ಡಿ.ಎಸ್.ಎನ್.ಅವರ ಉತ್ತರ :
9.10. 2017
ಪ್ರಿಯ ಶ್ರೀ ಗುಹಾ,
ನಿಮ್ಮ ಉತ್ತರಕ್ಕಾಗಿ ಧನ್ಯವಾದ. ಮೊಟ್ಟಮೊದಲೆನೆಯದಾಗಿ, ಸಮಾಜವಾದಿಗಳು ಗಾಂಧಿಯವರೊಡನೆ ಹೊಂದಿದ್ದ ಸಾಮೀಪ್ಯದ ದರ್ಜೆಯ ಕುರಿತಾಗಿ ನನಗೆ ಯಾವುದೇ ಭ್ರಾಂತಿಗಳಿಲ್ಲ ಎಂದು ಸ್ಪಷ್ಟಪಡಿಸಬಯಸುತ್ತೇನೆ. ಅವರು ಗಾಂಧಿಯ ಅತ್ಯಂತ ಸಮೀಪದ ವೃತ್ತದವರಾಗಿದ್ದರೋ ಅಥವಾ ಗಾಂಧಿಯವರ ಸಂಪರ್ಕದ ಅತ್ಯಂತ ಹೊರವೃತ್ತದ ಪರಿಧಿಯಲ್ಲಿದ್ದರೊ ಎನ್ನುವುದರ ಕುರಿತು ನನಗಂತೂ ಆಸಕ್ತಿ ಇಲ್ಲ. ನನಗಂತೂ ಆಸಕ್ತಿ ಇಲ್ಲ. ಅವತ್ತು ನಾನು ಹೇಳಲು ಬಯಸುತ್ತಿದ್ದ ಅಂಶ ಗಾಂಧಿಯವರು ಸಮಾಜವಾದಿಗಳೊಂದಿಗೆ, ವಿಶೇಷವಾಗಿ ಜೆಪಿ ಮತ್ತು ಲೋಹಿಯಾ ಅವರೊಂದಿಗೆ, ಮಹತ್ವದ ಸಂಭಾಷಣೆಗಳನ್ನು ನಡೆಸಿದ್ದರು ಎನ್ನುವುದು. ಗಾಂಧಿಯವರ ಸುತ್ತ ಸಾಮೀಪ್ಯದ ವೃತ್ತಗಳನ್ನು ಕಲ್ಪಿಸಿಕೊಳ್ಳುವುದು, ಸೃಷ್ಟಿಸುವುದು ತೀರಾ ಬಾಲಿಶವಾಗಿದ್ದು, ನಿಮ್ಮಂತಹ ಹಿರಿಯ ಇತಿಹಾಸಗಾರರಿಗೆ ಸಲ್ಲುವುದಲ್ಲ. ಹಾಗೂ ಇದು ಗಾಂಧಿಯವರು ಇತರರೊಡನೆ ನಡೆಸಿದ ಸಂಭಾಷಣೆಗಳ ಮಹತ್ವವನ್ನು ಅರ್ಥಮಾಡಿಕೊಳ್ಳಲು ಕೂಡ ಸಹಾಯಕಾರಿ ಅಲ್ಲ, ಮತ್ತು ಈ ತರಹದ ಚಿತ್ರಣಗಳು, ವಾಸ್ತವವೇ ಆಗಿರಲಿ ಕಾಲ್ಪನಿಕವೇ ಆಗಿರಲಿ, ಗಾಂಧಿಯವರ ವ್ಯಕ್ತಿತ್ವವನ್ನು ಎಲ್ಲ ಆಯಾಮಗಳಲ್ಲಿ ಅರ್ಥೈಸಲು ಅಡ್ಡಿಯಾಗುವಂತಹದ್ದು. ನಾನು ಕೇಳಿದ ಓದಿದ ಎಷ್ಟೋ ಘಟನೆಗಳಲ್ಲಿ ಗಾಂಧಿಯವರೊಡನೆ ಭೇಟಿಯಾಗಲು ಹೋದವರು ತಾವೇ ಗಾಂಧಿಗೆ ಅತಿ ಮುಖ್ಯವಾದ ವ್ಯಕ್ತಿ ಎಂದುಕೊಂಡದ್ದಿದೆ. ಹಾಗೂ ಗಾಂಧಿಯವರು ಎಲ್ಲಿಯೂ ಇತರರೊಂದಿಗೆ ಹೊಂದಿದ್ದ ಸಂಬಂಧದಲ್ಲಿ ದರ್ಜೆಗಳನ್ನು ಹೊಂದಿರುವಂತೆ ವರ್ತಿಸಿಲ್ಲ.
ಆದರೆ ಅಂದು ನೀವು ಮತ್ತೆ ಮತ್ತೆ ಗಾಂಧಿಯವರು ಸಮಾಜವಾದಿಗಳೊಡನೆ ಯಾವುದೇ ಮಹತ್ವದ ಸಂಭಾಷಣೆಗಳನ್ನು ನಡೆಸಿರಲಿಕ್ಕಿಲ್ಲ ಎಂದು ಒತ್ತಿ ಹೇಳಿದಿರಿ (ಶ್ರೀಮತಿ ಚಟ್ಟೋಪಾಧ್ಯಾಯ ಅವರೊಂದಿಗೆ ರಾಜಕೀಯೇತರ ವಿಷಯಗಳ ಕುರಿತು ಸಂಭಾಷಿಸುವುದರ ಹೊರತಾಗಿ). ಇದಕ್ಕೆ ನೀವು ನೀಡಿದ ಎರಡು ಕಾರಣಗಳು, ಅವರು ಗಾಂಧಿಯವರ ಹೊರವೃತ್ತದಿಂದಲೂ ಹೊರಗಿದ್ದರು ಎನ್ನುವುದು ಮತ್ತು ಈ ಕುರಿತಾಗಿ ಗಾಂಧಿಯವರ ಸಮಗ್ರ ಬರಹಗಳ ಸಂಪುಟಗಳಲ್ಲಿ ಪುರಾವೆ ಇಲ್ಲ ಎನ್ನುವುದು. (ನಾನು ನಿಮಗೆ ಈ ಮುಂಚಿನ ಪತ್ರದಲ್ಲಿ ಪುರಾವೆ ನೀಡಿದ್ದೇನೆ). ಆದರೆ ಈಗ ನೀವು ಹಾಗೆಂದು ಹೇಳಿಯೇ ಇಲ್ಲ ಎನ್ನುತ್ತಿದ್ದೀರಿ. ವಾಸ್ತವದಲ್ಲಿ ‘ಹೊರವೃತ್ತದಿಂದಲೂ ಹೊರಗಿದ್ದರು’ ಎನ್ನುವುದನ್ನು ನೀವು ಎರಡನೇ ಬಾರಿ ಧ್ವನಿಯೆತ್ತರಿಸಿ ಪುನರುಚ್ಛರಿಸಿದ್ದಿರಿ! ನಿಮಗೆ ಪುರಾವೆ ಬೇಕಿದ್ದಲ್ಲಿ, ನೀವು ನಿಮ್ಮಭಾಷಣದ ಧ್ವನಿ ಮುದ್ರಣವನ್ನು ಶ್ರೀ ಕೆ.ವಿ.ಅಕ್ಷರ ಅವರಲ್ಲಿ ಪಡೆಯಬಹುದು. ನಾನು ನನ್ನ ಕಡೆಯಿಂದ, ಹೆಗ್ಗೋಡಿನಲ್ಲಿದ್ದ ಇಬ್ಬರು ಮಿತ್ರರ ಮೂಲಕ ಅದನ್ನು ಖಾತ್ರಿಗೊಳಿಸಿಕೊಂಡಿದ್ದೇನೆ. ಅದೇನೇ ಇರಲಿ, ನನ್ನನ್ನು ಕದಡಿದ್ದು ಅಕ್ಷರಶಃ ಆ ಪದಗಳಲ್ಲ; ಬದಲಾಗಿ ಅದನ್ನು ಹೇಳುವಲ್ಲಿ ತೋರಲ್ಪಟ್ಟ ಭಾವಾವೇಶ. ನೀವು ಅದರ ಮೂಲಕ, ಗಾಂಧಿ ಮತ್ತು ಅವರ ಇತಿಹಾಸದ ಕುರಿತು ನನ್ನ ಅಧಿಕಾರವನ್ನು ಯಾರೂ ಪ್ರಶ್ನಿಸಲಾರರು, ಎನ್ನುತ್ತಿದ್ದಿರಿ ಎಂದು ನನಗೆ ಅನಿಸಿತು.
ಈ ಸಂದರ್ಭದಲ್ಲಷ್ಟೇ ನಾನು, ಗಾಂಧಿಯವರು ಜೆಪಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಸೂಚಿಸಿದ್ದು ನಿಮಗೆ ತಿಳಿದಿದೆಯೇ, ಎಂದು ಪ್ರಶ್ನಿಸಿದ್ದು. ಆದರೆ ನೀವು ಅದಕ್ಕೆ ಆಧಾರ ಕೇಳಿದಿರಿ ಮತ್ತು ಇದರಿಂದ ನೀವು ಕಾಂಗ್ರೆಸ್‍ನ ಇತಿಹಾಸ ಕುರಿತ ಪರಿಣತರು ಎಂದು ಭಾವಿಸಿದ್ದ ನನಗೆ ನಿಮ್ಮ ಈ (ಅ)ಜ್ಞಾನದಿಂದ ಆಶ್ಚರ್ಯವಾಯಿತು. ನೀವು ಕೇಳಿದ ಈ ಆಧಾರ ಕೊಡುವ ಸಲುವಾಗಿ ನಾನು ನಿಮಗೆ ಪತ್ರ ಬರೆದಿದ್ದು. ಆದರೆ ನೀವು ಈ ಕುರಿತು ಮೌನವಾಗಿದ್ದೀರಿ. ಬಹುಶಃ ನೀವು ಇದನ್ನು ಪರಿಶೀಲಿಸುತ್ತಿದ್ದೀರಿ ಎಂದು ಭಾವಿಸುತ್ತೇನೆ. ಇದರ ಪರಿಣಾಮವಾಗಿ ಸಮಾಜವಾದಿಗಳು ಗಾಂಧಿಯವರೊಂದಿಗೆ ನಡೆಸುತ್ತಿದ್ದ ಸಂಭಾಷಣೆಗಳ ಗುಣಮಟ್ಟದ ಕುರಿತಾಗಿ ಅಲ್ಲದಿದ್ದರೂ ಅವರು ಹೊಂದಿದ್ದ ಸಾಮೀಪ್ಯದ ಗುಣಮಟ್ಟದ ಕುರಿತಾಗಿ ನಿಮ್ಮಮೌಲ್ಯಮಾಪನವನ್ನು ಬದಲಾಯಿಸಿಕೊಳ್ಳುತ್ತೀರಿ ಎಂದು ಆಶಿಸುತ್ತೇನೆ.
ಸಮಾಜವಾದಿ ಪರಂಪರೆ ಕಾಣೆಯಾಗಿದ್ದಕ್ಕೆ ಇಂದು ಪಶ್ಚಾತ್ತಾಪಪಟ್ಟೇನೂ ಉಪಯೋಗವಿಲ್ಲ. ಅದು ಅರ್ಧ ಆತ್ಮಹತ್ಯೆ ಹಾಗೂ ಇನ್ನರ್ಧ ಹೊರಗಿನಿಂದ ಎರಡು ಮುಖವುಳ್ಳ ನೆಹರೂ ಪ್ರಣೀತ ರಾಜಕಾರಣದ ಪ್ರತಿಪಾದಕರ ಮೂಲಕ ನಡೆದ ಕೊಲೆ. ಇವರು ಇನ್ನೂ ಹೊಸ ಅವತಾರಗಳನ್ನು ತೊಟ್ಟು ನಮ್ಮ ನಡುವೆಯೇ ಇದ್ದಾರೆ. ವಾಸ್ತವದಲ್ಲಿ ಸ್ವಾತಂತ್ರ್ಯನಂತರದ ಭಾರತದಲ್ಲಿ ಸಮಾಜವಾದಿಗಳು ಯಾರಿಗೂ ಬೇಕಿರಲಿಲ್ಲ; ಏಕೆಂದರೆ ಸಮಾಜವಾದಿಗಳು, ವಿಶೇಷವಾಗಿ ಲೋಹಿಯಾ ಅವರು, ಸೃಜನಾತ್ಮಕವಾಗಿ ಅರ್ಥೈಸಿದ ನಿಜವಾದ ಗಾಂಧಿ ಯಾರಿಗೂ ಬೇಕಿರಲಿಲ್ಲ. ಲೋಹಿಯ ಒಬ್ಬಂಟಿ ಹೋರಾಟಗಾರರಾಗಿದ್ದರು ಮತ್ತು ದುಃಖಿಯಾಗಿ ಮರಣವನ್ನಪ್ಪಿದರು. ಅವರಿಗೆ ಹೆಸರುಗಳನ್ನು ಕರೆದು ಈಗ ಏನೂ ಪ್ರಯೋಜನವಿಲ್ಲ. ಅವರು ಏನೋ, ಅದೇ ಆಗಿದ್ದರು ಮತ್ತು ಅಂತೇಯೇ ಸ್ವೀಕರಿಸಲ್ಪಡಬೇಕು. ಅವರೆಂದರೆ ಈಗ ಬುದ್ಧಿಜೀವಿಗಳಿಗೆ ಇಷ್ಟ: ಏಕೆಂದರೆ ಅವರು ಈಗ ಇಲ್ಲವಾದ್ದರಿಂದ; ಆದರೆ ಅದೇ ಸಮಯದಲ್ಲಿ ಬೌದ್ಧಿಕವಾಗಿ ಅವರು ಬಹಳ ಪ್ರಚೋದನಕಾರಿ ವ್ಯಕ್ತಿತ್ವವಾದ್ದರಿಂದ! ಇದು ಇಂದಿನ ಬುದ್ಧಿಜೀವಿಗಳ ಕತೆ! ಸ್ವಾತಂತ್ರ್ಯ ಬರುವ ತನಕ ಹೀರೋ ಆಗಿದ್ದ ಜೆಪಿ ಕೂಡ ನೆಹರೂ ವಿರೋಧಿ ರಾಜಕೀಯಕ್ಕೆ ತೀರ ಒಳ್ಳೆಯವರಾಗಿ ಒದಗಿ ಬರಲಾರರಾದರು. 1952ರ ಚುನಾವಣೆಯ ನಂತರ ಅವರು ಕಣ್ಮರೆಯಾದವರು. ಕೊನೆಗೆ 1973-77ರಲ್ಲಿ ಭಾರತದ ಪ್ರಜಾತಂತ್ರದ ಸಂರಕ್ಷಕರಾಗಿ ಮರಳಿದರು. ಆದರೆ ರಾಜಕೀಯ ಚಿಂತಕರಾಗಿ ಅವರು ಅಲ್ಲಿಯೂ ಇರಲಿಲ್ಲ, ಇಲ್ಲಿಯೂ ಇರಲಿಲ್ಲ. ಅವರ ನೆರವಿನಿಂದ ರೂಪುಗೊಂಡ ಜನತಾ ಪಕ್ಷ ಇದಕ್ಕೊಂದು ಉತ್ತಮ ನಿದರ್ಶನ. ಆದರೆ ನಮ್ಮ ಬುದ್ಧಿಜೀವಿಗಳಲ್ಲಿ ಎಲ್ಲರೂ ಜೆಪಿ ಅವರನ್ನು ಆರಾಧಿಸುತ್ತಾರೆ ಮತ್ತು ಲೋಹಿಯಾ ಅವರ ವಿರುದ್ಧ ಒಂದಲ್ಲ ಒಂದು ತಕರಾರು ಹೊಂದಿರುತ್ತಾರೆ! ಭಾರತದ ಬೌದ್ಧಿಕ ‘ವರ್ಗ’ದ ಪಿತಾಮಹರಾದ ನೆಹರೂ ಅವರು ಇಂದಿಗೂ ಭಾರತದ ರಾಜಕೀಯ ಮನಸ್ಸನ್ನು ಆಳುತ್ತಿರುವಂತೆ ಕಾಣುತ್ತದೆ!. ಇದು ನಿಮ್ಮ ಅಂದಿನ ಭಾಷಣದಲ್ಲಿ ಹಾಗೂ ನೀವು ನನಗೆ ನೀಡಿದ ಉತ್ತರದಲ್ಲಿ ವಿಧಿತವಾಗಿತ್ತು. ಹಾಗಾಗಿ ನೀವು ನಿಮ್ಮ ಈ ಮೊದಲಿನ ಮೇಲ್‍ನಲ್ಲಿ ಸಮಾಜವಾದಿಗಳ ಕುರಿತು ನೀಡುವ ಪ್ರಶಂಸೆ, ವಿಶೇಷವಾಗಿ ಲೋಹಿಯಾ ಹಾಗೂ ಜೆಪಿ ಅವರ ಬಗೆ ನೀಡುವ ಪ್ರಶಂಸೆ ಅಕಾಡೆಮಿಕ್ /ಔಪಚಾರಿಕ ಎಂದಷ್ಟೇ ಅನಿಸುತ್ತದೆ.
ಹೌದು ನಾನು ಮಂಡಿಸಿದ ವಾದದಲ್ಲಿ ನೀವು ತೋರಿಸಿದಂತೆ ಒಂದು ತಾಂತ್ರಿಕ ದೋಷ ಇದೆ. ಇಂಗ್ಲಿಷ್‍ನಲ್ಲಿ ಸಂಯುಕ್ತ ವಾಕ್ಯಗಳನ್ನು ರಚಿಸುವಲ್ಲಿ ನನಗಿರುವ ತೊಂದರೆಯ ಪರಿಣಾಮವದು. ನಾನು ಅಲ್ಲಿ ಹೇಳಬಯಸ್ಸಿದ್ದೇನೆಂದರೆ, ಸಮಾಜವಾದಿಗಳು ಮಾರ್ಕ್ಸಿಸಂನ ನಿಷ್ಫಲತೆಯನ್ನು ಅರಿತಂತೆಯೇ ಗಾಂಧಿ ಅವರೆಡೆಗೆ ಹೆಚ್ಚು ವಾಲಿದರು ಮತ್ತು ಈ ಅರಿವು 1952ರ ಮಹಾಚುನಾವಣೆಯ ಸೋಲಿನ ಬಳಿಕ ಹೆಚ್ಚಾಗಿ ಪಂಚಮಡಿಯ ಸಭೆಯಲ್ಲಿ ಲೋಹಿಯಾ ಅವರ (ತದನಂತರ ‘ಸಮಾಜವಾದದ ಸೈದ್ಧಾಂತಿಕ ಅಡಿಪಾಯ’ ಎನಿಸಿಕೊಂಡಂತಹ) ಭಾಷಣದ ರೂಪದಲ್ಲಿ ವ್ಯಕ್ತವಾಯಿತು. ಆದರೆ ನನ್ನ ಈ ತಪ್ಪು, ನನ್ನ ವಾದದ ಸಮಂಜಸತೆಯನ್ನು ಯಾವುದೇ ರೀತಿಯಲ್ಲಿ ಕುಂದಿಸುವುದಿಲ್ಲ ಎನ್ನುವುದು ನನ್ನ ಅನಿಸಿಕೆ.
ನಾನು ನನ್ನ ಪತ್ರದಲ್ಲಿ ಎತ್ತಿದ ಹಲವು ವಿಚಾರಗಳಿಗೆ ನಿಮ್ಮ ಪ್ರತಿಕ್ರಿಯೆಯನ್ನು ಕೇಳಲು ಕೌತುಕನಾಗಿದ್ದೆ. ಆದರೆ ನೀವು ಒಂದೋ ಅವುಗಳನ್ನು ಕಡೆಗಣಿಸಲು ನಿರ್ಧರಿಸಿದ್ದೀರಿ ಅಥವಾ ಅವನ್ನು ಅಲ್ಪ ಮತ್ತು ವಿಪರೀತ ಸೂಕ್ಷ್ಮವೆಂದು ಕರೆದು ನಿರ್ಲಕ್ಷಿಸಲು ನಿರ್ಧರಿಸಿದ್ದೀರಿ. ಅವು ಹಾಗಿದ್ದವೋ ಎಂದು ನಾನು ಯೋಚಿಸುತ್ತಿದ್ದೇನೆ! ಆದರೆ ಕರ್ನಾಟಕ ಹಾಗೂ ಭಾರತದ ಕುರಿತಾಗಿ ನಿಮ್ಮ ಬದ್ಧತೆಯ ವಿಚಾರ ನಿಮ್ಮ ಮತ್ತು ನಿಮ್ಮ ಆತ್ಮಸಾಕ್ಷಿಯ ನಡುವಿನದ್ದು ಎನ್ನುವುದನ್ನು ಗೌರವಿಸುತ್ತೇನೆ; ಆದರೆ ಕನ್ನಡ ಮತ್ತು ಕರ್ನಾಟಕ ಮೂಲತಃ ಒಂದರಿಂದ ಒಂದು ಬೇರ್ಪಡಿಸಲಾಗದಂತಹವು ಎಂಬ ಒಂದು ಮಾತನ್ನು ಹೇಳುತ್ತ.
ನೀವು ಸಂಭೋದಿಸಿದ ಹಾಗೆ ನಾನು ಪ್ರೊಫೆಸರ್ ಅಲ್ಲ. ನಾನು ಆಕಾಶವಾಣಿ ಕೇಂದ್ರವೊಂದರ ಆಲ್ ಇಂಡಿಯಾ ರೇಡಿಯೋದ ಕೇಂದ್ರೀಯ (ಸ್ವಯಂ) ನಿವೃತ್ತ ನಿರ್ದೇಶಕ. ಮತ್ತು ನಿಮಗೆ ಹೆಚ್ಚಿನಮಾಹಿತಿಗಾಗಿ: ನಾನು ತುರ್ತುಪರಿಸ್ಥಿತಿಯ ದಿನಗಳಲ್ಲಿ ದೆಹಲಿಯಲ್ಲಿದ್ದೆ ಮತ್ತು ವಾರ್ತಾವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ! ನಾನು ಜೆಪಿ ಅವರ ಜೈಲಿನ ದಿನಚರಿಯನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ ಹಾಗೂ ಮೈಸೂರಿನ ಒಬ್ಬ ಪ್ರಕಾಶಕ ಮಿತ್ರರ ಮೂಲಕ ಪ್ರಕಟಿಸಿದ್ದೇನೆ. ಡಿ.ಆರ್. ನಾಗರಾಜ್ (ದೇವನೂರು ಮಹದೇವ ಕೂಡ) ನನ್ನ ಪ್ರಿಯ ಮಿತ್ರರಾಗಿದ್ದರು ಮತ್ತು ಕಾಲೇಜಿನ ದಿನಗಳಲ್ಲಿ ನನ್ನ ಜೂನಿಯರ್‍ಆಗಿದ್ದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನಾನು ಗಣಿತದಲ್ಲಿ ಎಂಎಸ್‍ಸಿ ಮಾಡುತ್ತಿದ್ದಾಗ ಅವರು ಕನ್ನಡದಲ್ಲಿ ಬಿಎ(ಆನರ್ಸ್) ಮಾಡುತ್ತಿದ್ದರು.
ಶುಭಹಾರೈಕೆಗಳೊಂದಿಗೆ,
ಡಿ.ಎಸ್, ನಾಗಭೂಷಣ
ಗುಹಾ ಅವರ ಉತ್ತರ
9.10.2017
ಪ್ರಿಯಶ್ರೀ ನಾಗಭೂಷಣ,
ಕ್ಷಮೆ ಇರಲಿ, ನಿಮ್ಮ ಈ ಮೇಲಿನ ಮೇಲ್‍ನಲ್ಲಿ ನೀವು ನಾನು ಗಾಂಧಿ ಮತ್ತು ಕಮಲಾದೇವಿಯವರನ್ನು ಕುರಿತು ಹೇಳಿದ್ದನ್ನು ತಪ್ಪಾಗಿ ಬಿಂಬಿಸಿದ್ದೀರಿ. ನಾನು ಸ್ಪಷ್ಟವಾಗಿ ಹಾಗೂ ನಿರ್ದಿಷ್ಟವಾಗಿ ಇವುಗಳನ್ನು ಹೇಳಿದ್ದೆ. a) ಅವರು ಉಪ್ಪಿನ ಸತ್ಯಾಗ್ರಹದ ನಡಿಗೆಯಲ್ಲಿ ಮಹಿಳೆಯರ ಕುರಿತಾಗಿ ಗಾಂಧಿಯವರ ಮನಸ್ಸನ್ನು ಬದಲಾಯಿಸಿದರು; b) ಅವರು ಗಾಂಧಿಯವರ ಸತ್ಯಾಗ್ರಹದ ಆಲೋಚನೆಯನ್ನು ಜನಾಂಗೀಯ ಶೋಷಣೆಯಿದ್ದ ಅಮೇರಿಕದ ದಕ್ಷಿಣ ಬಾಗದವರೆಗೆ ಕೊಂಡೊಯ್ದರು. ಆದರೆ ಈಗ ನೀವು ಗಾಂಧಿ ಮತ್ತು ಅವರು ‘ರಾಜಕೀಯೇತರ ವಿಷಯಗಳ ಕುರಿತು’ ಮಾತಾನಾಡಿದರೆಂದು ನಾನು ಹೇಳಿದೆ ಎನ್ನುತ್ತಿದ್ದೀರಿ!
ಜೆಪಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ವಿಷಯಕ್ಕೆ ಬಂದರೆ, ಹೆಗ್ಗೋಡಿನಲ್ಲಿ ನೀವುಇದು 1940ರಲ್ಲಿ ಘಟಿಸಿದ್ದೆಂದು ಹೇಳಿದಿರಿ. ಈಗ 1948ಎಂದು ಹೇಳುತ್ತಿದ್ದೀರಿ. ನೀವು ಮೊದಲ ಬಾರಿಗೆ ತಪ್ಪಾಗಿ ಹೇಳಿದೀರಿ ಎಂದುಕೊಳ್ಳೋಣ (ನಾವೆಲ್ಲರೂ ಮಾಡುವಂತೆ); 1940-42ರಲ್ಲಿ ಜಿನ್ನಾ ಅವರ ಸವಾಲಿಗೆ ಪ್ರತಿಯಾಗಿ ಕಾಂಗ್ರೆಸ್‍ಗೆ ಒಬ್ಬಮುಸ್ಲಿಂ ಅಧ್ಯಕ್ಷರಾಗುವುದು ಅಗತ್ಯವಿತ್ತು, ಹಾಗಾಗಿ ಜೆಪಿ ಅಧ್ಯಕ್ಷರಾಗುವುದನ್ನು ಕಲ್ಪಿಸಿಕೊಳ್ಳುವುದೂ ಕಷ್ಟವಾಗಿತ್ತು – ಆಜಾದ್ ಮಾತ್ರವೇ ಅಧ್ಯಕ್ಷರಾಗಬಹುದಿತ್ತು. 1948ರ ಹೊತ್ತಿನಲ್ಲಿ ಇದು ನಿಜಕ್ಕೂ ಸಾಧ್ಯವಾಗಿರಬಹುದು. 1948ರ ಹೊತ್ತಿಗೆ ಜೆಪಿ ಅವರ ಶೌರ್ಯ ಎಲ್ಲರ ಮನಸ್ಸಿನಲ್ಲಿಯೂ ನೆಲೆವೂರಿತ್ತು; ಹಾಗೂ ಅವರು ನೆಹರು ಅವರಿಗೆ ಕೂಡ ಬಹಳ ಸಮೀಪವಾಗಿದ್ದರು. ಹಾಗಾಗಿ ನೀವು ಹೇಳುವುದು ನಿಜಕ್ಕೂ ಘಟಿಸಿರಬಹುದು. ನೆಹರೂ ಅವರು ಜೆಪಿ ಕಾಂಗ್ರೆಸ್ ಅಧ್ಯಕ್ಷರಾಗಲೆಂದು ಆಶಿಸಿದ್ದು. ಆದರೆ ಇಂದು ಗಾಂಧಿಯವರ ಸಮಗ್ರ ಬರಹಗಳಲ್ಲಿ ಕಾಣಸಿಗುವುದಿಲ್ಲ. ಮತ್ತು, ಗಾಂಧಿ ಅವರ ಬದುಕಿನ ಕೊನೆಯ ತಿಂಗಳುಗಳಲ್ಲಿ ಹೊಂದಿದ್ದ ಒಂದೇ ಕಾಳಜಿ ಹಿಂದೂ-ಮುಸ್ಲಿಂ ಸಾಮರಸ್ಯ. ಕಾಂಗ್ರೆಸ್‍ನ ಅಧ್ಯಕ್ಷರುಯಾರಾಗಬೇಕು ಎನ್ನುವುದು ಅವರಿಗೆ ಬಹಳ ಮಹತ್ವದ್ದೇನಾಗಿರಲಿಕ್ಕಿಲ್ಲ.
ಇವತ್ತು ಕೆಲವರು ಲೋಹಿಯಾ ಅವರಿಗಿಂತ ನೆಹರೂ ಮತ್ತು ಜೆಪಿಯನ್ನು ಮೆಚ್ಚುತ್ತಾರೆಂದು ನೀವು ಆಶ್ಚರ್ಯ ತೋರಿಸಿದಿರಿ. ಒಂದು ಕಾರಣವೆಂದರೆ ಜೆಪಿ ಮತ್ತು ನೆಹರೂ ಇಬ್ಬರೂ ಸಭ್ಯ ಭಾಷೆಯಲ್ಲಿ ಮಾತನಾಡುತ್ತಿದ್ದರು, ತಮ್ಮ ರಾಜಕೀಯ ಎದುರಾಳಿಗಳ ಜೊತೆಗೂ ಕೂಡ, ಆದರೆ ಲೋಹಿಯಾ ಅನವಶ್ಯಕವಾಗಿ ವೈಯಕ್ತಿಕ ಹಾಗೂ ನಿಂದನಾತ್ಮಕ ಭಾಷೆಯನ್ನು ಬಳಸುತ್ತಿದ್ದರು. ನಿಮ್ಮ ಮೊದಲ ಮೇಲ್‍ನಲ್ಲಿ ನೀವು ನನ್ನನ್ನು ‘ಇಂಗ್ಲಿಷ್ ಭಾವಿಯ ಮುದ್ದು ಕಪ್ಪೆ’ ಎಂದು ಕರೆದಿರಿ; ನೆಹರೂ ಅಥವಾ ಜೆಪಿ (ಅಥವಾ ಗಾಂಧಿ ಅಥವಾ ಕಮಲಾದೇವಿ) ಬೌದ್ಧಿಕ ಹಾಗೂ ರಾಜಕೀಯ ಚರ್ಚೆಯಲ್ಲಿ ಇಂತಹ ಭಾಷೆಯನ್ನು ಬಳಸುತ್ತಿದ್ದರೆಂದು ನನಗನ್ನಿಸುವುದಿಲ್ಲ. ಲೋಹಿಯಾ ಅವರಲ್ಲಿನ ಈ ಚಾಳಿಯು ಅವರ ಅದ್ಭುತಬುದ್ಧಿವಂತಿಕೆ ಹಾಗೂ¸ ಸೃಜನಶೀಲತೆಯನ್ನು ಮರೆಮಾಚಿತು ಹಾಗೂ ಮೋಸಗೈದಿತು.
ಆದರೆ ನಿಮ್ಮ ಕೊನೆಯ ಪ್ಯಾರಾ, ನಾನು ಕನ್ನಡ ತಿಳಿದಿಲ್ಲದೆ ಏನು ಕಳೆದುಕೊಂಡಿದ್ದೇನೆಂದು ಮತ್ತೊಮ್ಮೆ ತೋರಿಸಿತು. ನಾನು ದೇವನೂರು ಮಹದೇವ ಅವರ ಕುರಿತು ಮತ್ತಷ್ಟು ತಿಳಿದಿರಲು ಬಯಸುತ್ತೇನೆ ಹಾಗೂ ಅವರಂತಹವರನ್ನು ಅವರದೇ ಭಾಷೆಯಲ್ಲಿ ಓದಬಯಸುತ್ತೇನೆ. ಆದರೆ ಈ ವಿಚಾರದಲ್ಲಿ ಕೂಡ ನಿಮ್ಮ ತಪ್ಪುಕಲ್ಪನೆಗಳಲ್ಲೊಂದನ್ನು ನಿವಾರಿಸ ಬಯಸುತ್ತೇನೆ. ನಾನು ಅಧಿಕಾರ ಮತ್ತು ದರ್ಪದಿಂದ ನಾಗರಾಜ್, ಅನಂತಮೂರ್ತಿ ಮತ್ತು ಕಾರ್ನಾಡ್ ಅವರ ಹೆಸರುಗಳನ್ನೆಸೆಯುತ್ತೇನೆಂದು ನೀವು ಹೇಳಿದ್ದೀರಿ. ಅದಕ್ಕೆ ಬದಲಾಗಿ ಅವರನ್ನು ಗೆಳೆಯರಾಗಿ ಅರಿಯುವಷ್ಟು ನಾನು ಅದೃಷ್ಟವಂತನಾಗಿದ್ದೇನೆ ಎಂದಷ್ಟೇ ನಾನು ಹೇಳಿದ್ದು. ನನ್ನ ವೈಯಕ್ತಿಕ ಋಣವನ್ನು ಹೊರತಾಗಿ ನಾನು ಮತ್ತೇನನ್ನೂ ಹೇಳ ಹೋಗಿಲ್ಲ. ಕೆಲವೇ ಗೆಳೆತನಗಳನ್ನಾಧರಿಸಿ ಕನ್ನಡದ ವಿದ್ವತ್ತು ಹಾಗೂ ಸಾಹಿತ್ಯದ ಆಳವಾದ ಜ್ಞಾನವನ್ನು ಹೊಂದಿರುವುದಾಗಿ ನಾನು ಎಲ್ಲಿಯೂ ಹೇಳಿಲ್ಲ. ನಾನು ಅಷ್ಟು ಮೂರ್ಖನೂ ಅಲ್ಲ, ಅಷ್ಟು ದುರಹಂಕಾರಿಯೂ ಅಲ್ಲ. ನನ್ನ ಭಾರತದಾದ್ಯಂತ ಬದುಕಿನಲ್ಲಿ ಹಿಂದಿ, ಬೆಂಗಾಳಿ, ಮಲಯಾಳಂ, ತಮಿಳು ಮತ್ತು ಒರಿಯಾ ಭಾಷೆಗಳ ಹಲವು ಅಸಮಾನ್ಯ ಲೇಖಕರನ್ನು ವೈಯಕ್ತಿಕವಾಗಿ ಸಮೀಪದಲ್ಲಿ ತಿಳಿಸಿಕೊಳ್ಳುವ ಅದೃಷ್ಟ ನನಗೆ ದೊರೆತಿದೆ. ಈ ಭೇಟಿ, ಮುಖಾಮುಖಿಗಳು ನನ್ನನ್ನು ಈ ಭಾಷಾ ಪರಂಪರೆಗಳೆಡೆಗೆ ನನ್ನ ಸೊಕ್ಕು ಕಡಿಮೆಯಾಗುವಂತೆ ಮಾಡಿದೆ. ಅಂತೆಯೇ ನನ್ನ ಕನ್ನಡ ಗೆಳೆಯರ ವಿಷಯದಲ್ಲೂ ಕೂಡ. ನಿಮ್ಮಿಂದ ಕೂಡ ಬಹಳಷ್ಟು ಕಲಿಯಬಲ್ಲೆ ಎಂದು ನನಗೆ ಖಾತ್ರಿಯಿದೆ.
ಶುಭಹಾರೈಕೆಗಳೊಂದಿಗೆ,
ಆರ್. ಗುಹಾ
ಸಂವಾದದ ಮೊದಲ ಭಾಗವನ್ನು ನೀವು ಇಲ್ಲಿ ಓದಬಹುದು .
ಸಮಾಜವಾದಿಗಳೊಂದಿಗೆ ಗಾಂಧಿ : ಗುಹಾ – ಡಿ . ಎಸ್ . ನಾಗಭೂಷಣ ಸಂವಾದ ಭಾಗ ೧
14 ಪುಟಗಳಷ್ಟು ದೀರ್ಘವಾಗಿರುವ ಈ ಸಂವಾದ ಋತುಮಾನದಲ್ಲಿ ಕೆಲವು ಕಂತುಗಳಲ್ಲಿ ಪ್ರಕಟವಾಗುತ್ತದೆ .ಇಂಗ್ಲೀಶ್ ನಲ್ಲಿದ್ದ ಈ ಮಿಂಚಂಚೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದು ಸುಬ್ರಮಣ್ಯ ಹೆಗಡೆ.
ಮೂಲತಃ ಶಿರಸಿಯವರಾದ ಸುಬ್ರಹ್ಮಣ್ಯ ಹೆಗಡೆ ಈಗ ತಿರುವನಂತಪುರಂನಲ್ಲಿ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಅನುಸಂಧಾನ ಕೇಂದ್ರದಲ್ಲಿ ಭೌತಶಾಸ್ತ್ರದ ಸಂಶೋಧನಾ ವಿದ್ಯಾರ್ಥಿ. ಆಗೀಗ ಕವಿತೆಗಳನ್ನು ಬರೆಯುತ್ತಾರೆ. ಬ್ಲಾಗಿಗ.
Pingback: ಋತುಮಾನ | ಸಮಾಜವಾದಿಗಳೊಂದಿಗೆ ಗಾಂಧಿ : ಗುಹಾ – ಡಿ . ಎಸ್ . ನಾಗಭೂಷಣ ಸಂವಾದ ಭಾಗ ೪