ಲುಯಿ ಬೋರ್ಹೆಸ್ ಉಪನ್ಯಾಸ ಸರಣಿ: ಕಾವ್ಯ ಕುಸುರಿ – ೩ : ಕತೆಯ ನಿರೂಪಣೆ

೨೦ ಶತಮಾನದ ಮಹತ್ವದ ಸ್ಪಾನಿಷ್ ಕವಿ ಹೋರ್ಹೆ ಲುಯಿ ಬೋರ್ಹೆಸ್ ಜನ್ಮದಿನದಂದು ಆರಂಭವಾದ ಸರಣಿ ಇದು. ಮಾಂತ್ರಿಕ ವಾಸ್ತವವಾದದ ಮೊಳಕೆಗಳನ್ನು ಇವನ ಬರಹಗಳಲ್ಲಿ ಕಾಣಬಹುದು ಎಂದು ವಿಮರ್ಶಕರು ಗುರುತಿಸುತ್ತಾರೆ. ಸಾಹಿತ್ಯದ ಅಭಿಜಾತ ಪ್ರಕಾರವಾದ ಕಾವ್ಯಕ್ಕೆ ಆಳವಾಗಿ ತನ್ನನ್ನು ತೆತ್ತುಕೊಂಡ ಬೋರ್ಹೆಸ್- ಸಾಹಿತ್ಯದ ಇತಿಹಾಸ, ಅನುವಾದ ಸಿದ್ಧಾಂತಗಳ ಕುರಿತೂ ಕೆಲಸ ಮಾಡಿದ.   ೬೦ರ ದಶಕದ ತುದಿಗೆ ದೃಷ್ಟಿಹೀನನಾಗುತ್ತ ಹೋದ ಕವಿ, ೧೯೬೭-೬೮ ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೀಡಿದ ಉಪನ್ಯಾಸಗಳ ಸರಣಿಯೇ “The Craft of Verse”. ಕೇವಲ ನೆನಪಿನ ಶಕ್ತಿಯಿಂದಲೇ ಹೊಸ ಹಳೆಯ ಕಾವ್ಯದ ಸಾಲುಗಳನ್ನು ಉಪನ್ಯಾಸದ ಉದ್ದಕ್ಕೂ ಉದ್ಧರಿಸುತ್ತ ಹೋಗುವ ಈ ಮಹಾಕವಿ – ಕಾವ್ಯದ ಕುರಿತು ತಳಸ್ಪರ್ಶಿಯಾಗಿ ಆಡಿದ ಮಾತುಗಳು ಇವು. ತತ್ವಜ್ಞಾನ, ಇತಿಹಾಸ, ಅಸಮಾನ್ಯ ಕಲ್ಪನಾಶೀಲತೆಯ ಎರಕವಾದ ಈ ಬರಹಗಳನ್ನು ಕಮಲಾಕರ್ ಕಡವೆ ತನ್ಮಯ ಪ್ರತಿಭೆಯಿಂದ ಅನುವಾದಿಸಿದ್ದಾರೆ. ಈ ಅನುವಾದ ಸರಣಿಯ ಮೂರನೇಯ ಭಾಗ ಋತುಮಾನ ದ ಓದುಗರಿಗಾಗಿ.

ಮನಸ್ಸಿನಲ್ಲಿ ನಾವು ಗ್ರಹಿಸುವ ವರ್ಗೀಕರಣಗಳನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ ಶಾಬ್ದಿಕ ಭಿನ್ನತೆಗಳನ್ನು ಗೌರವಿಸಬೇಕು. ಆದರೂ, ನನಗನ್ನಿಸುವ ಪ್ರಕಾರ, ಪೋಯೆಟ್ (poet) ಎಂಬ ಶಬ್ದವನ್ನು ಒಡೆದು ಬಳಸುವುದಿದೆಯಲ್ಲ, ಅದೊಂದು ದುರಂತ. ಯಾಕೆಂದರೆ, ಈಗೀಗ ನಾವು ಕವಿಯ (poet) ಕುರಿತು ಮಾತಾಡುವಾಗ, ಹಕ್ಕಿಯುಲಿಯಂತಹ ಭಾವಗೀತೆಗಳನ್ನು ಉಸುರುವವರನ್ನು ನೆನಪಿಸಿಕೊಳ್ಳುತ್ತೇವೆ: ವರ್ಡ್ಸವರ್ಥನ “ಸಾಗರದ ಉದ್ದಗಲಕ್ಕೂ ಹರಡಿದ್ದವು ಹಡಗುಗಳು/ಆಗಸದಲ್ಲಿ ತಾರೆಗಳಂತೆ” ಅಥವಾ ಶೇಕ್ಸಪಿಯರನ “ಸಂಗೀತ ಕೇಳಲು, ಯಾಕೆ ಸಂಗೀತವ ಕೇಳುವೆ ವಿಷಾದದಲ್ಲಿ?/ ಸಿಹಿಯು ಸಿಹಿಯೊಡನೆ ಕಾದಾಡುವುದಿಲ್ಲ, ಉಲ್ಲಾಸ ಉಲ್ಲಾಸದೊಡನೆ ಉಲ್ಲಸಿತವು”. ಪುರಾತನರು ಕವಿಯ ಕುರಿತು ಮಾತಾಡುವಾಗ, “ಮಾಡುವವ’ (maker) ಎನ್ನುವ ಶಬ್ದ ಬಳಸುತ್ತಿದ್ದರು. ಕವಿಯೆಂದರೆ ಭಾವಾಗೀತೆಗಳನ್ನಷ್ಟೇ ರಚಿಸುವವ ಅಲ್ಲ, ಕತೆಯ ನಿರೂಪಕ ಎಂದು ಅರ್ಥಮಾಡಿಕೊಂಡಿದ್ದರು. ಕವಿಯು ನಿರೂಪಿಸುವ ಕತೆಯು ಎಂತಹುದು ಎಂದರೆ ಅದರಲ್ಲಿ ಮಾನವಕುಲದ ಎಲ್ಲ ದನಿಗಳೂ ಸೇರುತ್ತವೆ – ಕೇವಲ ಭಾವಾತಿರೇಕದ, ವಿಷಾದದ ದನಿಯಲ್ಲ, ಬದಲಿಗೆ, ಧೈರ್ಯದ ಮತ್ತು ಭರವಸೆಯ ದನಿ ಕೂಡ. ಅಂದರೆ, ನಾನಿಲ್ಲಿ ಮಾತನಾಡುತ್ತಿರುವುದು ಕಾವ್ಯದ ಅತ್ಯಂತ ಆದಿಮ ಪ್ರಕಾರವಾದ “ಎಪಿಕ್” ಅಥವಾ ಮಹಾಕಾವ್ಯದ ಬಗೆಗೆ. ಅವುಗಳಲ್ಲಿ ಕೆಲವನ್ನು ಎತ್ತಿಕೊಳ್ಳೋಣ.

ನಮ್ಮ ನೆನಪಿಗೆ ಬರುವ ಅಂತಹ ಮಹಾಕಾವ್ಯವೆಂದರೆ ಆಂಡ್ರ್ಯೂ ಲ್ಯಾಂಗ್ ಸೊಗಸಾಗಿ ಅನುವಾದಿಸಿರುವ “ಟ್ರ‍ಾಯ್-ನ ಕಥನ” (The Tale of Troy) ಎನ್ನುವುದು. ಅದರ ಮೊದಲ ಸಾಲು, ಹೀಗೇನೋ ಇದೆ: “ಹೇಳು, ಸ್ಪೂರ್ತಿ ದೇವತೆಯೇ, ಏಕಿಲ್ಲಸ್ಸನ ಕ್ರೋಧದ ಕತೆಯ” ಅಥವಾ ಪ್ರೋ. ರೌಸರ್ ಅನುವಾದದಲ್ಲಿ, “ಓರ್ವ ಕ್ರುದ್ಧ ಯುವಕ-ಅದುವೆ ನನ್ನ ವಿಷಯ”. ಬಹುಶಃ ಹೋಮರ, ಅಥವಾ ನಾವು ಹಾಗೆಂದು ಕರೆದಿರುವ ಕವಿ, (ಇದೊಂದು ಹಳೆಯ ಪ್ರಶ್ನೆ) ತಾನು ಒಬ್ಬ ಕುಪಿತ ಮನುಷ್ಯನ ಬಗೆಗೆ ಬರೆಯುತ್ತಿರುವುದೆಂದೇ ತಿಳಿದಿದ್ದ. ಯಾಕೋ ಇದು ನಮ್ಮನ್ನು ಸ್ವಲ್ಪ ಅಧೀರರನ್ನಾಗಿಸುವುದು. ಯಾಕೆಂದರೆ ಲ್ಯಾಟಿನ್ನಿನಲ್ಲಿ ಹೇಳಿರುವಂತೆ ನಾವು ಕೋಪ ಎನ್ನುವುದನ್ನು ಕ್ಷಣಿಕ ಆವೇಶವೆಂದು – ಹುಚ್ಚು ಉದ್ವೇಗವೆಂದು – ಯೋಚಿಸುತ್ತೇವೆ. “ಇಲಿಯಡ್” ಮಹಾಕಾವ್ಯದ ಕತಾಹೂರಣ ತನ್ನಲ್ಲಿ ತಾನು ಅಷ್ಟೇನೂ ಆಕರ್ಷಕವಾಗಿಯೇನೂ ಇಲ್ಲ – ರಾಜ ತನಗೆ ಅನ್ಯಾಯ ಮಾಡಿದನೆಂದು ಕೊರಗುತ್ತಿರುವ ಯೋಧ, ಮಿತ್ರ ಹತನಾಗಿದ್ದಕ್ಕೆ ವೈಯಕ್ತಿಕ ಕಾಳಗವೆಂದು ಬಗೆದು, ಯುದ್ಧಕ್ಕೆ ಇಳಿಯುತ್ತಾನೆ, ಆಮೇಲೆ, ತಾನು ಕೊಂದವನ ಪಿತನಿಗೆ ಹತನಾದವನ ದೇಹವನ್ನು ಮಾರುತ್ತಾನೆ.

Image Coutesy : MIT Press Reader

Image Coutesy : MIT Press Reader

ಕವಿಯ ಉದ್ದೇಶಗಳು ಬಹುಶಃ ಅಷ್ಟು ಮುಖ್ಯವಲ್ಲ (ನಾನಿದನ್ನು ಮುನ್ನವೂ ಹೇಳಿರಬಹುದು). ಯಾವುದು ಮುಖ್ಯವೆಂದರೆ, ಹೋಮರನು ಈ ಕತೆಯನ್ನು ಹೇಳುತ್ತಿರುವೆನೆಂದು ಭಾವಿಸಿಕೊಂಡಿದ್ದರೂ ಸಹ, ಅವನು ಅದಕ್ಕಿಂತ ಹಿರಿದಾದ ಕತೆಯನ್ನು ಹೇಳಿದ್ದ; ತಾನು ಎಂದಿಗೂ ಜಯಿಸಲಸಾಧ್ಯವಾದ ಶಹರದ ಮೇಲೆ ಧಾಳಿ ಮಾಡುವ ಒಬ್ಬ ಯೋಧನ ಕತೆ; ಆ ಶಹರದ ಪತನದ ಮುನ್ನ ತಾನು ಸಾಯುವುದರ ಅರಿವಿದ್ದ ಯೊಧನ ಕತೆ; ಇನ್ನೂ ಹೆಚ್ಚು ರೋಮಾಂಚಕವಾದುದೆಂದರೆ, ಪತನವಾಗಲಿರುವ, ಆಗಲೇ ಜ್ವಾಲೆಗಾಹುತಿಯಾಗಿದ್ದ, ಶಹರವೊಂದನ್ನು ರಕ್ಷಿಸಲು ಪಣತೊಟ್ಟು ನಿಂತವರ ಕತೆ ಅದಾಗಿತ್ತು. “ಇಲಿಯಡ್” ಮಹಾಕಾವ್ಯದ ವಿಷಯ ಇದು ಎಂದು ನನ್ನೆಣಿಕೆ. ಓದುಗರು ಯಾವಾಗಲೂ, ಟ್ರೋಜನ್ನರನ್ನೇ ಕತೆಯ ಹೀರೋಗಳು ಎಂದು ಗಣಿಸಿರುವುದೂ ನಿಜವೇ. ನಾವು ವರ್ಜಿಲ್ ಕವಿಯನ್ನು ನೆನೆಸಿಕೊಳ್ಳಬಹುದು. ಅಥವಾ, ತನ್ನ ಯೌವ್ವನದಲ್ಲಿ  ಓಡಿನ್ನನ ಕತೆ ಬರೆದ ಸ್ನೋರಿ ಸ್ಟರ್ಲಸನ್ – ಸ್ಯಾಕ್ಸನ್ನರ ದೈವ ಓಡಿನ್, ಪ್ರಾಯಂನ ಮಗ ಮತ್ತು ಹೆಕ್ಟರನ ಸಹೋದರ ಎಂದು ಚಿತ್ರಿಸಿದ ಕವಿಯನ್ನು ನೆನಪಿಸಿಕೊಳ್ಳಬಹುದು. ಸೋಲಿಗೀಡಾದರೂ, ಟ್ರೋಜನ್ನರ ಜೊತೆ ಸಂಭಂಧ ಹುಡುಕಿದ್ದಾರೆ ಜನರು – ವಿಜಯಿ ಗ್ರೀಕರ ಜೊತೆ ಅಲ್ಲ. ಪ್ರಾಯಶಃ ಇದಕ್ಕೆ ಕಾರಣವೆಂದರೆ ಸೋಲಿಗಿರುವ ಘನತೆ, ಗೆಲುವಿಗೆ ಸಲ್ಲುವುದಿಲ್ಲ.

ಈಗ ಎರಡನೆಯ ಮಾಹಾಕಾವ್ಯದತ್ತ ಗಮನ ಹರಿಸೋಣ – ಓಡಿಸ್ಸಿ. ಈ ಮಹಾಕಾವ್ಯವನ್ನು ಎರಡು ಬಗೆಯಲ್ಲಿ ಓದಬಹುದು. ಇದನ್ನು ಬರೆದವನು (ಅಥವಾ, ಸ್ಯಾಮ್ಯುಯೆಲ್ ಬಟ್ಲರ್ ಊಹಿಸಿದಂತೆ, ಬರೆದವಳು) ತಾನು ಎರಡು ಕತೆಗಳನ್ನು ನಿರೂಪಿಸುತ್ತಿರುವೆನೆಂದೇ ನಂಬಿದ್ದ – ಯುಲಿಸಸ್ ಮನೆಗೆ ಮರಳುವ ಕತೆ ಮತ್ತು ಕಡಲಿನ ಅಚ್ಚರಿಗಳು ಮತ್ತು ಘಾತಕಗಳ ಕತೆ. ಮೊದಲನೆಯ ಅರ್ಥದಲ್ಲಿ ಓಡಿಸ್ಸಿಯನ್ನು ಓದಿದರೆ, ಮನೆಗೆ ಮರಳುವ ಪರಿಕಲ್ಪನೆ ಮುನ್ನೆಲೆಗೆ ಬರುತ್ತದೆ. ನಾವು ಬಹಿಷ್ಕೃತರಾಗಿರುತ್ತೇವೆ, ನಮ್ಮ ಮನೆಯೆನ್ನುವುದು ಪೂರ್ವಕಾಲದಲ್ಲಿಯೋ, ಅಥವಾ ಸ್ವರ್ಗದಲ್ಲಿಯೋ, ಇನ್ನೆಲ್ಲಿಯೋ ಇದ್ದು, ನಾವು ಇರುವುದು ನಮ್ಮ ಮನೆಯಾಗಿರುವುದಿಲ್ಲವೆಂಬ ವಿಚಾರ. ಕಡಲಯಾನ ಮತ್ತು ಮನೆಗೆ ಮರಳುವ ಕಥಾನಕವನ್ನು ಆಸಕ್ತಿಪೂರ್ಣ ಮಾಡಬೇಕಲ್ಲ, ಅದಕ್ಕೆಂದು ಅಚ್ಚರಿಗಳನ್ನು ಒಳತರಲಾಗಿದೆ. ನಾವು “ಅರೇಬಿಯನ್ ನೈಟ್ಸ್” ಕೃತಿಯತ್ತ ಹೊರಳಿದರೆ ಅದಾಗಲೇ ನಮಗೆ ಓಡಿಸ್ಸಿಯ ಅರೇಬಿಯನ್ ಅವತರಣಿಕೆಯಾಗಿರುವ “ನಾವಿಕ ಸಿಂಧಬಾದನ ಸಪ್ತ ಯಾತ್ರೆಗಳು” ಕೃತಿಯು ಮನೆಗೆ ಮರಳುವ ಕತೆಯ ಬದಲು ಸಾಹಸಗಳ ಕಥನವಾಗಿರುವುದು ಕಾಣುತ್ತದೆ. ನಾವು ಈ ಕೃತಿಯನ್ನು ಸಾಹಸಗಾಥೆಯಾಗಿಯೇ ಓದಿರುತ್ತೇವೆ. ಓಡಿಸ್ಸಿಯನ್ನು ಓದಿದಾಗ ನಮ್ಮನ್ನು ಸೆಳೆಯುವ ಅಂಶವೆಂದರೆ ಅದರ ಸೊಬಗು, ಕಡಲೆಂಬ ಮಾಯಾಜಾಲ. ಕಡಲಯಾತ್ರಿಯಲ್ಲಿ ನಾವು ಏನು ಕಾಣುತ್ತೇವೆಯೋ, ಅದೇ ನಾವು ಕತೆಯಿಂದ ಪಡೆಯುವ ರಸಾನುಭವ. ಉದಾಹರಣೆಗೆ, ಅವನಿಗೆ ತಂತಿವಾದ್ಯದಲ್ಲಿ ಆಸಕ್ತಿ ಇಲ್ಲ, ಉಂಗುರಗಳ ವಿನಿಮಯದಲ್ಲಿ ಅಥವಾ ಹೆಂಗಸರ ಸಂಗದಲ್ಲಿ, ಇನ್ನೂ ಅಂದರೆ ಅವನಿಗೆ ಜಗತ್ತಿನ ಗರಿಮೆಯ ಕುರಿತೂ ಆಸಕ್ತಿ ಇಲ್ಲ. ಅವನು ಸದಾ ಸಾಗರದ ದೀರ್ಘ ಉಪ್ಪು ತೊರೆಗಳ ಕುರಿತಾಗಿಯೇ ಯೋಚಿಸುತ್ತಾನೆ. ಹೀಗೆ, ಒಂದೇ ಕೃತಿಯಲ್ಲಿ ನಮಗೆ ಎರಡು ಕಥನಗಳು ಕಾಣುತ್ತವೆ: ನಾವಿದನ್ನು ಮನೆಗೆ ಮರಳುವ ಕತೆಯೆಂದು ಓದಬಹುದು ಅಥವಾ ಒಂದು ಸಾಹಸಗಾಥೆಯೆಂದು – ಯಾವುದೇ ಆದರೂ ಇದೊಂದು ಈವರೆಗೆ ಬರೆದ ಅಥವಾ ಹಾಡಲ್ಪಟ್ಟಿರುವ ಕಾವ್ಯಗಳಲ್ಲೆಲ್ಲ ಪ್ರಾಯಶಃ ಶ್ರೇಷ್ಠವಾದದ್ದು.

ನಾವೀಗ ಇವುಗಳಿಗಿಂತಲೂ ಶ್ರೇಷ್ಠವಾದ “ಕಾವ್ಯ”ವೊಂದಕ್ಕೆ ಬರುತ್ತೇವೆ: ನಾಲ್ಕು ಗಾಸ್ಪೆಲ್-ಗಳು (“ಸುವಾರ್ತೆ”). ಗಾಸ್ಪೆಲ್ಲುಗಳನ್ನು ಸಹ ಎರಡು ಬಗೆಯಲ್ಲಿ ಓದಬಹುದು. ಆಸ್ತಿಕನಾದ ಓದುಗ ಇವುಗಳನ್ನು ಮಾನವಕುಲದ ಪಾಪಗಳಿಗಾಗಿ ಪ್ರಾಯಶ್ಚಿತ್ತ ಕೈಗೊಳ್ಳುವ ಓರ್ವ ಮಾನವನ, ಪರಮೇಶ್ವರನ, ಅಪರೂಪದ ಕಥನವಾಗಿ ಓದುತ್ತಾನೆ. ಶೇಕ್ಸಪಿಯರನ ಪ್ರಕಾರ, “ಕಡು ಶಿಲುಬೆ”ಯ ಮೇಲೆ ಸಾವನಪ್ಪುವ, ಯಾತನೆಗೆ ಕರಗುವ ಪರಮೇಶ್ವರ. ಇಂಗ್ಲೀಷಿನ ಲ್ಯಾಂಗಲಂಡ್ ಕವಿ ಇನ್ನೊಂದು ಅಚ್ಚರಿಯ ಅರ್ಥ ಕಾಣಿಸುತ್ತಾನೆ: ಮಾನವನ ಎಲ್ಲ ಸಂಕಟಗಳನ್ನೂ ತಾನು ಬುದ್ಧಿಯಿಂದ ಅರಿಯ ಬಹುದಾದರೂ, ಅದು ಸಾಲದು ಎಂದು ಪ್ರತ್ಯಕ್ಷ ಅರಿಯಲು ಪರಮೇಶ್ವರ ಮಾನವ ಮಿತಿಗಳೊಂದಿಗೆ ಮಾನವನಾಗಿ ಯಾತನೆಯನ್ನು ಅನುಭವಿಸ ಬಯಸುತ್ತಾನೆ. ನೀವೇನಾದರೂ ನಾಸ್ತಿಕರಾಗಿದ್ದರೆ, ನಾವು ಬಹಳ ಜನ ನಾಸ್ತಿಕರಿರುತ್ತೇವೆ, ಈ ಕಥನಗಳನ್ನು ನೀವು ಬೇರೆ ರೀತಿಯಲ್ಲಿ ಓದಬಹುದು. ನೀವು ಓರ್ವ ಪ್ರತಿಭಾವಂತನನ್ನು ಊಹಿಸಿಕೊಳ್ಳಬಹುದು, ತಾನು ದೇವರೆಂದು ಅಂದುಕೊಂಡ ಮನುಷ್ಯನನ್ನು; ಅಂತ್ಯದಲ್ಲಿ, ತನ್ನ ದೇವರು ತನ್ನನ್ನು ತೊರೆದಿರುವುದನ್ನು, ತಾನು ಮನುಷ್ಯ ಮಾತ್ರನೆಂದು ಅರಿತುಕೊಂಡಾತ.

ಹೀಗೂ ಹೇಳಬಹುದು: ಹಲವು ಶತಮಾನಗಳವರೆಗೆ, ಈ ಮೂರು ಕಥನಗಳು – ಟ್ರಾಯ್ ಶಹರದ ಕತೆ, ಯೂಲಿಸಸ್ಸನ ಕತೆ, ಜೀಸಸ್ಸನ ಕತೆ – ಮಾನವ ಜನಾಂಗಕ್ಕೆ ಸಾಕು ಎನಿಸಿತ್ತು. ಜನರು ಈ ಕಥನಗಳನ್ನು ಮತ್ತೆ ಮತ್ತೆ ಕಥಿಸುತ್ತ ಬಂದಿದ್ದಾರೆ; ಸಂಗೀತಕ್ಕೆ ಅಳವಡಿಸಿದ್ದಾರೆ; ಚಿತ್ರಕಲೆಗೆ ಅಳವಡಿಸಿದ್ದಾರೆ. ಅದೆಷ್ಟೋ ಬಾರಿ ಕತೆಗಳನ್ನು ಹೇಳಿದ್ದರೂ, ಈ ಕತೆಗಳು ಯಾವುದೇ ಮಿತಿಗೆ ಒಳಗಾಗದೇ ಇನ್ನೂ ಇದ್ದಾವೆ. ಮುಂದೆ ಸಾವಿರ ಹತ್ತು ಸಾವಿರ ವರುಷಗಳ ನಂತರವೂ ಯಾರೋ ಈ ಕಥನಗಳನ್ನು ಮತ್ತೆ ಕಥಿಸಬಹುದೆಂದು ನಾವು ಭಾವಿಸಬಹುದು. ಆದರೂ, ಗಾಸ್ಪೆಲ್ ಕಥನಗಳ ಸಂಧರ್ಭದಲ್ಲಿ ಒಂದು ಭಿನ್ನತೆಯಿದೆ: ಕ್ರಿಸ್ತನ ಕತೆಯನ್ನು ಅದಕ್ಕಿಂತ ಚೆನ್ನಾಗಿ ಹೇಳಲು ಸಾಧ್ಯವಿಲ್ಲ. ಹಲವು ಸಲ ಈ ಕತೆಯನ್ನು ಮರು-ಕಥನವಾಗಿಸಿದ್ದರೂ ಕೂಡ, ಕ್ರಿಸ್ತನನ್ನು ಸೈತಾನ ಪ್ರಲೋಭಿಸಲು ಪ್ರಯತ್ನಿಸುವ ಕೆಲವು ಪದ್ಯಗಳು, ಜಾನ್ ಮಿಲ್ಟನ್ ಮಹಾಕವಿಯ “ಪ್ಯಾರಡೈಸ್ ರಿಗೇನ್ಡ್” ಕಾವ್ಯದ ನಾಲ್ಕು ಭಾಗಗಳಿಗಿಂತ ಹೆಚ್ಚು ಸೊಗಸಾಗಿವೆ. ನನಗನ್ನಿಸುತ್ತೆ, ಮಿಲ್ಟನ್ನನಿಗೆ ಕ್ರಿಸ್ತ ಯಾವ ಬಗೆಯ ಮನುಷ್ಯನೆಂಬ ಕುರಿತು ಸ್ಪಷ್ಟತೆ ಇರಲಿಲ್ಲ.

ಹೀಗೆ, ನಮ್ಮ ಬಳಿ ಈ ಕಥನಗಳಿವೆ, ಜನರಿಗೆ ಬೇರೆ ಕತೆಗಳು ಬೇಕೆನಿಸಿರಲಿಲ್ಲ. ಇಂಗ್ಲೀಷ್ ಕವಿ ಚಾಸರನು ಯಾವುದೇ ಕತೆಯನ್ನು ಸೃಷ್ಟಿಸಿದ್ದನ್ನು ನಾ ಕಾಣೆ. ಹಿಂದಿನ ದಿನಗಳಲ್ಲಿ ಜನರು ಇಂದಿಗಿಂತ ಕಡಿಮೆ ಸೃಷ್ಟಿಕರ್ತರಾಗಿದ್ದರೆಂದು ನನಗನಿಸುವುದಿಲ್ಲ. ಬಹುಶಃ ಅವರಿಗೆ ಕತೆಗಳಲ್ಲಿ ಸಣ್ಣಪುಟ್ಟ ಹೊಸತನದ ಛಾಯೆಗಳನ್ನು ಮೂಡಿಸಿದರೆ ಸಾಕು ಎನ್ನುವ ಭಾವವಿತ್ತು. ಅಲ್ಲದೇ, ಕವಿಗೆ ಇದು ಸುಲಭವೂ ಆಗಿತ್ತು. ಓದುಗರೋ, ಕೇಳುಗರೋ, ಅವರಿಗೆ ಕವಿ ಹೇಳುತ್ತಿರುವುದು ಏನು ಅನ್ನುವ ಅರಿವಿರುತ್ತಿತ್ತು. ಹಾಗೆಂದೇ, ಅವರು ವಿಭಿನ್ನತೆಗಳನ್ನು ಒಪ್ಪಿಕೊಳ್ಳುವ ಹಾಗಿತ್ತು.

ಮಹಾಕಾವ್ಯಗಳಲ್ಲಿ – ಗಾಸ್ಪೆಲ್ಲುಗಳನ್ನೂ ಕೂಡ ನಾವು ದಿವ್ಯ ಮಹಾಕಾವ್ಯವೆಂದೇ ಗುರುತಿಸ ಬಹುದಲ್ಲ – ಎಲ್ಲವೂ ಕಾಣಸಿಗುತ್ತವೆ. ಆದರೆ, ಈಗ ಕಾವ್ಯವೆನ್ನುವುದು ವಿಚ್ಛಿದ್ರವಾಗಿದೆ – ಒಂದೆಡೆ ಭಾವಗೀತೆ/ಶೋಕಗೀತೆಗಳಿವೆ, ಇನ್ನೊಂದೆಡೆ ಕತೆಯನ್ನು ಹೇಳಲು ಕಾದಂಬರಿಗಳಿವೆ. ಜೋಸೆಫ್ ಕಾನ್ರಾಡ್, ಹರ್ಮನ್ ಮೆಲ್ವಿಲ್ ಇತ್ಯಾದಿ ಕಾದಂಬರಿಕಾರರ ಹೊರತಾಗಿಯೂ, ಮಹಾಕಾವ್ಯದ ಭ್ರಷ್ಟ ಪ್ರಕಾರವೇ ಕಾದಂಬರಿ ಎಂದು ಹೇಳುವ ಮನಸ್ಸಾಗುತ್ತದೆ. ಕಾದಂಬರಿಯು ಮಹಾಕಾವ್ಯದ ಘನತೆಯತ್ತ ಹೊರಳುತ್ತದೆ.

ಕಾದಂಬರಿ ಮತ್ತು ಮಹಾಕಾವ್ಯದ ಕುರಿತು ಯೋಚಿಸಿದರೆ, ಅವುಗಳ ಭಿನ್ನತೆ ಇರುವುದು ಪದ್ಯ ಮತ್ತು ಗದ್ಯದಲ್ಲಿ, ಹಾಡುವ ಮತ್ತು ಹೇಳುವುದರ ನಡುವಿನ ಅಂತರದಲ್ಲಿ ಎಂದು ಅಂದುಕೊಳ್ಳುವ ಮನಸ್ಸಾಗುತ್ತದೆ. ಆದರೂ, ನನಗೆ ಇಲ್ಲಿ ಇನ್ನೂ ಹೆಚ್ಚಿನ ಅಂತರವಿದೆಯೆಂದು ಅನ್ನಿಸುತ್ತದೆ. ಭಿನ್ನತೆ ಎಲ್ಲಿದೆ ಎಂದರೆ, ಮಹಾಕಾವ್ಯದಲ್ಲಿ, ಪ್ರಮುಖ ಸ್ಥಾನವಿರುವುದು ಅದರ ನಾಯಕನಿಗೆ – ಆತ ಇಡೀ ಮಾನವಕುಲಕ್ಕೆ ಮಾದರಿಯಾಗಿರುವ ಪಾತ್ರವಾಗಿರುತ್ತಾನೆ. ಆದರೆ, ಕಾದಂಬರಿಯ ಕೇಂದ್ರದಲ್ಲಿ ಇರುವ ಅಂಶ ಮಾನವನ ಪತನ.

ಇದು ಇನ್ನೊಂದು ಪ್ರಶ್ನೆಯ ಕಡೆ ನಮ್ಮನ್ನು ತರುತ್ತದೆ: ಸಂತೋಷದ ಬಗೆಗೆ ನಮ್ಮ ನಿಲುವೇನು? ಸೋಲು-ಗೆಲುವಿನ ಕುರಿತು ನಾವು ಏನೆಂದುಕೊಳ್ಳುತ್ತೇವೆ? ಇತ್ತೀಚೆ, ಸುಖಾಂತವೆಂದರೆ, ಸಾರ್ವಜನಿಕರನ್ನು ಓಲೈಸಲು ಮಾಡುವ ವ್ಯಾವಹಾರಿಕ ಕೃತ್ರಿಮ ತಂತ್ರವೆಂದು ಭಾವಿಸಲಾಗುತ್ತದೆ. ಸೋಲಿನ ಮೂಲಭೂತ ಘನತೆಯನ್ನು ಮಾನ್ಯಮಾಡಿದರೂ ಕೂಡ, ಜನರು ಪ್ರಾಮಾಣಿಕವಾಗಿ ಗೆಲುವು, ಉಲ್ಲಾಸಗಳಲ್ಲಿ ಶತಶತಮಾನಗಳವರೆಗೆ ನಂಬಿಕೆ ಹೊಂದಿದ್ದರು. ಉದಾಹರಣೆಗೆ, ಮಾನವಕುಲದ ಪುರಾತನ ಕತೆಗಳಲ್ಲಿ ಒಂದಾದ “Golden Fleece” (ಗೋಲ್ಡನ್ ಫ್ಲೀಸ್) ಕತೆಯ ಕೊನೆಯಲ್ಲಿ ನಿಧಿಯು ಸಿಗುವುದೆಂಬ ನಂಬಿಕೆ ತಮ್ಮ ಓದುಗರು ಮತ್ತು ಕೇಳುಗರಲ್ಲಿ ಇರುವ ಹಾಗೆ ಬರೆಯಲಾಗುತ್ತಿತ್ತು. ಈಗ ಹಾಗಲ್ಲ, ಸಾಹಸದ ಪ್ರಸ್ತುತಿಯೇ ಅದರ ಸೋಲಿನ ಚಿತ್ರಣಕ್ಕಾಗಿ ಇರುತ್ತದೆ. ಹೆನ್ರಿ ಜೇಮ್ಸನ – ದ ಆಸ್ಪನ್ ಪೇಪರ್ಸ್ – ಎಂಬ ನನ್ನ ನೆಚ್ಚಿನ ಕತೆಯನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಓದಲು ತೊಡಗಿದಾಗಲೇ ನಮಗೆ ಗೊತ್ತಿರುತ್ತೆ ಆ ಕಾಗದಗಳು ಕೊನೆಗೂ ಸಿಗುವುದಿಲ್ಲವೆಂದು. ಫ್ರಾಂಜ್ ಕಾಫ್ಕಾನ “ದ ಕಾಸಲ್” ಕಾದಂಬರಿಯನ್ನು ಓದಿದರೆ, ನಮಗೆ ಗೊತ್ತಿರುತ್ತೆ, ಆ ಮನುಷ್ಯ ಕೋಟೆಯ ಒಳ ಹೋಗಲು ಸಾಧ್ಯವಾಗುವುದಿಲ್ಲವೆಂದು. ಅಂದರೆ, ನಮಗೆ ಯಶಸ್ಸು ಮತ್ತು ಗೆಲುವಿನಲ್ಲಿ ನಿಜವಾಗಿಯೂ ನಂಬಿಕೆ ಉಳಿದಿಲ್ಲ. ಇದು ನಮ್ಮ ಕಾಲದ ಬಡತನಗಳಲ್ಲೊಂದು. ಪ್ರಾಯಶಃ, ಕಾಫ್ಕಾನಿಗೂ ಹೀಗೆ ಅನ್ನಿಸಿರಬೇಕು, ಎಂದೇ ಅವನು ತನ್ನೆಲ್ಲ ಪುಸ್ತಕಗಳೂ ನಾಶವಾಗಬೇಕೆಂದು ಬಯಸಿದ್ದ. ಅವನು, ಆನಂದ, ಗೆಲುವುಗಳ ಕೃತಿಯೊಂದನ್ನು ಬರೆಯ ಬಯಸಿದ್ದ, ಆದರೆ ಅವನಿಗೂ ಗೊತ್ತಿತ್ತು, ಅದು ತನ್ನಿಂದ ಅಸಾಧ್ಯವೆಂದು. ಅವನು ಬರೆಯಲೂ ಬಹುದಿತ್ತು, ಆದರೆ, ಅವನು ಸತ್ಯವನ್ನು ಬರೆದಿಲ್ಲವೆಂದು ಅಂದುಕೊಳ್ಳುತ್ತಿದ್ದರು ಓದುಗರು. ಘಟನೆಗಳ ಸತ್ಯವಲ್ಲ, ಅವನ ಸ್ವಪ್ನಗಳ ಸತ್ಯ.

ಹದಿನೆಂಟನೆ ಶತಮಾನದ ಅಂತ್ಯದಲ್ಲಿ ಯಾ ಹತ್ತೊಂಬತ್ತನೇ ಶತಮಾನದ ಮೊದಲಿನಲ್ಲಿ, ವರುಷದ ಯಾವುದೇ ಇರಲಿ, ಮನುಷ್ಯ ಕತೆಗಳನ್ನು ಸೃಷ್ಟಿಸಲು ತೊಡಗಿದ. ನಾವು ಹೀಗೂ ಕೂಡ ಹೇಳಬಹುದೇನೋ, ಇದು ಹಾಥಾರ್ನ್ ಮತ್ತು ಎಡ್ಗರ್ ಅಲನ್ ಪೋ ಅವರಿಂದ ಶುರುವಾದುದೆಂದು. ಆದರೆ ಯಾವಾಗಲೂ ಪೂರ್ವಸೂರಿಗಳು ಇದ್ದೇ ಇರುತ್ತಾರೆ. ರೂಬೆನ್ ಡೇರಿಯೋ ಸೂಚಿಸಿರುವಂತೆ ಸಾಹಿತ್ಯದಲ್ಲಿ ಯಾರೂ ಆದಂ (ಮೊಟ್ಟ ಮೊದಲಿನವ) ಆಗಿ ಇರುವುದಿಲ್ಲ. ಅಂದಾಗಲೂ, ಎಡ್ಗರ್ ಅಲನ್ ಪೋ ಅಲ್ಲವೇ ಹೇಳಿದ್ದು, “ಕೊನೆಯ ವಾಕ್ಯಕ್ಕಾಗಿ ಕತೆ ಬರೆಯಬೇಕು, ಕೊನೆಯ ಸಾಲಿಗಾಗಿ ಕವಿತೆ ಬರೆಯಬೇಕು” ಎಂದು? ಇದು ಮುಂದೆ ಚಳಕಗಳೇ ತುಂಬಿದ ಕತೆಗಳಾಗಿ ಪರ್ಯವಸಾನವಾಯಿತು. ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದಲ್ಲಿ, ಜನರು ಎಲ್ಲಾ ಬಗೆಯ ಕತಾಹೂರಣಗಳನ್ನು ಸೃಷ್ಟಿಸಿದ್ದಾರೆ. ಈ ಕತಾಹೂರಣಗಳು ಕೆಲವೊಮ್ಮೆ ಚತುರವಾಗಿರುತ್ತವೆ. ಸುಮ್ಮನೇ ಹೇಳಿದರೆ, ಈ ಕತಾಹೂರಣಗಳು ಮಹಾಕಾವ್ಯಗಳ ಕತಾಹೂರಣಕ್ಕಿಂತ ಹೆಚ್ಚು ಚತುರ ಇರುತ್ತವೆ. ಆದರೂ, ನಮಗೆ ಅವುಗಳಲ್ಲಿ ಅದೇನೋ ಕೃತ್ರಿಮತೆ ಭಾಸವಾಗುತ್ತದೆ. ಅಥವಾ ಅದೇನೋ, ಕ್ಷುದ್ರತೆ ಇದೆಯೆನಿಸುತ್ತದೆ. ಎರಡು ಉದಾಹರಣೆಗಳನ್ನು ನೋಡೋಣ: “ಡಾ. ಜೆಕಿಲ್ ಮತ್ತು ಮಿ. ಹೈಡ್” ಹಾಗೂ “ಸೈಕೋ”ದಂತ ಒಂದು ಕಾದಂಬರಿ ಯಾ ಸಿನೆಮಾ ತೆಗೆದು ಕೊಂಡರೆ, ಎರಡನೆಯದರ ಕತಾಹೂರಣ ಹೆಚ್ಚು ಚತುರವಿದ್ದರೂ, ನಮಗೆ ಸ್ಟೀವನ್ಸನ್ನನ ಕತೆಯಲ್ಲಿ ಎನೋ ವಿಶೇಷವಿದೆ ಎಂದೇ ಭಾಸವಾಗುತ್ತದೆ.

ಕತಾಹೂರಣಗಳು ಸೀಮಿತ ಇರುತ್ತವೆ ಎಂದು ಶುರುವಾತಿನಲ್ಲಿ ನಾನು ಸೂಚಿಸಿದ ಸಂಗತಿಯ ಕುರಿತು: ಕತಾಹೂರಣದ ಬದಲು ಅವುಗಳಲ್ಲಿ ಬದಲಾವಣೆ ಮಾಡುವ, ಒಂದಿನಿನ್ನೊಂದಾಗಿ ಮಾರ್ಪಡಿಸುವ ಒಲವುಳ್ಳ ಕೃತಿಗಳನ್ನು ನಮೂದಿಸಬೇಕು. ನಾನು “ಅರೇಬಿಯನ್ ನೈಟ್ಸ್”, “ಒರ್ಲಾಂಡೋ ಫ್ಯೂರಿಯೋಸೋ” ಮುಂತಾದ ಕೃತಿಗಳ ಕುರಿತು ಯೋಚಿಸುತ್ತಿದ್ದೇನೆ ಇಲ್ಲಿ. ನಿಧಿ ತರುವ ಕೇಡಿನ ವಿಷಯವನ್ನು ಸಹ ಇಲ್ಲಿ ನಾವು ನಮೂದಿಸಬಹುದು. ಐಸಲ್ಯಾಂಡಿಕ್ ಮಹಾಕಾವ್ಯ Völsunga Saga (ವೊಲ್ಸುನ್ಗಾ ಸಾಗಾ) ಮತ್ತು ಇಂಗ್ಲಂಡಿನ ಮಹಾಕಾವ್ಯ Beowulf (ಬಿಯೋವುಲ್ಫ್) ಕೃತಿಯ ಅಂತ್ಯದಲ್ಲಿ, ನಿಧಿಯನ್ನು ಶೋಧಿಸಿದವರಿಗೆ ಕೇಡು ತಗಲುವ ವಿಷಯದ ಪ್ರಸ್ತಾಪವಿದೆ. ಈ ನಿಟ್ಟಿನಲ್ಲಿ, ರೂಪಕಗಳನ್ನಾಗಿ ನೋಡುವ ಕುರಿತು  ನನ್ನ ಹಿಂದಿನ ಪ್ರವಚನದಲ್ಲಿ ನಾನು ಹೇಳಿದಂತೆ, ಕತಾಹೂರಣಗಳ ವಿಷಯದಲ್ಲಿಯೂ ಮೂಲಭೂತ ರೂಪದಲ್ಲಿ ಕೆಲವು ಮಾದರಿಗಳು ಇರುವುದಾಗಿ ನಾವು ಯೋಚಿಸಬಹುದು. ಇತ್ತೀಚೆ, ಅಸಂಖ್ಯ ಕತಾಹೂರಣಗಳ ಸೃಷ್ಟಿ ಆಗುತ್ತ ಇರುವುದರಿಂದ ನಾವು ಸಹಜವಾಗಿ ಗಲಿಬಿಲಿಯಲ್ಲಿರುತ್ತೇವೆ. ಬಹುಶಃ ಸೃಷ್ಟಿಸುವ ಈ ಧಾವಂತ ಕ್ಷಣಿಕವಿರಬಹುದು, ಈ ತೋರಿಕೆಯ ನೇಪಥ್ಯದಲ್ಲಿ ಇರುವುದು ಕೆಲವೇ ಕೆಲವು ಮೂಲಭೂತ ಕತಾಹೂರಣಗಳು ಎಂದು ನಾವು ಮುಂದೆ ಕಂಡುಕೊಳ್ಳಲೂಬಹುದು. ಅದರ ಚರ್ಚೆ ಇಲ್ಲಿ ನನ್ನ ಉದ್ದೇಶವಲ್ಲ.

ಇನ್ನೊಂದು ಸಂಗತಿಯನ್ನು ನಾವಿಲ್ಲಿ ಗಮನಿಸಬೇಕು: ಒಂದು ಕಾಲದಲ್ಲಿ, ಕತೆ ಹೇಳುವುದನ್ನು ಮತ್ತು ಲಯಬದ್ಧ ಕಾವ್ಯ ರಚನೆಯನ್ನು ಪ್ರತ್ಯೇಕವಾಗಿ ನೋಡುತ್ತಿರಲಿಲ್ಲವೆಂದು ಕವಿಗಳು ಮರೆತುಬಿಡಬಹುದು. ಒಬ್ಬಾತ ಒಂದು ಕತೆ ಹೇಳುತ್ತಾನೆ; ಅವನದನ್ನು ಹಾಡುತ್ತಾನೆ; ಕೇಳುಗರು ಇದರಲ್ಲಿ ಕಾಣುತ್ತಿದ್ದುದು ಒಂದೇ ಕೌಶಲ್ಯ – ಎರಡು ಮುಖಗಳ ಒಂದು ಕೆಲಸ. ಅಥವಾ ಅವರು, ಇದರಲ್ಲಿ ಎರಡು ಮುಖಗಳನ್ನೂ ಕಾಣದೇ, ಇದನ್ನು ಒಂದೇ ಸಂಗತಿಯಾಗಿ ನೋಡುತ್ತಿದ್ದರು.

ನಾವೀಗ ನಮ್ಮದೇ ಕಾಲದತ್ತ ದೃಷ್ಟಿ ಹರಿಸೋಣ. ಒಂದು ವಿಲಕ್ಷಣ ಪರಿಸ್ಥಿತಿ ನಮಗಿಲ್ಲಿ ಗೋಚರವಾಗುತ್ತದೆ: ಎರಡು ವಿಶ್ವಯುದ್ಧಗಳಾಗಿದ್ದರೂ ಸಹ ಯಾವುದೇ ಮಹಾಕಾವ್ಯದ ರಚನೆಯಾಗಿಲ್ಲ – ಟಿ ಇ ಲಾರೆನ್ಸರ “ಸೆವೆನ್ ಪಿಲ್ಲರ್ಸ್ ಆಫ್ ವಿಸಡಂ” ಕೃತಿಯ ಹೊರತಾಗಿ. ಈ ಕೃತಿಯಲ್ಲಿ ನನಗೆ ಹಲವಾರು ಮಹಾಕಾವ್ಯದ ಲಕ್ಷಣಗಳು ಕಾಣುತ್ತವೆ. ಆದರೆ, ಕೃತಿಯ ದೊಡ್ಡ ಕೊರತೆಯೆಂದರೆ ಕತಾನಾಯಕನೇ ನಿರೂಪಕನಾಗಿರುವುದು. ಹಾಗಾಗಿ, ಕೆಲಸಲ ಅವನು ತನ್ನನ್ನು ತಾನು ಮೂದಲಿಸಿಕೊಳ್ಳುತ್ತಾನೆ, ತನ್ನನ್ನು ತಾನು ಮನುಷ್ಯನಾಗಿಸಿಕೊಳ್ಳಲು, ನಂಬಲರ್ಹ ಪಾತ್ರವಾಗಿ ಚಿತ್ರಿಸಲಿಕ್ಕಾಗಿ. ನಿಜವೆಂದರೆ, ಅವನು ಕಾದಂಬರಿಕಾರನ ತಂತ್ರಗಾರಿಕೆಗೆ ಶರಣಾಗಬೇಕಾಗುತ್ತದೆ.

ಈಗ ಮರೆವಿಗೀಡಾಗಿರುವ ಇನ್ನೊಂದು ಕೃತಿಯಿದೆ. ನಾನು ೧೯೧೫ರಲ್ಲಿ ಓದಿದೆನೆನಿಸುತ್ತದೆ – ಹೆನ್ರಿ ಬಾರ್ಬಸ್ಸನ “ಲೆ ಫೂ” ಎಂಬ ಹೆಸರಿನ ಒಂದು ಕಾದಂಬರಿ. ಶಾಂತಿಯ ಪಕ್ಷಪಾತಿಯಾಗಿದ್ದ ಈ ಲೇಖಕ, ಈ ಕಾದಂಬರಿಯನ್ನು ಯುದ್ಧ-ವಿರೋಧಿ ನೆಲೆಯಲ್ಲಿ ರಚಿಸಿದ್ದ. ಒಟ್ಟಾರೆ, ಅದು ಹೇಗೋ, ನನಗೆ ಈ ಕೃತಿಯಲ್ಲಿ ಮಹಾಕಾವ್ಯಕ್ಕೆ ಹೋಲುವ “ಮುನ್ನುಗ್ಗುವ” ಗುಣ ಕೃತಿಯುದ್ದಕ್ಕೂ ಕಾಣುತ್ತದೆ (ಕಾದಂಬರಿಯಲ್ಲಿ ಬಹಳ ಚೆನ್ನಾಗಿ ವರ್ಣಿಸಿರುವ ಬೇಯೋನೆಟ್ಟಿನ ಇರಿತದ ದೃಶ್ಯವೊಂದಿದೆ). ಮಹಾಕಾವ್ಯದ ಪ್ರಜ್ನೆ ಹೊಂದಿದ್ದ ಇನ್ನೊಬ್ಬ ಬರಹಗಾರನೆಂದರೆ ಕಿಪ್ಲಿಂಗ್. “ಅ ಸಾಹಿಬ್ಸ್ ವಾರ್” ಎಂಬ ಅವನ ಕತೆಯಲ್ಲಿ ಇದು ಬಹಳ ಸ್ಪಷ್ಟವಾಗಿ ನಮಗೆ ಕಾಣಸಿಗುತ್ತದೆ. ತನ್ನನ್ನು ಓದುಗರಿಂದ ದೂರಾಗಿಸಿಬಹುದು ಎನ್ನುವ ಕಾರಣಕ್ಕೆ ಕಿಪ್ಲಿಂಗ್ ಎಂದಿಗೂ ಸಾನೆಟ್ ಬರೆಯುವ ಪ್ರಯತ್ನ ಮಾಡಲಿಲ್ಲ. ಅದೇ ರೀತಿಯಲ್ಲಿ, ಅವನು ಮಹಾಕಾವ್ಯವನ್ನು ಸಹ ಬರೆಯಬಹುದಾಗಿದ್ದರೂ, ಅದಕ್ಕೆ ಕೈಹಾಕಲಿಲ್ಲ. ದೊರೆ ಆಲ್ಫ್ರೆಡ್ ಡೇನ ಪ್ರದೇಶದವರ ಜೊತೆ ನಡೆಸಿದ ಯುದ್ಧದ ಕುರಿತಾಗಿ ಚೆಸ್ಟರಟನ್ ಬರೆದ ಪದ್ಯ “ದ ಬ್ಯಾಲಡ್ ಆಫ್ ದ ವೈಟ್ ಹಾರ್ಸ್” ಎಂಬ ಕೃತಿಯೂ ನನಗೆ ನೆನಪಾಗುತ್ತಿದೆ. ಇದರಲ್ಲಂತೂ, ಬಹಳ ಅಪರೂಪದ ರೂಪಕಗಳನ್ನು ನಾವು ಕಾಣಬಹುದು (ಹಿಂದಿನ ಪ್ರವಚನದಲ್ಲಿ ಉಲ್ಲೇಖಿಸಲು ಅದು ಹೇಗೆ ಮರೆತೆನೋ, ಗೊತ್ತಿಲ್ಲ). ಉದಾಹರಣೆಗೆ, “ಘನೀರ್ಭಸಿದ ಬೆಳದಿಂಗಳಂತಹ ಅಮೃತಶಿಲೆ”, “ಹೆಪ್ಪುಗಟ್ಟಿದ ಬೆಂಕಿಯಂತಹ ಚಿನ್ನ”. ಇಲ್ಲಿ ಅಮೃತಶಿಲೆ ಮತ್ತು ಬೆಂಕಿಯನ್ನು ಅವುಗಳಿಗಿಂತಲೂ ಮೂಲಭೂತ ಧಾತುವಿನೊಂದಿಗೆ ಹೋಲಿಸಲಾಗಿದೆ. ಅವುಗಳನ್ನು ಬೆಳದಿಂಗಳು ಮತ್ತು ಬೆಂಕಿಗೆ ಹೋಲಿಸಲಾಗಿದೆ – ಬೆಂಕಿಯೂ ಅಲ್ಲ, ಇನ್ನೂ ಹೆಚ್ಚು ಮಾಂತ್ರಿಕ ಹೆಪ್ಪುಗಟ್ಟಿದ ಬೆಂಕಿಗೆ.

ಒಂದು ದೃಷ್ಟಿಯಲ್ಲಿ ನೋಡಿದರೆ ಜನ ಮಹಾಕಾವ್ಯಕ್ಕಾಗಿ ಪರಿತಪಿಸುತ್ತಿದ್ದಾರೆ. ಜನರಿಗೆ ಅವಶ್ಯವಿರುವ ಸಂಗತಿಗಳಲ್ಲಿ ಮಹಾಕಾವ್ಯವೂ ಒಂದೆಂದು ನನಗಂತೂ ಅನಿಸುತ್ತದೆ. ನಿಮಗೆ ನನ್ನ ಮಾತು ಅಚ್ಚರಿಯದು ಎನಿಸಬಹುದು, ಆದರೆ, ಇಂದಿನ ಜಗತ್ತಿಗೆ ಮಹಾಕಾವ್ಯವನ್ನು ಒದಗಿಸಿರುವುದು ಹಾಲಿವುಡ್. ವಿಶ್ವದೆಲ್ಲೆಡೆ, ಜನರು ಹಾಲಿವುಡ್ ವೆಸ್ಟರ್ನ ಸಿನೆಮಾವನ್ನು ನೋಡಿದಾಗ – ಅದರಲ್ಲಿನ ಕುದುರೆ ಸವಾರ, ಮರುಭೂಮಿ, ನ್ಯಾಯ, ಶೆರಿಫ಼್, ಗುಂಡಿನ ಚಕಮಕಿಗಳೇ ಮುಂತಾದ ಮಿಥಕಗಳನ್ನು ಕಂಡಾಗ – ಅವರಿಗೆ ಅರಿತೋ, ಅರಿಯದೆಯೋ ಮಹಾಕಾವ್ಯದ ಅನುಭವ ಆಗುತ್ತದೆಂದು ನನ್ನ ಅನಿಸಿಕೆ. ಎಷ್ಟೆಂದರೂ ಒಂದು ಸಂಗತಿಯನ್ನು ಅದೇ ಎಂದು ತಿಳಿಯುವುದೇ ಅಷ್ಟು ಮುಖ್ಯವಲ್ಲ.

Image Courtesy: The Club Of CompulsiveReaders

Image Courtesy: The Club Of CompulsiveReaders

ನಾನೇನು, ಭವಿಷ್ಯ ನುಡಿಯ ಬಯಸುವುದಿಲ್ಲ, ಮುಂದೊಮ್ಮೆ ನಿಜವಾದರೂ ಕೂಡ ಅದು ಅಪಾಯಕಾರಿಯೆಂಬ ಅರಿವು ನನಗಿದೆ. ಆದರೆ, ನನಗನಿಸುತ್ತದೆ ಕತೆಯನ್ನು ಕಥಿಸುವುದು ಮತ್ತು ಪದ್ಯವನ್ನು ಹಾಡುವುದು ಇವೆರಡು ಮತ್ತೆ ಒಂದಾದರೆ, ಅದು ಒಂದು ಬಹು ಮುಖ್ಯ ಬೆಳವಣಿಗೆಯಾಗಬಹುದು. ಇದು ಅಮೇರಿಕಾದಿಂದಲೇ ಬಂದೀತು, ಯಾಕೆಂದರೆ, ನಿಮಗೆಲ್ಲ ತಿಳಿದಿರುವ ಹಾಗೆ ಅಮೇರಿಕಾಗೆ ಒಂದು ಸಂಗತಿ ಸರಿಯೋ ತಪ್ಪೋ ಎಂಬ ನೈತಿಕ ಅರಿವಿದೆ. ಇತರ ದೇಶಗಳಲ್ಲಿಯೂ ಇದನ್ನು ನೀವು ಕಾಣಬಹುದು, ಆದರೆ, ಇಲ್ಲಿಯ ಹಾಗೆ ಅದು ಅಷ್ಟು ಸ್ವಾಭಾವಿಕವಾಗಿ ಗೋಚರಿಸುವುದಿಲ್ಲ. ನಾವು ಮಹಾಕಾವ್ಯಕ್ಕೆ ಮರಳುವುದು ಸಾದ್ಯವಾದರೆ, ನಾವು ಮಹತ್ತಾದುದನ್ನು ಸಾಧಿಸಿದ ಹಾಗೆ ಆಗುತ್ತದೆ. ಚೆಸ್ಟರ್ಟನ್ “ದ ಬ್ಯಾಲಡ್ ಆಫ್ ದ ವೈಟ್ ಹಾರ್ಸ್” ಬರೆದಾಗ ಪುಸ್ತಕ ವಿಮರ್ಶೆಗಳೇನೋ ಚೆನ್ನಾಗಿದ್ದವು, ಆದರೆ, ಓದುಗರು ಅಷ್ಟಾಗಿ ಮೆಚ್ಚಿಕೊಳ್ಳಲಿಲ್ಲ. ಈಗ ಚೆಸ್ಟರ್ಟನ್ನನ ಹೆಸರಿನೊಂದಿಗೆ ಈ ಪದ್ಯಕ್ಕಿಂತ ಫಾದರ್ ಬ್ರೌನ್ ಕತೆಯನ್ನು ನೆನಪಿಸಿಕೊಳ್ಳುವುದೇ ಹೆಚ್ಚು.

ನಾನು ಈ ವಿಷಯದ ಕುರಿತು ವಯಸ್ಸು ಮೀರಿದ ಹೊತ್ತಿನಲ್ಲಿ ಯೋಚಿಸಲು ತೊಡಗಿದ್ದೇನೆ. ಹೇಗಿದ್ದರೂ, ನಾನು ಮಹಾಕಾವ್ಯ ಬರೆಯಬಲ್ಲೆನೆಂದು ನನಗನ್ನಿಸುವುದಿಲ್ಲ. ಯುವಕರು ಮಾಡಬೇಕಾದ ಕೆಲಸವಿದು. ಅವರು ಮಾಡುತ್ತಾರೆಂದು ನಾನು ಆಶಿಸುತ್ತೇನೆ, ಯಾಕೆಂದರೆ, ನಮಗೆಲ್ಲ ಗೊತ್ತಿರುವ ಹಾಗೆ ಕಾದಂಬರಿ ಪ್ರಕಾರ ಮುರಿದು ಬೀಳುತ್ತಿದೆ. ನಮ್ಮ ಕಾಲಮಾನದ ಮುಖ್ಯ ಕಾದಂಬರಿಗಳನ್ನು ನೆನಪಿಸಿಕೊಂಡರೆ, ಉದಾಹರಣೆಗೆ ಜಾಯ್ಸನ “ಯೂಲಿಸಸ್”. ಈ ಕೃತಿಯ ಎರಡು ಪಾತ್ರಗಳ ಬಗ್ಗೆ ಸಾವಿರಾರು ಸಂಗತಿಗಳನ್ನು ನಾವು ಕೇಳಿದ್ದರೂ, ಆ ಪಾತ್ರಗಳು ನಮಗೆ ಗೊತ್ತೇ ಇಲ್ಲ. ನಮಗೆ ಡಾಂಟೆಯ ಅಥವಾ ಶೇಕ್ಸಪಿಯರನ ಪಾತ್ರಗಳು ಹೆಚ್ಚು ಸನಿಹವಾಗಿವ್ಬೆ, ಅವು ಕೆಲವೇ ಸಾಲುಗಳಲ್ಲಿ ನಮ್ಮನ್ನು ತಲುಪುತ್ತವೆ. ಅವರ ಕುರಿತಾಗಿ ಸಾವಿರಾರು ಸಂಧರ್ಭಗಳು ನಮಗೆ ಗೊತ್ತಿಲ್ಲದಿದ್ದರೂ, ಆ ಪಾತ್ರಗಳನ್ನು ನಾವು ಹತ್ತಿರದಿಂದ ಬಲ್ಲೆವು. ಅದೇ, ಎಲ್ಲಕ್ಕಿಂತ ಮುಖ್ಯ ಸಂಗತಿ ತಾನೇ?

ಕಾದಂಬರಿಯೆಂಬ ಸಾಹಿತ್ಯ ಪ್ರಕಾರ ಅವನತಿಯ ಅಂಚಿನಲ್ಲಿದೆ. ತುಂಬಾ ಸಾಹಸಿ, ತುಂಬಾ ಕುತೂಹಲಭರಿತ ಪ್ರಯೋಗಗಳಿದ್ದಾವಲ್ಲ – ಉದಾಹರಣೆಗೆ ಕಾಲದ ಪಲ್ಲಟಗಳು, ವಿವಿಧ ಪಾತ್ರಗಳು ಕತೆಯನ್ನು ನಿರೂಪಿಸುವುದು – ಇವೆಲ್ಲವೂ ಕಾದಂಬರಿ ಈಗ ನಮ್ಮೊಂದಿಗಿಲ್ಲವೆಂಬ ಭಾವವನ್ನು ನಿರ್ಮಿಸುವಂತಹ ಕ್ಷಣದತ್ತ ಸಾಗಿವೆ.

ಆದರೆ, ಕತೆಯಲ್ಲಿ ಅದೇನೋ ಇದೆ, ಎಂದೆಂದಿಗೂ ಸಾಗುತ್ತಲೇ ಇರುವಂತಹುದು. ಜನರಿಗೆ ಕತೆಯನ್ನು ಹೇಳುವುದು ಅಥವಾ ಕೇಳುವುದು ಸಾಕು ಎಂದು ಯಾವಾಗಲೂ ಅನಿಸುವುದಿಲ್ಲವೆಂದೇ ನನ್ನ ಭಾವನೆ. ಕತೆಯನ್ನು ಕೇಳುವ ಆನಂದದ ಜೊತೆ, ಪದ್ಯದ ಘನತೆಯೂ ಸೇರಿಕೊಂಡಿತೆಂದರೆ, ಮಹತ್ತರವಾದುದೇನೋ ನಮ್ಮ ನಡುವೆ ಸಂಭವಿಸಬಹುದು. ನಾನು ಹತ್ತೊಂಬತ್ತನೇ ಶತಮಾನದ ಹಳೆಯ ಪೈಕಿಯವನಿರಬಹುದು, ಭರವಸೆ, ಉಮ್ಮೀದು ನನ್ನಲ್ಲಿ ಇನ್ನೂ ಜೀವಂತವಾಗಿವೆ. ಭವಿಷ್ಯವೆನ್ನುವುದು ಎಷ್ಟೆಲ್ಲ ಸಂಗತಿಗಳನ್ನು ಹೊಂದಿದೆ, ಎಲ್ಲವನ್ನೂ ಹೊಂದಿದೆ, ನನಗಂತೂ, ಮಹಾಕಾವ್ಯ ಮರಳುತ್ತದೆಯೆನ್ನುವ ಭರವಸೆ ಇದೆ. ಕವಿ ಖಂಡಿತವಾಗಿ “ಮಾಡುವವ”ನಾಗುತ್ತಾನೆ ಮತ್ತೊಮ್ಮೆ. ಅಂದರೆ, ಕವಿ ಕತೆಹೇಳಲಿದ್ದಾನೆ ಮತ್ತು ಅದನ್ನು ಹಾಡಲಿದ್ದಾನೆ. ಹೇಗೆ, ಹೋಮರ ಅಥವಾ ವರ್ಜಿಲ್ ಕವಿಗಳಲ್ಲಿ ಇವೆರಡು ಸಂಗತಿಗಳನ್ನು ನಾವು ಪ್ರತ್ಯೇಕವೆಂದು ಪರಿಗಣಿಸುವುದಿಲ್ಲವೋ, ಹಾಗೆಯೇ ಇನ್ನು ಮುಂದೆ ಸಹ ಈ ವಿಂಗಡಣೆಯನ್ನು ನಾವು ತೊರೆದುಬಿಡಲಿದ್ದೇವೆ.

… ಮುಂದುವರೆಯುವುದು


ಕಾವ್ಯ ಎಂಬ ಒಗಟು:

ಭಾಗ ೧: https://ruthumana.com/2020/08/24/borges-craft-of_verses-riddles-of-poetry-1/

ಭಾಗ ೨: https://ruthumana.com/2020/09/04/borges-craft-of_verses-riddles-of-poetry-2/

ರೂಪಕ:

ಭಾಗ ೧: https://ruthumana.com/2020/10/18/borges-craft-of_verses-the-metaphor-1/

ಭಾಗ ೨: https://ruthumana.com/2020/12/31/borges-craft-of_verses-the-metaphor-2/

ಪ್ರತಿಕ್ರಿಯಿಸಿ