ಬೃನೋ ನಗರದ ಸಾರಸ್ವತ ಲೋಕದ ಮೇರು ಕಮ್ಮಟ: ಸಾಹಿತಿಗಳ ಓದಿನ ಮಾಸ

” ಕ್ರೌರ್ಯವನ್ನೇ ಶಕ್ತಿ  ಎಂದು ಪರಿಗಣಿಸುವುದು  ಯೌವನದ ಅತ್ಯಂತ ಸಾಮಾನ್ಯ ತಪ್ಪು. ಯೌವನಕ್ಕೆ ಆ  ಕ್ರೌರ್ಯವನ್ನು ನಿರಾಕರಿಸುವ ಬಲಶಾಲಿಗಳ ನಿಜವಾದ ಸೂಕ್ಷ್ಮತೆಯ ಬಗ್ಗೆ,ಆ ಅತ್ಯುನ್ನತ ಸಂವೇದನೆಯ ಬಗ್ಗೆ ಹೆಚ್ಚು  ತಿಳಿದಿಲ್ಲ” –  ಜಾಬುಜ್ಕೋ ಓಕ್ಸನ (ಉಕ್ರೇನಿಯನ್ ಲೇಖಕಿ ). ೧೯೯೫ ರಲ್ಲಿ ಸಣ್ಣ ಪುಸ್ತಕ ಪ್ರಕಾಶನ ಸಂಸ್ಥೆಯಾಗಿ ಆರಂಭಗೊಂಡು ಸಾಹಿತ್ಯಾಸಕ್ತರ ನೆರವಿನಿಂದ ಯೂರೋಪಿನ ಇತರೆ ದೇಶಗಳಿಗೂ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿದ ಬ್ರನೋ (ಝೆಕ್ ಗಣರಾಜ್ಯ )ನಗರದ Vetrne Mlyny (ವಿಂಡ್ ಮಿಲ್ಸ್) ಸಂಸ್ಥೆಯ ಸಾಹಿತಿಗಳ ಓದಿನ ಮಾಸ ಎಂಬ ಕಮ್ಮಟದ ಕುರಿತಾಗಿ..


ವೇದಿಕೆಯ ಮೇಲೆ ಎರಡು ಕುರ್ಚಿ, ಅದರೆದುರು ಒಂದು ಮೇಜು, ಅದರ ಮೇಲೆ ಎರಡು ಮೈಕ್, ಒಂದು ಲೋಟ ನೀರು. ಪ್ರದರ್ಶನಕ್ಕೆ ಅಣಿಮಾಡಿದಂತೆ ಹಿಂದೆ ಹಾಕಿದ ಪರದೆ.ಸಭೆ ತುಂಬಿದೆ, ಸುಮಾರು ೧೦೦-೧೫೦ ಜನ, ಕೆಲವರ ಕೈಯಲ್ಲಿ ಪುಸ್ತಕ, ಕೆಲವರು ಬೀರು ಹೀರುತ್ತಾ ಮಾತಿನಲ್ಲಿ ತೊಡಗಿದ್ದಾರೆ. ಎಲ್ಲರ ಬಾಯಲ್ಲೂ ಸಾಹಿತ್ಯದ ಚರ್ಚೆ. 

ಒತಾ ಫಿಲಿಪ್

ಒಮ್ಮೆಲೇ ಸಭಾಂಗಣದ ದೀಪ ಆರಿ, ಪರದೆಯ ಮೇಲೆ ಮೋಡದ ಮೇಲೆ ತೇಲುತ್ತಾ ಕೆಳಗೆ ಕಾಣುವ ಕಾಡು, ಹೊಲಗಳ ಚಿತ್ರ ಮೂಡುತ್ತದೆ. ಯಾವ ದೇಶವೋ ಗೊತ್ತಾಗದು. ಜೊತೆಗೆ ಟೈಪ್ ರೈಟರ್ ನ ಟಪ ಟಪ ಸದ್ದು. ಅದರ ಮೇಲೆ ಹೆಣ್ಣು ದನಿ:

ಪದಗಳನ್ನು ನುಡಿವವನು 

ಮಾತು ನಿಲ್ಲಿಸಲಾಗದವನು

ಆಗೊಮ್ಮೆ ಈಗೊಮ್ಮೆ

ಆಲಿಸುವುದು ಸೂಕ್ತ

ಅದೇಕೆ? ಕೇಳುವ ಮುನ್ನ

ಎಣಿಸಿಕೊಳ್ಳಲಿ, ತಲೆಯಲ್ಲಿ

ನಾಲಗೆಯೆನ್ನುವುದು ಒಂದೇ

ಕಿವಿಯಿರುವುದು ಎರಡು 

ಮುಗಿಯುವ ಹೊತ್ತಿಗೆ ಪರದೆಯ ಮೇಲೆ ಮುಖವೊಂದು ಮೂಡುತ್ತದೆ. ಮಾತಾಡಿದ ಬರಹಗಾರ್ತಿಯೇ ಎಂಬ ಕುತೂಹಲ ನೆರೆದವರಲ್ಲಿ.

ಆಯೋಜಕರು ಸಭಿಕರಿಗೆ ಅತಿಥಿಯ ಪರಿಚಯ ಮಾಡಿ ವೇದಿಕೆಗೆ ಬರಮಾಡುತ್ತಾರೆ. ವೇದಿಕೆಗೆ ಬಂದವರು ಮೇಜಿನೆದುರು ಕೂತು, ತಾನೇ ಬರೆದ ಕೃತಿಯೊಂದನ್ನು ತೆಗೆದು ಓದಲು ಶುರು ಮಾಡುತ್ತಾರೆ.

ಸಿಲ್ವಿಯೆ ಗೆರ್ಮನ್

ಸುಮಾರು ಒಂದೂವರೆ ತಾಸಿನಲ್ಲಿ ಅಷ್ಟು ಓದು, ಸಭಿಕರೊಂದಿಗೆ ಮಾತುಕತೆ, ಕೆಲವೊಮ್ಮೆ ವಿಚಾರ ವಿನಿಮಯ, ಇನ್ನೊಮ್ಮೆ ಸಹಚಿಂತನೆ… ಯಾವುದೇ ಕಟ್ಟಳೆ, ನಿಯಮ ಇಲ್ಲ… ಹೀಗೆ ಕಾಲ ಹೋದದ್ದೇ ತಿಳಿಯದಂತೆ ಸಂಜೆಯ ಕಾರ್ಯಕ್ರಮ ಮುಗಿದು ಹೋಗುತ್ತದೆ.

ಜುಲೈ ತಿಂಗಳ ಪ್ರತೀ ಸಂಜೆ ಹೀಗೇ… ಸಾಹಿತಿಗಳ ಓದಿನ ಮಾಸ ಎನ್ನುವುದು ಬೃನೋ ನಗರದ ದ್ಯೋತಕವಾಗಿ, ಇಲ್ಲಿನ ಸಾಂಸ್ಕೃತಿಕ ಋತುಮಾನದಲ್ಲಿ ಭದ್ರವಾಗಿ ತಳವೂರಿದೆ. ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದೆ ಪುಟ್ಟ ಪ್ರಕಾಶನವೊಂದು ಸಣ್ಣ ಊರೊಂದರಲ್ಲಿ ಹುಟ್ಟುಹಾಕಿದ ಈ ಸಾಹಿತ್ಯಾಚರಣೆ, ಇಂದು ಅಕ್ಕಪಕ್ಕದ ನಾಲ್ಕು ದೇಶಗಳಿಗೆ ತನ್ನ ರೆಂಬೆಗಳನ್ನು ಹಬ್ಬಿಕೊಂಡ ಬೃಹತ್ ಆಲದ ಮರದ ರೂಪ ತಾಳಿದೆ.

ಜಾಬುಜ್ಕೋ ಓಕ್ಸನ

ಬೃನೋ ನಗರದ Vetrne Mlyny (ವಿಂಡ್ ಮಿಲ್ಸ್) ಎಂಬ ಸಣ್ಣ ಪ್ರಕಾಶನ ಸಂಸ್ಥೆಯು ಕಾವ್ಯ, ನಾಟಕ, ಹಾಗೂ ಅವಕ್ಕೆ ಸಂಬಂಧಿಸಿದ ಸೃಜನಶೀಲ ಬರಹಗಳನ್ನು ಪ್ರಕಟಿಸಿ ೨೦೦೦ದ ಹೊತ್ತಿಗೆ ಸಾಕಷ್ಟು ಹೆಸರು ಗಳಿಸಿತ್ತು. ಆ ವರ್ಷದ ತನ್ನ marketing ಚಟುವಟಿಕೆಗಳ ಭಾಗವಾಗಿ , ಅಲ್ಲದೇ ಬೇಸಿಗೆಯ ರಜಾದಿನಗಳಲ್ಲಿ ಸೃಜನಶೀಲ ಸಾಹಿತ್ಯದ ಪ್ರಚಾರಕ್ಕೋಸ್ಕರ, ಸಾಹಿತಿಗಳ ಓದಿನ ಕಾರ್ಯಕ್ರಮವನ್ನು ಶುರು ಮಾಡಿದರು. ಮೊದಲಿಂದಲೂ ಇಡೀ ತಿಂಗಳ ಯೋಜನೆ ಇತ್ತು; ಮುವತ್ತೊಂದು ದಿನ ತುಂಬಲು ತಮ್ಮದೇ ಬರಹಗಾರರು, ಪರಿಚಯವಿದ್ದ ಕೆಲವರು ಮುಂದಾದರು. ಮೊದಲ ಕೆಲದಿನ ಸಭೆ ಬಣಬಣ ಎನ್ನುತ್ತಿದ್ದರೂ, ಕೇಳುಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದನ್ನು ಕಂಡು ಆಯೋಜಕರಿಗೆ ಸ್ವಲ್ಪ ನಿರಾಳವೆನಿಸಿತ್ತು.

ಮೂರನೇ ವರ್ಷ ಕಾವ್ಯಕ್ಕೆಂದೇ ಪ್ರತ್ಯೇಕ ವಿಭಾಗವು ಪ್ರಾರಂಭವಾಯಿತು. ಐದನೇ ವರ್ಷ ಬರ್ಲಿನ್ ನಗರದ ಮುವತ್ತು ಸಾಹಿತಿಗಳು ಅತಿಥಿಗಳಾಗಿ ಬಂದು, ಕಾವ್ಯ ವಿಭಾಗದ ಬದಲು ವಿದೇಶಿ ವಿಭಾಗ ಶುರುವಾಯಿತು. ೨೦೧೦ರಲ್ಲಿ ಓಸ್ಟ್ರಾವಾ, ೨೦೧೨ರಲ್ಲಿ ಕೊಶಿತ್ಸೆ , ೨೦೧೩ ರಲ್ಲಿ ರೊತ್ಸಲಾವ್, ೨೦೧೪ರಲ್ಲಿ ಲ್ವೋವ್, ಹೀಗೆ ಸುತ್ತಮುತ್ತಲಿನ ನಾಲ್ಕು ದೇಶಗಳಿಗೆ ಹಬ್ಬಿ ಮಧ್ಯ ಯೂರೋಪಿನ ಅತಿದೊಡ್ಡ ಸಾಹಿತ್ಯ ಕಮ್ಮಟ ಎನಿಸಿಕೊಂಡಿದೆ.

ಲಾರೆಂಟ್ ಬಿನೇ

ಬೃನೋದಲ್ಲಿ ಓದಿದವರು ಮರುದಿನ ಓಸ್ಟ್ರಾವಾದಲ್ಲಿ, ನಂತರ ಕೊಶಿತ್ಸೆ ಮತ್ತು ಲ್ವೋವ್ನಲ್ಲಿ, ಕೊನೆಗೆ Wroclawಅಲ್ಲಿ ಹೀಗೆ ಐದು ಪಟ್ಟಣಗಳಲ್ಲಿ ಐದು ದಿನಗಳ ಕಾರ್ಯಕ್ರಮವಾಯಿತು. ಇತ್ತೀಚಿನ ವರ್ಷಗಳಲ್ಲಿ ಬೃನೋದಲ್ಲಿ ಓದುವ ಸ್ಥಳೀಯ ಸಾಹಿತಿಗಳ ಬದಲು ತಮ್ಮದೇ ಕೆಲವರನ್ನು ಕಾರ್ಯಕ್ರಮಕ್ಕೆ ಆಯಾ ನಗರದ ಆಯೋಜಕರು ಸೇರಿಸಲು ಆರಂಭಿಸಿದ್ದಾರೆ. ಹೀಗಾಗಿ ಪ್ರತಿಯೊಂದು ನಗರದಲ್ಲೂ ಕಾರ್ಯಕ್ರಮ ತನ್ನದೇ ಆಯಾಮ ಪಡೆಯತೊಡಗಿದೆ.  

ಇಲ್ಲಿನವರೆಗಿನ ವಿದೇಶೀ ಅಥಿತಿಗಳಾಗಿ ಕೆನಡಾ, ಸ್ಕಾಟ್ಲೆಂಡ್, ಜಾರ್ಜಿಯಾ, ಹಂಗೆರಿ, ಫ್ರಾನ್ಸ್, ಟರ್ಕಿ ಇತ್ಯಾದಿ ಸುಮಾರು ಹದಿನೈದು ದೇಶಗಳ ಸಾಹಿತಿಗಳನ್ನು ಬರಮಾಡಿಕೊಂಡು ವಿದೇಶೀ ವಿಭಾಗವು ಗೋಷ್ಠಿಗೆ ತನ್ನದೇ ಸೊಬಗನ್ನು ತರುವಲ್ಲಿ ಯಶಸ್ವಿಯಾಗಿದೆ.

ತೊಮಾಶ್ ಜ್ಮೆಶ್ಕಾಲ್

ಕಾರ್ಯಕ್ರಮ ಬೆಳೆದಂತೆ ಆಯೋಜಕ ತಂಡವೂ ಬೆಳೆಯುತ್ತಿದ್ದರೂ ಹುಟ್ಟಿಗೆ ಕಾರಣರಾದ ಜೋಡಿ – ಪೆತ್ರ್ ಮಿನಾರೀಕ್ ಮತ್ತು ಪವೆಲ್ ರೆಹೊರೀಕ್ –  ಇಂದಿಗೂ ಮುಂಚೂಣಿಯಲ್ಲಿ ನಿಂತಿದ್ದಾರೆ. ಮೊದಲ ವರ್ಷದಲ್ಲಿ ಪ್ರವೇಶ ಶುಲ್ಕ ಇಲ್ಲದೆ ನಡೆಸಬೇಕೆಂದು ನಿರ್ಣಯ ಮಾಡಿದ್ದರಿಂದ ಪ್ರಾಯೋಜಕರನ್ನು ಹಿಡಿದು ಹಣ ಹೊಂದಿಸುವುದು ಮಿನಾರೀಕ್ ಮಾಡಿದರೆ ಕಾರ್ಯಕ್ರಮದ ಆಯೋಜನೆ ರೆಹೋರೀಕ್ ನೋಡಿಕೊಳ್ಳುತ್ತಾರೆ.

ಮೊದಲ ವರ್ಷದ ಆಯೋಜನೆ ನಿರ್ವಹಿಸಿದ್ದ ಕೇವಲ ಮೂರು ಜನರ ತಂಡ, ಈಗ ಸುಮಾರು ಇಪ್ಪತ್ತಕ್ಕೆ ಏರಿದೆ. ಇದಲ್ಲದೇ ಪ್ರತಿಯೊಂದು ನಗರದಲ್ಲೂ ಅಲ್ಲಿಯ ಆಯೋಜನೆ ಮಾಡುವವರನ್ನು ಸೇರಿಸಿದರೆ ಒಟ್ಟು ಐವತ್ತರ ಸಂಖ್ಯೆ ಮುಟ್ಟುತ್ತದೆ. 

ಆರ್ನೋಸ್ಟ್ ಲುಸ್ಟಿಗ್

ಪ್ರತಿವರ್ಷವೂ ಒಂದು ದೇಶದ ಸಾಹಿತಿಗಳನ್ನು ಮುಖ್ಯ ಅತಿಥಿಗಳೆಂದು ನೇಮಿಸಿ ಅಲ್ಲಿನ ಸಮಕಾಲೀನ ಸಾಹಿತ್ಯದ ಸಂಕೀರ್ಣ ಪರಿಚಯವನ್ನು ಇಲ್ಲಿಯವರಿಗೆ ಯಶಸ್ವಿಯಾಗಿ ಮಾಡುವುದೇ ಈ ಕಮ್ಮಟದ ವೈಶಿಷ್ಟ್ಯ. 

ಫ್ರೆಂಚ್ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಬರೆದ ಕೆನಡಾದ ಮೂಲನಿವಾಸಿಗಳ ಕಾರ್ಪಣ್ಯಗಳು, ತನ್ನ ದೇಶದ ಇತಿಹಾಸದ ತಲ್ಲಣ-ಪಲ್ಲಟಗಾಳಿಗೆ ಸ್ಪಂದಿಸಿರುವ ಪೋಲಿಷ್ ಸಾಹಿತ್ಯ, ಇಂದಿಗೂ ಉಳಿಸಿಕೊಂಡು ಬಂದ ಕೆಲ್ಟಿಕ್ ಸಮಾಜದ ಬೇರುಗಳಿರುವ ಸ್ಕಾಟ್ಲ್ಯಾಂಡ್ ದೇಶದ ಬರಹ, ಏಷ್ಯಾ ಹಾಗೂ ಯೂರೋಪಿನ ನಡುವೆ ಬೆಳೆದು ನಿಂತ ಟರ್ಕಿ ದೇಶದ ಸಂಕೀರ್ಣ ಸಂಸ್ಕೃತಿ – ಹೀಗೆ ಈಗಾಗಲೇ ಹಲವಾರು ದೇಶಗಳ ಸಾಹಿತ್ಯದ ರುಚಿ ನೋಡಿಯಾಗಿದೆ.

ಈ ಸಾಲಿನ ಮುಖ್ಯ ಅತಿಥಿ ಐಸ್ಲ್ಯಾಂಡ್. ಕಾವ್ಯ ಕಾದಂಬರಿ, ಕತೆ, ನಾಟಕ, ಹೀಗೆ ಹಲವಾರು ಪ್ರಾಕಾರಗಳಲ್ಲಿ ಬರೆಯುತ್ತಿರುವ ಅಲ್ಲಿನ ಸಾಹಿತಿಗಳು ಐಸ್ಲ್ಯಾಂಡಿನ ವಿಶಿಷ್ಟ ನೆಲದಲ್ಲಿ ಇತ್ತೀಚೆಗೆ ನಡೆದುಹೋದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಬದಲಾವಣೆಗಳಿಗೆ ಸ್ಪಂದಿಸಿದ ರೀತಿಯನ್ನು ಸವಿಯುವಂತಾಯಿತು.

 

ಯಾನ ಬೊಡ್ನಾರೊವಾ

ಅಲ್ಲಿನ ಮೂವತ್ತು ಬರಹಗಾರ ಬರಹಗಾರ್ತಿಯರ ಪೈಕಿ ಕೆಲವರು ಹೆಸರುವಾಸಿಯಾದವರು, ಕೆಲವರು ಈ ಹಿಂದೆಯೇ ಕಾರಕೆಗೆ ಗ್ರಾಸವಾದವರು, ಹಾಗೂ ಈಗತಾನೇ ಹೆಸರುಮಾಡುತ್ತಿರುವ ಯುವಪೀಳಿಗೆಯ ಕೆಲವರು ಹೀಗೆ ಅಲ್ಲಿನ ಸೃಜನಶೀಲ ಸ್ಪಂದನೆಯನ್ನು ಕೇಳುಗರ ಮುಂದೆ ತೆರೆದಿಟ್ಟರು.

ಈಗ ಆಯೋಜನಾ ತಂಡಕ್ಕೆ ಒಂದೆರಡು ತಿಂಗಳು ಸ್ವಲ್ಪ ನಿರಾಳ. ಅಕ್ಟೋಬರಿನ ಎರಡನೇ ವಾರಕ್ಕಾಗಲೇ ಮುಂದಿನ ವರ್ಷದ ಕಾರ್ಯಕ್ರಮದ ಕೆಲಸಕ್ಕೆ ನಾಂದಿ. ನನಗಂತೂ ಈ ಸಲ ಅದೆಲ್ಲಿಂದ ಬರಹಗಾರರನ್ನು ಹಿಡಿದು ತರುವರೋ ಎಂಬ ಕುತೂಹಲ. 

 ರಿಕಹಾರ್ಡ್ ಪ್ರೈಸ್

ಕೆಲವು ಸ್ವಾರಸ್ಯಕರ ಅಂಶಗಳು :

  • ಎರಡನೇ ವರ್ಷದ ಕಮ್ಮಟದಿಂದಲೇ ಎಲ್ಲಾ ಕಾರ್ಯಕ್ರಮಗಳನ್ನೂ ಇಂಟರ್ನೆಟ್ ಮೂಲಕ ನೇರಪ್ರಸಾರ ಮಾಡಲು ಶುರುಮಾಡಿದ್ದರು. ಇವನ್ನು Windmills ಸಂಸ್ಥೆಯ ಯೂಟ್ಯುಬ್ಯ್ ವಾಹಿನಿ ಯಲ್ಲಿ ಕಾಣಬಹುದು. 
  • ಹೋದ ವರ್ಷ ಬಂದ ಅತಿಥಿ ಸಾಹಿತಿಗಳ ಮುಖಚಿತ್ರವು ಸಭಾಂಗಣದ ನೆಲಮಾಳಿಗೆಯಲ್ಲಿ ಪ್ರದರ್ಶನವಾಗುತ್ತದೆ. 
  • ತಿಂಗಳಿಡೀ ನೆಲಮಾಳಿಗೆಯಲ್ಲಿ ಪುಸ್ತಕ ಮಳಿಗೆ ತೆರೆದಿರುತ್ತದೆ. ಓದುವ ಸಾಹಿತಿಗಳ ಕೃತಿಗಳನ್ನು ಅಂದೇ ಕೊಂಡು ಅವರ ಹಸ್ತಾಕ್ಷರವನ್ನು ಹಾಕಿಸಿಕೊಳ್ಳುವುದು ವಾಡಿಕೆ 
  • ಮಳಿಗೆಯ ಮೂಲೆಯೊಂದರಲ್ಲಿ ಕೇವಲ ೫೦ ರೂ ದರದ ತರಹೇವಾರಿ ಪುಸ್ತಕಗಳು ದೊರೆಯುತ್ತವೆ 
  • ಪ್ರತಿಸಾಲಿನ ಕಾರ್ಯಕ್ರಮದ ಪೂರ್ಣಪಟ್ಟಿ ಸಿದ್ಧವಾಗುತ್ತದೆ 
  • ವಿದೇಶೀ ಲೇಖಕರು ಓದುವ ತಮ್ಮ ಕೃತಿಗಳನ್ನು ಮುಂಚೆಯೇ ಆಯೋಜಕರಿಗೆ ಕಳಿಸಿರುತ್ತಾರೆ. ಅವುಗಳನ್ನು ಇಲ್ಲಿನ Masaryk Universityಯ Arts facultyಯ ವಿದ್ಯಾರ್ಥಿಗಳ ಕೈಲಿ ಭಾಷಾಂತರ ಮಾಡಿಸಿ,ಝೆಕ್ ಅವತರಣಿಕೆಯನ್ನು ಓದುವಾಗ ಪರದೆಯ ಮೇಲೆ ಪ್ರದರ್ಶನವಾಗುತ್ತದೆ

 

 

 

ಪ್ರತಿಕ್ರಿಯಿಸಿ