ಭಾರತದಲ್ಲಿಂದು ವಿಜ್ಞಾನವು ಗತಕಾಲದ ರಮ್ಯತೆಯನ್ನು ಸಂಭ್ರಮಿಸುವ ಅಸ್ತ್ರವಾಗಿದೆ

ಭಾರತದಲ್ಲಿರುವ ಕೆಲವೇ ಕೆಲವು ಸಯನ್ಸ್‌ ಆಂಡ್‌ ಟೆಕ್ನೋಲಜಿ ಸ್ಟಡೀಸ್‌ (STS) ಸಂಶೋಧಕರಲ್ಲಿ ರೆನಿ ಥೋಮಸ್‌ ಕೂಡಾ ಒಬ್ಬರು. ಅವರು ಸದ್ಯ ಭೋಪಾಲದ IISER ಸಂಸ್ಥೆಯಲ್ಲಿ ಸಾಮಾಜಿಕ ಮಾನವ ಶಾಸ್ತ್ರ (social anthropology) ವಿಭಾಗದ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಹೊರಬಂದಿರುವ ಅವರ ‘Beyond Disenchantment: Science and Religion in India’ ಕೃತಿ ಜಗತ್ತಿನ ವಿವಿಧ ಕಡೆಯ ವಿದ್ವಾಂಸರ ಗಮನ ಸೆಳೆದಿದೆ. ಭಾರತದ ಬಗೆಗಿನ ವಿಶಿಷ್ಟವಾದ ಮಾನವ ಶಾಸ್ತ್ರೀಯ ಒಳನೋಟವನ್ನು ನೀಡುವ ಈ ಕೃತಿ ವಿಜ್ಞಾನಿಗಳ ಮತ್ತು ವೈಜ್ಞಾನಿಕ ಸಂಸ್ಥೆಗಳ ದೈನಂದಿನ ಜೀವನಕ್ಕೆ ಹಿಡಿದ ಕೈಗನ್ನಡಿ. ವಿಜ್ಞಾನಿಗಳ ಮತ್ತು ವೈಜ್ಞಾನಿಕ ಸಂಸ್ಥೆಗಳ ಭಾಗವಾಗಿದ್ದುಕೊಂಡು ವೀಕ್ಷಿಸುವ ಮೂಲಕ ನಡೆಸಲಾದ ಜನಾಂಗಶಾಸ್ತ್ರೀಯ (ethnography) ವಿಧಾನದ ಅಧ್ಯಯನ ಇದಾಗಿದ್ದು ಅಕಾಡೆಮಿಕ್‌ ವಲಯದಲ್ಲಿ ಬಹಳ ಮೆಚ್ಚುಗೆ ಪಡೆದುಕೊಂಡಿದೆ. ಈ ಸಂದರ್ಶನದಲ್ಲಿ ಥೋಮಸ್ ರವರೊಂದಿಗೆ ಕೃತಿಯ ಬಗ್ಗೆ ಮತ್ತು ಕೃತಿ ಎತ್ತುವ ಮುಖ್ಯ ಪ್ರಶ್ನೆಗಳ ಬಗ್ಗೆ ಐಐಟಿ ಗಾಂಧಿನಗರ ಮಾನವಿಕ ಹಾಗೂ ಸಮಾಜವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಸರ್ಫರಾಜ್ ಇ. ಪಿ. ಮತ್ತು ಅನೀಸ್ ಕೆ. ಮಾತಾಡಿದ್ದಾರೆ.

ಕೃಪೆ : thijori.in

ನೇರವಾಗಿ ನಿಮ್ಮ ಕೃತಿಯ ಬಗ್ಗೆ ಮಾತನಾಡುತ್ತಲೇ ಚರ್ಚೆ ಆರಂಭಿಸೋಣ. ನಿಮ್ಮ ಕೃತಿ ಮುಂದಿಡುವ ಪ್ರಧಾನ ಆಶಯಗಳು ಮತ್ತು ಅದು ಎತ್ತುವ ಮುಖ್ಯ ಪ್ರಶ್ನೆಗಳು ಏನೆಲ್ಲಾ?

ವಿಜ್ಞಾನ ಮತ್ತು ಧರ್ಮವನ್ನು ನಿರಂತರ ಸ್ಪರ್ಧೆಯಲ್ಲಿರುವ ಎರಡು ವರ್ಗಗಳಾಗಿ ಇತಿಹಾಸದುದ್ದಕ್ಕೂ ಪರಿಗಣಿಸಲಾಗಿದೆ. ಪಾಶ್ಚಾತ್ಯ ಇತಿಹಾಸಶಾಸ್ತ್ರದಲ್ಲಿ (historiography) ಇದನ್ನು ನಿಚ್ಚಳವಾಗಿ ಕಾಣಬಹುದು. ಆದರೆ ಇದು ಸರಿಯೆನಿಸದ ಕೆಲವು ಸಂದರ್ಭಗಳು ಅಲ್ಲೂ ಇವೆ ಎಂದು ಹಲವು ಇತಿಹಾಸಜ್ಞರು ಶ್ರುತಪಡಿಸಿದ್ದಾರೆ. ವಿಜ್ಞಾನವನ್ನು ದಿನಾಲೂ ಪಾಲಿಸುವ ವೈಜ್ಞಾನಿಕ ಸಂಸ್ಥೆಯೊಂದರ ಬಗ್ಗೆ ಜನಾಂಗಶಾಸ್ತ್ರೀಯ ವಿಧಾನದ ಅಧ್ಯಯನ ನಡೆಸಿ ವಿಜ್ಞಾನ ಮತ್ತು ಧರ್ಮ ಜನರ ದೈನಂದಿನ ಬದುಕಿನಲ್ಲಿ ಯಾವ ರೀತಿಯಲ್ಲಿ ಪರಸ್ಪರ ಬೆಸೆದುಕೊಂಡಿದೆ ಎಂದು ಕಂಡುಕೊಳ್ಳುವ ಕೆಲಸವನ್ನು ಕೃತಿ ಕೈಗೆತ್ತಿಕೊಂಡಿದೆ. ಸಂಶೋಧನೆ ಮತ್ತು ಕ್ಷೇತ್ರಕಾರ್ಯದ ವೇಳೆ ನಾನು ಕಲಿತ ವೈಜ್ಞಾನಿಕ ಸಂಸ್ಥೆಯಲ್ಲಿ ಧರ್ಮದೊಂದಿಗೆ ನಂಟಿರುವ ಹಲವಾರು ಆಚರಣೆಗಳನ್ನು ಗಮನಿಸಿದ್ದೇನೆ. ವಿಜ್ಞಾನ ಮತ್ತು ಧರ್ಮವನ್ನು ದ್ವಂದ್ವಗಳಾಗಿ ನೋಡಿಕೊಂಡು ಬಂದಿರುವ ಜಗತ್ತಿನಲ್ಲಿ ವಿಜ್ಞಾನ ಮತ್ತು ಧರ್ಮದ ನಡುವೆ ಸಾಧಿಸಲಾಗಿರುವ ಈ ಬೆಸುಗೆ ನನ್ನಲ್ಲಿ ಬಹಳ ಆಸಕ್ತಿ ಹುಟ್ಟಿಸಿತ್ತು. ಈ ಪ್ರಯಾಣ ಆರಂಭವಾಗಿದ್ದು ಅಲ್ಲಿಂದ. ಧರ್ಮ ಮತ್ತು ವಿಜ್ಞಾನದ ನಡುವಿನ ನಿಕಟ ಸಂಬಂಧವನ್ನು ಒರೆಗೆ ಹಚ್ಚುವುದರ ಹೊರತಾಗಿ ಭಾರತದ ಸಂದರ್ಭದಲ್ಲಿ ವಿಜ್ಞಾನ ಯಾವೆಲ್ಲಾ ಹಂತದಲ್ಲಿ ಇತರ ಅಂಶಗಳ ಸ್ವಾಧೀನಕ್ಕೊಳಪಟ್ಟಿದೆ ಎನ್ನುವುದನ್ನು ನನ್ನ ಕೃತಿ ಚರ್ಚಿಸುತ್ತದೆ. ಸಾಂಸ್ಕೃತಿಕ ರಾಜಕಾರಣವನ್ನು ಪ್ರಚುರಪಡಿಸಲು ವಿಜ್ಞಾನವನ್ನು ಹೇಗೆಲ್ಲಾ ಬಳಸಲಾಗುತ್ತಿದೆ ಎನ್ನುವುದರ ಕಡೆಗೂ ಬೆಳಕು ಚೆಲ್ಲುತ್ತದೆ. ವಿಜ್ಞಾನದ ಚರಿತ್ರೆ (History of science) ವಿಜ್ಞಾನ ಮತ್ತು ತಾಂತ್ರಿಕ ಅಧ್ಯಯನ ಕ್ಷೇತ್ರದ (STS) ಸೈದ್ಧಾಂತಿಕ ಹಾಗೂ ವೈಧಾನಿಕ ಪರಿಕರಗಳನ್ನು ಬಳಸಿಕೊಂಡು ಈ ಪ್ರಶ್ನೆಗಳನ್ನು ಮತ್ತು ಆತಂಕಗಳನ್ನು ನಾನು ಇದಿರುಗೊಂಡಿದ್ದೇನೆ.

ಇದಕ್ಕೆ ಸಂಬಂಧಪಟ್ಟಂತೆ ಮತ್ತೊಂದು ವಿಚಾರ ಕೇಳಬಯಸುತ್ತೇನೆ. ತಲಾಲ್‌ ಅಸದ್‌ರಂತಹ ಕೆಲವು ಸಮಾಜವಿಜ್ಞಾನಿಗಳ ಅಧ್ಯಯನಗಳು ಪೋಸ್ಟ್‌- ಸೆಕ್ಯುಲರ್‌ ಸ್ಟಡೀಸ್‌ ಎನ್ನುವ ಹೊಸತಾದ ಅಧ್ಯಯನ ಶಿಸ್ತನ್ನು ಹುಟ್ಟು ಹಾಕಿದೆ. ಸೆಕ್ಯುಲರ್‌ ದೃಷ್ಟಿಕೋನ ರಿಲಿಜಿಯನ್‌ ಎನ್ನುವ ಕೆಟಗರಿಯನ್ನು ಯಾವ ರೀತಿ ಭಿನ್ನ ವರ್ಗವಾಗಿ ನಿಲ್ಲಿಸುತ್ತಾ ಅದರ ಸರಹದ್ದುಗಳನ್ನು ನಿಗದಿಪಡಿಸುತ್ತಿದೆ ಎನ್ನುವುದನ್ನು ಅದು ಶೋಧಿಸುತ್ತಿದೆ. ಯುರೋಪಿಯನ್‌ ಚರಿತ್ರೆಯನ್ನು ಅವಲೋಕಿಸಿದರೆ ಜ್ಞಾನಪರ್ವ (ಎನ್ಲೈಟೆನ್ಮೆಂಟ್‌), ವೈಜ್ಞಾನಿಕ ಕ್ರಾಂತಿ (ಸಯಂಟಿಫಿಕ್‌ ರೆವಲ್ಯೂಶನ್‌) ಎಂದೆಲ್ಲಾ ಹೇಳುತ್ತಾ ಧರ್ಮ ಮತ್ತು ವಿಜ್ಞಾನದ ನಡುವಿನ ಕಂದಕವನ್ನು ಸದಾ ಉಳಿಸುವ ಪ್ರಯತ್ನಗಳು ಧಾರಾಳವಾಗಿ ಕಂಡುಬರುತ್ತದೆ. ವಿಜ್ಞಾನ ಮತ್ತು ಧರ್ಮದ ನಡುವೆ ವಿವಿಧ ಬಗೆಯ ಕೊಡು- ಕೊಳೆಯ ಸಂಪರ್ಕ ಇದೆ ಎನ್ನುತ್ತಾ ಅದರಾಚೆಗೆ ಚಿಂತಿಸುವ ಪೋಸ್ಟ್‌- ಸೆಕ್ಯುಲರ್‌ ವಾದಕ್ಕೆ ನಿಮ್ಮ ಅಧ್ಯಯನ ನೀಡುವ ಕೊಡುಗೆಗಳು ಏನೇನೆಲ್ಲಾ?

ನನ್ನ ಅಧ್ಯಯನದ ದೃಷ್ಟಿಯಲ್ಲಿ ಈ ಪ್ರಶ್ನೆಗೆ ಬಹಳ ಮಹತ್ವವಿದೆ. ಭಾರತ ಯಾ ದಕ್ಷಿಣೇಷ್ಯಾದಲ್ಲಿ ಯುರೋಪಿಗಿಂತ ಭಿನ್ನವಾದ ವಾತಾವರಣ ಇದೆ ಎಂದು ಹೇಳುವ ಬದಲು ಜ್ಞಾನಪರ್ವದ (ಎನ್ಲೈಟೆನ್ಮೆಂಟ್) ಯುಗದಲ್ಲಿ ಚಾಲ್ತಿಯಲ್ಲಿದ್ದ ವರ್ಗಗಳಿಗೆ ಮರಳುವ ಪ್ರಯತ್ನವನ್ನು ನಾನು ಮಾಡಿದ್ದೇನೆ. ಇದಕ್ಕೆ ಸಂಬಂಧಪಟ್ಟಂತೆ ಹಲವಾರು ಅಧ್ಯಯನಗಳು ಈಗ್ಗೆ ಹೊರಬರುತ್ತಿವೆ. ಜೈಸನ್ ಜೋಸೆಫ್ ಬರೆದಿರುವ ‘The Myth of Disenchantment: Magic, Modernity, and the Birth of the Human Sciences’ ಅದಕ್ಕೊಂದು ಉದಾಹರಣೆ. ಈ ಗ್ರಂಥದಲ್ಲಿ ವಿಜ್ಞಾನದ ಮತ್ತು disenchantment ನ ಹರಿಕಾರರೆಂದು ಹೇಳಲಾಗುವ ಮಾರ್ಕ್ಸ್ ವೆಬರ್ ಮತ್ತು ಮೇರಿ ಕ್ಯೂರಿ ಕೂಡಾ disenchanted ಆಗಿರಲಿಲ್ಲ ಎನ್ನುವ ವಾದವನ್ನು ಮುಂದಿಡಲಾಗಿದೆ. ಹಲವು ತೆರನಾದ ಆಧ್ಯಾತ್ಮಿಕ ಮಾರ್ಗಗಳನ್ನು ಅವರು ಕೂಡಾ ಅವಲಂಬಿಸಿದ್ದರು. ಅಂದರೆ, ಧರ್ಮ ಮತ್ತು ವಿಜ್ಞಾನದ ನಡುವಿನ ಸಂಪೂರ್ಣ ವಿಚ್ಛೇದನ ಎನ್ನುವುದು ಯುರೋಪಿಗೆ ಸಂಬಂಧಪಟ್ಟಂತೆಯೂ ಕೇವಲ ಒಂದು ಮಿಥ್ ಅಷ್ಟೇ. ಭಾರತದಲ್ಲಿ ಹೇಗೂ ವ್ಯತ್ಯಾಸವಿಲ್ಲ. ಪೋಸ್ಟ್ ಸೆಕ್ಯುಲರ್ ಚರ್ಚೆಗಳು ಇಂತಹ ಅವಸ್ಥೆಗಳ ಬಗ್ಗೆ ಸಂಶೋಧನೆ ಕೈಗೊಳ್ಳಲು ಬಲು ಉಪಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಜ್ಞಾನ ಮತ್ತು ಧರ್ಮದ ನಡುವೆ ಭಾರತದಲ್ಲಿ ಕಂಡುಬರುತ್ತಿರುವ ದೈನಂದಿನ ಸಂಬಂಧಗಳ ಬಗ್ಗೆ ಕಲಿಯಲು ರಿಡಕ್ಷನಿಸ್ಟ್ ಸಿದ್ಧಾಂತಗಳಾಚೆಗೆ ಹೋಗಲೇಬೇಕಾಗುತ್ತದೆ. ‘Holy Science: The Biopolitics of Hindu Nationalism’ ಎಂಬ ಬಾನು ಸುಬ್ರಹ್ಮಣ್ಯ ರವರು ಬರೆದಿರುವ ಪುಸ್ತಕ ಇದಕ್ಕೊಂದು ನಿದರ್ಶನ.

ಆದಾಗ್ಯೂ ಐತಿಹಾಸಿಕವಾದ ಈ ಕೊಡು-ಕೊಳೆಗಳ ವೃತ್ತಾಂತಗಳನ್ನು ಒಪ್ಪುವುದರೊಂದಿಗೆ ಅದನ್ನು ಹೆಚ್ಚು ರೊಮಾಂಟಿಸೈಸ್ ಮಾಡದಿರುವತ್ತ ನಾವು ಗಮನಿಸಬೇಕಿದೆ. ಸಾಂಸ್ಕೃತಿಕ ರಾಜಕಾರಣಕ್ಕೋಸ್ಕರ ವಿಜ್ಞಾನವನ್ನು ಬಳಸುವ ಅಪಾಯ ಆರಂಭವಾಗುವುದು ಅಲ್ಲಿಂದಲೇ. ಒಬ್ಬ ಮಾನವಶಾಸ್ತ್ರಜ್ಞ (anthropologist) ಎಂಬ ನೆಲೆಗಟ್ಟಿನಲ್ಲಿ ಈ ಎರಡೂ ಆಯಾಮಗಳನ್ನು ನಾವು ಪರಿಗಣಿಸಬೇಕಿದೆ. ಪೋಸ್ಟ್- ಸೆಕ್ಯುಲರ್ ಒಂದಲ್ಲ ಒಂದು ರೀತಿಯಲ್ಲಿ ವಿಜ್ಞಾನದ ಸ್ವಾಧೀನಪಡಿಸುವಿಕೆ ಆಗಿ ಬದಲಾಗುವ ಸಂಭಾವ್ಯತೆ ಇದೆ. ಆದುದರಿಂದಲೇ ಇಂತಹ ಒಂದು ಅಧ್ಯಯನ ಒಂದು ಮಾನವಶಾಸ್ತ್ರಜ್ಞ ಯಾ ಆಂತ್ರೋಪಾಲಜಿಸ್ಟ್ ನಿಂದ ಮಾತ್ರ ಸಾಧ್ಯ ಎನ್ನುವುದು ನನ್ನ ವಾದ. ಒಂದು ತರದ ನಾನ್- ರಿಲೀಜಿಯಸ್ ಪಾತಳಿಯನ್ನು ಆಯ್ದುಕೊಳ್ಳುವ ಮೂಲಕ ನಾನು ಕೂಡಾ ಪೋಸ್ಟ್ – ಸೆಕ್ಯುಲರ್ ವಿಧಾನವನ್ನು ಸ್ವೀಕರಿಸಿದ್ದೇನೆ ಎಂದೂ ಹೇಳಬಹುದು. ಅದು ಸಾಧ್ಯವಾಗುವಂತಹದ್ದೆ.

ಭಾರತದಲ್ಲಿ ವೈಜ್ಞಾನಿಕ ಸಂಶೋಧನೆಗಳನ್ನು ಪ್ರಚುರಪಡಿಸುವಲ್ಲಿ ಜವಾಹರಲಾಲ್ ನೆಹರೂ ನೀಡಿದ ಕೊಡುಗೆಗಳ ಬಗ್ಗೆ ನೀವು ಪರಾಮರ್ಶಿಸಿದ್ದೀರಿ. ಸಾಂಸ್ಕೃತಿಕ ರಾಜಕಾರಣದ ವಿವಿಧ ಗುಂಪುಗಳು ವಿಜ್ಞಾನವನ್ನು ಸ್ವಾಧೀನಪಡಿಸುತ್ತಿರುವುದನ್ನು ಪ್ರಸ್ತುತ ನಾವು ನೋಡುತ್ತಿದ್ದೇವೆ. ನಿಮ್ಮ ನಿಲುವೇನು?

ವಿಜ್ಞಾನದ ಬಗೆಗಿನ ನೆಹರೂರವರ ಗ್ರಹಿಕೆಯನ್ನು ಅದರ ಐತಿಹಾಸಿಕ ಸಂದರ್ಭದಲ್ಲಿಟ್ಟುಕೊಂಡು ನೋಡಬೇಕಿದೆ. ಅವರ ಪ್ರಕಾರ, ವಿಜ್ಞಾನ ಎಂದರೆ ಅಭಿವೃದ್ಧಿ. ಅವರ ಕಾಲದಲ್ಲಿ ಅಭಿವೃದ್ಧಿ ಅತ್ಯಂತ ನಿರ್ಣಾಯಕವಾಗಿತ್ತು. ಸಂಪೂರ್ಣವಾಗಿ ಪಾಶ್ಚಾತ್ಯ ಶಿಕ್ಷಣವನ್ನು ಪಡೆದಿದ್ದ ನೆಹರೂ ವಿಜ್ಞಾನ ಮತ್ತು ವೈಜ್ಞಾನಿಕ ವಿಧಾನವನ್ನು ಸಾರ್ವತ್ರಿಕ ವರ್ಗವಾಗಿ ಮತ್ತು ವಿಮರ್ಶನಾತೀತವಾಗಿ ಕಂಡುಕೊಂಡಿದ್ದರು. ಉದಾಹರಣೆಗೆ, ಆಯುರ್ವೇದ ಮತ್ತು ಯುನಾನಿ ಪರಂಪರೆಗಳಿಗೆ ರಾಷ್ಟ್ರದ ಪ್ರೋತ್ಸಾಹ ದೊರಕಬೇಕಾದರೆ ಆಧುನಿಕ ವಿಜ್ಞಾನದ ವಿಧಾನಗಳನ್ನು ಬಳಸಬೇಕು ಎಂದು ನೆಹರೂ ಭಾವಿಸಿದ್ದರು. ಆದರೆ ನೆಹರೂರವರ ನಿಲುವು ಅಂದಿನಂತೆ ಇಂದಿಗೂ ಒಂದು ಹಂತದವರೆಗೆ ಪ್ರಸ್ತುತವೇ ಎಂದು ಮೀರಾನಂದರಂತಹ ವಿದ್ವಾಂಸರು ವಾದಿಸಿದ್ದಾರೆ. ಇಂದಿನ ರಾಜಕೀಯ ಸನ್ನಿವೇಶದಲ್ಲಿ ವಿಜ್ಞಾನ ಒಂದು ಅಸ್ತ್ರವಾಗಿ ಮಾರ್ಪಡುತ್ತಿರುವುದನ್ನು ಅರ್ಥೈಸಲು ಇದು ಅಗತ್ಯ ಎನ್ನುವುದು ಅವರ ಅಭಿಮತ. ಇತ್ತೀಚೆಗೆ ಸಾಂಸ್ಕೃತಿಕ ರಾಷ್ಟ್ರೀಯತೆಯ ಗುಂಪುಗಳು ವಿಜ್ಞಾನವನ್ನು ವಿವಿಧ ರೀತಿಯಲ್ಲಿ ಸ್ವಾಧೀನಪಡಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನೆಹರೂರವರಿಗೆ ವಿಜ್ಞಾನ ‘ಅಭಿವೃದ್ಧಿ’ಯ ಪರಿಕರವಾಗಿತ್ತು. ಅದೇ ವೇಳೆ, ಸಾಂಸ್ಕೃತಿಕ ರಾಷ್ಟ್ರೀಯತೆಯ ಗುಂಪುಗಳಿಗೆ ವಿಜ್ಞಾನ ತಮ್ಮ ಭವ್ಯ ಭೂತಕಾಲವನ್ನು ಕೊಂಡಾಡಲು ಬಳಸಬಹುದಾದ ಉಪಕರಣ. 2014ರಲ್ಲಿ ಸಂಸ್ಕೃತ ಭಾಷೆಗೆ ಇಂಡಿಯನ್ ಸಯನ್ಸ್ ಕಾಂಗ್ರೆಸ್ ನಲ್ಲಿ ವಿಶೇಷ ಸ್ಥಾನಮಾನ ದೊರಕಿತು. ಸಯನ್ಸ್ ಕಾಂಗ್ರೆಸ್ ನೆಹರೂರವರ ಕನಸಿನ ಯೋಜನೆಗಳಲ್ಲೊಂದಾಗಿತ್ತು ಎನ್ನುವುದನ್ನು ನೆನಪಿಸಬೇಕು. ಇದರ ಸಾಂಸ್ಕೃತಿಕ ಹಿನ್ನೆಲೆ ಬಹಳ ಸ್ಪಷ್ಟವಿದ್ದು ಮೀರಾನಂದ ಹಾಗೂ ಬಾನು ಸುಬ್ರಹ್ಮಣ್ಯಂ ಈ ಬಗ್ಗೆ ವಿಶದವಾಗಿ ಚರ್ಚಿಸಿದ್ದಾರೆ.

ಜರ್ಮನ್ ಚಿಂತಕರಾದ ಕೊಕು ವೋನ್ ಸ್ಟಕ್ರಾಡ್ ‘ಸಯಂಟಿಫಿಕೇಶನ್ ಆಫ್ ರಿಲೀಜನ್’ ಎನ್ನುವ ಪ್ರಕ್ರಿಯೆಯ ಬಗ್ಗೆ ಚರ್ಚಿಸಿದ್ದಾರೆ. ಧರ್ಮ ವಿಜ್ಞಾನಕ್ಕಿಂತ ವಿಭಿನ್ನ ಎಂದು ಹೇಳುವ ಬದಲು ಧರ್ಮ ಹೆಚ್ಚು ವೈಜ್ಞಾನಿಕ ಎಂದು ವಾದಿಸುವ ಟ್ರೆಂಡ್ ಇದಾಗಿದ್ದು ಅಸ್ಮಿತೆಯ ಬಗೆಗಿನ ಸುಪೀರಿಯರ್ ಭಾವವನ್ನು ಇದು ನೀಡುತ್ತದೆ. ಬಹುತೇಕ ಬಲಪಂಥೀಯ ರಾಷ್ಟ್ರಗಳಲ್ಲಿ ನಮಗಿದನ್ನು ಕಾಣಲು ಸಾಧ್ಯವಿದೆ. ಬಾನು ಸುಬ್ರಹ್ಮಣ್ಯಂ ಈ ಸ್ವಾಧೀನಪಡಿಸುವಿಕೆಯ ಭಾರತೀಯ ಚರಿತ್ರೆಯನ್ನು ಸವಿಸ್ತಾರವಾಗಿ ಪ್ರತಿಪಾದಿಸಿದ್ದಾರೆ. ಇದರದ್ದೇ ಸ್ವಲ್ಪ ವಿಭಿನ್ನವಾದ ವಸಾಹತುಕಾಲದ ಹಿನ್ನೆಲೆಯ ಕುರಿತು ಗ್ಯಾನ್ ಪ್ರಕಾಶ್ ರಂತಹ ವಿದ್ವಾಂಸರು ವಿವರಿಸಿದ್ದಾರೆ. ಅಂದು ನಮ್ಮಲ್ಲೂ ವಿಜ್ಞಾನ ಇತ್ತು ಎಂದು ಶ್ರುತಪಡಿಸುವ ಉದ್ದೇಶ ಅದಕ್ಕಿತ್ತಾದರೂ ಈಗ ತಮ್ಮ ಸಾಂಸ್ಕೃತಿಕ ರಾಷ್ಟ್ರೀಯತೆಯ ಅಜೆಂಡಾಗಳನ್ನು ಸಂರಕ್ಷಿಸುವುದಷ್ಟೇ ಅದರ ಏಕಮಾತ್ರ ಗುರಿ.

ನೀವು ಹೇಳಿರುವಂತೆ, ಧರ್ಮವನ್ನು ತರ್ಕಬದ್ಧಗೊಳಿಸುವ ಮೂಲಕ ‘ವೈಜ್ಞಾನಿಕ’ ಗೊಳಿಸಲಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಶಾಖಾಹಾರ ಉತ್ತಮ ಹಾಗೂ ತರ್ಕಬದ್ಧ ಆಹಾರಕ್ರಮ ಎಂದು ಸಮರ್ಥಿಸಲು ತಾರ್ಕಿಕ ವಾದಗಳನ್ನು ಮಂಡಿಸುತ್ತಿರುವ ವಿಜ್ಞಾನಿಗಳ ಕುರಿತು ನಿಮ್ಮ ಕೃತಿಯಲ್ಲಿ ಬರೆದಿದ್ದೀರಿ. ಅದಾಗ್ಯೂ ತಾರ್ಕಿಕ ವಿವರಣೆ ನೀಡಲಾಗದ ಕೆಲವು ಆಯಾಮಗಳು ಧರ್ಮದಲ್ಲಿ ಸಹಜವಾಗಿಯೇ ಇರುತ್ತದೆ. ತಾರ್ಕಿಕ- ಅತಾರ್ಕಿಕತೆಯ ಈ ದ್ವಂದ್ವಗಳೊಂದಿಗೆ ವಿಜ್ಞಾನಿಗಳು ಹೇಗೆ ಅನುಸಂಧಾನ ಮಾಡಿದ್ದಾರೆ?

ಹೌದು, ಶಾಖಾಹಾರವನ್ನು ವೈಜ್ಞಾನಿಕ ಜೀವನಶೈಲಿಯಾಗಿ ಮಂಡಿಸಲಾಗುತ್ತಿದ್ದು ಆ ಮೂಲಕ ಅದಕ್ಕೊಂದು ನ್ಯಾಯಸಮ್ಮತಿ ದೊರಕಿದೆ. ಆದುದರಿಂದಲೇ ಭಾರತದ ಬಹುತೇಕ ವೈಜ್ಞಾನಿಕ ಹಾಗೂ ತಾಂತ್ರಿಕ ಸಂಸ್ಥೆಗಳು ತಮ್ಮ ಭೋಜನಾಲಯಗಳಲ್ಲಿ ಮತ್ತು ಅತಿಥಿ ಗೃಹಗಳಲ್ಲಿ ಮಾಂಸಹಾರ ಬಡಿಸುತ್ತಿಲ್ಲ.

ಆದರೆ ನಂಬಿಕೆ ಹಾಗೂ ಆಚಾರಗಳ ವಿಷಯಕ್ಕೆ ಬಂದರೆ ತಾರ್ಕಿಕ- ಅತಾರ್ಕಿಕತೆಯ ನಡುವೆ ಪ್ರಬಲವಾದ ಸರಹದ್ದುಗಳು ವಿಜ್ಞಾನಿಗಳ ಆಚಾರ- ವಿಚಾರಗಳಲ್ಲಿ ಕಂಡುಬರುತ್ತಿಲ್ಲ. ವಿವಿಧ ಗುರುಗಳ ಭಕ್ತರಾಗಿರುವ ವಿಜ್ಞಾನಿಗಳ ಬಗ್ಗೆ ನನ್ನ ಪುಸ್ತಕದಲ್ಲಿ ಬರೆದಿದ್ದೇನೆ. ಒಂದು ವೈಯುಕ್ತಿಕ ಆಯ್ಕೆ ಎಂಬ ನೆಲೆಯಲ್ಲಿ ಇದು ಸರಿಯಿದೆ. ಆದರೆ ಇಂತಹ ನಿಲುವುಗಳು ಸಾರ್ವಜನಿಕ ಸಂಸ್ಥೆಯೊಂದರ ದೈನಂದಿನ ಜೀವನದ ಮೇಲೆ ಪ್ರಭಾವ ಬೀರುತ್ತಿರುವುದು ಸಮಸ್ಯೆ.

ಧರ್ಮದ ಆಚರಣೆಗಳನ್ನು ಪಾಲಿಸದ ಆದರೆ ಧಾರ್ಮಿಕತೆ ಮತ್ತು ನೈತಿಕತೆಯನ್ನು ಕಲಿಸುವಲ್ಲಿ ಧರ್ಮಕ್ಕಿರುವ ಪಾತ್ರವನ್ನು ಅಂಗೀಕರಿಸುವ ವಿಜ್ಞಾನಿಗಳ ಬಗ್ಗೆ ನೀವು ವಿವರಿಸಿದ್ದೀರಿ. ಇಲ್ಲಿ ಧರ್ಮ ಒಂದು ಕಾರ್ಯಕೇಂದ್ರಿತ ವರ್ಗವಾಗಿ (functional category) ಕಾಣುವಿರಾ? ಅಥವಾ ಅಸದ್‌ ರಂತಹ ವಿದ್ವಾಂಸರು ವಿವರಿಸಿದ ರೀತಿಯ ವ್ಯಾವಹಾರಿಕ ಪರಂಪರೆ (discursive tradition)ಯಾಗಿ ಕಾಣುವಿರಾ?

ವಿಜ್ಞಾನಿಗಳು ತಮ್ಮ ದೈನಂದಿನ ಜೀವನದಲ್ಲಿ ಧರ್ಮವನ್ನು ಒಂದು ಸಂಸ್ಕೃತಿ (culture) ಎಂಬ ರೀತಿಯಲ್ಲಿ ಕಾಣುತ್ತಾರೆ ಎನ್ನುವುದು ಸೋಜಿಗ. ತಮ್ಮ ಧಾರ್ಮಿಕ ನಂಬಿಕೆಗಳನ್ನು ಅವರು ಸಂಸ್ಕೃತೀಕರಣ (ಕಲ್ಚರಲೈಸ್) ಗೊಳಿಸುತ್ತಿದ್ದಾರೆ. ಧರ್ಮ ಇಲ್ಲಿ ಸಾಂಸ್ಕೃತಿಕ ವರ್ಗವಾಗಿ (cultural category) ಕಾರ್ಯನಿರ್ವಹಿಸುತ್ತಿದ್ದು ಜಾತಿ ಆಧಾರಿತ ಗ್ರಹಿಕೆಯ ಪ್ರಬಲ ಹಿನ್ನೆಲೆ ಅದಕ್ಕಿದೆ. ಭಾರತದ ವೈಜ್ಞಾನಿಕ ಸಂಸ್ಕೃತಿ ವಿಜ್ಞಾನಿಗಳ ಸಂಸ್ಕೃತಿಗಿಂತ ಭಿನ್ನವಾಗಿಲ್ಲ. ಪ್ರಯೋಗಾಲಯ ಮುಂತಾದ ವೈಜ್ಞಾನಿಕ ಸಂಸ್ಥೆಗಳ ಮೇಲೂ ಈ ಧಾರ್ಮಿಕ ಛಾಯೆಯ ಪ್ರಭಾವ ಇದೆ. ಇದನ್ನು ಕಾರ್ಯಕೇಂದ್ರಿತ ಯಾ ಫಂಕ್ಷನಲ್ ನೆಲೆಗಟ್ಟಿನಲ್ಲಿ ಅರ್ಥೈಸಲು ಸಾಧ್ಯವಿದೆಯೇ ಎಂದು ಗೊತ್ತಿಲ್ಲ. ಆದರೆ ಇದಕ್ಕೆ ರಾಜತಾಂತ್ರಿಕ ಸ್ವಭಾವ ಇರುವುದು ಮಾತ್ರ ನಿಜ. ಮದ್ರಾಸಿನ ಸಣ್ಣ ಕೈಗಾರಿಕಾ ಉದ್ಯಮಿಗಳ ಬಗ್ಗೆ ಅಧ್ಯಯನ ನಡೆಸಿರುವ ಮಾನವಶಾಸ್ತ್ರಜ್ಞ ಮಿಲ್ಟನ್ ಸಿಂಗರ್ ಅಸ್ಮಿತೆಯ ‘ವಿಭಾಗೀಕರಣ’ ನಡೆಯುತ್ತಿರುವ ಬಗ್ಗೆ ಮಾತಾಡಿದ್ದಾರೆ. ಮನೆಯಲ್ಲೊಂದು ಅಸ್ಮಿತೆ ಕೆಲಸದ ಜಾಗದಲ್ಲಿ ಬೇರೊಂದು ಅಸ್ಮಿತೆಯನ್ನು ಆಯ್ದುಕೊಳ್ಳುವ ಸ್ವಭಾವವನ್ನು ವಿಭಾಗೀಕರಣ ಯಾ ಕಂಪಾರ್ಟ್ಮೆಂಟಲೈಝೇಶನ್ ಎನ್ನಲಾಗಿದೆ. ಆದರೆ ನಾನು ನಡೆಸಿದ ಅಧ್ಯಯನದ ಪ್ರಕಾರ ಇದು ಸರಿಯೆನಿಸುತ್ತಿಲ್ಲ. ಧರ್ಮ ಮತ್ತು ತಮ್ಮ ಸ್ವತ್ವದ ನಡುವೆ ಬೇರ್ಪಡಿಸಲು ವಿಜ್ಞಾನಿಗಳಿಗೆ ಒಮ್ಮೆಯೂ ಸಾಧ್ಯವಿಲ್ಲ. ಪ್ರಯೋಗಾಲಯಗಳಲ್ಲಿ ಮತ್ತು ವೈಜ್ಞಾನಿಕ ಸಂಸ್ಥೆಗಳ ಒಳಗಡೆ ಧಾರ್ಮಿಕ (ಅಂದರೆ ಹಿಂದೂ ಧರ್ಮದ ದೇವರುಗಳ) ಚಿಹ್ನೆಗಳನ್ನು ಮತ್ತು ಚಿತ್ರಗಳನ್ನು ನಮಗೆ ಕಾಣಲು ಸಾಧ್ಯವಿದೆ. ಅಲ್ಲಿ ಇದೊಂದು ವೈಯಕ್ತಿಕ ಆಯ್ಕೆಗಳಾಗಿ ಮೂಡಿ ಬಂದಿಲ್ಲ. ಬದಲಾಗಿ ಸ್ಥಳದ ಚಹರೆಯಾಗಿಯೇ ಅದು ಮಾರ್ಪಟ್ಟಿದೆ.

ಅಂದರೆ, ಧರ್ಮ ಇಲ್ಲಿ ರಾಜತಾಂತ್ರಿಕ ಸ್ವಭಾವವನ್ನು ಪಡೆದಿದ್ದು ವಿಜ್ಞಾನಿಗಳ ವ್ಯಕ್ತಿನಿಷ್ಠ ನಡವಳಿಕೆಗಳು ಹೊಸತಾದ ಸಾರ್ವಜನಿಕ ಅಸ್ಮಿತೆಯನ್ನು ಸೃಜಿಸುವತ್ತ ಹೆಜ್ಜೆಯಿಟ್ಟಿದೆ ಎಂದು ನೀವು ಅಭಿಪ್ರಾಯಿಸುತ್ತಿದ್ದೀರಾ?

ಹೌದು, ಇಲ್ಲಿ ಖಾಸಗಿ-ಸಾರ್ವಜನಿಕ ಎನ್ನುವ ವಿಭಜನೆಗಳೇ ಅಪ್ರತ್ಯಕ್ಷವಾಗಿವೆ.

ತಲಾಲ್‌ ಅಸದ್‌ರವರು ಸಾರ್ವಜನಿಕ-ಖಾಸಗಿ ಎಂಬೀ ಕೆಟಗರಿಗಳನ್ನು ನಿಗದಿಪಡಿಸುವ ಕೆಲಸ ಮಾಡುವುದು ಸೆಕ್ಯುಲರ್‌ ಆಗಿರುತ್ತದೆ ಎಂದು ಹೇಳಿದ್ದಾರೆ. ಆದರೆ ಇಲ್ಲಿ ಅಂತಹ ವಿಭಜನೆಗಳು ಕೂಡಾ ಅಪ್ರತ್ಯಕ್ಷವಾಗುತ್ತಿರುವುದನ್ನು ನೋಡುತ್ತಿದ್ದೇವೆ. ವಿಜ್ಞಾನಿಗಳು ಅಂತಹ ವಿಭಜನೆಯನ್ನು ಒಪ್ಪುವುದಿಲ್ಲ ಎಂದು ಹೇಳುತ್ತಿದ್ದೀರಾ?

ಖಂಡಿತವಾಗಿಯೂ ಹೌದು. ಅಂತಹದ್ದೊಂದು ವಿಭಜನೆಯ ಅಗತ್ಯವೇ ಇಲ್ಲ ಎನ್ನುವುದು ಅವರ ಅಂಬೋಣ. ಧರ್ಮ ಮತ್ತು ವಿಜ್ಞಾನದ ನಡುವಣ ಸಂಬಂಧಗಳ ಬಗ್ಗೆ ಕೇಳಲಾಗುವ ಪ್ರಶ್ನೆಗಳಿಗೆ ಅಂತಹ ಪ್ರಶ್ನೆಗಳೇ ಅಪ್ರಸಕ್ತ ಎನ್ನುವ ರೀತಿಯಲ್ಲಿ ಅವರು ಪ್ರತಿಕ್ರಿಯಿಸುತ್ತಾರೆ. ಇಲ್ಲಿ ಇರುವುದು ಕೇವಲ ಸಂಸ್ಕೃತಿ ಮಾತ್ರ, ಆ ಸಂಸ್ಕೃತಿಯಲ್ಲಿ ಯಾರಿಗೂ ಭಾಗವಹಿಸಬಹುದು. ಈ ಉತ್ತರದ ಮೂಲಕ ಅವರು ಸಂಸ್ಕೃತಿ ಎಂಬ ಸಾರ್ವತ್ರಿಕ ವರ್ಗವನ್ನು ಸೃಜಿಸುತ್ತಿದ್ದಾರೆ. ಪ್ರಯೋಗಾಲಯಗಳಂತಹ ವಾತಾವರಣದಲ್ಲಿ ಈ ʼಸಂಸ್ಕೃತಿʼ ಪ್ರಾಬಲ್ಯಕ್ಕೆ ಬರುವುದರೊಂದಿಗೆ ಅದರ ಅನುಯಾಯಿಗಳಲ್ಲದವರು ಕೂಡಾ ತಮ್ಮ ಅಸ್ಮಿತೆಯನ್ನು ಮರೆತು ಅದರಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಅದಾಗ್ಯೂ, ನನ್ನ ಅಧ್ಯಯನ ಎಥ್ನೋಗ್ರಾಫಿಕ್‌ ವಿಧಾನದಲ್ಲಿ ನಡೆಸಿದ್ದರಿಂದಲೇ ಇದನ್ನು ಜನರಲೈಸ್‌ ಮಾಡುವಂತಿಲ್ಲ ಎನ್ನುವುದನ್ನು ಗಮನಿಸಬೇಕು. ಕೆಲವು ನಿರ್ದಿಷ್ಟ ವಿಭಾಗದ ವಿಜ್ಞಾನಿಗಳ ಈ ಸಾಂಸ್ಕೃತಿಕ ಹೇರಿಕೆಯನ್ನು ವಿಮರ್ಶಿಸುವ ವಿಜ್ಞಾನಿಗಳೂ ಇದ್ದಾರೆನ್ನುವುದು ನಿಜ.

ಕ್ರಿಯಾತ್ಮಕವಾಗಿ ಕಾರ್ಯಾಚರಿಸುತ್ತಿರುವ ಕೆಲವು ನಾಸ್ತಿಕ ಚಳುವಳಿಗಳು ಭಾರತದಲ್ಲಿವೆ. ಕೇರಳ ಮೂಲದ ನಾಸ್ತಿಕ ಸಂಘಟನೆಯಾದ ‘ಎಸ್ಸೆನ್ಸ್‌ ಗ್ಲೋಬಲ್‌’ಗೆ ಬಲಪಂಥೀಯ ಗುಂಪುಗಳೊಂದಿಗೆ ಸಂಬಂಧವಿದೆ ಎಂದು ಇನ್ನೊಂದು ನಾಸ್ತಿಕ ಸಂಘಟನೆ ಆರೋಪ ಹೊರಿಸಿತ್ತು. ಇಂತಹ ನವನಾಸ್ತಿಕ ಚಳುವಳಿಗಳ ವಿಚಾರಧಾರೆಯಲ್ಲಿ ಕಂಡುಬರುವ ಇಸ್ಲಾಮೊಫೋಬಿಯಾ ಮತ್ತು ಪ್ರಬಲ ಸಾಂಸ್ಕೃತಿಕ ಶಕ್ತಿಗಳೊಂದಿಗೆ ಮೈತ್ರಿಯಾಗುವ ಬಯಕೆ ಇಂತಹ ಆರೋಪಗಳು ಎದ್ದು ಬರಲು ಕಾರಣ. ನಿಮ್ಮ ಪ್ರಕಾರ ಸಂಸ್ಕೃತಿ, ನಾಸ್ತಿಕತೆ ಮುಂತಾದವುಗಳೊಂದಿಗೆ ವಿಜ್ಞಾನ ಯಾವ ರೀತಿಯ ಅನುಸಂಧಾನವನ್ನು ಹೊಂದಿದೆ?

ಖ್ಯಾತ ವಿಜ್ಞಾನದ ತತ್ವಜ್ಞಾನಿ ಮಿಕಾಯಿಲ್‌ ರೂಸ್‌ ಮತ್ತು ಬ್ರಿಟಿಷ್‌ ಸಮಾಜಶಾಸ್ತ್ರಜ್ಞ ಸ್ಟೀಫನ್‌ ಬುಲ್ಲಿವಂಟ್‌ ಸಂಪಾದಿಸಿರುವ ‘Cambridge History of Atheism (2021)’ ಗ್ರಂಥದಲ್ಲಿ ನಾನೊಂದು ಅಧ್ಯಾಯವನ್ನು ಬರೆದಿದ್ದೇನೆ. ನಾಸ್ತಿಕತೆಯನ್ನು ಸಾರ್ವತ್ರಿಕ ಹಾಗೂ ಏಕರೂಪದ ವರ್ಗವಾಗಿ ಕಾಣುವ ಆಶಯವನ್ನು ಆ ಗ್ರಂಥ ಒಡೆದು ಹಾಕುತ್ತದೆ. ವಿವಿಧ ಸಂಸ್ಕೃತಿಗಳಲ್ಲಿ ಬೇರೆ ಬೇರೆ ತರದ ನಾಸ್ತಿಕ ಧಾರೆಗಳು ಅಸ್ತಿತ್ವದಲ್ಲಿತ್ತೆಂದೂ ಕೆಲವು ನಾಸ್ತಿಕ ಧಾರೆಗಳಿಗೆ ದೇವಾಸ್ತಿತ್ವ ಪರಿಕಲ್ಪನೆಯೊಂದಿಗೆ ಯಾವುದೇ ಸಂಬಂಧ ಇರಲಿಲ್ಲವೆಂದೂ ವಿವಿಧ ಲೇಖಕರು ಅದರಲ್ಲಿ ವಾದಿಸಿದ್ದಾರೆ. ಆದುದರಿಂದಲೇ ನಾಸ್ತಿಕತೆಯನ್ನು ದೇವ ನಿರಾಕರಣೆಯಾಗಿ ಮಾತ್ರ ಬಿಂಬಿಸುವುದು ತರವಲ್ಲ. ಯುರೋಪಿನಲ್ಲಿ ರಿಚಾರ್ಡ್‌ ಡಾಕಿನ್ಸ್‌ನಂತಹ ವ್ಯಕ್ತಿಗಳು ಪ್ರತಿಪಾದಿಸುತ್ತಿರುವ ನಾಸ್ತಿಕತೆಯಲ್ಲಿ ಒಳಗೊಂಡಿರುವ ಇಸ್ಲಾಮೋಫೋಬಿಯಾ ಕುರಿತು ಇತ್ತೀಚೆಗೆ ಹಲವಾರು ಅಧ್ಯಯನಗಳು ಹೊರಬಂದಿವೆ.

ನಮ್ಮ ಜನಪ್ರಿಯ ಗ್ರಹಿಕೆಗಳಲ್ಲಿ ಕಂಡುಬರುವ ನಾಸ್ತಿಕತೆ ಸಂಪೂರ್ಣವಾಗಿ ಕ್ರೈಸ್ತೀಕರಣಗೊಂಡಿರುವಂತಹದ್ದು. ವೈವಿಧ್ಯತೆಯನ್ನು ತೊಡೆದು ಹಾಕಲು ಯುರೋಪಿಯನ್‌ ನಾಸ್ತಿಕತೆ ತೋರ್ಪಡಿಸುತ್ತಿರುವ ತಹತಹಿಕೆ ಅದರ ಕ್ರೈಸ್ತ ಬೇರುಗಳನ್ನು ಸೂಚಿಸುತ್ತದೆ. ಜಾನ್‌ ಗ್ರೇ ಬರೆದಿರುವ ‘Seven Types of Atheism’ (2018) ಕೃತಿ ವಿವಿಧ ರೀತಿಯ ನಾಸ್ತಿಕ ವಿಚಾರಧಾರೆಗಳನ್ನು ಪರಿಶೋಧಿಸುತ್ತಿದ್ದು ನಾಸ್ತಿಕತೆಯ ಬಗೆಗಿನ ಗೊಡ್ಡು ಸಿದ್ಧಾಂತಗಳ ಮಿತಿಗಳನ್ನು ವಿವರಿಸಿದೆ. ಗೊಡ್ಡು ನಾಸ್ತಿಕತೆ ಮಾನವಶಾಸ್ತ್ರ ವಿರೋಧಿ ಎನ್ನುವುದು ನನ್ನ ಅಭಿಪ್ರಾಯ. ಧರ್ಮ ಹಾಗೂ ಧಾರ್ಮಿಕ ಬದುಕಿನ ದೈನಂದಿನ ವಾಸ್ತವಗಳಿಗೆ ಇಂತಹ ನಾಸ್ತಿಕತೆ ಸ್ಪಂದಿಸದು. ನೀವು ಹೇಳಿರುವ ಸಂದರ್ಭದಲ್ಲಿ ಇರುವ ಹಾಗೆ ವಿವಿಧ ರೀತಿಯ ಇಸ್ಲಾಮೋಫೋಬಿಕ್‌ ವಿಧಗಳಿಗೆ ಅಂತಹ ನಾಸ್ತಿಕತೆ ದಾರಿ ಮಾಡಿಕೊಡಬಲ್ಲದು.

ಭಾರತೀಯ ವೈಜ್ಞಾನಿಕ ಸಂಸ್ಥೆಗಳಲ್ಲಿ ಕಂಡುಬರುತ್ತಿರುವ ಹಿಂದೂ ಸಂಪ್ರದಾಯ ಮತ್ತು ಆಚಾರಗಳ ಬಗ್ಗೆ ತಾವೇನೆನ್ನುತ್ತೀರಿ?

ಈ ವಿಷಯದಲ್ಲಿ ಆಯುಧ ಪೂಜೆಯನ್ನು ಆಧಾರವಾಗಿಟ್ಟುಕೊಂಡು ನಾನೊಂದು ಲೇಖನವನ್ನು ಬರೆದಿದ್ದೇನೆ. ಇಂತಹ ಸಂಪ್ರದಾಯಗಳನ್ನು ‘ಧಾರ್ಮಿಕ’ ಎಂದು ನೋಡದೆ ‘ಸಾಂಸ್ಕೃತಿಕ’ ವಾಗಿಸುತ್ತಾರೆ ಇಲ್ಲಿನ ವಿಜ್ಞಾನಿಗಳು. ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ಮತ್ತು ಸಾಮಾನ್ಯ ವಿಜ್ಞಾನಿಗಳೂ ಕೂಡಾ ಈ ವಿಷಯದಲ್ಲಿ ಸಮಾನವಾಗಿ ಭಾಗಿಯಾಗುತ್ತಾರೆ. ಸಂಸ್ಥೆಯ ಗೋಡೆಯಲ್ಲಿ ತೂಗುಹಾಕಲಾಗುವ ಚಿತ್ರ ಅವರಿಗೆ ʼಬಹಳ ಸಾಮಾನ್ಯʼ ಎಂದೆನಿಸುತ್ತದೆ. ಈ ಸಂಸ್ಥೆಗಳಲ್ಲಿ ಕಂಡುಬರುವ ದೇವದೇವತೆಗಳ ವಿಗ್ರಹಗಳನ್ನು ಎಷ್ಟರವರೆಗೆ ಸಹಜವೆಂಬಂತೆ ಕಾಣಲಾಗುತ್ತಿದೆ ಎಂದರೆ ಎಲ್ಲರಿಗೂ ಇದನ್ನು ಅರಗಿಸಲು ಸಾಧ್ಯ ಎಂಬ ಭಾವನೆ ಅಲ್ಲಿ ಬಂದು ಬಿಟ್ಟಿದೆ. ಒಂದು ಜಾತ್ಯಾತೀತ ಸಂಸ್ಥೆಯಲ್ಲಿ ಇದಕ್ಕೆ ಅನುವು ನೀಡುವುದು ಸರಿಯಲ್ಲ. ಅದಾಗ್ಯೂ ಇಂತಹ ವೈಜ್ಞಾನಿಕ ಹಾಗೂ ತಾಂತ್ರಿಕ ಸಂಸ್ಥೆಗಳಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿಪರ ಸಂಘಟನೆಗಳು ಈ ಆಚರಣೆಗಳನ್ನು ವಿರೋಧಿಸುತ್ತಾ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ಎತ್ತುತ್ತಿದೆ ಎನ್ನುವುದನ್ನು ಕೂಡಾ ಗಮನಿಸಬೇಕು. ಐಐಟಿಗಳಲ್ಲಿ ಕಾರ್ಯಾಚರಿಸುತ್ತಿರುವ ಅಂಬೇಡ್ಕರ್‌- ಪೆರಿಯಾರ್‌ ಸ್ಟಡಿ ಗ್ರೂಪ್ ಗಳು ಇದಕ್ಕೊಂದು ಉದಾಹರಣೆ.

ಭಾರತದ ವೈಜ್ಞಾನಿಕ ಸಂಸ್ಥೆಗಳಲ್ಲಿ ಆಚರಿಸಲಾಗುವ ಹಬ್ಬಗಳೆಲ್ಲವೂ ಹಿಂದೂ ಧರ್ಮಕ್ಕೆ ಸಂಬಂಧಪಟ್ಟದ್ದು. ಸಂಸ್ಥೆ ಇರುವ ಪ್ರದೇಶಕ್ಕೆ ಅನುಸರಿಸಿ ಹಬ್ಬಗಳು ಬದಲಾಗುತ್ತಿರಬಹುದು. ಉದಾಹರಣೆಗೆ ಬಂಗಾಳದಲ್ಲಿರುವ ಸಂಸ್ಥೆಗಳಲ್ಲಿ ಅಲ್ಲಿನ ಹಿಂದೂ ಹಬ್ಬಗಳು ಬಂಗಾಳಿ ಸಂಸ್ಕೃತಿಯ ಭಾಗವಾಗಿ ಕಾಣಲಾಗುತ್ತದೆ. ಮಿಕ್ಕ ಸಂಸ್ಥೆಗಳ ಗೋಡೆಗಳ ಮೇಲೆ ದೇವದೇವೆತಗಳ ಯಾ ಮೂರ್ತಿಗಳ ಚಿತ್ರ ಇದ್ದೇ ಇರುತ್ತದೆ. ಈ ಕುರಿತು‌ ಇನ್ನಷ್ಟು ಮೈಕ್ರೋ-ಆಂತ್ರೋಪಾಲಜಿಕಲ್ ಅಧ್ಯಯನಗಳು ನಡೆಯಬೇಕಿದೆ. ಒಂದು ವಿಜ್ಞಾನಿಯ ವೈಯಕ್ತಿಕ ಧಾರ್ಮಿಕ ಹಕ್ಕಾಗಿರುವ ಆಚರಣೆಗಳ ಬಗ್ಗೆಯಲ್ಲ‌ ನನ್ನ ಪ್ರಶ್ನೆ. ಜಾತ್ಯಾತೀತ ಸಂಸ್ಥೆಯೊಂದರಲ್ಲಿ ಕೆಲವೇ ಕೆಲವು ಗುಂಪುಗಳ ಯಾ ಸಮುದಾಯಗಳ ಸಾಂಸ್ಕೃತಿಕ ಆಚರಣೆಗಳನ್ನು ಸಹಜಗೊಳಿಸಲಾಗುತ್ತಿರುವುದೇ ಇಲ್ಲಿನ ಸಮಸ್ಯೆ.

ವಿಜ್ಞಾನ ಎನ್ನುವುದು ವಸ್ತುನಿಷ್ಠ ಸ್ವಭಾವವುಳ್ಳ ವರ್ಗವಾಗಿದ್ದು ವೈಜ್ಞಾನಿಕ ಸತ್ಯಗಳನ್ನು ಪ್ರಶ್ನಾತೀತ ಎಂದು ಸಾಮಾನ್ಯವಾಗಿ ಅರ್ಥೈಸಲಾಗುತ್ತದೆ. ಅದರೆ ದೇವರನ್ನು ಕಂಡುಹಿಡಿಯುವ ಅಥವಾ ಅವನ ಅಸ್ತಿತ್ವವನ್ನು ಸಾಬೀತು ಮಾಡುವ ಉದ್ದೇಶವನ್ನು ಧರ್ಮ ಹೊಂದಿಲ್ಲ. ಅದೇನಿದ್ದರೂ ನಂಬಿಕೆಗೆ ಸಂಬಂಧಪಟ್ಟದ್ದು. ತಮ್ಮ ಕರ್ತವ್ಯದಲ್ಲಿ ಧರ್ಮ ಯಾ ವಿಜ್ಞಾನ ಇವುಗಳಲ್ಲಿ ಯಾವುದಾದರೊಂದಕ್ಕೆ ಮಾತ್ರ ಪ್ರಾಧಾನ್ಯತೆ ಕೊಡಬೇಕಾಗಿ ಬರುವ ಸಂದರ್ಭ ವಿಜ್ಞಾನಿಗಳಿಗೆ ಬರುವುದಿಲ್ಲವೇ? ವಿಜ್ಞಾನಿಗಳ ಧಾರ್ಮಿಕ ನಂಬಿಕೆಗಳು ಅವರ ಅಧ್ಯಯನ ಹಾಗೂ ಸಂಶೋಧನೆಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?

ವಿಜ್ಞಾನ ವಸ್ತುನಿಷ್ಠವಾಗಿದ್ದು ವಿಜ್ಞಾನಿಗಳ ನಂಬಿಕೆಗಳು ಅಧ್ಯಯನದ ಫಲಿತಾಂಶಗಳ ಮೇಲೆ ಪರಿಣಾಮ ಬೀರದು ಎಂದು ಐತಿಹಾಸಿಕವಾಗಿ ಒಪ್ಪುತ್ತಾ ಬರಲಾಗಿದೆ (ಇಂತಹ ಅಭಿಪ್ರಾಯಗಳನ್ನು ಪ್ರಶ್ನಿಸುವ ಸಾಕಷ್ಟು ಅಧ್ಯಯನಗಳು ಇಂದು STS ಹಾಗೂ philosophy of science ವಿಭಾಗಗಳಿಂದ ಬಂದದ್ದು ನಮ್ಮ ಬಳಿ ಇದೆ). ವಿಜ್ಞಾನಿಗಳ ಅಧ್ಯಯನಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನೀಡಬೇಕಾದರೆ ಅವರು ತಮ್ಮ ವೈಜ್ಞಾನಿಕ ಕೆಲಸಗಳಲ್ಲಿ ಬೇರಾವುದೇ ಸಂಗತಿಗಳೊಂದಿಗೆ ರಾಜಿಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಉನ್ನತ ಗುಣಮಟ್ಟದ ಸಂಶೋಧನೆಗಳನ್ನು ಮಾಡಿಕೊಂಡು ಜಾಗತಿಕ ಮಟ್ಟದಲ್ಲಿ ಹೆಗ್ಗುರುತನ್ನು ಮೂಡಿಸಲು ಅವರಿಗೆ ಸಾಧ್ಯವಾಗಬೇಕು. ವೈಜ್ಞಾನಿಕ ಸಂಶೋಧನೆಗಳು ಜಾಗತಿಕ ಬಂಡವಾಳ ಜಾಲಗಳ ಪ್ರಮುಖ ಭಾಗವಾಗಿದೆ ಎನ್ನುವುದನ್ನು ಕೂಡಾ ನಾವಿಲ್ಲಿ ನೆನಪಿಸಿಕೊಳ್ಳಬೇಕು.

ತಮ್ಮ ಸಂಶೋಧನೆಗಳಲ್ಲಿ ಯಾವುದೇ ರಾಜಿಗೆ ಸಿದ್ಧವಾಗದೆ ವಿಜ್ಞಾನದಲ್ಲಿ ಧರ್ಮವನ್ನು ಹರಳುಗೊಳಿಸಲು ಇಲ್ಲಿನ ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ‘ಸಂಸ್ಕೃತ ಮತ್ತು ವಿಜ್ಞಾನ’ ಗುಂಪುಗಳನ್ನು ರೂಪಿಸುವಂತಹದ್ದು ಇದಕ್ಕೊಂದು ಉದಾಹರಣೆ. ಅದಾಗ್ಯೂ ಧಾರ್ಮಿಕ ಆಚಾರಗಳು ಅವರ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುತ್ತದೆ. ನಾನು ಒಡನಾಡಿದ ಕೆಲವು ವಿಜ್ಞಾನಿಗಳು ಅಶುಭವೆಂದು ಬಗೆದು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಗಳವಾರದಂದು ಸಮರ್ಪಿಸುತ್ತಿರಲಿಲ್ಲ. ತಮ್ಮ ಪ್ರಯೋಗಾಲಯಗಳನ್ನು ಧಾರ್ಮಿಕ ಚಿಹ್ನೆಗಳಿಂದ ಅಲಂಕರಿಸುತ್ತಿದ್ದರು ಮತ್ತು ವಿಶೇಷ ಸಂದರ್ಭಗಳಲ್ಲಿ ಅವುಗಳಿಂದ ಆಶೀರ್ವಾದ ಪಡೆದುಕೊಳ್ಳುತ್ತಿದ್ದರು.

ಇಂಜಿನಿಯರಿಂಗ್‌ ಭಾರತದಲ್ಲಿ ಗೌರವಾನ್ವಿತ ಹುದ್ದೆಯಾಗಿದ್ದು ಐಐಟಿಗಳು ಈ ಕಾರಣಕ್ಕೆ ಬಹಳ ಮಹತ್ವ ಪಡೆದಿದೆ. ಐಐಟಿಗಳು ಅರ್ಹತೆಯ ಭ್ರಮೆಯಲ್ಲಿ ತೇಲಾಡುವ ಸಂಸ್ಥೆಗಳಾಗಿದ್ದು ಮೆರಿಟೋಕ್ರಸಿಯನ್ನು ಪ್ರೋತ್ಸಾಹಿಸುತ್ತದೆ. ವೈಜ್ಞಾನಿಕ ಸಂಸ್ಥೆಗಳಲ್ಲಿ ಜಾತೀಯತೆ ಯಾವ ರೀತಿ ಕಾರ್ಯಾಚರಿಸುತ್ತಿದೆ?

ಜಾತಿ ಮತ್ತು ವಿಜ್ಞಾನ ಎಂಬ ವಿಷಯವಾಗಿ ನನ್ನ ಗ್ರಂಥದಲ್ಲಿ ಒಂದು ಅಧ್ಯಾಯವೇ ಇದೆ. ಹಿಂದೆಯೂ ಈ ಬಗ್ಗೆ ಬರೆದಿದ್ದೇನೆ. ಮೆರಿಟ್‌ ನೋಡುವುದು ಇಂದು ಸಾಮಾನ್ಯವಾಗಿಬಿಟ್ಟಿದೆ. ವಿದ್ಯಾರ್ಥಿಗಳು ತಮ್ಮ ಮೆರಿಟ್‌ ಬಗ್ಗೆ ಅಭಿಮಾನ ಪಡುತ್ತಾರೆ. ತಮಗೆ ದೊರಕಿದ ಅನುಕೂಲತೆಗಳ ಚರಿತ್ರೆಯ ಕಡೆಗೆ ಗಮನ ಹರಿಸಿದರೆ ಮಾತ್ರವೇ ಅವರಿಗೆ ಮೆರಿಟ್‌ನಲ್ಲಿ ಅಡಗಿರುವ ನಿಜವಾದ ಸಮಸ್ಯೆಯನ್ನು ಅರ್ಥ ಮಾಡಲು ಸಾಧ್ಯ. ಮೆರಿಟ್‌ ಪರಿಕಲ್ಪನೆಯನ್ನು ಇಂದು ಜಾತ್ಯತೀತಗೊಳಿಸಲಾಗಿದ್ದು ‘ಕಲಿಕೋತ್ಸಾಹ’ ಮತ್ತು ‘ಕಠಿಣ ಪರಿಶ್ರಮ’ಗಳೊಂದಿಗೆ ಅದನ್ನು ಸಮೀಕರಿಸಲಾಗಿದೆ. ಮಾನವಶಾಸ್ತ್ರಜ್ಞರು ಮತ್ತು ಸಮಾಜವಿಜ್ಞಾನಿಗಳಾದ ಅಜಂತ ಸುಬ್ರಹ್ಮಣ್ಯನ್ ಮತ್ತು ಸತೀಶ್‌ ದೇಶಪಾಂಡೆ ಮೆರಿಟೋಕ್ರಸಿ ಎಂಬ ಮಿಥ್‌ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ. ವೈಜ್ಞಾನಿಕ ಸಂಸ್ಥೆಗಳು ಮೆರಿಟ್‌ ಬಗ್ಗೆ ಜೋರಾಗಿ ಮಾತಾಡುತ್ತಿದ್ದು ಅದರ ವಿರುದ್ಧ ವಾದಿಸುವುದು ಕಷ್ಟಸಾಧ್ಯ. ‘The Caste of Merit: Engineering Education in India’ ಎಂಬ ತನ್ನ ಗ್ರಂಥದಲ್ಲಿ ಸುಬ್ರಹ್ಮಣ್ಯನ್ ರವರು ಹೇಳಿರುವಂತೆ ವೈಜ್ಞಾನಿಕ ಸಂಸ್ಥೆಗಳ ಇತಿಹಾಸ ಮೆರಿಟೋಕ್ರಸಿಯಲ್ಲಿ ಬೇರೂರಿದೆ.

ಪ್ರಯೋಗಾಲಯದಲ್ಲಿ ಜನಾಂಗಶಾಸ್ತ್ರೀಯ (ಎತ್ನೋಗ್ರಫಿಕಲ್‌) ಅಧ್ಯಯನ ಮಾಡುವ ಪರಿಪಾಠ ಭಾರತದಲ್ಲಿ ಬಹಳ ವಿರಳ. ಬ್ರೂನೋ ಲಾತೋರ್‌ ನಂತಹವರು ವಿದೇಶಗಳಲ್ಲಿ ಈ ರೀತಿಯ ಅಧ್ಯಯನ ನಡೆಸಿದ್ದಾರೆ. ಇಂತಹ ಜನಾಂಗಶಾಸ್ತ್ರೀಯ ಅಧ್ಯಯನಗಳಿಗೆ ಸಿಗಬಹುದಾದ ಭವಿಷ್ಯದ ಸಾಧ್ಯತೆಗಳು ಏನೇನೆಲ್ಲಾ?

ಭಾರತದಲ್ಲಿ ಸಯನ್ಸ್‌ ಆಂಡ್‌ ಟೆಕ್ನಾಲಜಿ ಸ್ಟಡೀಸ್‌ (STS) ಕ್ಷೇತ್ರದ ಅಧ್ಯಯನಗಳು ಬಹಳ ಕಮ್ಮಿ. ಪ್ರಯೋಗಾಲಯಗಳಲ್ಲಿ ಪ್ರವೇಶ ಪಡೆಯುವಲ್ಲಿ ಇರುವ ಹಲವಾರು ತಾಂತ್ರಿಕ ಅಡಚಣೆಗಳು ಪ್ರಸ್ತುತ ಕ್ಷೇತ್ರದಿಂದ ಹೆಚ್ಚು ಅಧ್ಯಯನ ಬರದಿರಲು ಒಂದು ಕಾರಣ. ನನ್ನಂತೆ ಪ್ರಯೋಗಾಲಯ ಕೇಂದ್ರಿತವಾಗಿ ಅಧ್ಯಯನ ನಡೆಸಿದ ಮತ್ತೊಂದು ಸಂಶೋಧಕರಾಗಿದ್ದಾರೆ ಪಂಕಜ್‌ ಸಕ್ಸಾರಿಯಾ. ಪೂನಾ ಲ್ಯಾಬೊರೇಟರಿಯಲ್ಲಿ ಅವರು ನಡೆಸಿದ ಅಧ್ಯಯನ ‘Instrumental Lives: An Intimate Biography of an Indian Laboratory’ ಎಂಬ ಹೆಸರಿನಲ್ಲಿ ಪುಸ್ತಕವಾಗಿ ಹೊರಬಂದಿದೆ. ವಿಜ್ಞಾನದ ಹಿಂದಿನ ರಾಜಕೀಯ, ಸಯನ್ಸ್‌ ಮತ್ತು ಡೆಮಾಕ್ರಸಿ ನಡುವಿನ ಸಂಬಂಧ ಹಾಗೂ ಪ್ರಯೋಗಾಲಯಗಳ ದೈನಂದಿನ ಜೀವನದ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ. ಪ್ರಮಾಣ ಕಡಿಮೆಯಿದ್ದರೂ ಸದ್ಯ ಬರುತ್ತಿರುವ ಅಧ್ಯಯನಗಳ ಗುಣಮಟ್ಟತೆ ಆಶಾದಾಯಕವಾಗಿದೆ.

ಇತ್ತೀಚೆಗಷ್ಟೇ ನಿಧನರಾದ ಫ್ರೆಂಚ್ ಆಂತ್ರೋಪಾಲಜಿಸ್ಟ್ ಹಾಗೂ ತತ್ವಜ್ಞಾನಿಗಳಾದ ಬ್ರೂನೋ ಲಾತೋರ್ ನನ್ನು ಸ್ಮರಿಸಿಕೊಂಡು ನಮ್ಮ ಸಂಭಾಷಣೆ ಮುಕ್ತಾಯಗೊಳಿಸೋಣ. ವೈಜ್ಞಾನಿಕ ಪ್ರಯೋಗಾಲಯಗಳ ಬಗ್ಗೆ ಮಾನವಶಾಸ್ತ್ರದ ಸಂಜ್ಞೆಗಳನ್ನು ಬಳಸಿ ಅಧ್ಯಯನ ಮಾಡಿದ ಹಾಗೂ ಆಕ್ಟರ್ ನೆಟ್ವರ್ಕ್ ಎಂಬ ಥಿಯರಿ ಸಹಿತ ಸಮಾಜವಿಜ್ಞಾನಕ್ಕೆ ಹೊಸ ಆಯಾಮಗಳನ್ನು ನೀಡಿದ ವ್ಯಕ್ತಿಯಾಗಿದ್ದಾರೆ ಬ್ರೂನೋ ಲಾತೋರ್. ಅವರ ಸಂಶೋಧನೆಗಳು ಭಾರತದ ಸಮಾಜವಿಜ್ಞಾನ ಕ್ಷೇತ್ರದಲ್ಲಿ ಯಾವ ರೀತಿ ಒಂದು ತಿರುವಾಗಬಲ್ಲದು?

ಬ್ರೂನೋರ ಎಲ್ಲಾ ಸಂಶೋಧನೆಗಳು ಭಾರತದ ಸನ್ನಿವೇಶದಲ್ಲಿ ಬಹಳ ಉಪಕಾರಿ ಎಂದು ಹೇಳಬಹುದು. ಅವರು ಮುಂದಿಟ್ಟಿರುವ ಪ್ರಶ್ನೆಗಳು ಕೇವಲ ವಿಜ್ಞಾನದ ಸರಹದ್ದಿನೊಳಗಡೆ ನಿಲ್ಲುವಂತಹದ್ದಲ್ಲ. ಪವರ್‌, ಅಥಾರಿಟಿ, ಟ್ರೂಥ್‌, ಟ್ರಸ್ಟ್‌ ಎಂಬೀ ನಾಲ್ಕು ವಿಷಯಗಳನ್ನು ಅದು ಆಧರಿಸಿದೆ. ವಿಜ್ಞಾನದ ತೆರನಾದ ಸಾಮಾಜಿಕ ಪ್ರಾಧಾನ್ಯತೆ ಉಳ್ಳ ಯಾವುದೇ ವಿಷಯವನ್ನು ಈ ದೃಷ್ಟಿಕೋನದಲ್ಲಿ ವಿಶ್ಲೇಷಣೆ ಮಾಡಬಹುದು. ಮಾನವೀಯತೆಯ ಬಗೆಗಿನ ಸಮಾಜಶಾಸ್ತ್ರದ ಪರಂಪರಾಗತ ಪರಿಪ್ರೇಕ್ಷ್ಯಗಳಾಚೆಗೆ ಬ್ರೂನೋ ಹೋಗುತ್ತಾರೆ. ಹಲವು ತರದ ಯಂತ್ರಗಳ ಕರ್ತೃತ್ವದ ಬಗೆಗೆ ಅವರು ಚರ್ಚಿಸಿದ್ದು ಇದಕ್ಕೊಂದು ಉದಾಹರಣೆ. ಹವಾಮಾನ ವೈಪರೀತ್ಯ, ಪೋಸ್ಟ್‌ ಟ್ರೂತ್‌ ಸಹಿತ ಹಲವಾರು ವಿಚಾರಗಳನ್ನು ಆಳವಾಗಿ ವಿಶ್ಲೇಷಿಸಲು ಇಂತಹ ನಿಲುವುಗಳು ಸಹಾಯಕವಾಗಲಿದೆ.

ಇತ್ತೀಚೆಗೆ ಅವರು ನಡೆಸಿದ ಅಧ್ಯಯನಗಳಲ್ಲೊಂದಾದ ‘Insiders and Outsiders in the Sociology of Science’ ಕೃತಿಯಲ್ಲಿ ಅವರು ಕೇಳಿದ ಮಹತ್ತರವಾದ ಪ್ರಶ್ನೆಯೊಂದಿದೆ. ಸೋಶಿಯಾಲಜಿ ಆಫ್‌ ರಿಲಿಜಿಯನ್‌ ಸಂಶೋಧನಾ ವಿಭಾಗವನ್ನು ಒಂದು ನಾಸ್ತಿಕ ಶಿಸ್ತು ಎಂಬ ನೆಲೆಯಲ್ಲಿ ಕಾಣಲಾಗುತ್ತದೆ. ಧರ್ಮ ವಿಶ್ವಾಸಿ ಅಲ್ಲದ ವ್ಯಕ್ತಿಗೆ ಧರ್ಮದ ಸಮಾಜವಿಜ್ಞಾನವನ್ನು (sociology of religion) ಶೋಧಿಸಬಹುದಾದರೆ ಒಂದು ಸಮಾಜವಿಜ್ಞಾನಿಗೆ ಯಾಕೆ ವಿಜ್ಞಾನದ ಬಗೆಗೆ ಕಲಿಯುವಂತಿಲ್ಲ. ಹಲವರು ಹೀಗೆ ವಾದಿಸಿರುವುದು ವಿಜ್ಞಾನಕ್ಕೆ ಅವರು ಕಲ್ಪಿಸುತ್ತಿರುವ ವಿಶೇಷಾಧಿಕಾರ ನಿಮಿತ್ತವಷ್ಟೆ. ಇತಿಹಾಸಗಾರರು ಮತ್ತು ಸಮಾಜವಿಜ್ಞಾನಿಗಳ ಪಾಲಿಗೆ ವಿಜ್ಞಾನದ ಬಗೆಗಿನ ಸಂಶೋಧನೆ ಕ್ಲಿಷ್ಟಕರ ಎನಿಸಿದ್ದು ಇದೇ ಕಾರಣದಿಂದ.

ಕೃಪೆ : thijori.in


ಅನುವಾದ : ನಝೀರ್ ಅಬ್ಬಾಸ್
ನಝೀರ್ ಅಬ್ಬಾಸ್ ಫಿಲಾಸಫಿಯಲ್ಲಿ ಸ್ನಾತಕೋತ್ತರ ಪಡೆದಿದ್ದು ಪ್ರಸ್ತುತ ಉಪನ್ಯಾಸಕ ವೃತ್ತಿಯಲ್ಲಿದ್ದಾರೆ. ಇಸ್ಲಾಮಿಕ್ ಅಧ್ಯಯನ ಶಿಸ್ತುಗಳು ಮತ್ತು ಅರಬಿಕ್ ಲಿಬರಲ್ ಆರ್ಟ್ಸ್ ವಿಷಯಗಳಲ್ಲಿ ಪಾರಂಪರಿಕ ತರಬೇತಿ ಪಡೆದಿದ್ದಾರೆ. ಇಸ್ಲಾಮಿಕ್, ಪಾಶ್ಚಾತ್ಯ ಹಾಗೂ ಭಾರತೀಯ ತಾತ್ವಿಕತೆ ಇಷ್ಟದ ವಿಷಯಗಳು. ವಿವಿಧ ಸೆಮಿನಾರುಗಳಲ್ಲಿ ಪ್ರಬಂಧ ಮಂಡಿಸಿದ್ದು ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಬರೆಯುತ್ತಾರೆ.


ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://imjo.in/5fZZ9X

Download RUTHUMANA App here :

** Android *** : https://play.google.com/store/apps/details?id=ruthumana.app
** iphone ** : https://apps.apple.com/in/app/ruthumana/id1493346225

ಪ್ರತಿಕ್ರಿಯಿಸಿ