ಟಿಪ್ಪು ಸುಲ್ತಾನ್ ಮತ್ತು ನಗದು ರಹಿತ ವ್ಯವಹಾರ

ಭಾರತ ಸರ್ಕಾರ ನಗದು ರಹಿತ ವ್ಯವಹಾರವನ್ನು ಅಳವಡಿಸಿಕೊಂಡ ಬೆನ್ನಲ್ಲೇ ಮರೆತುಹೋದ ಇತಿಹಾಸದ ಪುಟಗಳಲ್ಲಿನ ನಗದು ರಹಿತ ವ್ಯವಹಾರ, ಅದಕ್ಕಾಗಿ ದೇಶೀಯ ಅರಸರು ವಿದೇಶಗಳೊಡನೆ, ಅದರಲ್ಲೂ ಯುರೋಪಿನ ದೇಶಗಳೊಡನೆ ವಿಜ್ಞಾನ, ತಂತ್ರಜ್ಞಾನಗಳ ವಿನಿಮಯ ಮಾಡಿಕೊಂಡಿದ್ದು ಒಂದೊಂದೇ ಕಣ್ಣೆದುರಿಗೆ ಬಂದು ನಿಲ್ಲುತ್ತಿವೆ.

ಮೈಸೂರು ರಾಜ್ಯವನ್ನು ಆಳಿದ ಟಿಪೂ ಸುಲ್ತಾನ್ ಕೂಡಾ ಇಂಥಹ ನಗದು ರಹಿತ ವ್ಯವಹಾರವನ್ನೇ ಜಾರಿಯಲ್ಲಿ ತಂದಿದ್ದ ಎಂಬ ಮಹತ್ವದ ಅಂಶವನ್ನು ನಾನು ನನ್ನ 15  ವರ್ಷಗಳ ಟಿಪ್ಪುವಿನ ಕುರಿತಾದ ಸಂಶೋಧನೆಗಳಿಂದ ಹೇಳಬಲ್ಲೆ .

ಶಿಕಾರಪುರದ ತಿಪ್ಪಾಜಿಯವರು ಚಿತ್ರಿಸಿದ ಟಿಪ್ಪುವಿನ ಚಿತ್ರ . 1790ರಲ್ಲಿ ಟಿಪ್ಪು ಶಿಕಾರಪುರಕ್ಕೆ ಭೇಟಿಕೊಟ್ಟಾಗ ತಿಪ್ಪಾಜಿಯವರು ಅಲ್ಲಿಗೆ ಹೋಗಿ ಈ ಚಿತ್ರ ಬಿಡಿಸಿದರೆಂಬ ಪ್ರತೀತಿ ಇದೆ . ಈ ವರೆಗೆ ಗುರುತಿಸಲಾದ ಟಿಪ್ಪುವಿನ ಚಿತ್ರ ಬಿಡಿಸಿದ ಭಾರತೀಯ ಚಿತ್ರಕಾರರು ಬಹುಶ : ಇವರೊಬ್ಬರೇ . ಇನ್ನುಳಿದ ಚಿತ್ರಕಾರರ ಮಾಹಿತಿಗಳು ಈ ವರೆಗೆ ಲಭ್ಯವಿಲ್ಲ .

ಕ್ರಿ.ಶ.1787ರಲ್ಲಿ ಭಾರತದ ಕರಾವಳಿಯಿಂದ ನಿರ್ಗಮಿಸಿದ ಟಿಪೂ ಸುಲ್ತಾನನ ರಾಯಬಾರಿ ದರ್ವೇಶ ಖಾನ್ ಫ್ರಾಂಸಿನ ದೊರೆ 16ನೇ ಲೂಯಿಯ ಬಳಿ , ಮೈಸೂರಿನಿಂದ  ವಿವಿಧ ರೀತಿಯ ಹೂಗಿಡಗಳನ್ನು ಆ ದೇಶಕ್ಕೆ ಕಳುಹಿಸಿಕೊಡುವುದರ ಪ್ರತಿಯಾಗಿ ತನ್ನ ದೇಶಕ್ಕೆ ತಂತ್ರಜ್ಞರನ್ನು, ಕುಶಲ ಕಾರ್ಮಿಕರನ್ನು ಮತ್ತು ನುರಿತ ವೈದ್ಯರನ್ನು ಕಳುಹಿಸಿ ಕೊಡುವಂತೆ ಕೇಳುತ್ತಾನೆ .

ದರ್ವೇಶ ಖಾನ್ ನ  ವಿನಮ್ರತೆಯ ವಿನಂತಿಗೆ ಸಮ್ಮತಿಸಿದ ಪ್ರಾನ್ಸ್ ದೊರೆ ಮೈಸೂರಿನಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆ ಅಭಿವೃದ್ಧಿಗೆ ಹಾಗೂ ಹೊಸ ಉದ್ದಿಮೆಗಳನ್ನು ಸ್ಥಾಪಿಸಲು ಅಗತ್ಯವಿರುವ ಕುಶಲಕರ್ಮಿಗಳು ಮತ್ತು ತಂತ್ರಜ್ಞರನ್ನು ಕಳುಹಿಸಿಕೊಡಲು ಒಪ್ಪಿರುವುದಾಗಿ ಅಲ್ಲಿಯ ರಾಯಬಾರಿ ತಿಳಿಸಿದ ಉಲ್ಲೇಖವೂ ಇದೆ .

ಬ್ರಿಟಿಷ್ ಲೈಬ್ರರಿಯಲ್ಲಿರುವ ಇಂಡಿಯಾ ಆಫೀಸ್ ರೆಕಾರ್ಡ್ಸ್ (India Office Records  – The British Library) ವಿಭಾಗದಲ್ಲಿ ಸಂರಕ್ಷಿಸಿಡಲಾದ  , ಫ್ರೆಂಚ್ ಕೋರ್ಟ್ನಲ್ಲಿದ್ದ ಬ್ರಿಟಿಷ್ ಗೂಡಾಚಾರರಿಂದ ಸಂಗ್ರಹಿಸಲ್ಪಟ್ಟ ದಾಖಲೆಗಳಲ್ಲಿರುವ  ಟಿಪ್ಪು ಫ್ರೆಂಚ್ ದೊರೆಗೆ ಬರೆದ ಪತ್ರಗಳಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದೆ . ಆ ಪತ್ರದ ಪ್ರಕಾರ ತೋಪುಗಳ ತಯಾರಿಕೆಗೆ 10 ಜನ, 10 ಜನ ಗುಂಡು ತಯಾರಕರು, 10 ಜನ ಬಾಂಬ್ ಉತ್ಪಾದನೆಗೆ ಕಬ್ಬಿಣದ ಕುಲುಮೆ ಕಾರ್ಮಿಕರು, 10 ಜನ ಪಿಂಗಾಣಿ ಕೆಲಸಗಾರರು, 10 ಜನ ಗಾಜು ಕಾರ್ಮಿಕರು, 10 ಜನ ಉಣ್ಣೆ ಕಾರ್ಮಿಕರು, 10 ಜನ ಗಡಿಯಾರ ತಯಾರಕರು, 10 ಜನ ಜವಳಿ ಉತ್ಪಾದಕರು, 10 ಜನ ಪ್ರಾಚೀನ ಭಾಷೆಗಳ ಮುದ್ರಕರು, 10 ನೇಕಾರರು, ಓರ್ವ ಕೌಶಲ್ಯಯುತ ವೈದ್ಯ ಮತ್ತು ಓರ್ವ ಸರ್ಜನ್, ಓರ್ವ ಇಂಜಿನೀಯರ್, ಓರ್ವ ಮದ್ದು ಗುಂಡುಗಳನ್ನು ತಯಾರಿಸುವವ, ಕರ್ಪೂರ ಮರ, ಯುರೋಪಿಯನ್ ಮರ ಬೆಳೆಸುವವ, ವಿವಿಧ ಬಗೆಯ ಹೂಗಿಡಗಳ ಬೀಜಗಳು, ಮತ್ತು ಇದರ ನಿರ್ವಹಣೆಗಾಗಿ 10 ಜನ ನುರಿತ ತೋಟಗಾರಿಕಾ ತಜ್ಞರನ್ನು ಕಳುಹಿಸಿಕೊಡುವಂತೆ ಟಿಪೂ ಉಲ್ಲೇಖಿಸಿದ್ದಾನೆ.

ಟಿಪೂವಿನ ವಿನಂತಿ ಮೇರೆಗೆ ಎಷ್ಟು ಕಾರ್ಮಿಕರು ಮೈಸೂರಿಗೆ ಬಂದಿದ್ದರು ಎಂಬುದನ್ನೂ ಅದರಲ್ಲಿ ಪ್ರಸ್ತಾಪಿಸಲಾಗಿದೆ. ಅದರ ಪ್ರಕಾರ 10 ತೋಪು ತಯಾರಕರು, 10 ಗುಂಡು ತಯಾರಕರು, 10 ಬುಲೆಟ್ ತಯಾರಕರು, 10 ಪಿಂಗಾಣಿ ತಯಾರಕರು, 10 ಗಾಜು ತಯಾರಕರು, 10 ನೇಕಾರರು, 10 ತಾಪಿಸಟ್ರಿ ತಯಾರಕರು, 10 ಗಡಿಯಾರ ತಯಾರಕರು, 10 ಕೃಷಿ ತಜ್ಞರು, ಇಬ್ಬರು ಪುರಾತನ ಭಾಷಾ ಮುದ್ರಕರು, ಓರ್ವ ಚಿಕಿತ್ಸಕ , ಓರ್ವ ಸರ್ಜನ್, ಇಬ್ಬರು ಇಂಜಿನೀಯರ್‍ಗಳು, ಮತ್ತು ಇಬ್ಬರು ಗಾರ್ಡನರ್‍ಗಳನ್ನು ಪ್ರಾನ್ಸ್ ದೊರೆ ಮೈಸೂರಿಗೆ ಕಳುಹಿಸಿಕೊಟ್ಟಿದ್ದ ಎಂಬ ಈ ವಿವರವಾದ ಮಾಹಿತಿ ಆ ವೇಳೆಯಲ್ಲೇ ಪ್ರಾನ್ಸ್ ಮೈಸೂರಿಗೆ ಯಾವ ಯಾವ ರೀತಿಯಲ್ಲಿ ಸಹಾಯ ಮಾಡಲು ಮುಂದಾಗಿತ್ತು ಎಂಬುದನ್ನೂ ಹೇಳುತ್ತದೆ . ಅದೇ ಸಂದರ್ಭದಲ್ಲಿ ಭಾರತದ ಬೇರೆ ಬೇರೆ ಭಾಗಗಳಲ್ಲಿ ಅನೇಕರು ಟಿಪೂವಿನ ಸಮಕಾಲಿನ ಅರಸರಿದ್ದರೂ ಅವರೆಲ್ಲ ಯುರೋಪಿನಿಂದ ಶಸ್ತ್ರಾಸ್ತ್ರ, ಗಡಿಯಾರ, ಬಟ್ಟೆ ಮತ್ತು ಪುಸ್ತಕಗಳನ್ನು ತರಿಸಿಕೊಳ್ಳಲು ಹೇರಳವಾದ ಹಣವನ್ನು ವ್ಯಯ ಮಾಡುತ್ತಿದ್ದರು ಎಂಬುದನ್ನು ನೋಡಿದಾಗ ಇಲ್ಲಿ ಟಿಪೂವಿನಂಥಹ ಆಡಳಿತಗಾರ ಯುರೋಪಿನ ವ್ಯಾಪಾರ ಪದ್ಧತಿಯನ್ನು ತಿಳಿದುಕೊಳ್ಳಲು ಉತ್ಸುಕನಾಗಿದ್ದಲ್ಲದೆ ತನ್ನ ಸಾಮ್ರಾಜ್ಯದಲ್ಲಿಯೇ ಯುರೋಪಿನ ತಂತ್ರಜ್ಞಾನವನ್ನು ಬಳಸಿ ಉತ್ಪಾದನೆಗೆ ಮುಂದಾಗಿದ್ದುದು ಟಿಪೂವಿನ ನಗದು ರಹಿತ ವ್ಯವಸ್ಥೆಗೆ ಉತ್ತಮ ನಿದರ್ಶನವಾಗಿದೆ.

18ನೇ ಶತಮಾನದ ಕೊನೆ ಭಾಗದಲ್ಲಿ ಮೈಸೂರಿನ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಉತ್ಪಾದನೆ ಮತ್ತು ಕಾರ್ಯಕ್ಷಮತೆಯಲ್ಲಿ ಅದಾಗಲೇ ಉತ್ತುಂಗಕ್ಕೇರಿತ್ತು. ಬ್ರಿಟಿಷರ ನಿಯಂತ್ರಣದಲ್ಲಿದ್ದ ಟಿಪೂವಿನ ನೆರೆ ರಾಜ್ಯಗಳ ಕಾರ್ಮಿಕರ ಜೀವನ ಮಟ್ಟಕ್ಕೆ ಹೋಲಿಸಿದರೆ ಟಿಪೂವಿನ ರಾಜ್ಯದ ಕಾರ್ಮಿಕ ಜೀವನ ಮಟ್ಟ ಗಣನೀಯವಾಗಿ ಉತ್ತಮವಾಗಿತ್ತು.

ಕ್ರಿ.ಶ.1785ರಲ್ಲಿ ಟಿಪೂ ತನ್ನ ರಾಯಬಾರಿಗಳನ್ನು ಕಾನ್‍ಸ್ಟಾಂಟಿನೋಪಲ್‍ಗೆ ಕಳುಹಿಸಿಕೊಟ್ಟಾಗ ಅವರಿಗೆ ಕೇವಲ ಸೈನಿಕ ಸಹಾಯದ ಬದಲಾಗಿ ಮುಖವಾಡ, ಬಂದೂಕು, ಗಾಜು, ಚೀನಿಮಣ್ಣಿನ ವಸ್ತುಗಳು ಮೊದಲಾದವುಗಳನ್ನು ತಯಾರಿಸುವವರನ್ನು ಕರೆದೊಯ್ಯುವಂತೆ ಅಲ್ಲಿನ ದೊರೆ ಸೂಚಿಸಿದ್ದಾಗಿ ಉಲ್ಲೇಖಿತವಾಗಿದೆ.  ಈ ವಸ್ತುಗಳನ್ನು ಟಿಪ್ಪು  ಸ್ವೀಕರಿಸಿದ ಯಾವುದೇ ಉಲ್ಲೇಖಗಳಿಲ್ಲ . ಆದರೆ ಟಿಪ್ಪುವಿಗೆ ಪ್ರಾನ್ಸಿನ ಜೊತೆಗಿದ್ದ ಸ್ನೇಹದ ಕುರಿತಾಗಿ ಬ್ರಿಟೀಷರಿಂದ ಅರಿತಿದ್ದ ತುರ್ಕಿಯ ಅಟ್ಟೊಮನ್ ಖಲಿಫ ಟಿಪೂವಿಗೆ ಯಾವ ಸಹಾಯವನ್ನೂ ಮಾಡಲು ಮುಂದಾಗಲಿಲ್ಲ. ಮಧ್ಯಪ್ರಾಚ್ಯದ ತುರ್ಕಿ ಸಾಮಾಜ್ರದ ಮೇಲೆ ಫ್ರಾನ್ಸಿನ ನೆಪೊಲಿಯನ್ ಬೊನಾಪಾರ್ಟೆಯ ಆಕ್ರಮಣಗಳು ಸ್ವಾಭಾವಿಕವಾಗಿಯೇ ಕಾನ್‍ಸ್ಟಾಂಟಿನೋಪಲಿನ ದೊರೆಯನ್ನು ಕಂಗೆಡಿದಿದ್ದವು .

ಭಾರತೀಯ ಚಿತ್ರಕಾರನೊಬ್ಬ ಚಿತ್ರಿಸಿದ ಟಿಪ್ಪುವಿನ ಚಿತ್ರ .  ಚಿತ್ರಕಾರನನ್ನು ಈ ವರೆಗೆ ಗುರುತಿಸಿಲ್ಲ .

ಇದೇ ದಾಖಲೆಯಲ್ಲಿ ಪ್ರಾನ್ಸ್ ಮತ್ತು ಟರ್ಕಿಯಿಂದ ಟಿಪೂ ಶಸ್ತ್ರಾಸ್ತ್ರಗಳನ್ನು ಪಡೆಯಲು ಅನುಸರಿಸಿದ ಹಣಕಾಸು ನೀತಿ ಎಂಥವರನ್ನೂ ಚಕಿತಗೊಳಿಸುವಂಥದ್ದಾಗಿದೆ. ಕ್ರಿ.ಶ.1788ರ ಆಕ್ಟೋಬರ್ ಆದಿಯಲ್ಲಿ ಪ್ರೆಂಚ್ ಸರ್ಕಾರ ಟಿಪೂವಿನ ಜೊತೆ ವಾಣಿಜ್ಯ ಒಪ್ಪಂದವೊಂದನ್ನು ಮಾಡಿಕೊಳ್ಳಲು ಪ್ರಸ್ತಾವನೆಯನ್ನು ಕಳುಹಿಸುತ್ತದೆ. ಅದರ ಪ್ರಕಾರ ಪ್ರಾನ್ಸ್ ಮೈಸೂರಿನಿಂದ ಆಮದು ಮಾಡಿಕೊಳ್ಳುವ ವಾರ್ಷಿಕ ಉತ್ಪಾದನೆಗಳಾದ ಕಾಳುಮೆಣಸು, ಶ್ರೀಗಂಧ, ಏಲಕ್ಕಿ, ನಾರು ಬಟ್ಟೆ, ಉಣ್ಣೆ, ಅಂಟು, ದಂತ ಮೊದಲಾದ ಸರಕುಗಳಿಗೆ ಹಣದ ಬದಲಾಗಿ ಯುದ್ಧ ತೋಪು, ಮುಖವಾಡ, ಮದ್ದುಗುಂಡುಗಳು, ಯೋಧರು, ಸಿಲ್ಕ್, ಉಣ್ಣೆ ಬಟ್ಟೆ, ಮೊದಲಾದ ಸರಕುಗಳನ್ನು ಯುರೋಪಿನಿಂದ ಮೈಸೂರಿಗೆ ಕಳುಹಿಸಿಕೊಡುವುದು ಈ ಒಪ್ಪಂದದ ಮುಖ್ಯಾಂಶವಾಗಿದೆ. ಅಗತ್ಯತೆ ಇದ್ದರೆ ಮಾತ್ರ ಉಳಿಕೆ ಹಣವನ್ನು  ಚಿನ್ನ-ಬೆಳ್ಳಿಗಳ ಕೊಡು-ಕೊಳ್ಳುವಿಕೆಯ ಮೂಲಕ ಸರಿದೂಗಿಸಿಕೊಳ್ಳಬೇಕು ಎಂಬುದು ಒಪ್ಪಂದದ ಇನ್ನೊಂದು ಅಂಶ. ಒಟ್ಟೊಮನ್ ಖಲಿಫನು ತನಗೆ ಯುದ್ಧ ತಂತ್ರಜ್ಞರನ್ನು ಕಳುಹಿಸಿಕೊಡಬೇಕೆಂದು ಟಿಪೂವನ್ನು ವಿನಂತಿಸಿದಾಗ, ಮೈಸೂರಿನಲ್ಲಿ ಲಭ್ಯವಿರುವ ಹಾಗೂ ಖಲಿಫನಿಗೆ ಅವಶ್ಯಕತೆ ಇರುವ ಕೆಲಸಗಾರರನ್ನು ಕಳುಹಿಸಿಕೊಡುವುದಾಗಿ ಟಿಪೂ ತಿಳಿಸಿದ್ದಾನೆ. ಎರಡು ರೀತಿಯ ನಗದು ರಹಿತ ವ್ಯವಹಾರದ ಕಾರಣಕ್ಕಾಗಿ ಟಿಪೂ ಈ ನೀತಿಯನ್ನು ಅನುಸರಿಸುತ್ತಾನೆ. ಮೊದಲನೆಯದು ಮೈಸೂರು ಸರಕುಗಳಿಗೆ ಹಾಗೂ ಕುಶಲಕರ್ಮಿಗಳಿಗೆ ಮೈಸೂರಿನ ಹೊರಗೆ ಮಾರುಕಟ್ಟೆ ಕಲ್ಪಿಸುವುದು ಮತ್ತು ಎರಡನೆಯದಾಗಿ ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿ ಮೈಸೂರಿನಿಂದ ಹೊರಗೆ ಹರಿದು ಹೋಗುವುದನ್ನು ತಡೆಗಟ್ಟುವುದು .

ಕ್ರಿ.ಶ.1835ರಲ್ಲಿ  ಬೆಂಗಾಲ ಮತ್ತು ಬಿಹಾರ ಪ್ರಾಂತ್ಯಗಳಲ್ಲಿನ  ಕ್ರಿ.ಶ.1807ರಿಂದ ಕ್ರಿ.ಶ.1814ರ ವರೆಗಿದ್ದ ಸ್ಥಿತಿಗತಿಗಳನ್ನು ಕುರಿತು ಸಮೀಕ್ಷೆ ನಡೆಸಿದ ಮಾಂಟೆಗೊಮೆರಿ ಮಾರ್ಟಿನ್ ಎಂಬಾತ ತಾನು ಬರೆದ ‘ಈಸ್ಟರ್ನ ಇಂಡಿಯಾ’ ಎಂಬ ಪುಸ್ತಕದಲ್ಲಿ ಹೇಳುವುದೇನೆಂದರೆ “ಆ ಕಾಲದಲ್ಲಿ ನಡೆದ ಎರಡು ವಿಶಿಷ್ಟ ಘಟನೆಗಳನ್ನು ಮರೆಯುವುದು ಅಸಾಧ್ಯವಾಗಿದೆ. ಮೊದಲನೆಯದು ಭಾರತದ ಶ್ರೀಮಂತಿಕೆ ಮತ್ತು ಎರಡನೆಯದು ಇಲ್ಲಿನ ನಿವಾಸಿಗಳು ಎದುರಿಸುತ್ತಿರುವ ಬಡತನ, ವಾರ್ಷಿಕವಾಗಿ ಭಾರತದಿಂದ ಬ್ರಿಟಿಷರಿಗೆ ಹರಿದು ಹೋಗುತಿದ್ದ  ಸಂಪತ್ತಿನ ಒಟ್ಟು ಮೌಲ್ಯ  30 ಲಕ್ಷ ಬ್ರಿಟಿಷ್ ಪೌಂಡ್ (ಬಿಪಿ) . ಅಂದರೆ 1814 ರಿಂದ 1835 ರ ವರೆಗಿನ 30 ವ ರ್ಷದಲ್ಲಿ ವಾರ್ಷಿಕ ಶೇ.12ರಷ್ಟು ಸುಸ್ತಿ ಬಡ್ಡಿ ಸೇರಿ ಭಾರತದಿಂದ ವಾರ್ಷಿಕ 72 ಕೋಟಿ 39 ಲಕ್ಷ ಪೌಂಡ್ ಸ್ಟೆರ್ಲಿನ್‍ನಷ್ಟು ಬ್ರಿಟಿಷರಿಗೆ ಹೋಗುತ್ತಿತ್ತು”.  ಇಷ್ಟೇ ಸಂಪತ್ತು ಬ್ರಿಟನಿಂದ ಬೇರೆಡೆಗೆ ಹರಿದು ಹೋಗುತಿದ್ದರೆ ಬ್ರಿಟನ್ ದಿವಾಳಿಯ ಅಂಚಿಗೆ ಬಂದು ನಿಲ್ಲುತಿತ್ತು . ಭಾರತದಲ್ಲಿ ಕೂಲಿ ಕಾರ್ಮಿಕರ  ಆಗಿನ ಸಂಬಳ  ಪ್ರತಿ ನಿತ್ಯ ಎರಡು ಪೆನ್ಸ್ ನಿಂದ ಮೂರು ಪೆನ್ಸ್  ಇತ್ತು ಎಂಬುದನ್ನು ಗಮಗಕ್ಕೆ ತೆಗೆದುಕೊಂಡಾಗ ಎಷ್ಟು ಮೊತ್ತದ ಸಂಪತ್ತು ಭಾರತದಿಂದ ಹರಿದು ಹೋಗಿತ್ತು ಎಂಬುದನ್ನು ನೀವೇ ಊಹಿಸಿ

ಕ್ರಿ.ಶ.1787ರಲ್ಲಿ ಸರ್ ಜಾನ್ ಶೋರ್ ತನ್ನ ಟಿಪ್ಪಣಿಯಲ್ಲಿ ಹೇಳುತ್ತಾನೆ-“ ಕಳೆದ 25 ವರ್ಷಗಳಿಂದ ಭಾರತದಿಂದ ಅಗಾಧ ಪ್ರಮಾಣದ ಸಂಪತ್ತು ( ಚಿನ್ನ , ಬೆಳ್ಳಿಯ ನಾಣ್ಯಗಳಲ್ಲಿ ) ಇಂಗ್ಲೆಂಡ್ ಗೆ ಹೋಗುತಿತ್ತು . ಅದರಲ್ಲೂ ಕಳೆದ ಹತ್ತು ವರ್ಷಗಳಲ್ಲಿ ಅದರ ಪ್ರಮಾಣದಲ್ಲಿ ವಿಪರೀತ ಏರಿಕೆ ಕಂಡಿದೆ . ಬ್ರಿಟೀಷರು ಬಂಗಾಳವನ್ನು ವಶಪಡಿಸಿಕೊಂಡ ಮೇಲೆ ಭಾರತದಲ್ಲಿದ್ದ ಸಂಪತ್ತು ( ಚಿನ್ನ ಮತ್ತು ಬೆಳ್ಳಿ ) ಅಪಾರ ಪ್ರಮಾಣದ ಕುಸಿತ ಕಂಡಿತು ಎಂದು ಹೇಳಲು ನನಗ್ಯಾವ ಹಿಂಜರಿಕೆಯೂ ಇಲ್ಲ . ಅಫೀಮು ವ್ಯವಹಾಕ್ಕಾಗಿ ಚೀನಾಕ್ಕೆ  ಹಾಗೂ  ತನ್ನ ಸೈನಿಕ ಶಕ್ತಿಯನ್ನು   ಬಲಪಡಿಸಿಕೊಳ್ಳಲು ಮುಂಬೈ  ಮತ್ತು ಮದರಾಸು ಪ್ರಾಂತ್ಯಗಳಿಗೆ ಇನ್ನಷ್ಟು ಸಂಪತ್ತಿನ ಅಗತ್ಯ ಬ್ರಿಟಿಷರಿಗೆ ಇದ್ದುದ್ದರಿದ ಇಲ್ಲಿನ ಚಿನ್ನದ ಸಂಪತ್ತು ಮತ್ತಷ್ಟು ಖಾಲಿಯಾಗುವುದರಲ್ಲಿ ಯಾವುದೇ ಸಂಶಯ ಇಲ್ಲ” .

ದಾದಾಬಾಯಿ ನವರೋಜಿ ತಮ್ಮ ‘Poverty and Un-British rule’ ಎಂಬ ಗೃಂಥದಲ್ಲಿ ಭಾರತ ಹೇಗೆ ತನ್ನ ದೃವ್ಯ (ಚಿನ್ನ, ಬೆಳ್ಳಿ ಮೊದಲಾದವು) ಸಂಪತ್ತನ್ನು ಕಳೆದುಕೊಂಡಿತು ಎನ್ನುವುದನ್ನು ವಿವರಿಸಿದ್ದಾರೆ . ಅವರ ಪ್ರಕಾರ ಬ್ರಿಟಿಷರು ಬಿಹಾರ ಪ್ರಾಂತ್ಯದಲ್ಲಿ ಬೆಳೆದ ಗಾಂಜಾವನ್ನು ಚೀನಾದಲ್ಲಿ ಮಾರಾಟ ಮಾಡುವುದಕ್ಕಾಗಿ ಕಾರ್ಖಾನೆಗಳನ್ನು ತೆರೆಯಲು ಮತ್ತು  ಮಾರಾಟ ಜಾಲಗಳ ಅಭಿವೃದ್ದಿಗೆ ಚೀನಾಕ್ಕೆ ಭಾರತದ ದೃವ್ಯ ಸಂಪತ್ತನ್ನು ರಪ್ತು ಮಾಡುತ್ತಿದ್ದರು. ಅಲ್ಲದೆ ಮತ್ತೆ ಇದೆಲ್ಲದಕ್ಕೂ ಇಂಗ್ಲಿಷರಿಗೆ ಭಾರತದ ವ್ಯಾಪಾರದಿಂದಲೇ ಹೆಚ್ಚುವರಿಯಾಗಿ ಸಂಪತ್ತನ್ನು ವ್ಯವಯಿಸಲಾಗುತ್ತಿತ್ತು. ಇದರಿಂದ ಭಾರತದಲ್ಲಿ ಖಾಲಿಯಾದ ಈ ಸಂಪತ್ತಿನ ಕೊರತೆಯನ್ನು ನೀಗಿಸಲು ಇಂಗ್ಲೆಂಡಿನಿಂದ ನಗದನ್ನು ಆಮದು ಮಾಡಿಕೊಳ್ಳುವ ಪರಿಪಾಠ ಆರಂಭವಾಯಿತು. ಕ್ರಿ.ಶ.1801ರಿಂದ ಕ್ರಿ.ಶ.1869ರ ಅವಧಿಯಲ್ಲಿನ ಹಣಕಾಸು ಸ್ಥಿತಿಗತಿಗೆ ಸಂಬಂಧಿಸಿದಂತೆ ದಾದಾಬಾಯಿ ಅವರ ಲೆಕ್ಕದ ಪ್ರಕಾರ ವಾಣಿಜ್ಯ, ಸಾಮಾಜಿಕ, ಧಾರ್ಮಿಕ, ಕಂದಾಯ, ರೈಲ್ವೇ ಹಾಗೂ ಇತರ ಸಾರ್ವಜನಿಕ ಕೆಲಸಕಾರ್ಯಗಳಿಗೆ ಉಳಿದ ಹಣ ತಲಾ ಕೇವಲ 34 ಷಿಲ್ಲಿಂಗ್ಸ್ . ಅಲ್ಲದೆ ಆ ಸಂದರ್ಭದಲ್ಲಿ ಇಂಗ್ಲಿಷರಿಗೆ ನೀಡಲು ಯಾವ ಬೆಲೆಬಾಳುವ ವಸ್ತುಗಳೂ ಇರಲಿಲ್ಲ. ವ್ಯಾಪಾರ ಮತ್ತು ಉದ್ದಿಮೆಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸಲು ಭಾರತ ವಸ್ತುವಿನಿಮಯಕ್ಕೇ ಮೊರೆಹೋಗಬೇಕಾಯಿತು. ಕ್ರಿ.1869ರ ಹೊತ್ತಿಗೆ ಭಾರತ ಇಂಗ್ಲೆಂಡಿಗೆ ಸಂದಾಯಮಾಡಬೇಕಾದ ಹಣದ ಮೊತ್ತ 8ಕೋಟಿ 20 ಲಕ್ಷ ಬ್ರಿಟಿಷ ಪೌಂಡ್ಸ್ ಆಗಿತ್ತು ಎಂಬ  ವಿಚಾರವನ್ನು ದಾದಾಬಾಯಿ ಈ ಪುಸ್ತಕದಲ್ಲಿ  ಹೇಳಿದ್ದಾರೆ.

ಟಿಪ್ಪು ಸುಲ್ತಾನ್ (1782-1799) ಕಾಲದ 1/4 ರೂಪಾಯಿ ಅಥವಾ ಬಾಖರಿ . ಹೈದರ್ ಆಲಿಯ ಚಿಹ್ನೆ ‘ಹೆ ‘ ಯನ್ನು ಕಾಣಬಹುದು .

ಇವೆಲ್ಲದರ ಹೊರತಾಗಿ ಟಿಪೂ ವಾಣಿಜ್ಯ ಉದ್ದೇಶಗಳಿಗಾಗಿ ವಿದೇಶೀ ಪ್ರಾಂತಗಳಲ್ಲಿಯೂ ಮಾರಾಟ ಕೇಂದ್ರಗಳ ಸ್ಥಾಪನೆಗೆ ಮುಂದಾಗಿದ್ದ. ಅಪರೂಪದ ಸರಕುಗಳನ್ನು  ಖರೀದಿಸಿ ಅವುಗಳನ್ನು ಮೈಸೂರಿಗೆ ಮಾರಾಟಕ್ಕಾಗಿ ಕಳುಹಿಸುವುದಲ್ಲದೆ ತನ್ನ ರಾಜ್ಯದ ಅತಿ ಅಪರೂಪದ ಪದಾರ್ಥಗಳನ್ನು ವಿದೇಶೀ ಮಾರುಕಟ್ಟೆಯಲ್ಲಿ ಪ್ರಚುರಪಡಿಸುವುದು ಈ ಕೇದ್ರಗಳಸ್ಥಾಪನೆಯ ಉದ್ಧೇಶವಾಗಿತ್ತು. ಕಚ್ ಮತ್ತು ಮಸ್ಕತ್ ಸೇರಿದಂತೆ ಇಂತಹ 17 ಕೇಂದ್ರಗಳನ್ನು ಆತ ಸ್ಥಾಪಿಸಿದ್ದ. ಈ ಘಟಕಗಳ ಹಿಂದಿನ ಉದ್ದೇಶದ ಬಗ್ಗೆ ಟಿಪೂವಿನ ಮಾತಿನಲ್ಲೇ ಹೇಳುವುದಾದರೆ ‘ ಇತರ ದೇಶಗಳಿಗೆ ನಿಮ್ಮ ಪ್ರತಿನಿಧಿಗಳ ನಿಯೋಜನೆ ಅಂದರೆ ನಮ್ಮ ರಾಜ್ಯದ ಉತ್ಪಾದನೆಗಳನ್ನು ಅಲ್ಲಿ ಮಾರಾಟ ಮಾಡುವುದು ಹಾಗೂ ಆ ದೇಶಗಳ ಉತ್ಪಾದನೆಯನ್ನು ನಮ್ಮ ದೇಶಕ್ಕೆ ತಂದು ಕೈಗೆಟುಕುವ ಬೆಲೆಗೆ ಮಾರಾಟಮಾಡಿ ಲಾಭ ಗಳಿಸುವುದು’ ಎಂದಾಗಿತ್ತು .

ಟಪೂವಿನ ನೇತೃತ್ವದಲ್ಲಿ ರಚನೆಯಾದ ಮೈಸೂರಿನ ಕಂದಾಯ ನಿಯಂತ್ರಣ ಕರಡು ಆತನು ಮೈಸೂರಿನ ಕಬ್ಬಿಣ ಮತ್ತು ಸ್ಟೀಲ್ ಕಾಮಗಾರಿಗೆ ನೀಡಿದ ಮಹತ್ವವನ್ನು ತಿಳಿಸುತ್ತದೆ. ಮಲಬಾರದಿಂದ ಧಾರವಾಡದ ವರೆಗೆ ವಿಸ್ತರಿಸಿದ್ದ ಮೈಸೂರು ರಾಜ್ಯದಲ್ಲಿ ಅಳವಡಿಸಿದ್ದ ಈ ಕಂದಾಯ ನಿಯಂತ್ರಣ ಕರಡನ್ನು ರಕ್ಷಿಸುವುದು, ಅದನ್ನು ಓದುವುದು ಮತ್ತು ಎಲ್ಲ ಸರ್ಕಾರಗಳು ಕಡ್ಡಾಯವಾಗಿ ಅನುಸರಿಸಬೇಕಾದ ಅವಶ್ಯಕತೆ ಇದೆ.

ಈ ಕರಡಿನ  ಸೂಚನೆ ಸಂಖ್ಯೆ 68 ಪ್ರಕಾರ “ ಒಂದು ವೇಳೆ ಯಾವುದೇ ರೈತನು ತನ್ನ ಬಾಡಿಗೆ ಕೊಡಬೇಕಾಗಿದ್ದಲ್ಲಿ ಆತ ಬಂಗಾರ, ಬೆಳ್ಳಿ ಅಥವಾ ಹಿತಾಳೆ ರೂಪದಲ್ಲಿ ನೀಡಬೇಕು. ಇವುಗಳನ್ನು ಯಾವುದೇ ಕಾರಣಕ್ಕೂ ವರ್ತಕರಿಗೆ ಕೊಡಕೂಡದು. ಸರಕಾರಕ್ಕೋಸ್ಕರ ಇವುಗಳನ್ನು ಪ್ರಸ್ತುತ ಬಜಾರ್ (ಮಾರುಕಟ್ಟೆ) ದರಕ್ಕನುಸಾರವಾಗಿ ಖರೀಧಿಸಬೇಕು. ಅಲ್ಲದೆ ಇವುಗಳನ್ನು ಇಲಾಖೆಯ ಲೆಕ್ಕದಲ್ಲಿ ದಾಖಲು ಮಾಡಬೇಕು. ನಂತರ ಈ ಖಾತೆ ಕಿರ್ದಿಯನ್ನು ಸರಕುಗಳ ಸರಬರಾಜು ಮಾಹಿತಿಯೊಂದಿಗೆ ‘ಕಚೇರಿ’ಗೆ ಕಳುಹಿಸಬೇಕು. ಒಂದು ವೇಳೆ ನೀವು ಸರ್ಕಾರದ ಈ ನಿಯಮವನ್ನು ಉಲ್ಲಂಘಿಸಿದ್ದೇ ಆದಲ್ಲಿ ಸರ್ಕಾರದ ಅಸಮಾಧಾನಕ್ಕೆ ಗುರಿಯಾಗಬೇಕಾಗುತ್ತದೆ’ ಎಂದು ತಾಕೀತು ಮಾಡಿದ್ದು ನಮ್ಮ ಚಿನ್ನ ನಮ್ಮಲ್ಲೇ ಉಳಿಯಲು ಅನುಸರಿಸಿದ ಕರಾರುವಾಕ್ ನೀತಿ ಗಮನ ಸೆಳೆಯುತ್ತದೆ.

ಚಿನ್ನ ಬೆಳ್ಳಿ ರೂಪದಲ್ಲಿ ಸಂಗ್ರಹಿಸಿದ ತೆರಿಗೆಯನ್ನು ವರ್ತಕರಿಗೆ ಮಾರಾಟ ಮಾಡದೆ ಶ್ರೀರಂಗಪಟ್ಟಣದಲ್ಲಿನ ಖಜಾನೆಯಲ್ಲಿ ಭದ್ರವಾಗಿಡುವಂತೆ ಮಾಡಲು ಆತ ನೀಡಿದ ಕಟ್ಟು ನಿಟ್ಟಿನ ಸೂಚನೆ ನಿಜಕ್ಕೂ ಪ್ರಶಂಸಾರ್ಹವಾದದ್ದು. ಈ ರೀತಿ ಸಂಗ್ರಹಿಸಿಟ್ಟಿದ್ದ ಬೆಲೆಬಾಳುವ ವಸ್ತುಗಳೇ ಮುಂದೆ 1792ರ ಮೈಸೂರು ಯುದ್ಧ ಘಟಿಸಿದ ಬಳಿಕ ಬ್ರಿಟಿಷರು ಟಿಪೂವಿನ ಮೇಲೆ 33 ಮಿಲಿಯನ್ ಹಣದ ಬೇಡಿಕೆ ಇಟ್ಟಾಗ 16.5 ಮಿಲಿಯನ್ ನಗದು ಮತ್ತು ಚಿನ್ನ ಮತ್ತು ಬೆಳ್ಳಿಯ ಗಟ್ಟಿಗಳಲ್ಲಿ ಹಾಗೂ ಉಳಿದವನ್ನು ಒಂದು ಒಂದು ರ್ಷದ ಒಳಗಾಗಿ ಸಂದಾಯ ಮಾಡಲು ಅನುಕೂಲವಾಯಿತು.

ಆದ್ದರಿಂದ ಟಿಪೂ ಸುಲ್ತಾನ್ ತನ್ನ ಬಹುತೇಕ ಹಣಕಾಸಿನ ವ್ಯವಹಾರಗಳನ್ನು ನಗದು ಬದಲಾಗಿ ವಸ್ತುಗಳ ರೂಪದಲ್ಲೇ ನಡೆಯಲು ಪ್ರಾಶಸ್ತ್ಯ ನೀಡಿದ್ದರಿಂದ ಆತನ ರಾಜ್ಯ ಚಿನ್ನ, ಬೆಳ್ಳಿ ಮೊದಲಾದ ಬೆಲೆಬಾಳುವ ವಸ್ತುಗಳಿಂದ ಸಂಪದ್ಬರಿತವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ . ಟಿಪ್ಪುವಿನ ನಿಧನದ ನಂತರ ಬ್ರಿಟಿಷ್ ವೀಕ್ಷಕರೊಬ್ಬರು ಹೇಳಿಕೊಂಡಂತೆ ” ಟಿಪ್ಪು ತನ್ನ ರಾಜ್ಯದಿಂದ ಚಿನ್ನ ಮತ್ತು ಬೆಳ್ಳಿ ಯನ್ನು ಹೊರಹೋಗದಂತೆ ಕಟ್ಟು ನಿಟ್ಟಾಗಿ ತಡೆಹಿಡಿಯುತಿದ್ದ . ಕೆನರಾ ಪಾತ್ಯದ ವರ್ತಕರು ಬ್ರಿಟಿಷ್ ಸಾಮ್ಯದ ಪ್ರಾಂತ್ಯಗಳೊಂದಿಗೆ ವ್ಯವಹರಿಸುವಾಗ ನಗದು ರಹಿತವಾಗಿಯೇ ವ್ಯವಹರಿಸಬೇಕು ,  ಒಂದು ವೇಳೆ ಸರಕಿನ ವಿನಿಮಯಕ್ಕೆ ಒಪ್ಪದಿದ್ದಾಗ ಮಾತ್ರ ನಗದನ್ನು ನೀಡಬೇಕು ಹೇಳಿದ್ದ . ಹೀಗೆ ಬ್ರಿಟಿಷರ ಸಂಪತ್ತು ಸಹಾ ತನ್ನ ರಾಜ್ಯದೊಳಕ್ಕೆ ಹರಿದು ಬರುವಂತೆ ಮಾಡಿದ್ದ. ” . ಟಿಪ್ಪು ಮರಣದ  7 ದಶಕಗಳ  ನಂತರದಲ್ಲಿ ಆರ್ಥಿಕವಾಗಿ  ಸದೃಢ ವಾಗಿದ್ದ ಮೈಸೂರು ಪ್ರಾಂತ್ಯ ಕೂಡ ಬ್ರಿಟೀಷರ ಸಾಲದಲ್ಲಿ ಬದುಕಬೇಕಾಯಿತು .

ಉಲ್ಲೇಖಗಳು :

  1. Tipu Sultans Mysore – An Economic Study, M.H. Gopal; 1971
  2. History of Tipu Sultan, Mohibbul Hasan; 1951
  3. The Mysorean Revenue Regulations, Translated by Burrish Crisp; 1792
  4. Poverty and Unbritish rule in India, Dadabhai Nauroji; 1901

ಭಾಷಾಂತರ ಸಹಾಯ :  ಡಾ.ಬಾಲಕೃಷ್ಣ ಹೆಗಡೆ, ಶಿವಮೊಗ್ಗ

One comment to “ಟಿಪ್ಪು ಸುಲ್ತಾನ್ ಮತ್ತು ನಗದು ರಹಿತ ವ್ಯವಹಾರ”
  1. ಲೇಖಕರು Barter System ನ Cashless System ಗೆ ಹೋಲಿಸಿ , ಗೊಂದಲಕ್ಕೆ ಈಡು ಮಾಡಿದ್ದಾರೆ…

ಪ್ರತಿಕ್ರಿಯಿಸಿ