ಡೇವಿಡ್ ಬಾಂಡ್ ಬರೆಯುವ ಚಿತ್ರ ಭಾರತ : ಸೈರಾಟ್(೨೦೧೬)

ಹಿಂದಿ ಚಿತ್ರಗಳನ್ನು ನೋಡುತ್ತಾ ಬೆಳೆದವರಿಗೆ ಅಂತರ್ಜಾತೀಯ ವಿವಾಹವನ್ನು ಕಥಾವಸ್ತುವನ್ನಾಗಿಟ್ಟುಕೊಂಡಿರುವ ಯಾವುದೇ ಚಿತ್ರ ಹೊಸ ಆವಿಷ್ಕಾರದಂತೆ ಕಾಣಬಹುದು. ಆದರೆ, ದಕ್ಷಿಣ ಭಾರತದಲ್ಲಿರುವವರಿಗೆ ಇದು ಅಸಾಮಾನ್ಯವಾದುದೇನಲ್ಲ.

ನಿರ್ದೇಶಕ ಮಂಜುಳೆ, ಸೈರಾಟ್ ಅನ್ನು ತಮ್ಮ ಹಿಂದಿನ ಚಿತ್ರಗಳಿಗಿಂತ ಹೆಚ್ಚು ‘ಜನಪ್ರಿಯ’ ಮಾಡಬಯಸಿದರೆಂದು ವಿಕಿಪೀಡಿಯದಲ್ಲಿ ನಮೂದನೆಯಿದೆ. ಒಬ್ಬ ನಿರ್ದೇಶಕ ಜನಪ್ರಿಯ ಚಿತ್ರ ಮಾಡಬೇಕೆಂದು ಏಕೆ ಬಯಸುತ್ತಾನೆ? ಚಿತ್ರವನ್ನು ಜನಪ್ರಿಯಗೊಳಿಸಲು ಏನೆಲ್ಲಾ ಮಾಡುತ್ತಾನೆ? ಹಾಗೆ ಮಾಡುವುದು ಅವಶ್ಯವೇ ಎಂದು ಪ್ರಶ್ನಿಸಬೇಕಾಗುತ್ತದೆ.

ಫಾಂಡ್ರಿಗೆ ಹೋಲಿಸಿದಾಗ ಸೈರಾಟ್ನಲ್ಲಿನ ಛಾಯಾಗ್ರಹಣ ಹಾಗೂ ಸಂಗೀತ ಬಡವಾಗಿರುವುದು ಎದ್ದು ಕಾಣುತ್ತದೆ. ಕ್ಯಾಮೆರಾವನ್ನು ತುಂಬಾ ಹತ್ತಿರಕ್ಕೆ ತಂದು ಚಿತ್ರಿಸುವುದು, ಅನಾವಶ್ಯಕವಾಗಿ ಮಂದಗತಿಯನ್ನು ತೂರಿಸುವುದು, ದೃಶ್ಯಕ್ಕೆ ಅನುಗುಣವಾಗಿ ಸಂಗೀತವಿರುವ ಬದಲು ದೃಶ್ಯವನ್ನೇ ಪುನರುಚ್ಚರಿಸುವಂತಿರುವ ಸಂಗೀತ – ಇವೆಲ್ಲಾ ತೀರಾ ಕಳಪೆಯೆನಿಸುತ್ತವೆ. ಜನಪ್ರಿಯತೆಗಾಗಿ ಇವೆಲ್ಲಾ ಮಾಡಬೇಕೆಂದು ನಿರ್ದೇಶಕರಿಗೆ ಅನಿಸಿದಂತಿದೆ. ಫಾಂಡ್ರಿಯ ಜೊತೆ ತುಲನೆ ಮಾಡಿದಾಗ ಸೈರಾಟ್ ನ ಗುಣಮಟ್ಟ ಇಳಿದಿರುವುದು ನಿಚ್ಚಳವಾಗಿ ತೋರುತ್ತದೆ.

ಹಿಂದಿ ನೋಡುಗರಿಗೆ ಇಷ್ಟವಾಗುವಂತೆ ಸಂಗೀತ, ನೃತ್ಯಗಳಂತಹ ಜನಪ್ರಿಯ ಅಂಶಗಳನ್ನು ಸೈರಾಟ್ ಹೊಂದಿದೆಯೆಂದು ಹಲವರು ಟೈಮ್ಸ್ ಆಫ್ ಇಂಡಿಯಾದಲ್ಲಿ ಹೊಗಳಿದ್ದಾರೆ. ಆದರೆ ಒಬ್ಬ ನಿರ್ದೇಶಕನ ಪಾತ್ರ ಕೇವಲ ಜನಪ್ರಿಯ ಚಿತ್ರಗಳನ್ನು ಮಾಡುವುದು ಎಂದು ನನಗನ್ನಿಸುವುದಿಲ್ಲ. ಪ್ರಾಮಾಣಿಕ ಚಿತ್ರಗಳನ್ನು ಮಾಡುವ ನಿರ್ದೇಶಕ ಎಂದೇ ಪ್ರಖ್ಯಾತರಾದ ಮಂಜುಳೆಯವರೂ ತಮ್ಮ ಜನಪ್ರಿಯ ಪ್ರಯತ್ನವನ್ನು ಸಮರ್ಥಿಸಿಕೊಳ್ಳುತ್ತಾರೆ.  “ಪ್ರೀತಿ, ಪ್ರೇಮ, ಹಾಸ್ಯ ಇರುವ ಚಿತ್ರ ಸೈರಾಟ್. ಹಾಗಾಗಿ ಹಾಡು, ನೃತ್ಯಗಳ ಅವಶ್ಯಕತೆಯಿತ್ತು”ಎಂದು ವಾದಿಸುತ್ತಾರೆ. ಇದು ನಿಜಕ್ಕೂ ಅವಶ್ಯವೇ? ಪ್ರೇಕ್ಷಕನಿಗೆ ಯಾವುದೇ ಚಿತ್ರದ ಬಗ್ಗೆ ಪೂರ್ವಾಗ್ರಹಗಳಿರುವುದಿಲ್ಲ. ನಿಜವಾಗಿ ಹೇಳುವುದಾದರೆ, ಒಂದು ಚಿತ್ರ ಸಿದ್ಧಪಡಿಸಬೇಕಾದರೆ, ‘ಪ್ರೇಕ್ಷಕ’ ಇರುವುದೇ ಇಲ್ಲ. ಇರುವುದು ಕಥೆ ಮಾತ್ರ. ಹಾಗಾಗಿ “ಪ್ರೇಕ್ಷಕನಿಗೋಸ್ಕರ” ಎಂಬುದು ನಿರ್ಮಾಪಕರ ಕಲ್ಪನೆ. ಸೈರಾಟ್ ನ ವಿಷಯದಲ್ಲಿ ನಿರ್ದೇಶಕರಿಗೂ ಆ ಕಲ್ಪನೆ ಇರುವಂತಿದೆ. ವಿವಿಧ ಸಿನಿಮಾ ಪ್ರಕಾರಗಳಿಗೆ ಇರುವಂತೆ ‘ಮಸಾಲಾ’ ಚಿತ್ರಗಳಿಗೂ ತಮ್ಮದೇ ಆದ ವಿಭಿನ್ನ ಶೈಲಿ ಇದೆ. ಕಾಲಕ್ಕೆ ತಕ್ಕಂತೆ ಈ ಪ್ರಕಾರಗಳು ಬದಲಾಗಬೇಕಾಗುತ್ತದೆ. ಇಲ್ಲವೇ, ಹೊಸ ಪ್ರಕಾರಗಳನ್ನು ಹುಡುಕಬೇಕಾಗುತ್ತದೆ. ಹಿಂದಿ ಚಿತ್ರರಂಗವೂ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವುದು ಕಂಡುಬರುತ್ತದೆ. ಹೀಗಿರುವಾಗ ಹಿಂದಿ ಚಿತ್ರಗಳಂತೆ, ಸೈರಾಟ್ ಅನ್ನು ‘ಮಸಾಲಾ’ ಚಿತ್ರ ಮಾಡಿರುವುದು ವಿಪರ್ಯಾಸ.

ಸೈರಾಟ್ ನ ಗಂಭೀರವಾದ ಮುಕ್ತಾಯವನ್ನು ಹೊರತುಪಡಿಸಿದರೆ ಅದೊಂದು ‘ಮಸಾಲ’ ಚಿತ್ರ ಎಂದು ಹೇಳುವುದನ್ನೂ ನಾನು ಕೇಳಿದ್ದೇನೆ. ಹಾಗೆ ತಳ್ಳಿಬಿಡುವುದು ನ್ಯಾಯವಲ್ಲ ಎಂದೇ ನನ್ನ ಭಾವನೆ. ಆರ್ಚೀಯ ತಮ್ಮ ಶಾಲೆಯ ಅಧ್ಯಾಪಕರನ್ನು ಹೊಡೆಯುವುದು ಹಾಗೂ ಆತನ ತಂದೆ ಅದನ್ನು ಅನುಮೋದಿಸುವುದು ಚಿತ್ರದ ಕೊನೆಯ ಭಾಗದಷ್ಟೇ ಆಘಾತಕಾರಿಯಗಿದ್ದು ನೋಡುಗರ ಗಮನ ಸೆಳೆಯುತ್ತದೆ. ತಪ್ಪಿಸಿಕೊಂಡು ಓಡುತ್ತಿರುವ ಆರ್ಚೀ ಮತ್ತು ಪಾರ್ಶ್ಯರ ಬೆನ್ನತ್ತಿಹೋಗುವ ದೃಶ್ಯಗಳು ಹಾಗೂ ಹೈದರಾಬಾದಿನ ಕೊಳಗೇರಿಗಳ ದೃಶ್ಯಗಳಲ್ಲಿ ಛಾಯಾಗ್ರಹಣ ಉತ್ತಮಗೊಂಡಿದೆ. ಹೈದರಾಬಾದಿನಲ್ಲಿ ಚಿತ್ರಿಸಿರುವ ದ್ವಿತೀಯಾರ್ಧ ಹೆಚ್ಚು ವಾಸ್ತವವಾಗಿದೆ. ನಾಯಕನಟರಾದ ರಿಂಕು ಮತ್ತು ಆಕಾಶ್ ಗೆ ತಮ್ಮ ಅಭಿನಯ ಸಾಮರ್ಥ್ಯವನ್ನು ತೋರಿಸಲು ಅವಕಾಶವಿದೆ. ಆದರೆ ಅತೀ ಭಾವುಕ ಸಂಗೀತ ಅಲ್ಲಲ್ಲಿ ಕಿರಿಕಿರಿ ಉಂಟು ಮಾಡುತ್ತದೆ.

ಮುಖ್ಯ ಭೂಮಿಕೆಯಲ್ಲಿರುವ ಆರ್ಚೀ ಪಾತ್ರ ಸ್ತ್ರೀವಾದಕ್ಕೆ ಇಂಬು ಕೊಡುವಂತಹದ್ದು ಎಂದು ವಿಶ್ಲೇಷಿಸಲಾಗಿದೆ. ಆದರೆ, ಆರ್ಚೀಯ ಮುಕ್ತ ಸ್ವಭಾವ ಆಕೆಯ ಮೇಲ್ಜಾತಿಯ ಫಲವೇ ಹೊರತು ಸ್ತ್ರೀಸಮಾನತೆಯ ಅಭಿವ್ಯಕ್ತಿಯಲ್ಲ. ಚಿತ್ರದ ಮೊದಲ ಭಾಗದಲ್ಲಿ ಅವಳು ಬೇರೆಯವರನ್ನು ಸೇವಕರಂತೆ ನಡೆಸಿಕೊಳ್ಳುವ ರೀತಿ, ತಾನು ಇಚ್ಛಿಸಿದರೆ ಒಬ್ಬ ದಲಿತನನ್ನು ಪ್ರೇಮಿಯಾಗಿಸಿಕೊಳ್ಳಬಹುದೆಂಬ ನಂಬಿಕೆ – ಇವು ಐಷಾರಾಮದಲ್ಲಿ ಬೆಳೆದೊಬ್ಬಳ ಮನಸ್ಥಿತಿಯನ್ನು ಬಿಂಬಿಸುತ್ತವೆ. ಒಂದರ್ಥದಲ್ಲಿ ಇದೇನೂ ಅವಳ ತಮ್ಮನ ಅಹಂಕಾರಕ್ಕಿಂತ ಕಡಿಮೆಯಿಲ್ಲ. ಹಾಗೆಯೇ, ಪಾರ್ಶ್ಯ ಅಡುಗೆ ಇತ್ಯಾದಿ ಮನೆಗೆಲಸ ಮಾಡುವುದು ಆತನ ಸೈದ್ಧಾಂತಿಕ ಆಯ್ಕೆಯಲ್ಲ; ಅವನ ಹಾಗೂ ಅರ್ಚೀಯ ನಡುವಿನ ಜಾತಿ ವರ್ಗಗಳ ಭೇದಭಾವದಿಂದ ಹುಟ್ಟಿರುವ ಸ್ಥಿತಿ. ಈ ರೀತಿ ನೋಡಿದಾಗ ಪಾತ್ರ ಪೋಷಣೆ ಕ್ರಾಂತಿಕಾರಿಯಾಗಿರದೇ ವಾಸ್ತವಕ್ಕೆ ಹತ್ತಿರವಾಗಿ ಕಾಣುತ್ತವೆ. ಪಾರ್ಶ್ಯ ಹಾಗೂ ಆರ್ಚೀ ಮನೆ ಬಿಟ್ಟು ಓಡಿಹೋದ ನಂತರ ಅವರ ಸ್ಥಿತಿಗತಿಯ ಭೇದವನ್ನು ಅವರು ಪ್ರಜ್ಞಾಪೂರ್ವಕವಾಗಿ ಬದಲಾಯಿಸಿಕೊಳ್ಳಬೇಕಾಗುತ್ತದೆ. ಜಾತಿ ವರ್ಗಗಳಲ್ಲಿನ ಭಿನ್ನತೆ, ಅದರಿಂದ ಉದ್ಭವಿಸುವ ಮನಸ್ಥಿತಿ ಜೀವನದಲ್ಲಿ ತೀರಾ ಸಹಜ ಎನ್ನುವಂತೆ ಹಾಸುಹೊಕ್ಕಾಗಿರುವ ಬಗೆ – ಇವು ಮಂಜುಳೆಗೆ ಆಪ್ತವಾದ ವಿಷಯಗಳು. ಇದನ್ನು ನಾವು ಫಾಂಡ್ರಿಯಲ್ಲಿ ಈಗಾಗಲೇ ನೋಡಿದ್ದೇವೆ. ಬದಲಾಯಿಸಲು ಕಷ್ಟವಾದ, ನಮ್ಮಲ್ಲಿ ಅಂತರ್ಗತವಾಗಿರುವ ಈ ಭಿನ್ನತೆಯೇ ಸೈರಾಟ್ ನ ಮುಕ್ತಾಯದ ಅನಾಹುತಕ್ಕೆ ಎಡೆಮಾಡಿಕೊಡುತ್ತದೆ.

ಫಾಂಡ್ರಿ ಮತ್ತು ಸೈರಾಟ್ ನ ನಿರ್ದೇಶಕ ನಾಗರಾಜ್ ಮಂಜುಳೆ

 

ಚಿತ್ರದಲ್ಲಿ ನಿಜವಾಗಿಯೂ ಸ್ತ್ರೀವಾದಕ್ಕೆ ಅನ್ವರ್ಥವಾಗಿರುವುದು ಸುಮನ್ ಅಕ್ಕಳ ಪಾತ್ರ. ಹೈದರಾಬಾದಿನಲ್ಲಿ ಪಾರ್ಶ್ಯ ಹಾಗೂ ಆರ್ಚೀಗೆ ನೆರವಾಗುವ ಪಾತ್ರದಲ್ಲಿ ಛಾಯಾ ಕದಂ ಮಿಂಚಿದ್ದಾರೆ.

ಸೈರಾಟ್ ನಿಸ್ಸಂದೇಹವಾಗಿ ಗೆದ್ದಿದೆ. ಅದರ ಗೆಲುವು ಮಹತ್ವವಾದುದು. ಆದರೆ, ಭೀಕರ ಅಂತ್ಯದ ಹೊರತಾಗಿಯೂ ಸೈರಾಟ್ ಫಾಂಡ್ರಿಯಷ್ಟು ಕಾಡುವುದಿಲ್ಲ. ಅದರಷ್ಟು ನೈಜವೂ, ನಿರಾಶಾವಾದಿಯೂ ಅಲ್ಲ; ಗಾಢ ಚಿಂತನೆಗಳಿಗೆ ಅನುವು ಮಾಡಿಕೊಡುವುದಿಲ್ಲ. ಮಂಜುಳೆಯ ಮುಂದಿನ ಚಿತ್ರದಲ್ಲಿ ‘ಬಿಗ್ ಬಿ’ ಕಾಣಿಸಿಕೊಳ್ಳುತ್ತಾರೆ ಎಂದು ಕೇಳಿಬರುತ್ತಿದೆ; ಕೇಳಿ ದಿಗಿಲಾಗುತ್ತಿದೆ. ಫಾಂಡ್ರಿಯ ಕವಿಹೃದಯದ ನಿರ್ದೇಶಕ ಗೆಲುವಿನಲ್ಲಿ ಕಳೆದುಹೋಗದಿರಲಿ ಎಂದು ನಾವು ಆಶಿಸಬಹುದಷ್ಟೇ.

ಇಂಗ್ಲೀಷಿ ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ


ಅನುವಾದ : ಯಶಸ್ವಿನಿ ಪ್ರಕಾಶ್

One comment to “ಡೇವಿಡ್ ಬಾಂಡ್ ಬರೆಯುವ ಚಿತ್ರ ಭಾರತ : ಸೈರಾಟ್(೨೦೧೬)”
  1. ನಮ್ಮ ಚಿತ್ರವಿಮರ್ಶೆ ನಡೆಯಬೇಕಾದ ದಾರಿ ಹೇಗಿರಬೇಕು ಎಂಬುದಕ್ಕೆ ಬಾಂಡ್ ಅವರ ಈ ವಿಮರ್ಶೆ ಮಾದರಿ. ಬೋಲ್ಡ್ ಸ್ತ್ರೀ ಪಾತ್ರಗಳೆಲ್ಲವನ್ನೂ ಸ್ತ್ರೀವಾದದ ತಕ್ಕಡಿಗೆ ಹಾಗಿ ತೂಗುವುದು ಅವಿವೇಕ. ಚಿತ್ರದ ಎಸ್ತೆಟಿಕ್ಸ್ ಬಗ್ಗೆ ಬಾಂಡ್ ಅವರು ಎತ್ತಿರುವ ಪ್ರಶ್ನೆಗಳು ಮೌಲಿಕವಾದುವು.

ಪ್ರತಿಕ್ರಿಯಿಸಿ