ಡೇವಿಡ್ ಬಾಂಡ್ ಬರೆಯುವ ಚಿತ್ರ ಭಾರತ : ಕ್ರೌರ್ಯ ಕಥನ – ಆಡುಕಳಂ

(ಆಡುಕುಲಮ್, ೨೦೧೧ರ ತಮಿಳು ಸಿನೆಮಾ, ನಿರ್ದೇಶನ: ವೆಟ್ರಿಮಾರನ್)

ಸಿನೆಮಾ ಮಾಧ್ಯಮದಲ್ಲಿ ‘ಖಳ’ನ ಪರಿಕಲ್ಪನೆಯ ಹುಟ್ಟು ಮತ್ತು ಬೆಳವಣಿಗೆ ಕುತೂಹಲಕರವಾದದ್ದು. ಮುಖ್ಯವಾಗಿ ವಿಕ್ಟೋರಿಯನ್ ಭಾವಾವೇಶದ ನೆಲೆಯಲ್ಲಿ ಆರಂಭಗೊಂಡ ‘ಖಳ-ಸಂಸ್ಕೃತಿ’ ಅಮೆರಿಕಾದ ಸಿನೆಮಾಗಳಲ್ಲಿ ಬಲವಾಗಿಯೇ ಬೇರೂರಿತು. ಧರ್ಮಶುದ್ಧಿಯ ಹಿನ್ನೆಲೆಯಲ್ಲಿ ಎಲ್ಲವೂ ಒಂದೋ ಒಳ್ಳೆಯದರ ಅಥವಾ ಕೆಟ್ಟದರ ನಡುವೆ ವಿಂಗಡನೆಯಾಗುತ್ತಿದ್ದ ಕಾಲ ಹಾಗೂ ಸಂದರ್ಭದಲ್ಲಿ ಅಮೆರಿಕಾ ಇದ್ದುದರಿಂದ, ಅಲ್ಲಿಯ ದೃಶ್ಯಮಾಧ್ಯಮದಲ್ಲಿ ಖಳ ಹೆಚ್ಚು ಕಾಣಿಸುತ್ತಿದ್ದುದು ಸಹಜವೇ. ಐರೋಪ್ಯ ಸಿನೆಮಾ ಇದರಿಂದ ಸ್ವಲ್ಪ ಹೊರತಾಗಿಯೇ ಉಳಿಯಿತು. ಇದು ಆಶ್ಚರ್ಯಕರ ಬೆಳವಣಿಗೆ. ಯುರೋಪಿನಲ್ಲಿ ಖಳ ಲಕ್ಷಣದ ಅನೇಕರು ಜನಮಾನಸದ ಮೇಲೆ ಪ್ರಬಲ ಛಾಯೆ ಬೀರುತ್ತಿರುವಾಗಲೂ ಅಲ್ಲಿನ ದೃಶ್ಯಮಾಧ್ಯಮ ಯಾರನ್ನೂ ವಿಜೃಂಭಿಸದ ನಿರೂಪಣೆಯಲ್ಲಿ ತೊಡಗಿತ್ತು. ಹೀಗಾಗಿ ಕ್ರೌರ್ಯ ಕಥನ ಹಾಗೂ ಖಳಪಾತ್ರಚಿತ್ರಣದ ಅಧ್ಯಯನದಲ್ಲಿ ಅಮೆರಿಕಾದ ಸಿನೆಮಾಗಳೇ ಮುಖ್ಯಪಾತ್ರ ವಹಿಸುತ್ತವೆ.

ಈ ಖಳ ಪಾತ್ರ ಚಿತ್ರಣ ಸೃಜನಶೀಲವಾಗಿ ತುತ್ತತುದಿ ಮುಟ್ಟಿದ್ದು ೧೯೫೦ರ ದಶಕದಲ್ಲಿ ಎಂದೆನ್ನಬಹುದು. ಅದು ಅಮೇರಿಕಾದಲ್ಲಿ film noir ಎನ್ನಲಾದ ಚಲನಚಿತ್ರ ವಿಧದ ಕಾಲ, ಈ ಕಾಲದಲ್ಲಿ ತಲ್ಲಣಗೊಳಿಸಿದ ಎರಡು ಭೀಕರ ಖಳಪಾತ್ರಗಳು ಇಲ್ಲಿ ಪ್ರಸ್ತುತ. ಮೊದಲನೆಯದು Charles Laughton ನ The night of the hunter (1955) ಚಿತ್ರದಲ್ಲಿ Robert Mitchum ನಿರ್ವಹಿಸಿದ ಪಾದ್ರಿ – ಸರಣಿ ಕೊಲೆಗಡುಕನ ಪಾತ್ರ. ಮತ್ತೊಂದು Alexander Mackendrick ನ The sweet smell of success (1957) ಸಿನಿಮಾದಲ್ಲಿ Burt Lancaster ಅದ್ಭುತ ಪ್ರತಿಭೆಯಲ್ಲಿ ಅರಳಿದ ಪ್ರಭಾವಶಾಲಿ ಪತ್ರಿಕಾ ಗಾಸಿಪ್ ಅಂಕಣಕಾರನ ಪಾತ್ರ. ಇದರಲ್ಲಿ ಎರಡನೆಯದು ಹೆಚ್ಚು ಆಸಕ್ತಿಕರವಾದದ್ದು. ಇಲ್ಲಿ ಒಂದು ಕಾರ್ಯಕ್ಷೇತ್ರದ ಪರಿಮಿತಿಯಲ್ಲಿ ಇರಬಹುದಾದ ಅಧಿಕಾರದ ಸುತ್ತಲಿನ ಖಳಸಂಸ್ಕೃತಿಯ ಜೊತೆಗೇ ಒಬ್ಬ ವಯಸ್ಸಾದ ಪರಿಣಿತ ಹಾಗೂ ಉತ್ಸಾಹಿ ಯುವಕನ ನಡುವಿನ ಗುರು-ಶಿಷ್ಯ ರೀತಿಯ ಸಂಬಂಧವಿದೆ. ಇದು ಸೂಕ್ಷ್ಮವಾಗಿ ಅಪ್ಪ-ಮಗನ ಸಂಬಂಧವನ್ನು ಹೋಲುವಂತಿದೆ.

ಈ ಸೂಕ್ಷ್ಮ ಸಂಬಂಧದ ಹಿನ್ನೆಲೆಯಲ್ಲಿಯೇ ವೆಟ್ರಿಮಾರನ್ ನಿರ್ದೇಶನದ ೨೦೧೧ರ ಚಿತ್ರ ‘ಆಡುಕಳಂ’ನ್ನು ಗಮನಿಸಬಹುದು. ಸ್ಥೂಲವಾಗಿ ಹೇಳುವುದಾದರೆ ಇಲ್ಲಿನ ಕಥಾಜಗತ್ತು ಮಧುರೈನ ಅಂಕಕ್ರೀಡೆಯ ರೂವಾರಿಗಳಾದ ವಯಸ್ಸಾದ ಪೆಟ್ಟೈಕಾರನ್ ಹಾಗೂ ಅವನ ನೆಚ್ಚಿನ ‘ಪುತ್ರಸ್ವರೂಪಿ’ ಕರುಪ್ಪು (ಧನುಷ್) ನಡುವಿನ ಸಂಬಂಧದ ಸುತ್ತ ಹರಡಿದೆ. ಅಮೆರಿಕಾದಲ್ಲಿ ೧೯೫೭ರಲ್ಲಿ ಅಲೆಕ್ಸಾಂಡರ್ ಕಟ್ಟಿರುವ ಕಥೆಗೂ ಇಲ್ಲಿಗೂ ಸುಲಭವಾಗಿ ಸಾಮ್ಯತೆಗಳನ್ನು ಗುರುತಿಸಬಹುದು. ಅಲ್ಲಿನ ಪತ್ರಿಕಾರಂಗದ ಗಾಸಿಪ್ ಜಗತ್ತು ಹಾಗೂ ಇಲ್ಲಿನ ಸಣ್ಣ ಪಟ್ಟಣದ ಕ್ರೀಡೆಗಳೆರಡೂ ತುರುಸಿನ ಸ್ಪರ್ಧೆಗಳೇ. ಗಾಸಿಪ್ ರಂಗದ ಕ್ರೌರ್ಯವು ಮನಸ್ಸುಗಳ ನೆಲೆಯಲ್ಲಿ ನಡೆದು ಮುಂದೆ ದೈಹಿಕವಾಗಿ ಪರಿವರ್ತನೆಗೊಂಡರೆ ಇಲ್ಲಿನ ಜನಪದ ಕ್ರೀಡೆಯು ಮೇಲ್ನೋಟಕ್ಕೆ ದೈಹಿಕ ಕ್ರೌರ್ಯವಾಗಿದ್ದು ಕ್ರಮೇಣ ಮಾನಸಿಕ ಹಿಂಸೆಗೆ ಎಡೆಮಾಡಿಕೊಡುತ್ತದೆ.

ಭಾರತೀಯ ದೃಶ್ಯಮಾಧ್ಯಮದ ಸಂದರ್ಭದಲ್ಲಿ ಖಳಪಾತ್ರಗಳು ಹೇರಳವಾಗಿದ್ದರೂ ಅಮೆರಿಕಾದಲ್ಲಿಯಂತೆ ಆಳವಾದ ದೃಶ್ಯಕೋನ ಹಾಗೂ ನಿರ್ದೇಶಕನ ಗಂಭೀರ ಗಮನ ಸಾಮಾನ್ಯವಾಗಿ ದೊರಕಿರುವುದಿಲ್ಲ. ಆದರೆ ‘ಆಡುಕುಲಂ’ನಲ್ಲಿ ನೋಡುಗರನ್ನು ಒಂದು ಬಗೆಯ ಜಾಲದಲ್ಲಿ ಸೆರೆಹಿಡಿಯುವ ಮೂಲಕ ಇದನ್ನು ಸಾಧಿಸಲಾಗಿದೆ. ಕಥೆಯ ಪ್ರಾರಂಭದಿಂದಲೇ ಇಬ್ಬರು ಪ್ರಮುಖ ಖಳಪಾತ್ರಗಳ ನಡುವೆ ಕದನ ಸೃಷ್ಟಿಸಲಾಗಿದೆ. ಇವರಲ್ಲಿ ರಾಮಸ್ವಾಮಿ ಪ್ರಭಾವಶಾಲಿ ಹಾಗೂ ತಕ್ಕಮಟ್ಟಿಗೆ ಭ್ರಷ್ಟ ಪೊಲೀಸ್ ಅಧಿಕಾರಿಯಾದರೆ, ಪೆಟ್ಟೈಕಾರನ್ ಮೇಲ್ನೋಟಕ್ಕೆ ಸರಳ ಹಾಗೂ ಹೋಲಿಕೆಯಲ್ಲಿ ಹೆಚ್ಚು ಕರುಣೆಗೆ ಅರ್ಹನಾದ ಪಾತ್ರ. ಹೀಗಾಗಿ ಸನ್ನಿವೇಶವು ಪರಂಪರಾಗತವಾಗಿ ಪ್ರಭಾವಿ ರಾಮಸ್ವಾಮಿಯಡೆಗೆ ವಾಲಿದಂತೆಯೇ ತೋರುತ್ತದೆ.

ಆದರೆ ಕ್ರಮೇಣ ಪೆಟ್ಟೈ ಕ್ರೂರಿಯಾಗುತ್ತಾ ಸಾಗುವುದು ನೋಡುಗರನ್ನೂ ಸೇರಿದಂತೆ ಅನೇಕ ಪಾತ್ರಗಳಿನ್ನೂ ಚಕಿತಗೊಳಿಸುತ್ತದೆ. ಕರುಪ್ಪುವಂತೂ ತನ್ನ ‘ಹಿರಿಯಣ್ಣ’ನ ಈ ಬದಲಾವಣೆಯನ್ನು ನಂಬಲು ಸಿದ್ಧವಿರುವುದೇ ಇಲ್ಲ. ಇನ್ನೊಂದೆ ರಾಮಸ್ವಾಮಿ ಅವಮಾನಗಳಿಂದ ಕುಗ್ಗಿ ಕೊನೆಕೊನೆಗೆ ನಮ್ಮ ಸಹಾನುಭೂತಿ ಗಳಿಸಿರುತ್ತಾನೆ. ಪೆಟ್ಟೈ ಮಾತ್ರ ಎಲ್ಲರ ನಿರೀಕ್ಷೆ ಮೀರಿ ಕ್ರೌರ್ಯದಲ್ಲೂ, ಕೋಳಿ ಅಂಕ ಕ್ರೀಡೆಯಲ್ಲೂ ಎದುರಾಳಿಗಳನ್ನು ಮಣಿಸುತ್ತಾನೆ. ತನ್ನ ತಮ್ಮ ಅಥವಾ ಶಿಷ್ಯನಂತಿರುವ ಕರುಪ್ಪುವಿನ ಏಳಿಗೆಯ ಸಹಿಸಲಾಗದ ಈರ್ಷ್ಯೆಯೇ ಆತನ ಕ್ರೌರ್ಯಕ್ಕೆ ಸ್ಫೂರ್ತಿಯಾಗುತ್ತದೆ. ಸ್ವಾರಸ್ಯವೆಂದರೆ ಈ ಬದಲಾವಣೆ ಹಠಾತ್ತನೆ ಸಂಭವಿಸುವುದಿಲ್ಲ. ಚಿತ್ರದ ಕೊನೆಯವರೆಗೂ ನಮ್ಮ ಮರುಕವನ್ನೇ ಗಳಿಸುತ್ತಾ ಕೊನೆಕೊನೆಗೆ ಭ್ರಷ್ಟತೆ ತೋರ್ಪಡಿಸುತ್ತಾನೆ. ಆತನ ಕೊನೆಯ ನಡೆ ಪಾಪಪ್ರಜ್ಞೆಯದ್ದು ಎಂದು ತೋರಿದರೂ (ಇದು ತಪ್ಪಾಯಿತು ಎಂದು ನನ್ನ ಅಭಿಮತ), ಅದು ಕೂಡಾ ಆತನ ಕ್ರೌರ್ಯದ ಮುಂದುವರಿಕೆಯೇ ಆಗಿದೆ.

ಹೀಗಾಗಿ ಎಲ್ಲೂ ಚಕಿತಗೊಳಿಸದ ಸಾಂಪ್ರದಾಯಿಕ ಖಳನನ್ನು ನಾವು ನಿರೀಕ್ಷಿಸುವಂತಹ ಆರಂಭವನ್ನು ಕೊಟ್ಟ ಸಿನೆಮಾ ಕೊನೆಯಲ್ಲಿ ಖಳಪಾತ್ರವನ್ನು ವಿವಿಧ ಕೋನಗಳಿಂದ ಅಭ್ಯಸಿಸುವಂತಹ ಕಥಾತಂತ್ರ ಬಿಚ್ಚಿಡುತ್ತದೆ. ಹೀಗಾಗಿ ಮೇಲೆ ಹೆಸರಿಸಿದ ಮಹತ್ವದ ಅಮೇರಿಕಾದ ಸಿನಿಮಾಗಳಿಗೂ ಸಾಟಿಯಾಗುತ್ತದೆ. ಪೆಟ್ಟೈಕಾರನ್ ಆಗಿ ಶ್ರೀಲಂಕಾದ ತಮಿಳು ಕವಿ ವಿ.ಐ.ಎಸ್. ಜಯಪಾಲನ್ ಅವರು ವಿಶೇಷವಾಗಿ ಗಮನ ಸೆಳೆಯುತ್ತಾರೆ. ಎಪ್ಪತ್ತರ ವಯಸ್ಸಿನಲ್ಲಿ ಮೊದಲ ಬಾರಿಗೆ ಅಭಿನಯಿಸಿರುವ ಅವರ ತೀವ್ರತೆ ಮೆಚ್ಚಲೇಬೇಕು. ರಕ್ತಬಣ್ಣದ ಸ್ಕಾರ್ಫ್, ರಕ್ತಮೆತ್ತಿದ ಬಿಳಿ ಜುಬ್ಬಾ ಧರಿಸಿ ಏಕಕಾಲಕ್ಕೆ ಹಾಯಾಗಿಯೂ ಕ್ರೂರಿಯಾಗಿಯೂ ಕಾಣಬಲ್ಲ ಅವರ ನಿಲುವು ಸುಲಭಕ್ಕೆ ಮರೆಯುವಂಥದ್ದಲ್ಲ.

ಕೋಳಿ ಅಂಕ ಕ್ರೀಡೆ ಸಿನೆಮಾಗಳಲ್ಲಿ ಹೊಸದೇನಲ್ಲ. ‘ಪ್ರವಾಸಿ’ ಗುಣವಿದ್ದ ಹಲವು ಸಿನಿಮಾಗಳಲ್ಲಿ ಅದು ಸಾಮಾನ್ಯವೇ ಆಗಿತ್ತು. ಬಹಳ ಹಿಂದೆಯೇ ಲುಮಿಯರ್ ಸಹೋದರರು ಮೆಕ್ಸಿಕೋದಲ್ಲಿ ಇದನ್ನು ಸೆರೆಹಿಡಿದಿದ್ದರು. ಮುಂದೆ ಹಲವೆಡೆ ಆಟ ಬ್ಯಾನ್ ಆಗಿದ್ದರೂ ದೃಶ್ಯಮಾಧ್ಯಮದಲ್ಲಿ ಇದೊಂದು ಪ್ರಬಲ ರೂಪಕವಾಗಿಯೇ ಉಳಿಯಿತು. ಜಾನ್ ಶ್ಲೆಸಿಂಗರ್‌ನ ೧೯೬೭ರ ಚಿತ್ರ ‘Far from the madding crowd’ ಇದಕ್ಕೆ ಉದಾಹರಣೆ. ಇದರಲ್ಲಿರುವಷ್ಟು ನೈಜತೆ ‘ಆಡುಕುಳಂ’ನಲ್ಲಿ ಇಲ್ಲದಿರುವುದಕ್ಕೆ ಕಾರಣ ಕಂಪ್ಯೂಟರ್ ಗ್ರಾಫಿಕ್ಸ್. ಆದರೆ ಈ ತಂತ್ರದಿಂದಾಗಿ ದೊರೆತಿರುವ ಸಿನಿಮೀಯ ಸಾಹಸಗುಣ ಪರಿಣಾಮಕಾರಿಯಾಗಿದೆ.

ಅಂಕಕ್ರೀಡೆ ಕೇವಲ ದೃಶ್ಯಕಾವ್ಯವಾಗಿಯಷ್ಟೇ ಅಲ್ಲದೆ ಒಂದು ಇಮೇಜ್ ಆಗಿಯೂ ಈ ಚಿತ್ರದಲ್ಲಿ ಬಳಕೆಯಾಗುತ್ತದೆ. ಹೀಗಾಗಿ ಅದು ಕಥೆಗಷ್ಟೇ ಅಲ್ಲ, ದನಿಗೂ ಸಹಾಯಕಾರಿ. ವೆಟ್ಟೈಮಾರನ್‌ರ ಉಳಿದ ಸಿನಿಮಾಗಳಂತೆ ಇಲ್ಲಿಯೂ ಛಾಯಾಗ್ರಹಣ ಸಮರ್ಥವಾಗಿದೆ. ಕೆಲವು ದೃಶ್ಯಗಳು ಬೇರೆಡೆ ಚಿತ್ರಿತವಾಗಿದ್ದರೂ ಒಂದು ಕ್ಷಣವೂ ಕೂಡಾ ನೋಡುಗನಿಗೆ ಅದು ತಮಿಳುನಾಡಿನ ಮಧುರೈಗಿಂತ ಹೊರಗಿನದು ಎಂದೆನಿಸುವುದಿಲ್ಲ. ಚಿತ್ರದುದ್ದಕ್ಕೂ ಇರುವ ಸ್ಪಷ್ಟತೆ ಮತ್ತು ಒಂದು ಬಗೆಯ ಸತ್ಯಾಸತ್ಯತೆ ಮುಟ್ಟಿ ನೋಡುವಷ್ಟು ಯಶಸ್ವಿಯಾಗಿದೆ.

ಇದೇ ನಿರ್ದೇಶಕರ ಜೊತೆ ೨೦೦೭ರಲ್ಲಿ ‘ಪೊಲ್ಲಾಡವನ್’ ಚಿತ್ರಕ್ಕೆ ದುಡಿದಿದ್ದ ಜಿ.ವಿ.ಪ್ರಕಾಶ್ ಕುಮಾರ್‌ರವರ ಸಂಗೀತ ಸಂಯೋಜನೆಯೂ ಹಿಡಿಸುವಂತಿದೆ. ಇವರಿಗೆ ತಮಿಳಿನ rapper ಯೋಗಿ.ಬಿ ಕೂಡಾ ಜೊತೆಯಾಗಿದ್ದಾರೆ. ನನ್ನ ವೈಯಕ್ತಿಕ ಅಭಿರುಚಿಗೆ ಕೆಲವೆಡೆ ಗದ್ದಲವೆನಿಸಿದರೂ ಒಟ್ಟಾರೆ ಕಥೆಗೆ ಅಗತ್ಯವಾಗುವಂತೆಯೇ ಸಂಯೋಜನೆಗಳಿವೆ. ಸಂಗೀತ ಸಂಯೋಜನೆ ಇಲ್ಲೆಲ್ಲಿಯೂ ಕೇವಲ ಕಿರಿಕಿರಿಯಾಗುವಂತಹ ಧ್ವನಿಗಳ ಸಮೂಹವಾಗುವುದಿಲ್ಲ. ಬದಲಿಗೆ, ಕತೆಯ ಜೊತೆಗೇ ನಿಧಾನವಾಗಿ ಕಟ್ಟಲ್ಪಡುತ್ತಾ ಕ್ರಮೇಣ ಬಿಡಿಸಲಾರದಷ್ಟು ಪರಿಸರಕ್ಕೆ ಪೂರಕವಾಗುತ್ತದೆ.

ಹಾಗೆಂದು ಇದೊಂದು ಪರಿಪೂರ್ಣ ಚಿತ್ರವೆಂದಲ್ಲ. ಹುಡುಗಿಯ ಸೂಸೈಡ್ ಪ್ರಯತ್ನದಂತೆ ನಂಬಲು ಕಷ್ಟವಾಗುವ ದೃಶ್ಯಗಳಿವೆ. ಮೊದಮೊದಲಿನ ರೋಮಾನ್ಸ್ ದೃಶ್ಯಗಳು ಶ್ರಮ ಬೇಡುತ್ತವೆ. ಪಾತ್ರಗಳೆಲ್ಲವೂ ಸತತವಾಗಿ ಬಳಸುವ ಅವಾಚ್ಯ ಪದಗಳು ಅಜೀರ್ಣವಾಗುತ್ತವೆ. ಆದರೆ ಸಿನೆಮಾದ ಹಲವು ಧನಾತ್ಮಕ ಗುಣಗಳಿಂದಾಗಿ, ಧನಾತ್ಮಕ ಗುಣಗಳಿಂದಾಗಿ, ತಕ್ಕಡಿ ಸಂಪೂರ್ಣವಾಗಿ ಇತ್ತಲೇ ವಾಲುತ್ತದೆ. ಇಬ್ಬರು ಯುವಕರ ನಡುವಿನ ಹೊಡೆದಾಟದ ದೃಶ್ಯ ದನಿಯಲ್ಲಷ್ಟೇ ಅಲ್ಲದೇ ನೋಡಲು ಕೋಳಿಜಗಳದಂತೆಯೇ ಕಾಣುವುದು ಅದ್ಭುತ ಸ್ವಂತಿಕೆಯಿಂದ ಕೂಡಿದೆ. ಅಸಾಂಪ್ರದಾಯಿಕ ಮುಕ್ತಾಯವನ್ನೂ ಇದೇ ಪಟ್ಟಿಗೆ ಸೇರಿಸಬಹುದು. ಅಷ್ಟೇ ಏಕೆ, ನಾಯಕ-ನಾಯಕಿಯ ಪ್ರೇಮ ಕಥಾನಕವೂ ಸಿದ್ಧ ಸೂತ್ರಗಳಿಂದ ಹೊರತಾಗಿದೆ. ಮೊದಲ ನೋಟದಲ್ಲಿ ಪ್ರೀತಿಯಿಲ್ಲ, ಎರಡನೇ ನೋಟದಲ್ಲಿಯೂ ಇಲ್ಲ, ಬದಲಿಗೆ ಚಿತ್ರದ ಮತ್ತೊಂದು ಮುಖ್ಯಾಂಶವಾದ ಆಂಗ್ಲೋ ಇಂಡಿಯನ್ ಸಮುದಾಯದ ಕಥಾಹಾದಿಯಿಂದ ಪ್ರೇಮಪಥವು ಸತ್ವವನ್ನು ಎರವಲು ಪಡೆದುಕೊಳ್ಳುತ್ತದೆ.

ನಾನು ನೋಡಿದ, ವಿಮರ್ಶಿಸಿದ ಎರಡು ವೆಟ್ರಿಮಾರನ್ ಸಿನೆಮಾಗಳಲ್ಲಿ ಇದು ನಿಸ್ಸಂಶಯವಾಗಿ ಹೆಚ್ಚಿನ ಮೌಲಿಕ ಚಿತ್ರ. ಇದರ ಸ್ವಂತಿಕೆ, ಕಥೆ ಜರುಗುವ ಅಪರೂಪದ ಸಂದರ್ಭ, ದೇಶ ಹಾಗೂ ಅಧಿಕಾರದ ಭ್ರಷ್ಟಗುಣವನ್ನು ಸೂಕ್ಷ್ಮವಾಗಿ ಸೆರೆಹಿಡಿಯುವ ಪ್ರಯತ್ನದಿಂದಾಗಿ ಈ ಚಿತ್ರ ಕಾಲಾಂತರದಲ್ಲಿ ಇನ್ನೂ ಹೆಚ್ಚು ಮೌಲಿಕವಾಗುತ್ತದೆ ಎಂದು ನಾನು ನಂಬಿದ್ದೇನೆ.

ಇಂಗ್ಲೀಷಿ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ


ಅನುವಾದ : ಅವಿರತ ಮಾವಿನಕುಳಿ
ಮೂಲತಃ ಮೈಸೂರಿನವರಾದ ಅವಿರತ ಮಾವಿನಕುಳಿ ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಉದ್ಯೋಗಿ .

ಪ್ರತಿಕ್ರಿಯಿಸಿ