ನಾಳೆ ಕನ್ನಡದ ಶ್ರೇಷ್ಟ ಕವಿಗಳಲ್ಲೊಬ್ಬರಾದ ಶ್ರೀ ಗೋಪಾಲಕೃಷ್ಣ ಅಡಿಗರ ಹುಟ್ಟಿಗೆ ನೂರು ವರ್ಷಗಳ ಸಂಭ್ರಮ. ‘ಕೂಪ ಮಂಡೂಕ’ ಅವರ ಪ್ರಸಿದ್ಧ ಕವನಗಳಲ್ಲೊಂದು. ಇದು ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ‘ವರ್ಧಮಾನ’ ಕವನ ಸಂಕಲನದಲ್ಲಿದೆ .
ಋತುಮಾನಕ್ಕಾಗಿ ನಿನಾದ ಕಾವ್ಯ ಗಾಯನ ಬಳಗ ಈ ದೀರ್ಘ ಕವನದ ಆಯ್ದ ಭಾಗಗಳನ್ನು ಹಾಡಿದ್ದಾರೆ .
ಪ್ರಸ್ತುತಿ : ನಿನಾದ ಕಾವ್ಯ ಗಾಯನ ಬಳಗ , ಉಡುಪಿ
ಸಂಗೀತ ಸಂಯೋಜನೆ : ಗುರುರಾಜ ಮಾರ್ಪಳ್ಳಿ
ಗಾಯನ : ವಿದ್ವಾನ್ ರವಿಕಿರಣ್ ಮಣಿಪಾಲ್
ಡಾ . ಶಶಿಕಾಂತ್. ಕೆ
ಪಕ್ಕವಾದ್ಯ : ಭಾರವಿ ದೇರಾಜೆ
ಶಶಿಕಿರಣ್ ಮಣಿಪಾಲ್
* ಹಾಡಿರುವ ಭಾಗಗಳನ್ನು ಕಂಡು ಬಣ್ಣದಲ್ಲಿ ಗುರುತಿಸಲಾಗಿದೆ .
೧
ನೀನೆಲ್ಲಿ ಈಗ; ಹೆಗಲಿಗೆ ಹೆಗಲ ಕೊಟ್ಟವನು
ಹಾಯಿಯನ್ನುರುಟುರುಟು ಊದಿದವನು,
ದಾರಿಯುದ್ದಕ್ಕು ರಹದಾರಿ ಗಿಟ್ಟಿಸಿ ದಿಳ್ಳಿ
ದ್ವೀಪಾಂತರಕ್ಕೆ ಕೈಕೊಟ್ಟ ಸಖನು?
ನಟ್ಟ ನಡುದಾರಿ ತೇಗುವ ತೋಟದೊಳಗಡೆಗೆ
ಮೂಗುಮಟ ಕುಡಿದ ತಂಗೊಳದ ತಡಿಗೆ
ಟಾಂಗುಕೊಟ್ಟು ಕಮಂಗಿ ಕಣ್ಣುಬಿಡುವಷ್ಟಕ್ಕೆ
ಕಂಬಿಕಿತ್ತೆ ವಿಶಾಲ ನೀಲದೆಡೆಗೆ.
ಮೈಹೇರಿ ಇಲ್ಲಿ ಬಿದ್ದಿದ್ದೇನೆ ತಬ್ಬಲಿ ಹಾಗೆ;
ಹೂವು, ಗಿಡ, ಬಳ್ಳಿ, ಮರ,ಪೊದೆ, ಪೊಟ್ಟರೆ ೧೦
ಮುಖ ತಿರುಗಿಸುತ್ತ ಕಿಲಕಿಲ ನಗುತ್ತವೆ; ಸುತ್ತು
ಮುತ್ತಲು ಕಿರಾತ ಲೇವಡಿಯ ಪಹರೆ.
ಎಲೆ ಹಳದಿತಿರುಗಿದೀ ಹಲಸು ನಿಂತಿದೆ ಹೆಳವ;
ಹದ ಬಿಸಿಲುಸಾರಾಯಿ ನೆತ್ತಿಗೇರಿ;
ಗೊನೆ ಮಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ
ಹಿಂಡುಹಿಳ್ಳುಗಳಲ್ಲಿ ಪ್ರಾಣವೂರಿ.
ಮೋಡಮಳೆಗಳ ಬುಗಿಲು ನೀಗಿ ಮಾಗಿದೆ ಕಾಳು;
ಪಾಳುಗಟ್ಟಿವೆ ಹಳ್ಳಬಾವಿ ಹೊನಲು;
ಗಾಣ ಸುತ್ತುವ ಗಾಳಿ ಗೋಣಗಾಯಕ್ಕೂಳಿ
ಹೇಳುತ್ತದೆ ಇದೇ ಪಂದ್ಯದಂತ್ಯಮಜಲು.
ಹೆತ್ತು ಸುಸ್ತಾದದ್ದೆ ನಿನ್ನ ನಂಬಿದ ಲಾಭ,
ಒರತೆ ಬತ್ತಿದ ಹಾಳು ಬಾವಿ ಹಾಗೆ
ಇರಬೇಕೆ? ಒಳಗುಸುರುಕಟ್ಟಿ ಕುದಿವಬ್ಬಿಗಳ
ಎಬ್ಬಿಸೋ ಮೈ ಮುಟ್ಟಿ, ಅಟ್ಟು ಹೊರಗೆ.
ಹೋಗುತ್ತೇನೆ ಮತ್ತೆ ಹಿಂದಕ್ಕೆ; ಬಯಸುತ್ತೇನೆ
ಮಂತ್ರಗಂಬಳಿ ನಿನ್ನ ಸುತ್ತಿಸುತ್ತಿ
ಹೊದೆದಪ್ಪಿ ಸತ್ತು ಜಾರುತ್ತೇನೆ ತಪ್ಪಲ ಕೆಳಗೆ,
ಬುಗ್ಗೆಬಿದ್ದೋಡುವೆನು ಕಡಲ ಕರೆಗೆ.
೨
ಹಾಜರಾಗುತ್ತಿದ್ದೆ ಆಗ ಪ್ರತಿ ಹೊತ್ತಾರೆ,
ಹೊಯಿಗೆಗೆರೆ ತುದಿಗೆ ತುದಿಗಾಲ ದಿಗಿಲು ೩೦
ನಾನಿರಲು; ಕಡಲನೊರೆ ಬಗೆವ ಬಂಗಾರಗೆರೆ
ತೇರೆ ತುದಿಕಳಶ ಮುನ್ನುಗ್ಗುತಿರಲು;
ಸಣ್ಣಪಾತಿಗೆ ಪುಟ್ಟ ಕೂವೆಗೆ ಪುಟಾಣಿ ಪಟ,
ಹುಟ್ಟಾಡಿಸುತ್ತ ನೀ ತಕ್ಕ ತಕ್ಕ;
ಸರಳ ರಭಸದ ತರಣಿ ತಾಗಿಸಿ ದಡಕ್ಕೆ ಗಜಕ್ಕನೆ,
ಮೈ ಕೊಂಕಿ ಕೈಚಾಚಿ ಬಾಚಿ ನನ್ನ;
ಏಳು ಕಡಲುಗಳ ತೆರೆಯೇರಿ ಕಮರಿಗಳಲ್ಲಿ
ತೇಕಿದೆವು ಹಗಲಿಡೀ ಜೀಕಿ, ಜೀಕಿ;
ಹೊತ್ತ ಮಳೆಬಿಲ್ಲು ಮಣಿ ಸರಕುಗಳ ಭಾರಕ್ಕೆ
ಸುಸ್ತಾದ ತರಣಿಗೆ ಕಿನಾರೆ ತಾಗಿ;
ಕತ್ತಲ ಕಡಲ ನಡುವೆ ನಡುಗಡ್ಡೆ ಮನೆಯಲ್ಲಿ
ಇರುಳಿಡ ಈ ತಳಮುಳುಗು ಬತ್ತಲಾಟ;
ನಾನು ನೀನಿಡಿಯಾಗಿ ಹೆತ್ತ ಚಿನ್ನದ ತತ್ತಿ
ತ್ತಿಗೂ ನಿನ್ನದೇ ಮೊಹರು – ಟಂಕ.
ಪ್ರತಿ ನಿಮಿಷವೂ ಮಹಾಜಾತ್ರೆ; ತೇರಿನ ಮಿಣಿಗೆ
ನನ್ನದೇ ತೋಳು, ನಿನ್ನದೆ ಘೋಷಣೆ.
ಕೋಟಿ ಕೋಟಯ ಕಂಠ ಬಾಹು ಬಲಕೂ ಮೂಲ
ಬಲ ನನ್ನ ನಿನ್ನ ಸಂಯೋಗ ಘಟನೆ.
ಆದರೂ ನೀ ದಗಾಖೋರ, ನಾಬಲ್ಲೆ; ಹಳ್ಳಿಯ ಶಾಲೆ
ಮೇಷ್ಟರಿಲ್ಲದ ವೇಳೆ ತಾಳ ಹಿಡಿದು ೫೦
ನೀ ಭಾಗವತ ಬಾರಿಸಿದೆ; ನಾನು ಬಲಭೀಮ
ರೌದ್ರಾವತಾರಕ್ಕೆ ರೂಲುದೊಣ್ಣೆ –
ಗದೆ ಹಿಡಿದು ತಿರುವಿ ಹೂಂಕರಿಸಿದ್ದೆ; ಇಪ್ಪತ್ತೈದು
ಕುಮ್ಮುಚಟ್ಟುಗಳು ಮುಗಿವಷ್ಟರೊಳಗೆ
ಹೂಜೆ ಬರಿಹೋಳು; ತರಗತಿಯ ಭೋರ್ನಗೆ ಹೊಯಿಲು;
ಬೆನ್ನ ಬಾಸುಂಡೆಯೋ ಮಾಯದ ಕಥೆ.
ಕುಳಿತಿದ್ದೆವಾಗ ಟಕ್ಕಾಟಕ್ಕಿಯೆರಡು ಕಡೆ;
ನಿನ್ನ ಕಡೆಯೇ ಕೊನೆಗು ಕೊಂಚ ಹಗುರ;
ಆದರೂ ಆಗಾಗ್ಗೆ ಮೈಗೂಡಿ ಸಮತೂಕ
ಒಜ್ಜೆ ಎನಿಸಿರಲಿಲ್ಲ ಇಟ್ಟ ಹೆಜ್ಜೆ.
೩
ಈಗ ಬಂದಿದೆ ಹಣ್ಣು ಬಿದ್ದು ಕೊಳೆಯುವ ಕಾಲ;
ಹಸುರಿನ ಬುಡಕ್ಕೊರಲಕೆ ಹಿಡಿವ ಕಾಲ;
ತೇರ ಹಲಗೆಗೆ ಸುರುಬು ತಗಲಿ, ಮಿಣಿಹುರಿ ಲಡ್ಡು
ಹಿಡಿದು ಹಿಸಿಯುವ ತೇವ ಇಳಿವ ಕಾಲ.
ತೂಕ ಹೆಚ್ಚುತ್ತಿದೆ ದಿನದಿನಕ್ಕೆ; ಏತದ ನನ್ನ
ತುದಿ ಮಣ್ಣುತಿನ್ನುತಿದೆ; ಅತ್ತಕಡೆಗೆ
ನೀ ಹತ್ತಿ ಕುಳಿತಿದ್ದ ತುದಿ ಅಂತರಾಳಕ್ಕೆ;
ಚಾಳೇಶ; ಕಾಣಿಸದು ನಿನ್ನ ಚಹರೆ.
ಕೇಳುವುದು ನಿನ್ನ ಸ್ವರ ನೂರು ದಭದಭೆ ಹಾಗೆ;
ಕುಳಿತಲ್ಲೆ ಕೊನರುವುವು ನೂರು ಬಿಳಲು; ೭೦
ಒಣಗುವುವು ಕುಡಿ ಹೊರಗೆ ಗಾಳಿ ತಾಗಿದ ನಿಮಿಷ
ಸೇರಿಕೊಳ್ಳದೆ ನಿನ್ನ ಮೂಲ ಧಾತು.
೪
ಏಳು ಹೊಂಡದ ನೀರು ಕುಡಿದ ಮಂಡೂಕಯ್ಯ
ನಾನು; ಕುಪ್ಪಳಿಸುವುದೆ ನನ್ನ ಧರ್ಮ;
ನೆಲದಿಂದ ಕೆಳಕೊಳಕ್ಕೆ, ಮತ್ತೆ ಮೇಲು ನೆಲಕ್ಕೆ;
ಎರಡಕ್ಕು ತೂಗುವುದು ನನ್ನ ಕೆಲಸ.
ಊದೂದಿ ಏದೇದಿ ನೆಲದೊಳೊದ್ದಾಡಿದೆನು;
ಇನ್ನಾದರೂ ಕೂಪಕಿಳಿವುದೆ ಸರಿ.
ನುಣ್ಣನೆಯ ಕೆಸರ ಬಸಿರಲ್ಲಿ ಹೂತಡಗುವೆನು;
ಊದಿಳಿದು ಮೈ ತಿಳಿವುದೊಂದೇ ಗುರಿ.
ಗಾಳಿ ಹಗುರಿನ ಚಿನ್ನ ಹಳದಿ ಮೈ ಜಿಗಿಯುವುದು,
ತಿಳಿನೀರ ಕೊಳದಲ್ಲಿ ಮೇಲೆ ಕೆಳಗೆ;
ದಡದ ಹಸಿಹುಲ್ಲ ಮೇಲೊರಗಿದರೆ ಮೈದಡವಿ
ತರಣಿ ತಬ್ಬುವುದೆ ನಾನುಲಿವ ವೇಳೆ.
ನಾನು ತಿಂದರೆ ನೊಣವ ತೋಟ ಹುಲುಸಾಗುವುದೆ?
ಆಯ್ತೆ ಬಾಳೆಗೆ ಮತ್ತೆ ಕಾಯಕಲ್ಪ?
ನಾ ಮುಳುಗಿದರೆ ತೆಂಗು ಕಂಗಾಲೆ? ಹಲಸಿಗೆ ಅಲಸೆ?
ಇದನರಿಯಲೂ ಕಳೆದೆ ಬಹಳ ತೆರಪ!
ನಿನ್ನ ನಗೆಯನ್ನೆ ಮೊಳಗುತ್ತಿರುವ ಮಲ್ಲಿಗೆ,
ನಿನ್ನ ನಲ್ಮೆಯ ನೆಳಲನೀವ ಮಾವು; ೯೦
ನಿನ್ನೊಲವನಪ್ಪಿ ತೋರುವ ಕೊಳದ ತಳಕೆಸರು –
ಇಲ್ಲಾಡುವುದು – ಇದೇ ಹೊಸ ಠರಾವು.
(ಡಿಸೆಂಬರ್, ೧೯೬೩)