ಹೆಣ್ಣಿನ ಆಯ್ಕೆಗಳು ಇನ್ನೂ ಸೀಮಿತವಾಗೇ ಇವೆ. ಮದುವೆಯ ವಿಷಯದಲ್ಲೂ ಹೆಣ್ಣಿನ ಆಯ್ಕೆಗೆ ಪ್ರಾಮುಖ್ಯತೆ ಇರುವುದಿಲ್ಲ. ಇಂತಹ ಸಾಮಾಜಿಕ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳು ಮದುವೆಯನ್ನು ಧಿಕ್ಕರಿಸಿ ಒಂಟಿಯಾಗಿ ಬಾಳುವ ನಿರ್ಧಾರ ತೆಗೆದುಕೊಂಡರೆ, ಅವರ ಆಯ್ಕೆಯನ್ನು ಗೌರವಿಸುವುದು ಒಂದು ನಾಗರಿಕ ಮನಸ್ಥಿತಿಗೆ ದಕ್ಕುತ್ತದೆ. ಇದು ಗಂಡು ಹುಡುಗರಿಗೂ ಅನ್ವಯಿಸುತ್ತದೆ. ಆದರೆ ಲೇಖಕಿ ಮದುವೆ ಆಗದಿರುವವರ ನಿರ್ಧಾರವನ್ನು ಅವರ ಆಯ್ಕೆಯೆಂದು ಗುರುತಿಸದೆ ಪಲಾಯನವೆಂದು ಹೇಳಿರುವುದು ವಿಪರ್ಯಾಸ .
ಉಷಾ ಕಟ್ಟೆಮನೆಯವರ ಪ್ರಬಂಧಗಳು ಭಾವಲೋಕದ ಪರಿದಿಯೊಳಗೆ ವಿಹರಿಸುತ್ತವೆ. ಇಲ್ಲಿ ಮನುಷ್ಯ ಸಂಬಂಧಗಳು ಪ್ರಕೃತಿ ಸಂಬಂಧದ ಮುಂದೆ ಕುಗ್ಗುತ್ತವೆ. ಸಂಬಂಧಗಳಲ್ಲಿನ ಕೊಡು ಕೊಳ್ಳುವ ಕ್ರಿಯೆಯಲ್ಲಿ ತೆಗೆದುಕೊಳ್ಳ ಬಯಸುವ ನಿರೀಕ್ಷೆಗಳಿಗೆ ನಿರಂತರ ಸೋಲುಂಟಾಗುತ್ತದೆ. ನಿರೀಕ್ಷೆಗಳ ಕಂತುಗಳು ಕೆಲವೊಮ್ಮೆ ಬೆಳೆಯುತ್ತವೆ, ಮತ್ತೆ ಕೆಲವೊಮ್ಮೆ ಯತಾಸ್ಥಿತಿ ಕಾದುಕೊಳ್ಳುತ್ತವೆ. ಆದರೆ, ಕೊನೆಗೆ ನಿರೀಕ್ಷೆಗಳು ಈಡೇರುವುದಿಲ್ಲ, ನೋವಿನ ಭಾರ ಹೆಚ್ಚಾಗುತ್ತಾ ಹೋಗುತ್ತದೆ. ಮನಸ್ಸು ಕುಗ್ಗುವ ಕಡೆ ನೋವಿದೆ, ಹತಾಶೆಯಿದೆ. ಈ ನೋವು, ಹತಾಶೆಗಳಿಗೆ ಕಾರಣ ಮತ್ತೆ ನಿರೀಕ್ಷೆಗಳೇ. ಹೆಣ್ಣಿನ ನಿರೀಕ್ಷೆಗಳು.
ಇಲ್ಲಿರುವ ಎಲ್ಲಾ ಪ್ರಬಂಧಗಳು ಬಾಲ್ಯದ ಮುಗ್ಧತೆಗೆ ಸೋತಿವೆ. ಆ ಮುಗ್ಧತೆಯನ್ನು ಈಗಲೂ ಬಯಸುತ್ತವೆ. ವಾಸ್ತವ ಬದುಕಿನ ಕಠೋರ ಸತ್ಯಗಳ ಎದುರು ನಾವು ಜೀವಿಸಬಯಸುವ ಭಾವ ಪ್ರಪಂಚ ಮತ್ತೆ ಮತ್ತೆ ಸೋಲುತ್ತದೆ. ಇದು ಅನಿವಾರ್ಯ ಕೂಡ. ಆದರೆ ಲೇಖಕಿ ಸೋಲಲು ಬಯಸುವುದಿಲ್ಲ. ಅವರಲ್ಲಿನ ಭಾವನಾತ್ಮಕ ಮನಸ್ಸು ಬಾಲ್ಯದ ನೆನಪಿನಲ್ಲಿ ಬಂಧಿಯಾದಂತೆ ತೋರಿದರೂ ಈ ಬಂಧನವೇ ಅವರಿಗೆ ಈಗಿನ ವಾಸ್ತವ ಬದುಕನ್ನು ಎದುರಿಸಲು ಶಕ್ತಿ ನೀಡಿದೆ.
ಲೇಖನಗಳು ಮಳೆಯನ್ನು ಸ್ವಾಗತಿಸುತ್ತಾ ಬಾಲ್ಯಕ್ಕೆ ಹೊರಳುತ್ತವೆ. ಇಲ್ಲಿ ಬಾಲ್ಯದ ನವಿರಾದ ನೆನಪುಗಳು ತೆರೆದುಕೊಳ್ಳುತ್ತವೆ. ಮಳೆಗಾಲದಲ್ಲಿ ಸಿಗುವ ಮಾವು, ಹಲಸು, ಗೇರು, ಅಣಬೆಗಳ ನೆನಪುಗಳಿವೆ. ಮಳೆಗಾಲ ರೈತರಿಗೆ ಬಿತ್ತನೆಯ ಕಾಲವಾದರೆ, ಮಕ್ಕಳಿಗೆ ವಿವಿಧ ವಿನ್ಯಾಸದ ಕೊಡೆಗಳನ್ನು ಕೊಳ್ಳುವ ಆಸೆ; ಅಮ್ಮನ ಕೈರುಚಿ ತಾಗಿದ ಮಾವಿನ ತಿನಿಸುಗಳು, ಹೀಗೆ ಬಾಲ್ಯದ ನೆನಪುಗಳು ಓದುಗರನ್ನು ಬೆಚ್ಚಗೆ ಮಾಡುತ್ತವೆ. ಕುಮಾರಧಾರೆಯನ್ನು ಸೇರುವ ಬಸವನಗುಡಿ ಹೊಳೆ ದಾಟಲು ಬಳಕೆಯಾಗುವ ಚಿಮುಲಿನ ವಿವರಣೆ ನಮ್ಮ ಕಣ್ಮುಂದೆಯೇ ಅದರ ಚಿತ್ರಣವನ್ನು ಅನುಭವಿಸುವಂತೆ ಮಾಡುತ್ತದೆ. ಜನರನ್ನು ಮಳೆಗಾಲದಲ್ಲಿ ದಡದಿಂದ ಊರಿಗೆ ಸೇರಿಸುತ್ತಿದ್ದ ಈ ಚಿಮುಲು ಮತ್ತು ಈ ಚಿಮುಲನ್ನು ನಡೆಸುವವರ ನಿಸ್ವಾರ್ಥ ಸೇವೆಯನ್ನು ಲೇಖಕಿ ನೆನಪಿಸಿಕೊಳ್ಳುತ್ತಾರೆ. ಈಗ ಹೊಳೆಗೆ ಸೇತುವೆ ಕಟ್ಟಿರುವುದರಿಂದ ಈ ಚಿಮುಲು ಇಲ್ಲವಾಗಿದೆ.
ಲೇಖಕಿಯ ಬಾಲ್ಯ ಸಮೃದ್ಧವಾಗಿದೆ. ಹೊಳೆಯಲ್ಲಿ ಮೀನು ಹಿಡಿಯುವಾಗಿನ ಧ್ಯಾನಸ್ಥ ಸ್ಥಿತಿ. ಮೂರು ಹೊಳೆಗಳನ್ನು ದಾಟಿ ಶಾಲೆಗೆ ಹೋಗಬೇಕಾದ ದಾರಿ. ದಾರಿಯಲ್ಲಿ ಸಿಗುವ ಕಾಡು. ಒಮ್ಮೆ ರಾತ್ರಿಯೆಲ್ಲಾ ಸ್ನೇಹಿತೆಯರೊಡನೆ ಕಾಡಿನಲ್ಲೇ ಕಳೆಯಬೇಕಾದ ಸಂದರ್ಭ; ಆಗ ಹೊಟ್ಟೆ ಹಸಿವು ನೀಗಿಸಿಕೊಳ್ಳಲು ಬಸಿರು ಮೀನುಗಳನ್ನು ಕೊಂದು ತಿಂದದ್ದು; ಆ ಮೀನುಗಳನ್ನು ಸಾಯಿಸಿದ್ದಕ್ಕೆ ಲೇಖಕಿ ಈಗ ವ್ಯಥೆ ಪಡುತ್ತಾರೆ. ಅವರ ಮಗುವಿನಂಥಾ ಮನಸ್ಸು ಮತ್ತೊಂದು ಜೀವಿಗೆ ಮರುಗುವ ಸನ್ನಿವೇಶಗಳು ಅವರ ಪ್ರಬಂಧಗಳಲ್ಲಿ ಸಿಗುತ್ತವೆ. ಆದರೆ, ಜೀವನವೆಂಬುದು ಆಹಾರ ಸರಪಳಿಯೂ ಹೌದು. ಈ ಸರಪಳಿಯ ಅವಲಂಬನೆ ಜೀವಿಜೀವಿಗಳ ಮಧ್ಯೆ ಇರಲೇಬೇಕಾದ ಸಮತೋಲನಕ್ಕೆ ಅನಿವಾರ್ಯ ಎಂಬ ಪ್ರಾಕೃತಿಕ ನಿಯಮವನ್ನು ಒಪ್ಪಿಕೊಳ್ಳುವ ಮನಸ್ಸು ಇಲ್ಲಿ ಕಾಣಿಸದು.
‘ಕೆಂಪಿಯೆಂಬ ಆತ್ಮಸಖಿ’ ಲೇಖನವು ಒಂದು ಹರಾಮಿ ಹಸುವಿನ ಅಪ್ಯಾಯಮಾನ ವಿವರಣೆ ನೀಡುತ್ತದೆ. ಈ ಬರಹವು ಓದುಗರ ಮನಸ್ಸಿಗೆ ತುಂಬಾ ಹತ್ತಿರವಾಗಲು ಕಾರಣ ಆ ಬರವಣಿಗೆಯಲ್ಲಿರುವ ಜೀವಪರ ಪ್ರೀತಿಯ ಆರ್ದತೆ. ಹರಾಮಿ ಹಸುವಿನ ತುಂಟತನವನ್ನು ತನಗೆ ಹೋಲಿಸಿಕೊಳ್ಳುವ ಲೇಖಕಿಯು ಆ ಹಸುವನ್ನು ಅತ್ಯಂತ ಪ್ರೀತಿಸುತ್ತಾರೆ. ಕೆಂಪಿಗೆ ಊರಿನವರು ಅದರ ತುಂಟತನಕ್ಕೆ ಬೈದರೂ, ರಕ್ತ ಬರುವ ಹಾಗೆ ಏಟು ಕೊಟ್ಟರೂ, ಕೊನೆಗೆ ಇದೇ ಊರಿನ ಜನ ಕೆಂಪಿ ಸಾಯುವ ಸ್ಥಿತಿಗೆ ಬಂದಾಗ ಕರುಣಾಮಯಿಗಳಾಗುತ್ತಾರೆ. ಅವಳನ್ನು ಪ್ರೀತಿಯಿಂದ ಸಲಹುತ್ತಾರೆ. ಒಂಟಿತನವನ್ನು ಅನುಭವಿಸುವಾಗ ಲೇಖಕಿಗೆ ಕೆಂಪಿ ನೆನಪಾಗುತ್ತಾಳೆ. ಆದರೆ, ಕೆಂಪಿಯ ನೆನಪು ಲೇಖಕಿಯ ಒಂಟಿತನವನ್ನು ನೀಗಿಸದೆ ಅವರಲ್ಲಿನ ಹತಾಶೆ ನಮ್ಮ ಅನುಭವಕ್ಕೆ ಬರುತ್ತದೆ. ಈ ಕೊರಗಿನ ಅವಶ್ಯಕತೆಯಿಲ್ಲವೆಂದೇ ಹೇಳಬೇಕಾಗುತ್ತದೆ. ಅವರೇ ಹೇಳುವ ಹಾಗೆ ಕೆಂಪಿಯನ್ನು ಊರಿನ ಜನ ಬೈಯುತ್ತಿದ್ದುದು ಅದರ ತಪ್ಪು ನಡವಳಿಕೆಗಳಿಗೆ. ಇದರಲ್ಲಿ ಕೋಪವಿದೆಯೆ ಹೊರತು ದ್ವೇಷವಿಲ್ಲ. ಹಸುವಿನ ಮೇಲೆ ಕೋಪವಿದ್ದರೂ ಪ್ರೀತಿಗೆ ಕೊರತೆಯಿರಲಿಲ್ಲ. ಆದ್ದರಿಂದಲೇ ಕೊನೆಗಾಲದಲ್ಲಿ ಇಡೀ ಊರು ಹೃದಯ ತುಂಬಿ ಆರೈಕೆ ಮಾಡುತ್ತದೆ. ಇಲ್ಲಿ ಹತಾಶೆಗೊಳ್ಳುವ ಅವಶ್ಯಕತೆ ಇರದು.
ಪ್ರಕೃತಿಯ ಆಸರೆಯನ್ನು ಬಯಸುವ ಲೇಖಕಿ ಅದಕ್ಕಿಂತಲೂ ಹೆಚ್ಚಾಗಿ ಮನುಷ್ಯ ಸಂಬಂಧಗಳಿಗೆ ಅವಲಂಬಿತರಾಗಿದ್ದಾರೆ. ಒಬ್ಬ ಹೆಣ್ಣಾಗಿ ಗಂಡಿನ ಸಾಂಗತ್ಯವನ್ನು ಬಯಸುವುದು ಸಹಜ. ಆದರೆ ಈ ಸಾಂಗತ್ಯ ಮಾನಸಿಕವಾದ ಅನ್ಯೋನ್ಯತೆಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗದಿದ್ದಲ್ಲಿ ಏಕಾಂಗಿತನ ಕಾಡುತ್ತದೆ. ಲೇಖಕಿಯ ಏಕಾಂಗಿತನ ಅವರ ಎಲ್ಲಾ ಲೇಖನಗಳ ಪ್ರಧಾನ ಅಂಶವಾಗಿದೆ. ಹೆಣ್ಣಿನ ಮನಸ್ಸಿನ ಸ್ಥಿರತೆಗೆ ಗಂಡನ್ನು ಅವಲಂಬಿಸಬೇಕಾದ ಅನಿವಾರ್ಯತೆಯನ್ನು ಲೇಖನಗಳು ಧ್ವನಿಸುತ್ತವೆ. ಈ ಅವಲಂಬನೆ ಆರ್ಥಿಕ ಅಥವಾ ದೈಹಿಕ ಆಯಾಮದ್ದಲ್ಲ. ಭಾವನಾತ್ಮಕವಾದ ಅವಲಂಬನೆ. ಅತಿಯಾದ ಭಾವಾನಾತ್ಮಕ ಅವಲಂಬನೆಯೂ ಆರೋಗ್ಯಕರವಲ್ಲ ಎಂಬುದನ್ನು ನಾವು ವೈಚಾರಿಕವಾಗಿ ಒಪ್ಪಿಕೊಂಡರೆ ಮಾನಸಿಕವಾಗಿ ಇತರರಿಂದ ಬಿಡುಗಡೆ ಪಡೆಯಬಹುದು. ಹೆಣ್ಣಿಗೆ ಕೇವಲ ಆರ್ಥಿಕ ಸ್ವಾತಂತ್ರ್ಯವಷ್ಟೇ ಅಲ್ಲದೆ, ಮಾನಸಿಕ ಅವಲಂಬನೆಯ ಬಿಡುಗಡೆ ಕೂಡ ಅತ್ಯವಶ್ಯಕವಾಗಿ ಬೇಕಾಗಿದೆ. ಆದರೆ ಲೇಖಕಿ ಭಾವನಾತ್ಮಕ ಬಿಡುಗಡೆಯ ಕಡೆ ಮನಸ್ಸು ಹರಿಸಿಲ್ಲವೆಂಬಂತೆ ತೋರುತ್ತದೆ. ಭಾವನೆಗಳೇ ಇಲ್ಲದ ಬದುಕು ಶುಷ್ಕ. ಆದರೆ ಈ ಭಾವನೆಗಳಿಗೆ ವೈಚಾರಿಕತೆಯ ಚೌಕಟ್ಟು ಬೇಕಾಗಿದೆ. ಆಗ ಲೇಖಕಿಯು ಇಷ್ಟ ಪಡುವ ದ್ರೌಪದಿಯನ್ನು ಕಾಣಬಹುದು.
ಕೃಷ್ಣನು ಲೇಖಕಿಯ ರಕ್ಷಕನಾಗಿ ಕಾಣಿಸಿಕೊಳ್ಳುತ್ತಾನೆ. ಇಲ್ಲಿ ನಾವು ಗಮನಿಸಬೇಕಾದದ್ದು ಕೃಷ್ಣ ಒಬ್ಬ ಪರಿಪೂರ್ಣ ವ್ಯಕ್ತಿತ್ವದ ಗಂಡಸಿಗೆ ಸಂಕೇತವಾಗಿರುವುದು. ವಾಸ್ತವ ಬದುಕಿನಲ್ಲಿ ಕೃಷ್ಣನ ವ್ಯಕ್ತಿತ್ವವನ್ನು ಒಂದೇ ಗಂಡಿನಲ್ಲಿ ಪಡೆಯುವುದು ಅಸಾಧ್ಯ. ಆದ್ದರಿಂದಲೇ ಲೇಖಕಿ ಕೃಷ್ಣನ ವ್ಯಕ್ತಿತ್ವದ ಹಲವು ಆಯಾಮಗಳನ್ನು ಅವರ ಬದುಕಿನುದ್ದಕ್ಕೂ ತಮ್ಮ ಗೆಳೆಯರಲ್ಲಿ ಹುಡುಕುವ ಪ್ರಯತ್ನದಲ್ಲಿದ್ದಾರೆ. ಗಂಡ ಮತ್ತು ಗೆಳೆಯರ ಬಗ್ಗೆ ಮುಕ್ತವಾಗಿ ಚರ್ಚಿಸುವ ಲೇಖಕಿಯ ಮನಸ್ಸು, ಪ್ರಾಮಾಣಿಕತೆಯನ್ನು ಬರಹಗಳಲ್ಲಿ ಮೂಡಿಸಲು ಸಾಧ್ಯವಾಗಿಸಿದೆ. ದಾಂಪತ್ಯವನ್ನು ಉಳಿಸಿಕೊಳ್ಳುವ ಗುಟ್ಟನ್ನೂ ಓದುಗರಿಗೆ ತಿಳಿಸುತ್ತಾರೆ. ವಿವಾಹೇತರ ಸಂಬಂಧಗಳ ಅವಶ್ಯಕತೆ ಮತ್ತು ಮಿತಿಗಳ ಬಗ್ಗೆ ಸೂಕ್ಷ್ಮವಾಗಿ ತಮ್ಮ ಬರಹಗಳಲ್ಲಿ ಹರಿಯಬಿಟ್ಟಿದ್ದಾರೆ. ವಿವಾಹದ ಆಚೆಯಿರುವ ಗಂಡು ಹೆಣ್ಣಿನ ಸಂಬಂಧಗಳನ್ನು ಅನೈತಿಕತೆಯ ಚೌಕಟ್ಟಿನೊಳಗೆ ಲೇಖಕಿ ಇಡಲು ಬಯಸುವುದಿಲ್ಲ. ಇದಕ್ಕೆ ಕಾರಣಗಳನ್ನೂ ಸಮರ್ಥವಾಗಿ ಈ ಬರಹಗಳು ನೀಡಿವೆ.
ಗಂಡು ಹೆಣ್ಣಿನ ಸಂಬಂಧಗಳ ಬಗ್ಗೆ ಮುಕ್ತವಾಗಿ ಚರ್ಚಿಸುವ ಲೇಖಕಿ ಅದೇ ಮುಕ್ತತೆಯನ್ನು ಈಗಿನ ಯುವಕ ಯುವತಿಯರ ಮದುವೆಯ ನಿರ್ಧಾರದ ಬಗ್ಗೆ ತೋರುವುದಿಲ್ಲ. ಈಗಿನ ಕಾಲದ ಯುವಜನತೆ ಮದುವೆಯ ಬಂಧನದಿಂದ ವಿಮುಖರಾಗುವುದನ್ನು ಲೇಖಕಿ ಪಲಾಯನ ಎಂದು ವ್ಯಾಖ್ಯಾನಿಸುತ್ತಾರೆ. ಮದುವೆಯು ಯಾವುದೇ ಒಂದು ವ್ಯಕ್ತಿಯ, ಅದು ಗಂಡಿರಲಿ ಅಥವಾ ಹೆಣ್ಣಿರಲಿ, ತೀರಾ ವಯ್ಯಕ್ತಿಕ ನಿರ್ಧಾರ . ಮದುವೆ ಆಗುವುದು ಅಥವಾ ಆಗದೇ ಇರುವುದು ಆ ವ್ಯಕ್ತಿಯ ಆಯ್ಕೆಯಾಗಿರಬೇಕು. ಅದರಲ್ಲೂ, ಹೆಣ್ಣಿನ ಆಯ್ಕೆಯನ್ನು ಗೌರವಿಸುವ ಮನಸ್ಥಿತಿ ನಮ್ಮ ಸಮಾಜಕ್ಕೆ ಇಲ್ಲದಿರುವುದು ವಿಷಾದನೀಯ. ಆಕೆಯ ಆಯ್ಕೆಗಳು ಇನ್ನೂ ಸೀಮಿತವಾಗೇ ಇವೆ. ಮದುವೆಯ ವಿಷಯದಲ್ಲೂ ಹೆಣ್ಣಿನ ಆಯ್ಕೆಗೆ ಪ್ರಾಮುಖ್ಯತೆ ಇರುವುದಿಲ್ಲ. ಇಂತಹ ಸಾಮಾಜಿಕ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳು ಮದುವೆಯನ್ನು ಧಿಕ್ಕರಿಸಿ ಒಂಟಿಯಾಗಿ ಬಾಳುವ ನಿರ್ಧಾರ ತೆಗೆದುಕೊಂಡರೆ, ಅವರ ಆಯ್ಕೆಯನ್ನು ಗೌರವಿಸುವುದು ಒಂದು ನಾಗರಿಕ ಮನಸ್ಥಿತಿಗೆ ದಕ್ಕುತ್ತದೆ. ಇದು ಗಂಡು ಹುಡುಗರಿಗೂ ಅನ್ವಯಿಸುತ್ತದೆ. ಆದರೆ ಲೇಖಕಿ ಮದುವೆ ಆಗದಿರುವವರ ನಿರ್ಧಾರವನ್ನು ಅವರ ಆಯ್ಕೆಯೆಂದು ಗುರುತಿಸದೆ ಪಲಾಯನವೆಂದು ಹೇಳಿರುವುದು ವಿಪರ್ಯಾಸ (ಸಂಸಾರ ಶರಧಿಯ ಕಂಫರ್ಟ್ ವಲಯಗಳು, ಪು. 72-73).
ಪರಿಪೂರ್ಣ ವ್ಯಕ್ತಿತ್ವದ ವ್ಯಕ್ತಿ ಸಿಗುವುದು ಒಂದು ಆದರ್ಶ. ನಮ್ಮ ಸಂಗಾತಿಯಲ್ಲಿ ಈ ಪರಿಪೂರ್ಣತೆಯನ್ನು ನಿರೀಕ್ಷಿಸುವುದು ಅವಾಸ್ತವ ಎಂದು ಲೇಖಕಿಗೆ ಗೊತ್ತಿದ್ದರೂ ಅವರ ನಿರೀಕ್ಷೆಗಳು ವಿಸ್ತರಿಸುತ್ತಾ ಹೋಗುತ್ತವೆ. ಗಂಡನಲ್ಲಿ ದೊರೆಯದ ಪ್ರೀತಿ ಮತ್ತು ಅಂತಃಕರಣವನ್ನು ಗೆಳೆಯನಲ್ಲಿ ಪಡೆಯುವ ಪ್ರಯತ್ನ ಕೂಡ ನಿರಾಶೆಯಲ್ಲಿ ಕೊನೆಯಾಗುವಂತೆ ಕಾಣುತ್ತದೆ. ಒಂಟಿತನವು ನಿರಂತರವಾಗಿ ಲೇಖಕಿಯನ್ನು ಆವರಿಸಿದೆ. ಮದ್ಯವೇ ನನಗೆ ಜೀವಜಲ ಎನ್ನುವ ಲೇಖಕಿಯು ವೈಚಾರಿಕತೆಗಿಂತಲೂ ಹೆಚ್ಚಾಗಿ ಭಾವನೆಗಳಿಗೆ ಬಂಧಿಯಾದಂತೆ ತೋರುತ್ತದೆ. ವಾಸ್ತವ ಬದುಕನ್ನು ಎದುರಿಸಲು ಸೋಲುವ ಮನಸ್ಸು ಪ್ರತಿ ದಿನ ರಾತ್ರಿ ಮದ್ಯದ ನಶೆಯಲ್ಲಿ ಬಾಲ್ಯದ ನೆನಪುಗಳಿಗೆ ಜಾರುತ್ತದೆ (ನನ್ನ ಆಯ್ಕೆ ನೀನು ಕಣೋ, ಪು. 89-90). ನೆನಪುಗಳೇ ಅವರನ್ನು ವಾಸ್ತವ ಬದುಕಿನಲ್ಲಿ ಕೈಹಿಡಿದು ನಡೆಸುತ್ತಿವೆ. ಈ ನೆನಪುಗಳಿಗೆ ಹಾಸುಹೊಕ್ಕಾಗಿ ಕನಸುಗಳು ಮುಂದುವರೆಯುತ್ತವೆ. ನೆನಪು ಮತ್ತು ಕನಸಿನ ಮಧ್ಯೆ ಲೇಖಕಿಯ ಜಾಗೃತ ಪ್ರಜ್ಞೆ ವೈಚಾರಿಕತೆಯನ್ನು ಹೆಚ್ಚು ರೂಢಿಸಿಕೊಂಡರೆ ಇನ್ನೂ ಹರಿತವಾದ ಬರಹಗಳು ಹೊರಹೊಮ್ಮಬಹುದು.
ಬೆಲೆ:
ನೂರ ಹತ್ತು ರೂಪಾಯಿಗಳು
ಪ್ರಕಾಶಕರು:
ಅಹರ್ನಿಶಿ ಪ್ರಕಾಶನ , ಜ್ಞಾನ ವಿಹಾರ ಬಡಾವಣೆ , ಕಂಟ್ರಿ ಕ್ಲಬ್ ಎದುರು , ವಿದ್ಯಾನಗರ ಶಿವಮೊಗ್ಗ – ೫೭೭೨೦೩
ದೂರವಾಣಿ: ೯೪೪೯೧೭೪೬೬೨
ಪ್ರಸ್ತುತ ಒಕ್ಕಲಿಗರ ಸಂಘ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಸಾಮೂಹಿಕ ದಂತವೈದ್ಯಕೀಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ. ಲೈಫ್ ಸ್ಕಿಲ್ಸ್ ಮತ್ತು ಪಿಯರ್ ಎಜುಕೇಷನ್, ರಾಜೀವ್ ಗಾಂಧಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯ್ಯೂತ್ ಡೆವೆಲಪ್ಮೆಂಟ್ , ಮಿನಿಸ್ಟ್ರಿ ಆಫ್ ಸ್ಪೋರ್ಟ್ಸ್ ಅಂಡ್ ಯ್ಯೂತ್ ಅಫಾರ್ಸ್ ಭಾರತ ಸರಕಾರ, ತಮಿಳು ನಾಡು ಇಲ್ಲಿಗೆ ಕನ್ಸಲ್ಟೆಂಟ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಸಮತೂಕದ ವಿಮರ್ಶೆ. ಒಂದು ಕೃತಿಯ ಬೆಲೆಕಟ್ಟುವಾಗ ಆ ಕೃತಿಯ ಎಲ್ಲ ಗುಣಾವಗುಣಗಳನ್ನೂ ನೋಡುವ ಕೆಲಸ ಮಾಡಬೇಕಾಗುತ್ತದೆ. ಆ ಕೆಲಸ ಇಲ್ಲಿ ಸರಿಯಾಗಿಯೇ ಆಗಿದೆ. “ನೆನಪು ಮತ್ತು ಕನಸಿನ ಮಧ್ಯೆ ಲೇಖಕಿಯ ಜಾಗೃತ ಪ್ರಜ್ಞೆ ವೈಚಾರಿಕತೆಯನ್ನು ಹೆಚ್ಚು ರೂಢಿಸಿಕೊಂಡರೆ ಇನ್ನೂ ಹರಿತವಾದ ಬರಹಗಳು ಹೊರಹೊಮ್ಮಬಹುದು.” ಇದು ಸಮಂಜಸವಾದ ಸಲಹೆ. ಸಮಯ ಹಾಗೂ ಇನ್ನಿತರ ಇತಿಮಿತಿಗಳನ್ನು ಅರಿತು ಒಂದೇ ಒಂದು ಸಲಹೆ ನೀಡಬಹುದಾದರೆ: ನಮ್ಮ ಕನ್ನಡ ಲಲಿತ ಪ್ರಬಂಧ–ಅದರಲ್ಲೂ ಮಹಿಳಾ ಲಲಿತ ಪ್ರಬಂಧಕಾರರು ಈ ಪ್ರಕಾರದಲ್ಲಿ ಏನು ಕೆಲಸ ಮಾಡಿದ್ದಾರೆ–ಚಾರಿತ್ರಿಕವಾಗಿಯಲ್ಲದಿದ್ದರೂ, ಸಮಕಾಲೀನವಾಗಿ, ಅಲ್ಲಿ ಈ ಪುಸ್ತಕ ಎಲ್ಲಿ ನಿಲ್ಲುತ್ತದೆ ಎನ್ನುವುದನ್ನು ಕೂಡ ನೋಡಬಹುದೇನೋ!