ಕಾಮರೂಪಿ (ಎಂ. ಎಸ್. ಪ್ರಭಾಕರ) ಸಂದರ್ಶನ – ಭಾಗ ೧

“ಕಾಮರೂಪಿ” ಎಂದೇ ನಾಡಿನ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿರುವ ಎಂ . ಎಸ್ . ಪ್ರಭಾಕರ ಕೋಲಾರದವರು . ಪೂರ್ಣ ಹೆಸರು ಮೊಟ್ಣಹಳ್ಳಿ ಸೂರಪ್ಪ ಪ್ರಭಾಕರ. ಪತ್ರಕರ್ತರೂ , ಅಧ್ಯಾಪಕರೂ ಆಗಿದ್ದ ಅವರು ತಮ್ಮ ಓದು – ಉದ್ಯೋಗಗಳ ಕಾರಣಕ್ಕೆ ಸರಿಸುಮಾರು ನಾಲ್ಕು ದಶಕಗಳಷ್ಟು ಧೀರ್ಘಕಾಲ ಕರ್ನಾಟಕದಿಂದ ಹೊರಗೆ ನೆಲೆಸಿದರು . ದಕ್ಷಿಣ ಆಫ್ರಿಕಾದ ಸ್ತಿತ್ಯಂತರಗಳನ್ನು ಅಲ್ಲಿಯೇ ಇದ್ದು ವರದಿ ಮಾಡಿದ ಭಾರತೀಯ ವರದಿಗಾರರಲ್ಲಿ ಇವರದ್ದು ಪ್ರಮುಖ ಹೆಸರು .

ವೃತ್ತಿ ಜೀವನದ ಜಾಸ್ತಿ ಸಮಯವನ್ನು ಕಳೆದದ್ದು ಅಸ್ಸಾಂ . ಪ್ರಾಚೀನ ಅಸ್ಸಾಂನ ಹೆಸರು ಕಾಮರೂಪ. ಸುದೀರ್ಘ ಕಾಲ ಅಸ್ಸಾಂನಲ್ಲಿದ್ದುದರಿಂದಲೋ ಏನೊ, ಪ್ರಭಾಕರರಿಗೆ ಆ ಹೆಸರು ಪ್ರಿಯವಾಗಿರಬೇಕು. ಕನ್ನಡದಲ್ಲಿ ಪ್ರಭಾಕರರು ಬರೆದದ್ದು ಕಡಿಮೆ . `ಒಂದು ತೊಲ ಪುನುಗು ಮತ್ತು ಇತರ ಕತೆಗಳು’, ಕಿರು ಕಾದಂಬರಿಗಳಾದ `ಕುದುರೆ ಮೊಟ್ಟೆ’ ಮತ್ತು ಅಂಜಿಕಿನ್ಯಾತಕಯ್ಯ ‘ ಇವರ ಪ್ರಮುಖ ಸಾಹಿತ್ಯ. “ನನ್ನ ಮಟ್ಟಿಗೆ ನಾನು ಒಬ್ಬ ಆಕಸ್ಮಿಕ ಬರೆಹಗಾರ. ಇಂಗ್ಲಿಷ್ನಲ್ಲಿ ಹೇಳಿದರೆ ಆಕ್ಸಿಡೆಂಟಲ್ ರೈಟರ್. ” ಎಂದು ಅವರೇ ಹೇಳಿಕೊಂಡಿದ್ದಾರೆ. ಅಣಕ, ವ್ಯಂಗ್ಯ, ಕೀಟಲೆ, ಗಾಂಭೀರ್ಯದ ಬಲೂನನ್ನು ಚುಚ್ಚುವ ಧಾರ್ಷ್ಟ್ಯ, ಇವೆಲ್ಲ ಅವರ ಮೂರು ಕೃತಿಗಳಲ್ಲಿ ತಕ್ಕಮಟ್ಟಿಗಿದ್ದರೂ ಅವು ಕನ್ನಡ ಕಥನ ಸಾಹಿತ್ಯಕ್ಕೆ ತಂದುಕೊಟ್ಟ ಹೊಸ ಸಂವೇದನೆ, ನಿರೂಪಣಾ ತಂತ್ರ, ಕಾಣ್ಕೆಗಳಿಂದಾಗಿ ಮುಖ್ಯವಾಗುತ್ತವೆ.

ಕೋಲಾರದಲ್ಲಿ ಆರಂಭಿಕ ವಿದ್ಯಾರ್ಥಿ ಜೀವನ . ನಂತರದಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ . ಬೆಂಗಳೂರು , ಧಾರವಾಡ , ಗೌಹಾಟಿಯಲ್ಲಿ ಇಂಗ್ಲೀಶ್ ಬೋಧನೆ . ಈ ಮಧ್ಯೆ ಕನ್ನಡದಲ್ಲಿ ಸೃಜನಶೀಲ ಸಾಹಿತ್ಯ ರಚನೆ . ಅಧ್ಯಯನಕ್ಕಾಗಿ ಅಮೆರಿಕ ಪ್ರವಾಸ . ಹಿಂದಿರುಗಿದ ಬಳಿಕ ಮತ್ತೆ ಅಧ್ಯಾಪಕ ವೃತ್ತಿ , ಮುಂದೆ ಮುಂಬೈ ಯ ‘ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲೀ ‘ ಯಲ್ಲಿ ಪತ್ರಕರ್ತನಾಗಿ ವೃತ್ತಿಜೀವನ ಆರಂಭ . ” ದಿ ಹಿಂದೂ ” ಪತ್ರಿಕೆಗಾಗಿ ಈಶಾನ್ಯ ರಾಜ್ಯಗಳ ವರದಿಗಾರನಾಗಿ ಕೆಲಕಾಲ ಕೆಲಸ ಮಾಡಿದ ನಂತರ ದಕ್ಷಿಣ ಆಫ್ರಿಕಾದ ವರದಿಗಾರರಾದರು. ಹಿಂದಿರುಗಿದ ನಂತರ ಪುನ: ಕಾಮರೂಪಕ್ಕೆ ಮರಳಿದರು . ಸದ್ಯ ಕೋಲಾರದ ತಮ್ಮ ಮನೆಯಲ್ಲಿ ಎಂಬತ್ತರ ಹರೆಯದಲ್ಲಿ ರಾಶಿ ಪುಸ್ತಕಗಳು ಮತ್ತು ಲ್ಯಾಪಟಾಪಿನೊಂದಿಗೆ ಏಕಾಂಗಿಯಾಗಿ ಹೊರ ಜಗತ್ತನ್ನ ನೋಡುತ್ತ ಕುಳಿತಿದ್ದಾರೆ.ಸಂದರ್ಶನ ದಿನಾಂಕ : 18 ಮಾರ್ಚ್ , 2017
ಸಂದರ್ಶಕರು : ಅವಿನಾಶ್. ಜಿ
ಛಾಯಾಗ್ರಹಣ : ವಿವೇಕ್ ಎಸ್.ಕೆ | ಕುಂಟಾಡಿ ನಿತೇಶ್
ಸಂಕಲನ : ವಿವೇಕ್ ಎಸ್.ಕೆ
ಇಂಗ್ಲೀಶ್ ಉಪಶೀರ್ಷಿಕೆಗಳು : ಅನುರೂಪ ರವೀಂದ್ರ | ಅಮೂಲ್ಯ ಅರಸಿನಮಕ್ಕಿ

 

2 comments to “ಕಾಮರೂಪಿ (ಎಂ. ಎಸ್. ಪ್ರಭಾಕರ) ಸಂದರ್ಶನ – ಭಾಗ ೧”
  1. Pingback: ಋತುಮಾನ | ಕಾಮರೂಪಿ (ಎಂ. ಎಸ್. ಪ್ರಭಾಕರ) ಸಂದರ್ಶನ – ಭಾಗ ೨

  2. Pingback: ಋತುಮಾನ | ಕಾಮರೂಪಿ (ಎಂ. ಎಸ್. ಪ್ರಭಾಕರ) ಸಂದರ್ಶನ – ಭಾಗ ೩ (ಕೊನೆಯ ಭಾಗ)

ಪ್ರತಿಕ್ರಿಯಿಸಿ