ಪುಸ್ತಕ ಪರೀಕ್ಷೆಯಲ್ಲಿ ಪ್ರಣಯ್ ಲಾಲ್ ಅವರ “ಇಂಡಿಕ : ಎ ಡೀಪ್ ನ್ಯಾಚುರಲ್ ಹಿಸ್ಟರಿ ಆಫ್ ಇಂಡಿಯಾ”

2016 ರ ಕೊನೆಯಲ್ಲಿ ಬಂದ ಭಾರತೀಯ ಉಪಖಂಡದ ಪ್ರಾಕೃತಿಕ ಇತಿಹಾಸದ ಕುರಿತಾದ ಅಧ್ಯಯನದ ಕುತೂಹಲಕಾರಿ ವಿವರಗಳನ್ನೊಳಗೊಂಡ ಪ್ರಣಯ್ ಲಾಲ್ ಅವರ “ಇಂಡಿಕ ಎ ಡೀಪ್ ನ್ಯಾಚುರಲ್ ಹಿಸ್ಟರಿ ಆಫ್ ಇಂಡಿಯಾ” ಪುಸ್ತಕ ಬಹಳಷ್ಟು ಚರ್ಚೆಗೊಳಗಾಯಿತು . ಋತುಮಾನದ ಪುಸ್ತಕ ಪರೀಕ್ಷೆಯಲ್ಲಿ ಈ ಪುಸ್ತಕದ ಕುರಿತು ಜಯಶ್ರೀ ಜಗನ್ನಾಥ ಬರೆದಿದ್ದಾರೆ.

“ಎಪ್ಪತ್ನಾಲ್ಕು ಸಾವಿರ ವರ್ಷಗಳ ಹಿಂದೆ ಸುಮಾತ್ರದ ಹತ್ತಿರದ ತೋಬಾ ಅಗ್ನಿಪರ್ವತ ಎರಡು ಸಾವಿರದ ಇನ್ನೂರ ಎಂಭತ್ತು ಚದರ ಕಿಲೋಮೀಟರ್ಗಳಷ್ಟು ವಸ್ತುಗಳನ್ನು ಹೊರಗುಗುಳಿತು.”

” ನಾವು, ಅಂದರೆ ಮನುಷ್ಯರು ಮತ್ತು ಚಿಂಪಾಂಜ಼ೀಗಳ ನಡುವಿನ ಡಿಎನ್ಯೆಗಳಲ್ಲಿ ೯೯.೯೭% ಅಷ್ಟು ಸ್ವಾಮ್ಯವಿದೆ”

” ಪ್ರಪಂಚದ ಮತ್ತೆಲ್ಲಾ ನದಿಗಳೂ ಸೇರಿ ಎಷ್ಟು ರಾಡಿ[ಸೆಡಿಮೆಂಟ್]ಯನ್ನು ಹೊತ್ತುತಂದು ಹಾಕುತ್ತವೆಯೋ ಅದರ ಪ್ರಮಾಣವನ್ನೂ ಮೀರಿದಷ್ಟು ರಾಡಿಯನ್ನು ಗಂಗಾ, ಬ್ರಹ್ಮಪುತ್ರಾ ಮತ್ತು ಸಿಂಧೂ ಮೂರೂ ನದಿಗಳು ಮಾತ್ರ ಸೇರಿ ತಂದು ಹಾಕುತ್ತವೆ.”

ಇಂಥಹ ಅನೇಕ ವಾಕ್ಯಗಳು ನಾನು ಪ್ರಣಯ್ ಲಾಲ್ ಅವರ ” ಇಂಡಿಕ ಎ ಡೀಪ್ ನಚ್ಯುರಲ್ ಹಿಸ್ಟೊರೀ ಆಫ಼್ ಇಂಡಿಯಾ’ ಎಂಬ ಪುಸ್ತಕವನ್ನು ಓದಿ ಮುಗಿಸಿ ಕೆಳಗಿಟ್ಟಾಗ ನನ್ನ ಮನಸ್ಸಿನಲ್ಲುಳಿಯುತ್ತವೆ. ನಮ್ಮ ನೆಲದ ಪ್ರಾಕೃತಿಕ ಇತಿಹಾಸದ ಒಂದು ಆಳವಾದ ಅಧ್ಯಯನದ ಫಲ ಈ ಪುಸ್ತಕ. ತಮ್ಮ ಇಪ್ಪತ್ತು ವರ್ಷಗಳ ಅಧ್ಯಯನ, ಸಂಶೋಧನೆ, ಸಂದರ್ಶನಗಳು, ಪ್ರವಾಸಗಳು ಇವೆಲ್ಲದರ ಫಲಿತಾಂಶವಾಗಿ ಲೇಖಕರು ಈ ಪುಸ್ತಕವನ್ನು ಬಹಳ ಗಂಭೀರವಾಗಿಯಷ್ಟೇ ಅಲ್ಲ ತುಂಬು ಹೃದಯದಿಂದ ವಿಷಯವನ್ನು ಪ್ರೀತಿಸಿ ಚಪ್ಪರಿಸಿ ನಮ್ಮೊಡನೆ ಆಪ್ಯಾಯಮಾನವಾಗಿ ಹಂಚಿಕೊಂಡಿದ್ದಾರೆಂದೆನ್ನಿಸುತ್ತದೆ

ಪ್ರಣಯ್ ಲಾಲ್ ಒಬ್ಬ ಬಯೊಖೆಮಿಸ್ಟ್ ಮತ್ತು ಕಲಾಕಾರರು. ಅವರು ಪರಿಸರವಾದಿಯಾಗಿ ಮತ್ತು ಸಾರ್ವಜನಿಕ ಆರೋಗ್ಯಖಾತೆಯಲ್ಲಿ ಕೆಲಸ ಮಾಡಿದ್ದಾರೆ. ಅವರ ಈ ಮೊದಲ ಪುಸ್ತಕ ಭಾರತ ಉಪಖಂಡವು ಹುಟ್ಟಿದ, ಪೃಥ್ವಿಯಲ್ಲಿ ಅದು ಆಕಾರಗೊಂಡ ಮತ್ತು ಅದರ ನೆಲ ಜಲ ಗಿರಿಶಿಖರ ನದಿಸರೋವರಗಳೂ, ಅದರ ಸೂಕ್ಕ್ಷ್ಮಾಣು ಸೂಕ್ಷ್ಮ ಜೀವಿಗಳಿಂದ ಹಿಡಿದು ಎಲ್ಲ ಪ್ರಾಣಿಪಕ್ಷಿ ಕ್ರಿಮಿಕೀಟಗಳೂ ಗತಿಸಿಹೋದ ಪಳೆಯುಳಿಕೆಗಳಾಗಿರುವ ಮತ್ತು ಉಳಿದು ಬೇಳೆದು ವಿಕಸನಗೊಂಡಿರುವ ಜೀವಿಗಳೂ ಮತ್ತಿತರ ಎಲ್ಲಾ ಪ್ರಾಕೃತಿಕ ಅಂಶಗಳನ್ನೂ ವಿವರಿಸುತ್ತಾರೆ. ಸುಮಾರು ೫ ಬಿಲ್ಲಿಯನ್ ವರ್ಷಗಳ ಕತೆಯನ್ನು ವಿಸ್ತಾರವಾಗಿ ಕುತೂಹಲಕಾರಿಯಾಗಿ ವಿಸ್ಮಯಕಾರಿಯಾಗಿರುವ ಕಥಾನಕವಾಗಿ ನಮ್ಮ ಮುಂದೆ ತೆರೆದಿಡುತ್ತಾರೆ. ಇದೊಂದು ಕೈಗೆತ್ತಿಕೊಂಡರೆ ಕೆಳಗಿಡಲಾಗದಷ್ಟು ಓದಿಸಿಕೊಳ್ಳುವ ಕೃತಿ.

ಐದು ಬಿಲ್ಲಿಯನ್ ವರ್ಷಗಳ ಹಿಂದೆ ನಮ್ಮ ಭೂಮಿಯಿರಲಿಲ್ಲ. ಅಷ್ಟೇಕೆ, ಸೂರ್ಯನೇ ಇರಲಿಲ್ಲ. ಈ ಪುಸ್ತಕ ಕಾಲದ ಬಗ್ಗೆ ನಮ್ಮ ಜ್ಞಾನದ ಅತ್ಯಂದ ಹಿಂದಿನ ಮೊದಲ ಮನವರಿಕೆಯಾದ ’ಬಿಗ್ ಬ್ಯಾಂಗ್ ಥಿಯರಿಯ ನ್ಯುಕ್ಲಿಯೊಸಿಂಥೆಸಿಸ್’ನಿಂದ ಪ್ರಾಂಭಿಸುತ್ತದೆ. ಅಲಿಂದ ಹಾದುಬಂದು ಹೋಮೋಸೆಪಿಯನ್ನರು ನಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳುವುದರವರೆಗೂ ನಡೆಯುತ್ತದೆ.

ನಮ್ಮ ಭೂಮಿಯ ಬೃಹುತ್ ಗಾತ್ರ ಅದರಿಂದಾಗಿ ಈ ವಿಶ್ವದ ನಮ್ಮ ಊಹೆಗೂ ನಿಲುಕಲಾಗದ ಬೃಹತ್ತತೆ, ಅದರ ಹಿನ್ನೆಲೆಯಲ್ಲಿ ನಮ್ಮ ಅಸ್ತಿತ್ವದ ಮತ್ತು ಜೀವನದ ಕಿರುಘಟ್ಟ ಮತ್ತು ಅಮುಖ್ಯತೆ ಇವುಗಳನ್ನು ಪ್ರಣಯ್ ಲಾಲರು ಈ ಪುಸ್ತಕದಲ್ಲಿ ಸುಂದರವಾಗಿ ಹಾಗೂ ಅತ್ಯಂತ ಚೇತೋಹಾರಿಯಾಗಿ ಕಟ್ಟಿಕೊಡುತ್ತಾರೆ. ಇದೊಂದು ಕಲ್ಪಿತವಲ್ಲದ ಆದರೆ ಮೈನವಿರೇಳಿಸುವ ರೋಮಾಂಚಕ ಕಥಾನಕ. ನಾವು ಪ್ರತಿದಿನವೂ ನಮ್ಮ ಸುತ್ತಮುತ್ತ ಕಾಣುವ ಜೀವಜಗತ್ತು ಎಷ್ಟು ಕಿರಿದಾದ, ಒಂದು ಅಣುವಿನಷ್ಟು ಮಾತ್ರದ ಸಾಧ್ಯತೆಯ ಆಕಸ್ಮಿಕ ಸಂಭವದಿಂದ ಮಾತ್ರ ಸಾಧ್ಯ ಹಾಗೂ ಈಗಿರುವ ಜೀವರಾಶಿಯೇನಾದರೂ ನಾಶವಾದಲ್ಲಿ ಅಂತಹ ಸಂಭವ ಮತ್ತೆನ್ನಿನ್ನೆಂದೆಂದೂ ಆಗಲಾರದು, ಎಂದು ನಮ್ಮ ಅರಿವಿಗೆ ಬಂದಾಗ ಈ ಜೀವಜಗತ್ತಿನ ಮತ್ತು ಅದನ್ನು ಹೊತ್ತುನಿಂತ ನಮ್ಮ ಭೂಮಿಯ ಬಗ್ಗೆ ನಮಗೆ ಆದರ ಮತ್ತು ಸೋಜಿಗ ತುಂಬಿದ ಮೆಚ್ಚುಗೆಯಾಗದಿರಲು ಸಾಧ್ಯವೇ ಇಲ್ಲ. ಅದು ಈ ಪುಸ್ತಕ ಓದಿದ ನಂತರ ನಮ್ಮಲ್ಲುಳಿಯುವ ಮನಃಸ್ಥಿತಿ.

ಬಹಳಷ್ಟು ವಿವಿಧ ವಿಷಯಗಳನ್ನೊಳಪಡಿಸಿದ ಈ ರೀತಿಯ ಒಂದು ಸಾಧಾರಿತ ಕೃತಿಯನ್ನು ಬರೆಯಲು ಕೈಗೆತ್ತಿಕೊಳ್ಳುವುದೇನೂ ಸುಲಭದ ಕೆಲಸವಲ್ಲ. ಲೇಖಕರು ತಾವು ಹೆಸರಿಸುವ ಎಲ್ಲಾ ಹೈಪಾಥಿಸಿಸ್ಗಳನ್ನೂ, ಜೀವವಿಕಸನ ನಡೆದಿರಬಹುದಾದ ಮಾರ್ಗನಕ್ಷೆಯನ್ನೂ ಆಧಾರಗಳೊಂದಿಗೆ ಅಥವಾ ಅಂತಹ ನಿರ್ಧಾರಕ್ಕೆ ಬರಲು ತೆಗೆದುಕೊಂಡ ಅಧ್ಯಯನಗಳ ಆಲೋಚನೆಗಳ ಪಥಗಳೊಂದಿಗೆ ವಿವರಿಸುತ್ತಾರೆ. ಅವುಗಳಲ್ಲಿ ಬಹಳಷ್ಟು ಪಥಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಸಂಶೋಧಕರುಗಳೂ ಒಪ್ಪಿಕೊಂಡಿರುವ ಅಧ್ಯಯನ ಮಾರ್ಗಗಳು.

ಹಾಗಿದ್ದರೆ ಈ ಪುಸ್ತಕದಲ್ಲಿ ನನಗೇನೂ ಕೊರತೆಗಳೇ ಕಾಣಲಿಲ್ಲವೆಂದಲ್ಲ. ಆದರೆ ಅವುಗಳನ್ನು ಹೆಸರಿಸಿ ವಿವರಿಸಲು ಸಂಕೋಚವಾಗುವಷ್ಟರ ಮಟ್ಟಿಗೆ ಈ ಕೃತಿಯ ಲೇಖಕರು ನಿಷ್ಟೆಯಿಂದ ತಮ್ಮ ವಿಚಾರಗಳನ್ನು ರೋಚಕವಾಗಿ ಮಂಡಿಸಿದ್ದಾರೆ. ಒಂದು ಪುಸ್ತಕವನ್ನು ಇಷ್ಟರ ಮಟ್ಟಿಗೆ ಆನಂದದಿಂದ ಅನುಭವಿಸಿದ ನಂತರವೂ ಅದರ ನ್ಯೂನತೆಗಳನ್ನು ಹೆಸರಿಸುವುದೂ ಸ್ವಲ್ಪ ಮುದುಡುವಂತಹ ಕೆಲಸವೇ.

ಅವುಗಳನ್ನು ಹೆಸರಿಸುವ ಮುಂಚೆ ಈ ಪುಸ್ತಕ ಈ ಕಾಲಮಾನದಲ್ಲಿ ನನಗೆ ಅದೇಕೆ ಹೆಚ್ಚಾಗಿ ಸಂಗತವೆನಿಸಿತು ಎಂದು ಹೇಳಲಿಷ್ಟಪಡುತ್ತೇನೆ. ಇದು ಬಹುವಿವರಣೆಗಳನ್ನೊಳಗೊಂಡ ವಿದ್ವತ್ಪೂರ್ಣ ಪುಸ್ತಕವಾದರೂ ಇದರ ಪಾಂಡಿತ್ಯದ ತೂಕ ಸಾಮಾನ್ಯ ಓದುಗರನ್ನು ಬೋರುಮಾಡುವುದಿಲ್ಲ. ಈ ಪ್ರಸ್ತುತ ಕಾಲದಲ್ಲಿ ಒಂದೋ ಪರಿಸರವಾದಿಗಳು ಭಯಂಕರ ತೀವ್ರವಾದಿಗಳಂತೆ ಜಗತ್ತು ಪ್ರಳಯದೆಡೆಗೆ ಧಾವಿಸುತ್ತಿದೆ ಎಂದು ಆತಂಕಪಡಿಸುತ್ತಿದ್ದಾರೆ ಅಥವಾ ಮತ್ತಿತರರು ಪರಿಸರವಾದವೇ ಒಂದು ಅಗತ್ಯವಿಲ್ಲದ ’ಇಸಮ್’ ಎಂದು ಲೇವಡಿಮಾಡುತ್ತಾ ನಮಗೆ ಬೇಕಾದಹಾಗೆ ಪರಿಸರವನ್ನು ಹಾಳುಮಾಡುತ್ತಾ ಲಕ್ಷ್ಯವಿಲ್ಲದ ಬೇಜವಾಬುದಾರರಾಗಿ ವರ್ತಿಸುತ್ತಿದ್ದಾರೆ. ಮಧ್ಯದಲ್ಲಿರುವವರಿಗೆ ಇದು ನಿಜವೋ ಅದು ನಿಜವೋ ತಿಳಿಯದಷ್ಟು ಗೊಂದಲ. ಈ ಪುಸ್ತಕ ವಸ್ತುನಿಷ್ಟವಾಗಿ ವಿಷಯಗಳನ್ನು ಯಾವುದೇ ಅತಿನಾಟಕೀಯತೆಯಿಲ್ಲದೆ ಮಂಡಿಸುತ್ತದೆ. ಭೂಮಿ ಉಳಿಯುತ್ತದೆ, ನಾವಲ್ಲ. ವಿಶ್ವದ ಕಾಲಕ್ರಮದಲ್ಲಿ ಭೂಮಿಯೂ ಉಳಿಯದು.ಅತ್ಯಂತ ಭಯಂಕರವಾದ ತಡೆಯಲಾಗದ ಒಂದು ಪ್ರಾಕೃತಿಕ ಅವಗಢ ಯಾವಾಗಬೇಕಾದರೂ ಸಂಭವಿಸಬಹುದು ಮತ್ತು ಅದನ್ನು ತಿಳಿದೂ ಮಾನವಕುಲಕ್ಕೆ ಅದರ ನಾಶವನ್ನು ತಡೆಯಲಾಗದಿರಬಹುದು.

ಇದಲ್ಲದೆ ಈ ಪುಸ್ತಕ ವಿಕಸನವಾದವನ್ನು ಸಾಧಾರವಾಗಿ ಸರಳವಾಗಿ ತಿಳಿಸುವುದರಿಂದ ’ ಸೃಷ್ಟಿ ಮತ್ತು ವಿಕಸನವಾದ ಮಧ್ಯೆ ಹಾಲಿಯಲ್ಲಿ ಪ್ರಚಲಿತವಿರುವ ಅವೈಜ್ಞಾನಿಕ ಚರ್ಚೆಗಳು ಖಂಡಿತವಾಗಿ ಹಾಸ್ಯಾಸ್ಪದವಾಗಿ ತೋರುತ್ತವೆ. ಇದು ನನ್ನ ಮಟ್ಟಿಗೆ ಇಂದಿನ ಅತಿಸಾಂಪ್ರದಾಯಿಕ ಸಂಕುಚಿತ ಮನೋಸ್ಥಿತಿಗೆ ಸರಿಯಾದ ಸಮಾಧಾನಕರ ಉತ್ತರ. ಮತ್ತೆ ನಮ್ಮ ದೇಶದಲ್ಲಿರುವ ಅತಿತೀವ್ರ ರಾಷ್ಟ್ರೀಯವಾದದ ಹಿನ್ನೆಲೆಯಲ್ಲಿ ನಾವು ನಮ್ಮ ನೆಲದ ಚರಿತ್ರೆಯ ಬಹಳಷ್ಟು ಕಾಲದ ಹಿಂದೆ ಹೋದರೆ ನಮಗೆಲ್ಲರಿಗೂ ಒಂದು ಸಮಾನ ಗುಂಪಿನ ಪಿತೃಗಳಿದ್ದಿರಬೇಕೆಂಬ ವಿಷಯ ಮನವರಿಕೆಯಾಗಿ ತೀವ್ರತೆ ತಣ್ಣಗಾಗಬಹುದಾದ ಶುಭ ಆಶಯವನ್ನೂ ಈ ಪುಸ್ತಕ ಕಟ್ಟಿಕೊಡುತ್ತದೆ. ಅದರಲ್ಲೂ ಮುಂದಿನ ಪೀಳಿಗೆಯ ಕಿರಿಯರಿಗಿದು ಬಹಳ ಸಹಾಯಕಾರಿ.

ಹಾಗಿದ್ದರೂ ಅಲ್ಲಲ್ಲಿ ಕೆಲವು ವಿಷಯಗಳನ್ನು ಮಂಡಿಸುವಾಗ ಲೇಖಕರು ಇನ್ನೂ ಹೆಚ್ಚಿನ ಸ್ಪಷ್ಟತೆಯೊಡನೆ ವಿವರಿಸಬೇಕಿತ್ತು ಎನ್ನಿಸುತ್ತದೆ. ಕೆಲವುಕಡೆ ಇನ್ನೂ ಚರ್ಚಿಸಲ್ಪಡುತ್ತಿರುವ ವಿಷಯಗಳನ್ನೂ ಸಹ ಒಪ್ಪಿಕೊಂಡುಬಿಟ್ಟಿರುವ ವಿಷಯಗಳ ನಡುವೆ ನುಸಿಳಿಸಿಬಿಟ್ಟಿದ್ದಾರೇನೋ ಎಂಬ ಶಂಕೆ ಮೂಡುತ್ತದೆ. ಮತ್ತೆ ಕೆಲವೆಡೆಗಳಲ್ಲಿ ವಿಷಯಗಳನ್ನು ಮಂಡಿಸುವ ಧಾಟಿಯು ಪುರವರ್ತನೆಯಾಗತೊಡಗುತ್ತದೆ. ಮತ್ತೆ ಕೆಲವು ಕದೆ ಖಂಡಿತವಾಗಿ ಒಂದು ಚಿತ್ರದಿಂದಲೋ ನಕ್ಷೆಯಿಂದಲೋ ವಿವರಿಸಬೇಕಿತ್ತು ಎನ್ನಿಸುತ್ತದೆ.

ಇದನ್ನು ಈ ವಿಷಯಗಳ ವಿಧ್ವಾಂಸರುಗಳಂತಲ್ಲದೆ ಒಬ್ಬ ಸಾಮಾನ್ಯ ವಿಜ್ಞಾನದ ಆಸಕ್ತಳಂತೆ ಓದಿ ಮೇಲಿನ ಅನಿಸಿಕೆಗಳನ್ನು ಉದಾಹರಣೆಗಳೊಂದಿಗೆ ವಿವರಿಸಲು ಇಷ್ಟಪಡುತ್ತೇನೆ.
ಪು. ೩೨. ಹೆಲ್ಸ್ ಗೇಟ್ ಎಂಬಲ್ಲಿ ಜೀವ ಉದಯಿಸಿತು ಎನ್ನುವಾಗ ಅಂತಹ ಮಹತ್ತರವಾದ ಘಟನೆಗೆ ಮತ್ತು ಆ ಸ್ಥಳಕ್ಕೆ ಹೆಚ್ಚಿನ ವಿವರಣೆಯ ಅಗತ್ಯವಿತ್ತು. ಆ ಸ್ಥಳ ಎಲ್ಲಿದೆ ಮತ್ತು ಈಗ ಹೇಗಿದೆ ಎನ್ನುವುದು ಭೂಪಟದಲ್ಲಿ ತೋರಿಸಿದ್ದರೆ ಒಳ್ಳೆಯದಿತ್ತು. ಮೊದಲ ಜೀವ ತಂತುವೆಂದು ಪರಿಗಣಿಸಲಾಗಿರುವ ’ಲೂಸಾ’ದ ಜೈವಿಕ ನೊರೆಯ ಜೆಲ್ಲಿಯಂತಹ ಪದಾರ್ಥದಿಂದ ಆರೆನ್ಎ ಹುಟ್ಟಿ ನಂತರದ ಪ್ರಪಂಚದ ಪ್ರಥಮ ಮಣ್ಣಿನವರೆಗಿನ ೩.೫ ಬಿಲ್ಲಿಯನ್ ವರ್ಷಗಳವರೆಗಿನ ಕತೆಯೊಂದಿಗೆ ನುಸುಳುವ ವಾಯುಮಂಡಲದಲ್ಲಿನ ಸೂಕ್ಷ್ಮಾಣುಜೀವಿಗಳು ಸ್ವಲ್ಪಮಟ್ಟಿಗೆ ರೋಚಕಗೊಳಿಸುವ ಕಲ್ಪನೆಯನ್ನು ಮಿಳಿತಗೊಳಿಸಿರುವ ಕತೆಯೇನೋ ಅನ್ನಿಸುತ್ತದೆ. ಮೈಟೋಕಾಂಡ್ರಿಯಾದ ಹುಟ್ಟು ಒಂದು ಜೀವಕೋಶ ಇನ್ನೊಂದನ್ನು ನುಂಗುವಾಗ ಆಗಿರಬೇಕೆನ್ನುವ ಹೇಳಿಕೆಗೆ ಒಂದು ಜೀವಕೋಶಗಳು ಒಂದನ್ನೊಂದು ನುಂಗಿರಬಹುದಾದ ಚಿತ್ರದ ಅವಶ್ಯಕತೆ ಬಹಳವಾಗಿದೆ.

ಪುಟ. ೧೯೮-೧೯೯ – ಗೋಂಡ್ವಾನ ಎಂಬುದು ಪ್ರಾಚೀನ ಭೂಭಾಗದಿಂದ ಮಡಗಾಸ್ಕರ್ ದ್ವೀಪ ಕಾಲಾನುಕ್ರಮದಲ್ಲಿ ಅಂದರೆ ಸಹಸ್ರಾರು ಮಿಲ್ಲಿಯನ್ ವರ್ಷಗಳಲ್ಲಿಒಂದು ಜ಼ಿಪ್ ತೆರೆಯುವಂತೆ ಬೇರೆಯಾದ ವಿಷಯಕ್ಕೆ ಅತ್ಯಂತ ತರ್ಕಬದ್ಧವಾದ ವಾದಗಳೂ ನಿದರ್ಶನಗಳೂ ಇವೆ. ಉದಾಹರಣೆಗೆ ಊಟಿಯ ಕಡುನೇರಳೆ ಕಪ್ಪೆ ಮತ್ತು ಕೆಂಪು ಮಾಣಿಕ್ಯದಂಥ ಹರಳುಗಳ ಅಧ್ಯಯನದಿಂದ ದೊರಕುವ ವಿಷಯಗಳು. ಅದನ್ನೆಲ್ಲ ಹೇಳುವ ಲೇಖಕರು ಒಂದು ಟೇಬಲ್ ಮೂಲಕ ಅವನ್ನೆಲ್ಲಾ ಪಟ್ಟಿಮಾಡಿದ್ದರೆ ಅವುಗಳನ್ನು ಅಳೆದು ತೂಗಿಸಿ ಮನನಮಾಡಿಕೊಳ್ಳಲು ಅನುಕೂಲವಾಗುತ್ತಿತ್ತು, ಈ ಭಾಗಗಳು ಪುಸ್ತಕದಲ್ಲಿ ಒಂದು ಮೈನವಿರೇಳಿಸುವ ದೃಶ್ಯಕಾವ್ಯದಂತೆ ಓದಿಸಿಕೊಳ್ಳುತ್ತವೆ. ಒಟ್ಟಾರೆ ಓದಿದ್ದನ್ನು ಸಂಕ್ಷಿಪ್ತವಾಗಿ ಒಂದು ಟೇಬಲಿನಲ್ಲಿ ನಮೂದಿಸಬೇಕಿತ್ತು.

ಪುಟ ೩೦೪ – ಹಬಿಲಿಸ್ನ ಮೆದುಳು ಆಸ್ಟ್ರಿಯೋಪೆತಿಕಸ್ನ ಮೆದುಳಿಗಿಂತ ೩೦ % ಅಷ್ಟು ದೊಡ್ಡದಿತ್ತು ಎನ್ನುವಾಗ ಅದಕ್ಕೆ ಅದು ಮಾಂಸಾಹಾರಿ ಎನ್ನುವುದಷ್ಟೇ ಕಾರಣ ಒಪ್ಪಿಗೆಯೆನಿಸುವುದಿಲ್ಲ. ಅದು ಲೇಖಕರಿಗೆ ಸರಿಯೆನಿಸುವ ವಾದವಿರಬಹುದು ಎನ್ನಿಸುತ್ತದೆ.

ಪುಟ ೩೫೦ – ಹೋಮೋ ಎರ್ಗಸ್ಟರ್ ಮತ್ತು ಹೋಮೋ ಎರೆಕ್ಟಸ್ ಈ ಆದಿ ಮಾನವ ಗುಂಪುಗಳ ಸಾಮಾಜಿಕ ವ್ಯವಸ್ಥೆಯ ಬಗೆಗೆ ಬರೆಯುವಾಗ ಪಳೆಯುಳಿಕೆಗಳಲ್ಲದೆ ಸ್ವಲ್ಪ ನಡೆದಿರಬಹುದಾದ ಘಟನೆಗಳನ್ನು ಕಲ್ಪಿಸಲಾಗಿದೆ ಎನ್ನಿಸುತ್ತದೆ. ಉದಾಹರಣೆಗೆ ಮಗು ಹುಟ್ಟುವಾಗ ಮಾನವ ತಾಯಿಗೆ ತನ್ನ ಮಗುವಿನ ಕರುಳುಬಳ್ಳಿಯನ್ನು ತಾನೇ ಕತ್ತರಿಸಲು ಆಗುವುದಿಲ್ಲ ಆದುದರಿಂದ ಅವಳಿಗೆ ಸಾಮಾಜಿಕವಾಗಿ ಇತರ ಮಾನವ ಹೆಣ್ಣುಗಳ ಸಹಕಾರವಿದ್ದಿರಲೇ ಬೇಕು ಎಂಬುದು. ಈವೆಲ್ಲಾ ಕಲ್ಪನೆಗಳನ್ನು ಬೆರೆಸಿ ನೇಯ್ದ ವಿಷಯಗಳೇನೋ ಎಂಬ ಸಣ್ಣ ಶಂಕೆ ಮೂಡುತ್ತದೆ. ಮತ್ತೆ ಕೆಲವೆಡೆಗಳಲ್ಲಿ ಪುಸ್ತಕವು ವಿಷಯಗಳಿಗೆ ನೀಡಿರುವ ಪ್ರಾಮುಖ್ಯತೆಯಲ್ಲಿ ಪಕ್ಶಪಾತವಾಗಿರಬಹುದು ಎಂಬ ಭಾವನೆ ಮೂಡುತ್ತದೆ. ಡೈನೋಸಾರುಗಳು ತುಂಬಾ ರೋಚಕವಾದ ಪ್ರಾಣಿವರ್ಗಕ್ಕೆ ಸೇರಿದವುಗಳೇನೋ ಸರಿಯೇ ಆದರೆ ಅವುಗಳಿಗೆ ನೀಡಲಾದ ಮಹತ್ವ ಮತ್ತು ಉಪಯೋಗಿಸಿರುವ ಪುಟ ಸಂಖ್ಯೆ ಮತ್ತೆ ಹಾಗೆ ಮಾಡಲು ಕೆಲವು ಇತರ ಪ್ರಾಣಿಗಳನ್ನು ಕಡೆಗಣಿಸಬೇಕಾಗಿಬಂದಿತೇನೋ ಎನ್ನಿ ಸುತ್ತೆ. ಉದಾಹರಣೆಗೆ ಸರ್ಪಕುಲ. ನಮ್ಮ ದೇಶದಲ್ಲಿ ಧರ್ಮದಲ್ಲಿ ಮತ್ತು ಜಾನಪದ ಸಂಸ್ಕೃತಿಯಲ್ಲಿ ಹಾವುಗಳು ಹಾಸುಹೊಕ್ಕಾಗಿರುವುದರಿಂದ ನನಗೆ ಅವುಗಳ ಪ್ರಾಚೀನ ವಿಕಸನಪಥದಲ್ಲಿ ನಮ್ಮ ನೆಲ ಎಷ್ಟು ಭಾಗಿಯಾಗಿತ್ತು ಎಂಬುದರ ಬಗ್ಗೆ ಕೌತುಕವಿತ್ತು. ಹಾಗೇ ಸಸ್ಯಗಳಾದ ಬಿಲ್ವ ತುಲಸಿ ಇವುಗಳನ್ನೂ ಅವುಗಳ ಉಗಮವನ್ನೂ ತಿಳಿಸಿಕೊಟ್ಟಿದ್ದರೆ ಚೆನ್ನಾಗಿತ್ತು ಅನ್ನಿಸಿತು.

ಲೇಖಕ ಪ್ರಣಯ್ ಲಾಲ್

ಮತ್ತೊಂದು ಬಹಳ ಮುಖ್ಯವಾದ ಈ ಪುಸ್ತಕದಲ್ಲಿ ಬಿಟ್ಟು ಹೋಗಿರುವ ವಿವರ ಸಾಲಿಗ್ರಾಮಗಳನ್ನು ಕುರಿತದ್ದು. ಗಂಡಕೀ ನದಿಯಲ್ಲಿ ದೊರೆಯುವ ಸಾಲಿಗ್ರಾಮಗಳು ಸಹಸ್ರಾರು ವರ್ಷಗಳ ಹಿಂದಿನ ಸಾಗರಜೀವಿಗಳ ಪಳೆಯುಳಿಕೆಗಳು. ಹಿಂದೆ ಟೆಥಿಸ್ ಸಾಗರವಿದ್ದ ಕಡೆ ಈಗ ಹಿಮಾಲಯ ಪರ್ವತಶ್ರೇಣಿಯಿದೆ. ಭೂಮಿಯ ಮೇಲುಪದರದ ನೆಲತಟ್ಟೆಗಳ ಎಷ್ಟೋ ಬಿಲಿಯನ್ ವರ್ಷಗಳ ಸಂಚಾರವನ್ನು ಮನಮುಟ್ಟುವಂತೆ ಕಣ್ಣಿಗೆ ಕಟ್ಟುವಂತೆ ವಿವರಿಸುವ ಲೇಖಕರು ಸಾಲಿಗ್ರಾಮದ ಬಗೆಗೆಯೂ ಹೆಚ್ಚು ಬರೆಯಬಹುದಿತ್ತು ಎನ್ನಿಸದಿರದು. ಅಷ್ಟೆ ಅಲ್ಲ ನಮ್ಮ ನಾಡಿನಲ್ಲಿ ನಡೆಯುವ ನಡೆದ ಸಂಶೋಧನೆ, ಅಧ್ಯಯನಗಳನ್ನು ಬರೆಯುವಾಗ ಹೆಮ್ಮೆಯಿಂದ ವಿದ್ವಾಂಸರ ಹೆಸರುಗಳನ್ನು ಉಲ್ಲೇಖಿಸುವ ಲೇಖಕರು ಬ್ರಿಹಿತ್ಕಾಯಸಾರಸ್ ಎಂಬ ಒಂದು ಡೈನೋಸಾರನ್ನು ಹುಡುಕಿ ತೆಗೆದೆವೆಂದು ಘೋಶಿಸಿದ ವಿದ್ವಾಂಸರುಗಳು ವಿವಾದತ್ಮಕ ಕಾರಣಗಳಿಂದಾಗಿ ಮತ್ತು ಆ ಸಂಶೋಧನೆಯ ನಿಯತ್ತು ಸಡಿಲವಾಗಿ ಕಂಡಿದ್ದರ ಫಲವಾಗಿ ಆ ಡೈನೋಸಾರ್ ನಮ್ಮ ನಾಡಿನಲ್ಲಿತ್ತು ಎಂಬ ಹೇಳಿಕೆಯನ್ನು ಹಿಂತೆಗೆದುಕೊಂಡರೆಂದು ಬರೆಯುವಾಗ ಆ ಸಂಶೋಧಕರ ಹೆಸರುಗಳನ್ನೂ ತಿಳಿಸಬೇಕಿತ್ತು ಎನ್ನಿಸುತ್ತದೆ. ಹಾಗೆಯೇ ಬೆಕ್ಕು ಮತ್ತು ಮೀನುಗಳ ವಿಕಸನವನ್ನು ವಿವರಿಸಲು ತೆಗೆದುಕೊಂಡ್ರಿವು ಪುಟಸಂಖ್ಯೆಗಳು ಹೆಚ್ಚೆನಿಸುವುದರಿಂದ ಆ ಭಾಗಗಳು ತುಸು ದೀರ್ಘವೆನಿಸಿ ಹೇಳಿದ್ದೇ ಹೇಳುತ್ತಿರುವರೆನ್ನಿಸುತ್ತದೆ.

ಈ ಪುಸ್ತಕದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ವಿವರಣೆಯನ್ನು ಬೆಂಬಲಿಸುವ ಬಹಳಷ್ಟು ಚಿತ್ರಗಳಿವೆ. ಆದರೂ ಅವು ಸಾಕೆನಿಸುವುದಿಲ್ಲ. ಉದಾಹರಣೆಗೆ ಕಾಲಕ್ರಮದಲ್ಲಿ ಸಮಾನ ಕಾಲದಲ್ಲಿ ಒಟ್ಟಿಗೇ ವಿಕಸನ ಹೊಂದುತ್ತಿರಬಹುದಾದ ಜೀವಿಗಳನ್ನೊಳಗೊಂಡ ವಂಶವೃಕ್ಷಗಳು ಅಲ್ಲಲ್ಲಿ
ಒಂದರ ಪಕ್ಕ ಒಂದರಂತೆ ತೋರಿಸಿದ್ದರೆ ಹೋಲಿಸಿ ಅರ್ಥೈಸಿಕೊಳ್ಳಲು ಬಹಳ ಅನುಕೂಲವಾಗುತ್ತಿತ್ತು. ಅದೂಂದು ಕೊರತೆ. ಅದಲ್ಲದೆ ಈಗಿನ ಭೂನಕ್ಷೆಯ ಮೇಲೆ ಹೆಸರಿಸಿರುವ ಸಂತತಿಗತಿಸಿಹೋದ ಪ್ರಾಣಿಗಳನ್ನು ನಮೂದಿಸಿದ್ದರೆ ಆ ಸಂಖ್ಯೆಯ ಮತ್ತು ಆ ಹರವಿನ ಪ್ರಮಾಣ ನಮಗೆ ಹೆಚ್ಚಾಗಿ ಮನದಟ್ಟಾಗುತ್ತಿತ್ತು. ಪುಟಗಟ್ಟಲೇ ಬರೆಯುವ ಅಶಿಲಿಅನ್ ಆದಿಮಾನವ ಶಿಲಾಯುಧಗಳ ಜೊತೆಗೆ ಅವುಗಳ ಹರಡುವಿಕೆಯನ್ನು ನಕ್ಷೆಯಲ್ಲಿ ತೋರಿಸಬೇಕಿತ್ತು. ಈ ಪುಸ್ತಕದಲ್ಲಿ ಉತ್ತರಭಾರತದ ಸಂಶೋಧನೆಗಳ ಬಗೆಗೆ ಹೆಚ್ಚು ವಿವರಗಳಿವೆ. ದಕ್ಷಿಣಭಾರತದ ಬಗೆಗೆ ಬರೆಯುವುದು ಕಡಿಮೆ, ಬರೆದರೂ ಹೆಚ್ಚಿನ ರಂಜಕ ಚಿತ್ರಗಳಿಲ್ಲ.

ಒಟ್ಟಾರೆ ಪುಸ್ತಕದ ಶೈಲಿ ಮತ್ತು ವಿಷಯಗಳ ಓಘ ಚೇತೋಹಾರಿಯಾಗಿದ್ದರೂ ಅಲ್ಲಲ್ಲಿ ಬರವಣಿಗೆ ಮಂದವಾಗತೊಡಗುತ್ತದೆ. ಕಾಲಮಾನದಲ್ಲಿ ಪ್ರಕೃತಿಯ ಮಾರ್ಪಾಡುಗಳೂ ಎಲ್ಲಾಕಾಲಕ್ಕೂ ಒಂದೇ ಸಮನಾದ ಚಕಿತಗೊಳಿಸುವ ಓಟದಲ್ಲಿರುವುದಿಲ್ಲ, ಅದು ಮಂದಗಮನೆಯಾದರೆ ಲೇಖಕರ ವಿವರಣೆಗಳೂ ಸ್ವಲ್ಪಮಟ್ಟಿಗೆ ಎಡವುತ್ತವೆ ಮತ್ತು ಬಹುಸಂಖ್ಯೆಯಲ್ಲಿ ಪ್ರಾಣಿವರ್ಗಗಳ ಹೆಸರುಗಳನ್ನು ಉಲ್ಲೇಖಿಸುವಾಗ ಜೀವಶಾಸ್ತ್ರದ ವಿದ್ಯರ್ಥಿಗಳಲ್ಲದವರಿಗೆ ಸ್ವಲ್ಪ ಇರುಸುಮುರುಸಾಗಲಿಕ್ಕುಂಟು.

ಆದರೆ ಇವೆಲ್ಲವೂ ಪುಸ್ತಕದ ಮಹತ್ವವನ್ನು ಕುಂದಿಸಲಾರವು. ಈ ಪುಸ್ತಕದಲ್ಲಿ ಪಳೆಯುಳಿಕೆಗಳನ್ನು ಅವುಗಳನ್ನು ಅಧ್ಯಯನ ಮಾಡವ ಹೊಸ ಆಸಕ್ತರಿಗೆ ಅವುಗಳನ್ನು ಹುಡುಕುವ ಗುರುತಿಸುವ ಬಗ್ಗೆ ಕೆಲವು ಉಪಯುಕ್ತ ಸೂಚನೆಗಳಿವೆ. ನಮ್ಮ ದೇಶದ ವಿವಿಧ ಭಾಗಗಳನ್ನು ಉದಹರಿಸಿ ಎಲ್ಲಿ ಯಾವ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ, ಯಾವ ಹಳ್ಳಿಯ ಯಾವ ಗುಡ್ಡಗಳ ಇಕ್ಕೆಲಗಳಲ್ಲಿ ಪಳೆಯುಳಿಕೆಗಳು ದೊರಕಬಹುದು ಎಂಬುದರ ಬಗ್ಗೆ ಉಪಯುಕ್ತ ಸೂಚನೆಗಳಿವೆ.
ಮತ್ತೊಮ್ಮೆ ಈ ಪುಸ್ತಕದಲ್ಲಿ ನನ್ನನ್ನು ಚಕಿತಗೊಳಿಸಿ ಮೈನವಿರೇಳಿಸಿದ ಮತ್ತೆ ಕೆಲವು ಅಂಶಗಳನ್ನು ಉದಹರಿಸಲೆತ್ನಿಸುತ್ತೇನೆ.

ಹುಲ್ಲು ಅಂತೆಯೇ ಅಕ್ಕಿ ಮೊದಲಬಾರಿಗೆ ಯಾವಾಗ ಬೆಳೆಯಲಾರಂಭಿಸಿತು ಮತ್ತು ಅದನ್ನು ಕಂಡು ಹಿಡಿದ ಬಗೆ ಒಂದು ಅಚ್ಚರಿಯೇ ಸರಿ. ಸಸ್ಯಾಹಾರೀ ಡೈನೋಸಾರುಗಳ ಸೆಗಣಿಯಲ್ಲಿ ಹುಲ್ಲಿನ ಅಂಶಗಳಿದ್ದು ಅವು ಆ ಸೆಗಣಿಯ ಪಳೆಯುಳಿಕೆಯಲ್ಲಿ ಕಂಡುಬರುತ್ತದೆ. ಆದರೆ ಅದು ಅಕ್ಕಿಯೇ ಎಂದು ತಿಳಿಯುವುದು ಹೇಗೆ? ಇದಿಗೋ ಮತ್ತೊಂದು ಅಚ್ಚರಿ. ಎಲ್ಲ್ಲ ಹುಲ್ಲಿನ ಎಸಳುಗಳ ಎರಡೂ ಪಕ್ಕಗಳಲ್ಲಿ ಹರಿತವಾದ ಹೊಳೆಯುವ ಸಿಲಿಕಾನ್ ಇರುತ್ತದೆ. ಅಷ್ಟೇ ಅಲ್ಲ ಆ ಸಿಲಿಕಾನ್ ಪ್ರತಿ ಒಂದು ಸ್ಪೀಶೀಸಿನ ಹುಲ್ಲಿಗೆ ಒಂದು ಬಗೆಯ ನಿಸ್ಚಿತ ವಿನ್ಯಾಸದಲ್ಲಿರುತ್ತದೆ. ಅದರಿಂದ ಭತ್ತ ಎಷ್ಟು ಮಿಲ್ಲಿಯನ್ ವರ್ಷಗಳ ಹಿಂದೆ ಬೆಳೆಯಲಾರಂಭಿಸಿರಬೇಕೆಂದು ಹೇಳಬಹುದು.

ಮತ್ತೊಂದು ಇಂಥದೇ ವಿಸ್ಮಯಕಾರೀ ವಿಷಯ. ಚಿತ್ರದುರ್ಗದ ಬಳಿಯ ಬ್ರಹ್ಮಗಿರಿಯಲ್ಲಿ ೩೫೦೦ ವರ್ಶ ಪುರಾತನವಾದ ೨೫೦ ಮೆಗಾಲಿತ್ನ ವೃತ್ತಗಳು ಕಂಡುಬಂದಿವೆ. ೨ ಟನ್ನಿಗೂ ಭಾರವಿರುವ ಒಂದೊಂದು ಕಲ್ಲುಗಳನ್ನು ತಂದು ಆ ಕಾಲದಲ್ಲಿ ಅರ್ಧಚಂದ್ರಾಕೃತಿಯಾಗಿ ನಿಲ್ಲಿಸಿರುವುದು ಸೋಜಿಗದ ಸಂಗತಿ. ಇವು ನಿಖರವಾಗಿ ಚಂದ್ರ ಮತ್ತು ಸೂರ್ಯನ ಸ್ಥಾನವನ್ನು ತೋರಿಸುತ್ತದೆ. ಅಲ್ಲದೆ ೧೮ ವರ್ಷಗಳಿಗೊಮ್ಮೆ ಚಂದ್ರ ದಿಗಂತದಲ್ಲಿ ಕೆಳಗುಳಿದು ನಿಲ್ಲುತ್ತಾನೆ ಮತ್ತು ಅದನ್ನು ’ಲೂನಾರ್ ಸ್ಟ್ಯಂಡ್ ಸ್ಟಿಲ್’ ಅನ್ನುತ್ತಾರೆ. ಈ ಮೆಗಾಲಿತ್ಗಳೂ ಅದನ್ನೂ ನಿಖರವಾಗಿ ತೋರಿಸುವುದು ಎಂತಹ ವಿಸ್ಮಯ. ಚಿತ್ರದುರ್ಗಕ್ಕೆ ಇಷ್ಟು ಹತ್ತಿರದಲ್ಲಿದ್ದರೂ ಅಲ್ಲಿರುವ ಇಂತಹ ಮೆಗಾಲಿತ್ಗಳ ಬಗ್ಗೆ ನಮಗೆ ತಿಳಿದೇ ಇರಲಿಲ್ಲವಲ್ಲಾ ಎಂದೆನಿಸುವುದು ಖಚಿತ.

ಬಿಸಿನೀರು ತಣ್ಣೀರಿಗಿಂತ ಬೇಗನೆ ಘನೀಕರಿಸಲ್ಪಡುತ್ತದೆ. ಈ ನಂಬಲು ಕಷ್ಟವಾದ ಅಂಶವನ್ನು ಕಂಡುಹಿಡಿದವನು ತಾನ್ಜ಼ೇನಿಯಾದ ಒಬ್ಬ ಪ್ರೌಡ ಶಾಲೆಯ ವಿದ್ಯಾರ್ಥಿ. ಅವನು ಐಸ್ ಕ್ರೀಮ್ ಮಾಡುವಾಗ ಬಿಸಿಯಾದ ಮಿಶ್ರಣ ತಣ್ಣಗಿನ ಮಿಶ್ರಣಕ್ಕಿಂತ ಬೇಗ ಘನೀಕರಿಸಲ್ಪಟ್ಟಿತು ಎಂದು ಹೀಗೆ ಈ ಪುಸ್ತಕದಲ್ಲಿ ಎಣಿಕೆಗೆ ಸಿಗಲಾರದಷ್ಟು ಸೋಜಿಗದ ಉಪಯುಕ್ತ ಮಾಹಿತಿಯಿದೆ.

ಇದೊಂದು ಎಲ್ಲಾ ವಯಸ್ಸಿನ ಓದುಗರಿಗೂ ಇಷ್ಟವಾಗುವ ಶೈಕ್ಷಣಿಕ, ರೋಮಾಂಚಕ , ಉತ್ತೇಜಕ ಕೌತುಕ ಹೆಚ್ಚಿಸುವ ಪುಸ್ತಕ. ಇದನ್ನು ನಾನು ಎಲ್ಲಾ ಸಾಮಾನ್ಯ ಓದುಗರಿಗೂ ಶಿಫ಼ಾರಸು ಮಾಡುತ್ತೇನೆ. ಹೆಚ್ಚಿನ ಜ್ಞಾನಾರ್ಜನೆಯ ಆಸಕ್ತಿವುಳ್ಳ ವಿದ್ವಾಂಸರಿಗೆ ಕೂಡ ಇದು ಉಪಯುಕ್ತ ಓದು, ಏಕೆಂದರೆ ಇದರಲ್ಲಿ ಬೇರೆ ಬೇರೆ ವಿಶಿಷ್ಟ ವಿಷಯಗಳನ್ನು ಒಟ್ಟಿಗೆ ಹೆಣೆಯಲಾಗಿದೆ. : ಭೌತ ಶಾಸ್ತ್ರ, ಅಸ್ಟ್ರೊ ಫಿಸಿಕ್ಸ್, ಅಸ್ಟ್ರಾನಮಿ, ಜಿಯೊಲಜಿ, ಜಿಯಾಗ್ರಫಿ, ಜ಼ೂವಾಲಜಿ, ಬಾಟನಿ, ಪೇಲಿಯಂಟಾಲಜಿ, ಆರ್ಖಿಯಾಲಜಿ, ಜೆನೆಟಿಕ್ಸ್, ಬಿಯೋಖೆಮಿಸ್ಟಿ ಇತ್ಯಾದಿ. ಅಲ್ಲದೆ ಪುಸ್ತಕದ ಕೊನೆಯಲ್ಲಿ ಕೊಟ್ಟಿರುವ ವಿಶದವಾದ ಉಲ್ಲೇಖಗಳನ್ನು ಓದಿ ಇದಕ್ಕೆ ಸಮ್ಮಂಧಪಟ್ಟ ವೈಜ್ಞಾನಿಕ ಲೇಖನಗಳನ್ನು ಆಸಕ್ತರು ಅಧ್ಯಯನ ಮಾಡಿಕೊಳ್ಳಬಹುದು. ಎಲ್ಲಾ ಓದುಗರಿಗೂ ಇದು ನಮ್ಮ ನೆಲದ ಪ್ರಾಕೃತಿಕ ಬೆಳವಣಿಗೆಯ ಬಗ್ಗೆ ಆಳವಾದ ಒಳನೋಟವನ್ನು ನೀಡುವುದೇ ಅಲ್ಲದೆ ಯಾವುದೇ ವಿಷಯವನ್ನು ಕೂಲಂಕುಶವಾಗಿ ಪರಿಶೀಲಿಸಿ ಪ್ರಮಾಣಗಳನ್ನು ತಾರ್ಕಿಕವಾಗಿ ಅಭ್ಯಸಿಸಿ ಚರ್ಚಿಸಿ ಒಪ್ಪಿಕೊಳ್ಳುವ ಪರಿಣಿತಿಯೆಡೆಗೆ ಪ್ರಚೋದಿಸುತ್ತದೆ.

ವೈಜ್ಞಾನಿಕ ಮನಃಸ್ಥಿತಿಯೆಂದರೆ ಯಾವುದೇ ಯೋಚನೆಗಳನ್ನೂ ಲೇವಡಿ ಮಾಡದೆ ಆದರದಿಂದ ಚರ್ಚಿಸಿ ಆದಷ್ಟು ಹತ್ತಿರದ ಸತ್ಯವನ್ನು ತಲುಪಬೇಕು. ಇಂದಿನ ಸತ್ಯ ನಾಳೆಗೆ ಹೊಸ ವಿಚಾರಗಳನ್ನು ಅರಿಯುವುದರಿಂದ ಬದಲಾಗಲೂ ಬಹುದು.

ಪುಸ್ತಕವನ್ನು ಮುಗಿಸಿದ ಮೇಲೂ ಕಾಡುವ ವಿಸ್ಮಯಕಾರೀ ಅಂಶಗಳು ಹಲವಿವೆ. ” ಕೈಲಾಸ ಪರ್ವತವು ಹಿಮಾಲಯದ ಅತ್ಯಂತ ಹಳೆಯ ಶಿಖರ. ಅಲಹಾಬಾದಿನ ಸಂಗಮದ ಬಳಿ ಇರುವ ವಟವೃಕ್ಷದ ಬಳಿ ಜೀವವಿಕಸನದ ಮಾರ್ಗದ ಸೂಚಕಗಳಿವೆ. ಇಂತಹವು ಹಲವಾರು.

ನಮ್ಮ ನಾಡು ನಮ್ಮ ನೆಲ, ಇಂದು ನಮ್ಮದೆನ್ನುವ ಇದು ಎಷ್ಟೊಂದು ಮಿಲ್ಲಿಯನ್ ವರ್ಷಗಳಿಂದ ಜೀವರಾಶಿಗಳನ್ನು ಪೋಷಿಸಿ ವಿಕಸಿಸುತ್ತಿದೆ. ಆ ದಾರಿಯನ್ನು ತಿಳಿದಾಗ ನಮ್ಮ ಸುತ್ತಲಿನ ಪ್ರಕೃತಿಯನ್ನು ನಾವು ಹೆಚ್ಚು ಗೌರವಿಸಿ ಪ್ರೀತಿಸಿ ರಕ್ಷಿಸಬೇಕೆಂಬ ಭಾವನೆ ಹುಟ್ಟುವುದರಲ್ಲಿ ಸಂದೇಹವೇ ಇಲ್ಲ.

Book Name: Indica: A deep natural history of the Indian subcontinent
Author: Pranay Lal
Publisher: Penguin/Allen Lane
Pages: 468
Price: Rs 999

2 comments to “ಪುಸ್ತಕ ಪರೀಕ್ಷೆಯಲ್ಲಿ ಪ್ರಣಯ್ ಲಾಲ್ ಅವರ “ಇಂಡಿಕ : ಎ ಡೀಪ್ ನ್ಯಾಚುರಲ್ ಹಿಸ್ಟರಿ ಆಫ್ ಇಂಡಿಯಾ””
  1. Thanks for a nice review. I long wanted to read this book, and your review gives me the push to buy the book.

    One hint to ruthumana editors: for the book reviews does it help to provide a link to buy the book from Amazaon. Not sure how it works, but I guess for the traffic derived from the sites that converts to a book buy the origin site would get some monetary referral reward.

    Not that I like Amazon (given their apathy towards supporting Kannada in Kindle), but if linking to amazon provides benefits to this site, let that be so.

ಪ್ರತಿಕ್ರಿಯಿಸಿ