ಶಾಪಗ್ರಸ್ಥರ ಸಿಟ್ಟು : ಒರ್ಹಾನ್ ಪಾಮುಕ್ ಪ್ರಬಂಧ

“ಇಸ್ತಾನ್‌ಬುಲ್ ದ್ವೀಪದಲ್ಲಿರುವ ನಿರ್ಗತಿಕ ಮುದುಕನೊಬ್ಬ ನ್ಯೂಯಾರ್ಕ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಕ್ಷಣಮಾತ್ರದಲ್ಲಿ ಅನುಮೋದಿಸಿದರೆ ಅಥವಾ ಇಸ್ರೇಲಿ ಆಕ್ರಮಣದಿಂದ ಬೇಸತ್ತ ಪ್ಯಾಲೆಸ್ಟೇನಿಯನ್ನ ಯುವಕನೊಬ್ಬ ಮಹಿಳೆಯರ ಮುಖಕ್ಕೆ ತಾಲಿಬಾನ್ ಆಸಿಡ್ ಎರಚುವುದನ್ನು ಮೆಚ್ಚುಗೆಯಿಂದ ನೋಡಲು ಸಾಧ್ಯವಾದರೆ, ಅವನನ್ನು ಪ್ರೇರೇಪಿಸುತ್ತಿರುವುದು ಇಸ್ಲಾಂ ಅಥವಾ ಈ ಮೂರ್ಖಜನರು ಹೇಳುವಂತೆ ಪೂರ್ವ ಮತ್ತು ಪಶ್ಚಿಮದ ನಡುವಿನ ಯುದ್ಧವಲ್ಲ, ಅದು ಬಡತನವವೂ ಅಲ್ಲ; ಇದು ಬೇರೊಬ್ಬರಿಗೆ ಅರ್ಥ ಮಾಡಿಸಲಾಗದ, ಧ್ವನಿಯನ್ನು ಕೇಳಿಸಲಾಗದ ವೈಫಲ್ಯ ಮತ್ತು ನಿರಂತರ ಅವಮಾನದಿಂದ ಹುಟ್ಟಿದ ದೌರ್ಬಲ್ಯ.” 

ದುರ್ಘಟನೆಗಳು ಜನರನ್ನು ಒಂದುಗೂಡಿಸುತ್ತವೆ ಎಂದುಕೊಂಡಿದ್ದೆ. ನಾನು ಚಿಕ್ಕವನಿದ್ದಾಗ ಇಸ್ತಾಂಬುಲ್  ನಲ್ಲಿ ದೊಡ್ಡ ಅಗ್ನಿ ಅನಾಹುತ ಸಂಭವಿಸಿತ್ತು, ೧೯೯೯ರಲ್ಲಿ ಭೂಕಂಪವಾಗಿತ್ತು. ಆಗ ನಾನು ನನ್ನ ಅನುಭವವನ್ನು ಹಂಚಿಕೊಳ್ಳಲು ತಕ್ಷಣಕ್ಕೆ ಯಾರನ್ನಾದರೂ ಹುಡುಕಿಕೊಳ್ಳುತ್ತಿದೆ. ಆದರೆ ಈ ಬಾರಿ ನಾನು ಚಿಕ್ಕ ಬಂದರೊಂದರ ಪಕ್ಕದ ಪುಟ್ಟ ಕೋಣೆಯಲ್ಲಿ ಟಿ.ವಿ ನೋಡುತ್ತಾ ಕುಳಿತಿದ್ದೆ. ಕುದುರೆ ಗಾಡಿ ಓಡಿಸುವವರು, ಹಮಾಲಿಗಳು, ಟಿ.ಬಿ ರೋಗಿಗಳೇ ಹೆಚ್ಚಾಗಿ  ಈ ಕಾಫಿಹೌಸಿಗೆ ಬರುತ್ತಿದ್ದರು. ಟಿ.ವಿ ಪರದೆಯ ಮೇಲೆ ಅವಳಿ ಗೋಪುರಗಳು ನೆಲಕ್ಕುರುಳುತ್ತಿದ್ದುದನ್ನು ನೋಡಿದೆ. ತೀವ್ರ ಹತಾಶೆಗೊಳಗಾದ ನಾನು ಏಕಾಂಗಿಯಾಗಿದ್ದೇನೆ ಎನಿಸಿತು. 

ವಿಮಾನ ಎರಡನೇ ಗೋಪುರಕ್ಕೆ ಗುದ್ದಿದ ತಕ್ಷಣವೇ ಟರ್ಕಿಶ್ ಟಿ.ವಿ ಲೈವ್ ಆರಂಭಿಸಿತು. ತಮ್ಮ ಕಣ್ಣೆದುರು ನಂಬಲಸಾಧ್ಯವಾದ ದೃಶ್ಯಗಳು ಮಿಂಚಿ ಮರೆಯಾಗುವುದನ್ನು ಕಾಫಿಹೌಸಿನೊಳಗಿದ್ದ ಗುಂಪು ಅಚ್ಚರಿಯ ಮೌನದಿಂದ ನೋಡುತ್ತಿತ್ತು. ಅದೇನೂ ಅವರ ಮೇಲೆ ಹೆಚ್ಚು ಪರಿಣಾಮ ಬೀರಿದಂತೆ ಅನ್ನಿಸಲಿಲ್ಲ. ಒಂದು ಕ್ಷಣ ಎದ್ದು ನಿಂತು ”ನಾನೂ ಆ ಕಟ್ಟಡಗಳ ನಡುವೆ ಬದುಕಿದ್ದೆ, ಆ ಬೀದಿಗಳಲ್ಲಿ ನಯಾ ಪೈಸೆಯೂ ಇಲ್ಲದೆ ತಿರುಗಾಡಿದ್ದೆ, ಆ ಕಟ್ಟಡಗಳಲ್ಲಿದ್ದ ಜನರನ್ನ ಭೇಟಿಯಾಗಿದ್ದೆ, ನನ್ನ ಬದುಕಿನ ಮೂರು ವರ್ಷಗಳನ್ನು ಆ ನಗರದಲ್ಲಿ ಕಳೆದಿದ್ದೆ” ಎಂದು ಹೇಳಬೇಕು ಎನಿಸಿತು. ಆದರೆ ಸುಮ್ಮನಾದೆ. ಎಂದೂ ಮುಗಿಯದ ಆಳವಾದ ಮೌನಕ್ಕೆ ತೆರಳುತ್ತಿರುವ ಕನಸು ಕಾಣುತ್ತಿರುವವನಂತೆ ಮೌನಿಯಾದೆ. 

ಟಿ.ವಿ ಪರದೆಯ ಮೇಲೆ ನೋಡಿದ್ದನ್ನು ನನ್ನಿಂದ ಸಹಿಸಲಾಗಲಿಲ್ಲ,  ನನ್ನಂತೆಯೇ ಯಾತನೆ ಪಡುವವವರು ಯಾರಾದರೂ ಸಿಗುತ್ತಾರೇನೋ ಎಂದು ಹುಡುಕುತ್ತಾ ಬೀದಿಗೆ ಇಳಿದೆ. ಸ್ವಲ್ಪ ಹೊತ್ತಿನ ನಂತರ ಓರ್ವ ಹೆಂಗಸು ಜನರ ಗುಂಪಿನಲ್ಲಿ ಅಳುತ್ತಾ ದೋಣಿಗಾಗಿ ಕಾಯುತ್ತಿದ್ದುದನ್ನು ಕಂಡೆ. ಅವಳ ವರ್ತನೆ ಮತ್ತು ಜನರು ಅವಳನ್ನು ದಿಟ್ಟಿಸುತ್ತಿದುದನ್ನು ಗಮನಿಸಿದಾಗ ಅವಳು ಮ್ಯಾನ್ಹಟನ್ ನಲ್ಲಿನ ತನ್ನ ಪ್ರೀತಿ ಪಾತ್ರರನ್ನು ಕಳೆದುಕೊಂಡು ದುಃಖಿಸುತ್ತಿರುವಂತಿರಲಿಲ್ಲ, ಬದಲಿಗೆ ಜಗತ್ತೇ ಮುಳುಗುತ್ತಿದೆ ಎಂದುಕೊಂಡಂತಿತ್ತು. ನಾನು ಚಿಕ್ಕವನಿದ್ದಾಗ ಕ್ಯೂಬನ್ ಮಿಸೈಲ್ ಬಿಕ್ಕಟ್ಟು, ಮೂರನೇ ವಿಶ್ವ ಯುದ್ಧವಾಗಿ ಬದಲಾಗುವ ಆತಂಕದಲ್ಲಿ ಹೀಗೆಯೇ ಹೆಂಗಸರು ದಿಕ್ಕೆಟ್ಟು ಅಳುವುದನ್ನು ನೋಡಿದ್ದೆ. ಇಸ್ತಾಂಬುಲ್ ಮಧ್ಯಮ ವರ್ಗದ ಕುಟುಂಬಗಳು ತಮ್ಮ ಕಣಜಗಳಲ್ಲಿ ಕಾಳುಗಳು ಮತ್ತು ಮ್ಯಾಕರೋನಿ ಪೊಟ್ಟಣಗಳನ್ನು ಸಂಗ್ರಹಿಸುವುದನ್ನು ನೋಡಿದ್ದೆ. ಕಾಫಿಹೌಸಿಗೆ ವಾಪಸಾಗಿ ಕೂರುತ್ತಿದ್ದಂತೆಯೇ ಟಿ.ವಿ ಪರದೆಯ ಮೇಲೆ ಕತೆ ತೆರೆದುಕೊಂಡಿತು. ಜಗತ್ತಿನ ಎಲ್ಲರೂ ಕಡ್ಡಾಯವೆಂಬಂತೆ ವೀಕ್ಷಿಸುತ್ತಿದ್ದುದನ್ನು ನಾನೂ ನೋಡಿದೆ. 

ನಂತರ ನಾನು ಮತ್ತೆ ಬೀದಿಗಿಳಿದಾಗ ನೆರೆಯವನೊಬ್ಬ ಸಿಕ್ಕ. “ಒರ್ಹಾನ್ ಬೇ, ನೋಡಿದ್ಯಾ? ಅವ್ರು ಅಮೆರಿಕದ ಮೇಲೆ ಬಾಂಬ್ ಹಾಕ್ಬಿಟ್ರು” ಎಂದ. ಜೊತೆಗೆ ಕೋಪದಿಂದ, “ಸರಿಯಾಗೇ ಮಾಡಿದ್ರು” ಅಂತಲೂ ಹೇಳಿದ. 

ಈ ಮುದುಕ ಧಾರ್ಮಿಕ ವ್ಯಕ್ತಿಯೇ ಅಲ್ಲ. ಇವನು ತೋಟಗಾರಿಕೆ, ಚಿಕ್ಕ ಪುಟ್ಟ ರಿಪೇರಿ ಕೆಲಸಗಳನ್ನು ಮಾಡುತ್ತಾ ಜೀವನ ನಡೆಸುತ್ತಾನೆ ಮತ್ತು ಕುಡಿಯುತ್ತಾ ತನ್ನ ಹೆಂಡತಿಯೊಂದಿಗೆ ಜಗಳಕ್ಕಿಳಿಯುತ್ತಾನೆ. ಇವನಿನ್ನೂ ಟಿ.ವಿ ಯಲ್ಲಿ ಆ ಆಘಾತಕಾರಿ ದೃಶ್ಯಗಳನ್ನು ನೋಡಿರಲಿಲ್ಲ. ಅಮೆರಿಕದ ವಿರುದ್ಧ ಸೇಡಿನ ಕೃತ್ಯವೊಂದು ನಡೆದಿದೆ ಎಂದಷ್ಟೇ ಅವರಿವರಿಂದ ಕೇಳಿ ತಿಳಿದಿದ್ದ. ಇವನು ಕೋಪದಲ್ಲಾಡಿದ ಟೀಕೆಗಳನ್ನು ತಾನೇ ನಂತರ ವಿಷಾದಿಸುವವನಾದರೂ, ನಾನು ಕೇಳಿದ ಹಾಗೆ ಇವನೊಬ್ಬನೇ ಈ ರೀತಿಯ ಟೀಕೆ ವ್ಯಕ್ತಪಡಿಸಿದವನಲ್ಲ. ವಿಷಯ ಹೀಗಿದ್ದರೂ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಈ ಘೋರ ಭಯೋತ್ಪಾದಕ ಕೃತ್ಯದ ಬಗ್ಗೆ ಸರ್ವಾನುಮತದ ವಿರೋಧವಿತ್ತು. ಎಷ್ಟೋ ಅಮಾಯಕರ  ಸಾವಿಗೆ ಕಾರಣವಾದವರನ್ನು ಶಪಿಸಿದ ನಂತರವೂ “ಆದರೂ” ಎನ್ನುತ್ತಾ ಅವರು ಅಮೆರಿಕವನ್ನು “ಜಾಗತಿಕ ಶಕ್ತಿ” ಎಂದು ಸುತ್ತಿ ಬಳಸಿ ಅಥವಾ ನೇರವಾಗಿಯೇ ಟೀಕಿಸಿಬಿಡುತ್ತಿದರು. ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ನಡುವೆ ಸುಳ್ಳು ವಿಭಜನೆಯನ್ನು ರೂಪಿಸಲು ಬಯಸುವ ಭಯೋತ್ಪಾದಕರು, ಹಲವಾರು ಮುಗ್ದ ಜನರನ್ನು ಕ್ರೂರವಾಗಿ ಕೊಂದಿದ್ದಾರೆ. ಹೀಗಿರುವಾಗ, ಭಯೋತ್ಪಾದನೆಯ ನೆರಳಿನಲ್ಲಿ ಜಾಗತಿಕ ಮಟ್ಟದಲ್ಲಿ ಅಮೆರಿಕಾದ ಪಾತ್ರವನ್ನು ಚರ್ಚಿಸಲು ಇದು ಸೂಕ್ತವಲ್ಲ ಅಥವಾ ನೈತಿಕವಾಗಿ ಸ್ವೀಕಾರಾರ್ಹವೂ  ಅಲ್ಲ. ಆದರೆ ಕೋಪದ ಬಿಸಿಯಲ್ಲಿ ಕೆಲವರು  ಇನ್ನೂ ಹೆಚ್ಚು ಮುಗ್ದ ಜನರನ್ನು ಕೊಲ್ಲಲು ಕಾರಣವಾಗಬಹುದಾದ ರಾಷ್ಟ್ರೀಯವಾದಿ ದೃಷ್ಟಿಕೋನಗಳನ್ನು ಹೊರಹಾಕುತ್ತಾರೆ: ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ಬಯಸುತ್ತಾರೆ. 

ಈ ಕಾರ್ಯಾಚರಣೆಯು ಎಷ್ಟು ಕಾಲ ಮುಂದುವರೆಯುತ್ತದೆಯೋ ಅಷ್ಟು ಕಾಲ ತನ್ನ ಸ್ವಂತ ರಾಷ್ಟ್ರವನ್ನು ತೃಪ್ತಿಪಡಿಸುವ ಪ್ರಯತ್ನದಲ್ಲಿ ಯುಎಸ್ ಸೈನ್ಯವು ಅಫ್ಘಾನಿಸ್ತಾನ ಮತ್ತು ಇತರೆಡೆಗಳಲ್ಲಿ ಅಮಾಯಕ ಜನರನ್ನು ಕೊಲ್ಲುತ್ತದೆ ಎನ್ನುವುದು ನಮಗೆ ತಿಳಿದಿರುವ ಸಂಗತಿ.  ಅಮೆರಿಕವು ಪೂರ್ವ ಮತ್ತು ಪಶ್ಚಿಮಗಳ ನಡುವೆ ಉದ್ವಿಗ್ನತೆ ಹೆಚ್ಚಿಸಿದಂತೆಲ್ಲ ತಾನು  ಶಿಕ್ಷಿಸಬೇಕೆಂದಿರುವ ಭಯೋತ್ಪಾದಕರ ಕೈಯಲ್ಲಿ ತಾನೇ ಕೊನೆಗೆ ಆಟಿಕೆಯಾಗಿಬಿಡುತ್ತದೆ. ಸದ್ಯ ಅಮೇರಿಕ ಜಗತ್ತನ್ನು ಆಳುತಿರುವುದಕ್ಕೆ ಈ ಘೋರ ಭಯೋತ್ಪಾದನೆ ಪ್ರತ್ಯುತ್ತರ ಎನ್ನುವುದು ನೈತಿಕವಾಗಿ ಖಂಡನೀಯ. ಆದರೆ ಬಡ ಮತ್ತು ಮೂಲೆಗುಂಪಾದ ದೇಶಗಳಲ್ಲಿ ಬದುಕುತ್ತಿರುವ ತಮ್ಮ  ಇತಿಹಾಸವನ್ನು  ರೂಪಿಸಿಕೊಳ್ಳುವ ಹಕ್ಕನ್ನೂ ಕಳೆದುಕೊಂಡ ಕೋಟ್ಯಂತರ ಜನರು ಅಮೆರಿಕದ ವಿರುದ್ಧ ಯಾಕಿಷ್ಟು ಕಿಡಿಕಾರುತ್ತಾರೆ ಎಂದು ಅರ್ಥ ಮಾಡಿಕೊಳ್ಳುವುದು ಕೂಡ ಮುಖ್ಯ. ಹಾಗಂತ ನಾವು ಅವರ ಕೋಪ ನ್ಯಾಯಯುತವಾದದ್ದು ಎಂದು ಸಮರ್ಥನೀಯವಾಗಿ ನೋಡಬೇಕು ಎಂದಲ್ಲ. ಪ್ರತ್ಯೇಕಗೊಂಡ ದೇಶಗಳು ಮತ್ತು ಇಸ್ಲಾಮಿಕ್ ದೇಶಗಳು ತಮ್ಮ ಪ್ರಜಾಪ್ರಭುತ್ವದ ನ್ಯೂನತೆಗಳನ್ನು ಮುಚ್ಚಿಡಲು ಮತ್ತು ಸರ್ವಾಧಿಕಾರವನ್ನು ಎತ್ತಿ ಹಿಡಿಯಲು ಅಮೇರಿಕಾ ವಿರೋಧಿ ಭಾವನೆಯನ್ನು ಬಳಸುತ್ತವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.  ಇಸ್ಲಾಂ ಮತ್ತು ಪ್ರಜಾಪ್ರಭುತ್ವದ ಮಧ್ಯೆ ರಾಜಿ ಸಾಧ್ಯವಿಲ್ಲ ಎಂದು ಘೋಷಿಸಿಕೊಂಡ  ಸೌದಿ ಅರೇಬಿಯಾದಂತ ದೇಶದೊಂದಿಗೆ ಅಮೇರಿಕಾ ಮೈತ್ರಿ ಮಾಡಿಕೊಂಡಾಗಲೂ ಜಾತ್ಯಾತೀತ ಪ್ರಜಾಪ್ರಭುತ್ವ ಸ್ಥಾಪಿಸಲು ಹೆಣಗಾಡುತ್ತಿರುವ ಮುಸ್ಲಿಂ ರಾಷ್ಟ್ರಗಳಿಗೆ ಅಮೇರಿಕಾ ಸಹಾಯ ಮಾಡಲಿಲ್ಲ. 

ಇದೇ ರೀತಿ ಮೇಲ್ನೋಟಕ್ಕೆ ಅಮೆರಿಕ- ವಿರೋಧಿ ವಾದಕ್ಕೆ ಒಳಗಾಗಿರುವ ಟರ್ಕಿ ತನ್ನ ಮೇಲಧಿಕಾರದಲ್ಲಿರುವವರಿಗೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಬಂದ ಹಣವನ್ನು ವ್ಯರ್ಥ ಅಥವಾ ದುರುಪಯೋಗಪಡಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದೆ, ಹಾಗು ಶ್ರೀಮಂತರು ಮತ್ತು ಬಡವರ ನಡುವೆ ನಿರಂತರವಾಗಿ ಬೆಳೆಯುತ್ತಿರುವ ಅಂತರವನ್ನು ಮರೆಮಾಚುತ್ತಿದೆ. 

ಯುನೈಟೆಡ್ ಸ್ಟೇಟ್ಸ್ನಲ್ಲಿ ತಮ್ಮ ಮಿಲಿಟರಿ ಪ್ರಾಬಲ್ಯ ಪ್ರದರ್ಶಿಸಲು ಮತ್ತು ಭಯೋತ್ಪಾದಕರಿಗೆ ಸಾಂಕೇತಿಕ “ಪಾಠ” ನೀಡಲು ಬಯಸುವ ಇಚ್ಛೆಯಿಂದಲೇ ದಾಳಿಗಳನ್ನು ಬೆಂಬಲಿಸುವವರಿದ್ದಾರೆ. ಮತ್ತೂ ಕೆಲವರು ಮುಂದಿನ ಬಾಂಬ್ ದಾಳಿ ಎಲ್ಲಿ ನಡೆಯಬಹುದೆಂದು ಖುಷಿಯಿಂದ ವಿಡಿಯೋ ಗೇಮ್  ಆಡುತ್ತಿರುವವರಂತೆ  ಚರ್ಚಿಸುತ್ತಾರೆ, ಆದರೆ ಯುದ್ಧದ ಬಿಸಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಬಡ ಇಸ್ಲಾಮಿಕ್ ದೇಶಗಳಲ್ಲಿನ ಲಕ್ಷಾಂತರ ಜನರು ‘ತಮ್ಮನ್ನು ತಾವು ಶ್ರೇಷ್ಠ ಎಂದು ಪರಿಗಣಿಸುವ ಪಾಶಿಮಾತ್ಯ ದೇಶಗಳ’ ವಿರುದ್ಧ ಹೊಂದಿರುವ ಕೋಪ ಮತ್ತು ಅವಮಾನವನ್ನು ತೀವ್ರಗೊಳಿಸಬಹುದು ಎಂದು ಅವರು ಅರ್ಥಮಾಡಿಕೊಳ್ಳಬೇಕು. ಜನರನ್ನು ಭಯೋತ್ಪಾದಕರ ಪರ ನಿಲ್ಲುವಂತೆ ಮಾಡುವುದು ಇಸ್ಲಾಂ ಅಲ್ಲ, ಅಥವಾ ಬಡತನವೂ ಅಲ್ಲ; ಇದು ಪ್ರತ್ಯೇಕಗೊಂಡ ದೇಶಗಳು ಅನುಭವಿಸಿದ ಹೀನಾಯ ಅವಮಾನ. 

ಇತಿಹಾಸದ ಯಾವುದೇ ಹಂತದಲ್ಲೂ ಶ್ರೀಮಂತ ಮತ್ತು ಬಡವರ ನಡುವಿನ ಅಂತರ ಇಷ್ಟು ಹೆಚ್ಚಿರಲಿಲ್ಲ. ಪ್ರಪಂಚದ ಶ್ರೀಮಂತ ರಾಷ್ಟ್ರಗಳು ತಮ್ಮ ಯಶಸ್ಸಿಗಷ್ಟೇ ಜವಾಬ್ದಾರರಾಗಿರುತ್ತಾರೆ, ಬಡತನಕ್ಕಲ್ಲ ಎಂದು ಯಾರಾದರೂ ವಾದಿಸಬಹುದು. ಆದರೆ ಜಗತ್ತಿನ ಬಡವರು ಟಿ.ವಿ ಮತ್ತು ಹಾಲಿವುಡ್ ಸಿನೆಮಾಗಳ ಮೂಲಕ ಶ್ರೀಮಂತರ ಬದುಕಿಗೆ ಈಗ ತೆರೆದುಕೊಂದಿರುವಷ್ಟು ಹಿಂದೆಂದೂ ತೆರೆದುಕೊಂಡಿರಲಿಲ್ಲ. ಬಡವರಿಗೆ ಯಾವಾಗಲೂ  ರಾಜ-ರಾಣಿಯರ ದಂತಕಥೆಗಳು ಮನೋರಂಜನೆಯಾಗಿದ್ದವು ಎಂದು ಯಾರು ಬೇಕಾದರೂ ಹೇಳಬಹುದು. ಆದರೆ ಹಿಂದೆಂದೂ ಶ್ರೀಮಂತರು, ಮತ್ತು ಪ್ರಭಾವಿಗಳು ಇಷ್ಟು ತೀವ್ರವಾಗಿ ತಮ್ಮ ತರ್ಕ ಮತ್ತು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಿರಲಿಲ್ಲ.  

ಈ ಹಿಂದೆ ಸೋವಿಯತ್ನಲ್ಲಿ  ಅಥವಾ ಯಾವುದೇ ಮೂಲೆಗುಂಪಾದ ದೇಶದಲ್ಲಿ ತನ್ನ  ಜೀವನವನ್ನು ಸಾಗಿಸಲು ಹೆಣಗಾಡುತ್ತಿರುವ ನಾಗರಿಕ ಸೇವಕನಂತೆ; ಪ್ರಜಾಪ್ರಭುತ್ವವಲ್ಲದ  ಬಡ, ಮುಸ್ಲಿಂ, ದೇಶದಲ್ಲಿ ವಾಸಿಸುವ ಒಬ್ಬ ಸಾಮಾನ್ಯ ನಾಗರಿಕನು ತನ್ನ ದೇಶದ ಸಂಪತ್ತು ಪ್ರಪಂಚದ ಸಂಪತ್ತಿನ ಮುಂದೆ ಎಷ್ಟು ಸಣ್ಣ ಪಾಲು ಎಂದು ತಿಳಿದಿರುತ್ತಾನೆ. ಪಾಶ್ಚಿಮಾತ್ಯ ದೇಶಗಳಲ್ಲಿನ ತನ್ನ ಸಂಗಾತಿಗಳಿಗಿಂತ ಹೆಚ್ಚು ಕಠಿಣ ಪರಿಸ್ಥಿತಿಯಲ್ಲಿ ಅವನು ಬದುಕುತ್ತಾನೆ ಮತ್ತು ಅವರಿಗೆ ಹೋಲಿಸಿದರೆ ಅವನ  ಜೀವನ ತುಂಬಾ ಚಿಕ್ಕದು ಎಂದು ಅವನಿಗೂ ಗೊತ್ತು. ಆದರೆ ಇದು ಅಲ್ಲಿಗೆ ಮುಗಿಯುವುದಿಲ್ಲ, ಕಾರಣ ಅವನ ಮನಸ್ಸಿನ ಯಾವುದೊ ಒಂದು ಮೂಲೆಯಲ್ಲಿ ತನ್ನ ಈ ದುಃಸ್ಥಿತಿಗೆ ಅವನ ಸ್ವಂತ ತಂದೆ ಮತ್ತು ಅಜ್ಜ ಕಾರಣ ಎಂಬ ಅನುಮಾನ ಇದ್ದೇ ಇರುತ್ತದೆ. ಜಗತ್ತಿನ ಅದೆಷ್ಟೋ ಜನರು ಅನುಭವಿಸುತ್ತಿರುವ ಅಗಾಧ ಅವಮಾನಕ್ಕೆ ಪಾಶ್ಚಿಮಾತ್ಯ ಜಗತ್ತು ಹೆಚ್ಚು ಗಮನ ಹರಿಸದೆ ಇರುವುದು ನಾಚಿಗೇಡು. ಆ ಜನರು ತಮ್ಮ ತಾರ್ಕಿಕತೆಯನ್ನು  ಕಳೆದುಕೊಳ್ಳದೆ, ತಮ್ಮ ಬದುಕಿನ ವಿಧಾನವನ್ನು ಕಳೆದುಕೊಳ್ಳದೆ, ಭಯೋತ್ಪಾದನೆಗೆ, .ಉಗ್ರ ರಾಷ್ಟ್ರೀಯವಾದಕ್ಕೆ, ಅಥವಾ ಧಾರ್ಮಿಕ ಮೂಲಭೂತವಾದಕ್ಕೆ ಶರಣಾಗದೆ ಅoತಹ ಅವಮಾನವನ್ನು ದಾಟಿ ಬರಲು ಪ್ರಯತ್ನಿಸಿದ್ದಾರೆ. ಎಲ್ಲಿ ಅವಮಾನಿತರು ಹಗಲಿರುಳು, ಕನಿಕರ ಮತ್ತು ನೊಂದ ನಗುವಿನಿಂದ ಬಾಳುತ್ತಿದ್ದರೋ ಅಲ್ಲಿ  ಮ್ಯಾಜಿಕಲ್ ರೆಯಾಲಿಸ್ಟ್ ಕಾದಂಬರಿಗಳು ಅವರ ದಡ್ಡತನ ಮತ್ತು ಬಡತನವನ್ನು ಭಾವುಕವಾಗಿ ಚಿತ್ರಿಸಿಬಿಡುತ್ತಿವೆ.  ಇತ್ತ, ವಿಲಕ್ಷಣದ ಹುಡುಕಾಟದಲ್ಲಿರುವ ಪ್ರವಾಸಿ ಬರಹಗಾರರು ತಮ್ಮ ತೊಂದರೆಗೊಳಗಾದ ಖಾಸಗಿ ಜಗತ್ತಿನಲ್ಲಿ ಕುರುಡರಾಗುತ್ತಾರೆ. 

ಅಲ್ಲಿ ದಿನವೂ ಉತ್ಸಾಹ ಮತ್ತು ನೋವಿನ ಮುಗುಳ್ನಗೆಯೊಂದಿಗೆ ಅಸಮಾಧಾನವನ್ನು ಅನುಭವಿಸಲಾಗುತ್ತದೆ. ಯಾವ ಗುಡಿಸಲು, ಯಾವ ಗುಹೆ, ಯಾವ ದೂರದ ನಗರವು ಮುಂದಿನ ಬಾಂಬ್ ತಯಾರಿಸುವ ಭಯೋತ್ಪಾದಕನಿಗೆ ನೆಲೆಯಾಗುತ್ತದೆ ಎಂಬುದನ್ನು ಕಂಡುಹಿಡಿಯುವುದಷ್ಟೇ ಪಶ್ಚಿಮಕ್ಕೆ ಸಾಕಾಗುಗುವುದಿಲ್ಲ ಅಥವಾ  ಅವನನ್ನು ಬಾಂಬ್ ನಿಂದ ಸ್ಪೋಟಿಸಿ ಭೂಮಿಯ ಮೇಲಿಂದ ಅಳಿಸಿ ಹಾಕಿಸಿದರು ಪ್ರಯೋಜನವಿಲ್ಲ. ನಿಜವಾದ ಸವಾಲು ಏನೆಂದರೆ ಸಂಘದಿಂದ ಹೊರಗಟ್ಟಿದ ಬಡ, ಅವಮಾನಿತ, ಅಪಖ್ಯಾತಿಗೊಳಗಾದ ಜನರ ಆಧ್ಯಾತ್ಮಿಕ ಬದುಕನ್ನು ಅರ್ಥಮಾಡಿಕೊಳ್ಳುವುದು. 

ಯುದ್ಧ ಘೋಷಗಳು, ರಾಷ್ಟ್ರೀಯವಾದಿ ಭಾಷಣಗಳು ಮತ್ತು ದುಡುಕಿನ ಮಿಲಿಟರಿ ಕಾರ್ಯಾಚರಣೆಗಳು ತಿರುಗುಬಾಣವಾಗುತ್ತವೆ. ಪಾಶ್ಚಿಮಾತ್ಯ ದೇಶಗಳು ಯುರೋಪಿಯನ್ ಒಕ್ಕೂಟದ ಹೊರಗೆ ವಾಸಿಸುವವರಿಗೆ ವಿಧಿಸಿರುವ ಹೊಸ ವೀಸಾ ನಿರ್ಬಂಧಗಳು, ಮುಸ್ಲಿಂ ಮತ್ತು ಇತರ ಬಡ ಪಾಶ್ಚಿಮಾತ್ಯೇತರ ದೇಶಗಳಿಂದ ಬರುವವರ ಚಲನವಲನವನ್ನು ಮಿತಿಗೊಳಿಸುವ ಪೊಲೀಸ್ ಕ್ರಮಗಳು, ಇಸ್ಲಾಂ ಧರ್ಮದ ಮೇಲಿನ ವ್ಯಾಪಕ ಅನುಮಾನ ಮತ್ತು ಪಾಶ್ಚಿಮಾತ್ಯವಲ್ಲದ ಎಲ್ಲಾ ವಿಷಯಗಳು, ಭಯೋತ್ಪಾದನೆ ಮತ್ತು ಮತಾಂಧತೆಯನ್ನು ಇಸ್ಲಾಮಿಕ್ ನಾಗರಿಕತೆಯೊಂದಿಗೆ ಸಮೀಕರಿಸುವ ಟೀಕೆಗಳು  ದಿನಕಳೆದಂತೆ  ನಮ್ಮನ್ನು ಸ್ಪಷ್ಟ ಕಾರಣಗಳು ಮತ್ತು ಶಾಂತಿಯಿಂದ ದೂರಕ್ಕೆ ಕರೆದೊಯ್ಯುತ್ತವೆ.

ಇಸ್ತಾನ್‌ಬುಲ್ ನ ಪೇಂಟಿಂಗ್ ನಂಥ ರಸ್ತೆಗಳು (Courtesy : Daily Sabah)

ಇಸ್ತಾನ್‌ಬುಲ್ ದ್ವೀಪದಲ್ಲಿರುವ ನಿರ್ಗತಿಕ ಮುದುಕನೊಬ್ಬ ನ್ಯೂಯಾರ್ಕ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಕ್ಷಣಮಾತ್ರದಲ್ಲಿ ಅನುಮೋದಿಸಿದರೆ ಅಥವಾ ಇಸ್ರೇಲಿ ಆಕ್ರಮಣದಿಂದ ಬೇಸತ್ತ ಪ್ಯಾಲೆಸ್ಟೇನಿಯನ್ನ ಯುವಕನೊಬ್ಬ ಮಹಿಳೆಯರ ಮುಖಕ್ಕೆ ತಾಲಿಬಾನ್ ಆಸಿಡ್ ಎರಚುವುದನ್ನು ಮೆಚ್ಚುಗೆಯಿಂದ ನೋಡಲು ಸಾಧ್ಯವಾದರೆ, ಅವನನ್ನು ಪ್ರೇರೇಪಿಸುತ್ತಿರುವುದು ಇಸ್ಲಾಂ ಅಥವಾ ಈ ಮೂರ್ಖಜನರು ಹೇಳುವಂತೆ ಪೂರ್ವ ಮತ್ತು ಪಶ್ಚಿಮದ ನಡುವಿನ ಯುದ್ಧವಲ್ಲ, ಅದು ಬಡತನವವೂ ಅಲ್ಲ; ಇದು ಬೇರೊಬ್ಬರಿಗೆ ಅರ್ಥ ಮಾಡಿಸಲಾಗದ, ಧ್ವನಿಯನ್ನು ಕೇಳಿಸಲಾಗದ ವೈಫಲ್ಯ ಮತ್ತು ನಿರಂತರ ಅವಮಾನದಿಂದ ಹುಟ್ಟಿದ ದೌರ್ಬಲ್ಯ.

ಅವರು ಪ್ರತಿರೋಧ ಎದುರಿಸಿದಾಗ, ಟರ್ಕಿಶ್ ಗಣರಾಜ್ಯವನ್ನು ಹುಟ್ಟುಹಾಕಿದ ಶ್ರೀಮಂತ ಆಧುನೀಕರಣಕಾರರು ಬಡವರು ಏಕೆ ಅವರನ್ನು ಬೆಂಬಲಿಸಲಿಲ್ಲ ಎಂದು ಅರ್ಥಮಾಡಿಕೊಳ್ಳಳ್ಳುವ  ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ; ಬದಲಿಗೆ, ಅವರು ಕಾನೂನು ಬೆದರಿಕೆಗಳು, ನಿಷೇಧಗಳು ಮತ್ತು ಮಿಲಿಟರಿ ದಮನಗಳ ಮೂಲಕ ತಾವು ಅಂದುಕ್ಕೊಂಡಿದ್ದನ್ನು ಜಾರಿಗೆ ತಂದರು. ಇದರ ಫಲಿತಾಂಶವಾಗಿ ಕ್ರಾಂತಿ ಅಪೂರ್ಣವಾಯಿತು. ಇಂದು ನಾನು ಪ್ರಪಂಚದಾದ್ಯಂತ ಜನರು ಪಶ್ಚಿಮದೊಂದಿಗೆ ಯುದ್ಧಕ್ಕೆ ಹೋಗಲು ಪೂರ್ವಕ್ಕೆ ಕರೆ ನೀಡುವುದನ್ನು ಕೇಳುತ್ತಿದ್ದೇನೆ. ನಿರಂತರ ಮಿಲಿಟರಿ ಆಡಳಿತ ಸಹಿಸಿಕೊಂಡಿರುವ ಟರ್ಕಿಯ ದಾರಿಯಲ್ಲೆ ಬಹುತೇಕ ಜಗತ್ತು ಹೋಗುವುದನ್ನು ಶೀಘ್ರವೇ ನಾವು ನೋಡಬೇಕಾಗುತ್ತದೆಂದು ನನಗೆ ಭಯವಾಗುತ್ತಿದೆ.ಎರಡು ಪ್ಲಸ್ ಎರಡು ಐದು ಎಂದು ಘೋಷಿಸಿಕೊಳ್ಲಲು  ಸ್ವಪ್ರಶಂಸೆ, ನಾನೇ ಸರಿ ಎನ್ನುವ ಧೋರಣೆಯ ಪಶ್ಚಿಮವು ಪ್ರಪಂಚದ ಉಳಿದ ಭಾಗಗಳನ್ನು ದೋಸ್ಟೋವ್ಸ್ಕಿಯ ಅಂಡರ್ಗ್ರೌಂಡ್ ಮ್ಯಾನ್ ನ  ಹಾದಿಯೆಡೆಗೆ ನಡೆಸುತ್ತದೆ. 

ಶಾಪಗ್ರಸ್ಥರ ಕೋಪವನ್ನು ಅರ್ಥಮಾಡಿಕೊಳ್ಳಲು ಪಶ್ಚಿಮವು ನಿರಾಕರಿಸಿದ್ದಕ್ಕಿಂತ ಹೆಚ್ಚಾಗಿ “ಇಸ್ಲಾಮಿಸ್ಟ್” ಮಹಿಳೆಯರ ಮುಖಕ್ಕೆ ನೈಟ್ರಿಕ್ ಆಮ್ಲವನ್ನು ಎಸೆಯುವುದಕ್ಕಿರುವ ಬೆಂಬಲವನ್ನು  ಯಾವುದೂ ಪೋಷಿಸುವುದಿಲ್ಲ.


Translated By: Vijayalakshmi

2 comments to “ಶಾಪಗ್ರಸ್ಥರ ಸಿಟ್ಟು : ಒರ್ಹಾನ್ ಪಾಮುಕ್ ಪ್ರಬಂಧ”
  1. ನಮ್ಮನ್ನು ನಾವೇ ಅರ್ಥಮಾಡಿಕೊಳ್ಳಲು ಈ ಲೇಖನ ಸಹಕಾರಿ

  2. ಇಂತಹ ಅನುವಾದಗಳು ಹೆಚ್ಚುಹೆಚ್ಚು ಬರಬೇಕು. ಮೂಲ ಲೇಖನದ ಹೆಸರು ಹಾಕಿದರೆ ಅನುಕೂಲ.

ಪ್ರತಿಕ್ರಿಯಿಸಿ