ಋತುಮಾನಕ್ಕೆ ಐದು ಸಂವತ್ಸರಗಳು

ಇಂದಿಗೆ ಋತುಮಾನ ಶುರುವಾಗಿ ಐದು ವರ್ಷಗಳು ತುಂಬಿತು . ನಾವಂದುಕೊಂಡಿದ್ದಕ್ಕಿಂತ ತುಸು ಹೆಚ್ಚೇ ಸಾಧಿಸಿದ್ದೇವೆ ಎಂಬ ಸಂತೃಪ್ತಿ ನಮಗೆ. ನಾಲ್ಕು ವರ್ಷ ನಮ್ಮೊಡನಿದ್ದ ಎಲ್ಲರನ್ನೂ ಮತ್ತೊಮ್ಮೆ ಸ್ಮರಿಸುತ್ತಾ ಐದನೇ ವರ್ಷದಲ್ಲಿ ಅದೇ ನಿರಂತರತೆಯನ್ನು ಕಾಯ್ದುಕೊಳ್ಳುಕೊಳ್ಳುವಲ್ಲಿ ನಮ್ಮೊಂದಿಗಿದ್ದವರು ಪ್ರಮುಖವಾಗಿ ಇವರು . ಬೇರೆ ಭಾಷೆಯಿಂದ ಪ್ರಮುಖ ವೈಚಾರಿಕ ಲೇಖನಗಳನ್ನು ಕನ್ನಡಕ್ಕೆ ತರುವಲ್ಲಿ , ನಾವು ಚಿತ್ರೀಕರಿಸಿದ ವಿಡಿಯೋಗಳನ್ನು ಎಡಿಟ್ ಮಾಡುವಲ್ಲಿ , ಪ್ರಕಟವಾದ ಕತೆ ಮತ್ತು ಕವಿತೆಗಳಿಗೆ ಚಿತ್ರ ಬರೆದು ಜೀವ ತುಂಬುವಲ್ಲಿ ,ಸಹಯೋಗದೊಂದಿಗೆ ಕಾರ್ಯಕ್ರಮ ರೂಪಿಸುವಲ್ಲಿ , ಋತುಮಾನ ಆಯ್ಕೆ ಮಾಡಿ ಪ್ರಕಟಿಸಿದ ಇ ಪುಸ್ತಕಗಳ ತಯಾರಿಕೆಯಲ್ಲಿ ಬಹಳ ಆಸ್ಥೆಯಿಂದ ದುಡಿದವರಿವರು. ಇವರಲ್ಲದೆ ಇನ್ನೂ ಅನೇಕರು ಈ ವರ್ಷ ನಮಗೆ ನೆರವಾಗಿದ್ದಾರೆ. ಅವರೆಲ್ಲರಿಗೂ ತುಂಬು ಮನಸಿನ ಕೃತಜ್ಞತೆಗಳು. ವಿನಂತಿಸಿದಾಗ ಲೇಖನ ಬರೆದುಕೊಟ್ಟ – ವಿಡಿಯೋ ಸರಣಿಯಲ್ಲಿ ಮಾತಾಡಿದ ಮಹನೀಯರಿಗೂ , ನಮ್ಮ ಪ್ರಯೋಗವನ್ನು ಮೆಚ್ಚಿ ತಮ್ಮ ಕೈಲಾದಷ್ಟು ಧನಸಹಾಯ ಮಾಡಿದ ಎಲ್ಲರಿಗೂ ನಾವು ಆಭಾರಿ.

ಇನ್ನೊಂದು ವರ್ಷ ಇದೇ ತೆರನಾಗಿ  ನಮ್ಮ ಧ್ಯೇಯೋದ್ದೇಶಗಳಿಗೆ ನಿಷ್ಠರಾಗಿ, ಎಲ್ಲರನ್ನೂ ಒಳಗೊಂಡು ದುಡಿಯುವ ಹುರುಪಿರಲಿ.

ಎಂದು,
ಋತುಮಾನ ತಂಡ

ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು.  ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ

https://imjo.in/5fZZ9X

ಗೂಗಲ್ ಪ್ಲೇ ಸ್ಟೋರ್ / ಆ್ಯಪಲ್ ಆ್ಯಪ್ ಸ್ಟೋರ್ ನಲ್ಲಿ “ಋತುಮಾನ” ಎಂದು ಹುಡುಕಿ , ಋತುಮಾನದ ಆ್ಯಪ್ ನಿಮ್ಮ ಫೋನ್‌ಗಳಿಗೆ ಡೌನ್ಲೋಡ್ ಮಾಡಿಕೊಳ್ಳಿ .

Download RUTHUMANA App here :

 

One comment to “ಋತುಮಾನಕ್ಕೆ ಐದು ಸಂವತ್ಸರಗಳು”
 1. ಪ್ರಿಯ ನಿತೇಶ್ ಮತ್ತು ಋತುಮಾನದ ಜೀವನಾಡಿ ಬಳಗದ ಎಲ್ಲ ಸ್ನೇಹಿತರೇ,

  ಎಂಥ ಸಂಭ್ರಮದ ದಿನ ಇದು! ಸುಸ್ವಪ್ನವೊಂದನ್ನು ಸಾಕಾರಮಾಡುತ್ತ, ವಾಸ್ತವದಲ್ಲಿ ಪೊರೆದು, ಬೆಳೆಸುತ್ತ ಆರನೆಯ ಸಂವತ್ಸರದ ಹೊಸ್ತಿಲಿಗೆ ತಂದಿದ್ದೀರಿ. ದೊಡ್ಡ ಸಾಹಸವಷ್ಟೇ ಅಲ್ಲ ನಿಮ್ಮದು, ಶುದ್ಧವಾದ ಮನಸ್ಸುಗಳ, ಶುದ್ಧವಾದ ಅಂತಃಕರಣದ ಸೃಜನಶೀಲ ಯಜ್ಞ. ತತ್ತ್ವಜಿಜ್ಞಾಸೆ, ಸಾಮಾಜಿಕ-ಆರ್ಥಿಕ-ಐತಿಹಾಸಿಕ ಅಧ್ಯಯನ, ರಾಜಕಾರಣದ ಕುರಿತ ಚಿಂತನೆ-ವಿಶ್ಲೇಷಣೆ, ಸಾಹಿತ್ಯದ ವಿಮರ್ಶೆ ಮತ್ತು ಮೀಮಾಂಸೆ, ರಂಗಭೂಮಿ ಕುರಿತ ಚಿಂತನೆ, ಶಾಲಾಕಾಲೇಜು ಶಿಕ್ಷಣದ ರೀತಿನೀತಿಗಳ ಪರಾಮರ್ಶೆ, ಪ್ರಾದೇಶಿಕ ಸಂಸ್ಕೃತಿ ಮತ್ತು ಭಾಷೆಗಳನ್ನು ಕುರಿತ ಧ್ಯಾನ, ಕವಿತೆಗಳ ಪ್ರಕಟಣೆ ಮುಂತಾಗಿ ಮುಂತಾಗಿ ಎಷ್ಟೊಂದು ಬಗೆಯ, ಎಷ್ಟೊಂದು ಉತ್ಕೃಷ್ಟವಾದ ಬರಹಗಳನ್ನು, ವಿಡಿಯೋಗಳನ್ನು ವಿವೇಚನೆಯಿಂದ ಆಯ್ದು ಪ್ರಕಟಿಸಿದ್ದೀರಿ, ನಮ್ಮ ಧೀ ಎಂಬುದನ್ನು ಬೆಳಗಿಸಿದ್ದೀರಿ! ಈ ಐದು ಸಂವತ್ಸರಗಳಲ್ಲಿ, ಎಲ್ಲಿಯೂ, ಅಗ್ಗವೂ ಹುಸಿಯೂ ಸಲೀಸಾದದ್ದೂ ಆದ, ತಥಾಕಥಿತ, ಜನಪ್ರಿಯತೆಯ ವರಸೆ ತೋರದೆ, ಘನವಾದ ವಸ್ತು-ವಿಷಯವನ್ನು ಹೊತ್ತಿರುವ ಘನವಾದ ತಾಣವೇ ಆಗಿದ್ದೀರಿ.

  ಅಷ್ಟೆಲ್ಲವನ್ನು ಮಾಡುವುದರ ನಡುವೆ, ಹೆಚ್ಚು ಕಮ್ಮಿ ನಿಮ್ಮ ಧ್ಯೇಯವಾಕ್ಯವಾಗಿ, ಉದ್ಘೋಷವಾಗಿ ಈ ಮಾತನ್ನು ಉದ್ದಕ್ಕೂ ಜಗತ್ತಿಗೆ ಸಾರಿದ್ದೀರಿ:

  ಸಂವಿಧಾನದ ಮೂಲ ಆಶಯಕ್ಕೆ ವಿರೋಧವಾಗಿ ಭಾರತದ ಪೌರತ್ವವು ಧರ್ಮದ ಆಧಾರದಲ್ಲಿ ನಿರ್ಧಾರಗೊಳ್ಳುವುದನ್ನು ಋತುಮಾನ ಬಳಗ ವಿರೋಧಿಸುತ್ತದೆ ಹಾಗೂ ಪೌರತ್ವ ತಿದ್ದುಪಡಿ ಮಸೂದೆ ಹಿಂಪಡೆಯುವಂತೆ ಆಗ್ರಹಿಸುತ್ತದೆ.

  ‘ಋತುಮಾನ’ವು ತಾಳಿರುವಂಥ ನಿಲುವನ್ನೇ ತಾಳುತ್ತ ಬಂದಿರುವ, ನಮ್ಮನಿಮ್ಮೆಲ್ಲರ ಬಂಧುತ್ವದ ಪತ್ರಿಕೆಗಳು ಹಲವಿವೆ, ನಿಜ. ಆ ಪತ್ರಿಕೆಗಳು ಮತ್ತು ಅವುಗಳನ್ನು ನಡೆಸುವವರು ಕೂಡ ದೊಡ್ಡ ಕೆಲಸವನ್ನು ಮಾಡುತ್ತಿದ್ದಾರೆ, ಲೋಕಹಿತವನ್ನು ಕಾಯುವ ಕೆಲಸ ಮಾಡುತ್ತಿದ್ದಾರೆ. ನೀವು, ಅವರು ಎಲ್ಲರೂ ಇರುವುದರಿಂದಲೇ ನಮ್ಮ ಮನಸ್ಸಿನ ಒಳಿತು, ಲೋಕದಲ್ಲಿನ ಒಳಿತು ಉಳಿದು ಬಾಳುತ್ತಿದೆ. ಆದರೆ, ನನಗೆ ತಿಳಿದಮಟ್ಟಿಗೆ, ಕನ್ನಡದಲ್ಲಿ ಅಚ್ಚಾಗುವ, ಅಥವಾ ಸಂಗಣಕ ಲೋಕದಲ್ಲಿ ಪ್ರಕಟವಾಗುವ, ಬೇರೆ ಯಾವ ಪತ್ರಿಕೆಯೇ ಆಗಲಿ, ಋತುಮಾನದಂತೆ, ಈ ವಿಷಯದಲ್ಲಿನ ತನ್ನ ನಿಲುವನ್ನು ಇಂತಿಷ್ಟು ಮಾತುಗಳಲ್ಲಿ, ಹೀಗೆ, ನಿತ್ಯನಿರಂತರ ಎದೆಯ ಮೇಲೆಯೇ ಹೊತ್ತು ಕಾಣಿಸಿಕೊಳ್ಳುತ್ತಿಲ್ಲ.

  ಇದಲ್ಲವೇ ಋತುವಿನ ಮಾನವನ್ನು, ಋತದ ಮಾನ-ಸಂಮ್ಮಾವನ್ನು ಕಾಯುವ ಕೆಲಸ…

  ನಿಮಗೆ ಪ್ರೀತಿ, ಕೃತಜ್ಞತೆ; ಒಳಿತಿನ ಹರಕೆ, ಹಾರೈಕೆ.

  – ರಘುನಂದನ
  18 ಜುಲೈ 2021

ಪ್ರತಿಕ್ರಿಯಿಸಿ