ಸ್ಪೇನಿನ ಜನಪದ ಕತೆ: ಮಾಯಾ ಕನ್ನಡಿ

ಜಗತ್ತಿನ ಜನಪದವೇ ಋತುಮಾನದ ಹೊಸ ಅಂಕಣ ‘ಜಗಪದ’. ಬೇರೆ ಬೇರೆ ದೇಶಭಾಷೆಗಳ ಅಪರೂಪದ ಜನಪದ ಕತೆಗಳೀಗ ಕನ್ನಡದಲ್ಲಿ. ಮೊದಲಿಗೆ ಸ್ಪೇನ್ ದೇಶದ ಕತೆ ಮಾಯಾ ಕನ್ನಡಿ.

ಗ್ರನಾಡದ ರಾಜ ಮದುವೆಯಾಗುತ್ತಾನೆಂಬ ಸುದ್ದಿ ಮೊದಲು ತಲುಪಿದ್ದು ಅಸ್ಥಾನದ ಕ್ಷೌರಿಕನಿಗೆ. ನಂತರ ರಾತ್ರಿ ಪಾಳೆಗಾರನಿಗೆ. ತದ ನಂತರ ಈ ವಿಷಯ ತಲುಪಿದ್ದು ಗ್ರನಾಡದ ಹಣ್ಣು ಹಣ್ಣು ಮುದುಕಿಗೆ.

ಕ್ಷೌರಿಕ ತನ್ನಲ್ಲಿ ಬರುವ ಗಿರಾಕಿಗಳಿಗೆಲ್ಲ ಮದುವೆಯ ಸುದ್ದಿ ಹೇಳತೊಡಗಿದ. ಅವರು ಅವರವರ ಗೆಳೆಯರಿಗೆ ಹೇಳಿದರು. ರಾತ್ರಿ ಪಾಳೆಗಾರ , ಆಸ್ಥಾನದ ಕೆಲಸಗಾರರಿಗೆ ಕೇಳಿಸುವಂತೆ ಹೇಳಿದ. ಸುದ್ದಿ ಕೇಳಿದ ಆಳುಗಳು ಅದರ ಯೋಚನೆಯಲ್ಲೇ ಮುಳುಗಿಹೋದರು. ಹಗಲು ರಾತ್ರಿ ಎನ್ನದೆ ವಯಸ್ಸಾದ ಮಹಿಳೆಯರ ಬಾಯಿಂದ ಬಾಯಿಗೆ ರಾಜನ ಮದುವೆಯ ವಿಚಾರ ಹರಡಿ, ಅದು ಎಲ್ಲರಿಗೂ ಮತ್ತೆ ಮತ್ತೆ ನೆನಪಾಯಿತು.

ಕೊನೆಗೂ ಒಂದು ದಿನ ಮದುವೆಯ ಸುದ್ದಿ ಹಳತಾಯಿತು. ಆಗ ಪ್ರಶ್ನೆಗಳು ಎದ್ದವು.

” ರಾಜ ಮದುವೆಯಾಗುವುದು ಯಾರನ್ನು?”

ಆಗ ಕ್ಷೌರಿಕ ” ರಾಜ ಹೆಣ್ಣನ್ನೇ ಮದುವೆಯಾಗುತ್ತಾನೆ.” ಅಂದ

“ಹೆಣ್ಣೇ! ಹೆಣ್ಣಲ್ಲದೆ ಮತ್ಯಾರನ್ನು ಮದುವೆಯಾಗಬೇಕು ಅವರು?” ಅಂದರು ಕೇಳಿದವರು.

” ಎಲ್ಲಾ ಹೆಣ್ಣು ರಾಜನನ್ನು ಮದುವೆಯಾಗಲು ಯೋಗ್ಯ್ರರಲ್ಲ. ಕೆಲವರು ಅಶುದ್ಧರೂ ಇರ್ತಾರೆ” ಕ್ಷೌರಿಕ ಉತ್ತರಿಸಿದ.
” ಅಶುದ್ಧರೇ? ಏನು ನಿನ್ನ ಮಾತಿನ ಅರ್ಥ? ಇಲ್ಲಿ ಈ ಸ್ಪೇನ್ ನೆಲದಲ್ಲಿ ನಮ್ಮ ರಾಜನಿಗೆ ಒಬ್ಬ ಯೋಗ್ಯವಾದ ಹೆಣ್ಣು ಸಿಗುವುದಿಲ್ಲವೇ?” ಕೇಳುಗರ ಪ್ರಶ್ನೆ ಬೆಳೆಯುತ್ತ ಹೋಯಿತು.

” ಸಿಗುತ್ತಾಳೆ. ಸುಲಭವಾಗಿ ಸಿಗುವವರೆಲ್ಲ ನಾವಂದುಕೊಂಡಂತೆ ಇರುವುದಿಲ್ಲ. ಆದರೆ ಯೋಗ್ಯ ರಾಣಿಯನ್ನು ಹುಡುಕುವ ಕಷ್ಟದಲ್ಲೀಗ ನಾನಿದ್ದೇನೆ ” ಎಂದು ಹೇಳಿದ ಕ್ಷೌರಿಕ.

” ಏನು? ನೀನಾ? ರಾಜನಿಗೆ ರಾಣಿಯನ್ನು ಹುಡುಕುವುದಕ್ಕೂ, ನಿನಗೂ ಎಲ್ಲಿಂದೆಲ್ಲಿಯ ಸಂಬಂಧವಯ್ಯ?” ಎಲ್ಲರೂ ಕೂಗಿಕೊಂಡರು ಆಶ್ಚರ್ಯದಿಂದ.

” ಮರೆಯದಿರಿ. ನಾನೀಗ ರಾಜನ ಅನುಜ್ನೆಗೆ ಒಳಗಾಗಿದ್ದೇನೆ. ಈಗ ರಾಜನ ಚಹರೆಯನ್ನು ಮುಟ್ಟುವ ಅವಕಾಶವಿರುವುದು ನನಗೊಬ್ಬನಿಗೆ. ಅ ಮಾಯಾ ಕನ್ನಡಿ ಇರುವುದು ಕೂಡ ಈಗ ನನ್ನ ಬಳಿ ಮಾತ್ರ. ನಡತೆಯಲ್ಲಾಗಲೀ, ಗುಣದಲ್ಲಾಗಲೀ, ರೂಪದಲ್ಲಾಗಲೀ ಸರಿಯಿಲ್ಲದ ಹೆಣ್ಣು ಆ ಮಾಯಾ ಕನ್ನಡಿಯಲಿ ನೋಡಿದರೆ, ಆಕೆಯ ನಡತೆಯಲ್ಲಿನ ನ್ಯೂನತೆಗಳು ಕನ್ನಡಿಯ ಪ್ರತಿಬಿಂಬದಲ್ಲಿ ಕಲೆಯಾಗಿ ಕಾಣಿಸುತ್ತದೆ.”

” ರಾಜನ ಮದುವೆಗೆ ಇರಬೇಕಾದ ಅರ್ಹತೆಗಳಲ್ಲಿ ಇದೂ ಒಂದು ಅರ್ಹತೆಯೇ?” ಎಲ್ಲರೂ ಕೇಳಿದರು.

” ಇರಬೇಕಾಗಿರುವುದೇ ಕೇವಲ ಇದೊಂದೇ ಅರ್ಹತೆ.” ತನ್ನ ಜಾಣತನವನ್ನು ಮೆರೆಯುತ್ತ ಕ್ಷೌರಿಕ ಹೇಳಿದ.

“ಆದರೇ.. ವಯಸ್ಸಿನ ಮಿತಿ ಏನಾದರೂ ಇದೆಯೇ?” ಮತ್ತಷ್ಟು ಕುತೂಹಲದಿಂದ ಕೇಳಿದರು.

“ಹದಿನೆಂಟು ವಯಸ್ಸು ಮೇಲ್ಪಟ್ಟಿದ್ದರೆ ಸಾಕು.” ಕನ್ನಡಿಯ ಮಾಲಿಕ ಹೇಳಿದ.

“ಹಾಗಾದರೆ ಗ್ರನಾಡದ ಪ್ರತಿಯೊಬ್ಬ ಹೆಣ್ಣೂ ರಾಣಿಯಾಗುವ ಅರ್ಹತೆ ಪಡೆದಿದ್ದಾರೆ!” ಮತ್ತೊಬ್ಬ ಹೇಳಿದ.

“ಆದರೇ ಮೊದಲಿಗೆ ಅವರು ರಾಣಿಯಾಗುವ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕು. ಅವರು ಹೇಳಿದ ಮಾತುಗಳನ್ನು ನಾನಂತೂ ನಂಬುವುದಿಲ್ಲ. ಅದಕ್ಕೆ ಅವರು ನನ್ನ ಪಕ್ಕಕ್ಕೆ ನಿಂತು ಕನ್ನಡಿಯೊಳಗೆ ನೋಡಬೇಕು.”

ರಾಣಿಯಾಗುವ ಕನಸನ್ನು ಕಂಡವರಿಗೆ ಇರುವ ಏಕೈಕ ಷರತ್ತನ್ನು ತಿಳಿಸಲಾಯಿತು. ಹಲವರು ಈ ಷರತ್ತನ್ನು ಕೇಳಿ ತಮಾಶೆ ಮಾಡಿದರು.

ಕೇಳಲು ವಿಚಿತ್ರವೆನಿಸಬಹುದು. ಅದರೆ ಕ್ಷೌರಿಕನ ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬ ನೋಡಲು ಯಾವೊಬ್ಬ ಹೆಣ್ಣೂ ಮುಂದೆ ಬರಲಿಲ್ಲ.

ದಿನಗಳು, ವಾರಗಳು ಹಾಗೇ ಕಳೆದು ಹೋದವು. ರಾಜನಿಗೆ ರಾಣಿ ಸಿಗುವ ಯಾವ ಸೂಚನೆಗಳೂ ಸಿಗಲಿಲ್ಲ. ಕೆಲ ಉದಾರ ಮಹಿಳೆಯರು ತಮ್ಮ ಗೆಳತಿಯರಿಗೆ ಈ ಪರೀಕ್ಷೆಗೆ ಒಳಗಾಗುವಂತೆ ಒತ್ತಾಯಿಸಿದರೂ ಯಾರೊಬ್ಬರೂ ಒಪ್ಪಲಿಲ್ಲ.

ರಾಜ ಸುಂದರವಾಗಿದ್ದಾನೆ. ಒಳ್ಳೆ ಮನುಷ್ಯನೂ ಹೌದು. ತನ್ನ ಸದ್ಗುಣಗಳಿಂದ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದಾನೆ. ಅದ್ದರಿಂದ ಯಾರೊಬ್ಬರೂ ರಾಣಿಯಾಗಲು ಮುಂದೆ ಬಾರದಿರುವುದು ತುಂಬಾ ಅಶ್ಚರ್ಯವೆನಿಸಿತು. ಹೀಗೆ ಬಾರದೆ ಇರುವುದಕ್ಕೆ ಸಾಕಷ್ಟು ನೆಪಗಳಂತೂ ಹರಿದು ಬಂದವು. ಕೆಲವರು ಆಗಲೇ ಮದುವೆಯಾಗಿದ್ದಾರೆಂದು ಹೇಳಲಾಯಿತು. ಕೆಲವರು ಕ್ಷೌರಿಕನ ಅಂಗಡಿಯೊಳಗೆ ಕಾಲಿಡಲಾರೆವು ಎಂದರು. ಮತ್ತೆ ಕೆಲವರು ತಾವು ಮದುವೆಯಾಗದೆ ಒಂಟಿಯಾಗಿ ಇರಲು ಬಯಸಿದ್ದೇವೆ ಎಂದರು.

ಇದಾದನಂತರದ ನೆಪಗಳು ಮತ್ತಷ್ಟು ಚಾಣಾಕ್ಶತೆಯಿಂದ ಕೂಡಿದ್ದವು. ಪ್ರಜೆಗಳು ರಾಜನ ಮದುವೆಯಾಗುವ ತನಕ ಗ್ರನಾಡದ ಬೇರೆ ಯಾವ ವ್ಯಕ್ತಿಯೂ ಮದುವೆಯಾಗುವ ಬಗ್ಗೆ ಯೋಚನೆ ಕೂಡ ಮಾಡಬಾರದೆಂದು ತಮ್ಮಷ್ಟಕ್ಕೆ ತಾವೆ ಘೊಷಿಸಿಕೊಂಡರು. ನಿಜ ಹೇಳುವುದಾದರೆ ಇದೆಲ್ಲ ನೆಪಗಳು ಆ ಕನ್ನಡಿ ನೋಡುವ ಕರಾರನ್ನು ವಿರೋಧಿಸುವುದಾಗಿತ್ತು. ಮನೆಗಳಲ್ಲಿ ಒಂದು ಕಡೆ ತಂದೆಗೆ ರಾಣಿಯಾಗುವ ಮಗಳ ಆಸೆಯನ್ನು ಕಂಡು ಕಿರಿಕಿರಿ ಅನ್ನಿಸಿದರೆ ಇನ್ನೊಂದು ಕಡೆ ತಾಯಿ ಈ ವಿಷಯದಲ್ಲಿ ಮೌನವಾಗಿರುವುದು ಸಾಮಾನ್ಯವಾಗಿಬಿಟ್ಟಿತ್ತು.

ಪ್ರತಿದಿನ ಮುಂಜಾನೆ ರಾಜ ಎದ್ದ ತಕ್ಷಣ ಕೇಳುತ್ತಿದ್ದುದು ಒಂದೇ ಪ್ರಶ್ನೆ. “ಯಾರಾದರೂ ಕನ್ನಡಿಯಲ್ಲಿ ಮುಖ ನೋಡಲು ಒಪ್ಪಿದ್ದಾರೆಯೇ?” ಉತ್ತರವೂ ಯಾವಾಗಲೂ ಒಂದೇ ಇರುತ್ತಿತ್ತು. “ಇಲ್ಲ.”

ಹಲವರು ಯಾರಾದರೂ ಕ್ಷೌರಿಕನ ಅಂಗಡಿಯ ಒಳಗೆ ಹೋಗುತ್ತಾರೆಯೇ ಎಂದು ಸದಾ ದಿಟ್ಟಿಸುತ್ತಿರುತ್ತಿದ್ದರೇ ವಿನಹ ಒಳ ಹೋಗುವ ಸಾಹಸಕ್ಕೆ ಯಾರೂ ಕೈ ಹಾಕುತ್ತಿರಲಿಲ್ಲ.

” ಓ ಗ್ರನಾಡ, ಗ್ರನಾಡ.. ನನಗೋಸ್ಕರ ನಿನ್ನ ಮಡಿಲಲ್ಲಿ ಯಾವೊಬ್ಬ ಮಗಳೂ ಇಲ್ಲವೇ? ನನ್ನ ಪೂರ್ವಜರು ತಮ್ಮ ತಮ್ಮ ಹೆಂಡತಿಯರ ಜೊತೆ ಸಂತೋಷದಿಂದ ಕಾಲ ಕಳೆದಿದ್ದಾರೆ. ಅವರ ಸಾಮೀಪ್ಯವನ್ನು ಅನುಭವಿಸಿದ್ದಾರೆ. ನನಗಾ ಭಾಗ್ಯ ಇಲ್ಲದೇ ಹೋಯಿತೆ?” ಎಂದು ರಾಜ ಜೋರಾಗಿ ರೋದಿಸಿದ.
ಆಗ ಕ್ಷೌರಿಕ, ” ರಾಜ, ಆ ದಿನಗಳಲ್ಲಿ ಮಾಯಾ ಕನ್ನಡಿ ಅಪರಿಚಿತವಾಗಿತ್ತು. ಅದು ಅಷ್ಟಾಗಿ ಬೇಕಾಗಿಯೂ ಇರಲಿಲ್ಲ. ಪುರುಷರು ಬರೀ ಕಲೆ ಮಾತ್ರ ಓದುತ್ತಿದ್ದರು. ಆದರೀಗ ವಿಜ್ಞಾನ  ಕೂಡ ಓದಿನಲ್ಲಿ ಸೇರಿಕೊಂಡಿದೆ” ಅಂದನು.

” ಅಂದರೇ ನಿನ್ನ ಅರ್ಥ ಜ್ನಾನದ ಹೆಚ್ಚಳಿಕೆ ಒಳ್ಳೆಯದನ್ನು ಮಾಡಲಿಲ್ಲವೇ?” ರಾಜ ಪ್ರಶ್ನಿಸಿದ.
” ನನ್ನ ಅರ್ಥ , ಜ್ನಾನದ ಬೆಳವಣಿಗೆಯಿಂದ ಜಾಸ್ತಿ ಒಳ್ಳೆಯದಾಗಿದೆ. ಆದರೆ ಜನ ಮೊದಲಿಗಿಂತ ಕೆಟ್ಟವರಾಗಿದ್ದಾರೆ.”
” ದೇವರು ದೊಡ್ಡವನು . ಈ ಗೋಡೆಗಳು ಹೇಳುವುದು ಅದನ್ನೇ ಅಲ್ಲವೇ? ಅರಿತುಕೊಳ್ಳುವುದೆಂದರೆ ಜಾಣರಾಗುವುದು.”

” ಯಾವಾಗಲೂ ಅಲ್ಲ ರಾಜ. ಬಹುತೇಕ ಬಾರಿ ಜಾಸ್ತಿ ತಿಳಿದುಕೊಂಡ ಪುರುಷರು, ಮಹಿಳೆಯರು ಚತುರರಾಗಿದ್ದಾರೆ, ಆದರೆ ಜಾಣರಲ್ಲ. ಚತುರತೆಗೂ ಜಾಣತನಕ್ಕೂ ತುಂಬಾ ವ್ಯತ್ಯಾಸವಿದೆ; ಸ್ವರ್ಗ ಭೂಮಿಯಷ್ಟು.”

” ಎಲೆ ಕ್ಷೌರಿಕ” ಸಿಟ್ಟಿನಿಂದ ಕೂಗಿದ ರಾಜ. ” ನನಗೆ ನಿನು ಹೆಂಡತಿಯನ್ನು ಹುಡುಕಿ ತರಲೇಬೇಕು. ಅವಳು ಇಬ್ಬನಿಯಷ್ಟು ಪವಿತ್ರ, ಚಿನ್ನದಷ್ಟು ಶುದ್ಧವಾಗಿರಬೇಕು. ಆ ಮಾಯಾ ಕನ್ನಡಿಯಲ್ಲಿ ನೋಡಲು ಕಿಂಚಿತ್ತೂ ಭಯ ಪಡದವಳಾಗಿರಬೇಕು.”

” ರಾಜ, ಕನ್ನಡಿಯಲ್ಲಿ ಇರುವ ಜಾದೂಗಾರಿಕೆಯ ಕೆಲಸ ನಮ್ಮ ಗ್ರನಾಡದ ಮಹಿಳೆಯರ ದುಷ್ಟತನ ತೋರಿಸುವುದು. ಪರ್ವತದ ಆಚೆಗೆ ಸಾಮಾನ್ಯ ಕುರಿ ಕಾಯುವ ಹುಡುಗಿಯೊಬ್ಬಳಿದ್ದಾಳೆ. ಅವಳಿಗೆ ಕನ್ನಡಿಯಲ್ಲಿ ದೃಷ್ಟಿಸುವ ದಿಟ್ಟತನವಿದೆ. ಮುಗ್ದತೆಯ ಅರಿವಿದೆ. ಆದರೆ ಅಂತವಳನ್ನು ನಮ್ಮ ರಾಜ್ಯದ ರಾಣಿಯನ್ನಾಗಿ ಹೇಗೆ ಮಾಡುವುದು? ಅವಳನ್ನು ಹೇಗೆ ಮದುವೆಯಾಗುತ್ತೀರಿ?”

“ಅಂತಹವಳೇ ಈ ರಾಜ್ಯದ ರಾಣಿಯಾಗುವುದಕ್ಕೆ ಸೂಕ್ತಳು. ಬೆಲೆ ಕಟ್ಟಲಾಗದ ಮುತ್ತವಳು. ಹೋಗು ಅವಳನ್ನು ನಮ್ಮ ಆಸ್ಥಾನಕ್ಕೆ ಕರೆದುಕೊಂಡು ಬಾ. ನಮ್ಮೆಲ್ಲರ ಮುಂದೆ ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಲಿ ಅವಳು.”

ಕ್ಷೌರಿಕನಿಗೆ ಸಾಮಾನ್ಯ ಕುರಿಕಾಯುವವಳು ಬಂದು ಕನ್ನಡಿಯಲ್ಲಿ ನೋಡುವುದು ಸರಿ ಅನ್ನಿಸಲೇ ಇಲ್ಲ. ಅವಳನ್ನು ಕರೆಸುವ ಮನಸ್ಸೂ ಬರಲಿಲ್ಲ. ಕುರಿಕಾಯುವವಳ ಪರೀಕ್ಷೆಯ ವಾರ್ತೆ ಬೆಂಕಿಯಂತೆ ಎಲ್ಲೆಡೆ ಹಬ್ಬಿತು. ಆಸ್ಥಾನದ ಮುಖ್ಯ ಕೊಠಡಿ ಬಹುಬೇಗನೆ ರಾಜ ಮನೆತನದವರಿಂದ ತುಂಬಿ ಹೋಯಿತು.

ಕುರಿಕಾಯುವವಳು ಆಸ್ಥಾನ ಪ್ರವೇಶಿಸಿದಾಗ, ಆ ವೈಭೋಗದೊಳಗೆ ತಾನಿರುವುದನ್ನು ನೋಡಿ ನಾಚಿಕೊಂಡಳು. ಆಕೆಯನ್ನು ನೋಡಿದವರು ಊಹಿಸಿದ್ದಕ್ಕಿಂತ ಚೆನ್ನಾಗಿದ್ದಾಳೆಂದು ಮಾತನಾಡಿಕೊಂಡರು. ಅವಳ ಸ್ವರೂಪವನ್ನು ರಾಜ ಮೆಚ್ಚಿಕೊಂಡ. ಪ್ರೀತಿಯಿಂದ ಸ್ವಾಗತಿಸಿದ. ಅವಳಿಗೆ ತಾನು ರಾಣಿಯಾಗಲು ಇಷ್ಟಪಟ್ಟಲ್ಲಿ ಕನ್ನಡಿಯೊಳಗೆ ನೋಡಬೇಕು. ಆದರೆ ನಮ್ಮಲ್ಲೇನಾದರೂ ದೋಷಗಳಿದ್ದರೆ , ಮನಸಿನಲ್ಲಿ ನ್ಯೂನತೆಗಳಿದ್ದರೆ ಅವು ಪ್ರತಿಬಿಂಬದಲ್ಲಿ ಕಲೆಯಾಗಿ ಕಾಣುತ್ತವೆ ಎಂದು ರಾಜ ಅವಳಿಗೆ ವಿವರಿಸಿದನು.

” ಸ್ವಾಮಿ, ದೇವರ ದೃಷ್ಟಿಯಲ್ಲಿ ನಾವೆಲ್ಲರೂ ಪಾಪಿಗಳೇ. ಆದರೆ ನಾನು ಕುರಿಗಳ ಜೊತೆ ಜೀವಿಸುವ ಬಡ ಕುರಿಕಾಯುವವಳು. ನನಗೆ ಪ್ರೀತಿಸುವುದೇನೆಂದರೆ ಗೊತ್ತು. ಕುರಿಗಳು ಅಪಾಯವನ್ನು ಅರಿತಾಗ ನನ್ನ ಬಳಿ ರಕ್ಷಣೆಗೆ ಬರುತ್ತವೆ. ಕಾಡಿನ ಹೂಗಳೇ ನನಗೆ ಮಾಲೆಯಾಗಿವೆ. ಆಕಾಶ ನನ್ನ ಏಕ ಮಾತ್ರ ಛಾವಣಿ. ದೇವರು ನನ್ನ ವಿಶ್ವಾಸಿ, ಆತ್ಮೀಯ ಸ್ನೇಹಿತ. ಹಾಗಾಗಿ ಕನ್ನಡಿಯಲ್ಲಿ ನೋಡಲು ನಾನು ಹೆದರುವುದಿಲ್ಲ. ಅದಾಗ್ಯೂ ರಾಣಿಯಾಗುವ ಆಸೆಯೂ ನನಗಿಲ್ಲ. ಚೆಂದ ಕಾಣಬೇಕೆಂಬ ಹೆಮ್ಮೆಯ ಕೊರತೆ ಇದೆಯೇ ನನಗೇ?” ಎಂದಳು ಅವಳು.

ಇಷ್ಟನ್ನು ಹೇಳಿ ಅವಳು ಕನ್ನಡಿಯತ್ತ ನಡೆದಳು. ಅದರಲ್ಲಿ ದೃಷ್ಟಿಸಿ ನೋಡಿದಳು. ಪರ್ವತ ಪ್ರದೇಶದಲ್ಲಿ ಹರಿಯುವ ಝರಿಗಳಲ್ಲಿ ತನ್ನನ್ನು ತಾನು ನೋಡಿಕೊಳ್ಳುತ್ತಿದ್ದಳು. ಈಗ ಕನ್ನಡಿಯಲ್ಲಿ ತನ್ನದೇ ಸೌಂದರ್ಯ ನೋಡಿ ಕೆನ್ನೆ ಕೆಂಪಾದವು.

ಆಸ್ಥಾನದ ಮಹಿಳೆಯರು ಅವಳನ್ನು ಸುತ್ತುವರೆದರು. ಮಾಯಾ ಕನ್ನಡಿಯ ಪ್ರತಿಬಿಂಬದಲ್ಲಿ ಯಾವುದೇ ಕಲೆಗಳಿಲ್ಲದ್ದನ್ನು ಕಂಡು ಅವರು ಹೌಹಾರಿದರು. ಒಮ್ಮೆಲೆ ಅವಳಿಂದ ಕನ್ನಡಿಯನ್ನು ಕಸಿದುಕೊಂಡರು.

“ಇದರಲ್ಲಿ ಯಾವ ಮಾಯೆಯೂ ಇಲ್ಲ. ನಮಗೆಲ್ಲ ಮೋಸವಾಗಿದೆ” ಎಂದು ಕೂಗಾಡತೊಡಗಿದರು.

ರಾಜನು ಶಾಂತಚಿತ್ತದಿಂದ ಹೇಳಿದ. ” ಇಲ್ಲ ಮಹನೀಯರೇ, ನೀವು ನಿಮಗೇ ಧನ್ಯವಾದ ಹೇಳಬೇಕು. ನೀವು ಈ ಕುರಿ ಕಾಯುವ ಹುಡುಗಿಯಷ್ಟು ಮುಗ್ದರಾಗಿದ್ದೀರಾ? ನನ್ನ ರಾಣಿಯಾಗ ಬಯಸುವವರು ಈ ಕನ್ನಡಿಯಲ್ಲಿ ಮುಖ ನೋಡಲು ಇಷ್ಟೊಂದು ಭಯಪಡಬಾರದಿತ್ತು.”

ರಾಜನ ವೈಭವದ ವಿವಾಹ ಮುಗಿದ ನಂತರ ಕ್ಷೌರಿಕ ಆಗಾಗ ಹೇಳುತ್ತಿದ್ದನಂತೆ ; ಈಗ ಕನ್ನಡಿಯು ತನ್ನ ಮಾಯೆಯನ್ನು ಕಳೆದುಕೊಂಡಿದೆ. ಆದರೆ ಯಾರಿಗೆ ಗೊತ್ತು ಅದು ಪುನಃ ಗ್ರನಾಡಕ್ಕೆ ಬಂದರೂ ಬರಬಹುದು!

ಅನುವಾದ: ಸೀಮಾ ಸಮತಲ

ಚಿತ್ರಗಳು: ನಿಹಾರಿಕಾ ಶೆಣೈ ಮತ್ತು ಅಂತರ್ಜಾಲ

3 Comments
  1. ಆಕರ್ಷಕ ಕತೆ. ಅಂದದ ಻ಅನುವಾದ. ಿಇಂಥ ವಿಶೇಷ ವಿದೇಶೀ ಕತೆಗಳನ್ನು ಆಗಾಗ ಕೊಡುತ್ತಾ ಇರಿ. ಶುಭಾಶಯಗಳು.

ಪ್ರತಿಕ್ರಿಯಿಸಿ