ಡೇವಿಡ್ ಬಾಂಡ್ ಬರೆಯುವ ಚಿತ್ರ ಭಾರತ: ಕೋರ್ಟ್ ಮರಾಠಿ ಚಿತ್ರವಿಮರ್ಶೆ

ವಿದೇಶಿ ಪ್ರೇಕ್ಷಕರಿಗೆ ಈ ಚಿತ್ರ ನೀಡುತ್ತಿರುವ ಸಂದೇಶ ಸ್ಪಷ್ಟವಾಗಿದೆ. ಸಮಸ್ಯೆ ಭಾರತೀಯ ನ್ಯಾಯವ್ಯವಸ್ಥೆಯದ್ದಲ್ಲ; ಬದಲಿಗೆ ಸಮಸ್ಯೆ ಭಾರತ ಮತ್ತು ಭಾರತೀಯರ ನಡವಳಿಕೆಗಳ ಸ್ವರೂಪದ್ದು. ಒಟ್ಟಿನಲ್ಲಿ ನಮಗೆ ಆಧುನಿಕ ಓರಿಯಂಟಲಿಸಂ ಧೋರಣೆಯ ರೂಪವೊಂದು ಇಲ್ಲಿ ಕಾಣಸಿಗುತ್ತದೆ ಹಾಗೂ ಇದು ಮೂಲ ಒರಿಯಂಟಲಿಸಂ ವಿಚಾರಗಳ ರೂಪಕ್ಕೆ ಹೋಲುವಂತೆಯೇ ಇದೆ – ಅವ್ಯವಸ್ಥೆ, ತರ್ಕರಹಿತ ಸ್ಥಿತಿ, ಮೌಢ್ಯತೆ, ಪೂರ್ವಗ್ರಹ ಇವುಗಳನ್ನೆಲ್ಲ ಭಾರತೀಯ ಜೀವನದ ಮೂಲಭೂತ ಗುಣಗಳಂತೆ ತೋರಿಸುವುದು ಹಾಗೂ ಭಾರತದ ಸಮಸ್ಯೆಗಳಿಗೆಲ್ಲ ಇವನ್ನೇ ಕಾರಣವನ್ನಾಗಿ ನೀಡುವುದು..divderspa

ಕೆಲವೇ ಸಿನೆಮಾಗಳು, ೨೦೧೪ರ ಮCOURT-Marathi-Movie-Posterರಾಠಿ ಸಿನೆಮಾ ಕೋರ್ಟ್‍ನಷ್ಟು ಸಮರ್ಪಕವಾಗಿ ‘ಫೆಸ್ಟಿವಲ್ ಸಿನೆಮಾ’ ಎಂದು ಕರೆಸಿಕೊಳ್ಳುತ್ತದೆ. ೪ ಸಪ್ಟೆಂಬರ್ ೨೦೧೪ರಂದು ೭೧ನೇ ವೆನಿಸ್ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕೋರ್ಟ್ ಚಿತ್ರದ ಪ್ರಿಮಿಯರ್ ಪ್ರದರ್ಶನವಾದರೂ ಅದು ಚಿತ್ರೋತ್ಸವಗಳನ್ನು ಸುತ್ತು ಹಾಕಿ, ಅವಾರ್ಡುಗಳನ್ನು ಪಡೆದುಕೊಂಡು ಭಾರತದೊಳಗೆ ಪ್ರದರ್ಶನವಾಗುವಷ್ಟರಲ್ಲಿ ಒಂದು ವರುಷ ಕಳೆದು ಹೋಗಿತ್ತು(೧೫ ಎಪ್ರಿಲ್ ೨೦೧೫). ಸಿನೆಮಾವನ್ನು ರಚಿಸಿ ಹಾಗೂ ನಿರ್ದೇಶಿಸಿದ ತಮ್ಹಾನೆ ಅವರಿಗೆ ಈ ಸಿನೆಮಾದ ಪರಿಕಲ್ಪನೆ ಬಂದಿದ್ದು ಕೂಡ ಹೀಗೆಯೇ ತಮ್ಮ ಕಿರುಚಿತ್ರ ಸಿಕ್ಸ್ ಸ್ಟ್ರಾಂಡ್ಸ್‍ದೊಂದಿಗೆ(೨೦೧೦) ಸಿನಿಮೋತ್ಸವಗಳಲ್ಲಿ ಸಂಚರಿಸುತ್ತಿದ್ದಾಗ. ಈ ರೀತಿಯ “ಫೆಸ್ಟಿವಲ್ ಸಿನೆಮಾ”ಗಳಿಗೆಂದೇ ಮೀಸಲಾದ ಡಚ್ ನಿಧಿಯೊದರಿಂದ ಇದನ್ನು ಭಾಗಶಃ ಪ್ರಾಯೋಜಿಸಲಾಯಿತು. ನಂತರ ಇದು ಅಕಾಡೆಮಿ ಅವಾರ್ಡ್ಸ್‍(ಆಸ್ಕರ್‍ನ “ಅತ್ಯ್ತುತ್ತಮ ಪರಭಾಷಾ ಚಿತ್ರ”)ಗೆ ಭಾರತದ ಅಧಿಕೃತ ಸ್ಪರ್ಧಿಯಾಗಿತ್ತು, ಆದರೆ ನಾಮಿನೇಟ್ ಆಗಿರಲಿಲ್ಲ.

ಮರಾಠೀ ಚಿತ್ರರಂಗಕ್ಕೆ ಸುದೀರ್ಘ ಮತ್ತು ವಿಶಿಷ್ಟ ಇತಿಹಾಸವಿದೆ. ೧೯೪೦ಕ್ಕೂ ಮುಂಚೆ, ಮಹಾರಾಷ್ಟ್ರದಲ್ಲಿ, ಮರಾಠಿ ಚಿತ್ರರಂಗ ಬಾಂಬೆಯಲ್ಲಿ ನೆಲೆಸಿದ್ದ ಹಿಂದಿ ಚಿತ್ರರಂಗದಷ್ಟೇ ಪ್ರಾಮುಖ್ಯತೆಯನ್ನು ಹೊಂದಿತ್ತು ಹಾಗೂ ವಿ.ಶಾಂತಾರಾಮ್ ರಂತ ಅತ್ತುತ್ತಮ ನಿರ್ದೇಶಕರನ್ನು ಪಡೆದಿತ್ತು ಆದರೆ  ಅಂದು  ಪ್ರಬಲವಾಗಿದ್ದ ಕಲ್ಕತ್ತಾದ ಬಂಗಾಳಿ ಚಿತ್ರರಂಗಕ್ಕೆ ೧೯೪೦ರ ಕಾಲದಲ್ಲಿ ನಡೆದ ಯುದ್ಧ, ಬರಗಾಲ, ರಾಜಕೀಯ ಅಸ್ಥಿರತೆ ಮತ್ತು ದೇಶ ವಿಭಜನೆ ಇವುಗಳು ವಿಪತ್ತಾದವು (ಬಂಗಾಳಿ ಚಿತ್ರರಂಗವು ತನ್ನ ನಲವತ್ತು ಶೇಕಡಾ ಪ್ರಾಂತ್ಯವನ್ನು ಹಾಗೂ ಐವತ್ತು ಶೇಕಡಾ ಸಿನೆಮಾಗಳನ್ನೂ ಕಳೆದುಕೊಂಡಿತು). ತನ್ಮೂಲಕ ಬಾಂಬೆ ಚಿತ್ರರಂಗ ಬೆಳೆದದ್ದು ಮರಾಠೀ ಚಿತ್ರ ರಂಗಕ್ಕೆ ದೊಡ್ಡ ಪೆಟ್ಟಾಯಿತು. ಮೊದಲು ಕೊಲ್ಹಾಪುರ ಸಂಸ್ಥಾನದಲ್ಲಿ ಹಾಗೂ ನಂತರ ಪುಣೆಯಲ್ಲಿ ತಳವೂರಿದ್ದ ಮರಾಠಿ ಚಿತ್ರರಂಗ, ಪಂಜಾಬ್ ಮತ್ತು ಬಂಗಾಳದಿಂದ ಹೊಸ ಮುಖಗಳನ್ನು ಪಡೆದ ಬಾಂಬೆ ಚಿತ್ರರಂಗಕ್ಕೆ ಪೈಪೋಟಿ ನೀಡಲು ಅಸಮರ್ಥವಾಯಿತು.

ಇತ್ತೀಚಿನ ವರ್ಷಗಳಲ್ಲಿ ಮರಾಠಿ ಚಿತ್ರರಂಗ ಬಹುಮಟ್ಟಿಗೆ ಚೇತರಿಸಿಕೊಂಡಿದ್ದು, ಬಹಳ ಉತ್ಸಾಹದಿಂದ “ಸ್ಥಾಪಿತ” ಮಾರುಕಟ್ಟೆಯ ತಂತ್ರವನ್ನು ಅನುಸರಿಸುತ್ತಿದೆ. ೧೯೫೦ರ ಸಮಯದಲ್ಲಿ ತನಗೊದಗಿದ ವಿಪತ್ತನ್ನು ಬಂಗಾಳಿ ಸಿನೆಮಾ ಭಾರತೀಯ “ಕಲಾತ್ಮಕ ಸಿನೆಮಾ”ದ ಆವಿಷ್ಕಾರದೊಂದಿಗೆ  ಎದುರಿಸಿತು. ಅಂದಿನಿಂದ ಆರಂಭಿಸಿ ಬಂಗಾಳಿ ಚಿತ್ರ ನಿರ್ಮಾಪಕರು “ಅಂತರಾಷ್ಟ್ರೀಯ” ಮಾರುಕಟ್ಟೆಗೆ ಅನುಸರಿಸಿಕೊಳ್ಳುವತ್ತ ಒಲವು ತೋರಿಸಿದ್ದಾರೆ. ಮರಾಠಿ ಚಿತ್ರರಂಗಕ್ಕೆ ತನ್ನದೇ ಗೂಡಿನಲ್ಲಿರುವ ಥಳುಕಿನ “ಬಾಲಿವುಡ್”ನ ನಿರಂತರ ಸಾನಿಧ್ಯ ಈ ರೀತಿಯ ಮಾರುಕಟ್ಟೆಯ ತಂತ್ರಕ್ಕೆ ಮೊರೆಹೋಗುವಂತೆ ಮಾಡಿದೆ.

Picture22ಕೋರ್ಟ್ ಸಿನೆಮಾ “ಆತ್ಮಹತ್ಯೆಗೆ ಕುಮ್ಮಕ್ಕು” ಎಂಬ ಸಂಪೂರ್ಣ ಹುಸಿಯಾದ ಆರೋಪದ ಮೇಲೆ ವಿಚಾರಣೆಗೊಳಪಟ್ಟ ಒಬ್ಬ ವೃದ್ಧ ಶಿಕ್ಷಕ ಹಾಗೂ ಚಳುವಳಿಗಾರನ ಕಥೆಯನ್ನು ಹೇಳುತ್ತದೆ. ಶೀರ್ಷಿಕೆಯೇ ಹೇಳುವಂತೆ ಸಿನೆಮಾ, ಈ ವ್ಯಕ್ತಿಯ ಮೇಲಿನ ಕೇಸಿನ ಕುರಿತ ವಿಚಾರಣೆಯನ್ನು ಒಂದಿಲ್ಲೊಂದು ನೆಪದಿಂದ, ಮತ್ತೆ ಮತ್ತೆ ಮುಂದೂಡಲಾಗುತ್ತಿರುವ ಸಂದರ್ಭದಲ್ಲಿ, ಕೋರ್ಟಿನ ನಡಾವಳಿಗಳ ಮೇಲೆ ಕೇಂದ್ರೀಕೃತವಾಗಿದೆ. ನಡುನಡುವೆ ಇಬ್ಬರೂ ವಕೀಲರ ಜೀವನಗಳನ್ನು ಸಂಕ್ಷಿಪ್ತವಾಗಿ ತೋರಿಸಲಾಗುತ್ತದೆ; ಆರೋಪಿಯನ್ನು ಸಮರ್ಥಿಸುತ್ತಿರುವ ಯುವ ವಕೀಲ ಮತ್ತು ಪ್ರಾಸಿಕ್ಯೂಷನ್ ಪರ ವಾದಿಸುವ ವಯಸ್ಕ ವಿವಾಹಿತ ಮಹಿಳೆ, ಕೊನೆಗೆ ಬೇಸಿಗೆಯ ವಿರಾಮದಲ್ಲಿ ಕುಟುಂಬದೊಂದಿಗೆ ಹಾಲಿಡೇಗೆಂದು ಹೊರಹೋಗುವ ಜಡ್ಜ್, ಹೀಗೆ.

ಈ ಸಿನೆಮಾದೊಂದಿಗೆ ನನಗೊಂದು ಸಮಸ್ಯೆ ಇದೆ ಹಾಗೂ ಈ ಸಮಸ್ಯೆ ಈ ಸಿನೆಮಾವು ಮೊದಲು ಹೊರದೇಶದ ಪ್ರೇಕ್ಷಕರಿಗೆಂದು ಬರೆದು ಪ್ರದರ್ಶಿಸಿದ್ದು ಎಂಬುದಕ್ಕೆ ನೇರವಾಗಿ ಸಂಬಂಧಿಸಿದೆ. ನನಗೆ ಕೆಲವೊಮ್ಮೆ “ಅನಿವಾಸಿ ಭಾರತೀಯ”ರು ನಿರ್ಮಿಸಿದ(ಉದಾಹರಣೆಗ ಕೆನಡಾದ ನಿರ್ದೇಶಕರಾದ ದೀಪಾ ಮೆಹ್ತಾ ಅವರ ಚಿತ್ರಗಳು) ಸಿನೆಮಾಗಳನ್ನು ನೋಡಿದಾಗ ಮೂಡಿದ ಭಾವನೆಗಳೇ ಇಲ್ಲಿಯೂ ಮೂಡಿದಂತೆನಿಸಿತು. ಪರದೇಶದ ಪ್ರೇಕ್ಷಕರಿಗಾಗಿಯೇ ಪ್ರಮುಖವಾಗಿ ತಯಾರಾದ ಈ ಚಿತ್ರದಲ್ಲಿ ಅದನ್ನು ಅರ್ಥಮಾಡಿಕೊಳ್ಳಲು ಬೇಕಾದ ಸಾಂದರ್ಭಿಕತೆಯನ್ನು ಒದಗಿಸಿಲ್ಲ. ಒಂದು ಸರಳವಾದ ಆದರೆ ಇಡೀ ಸಿನೆಮಾದಲ್ಲಿ ಮಹತ್ವದ್ದಾದ ಉದಾಹಾರಣೆ ಹೇಳುವುದಾದರೆ, “ಆತ್ಮಹತ್ಯೆಗೆ ಕುಮ್ಮಕ್ಕು” ಎನ್ನುವುದರ ವಿರುದ್ಧವಾದ ಕಾನೂನು ವಿವೇಚನೆ ರಹಿತ ಹಾಗೂ ದುರುಪಯೋಗಕ್ಕೆ ತೆರೆದುಕೊಂಡಿರುವುದಾಗಿದ್ದರೂ, ಅದು  ಭಾರತೀಯ ಪೀನಲ್ ಕೋಡ್‍ನಲ್ಲಿ ಇರಲು ನಿರ್ದಿಷ್ಟ ಕಾರಣಗಳಿವೆ. ಆದರೆ ಯುರೋಪ್ ಅಥವಾ ಅಮೇರಿಕಾದ ಪ್ರೇಕ್ಷಕರಿಗೆ ಈ ಕಾನೂನು ಅಸಂಗತವಾಗಿಯೂ ಹಾಗೂ ಇದನ್ನು ಒಂದು ಕೋರ್ಟ್ ಕ್ಷಣಕ್ಕಾಗಿಯಾದರು ಪರಿಗಣಿಸುವುದು ಅಷ್ಟೇ ಅಸಂಬದ್ಧವಾಗಿಯೂ ತೋರುತ್ತದೆ. ಈ ಸಿನೆಮಾದಲ್ಲಿರುವ ಘಟನೆಗಳು ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡ ನಿದರ್ಶನಗಳಂತೆ ಕಾಣುವುದಿಲ್ಲ. ಬದಲಾಗಿ ಯಾವುದೇ ನ್ಯಾಯ ವ್ಯವಸ್ಥೆಯ ಸಂಪೂರ್ಣ ಅನುಪಸ್ಥಿತಿಯ ಕುರಿತು ಹೇಳುತ್ತಿರುವಂತಿದೆ.

ಸಿನೆಮಾದ ನಡುವೆ ನಡುವೆ ಬರುವ ವಕೀಲರು, ಜಡ್ಜ್ ಹಾಗೂ ಅವರು ಕುಟುಂಬಗಳ ಚಿತ್ರಣವು ಇದನ್ನು ಇನ್ನೂ ಜಟಿಲಗೊಳಿಸುತ್ತವೆ. ಇವುಗಳಲ್ಲಿ ಪ್ರತಿಯೊಂದರಲ್ಲಿ ನಡೆಯುವ ಮಾತುಕತೆಗಳು ನೀರಸವಾಗಿದ್ದು ತರ್ಕರಹಿತ, ಮೌಢ್ಯ ಹಾಗೂ ಪೂರ್ವಗ್ರಹಗಳಿಂದ ತುಂಬಿದ ಜಗತ್ತೊಂದನ್ನು ಚಿತ್ರಿಸುತ್ತ ಹೋಗುತ್ತವೆ. ಭಾರತೀಯ ಪ್ರೇಕ್ಷಕರು ಇದನ್ನು ಬಲ ಪಂಥೀಯ ರಾಷ್ಟ್ರೀಯತೆಯ ಧೋರಣೆ ಬೆಳೆಯುತ್ತಿರುವ ಮಹಾರಾಷ್ಟ್ರದಲ್ಲಿಯ ಸಾಮಾಜಿಕ ಹಾಗೂ ರಾಜಕೀಯ ವಿಭಜನೆಗಳ ಸಾಂದರ್ಭಿಕತೆಯಲ್ಲಿ ಅರ್ಥ ಮಾಡಿಕೊಳ್ಳಬಲ್ಲರು. ಆದರೆ ಈ ತೆರನಾದ ಯಾವುದೇ ಸಾಂದರ್ಭಿಕತೆಯ ಅರಿವು ವಿದೇಶಿ ಪ್ರೇಕ್ಷಕರಿಗೆ ಲಭ್ಯವಿರುವುದಿಲ್ಲ ಹಾಗೂ ಸಿನೆಮಾದೊಳಗೆ ಈ ಸಂಬಂಧ ಯಾವುದೇ ರೆಫರೆನ್ಸ್ ಗಳಿಲ್ಲ .

ಸಿನೆಮಾ ಮಧ್ಯಮವರ್ಗದ ಕೆಲ ಅನುಕೂಲಸ್ಥರ ಬದುಕಿನ ಮೇಲೆಯೇ ಸಂಪೂರ್ಣವಾಗಿ ಕೇಂದ್ರೀಕೃತವಾಗಿದ್ದು, ಸಾಮಾನ್ಯ ಜನ ಕ್ಷಣಮಾತ್ರಕ್ಕಷ್ಟೇ ಲಂಚ ತಿನ್ನಿಸಲ್ಪಟ್ಟ ಅಥವಾ ದಮನಿಸಲ್ಪಟ್ಟ ಸಾಕ್ಷಿಗಳ ರೂಪದಲ್ಲಿ ಕಾಣಿಸುತ್ತಾರೆ. ವಿಚಾರಣೆಗೊಳಪಡುತ್ತಿರುವ ವ್ಯಕ್ತಿ ಮುಂಚೆ ಮಿಲ್ ಕಾರ್ಮಿಕನೆಂದು ಹೇಳಲಾಗಿದೆ ಆದರೆ ನಮಗೆ ಆತನನ್ನು ಶಿಕ್ಷಕ ಹಾಗೂ ಚಳುವಳಿಗಾರನ ರೂಪದಲ್ಲಷ್ಟೇ ನೋಡಲು ಸಿಗುತ್ತದೆ, ಅದೂ ವಯಸ್ಸಾಗುತ್ತಿರುವ ಮಧ್ಯಮ ವರ್ಗದ ಎಡ ಪಂಥೀಯನೆಂಬ ಪೋಷಾಕಿನಲ್ಲಷ್ಟೇ. ಆತನ ವರ್ತನೆ ಕೂಡಾ ಆತನದ್ದೇ  ಸನ್ನಿವೇಶವನ್ನು ಇನ್ನಷ್ಟು ಕಷ್ಟಕರವಾಗಿಸುವ ಹಠಮಾರಿ ಅವಿವೇಕಿತನದ್ದೇ ಆಗಿ ತೋರುತ್ತದೆ.

tribunalವಿದೇಶಿ ಪ್ರೇಕ್ಷಕರಿಗೆ ಈ ಚಿತ್ರ ನೀಡುತ್ತಿರುವ ಸಂದೇಶ ಸ್ಪಷ್ಟವಾಗಿದೆ. ಸಮಸ್ಯೆ ಭಾರತೀಯ ನ್ಯಾಯವ್ಯವಸ್ಥೆಯದ್ದಲ್ಲ; ಬದಲಿಗೆ ಸಮಸ್ಯೆ ಭಾರತ ಮತ್ತು ಭಾರತೀಯರ ನಡವಳಿಕೆಗಳ ಸ್ವರೂಪದ್ದು. ಒಟ್ಟಿನಲ್ಲಿ ನಮಗೆ ಆಧುನಿಕ ಓರಿಯಂಟಲಿಸಂ ಧೋರಣೆಯ ರೂಪವೊಂದು ಇಲ್ಲಿ ಕಾಣಸಿಗುತ್ತದೆ ಹಾಗೂ ಇದು ಮೂಲ ಒರಿಯಂಟಲಿಸಂ ವಿಚಾರಗಳ ರೂಪಕ್ಕೆ ಹೋಲುವಂತೆಯೇ ಇದೆ – ಅವ್ಯವಸ್ಥೆ, ತರ್ಕರಹಿತ ಸ್ಥಿತಿ, ಮೌಢ್ಯತೆ, ಪೂರ್ವಗ್ರಹ ಇವುಗಳನ್ನೆಲ್ಲ ಭಾರತೀಯ ಜೀವನದ ಮೂಲಭೂತ ಗುಣಗಳಂತೆ ತೋರಿಸುವುದು ಹಾಗೂ ಭಾರತದ ಸಮಸ್ಯೆಗಳಿಗೆಲ್ಲ ಇವನ್ನೇ ಕಾರಣವನ್ನಾಗಿ ನೀಡುವುದು..

೧೯೮೦ರ ಸಮಯದಲ್ಲಿ ಒಮ್ಮೆ, ರಾಜ್ಯಸಭೆಗೆ ಆಗಷ್ಟೇ ನೇಮಿಸಲ್ಪಟ್ಟಿದ್ದ ನಿವೃತ್ತ ನಟಿ ನರ್ಗಿಸ್, ಸತ್ಯಜಿತ್ ರೇ ಅವರು ತಮ್ಮ ಸಿನೆಮಾಗಳ ಮುಖೇನ ಭಾರತದ ಬಡತನವನ್ನು “ರಫ್ತು” ಮಾಡುತ್ತಿದ್ದಾರೆಂದು ಸಾರ್ವಜನಿಕವಾಗಿ ಆರೋಪಿಸಿದ್ದರು. ಈ ಹೇಳಿಕೆಯ ಕುರಿತಾದ ಸಂದರ್ಶನದಲ್ಲಿ ಆಕೆ ಋಣಾತ್ಮಕ ಚಿತ್ರಣಗಳಿಗೆ ಪ್ರತಿಯಾಗಿ ಧನಾತ್ಮಕ ಚಿತ್ರಣಗಳನ್ನು ನೀಡುತ್ತ ಸಮತೋಲನ ಕಾಯಬೇಕೆಂದು ವಾದಿಸಿದ್ದರು. ಇನ್ನೂ ವಿಸ್ತಾರವಾಗಿ ಅವರ ನಿಲುವನ್ನು ಕೇಳಿದಾಗ, ಸ್ವಲ್ಪ ಹಿಂಜರಿದು ಕೊನೆಗೆ  “ಅಣೆಕಟ್ಟುಗಳು”( ಡ್ಯಾಮ್ಸ್!) ಎಂಬ ಒಂದೇ ಪದವನ್ನು ಬಾಲಿಶವಾಗಿ ಉದ್ಗರಿಸಿದ್ದರು. ಇವೆಲ್ಲ ಬುದ್ಧಿಗೇಡಿತನದ ಮಾತುಗಳು. ಚಲನಚಿತ್ರ ನಿರ್ಮಿಸುವವರಿಗೆ ಭಾರತೀಯ ಸಮಾಜದ ಯಾವ ಅಂಶವನ್ನು ಬೇಕಾದರೂ ತೋರಿಸುವ ಹಕ್ಕಿದೆ. ಋಣಾತ್ಮಕವೋ, ಧನಾತ್ಮಕವೋ, ಅವರು ನರ್ಗಿಸ್ ಹೇಳಿದ ಟೊಳ್ಳು ರೀತಿಯಲ್ಲಿ ಎಲ್ಲವನ್ನೂ ಸರಿದೂಗಿಸಬೇಕಾದ ಹಂಗೇನೂ ಇಲ್ಲ.

ಆದರೆ ಒಬ್ಬ ನಿರ್ದೇಶಕರಿಗೆ ಸಿನೆಮಾದಲ್ಲಿ ಮಾಡಲಾಗುತ್ತಿರುವ ಟೀಕೆಗೆ ಸಾಮಾಜಿಕ ಹಾಗೂ ರಾಜಕೀಯ ಸಾಂದರ್ಭಿಕತೆಯನ್ನು ನೀಡುವ ಜವಾಬ್ದಾರಿ ಇರುತ್ತದೆ. ಒಂದು ಸಿನೆಮಾ ಪ್ರೇಕ್ಷಕರಿಗೆ ಸಿನೆಮಾದೊಳಗಡೆಯೇ ಸಾಕಷ್ಟು ರೆಫರೆನ್ಸುಗಳನ್ನು ನೀಡಿ ಅದನ್ನು ಪರಿಣಾಮಕಾರಿಯಾಗಿಸಬೇಕೆ ವಿನಃ ಪ್ರೇಕ್ಷಕನ ಸೀಮಿತ ತಿಳುವಳಿಕೆಯ ಮೇಲಲ್ಲ. ಕೋರ್ಟ್ ಎರಡು ಕಾರಣಗಳಿಂದ ಕಾಡುತ್ತದೆ. ಭಾರತೀಯ ನ್ಯಾಯ ವ್ಯವಸ್ಥೆಯನ್ನು ಚಿತ್ರಿಸುವಲ್ಲಿ ಇದು ನ್ಯಾಯಯುತವಾಗಿಯೇ ಕಾಡಿದರೆ, ನಿರ್ದೇಶಕರು ಯಾವ ಪ್ರೇಕ್ಷಕರನ್ನು ಗುರಿಯಾಗಿಸಿ ಯಾವ ರೀತಿಯ ಪ್ರತಿಕ್ರಿಯೆಯನ್ನು ಉದ್ದೀಪಿಸಲು ಪ್ರಯತ್ನಿಸುತ್ತಿದ್ದಾರೆಂಬ ಸಂದೇಹದೊಂದಿಗೆ ನಿರ್ದೇಶಕನ ಉದ್ದೇಶದ ಮೇಲೆ ಅನುಮಾನ ಹಾಗೆಯೇ ಉಳಿಯುತ್ತದೆ.

ಕನ್ನಡಾನುವಾದ : ಸುಬ್ರಮಣ್ಯ ಹೆಗ್ಡೆ

ಇಂಗ್ಲೀಷಿ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

 

ಪ್ರತಿಕ್ರಿಯಿಸಿ