ಕನ್ನಡದಾಗ ಲಿಪಿ ಯಾವು ಮತ್ತು ಯಾಕೆ?

ಕನ್ನಡದ ಲಿಪಿ ಸುಧಾರಣೆ ಮಾಡುವ ನಿಟ್ಟಿನಲ್ಲಿ ಮಹಾಪ್ರಾಣಗಳನ್ನು ತ್ಯಜಿಸಿ ಬರೆಯುವ ಕ್ರಮವನ್ನು ಒಂದಷ್ಟು ಮಂದಿ ನುಡಿಯರಿಗರು ಅಳವಡಿಸಿಕೊಳ್ಳುತ್ತಾ ಬಂದಿದ್ದಾರೆ. ಲಿಪಿ ಸುಧಾರಣೆಯ ಅವಶ್ಯಕತೆಯ ತಾತ್ವಿಕ ತಳಹದಿಯನ್ನೂ ವಿವರವಾಗಿ ದಾಖಲಿಸಿದ್ದಾರೆ. ಋತುಮಾನದಲ್ಲಿ ಮೊದಲು ಒಮ್ಮೆ ಈ ಹೊಸ ಬರಹ ಕ್ರಮದಲ್ಲಿ ಒಂದು ಲೇಖನ ಪ್ರಕಟಗೊಂಡಿತ್ತು. ಅದೇ ಬರಹ ಕ್ರಮದಲ್ಲಿ ಎರಡನೇ ಲೇಖನ ಇಲ್ಲಿದೆ.

ಕನ್ನಡದಾಗ ಯಾವ ಯಾವ ಲಿಪಿಗಳನ್ನು ಬಿಡಬೇಕು ಮತ್ತು ಒಟ್ಟು ಲಿಪಿ ವ್ಯವಸ್ತೆಯ ಸ್ವರೂಪ ಹೇಗಿರಬೇಕು ಎಂಬುದನ್ನು ಇಲ್ಲಿ ಮಾತಾಡಿದೆ.

ಕನ್ನಡದಾಗ ಎಶ್ಟು ಅಕ್ಕರಗಳು ಇವೆ ಎಂಬ ಮಾತುಕತೆ ಹೆಚ್ಚು ಕಡಿಮೆ ಕನ್ನಡಕ್ಕೆ ಮೊದಮೊದಲಿಗೆ ಲಿಪಿಯನ್ನು ಅಳವಡಿಸಿಕೊಳ್ಳುವ ದಿನಗಳಶ್ಟು ಹಳೆಯದು ಅಂದರೆ ಕ್ರಿಸ್ತಶಕದಶ್ಟು ಹಳೆಯದು.

ಕನ್ನಡದಾಗ ಬಹುದೊಡ್ಡ ಚರ‍್ಚೆಯ ವಿಶಯವೆಂದರೆ ಕನ್ನಡದಾಗ ಮಹಾಪ್ರಾಣ ಅಕ್ಕರಗಳು ಇವೆಯೆ ಎಂಬುದು. ಅದರೊಂದಿಗೆ ಇನ್ನೂ ಹಲವು ಅಕ್ಕರಗಳ ಬಗೆಗೆ ಕನ್ನಡದಲ್ಲಿ ಚರ‍್ಚೆ ಇದೆ. ಇಂದು ಹೆಚ್ಚು ಚರ‍್ಚೆಯಲ್ಲಿರುವ ಕನ್ನಡದ ಅಕ್ಕರಗಳು ಎಂದರೆ, ಋ, ಐ, ಔ, ಅಂ, ಷ್ ಮತ್ತು ರ್ ಅಕ್ಶರದ ಇನ್ನೊಂದು ಒತ್ತಕ್ಕರದ ರೂಪವಾದ ೯ ಮೊದಲಾದವು. ಇವುಗಳನ್ನು ಇಲ್ಲಿ ಸಣ್ಣದಾಗಿ ಮಾತಿಗೆತ್ತಿಕೊಂಡಿದೆ.

ಖ್,ಘ್,ಛ್,ಝ್,ಠ್,ಢ್,ಥ್,ಧ್,ಫ್,ಭ್: ಮಹಾಪ್ರಾಣ ಎಂದರೆ ದೊಡ್ಡ ಉಸಿರನ್ನು ಅಂದರೆ ದ್ವನಿಯ ಉಚ್ಚರಣೆಯ ಸಂದರ‍್ಬದಲ್ಲಿ ಉಸಿರನ್ನು ದೊಡ್ಡದಾಗಿ ಹೊರಬಿಟ್ಟು ಉಚ್ಚರಿಸುವ ದ್ವನಿ. ಹಾಗೆ ಕನ್ನಡದಲ್ಲಿ ದೊಡ್ಡ ಉಸಿರನ್ನು ಹಾಕಿ ಉಚ್ಚರಿಸುವುದು ಸಹಜವಾಗಿ ಇಲ್ಲ. ತರಬೇತಿ ಪಡೆದು ಉಚ್ಚರಿಸುವ ರೇಡಿಯೊ, ಟಿವಿ ಮೊದಲಾದ ಮಾದ್ಯಮಗಳಲ್ಲಿನ ವಾರ‍್ತೆ ಓದುವಲ್ಲಿಯೂ ಮಹಾಪ್ರಾಣದ ಸರಿಯಾದ ಉಚ್ಚರಣೆ ಕಂಡುಬರುವುದಿಲ್ಲ. ಕನ್ನಡದಲ್ಲಿ ಹತ್ತು ಇಂತಾ ಲಿಪಿಗಳನ್ನು ಇಟ್ಟುಕೊಂಡಿದೆ. ಕನ್ನಡದಲ್ಲಿ ಈ ದ್ವನಿಗಳು ಸಹಜವಾಗಿ ಇಲ್ಲವೆ ಇಲ್ಲ. ಹಾಗಾಗಿ ಬಹುತೇಕ (ವಾಸ್ತವದಲ್ಲಿ ಎಲ್ಲ) ಕನ್ನಡಿಗರು ಮಹಾಪ್ರಾಣವನ್ನು ಉಚ್ಚರಿಸಲಾರರು. ಹೀಗೆ ಉಚ್ಚರಣೆಯಲ್ಲಿ ಇಲ್ಲದ ದ್ವನಿಗಳಿಗೆ ಲಿಪಿಯನ್ನು ಮಾಡಿ ಅವುಗಳನ್ನು ಒತ್ತಾಯಪೂರ‍್ವಕವಾಗಿ ಕಲಿಯುವ ಅನಿವಾರ‍್ಯತೆ ತಂದು, ಕಲಿಕೆ ಸಾದ್ಯವಿಲ್ಲದ ಸ್ತಿತಿಗೆ ಮಕ್ಕಳನ್ನು ತಂದು ಅವರನ್ನು ಶಿಕ್ಶಣವಿಮುಕಿಯಾಗಿ ಬೆಳೆಯುವಂತೆ ಮಾಡುವುದು ಆ ಸಮಾಜ ತನ್ನ ಸದಸ್ಯರಿಗೆ ಮಾಡುವ ವಂಚನೆಯೆ ಸರಿ. ಈ ಕಾರಣಕ್ಕೆ ಮಹಾಪ್ರಾಣ ಲಿಪಿಗಳನ್ನು ಕನ್ನಡ ಲಿಪಿಯಿಂದ ಬಿಡಬೇಕು.

ಋ: ಕನ್ನಡ ಲಿಪಿಯ ಬದಲಾವಣೆ/ಸುದಾರಣೆಯನ್ನು ವಿರೋದಿಸುವ ‘ಪರಂಪರವಾದಿ’ಗಳು ಕೇಶಿರಾಜ ‘ಋ’ಕಾರವನ್ನು ಕನ್ನಡಕ್ಕೆ ಅನವಶ್ಯಕ ಎಂದು ಗೋಶಿಸಿ ಡಿಲಿಟ್ ಮಾಡಿರುವುದನ್ನು ಮರೆಯುತ್ತಾರೆ. ಆದುನಿಕ ಬಾಶಾವಿಗ್ನಾನ ಪಾರಂಪರಿಕ ವಿವರಣೆಯನ್ನು ಎತ್ತಿ ಹಿಡಿದು ಹೇಳುವಂತೆ, ಸ್ವರದ ಉಚ್ಚರಣೆಯಲ್ಲಿ ಬಾಯಲ್ಲಿನ ಯಾವುದೆ ಅಂಗ ಹೊರಬರುವ ಗಾಳಿಗೆ ತಡೆಯೊಡ್ಡದೆ ವಿವಿದ ಆಕಾರಗಳಲ್ಲಿ ನಿಂತು ಗಾಳಿ ಹೊರಹೋಗುವುದಕ್ಕೆ ಅನುವು ಮಾಡುತ್ತದೆ. ‘ಋ’ಕಾರದ ಉಚ್ಚರಣೆ ಕನ್ನಡಿಗರಿಗೆ ಸಾದ್ಯವೆ? ಅಂತದೊಂದು ಅನವಶ್ಯಕ ಚಿತ್ರವನ್ನು ಲಿಪಿಯಲ್ಲಿ ಇಟ್ಟುಕೊಂಡು ಕಲಿಯುವುದಕ್ಕೆ ಒತ್ತಡ ತರುವುದು ತಪ್ಪು.

ಐ, ಔ: ಪಾರಂಪರಿಕ ಮತ್ತು ಆದುನಿಕ ವಿದ್ವತ್ತು ‘ಐ’ ಮತ್ತು ‘ಔ’ಗಳನ್ನು ‘ಸಂದ್ಯಕ್ಕರ’, ಅಂದರೆ ಎರಡು ದ್ವನಿಗಳು ಸೇರಿರುವುದು ಎಂದು ವಿವರಿಸುತ್ತಾರೆ. (ಅ+ಇ=ಐ ಮತ್ತು ಅ+ಉ=ಔ). ಮೂಲಬೂತವಾಗಿ ಸಂದ್ಯಕ್ಕರಗಳನ್ನು ಅಕ್ಕರ ಎಂದು ಕಲಿಸುತ್ತಿರುವಲ್ಲಿ ವಿಗ್ನಾನದ ನಿಲುವು ಮತ್ತು ವಾಸ್ತವದ ವಿವರಣೆಗಳ ನಡುವೆ ಸಂಬಂದ ಇಲ್ಲದಿರುವುದು ಕಾಣುತ್ತದೆ. ಒಂದು ದ್ವನಿಮಾಕ್ಕೆ ಒಂದು ಲಿಪಿ ಎನ್ನುವುದಾದರೆ ಇಲ್ಲಿ ಎರಡು ದ್ವನಿಗಳು ಸೇರಿರುವ ಸಂದ್ಯಕ್ಕರಗಳಿಗೆ ಲಿಪಿ ಇಟ್ಟುಕೊಂಡಿದೆ. ಒಂದು ವಾಸ್ತವ ಎಂದರೆ ಕನ್ನಡದ ಉಚ್ಚರಣೆಯಲ್ಲಿ ಹಲವು ಸಂದ್ಯಕ್ಕರಗಳು ಬಳಕೆಯಲ್ಲಿವೆ (ಇ+ಅ=ಎ್ಯ [ಕರಿ+ಅಮ್ಮ=ಕರ‍್ಯಮ್ಮ]). ಹಾಗಾದರೆ, ಕನ್ನಡದಲ್ಲಿ ಇರುವ ಎಲ್ಲ ಸಂದ್ಯಕ್ಕರಗಳನ್ನು ಲಿಪಿಯಾಗಿಸುವುದಕ್ಕೆ ಸಾದ್ಯವೆ? ಯಾಕೆ ಕೇವಲ ಎರಡು ಸಂದ್ಯಕ್ಕರಗಳಿಗೆ ಈ ಲಿಪಿಯ ಯೋಗ? ಉತ್ತರಿಸಲೇಬೇಕಾದ ಆದರೆ, ಉತ್ತರವಿಲ್ಲದ ಪ್ರಶ್ನೆ ಇದು.

ಷ್: ‘ಷ್’ ಒಂದು ಮಡಿಚಿದ ಇಲ್ಲವೆ ಮೂರ‍್ದನ್ಯ ದ್ವನಿ. ಇದು ನಾಲಿಗೆಯನ್ನು ಮೇಲಕ್ಕೆ ಮಡಿಚಿ ಅದರ ಕೆಳತುದಿಯನ್ನು ಮೇಲುಹಲ್ಲಿನ ಹಿಂದಿನ ಅಂಗುಳಿಗೆ ತಾಕಿಸಿ ಉಚ್ಚರಿಸುವ ದ್ವನಿ ಎಂದು ಪಾಣಿನಿ ಬರೆಯುತ್ತಾನೆ. ಹಾಗೆ ‘ಷ್’ಕಾರವನ್ನು ಉಚ್ಚರಿಸುವುದಕ್ಕೆ ಬರಿಯ ಕನ್ನಡಿಗರಿಗೆ ಮಾತ್ರವಲ್ಲದೆ ಬಹುಶಾ ಯಾವುದೆ ಬಾರತೀಯ ಬಾಶೆಯಲ್ಲಿ ಸಾದ್ಯವಿಲ್ಲ. ‘ಶ್’ಕಾರವೂ ಕನ್ನಡಕ್ಕೆ ದೇಸಿ ಅಲ್ಲ. ಸಂಸ್ಕ್ರುತದ ಪ್ರಬಾವದಿಂದ ಕನ್ನಡದಲ್ಲಿ ಬಳಕೆಗೆ ಬಂದ ದ್ವನಿ. ಇಂದು ಚಾಮರಾಜನಗರದಂತಾ ಕೆಲವು ಕನ್ನಡಗಳನ್ನು ಹೊರತುಪಡಿಸಿ ಹಲವು ಒಳನುಡಿಗಳಲ್ಲಿ ಬಳಕೆಯಲ್ಲಿದೆ. ಯಾವುದೆ ಕನ್ನಡಿಗ ‘ಶ್’ ಮತ್ತು ‘ಷ್’ ದ್ವನಿಗಳ ನಡುವೆ ಉಚ್ಚರಣೆಯಲ್ಲಿ ವ್ಯತ್ಯಾಸ ಮಾಡಲು ಸಾದ್ಯವಿಲ್ಲ. ಒಂದು ದ್ವನಿಗೆ ಎರಡು ಲಿಪಿಗಳನ್ನು ಇಟ್ಟುಕೊಳ್ಳುವುದು ತಪ್ಪಾಗಲಿಕ್ಕಿಲ್ಲ, ಆದರೆ ಅವುಗಳನ್ನು ನಿರ‍್ದಿಶ್ಟಗೊಳಿಸಿ, ಅವುಗಳ ಬಳಕೆಯನ್ನು ಪ್ರತಿಬಂದಿಸುವುದು ತಪ್ಪು. ಬದಲಿಗೆ ಒಂದು ಲಿಪಿಯನ್ನು ಇಟ್ಟುಕೊಳ್ಳುವುದು ಕಲಿಯುವುದಕ್ಕೆ ಅನುಕೂಲವಾದೀತು ಎನ್ನುವುದನ್ನು ಪರಿಗಣಿಸಬೇಕು.

೦ : ಕನ್ನಡ ಪಟ್ಯಪುಸ್ತಕಗಳು ‘ಅಂ’ ಎನ್ನುವ ಒಂದು ‘ಅಕ್ಕರ’ವನ್ನು ಕಲಿಸುತ್ತವೆ. ಇಲ್ಲಿ, ದ್ವನಿ, ದ್ವನಿಮಾ ಮತ್ತು ಅಕ್ಶರ ಈ ಮೂರು ಪರಿಕಲ್ಪನೆಗಳು ಬೇರೆ ಬೇರೆ ಎಂಬುದನ್ನು ಯಾಕೆ ಆದುನಿಕ ಕಾಲದಲ್ಲಿರುವ ವಿದ್ವಾಂಸರು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎನ್ನುವುದು ಒಂದು ವಿಚಿತ್ರ. ‘ಅಂ’ ಇದು ಮೂಲಬೂತವಾಗಿ ಒಂದು ದ್ವನಿಯೆ ಅಲ್ಲ. ‘೦’ಯನ್ನು ಯಾರಾದರೂ ಉಚ್ಚರಿಸುವುದಕ್ಕೆ ಸಾದ್ಯವೆ? (ಅಂಗಿ, ಅಂಚು, ಅಂಟು, ಅಂದ, ಅಂಬು, ಅಂಶ ಇವುಗಳಲ್ಲಿ ಕ್ರಮವಾಗಿ ಙ್,ಞ್,ಣ್,ನ್,ಮ್,ಮ್ ದ್ವನಿಗಳು ಉಚ್ಚಾರವಾಗುತ್ತವೆ). ಸೊನ್ನೆಯನ್ನು ಕನ್ನಡದ ಬರವಣಿಗೆಯಲ್ಲಿ ಬಳಕೆಗೆ ತಂದದ್ದು ಬರವಣಿಗೆಗೆ ಅನುಕೂಲ ಎನ್ನುವ ಕಾರಣಕ್ಕೆ. ಇದು ಕೇವಲ ಒಂದು ಲಿಪಿ, ದ್ವನಿ ಇಲ್ಲವೆ ದ್ವನಿಮಾ ಅಲ್ಲ. ಹಾಗಾಗಿ, ಇದು ಅಕ್ಕರ ಆಗಲು ಕೂಡ ಸಾದ್ಯವಿಲ್ಲ. ಇದನ್ನು ಕನ್ನಡದ ಒಂದು ಅಕ್ಕರ ಎಂದು ಸರಕಾರ ಕಲಿಸುತ್ತದೆ. ಕನ್ನಡದಾಗ ಅಕ್ಕರಗಳೆಶ್ಟು ಎಂಬ ಪ್ರಶ್ನೆಗೆ ಈ ದ್ವನಿಯಲ್ಲದ ಒಂದು ಬರಿಯ ಲಿಪಿಯನ್ನು ಸೇರಿಸಿ ಹೇಳಿದರೆ ಉತ್ತರ ಸರಿ, ಇಲ್ಲದಿದ್ದರೆ ತಪ್ಪು. ಸರಕಾರ ನಿಂತು ತನ್ನ ಪ್ರಜೆಗಳಿಗೆ ಅವಾಸ್ತವವನ್ನು ವಾಸ್ತವವಾಗಿ ನಂಬುವುದಕ್ಕೆ ಹೇಳುತ್ತದೆ. ‘೦’ಯನ್ನು ಲಿಪಿ ಎಂದು ಹೇಳಿ ಕಲಿಸಬೇಕು.

೯: ಕನ್ನಡದಾಗ ‘ರ್’ಕಾರವನ್ನು ಬರೆಯುವುದಕ್ಕೆ ಮೂರು ಲಿಪಿಗಳಿವೆ. ಅಕ್ಕರವನ್ನು ಬರೆಯುವುದಕ್ಕೆ ‘ರ್’, ಅದರ ಒತ್ತಕ್ಕರ ರೂಪವನ್ನು ಬರೆಯುವುದಕ್ಕೆ ‘ ್ರ’ ಮತ್ತು ‘೯’. ಸಾಮಾನ್ಯವಾಗಿ ಕನ್ನಡದ ಬರವಣಿಗೆ ಕ್ರಮ ಉಚ್ಚರಣೆಯನ್ನು ಅನುಸರಿಸುತ್ತದೆ. ‘೯’ ಬಳಸುವಲ್ಲಿ ಈ ಅನುಕ್ರಮ ಮುರಿಯುತ್ತದೆ. ‘ಸೂರ‍್ಯ’ ಪದವನ್ನು ಓದುವಾಗ ಸ್+ಊ+ರ್+ಯ್+ಅ ಎಂಬುದು ಉಚ್ಚರಣೆಯ ಅನುಕ್ರಮ. ಒತ್ತಕ್ಕರದಲ್ಲಿ ಮೊದಲು ಉಚ್ಚರಿಸುವ ‘ರ್’ ದ್ವನಿ ಬರವಣಿಗೆಯಲ್ಲಿ ಮೊದಲು ಬಂದಿದೆ, ಅದನ್ನು ಉಚ್ಚರಣೆಯಲ್ಲಿ ಅನುಸರಿಸುವ ‘ಯ್’ ದ್ವನಿ ಲಿಪಿಯಲ್ಲಿಯೂ ಅನುಸರಿಸುತ್ತಿದೆ. ಆದರೆ ಇದೆ ಪದವನ್ನು ‘ಸೂರ್ಯ’ ಎಂದು ಬರೆದಾಗ ಈ ಅನುಕ್ರಮ ಮುರಿಯುತ್ತದೆ. ಗಮನಿಸಿ ಸ್+ಊ+ಯ್+ರ್+ಅ. ಕೆಲವೆ ಪದಗಳಲ್ಲಿ ಬಳಸುವ ‘೯’ ಲಿಪಿಯ ಕೆಲಸವನ್ನು ಅದಕ್ಕಿಂತ ಸೂಕ್ತವಾಗಿ ‘ ್ರ’ ಲಿಪಿ ಮಾಡುತ್ತಿರುವಾಗ ಅದನ್ನು ಇಟ್ಟುಕೊಳ್ಳಬೇಕಾದ ಅವಶ್ಯಕತೆ ಇಲ್ಲ.

ಙ್, ಞ್: ಙ್ ಮತ್ತು ಞ್ ದ್ವನಿಗಳಿಗೆ ಕನ್ನಡದಾಗ ಕನಿಶ್ಟ ಯುಗ್ಮಗಳು ದೊರೆಯುವುದಿಲ್ಲ. ಕಾಸರಗೋಡು ಕನ್ನಡದಂತಾ, ಕೆಲವು ತುಳು ಮತ್ತು ಮಲಯಾಳಂ ಪ್ರಬಾವದ ಒಳನುಡಿಗಳಲ್ಲಿ ಕೆಲವೆಡೆ ಈ ದ್ವನಿಗಳ ಬಳಕೆಯನ್ನು ಹೊರತುಪಡಿಸಿದರೆ ಎಲ್ಲಿಯೂ ಈ ದ್ವನಿಗಳು ದ್ವನಿಮಾಗಳಂತೆ ಬಳಕೆ ಆಗುವುದಿಲ್ಲ. ಹಾಗಾಗಿ, ಹೆಚ್ಚುವರಿ ಎನಿಸುವ ಈ ಲಿಪಿಗಳನ್ನೂ ಕಲಿಕೆಯಿಂದ ಬಿಡಬಹುದು.

ಕನ್ನಡ ಮಾತಿನ ಬಳಕೆಗೆ ಹೆಚ್ಚು ವಾಸ್ತವವಾಗಿರುವ ಲಿಪಿಯನ್ನು ತಿಳಿದುಕೊಳ್ಳುವುದಕ್ಕೆ ತೆರೆದುಕೊಂಡಿರಬಹುದು, ಅನವಶ್ಯಕವಾಗಿರುವುದನ್ನು ಕಯ್‌ಬಿಡಬಹುದು, ಅವಯಿಗ್ನಾನಿಕವಾಗಿ, ಅವಾಸ್ತವವಾಗಿ ಇರುವುದಕ್ಕಿಂತ ವಯಿಗ್ನಾನಿಕ ಮತ್ತು ವಾಸ್ತವವಾಗಿ ಬದುಕಬಹುದು.

4 comments to “ಕನ್ನಡದಾಗ ಲಿಪಿ ಯಾವು ಮತ್ತು ಯಾಕೆ?”
  1. ಈ ಲೇಖನ ಓದಲಿಕ್ಕೆ ಕಷ್ಟ, ದ್ವನಿ ಆದುನಿಕ ಇದರಿಂದ ಲೇಖನ ಕಷ್ಟ ಪಟ್ಟು ಓದಬೇಕು, ಸುಮ್ಮನೇ ಅನಗತ್ಯ ಲಿಪಿ ಸುಧಾರಣೆ. ಇದರಿಂದ ಲಿಪಿ ವೈವಿಧ್ಯತೆಗೆ ಧಕ್ಕೆ! ಮಾತನಾಡುವ ಭಾಷೆ ಮತ್ತು ಬರೆಯುವ ಭಾಷೆ ಬೇರೆಯಾಗಿರುತ್ತದೆ, ಯಾಕೆ ಒಂದು ಮಾಡಬೇಕು?

    • ಬದುಕಿನಲ್ಲಿ ಹೊಸತಾಗಿ ಬಂದಾಗ ಎಲ್ಲವೂ ಕಶ್ಟ ಅನಿಸುತ್ತವೆ. ಲಿಪಿ ಒಂದು ರೂಡಿ. ಒಮ್ಮೆ ರೂಡಿಯಾದರೆ ಅದು ಮುಂದುವರೆಯುತ್ತದೆ.

      ಬಳಕೆಯ ಕನ್ನಡ ಕಂಡಿತ ಬೇರೆ ಇರುತ್ತದೆ, ಶಿಶ್ಟಕನ್ನಡ ಬೇರೆ ಇರಲೇಬೇಕು. ಅವೆರಡನ್ನ ಒಂದು ಮಾಡಬೇಕೆಂಬ ವಿಚಾರ ಇದರಲ್ಲಿ ಇಲ್ಲ.

      ಶರಣು

    • ಬದುಕಿನಲ್ಲಿ ಹೊಸತಾಗಿ ಬಂದಾಗ ಎಲ್ಲವೂ ಕಶ್ಟ ಅನಿಸುತ್ತವೆ. ಲಿಪಿ ಒಂದು ರೂಡಿ. ಒಮ್ಮೆ ರೂಡಿಯಾದರೆ ಅದು ಮುಂದುವರೆಯುತ್ತದೆ.

      ಶರಣು

Leave a Reply to Basavaraja Kodagunti Cancel reply