ಈ ತೀರ್ಪು ಕೇವಲ ಸಾಂವಿಧಾನಿಕ ತಿದ್ದುಪಡಿಗೆ ಸಂಬಂಧಿಸಿದ್ದು ಮಾತ್ರವಲ್ಲದೆ, ಭಾರತದ ಸಕಾರಾತ್ಮಕ ಕ್ರಿಯಾ ಯೋಜನೆಯ( Affirmative action policy) ಮೂಲಭೂತ ತತ್ವಗಳನ್ನು ಗಣನೀಯವಾಗಿ ಬದಲಾಯಿಸುತ್ತದೆ ಎಂಬ ಕಾರಣಕ್ಕೂ ಮುಖ್ಯವಾಗಿದೆ. ಆರ್ಥಿಕ ಸ್ಥಿತಿಯು ಸಕಾರಾತ್ಮಕ ಕ್ರಿಯಾ ಯೋಜನೆಯ ಆಧಾರವಾಗಬಹುದು ಎಂದು ಒಪ್ಪಿಕೊಳ್ಳುತ್ತಾ, ತಿದ್ದುಪಡಿಯ ವಿರುದ್ಧ ಅಸಮ್ಮತಿ ವ್ಯಕ್ತಪಡಿಸಿದ ನ್ಯಾಯ ಮೂರ್ತಿ ರವೀಂದ್ರ ಭಟ್ ” ಎಸ್ ಸಿ/ಎಸ್ ಟಿ/ಒಬಿಸಿ ವರ್ಗಗಳನ್ನು ಹೊರಗಿಟ್ಟಿರುವುದರ ಒಟ್ಟು ಪರಿಣಾಮವು ಆರ್ವೆಲ್ಲಿಯನ್ ಆಗಿದೆ, ಅಂದರೆ ಜಾತಿ ಅಥವಾ ವರ್ಗವನ್ನು ಲೆಕ್ಕಿಸದೆ ಎಲ್ಲಾ ಬಡವರು ಪರಿಗಣನೆಗೆ ಅರ್ಹರಾಗಿದ್ದಾರೆ, ಆದರೂ ಮೇಲ್ವರ್ಗ/ಜಾತಿಗಳಿಗೆ ಸೇರಿದವರನ್ನು ಮಾತ್ರ ಇಲ್ಲಿ ಪರಿಗಣಿಸಲಾಗುತ್ತಿದೆ ” ಎಂದಿದ್ದಾರೆ. ಅಸಮ್ಮತಿಯ ಮಾತುಗಳನ್ನು ಬರೆದ ಇಬ್ಬರು ನ್ಯಾಯಾಧೀಶರ ತಕರಾರು ಇದ್ದದ್ದು 10% EWS ಮೀಸಲಾತಿಯಲ್ಲಿ SC/ST/OBC ಒಳಗೊಂಡಿಲ್ಲ ಎನ್ನುವುದಾಗಿಯೇ ಹೊರತು EWS ಎನ್ನುವ ಪರಿಗಣನೆಯೇ ಸಂವಿಧಾನ ನಿರ್ದೇಶಿತ ಮೀಸಲಾತಿಯ ಆಶಯಕ್ಕೆ ವಿರುದ್ಧವಾಗಿದೆ ಎಂದು ಅಲ್ಲ . ಇದು ಸರ್ಕಾರಕ್ಕೆ ಸಾಮಾಜಿಕ ನ್ಯಾಯದಡಿಯಲ್ಲೇ ಸಲ್ಲಬೇಕಾದ ಮೀಸಲಾತಿಯನ್ನು ಇತರ ವಿಚಾರಕ್ಕೆ ತಿರುಗಿಸಲು ಸುಲಭದಲ್ಲಿ ದಾರಿ ಮಾಡಿಕೊಟ್ಟಂತಾಗಿದೆ.
ನವೆಂಬರ್ 7, ಸೋಮವಾರದಂದು ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರನ್ನೊಳಗೊಂಡ ಪೀಠವು 103ನೇ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದೆ, ಇದು ಆರ್ಥಿಕವಾಗಿ ದುರ್ಬಲ ವರ್ಗಗಳ ನಾಗರಿಕರಿಗೆ 10% ವರೆಗೆ ಮೀಸಲಾತಿಯನ್ನು ಒದಗಿಸುತ್ತದೆ.
ಐವರು ನ್ಯಾಯಾಧೀಶರ ಪೈಕಿ ಮೂವರು ಈ ತಿದ್ದುಪಡಿಯನ್ನು ಮಾನ್ಯವೆಂದು ಎತ್ತಿ ಹಿಡಿದರೆ, ಭಾರತದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಸೇರಿದಂತೆ ಇನ್ನೊಬ್ಬರು ಅಸಮ್ಮತಿ ವ್ಯಕ್ತಪಡಿಸಿದರು. ಆದರೆ, ಬೆಸ ಸಂಖ್ಯೆಯ ಪೀಠದಿಂದ ನಿರ್ಣಯಿಸಲ್ಪಟ್ಟ ಇಂತಹ ಪ್ರಕರಣಗಳಲ್ಲಿ ಆಗುವಂತೆ ಬಹುಮತದ ದೃಷ್ಟಿಕೋನವು ಮೇಲುಗೈ ಸಾಧಿಸಿತು.
ಆರ್ಟಿಕಲ್ 15ರಲ್ಲಿ 6ನೇ ಷರತ್ತನ್ನು(clause) ಮತ್ತು ಆರ್ಟಿಕಲ್ 16ರಲ್ಲಿ 6ನೇ ಷರತ್ತನ್ನು ಸೇರಿಸುವ ಮೊದಲು, ಸಾರ್ವಜನಿಕ ವಲಯದ ಉದ್ಯೋಗಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯ ಉದ್ದೇಶಕ್ಕಾಗಿ ಸರ್ಕಾರವು ಮೂರು ವಿಭಿನ್ನ ಗುಂಪುಗಳನ್ನು ಗುರುತಿಸಿತ್ತು : (i) ಪರಿಶಿಷ್ಟ ಜಾತಿಗಳು, (ii) ಪರಿಶಿಷ್ಟ ಪಂಗಡಗಳು ಮತ್ತು (iii) ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು (ಸಾಮಾನ್ಯವಾಗಿ ಇತರೆ ಹಿಂದುಳಿದ ವರ್ಗಗಳು/OBC ಎಂದು ಕರೆಯಲಾಗುತ್ತದೆ).
ಹೊಸದಾಗಿ ಪರಿಚಯಿಸಲಾದ ವರ್ಗವು – ಆರ್ಥಿಕವಾಗಿ ದುರ್ಬಲ (ನಾಗರಿಕರ) ವರ್ಗ – ಈ ಹಿಂದಿನ ಗುಂಪುಗಳಿಂದ ಮೂಲಭೂತವಾಗಿ ಭಿನ್ನವಾಗಿದೆ ಮತ್ತು ಹೀಗಾಗಿ ಮೀಸಲಾತಿ ನೀತಿಯು ಸಾಧಿಸಬೇಕಾದ ಉದ್ದೇಶವನ್ನು ಸಹ ಬದಲಾಯಿಸುತ್ತದೆ.
ಸಾಧಿತ ಸ್ಥಿತಿ ಹಾಗೂ ಆಪಾದಿತ ಸ್ಥಿತಿಯ ನಡುವಿನ ವೈರುಧ್ಯಗಳು
ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ,ಸೋಮವಾರ ತಮ್ಮ ತೀರ್ಪಿನಲ್ಲಿ ಆರ್ಥಿಕ ಹಿಂದುಳಿದಿರುವಿಕೆಯ ಕುರಿತು ಹೆಚ್ಚು ಒತ್ತುಕೊಟ್ಟು ಹೇಳಿದರು.
“ಸುಮಾರು 1.41 ಶತಕೋಟಿ ಜನಸಂಖ್ಯೆಯನ್ನು ಹೊಂದಿರುವ ಈ ದೇಶದಲ್ಲಿ ಆರ್ಥಿಕ ಹಿಂದುಳಿದಿರುವಿಕೆಯು ಸಂವಿಧಾನದ 15(4) ಅಥವಾ 16(4)ನೇ ಪರಿಚ್ಛೇದಕ್ಕೆ ಒಳಪಡುವವರಿಗೆ ಮಾತ್ರ ಸೀಮಿತವಾಗಿಲ್ಲ. ಕೆಲವೇ ಶೇಕಡ ಜನಸಂಖ್ಯೆಯು ಬಡತನದ ರೇಖೆಗಿಂತ ಮೇಲಿರುವ ದೇಶದಲ್ಲಿ ಉದ್ಯೋಗವನ್ನು ಮತ್ತು (ಉದ್ಯೋಗ ಭದ್ರತೆ ಒದಗಿಸುವ ) ಉನ್ನತ ಶಿಕ್ಷಣದ ಅವಕಾಶಗಳನ್ನು ಯೋಗ್ಯ ಮತ್ತು ಅರ್ಹರಿಗೆ ನಿರಾಕರಿಸುವ ಕ್ರಮವು , ಅವರಿಗೆ ಸಮಾಜವು ನೀಡಬೇಕಾದ ಕನಿಷ್ಠ ಮಟ್ಟದ ಅವಕಾಶದ ನಿರಾಕರಣೆಯಾಗುತ್ತದೆ “ -ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ
“ಆರ್ಥಿಕವಾಗಿ ದುರ್ಬಲ ನಾಗರಿಕರ ವರ್ಗ” ಎಂಬ ಅಭಿವ್ಯಕ್ತಿ ಕೇವಲ ಶಬ್ದಾರ್ಥದ ವಿಷಯವಲ್ಲ, ಆದರೆ ಕಠಿಣ ವಾಸ್ತವಗಳ ಅಭಿವ್ಯಕ್ತಿಯಾಗಿದೆ. ಬಡತನವು ಕೇವಲ ನಿಶ್ಚಲತೆಯ ಸ್ಥಿತಿಯಲ್ಲ, ಬದಲಾಗಿ ಹಿಂದುಳಿಯುವಿಕೆಯ ಹಂತ” ಎಂದೂ ಅವರು ತೀರ್ಪಿನಲ್ಲಿ ಇನ್ನಷ್ಟು ವಿವರಿಸಿದರು .
ಭಾರತವು ಹೆಚ್ಚಿನ ಬಡತನದ ಪ್ರಮಾಣವನ್ನು ಹೊಂದಿದೆ ಮತ್ತು ಅದು ಜಾತಿಗಳಾದ್ಯಂತ – ಬೇರೆ ಬೇರೆ ಪ್ರಮಾಣದಲ್ಲಿ -ಕಂಡುಬರುತ್ತದೆ ಎಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲವಾದರೂ, ಅದು (ಬಡವರ ವರ್ಗ) ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಅಥವಾ ಓಬಿಸಿಗಳಿಗೆ ಸಮಾನವಾದ ವರ್ಗವನ್ನು ಹೊಂದಿಲ್ಲ ಏಕೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಸಾಧಿತ ಸ್ಥಿತಿ ಮತ್ತು ಆಪಾದಿತ ಸ್ಥಿತಿಯ ಸಾಮಾಜಿಕ ಪರಿಕಲ್ಪನೆಯನ್ನು ನಾವು ಅಧ್ಯಯನ ಮಾಡಬೇಕಾಗುತ್ತದೆ.
ಸಾಧಿತ ಸ್ಥಾನಮಾನವು, ನುಡಿಗಟ್ಟು ಸೂಚಿಸುವಂತೆ,ವ್ಯಕ್ತಿಯು ಸ್ವಂತ ಪ್ರಯತ್ನಗಳಿಂದ ಸ್ವಾಧೀನಪಡಿಸಿಕೊಂಡದ್ದಾಗಿರುತ್ತದೆ. ರಾಜಕಾರಣಿ , ಉದ್ಯಮಿ ಅಥವಾ ಕ್ರೀಡಾಪಟುವಾಗುವುದು ಸಾಧಿತ ಸ್ಥಾನಮಾನವಾಗಿದೆ. ಆಪಾದಿತ ಸ್ಥಿತಿಯು ವ್ಯಕ್ತಿಯ ನಿಯಂತ್ರಣವನ್ನು ಮೀರಿದ್ದಾಗಿರುತ್ತದೆ . ಇದು ಜನರ ಜನ್ಮಜಾತವಾಗಿರುವ ಅಥವಾ ನಿಯಂತ್ರಣವನ್ನು ಸಾಧಿಸಲಾಗದ ವಿಷಯವಾಗಿದೆ.
ಜಾತಿಯು ಆಪಾದಿತ ಸ್ಥಾನಮಾನಕ್ಕೆ ಉದಾಹರಣೆಯಾಗಿದೆ.
ಸಾಧಿತ ಸ್ಥಿತಿ ಮತ್ತು ಆಪಾದಿತ ಸ್ಥಿತಿಯ ಬೈನರಿಯಲ್ಲಿ ಆರ್ಥಿಕ ಹಿಂದುಳಿದಿರುವಿಕೆಯನ್ನು ನಾವು ಹೇಗೆ ಅರ್ಥಮಾಡಿಕೊಳ್ಳುತ್ತೇವೆ?
ಬಡತನದಲ್ಲಿ ಜನಿಸಿದ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ಬಡವನಾಗಿ ಉಳಿಯುವುದಿಲ್ಲ. ಹಾಗೆಯೇ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಮಗು ಜೀವನದಲ್ಲಿ ಕೆಲ ಕಾಲದ ನಂತರ ಬಡತನಕ್ಕೆ ಜಾರಬಹುದು. ಬಾಹ್ಯ ಅಂಶಗಳು ಒಬ್ಬರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆಯಾದರೂ, ಮಾನವ ಪ್ರಯತ್ನಗಳ ಪಾತ್ರಕ್ಕೂ ಸಾಕಷ್ಟು ಅವಕಾಶವಿದೆ. ಆದ್ದರಿಂದ, ಒಬ್ಬರ ಆರ್ಥಿಕ ಸ್ಥಿತಿಯು ಆಪಾದಿತ ಸ್ಥಿತಿ ಎಂದು ಹೇಳಲಾಗುವುದಿಲ್ಲ.
ಮತ್ತೊಂದೆಡೆ, ವ್ಯಕ್ತಿಯು ಎಸ್‌ಸಿ, ಎಸ್‌ಟಿ ಅಥವಾ ಒಬಿಸಿ ವರ್ಗಕ್ಕೆ ಅರ್ಹತೆ ಪಡೆಯಲು, ಅವರು ನಿರ್ದಿಷ್ಟ ಜಾತಿ ಅಥವಾ ಬುಡಕಟ್ಟಿಗೆ ಸೇರಿದವರಾಗಿರಬೇಕು – ಇವೆರಡೂ ಸಹ ಆಪಾದಿತ ಸ್ಥಾನಮಾನಗಳು; ನೀವು ಅದರೊಂದಿಗೆ ಹುಟ್ಟಿದ್ದೀರಿ ಮತ್ತು ನಿಮಗೆ ಅದರ ಮೇಲೆ ನಿಯಂತ್ರಣವಿಲ್ಲ .
ಎಸ್‌ಸಿ, ಎಸ್‌ಟಿ ಅಥವಾ ಒಬಿಸಿ ವರ್ಗಗಳಿಗೆ ಮೀಸಲಾತಿಯ ಅವರ ಆಪಾದಿತ ಸ್ಥಿತಿಯನ್ನು ಆಧರಿಸಿದೆ, ಇದು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾತಿಗೆ ಸಂಬಂಧಿಸಿದಂತೆ ಅಲ್ಲ. ಮೀಸಲಾತಿಯನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್ ತೀರ್ಪುಗಳು ಈ ವಿಷಯದಲ್ಲಿ ಸಂಪೂರ್ಣವಾಗಿ ಮೌನವಾಗಿವೆ. ಬದಲಿಗೆ, ಅವರು ಆರ್ಥಿಕ ಹಿಂದುಳಿದಿರುವಿಕೆಯನ್ನು ಸಾಮಾಜಿಕ ಹಿಂದುಳಿದಿರುವಿಕೆಯಂತೆಯೇ ಪರಿಗಣಿಸುತ್ತಾರೆ, ಸಾಮಾಜಿಕ ಹಿಂದುಳಿದಿರುವಿಕೆಯು ವ್ಯಕ್ತಿಯ- ಜಾತಿ ಎಂಬ-ಆಪಾದಿತ ಸ್ಥಾನಮಾನದ ಪರಿಣಾಮವಾಗಿದೆ ಆದರೆ ಆರ್ಥಿಕ ಹಿಂದುಳಿದಿರುವಿಕೆಯು ವಿವಿಧ ಅಂಶಗಳಿಂದ ಉಂಟಾಗಬಹುದು ಎಂಬುದನ್ನು ಕಡೆಗಣಿಸಲಾಗಿದೆ.
ಉದಾಹರಣೆಗೆ ನ್ಯಾಯಮೂರ್ತಿ ಬೇಲಾ ತ್ರಿವೇದಿ ತಮ್ಮ ತೀರ್ಪಿನಲ್ಲಿ ಹೀಗೆ ಹೇಳುತ್ತಾರೆ,
“ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಪಂಗಡಗಳು ಮತ್ತು ಒಬಿಸಿ ನಾಗರಿಕರನ್ನು ಹೊರತುಪಡಿಸಿ ‘ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ’ ವಿಶೇಷ ಮೀಸಲಾತಿ/ ಸಾಧನಗಳನ್ನು ನೀಡಲು ಸರ್ಕಾರವನ್ನು ಸಕ್ರಿಯಗೊಳಿಸುವ, ಆಕ್ಷೇಪಣೆಗಳೊಗಾಗಿರುವ ಈ ತಿದ್ದುಪಡಿಯನ್ನು ಆರ್ಥಿಕವಾಗಿ ದುರ್ಬಲ ವರ್ಗಗಳ ನಾಗರಿಕರ ಪ್ರಯೋಜನಕ್ಕಾಗಿ ಮತ್ತು ಪ್ರಗತಿಗಾಗಿ ಸಂಸತ್ತಿನ ಧೃಢೀಕೃತ ಕ್ರಮವೆಂದು ಪರಿಗಣಿಸಬೇಕಾಗಿದೆ . ಆರ್ಥಿಕವಾಗಿ ದುರ್ಬಲ ವರ್ಗದ ನಾಗರಿಕರನ್ನು ಪ್ರತ್ಯೇಕ ವರ್ಗವಾಗಿ ಪರಿಗಣಿಸುವುದು ಸಮಂಜಸವಾದ ವರ್ಗೀಕರಣವಾಗಿದೆ ಮತ್ತು ಅಸಮಂಜಸ /ಅಸಮರ್ಥನೀಯ ವರ್ಗೀಕರಣ ಎಂದು ಹೆಸರಿಸಬೇಕಾಗಿಲ್ಲ . ಸಂವಿಧಾನದ ಮೂಲ ರಚನೆಗೆ ದ್ರೋಹ ಅಥವಾ ಆರ್ಟಿಕಲ್ 14 ರ ಉಲ್ಲಂಘನೆ ಎಂದೇನೂ ಪರಿಗಣಿಸಬೇಕಾಗಿಲ್ಲ .”
ತಾರತಮ್ಯ ಹಾಗೂ ಅಭಾವ
ನ್ಯಾಯಾಧೀಶರು ನಿರ್ಲಕ್ಷಿಸುವ ಎಸ್‌ಸಿ, ಎಸ್‌ಟಿ ಅಥವಾ ಒಬಿಸಿ ಮತ್ತು EWS ವರ್ಗಗಳ ನಡುವಿನ ಇತರ ಪ್ರಮುಖ ವ್ಯತ್ಯಾಸವೆಂದರೆ ಮಾಪನದ ಅಂಶ . ಕೇಂದ್ರ ಸರ್ಕಾರವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಪಟ್ಟಿಗಳನ್ನು ನೋಡಿಕೊಳ್ಳುತ್ತದೆ ಹಾಗೂ ಈ ಪಟ್ಟಿಗಳು ಅವುಗಳಲ್ಲಿ ಸೇರಿಸಲು ಅರ್ಹತೆ ಹೊಂದಿರುವ ಜಾತಿಗಳು ಮತ್ತು ಬುಡಕಟ್ಟುಗಳ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತವೆ. EWS ವರ್ಗಕ್ಕೆ ನಾವು ಇದೇ ರೀತಿಯ ಪಟ್ಟಿಯನ್ನು ಹೊಂದಬಹುದೇ? ಸಾಧ್ಯವಿಲ್ಲ, ಏಕೆಂದರೆ ಈ ವರ್ಗವು ಜಾತಿಗಳು ಅಥವಾ ಬುಡಕಟ್ಟುಗಳಿಗೆ ವಿರುದ್ಧವಾಗಿ “ಕುಟುಂಬಗಳನ್ನು” ಗುರಿಯಾಗಿಸಿದೆ .
ಇದು ಗಮನಾರ್ಹ ಏಕೆಂದರೆ ಇದು ಮೀಸಲಾತಿ ನೀತಿಯನ್ನು “ಸಾಮಾಜಿಕ ಅನ್ಯಾಯ” ವನ್ನು ಸರಿಪಡಿಸುವ ಗುರಿಯಿಂದ “ವೈಯಕ್ತಿಕ ಅಭಾವವನ್ನು” ಪರಿಹರಿಸುವ ಕಡೆಗೆ ಬದಲಾಯಿಸುತ್ತದೆ.
ಎಸ್‌ಸಿ, ಎಸ್‌ಟಿ ಅಥವಾ ಒಬಿಸಿ ವರ್ಗಗಳಿಗೆ ನೀಡಿರುವ ಮೀಸಲಾತಿಯು ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಉದ್ದೇಶಿಸಿದ್ದಾಗಿದೆ. ಸಂವಿಧಾನವು ಅದನ್ನು ಸ್ಪಷ್ಟವಾಗಿ ಹೇಳದಿದ್ದರೂ, ಸಂವಿಧಾನ ಸಭೆಯ ಚರ್ಚೆಗಳು ಮತ್ತು ಹಲವು ವರ್ಷಗಳ ನ್ಯಾಯಾಲಯದ ತೀರ್ಪುಗಳು ಜಾತಿ ತಾರತಮ್ಯದ ನಿವಾರಣೆಯೇ ಸಕಾರಾತ್ಮಕ ಕ್ರಿಯಾ ಯೋಜನೆಯ ಉದ್ದೇಶವಾಗಿತ್ತು ಎಂದು ಸ್ಪಷ್ಟಪಡಿಸುತ್ತವೆ. ಒಬಿಸಿ ವರ್ಗಗಳಿಗೆ ಮೀಸಲಾತಿಯ ಸಿಂಧುತ್ವವನ್ನು ಎತ್ತಿಹಿಡಿದ ,1992ರ ಇಂದ್ರ ಸಾಹ್ನಿ ತೀರ್ಪಿನಲ್ಲಿ ಇದನ್ನು ಅತ್ಯಂತ ಕಟ್ಟುನಿಟ್ಟಾಗಿ ಹೇಳಲಾಗಿದೆ.
“ನಮ್ಮ ಅಭಿಪ್ರಾಯದಲ್ಲಿ [ಕೂಡ], ‘ ರಾಜ್ಯಾಧೀನ ಸೇವೆಗಳಲ್ಲಿ ಸಮರ್ಪಕವಾಗಿ ಪ್ರತಿನಿಧಿಸಲ್ಪಡದ – ಪ್ರಜೆಗಳ ವರ್ಗ ‘ ಎಂಬ ಪದವು ಅಸ್ಪಷ್ಟ ಮತ್ತು ಅನಿಶ್ಚಿತ ವಿವರಣೆಯಾಗಿದೆ. ‘ಹಿಂದುಳಿದ’ ಪದವನ್ನು ಸೇರಿಸುವ ಮೂಲಕ ಮತ್ತು ಡಾ. ಅಂಬೇಡ್ಕರ್ ಹಾಗೂ ಶ್ರೀ ಕೆ.ಎಂ.ಮುನ್ಷಿಯವರ ಭಾಷಣಗಳಿಂದ , ‘ರಾಜ್ಯಾಧೀನ ಸೇವೆಗಳಲ್ಲಿ ಸಮರ್ಪಕವಾಗಿ ಪ್ರತಿನಿಧಿಸಲ್ಪಡದ – ಪ್ರಜೆಗಳ ವರ್ಗ ‘ಎಂದರೆ ಅವರ ಸಾಮಾಜಿಕ ಹಿಂದುಳಿದಿರುವಿಕೆಯ ಕಾರಣದಿಂದ ಪ್ರಾತಿನಿಧ್ಯವಿಲ್ಲದ ನಾಗರಿಕರ ವರ್ಗಗಳು ಮಾತ್ರ ಎಂದು ಅರ್ಥೈಸಲಾಗಿದೆ” – ನ್ಯಾಯಮೂರ್ತಿ ಬಿ.ಪಿ. ಇಂದ್ರ ಸಾಹ್ನಿ ವಿರುದ್ಧ ಯೂನಿಯನ್ ಆಫ್ ಇಂಡಿಯಾದಲ್ಲಿ ಜೀವನ್ ರೆಡ್ಡಿ (1992)
ರೆಡ್ಡಿಯವರ ತೀರ್ಪಿನಲ್ಲಿ ಗಮನಿಸಬೇಕಾದ ಪ್ರಮುಖ ನುಡಿಗಟ್ಟು “ಸಾಮಾಜಿಕ ಹಿಂದುಳಿದಿರುವಿಕೆ”. ಎಸ್‌ಸಿ,ಎಸ್‌ಟಿ ಅಥವಾ ಒಬಿಸಿ ಪಟ್ಟಿಯ ಭಾಗವಾಗಿರುವ ಪ್ರತಿಯೊಂದು ಜಾತಿಯು (ಅಥವಾ ಪಂಗಡ) ದಶಕಗಳ ಅಥವಾ ಶತಮಾನಗಳಿಂದಲೂ ಶೋಷಣೆಗೊಳಗಾದ ಇತಿಹಾಸವನ್ನು ಹೊಂದಿದೆ.
ಸೇಬು ಮತ್ತು ಕಿತ್ತಳೆಗಳ ನಡುವೆ ಹೋಲಿಕೆಯೇ ?
ಸಾರ್ವಜನಿಕ ವಲಯದ ಉದ್ಯೋಗಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಗಳು ಇಲ್ಲಿಯವರೆಗೆ ಜಾತಿಗಳು ಅಥವಾ ಪಂಗಡಗಳಿಗೆ ಮೀಸಲಾಗಿದ್ದವು. ನಿರ್ದಿಷ್ಟ ಜಾತಿಗಳು ಮತ್ತು ಪಂಗಡಗಳ ಕೆಲವು ಸದಸ್ಯರನ್ನು ಸರ್ಕಾರೀ ವ್ಯವಸ್ಥೆ ಅಥವಾ ಸಮಾಜದ ಮುಖ್ಯವಾಹಿನಿಯ ಭಾಗವಾಗಿಸುವ ಮೂಲಕ ಆಯಾ ಸಮುದಾಯವನ್ನು ಸಬಲೀಕರಣಗೊಳಿಸಬೇಕಿತ್ತು . ಒಂದು ನಿರ್ದಿಷ್ಟ ಜಾತಿಯ ನಿರ್ದಿಷ್ಟ ಸಂಖ್ಯೆಯ ವ್ಯಕ್ತಿಗಳನ್ನು ಉನ್ನತೀಕರಿಸಿದರೆ, ಇಡೀ ಜಾತಿಯು ಸಬಲೀಕರಣಗೊಳ್ಳುತ್ತದೆ ಮತ್ತು ಪ್ರತಿಯಾಗಿ, ಆ ಜಾತಿಯು ಮೇಲ್ಜಾತಿಗಳ ತಾರತಮ್ಯ ಮತ್ತು ಇತರ ಸಾಮಾಜಿಕ ಒತ್ತಡಗಳಿಗೆ ಗುರಿಯಾಗುವುದು ಕಡಿಮೆಯಾಗಬಹುದು ಎಂಬುದು ತರ್ಕವಾಗಿತ್ತು.
ಮುಂದುವರಿದು, ಜಾತಿಗಳ ನಡುವಿನ ಭೌತಿಕ ಅಂತರವನ್ನು ಕಡಿತಗೊಳಿಸಿದರೆ (ಮೀಸಲಾತಿಗಳು ಆ ಗುರಿಗೆ ಸಹಾಯ ಮಾಡುತ್ತವೆ ಎಂದು ನಿರೀಕ್ಷಿಸಲಾಗಿದೆ) ಅದು ಜಾತಿಗಳ ನಡುವೆ ಭ್ರಾತೃತ್ವವನ್ನು ಹೆಚ್ಚಿಸುತ್ತದೆ ಹಾಗೂ ಅಂತಿಮವಾಗಿ ಜಾತಿ ಪದ್ಧತಿಯ ನಾಶಕ್ಕೆ ಕಾರಣವಾಗಬಹುದು ಎಂದು ಆಶಿಸಲಾಗಿತ್ತು
EWS ವರ್ಗೀಕರಣವು ಈ ಚೌಕಟ್ಟನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಈ ವರ್ಗಕ್ಕೆ ಮೂಲಭೂತ ಘಟಕವಾಗಿರುವ ‘ಕುಟುಂಬ’ವು ಜಾತಿ ಅಥವಾ ಪಂಗಡಕ್ಕೆ ಸಮಾನವಲ್ಲ . ಆದ್ದರಿಂದ, ಎಸ್‌ಸಿ/ಎಸ್‌ಟಿ/ಒಬಿಸಿ ವರ್ಗಗಳನ್ನು ಇಡಬ್ಲ್ಯೂಎಸ್ ವರ್ಗದೊಂದಿಗೆ ಹೋಲಿಸುವುದು ಸೇಬುಗಳನ್ನು ಕಿತ್ತಳೆಯೊಂದಿಗೆ ಹೋಲಿಸಿದಂತೆ.
ಸಂವಿಧಾನವೊಂದು ಜೀವಂತ ದಾಖಲೆ, ಆದರೆ ಪ್ರತಿಯೊಂದು ಬದಲಾವಣೆಯು ಅಪೇಕ್ಷಣೀಯವಲ್ಲ
ಸಂವಿಧಾನದ 103 ನೇ ತಿದ್ದುಪಡಿಯು ಮೀಸಲಾತಿ ನೀತಿಯನ್ನು “ಸಾಮಾಜಿಕ” ಎಂಬುದರಿಂದ “ವೈಯಕ್ತಿಕ” ಎಂದು ಬದಲಾಯಿಸಿದೆ. ಇದು ನೀತಿಯಲ್ಲಿ ಹುಳುಕುಗಳನ್ನು ಪರಿಚಯಿಸಲು ಸಹ ಅನುಮತಿಸುತ್ತದೆ.
ಒಮ್ಮೆ ನೀವು ಮೀಸಲಾತಿಯನ್ನು, ಕಡೆಗಣನೆಗೊಳಗಾದ ಸ್ಪಷ್ಟ ಇತಿಹಾಸ ಹೊಂದಿರುವ ಆಪಾದಿತ ಸ್ಥಾನಮಾನಗಳಿಂದ ಬೇರ್ಪಡಿಸಿದರೆ , ಸಂಸತ್ತು ಹೆಚ್ಚಿನ ಕೋಟಾಗಳನ್ನು ಪರಿಚಯಿಸಲು ಯಾವುದೇ ಇತರ ವ್ಯಾಖ್ಯಾನಗಳನ್ನು ಬಳಸಬಹುದು ಎಂದು ಕಾಲ್ಪನಿಕವಾಗಿ ಹೇಳಬಹುದು. ಉದಾಹರಣೆಗೆ, ಶ್ರೇಣಿ 1 ಅಥವಾ ಶ್ರೇಣಿ 2ರ ನಗರದಿಂದ 200 ಕಿಲೋಮೀಟರ್‌ಗಿಂತ ಹೆಚ್ಚು ದೂರದಲ್ಲಿರುವ ಹಳ್ಳಿಗಳಲ್ಲಿ ವಾಸಿಸುವ ಕುಟುಂಬಗಳಿಗೆ ಮೀಸಲಾತಿ ನೀಡಲು ಒಂದು ಪ್ರಕರಣವನ್ನು ಮಾಡಬಹುದು. ನಗರ ಪ್ರದೇಶಗಳಿಂದ ತಮ್ಮ ಭೌಗೋಳಿಕ ದೂರದ ಕಾರಣದಿಂದಾಗಿ ಈ ಕುಟುಂಬಗಳು ಅನುಭವಿಸುತ್ತಿರುವ ಹಿಂದುಳಿದಿರುವಿಕೆಯನ್ನು ತೋರಿಸಲು ಈ ಪ್ರಕರಣವನ್ನು ಸೃಷ್ಠಿಸಬಹುದು .
ಆದಾಗ್ಯೂ ಇದು, ‘ಐತಿಹಾಸಿಕವಾಗಿ ವಿವಿಧ ಜಾತಿಗಳು ಮತ್ತು ಪಂಗಡಗಳು ಎದುರಿಸುತ್ತಿರುವ ಸಾಮಾಜಿಕ ತಾರತಮ್ಯದ ನಿವಾರಣೆ’ – ಎಂಬ ಭಾರತದ ಸಕಾರಾತ್ಮಕ ಕ್ರಿಯಾ ಯೋಜನೆಯ ಆಧಾರವಾಗಿರುವ ಮೂಲ ತತ್ವದಿಂದ ವಿಮುಖಗೊಳಿಸುತ್ತದೆ.
ಸೋಮವಾರದ ತೀರ್ಪುಗಳಲ್ಲಿ ಅನೇಕ ಬಾರಿ ಉಲ್ಲೇಖಿಸಿದಂತೆ ಸಂವಿಧಾನವೊಂದು ಜೀವಂತ ದಾಖಲೆಯಾಗಿದೆ ,ಆದ್ದರಿಂದ ಸಂವಿಧಾನದಲ್ಲಿ ಬದಲಾವಣೆಗಳು ಆಘಾತಕಾರಿ ಎಂಬಂತೆ ನೋಡಬೇಕಿಲ್ಲ . ಆದಾಗ್ಯೂ, 103ನೇ ತಿದ್ದುಪಡಿಯು ಭಾರತದ ಸಕಾರಾತ್ಮಕ ಕ್ರಿಯಾ ಯೋಜನೆಯ ಅರ್ಥವನ್ನು ಹಾಗೂ ಅದು ತನಗಾಗಿ ಯಾವ ಗುರಿಗಳನ್ನು ಹೊಂದಿತ್ತು ಎಂಬುದನ್ನು ಗಮನಾರ್ಹವಾಗಿ ಬದಲಾಯಿಸುತ್ತದೆ . ಆದ್ದರಿಂದ, ಈ ನಿರ್ದಿಷ್ಟ ಬದಲಾವಣೆಯು ಅಪೇಕ್ಷಣೀಯವಾಗಿದೆ ಎಂದು ವಾದಿಸಲಾಗದು .
ಕೃಪೆ: ದಿ ಕ್ವಿಂಟ್
ಅನುವಾದ :ರಂಜಿತಾ ಜಿ .ಹೆಚ್
ತೇಜಸ್ ಹರಾದ್ ಪ್ರಸ್ತುತ ಭಾರತದ ಹೆಸರಾಂತ ಸಾಪ್ತಾಹಿಕ ಜರ್ನಲ್ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಅವರ ಬರವಣಿಗೆಯು ಭಾರತದ ಜಾತಿ ವ್ಯವಸ್ಥೆ ಮತ್ತು ಈ ದಬ್ಬಾಳಿಕೆಯ ಸಾಮಾಜಿಕ ರಚನೆಗೆ ಸವಾಲಾದ ಜಾತಿ-ವಿರೋಧಿ ಚಳುವಳಿಯ ಮೇಲೆ ಕೇಂದ್ರೀಕರಿಸಿದೆ.ಅವರು ಜುನೂನ್ ಫೌಂಡೇಶನ್ ಎಂಬ ಸರ್ಕಾರೇತರ ಸಂಸ್ಥೆಯ ಸ್ಥಾಪಕ ಸದಸ್ಯರಾಗಿದ್ದಾರೆ, ಅದರ ಮೂಲಕ ಅವರು ಮಕ್ಕಳಿಗೆ ಕಲಿಸುತ್ತಾರೆ ಮತ್ತು ಸಮಾನ ಶೈಕ್ಷಣಿಕ ಅವಕಾಶಗಳನ್ನು ಒದಗಿಸಲು ಸಂವಹನ ನಡೆಸುತ್ತಾರೆ.