ಲಕ್ಷ್ಮೀನಾರಾಯಣ ಅವರ ಕವಿತೆ – ಶಂಕಿಸಿದರೆಲ್ಲವ್ವ!

ಶಂಕಿಸಿದರೆಲ್ಲವ್ವ
ಪರಪುರುಶನ ತೊಡೆಯಲ್ಲಿ ಪವಡಿಸಿದೆಯೆಂದು
ನಿನ್ನ ಘನ ಪಾತಿವ್ರತ್ಯೆಯ
ಪರಂಪರೆಯ ಮೂಸೆಯಲ್ಲಿಟ್ಟು
ಶೀಲವ!
ಕರಿಮೈಯ ಇರುವೆಯಂತೆ
ಕಂಡರಲ್ಲ ಅಲ್ಲೊಂದು
ಬೆಳ್ಳಿಚುಕ್ಕಿ
ಅರಣ್ಯದ ಗೌಗ್ಗತ್ತಲಲಿ ಕೆಟ್ಟ ಬದುಕಿಗೆ
ಆಶ್ರಯವ ಬಯಸಿದ
ಸುಕೋಮಲೆ
ನಿನ್ನ ಸೆರಗ ತುಂಬ ಅರಳಿದ್ದು
ಕೆಂಡಸಂಪಿಗೆ
ತಳಿರಿನೋಲೆಯ ತೊಟ್ಟು
ಹಕ್ಕಿಗಳ ಸಂಗದಲಿ ಭೃಂಗವಾಗಿ
ಹೂಮೆದೆಯಲಿ ನೆಗೆದು
ತಿಳಿಜಲದಲಿ ಕಣ್ಣ ತಳತೊಳೆದು
ಹಣ್ಣು ಹಂಪಲುಗಳ ಕಂಪಲ್ಲಿ
ಮಂಪರಿಗಿಳಿದ ಓ ಮುದ್ದು ಚೆಲುವೆ
ಆ ಕಗ್ಗಾಡ ನೆಲದಲ್ಲಿ ನಿನ್ನ ಬೆಲ್ಲದ ಮೈ
ಮುತ್ತಲು ಸಾಲು ಇರುವೆ!
ಕಾಡ ನಿದ್ದೆಯಲ್ಲೂ ಕಾಡುವ ನಲ್ಲನ
ನೆನಪುಗಳಿಗೆ ಬಿಳಿಯ ನಕ್ಷತ್ರದಂತೆ
ಕಾಡ ಕಗ್ಗತ್ತಲೆಯಲ್ಲಿ
ಕಂಗೊಳಿಸುತ್ತಿದ್ದ ನಡುರಾತ್ರಿಯ
ಗೂಬೆಯ ಊಳಿಗೆ ಗೋಳಿಡುವ
ನಿನ್ನ ಕಣ್ಣರೆಪ್ಪೆಗೆ ಅದೆಷ್ಟು ಬೇನೆ!
ಶಿವನ ಜಟೆಯಲ್ಲಿದ್ದ ಚಂದ್ರ ಒಣದಳಿರ
ಮೇಲೆ ಮಲಗಿದ್ದಾನೆ!
ನೆಟ್ಟ ಮುಳ್ಳಿನ ಕಲೆಗಳು ಅಂಗಾಲಲಿ
ಜೀವ ನೀಗುವ ಮೊದಲೇ ಮತ್ತೊಂದು
ಮಗದೊಂದು ಲೆಕ್ಕಿಸದೆ ಹೊಕ್ಕಿದರು
ಹಿಡಿದ ಹಠವನು ಬಿಡದೆ ಕಷ್ಟಗಳ
ನುಂಗುವ ಕಲ್ಲೆದೆಯ ಮೇಲೆ ನಲ್ಲನದೇ
ಹೆಸರು ನಿನ್ನ ನಿಟ್ಟುಸಿರ ರಭಸಕೇ
ನಡುಗೋ ಭೂತಾಯ ಒಡಲು!
ಪಟ್ಟದರಸಿಯ ತೊಡೆಯಲ್ಲಿ
ನೆಟ್ಟಿದ ನೆನಪುಗಳು ಇರಿಯುತ್ತಿವೆ
ಒಂದೊಂದೇ ಮೌನದಣ್ಣಿ ಮೇಲೆ
ಹೊಂಬಾಳೆಯಂತೆ ಕನಸುಗಳು ಹರಡಿದರೂ
ಕರಗಲಿಲ್ಲವ್ವ ಬಿಸಿಲು ತಾಕಿದ ಹಿಮವು
ಕಾಡ ಕತ್ತಲೆಯಲ್ಲಿ
ಬೆಳಕ ಹುಡುಕುವ ತವಕ
ನಿಲ್ಲಲಿಲ್ಕ ನಿನ್ನ ಅಲೆಮಾರಿ ಪಯಣ
ಯಾರವ್ವ ಸಾಡಿ ನಿನ್ನ ಘೋರ ತಪಕೆ
ನನ್ನವ್ವನಂತೆ ನೀನು ಗರತಿ!
ಆ ಕಾಡ ಸುಖದ ಸುಪ್ಪತ್ತಿಗೆಯ ಸ್ವಪ್ನದಲ್ಲೂ
ನಲ್ಲನ ತೊಡೆದಗುಲಿ ಬೆಚ್ಚಿದ ಓ ತಾಯೇ
ಹೇಳವ್ವ ಮೌನಸುಟ್ಟು ಬಿಸಿ ತುಪ್ಪದ ಅರಿವೆ
ನಿನ್ನೆದೆಯಲ್ಲ ಅದೆಷ್ಟು ನೋವ ಕಡಲು?

 

 

ಪ್ರತಿಕ್ರಿಯಿಸಿ