ಸರ್ಕಾರದ ಉಚಿತ ಕೊಡುಗೆಗಳು ಬೇಜಾವಾಬ್ದಾರಿ ಆರ್ಥಿಕ ದುಂದುವೆಚ್ಚವಲ್ಲ

ತಮಿಳುನಾಡಿನ ಹೊಸ ಆರ್ಥಿಕ ಮತ್ತು ಮಾನವ ಸಂಪನ್ಮೂಲ ಸಚಿವರಾದ ಪಿ.ಟಿ.ಆರ್. ಪಳನಿವೇಲ್ ತ್ಯಾಗರಾಜನ್ ಇಲ್ಲಿ ಹೆಚ್ಚಿನ ಜನ ಅಂದುಕೊಂಡಿರುವಂತೆ ಸರ್ಕಾರದ ಕೆಲವು ಜನಪ್ರಿಯ ಉಚಿತ ಯೋಜನೆಗಳು ಯಾಕೆ ಕೇವಲ ಜನರಿಗೆ ಬಿಟ್ಟಿಯಾಗಿ ಕೊಡುವ ಯೋಜನೆಗಳಲ್ಲ . ಅವು ಹೇಗೆ ಸಮಾಜ ಕಲ್ಯಾಣಕ್ಕೆ ಪೂರಕವಾದವು ಎಂದು ವಾದಿಸಿದ್ದಾರೆ.

ನನ್ನ ದೃಷ್ಟಿಯಲ್ಲಿ ಜನಪ್ರಿಯ ಎಂದೆನಿಸಿಕೊಳ್ಳಬಹುದಾದ ಉಚಿತ ಸವಲತ್ತುಗಳು ಅಥವಾ ಸರ್ಕಾರದ ಕೊಡುಗೆಗಳ ರೂಪದಲ್ಲಿರುವ “ಸಮಾಜವಾದವು”(ಸೋಷಿಯಲಿಸಮ್), ಸರ್ಕಾರದ ನೀತಿಗಳಲ್ಲಿ ಎಷ್ಟರಮಟ್ಟಿಗೆ ವ್ಯಕ್ತವಾಗುತ್ತಿವೆ ಮತ್ತು ಇವುಗಳು ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರಿವೆ ಅನ್ನುವಂಥಾದ್ದು ಸಂಬಂಧಪಡದಂತಹ ಪ್ರಶ್ನೆ . ಆ ದೃಷ್ಟಿಕೋನದಲ್ಲಿ ನಾನು ಹೇಳುವುದೇನೆಂದ್ರೆ, ಎಲ್ಲಾ ಉಚಿತ ಕೊಡುಗೆಗಳನ್ನೂ ಅಥವಾ ಎಲ್ಲಾ ಸಮಾಜ ಕಲ್ಯಾಣ ಯೋಜನೆಗಳನ್ನೂ  ಆರ್ಥಿಕ ದುಂದುವೆಚ್ಚವೆಂದಾಗಲೀ ಅಥವಾ ಬೇಜವಾಬ್ದಾರಿಯೆಂದಾಗಲೀ ವರ್ಗೀಕರಿಸುವುದು ತುಂಬಾ ಕಷ್ಟ.

೧೫ ನೇ ಹಣಕಾಸು ಆಯೋಗದವರು ಇಲ್ಲಿ ಬಂದಿದ್ದಾಗ,  ನಾನು ಡಿಎಂಕೆ ಪರವಾಗಿ, ಅವರ ಮುಂದೆ ಈ ಹೇಳಿಕೆ ನೀಡಿದ್ದೆ.  ನಾನು ಆಗ ಹೇಳಿದ್ದು,  ಉಚಿತ  ಕೊಡುಗೆಗಳಲ್ಲಿ ಕನಿಷ್ಟ ಮೂರು ಅಥವಾ ನಾಲ್ಕು ರೀತಿಯವುಗಳಿವೆ.  ಮಧ್ಯಾಹ್ನದ ಬಿಸಿಯೂಟದ ಯೋಜನೆಯಂತಹವು ಇವೆ; ಅವನ್ನು ನಾವು ವಾರ್ಷಿಕ ಆಯವ್ಯಯದೊಳಗೆ ಸೇರಿಸಿ ಲೆಕ್ಕ ಮಾಡುತ್ತೇವೆ.  ಆದರೆ ವಾಸ್ತವವಾಗಿ, ನನ್ನ ಅಭಿಪ್ರಾಯದಲ್ಲಿ,  ಅದು ಮಾನವಸಂಪನ್ಮೂಲವನ್ನು ಬೆಳವಣಿಗೆ ಮಾಡುವ ಮಾಡುವ ಬಂಡವಾಳ ಹೂಡಿಕೆ. ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಕೊಡುವಂತಹ ಯೋಜನೆಳಿವೆ; ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್‌ ಕೊಡುವ ಯೋಜನೆಗಳಿವೆ; ಇಂತಹವನ್ನೂ ಸಹ ಆಯವ್ಯಯದೊಳಗಿನ ವಸ್ತುವಾಗಿಸದೇ, ನಾನಿದನ್ನು  ಭವಿಷ್ಯಕ್ಕಾಗಿ ಬಂಡವಾಳ ಹೂಡಿಕೆ ಎಂದೇ ಪರಿಗಣಿಸ್ತೇನೆ. ಇನ್ನೂ ಮುಂದೆ ಸಾಗಿ ಹೇಳುವುದಾದರೆ, ಆರೋಗ್ಯ ವಿಮೆಯಂತಹ, ವಿಮಾ ವಲಯದಲ್ಲಿಯೂ ಸಹ ಅವಕಾಶ ಇದೆ, ಹಾಗೂ ಮದುವೆಗೆ ಸಹಾಯಧನಗಳಂತಹ ಅವಕಾಶಗಳೂ ಇವೆ.  ಏಕೆಂದರೆ ಒಂದು ಅಭಿವೃದ್ದಿಶೀಲ ಆರ್ಥಿಕತೆಯನ್ನು ವ್ಯಾಸಂಗ ಮಾಡುವಾಗ, ನಾವು ಹೇಳುವುದೇನೆಂದರೆ,  ಒಬ್ಬ ಮನುಷ್ಯ ಅಥವಾ ಒಂದು ಸಮಾಜವನ್ನು ತಳಮಟ್ಟದಿಂದ ಮೇಲ್ಮಟ್ಟಕ್ಕೆ ಎತ್ತುವುದು ಒಂದು ವಿಚಾರವಾದರೆ,  ಅವರನ್ನು ಮೇಲ್ಮಟ್ಟದಲ್ಲಿಯೇ ಉಳಿಯುವಂತೆ ಗಮನಹರಿಸುವುದು ಇನ್ನೊಂದು ವಿಚಾರ.  ಅವರನ್ನು ಮೇಲ್ಮಟ್ಟದಲ್ಲಿ ಉಳಿಯದೇ ಇರುವಂತೆ ಮಾಡುವ ವಿಚಾರಗಳೆಂದರೆ, ಕೆಲವು ಸಂದರ್ಭಗಳಲ್ಲಿ ಅಕಾಲಿಕವಾಗಿ ಎದುರಾಗುವ ಘಟನೆಗಳಾದರೆ, ಬಹುತೇಕ ಸಂದರ್ಭಗಳಲ್ಲಿ ಮದುವೆಯಂತಹ ದೊಡ್ಡ ಖರ್ಚಿನ ಘಟನೆಗಳು. ಹೌದಲ್ವಾ?

ಮದುವೆಯ ಸಂದರ್ಭದಲ್ಲಿ ಖರ್ಚು ಮಾಡಬೇಕೆನ್ನುವುದು ಖಂಡಿತಾ ಎಲ್ಲರಿಗೂ ಗೊತ್ತೇ ಇರುತ್ತದಾದರೂ,  ದಿನಗೂಲಿ ಕೆಲಸಗಾರರು ಅಥವಾ 20000 ರೂಪಾಯಿ ತಿಂಗಳ ಸಂಬಳದ ನೌಕರರು  ಹೇಗೆ ತಾನೇ ಖರ್ಚು ಮಾಡಿಯಾರು?  ವಿಶೇಷವಾಗಿ  ದೇಶದ ಬ್ಯಾಂಕಿಂಗ್‌ ವ್ಯವಸ್ಥೆ ಸಾಕಷ್ಟು ಪರಿಣಾಮಕಾರಿಯಾಗಿಲ್ಲದಿರುವಾಗ ಮತ್ತು ಸಾಲಸೌಲಭ್ಯದ ಅವಕಾಶಗಳು ಚೆನ್ನಾಗಿಲ್ಲದಿರುವಾಗ,  ಅಡಮಾನವಿಲ್ಲದೆ ಸಾಲ ಸಿಗುವುದಿಲ್ಲ ಎನ್ನುವ ಪರಿಸ್ಥಿತಿಯಿದ್ದಾಗ, ಅಂತಹವರು ಸಾಲ ಕೊಡುವ ಲೇವಾದೇವಿಯವರ ಬಳಿಯೇ ಹೋಗಬೇಕು.  ಅಂತಹ ಸಮಾಜದಲ್ಲಿ ಒಂದು ಮದುವೆ ಮಾಡುವುದು ಅಂದರೆ ಹತ್ತು ವರ್ಷದಷ್ಟು (ಒಂದು ದಶಕದಷ್ಟು) ಕಾಲ ಒಬ್ಬರನ್ನು ಹಿಂದೆ ತಳ್ಳಿಬಿಡಬಹುದಾದಂತಹ ಲೆಕ್ಕ. ಹೌದಲ್ವಾ?

ಒಬ್ಬರು ಎರಡು ಅಥವಾ ಮೂರು ಲಕ್ಷ ಖರ್ಚು ಮಾಡಬೇಕು,  ಅವರಲ್ಲಿ ಅಷ್ಟು ಹಣ ಇಲ್ಲದಾದಾಗ ಸಾಲ ಮಾಡಲೇಬೇಕು,  ಸಾಲ ಕೊಡುವ ಲೇವಾದೇವಿಯವರ ಬಡ್ಡಿದರಗಳು ಮುಗಿಲೆತ್ತರದಲ್ಲಿರುತ್ತವೆ, ಹಾಗೂ ಆ ರೀತಿಯ ಸಾಲ ಮಾಡಿದವರ ಮುಂದಿನ ಐದು-ಹತ್ತು ವರ್ಷಗಳು ಸಾಲ ತೀರಿಸುವುದರಲ್ಲೇ ಕಳೆದು ಹೋಗುತ್ತವೆ. ಹಾಗಾಗಿ ನಾನು ಮದುವೆ ಸಹಾಯಧನದಂತಹ ಯೋಜನೆಗಳನ್ನೂ ಸಹ, ಒಂದು ಮಟ್ಟಕ್ಕೆ ಏರಿದವರು ಹಿಂದಕ್ಕೆ ಬೀಳದಂತೆ ಕಾಯುವ, ಸಮಾಜ ಕಲ್ಯಾಣ ಯೋಜನೆಗಳೆಂದೇ ಈ ಸಂದರ್ಭದಲ್ಲಿ ಕರೆಯುತ್ತೇನೆ.

ನಾನು ವೈಯಕ್ತಿಕವಾಗಿ ಕೆಲವು ಯೋಜನೆಗಳನ್ನು ಪರಿಶೀಲಿಸಿದಾಗ, ಅವು ಕಾರ್ಯರೂಪಕ್ಕೆ ತರಲು ಅಸಾಧ್ಯವಾದಂತಹವು ಅಥವಾ ಅವುಗಳನ್ನು ಯೋಜಿಸಿ ರೂಪಿಸಿರುವ ರೀತಿಯೇ ತಪ್ಪು, ಅಥವಾ ಅವುಗಳನ್ನು ಕೈಗೆತ್ತಿಕೊಳ್ಳಲೇ ಬಾರದಾಗಿತ್ತು ಎಂದು ಹೇಳುತ್ತೇನೆ. ನಾವಿಲ್ಲಿ ವಿಶದವಾಗಿ ಮಾತನಾಡುತ್ತಿರುವುದರಿಂದ ಈಗ ನಾನು ಅದಕ್ಕೆ ಮೂರ್ನಾಲ್ಕು ಉದಾಹರಣೆಗಳನ್ನು ಕೊಡಬಹುದು. ನನ್ನ ದೃಷ್ಟಿಯಲ್ಲಿ ನರೇಗಾ(ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಯೋಜನೆಯಲ್ಲಿ,  ಕೊಡುವ ವೇತನಕ್ಕೆ ತಕ್ಕುದಾದ ರಚನಾತ್ಮಕ ಕೆಲಸಗಳು ನಡೆದದ್ದೇ ಆದರೆ, ಅದೊಂದು ಅದ್ಭುತ ಯೋಜನೆ ಅನಿಸಿಕೊಳ್ಳುತ್ತದೆ. ಹೌದು, ಒಂದು ಕನಿಷ್ಟ ಮೊತ್ತದ ವೇತನವನ್ನೇ ಪರ್ಯಾಯ ರೂಪದಲ್ಲಿ ಕೊಡಲಾಗುವಂತಹ ಯೋಜನೆ ಇದು ಎಂಬುದನ್ನು ನಾನು ಒಪ್ಪುತ್ತೇನೆ. ಇಲ್ಲಿ ಕನಿಷ್ಟ ವೇತನವೂ ಅನಿಸದ ರೀತಿ ಕೆಲಸವನ್ನೇ ಮಾಡಿಸದೇ  ವೇತನವನ್ನು ನೀಡುವಂತಿದ್ದರೆ, ಇದನ್ನು ಪಾರಿಭಾಶಿಕ ಭಾಷೆಯಲ್ಲಿ ಹೇಳುವುದಾದರೆ, ನೀವು ಹಣದುಬ್ಬರವನ್ನು ಸೃಷ್ಟಿಸುತ್ತಿದ್ದೀರಿ. ಅಂದರೆ ನೀವು ವ್ಯವಸ್ಥೆಯಲ್ಲಿ ಯಾವುದೇ ಉತ್ಪಾದಕತೆಯಿಲ್ಲದೆ ಹೆಚ್ಚು ಹೆಚ್ಚಾಗಿ ಹಣವನ್ನು ತೊಡಗಿಸುತ್ತಿದ್ದೀರಿ. ಇದು ಹಣದುಬ್ಬರದ (Inflation)ವ್ಯಾಖ್ಯಾನ. ಸರಿ ತಾನೇ? ಹಣದ ಪೂರೈಕೆ ಹೆಚ್ಚಾಗಿದ್ದು ಇರುವಷ್ಟೇ, ಅಥವಾ ಇದ್ದುದಕ್ಕಿಂತ ಕಡಿಮೆಯಾದ ಪ್ರಮಾಣದ ಸರಕನ್ನು ಬೆನ್ನಟ್ಟುವುದರ ಅರ್ಥವೇ “ಹಣದುಬ್ಬರ”. ಅದರ ಬದಲಾಗಿ ಜನರು ನಿಜವಾಗಲೂ ಏನಾದರೂ ಕೆಲಸ ಮಾಡಿದರೆ, ಅಂದರೆ ರಸ್ತೆ ಬದಿಯ ಗಿಡಗಂಟೆಗಳನ್ನು ಸವರುವುದು, ವ್ಯವಸಾಯದ ಕೆಲಸಗಳಲ್ಲಿ ಜತೆಯಾಗುವುದು – ಹೀಗೆ ಮಾಡಬೇಕಾದದ್ದು ಎಷ್ಟೊಂದು ಕೆಲಸಗಳಿರುತ್ತವೆ. ಈ ರೀತಿಯಲ್ಲಿ ಕೆಲಸಗಳಾದಾಗ, ಅದು 1940ರ ಮಹಾಯುದ್ಧದ ನಂತರದ “ಮಹಾನ್ ಕಾರ್ಯಗಳ” ನ್ನು ರೂಪಿಸಿದಂತೆ, ಅಂದರೆ ಅಧ್ಯಕ್ಷ ಐಸೆನ್ಹವರ್ ಅಧಿಕಾರದಲ್ಲಿ ಅಂತರ ರಾಜ್ಯ ರಸ್ತೆ ನಿರ್ಮಾಣ ಕಾಮಗಾರಿ ಮಾಡಿದಂತೆ ಆಗುತ್ತದೆ. (ಅವರಿಗೆ ಆಗ ನಿಜವಾಗಿ ರಸ್ತೆಗಳ ಅಗತ್ಯ ಇರಲಿಲ್ಲ, ಉದ್ಯೋಗಾವಕಾಶ ಕಲ್ಪಿಸಬೇಕಾದ ಅಗತ್ಯವಿತ್ತಷ್ಟೇ) ಹಾಗೆ ಉದ್ಯೋಗಾವಕಾಶ ಕಲ್ಪಿಸುವ ಭರದಲ್ಲಿ ಅವರು ಒಂದು ಅತ್ಯದ್ಭುತವಾದ ರಸ್ತೆ ಜಾಲವನ್ನು ನಿರ್ಮಿಸಿಬಿಟ್ಟರು. ಇದರಿಂದಾಗಿ ಅವರ ಆರ್ಥಿಕತೆಯು ಮುಂದಿನ ಇಪ್ಪತ್ತು ಮೂವತ್ತು ವರ್ಷಗಳವರೆಗೆ ದೊಡ್ಡ ಬದಲಾವಣೆ ಕಂಡಿತು. ಏಕೆಂದರೆ ಈ ಉತ್ತಮ ಸಾರಿಗೆ ವ್ಯವಸ್ಥೆ, ಅದರಿಂದಾದ ತಗ್ಗಿದ ಸಾಗಾಣಿಕೆ ಖರ್ಚು, ತಗ್ಗಿದ ಸಾಗಾಣಿಕೆ ಸಮಯ, ಇಂತಹ ಉತ್ತಮವಾದ ಆರ್ಥಿಕ ಮೌಲ್ಯಗಳನ್ನು ವ್ಯವಸ್ಥೆಗೆ ಸೇರಿಸಿತು. ಇದರಿಂದ ಮುಂದೆ ಉತ್ಪಾದನೆಗೆ ಒಂದು ದೊಡ್ಡ ಪ್ರೋತ್ಸಾಹ ದೊರೆಯಿತು. ಹಾಗಾಗಿ, ಒಂದು ಯೋಜನೆಯನ್ನು ಕಾರ್ಯರೂಪಕ್ಕೆ ತರುವಾಗ ಅತ್ಯದ್ಭುತ ಯೋಜನೆಯೂ ಆಗಬಹುದು, ಅಥವಾ ಹಣದುಬ್ಬರ ಉಂಟುಮಾಡುವ ಯೋಜನೆಯೂ ಆಗಿ ಬಿಡಬಹುದು. ಸಾಲದೆಂಬಂತೆ, ಅದನ್ನೂ ಮೀರಿ ಇನ್ನೂ ಎರಡು ಮೂರು ಹೆಜ್ಜೆ ಇಳಿದು ಅಪ್ರಯೋಜಕ ಯೋಜನೆಯೂ ಆಗಬಹುದು.

ನಾನು ಗ್ರಾಮೀಣ ಪ್ರದೇಶಕ್ಕೆ ಹೋಗಿ ಏನೂ ಕೆಲಸ ಮಾಡದೇ ಇರಲು ಜನರಿಗೆ ಹಣ ಕೊಡಲು ಆರಂಭ ಮಾಡಬಹುದು. ಆಗ ಖಂಡಿತವಾಗಿ, ಸಣ್ಣಪುಟ್ಟ ಕೆಲಸ ಮಾಡುವ ಜನರ ವೇತನಗಳು ವಿಪರೀತ ಏರಿಬಿಡುತ್ತದೆ. ಇದರಿಂದ ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಾಗುತ್ತದೆ. ಅಂದರೆ, ಇದೊಂದು ಕಾಲ್ಪನಿಕ ಅಥವಾ ಸೈದ್ಧಾಂತಿಕ ಹಣದುಬ್ಬರವಲ್ಲ. ಇದು ಅಕ್ಕಿ, ತರಕಾರಿಗಳು ಮುಂತಾದ ಗ್ರಾಮೀಣ ಪ್ರದೇಶಗಳಿಂದ ಬರುವ ಮೂಲಭೂತ ಅಗತ್ಯವಸ್ತುಗಳ ಹಣದುಬ್ಬರ. ಈ ಸರಕುಗಳು ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾರ್ಯರೂಪದಲ್ಲಿರುವ ಗ್ರಾಮೀಣ ಪ್ರದೇಶಗಳಿಂದಲೇ ಬರುವಂತಹವು.

ಮುಂದೆ ನಾವು ಹಸು ಸಾಕಾಣಿಕೆ ಮತ್ತು ಕುರಿ/ಮೇಕೆ ಸಾಕಾಣಿಕೆ ಯೋಜನೆಯನ್ನು ಗಮನಿಸೋಣ. ನಾನು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಸದಸ್ಯನಾಗಿರುವುದರಿಂದ ನಾನು ಆ ಲೆಕ್ಕಪತ್ರಗಳ ವರದಿಯನ್ನು ನೋಡುತ್ತೇನೆ. ನನ್ನ ಅಭಿಪ್ರಾಯದಂತೆ ಈ ಹಸು ಸಾಕಾಣಿಕೆ ಮತ್ತು ಕುರಿ/ಮೇಕೆ ಸಾಕಾಣಿಕೆ ಯೋಜನೆಗಳು ಕಾರ್ಯರೂಪಕ್ಕೆ ತರುವಂತಹವುಗಳೇ ಅಲ್ಲ. ಅವುಗಳು ಅತ್ಯಂತ ಸಂಕೀರ್ಣವಾದವು. ಅಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕಾದರೆ, ವಿಪರೀತ ಲೆಕ್ಕ ಪತ್ರ ಪರಿಶೋಧನೆಗಳು ನಡೆಯಬೇಕಾಗುತ್ತದೆ. ಅವು ಘೋಷಣೆಗಷ್ಟೇ ಚೆನ್ನಾಗಿವೆ ; ಅಂದರೆ ಅವುಗಳು ಆಕರ್ಷಕವಾಗಿ ತೋರುತ್ತವೆ. ಆದರೆ ಅವುಗಳು ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರಲು ಲಾಯಕ್ಕಾದಂತಹವಲ್ಲ. ಏಕೆಂದರೆ ಅವು ವಿಫಲವಾಗಲು ಬೇಕಾದಷ್ಟು ದಾರಿಗಳಿವೆ; ಹಾಗೂ ಪ್ರತೀ ಬಾರಿ ಲೆಕ್ಕಪರಿಶೋಧನೆ ವರದಿಯಲ್ಲಿ ಅವು ವಿಫಲವಾಗುವುದನ್ನು ಕಾಣುತ್ತಲೇ ಇರುತೇವೆ. ಇವಲ್ಲದೆ ಮತ್ತೆ ಕೆಲವು ಯೋಜನೆಗಳಿವೆ. ಅವುಗಳನ್ನು ವಿವರಿಸಲು ನನಗೆ ಪದಗಳೇ ಸಿಗುವುದಿಲ್ಲ; ಅಂತಹ ಯೋಜನೆಗಳು.  ಅವು ದೋಷಪೂರಿತ, ಅರ್ಥಹೀನ ಮತ್ತು ನಿರುತ್ಪಾದಕ ಯೋಜನೆಗಳು. ಉದಾಹರಣೆಗೆ ದ್ವಿಚಕ್ರವಾಹನಗಳಿಗೆ ನೀಡುವ ರಿಯಾಯಿತಿ ಅಂದರೆ ಸ್ಕೂಟರ್‌-ಮೋಟಾರ್‌ಬೈಕ್‌ ನಂತಹ ದ್ವಿಚಕ್ರವಾಹನಗಳು. ಇಲ್ಲಿ ಒಂದು ಕಡೆ, ಪ್ರತಿನಿತ್ಯ ಸುಮಾರು ಹನ್ನೆರಡರಿಂದ ಹದಿನಾಲ್ಕು ಕೋಟಿ ನಷ್ಟ ಅನುಭವಿಸುತ್ತಿರುವ, ಸಾರ್ವಜನಿಕ ಸಾರಿಗೆ ಸಂಸ್ಥೆಯನ್ನು ನಡೆಸುತ್ತಿರುವ ಸರಕಾರವಿದೆ. ಎಲ್ಲಿ ಹೆಚ್ಚು ಬೇಡಿಕೆಯಿದೆಯೋ ಅಲ್ಲಿ ಸಾಕಷ್ಟು ಬಸ್ಸುಗಳಿಲ್ಲ. ಬಸ್ಸುಗಳು ಇರುವ ಕಡೆಯೂ ಬೇಡಿಕೆ ಇನ್ನೂ ಹೆಚ್ಚಾಗಿದೆ. ಎಲ್ಲಿ ಲಾಭ ಬರುವುದಿಲ್ಲವೋ ಆ ಮಾರ್ಗಗಳಲ್ಲಿ ಸರಕಾರವು ಹೆಚ್ಚು ಬಸ್ಸುಗಳನ್ನು ಹಾಕುತ್ತಿಲ್ಲ. ಮತ್ತು ನಗರದ ಮಾರ್ಗಗಳಲ್ಲಿ ಹಾಕಲು ಸಾಕಾದಷ್ಟು ಬಸ್ಸುಗಳಿಲ್ಲ. ಹೀಗೆ ಎಲ್ಲಾ ರೀತಿಯಲ್ಲಿಯೂ ವಿಫಲವಾಗುತ್ತಿರುವ ವ್ಯವಸ್ಥೆಯಿದೆ. ಆ ವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತಾ, ಅದಕ್ಕೆ ಹಣ ತೊಡಗಿಸುವ ಮೂಲಕ ಅದನ್ನು ಸರಿಪಡಿಸುವುದರ ಬದಲು ನೀವು ಇನ್ನೇನೋ ಮಾಡಲು ಹೋಗಿ ದ್ವಿಚಕ್ರವಾಹನಗಳನ್ನು ಕೊಡತೊಡಗಿದ್ದೀರಿ. ಇದರಿಂದ ಎಷ್ಟು ಜನರ ಮೇಲೆ ಪರಿಣಾಮ ಬೀರಲು ಸಾಧ್ಯ?. ಇದು ಯೋಜನೆಯ ಕಾಲ್ಪನಿಕ ಹಂತದಲ್ಲಿ, ವಿನ್ಯಾಸದಲ್ಲಿ ಮತ್ತು ಕಾರ್ಯರೂಪಕ್ಕೆ ತರುವಲ್ಲಿ ಎಲ್ಲಾ ವಿಚಾರದಲ್ಲೂ ಕೆಟ್ಟದಾಗಿದೆ. ಒಂದು ಲಕ್ಷ ಜನರಿಗೆ ಇದರಿಂದ ಸಹಾಯ ಮಾಡುತ್ತೇವೆಂದೇನೋ ಹೇಳುತ್ತಾರೆ. ನಮ್ಮ ಜನಸಂಖ್ಯೆ ಸುಮಾರು ಏಳು ಕೋಟಿಯಿದೆ. ಅದರಲ್ಲಿ ಒಂದು ಲಕ್ಷ ಜನರಿಗೆ ಸಹಾಯ ಮಾಡಿ ಏನು ಸಾಧಿಸಿದಹಾಗಾಯ್ತು? ಅದರಿಂದ ಸರಾಸರಿ ಉತ್ಪಾದನೆಗೆ ಹೇಗೆ ಸಹಾಯವಾಗುತ್ತದೆ? ಸಹಾಯ ಧನದ ಮೊತ್ತ 25,000 ರೂಪಾಯಿಗಳು. ಅದು ಬಹು ದೊಡ್ಡ ಮೊತ್ತ. ವಿಧವೆಯರ ಮತ್ತು ಅಂಗವಿಕಲರ ಮಾಸಿಕ ಸಹಾಯಧನ ಸಾವಿರದಿಂದ ಒಂದೂವರೆ ಸಾವಿರ ರೂಪಾಯಿಗಳು. ಅವರ ಎರಡು ವರ್ಷದ ಸಹಾಯಧನದ ಮೊತ್ತವನ್ನು ಒಬ್ಬರಿಗೆ ಒಂದು ಚೆಕ್ ನಲ್ಲಿಯೇ ಕೊಡುತ್ತಿದ್ದೀರಿ. ಈ ವ್ಯವಹಾರದಲ್ಲಿ ಭ್ರಷ್ಟಾಚಾರ ಮೋಸ ನಡೆಯುವುದಿಲ್ಲ ಅಂದುಕೊಂಡಿದ್ದೀರಾ? ಖಂಡಿತವಾಗಿ ದೊಡ್ಡಮಟ್ಟದಲ್ಲಿ ನಡೆಯುತ್ತದೆ. ಅಲ್ಲದೆ ಈಗಾಗಲೇ ಇಕ್ಕಟ್ಟಾಗಿರುವ ರಸ್ತೆಗಳಲ್ಲಿ ಮತ್ತೊಂದು ಲಕ್ಷ ಸ್ಕೂಟರುಗಳೂ ಮೋಟಾರುಬೈಕುಗಳೂ ಬರುತ್ತವೆ. ನೀವು ರಸ್ತೆಸಂಚಾರದಲ್ಲಿ ವಾಹನಗಳ ದಟ್ಟಣೆ ಹೆಚ್ಚಿಸುತ್ತಿದ್ದೀರಿ. ಈ ಒಂದು ಲಕ್ಷ ಜನರಿಗೆ ನೀವು ನೀಡಿರುವ ಸಹಾಯದಿಂದ ಈಗಾಗಲೇ ರಸ್ತೆಯಲ್ಲಿರುವ ಹತ್ತಿಪ್ಪತ್ತು ಲಕ್ಷ ಜನ, ರಸ್ತೆಯ ವಾಹನಗಳ ದಟ್ಟಣೆಯ ಪರಿಣಾಮದಿಂದ ಉತ್ಪಾದಕತೆಯನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ನಷ್ಟ ಅನುಭವಿಸಬೇಕಾಗುತ್ತದೆ. ಹೆಚ್ಚಿದ ವಾಹನ ದಟ್ಟಣೆಯ ಜೊತೆಗೆ ವಾತಾವರಣವೂ ಕಲುಶಿತವಾಗುತ್ತದೆ. ನಿಜಕ್ಕೂ ರಸ್ತೆಯ ಮೇಲೆ ಒಂದು ಲಕ್ಷ ಹೆಚ್ಚುವರಿ ದ್ವಿಚಕ್ರ ವಾಹನಗಳ ಬದಲು ಅದೇ ಜನ, ಇನ್ನೂ ಐವತ್ತರಿಂದ ನೂರು ಹೆಚ್ಚಿನ ಬಸ್ಸುಗಳಲ್ಲಿ  ಸಂಚರಿಸಿದ್ದರೆ ಉತ್ತಮವಾಗಿರುತ್ತಿತ್ತು. ಹಾಗಾಗಿ, ನನ್ನ ಅಭಿಪ್ರಾಯದಲ್ಲಿ ಈ ಯೋಜನೆಯು ದೋಷಪೂರಿತವಾದದ್ದು ಹಾಗೂ ಇದನ್ನು ಕಾರ್ಯರೂಪಕ್ಕೆ ತಂದ ರೀತಿಯೇ ತಪ್ಪಾಗಿದೆ. ಈ ಯೋಜನೆ ಉದ್ಧಾರವಾಗುವ ಸಾಧ್ಯತೆಗಳೇ ಇಲ್ಲ. ಆದರೂ ಪ್ರಯತ್ನ ಮಾಡಲಾಗುತ್ತಿದೆಯೆಂದು ಕೇಳಿದ್ದೇನೆ. ಹಾಗಾಗಿ, ಎಲ್ಲಾ ಯೋಜನೆಗಳೂ ಒಂದೇ ರೀತಿಯವಾ ಅಂದರೆ ಉತ್ತರ ʼಅಲ್ಲʼ ಅನ್ನುತ್ತೇನೆ.  

ಇವುಗಳಿಂದ ಪ್ರತ್ಯೇಕಗೊಂಡು  ಮೂರನೇ ಹಂತಕ್ಕೆ ಸಾಗುತ್ತಾ,  ಈ ಯೋಜನೆಗಳಷ್ಟೇ ರಾಜ್ಯದ ವಿತ್ತೀಯ ಕೊರತೆಗೆ ಕಾರಣಗಳೇ ಎಂದು ಕೇಳುತ್ತೇನೆ.  ನಾನು ಯೊಚಿಸುವುದು, ʼಇಲ್ಲʼವೆಂದೇ.   ನೀವು ಲೆಕ್ಕಾಚಾರ ಮಾಡಿದರೆ,  ತಮಿಳುನಾಡಿನ ವಿತ್ತೀಯ ಕೊರತೆಗೆ ಕಾರಣಗಳು ಶುರುವಾಗುವುದು, ಒಂದು, ರಾಜ್ಯಾದಾಯದ ತಪ್ಪಾದ ನಿರ್ವಹಣೆ. ನಿಮಗೆ ತಿಳಿದಿರಲಿ, 2003 ರಲ್ಲಿ, FRA ಕಾಯ್ದೆ ಜಾರಿಯಾದಾಗಿನಿಂದ 2012 ರ ವರೆಗೆ ರಾಜ್ಯಾದಾಯ ನಿರ್ವಹಣೆಯ ಒಂದು ವಿನ್ಯಾಸ (ಪ್ಯಾಟರ್ನ್‌) ಇತ್ತು. ಆ ಪ್ರಕಾರವಾದರೆ ಈ ಹೊತ್ತಿಗೆ ರಾಜ್ಯಾದಾಯ ಸುಮಾರು ೨೦೦೦೦ ರಿಂದ ೨೫೦೦೦ ಕೋಟಿ ಹೆಚ್ಚು ಇರಬೇಕಿತ್ತು.  ಕಳೆದ ನಾಲ್ಕೈದು ವರ್ಷಗಳಿಂದ ಈಚೆಗೆ ವ್ಯವಸ್ಥೆ ಎಲ್ಲೋ ವೈಫಲ್ಯತೆ ಅನುಭವಿಸಿದೆ.  ಇದು 2014 ರ ನಂತರ ಆಗಿದ್ದು.  ನಾನು ಈ ಒಂದು ದಿನದ ಕಡೆ ಬೆರಳು ಮಾಡಿ ಹೇಳಬಹುದು, ಕನಿಷ್ಟ, ದಾಖಲಾತಿಗಳಲ್ಲಿರುವ ಪ್ರಕಾರ, ಮಾಹಿತಿ ಸೂಚಿಸುವ ಪ್ರಕಾರ, ಜಯಲಲಿತಾರ ಕೈಗಳು ನೇಗಿಲಿನ ಮೇಲಿಂದ ತೆರವಾದ ದಿನದಿಂದ, ಅವರು ಅನಿರೀಕ್ಷಿತವಾಗಿ ಪೂರ್ವಯೋಜನೆಗಳೇನೂ ಇಲ್ಲದಂತೆ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಜೈಲಿಗೆ ಹೋದ ದಿನದಿಂದ, ಹಣಕಾಸು ಪರಿಸ್ಥಿತಿ ಕ್ಷೀಣಿಸಿ ಹಳ್ಳ ಹಿಡಿಯಿತು. ಅದನ್ನು ಲೆಕ್ಕಾಚಾರಗಳ ಮೂಲಕವೇ ತೋರಿಸಬಹುದು, ನಾನು ಹಲವು ಬಾರಿ ಹಾಗೆ ಮಾಡಿಯೂ ಇದ್ದೇನೆ.  ಆ ದಿನದವರೆಗೆ ನಮ್ಮಲ್ಲಿ ೨ ಅಥವಾ ೩ ಸಾವಿರ ಕೋಟಿಗಿಂತ ಹೆಚ್ಚಿನ ವಾರ್ಷಿಕ ವಿತ್ತೀಯ ಕೊರತೆ ಇರಲಿಲ್ಲ. 2003 ರಿಂದ ಈಚಿನ  ಹನ್ನೊಂದು ವರ್ಷಗಳ ತನಕ ಇದ್ದ ಒಟ್ಟು ವಿತ್ತೀಯ ಕೊರತೆ, ೧೦೦೦ ಅಥವಾ ೨೦೦೦ ಕೋಟಿ ಮಾತ್ರ. ಏಕೆಂದರೆ ಡಿಎಂಕೆ ಆಳ್ವಿಕೆಯಲ್ಲಿ ೨೦06 ರಿಂದ ೨೦11 ರ ವರೆಗೆ ರಾಜ್ಯಾದಾಯ ಹೆಚ್ಚಳವಾಗಿರುವಂತೆ ಆಡಳಿತ ನಡೆಸಿದ್ದರು. ಐದು ವರ್ಷಗಳಲ್ಲಿ ಅವರು 2600 ಕೋಟಿ ಅಧಿಕ ರಾಜ್ಯಾದಾಯ ಇದ್ದ ಸರ್ಕಾರ ನಡೆಸಿದರು. 2014 ರಿಂದ ಈ ವರೆಗೆ ವಾರ್ಷಿಕ ರಾಜ್ಯಾದಾಯ ನೆಲಕಚ್ಚಿದೆ, ಈ ವರ್ಷ ಸುಮಾರು ೧೬೦೦೦ ದಿಂದ ೧೭೦೦೦ ಕೋಟಿಯಷ್ಟು ರಾಜ್ಯಾದಾಯ ಕೊರತೆಯನ್ನು ಮತ್ತು  ಸುಮಾರು ೪೦೦೦೦ ದಿಂದ ೫೦೦೦೦ ಕೋಟಿ ವಿತ್ತೀಯ ಕೊರತೆಯನ್ನು ಎದುರಿಸಲಿದ್ದಾರೆ. ಮತ್ತು ಇದು ಇತ್ತೀಚಿನ ವಿದ್ಯಮಾನ. ಹಾಗಾಗಿ ಉಚಿತ ಕೊಡುಗೆಗಳು ಈ ರೀತಿಯ ಕೀಳಾದ ರಾಜ್ಯಾದಾಯ ನಿರ್ವಹಣೆಯಲ್ಲಿ ಅತ್ಯಂತ ಕನಿಷ್ಟಮಟ್ಟದ ಪಾತ್ರ ವಹಿಸುವಂತಹವಾಗಿದ್ದು,  ಕೀಳಾದ ವೆಚ್ಚ ನಿರ್ವಹಣೆ, ಆ ಮೂಲಕ ಅತ್ಯಧಿಕ ಸಾಲ ತೆಗೆದುಕೊಳ್ಳುವ ಆಡಳಿತದವರು, ಕೆಟ್ಟ ಬಡ್ಡಿದರ ನಿರ್ವಹಣೆ ಮಾಡುವುದರ ಪಾತ್ರವೇ ಅತಿದೊಡ್ಡದು. ಎಲ್ಲಾ ರೀತಿಯಲ್ಲೂ ಇದು ಘನಘೋರ ಹಣಕಾಸು ನಿರ್ವಹಣೆ  ಅವಸ್ಥೆಯಾಗಿದ್ದು, ಇಂತಹದ್ದು ಒಂದು ಕಂಪನಿಯಲ್ಲೇನಾದರೂ ಆಗಿದ್ದರೆ, ಮಾರ್ಕೆಟ್ಟುಗಳು ಇಷ್ಟರಲ್ಲಾಗಲೇ ಇಡೀ ಮಂಡಲವನ್ನೇ ಕಿತ್ತೊಗೆಯಬೇಕೆಂದು ಒತ್ತಾಯಿಸಿರುತ್ತಿದ್ದರು. ಹೌದುತಾನೇ?  ನಮ್ಮ ಆರ್ಥಿಕತೆಯ ನಿರ್ವಹಣೆಯನ್ನು ಇಂಥಾ ಜನರ ಕೈಗೊಪ್ಪಿಸಬಾರದು.

ಅನುವಾದ : ಜಯಶ್ರೀ ಜಗನ್ನಾಥ , ಅಶ್ವತ್ ಪುಟ್ಟಸ್ವಾಮಿ

ಪ್ರತಿಕ್ರಿಯಿಸಿ