಂದೂ ಹೆಸರಿಸಲಾಗಿದೆ. ನಿಜಕ್ಕೂ ಇದೊಂದು ಗಂಭೀರವಾದ ಸಮಸ್ಯೆಯೇ ಹೌದು.

ಭಾರತೀಯತೆಯ ನೆಲೆಯಲ್ಲೇ ಇವುಗಳ ಬಗ್ಗೆ ಯೋಚಿಸಬೇಕೇ ಎಂಬುದರ ಬಗ್ಗೆ ನನಗಂತೂ ತಿಳಿದಿಲ್ಲ. ಅದು ಬೇರೆ ಪ್ರಶ್ನೆ. ಹಾಗಂತ ಯೋಚಿಸುವುದೇ ಆದಲ್ಲಿ, ರೂಪದಲ್ಲಿ ತನ್ನಂತೆ ಒಂದಷ್ಟೂ ಹೋಲಿಕೆಯಿಲ್ಲದ ಭಾರತೀಯರ ಬಗ್ಗೆಯೂ ಯೋಚಿಸಿದರೆ ಒಳಿತು. ಇಂದು ನಿಧಾನವಾಗಿ ಮಾಯವಾಗುತ್ತಿರುವ ಬಹಳಷ್ಟು ಸಂಗತಿಗಳಲ್ಲಿ ಇದೂ ಒಂದು. ಈ ಅರಿವು ನಮ್ಮಲ್ಲೂ ಮರೆಯಾಗುತ್ತಿದೆ, ವಿದೇಶಗಳಲ್ಲೂ ಕ್ರಮೇಣ ಮರೆಯಾಗುತ್ತಿದೆ. ಇದೊಂದು ನಾಚಿಕೆಗೇಡಿನ ಸಂಗತಿ ಎಂದು ನಾನು ಭಾವಿಸುತ್ತೇನೆ. ಉದಾಹರಣೆಗೆ ನಾವು ಬೆಳೆಯುತ್ತಿದ್ದ ದಿನಗಳಲ್ಲಿ ಏನನ್ನಾದರೂ ಕಳೆದುಕೊಂಡರೆ ನಮಗೆ ಅದೊಂದು ದೊಡ್ಡ ಸಂಗತಿಯೇ ಆಗಿರಲಿಲ್ಲ. ”ಕಳೆದುಹೋದ ವಸ್ತು ಮರಳಿ ಸಿಕ್ಕರೆ ಹಾಜಿರ್ ಪೀರನಿಗೆ ಉಪ್ಪು ನೀರು ಕೊಟ್ಟರಾಯಿತು”, ಎಂದು ನಾವು ಹೇಳುತ್ತಿದ್ದೆವು. ಈಗ ಅದು ಗಣೇಶನಾಗಿಬಿಟ್ಟಿದೆ. ಎಲ್ಲವೂ ಗಣೇಶಮಯವಾಗಿಬಿಟ್ಟಿದೆ. ಅಸಲಿಗೆ ಹಾಜಿರ್ ಪೀರನಿಗೆ ಉಪ್ಪು ನೀರು ಕೊಡುವುದರೊಂದಿಗೆ ನಾವು ಐಕ್ಯಭಾವವನ್ನು ಹೊಂದಿರುವ ಮಧ್ಯಮವರ್ಗದ ಜಾತ್ಯತೀತರಾಗುತ್ತೇವೆ ಎಂಬ ಭಾವನೆಯೇ ಅಂದು ನಮಗಿರಲಿಲ್ಲ. ಇವೆಲ್ಲಾ ನಮಗೆ ಸಹಜ ಸಂಗತಿಯಾಗಿತ್ತು. ಆದರೆ ಇವುಗಳೆಲ್ಲಾ ಇತ್ತೀಚಿನ ದಿನಗಳಲ್ಲಿ ತಕ್ಕಮಟ್ಟಿಗೆ ಮರೆಯಾಗಿವೆ ಎಂದನ್ನಿಸುತ್ತಿದೆ ನನಗೆ.

ಕೆಲವೊಮ್ಮೆ ವಿದೇಶಗಳಲ್ಲಿ ನಾನು ಯಾರಾದರೂ ಪರಿಚಿತರನ್ನು ಕಂಡು ”ಸಲಾಂ ಆಲೈಕುಮ್” ಎಂದಾಗ ”ನೀವು ಮುಸಲ್ಮಾನರೇ?” ಎಂದು ಅವರು ಕೇಳುತ್ತಾರೆ. ”ಅಲ್ಲ. ಇದೂ ಕೂಡ ಭಾರತೀಯ ಶೈಲಿಯಲ್ಲಿ ಮಾಡಲಾಗುವ ಕುಶಲೋಪರಿಯ ವಿಧಗಳಲ್ಲೊಂದು”, ಎಂದು ನಾನಾಗ ಉತ್ತರಿಸುತ್ತೇನೆ (ಸಭಿಕರಲ್ಲಿ ಈ ಮಾತು ನಗೆಯನ್ನುಕ್ಕಿಸಿದೆ). ಇಂತಹ ರೂಢಿಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವ ಅವಶ್ಯಕತೆಯು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ನಮ್ಮ ವ್ಯಕ್ತಿಗತ ಗುರುತನ್ನು ಮಾತ್ರ ಭಾರತೀಯತೆಯ ಗುರುತು ಎಂದು ತಪ್ಪಾಗಿ ಅರ್ಥೈಸಿಕೊಳ್ಳುವುದನ್ನು ಇಂತಹ ರೂಢಿಗಳಿಂದ ತಪ್ಪಿಸಬಹುದು.

ದೇಶಕ್ಕೆ ಸ್ವಾತಂತ್ರ್ಯವು ಸಿಕ್ಕ ದಿನಗಳಲ್ಲಿ ನೀವು ನಿರಂತರವಾಗಿ ಚಿಂತನೆಯನ್ನು ಮಾಡುತ್ತಿದ್ದ ವಿಷಯಗಳ ಬಗ್ಗೆ ಈಗಾಗಲೇ ಹೇಳಿದ್ದೀರಿ. ”ಬಡತನವನ್ನು ಹೋಗಲಾಡಿಸುವ ಆರ್ಥಿಕ ಬೆಳವಣಿಗೆಯ ಬಗ್ಗೆ ನಾವೆಲ್ಲರೂ ಅಂದು ಉತ್ಸಾಹದಿಂದ ಚರ್ಚಿಸುತ್ತಿದ್ದೆವು”. ಗರೀಬಿ ಹಟಾವೋ ಇದುವೇ ಆಗಿತ್ತು. ವಿಶ್ವ ಆರ್ಥಿಕ ವೇದಿಕೆಯಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯ ವಿಚಾರದಲ್ಲಿ ನಾನೋರ್ವ ತಜ್ಞಳೆಂದು ಭಾವಿಸಲ್ಪಟ್ಟಿರುವುದರಿಂದ ನಾನಿಲ್ಲಿ ಒಂದೆರಡು ಮಾತುಗಳನ್ನು ಹೇಳಬಹುದೇನೋ (ಹೀಗೆ ಹೇಳುತ್ತಾ ಸ್ಪಿವಾಕ್ ”ಮಕ್ಕಳೇ, ಜೋರಾಗಿ ಚಪ್ಪಾಳೆ ತಟ್ಟಿ ಮತ್ತೆ” ಎನ್ನುತ್ತಿದ್ದರೆ, ಸಭಿಕರೊಂದಿಗೆ ಸ್ಪಿವಾಕ್ ಕೂಡ ನಗುತ್ತಿದ್ದಾರೆ). ಸ್ಪರ್ಧಾತ್ಮಕ ಸೂಚ್ಯಂಕವನ್ನು ಕಂಡುಹಿಡಿದ ಕ್ಸೇವಿಯರ್ ಸಲಾಯಿ ಮಾರ್ಟಿನ್ ನನ್ನ ಅದ್ಭುತ ಸಹೋದ್ಯೋಗಿಗಳಲ್ಲೊಬ್ಬರು. ಅರ್ಥಶಾಸ್ತ್ರಜ್ಞರೂ, ಲವಲವಿಕೆಯ ವ್ಯಕ್ತಿತ್ವದವರೂ ಆಗಿರುವ ಅವರ ಮಾತುಗಳನ್ನು ಕೇಳುವುದೇ ಸೊಗಸು. ”ವಿಶ್ವ ಆರ್ಥಿಕ ವೇದಿಕೆಯ ಸಮಾಲೋಚನೆಗಳಲ್ಲಿ ನಾನು ಪಾಲ್ಗೊಳ್ಳುವವನಾದ್ದರಿಂದ ಈ ಬಗ್ಗೆ ನಾನು ನಿಮಗೆ ಹೇಳಬಲ್ಲೆ. ಆರ್ಥಿಕ ಬೆಳವಣಿಗೆಗಳು ಸಾಧ್ಯವಿರುವ ಹೊಸ ಕ್ಷೇತ್ರಗಳನ್ನು ನಾನು ಗುರುತಿಸುವ ಕಾರಣಕ್ಕಾಗಿ ರವಾಂಡಾ ಮತ್ತು ಕೆನಡಾ ದೇಶದ ವಿತ್ತ ಮಂತ್ರಾಲಯಗಳು ಸಾಮಾನ್ಯವಾಗಿ ನನ್ನ ಬಳಿ ಬಂದು ಮಾತಾಡುತ್ತಿದ್ದರೆ, ಅವರಿಬ್ಬರೂ ಒಂದೇ ಸಂಗತಿಯ ಬಗ್ಗೆ ಮಾತನಾಡುತ್ತಿರುವುದಿಲ್ಲ. ವಸ್ತುಸ್ಥಿತಿಯು ಹಾಗಿದ್ದರೂ ಕೂಡ ನಾನು ಇಬ್ಬರೊಂದಿಗೂ ಮಾತನಾಡಬಲ್ಲೆ. ಆದರೆ ಸಾಮಾಜಿಕ ಒಳಗೊಳ್ಳುವಿಕೆ? ಅದೇನಿದ್ದರೂ ನಿಮಗೆ ಬಿಟ್ಟಿದ್ದು”, ಎನ್ನುತ್ತಾರೆ ಆತ. ಆದರೆ ಈ ಅಂತರವು ಇಂದು ಸಂಪೂರ್ಣವಾಗಿ ಮರೆಯಾಗಿದೆ. ನಾನು ಇತ್ತೀಚೆಗಷ್ಟೇ ಘಾನಾದಿಂದ ಬಂದಿದ್ದೆ. ಇತ್ತೀಚೆಗೆ ಘಾನಾ ದೇಶವು ಉಪಗ್ರಹವೊಂದನ್ನು ಲಾಂಚ್ ಮಾಡಿತ್ತು. ಅಲ್ಲೂ ವಲಸಿಗರ ಸಮಾವೇಶವೊಂದು ನಡೆಯುತ್ತಿತ್ತು. ನಾನು ನನ್ನ ಮುಖವನ್ನು ತೋರಿಸದೆ, ಅವರ ಮಾತುಗಳನ್ನಷ್ಟೇ ಕೇಳುತ್ತಿದ್ದೆ. ಅವರು ಏನು ಮಾತನಾಡುತ್ತಿದ್ದರು ಗೊತ್ತೇ? ”ಈಗ ನಾವು ಸ್ವಾತಂತ್ರ್ಯದ ಬಗ್ಗೆ ಯೋಚಿಸುವುದನ್ನು ಬಿಟ್ಟಿದ್ದೇವೆ. ಬದಲಾಗಿ ಆರ್ಥಿಕ ಬೆಳವಣಿಗೆಯೇ ನಮ್ಮ ಮುಖ್ಯ ಗುರಿ”, ಅನ್ನುತ್ತಿದ್ದರು. ಭಾರತೀಯರು ಚೀನಾದ ಬಗ್ಗೆ ಕೂಡ ಇದೇ ಶೈಲಿಯಲ್ಲಿ ಮಾತನಾಡುತ್ತಾರೆ. ಒಟ್ಟಿನಲ್ಲಿ ಸಾಮಾಜಿಕ ಒಳಗೊಳ್ಳುವಿಕೆಯನ್ನು ಹೊರತಾಗಿಸಿದ ಆರ್ಥಿಕ ಬೆಳವಣಿಗೆಯು ಬಡವ ಮತ್ತು ಶ್ರೀಮಂತನ ನಡುವಿನ ಕಂದರವನ್ನು ಮತ್ತಷ್ಟು ದೊಡ್ಡದಾಗಿಸುತ್ತಿದೆ.

ಥಾಮಸ್ ಪಿಕೆಟ್ಟಿ ನಿಜಕ್ಕೂ ಓರ್ವ ಒಳ್ಳೆಯ ವ್ಯಕ್ತಿ. ಆದರೆ ಯೂರೋಕೇಂದ್ರಿತವಾಗಿರುವ ಆತನ ಅದ್ಭುತ ಕೃತಿಯು ತೊಂಭತ್ತರ ದಶಕದಲ್ಲಿ ಸ್ಕ್ಯಾಂಡಿನೇವಿಯನ್ ದೇಶಗಳು ಎದುರಿಸಬೇಕಾಗಿ ಬಂದ ದುಸ್ಥಿತಿಯನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಈ ಅವಧಿಯಲ್ಲಿ ಸೊಮಾಲಿಗಳು, ರವಾಂಡನ್ನರು ಮತ್ತು ಟರ್ಕರು ಒಳಬರುತ್ತಿದ್ದರೆ ಸ್ಕ್ಯಾಂಡಿನೇವಿಯನ್ನರು ನಿಯಮಗಳನ್ನು ಬದಲಾಯಿಸುವುದರಲ್ಲಿ ವ್ಯಸ್ತರಾಗಿದ್ದರು. ಹೀಗಾಗಿ ಪಿಕೆಟ್ಟಿಗೆ ಅವುಗಳು ಆದರ್ಶವಾಗಿ ಉಳಿದಿರಲಿಲ್ಲ. ಆದರೆ ಈ ಬದಲಾವಣೆಗಳ ಬಗ್ಗೆ ಆತ ಒಂದೇ ಒಂದು ವಾಕ್ಯವನ್ನೂ ಬರೆಯುವುದಿಲ್ಲ. ಬಂಡವಾಳದ ಬದಲಾಗಿ ಆನುವಂಶಿಕತೆ ಇತ್ಯಾದಿಗಳ ಬಗ್ಗೆಯೆಲ್ಲಾ ಪಿಕೆಟ್ಟಿ ಚರ್ಚಿಸುತ್ತಾರೆ. ತೆರಿಗೆಗಳನ್ನು ಕಟ್ಟುವುದಷ್ಟೇ ಇದಕ್ಕೆ ಪರಿಹಾರವಲ್ಲ. ಆದರೆ ಆರ್ಥಿಕ ಬೆಳವಣಿಗೆಯ ಈ ಪ್ರಶ್ನೆಯು ಭಾರತೀಯತೆಯ ಪರಿಕಲ್ಪನೆಯೊಂದಿಗೆ ಗಾಢವಾಗಿ ತನ್ನ ಗುರುತನ್ನು ಉಳಿಸಿಕೊಂಡಿದೆ. ಮಧ್ಯಮವರ್ಗದವರ ಸಂಖ್ಯೆಯು ಇಂದು ಹೆಚ್ಚಾಗುತ್ತಿದೆ, ವಿದ್ಯುಚ್ಛಕ್ತಿಯು ಬಹುತೇಕ ಹಲವೆಡೆ ತಲುಪಿದೆ, ಶೌಚಾಲಯಗಳು ಸಾಕಷ್ಟಿವೆ… ಹೀಗೆ ಇನ್ನೂ ಏನೇನೋ. ಆದರೆ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯ ಸಮಸ್ಯೆಯನ್ನು ಪ್ರಶ್ನಿಸುವ ವಿಧಾನವೇ ಬದಲಾಗಬೇಕಿದೆ. ಬಹುಷಃ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಆಗಬೇಕಿರುವ ಪುನರುಜ್ಜೀವನವು ಇದರ ಪರಿಹಾರಗಳಲ್ಲೊಂದು. ಏಕೆಂದರೆ ಶಿಕ್ಷಣವೆಂದರೆ ಜ್ಞಾನ ಮತ್ತು ಕಲಿಕೆಯಷ್ಟೇ ಆಲ್ಲ. ಅದು ಪ್ರಶ್ನಿಸುವಿಕೆಯೂ ಆಗಬೇಕು. ನೀವು ಹೇಳುತ್ತಿದ್ದ ಉತ್ತಮ ಶಿಕ್ಷಣ ವ್ಯವಸ್ಥೆಯು ಪ್ರಶ್ನಿಸುವಿಕೆಯೂ ಹೌದು. ನಮ್ಮ ಆರಂಭದ ದಿನಗಳಲ್ಲಿದ್ದ ಶಿಕ್ಷಣ ವ್ಯವಸ್ಥೆಯ ಕತ್ತನ್ನು ಈಗ ನಿರ್ದಯವಾಗಿ ಹಿಸುಕಲಾಗಿದೆ. ಅದೆಷ್ಟು ವರ್ಷಗಳ ಕಾಲ ನಾವೆಲ್ಲಾ ಇದರಲ್ಲಿ ಸಕ್ರಿಯವಾಗಿದ್ದೆವು ಅಲ್ಲವೇ. ಈಗ ಅದ್ಯಾವುದೂ ಇಲ್ಲ. ನೀವು ಈಗಾಗಲೇ ತಮ್ಮ ಪ್ರಶ್ನೆ ಮತ್ತು ನನ್ನೊಂದಿಗೆ ನಡೆಸಿದ್ದ ಚರ್ಚೆಗಳಲ್ಲಿ ಹೆಸರಿಸಿದ್ದ ಆರ್ಥಿಕ ಬೆಳವಣಿಗೆಯ ನಿರೀಕ್ಷೆಯು ನಿಮಗಿತ್ತು ಎಂದು ನಾನು ಹೇಳುತ್ತಿದ್ದೇನೆ. ಅಂದರೆ ”ಬಡತನದ ನಿರ್ಮೂಲನೆಯಾಗುತ್ತದೆ”, ಎಂಬ ಭಾವನೆ. ಭಾರತವೆಂಬ ಪರಿಕಲ್ಪನೆಯ ನಿಟ್ಟಿನಲ್ಲಿ ಈ ಬಗ್ಗೆ ನಾವು ಮತ್ತಷ್ಟು ವಿಸ್ತøತವಾಗಿ ಚರ್ಚೆಯನ್ನು ಮಾಡೋಣ.

ರೋಮಿಲಾ: ಇಲ್ಲಿ ಸ್ಪಷ್ಟವಾಗಿಸಿಕೊಳ್ಳಬೇಕಾದ ಸಂಗತಿಯೇನೆಂದರೆ ಬೇಡವಾಗಿರುವುದನ್ನು ಬಿಡುವುದರ ಜೊತೆಯಲ್ಲೇ, ಬೇಕಿರುವುದನ್ನು ಉಳಿಸಿಕೊಳ್ಳಬೇಕಾದ ಸವಾಲು. ಆರ್ಥಿಕ ಬೆಳವಣಿಗೆಯು ನಮಗೆ ಬೇಡವೆಂದಲ್ಲ. ಅದರಲ್ಲೂ ಬಡತನಕ್ಕೆ ಸಂಬಂಧಪಟ್ಟಂತೆ ಆರ್ಥಿಕ ಬೆಳವಣಿಗೆಯೆಂಬುದು ಬೇಕೇ ಬೇಕು. ಅಷ್ಟಕ್ಕೂ ಆಗಿದ್ದೇನೆಂದರೆ ಆರ್ಥಿಕ ಬೆಳವಣಿಗೆಯ ಅಂಕಿಅಂಶಗಳನ್ನು ತೋರಿಸುತ್ತಲೇ ನಾವು ನಮ್ಮ ಸೋಲುಗಳನ್ನೂ ಜೊತೆಯಲ್ಲಿ ಕರೆದೊಯ್ದೆವು. ಈಗ ಅಭಿವೃದ್ಧಿಯ ಹೆಸರಿನಲ್ಲಿ ಅಂತಹ ಚರ್ಚೆಗಳಾಗುತ್ತಿವೆ. ಅಭಿವೃದ್ಧಿಯೆಂಬುದು ಈಗ ಎಲ್ಲರ ಹೊಸ ಮಂತ್ರವಾಗಿದೆ. ಮಾತೆತ್ತಿದರೆ ”ನಾವು ಅಭಿವೃದ್ಧಿಯನ್ನು ಬೆಂಬಲಿಸುವವರು”, ಎಂದು ಹಲವರು ಭಾಷಣ ಬಿಗಿಯುತ್ತಾರೆ. ಏನಿದರ ಅರ್ಥ? ಇದರ ನೈಜ ಅರ್ಥವನ್ನು ನಮಗೆ ಯಾವತ್ತೂ ಯಾರೂ ತಿಳಿಸಲೇ ಇಲ್ಲ. ಆದರೂ ನಮಗೆ ಇದರ ಬಗ್ಗೆ ಒಲವಿದೆ. ಅಷ್ಟಕ್ಕೂ ನಾನು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದೆನೆಂದರೆ ಆ ದಿನಗಳಲ್ಲಿ ಆರ್ಥಿಕ ಬೆಳವಣಿಗೆಯ ಬಗೆಗಿದ್ದ ವಿಪರೀತ ಮೋಹವು ತಪ್ಪೇನೂ ಆಗಿರಲಿಲ್ಲ. ಆದರೆ ಇದಕ್ಕೆ ಸಂಬಂಧಿಸಿದಂತೆ ಉಳಿದ ಅಂಶಗಳ ಬಗ್ಗೆಯೂ ಗಮನವನ್ನು ಹರಿಸಬೇಕಿತ್ತು. ಆ ಕೆಲಸವನ್ನು ನಾವೆಂದೂ ಮಾಡಲಿಲ್ಲ. ಜಾತಿಯ ಪ್ರಶ್ನೆಯು ಅವುಗಳಲ್ಲೊಂದು.

60 ಮತ್ತು 70 ರ ದಶಕಗಳಲ್ಲಿ ಸಾಮಾಜಿಕ ಒಳಗೊಳ್ಳುವಿಕೆಯ ಬಗ್ಗೆ ನಡೆಯುತ್ತಿದ್ದ ಕೆಲ ಚರ್ಚೆಗಳು ನನಗಿನ್ನೂ ನೆನಪಿವೆ. ಇದು ಹೇಗಿತ್ತೆಂದರೆ, ”ಜಾತಿವ್ಯವಸ್ಥೆಯಿಂದ ಕಳಚಿಕೊಳ್ಳಬೇಕು”, ಎಂಬ ಯೋಚನೆಯು ಸದುದ್ದೇಶದ ಯೋಚನೆಯೇ ಆಗಿತ್ತು. ಆದರೆ ಸಾಮಾಜಿಕ ವ್ಯವಸ್ಥೆಯಿಂದ ಜಾತಿಯನ್ನು ನಿಧಾನವಾಗಿ ಕಿತ್ತೊಗೆಯುವ ನಿಟ್ಟಿನಲ್ಲಿ ಮಾತ್ರ ಹೇಳಿಕೊಳ್ಳುವಂಥಾ ಪ್ರಯತ್ನಗಳಾಗಲಿಲ್ಲ. ಇನ್ನು ಇದಕ್ಕೆ ವಿರೋಧಾಭಾಸವೆಂಬಂತೆ ರಾಜಕೀಯ ನೆಲೆಯಲ್ಲಿ ಜಾತಿಗಳನ್ನು ತಮ್ಮ ಅಸ್ತಿತ್ವದ ಗುರುತಾಗಿ ಬಳಸಿಕೊಳ್ಳುವ ನಡೆಗಳು ಈ ಅವಧಿಯಲ್ಲೇ ಆರಂಭವಾಗಿದ್ದವು. ನೆಹರೂರವರ ಯೂನಿವರ್ಸಲ್ ಫ್ರಾಂಚೈಸಿ ಕಲ್ಪನೆಯ ಹಿಂದೆ ಇದ್ದಿದ್ದು ಪ್ರತಿಯೊಬ್ಬ ಭಾರತೀಯನೂ ಮತದಾನದ ಹಕ್ಕನ್ನು ಹೊಂದಿರುತ್ತಾನೆ ಮತ್ತು ಇದುವೇ ಅವನನ್ನು ಸ್ವತಂತ್ರನನ್ನಾಗಿಸುತ್ತದೆ ಎಂಬ ಭಾವನೆ. ಏಕೆಂದರೆ ಮತದಾರನು ತನ್ನ ಮತದಾನದ ಹಕ್ಕನ್ನು ತನಗೆ ಬೇಕಿರುವಂತೆ ಚಲಾಯಿಸುತ್ತಾನೆ ಮತ್ತು ರಾಜಕೀಯ ಪಕ್ಷಗಳು ಅದಕ್ಕೆ ತಕ್ಕಂತೆ ಮತದಾರನನ್ನು ಓಲೈಸಬೇಕಾಗುತ್ತದೆ. ಆದರೆ ಆಗಿದ್ದೇ ಬೇರೆ. ಇಂದು ನಮ್ಮಲ್ಲಿ ಮತ ಬ್ಯಾಂಕುಗಳಿವೆ. ಇಂದಿನ ಚುನಾವಣೆಗಳು ಮತ ಬ್ಯಾಂಕುಗಳನ್ನು ಅವಲಂಬಿಸಿವೆ. ಇಂದು ರಾಜಕೀಯ ಪಕ್ಷಗಳು ಒಂದು ಸ್ವತಂತ್ರ ಮತವನ್ನು ಹೊಂದಿರುವ ಮತದಾರನೊಬ್ಬನನ್ನು ಓಲೈಸಬೇಕಿಲ್ಲ. ಬದಲಾಗಿ ತಮಗೆ ಲಾಭದಾಯಕವಾದ ಓಟುಬ್ಯಾಂಕಿಗೆ ಸೇರಿದ ಮತದಾರನನ್ನು ಪಕ್ಷಗಳು ಓಲೈಸಲು ಪ್ರಯತ್ನಿಸುತ್ತವೆ. ನನಗನಿಸುವ ಮಟ್ಟಿಗೆ ಇದು ಪ್ರಜಾಪ್ರಭುತ್ವದ ವಿರೋಧಾಭಾಸವೇ ಹೌದು. ಇದೊಂದು ನಿಜಕ್ಕೂ ಚಿಂತಿಸಬೇಕಾದ ಸಂದರ್ಭ. ಆದರೆ ಇದನ್ನು ಮಾತ್ರ ಹಾಗೆ ನೋಡಲಾಗುತ್ತಿಲ್ಲ. ಹೀಗಾಗಿ ಶ್ರೇಣೀಕೃತ ಸಮಾಜದ ಮಟ್ಟವನ್ನು ಒಂದಷ್ಟು ಕಮ್ಮಿ ಮಾಡುವುದಾದರೂ ಹೇಗೆ? ಸಾಮಾಜಿಕ ಶ್ರೇಣಿಗಳನ್ನು ಸಂಪೂರ್ಣವಾಗಿ ತೆಗೆಯುವುದಂತೂ ಸಾಧ್ಯವಿಲ್ಲ. ಆದರೆ ಅವುಗಳ ಮಟ್ಟವನ್ನು ಕೊಂಚ ಕಮ್ಮಿ ಮಾಡಬಹುದೇ? ಇತ್ಯಾದಿಗಳ ನೆಲೆಗಳಲ್ಲಿ ಸವಾಲುಗಳನ್ನು ಎದುರಿಸುವುದೇ ಸಾಧ್ಯವಾಗುತ್ತಿಲ್ಲ.

ಎರಡು ಮೂಲ ಅಂಶಗಳನ್ನು ನಾನಿಲ್ಲಿ ನಿಮಗೆ ಪರಿಚಯಿಸಲಿದ್ದೇನೆ. ಮತ್ತೊಮ್ಮೆ 60 ರ ದಶಕದ ಅವಧಿಯತ್ತ ಕೊಂಚ ಸಾಗೋಣ. ಮೊದಲನೆಯ ಅಂಶವೇನೆಂದರೆ ನೀವು ಈಗಾಗಲೇ ಹೇಳಿರುವಂತೆ ಶಿಕ್ಷಣ. ನಾವು ಹೇಗೆ ಯೋಚಿಸಬೇಕೆಂದು ತರಬೇತಿಯನ್ನು ನೀಡುವ ಶಿಕ್ಷಣ ವ್ಯವಸ್ಥೆಯು ತಕ್ಕಮಟ್ಟಿಗಾದರೂ ನಮ್ಮ ದಿನಗಳಲ್ಲಿದ್ದವು. ಈಗ ಅದು ಇಲ್ಲವೇ ಇಲ್ಲ. ಹೇಗೆ ಯೋಚಿಸಬೇಕೆಂದು ಬೋಧಿಸುವ ಪರಿಪಾಠವು ಇಂದು ನಮ್ಮಲ್ಲಿಲ್ಲ. ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಲು ಪ್ರೇರೇಪಿಸಬೇಕೆಂಬ ವಾದಕ್ಕೆ ಇಂದು ಬಹಳಷ್ಟು ಮಂದಿ ಸಿಡುಕುತ್ತಾರೆ. ”ನೀವು ವಿಪರೀತ ಪ್ರಶ್ನೆಗಳನ್ನು ಕೇಳುತ್ತೀರಿ”, ಎಂದು ಅಸಮಾಧಾನದಿಂದ ಹೇಳುವ ರಾಜಕಾರಣಿಗಳು ಇಂದು ನಮ್ಮಲ್ಲಿದ್ದಾರೆ. ನಮ್ಮಂಥವರಿಗೆ ಶಿಕ್ಷಣದ ತಳಹದಿಯೇ ಪ್ರಶ್ನೆಗಳನ್ನು ಕೇಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು. ಆದರೆ ಇವುಗಳು ಮುಂದುವರಿಯಲಿಲ್ಲ. ಪ್ರಾಯಶಃ ಕಲಿಕೆಯ ಮಾಧ್ಯಮವು ಯಾವ ಭಾಷೆಯಲ್ಲಿರಬೇಕು ಎಂಬ ಪ್ರಶ್ನೆಯೊಂದಿಗೆ ಇದು ತಕ್ಕಮಟ್ಟಿಗೆ ಸಿಲುಕಿಕೊಂಡಿರುವ ಸಾಧ್ಯತೆಗಳಿವೆ. ನನ್ನ ಈ ಯೋಚನೆಯು ತಪ್ಪಿರಲೂಬಹುದು. ಆದರೆ ನನಗನ್ನಿಸುವಂತೆ ನಾವು ಎರಡು ಭಾಷೆಗಳನ್ನೊಳಗೊಂಡ ಬೋಧನಾಪದ್ಧತಿಯನ್ನು ಅಳವಡಿಸಿಕೊಂಡಿದ್ದರೆ – ಅಂದರೆ ಸ್ಥಳೀಯ, ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್ – ಪ್ರಶ್ನಿಸುವಿಕೆಯ ರೂಢಿಯು ಕೊಂಚ ಸುಧಾರಿಸುತ್ತಿತ್ತು. ಏಕೆಂದರೆ ವಿದ್ಯಾರ್ಥಿಯೊಬ್ಬ ಗಂಭೀರ ವಿಷಯವೊಂದಕ್ಕೆ ಸಂಬಂಧಪಟ್ಟಂತೆ ಓದುವ ಇಂಗ್ಲಿಷ್ ಭಾಷೆಯ ಪುಸ್ತಕವು, ಅದೇ ವಿಷಯದ ಸ್ಥಳೀಯ ಭಾಷೆಯಲ್ಲಿ ಬಂದಿರುವ ಕೃತಿಗಳಿಗಿಂತ ಹೆಚ್ಚಿನ ಪ್ರಶ್ನೆಗಳನ್ನೆತ್ತುತ್ತವೆ. ಇದು ಎಲ್ಲಾ ಭಾಷೆಗಳ ವಿಚಾರದಲ್ಲೂ ಸತ್ಯವಲ್ಲ. ಕೆಲವು ಭಾಷೆಗಳಲ್ಲಿ ಒಳ್ಳೆಯ ಅನುವಾದಗಳು ಬಂದಿರುವುದರಿಂದ ಅಥವಾ ಈ ಭಾಷೆಗಳಲ್ಲಿ ಬರೆಯುವ ಲೇಖಕರು ಹೆಚ್ಚು ವಿಶ್ಲೇಷಣಾತ್ಮಕ ಹಾದಿಯನ್ನು ಅನುಸರಿಸುವ ಕಾರಣಗಳಿಂದಾಗಿ ಅವುಗಳು ನಿಜಕ್ಕೂ ಮುಂದುವರಿದಿವೆ. ಹೀಗಾಗಿ ಭಿನ್ನವೆನ್ನಿಸುವ ಬೌದ್ಧಿಕ ಪರಂಪರೆಯಿಂದ ನೀಡಲಾಗುವ ಕೊಡುಗೆಗಳು ಯಾವತ್ತಿಗೂ ಅತ್ಯುಪಯುಕ್ತ ಎಂಬುದು ನನ್ನ ಅಭಿಪ್ರಾಯ. ಇಲ್ಲವಾದರೆ ಒಂದೇ ಬೌದ್ಧಿಕ ಪರಂಪರೆಯನ್ನು ಅನುಸರಿಸುವ ಆಸಕ್ತನೊಬ್ಬನ ಜ್ಞಾನವು ನಿಂತ ನೀರಾಗಬಹುದು. ಭಾಷೆಗಳು ಮತ್ತು ಬೌದ್ಧಿಕ ಪರಂಪರೆಗಳ ವಿಚಾರಕ್ಕೆ ಬಂದರೆ ಎರಡು ಭಾಷೆಗಳಲ್ಲಿ ಕಂಡುಬರುವ ಅಭಿವ್ಯಕ್ತಿಗಳು ಒಂದಕ್ಕಿಂತ ಒಂದು ಭಿನ್ನವಾಗಿರುವುದು ಸಹಜ. ಉದಾಹರಣೆಗೆ ಹಿಂದಿ ಭಾಷೆಯಲ್ಲಿ ಬರುವ ಬೌದ್ಧಿಕ ಪರಂಪರೆಯ ಅಭಿವ್ಯಕ್ತಿಯು ಮಲಯಾಳಂಗಿಂತ ಭಿನ್ನ. ಇವೆರಡರಲ್ಲಿ ಯಾವುದು ಉತ್ತಮ ಎಂಬ ಚರ್ಚೆಗಿಳಿಯಲು ನಾನು ಬಯಸುವುದಿಲ್ಲ. ಆದರೆ ಇಂಥದ್ದೊಂದು ಅಂತರವಂತೂ ಇದ್ದೇ ಇರುತ್ತದೆ. ಹೀಗಾಗಿ ಎಲ್ಲೋ ಬೇರೆ ಕಡೆಯಿಂದ ಬರುವ ಜ್ಞಾನದ ಒಳಹರಿವು, ಜನರನ್ನು ತಮಗೆ ಬೋಧಿಸಲ್ಪಟ್ಟ ಸ್ವಂತ ಪರಂಪರೆಯ ಕಲಿಕೆಯ ಸೀಮೆಯಾಚೆಗೂ ಚಿಂತಿಸುವಂತೆ ಪ್ರೇರೇಪಿಸುತ್ತದೆ ಎಂಬುದನ್ನು ಒಪ್ಪಿಕೊಳ್ಳಬೇಕು.

ಇನ್ನು ಭಾಷೆಯ ಹೊರತಾಗಿ ಬರುವ ಮತ್ತೊಂದು ಮುಖ್ಯ ಅಂಶವೆಂದರೆ ಶಿಕ್ಷಣವು ಒಳಗೊಂಡಿರುವಂತಹ ಕಲಿಕೆಯ ವಿಷಯಗಳು. ಈ ಹಂತದಲ್ಲಿ ಜಾತ್ಯತೀತತೆಯ ಚರ್ಚೆಯನ್ನು ನಾನು ತರಲು ಪ್ರಯತ್ನಿಸುತ್ತೇನೆ. ರಾಷ್ಟ್ರೀಯ ಚಳುವಳಿಗಳು ನಡೆಯುತ್ತಿದ್ದ ಅವಧಿಯಲ್ಲಿ ನಾವು ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಯಾವತ್ತೂ ಬೆಂಬಲಿಸಿರಲಿಲ್ಲ. ನಾಗರಿಕರಾಗಿ ಈ ದೇಶದಲ್ಲಿ ಹಿಂದೂಗಳೇ ಮೊದಲು ಎಂದೆಲ್ಲಾ ವಾದಿಸಿರಲಿಲ್ಲ. ಎರಡನೇ ಅಂಶವೆಂದರೆ ಜಾತ್ಯತೀತತೆಯೆಂದರೆ ಎಲ್ಲಾ ಧರ್ಮದ ಜನರೂ ಸಹಬಾಳ್ವೆಯಿಂದ ಬದುಕುವುದಷ್ಟೇ ಅಲ್ಲ. ಇದು ಅವರೆಲ್ಲರ ಸಮಾನ ಸ್ಥಾನಮಾನಕ್ಕೂ, ಧಾರ್ಮಿಕ ಸಂಸ್ಥೆಗಳು ಸಾಮಾಜಿಕ ಸಂಸ್ಥೆಗಳ ಮೇಲೆ ಹೊಂದಿದ್ದ ಹಿಡಿತಕ್ಕೂ ಸಂಬಂಧಪಟ್ಟಿತ್ತು ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗಿರಲಿಲ್ಲ. ಶಿಕ್ಷಣವೆಂಬುದು ಬಹಳ ಮುಖ್ಯವಾದ ಅಂಶವಾಗುವುದು ಹೀಗೆ. ಅಸಲಿಗೆ ಶಿಕ್ಷಣವು ಒಳಗೊಳ್ಳುವ ವಿಷಯಗಳನ್ನು ಯಾರು ನಿಯಂತ್ರಿಸುತ್ತಾರೆ ಮತ್ತು ಯಾರು ಹಣಕಾಸಿನ ನೆಲೆಯಲ್ಲಿ ಶಿಕ್ಷಣವನ್ನು ಪೊರೆಯುತ್ತಿದ್ದಾರೆ ಎಂಬ ಅಂಶಗಳು ಶಿಕ್ಷಣದಲ್ಲಿ ಪಠ್ಯವಾಗಿ ಬಳಸಿಕೊಳ್ಳಬೇಕಾದ ವಿಷಯಗಳ ಮೇಲೆ ಪರಿಣಾಮವನ್ನು ಬೀರುತ್ತವೆ. ಇನ್ನು ವಿಶೇಷವಾಗಿ ಸೋ-ಕಾಲ್ಡ್ ಸೆಕ್ಯುಲರ್ ರಾಜ್ಯಗಳ ವಿಚಾರದಲ್ಲಂತೂ ಇದು ಸತ್ಯ. ಇಂದು ನಮಗೆ ಸಮಸ್ಯೆಗಳು ಯಾಕಾಗುತ್ತಿವೆಯೆಂದರೆ ನಮ್ಮ ರಾಜ್ಯಗಳ ಶಿಕ್ಷಣ ವ್ಯವಸ್ಥೆಯು ಜಾತ್ಯತೀತತೆಯಿಂದ ಅದೆಷ್ಟೋ ದೂರ ನಡೆದಾಗಿದೆ. ರಾಜ್ಯಗಳು ತಕ್ಕಮಟ್ಟಿಗೆ ಸೆಕ್ಯುಲರ್ ಆಗಿದ್ದ ದಿನಗಳವರೆಗೂ, ಸ್ಥಳೀಯ ಧಾರ್ಮಿಕ ಸಂಸ್ಥೆಗಳ ಪ್ರಾಮುಖ್ಯತೆ ಮತ್ತು ಅಧಿಕಾರಗಳಿಂದ ದೂರವಿದ್ದು ಪಠ್ಯದಲ್ಲಿ ಅಳವಡಿಸಬೇಕಾಗಿದ್ದ ವಿಷಯಗಳನ್ನು ಈ ಸಂಸ್ಥೆಗಳ ಪ್ರಭಾವಗಳಿಂದ ದೂರವಿಡುವುದು ಸಾಧ್ಯವಿತ್ತು. ಜಾತ್ಯತೀತತೆಯ ವಿಚಾರಕ್ಕೆ ಬಂದರೆ ಇದೊಂದು ನಿಜಕ್ಕೂ ಬಹಳ ಮುಖ್ಯವಾದ ಅಂಶ. 70 ರ ದಶಕದಲ್ಲಿ ಇಂಥಾ ಸವಾಲುಗಳು ನಿಧಾನವಾಗಿ ಗೋಚರಿಸತೊಡಗಿದಾಗ ಶಿಕ್ಷಣ ಕ್ಷೇತ್ರದ ಈ ಅಂಶಗಳ ಬಗ್ಗೆ ನಾವು ಮತ್ತಷ್ಟು ಬದ್ಧರಾಗಿ ನಿಂತಿರಬೇಕಿತ್ತು ಎಂದು ಈಗ ಅನ್ನಿಸುತ್ತಿದೆ.

ಪಠ್ಯಪುಸ್ತಕಗಳ ಬಗ್ಗೆ ದೊಡ್ಡ ಚರ್ಚೆಯು ಮೊದಲಬಾರಿಗೆ ಹುಟ್ಟಿಕೊಂಡಿದ್ದು ಮೊರಾರ್ಜಿ ದೇಸಾಯಿಯವರ ಸರ್ಕಾರವಿದ್ದಾಗ. ಅವು ತುರ್ತು ಪರಿಸ್ಥಿತಿಯ ನಂತರದ ದಿನಗಳಾಗಿದ್ದವು. ಎನ್.ಸಿ.ಇ.ಆರ್.ಟಿ ಯ ಮೊದಲ ಭಾಗದ ಪಠ್ಯಪುಸ್ತಕಗಳನ್ನು ಬರೆದಿದ್ದ ನಮ್ಮ ಮೇಲೆ ಎಲ್ಲಾ ಕಡೆಗಳಿಂದಲೂ ಟೀಕೆಗಳು ದಂಡಿಯಾಗಿ ಕೇಳಿಬರತೊಡಗಿದ್ದವು. ಆ ಸಂದರ್ಭವನ್ನು ಬಳಸಿಕೊಂಡು ಪಠ್ಯಪುಸ್ತಕಗಳು ಯಾವತ್ತಿಗೂ ಆಳುವ ಸರ್ಕಾರದ ನಿಯಂತ್ರಣದಲ್ಲಿರಬಾರದು ಎಂಬುದನ್ನು ನಾವು ಗಟ್ಟಿ ದನಿಯಲ್ಲೇ ಆಗ್ರಹಿಸಬೇಕಿತ್ತು. ಮುಂದೆ ಇದರಿಂದ ಎಂತೆಂಥಾ ದುಷ್ಪರಿಣಾಮಗಳಾಗಬಹುದು ಎಂಬುದನ್ನು ಅರಿಯದ ನಾವು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೀಗಾಗಿ ಜಾತ್ಯತೀತತೆಯ ವಿಚಾರಗಳು ಬಂದಾಗಲೆಲ್ಲಾ ಶಿಕ್ಷಣವ್ಯವಸ್ಥೆಯಲ್ಲಿ ಪಠ್ಯವು ಒಳಗೊಳ್ಳಬೇಕಾದ ವಿಷಯಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ಇಷ್ಟೇ ಪ್ರಾಮುಖ್ಯತೆಯನ್ನು ಪಡೆಯಬೇಕಾಗಿರುವ ಮತ್ತು ಚರ್ಚೆಗೆ ಗ್ರಾಸವಾಗಬೇಕಾಗಿರುವ ಮತ್ತೊಂದು ವಿಚಾರವೊಂದರೆ ಸಿವಿಲ್ ಲಾ (ನಾಗರಿಕ ಕಾನೂನು). ನಾವು ನಾಗರಿಕ ಕಾನೂನನ್ನು ಧಾರ್ಮಿಕ ಸಂಪ್ರದಾಯಗಳ ಅನುಕೂಲಕ್ಕೆ ತಕ್ಕಂತೆ ಮುಂದುವರಿಸುತ್ತಿದ್ದೇವೆಯೇ? ಈ ನಿಟ್ಟಿನಲ್ಲಿ 1956 ರಲ್ಲಿ ಹಿಂದೂ ಕೋಡ್ ಬಿಲ್ ಮೂಲಕವಾಗಿ ಇಂಥದ್ದೊಂದು ಹೆಜ್ಜೆಯನ್ನಿಡಲಾಗಿತ್ತು. ಆಗ ಈ ಬಗ್ಗೆ ವ್ಯಾಪಕವಾದ ಟೀಕೆಗಳು ಕೇಳಿಬಂದಿದ್ದವು. ಈಗ ನಮಗದು ಮರೆತುಹೋಗಿದೆಯಷ್ಟೇ. ಅಷ್ಟಕ್ಕೂ ಈ ಪುಟ್ಟ ಪ್ರಯತ್ನವು ಧಾರ್ಮಿಕ ಸಂಬಂಧಿ ಕೋಡ್ ಒಂದನ್ನು ನಾಗರಿಕ ಕಾನೂನಿನ ಪರಿಧಿಯಲ್ಲಿ ಕೊಂಚ ಮಾರ್ಪಡಿಸಿ, ಅದರಲ್ಲಿದ್ದ ಋಣಾತ್ಮಕ ಅಂಶಗಳನ್ನು ತೆಗೆಯುವ ನಿಟ್ಟಿನಲ್ಲಿ ಇಟ್ಟಿದ್ದ ಹೆಜ್ಜೆಯಾಗಿತ್ತು. ಇಂದು ಮುಸ್ಲಿಂ ಪರ್ಸನಲ್ ಲಾ ಮತ್ತು ಹಿಂದೂ ಕೋಡ್ ಬಿಲ್ ಗಳಂತಹ ಧಾರ್ಮಿಕ ಕಾನೂನುಗಳು ಸೇರಿದಂತೆ, ಖಪ್ ಪಂಚಾಯತ್ ನಂತಹ ಜಾತಿಸಂಬಂಧಿ ಕಾನೂನು ಹರಿಯಾಣಾದಲ್ಲಿದೆ. ಈ ಜಾತಿಸಂಬಂಧಿ ಕಾನೂನುಗಳನ್ನು ಮುರಿದವರಿಗೆ ಸಾವು ಕಟ್ಟಿಟ್ಟ ಬುತ್ತಿ. ಇದು ನಾಗರಿಕ ಕಾನೂನಿನಡಿ ಬರುವುದಿಲ್ಲವೆಂದು ಸಾಮಾನ್ಯವಾಗಿ ಅನಧಿಕೃತವಾಗಿ ಹೇಳಲ್ಪಡುವುದು ಅಚ್ಚರಿಯ ಸಂಗತಿ. ಒಟ್ಟಿನಲ್ಲಿ ಮುಖ್ಯ ವಿಷಯವೇನೆಂದರೆ ಹೀಗೆ ಧರ್ಮ ಮತ್ತು ಜಾತಿಗಳ ಹೆಸರಿನಲ್ಲಿರುವ ಎಲ್ಲಾ ಬಿಡಿ ಕಾನೂನುಗಳನ್ನು ತೆರವುಗೊಳಿಸಿ, ಸೆಕ್ಯುಲರ್ ಮೌಲ್ಯಗಳನ್ನು ಹೊಂದಿರುವ ಹೊಸದೊಂದು ನಾಗರಿಕ ಕಾನೂನನ್ನು ಜಾರಿಗೊಳಿಸುವ ಸಮಯವು ಬಂದಾಗಿದೆಯಲ್ಲವೇ ಎಂಬುದು. ಜಾತಿ ಮತ್ತು ಧರ್ಮಗಳ ಹಂಗಿನಿಂದ ಕಳಚಿಕೊಂಡ ಇಂಥದ್ದೊಂದು ನಾಗರಿಕ ಕಾನೂನು ನಮಗೀಗ ಬೇಕಿದೆಯಲ್ಲವೇ?

ಹೀಗಾಗಿ ಭಾರತದ ಪರಿಕಲ್ಪನೆಯ ನಿಟ್ಟಿನಲ್ಲಿ ಪಠ್ಯವು ಒಳಗೊಳ್ಳಬೇಕಾಗಿರುವ ಅಂಶಗಳು ಮತ್ತು ನಾಗರಿಕ ಕಾನೂನಿನಂಥಾ ವಿಚಾರಗಳು ನಿರ್ಣಾಯಕ ಪಾತ್ರವನ್ನು ವಹಿಸಲಿವೆ ಎಂಬ ಅಭಿಪ್ರಾಯ ನನ್ನದು. ಭಾರತೀಯತೆಯೆಂಬ ಗುರುತು ಮತ್ತು ತತ್ಸಂಬಂಧಿ ಸಮಾಜದ ಕನಸನ್ನು ಕಾಣುತ್ತಿರುವ ಹಲವಾರು ಮಂದಿ ನಿರೀಕ್ಷಿಸುತ್ತಿರುವುದು ಇದನ್ನೇ.

ಸ್ಪಿವಾಕ್: ಇಲ್ಲಿ ನನಗೊಂದು ಮಾತನ್ನು ಹೇಳಲಿಕ್ಕಿದೆ. ಇಲ್ಲಿ ‘ನಾವು’ ಎಂದರೆ ಯಾರು? ನಾನು ಜಾತ್ಯತೀತತೆಯನ್ನು ಸಾರುವ ಕಾನೂನನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡರೂ, ನನ್ನ ಬಹಳಷ್ಟು ಸಮಯವನ್ನು ಜಾತ್ಯತೀತರ ವಲಯದಿಂದ ದೂರವಿದ್ದೇ ಕಳೆಯುತ್ತಿದ್ದೇನೆ. ಒಮ್ಮೆ ಅಮಾತ್ರ್ಯ ಸೇನ್ ರೋಮ್ ನಿಂದ ನನಗೆ ಕರೆ ಮಾಡಿದ್ದರು. ”ನೀವು ಸಬಾಲ್ಟರ್ನ್ ಅಧ್ಯಯನಗಳಲ್ಲಿ (ವಸಾಹತುಶಾಹಿಯ / ವಸಾಹತುಶಾಹಿಯ ನಂತರದ ದಿನಗಳ ಸಾಮಾಜಿಕ ಸ್ಥಿತಿಗಳ ಬಗೆಗಿನ ಅಧ್ಯಯನ) ತೊಡಗಿರುವ ಕಾರಣದಿಂದಾಗಿ ನಾನು ನಿಮ್ಮನ್ನೊಮ್ಮೆ ಮೂಲಭೂತವಾದಿಯೆಂದು ಕರೆದಿದ್ದೆ. ನನ್ನನ್ನು ದಯವಿಟ್ಟು ಕ್ಷಮಿಸಿ”, ಎಂದಿದ್ದರು ಅಮಾತ್ರ್ಯ. ”ನಿಮಗೆ ಈ ಬಗ್ಗೆ ಬೇಜಾರಾಗಿದ್ದರಿಂದ ಕನಿಷ್ಠಪಕ್ಷ ಕರೆ ಮಾಡಿಯಾದರೂ ನಿಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರಿ. ಏಕೆಂದರೆ ನಾನು ಮೂಲಭೂತವಾದಿಯಲ್ಲವೆಂಬುದು ನಿಮಗೂ ಗೊತ್ತು”, ಅಂದಿದ್ದೆ ನಾನು. ನಾನು ಯಾವ ರೀತಿಯಲ್ಲೂ ಮೂಲಭೂತವಾದಿಯಲ್ಲ. ಆದರೆ ಯಾವ ಕಾರಣಕ್ಕೂ ಒಪ್ಪಿಕೊಳ್ಳಲಾಗದ, ಸಾರ್ವಜನಿಕವಾಗಿ ಪ್ರವಚಿಸಲ್ಪಡುವ ಅದೆಷ್ಟೋ ಧರ್ಮಸಂಬಂಧಿ ವಿಚಾರಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಮಾತುಗಳನ್ನಾಡಿದಾಗ ಮಾತ್ರ ದೊಡ್ಡ ಮಟ್ಟಿನ ತರಂಗಗಳು ಏಳುತ್ತವೆ. ಹಾಗಂತ ಈ ಸಂಗತಿಗಳನ್ನು ಸುಮ್ಮನೆ ಒಪ್ಪಿಕೊಂಡರೆ ನಾವು ಜಾತ್ಯತೀತರಾಗುವುದು ಸಾಧ್ಯವೇ ಇಲ್ಲ. ಧರ್ಮವೆಂದರೆ ತೀರಾ ಖಾಸಗಿ ವಿಚಾರವೆಂಬಂತೆ ನಾವು ವ್ಯವಹರಿಸಬೇಕು. ಅದು ಬಾತ್ರೂಮಿಗೆ ಹೋಗಿ ಬಾಗಿಲನ್ನು ಮುಚ್ಚಿಕೊಳ್ಳುವಷ್ಟು ಖಾಸಗಿಯಾಗಿರಬೇಕು. ಆದರೆ ವಿಶ್ವದೆಲ್ಲೆಡೆ ಅಂತಹ ಮನೋಭಾವಗಳನ್ನು ಕಾಣುವುದು ಕಷ್ಟ. ಹೀಗಾಗಿ ನಾವು ಕಾನೂನುಗಳನ್ನು ಜಾರಿಗೊಳಿಸಿದರೂ, ಅವುಗಳು ಆ ಶೇಕ್ಸ್ ಪಿಯರ್ ಮಹಾಶಯನ ಸಾಲುಗಳಂತೆ ಆಗುತ್ತದಲ್ಲವೇ? “ಭಯಂಕರವಾದ ಆಳದಿಂದಲೂ ನಾನು ಆತ್ಮಗಳನ್ನು ಕರೆತರಬಲ್ಲೆ”, ಎಂಬಂತೆ. ನನಗೆ ನನ್ನದೇ ಆದ ಜಾತ್ಯತೀತತೆಯ ನಿಯಮಗಳಿವೆ. ಏಕೆಂದರೆ ಅಂತಹ ಕಾನೂನುಗಳನ್ನು ನಾನು ಹೊಂದಿರಬಹುದು. ನಾನೇ ಏಕೆ, ಯಾರು ಬೇಕಾದರೂ ಈ ಬಗೆಯ ಕಾನೂನುಗಳನ್ನು ವೈಯಕ್ತಿಕ ನೆಲೆಯಲ್ಲಿ ಹೊಂದಿರಬಹುದು. ಹಾಗೆಂದು ಆಳದಲ್ಲಿರುವ ಆತ್ಮಗಳನ್ನು ಕರೆದಾಗಲೆಲ್ಲಾ ಅವುಗಳು ನಮ್ಮ ಕರೆಗೆ ಓಗೊಡುತ್ತವೆಯೇ? ಹಾಟ್ಸಪುರ್ ಆ ನಾಟಕವೊಂದರಲ್ಲಿ ಕೇಳುವುದು ಇದನ್ನೇ ಅಲ್ಲವೇ? ಹೀಗಾಗಿ ನನ್ನ ಪ್ರಕಾರ ಇಲ್ಲಿರುವ ಬಹುದೊಡ್ಡ ಸವಾಲೆಂದರೆ ತಳಮಟ್ಟದಿಂದ ಪರಿಣಾಮವನ್ನು ಬೀರಬಲ್ಲ ಧಾರ್ಮಿಕ ಸಂಗತಿಗಳನ್ನು ಅವುಗಳಿಗೆ ಅಂಟಿಕೊಂಡಿರುವ ಆದರ್ಶದ ಪ್ರಭಾವಳಿಯಿಂದ ಮುಕ್ತಗೊಳಿಸುವುದು. ಈ ಪದವನ್ನು ನಾನು ಬಳಸಿದ್ದರ ಬಗ್ಗೆ ಕ್ಷಮೆಯಿರಲಿ. ಒಟ್ಟಾರೆಯಾಗಿ ನಾನೋರ್ವ ವಿಚಿತ್ರ ವ್ಯಕ್ತಿತ್ವದ ವ್ಯಕ್ತಿಯೆಂಬುದು ನಿಮಗೂ ತಿಳಿದಿದೆ. ತಳಮಟ್ಟ ಎನ್ನುವ ಪದದ ಬಳಕೆಯ ಬಗ್ಗೆಯೂ ನನಗೆ ಸಂತೃಪ್ತಿಯಿಲ್ಲ. ಆದರೆ ನನ್ನ ಮಾತಿನ ಅರ್ಥವೇನೆಂಬುದನ್ನು ನೀವು ತಿಳಿದಿದ್ದೀರಿ. ಇವುಗಳು ತಳಮಟ್ಟದಿಂದಲೇ ಪೋಷಿಸುತ್ತಿರುವ ಅಂಶಗಳು ಎಂದು ನಾನಿಲ್ಲಿ ಹೇಳಬಯಸುತ್ತಿದ್ದೇನೆ. ರಾಜಕೀಯ ನೆಲೆಯಲ್ಲಿ ವ್ಯವಸ್ಥಿತವಾಗಿ ಸಜ್ಜಾಗದಿದ್ದರೂ, ಆ ತಳಮಟ್ಟದಲ್ಲೂ ಕಾರ್ಯನಿರ್ವಹಿಸುವಷ್ಟು ಸಾಮಥ್ರ್ಯವು ಇವುಗಳಿಗಿದೆ. ಒಮ್ಮೆ ನಾನು ಬಾಂಗ್ಲಾದೇಶದಲ್ಲಿದ್ದಾಗ ಹೀಗಾಯಿತು. ನಾನು ಕೆಲ ಬಡಜನರೊಂದಿಗೆ ಕುಳಿತುಕೊಂಡು ಕುರ್ಬಾನ್ ಮಾಂಸವನ್ನು ಸೇವಿಸುತ್ತಿದ್ದೆ. ಅವರು ಕಡುಬಡವರಾಗಿರುವುದರಿಂದ ಮಾಂಸವನ್ನು ಸೇವಿಸುವುದಿಲ್ಲ. ಆದರೆ ನಾನು ಮಾತ್ರ ತಿನ್ನುತ್ತಿದ್ದೆ. ”ನಾವು ತಿಂದರೇನೋ ಸರಿ. ಆದರೆ ನೀವೇಕೆ ಬೀಫ್ ತಿನ್ನುತ್ತಿದ್ದೀರಿ?”, ಎಂಬ ಪ್ರಶ್ನೆಯನ್ನು ನನಗಲ್ಲಿ ಕೇಳಲಾಗಿತ್ತು. ಅವರ ಇಂಥದ್ದೊಂದು ಪ್ರಶ್ನೆಯಲ್ಲಿ ನನ್ನನ್ನು ಧರ್ಮಭ್ರಷ್ಟಳಾಗದಂತೆ ರಕ್ಷಿಸುವ ತುಡಿತವಿತ್ತು. ಹಿಂಸೆಯನ್ನು ಗುರುತಿಸಬಲ್ಲ ಅಂತರವೊಂದು ಸೃಷ್ಟಿಯಾಗುವುದು ಹೀಗೆ. ಇವುಗಳು ವ್ಯವಸ್ಥಿತವಾದ ಕಾರ್ಯಯೋಜನೆಗಳಿಲ್ಲದಿದ್ದರೂ ತಳಮಟ್ಟದಲ್ಲಿ ಯಶಸ್ವಿಯಾಗಿ ಕೆಲಸ ಮಾಡಬಲ್ಲವು.

ಪ್ರೆಸಿಡೆನ್ಸಿ ಹಿಂದೂ ಕಾಲೇಜಿನ ಇನ್ನೂರನೇ ವರ್ಷದ ವಾರ್ಷಿಕೋತ್ಸವವು ನನಗಿನ್ನೂ ನೆನಪಿದೆ. ಈ ಬಗ್ಗೆ ಮಿಡಲ್ಟನ್ನಿನಲ್ಲಿದ್ದ ಕಲ್ಕತ್ತಾದ ಬಿಷಪ್ ಒಬ್ಬರು ಬರೆದಿದ್ದ (ಪ್ರಕಟಿತ) ಬರಹವೊಂದನ್ನು ನಾನು ಓದಿದ್ದೆ. ”ಇಲ್ಲಿಯ ಸ್ಥಳೀಯರು ಅದೆಂಥಾ ಮೂರ್ಖರೆಂದರೆ ಭಗವಂತನನ್ನು ತಲುಪಲು ಹಲವು ದಾರಿಗಳಿವೆಯೆಂದು ಅವರು ಭಾವಿಸಿದ್ದಾರೆ. ಆದರೆ ಭಗವಂತನನ್ನು ತಲುಪಲು ಇರುವ ಸರಿಯಾದ ಮಾರ್ಗವು ಗೊತ್ತಿರುವುದು ನಮಗೆ ಮಾತ್ರ. ಅವರಿಗೆ ಧರ್ಮಗ್ರಂಥಗಳನ್ನಂತೂ ಕಲಿಸಲಾಗುವುದಿಲ್ಲ. ಹಾಗಿದ್ದಾಗ ಮುರ್ರೇಯ ವ್ಯಾಕರಣವನ್ನು ಓದಬೇಕಾಗಿರುವುದು ಅವರಿಗೆ ಅನಿವಾರ್ಯ. ಈ ನಿಟ್ಟಿನಲ್ಲಿ ಹಿಂದೂ ಕಾಲೇಜಿನ ಬಗ್ಗೆ ನನ್ನ ಅನುಮೋದನೆಯಿದೆ”, ಎಂದು ಅದರಲ್ಲಿ ಬರೆದಿತ್ತು. ಇದನ್ನು ಸೆಕ್ಯುಲರ್ ಶಿಕ್ಷಣಕ್ಕೊಂದು ರಹದಾರಿಯೆಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾದರೂ ಹೇಗೆ? ಒಂದು ನಿರ್ದಿಷ್ಟ ರೀತಿಯ ವರ್ಗ ಚಲನಶೀಲತೆಯು ಧಾರ್ಮಿಕ ಸಂಸ್ಕøತಿಗಳನ್ನು ಮುಚ್ಚಳದಂತೆ ಮರೆಯಾಗಿಸುತ್ತದೆ ಎಂದು ನಾವೇಕೆ ಭಾವಿಸಬಾರದು? ಹುಡುಕಹೊರಟರೆ ಇಂಥಾ ಉದಾಹರಣೆಗಳು ಲೆಕ್ಕವಿಲ್ಲದಷ್ಟಿವೆ. ನೀವು ಈ ಹಿಂದೆ ಯೂನಿಯನ್ ಜಾಕ್ ಧ್ವಜದ ಬಗೆಗಿನ ಕಥೆಯೊಂದನ್ನು ಹೇಳಿದಿರಲ್ಲವೇ? ಅಂಥದ್ದೇ ಕಥೆಯಿದು.

ಈ ವರ್ಗದ ಜನರೊಂದಿಗೆ ನಾನು ಸರಿಸುಮಾರು ಮೂವತ್ತು ವರ್ಷಗಳನ್ನು ಕಳೆದಿದ್ದೇನೆ. ಇನ್ನು ನಾನು ವಾಸವಾಗಿರುವುದು ಬೇರೆ ಅಮೆರಿಕಾದಲ್ಲಿ. ಹೀಗಾಗಿ ನಾನಿರುವುದೇ ಹೀಗೆ ಎಂದು ಅವರುಗಳು ಕೊನೆಗೂ ಒಪ್ಪಿಕೊಂಡಂತಿದೆ. ಇರಲಿ. ಒಮ್ಮೆ ಏನಾಯಿತೆಂದರೆ ನನ್ನ ಪಕ್ಕದಲ್ಲಿ ಕುಳಿತಿದ್ದವನ ತಟ್ಟೆಯಿಂದ ಟೊಮ್ಯಾಟೋ ತುಣುಕೊಂದನ್ನು ತೆಗೆದು ನಾನು ಕೊಂಚವೂ ಯೋಚಿಸದೆ ತಿಂದುಬಿಟ್ಟಿದ್ದೆ. ಇದರಿಂದಾಗಿ ಸುಮಾರು 75 ಸೆಕೆಂಡುಗಳ ಕಾಲ ಉಸಿರುಗಟ್ಟುವ ಮೌನವು ಅಲ್ಲಿ ಮಡುಗಟ್ಟಿತ್ತು. ಈ ಜನರು ಪರಕೀಯರೇನೂ ಆಗಿರಲಿಲ್ಲ. ಇವರೊಂದಿಗೆ ನಾನು ಕೆಲಸ ಮಾಡುತ್ತೇನೆ, ವಾಸಿಸುತ್ತೇನೆ, ತಿನ್ನುತ್ತೇನೆ, ಬೇರೆಲ್ಲಾ ಕೆಲಸಗಳನ್ನು ಜೊತೆಯಾಗಿ ಮಾಡುತ್ತೇನೆ. ಆದರೆ ಬ್ರಾಹ್ಮಣಳಾಗಿದ್ದ ಮಾತ್ರಕ್ಕೆ ಪಕ್ಕದಲ್ಲಿ ಕೂತಿದ್ದವನ ಎಂಜಲು ತಟ್ಟೆಯಿಂದ ಆಹಾರದ ತುಣುಕೊಂದನ್ನು ನಾನು ತಿಂದುಬಿಟ್ಟೆ ಎಂಬುದು ಅವರಿಗೆ ಅರಗಿಸಿಕೊಳ್ಳಲಾರದ ಸಂಗತಿಯಾಗಿತ್ತು. ನೀವು ಹೇಳಿದರೆ ನಂಬಲಿಕ್ಕಿಲ್ಲ. ಆದರೆ ಇಂಥಾ ಸಂಗತಿಗಳನ್ನು ಅವರು ಗಾಢವಾಗಿ ನಂಬುತ್ತಾರೆ. ಹೀಗಾಗಿ ಸೆಕ್ಯುಲರ್ ಕಾನೂನುಗಳನ್ನು ಜಾರಿಗೊಳಿಸಿದ ಮಾತ್ರಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಯಾರೂ ಕೂಡ ಅವುಗಳನ್ನು ತಮ್ಮೊಳಗಿನ ಭಾಗವಾಗಿ ಇಳಿಸಿಕೊಳ್ಳುವುದಿಲ್ಲ.

ಹೀಗಾಗಿ ಈ ‘ನಾವು’ ಎಂದರೆ ಯಾರು ಎಂಬ ಪ್ರಶ್ನೆಯ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಾಗುತ್ತದೆ. ಬಂಡವಾಳದ ಸಕ್ರ್ಯೂಟಿಗೆ ಅಭಿವೃದ್ಧಿಯನ್ನು ಸೇರಿಸಲಾಗುತ್ತದೆ ಎನ್ನುವುದೇನೋ ಸರಿ. ಆದರೆ ಅದನ್ನು ನಿಭಾಯಿಸುವುದು ಹೇಗೆಂಬುದರ ಬಗ್ಗೆ ತರಬೇತಿಯನ್ನು ನೀಡಲಾಗುವುದಿಲ್ಲ. ಬಂಡವಾಳವನ್ನು ಸಾಮಾಜಿಕ ಒಳಿತಿಗಾಗಿ ಬಳಸುವ ಸಂಗತಿಯು ಹಾಗಿರಲಿ. ಬ್ಯಾಂಕ್ ಖಾತೆಗಳನ್ನು ಹೊಂದಿರುವ ‘ಸ್ವನಿರ್ಭರ್’ನಂತಹ ಯೋಜನೆಗಳದ್ದೂ ಇದೇ ಕಥೆ. ಇವುಗಳನ್ನು ನಿಭಾಯಿಸುವುದರ ಬಗ್ಗೆ ಅವಶ್ಯಕ ತರಬೇತಿಗಳನ್ನು ನೀಡಲಾಗಿಲ್ಲ. ಹೀಗಾಗಿ ಇದು ಅಭಿವೃದ್ಧಿ ಮತ್ತು ಅದರೊಳಗಿನ ಧ್ವನಿಯ ಪ್ರಶ್ನೆಯಾಗಿದೆ.

ನಿಮಗೆ ತಿಳಿದಿರುವಂತೆ ನಾನು ಅಮೆರಿಕಾದಲ್ಲಿ ಇಂಗ್ಲಿಷ್ ಭಾಷೆಯನ್ನು ಬೋಧಿಸುತ್ತೇನೆ. ಇಂಗ್ಲಿಷ್ ಸಾಹಿತ್ಯವು ನಮಗೆ ಕಲಿಸುವಂತಹ ವಿಚಾರಗಳಲ್ಲಿ ತಾರತಮ್ಯದ ಸೋಂಕೇ ಇಲ್ಲ ಎಂದು ನಾನು ಆತ್ಮವಿಶ್ವಾಸದಿಂದ ಹೇಳಲಾರೆ. ಹಾಗೆಂದು ಕೇವಲ ಸ್ಥಳೀಯ ಭಾಷೆಗಳಲ್ಲಿ ಬಂದ ಸಾಹಿತ್ಯವನ್ನಷ್ಟೇ ಅನುಸರಿಸಬೇಕು ಎಂದೂ ನಾನು ವಾದಿಸುತ್ತಿಲ್ಲ. ಆದರೆ 30 ವರ್ಷಗಳ ಕಾಲ ಈ ವಲಯದಲ್ಲಿರುವ ಜನರೊಂದಿಗೆ ಬೆರೆತ ಅನುಭವಗಳ ನಂತರ, ಇಂಗ್ಲಿಷ್ ಪಠ್ಯಗಳ ಮೇಲೆ ನನಗಿದ್ದ ಭರವಸೆಯು ಎಲ್ಲೋ ದಾರಿತಪ್ಪಿದೆ ಅನ್ನಿಸಿರುವುದಂತೂ ಸತ್ಯ. ಜೊತೆಗೇ ಶ್ರೇಣೀಕೃತ ಸಮಾಜವ್ಯವಸ್ಥೆಯನ್ನು ಕಡೆಗಣಿಸಿರುವ, ಜನಾಂಗೀಯ ದ್ವೇಷದ ಕಲ್ಪನೆಗಳಿಗೆ ತೀರಾ ವಿರುದ್ಧವಾಗಿರುವ ‘ಗ್ಲೋಬಲ್ ಸೌತ್’ ಎಂಬ ಪರಿಕಲ್ಪನೆಯು ದಿನಗಳೆದಂತೆ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಇಂಥದ್ದೊಂದು ಇಂಗ್ಲಿಷ್ ಪದ್ಧತಿಯನ್ನು ಯಾವುದೇ ಜ್ಞಾನವಿಲ್ಲದೆ ಅವರು ಕಾಟಾಚಾರಕ್ಕೆ ಮಾಡುವಂತೆ ಮಾಡುತ್ತಾರೆ. ಇನ್ನು ಈ ಬಗೆಯಲ್ಲಿ ಬದಲಿ ಜ್ಞಾನಶಾಸ್ತ್ರಗಳನ್ನು ಪರಿಚಯಿಸುವ ಸಂಗತಿಯೇ ಒಟ್ಟಾರೆಯಾಗಿ ತ್ರಾಸದಾಯಕವಾದದ್ದು.

ಭಾಷೆಗಳ ವಿಚಾರಕ್ಕೆ ಬಂದರೆ ಮುಂದೇನು ಮಾಡಬೇಕು ಎಂಬತ್ತ ಗಮನಹರಿಸುತ್ತಲೇ – ನಾನೀಗ ಚರ್ಚೆಯ ಮುಖ್ಯ ವಿಷಯದಿಂದ ಕೊಂಚ ಆಚೆಗೆ ಬಂದು ಮಾತಾಡುತ್ತಿದ್ದೇನೆ. ಅಂದಹಾಗೆ ಮಧ್ಯ ಆಫ್ರಿಕಾದ ಬಗೆಗಿನ ನನ್ನ ಪ್ರಾಜೆಕ್ಟೊಂದು ಪ್ರೋತ್ಸಾಹಧನವನ್ನು ಪಡೆಯುವ ಎಲ್ಲಾ ಅವಕಾಶಗಳಿಂದ ವಂಚಿತವಾಗಿದೆ. ಮಧ್ಯ ಆಫ್ರಿಕಾದಲ್ಲಿರುವ ದಾಖಲಾಗದ ಭಾಷಾಸಂಪತ್ತು, ಬದುಕಿರುವ / ಬದುಕುಳಿಯುವ ಭಾಷೆಗಳು, ಇನ್ನು ಜನಾಂಗೀಯ ಹಿಂಸೆಯ ಪ್ರಕರಣಗಳು ಚುನಾವಣೆಯ ಕೆಲ ದಿನಗಳ ಹಿಂದಷ್ಟೇ ನಡೆಯುವಂತೆ ಇವುಗಳ ಬಗ್ಗೆ ಕ್ಯಾಂಪೇನ್ ಗಳನ್ನು ಮಾಡುವ ಕೆಲ ಪ್ರಚಾರಕರು… ಇತ್ಯಾದಿಗಳನ್ನು ಪರಿಗಣಿಸುತ್ತಿರುವ ವಿಶ್ವಸಂಸ್ಥೆಯು ‘ಸಂರಕ್ಷಣೆ’ಯ ಅವಶ್ಯಕತೆಯ ಬಗ್ಗೆ ಚಿಂತಿಸಿದೆ. ಈ ಭಾಷೆಗಳ ಬಗ್ಗೆ ಪ್ರಸ್ತಾಪಿಸುತ್ತಾ ಅಳಿದುಹೋಗುತ್ತಿರುವ ಇವುಗಳನ್ನು ಸಂರಕ್ಷಿಸುವ ಜವಾಬ್ದಾರಿಯು ನಮ್ಮ ಮೇಲಿದೆಯೆಂದು ಹೇಳಿದೆ. ಭಾಷೆಗಳ ಎಕಾಲಜಿಯ ಬಗ್ಗೆ ನನಗೆ ತಕ್ಕಮಟ್ಟಿನ ಅರಿವಿದೆ. ಆದರೆ ಅದರ ಬಗ್ಗೆ ಹೇಳಹೊರಟರೆ ಚರ್ಚೆಯ ಮುಖ್ಯ ವಿಚಾರದಿಂದ ದಾರಿತಪ್ಪಿದಂತಾಗುತ್ತದೆ. ಭಾಷೆಗಳು, ಅವುಗಳನ್ನು ಬಳಸಬೇಕಾದ ಪರಿ, ಅವುಗಳು ಸದ್ಯಕ್ಕಿರುವ ಸ್ಥಿತಿ, ಕೃಷಿ ಮತ್ತು ಆರೋಗ್ಯ… ಹೀಗೆ ಸಾಕಷ್ಟು ಸಂಗತಿಗಳಿವೆ. ಒಂದು ಹಂತದ ಮಟ್ಟಿಗೆ ಇದು ಭಾರತದ ಸೀಮೆಯನ್ನು ಮೀರಿ ಜಾಗತಿಕ ವಲಯಕ್ಕೂ ಅನ್ವಯವಾಗುವುದುಂಟು. ಭಾರತೀಯತೆಯ ಅಭಿವೃದ್ಧಿಯೂ ಕೂಡ ಜಗತ್ತಿನ ಬೇರ್ಯಾವುದೇ ಕಡೆಗಳಲ್ಲಾಗುವ ಅಭಿವೃದ್ಧಿಯಂತೆಯೇ ಇದೆ. ಈಗ ನಾವು ಸುಸ್ಥಿರ ಅನಭಿವೃದ್ಧಿಯ ಸ್ಥಿತಿಯಲ್ಲಿದ್ದೇವೆ ಎಂಬ ನಿಮ್ಮ ಮಾತು ನನಗೆ ಸಂಪೂರ್ಣ ಒಪ್ಪಿಗೆಯಿದೆ. ಆದರೆ ಇದನ್ನು ಮಾತ್ರ ಸುಸ್ಥಿರ ಅಭಿವೃದ್ಧಿಯೆಂಬಂತೆ ಬಿಂಬಿಸಲಾಗುತ್ತಿದೆ. ಅಷ್ಟಕ್ಕೂ ಸುಸ್ಥಿರವಾಗಿ ಉಳಿದಿದ್ದಾದರೂ ಏನು? ನಾವೀಗ ಭಾರತವೆಂಬ ಪರಿಕಲ್ಪನೆಯ ಬಗ್ಗೆ ಮಾತನಾಡುತ್ತಿರುವುದರಿಂದ ಇವುಗಳ ಬಗ್ಗೆ ವಿವರವಾಗಿ ಚರ್ಚಿಸುವುದರ ಅವಶ್ಯಕತೆಯಿಲ್ಲವೇನೋ. ಜೊತೆಗೇ ನಾನು ಇಷ್ಟು ದೀರ್ಘವಾಗಿ ಮಾತನಾಡಿದರ ಬಗ್ಗೆ ಕ್ಷಮೆಯಿರಲಿ. ಆದರೆ ಜಾತ್ಯತೀತತೆ, ಇಂಗ್ಲಿಷ್ ವಿದ್ಯಾರ್ಥಿವೇತನ, ಇಂಗ್ಲಿಷ್ ಭಾಷೆ, ಯೂರೋಪಿಯನ್ ಭಾಷೆಗಳ ವಿದ್ಯಾರ್ಥಿವೇತನಗಳು… ಇವುಗಳ ಬಗ್ಗೆ ಮಾತನಾಡಿದಾಗಲೆಲ್ಲಾ ಸಮರ್ಥಿಸಿಕೊಳ್ಳುವಂತೆ ನಿರಂತರವಾಗಿ ಕಾಯ್ದುಕೊಂಡು ಬಂದ ನಿರ್ಲಕ್ಷ್ಯದ ಬಗ್ಗೆ ಗಮನ ಹರಿಸಲೇಬೇಕಾಗುತ್ತದೆ. ಇಂಥಾ ಜಗತ್ತಿನಲ್ಲಿ ನಾವಿಂದು ಬದುಕುತ್ತಿದ್ದೇವೆ. ಇನ್ನು ಇಂಗ್ಲಿಷ್ ಭಾಷೆಗಿಂತ ಉತ್ತಮವೆಂದು ಹೇಳಲಾಗುವ, ವಿಸ್ತøತವಾಗಿ ಪರೀಕ್ಷಿಸಲ್ಪಡದ ಭಾಷೆಗಳ ವಿಚಾರಗಳಲ್ಲಿ ಇಂಥಾ ಭಾಷೆಗಳನ್ನೇನು ಮಾಡಬೇಕೆಂಬ ಚಿಂತನೆಗಳಿಗೂ ಇದು ಅನ್ವಯಿಸುತ್ತದೆ. ಇದು ಸಾಕಷ್ಟು ದೋಷವಿರುವ ಕ್ಷೇತ್ರ. ನಿಮ್ಮ ಮಾತನ್ನು ಒಪ್ಪಿಕೊಳ್ಳುವ ಬಗ್ಗೆ ನನಗೆ ಒಲವಿದೆ. ಆದರೆ ಇವುಗಳ ಬಗ್ಗೆ ಹೆಚ್ಚಿನ ಓದು ಸಾಧ್ಯವಾಗಬೇಕಿತ್ತೆಂಬ ನೆಲೆಯಲ್ಲಿ ತೀರಾ ಸರಳೀಕರಿಸದೆ, ಈ ಬಗ್ಗೆ ಮತ್ತಷ್ಟು ಹೇಳಿ –

ರೋಮಿಲಾ: ಹೌದು, ಇದೊಂದು ದೋಷವಿರುವ ಕ್ಷೇತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ನೀವೀಗ ಇಲ್ಲಿದ್ದೀರಿ ಎಂಬುದೂ ಕೂಡ ಅಷ್ಟೇ ಸತ್ಯ. ಈ ವಿಚಾರದ ಅಂತಾರಾಷ್ಟ್ರೀಯ ಅಥವಾ ಜಾಗತಿಕ ಆಯಾಮಗಳತ್ತ ಸದ್ಯ ಸಾಗುವುದು ಬೇಡ. ಏಕೆಂದರೆ ಅದೊಂದು ಬಹಳ ವಿಸ್ತಾರವಾದ ವಿಷಯ. ಇನ್ನು ನೀವು ಹೇಳಿದಂತೆ ಇವುಗಳು ಅಷ್ಟು ಸುಲಭವಾಗಿ ಪರಿಹಾರವಾಗುವಂತಹ ಸವಾಲುಗಳಲ್ಲ ಎಂದನ್ನಿಸುವುದೂ ಕೂಡ ಸಹಜ. ಈಗ ನಮ್ಮ ಮುಂದಿರುವ ಪ್ರಶ್ನೆಗಳು ಇವು: ಲಿಪಿಯಿರುವ ಅಥವಾ ಇಲ್ಲದಿರುವ ಇಂಥಾ ನೂರಾರು ಭಾಷೆಗಳ, ಅಸಂಖ್ಯಾತ ಆಡುಭಾಷೆಗಳ ಭವಿಷ್ಯವೇನು? ಮುಂದಿನ ದಿನಗಳಲ್ಲಿ ಈ ಭಾಷೆಗಳು ಏನಾಗಲಿವೆ? ಮುಂಡಾ ಭಾಷೆಯನ್ನು ಮಾತನಾಡುವ ಜನರು ಬದುಕುಳಿಯಲೆಂದು ಹಿಂದಿಯನ್ನು ಸಂಪೂರ್ಣವಾಗಿ ಅವಲಂಬಿಸಬೇಕೇ? ಅಥವಾ ಎರಡೆರಡು ಭಾಷೆಗಳನ್ನು ಅಪ್ಪಿಕೊಂಡು ಒಂದೇ ಭಾಷೆಯನ್ನು ಬಳಸಲಾಗುವ, ಅವರಿರುವ ಸ್ಥಳದಿಂದ ಬಹುದೂರದಲ್ಲಿರುವ ಜನರನ್ನೂ ತಲುಪುವಂತಾಗಬೇಕೇ? ನನ್ನ ಮಾತಿನ ಅರ್ಥವೇನೆಂದರೆ ಇದು ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಪಟ್ಟಂತಹ ಸವಾಲೂ ಹೌದು. ಏಕೆಂದರೆ ಪ್ರಸ್ತುತ ನಮ್ಮ ದೇಶದಲ್ಲಾಗುತ್ತಿರುವಷ್ಟು ವಲಸೆಯ ಪ್ರಮಾಣವು ಹಿಂದೆಂದೂ ಆಗಿರಲಿಲ್ಲ. ಭೂರಹಿತ ಕಾರ್ಮಿಕರು ಕೇರಳದಿಂದ ಪಂಜಾಬಿನವರೆಗೂ, ಪಂಜಾಬಿನಿಂದ ಅಸ್ಸಾಮಿನವೆರಗೂ ದೇಶದುದ್ದಕ್ಕೂ ಸಾವಿರಾರು ಮೈಲುಗಳ ದೂರವನ್ನು ಕ್ರಮಿಸುತ್ತಿದ್ದಾರೆ. ಇಂಥಾ ಪರಿಸರದಲ್ಲಿ ಬೆಳೆಯುತ್ತಿರುವ ವ್ಯಕ್ತಿಯೊಬ್ಬನ ಸ್ಥಿತಿಯನ್ನು ನೋಡಿ. ಆ ವ್ಯಕ್ತಿಯ ಕುಟುಂಬವು ಒಂದು ಭಾಷೆಯನ್ನು ಮಾತನಾಡುತ್ತಿದ್ದರೆ, ಆ ಪ್ರದೇಶದ ಬೇರೆಲ್ಲರೂ ಮತ್ಯಾವುದೋ ಭಾಷೆಯನ್ನು ಮಾತನಾಡುತ್ತಿರುತ್ತಾರೆ. ಇನ್ನು ಹೊರಗೆ ಹೋಗೋಣವೆಂದರೆ ಮೂರನೇ ಭಾಷೆಯೂ ತಿಳಿದಿರುವುದಿಲ್ಲ. ಮೂರನೇ ಭಾಷೆಯ ಪ್ರಾಮುಖ್ಯತೆಯು ಬಹಳಷ್ಟಿದೆ. ಹೀಗಿರುವಾಗ ಇಂಥವರ ಮೂಲ ಭಾಷೆಯು ಕ್ರಮೇಣ ಏನಾಗಲಿದೆ? ಯಾವಾಗಲೂ ತಮ್ಮೊಳಗಿನ ಲೋಕದಲ್ಲೇ ಕಳೆದುಹೋಗಿರುವ ಜನರನ್ನು ಇನ್ನು ನಾವು ನೋಡಲಿದ್ದೇವೆಯೇ? ಸಂಸ್ಕøತಿಗಳು ಇನ್ನು ಒಳಮುಖವಾಗಿ ಬೆಳೆದ ಕಾಲಹೆಬ್ಬೆರಳಿನ ಉಗುರಿನಂತೆ ಕಿರಿಕಿರಿಯ ಸಂಗತಿಗಳಾಗಲಿವೆಯೇ?

ಸ್ಪಿವಾಕ್: ಇಲ್ಲ

ರೋಮಿಲಾ: ಇಲ್ಲವೇ?

ಸ್ಪಿವಾಕ್: ಇಲ್ಲ. ಏಕೆಂದರೆ ಇದೊಂದು ಲಿಂಗಾಧಾರಿತ ಪ್ರಶ್ನೆ. ಭಾಷೆಗಳನ್ನು ತಲುಪುವ ಹಾದಿಯು ಲಿಂಗವನ್ನೂ ಬಹುಮಟ್ಟಿಗೆ ಆಧರಿಸಿರುವುದರಿಂದ ಮೂರನೇ ಭಾಷೆ ಎನ್ನುವುದೂ ಕೂಡ ಲಿಂಗಭೇದದ ವಿಚಾರದಲ್ಲಿ ತನ್ನ ಪ್ರಭಾವವನ್ನು ಬೀರುತ್ತದೆ (ಥಾಪರ್ ಈ ಮಾತನ್ನು ಒಪ್ಪಿಕೊಳ್ಳುತ್ತಿದ್ದಾರೆ). ಈಗ ಇಲ್ಲಿರುವ ವಿದ್ಯಾರ್ಥಿಗಳು ಕಲ್ಲು ಒಡೆಯುವ ಕೆಲಸಕ್ಕೆಂದು, ಕಾಫಿಚೀಲಗಳನ್ನು ತುಂಬಲೆಂದು ಕೇರಳಕ್ಕೆ ಹೋಗುವವರು… ಹೀಗೆ ಇಂಥವರಲ್ಲಿ ಸಾಕಷ್ಟು ಮಂದಿ ನನ್ನ ವಿದ್ಯಾರ್ಥಿಗಳೂ ಇದ್ದಾರೆ. ಏಕೆಂದರೆ ಅವರಿಗೆ ಉದ್ಯೋಗಾವಕಾಶಗಳಿಲ್ಲ. ಅವರು ಟಾಟಾ ಸೇರಿದಂತೆ ಬಹಳಷ್ಟು ಸಂಗತಿಗಳ ಬಗ್ಗೆ ಮಾತಾಡುವುದನ್ನು ನೀವೊಮ್ಮೆ ಕೇಳಬೇಕು. ಆದರೆ ಇಂದು ಈ ಬಗ್ಗೆ ನಾನು ವಿವರವಾಗಿ ಮಾತನಾಡಲು ಬಯಸುವುದಿಲ್ಲ.

ರೋಮಿಲಾ: ಹೌದು. ಅದು ಈ ಬಗೆಯ ಕಥೆಗಳ ಬೇರೆ ಮುಖಗಳು.

ಸ್ಪಿವಾಕ್: ಅತ್ತ ನಾವು ಹೋಗದಿದ್ದರೇನೇ ವಾಸಿ. ಅದರತ್ತ ಹೋಗುವುದೇ ಬೇಡ. ಈ ಮಂದಿ ಸಂತಸದಿಂದಿಲ್ಲ. ಅಂದಹಾಗೆ ಆಗುವುದೆಲ್ಲವೂ ನಮ್ಮ ನಿಯಂತ್ರಣದಲ್ಲೂ ಇರುವುದಿಲ್ಲ. ಒಂದು ರೀತಿಯಲ್ಲಿ ಇದೊಂದು ಬಗೆಯ ಒಟ್ಟಾರೆ ಮನದಟ್ಟಾಗುವಿಕೆ. ಹೀಗಾಗಿ ಇದು ತನ್ನದೇ ಆದ ಸಮಯವನ್ನೂ ಕೂಡ ತೆಗೆದುಕೊಳ್ಳುವುದು ಸಹಜ. ಏಕೆಂದರೆ ಭಾಷೆಯ ಹೆಸರುಗಳು, ಉಚ್ಚಾರಣೆ-ವರ್ಣಮಾಲೆಗಳನ್ನು ಬಳಸುವ ಬಗೆ ಇತ್ಯಾದಿಗಳನ್ನೊಳಗೊಂಡ ಈ ಬಗೆಯ ಭಾಷಾ ಪರಿಕಲ್ಪನೆಗಳು ಹತ್ತೊಂಭತ್ತು ಮತ್ತು ಇಪ್ಪತ್ತನೇ ಶತಮಾನದಷ್ಟು ಹಳೆಯವುಗಳು. ಇನ್ನು ಸೋಕಾಲ್ಡ್ ಮೂಲನಿವಾಸಿಗಳ ಜೊತೆಗೂ ನಾನು ಕೆಲ ಸಮಯವನ್ನು ಕಳೆದಿದ್ದೇನೆ ಮತ್ತು ಅವರು ದ್ವಿಭಾಷಾ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದಾರೆ ಎಂಬುದು ನನಗೆ ಮನವರಿಕೆಯಾಗಿದೆ. ಪಟ್ಟಣದವರು ಭಾವಿಸುವಂತೆ ಈ ಮೂಲನಿವಾಸಿಗಳು ಖೇರಿಯಾ ಭಾಷೆಯನ್ನು ಬಳಸುವುದರ ಬದಲಾಗಿ ಮಗಧ್, ಪ್ರಾಕೃತ್ ನಂತಹ ಭಾಷೆಗಳನ್ನು ಬಳಸುತ್ತಿದ್ದರು. ಇನ್ನು ನನ್ನ ಜೊತೆ ಇವರು ಬೆಂಗಾಲಿಯನ್ನು ನಿರಂತರವಾಗಿ ಬಳಸುತ್ತಾ ”ಅಕ್ಕಾ, ನೀವು ನಮ್ಮ ಭಾಷೆಯನ್ನು ಕಲಿಯಿರಿ” ಎಂದೆಲ್ಲಾ ಹೇಳುತ್ತಿದ್ದರು. ಬಿರ್ಹಂನಲ್ಲಿರುವ ಉರಾವುನ್ ಮತ್ತು ಮುಂಡಾಗಳು ಇದಕ್ಕೊಂದು ಉತ್ತಮ ನಿದರ್ಶನ. ಆದರೆ ಈಚೆಗೆ ಉರಾವುನ್ ಗಳು ತಮ್ಮ ಸಂಸ್ಕøತಿಯನ್ನು ಜೊತೆಯಲ್ಲೇ ಬೆಳೆಸುವ ಒಂದಷ್ಟು ಕೆಲಸಗಳನ್ನು ಆರಂಭಿಸಿದ್ದಾರೆ. ಇದು ನಿಜಕ್ಕೂ ಒಂದು ಆಶಾದಾಯಕ ಸಂಗತಿ. ಆದರೆ ಮೇಲ್ಮೈಯಲ್ಲಿರುವ ಬಹುಭಾಷಾ ಪದ್ಧತಿ, ಆಡುಭಾಷಾ ನಿರಂತರತೆಗಳ ಬಗ್ಗೆ ನಮಗಿನ್ನೂ ವಿವರವಾಗಿ ತಿಳಿದಿಲ್ಲ. ಒಟ್ಟಾರೆಯಾಗಿ ಇಲ್ಲಿ ಭಾಷೆಗಳನ್ನು ಬೆರೆಸಿ ಹೊಸ ಆವೃತ್ತಿಯ ಭಾಷೆಯೊಂದು ಸೃಷ್ಟಿಯಾಗುತ್ತಿದೆ ಎಂದೇನಿಲ್ಲ. ಒಂದು ರೀತಿಯಲ್ಲಿ ಇದು ಅರಣ್ಯಗಳಲ್ಲಿರುವ ಪರಿಸರದ ಸಂಕೀರ್ಣ ವ್ಯವಸ್ಥೆಯಂತಿದೆ. ಇಂದು ವಿಶ್ವಸಂಸ್ಥೆಯು ”ಈ ಭಾಷೆಗಳು ಅಳಿಯುತ್ತಿವೆ. ಇವುಗಳನ್ನು ರಕ್ಷಿಸೋಣ”, ಎಂದು ಉದ್ಗರಿಸುವಂತೆ ನೈಜಸ್ಥಿತಿಯಲ್ಲೇನೂ ಆಗುತ್ತಿಲ್ಲ. ಇನ್ನು ಇಂದು ಭಾಷಾಶಾಸ್ತ್ರದ ಉನ್ನತ ಮಟ್ಟದಲ್ಲಿರುವ ಅಭಿಪ್ರಾಯಗಳು ಇಂಥಾ ದಾಖಲಾಗದ ಭಾಷೆಗಳು ಆಡುಭಾಷೆಯಾಗಿ ನಿರಂತರತೆಯನ್ನು ಕಾಯ್ದುಕೊಳ್ಳುತ್ತಲೇ ಬಹುಭಾಷಾ ಲಕ್ಷಣಗಳನ್ನು ಹೊಂದಿವೆಯೆಂದು ಒಪ್ಪಿಕೊಂಡಾಗಿದೆ. ಇವುಗಳು ಭಿನ್ನ ಭೂಭಾಗಗಳಿಂದ ಬರುವ ಜನರು ಸಂವಹನಕ್ಕಾಗಿ ಬಳಸುವ ಒಂದು ಸಾಮಾನ್ಯ ಭಾಷೆಯಂತಲ್ಲ (ಲಿಂಗ್ವಾ ಫ್ರಾಂಕಾ). ಇನ್ನು ಝುಲು, ಸ್ವಾಹಿಲಿಗಳಷ್ಟು ದೊಡ್ಡ ಲಿಂಗ್ವಾ ಫ್ರಾಂಕಾಗಳಂತೂ ಅಲ್ಲವೇ ಅಲ್ಲ. ಪೂರ್ವವೈಜ್ಞಾನಿಕ ಡಿಜಿಟಲೀಕರಣಕ್ಕೂ ಮೊದಲಿನ, ಜನರ ಸ್ಮøತಿಪಟಲದಲ್ಲಿ ಅಚ್ಚೊತ್ತಿರುವ ಈ ಉಳಿದ/ಉಳಿಯುತ್ತಿರುವ ಭಾಷೆಗಳು ವ್ಯವಸ್ಥಿತವಾಗಿ ಹೆಸರಿಸಿ, ವರ್ಗೀಕರಿಸಲ್ಪಟ್ಟ ಭಾಷೆಗಳ ಹಳೆಯ ವ್ಯವಸ್ಥೆಯಿಂದ ದೂರವುಳಿದಿವೆ. ಭಾಷಾಶಾಸ್ತ್ರಜ್ಞರು ಈ ಬಗ್ಗೆ ತಮ್ಮಿಂದಾದಷ್ಟು ಕೆಲಸವನ್ನು ಮಾಡುತ್ತಲೇ ಇದ್ದಾರೆ. ಹೀಗಾಗಿ ಈ ಭಾಷೆಗಳನ್ನೇನು ಮಾಡಬೇಕು ಎಂಬ ಪ್ರಶ್ನೆಗಳು ಇಲ್ಲಿ ಕಂಗೆಡಿಸಲಾರವು. ಇನ್ನು ಜಾಗತಿಕ ವಲಯದ ಸವಾಲುಗಳನ್ನು ನಿಭಾಯಿಸಲು ಇಂಗ್ಲಿಷ್, ಫ್ರೆಂಚ್, ರಷ್ಯನ್, ಚೈನೀಸ್ ನಂತಹ ಭಾಷೆಗಳನ್ನು ಉಳಿಸಿಕೊಳ್ಳಲೇಬೇಕಾಗಿದೆ.

ರೋಮಿಲಾ: ಇಲ್ಲ, ಇಲ್ಲ. ಇದು ಇಪ್ಪತ್ತೊಂದನೇ ಶತಮಾನದಂತೆ ಆಗಲಿದೆ ಎಂಬುದನ್ನು ಒಪ್ಪಿಕೊಳ್ಳಲು ನನಗೆ ಸಾಧ್ಯವೇ ಇಲ್ಲ. ನಿಸ್ಸಂದೇಹವಾಗಿ ಈ ಬಾರಿ ಇದು ಬದಲಾಗಲಿದೆ. ಆದರೆ ಈ ಅಂತರದ ಬಗ್ಗೆ ನಾವು ಜಾಗೃತರಾಗಿರುವುದು ಒಳಿತು. ಹಾಗಿದ್ದರೆ ಅಂಥಾ ಅಂತರವೇನದು? ಅದು ಭಾಷೆಯದ್ದಷ್ಟೇ ಅಲ್ಲ. ದ್ವಿಭಾಷಾ ಪದ್ಧತಿ ಮತ್ತು ಹಲವು ಭಾಷೆಗಳ ಬಳಕೆಯು ಮಾತ್ರ ಇದನ್ನು ಪರಿಹರಿಸಲು ಸಾಧ್ಯವಿಲ್ಲ. ಇದು ನಿಮ್ಮ ವೃತ್ತಿ, ವೈವಾಹಿಕ ಸಂಬಂಧಗಳು, ನಿಮ್ಮ ವಲಸೆಯ ಮಟ್ಟ… ಹೀಗೆ ಎಲ್ಲಾ ಸಂಗತಿಗಳೊಂದಿಗೆ ಸೂಕ್ಷ್ಮ ಸಂಬಂಧವನ್ನು ಹೊಂದಿದೆ. ನಿಜಕ್ಕೂ ಇದೊಂದು ಬಹಳ ಕ್ಲಿಷ್ಟವಾದ ಸಮಸ್ಯೆ. ಇಲ್ಲಿ ನನ್ನ ವಾದವೇನೆಂದರೆ ಆರ್ಥಿಕ ಬೆಳವಣಿಗೆ, ಜಾತಿ ಮತ್ತು ಧರ್ಮಗಳಂಥಾ ಒಂದೊಂದು ಎಳೆಯತ್ತ ಗಮನ ಹರಿಸುವುದರ ಬದಲು, ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿರುವ ಒಟ್ಟು ವ್ಯವಸ್ಥೆಯನ್ನು ಅವಲೋಕಿಸಬೇಕು ಎಂಬುದು. ಇದು ಸದ್ಯಕ್ಕಂತೂ ಆಗುತ್ತಿಲ್ಲ. ಅರವತ್ತರ ದಶಕದಲ್ಲಿ ಆರ್ಥಿಕ ಬೆಳವಣಿಗೆಯತ್ತ ತೀವ್ರ ಮೋಹವಿದ್ದರೂ ಇತರ ಅಂಶಗಳತ್ತ ಒಂದಷ್ಟು ನೋಟವನ್ನು ಹರಿಸಲಾಗುತ್ತಿತ್ತು. ವಿವರವಾಗಿ ಎಂದು ಹೇಳಲಾಗದಿದ್ದರೂ, ತಕ್ಕಮಟ್ಟಿಗೆ ಈ ಇತರೆ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಧರ್ಮವು ಶಿಕ್ಷಣ, ಕಾನೂನು ಮತ್ತು ವೃತ್ತಿಯಂಥಾ ಕ್ಷೇತ್ರಗಳಲ್ಲಿ ನಿಧಾನವಾಗಿ ಪ್ರವೇಶವನ್ನು ಪಡೆದುಕೊಳ್ಳುತ್ತಿರುವ ಬಗ್ಗೆ ಜನರು ಬಹಳ ಆತಂಕಿತರಾಗಿದ್ದರು. ಧಾರ್ಮಿಕತೆಯೆಂಬುದು ದಿನೇದಿನೇ ಹೆಚ್ಚುತ್ತಿತ್ತು. ಆದರೆ ಈ ಸಮಸ್ಯೆಗೆ ಹೇಳಿಕೊಳ್ಳುವಂತಹ ಪರಿಹಾರಗಳು ಅಂದು ಇರಲಿಲ್ಲ. ಜನಸಾಮಾನ್ಯರೂ ಕೂಡ ಈ ಬಗ್ಗೆ ಗಾಢವಾಗಿ ಮತ್ತು ವಸ್ತುನಿಷ್ಠವಾಗಿ ಚಿಂತನೆಯನ್ನು ಮಾಡಿರಲಿಲ್ಲ. ಈಗಂತೂ ನಾವುಗಳು ಇದರತ್ತ ಕಡೆಗಣ್ಣಿನಿಂದಲೂ ನೋಡುತ್ತಿಲ್ಲ. ಅದು ಅದರಷ್ಟಕ್ಕೆ ಸಾಗುತ್ತಲಿರಲಿ ಎಂಬಂತಹ ದಿವ್ಯನಿರ್ಲಕ್ಷ್ಯವು ನಮ್ಮಲ್ಲಿದೆ. “ಇಂಥದ್ದೊಂದು ನಿರ್ಲಕ್ಷ್ಯವು ಮುಂದಿನ ದಿನಗಳಲ್ಲಿ ಯಾವ್ಯಾವ ಪರಿಣಾಮಗಳನ್ನು ಬೀರಲಿದೆ?”, ಎಂದು ಭವಿಷ್ಯದ ಬಗ್ಗೆ ಚಿಂತಿಸುತ್ತಾ ನಾನೀಗ ಹೇಳುತ್ತಿದ್ದೇನೆ. ಸಮಾಜವೊಂದರ ನಿರ್ಮಾಣಕ್ಕೆ ಯಾವ ಪ್ರಾಥಮಿಕ ಅಂಶಗಳನ್ನು ಮತ್ತು ಸೂಕ್ಷ್ಮ ಒಳತಂತುಗಳನ್ನು ನಾವು ಅವಶ್ಯಕವೆಂದು ನಿರೀಕ್ಷಿಸಿದ್ದೆವೋ, ಅವುಗಳು ಇಂದು ಅಸ್ತಿತ್ವದಲ್ಲೇ ಇಲ್ಲ. ಈ ಬಗೆಯ ಚಿಂತನಾಕ್ರಮವನ್ನು ಜನರು ಕೈಬಿಟ್ಟಾಗಿದೆ.

ಸ್ಪಿವಾಕ್: ವಿಶ್ವ ಆರ್ಥಿಕ ವೇದಿಕೆಯ ನಿರ್ದೇಶಕರಾಗಿದ್ದ ಶ್ವಾಬ್ ರವರು ‘ದ ಫೋರ್ಥ್ ಇಂಡಸ್ಟ್ರಿಯಲ್ ರೆವಲ್ಯೂಷನ್’ ಎಂಬ ಕೃತಿಯೊಂದನ್ನು ಬರೆದಿದ್ದಾರೆ. ಅದರಲ್ಲಿ ”ಇದು ನಮ್ಮ ಮೇಲೆ ಅವಲಂಬಿತವಾಗಿದೆ”, ಎಂಬ ವಾಕ್ಯವಿದೆ. ನನಗನ್ನಿಸುವ ಪ್ರಕಾರ ಬದಲಾವಣೆಯಾಗಿರುವುದು ಇಲ್ಲೇ. ಸಮಾಜದ ನಿರ್ಮಾಣವು ನಮ್ಮ ಮೇಲೆ ನಿರ್ಭರವಾಗಿಲ್ಲದಿರಬಹುದು. ಆದರೆ ನೀವು ಹೇಳಿರುವ ಸೂಕ್ಷ್ಮ ಒಳತಂತುಗಳ ಇರುವಿಕೆಯನ್ನು, ಅವುಗಳು ಬೆಸೆಯುತ್ತಿರುವ ಪರಿಯನ್ನು ಒಪ್ಪಿಕೊಳ್ಳುವುದು ನಿಜಕ್ಕೂ ನಮ್ಮ ಕೈಯಲ್ಲಿದೆ. ನಮಗೆ ಸಿಕ್ಕ ತರಬೇತಿಗಳಿಂದಲೂ ಇವುಗಳನ್ನು ಕಲ್ಪಿಸಿಕೊಳ್ಳಲಾಗುತ್ತಿಲ್ಲ. ನಮ್ಮ ಯೋಜನೆಗಳಿಗನುಸಾರವಾಗಿ ಕಾರ್ಯರೂಪಕ್ಕೆ ಬರದ ಸಂಗತಿಗಳ ಬಗ್ಗೆ ಕಲಿಯುವುದು ಸಾಕಷ್ಟಿದೆ. ನಿಮಗೆ ಅಭ್ಯಂತರವಿಲ್ಲದಿದ್ದರೆ ಮಾಕ್ರ್ಸ್‍ನ ಮಾತುಗಳನ್ನು ಇಲ್ಲಿ ಉದ್ಧರಿಸಲೇ?

ರೋಮಿಲಾ: ನನಗೇನೂ ಅಭ್ಯಂತರವಿಲ್ಲ.

ಸ್ಪಿವಾಕ್: ಆಗಲಿ.

ರೋಮಿಲಾ: ಸಭಿಕರಿಗೆ ಅಭ್ಯಂತರವಿರಬಾರದು. ಅಷ್ಟೇ.

ಸ್ಪಿವಾಕ್: ನಾನಿಲ್ಲಿ ನಿಮ್ಮೊಂದಿಗೆ ಮಾತಾಡುತ್ತಿದ್ದೇನೆ. ಉಳಿದವರು ಅಲ್ಪಸ್ವಲ್ಪ ಕೇಳುತ್ತಿದ್ದಾರಷ್ಟೇ (ಸಭಿಕರನ್ನೂ ಸೇರಿದಂತೆ ಸ್ಪಿವಾಕ್ ಮತ್ತು ರೋಮಿಲಾರ ಮುಖದಲ್ಲೀಗ ನಗು). ಮಾಕ್ರ್ಸ್‍ನ ಈ ವಾಕ್ಯವನ್ನು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ”ಭವಿಷ್ಯದ ಕಾವ್ಯದಿಂದಾಗಿ ಹತ್ತೊಂಭತ್ತನೇ ಶತಮಾನದ ಕ್ರಾಂತಿಯ ವಿಚಾರಗಳು ಬರಲಿವೆ”, ಎಂದಿದ್ದ ಆತ. ಬೆಸೆಯುವಿಕೆಯ ಇಂಥಾ ಸೂಕ್ಷ್ಮ ಒಳತಂತುಗಳನ್ನು ಗುರುತಿಸಲು ನಮಗೆ ಸಾಧ್ಯವಾಗದೇನೋ ಎಂದು ಚರ್ಚೆಯುದ್ದಕ್ಕೂ ನೀವು ನಕಾರಾತ್ಮಕ ಧಾಟಿಯಲ್ಲಿ ಮಾತನಾಡಿದ್ದೀರಿ. ಆದರೆ ನಾನು ಹೆಚ್ಚು ಒತ್ತನ್ನು ನೀಡಬಯಸುತ್ತಿರುವ ಅಂಶವೂ ಕೂಡ ಇದುವೇ. ಹಲವು ಅಂಶಗಳು ಒಂದಕ್ಕೊಂದು ಬೆಸೆಯುತ್ತಾ ಆಗುವ ಬದಲಾವಣೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಕೆಲವು ಒಳ್ಳೆಯ ಬದಲಾವಣೆಗಳಾದರೆ, ಇನ್ನು ಕೆಲವು ನಿಜಕ್ಕೂ ಭಯಾನಕವಾಗಿರುವಂಥದ್ದು. ಹಾಗೆಂದು ಅವುಗಳನ್ನು ಬಿಟ್ಟು ಮುನ್ನಡೆಯಲು ಸಾಧ್ಯವಿಲ್ಲ. ಏಕೆಂದರೆ ನಾವಿಲ್ಲಿ ನಿರ್ಮಿಸುತ್ತಿರುವುದು ಸಮಾಜವನ್ನು.

ರೋಮಿಲಾ: ಆದರೆ ಸೂಕ್ಷ್ಮ ಒಳತಂತುಗಳು ಇದ್ದೇ ಇವೆ.

ಸ್ಪಿವಾಕ್: ನಾನೂ ಕೂಡ ಅದನ್ನೇ ಹೇಳುತ್ತಿದ್ದೇನೆ.

ರೋಮಿಲಾ: ಅವುಗಳು ಆಗಲಿವೆಯೇ ಎಂಬುದು ಇಲ್ಲಿ ಪ್ರಶ್ನೆಯಲ್ಲ. ಅವುಗಳು ಈಗಾಗಲೇ ಇಲ್ಲಿವೆ. ನನ್ನ ವಾದವೇನೆಂದರೆ ಅವುಗಳು ನಿಜಕ್ಕೂ ಇವೆಯೆಂಬ ಸತ್ಯಕ್ಕೆ ನಾವು ನೀಡಬೇಕಾಗಿದ್ದಷ್ಟು ಗಮನವನ್ನು ನೀಡಿಲ್ಲವೆಂಬುದು. ಒಟ್ಟು ವ್ಯವಸ್ಥೆಯನ್ನು ನೋಡುವ ಬದಲಾಗಿ ನಾವು ಒಂದೊಂದೇ ಎಳೆಯನ್ನು ನೋಡುತ್ತಿದ್ದೇವೆ. ಅದು ಜಾತಿಯೋ, ಧರ್ಮವೋ, ಆರ್ಥಿಕತೆಯೋ, ಇನ್ನೇನೋ ಆಗಿರಬಹುದು. ಹೀಗೆ ಮುಂದುವರಿಸುತ್ತಾ ಒಂದೊಂದು ಎಳೆಯ ಬಗ್ಗೆಯೇ ನಾವು ಉದ್ದುದ್ದ ಚರ್ಚೆಗಳನ್ನು ಮಾಡುತ್ತಿದ್ದೇವೆ.

ಸ್ಪಿವಾಕ್: ನಿಮ್ಮದು ಒಪ್ಪಿಕೊಳ್ಳುವಂತಹ ಮಾತು. ದಯವಿಟ್ಟು ಮುಂದುವರಿಸಿ.

ರೋಮಿಲಾ: ಸೂಕ್ಷ್ಮ ಒಳತಂತುಗಳು ಇರುವುದರಲ್ಲಿ ಎರಡು ಮಾತಿಲ್ಲ. ಆದರೆ ಅವುಗಳನ್ನು ಸಮರ್ಪಕವಾಗಿ ಬೆಸೆದು ಒಟ್ಟಾರೆ ಸಂಗತಿಗಳನ್ನು ಅರ್ಥೈಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಇಲ್ಲಿ ‘ನಾವು’ ಎಂದರೆ ಸಂಪರ್ಕಗಳನ್ನು ಬೆಸೆಯುವ ಕೆಲಸವು ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುತ್ತಿರುವವರು. ಅಷ್ಟೇ.

ಸ್ಪಿವಾಕ್: ಐ.ಟಿ ಕ್ಷೇತ್ರವನ್ನು ಪ್ರವೇಶಿಸುವ ಅಶಿಕ್ಷಿತರ ಬಗ್ಗೆ ಹೇಳುತ್ತೇನೆ ಕೇಳಿ. ತೀರಾ ಉನ್ನತ ಹುದ್ದೆಯಲ್ಲಿರುವವರ ಬಗ್ಗೆ ನಾನು ಮಾತನಾಡುತ್ತಿಲ್ಲ. ಇವರುಗಳು ನಾಮಪದಗಳನ್ನು ತಿರುಚುತ್ತಿದ್ದಾರೆ. ಇನ್ನು ಪಠ್ಯಕ್ರಮದಲ್ಲಾಗುವ ಬದಲಾವಣೆಗಳದ್ದು ಬೇರೆ ವಿಷಯ. ಈಚೆಗಷ್ಟೇ ನಾನು ಡರ್ಬನ್ ನಿಂದ ಮರಳುತ್ತಿದ್ದೆ. ಅಲ್ಲಿರುವ ನನ್ನ ಸಹೋದರರೊಬ್ಬರು ಬೀಜಗಣಿತವನ್ನು ಝುಲು ಭಾಷೆಯಲ್ಲಿ ಬೋಧಿಸಲು ಅವಶ್ಯಕವಾಗಿ ಬೇಕಿರುವ ಹೊಸ ಪರಿಭಾಷೆಗಳ ಬಗ್ಗೆ ಅದ್ಭುತವಾಗಿ ಮಾತನಾಡುತ್ತಿದ್ದರು. ಅದು ಹಾಗಲ್ಲ… ನಾವೆಲ್ಲಾ ಜೊತೆಯಾಗಿ ಏನಾದರೂ ಮಾಡೋಣ ಎಂದು ನಾನು ಅವರಿಗೆ ಹೇಳುತ್ತಿದ್ದೆ. ”ನಾನು ಒಳ್ಳೆಯ ಶಾಲೆಯೊಂದರಲ್ಲಿ ಓದುತ್ತಿದ್ದೆ. ಆದರೆ ಏಳನೇ ತರಗತಿಯವರೆಗೆ ಅಲ್ಲಿ ಬೆಂಗಾಲಿ ಭಾಷೆಯ ಮಾಧ್ಯಮದಲ್ಲಿ ಮಕ್ಕಳಿಗೆ ಪಾಠ ಹೇಳಲಾಗುತ್ತಿತ್ತು. ಹೀಗಾಗಿ ನಾವು ಬೀಜಗಣಿತದಂಥಾ ವಿಷಯಗಳನ್ನು ಕಲಿಯುವಾಗಲೂ ಬೆಂಗಾಲಿ ಭಾಷೆಯಲ್ಲೇ ಕಲಿಯುತ್ತಿದ್ದೆವು. ಇತ್ತ ಬೆಂಗಾಲಿಯಲ್ಲಿ ಕಲಿಯುತ್ತಿದ್ದ ಹೊರತಾಗಿಯೂ ನಾವು ಇಕ್ವೇಷನ್, ಫಾರ್ಮುಲಾದಂತಹ ಪದಗಳನ್ನು ಹೆಚ್ಚಾಗಿ ಬಳಸುತ್ತಿದ್ದೆವು. ಹಾಗಂತ ಬೆಂಗಾಲಿಯಲ್ಲಿ ಇವುಗಳಿಗೆ ಪದಗಳು ಇರಲಿಲ್ಲವೆಂದಲ್ಲ”, ಎಂದು ನಾನವರಿಗೆ ಹೇಳಿದ್ದೆ. ಈ ಚರ್ಚೆಯನ್ನು ಮುಂದುವರಿಸುತ್ತಾ ”ನಾನೀಗ ಪ್ರೌಢಶಾಲೆಯ ಮಕ್ಕಳಿಗೆ ಪಾಠ ಹೇಳುತ್ತೇನೆ ನೋಡಿ. ಅಸಲಿಗೆ ಪ್ರೌಢಶಾಲೆಗಳಲ್ಲಿ ಏನನ್ನೂ ಸಮರ್ಪಕವಾಗಿ ಬೋಧಿಸುವುದೇ ಇಲ್ಲ… ಶಿಕ್ಷಣದ ಬಗ್ಗೆ ಮಾತೆತ್ತಿದಾಗಲೆಲ್ಲಾ ನನ್ನ ಕಣ್ಣುಗಳು ದುಃಖದಿಂದ ಮಂಜಾಗುತ್ತವೆ. ಈ ವಿದ್ಯಾರ್ಥಿಗಳು ಬಂದು ಹೋಗುವುದನ್ನು ಬಿಟ್ಟರೆ ಹೇಳಿಕೊಳ್ಳುವಂಥದ್ದೇನನ್ನೂ ಕಲಿಯುವುದಿಲ್ಲ. ಆಲ್ಜೀಬ್ರಾವನ್ನು ಬೆಂಗಾಲಿಯಲ್ಲಿ ‘ಬೀಜ್ ಗೊಣಿತ್’ ಎನ್ನುತ್ತಾರೆ ಎಂಬ ಬಗ್ಗೆ ನನಗೆ ಸ್ವತಃ ತಿಳಿದಿರಲಿಲ್ಲ. ಆದರೆ ಈಗ ನನಗದು ಗೊತ್ತು. ಹೀಗೆ ವಿದ್ಯಾರ್ಥಿಗಳು ಇಂಥಾ ಶಾಲೆಗಳಿಂದ ಏನನ್ನೂ ಕಲಿಯುವುದಿಲ್ಲ. ನಕಲು ಮಾಡುವುದು ಹೇಗೆಂದು ಮಾತ್ರ ಅವರಿಗೆ ಕಲಿಸಲಾಗುತ್ತದೆ. ಇಕ್ವೇಷನ್ ಮತ್ತು ಫಾರ್ಮುಲಾ ಪದಗಳಿಗೆ ಬೆಂಗಾಲಿಯಲ್ಲಿ ಏನು ಹೇಳುತ್ತಾರೆಂಬುದು ನನಗೆ ತಿಳಿದಿಲ್ಲ. ಹಾಗೆಂದು ನಾನಿರುವ ಸ್ಥಾನದ ಅಧಿಕಾರವು ದುರ್ಬಲವಾದರೆ ವಿದ್ಯಾರ್ಥಿಗಳು ನನ್ನಲ್ಲಿ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಹೀಗಾದಾಗಲೆಲ್ಲಾ ”ಏಯ್… ಪುಟಗಳನ್ನು ಮಗುಚಿ ನೋಡು. ಈ ಪದವನ್ನು ಮೊದಲಬಾರಿ ಎಲ್ಲಿ ಬಳಸಿದ್ದಾರೆ ಎಂಬುದನ್ನು ಹುಡುಕು. ಫಾರ್ಮುಲಾವನ್ನು ಬೆಂಗಾಲಿಯಲ್ಲಿ ಹೇಗೆ ಹೇಳುತ್ತಾರೆ. ಇಕ್ವೇಷನ್ ಅನ್ನು ಬೆಂಗಾಲಿಯಲ್ಲಿ ಹೇಗೆ ಹೇಳುತ್ತಾರೆ”, ಎಂದೆಲ್ಲಾ ನಮ್ಮ ಮೇಲ್ವಿಚಾರಕರ ಬಳಿ ನಾನು ವಿಚಾರಿಸುತ್ತಿದ್ದೆ.

ಆಗಲೇ ಹಲವು ಪ್ರಯೋಗಗಳ ಮಿಶ್ರಣದಂತಾಗಿರುವ ಸಮೂಹ ಭಾಷಾಮಾಧ್ಯಮಗಳನ್ನು ಮತ್ತಷ್ಟು ತಿರುಚುವುದನ್ನು ಕಲ್ಪಿಸಿಕೊಳ್ಳುವುದೂ ಕೂಡ ನಮ್ಮನಿಮ್ಮಂತಹ ಮಂದಿಗೆ ಪ್ರಯಾಸದ ಕೆಲಸ. ಏಕೆಂದರೆ ನಾವು ಇಂಥಾ ಕೆಲಸಗಳನ್ನು ಮಾಡುವವರಲ್ಲ. ಭಾಷಾಶಾಸ್ತ್ರದ ಜೊತೆ ನಾವುಗಳು ಮಾಡುವ ಕೆಲಸಕ್ಕೂ, ಇವುಗಳಿಗೂ ಸಾಮ್ಯತೆಯಿಲ್ಲ. ವಿಶೇಷವಾಗಿ ಭಾಷೆಗಳನ್ನು ಕಲಿಸುವಾಗಲಂತೂ ಇಲ್ಲವೇ ಇಲ್ಲ. ಅಲ್ಲವೇ? ನಾನು ಇನ್ನೂ ಕೆಲವು ಉದಾಹರಣೆಗಳನ್ನು ನೀಡಬಹುದು. ಕೊಂಚ ಅಸಂಬದ್ಧವಾಗಬಹುದೇನೋ. ಆದರೆ ಒಂದನ್ನಂತೂ ನಾನು ಹೇಳಬಯಸುತ್ತೇನೆ: ಒಂದು ಹಂತದಲ್ಲಿ ಈ ಜಗತ್ತಿನ ಒಟ್ಟಾರೆ ಕಲಸುಮೇಲೋಗರದ ಕಲ್ಪನೆಯು, ನಮ್ಮಂತಹ ಮಧ್ಯಮವರ್ಗದ ಸಮಾಜ ನಿರ್ಮಾಣದ ಕನಸುಗಳಿಂದ ಹೊರತಾಗಿ ನಮ್ಮಿಂದ ಏನನ್ನೋ ಕಸಿದುಕೊಳ್ಳುತ್ತಿದೆ. ಇನ್ನೊಂದು ಕತೆಯನ್ನು ಹೇಳುತ್ತೇನೆ ಕೇಳಿ. ಲಾವೋಸ್ ಸರಹದ್ದಿನ ಬಳಿಯಲ್ಲಿದ್ದ ಕೆಲ ಶಾಲೆಗಳಿಗೆ ನಾನು ಹೋಗುತ್ತಿದ್ದೆ. ಆ ಮಕ್ಕಳು ಚೀನೀಯರನ್ನು ಬಿಟ್ಟು ಬೇರ್ಯಾವ ವಿದೇಶೀಯರನ್ನೂ ನೋಡಿರಲಿಲ್ಲ. ಆ ಶಾಲೆಗಳು, ಓರ್ವ ವ್ಯಕ್ತಿ, ಒಂದು ಸಮುದಾಯ, ಒಂದು ಶಾಲೆಗೆ ಮುಗಿದುಹೋಗುತ್ತದೆ. ಇಂದು ಇವುಗಳಿಲ್ಲ. ಖಾಸಗಿ ಮೂಲಗಳಿಂದ ಆರ್ಥಿಕ ನೆರವನ್ನು ಪಡೆದಿರುವ ಇಲ್ಲಿಯ ಪ್ರಭುತ್ವವು ಕೆಲ ಕೇಂದ್ರೀಯ ವಿದ್ಯಾಲಯಗಳನ್ನು ಆರಂಭಿಸಿದೆ. ಅವುಗಳು ಶಾಲೆಯಂತಿರದೆ ಜೈಲಿನಂತಿವೆ. ಇಲ್ಲಿಯ ದುರ್ಗಮ ಪ್ರದೇಶಗಳಲ್ಲಿರುವ ಏಕ ಸಮುದಾಯ, ಏಕೋಪಾಧ್ಯಾಯ ಶಾಲೆಗಳ ಬಗ್ಗೆ ಹೇಳುತ್ತಾ ಅವರು ಚೈನೀಸ್ ಭಾಷೆಯಲ್ಲಿ ಏನನ್ನೋ ಬರೆದು ನನಗೆ ಕೊಟ್ಟಿದ್ದರು. ನೀತಿಶಾಸ್ತ್ರವೆಂದು ಹೇಳಲಾಗುತ್ತಿದ್ದ ಅಲ್ಲಿ ಕಲಿಸಲಾಗುತ್ತಿದ್ದಿದ್ದು ಸಮಾಜವಾದ. ಇವರೊಂದಿಗೆ ಯಾರೂ ಅಲ್ಲಿ ವ್ಯವಹರಿಸುವುದಿಲ್ಲ. ಅಸಲಿಗೆ ಚೀನೀಯರಲ್ಲದ ವಿದೇಶೀಯರೇ ಅಲ್ಲಿಲ್ಲ. ಅಷ್ಟರಲ್ಲಿ ರಬ್ಬರ್ ವಸ್ತುಗಳು ಒಳಬರುತ್ತಿರುವುದನ್ನು ಒಬ್ಬ ನನಗೆ ತೋರಿಸುತ್ತಿದ್ದಾನೆ. ”ಅಲ್ಲಿ ನೋಡಿ. ಐದು ವರ್ಷಗಳ ಹಿಂದೆ ನಾನು ನಿಮಗೆ ರಬ್ಬರ್ ತರುತ್ತಿದ್ದ ಲಾರಿಗಳನ್ನು ತೋರಿಸಿದ್ದರೆ ಒಂದೇ ಪ್ರಮಾಣದ ರಬ್ಬರ್ ವಸ್ತುಗಳು ಹೀಗೆ ಬರುತ್ತಿದ್ದವು. ಇವತ್ತು ಈ ಪ್ರಮಾಣವು ಕೆಲವು ಲಾರಿಗಳಲ್ಲಿ ಹೆಚ್ಚಿದ್ದರೆ ಇನ್ನು ಕೆಲವು ಲಾರಿಗಳಲ್ಲಿ ಕಮ್ಮಿಯಿದೆ. ಒಂದೇ ಕೋಣೆಯ, ಮಣ್ಣಿನಿಂದ ನಿರ್ಮಿಸಲಾಗುತ್ತಿದ್ದ ನಮ್ಮ ಪುಟ್ಟ ಶಾಲೆಗಳ ಕಾಲವು ಮುಗಿದುಹೋಯಿತು”, ಎಂದಿದ್ದ ಆತ. ನೋಡಿ, ನಮಗರಿವಿಲ್ಲದಂತೆಯೇ ಹಲವು ಬದಲಾವಣೆಗಳು ಆಗುತ್ತಲೇ ಇವೆ. ವಿಜಯವನ್ನು ನಾವು ಸಾಮಾನ್ಯವಾಗಿ ನೋಡುವ ರೀತಿಯಲ್ಲಿ ಇವರುಗಳು ನೋಡುವುದಿಲ್ಲ. ಆದರೆ ಈ ಪ್ರಮಾಣವನ್ನೇ ಇವರುಗಳು ಭವಿಷ್ಯದ ಕಾವ್ಯವಾಗಲಿದೆಯೆಂದು ತಿಳಿದಿದ್ದಾರೆ. ನಾನಿಲ್ಲಿ ತೀರಾ ಸಾಹಿತ್ಯದ ಭಾಷೆಯಲ್ಲಿ ಮಾತನಾಡುತ್ತಿರುವ ಬಗ್ಗೆ ಕ್ಷಮೆಯಿರಲಿ. ನಾನು ಸ್ವತಃ ಸಾಹಿತಿಯಾಗಿರುವುದರಿಂದ ಇನ್ನೇನು ಮಾಡಬಲ್ಲೆ ಹೇಳಿ! ಇರಲಿ, ಮತ್ತೆ ಇತಿಹಾಸಕ್ಕೆ ಮರಳೋಣ. ನೀವು ಮುಂದುವರಿಸಿ.

ರೋಮಿಲಾ: ಎಲ್ಲರೂ ನಿರೀಕ್ಷಿಸಬಹುದಾದ ಅಂಶವಿದು ಎಂದು ಇದನ್ನು ಕರೆಯಬಹುದು. ಸಮಾಜದ ಪರಿಕಲ್ಪನೆಯನ್ನು ನೀಡುವಂತೆ ಆಗ್ರಹಿಸುವುದು ಕಷ್ಟ. ಆದರೆ ಆ ದಿಕ್ಕಿನತ್ತ ಸಾಗುವ ಹಾದಿಯಿದೆಯಲ್ಲಾ, ಅದು ನಿಜಕ್ಕೂ ಪ್ರೇರಣಾತ್ಮಕ. ಸದ್ಯಕ್ಕೇನಾಗುತ್ತಿದೆ ಎಂಬ ಆತಂಕದಲ್ಲಿ ಕಾಣದಾಗುತ್ತಿರುವ ಪುಟ್ಟ ಹೆಜ್ಜೆಯೇ ಈ ಬಗೆಯದ್ದು. ಅದು ಈಗ ಆಗುತ್ತಲೇ ಇಲ್ಲ. ಈ ಬಗ್ಗೆ ಎಷ್ಟು ಚರ್ಚಿಸಿದರೂ, ಸುತ್ತಮುತ್ತಲಿನ ಜನರೊಂದಿಗೆ ಅದೆಷ್ಟು ಮಾತುಗಳನ್ನಾಡಿದರೂ ಈ ಸಂಗತಿಗಳನ್ನು ಮಾತ್ರ ಅರ್ಥೈಸಿಕೊಳ್ಳಲಾಗುತ್ತಿಲ್ಲ. ನಾವು ಅರವತ್ತರ ದಶಕದಲ್ಲಿ ಮಾಡಬಯಸಿದ್ದ ಬದಲಾವಣೆಗಳನ್ನು ತರಲು ಈಗ ಪ್ರಶಸ್ತವಾದ ಸಂದರ್ಭ ಎಂದು ನನಗನ್ನಿಸುತ್ತಿದೆ. ಆದರೆ ನಡೆಯುತ್ತಿರುವ ಈ ಬೆಳವಣಿಗೆಗಳು ನಮ್ಮ ಅರಿವಿಗೂ ಮೀರಿದ್ದು ಎಂಬ ಭಾವನೆಯು ಈ ನಿಟ್ಟಿನಲ್ಲಿ ನಮಗೆ ಯಶಸ್ಸನ್ನು ನೀಡುತ್ತಿಲ್ಲ. ಇದು ನಿಜಕ್ಕೂ ವಿಪರ್ಯಾಸದ ಸಂಗತಿ.

ಸ್ಪಿವಾಕ್: ಅದು ಸಾಧ್ಯವಾಗಬೇಕೆಂದರೆ ನಮ್ಮ ಗಮನವು ಬೇರೆಡೆಗೆ ಸಾಗಬೇಕು ಎಂಬುದನ್ನು ನಾವು ಒಪ್ಪಿಕೊಳ್ಳುತ್ತಲೇ ಇಲ್ಲ. ನೀವು ನನಗಿಂತ ದೊಡ್ಡವರು. ಆದರೆ ನನಗೇಕೋ ಕೆಲವೊಮ್ಮೆ ಬಹಳ ವಯಸ್ಸಾಯಿತೆಂದು ವ್ಯಥೆಯಾಗಿಬಿಡುತ್ತದೆ ಗೊತ್ತೇ…

ರೋಮಿಲಾ: ಮೈ ಗಾಡ್, ನನಗೆ ಹಾಗೆಲ್ಲಾ ಅನ್ನಿಸದೆ ಅದೆಷ್ಟು ದಿನಗಳಾದವೋ ಏನೋ…

ಸ್ಪಿವಾಕ್: ನಿಮ್ಮಲ್ಲಿರುವ ಹುಮ್ಮಸ್ಸು ಅದ್ಭುತ ರೋಮಿಲಾ –

ರೋಮಿಲಾ: ಇಲ್ಲ ಇಲ್ಲ. ಅದು ಹಾಗಲ್ಲ. ನಮ್ಮ ಮುಂದಿನ ಪೀಳಿಗೆಯು ಇವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸಲಿದೆಯೆಂಬ ಆಶಾಭಾವದಲ್ಲಿ ನಾನಿದ್ದೇನೆ.

ಸ್ಪಿವಾಕ್: ಹೀಗಾದರೂ ಒಂದು ಮಹಾನ್ ಭಾರತವನ್ನು ನೋಡುವ ಅವಕಾಶವು ನಮಗೆ ದಕ್ಕಬಹುದೋ? ಹ್ಮ್… ಅದು ವಿಭಿನ್ನವಾಗಿರಬಹುದಲ್ಲವೇ? ಅದರ ಅರ್ಥವೇನಿರಬಹುದು?

ರೋಮಿಲಾ: ಬಹುಷಃ ಇದರೊಂದಿಗೆ ಈ ಚರ್ಚೆಗೆ ನಾವು ಅಂತ್ಯ ಹಾಡಬಹುದು.

ಸ್ಪಿವಾಕ್: ನನಗೂ ಹಾಗೆಯೇ ಅನ್ನಿಸುತ್ತಿದೆ. ಅಂದಹಾಗೆ ಈಚಿನ ದಿನಗಳಲ್ಲಿ ಏರ್ ಇಂಡಿಯಾ ವಿಮಾನಗಳಲ್ಲಿ ಏನನ್ನುತ್ತಾರೆ ಗೊತ್ತೇ? ‘ಜೈಹಿಂದ್’. ಪ್ರತೀ ಘೋಷಣೆಯ ನಂತರವೂ ಅವರು ಹೀಗನ್ನಬೇಕು.

ರೋಮಿಲಾ: ಹ್ಮ್….

ಸ್ಪಿವಾಕ್: ಹ್ಮ್…

ರೋಮಿಲಾ: ಹ್ಮ್… ಇರಲಿ. ಭಾರತ್ ಮಾತಾ ಕೀ ಜೈ ಅಂತೇನೂ ಹೇಳುತ್ತಿಲ್ಲ ಬಿಡಿ.

ಸ್ಪಿವಾಕ್: ಇರಲಿ… ಹಾಗೆ ನೋಡಿದರೆ ಸಾಹಿತ್ಯಿಕ ಶೈಲಿಯಲ್ಲಿ ನಾವು ಇವೆರಡನ್ನೂ ಹೇಳಿದ್ದೇವೆ. (ಅದುವೇ ರಾಷ್ಟ್ರೀಯತೆ ಎನ್ನುತ್ತಿದ್ದಾರೆ ರೋಮಿಲಾ) ಅಷ್ಟಕ್ಕೂ ನಾಳೆ ‘ಸ್ವಾತಂತ್ರ್ಯೋತ್ಸವ’ ಅಲ್ಲವೇ! ಸ್ವಾತಂತ್ರ್ಯವನ್ನು ಕೋಟ್ ಮಾಡಿ ಹೇಳುತ್ತಿದ್ದೇನೆ. ಧನ್ಯವಾದಗಳು.

ಕೃಪೆ : historyforpeace


ಅನುವಾದ: ಪ್ರಸಾದ್ ನಾಯ್ಕ್

ದಕ್ಷಿಣಕನ್ನಡದ ಕಿನ್ನಿಗೋಳಿ ಮೂಲದವರು. ಕನ್ನಡ ಸಾಹಿತ್ಯದ ಮಿಂದಾಣ ‘ಅವಧಿ’ಯಲ್ಲಿ ಇವರು ಬರೆಯುತ್ತಿದ್ದ ‘ಹಾಯ್ ಅಂಗೋಲಾ!’ ಅಂಕಣವು ಓದುಗರಿಂದ ಮೆಚ್ಚುಗೆ ಗಳಿಸಿತು . ಆಫ್ರಿಕಾ ಪ್ರವಾಸ ಕಥನವಾಗಿರುವ ‘ಹಾಯ್ ಅಂಗೋಲಾ!’ ಇವರ ಚೊಚ್ಚಲ ಕೃತಿಯೂ ಹೌದು. ಈ ಕೃತಿಯು ಪ್ರವಾಸ ಸಾಹಿತ್ಯ ವಿಭಾಗದಲ್ಲಿ ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2019 ನೇ ಸಾಲಿನ ಪುಸ್ತಕ ಬಹುಮಾನ ಕ್ಕೆ ಪಾತ್ರವಾಗಿದೆ.

ಪ್ರತಿಕ್ರಿಯಿಸಿ