ಅಮಾನುಷ ಜಗದೊಳಗೊಂದು ಪಯಣ : ಹನೂರರ “ಕಾಲಯಾತ್ರೆ”

ಕನ್ನಡದ ಮುಖ್ಯ ವಿದ್ವಾಂಸ, ಕಾದಂಬರಿಕಾರ ಕೃಷ್ಣಮೂರ್ತಿ ಹನೂರರ ಹೊಸ ಕಾದಂಬರಿ “ಕಾಲಯಾತ್ರೆ”. ಇವರ ಹಿಂದಿನ ಕೃತಿ “ಅಜ್ಞಾತನೊಬ್ಬನ ಆತ್ಮಚರಿತ್ರೆ”ಯನ್ನು ಗಿರೀಶ ಕಾರ್ನಾಡರು “… ಯಾವುದೋ ಒಂದು ನಿರ್ದಿಷ್ಟ ಪ್ರಕಾರಕ್ಕೆ ಮಾತ್ರವೇ ಈ ಕಾದಂಬರಿಯನ್ನು ಸೇರಿಸುವುದು ಅದರ ವಿಸ್ತಾರ ಪ್ರತಿಭೆ, ಸಾಧ್ಯತೆಗಳಿಗೆ ಮಾಡುವ ಅನ್ಯಾಯ” ಎಂಬರ್ಥದ ಮಾತುಗಳನ್ನು ಆಡಿದ್ದರು. ಹನೂರರ ಚಿತ್ರಕಶಕ್ತಿ, ರೂಪಕಶಕ್ತಿಗಳಿಗೆ ಮತ್ತೊಂದು ಉದಾಹಾರಣೆಯಾಗಿ ಬಂದಿದೆ ಕಾಲಯಾತ್ರೆ. ಈ ಕಾದಂಬರಿಯ ಬಗ್ಗೆ ಋತುಮಾನ ದಲ್ಲಿ ವಿಶ್ವಸಾಹಿತ್ಯದ ಎರಡು ಪುಸ್ತಗಗಳ ಮೇಲೆ ವಿಮರ್ಷಾತ್ಮಕ ಟಿಪ್ಪಣಿಗಳನ್ನು ಬರೆದ ನನ್ನಿ. ವಿ.ಕೆ ಅವರು ಬರೆದಿದ್ದಾರೆ.  

ʼದೇವರನ್ನಾವ್ಞ ಕಣ್ಣು ಬಿಡಲಿ ತಾಳಲೇ, ಇದು ಬೆಂಗಳೂರು. ಹೊತ್ತು ಮೂಡಾಣ ಮುಳುಗಾಣ ಅಂಬದು ಗೊತ್ತಾಗಂಗಿಲ್ಲʼ ಎನ್ನುತ್ತಾ ಮಾರುತಿ ತಳವಾರನು ಹೆಂಡತಿಯನ್ನು ಸಮಾಧಾನಿಸಲೆತ್ನಿಸಿದರೂ, ಸಮಾಧಾನಗೊಂಡಂತೆ ಕಾಣದ ಯರಿಲಕ್ಷ್ಮವ್ವ ʼಹೊತ್ತು ಮೂಡಾದು ಎಂದಂತೀʼ ಎಂದು ಮರುಪ್ರಶ್ನಿಸುತ್ತಾಳೆ. ಇದಕ್ಕೆ ಗಂಡನ ನಗುವಷ್ಟೇ ಉತ್ತರವಾಗುತ್ತದೆ. ಇದು ಕಳೆದ ವಾರವಷ್ಟೇ ಬಿಡುಗಡೆಯಾದ, ಕನ್ನಡದ ಹೆಸರಾಂತ ಕಾದಂಬರಿಕಾರರಾದ ಕೃಷ್ಣಮೂರ್ತಿ ಹನೂರರ ಕಾಲಯಾತ್ರೆ ಕಾದಂಬರಿಯ ಆರಂಭಕ್ಕೇ ಕಾಣಸಿಗುವ ಗಂಡ-ಹೆಂಡಿರ ಸಂಭಾಷಣೆಯ ಒಂದು ತುಣುಕು. ಆದರಿದು ದಂಪತಿಗಳ ನಡುವಿನ ವಾಕ್ಸಮರವಷ್ಟೇ ಆಗಿರದೆ, ಓದುಗನ ಮನದಲ್ಲಿ ಏಕಕಾಲದಲ್ಲಿ ಹಲವು ಪ್ರಶ್ನೆಗಳ ಹಾಗೂ ಒಂದು ತೆರನಾದ ಅವ್ಯಕ್ತ ಭಯದ ಹುಟ್ಟುವಿಕೆಗೆ ಕಾರಣವೂ ಆಗುತ್ತದೆ. ತಮ್ಮ ಊರಿಂದ ದೂರದ ಬೆಂಗಳೂರಿಗೆ ಬಂದು ಜೀವನ ರೂಪಿಸಿಕೊಳ್ಳಲು ಹೆಣಗುತ್ತಿರ್ಪ ಈ ಜೀವಿಗಳ ಬಾಳಯಾತ್ರೆಯನ್ನು, ಹೊತ್ತೇ ಮುಳುಗದ ಬೆಂಗಳೂರು ಬೆಳಗಿಸುವುದೇ ಅಥವಾ ಬೆಳಕಿನ ಹಿಂದಿನ ಕರಿಛಾಯೆಯನ್ನು ಇವರಿಗಾಗಿಯೇ ಎಂಬಂತೆ ಕಾಪಿಟ್ಟುಕೊಂಡಿದೆಯೇ ಎಂಬ ಅನುಮಾನ ಹಾಗೂ ಕುತೂಹಲದೊಟ್ಟಿಗೆ ಓದುಗನನ್ನು ತನ್ನ ಯಾತ್ರೆಯಲ್ಲಿ ಸಹ ಪಯಣಿಗನನ್ನಾಗಿಸಿಕೊಂಡು ಕಾದಂಬರಿ ಸಾಗುತ್ತದೆ.

ನಾಡಿನ ಹೆಸರಾಂತ ಜನಪದ ತಜ್ಞರಾದ ಕೃ಼ಷ್ಣಮೂರ್ತಿ ಹನೂರರ ಲೇಖನಿಯಿಂದ ಹಲವು ಕಥೆಗಳು, ಜನಪದ ಲೇಖನಗಳು, ಸಂಗ್ರಹಗಳು ಮೂಡಿಬಂದಿದ್ದರೂ, ಕಾದಂಬರಿ ಪ್ರಿಯರಿಗೆ ಅವರು ನಿಕ್ಷೇಪ, ಅಜ್ಞಾತನೊಬ್ಬನ ಆತ್ಮಚರಿತ್ರೆ ಹಾಗೂ ಸಿದ್ಧಿಯ ಕೈ ಚಂದ್ರನತ್ತ ಎಂಬ ವಿಭಿನ್ನ, ವಿಶೇಷ ಕಥಾಹಂದರ ಹಾಗೂ ವಿನ್ಯಾಸಗಳುಳ್ಳ ಕಾದಂಬರಿಗಳಿಂದಾಗಿಯೇ ಆದರಣೀಯರು. ಪರಾಕ್ರಮದ ಮದದಲ್ಲಿಯೇ ಜೀವ ತೇಯ್ದು, ಹಲವಾರು ಬಾರಿ ಸಾವಿನಿಂದ ಪಾರಾದರೂ, ಕಟ್ಟಕಡೆಗೆ ಮೈಯೆಲ್ಲಾ ಕೀವು ಸೋರಿಸುತ್ತಾ ಬಿದ್ದಿದ್ದಾಗ, ತನ್ನೆಲ್ಲಾ ಹೀನ ಕೃತ್ಯಗಳನ್ನು ನೋಡಿಯೂ ತನ್ನನ್ನು ಸಲಹುತ್ತಿರುವ ಪ್ರಕೃತಿಗೆ ನಮಸ್ಕರಿಸುವ ದಳವಾಯಿಯೊಬ್ಬನ ಕಥೆ ಹೇಳುತ್ತದೆ ಅಜ್ಞಾತನೊಬ್ಬನ ಆತ್ಮಚರಿತ್ರೆ. ಹೆಸರಿಲ್ಲದ ದೇಸಿಗನೊಬ್ಬನ ಸುತ್ತ ಹೆಣೆಯಲ್ಪಟ್ಟ ಈ ಕಾದಂಬರಿಯು ಮನುಕುಲದ ಪಾರಮ್ಯವನ್ನೂ, ತನ್ಮೂಲಕ ಬಲಹೀನರ ಮೇಲೆ ಬಗೆಯುವ ದೌರ್ಜನ್ಯವನ್ನೂ, ಕೊನೆಗೆ ಸೋತುಸುಣ್ಣವಾಗುವ ಪ್ರಕ್ರಿಯೆಯನ್ನೂ ವ್ಯಕ್ತಿಗತವಾಗಿ ಚಿತ್ರಿಸುತ್ತದೆ. ಮತ್ತೊಂದೆಡೆ, ಸಿದ್ಧಿಯ ಕೈ ಚಂದ್ರನತ್ತ ಕಾದಂಬರಿಯಲ್ಲಿ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವೇಷ ಸ್ಪರ್ಧೆಯಲ್ಲಿ ಭಾಗವಹಿಸಲು ಹಲವು ದಿನಗಳ ಪೂರ್ವ ತಯಾರಿಯೊಂದಿಗೆ ಸನ್ನದ್ಧರಾಗಿದ್ದಾಗಿಯೂ ಸಹ, ತಮ್ಮದಲ್ಲದ ವೇಷವನ್ನು ತೊಟ್ಟು, ನಿರ್ವಹಿಸಲು ಸೋತ ಮಕ್ಕಳನ್ನು ಕಾಣಬಹುದು. ಇಲ್ಲಿ ತನ್ನದ್ದಲ್ಲದನ್ನು ತನ್ನದಾಗಿಸಿಕೊಳ್ಳುವ ಹಪಹಪಿ ನೈಜತೆಯನ್ನು ಪೋಷಿಸದೇ ಡಾಂಭಿಕತೆಯನ್ನೇ ಮೆರೆಸಿದಂತೆ ಕಂಡುಬಂದರೂ, ಅದಕ್ಕೆ ಹೆಚ್ಚು ಉಳಿಗಾಲವಿಲ್ಲ ಎಂಬುದನ್ನು ಧ್ವನಿಸುತ್ತದೆ. ಕೃತ್ರಿಮ ಜಗತ್ತನ್ನು ಹಲವು ಪಾತ್ರಗಳ ಮೂಲಕ ಅವಲೋಕಿಸುತ್ತಾ ಸಾಗುತ್ತದೆ ಸಿದ್ಧಿಯ ಕೈ ಚಂದ್ರನತ್ತ. ಈ ಎರಡೂ ಕಾದಂಬರಿಗಳ ಕಥನ ಶೈಲಿ ವಿಭಿನ್ನವಾಗಿದ್ದು, ಗ್ರಾಮೀಣ ಪರಿಸರ ಹಾಗೂ ಜನಪದೀಯ ಹಿನ್ನೆಲೆಯಲ್ಲಿ ವ್ಯಕ್ತಿಗತವಾಗಿ ಹಾಗೂ ಸಮಷ್ಠಿಯಾಗಿ ವಿಶ್ವವನ್ನು ತೆರೆದಿಡುತ್ತದೆ. ಅಂತೆಯೇ, ಕಾಲಯಾತ್ರೆ ಕಾದಂಬರಿಯಲ್ಲಿಯೂ ತಮ್ಮ ಎಂದಿನ ಜನಪದದ ಹಿಮ್ಮೇಳದೊಂದಿಗೆ, ಹಿಂದಿನ ಕಾದಂಬರಿಗಳಿಗಿಂತ ಭಿನ್ನವಾದ, ನಗರವನ್ನು ಕೇಂದ್ರವಾಗಿರಿಸಿಕೊಂಡ, ವೈರುದ್ಧ್ಯಗಳಿಂದ ಕೂಡಿದ ಜೀವನ ಶೈಲಿಗಳನ್ನು, ಜೀವನಕ್ಕಾಗಿನ ಹೋರಾಟವನ್ನು ಕಟ್ಟಿಕೊಡುತ್ತಾರೆ ಹನೂರರು.

ಡಾ. ಕೃಷ್ಣಮೂರ್ತಿ ಹನೂರು

ಡಾ. ಕೃಷ್ಣಮೂರ್ತಿ ಹನೂರು

ಮಾರುತಿ ತಳವಾರನ ಪೂರ್ವಿಕರದು ತಳವಾರಿಕೆ ವೃತ್ತಿಯಾದರೂ, ಇಂದು ಅಂದಂದಿನ ದುಡಿಮೆಯಿಂದ ಜೀವನ ಸಾಗಿಸಬೇಕಾದ ಸ್ಥಿತಿ ಆತನದು. ತನ್ನ ಪತ್ನಿ ಯರಿಲಕ್ಷ್ಮವ್ವ ಹಾಗೂ ಮಗಳು ಸರಸಿಯೊಡನೆ ಜೇವರ್ಗಿಯಿಂದ ಬದುಕು ಕಟ್ಟಿಕೊಳ್ಳುವ ನೆವದಲ್ಲಿ ಬೆಂಗಳೂರಿಗೆ ಬಂದು ಸೇರುತ್ತಾನೆ. ಚಿಕ್ಕಂದಿನಿಂದ ಜೊತೆಯಲ್ಲಿಯೇ ಬೆಳೆದ ಪಕ್ಕದ ಮನೆಯ, ಮಂದ ಬುದ್ಧಿಯ ಅನಾಥ ಅಲ್ಲಾಭಕ್ಷ ಲಾಡಸಾಬ ಲಗಾಟಿಯೂ ಮಾರುತಿಗೆ ಜೊತೆಯಾಗುತ್ತಾನೆ. ಪೀಣ್ಯದ ಲಾರಿ ಯಾರ್ಡೊಂದರಲ್ಲಿ ಮಾರುತಿಗೆ ಡ್ರೈವರ್‌ ಕೆಲಸ ಸಿಕ್ಕರೆ, ಲಗಾಟಿಗೆ ಲಾರಿ ತೊಳೆಯುವ ಕೆಲಸವಾಗುತ್ತದೆ. ಗಂಡನ ದುಡಿಮೆ ಸಾಲದೆಂಬುದನ್ನು ಅರಿತ ಲಕ್ಷ್ಮವ್ವ, ತಾನೂ ಕೆಲಸ ಮಾಡುವ ಉಮೇದಿನಲ್ಲಿ, ಒಮ್ಮೆ ಗಂಡ ಕೆಲಸದ ಮೇಲೆ ಕನ್ಯಾಕುಮಾರಿಯತ್ತ ತೆರಳಿದ ನಂತರ, ಲಾರಿ ಯಾರ್ಡಿನ ಪಿ.ಆರ್.ಒ ಬಳಿ, ಅಲ್ಲಿಯೇ ಕಸಗುಡಿಸುವ ಕಾಯಕಕ್ಕಾಗಿ ಮೊರೆಯಿಡುತ್ತಾಳೆ. ಆಕೆಯ ಸ್ಥಿತಿ ಕಂಡು ಕನಿಕರಿಸಿದ ಪಿ.ಆರ್.ಒ ಕೊಡಿಸುವ, ಹರಿಶ್ಚಂದ್ರ ಘಾಟಿನಲ್ಲಿ ಗುಂಡಿ ತೋಡುವ ಕೆಲಸವನ್ನೇ ಮಹತ್ಕಾರ್ಯವೆಂದು ಭಾವಿಸಿ, ಲಗಾಟಿ ಮತ್ತು ಸರಸಿಯೊಂದಿಗೆ ಸ್ಮಶಾನದೆಡೆಗೆ ನಡೆಯುತ್ತಾಳೆ.

ಮಗಳ ಬದುಕಿಗೆ ನೆಲೆ ಕಾಣಿಸಲು ಚಿರಶಾಂತಿಧಾಮವೂ ಒಂದು ದಾರಿಯಾಗಬಹುದೆಂಬ ನಿರೀಕ್ಷೆಯಲ್ಲಿದ್ದವಳ ಶಾಂತಿಯನ್ಬು ಬೆಂಗಳೂರಿನ ಕಾಳರಾತ್ರಿಯ ಚಟುವಟಿಕೆಗಳು ಕದಡಲಾರಂಭಿಸುತ್ತವೆ. ಪ್ರತಿಫಲವಾಗಿ ಮಾರುತಿ ಮತ್ತು ಲಗಾಟಿ ಜೈಲುವಾಸ ಅನುಭವಿಸಬೇಕಾದುದಷ್ಟೇ ಅಲ್ಲದೇ ಮಾರುತಿ ತನ್ನ ಡ್ರೈವರ್‌ ಕೆಲಸವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಕೊನೆಗೆ, ಸತ್ತವರನ್ನು ತನ್ನಲ್ಲಿ ಮಣ್ಣಾಗಿಸಿಕೊಳ್ಳುವ ಹರಿಶ್ಚಂದ್ರ ಘಾಟಿಯೇ ಈ ಸಂಸಾರದ ಹೊಟ್ಟೆ ಪೊರೆಯುವ ಕಾರ್ಯಸ್ಥಳವೂ ಆಗುತ್ತದೆ.

ಕನಸು ಕಂಗಳೊಡನೆ ಮಹಾನಗರಕ್ಕೆ ಬರುವ ಮುಗ್ದ ಜನರ ಕನಸುಗಳು, ಮಾನವೀಯತೆಯೇ ಮರೆಯಾದ ಅಧಿಕಾರಸ್ಥರ, ಪಟ್ಟಭದ್ರ ಹಿತಾಸಕ್ತಿಗಳ ಕಾಲ್ತುಳಿತಕ್ಕೆ ಸಿಕ್ಕಿ ನಲುಗಿಹೋಗುವಂತಹ ದೃಶ್ಯಗಳಿಗೆ ಕಾದಂಬರಿಯು ಮುಖಾಮುಖಿಯಾಗಿಸುತ್ತದೆ. ಎಲ್ಲಾ ವರ್ಗದವರಿಗೂ ಹೊಟ್ಟೆ ಹೊರೆಯಲು ಅವಕಾಶ ಒದಗಿಸುವ ಬೆಂಗಳೂರಿನಂತಹ ನಗರಗಳು, ಅದರ ಜೊತೆಯಲ್ಲಿಯೇ ಸರಿಪಡಿಸಲು ಅಸಾಧ್ಯವೇನೋ ಎಂಬಂತಹ ಕಂದಕಗಳನ್ನೂ ಮನುಷ್ಯರ ನಡುವೆ ಸೃಷ್ಠಿಸುತ್ತಾ ಸಾಗುತ್ತಿವೆ. ಧನದಾಹ ಬದುಕಿರುವ ಮನುಷ್ಯರನ್ನಷ್ಟೇ ಕಾಡದೇ,  ಸತ್ತ ದೇಹಗಳನ್ನೂ ವ್ಯಾಪಾರಕ್ಕಿಟ್ಟು, ಸ್ಮಶಾನದತ್ತಲೂ ತನ್ನ ಕರಾಳ ಕಬಂಧಗಳನ್ನು ಚಾಚುತ್ತಿರುವುದನ್ನು ಕಾಲಯಾತ್ರೆ ತನ್ನ ಒಡಲೊಳಗೆ ಹುದುಗಿಸಿಟ್ಟುಕೊಂಡಿದೆ. ಆರಂಭದಲ್ಲಿ ಸ್ಮಶಾನವನ್ನು ಕಂಡು ಮುನಿಜನರ ಬೀಡಿನಂತೆ ಎಂದು ಭಾವಿಸಿದ ಯರಿಲಕ್ಷ್ಮವ್ವ, ಕೊನೆಗೆ ತನ್ನ ಮಗಳ ಉನ್ನತಿಗಾಗಿ, ಅವಳಿಗೆ ಉತ್ತಮ ಭವಿಷ್ಯ ರೂಪಿಸಲು ಹಾಗೂ ಮಗಳೂ ಸಹ ಎಲ್ಲಿ ತನ್ನಂತೆ ಸ್ಮಶಾನದ ಕಸಗುಡಿಸುವ ಕಾಯಕಕ್ಕೆರಗುತ್ತಾಳೋ ಎಂಬ ಭಯದಿಂದ, ಪಿ.ಆರ್.ಒ ನ ಮುಂದೆ ಬೇರೆ ಕೆಲಸಕ್ಕಾಗಿ ಗೋಳಾಡುವ ರೀತಿ ಪ್ರಸಕ್ತ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.

ಕಾಲಯಾತ್ರೆ ಕೇವಲ ಉಳ್ಳವರು-ಇಲ್ಲದವರ ನಡುವಿನ ಕಂದಕದ ಕುರಿತಲ್ಲದೇ, ಜಾಗತೀಕರಣದ ಫಲವಾಗಿ ಮರೆಯಾಗುತ್ತಿರುವ ಮಾನವ ಸಂಬಂಧಗಳು, ಅದರ ಫಲವನ್ನುಂಡವರು ಮಾನವತ್ವವನ್ನು ಎತ್ತಿ ಹಿಡಿಯಲು ವಿಫಲರಾದ ಬಗೆಯನ್ನು ಸಚಿತ್ರವಾಗಿ ವರ್ಣಿಸುತ್ತದೆ. ದೊಡ್ಡವರ ಆಶಾಡಭೂತಿತನದಿಂದಾಗಿ ಜೀವ ಮತ್ತು ಜೀವನ ಕಳೆದುಕೊಳ್ಳುತ್ತಿರುವ ಮುಗ್ಧ-ಮುಗ್ಧೆಯರ ಸಂಗತಿಗಳು ಅಲ್ಲಲ್ಲಿ ಕಾಣಸಿಗುತ್ತವೆ. ಬದುಕಿನ ರೀತಿಯನ್ನು ಕಟುವಾಗಿ  ವಿಮರ್ಶೆಗೊಳಪಡಿಸಿ, ಅದರ ದಿಟ ಅರ್ಥವನ್ನು ಕಂಡುಕೊಳ್ಳುವ ಅಗತ್ಯವನ್ನು ಕೆಲವು ಪಾತ್ರಗಳು ಸಾರುತ್ತವೆ.

ತಮ್ಮೆಲ್ಲಾ ಪರಿಶ್ರಮದ ಹೊರತಾಗಿಯೂ ಸಿಗಬೇಕಾದ ಭದ್ರತೆ, ಸಮ್ಮಾನ, ಹಣ, ನೆಮ್ಮದಿ, ಜೀವನ ಸಿಗದೇ ನಿಷ್ಫಲರಾಗಿ ಕಾಲ ತಳ್ಳುತ್ತಿರುವವರ ಆಂತರ್ಯದ ಮೌನರೋದನದ ಪ್ರತೀಕವೆಂಬಂತೆ, ಕಾದಂಬರಿಯ ಆರಂಭದಲ್ಲಿ ಜನಪದ ಹಾಡುಗಾರ್ತಿ ದಾನಮ್ಮಳ,

ಭತ್ತ ಬಿತ್ತಿ ಅನ್ನ ಕಾಣೆ

ಹತ್ತಿ ಬಿತ್ತಿ ಬಟ್ಟೆ ಕಾಣೆ

ಕಟ್ಟೊ ಗುಡಿಗೆ ಕಲ್ಲು ಹೊತ್ತು

ದೇವರ ಕಾಣೆನೇ,

ಮಕ್ಕಳ್ಹೆತ್ತು ದೂರವಾಗಿ

ಗಂಡನಿಲ್ಲದ ಲೋಕ ಕಂಡು

ಬರಿಗೈಲೆ ನಿಂತ;

ತಾಯಿಯಾದೆನೆ!

ಎಂಬ ಪದಗಳನ್ನು ಹನೂರರು ಉಲ್ಲೇಖಿಸುವ ಮೂಲಕ, ತಮ್ಮ ಕಾದಂಬರಿಯ ವಸ್ತುವನ್ನು ಮೊದಲೇ ಧ್ವನಿಸಿದಂತೆ ಕಾಣುತ್ತದೆ.

ಈ ಎಲ್ಲ ಅಸಮಾನತೆ, ಏರುಪೇರುಗಳನ್ನು ತೊಡೆಯುವ ಮಾರ್ಗವೂ ಸಹ ಕಾದಂಬರಿಯ ಅಂತ್ಯದಲ್ಲಿ ಗೋಚರವಾಗುತ್ತದೆ. ಅಪ್ಪನ ಭಾರವಾದ ಟ್ರಂಕಿನಲ್ಲಿ ಇದ್ದಿರಬಹುದಾದ ಮುತ್ತು, ರತ್ನ, ಚಿನ್ನಾಭರಣಗಳ ನಿರೀಕ್ಷೆಯ  ಕಣ್ಗಳಲ್ಲಿ ಅಪ್ಪ ಟ್ರಂಕನ್ನು ತೆರೆಯುವುದನ್ನೇ ನೋಡುತ್ತಿದ್ದ ಸರಸಿ, ಅಲ್ಲಿ ತಾನೆಣಿಸಿದಂತೆ ಆಭರಣಗಳಿಲ್ಲದೇ ಚಿಕ್ಕ ಚಿಕ್ಕ ಪುಸ್ತಕಗಳನ್ನು ಕಂಡು ಮತ್ತೂ ಆಶ್ಚರ್ಯದಿಂದ ಕಣ್ಣರಳಿಸುವುದನ್ನು ಕಂಡ ಮಾರುತಿ, ತನ್ನ ಎಂಟು ವರ್ಷದ ಮಗಳು ಸರಸಿಗೆ ಒಂದು ಹಾಳೆ ಕೊಟ್ಟು ಓದಲು ಹೇಳುತ್ತಾನೆ. ಸರಸಿ ಒಂದೊಂದಾಗಿ ಅಕ್ಷರ ಕೂಡಿಸಿ ಓದಲಾರಂಭಿಸಿದಾಗ ತಾನು ಅದರ ಅರ್ಥ ಹೇಳಲು ತೊಡಗುತ್ತಾನೆ. “ತಾಯಿ ಸರಸ್ವತಿಯೇ ನಿನ್ನ ಮೈ ಮೇಲಿನ ಮುತ್ತು, ರತ್ನ, ಮರಕತ, ಮಾಣಿಕ್ಯದ ಆಭರಣಗಳೆಂದರೆ ಬೇರಿನ್ನೇನು ಆಗಿರಲು ಸಾಧ್ಯ! ಅದು ಅಕ್ಷರಗಳೇ ಅಲ್ಲವೆ? ಅದರ ಕಾಂತಿಯ ಬೆಳಕನ್ನು ನನಗೂ ಕರುಣಿಸುವವಳಾಗು, ಆ ದೀಪದಡಿಯಲ್ಲಿ ನಾನೂ ಈ ಮುಂದಿನ ಕಥೆಯನ್ನು ಲೋಕದ ಜನಕ್ಕೆ ಹೇಳುವಂಥವನಾಗುತ್ತೇನೆ..” ಈ ಎಲ್ಲ ಸಾಮಾಜಿಕ ಕಾಯಿಲೆಗಳಿಗೂ ಮದ್ದು ಇಂದಿನ ಸ್ಥಿತಿಯಲ್ಲಿ ಶಿಕ್ಷಣವಲ್ಲದೇ ಮತ್ತೇನು ಎಂದು ಕಾದಂಬರಿಕಾರರು ಓದುಗರನ್ನೇ ಪ್ರಶ್ನಿಸಿದಂತಿದೆ. ಕಾದಂಬರಿಯ ಅಂತ್ಯದಲ್ಲಿ, ನರನಾಡಿಯಲ್ಲೆಲ್ಲಾ ಅಕ್ಷರಕ್ರಾಂತಿಯ ಬೆಳಕು ಪ್ರವಹಿಸಿದಂತಾಗುತ್ತದೆ.

ಹನೂರರು, ಕಾದಂಬರಿಯುದ್ದಕ್ಕೂ ತಮ್ಮ ಕಥಾವಸ್ತುವಿಗೆ ಪೂರಕವಾಗಿ ಹಲವು ಕಥೆಗಳನ್ನು ಹೆಣೆಯುತ್ತಾ ಸಾಗುತ್ತಾರೆ. ಪಂಚತಂತ್ರ, ಈಸೋಪನ ನೀತಿಕಥೆಗಳಲ್ಲಿರುವಂತೆ, ಕಾಲಯಾತ್ರೆಯಲ್ಲಿನ ಪ್ರಾಣಿಗಳು ಸಹ ಮಾತನಾಡುವುದು, ಓದುಗನನ್ನು ಒಂದು ಹೊಸಲೋಕಕ್ಕೆ ಕೊಂಡೊಯ್ದಂತೆ ಭಾಸವಾಗುತ್ತದೆ, ಮಾರುತಿಯ ಸಂಸಾರದ ಮತ್ತೊಬ್ಬ ಸದಸ್ಯ ಸಿಂಗ, ಜೇವರ್ಗಿಯಿಂದ ತನ್ನ ಒಡೆಯ ಲಗಾಟಿಯ ತೋಳುಗಳಲ್ಲಿ ಭದ್ರವಾಗಿ ಬೆಂಗಳೂರು ಸೇರಿದ ನಾಯಿಮರಿ ಸಿಂಗ ಈಗ ಯೌವನಾವಸ್ಥೆಯನ್ನು ತಲುಪಿದೆ. ತನ್ನ ಕಣ್ಣೆದುರಿಗೇ ತನ್ನ ಒಡೆಯರಿಗಾದ ಅನ್ಯಾಯವನ್ನು ಪ್ರತಿಭಟಿಸುವ, ಹೋರಾಡುವ, ಅದಕ್ಕಾಗಿ ಪೆಟ್ಟನ್ನೂ ತಿನ್ನುವ ಏಕೈಕ ಜೀವಿ ಆತ. ಸಿಂಗ ತನ್ನ ಗೆಳೆಯ ಅಡವಿಚಂಚು ಬೊಮ್ಮಿಲರಾಜುವನ್ನು ಕುರಿತು ವರ್ಣಿಸುವ ರೀತಿಯನ್ನು ಹನೂರರು ಮನೋಜ್ಞವಾಗಿಸುತ್ತಾರೆ, ಓದುಗನಿಗೆ ಈ ಸಂಗತಿಗಳು ಕೆಲವೊಮ್ಮೆ ಕಚಗುಳಿಯಿಟ್ಟಂತೆನಿಸುತ್ತದೆ. ಮಾನವ ತನ್ನ ಹೆಸರಿಗೆ ಅನ್ವರ್ಥವಾದ ಮಾನವೀಯತೆಯನ್ನೇ ಮರೆತು ದುಷ್ಟತನವನ್ನೇ ಮೈಗೂಡಿಸಿಕೊಂಡಿರುವ ಸಂದರ್ಭದಲ್ಲಿ, ಆ ಎಲ್ಲಾ ಮಾನವೀಯ ಗುಣಗಳನ್ನು ಪ್ರಾಣಿಗಳಿಗೆ ಆವಾಹಿಸುತ್ತಾರೆ ಹನೂರರು.

ನಗರದ ಕಥೆ ಹೇಳುವಾಗಲೂ, ತಮ್ಮ ಕಾರ್ಯಕ್ಷೇತ್ರವಾದ ಜನಪದವನ್ನು ಹದವಾಗಿ ಕಥೆಗೆ ಪೂರಕವೆನ್ನುವಂತೆ ಬಳಸುತ್ತಾರೆ ಹನೂರರು. ಮಾರುತಿ, ಲಗಾಟಿಯರು ತಮ್ಮ ದುಃಖ-ದುಮ್ಮಾನಗಳನ್ನು ಮರೆತು, ಬಯಲಾಟದ ಪ್ರಸಂಗವನ್ನು, ಪದಗಳನ್ನೂ ಹಾಡುವ ಪರಿ ಕಾದಂಬರಿಯನ್ನು ಕಾವ್ಯಾತ್ಮಕವಾಗಿಸುತ್ತದೆ. ಹನೂರರ ಕಥನ ಶೈಲಿ ಹಾಗೂ ಕಾವ್ಯರೂಪಕ, ಕಾದಂಬರಿಗೆ ಒಂದು ಲಯವನ್ನು ನೀಡುವ ಮೂಲಕ ಅದನ್ನು ವಿಶಿಷ್ಢವಾಗಿಸಿರುವುದು ಮಾತ್ರವಲ್ಲದೆ ಕಥನಕಾವ್ಯವನ್ನಾಗಿಸಿದೆ.

ಸಮಾಜದ ಕ್ರೌರ್ಯವನ್ನೇ ಕಾಲಯಾತ್ರೆ ಮುಖ್ಯವಾಗಿಸಿಕೊಂಡಿದ್ದರೂ, ಹಲವು ನವಿರು ಹಾಸ್ಯ ಸಂಗತಿಗಳಿಂದ ಓದುಗರಿಗೆ ಮುದ ನೀಡುತ್ತದೆ. ಜೈಲಿನಲ್ಲಿದ್ದಾಗ್ಯೂ ತಮ್ಮ ಕಷ್ಟ ಬದಿಗೊತ್ತಿ ಮಾರುತಿ ಹಾಡುವ ಪದಗಳು ಆ ಮುಗ್ಧರ ಜೀವಂತಿಕೆಯನ್ನು ಸಾರುತ್ತವೆ. ಒಂದೇ ರೀತಿಯ ಕಥನಕ್ರಮ ಅಥವಾ ನಿರೂಪಣಾಶೈಲಿ ಉಂಟುಮಾಡುವ ಏಕತಾನತೆಯಿಂದ ಸದರಿ ಕಾದಂಬರಿ ಮುಕ್ತವಾಗಿದ್ದು, ಹಲವು ಬಗೆಯ ನಾವೀನ್ಯತೆಗೆ ತನ್ನನ್ನು ತಾನು ಒಡ್ಡಿಕೊಳ್ಳುತ್ತದೆ. ವಿವಿಧ ತಂತ್ರಗಾರಿಕೆಗೆ ಒಳಗಾಗಿರುವುದು ಕೃತಿಯನ್ನು ಮತ್ತಷ್ಟು ವಿಶಿಷ್ಟವನ್ನಾಗಿಸಿದೆಯೇ ವಿನಃ ಅದಕ್ಕೆ ಯಾವುದೇ ಚ್ಯುತಿಯುಂಟಾಗದಿರುವುದು, ಕಾದಂಬರಿಕಾರರ ಕಲಾನೈಪುಣ್ಯತೆಗೆ ಸಾಕ್ಷಿಯಾಗಿದೆ.

ಮನುಕುಲವು ತನ್ನ ಆದಿಯಿಂದ ಇಲ್ಲಿಯವರೆಗಿನ ಪಯಣದಲ್ಲಿ ಹಲವು ಏಳುಬೀಳುಗಳಿಗೆ, ಬದಲಾವಣೆಗಳಿಗೆ ಈಡಾಗಿದ್ದು, ಅದಕ್ಕೆ ಸಾಕ್ಷಿಯಾಗಿರುವ ಕಾಲವು ನಿರಂತರವಾಗಿ, ಎಗ್ಗಿಲ್ಲದೇ ಸಾಗುತ್ತಾ ಬಂದಿದೆ. ಕಾಲನೂ ಸಹ ಅವ್ಯಾಹತವಾಗಿ ತನ್ನ ಕಾರ್ಯವನ್ನು ನೆರವೇರಿಸುತ್ತಾ ಪಯಣ ಮುಂದುವರಿಸಿದ್ದಾನೆ. ಎಡೆಯಿಲ್ಲದೇ ಸಂವಹಿಸುತ್ತಿರುವ ಈ ಕಾಲದ್ವಯರ ಯಾತ್ರೆ ತಡೆಯಿಲ್ಲದ್ದು, ಇದನ್ನು ಅರ್ಥೈಸಿಕೊಳ್ಳದ ಮಾನವನ ವರ್ತನೆ ಅಂಕೆ ಮೀರಿದಂತದ್ದು. ದೇಶವನ್ನೆಲ್ಲಾ ಸುತ್ತಿ ತಮಗೆ ವಹಿಸಿದ್ದೆಲ್ಲಾ ಘನಕಾರ್ಯವನ್ನು ಮುಗಿಸಿ ಗಜಗಾಂಭೀರ್ಯದಿಂದ ವಾಪಸ್ಸಾಗುವ ಲಾರಿಗಳ ತಂಗುದಾಣ ಮಾತ್ರ ಧೂಳುಮಯ. ಅಂತೆಯೇ, ರಾಡಿಯಾದ ಮಾನವ ಜೀವನ ಹಾಗೂ ಮಸುಕಾದ ಮಾನವತ್ವವನ್ನು ಯಥಾವತ್ತಾಗಿ, ಕಣ್ಣಿಗೆ ರಾಚುವಂತೆ ನಮ್ಮ ಮುಂದಿಡುತ್ತದೆ ಕೃಷ್ಣಮೂರ್ತಿ ಹನೂರರ ಕಾದಂಬರಿ ಕಾಲಯಾತ್ರೆ.

 

One comment to “ಅಮಾನುಷ ಜಗದೊಳಗೊಂದು ಪಯಣ : ಹನೂರರ “ಕಾಲಯಾತ್ರೆ””
  1. ತುಂಬಾ ಅದ್ಭುತವಾಗಿ ಕಾಲಯಾತ್ರೆ ಕಾದಂಬರಿಯನ್ನು ಸೆರೆ ಹಿಡಿದು ಅದರ ಒಳನೋಟಗಳನ್ನು ಬಗೆದು ನೋಡುವ ಪ್ರಯತ್ನ ಸಫಲವಾಗಿದೆ, ನಿಮಗೆ ಅನಂತ ಅನಂತ ಧನ್ಯವಾಗಳು ನಿಮ್ಮ ವಿಮರ್ಶೆಯ ಬರಹ ನನ್ನ ಅಜ್ಞಾನ ಮತಿಯನ್ನು ಸಾಣೆ ಹಿಡಿದು ಸೂಕ್ಷ್ಮ ನೆಲೆಗೆ ಎಳೆದೊಯ್ದಿದೆ. ಸಾವಿರದ ನಮನಗಳು.

Leave a Reply to ಪರಮೇಶ ಕೆ. Cancel reply