ಬೆಜವಾಡ ವಿಲ್ಸನ್ ಸಂದರ್ಶನ – ಭಾಗ ೩ : ನನ್ನ ಕೈಗಳನ್ನು ನೋಡು.. ನನ್ನ ಬದುಕು ಹೇಗಾಯ್ತು ನೋಡು..

ಪೆಮು: ಈ ಸಂಸ್ಥೆಯನ್ನು ಯಾವಾಗ ಪ್ರಾರಂಭಿಸಿದಿರಿ?

ಬೆವಿ: ಅದಕ್ಕೂ ಸಹ ಯಾವ ತಾರೀಕು ಇಲ್ಲ. ಜನಗಳು ಒಂದು ಒಳ್ಳೆಯ ಹೆಸರನ್ನು ಇಡೋಣ ಅಂದರು. ದಕ್ಷಿಣ ಭಾರತಕ್ಕೆ ಮಾತ್ರವಲ್ಲ ಇಡೀ ಭಾರತಕ್ಕೆ ಹೊಂದುವ  ಹೆಸರಾಗಿರಬೇಕು ಎಂದರು. 1992ರಲ್ಲಿ ನಾಮಕರಣ ಮಾಡಿದೆವು. ಹೆಸರಿಲ್ಲದೆ ಹತ್ತು ವರ್ಷಗಳಿಗಿಂತಲೂ ಬಹಳ ಕಾರ್ಯ ನಿರತರಾಗಿದ್ದೆವು. ಸಾಮಾನ್ಯವಾದ ಒಂದು ವೇದಿಕೆ ಇರಬೇಕು ಎಂದು ಎಲ್ಲರೂ ಹೇಳಿದರು. ಎನ್.ಜಿ.ಓ. ತರಹ ಪ್ರಾರಂಭಿಸುವುದು ನನಗೆ ಮೊದಲಿಂದಲೂ ಇಷ್ಟವಿಲ್ಲ. ಹಾಗೆ ಪ್ರಾರಂಭಿಸಿದರೆ ನಿರ್ವಹಣೆ ಮಾಡುವುದಕ್ಕೇ ಗಮನಕೊಡಬೇಕಾಗುತ್ತದೆ.  Non – Government ಆದರೂ ಅದು ಸಹ ಗವರ್ನಮೆಂಟಿನ ನಕಲಿನಂತೆಯೇ ಆಗುತ್ತದೆ.  ಹಾಗಾಗಬಾರದು ಅಂದುಕೊಂಡೆ. ಆದ್ದರಿಂದ  ಪ್ರಾರಂಭದಿಂದಲೇ ನೊಂದಾಯಿಸುವುದರಲ್ಲಿ ನನಗೆ ಇಷ್ಟವಿರಲಿಲ್ಲ. ಸಫಾಯಿ ವತಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ  ದಾವಾ ಹೂಡಿದೆವು. ಯಾತ್ರೆ ಹೋದೆವು. 2015 ರಲ್ಲಿ ಭೀಮ್ ಯಾತ್ರಾ ಹೋದೆವು. ಜನಗಳೇ ಇದನ್ನೆಲ್ಲಾ ಮಾಡಿದರು.

ಈವರೆಗೆ 6000 ಸ್ವಯಂಸೇವಕರು ನಮ್ಮ ಬಳಿ ಇದ್ದಾರೆ. ಅವರ ವಿಳಾಸ, ಸೆಲ್ಫೋನ್ ಮುಂತಾದ ವಿವರಗಳು ನಮ್ಮ ಬಳಿ ಇವೆ. ಅದರಲ್ಲಿ 200 ಪೂರ್ಣಾವಧಿ ಕಾರ್ಯಕರ್ತರಿದ್ದಾರೆ. ಇವರಿಗೆ ತಿಂಗಳಿಗೊಮ್ಮೆ ಸಂಬಳದ ತರಹ ಸ್ವಲ್ಪ ಹಣ ಕೊಡಬೇಕು. ರಮೊನ್ ಮೆಗಸೇಸೆ ಬಿರುದು ಬಂದನಂತರ ಮತ್ತಷ್ಟು ಹೆಚ್ಚಾಗಿ ಜನ ಬರುತ್ತಿದ್ದಾರೆ. ಈಗ ಜನಗಳ ಬಳಿ ಸಮಯ, ಹಣ, ವಿದ್ಯೆ ಎಲ್ಲವೂ ಹೆಚ್ಚಾಗೆ ಇದೆ.  ಅದನ್ನು ಹಂಚಿಕೊಳ್ಳಲು ಕೆಲವರು ಬರುವುದುಂಟು. ಹಾಗೆಯೇ ಒಬ್ಬರು ಬಂದರು. ಅವರು ಅಮೇರಿಕಾದಲ್ಲಿ ಆರು ವರ್ಷಗಳು ಬ್ಯಾಂಕಿನಲ್ಲಿ ಕೆಲಸ ಮಾಡಿದ್ದರು. ಕೆಲಸದಲ್ಲಿ ಸ್ವಾರಸ್ಯ ಇಲ್ಲದೆ ಭಾರತಕ್ಕೆ ಹಿಂತಿರುಗಿದವರು. ‘ನನಗೆ ಹಣ ಏನೂ ಬೇಡ, ತೃಪ್ತಿಗಾಗಿ ನಿಮ್ಮೊಂದಿಗೆ ಸೇರಿ ಕೆಲಸ ಮಾಡಲು ಬಯಸುತ್ತೇನೆ’ ಎಂದರು.

ಮತ್ತೊಬ್ಬರು ಐ.ಏ.ಎಸ್. ಓದಿದವರು,  ಮಹಾರಾಷ್ಟ್ರದವರು. ಅವರ ಹೆಂಡತಿ ಕೇರಳದವರು. ಇಬ್ಬರೂ ಐ.ಏ.ಎಸ್. ಇಬ್ಬರು ಮದುವೆ ಮಾಡಿಕೊಳ್ಳಲು ನಿರ್ಧರಿಸಿದರು. ಆ ಹೆಣ್ಣಿಗೆ ಅಸ್ಸಾಂ ಪ್ರಾಂತದಲ್ಲಿ ಕೆಲಸ. ಇವರಿಗೆ ಆರ್ಕಿಟೆಕ್ಚರ್ ಕ್ಷೇತ್ರದಲ್ಲಿ ಕೆಲಸ ಸಿಕ್ಕಿತು. ಅವರು ಇಲ್ಲಿ ನಾಲ್ಕು ವರ್ಷಗಳು ಕೆಲಸ ಮಾಡಿದರು. ಸ್ವಲ್ಪ ಹಣವನ್ನೂ ಸಂಪಾದಿಸಿದರು. ಆದ್ದರಿಂದ ಒಬ್ಬರು ಕೆಲಸ ಮಾಡುವುದು ಮತ್ತೊಬ್ಬರು ಕೆಲಸವನ್ನು ಬಿಡುವುದು ಎಂದು ಗಂಡ ಹೆಂಡತಿ ಒಂದು ನಿರ್ಧಾರಕ್ಕೆ ಬಂದರು. ಗಂಡ ಕೆಲಸವನ್ನು ಬಿಟ್ಟುಬಿಟ್ಟು ಈಗ ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ.

ಡಾಕ್ಟರ್, ಎಂಜಿನಿಯರ್, ಸೈಂಟಿಸ್ಟ್ ಎಂದು ಹಲವು ಕ್ಷೇತ್ರಗಳಿಂದ ಹೀಗೆ ಬರುತ್ತಾರೆ. ಮೂರು ನಾಲ್ಕು ಲಕ್ಷ ಸಂಬಳ ಪಡೆಯುತ್ತಿದ್ದ ಮಹಿಳೆಯೊಬ್ಬರು ಸಹ ಬಂದಿದ್ದಾರೆ. ಹೀಗೆ ಬಹಳಷ್ಟು ಮಂದಿ  ಉಚಿತವಾಗಿ ಈ ಕೆಲಸದಲ್ಲಿ ತೊಡಗಿಸಿಕೊಳ್ಳಲು ಬರುತ್ತಿದ್ದಾರೆ. ಇದೆಲ್ಲ ಹೇಗೆ ನಡೆಯುತ್ತದೆ ಎಂದು ಗೊತ್ತಿಲ್ಲ. ಆದರೆ ನಡೆಯುತ್ತಿದೆ. ಆದರೆ ಯಾರೂ ಇದನ್ನು ಹೊರೆ ಅಂದುಕೊಂಡು ಮಾಡುತ್ತಿಲ್ಲ. ಆತ್ಮ ತೃಪ್ತಿಗಾಗಿ ಮಾಡುತ್ತಿದ್ದಾರೆ.

ನಿನ್ನೆ ಸಹ ಒಬ್ಬ ಮುಸ್ಲೀಮ್ ತೀರಿಕೊಂಡರು. ಅವರು ಮುಸ್ಲೀಮ್ ಎನ್ನುವುದರಿಂದ ಅವರು ನಮ್ಮವರಲ್ಲ ಎಂದು ಅನ್ನಿಸುವುದಿಲ್ಲ. ಹಿಂದು, ಕ್ರಿಸ್ತ, ದಲಿತ ಎಂಬ ಗುರುತುಗಳನ್ನೆಲ್ಲಾ ನೋಡುವುದಿಲ್ಲ. ನಿನ್ನೆ ಸಹ ಖಬರಿಗೆ ಹೋಗಿದ್ದೆವು. ಅಲ್ಲಿದ್ದ ಒಬ್ಬರು ಬಂದು, ‘ನಿಮ್ಮನ್ನು ಪ್ರಾರ್ಥನೆಯಲ್ಲಿ ನೋಡಿಲ್ಲವಲ್ಲ, ನೀವು ಮುಸ್ಲಿಮಾ? ಇವರ ನೆಂಟರ? ಯಾವ ಊರು?’ ಎಂದೆಲ್ಲ ಕೇಳಿದರು. ಅದರ ನಂತರ ನಾನು ಸಂಸ್ಥೆಯಿಂದ ಬರುವುದನ್ನು ತಿಳಿದುಕೊಂಡರು. ‘ನೀವು ನೆಂಟರು’ ಎಂದು ಹೇಳಿದರಲ್ಲ ಎಂದು ಕೇಳಿದರು. ‘ಈ ದೇಶದಲ್ಲಿ ಸೆಪ್ಟಿಕ್ ಟ್ಯಾಂಕನ್ನು ಸ್ವಚ್ಚಗೊಳಿಸುವ ಕೆಲಸದಲ್ಲಿ ಮರಣ ಹೊಂದಿದ ಎಲ್ಲರೂ ನನ್ನ ನೆಂಟರೆ’ ಎಂದು ಅವರಿಗೆ ಹೇಳಿದೆ.  ನಿಜವಾಗಲು ಇಂತಹ ಮರಣಗಳು ಸಂಭವಿಸುವಾಗ ನನ್ನ ಮನಸ್ಸು ವ್ಯಥೆಪಡುತ್ತದೆ.

ಈಗಲೂ ಸಹ ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ್, ಒಡಿಯಾದಲ್ಲಿ ಹೆಚ್ಚುಕಡಿಮೆ ಒಂದು ಲಕ್ಷದ ಅರವತ್ತು ಸಾವಿರ ಮಂದಿ ಇಂತಹ ಕೆಲಸವನ್ನು ಮಾಡುತ್ತಾರೆ. ಸರಕಾರ ಇದನ್ನು ಒಪ್ಪಿಕೊಳ್ಳುವುದೇ ಇಲ್ಲ. ಇದೇ ಜಾಗದಲ್ಲಿ ಕುಳಿತು ಹಲವು ವಿಷಯಗಳನ್ನು ನೆನಪುಮಾಡಿಕೊಂಡು ಬಹಳ ವ್ಯಥೆಪಡುತ್ತೇನೆ. ನಮ್ಮ ಗುರಿಯನ್ನು ಕುರಿತು ಯೋಚಿಸುತ್ತಿರುವಾಗಲೇ, ನಮ್ಮನ್ನು ಬೈಯಲು ಕೆಲವರು ಬರುತ್ತಾರೆ. ಪ್ರಶಂಸಿಸಲು ಕೆಲವರು ಬರುತ್ತಾರೆ. ಹಲವಾರು ಸಮಸ್ಯೆಗಳು ನಮ್ಮನ್ನು ಆವರಿಸಿಕೊಳ್ಳುತ್ತಿರುತ್ತವೆ. ಕೆಲವೊಮ್ಮೆ ಯಾವುದೋ ಕಾನೂನಿನ  ಸಮಸ್ಯೆ ಎದುರಾಗುತ್ತದೆ. ಕಟ್ಟಡದ ಬಾಡಿಗೆಗೆ ಮರುದಿನ ಕಟ್ಟುವುದಕ್ಕೆ ಬೇಕಾದ ಬಾಡಿಗೆಯ ಹಣ ಇರುವುದಿಲ್ಲ. ತಿಂಗಳ ಪ್ರಾರಂಭದಲ್ಲಿ ನಮ್ಮ ಬಳಿ ಹಣ ಇರುತ್ತದೆ. ಇಪ್ಪತ್ತನೆಯ ತಾರೀಕಿನಷ್ಟು ಹೊತ್ತಿಗೆ ಕೈಯಲ್ಲಿ ಎಷ್ಟು ಹಣ ಇದ್ದರೂ ಖರ್ಚಾಗಿ ಬಿಡುತ್ತದೆ. ಮುಂದಿನ ಹತ್ತು ದಿನಗಳು ಹಣದ ಸಮಸ್ಯೆ ಸಿಡಿಯುತ್ತದೆ. ಸಹಾಯಕರಿಗೆ ಮೊದಲು ಹಣ ಕೊಡುತ್ತೇವೆ. ಹಾಗೆಯೇ ಎಲ್ಲರಿಗೂ ಕೊಡುತ್ತಾ ಬರುತ್ತೇವೆ. ಎಲ್ಲರಿಗೂ ಆದ ಮೇಲೆ ಕೊನೆಗೆ ನಾನು ತೆಗೆದುಕೊಳ್ಳುತ್ತೇನೆ. ಹಣ ಇಲ್ಲದಿದ್ದಾಗ  ಸಾಲ ಹೇಳಿ ಊಟಮಾಡುವ ಬಹಳಷ್ಟು ಜಾಗಗಳು ನನಗೆ ಪರಿಚಯ. ಸರವಣ ಭವ, ಆಂಧ್ರ ಭವ  ಎಲ್ಲಾ ಕಡೆ ಅಕೌಂಟ್ ಇದೆ.  ಎಷ್ಟೇ ಹೊರೆಯಾದರೂ, ಕಷ್ಟವಾದರೂ ಬದುಕು ಹೀಗೆಯೇ ಸಾಗುತ್ತಿದೆ. ಕೆಲವೊಮ್ಮೆ ಯಾವಾಗ ಈ ಪರಿಸ್ಥಿತಿ ಬದಲಾಗುತ್ತದೆಯೋ ಎಂದು ಕೋಪ ಸಹ ಬರುತ್ತದೆ.

ಪೆಮು: SKA ಎಂಬುದರ ವಿಸ್ತಾರ ಸಫಾಯಿ ಕರ್ಮಚಾರಿ ಆಂದೋಲನ್, ಇದರ ಅರ್ಥ ಏನು?

ಬೆವಿ: ಸಫಾಯಿ ಎಂದರೆ ಸ್ವಚ್ಚ, ಕರ್ಮಚಾರಿ ಎಂದರೆ ಕೆಲಸಗಾರರು ಆಂದೋಲನ್ ಎಂದರೆ ಸಂಸ್ಥೆ ಅಥವಾ ಚಳುವಳಿ. ಅಂದರೆ ಸ್ವಚ್ಚತೆ ಕೆಲಸ ಮಾಡುವವರ ಸಂಘ, ಸಂಸ್ಥೆ ಅಥವಾ ಚಳುವಳಿ ಎಂದು ಕನ್ನಡದಲ್ಲಿ ಹೇಳಬಹುದು. ಎಲ್ಲರೂ ಚೆನ್ನಾಗಿದೆ ಎಂದು ಹೇಳಿದರು. ನನಗೆ ಇವೆಲ್ಲಾ ಅರ್ಥವಾಗುವುದಿಲ್ಲ. ವಿಷಯ ತಿಳಿದವರು ಸಲಹೆಗಳನ್ನು ನೀಡುತ್ತಾರೆ. ನಾವು ಅದರಂತೆ ನಡೆಯುತ್ತೇವೆ. ನಿಮಗೆ ಯಾವ ಹೆಸರು ಇಷ್ಟವೋ ಅದನ್ನೇ ಇಡಿ ಎಂದೆ. ಕೆಲಸವನ್ನು ಸರಿಯಾಗಿ ಮಾಡಬೇಕು ಅನ್ನುವುದೊಂದೇ ನನ್ನ ಗುರಿ.

ಪೆಮು: ಶಂಕರ್ ಅಂತ ಒಬ್ಬರ ಬಗ್ಗೆ ಹೇಳಿದಾರಲ್ಲಾ, ಅವರು ನಿಮಗೆ ಹೇಗೆ ಪರಿಚಯ?

ಬೆವಿ: ಅವರು ಬಹಳ ಪ್ರಾಮಾಣಿಕವಾದ ಅಧಿಕಾರಿ. ಪ್ರಾಮಾಣಿಕವಾಗಿ ಈ ಜಗತ್ತಿನಲ್ಲಿ ಇರುವುದು ಬಹಳ ಕಷ್ಟ. ಬ್ಯಾಚುಲರ್ ಆಗೇ ಇದ್ದರು. ತ್ರಿಪುರ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದವರು. ನಿರುಪನ್ ಚಕ್ರವರ್ತಿ ಅಂತ ಒಬ್ಬ ಮುಖ್ಯಮಂತ್ರಿ ಇದ್ದರು. ಅವರ ಬಳಿ ಮುಖ್ಯ ಕಾರ್ಯದರ್ಶಿಯಾಗಿದ್ದರು. ಅವರು ಆಂಧ್ರ ಕೇಡರಿನಲ್ಲಿ ಇದ್ದವರು. ಎಸ್.ಆರ್.ಶಂಕರನ್, ತಮಿಳಿನವರು. ತಮಿಳುನಾಡಿನ ಸೆಲ್ಲತ್ತೂರ್ ಎಂಬ ಊರಿನವರು. ತ್ರಿಪುರ ರಾಜ್ಯದಲ್ಲಿ  ಪ್ರಮುಖ ಕಾರ್ಯದರ್ಶಿಯಾಗಿ ಕೆಲಸಮಾಡಿದರು. ಒಂದು ರಾಜ್ಯದಲ್ಲಿ ಪ್ರಮುಖ ಕಾರ್ಯದರ್ಶಿಯಾಗಿ ಕೆಲಸ ಮಾಡುವ ಅಧಿಕಾರಿ, ಮತ್ತೊಂದು ರಾಜ್ಯದ ಪ್ರಮುಖ ಕಾರ್ಯದರ್ಶಿಯಾಗಲು ಸಾಧ್ಯವಿಲ್ಲ. ನಿರುಪನ್ ಚಕ್ರವರ್ತಿ ಇಂದಿರಾ ಗಾಂಧಿಯ ಬಳಿ ವಿಶೇಷ ಅನುಮತಿಪಡೆದು ಶಂಕರನನ್ನು ಕರೆಸಿಕೊಂಡರು. ಇದು ಒಂದು ಅದ್ಭುತವಾದ ವಿಷಯ. ಚೆನ್ನಾರೆಡ್ಡಿಯವರು  ಮುಖ್ಯಮಂತ್ರಿಯಾಗಿದ್ದಾಗ ಅವರ ಸ್ವಂತ ಊರಿಗೆ ಹೋಗಿ ಜೀತದಾಳುಗಳನ್ನು ಬಿಡಿಸಿದರು. ಅದೂ ಚೆನ್ನಾ ರೆಡ್ಡಿಯವರ ದೊಡ್ಡಪ್ಪನ ಬಳಿ ಇದ್ದ ಜೀತದಾಳುಗಳನ್ನೇ  ಬಿಡುಗಡೆಗೊಳಿಸಿದರು.

ಆಗ ಜೀತದಾಳುಗಳು ಇವರ ಬಳಿ “ಸಾರ್, ನೀವು ನಮ್ಮನ್ನು ರಿಲೀಸ್ ಮಾಡಿಹೋಗಿಬಿಡುತ್ತೀರಿ.  ನಾಳೆ ಇವರು ನಮ್ಮನ್ನು ಸಾಯಿಸಿಬಿಡುತ್ತಾರೆ. ನೀವು ಹೊರಟುಹೋಗುತ್ತೀರಿ….ಆದರೆ ನಾವು  ಜೀವಸಮೇತ ಇರಲು ಸಾಧ್ಯವಿಲ್ಲ….” ಎಂದರು.

“ಇಲ್ಲ, ಇದು ಸರಕಾರದ ಯೋಜನೆ…” ಅಂತ ಅವರು ಉತ್ತರಿಸಿದರು.

ಇದನ್ನು ’ವೆಟ್ಟಿ ವದ್ದು’ ಎಂದು ಅವರು ಕರೆಯುತ್ತಾರೆ.  ‘ವೆಟ್ಟಿ’ ಎಂದರೆ ತೆಲುಗಿನಲ್ಲಿ ‘ಜೀತ’.  ಅವರಿಂದಾಗಿ  ‘ವೆಟ್ಟಿ ಒದ್ದು’ (ಜೀತ ಬೇಡ) ಎಂಬ ಸ್ಲೋಗನ್  ಇಡೀ ಹಳ್ಳಿಯಲ್ಲಿ ಮಾರ್ದನಿಸಿತು.  ಅಲ್ಲೇ ಎರಡು ದಿನ ಶಿಬಿರ ಹೂಡಿ  ಎಲ್ಲರನ್ನು ಮುಕ್ತಿಗೊಳಿಸಿದರು.

’ಮುಟ್ಟಾಳರಂತೆ ಹೀಗೆ ಮಾಡಿಬಿಟ್ಟರಲ್ಲ. ನಾಳೆ ನಮ್ಮೆನ್ನೆಲ್ಲಾ ಅವರು ಕೊಂದುಬಿಡುತ್ತಾರೆ’ ಎಂದು ಜಿಲ್ಲಾಡಳಿತಗಾರರ ಬಳಿ ಹೇಳಿಕೊಂಡರು. ಅವರಲ್ಲಿ ಇಬ್ಬರು ಮೂವರು ಅಳಲು ಪ್ರಾರಂಭಿಸಿದರು.

ನನ್ನ ಗಾಡಿಯಲ್ಲಿ ಕುಳಿತುಕೊಳ್ಳಿ ಎಂದು ಹೇಳಿ ತನ್ನೊಂದಿಗೆ ಮನೆಗೆ ಕರೆದುಕೊಂಡು ಬಂದರು. ಚೆನ್ನಾ ರೆಡ್ಡಿಯವರ ದೊಡ್ಡಪ್ಪ ಇವರಿಗೆ ತಕ್ಷಣ ದೂರವಾಣಿ ಕರೆ ಮಾಡಿ  ‘ಇದೇನು ಯಾರೋ ಬಂದು ಹೀಗೆ ಮಾಡಿ ಹೋಗಿದ್ದಾರೆ …. ನಮ್ಮ ಊರಿನ ರೆಡ್ಡಿಗಳಿಗೆ ಇನ್ನು ಮುಂದೆ ಮರ್ಯಾದೆ ಇರುತ್ತದೆಯೇ?’ ಎಂದು ಕೇಳಿದರು.

ಚೆನ್ನಾ ರೆಡ್ಡಿ ಸಹ ಪ್ರಮುಖ ಕಾರ್ಯದರ್ಶಿಯನ್ನು ಕರೆದು ರಾತ್ರಿ ಎಲ್ಲ ಮಾತನಾಡಿದರು. ಬೆಳಗಿನ ಜಾವ ಶಂಕರ್ ಅವರನ್ನು ಕರೆದು ವಿಚಾರಿಸಿದರು. ಇವರು ನಡೆದದ್ದನ್ನು ಹೇಳಿದರು. ‘ನನಗೆ ಯಾವ ವಿವರಣೆಯೂ ಬೇಕಾಗಿಲ್ಲ’ ಎಂದು ಮುಖ್ಯಮಂತ್ರಿಗಳು ಹೇಳಿದರು.

‘ಇವರು ಯಾಕೆ ಇಲ್ಲಿಗೆ ಬಂದರು. ಇವರು ನನಗೆ ಇಷ್ಟವಾಗುತ್ತಿಲ್ಲ. ಇಂತಹ ಪಟೇಲಗಿರಿ ಮಾಡುವವರು ನನಗೆ ಹಿಡಿಸುವುದಿಲ್ಲ’ ಎಂದು ಕೂಗಾಡಿದರು.

‘ನಾನು ಹೊಸದಾಗಿ ಏನನ್ನೂ ಮಾಡಲಿಲ್ಲ….ಸರಕಾರದ ಯೋಜನೆಗಳನ್ನು ಕಾರ್ಯ ರೂಪಕ್ಕೆ  ತಂದೆ. ಅಷ್ಟೇ. ನನ್ನ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಅವೆಲ್ಲಾ ಈ ಫೈಲಿನಲ್ಲಿದೆ’ ಎಂದು ಹೇಳಿದರು.

‘ನಾನು ಯಾವ ಫೈಲನ್ನು ನೋಡಲು ತಯಾರಿಲ್ಲ.’

‘ನೀವು ನನಗೆ ಮಾತನಾಡುವುದಕ್ಕೆ ಅನುಮತಿ ಕೊಟ್ಟರೆ ಮಾತ್ರ ನನಗೆ  ವಿವರಣೆ ನೀಡುವುದಕ್ಕೆ  ಸಾಧ್ಯ’ ಎಂದು ಮುಖ್ಯಮಂತ್ರಿಗೆ ಹೇಳಿದರು.

‘ಈ ಆಸಾಮಿಯನ್ನು ನಾನು ಇಲ್ಲಿ ನೋಡಲು ಇಷ್ಟಪಡುವುದಿಲ್ಲ. ನನ್ನ ಸರಕಾರದಲ್ಲಿ ಇವರು ಇರಕೂಡದು. ಇವರ ಮುಖವನ್ನು ಮತ್ತೆ ನಾನು ನೋಡುವುದಿಲ್ಲ’ ಎಂದು ಡಿಸ್ಮಿಸ್ ಮಾಡಲು ಆಜ್ಞೆ ಮಾಡಿದರು.

‘ನಿಮ್ಮ ಮುಖವನ್ನು  ನೋಡಲು ನನಗೂ ಇಷ್ಟವಿಲ್ಲ. ನಿಮ್ಮ ಆಡಳಿತದ ಕೆಳಗೆ ನಾನು ಕೆಲಸ ಮಾಡಲು ಬಯಸುವುದಿಲ್ಲ’ ಎಂದು ಫೈಲನ್ನು ಬಿಸಾಡಿ ಶಂಕರ್ ಸಹ ಹೊರಗೆ ಬಂದುಬಿಟ್ಟರು. ಅಲ್ಲಿಂದ ನೇರವಾಗಿ ರೈಲು ಹತ್ತಿ ದಿಲ್ಲಿಗೆ ಹೊರಟರು.  ಈ ವಿಷಯ ಆಡಳಿತಾಧಿಕಾರಿಗಳ ಸಂಘದಿಂದ ಮೀಡಿಯಾವರೆಗೆ ಹಬ್ಬಿತು.. ಯಾರೋ ಈ ವಿಷಯವನ್ನು ನಿರುಪನ್ ಚಕ್ರವರ್ತಿಯವರಿಗೆ ತಿಳಿಸಿದರು.

ತುಂಬಾ ಒಳ್ಳೆಯವರು. ಮುಂದೆ ಅವರಿಗೆ ಪದ್ಮವಿಭೂಷಣ್ ಬಿರುದು ಘೋಷಿಸಲಾಯಿತು. ಆದರೆ  ಅವರು “ನನ್ನ ಕೆಲಸವನ್ನಷ್ಟೇ ಮಾಡಿದ್ದೇನೆ”  ಎಂದು ಪ್ರಶಸ್ತಿಯನ್ನು  ಸ್ವೀಕರಿಸಲು ನಿರಾಕರಿಸಿದರು.

“ಒಬ್ಬ ಆಡಳಿತಾಧಿಕಾರಿಯಾಗಿ ನನ್ನ ಕೆಲಸವನ್ನು ಮಾಡಿದ್ದೇನೆ. ಇನ್ನೂ ಹೇಳಬೇಕೆಂದರೆ ನನ್ನ ಕೆಲಸವನ್ನು ನಾನು ಪೂರ್ತಿಯಾಗಿ ಮಾಡಿಲ್ಲ ಎಂದೇ ಹೇಳಬೇಕು. ಇಷ್ಟು ಮಾತ್ರ ನನ್ನಿಂದ ಮಾಡಲು ಸಾಧ್ಯವಾಯಿತು” ಎಂದು ಹೇಳಿದರು. ಅವರ ಜತೆಯಲ್ಲಿಯೇ ನಾನು ಇದ್ದದ್ದು. ಇಲ್ಲಿಗೆ ಬಂದು ನಮ್ಮೊಂದಿಗೆ ಕುಳಿತು ಮಾತನಾಡುತ್ತಾರೆ. ಪತ್ರಗಳನ್ನು ಬರೆಯುತ್ತಾರೆ. ಪ್ರಯಣದಲ್ಲಿದ್ದರೂ ಈ ಮೆಯಿಲಿನ ಮೂಲಕ ನಮ್ಮ ಕೆಲಸಗಳನ್ನು ಮಾಡಿಕೊಡುತ್ತಾರೆ. ರೈಲು ನಿಲ್ಧಾಣ ಅಥವಾ ವಿಮಾನ ನಿಲ್ಧಾಣಗಳಿಗೆ ನಕಲುಗಳನ್ನು ತೆಗೆದುಕೊಂಡು ಬರಲು ಹೇಳುತ್ತಾರೆ.

‘ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ, ನಾಳೆ ಬೇಕಾದರೆ ನೋಡೋಣ’ ಎಂದರೆ ಕೇಳುವುದಿಲ್ಲ. ‘ನನ್ನ ಸಹಿ ಒಂದು ಗಂಟೆ ತಡವಾದರೂ ಪೌರ ಕರ್ಮಚಾರಿಗಳ ಸ್ವಾತಂತ್ರ್ಯ ಒಂದು ಗಂಟೆ ತಡವಾಗುತ್ತದೆ. ಅವರಿಗೆ ಒಳ್ಳೆಯ ಬದುಕು ಸಿಗುವುದು ನನ್ನ ಸಹಿಯಿಂದಾಗಿ ತಡವಾಗಬಾರದು. ಮಾಡುವ ಕೆಲಸವನ್ನು ತಕ್ಷಣ ಮಾಡಿಮುಗಿಸಬೇಕು’ ಎಂದು ಹೇಳುತ್ತಿದ್ದರು.. ಇಂತಹ ಮನುಷ್ಯರೂ ಇದ್ದಾರೆ ಎಂಬುದು ನಿಜಕ್ಕೂ  ಆಶ್ಚರ್ಯವೇ. ಅಂತಹ ಮನುಷ್ಯರೆಲ್ಲಾ ನನ್ನ ಬದುಕಿನಲ್ಲಿ ದೊರೆತರು.

ಪೆಮು: ನಿಮಗೆ ಅಧಿಕಾರದಿಂದ ಯಾವ ತೊಂದರೆಗಳಾದರೂ ಇದೆಯೇ?

ಬೆವಿ: ಗುಪ್ತಚರ ಅಧಿಕಾರಿಗಳು ಬರುತ್ತಾರೆ. ಬಂದು ಮಾತನಾಡಿಸಿಕೊಂಡು ಹೋಗುತ್ತಾರೆ. ದೇಶ ದ್ರೋಹದ ಕೆಲವು ಕೆಲಸಗಳನ್ನು ಮಾಡುತ್ತಿದ್ದೀರಾ ಎಂಬ ದೂರಿನೊಂದಿಗೆ ಬರುತ್ತಾರೆ. ಊರು, ನೆಂಟರು ಎಲ್ಲರನ್ನೂ ವಿಚಾರಿಸುತ್ತಾರೆ. ನಾನು ಒಂದನ್ನೂ ಬಿಡದೆ ಎಲ್ಲಕ್ಕೂ ಇಲ್ಲ ಅಂತ ಉತ್ತರ ಕೊಡುವೆ. ನಿಮ್ಮ ಹೆಂಡತಿ ಎಲ್ಲಿ ಎಂದು ಕೇಳುತ್ತಾರೆ. ಅದಕ್ಕೂ ಇಲ್ಲ ಎನ್ನುತ್ತೇನೆ. ಮನೆ ಎನ್ನುತ್ತಾರೆ. ಅದೂ ಇಲ್ಲ ಎನ್ನುತ್ತೇನೆ. ಯಾವುದಾದರೂ ಒಂದು ಇದೆ ಅಂತ ಹೇಳಬೇಕಲ್ಲ. ಇದ್ದರಲ್ಲವೇ ಹೇಳಲು ಸಾಧ್ಯ? ನೀವು ಎಲ್ಲಿ ಉಳಿದುಕೊಳ್ಳುತ್ತೀರಿ ಎಂದು ಕೇಳುತ್ತಾರೆ. ಆ ಕೋಣೆ ಎಲ್ಲಿದೆ ಎಂದು ಕೇಳುತ್ತಾರೆ. ಎಲ್ಲಿ ಮಲಗುತ್ತೀರಿ ಎಂದು ಕೇಳುತ್ತಾರೆ. ಇಲ್ಲೇ ಎಂದು ಚಾಪೆಯನ್ನು ತೆಗೆದು ತೋರಿಸುತ್ತೇನೆ. ತುಂಬಾ ಜನ ಬಂದು ಹೋಗುತ್ತಾರೆ ಎಂದು ಹೇಳುತ್ತೇನೆ.. ಈ ರೀತಿ ಇದ್ದರೆ ಹೇಗೆ ಎಂದು ಕೇಳುತ್ತಾರೆ. ನಾನು ಹೀಗೆ ಇರುವುದು ಸಾರ್ ಎಂದು ಹೇಳುತ್ತೇನೆ. ಸ್ವಲ್ಪ ದಿನದಲ್ಲಿ  ದೂರನ್ನು ಖುಲಾಸೆ ಮಾಡುತ್ತಾರೆ.

ಸರಕಾರ  ರಾಜಕೀಯ ನಿರ್ಧಾರವನ್ನು ತೆಗೆದುಕೊಳ್ಳುವುದರಲ್ಲಿ ವಿಳಂಬ ಮಾಡುತ್ತದೆ. ಜನಗಳನ್ನು ಇದರಿಂದ ಬಿಡುಗಡೆಮಾಡಲು ಪ್ರಯತ್ನಿಸುವುದಿಲ್ಲ.  ಎರಡು ಲಕ್ಷ ಕೋಟಿ ರೂಪಾಯಿ ಸ್ವಚ್ಚ ಭಾರತಕ್ಕೆ ಖರ್ಚು ಮಾಡುವವರು ಈ ಜನಗಳಿಗೆ ಏನನ್ನು ಮಾಡಲು ಮುಂದಾಗುತ್ತಿಲ್ಲ. 2013ನೆಯ ವರ್ಷ ತೋಟಿಗಳ ಏಳಿಗೆಗಾಗಿ 570ಕೋಟಿ ರೂಪಾಯಿ ಇತ್ತು. ಈ ವರ್ಷಕ್ಕೆ ನಿಗದಿ ಮಾಡಿರುವುದು 5 ಕೋಟಿಗಳು ಮಾತ್ರ. ಹೀಗಿದ್ದರೆ ಈ ಜನರು ಬಿಡುಗಡೆಯಾಗುವುದು ಹೇಗೆ? ನಮ್ಮ ದೇಶದ ಯೋಜನೆಗಳೆಲ್ಲಾ ಪ್ರಜೆಗಳನ್ನು ಹಿನ್ನಡೆಸುವಂತೆಯೇ ಇವೆ. ಯೋಜನಾ ಸಮಿತಿಯಲ್ಲೂ ಸದಸ್ಯನಾಗಿದ್ದೆ. ಎಲ್ಲ ಕಡೆ ಕಿರುಚಿ ಕೂಗಿ ಮಾತನಾಡಿ ಸಾಕಾಯಿತು. ಇವನು ಬಂದರೆ ಬಹಳ ಕಿರುಚಾಡುತ್ತಾನೆ ಎಂದು ಅವರಿಗೆ ತಿಳಿಯಿತು. ಬದುಕಿನಲ್ಲಿ ಇಷ್ಟು ದೂರ ಬಂದಾಯಿತು. ವಯಸ್ಸೂ ಸಹ 51 ಆಯಿತು. ಇನ್ನೂ ಏನು ಮಾಡಲು ಸಾಧ್ಯ ಎಂದು ನೋಡಬೇಕು. ಆದರೆ ಸರಕಾರದಿಂದ ನಾವು ಏನನ್ನೂ ತೆಗೆದುಕೊಳ್ಳಲಿಲ್ಲ.

ಪೆಮು: ಹಳೆಯ ಕಕ್ಕಸ್ಸು ವ್ಯವಸ್ಥೆ ಇದ್ದಾಗ ಕೈಯಿಂದ ಮಲಮೂತ್ರ ತೆಗೆಯುವ ಪದ್ಧತಿ ಇತ್ತು. ಈಗ ಪರಿಸ್ಥಿತಿ ಬದಲಾಗಿದೆ ಎಂಬ ಸಾಮಾನ್ಯ ಜ್ಞಾನ ಇದೆ. ಅದರ ಬಗ್ಗೆ ನಿಮ್ಮ ಅಭಿಪ್ರಾಯ?

ಬೆವಿ: ಹಳೆಯ ಕಕ್ಕಸ್ಸು ವ್ಯವಸ್ಥೆ (Dry Latrines-ಒಣ ಕಕ್ಕಸ್ಸು) ಇನ್ನೂ ಇದೆ. ತಮಿಳುನಾಡು, ಆಂಧ್ರ ಮುಂತಾದ ಪ್ರಾಂತಗಳಲ್ಲಿ ನಿರ್ದಿಷ್ಟವಾದ ಸ್ಥಳಗಳಲ್ಲಿ ಹಳೆಯ ಶೌಚಾಲಯಗಳನ್ನು ಕೆಡವಿ ಹೊಸದಾಗಿ ಕಟ್ಟಿದ್ದಾರೆ. ಕೆಲವು ಆ ರೀತಿ ಇರಬಹುದು. ಪೂರ್ತಿಯಾಗಿ ಇಲ್ಲ ಎಂದು ಹೇಳಲಾಗದು. ಹಾಗೆಯೇ ಇದ್ದರೂ – ನಾಲ್ಕು ದಿನಗಳ ಹಿಂದೆ ಒಬ್ಬರು ದಿನಪತ್ರಿಕೆಯೊಂದನ್ನು ತೆಗೆದು ತೋರಿಸಿದರು – ಹಳೆಯ ಕಕ್ಕಸ್ಸು ಪದ್ಧತಿಯನ್ನು ಫೋಟೋ ತೆಗೆದು ಯಾರಾದರೂ ಹಾಕಿಬಿಡುತ್ತಾರೆ. ತಕ್ಷಣ ಅದನ್ನು ಕೆಡವಿ ಹೊಸದನ್ನು ಕಟ್ಟುತ್ತಾರೆ. ಹಾಗೆಯೇ ಹೊಸ ವ್ಯವಸ್ಥೆ ಬರುತ್ತಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ್, ಗುಜರಾತ್, ರಾಜಸ್ಥಾನ್, ಕಾಶ್ಮೀರ್, ಉತ್ತರಾಂಚಲ್ ಮುಂತಾದ ಕಡೆಗಳಲ್ಲಿ ಕೆಲವು ಭಾಗಗಳಲ್ಲಿ ಅದೇ ಹಳೆಯ ವ್ಯವಸ್ಥೆಯೇ ಇದೆ. ಪ್ರತಿಯೊಂದು ಮನೆಯಲ್ಲಿಯೂ ಇದೆ. ಮನುಷ್ಯನ ಮಲವನ್ನು ತಲೆ ಮೇಲೆ ಹೊತ್ತುಹೋಗುವ ಪದ್ಧತಿ ಸಹ ಇದೆ.

ಎಲ್ಲಾ ಕಡೆಗಳಲ್ಲೂ ತಲೆ ಮೇಲೆ ಮಲ ಹೊತ್ತುಕೊಂಡು ಹೋಗುತ್ತಾರೆ ಎಂದಲ್ಲ. ಬಕೆಟ್ಟಿನಲ್ಲಿ ತೆಗೆದುಕೊಂಡೂ ಹೋಗುತ್ತಾರೆ. ಡಾಲ್ಡಾ ಡಬ್ಬಿ, ಪೆಯಿಂಟ್ ಡಬ್ಬಿ ಮುಂತಾದುವನ್ನು ಎರಡೂ ಕಡೆಗಳಲ್ಲಿ ಹಿಡಿದುಕೊಂಡು ತೆಗೆದುಕೊಂಡು ಹೋಗುವ ಪದ್ಧತಿಯೂ ಇದೆ. ನಮ್ಮ ಅಂಕಿ ಅಂಶದ ಪ್ರಕಾರ ಒಂದು ಲಕ್ಷದ ಅರವತ್ತು ಸಾವಿರ ಜನ ಇನ್ನೂ ಈ ಕೆಲಸವನ್ನು ಮಾಡುತ್ತಿದ್ದಾರೆ. ನಾವು ಸಂಗ್ರಹಿಸಿರುವ ಮಾಹಿತಿ ವಸ್ತುಸ್ಥಿತಿಗೆ ಹೆಚ್ಚು ಸಮೀಪವಾಗಿದೆ. ನಾವು ಕಾಟಾಚಾರಕ್ಕೆ ಅಂಕಿ ಅಂಶಗಳನ್ನು ಸಂಗ್ರಹಿಸುವುದಿಲ್ಲ. ಹೆಚ್ಚಾಗಿ ಭಾರತದ ಪೂರ್ತಿಯಾಗಿ ಸುದ್ಧಿಗಳನ್ನು ಶೇಕರಿಸುವ ಮಾನವ ಸಂಪನ್ಮೂಲ ನಮ್ಮ ಬಳಿ ಇಲ್ಲ. ಆದರೂ ಕ್ಷೇತ್ರಸಮೀಕ್ಷೆ ಮಾಡಿ ಜಿಲ್ಲಾ ಅಡಳಿತ ಅಧಿಕಾರಿಗೆ ತಿಳಿಸುತ್ತೇವೆ. ಈ ಪದ್ಧತಿಯನ್ನು ನಿರ್ಮೂಲ ಮಾಡಬೇಕೆಂದು ಕೋರಿಕೆ ಮುಂದಿಡುತ್ತೇವೆ.

ಫ್ಲಶ್ ಔಟ್ ಬಂದ ಮೇಲೆ ಸೆಪ್ಟಿಕ್ ಟ್ಯಾಂಕ್ ಪ್ರತಿ ಮನೆಯಲ್ಲಿಯೂ ಇರುತ್ತದೆ. ಅದು ತುಂಬಿದ ಮೇಲೆ ಅದನ್ನು ಸ್ವಚ್ಚಗೊಳಿಸಲು ಮುನಿಸಿಪಾಲಿಟಿಯ ಬಳಿ   ಸಾಕಷ್ಟು ಸಲಕರಣೆಗಳು ಇರುವುದಿಲ್ಲ. ಐದು ಲಕ್ಷ ಜನಗಳು ವಾಸವಿರುವ ಸ್ಥಳದಲ್ಲಿ ಹೆಚ್ಚು ಕಡಿಮೆ 50 ಯಂತ್ರಗಳಾದರೂ ಇರಬೇಕು. ಅಲ್ಲೆಲ್ಲಾ ನಿಜವಾಗಲೂ ಒಂದು ಎರಡು ಯಂತ್ರಗಳೂ ಇರುವುದಿಲ್ಲ. ಒಂದು ಯಂತ್ರ ಸಹ ಇಲ್ಲದ ಮುನಿಸಿಪಾಲಿಟಿಗಳು ನಮ್ಮಲ್ಲಿ 80% ಇವೆ. ಅಲ್ಲೆಲ್ಲಾ ಮನುಷ್ಯನೇ ಒಳಗಿಳಿದು ಬಕೆಟ್ಟಿನಲ್ಲಿ ತೆಗೆಯಬೇಕು. ಮತ್ತೊಂದು ಒಳಚರಂಡಿ ವ್ಯವಸ್ಥೆ. ಅದು ಯಾವಾಗಲೋ ನಿರ್ಮಿಸಿದ್ದು. ಈವರೆಗೂ  ಹಾಗೆಯೇ ಇವೆ. ಅವುಗಳಲ್ಲಿ ಮನುಷ್ಯರು ಒಳಗೆ ಹೋಗಲು ಸಾಧ್ಯವಿಲ್ಲ. ಹೋಗಲು ಬಾರದು. ಭಾರತದಲ್ಲಿ ಸಾಮಾನ್ಯವಾಗಿ ಕಸ ಕಡ್ಡಿಗಳನ್ನು ತಂದು ಚರಂಡಿಯಲ್ಲಿ ಹಾಕಿಬಿಡುತ್ತಾರೆ. ಕಸಗಳನ್ನು ಮೋರಿಯಲ್ಲಿ ಹಾಕುವ ಸಂಸ್ಕೃತಿ  ನಮ್ಮಲ್ಲಿದೆ. ಪ್ರತಿ ಮನೆಯಲ್ಲಿಯೂ ಘನ ತಾಜ್ಯವನ್ನು (Solid waste) ಮೋರಿಯಲ್ಲಿ ಸುರಿದು ಹೋಗುತ್ತಾರೆ. ಸಿಂಕಿನಲ್ಲಿ ಏನಾದರೂ ಸಿಕ್ಕಿಕೊಂಡರೆ ಕಡ್ಡಿಯಿಂದ ಅದನ್ನು ಚುಚ್ಚಿ ರಸ್ತೆಯ ಚರಂಡಿಗೆ ತಳ್ಳುತ್ತಾರೆ. ಅವೆಲ್ಲಾ ಎಲ್ಲೋ ಹೋಗಿ ಕಟ್ಟಿಕೊಳ್ಳುತ್ತದೆ. ಅಲ್ಲಿಯೂ ಹೋಗಿ ಇವು ಕಟ್ಟಿಕೊಳ್ಳುತ್ತದೆ ಅಲ್ಲವೇ. ನಮ್ಮ ಮನೆಯನ್ನು ಶುದ್ಧವಾಗಿ ಇಟ್ಟುಕೊಂಡರೆ ನಮ್ಮ ಕೆಲಸ ಮುಗಿಯಿತು ಅಂದುಕೊಳ್ಳುತ್ತೇವೆ. ಇವೆಲ್ಲ ವಿಷವಾಯುವಾಗಿ ಪರಿವರ್ತನೆಯಾಗಿ ಕೆಳಗೆ ಕೆಲಸ ಮಾಡುವ ಬಡ ಮನುಷ್ಯರ ಪ್ರಾಣವನ್ನು ಬಲಿ ತೆಗೆದುಕೊಳ್ಳುತ್ತದೆ. ಮೂವರು ಒಳಗೆ ಇಳಿದು ಕೆಲಸ ಮಾಡುತ್ತಾರೆ. ಒಂದು ಬೆಲ್ಟ್ ಅಥವಾ ಹಗ್ಗವನ್ನು ಸೊಂಟಕ್ಕೆ ಕಟ್ಟಿ ಒಳಗೆ ಇಳಿಸಿದರೆ ಅವರು ಅಪಾಯದ ವಿಸಲ್ ಊದಿದಾಗ ಮೇಲಕ್ಕೆ ಎಳೆದುಕೊಂಡು ಬಿಡಬಹುದು. ಆ ವ್ಯವಸ್ಥೆಯೂ ಇಲ್ಲದೇ ಇರುವುದರಿಂದ ಅವರ ಸಹಾಯಕ್ಕೆ ಅಂತ ಮತ್ತೊಬ್ಬರು ಒಳಗೆ ಇಳಿಯುತ್ತಾರೆ. ಅದರನಂತರ  ಮತ್ತೊಬ್ಬರು.  ಹೀಗೆ ಒಬ್ಬರನಂತರ ಮತ್ತೊಬ್ಬರು ಒಳಗೆ ಇಳಿದು ಪ್ರಾಣ ಕಳೆದುಕೊಳ್ಳುತ್ತಾರೆ. ಇದೇ ಮುಂದುವರೆಯುತ್ತಿದೆ.

ಭಾರತೀಯ ರೈಲು ಸೇವೆಯ ಬಳಿ ಒಂದು ಲಕ್ಷದ ಎಪ್ಪತ್ತು ನಾಲ್ಕು ಸಾವಿರ ಕೋಚುಗಳಿವೆ. ಒಂದು ವರ್ಷಕ್ಕೆ 500 ಬಯೋ ಶೌಚಾಲಯಗಳನ್ನು ಅವರು ನಿರ್ಮಿಸುತ್ತಾರೆ. ಹೀಗೆ ಪರಿವರ್ತಿಸಿದರೆ ಯಾವಾಗ ಗುರಿಯನ್ನು ಮುಟ್ಟುವುದು? ಟ್ರಾಕಿನಲ್ಲಿ ಇರುವಾಗ, ಜಂಕ್ಷನಿನಲ್ಲಿ ಇರುವಾಗ ರೈಲಿನಲ್ಲಿ  ಶೌಚಾಲಯಗಳನ್ನು ಬಳಸಬಾರದು. ಆದರೆ ಅವಸರವೆಂದರೆ ಬಳಸದೆ ಇರಲಾಗದು. ಈರೋಡು, ಸೇಲಂ, ಅರಕ್ಕೋಣಂ ಅಂತಹ ಜಂಕ್ಷನ್ ಗಳಲ್ಲಿ ತುಂಬಾ ಸಮಯ ಬಂಡಿಯನ್ನು ನಿಲ್ಲಿಸುತ್ತಾರೆ. ಬೆಳಗಿನ ಜಾವ ಐದು ಆರು ಘಂಟೆಯ ಸಮಯಕ್ಕೆ ಈ  ಜಂಕ್ಷನ್ ಗಳಲ್ಲಿ ಗಾಡಿಗಳು ಬಂದು ನಿಲ್ಲುತ್ತವೆ. ಅದು ನೈಸರ್ಗಿಕ ಬಾಧೆಯ ಸಮಯ. ಅವಸರವನ್ನು ಯಾರಿಂದಲೂ ತಡೆದುಕೊಳ್ಳಲಾಗುವುದಿಲ್ಲ.  ಆದ್ದರಿಂದ ಬಳಸುತ್ತಾರೆ. ಆ ಸಮಯದಲ್ಲಿ ಕೆಳಗೆ ಬೀಳುವ ತ್ಯಾಜ್ಯವನ್ನು ತೆಗೆಯಲು ಆಳುಗಳನ್ನು ನೇಮಕಮಾಡಿಕೊಳ್ಳುತ್ತಾರೆ. ಆದರೆ ರೈಲ್ವೇ  ಇಲಾಖೆ ನಮ್ಮಲ್ಲಿ ಇಂತಹವರು ಯಾರು ಕೆಲಸ ಮಾಡುತ್ತಿಲ್ಲ ಎಂದು ನಿರಾಕರಿಸುತ್ತದೆ. ಈ ರೀತಿಯಾಗಿ ಬಹಳ ಮಂದಿ ನಿರ್ಮಲೀಕರಣ ಕೆಲಸಗಾರರು ನಮ್ಮಲ್ಲಿ ಇದ್ದಾರೆ.

ಒಂದು ಜಾಗದಲ್ಲಿ ಇಂತಹ ಪದ್ಧತಿಯನ್ನು ತೊಡೆದುಹಾಕಿದೆವು ಎಂದು ಅಂದುಕೊಂಡರೆ ಮತ್ತೊಂದು ಸ್ಥಳದಲ್ಲಿ ಹೊಸದಾಗಿ ಹುಟ್ಟಿಕೊಳ್ಳುತ್ತದೆ. 2019ರ ಒಳಗೆ ಇಪ್ಪತ್ತೊಂದು ಸಾವಿರ ಶೌಚಾಲಯಗಳನ್ನು ನಿರ್ಮಿಸಲು ತೀರ್ಮಾನ ಕೈಗೊಂಡಿದ್ದಾರೆ. ಹೀರುವ ಸಲಕರಣೆಗಳು ಇಲ್ಲದಿದ್ದರೆ, ಮತ್ತೆ ಇಪ್ಪತ್ತೊಂದು ಸಾವಿರ ಸೆಪ್ಟಿಕ್ ಟ್ಯಾಂಕುಗಳಲ್ಲಿ ಇಳಿದು ಯಾರು ಕೆಲಸ ಮಾಡುತ್ತಾರೆ? ಇರುವ ವ್ಯವಸ್ಥೆಯಲ್ಲಿಯೇ ಬಹಳಷ್ಟು ಮಂದಿ ಸಾಯುತ್ತಿದ್ದಾರೆ. ಶೌಚಾಲಯದ ಸಂಖ್ಯೆಯನ್ನು ಹೆಚ್ಚಿಸಿದರೆ ಪರಿಸ್ಥಿತಿ ಏನಾಗಬಹುದು? ಇವನ್ನೆಲ್ಲಾ ಅವರು ಸ್ವಲ್ಪ ಯೋಚಿಸಬೇಕು. ಆಂದೋಲನ್ ಅಂತಹ ಸಂಸ್ಥೆಗಳು ಇದರಲ್ಲಿ ಏನು ಮಾಡಲು ಸಾಧ್ಯ?

ಮುಂದುವರೆಯುವುದು …

ಭಾಗ ೧ : http://ruthumana.com/2018/01/27/bezwada-wilson-interview-part-1/

ಭಾಗ ೨ : http://ruthumana.com/2018/02/04/bezwada-wilson-interview-part-2/

ಪ್ರತಿಕ್ರಿಯಿಸಿ