ಅಧೋಲೋಕದ ಟಿಪ್ಪಣಿಗಳು – ಕಂತು ೨ (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ)

-೩-

ನೋಡೀ, ಸೇಡು ತೀರಿಸಿಕೊಳ್ಳುವುದರಲ್ಲಿ ನಿಷ್ಣಾತರಾದ ವ್ಯಕ್ತಿಗಳು ಏನು ಮಾಡುತ್ತಾರೆ ಗೊತ್ತೆ ನಿಮಗೆ? ಹೃದಯದೊಳಗೆ  ಸೇಡಿನ ಜ್ವಾಲೆ ಭುಗ್ಗನೆ ಉರಿಯುತ್ತಿದ್ದ ಹಾಗೆ ಆ ಜನ ಬೇರೆ ಎಲ್ಲ ವಿಚಾರ, ಚಿಂತನೆಗಳನ್ನು ಮನಸ್ಸಿನಿಂದ ಕಿತ್ತು ಹಾಕಿ ಹಠದ ಹಾದಿ ಹಿಡಿಯುತ್ತಾರೆ. ಅಂಥಹ ಸಜ್ಜನ ನಿಗರಿ ನಿಂತ ಕೊಬ್ಬಿದ ಗೂಳಿಯಂತೆ, ತನ್ನ ಲಕ್ಷ್ಯದತ್ತ ಕೆರಳಿ ದೌಡಾಯಿಸುತ್ತಾನೆ. ಈ ಮಾತ್ಸರ್ಯ ಮಹಿಶನನ್ನು ಮಹಾಗೋಡೆ ಮಾತ್ರ ತಡೆಯಬಹುದು.  (ಓ ಅಂದ್‍ಹಾಗೆ, ಈ ಸಜ್ಜನರು -ಅಂದರೆ, ಸ್ವಯಂಪ್ರಚೋದಿತ ಧೃಢ ನಿರ್ಧಾರದ ಮನುಷ್ಯರು-ಈ ಗೋಡೆಯ ಜತೆ ಮುಖಾಮುಖಿಯಾಗುತ್ತಿದ್ದಂತೆಯೇ ದಿಗ್ಭ್ರಮೆಯಲ್ಲಿ ಬಾಯಿ ಮುಚ್ಚಿಕೊಳ್ಳುತ್ತಾರೆ. ಈ ಜನಕ್ಕೆ ಗೋಡೆ ಎಂದರೆ ತಪ್ಪಿಸಬಹುದಾದ ವಿಘ್ನವಂತೂ ಖಂಡಿತಾ ಅಲ್ಲ ಗೆಳೆಯರೇ! ಆ ರೀತಿ ಯೋಚಿಸುವುದು ನಾವು ಬಿಡಿ- ಆಲೋಚಿಸುವ ಬುದ್ಧಿಜೀವಿಗಳು. ನಾವೆಲ್ಲ ಯೋಚಿಸುತ್ತೇವೆ, ಅದಕ್ಕೇ ನಿಷ್ಕ್ರಿಯರಾಗಿದ್ದೇವೆ. ನಮ್ಮಂತಹ ಬುದ್ಧಿಜೀವಿಗಳು ಹೇಗೆಂದರೆ, ಮಾತಾಡಿ, ಮಾತಾಡಿ, ಇನ್ನೇನು ಕ್ರಿಯಾಶೀಲರಾಗಿ ಏನನ್ನೋ ಕಡಿದು ಹಾಕ ಬೇಕೆನ್ನುವಾಗ, ಧುತ್ತನೆ ಹೆಡೆ ಎತ್ತುವ ಈ ಮುಗ್ಧ ದೈತ್ಯ ಗೋಡೆಯತ್ತ ಬೆರಳು ತೋರಿಸಿ ನಮ್ಮ ಪಥದಿಂದ ಪಕ್ಕಕ್ಕೆ ವಾಲುವ ಮನುಷ್ಯರು. “ಗುರುಗಳೇ ಆ ಗೋಡೆ ಇಲ್ದೇ ಇದ್ರೇ ಇಷ್ಟೊತ್ತಿಗೆ ಆ ನನ್ಮಮಗನ್ ಕಥೆನೇ ಬೇರೆ ಆಗ್ತಿತ್ತು…” ಅನ್ನುವ ಹಾಗೆ. ನಮಗೂ ಚೆನ್ನಾಗಿ ಗೊತ್ತು, ಗೋಡೆ ನೆಪ ಹೇಳಿ ನಾವು ನೆಮ್ಮದಿಯಾಗಿ ಮೈ ಮುರಿದು ಗುರಿಗೆ ಬೆನ್ನು ಹಾಕಿ ಬಿದ್ದು ಓಡಿದ್ದೇವೆಂದು; ನಮ್ಮ ಈ ಪಲಾಯನವಾದದಲ್ಲಿ ನಮಗೇ ಹುಲ್ಲುಕಡ್ಡಿಯಷ್ಟೂ ನಂಬಿಕೆ ಇಲ್ಲದಿದ್ದರೂ, ಎದ್ದ ಗೋಡೆಗೆ ಅಡ್ಡ ಬಿದ್ದು, ಮತ್ತೆ ನಮ್ಮ ಮಹಾನ್ ಯೋಚನೆಯಲ್ಲೇ ಮೈಮರೆತು ಹಾಯಾಗಿರುವ ಬುದ್ಧಿಜೀವಿಗಳು ನಾವು. ಆದರೆ ಈ ಸ್ವಪ್ರಚೋದಿತರು, ಪಾಪ ನಮ್ಮಂತಲ್ಲ. ಅವರ ಧಿಗ್ಬ್ರಾಂತಿ ನಿಜಕ್ಕೂ ಅಪ್ಪಟ. ಆ ಆಘಾತದಲ್ಲೇ ಈ ಸ್ವಪ್ರಚೋದಿತರು ಸುಮ್ಮನಾಗುತ್ತಾರೆ.  ಆ ಗೋಡೆ ಪ್ರತ್ಯಕ್ಷವಾದ ಮೇಲೆ, ಅವರೂ ತಣ್ಣಗಾಗುತ್ತಾರೆ. ಮಹಾಗೋಡೆಯ ಆಗಮನದಿಂದ ಅವರಿಗೆ ನೈತಿಕ ಪಲಾಯನದ ಭಾಗ್ಯ ಪ್ರಾಪ್ತಿಯಾಗುತ್ತದೆ. ನಿರ್ವಾಣದ ಸ್ಪರ್ಶ- ನಿಗೂಢತೆಯ ಪಿಸುಮಾತು… ಬಹುಶಃ ಈ ಎಲ್ಲ ಗೋಡೆಯ ಲೀಲೆಗಳಿಗೆ ಅವರು ಸಾಕ್ಷಿಯಾಗಬಹುದು(ಈ ಗೋಡೆಯ ಬಗ್ಗೆ ಬಹಳಷ್ಟು ಮಾತುಗಳು ಆಡ ಬೇಕು… ಆದರೆ ಅವೆಲ್ಲ ಮತ್ತೆ).

ಇಂತಹ ಸ್ವಯಂಪ್ರಚೋದಿತ ವ್ಯಕ್ತಿಗಳನ್ನು ನಾನು ನೈಜ-ಸಹಜ ಮನುಷ್ಯರೆಂದು ಪರಿಗಣಿಸಿದ್ದೇನೆ -ಅವನ ತಾಯಿ, ನಿಸರ್ಗದೇವಿ ಆತನನ್ನು ಆನಂದದಲ್ಲಿ ಈ ಭೂಮಿಯ ಮೇಲೆ ಸೃಷ್ಟಿಸಿದಾಗ, ಅವನಿಂದ ನಿರೀಕ್ಷಿಸಿದ್ದು ಈ ಪರಿಯ ನೈಜ-ಸಹಜತೆಯನ್ನೇ-  ಇಂತಹ ಮನುಷ್ಯರನ್ನು ನೋಡಿದಗಲಾಲೆಲ್ಲ ಈರ್ಷೆಯ ನಂಜಿನಲ್ಲಿ ಬೆಂದು ನಾನು ಹಸಿರಾಗುತ್ತೇನೆ. ಪೆದ್ದ ಬಡ್ಡಿಮಗ ಆತ- ನಾನಂತೂ ಈ ಮಾತನ್ನು ಒಪ್ಪಿಯೇ ಒಪ್ಪುತ್ತೇನೆ. ಆದರೆ ನನ್ನ ಎಣಿಕೆಯ ಬಿಟ್ಟು ನೋಡಿದರೂ, ಬಹುಶಃ ಈ ಸಹಜ ಮನುಷ್ಯ ನಿಜಕ್ಕೂ ಪೆದ್ದನಾಗಲೇ ಬೇಕು ತಾನೆ? ಇದನ್ನು ಪತ್ತೆಹಚ್ಚುವುದು ಹೇಗೆ? ಬಹುಶಃ ನಿಜಕ್ಕೂ ಆ ಅನ್ವೇಷಣೆಯಲ್ಲಿ ಬಹಳ ಮಜವಿರಬೇಕು.. ಈಗ ಈ ಸಹಜ ಮನುಜನ ಪ್ರತಿಪಕ್ಷವನ್ನು  ಸುಮ್ಮನೆ ಗಮನಿಸಿ  (ಈ ಹುಡುಕಾಟಕ್ಕೆ ಹೊಂದುವಂತಹ  ನನ್ನ ಊಹೆಯಯಿದು). ಹ್ಞಾ! ಸಹಜ ಮನುಷ್ಯ ಎಂದರೆ ತೀವ್ರಪ್ರಜ್ಞೆಯುಳ್ಳ ವ್ಯಕ್ತಿ.  ಆದರೆ ನಿಸರ್ಗದ ಮಡಿಲಿನಿಂದ ಜಿಗಿಯದೆ  ಪ್ರತ್ಯುತ್ತರದಿಂದ   ಮೂಡಿದವನು ಇವನು. (ಇದು ಅತೀಂದ್ರಿಯವಾದ ಸಜ್ಜನರೇ, ಆದರೆ ಈ ವಾದದ ಬಗ್ಗೆಯೂ ನನ್ನದೇ ಆದ ಊಹಾಪೋಹಗಳಿವೆ). ಈ ಪ್ರತ್ಯುತ್ತರದ ಮಾನವ, ಹಲವು ಬಾರಿ ತನ್ನದೇ ಉತ್ತರಪಕ್ಷದ ಮುಂದೆ ಎಷ್ಟು ದಿಗ್ಭ್ರಾಂತನಾಗುತ್ತಾನೆಂದರೆ ಆತನಲ್ಲಿ ತೀವ್ರವಾಗಿ ಹರಿಯುತ್ತಿರುವ ಅರಿವಿನ ಪ್ರವಾಹದ ಪರಿಣಾಮದಿಂದ ತನ್ನನ್ನು ತಾನು ಇಲಿಯೆಂದೂ ಮನುಷ್ಯನಲ್ಲವೆಂದೂ ಪ್ರಾಮಾಣಿಕವಾಗಿ ಪರಿಗಣಿಸುತ್ತಾನೆ. ಸರಿ, ಅದೊಂದು ಅದ್ಭುತ ಬುದ್ಧಿವಂತಿಕೆಯಿರುವ ಇಲಿಯೇ, ಹಾಗಿದ್ದರೂ, ಅದು ಒಂದು ಇಲಿಯಷ್ಟೇ. ಅದೇ ಆ ಇನ್ನೊಂದು ಮನುಷ್ಯ, ಹಾಗಾಗಿ ಇತ್ಯಾದಿ,ಇತ್ಯಾದಿ…  ಆದರೆ ಬಹು ದೊಡ್ಡ ವಿಪರ್ಯಾಸವೆಂದರೆ ಆತ “ನಾನೊಂದು ಇಲಿಯೇ…” ಎಂಬ ಅಭಿಪ್ರಾಯದಲ್ಲಿ ತನ್ನನ್ನು ತಾನೇ ಅಳೆದು ಬಿಟ್ಟಿದ್ದಾನೆ.   ಇದು ಅವನ ಬಗ್ಗೆ  ಅವನೇ ಮಾಡಿಕೊಂಡ ಊಹೆಯೇ ವಿನಃ ಯಾರೋ ಆತನಿಗೆ ಕಲಿಸಿದ ಪಾಠವಲ್ಲ. ಈ ವಿಷಯ ಅತೀ ಮುಖ್ಯವಿಲ್ಲಿ.

ಈಗ ಈ ಇಲಿಯ ಕ್ರಿಯಾವಳಿಗಳ ಗಮನಿಸೋಣ. ಯಾರೋ ಈ ಇಲಿಯನ್ನು ನಿಂದಿಸಿ ಕೆರೆಳಿಸಿದ್ದಾರೆ- ಸದಾ ಅದು ತನ್ನನ್ನು ಯಾರೋ ನಿಂದಿಸಿದರೆಂದು ಕೆರಳಿಯೇ ಇರುತ್ತದೆ ಬಿಡಿ- ಅದಕ್ಕೆ ದ್ವೇಷಕೂಪವಾದ ಈ ಮೂಷಿಕ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿದೆ. ಈ ಸತ್ಯದ ಮತ್ತು ಪ್ರಕೃತಿಯ ಮನುಷ್ಯನಿಗಿಂತ*  ಜಾಸ್ತಿ   ಮಾತ್ಸರ್ಯವು ಇದರೊಳಗೆ ಶೇಖರಣೆಯಾಗಿದೆ.   ತನ್ನ ಹುಟ್ಟಾ ಪೆದ್ದಬುದ್ಧಿಯಿಂದ ಈ ಸತ್ಯದ ಮತ್ತು ಪ್ರಕೃತಿಯ ಮನುಷ್ಯ,  ಸೇಡು ತೀರಿಸಿಕೊಳ್ಳುವ ಕಾಯಕವೆಂದರೆ ಕೇವಲ ನ್ಯಾಯಸಮ್ಮತವಾದ ಆಚರಣೆಯೆಂಬ ಸುಲಭ ತೀರ್ಮಾನಕ್ಕಿಳಿಯುತ್ತಾನೆ;  ಅದೇ ಈ ಇಲಿ ಮಹಾಶಯ, ತನ್ನಲ್ಲಿ ಇನ್ನೂ ತೀಕ್ಷ್ಣವಾಗುತ್ತಿರುವ  ಆಳವಾದ ಪ್ರಜ್ಞಾಪ್ರವಾಹದಿಂದ ಈ ಸೇಡಿನ ಕ್ರಿಯೆಗೆ ಅಂಟಿಕೊಂಡಿರುವ ‘ನ್ಯಾಯದ’ ಅರ್ಥವನ್ನು ಸಾರಸಗಟಾಗಿ ವಿಸರ್ಜಿಸುತ್ತಾನೆ. ಅಂತೂ-ಇಂತೂ ಕೊನೆಗೆ ನಾವು ಈ ವಿಷಯದ ಹೃದಯ ಭಾಗವಾದ  ಸೇಡಿನಾಟದ ಹತ್ತಿರ ಬಂದಿದ್ದೇವೆ. ಈ ಅನಿಷ್ಟ ಇಲಿಯ ಪಾಡನ್ನು ನೋಡಿರಣ್ಣ. ಮೊದಲೇ ಮೂಲ ನೀಚತನವನ್ನು ಆಕಾರವಿಲ್ಲದ ಅಸ್ಪಷ್ಟ ಪ್ರಶ್ನೆಗಳು ಹಾಗೂ ಗುಮಾನಿಗಳ ರೂಪದಲ್ಲಿ ಇದು ತನ್ನ ಸುತ್ತಲೂ  ಗುಡ್ಡೆ ಹಾಕಿಕೊಂಡಾಗಿದೆ. ಒಂದು ಮೂಲ ಪ್ರಶ್ನೆಗೆ ಸಹಸ್ರ ಅನಿಶ್ಚಿತ ಪ್ರಶ್ನೆಗಳು ಸೇರಿ, ಈ ಪಾಯಿಯ ಸುತ್ತಲೂ ಒಂದು ಮಾರಣಾಂತಿಕ ಪರಿಭ್ರಮಣೆಯೇ ಸೃಷ್ಠಿಯಾಗಿಬಿಟ್ಟಿದೆ. ಈ ಇಲಿಯ ಸಂಶಯ ಫಲದಿಂದ, ಅನಾಮಿಕ ತಲ್ಲಣಗಳಿಂದ ಉತ್ಪತ್ತಿಯಾದ ಪರಿಭ್ರಮಣೆಯದು; ಥೂ! ನಾರುವ ಹೊಲಸು. ಅಷ್ಟೇ ಅಲ್ಲ ಈ ಪರಿಭ್ರಮಣೆಗೆ ನಿಜವಾದ ವೇಗ ದಕ್ಕುವುದು, ಈ ಸ್ವಪ್ರಚೋದಿತ ಕರ್ಮವೀರರಿಂದ. ಈ ವೀರರು ಮಹಾ ಸರ್ವಾಧಿಕಾರಿಗಳ, ನ್ಯಾಯಮೂರ್ತಿಗಳ ವೇಷದಲ್ಲಿ ಈ ಬಡಪಾಯಿಯ ಸುತ್ತಾ ಸತ್ಯನಿಷ್ಠರಂತೆ ವಿಜಯೋತ್ಸಾಹದಲ್ಲಿ ಕುಣಿಯುತ್ತಾ, ತಮ್ಮ-ತಮ್ಮ ಆರೋಗ್ಯವಾದ ಶ್ವಾಸಕೋಶಗಳು ನೋವುವಷ್ಟು ತೀವ್ರವಾದ ಅಟ್ಟಹಾಸದಲ್ಲಿ ಗರ್ಜಿಸುತ್ತಾ, ಈ ಇಲಿಯನ್ನು ನಿಂದಿಸಿ ಉಗಿಯುವ ಎಂಜಲಿನ ಮಳೆಯಿಂದ ಗಿರ್ರನೆ  ಡೇಗೆಹಕ್ಕಿಯಂತೆ ಗಿರಕಿ ಹೊಡೆಯುವ ಪರಿಭ್ರಮಣೆಯದು.  ಈಗ ಇದರ ಕೈಯಲ್ಲಾಗುವ ಒಂದೇಒಂದು   ಮಹಾಕಾರ್ಯವೆಂದರೆ, ತನ್ನ ಪುಟ್ಟ ಪಂಜಲ್ಲಿ ಅವರೆಲ್ಲರ ಆದರ್ಶಗಳನ್ನು ನಿರಾಕರಿಸಿ ನಿಂದನೆ ಕಾರುವ ನಗುವಂತಹ ನಗುವನ್ನು ಮೊಗದಲ್ಲಿ ಬಿಡಿಸಿ,-ಸ್ವತಃ ತನಗೆ ಆ ಮಂದಹಾಸದಲ್ಲಿ ನಂಬಿಕೆ ಇಲ್ಲದಿದ್ದರೂ-  ಮಾನಮರ್ಯಾದೆ ಕಳಕೊಂಡು, ತನ್ನ ಇಲಿತೂತಿನೊಳಗೆ ತೆವಳಿ ನುಸುಳುವುದು. ಅಲ್ಲಿ, ಆ ನಾರುವ ಅಧೋಲೋಕದ ತೂತಿನ ತಳದಲ್ಲಿ, ಗಾಯಗೊಂಡು, ಗೇಲಿಗಳಿಂದ ನಜ್ಜುಗುಜ್ಜಾದ ನಮ್ಮ ಇಲಿ ತಣ್ಣನೆಯ, ಹಾನಿಕಾರಕ, ನಂಜು ಸೂಸುವ, ಎಲ್ಲಕ್ಕಿಂತ ಹೆಚ್ಚಾಗಿ ಚಿರಂತನ ಮುಯ್ಯಿಯ ಪಾತಾಳದಾಳದಲ್ಲಿ ಗಾಢಾವಾಗಿ ಲೀನವಾಗುತ್ತದೆ. ನಲ್ವತ್ತು ವರುಷಗಳ ಚಿತ್ರಹಿಂಸೆ, ಮೂದಲಿಕೆ, ತೆಗಳಿಕೆ, ಶಾಪಗಳ ನೆನಪಿಸಿಕೊಂಡು, ಅನುದಿನವೂ ತನ್ನ ಬಿಲದೊಳಗೆ ಬೇಯುತ್ತಿದೆ ಈ ಮೂಷಿಕ. ಇದರ ಜತೆಗೆ ಹೊಸ-ಹೊಸ ಪೆಟ್ಟುಗಳನ್ನು, ತೇಜೋವಧೆಗಳನ್ನು ತನ್ನ ಕಲ್ಪನಾಲೋಕದಿಂದ ಹೆಕ್ಕಿ ತೆಗೆದು ತನ್ನ ಮಿದುಳೊಳಗೆ ತುರುಕಿಸುತ್ತಿದೆ. ಇದರ ಖಯಾಲಿಗಳ ಬಗ್ಗೇ ಇದಕ್ಕೇ ಕೀಳರಿಮೆ ಇದ್ದರೂ, ಈ ಇಲಿ ಎಲ್ಲವನ್ನೂ ಜ್ಞಾಪಿಸಿಕೊಳ್ಳುತ್ತದೆ.  ತನಗೆ ಆಗಬಹುದಾಗಿದ್ದ ಮುಖಭಂಗಗಳ ಭ್ರಮೆಯಲ್ಲೂ ಇದು ಜೀವಿಸಿದೆ. ಯಾರನ್ನೂ ಕ್ಷಮಿಸದೆ, ಸೇಡಿಗಾಗಿ ಹಪ-ಹಪಿಸುತ್ತಿದೆ. ಬಹುಶಃ ಇದು ಸೇಡು ತೀರಿಸಿಕೊಳ್ಳಬಹುದೇನೋ… ಆದರೆ   ಕೊಂಚಕೊಂಚವಷ್ಟೇ… ಜುಜುಬಿ ಮಾರ್ಗಗಳ ಮೂಲಕ… ಸದ್ದಿಲ್ಲದೆ ಒಲೆಯ ಹಿಂದೆ ಕೂತು, ಇದ್ದಕ್ಕಿದ್ದಂತೆ ಹಗೆ ತೀರಿಸಿಕೊಳ್ಳಲು ತನಗೆ ಸೃಷ್ಟಿಸಿಕೊಂಡಿರುವ ಹಕ್ಕಿನಲ್ಲಿಯೂ ನಂಬಿಕೆ ಇಡಲಾಗದೆ, ತನ್ನ ಮುಯ್ಯಿಯ   ಯಶೋಗಾಥೆಯಲ್ಲಿಯೂ ಮನಸ್ಸು ನೆಡಲೂ ಇಷ್ಟ ಪಡದೆ, ನಾನು ಯಾರ ಮೇಲೆ ಮಾತ್ಸರ್ಯ ಕಾರಬೇಕೆಂದಿದೆಯೋ, ಅವನಿಗಿಂತ ನೂರು ಪಟ್ಟು ವೇದನೆಯನ್ನು ನಾನೇ ಅನುಭವಿಸಿ ಕುಬ್ಜವಾಗುವ ವಾಸ್ತವವನ್ನು,(ಅದೇ ಇದರ ಸೇಡಿನ ಮೂಲವಾದ ಆ ದೊಡ್ಡ ಮನುಷ್ಯ ಮಾತ್ರ ಈ ಇಲಿಯ ಹಗೆಯ ವೈಪರೀತ್ಯವನ್ನು ಅಪ್ಪಿ-ತಪ್ಪಿಯೂ ಗಮನಿಸದೇ ಇದ್ದರೂ) ಮುಯ್ಯಿಗೂ ಮುಂಚೆಯೇ ಚೆನ್ನಾಗಿಯೇ ಅರಿತೂ ಇದೆ. ತನ್ನ ಮರಣಶಯ್ಯೆಯ ದಿನ ಇದು ಮತ್ತೆ ಎಲ್ಲವನ್ನೂ ಜ್ಞಾಪಿಸಿಕೊಳ್ಳುತ್ತದೆ; ಆದರೆ ಈ ನೆನಪಿಗೆ, ಹಿಂದೆ ಹಾಗೇ ಸುಮ್ಮನೆ ಆಗಿ ಹೋದ ವರ್ಷ-ವರ್ಷಗಳ ಬಡ್ಡಿ-ಚಕ್ರ ಬಡ್ಡಿಗಳೆಲ್ಲ ಸೇರಿವೆ.

ಆದರೆ ತಣ್ಣಗಿನ ಹೇಸಿಗೆಯ ಅರ್ಧ ಹತಾಶೆ, ಅರ್ಧ ನಂಬಿಕೆಯಲ್ಲಿ, ಪ್ರಜ್ಞಾಪೂರ್ವಕವಾಗಿಯೇ, ಭಯಂಕರ ದುಃಖದ ಜತೆ ತನ್ನನ್ನು ತಾನು ನಲವತ್ತು ವರುಷಗಳ ಕಾಲ ಅಧೋ ಲೋಕದೊಳಗೆ ಹೂತು ಹಾಕಿ, ತನ್ನ  ಆಶಾಹೀನ ಸ್ಥಿತಿಯನ್ನು ಅಪ್ಪಟವಾಗಿಯೇ ಅರಿತಿದ್ದರೂ, ಆ ಸ್ಥಿತಿಯನ್ನೇ  ಅರ್ಧಂಭಂರ್ಧ ಶಂಕಿಸುತ್ತಿರುವಲ್ಲಿ, ಆ ತಣಿಯದ ಆಸೆಗಳ ನರಕವು ಮನಸ್ಸನ್ನು ತಿವಿದು ಭೋರ್ಗರೆಯುತ್ತಿರುವಲ್ಲಿ, ಹಠಾತ್ತಾನೆ ಬದಲಿಸಲಾಗದ ನಿರ್ಣಯವೊಂದನ್ನು ಅಪ್ಪಿ, ತತ್‍ಕ್ಷಣವೇ ಹಾಗೆ ನಿಷ್ಕರಿಸಿದಕ್ಕೆ   ತನ್ನನ್ನೇ ತಾನು ಅನಿಶ್ಚಿತವಾಗಿ ಹಳಿಯುತ್ತಾ ಪಶ್ಚಾತ್ತಾಪ ಪಡುತ್ತಿರುವ ಆ ತುಯ್ದಾಟದಲ್ಲಿ,  ನಾನು ಹೇಳಲು ಪ್ರಯತ್ನಿಸುತ್ತಿರುವ ಆ ವಿಚಿತ್ರ ಆನಂದದ ಕಂಪು ಮೈಚಾಚಿದೆ. ಇದು ಎಷ್ಟು ಸೂಕ್ಷ್ಮವಾಗಿ, ಅರ್ಥೈಸಲು ಜಟಿಲವಾಗಿದೆಯೆಂದರೆ ಸಾಮಾನ್ಯ ಬುದ್ಧಿವಂತರ ಮನಸ್ಸಿಗೂ, ಹಾಗೇ ಧಮ್ಮಿರುವ ಗಟ್ಟಿಗರಿಗೂ ಇದರ ದ್ರವ್ಯದ ಅಣುವನ್ನೂ ಅರ್ಥ ಮಾಡಿಕೊಳ್ಳಲಾಗುವುದಿಲ್ಲ. “ಬಹುಶಃ…” ಕೊಂಕು ನಗೆ ಬೀರಿ ನೀವನ್ನಬಹುದು, “…ತಪರಾಕಿ ತಿನ್ನದವರಿಗೂ ಈ ಆನಂದ ಅರ್ಥವಾಗುವುದಿಲ್ಲ.”   ಬಲ್ಲೆ, ಬಲ್ಲೆ, ನಿಮ್ಮ ಊಹೆಗಳನ್ನು, ನಿಮ್ಮ ವ್ಯಂಗಾತ್ಮಕ ಉವಾಚಗಳ ಪರಿಚಯವೂ ಎನಗಿದೆ. ನನ್ನ ಕಪಾಲಕ್ಕೆ ಯಾರೋ ಬಾರಿಸಿದ್ದಾರೆ; ಆ ಏಟು ತಿಂದೇ ಇಷ್ಟು ಸ್ಪಷ್ಟವಾಗಿ ನನ್ನ ಅನುಭವದ ಮಾತುಗಳನ್ನಾಡುತ್ತಿರುವೆ ಎನ್ನುವುದು ನಿಮ್ಮ ಭಾವನೆ. ದೊಡ್ಡ ಮನುಷ್ಯರೇ, ಅತಿ ಉತ್ಸುಕರಾಗದಿರಿ, ನಾನ್ಯಾವತ್ತೂ ತಪರಾಕಿ ತಿಂದಿಲ್ಲ. ಹೆಚ್ಚು- ಹೆಚ್ಚು ಮಂದಿಯ ಕಪಾಲಕ್ಕೆ ನಾನು ಬಿಗಿದಿಲ್ಲವಲ್ಲಾ ಎಂಬುದೇ ನನ್ನನ್ನು ಖೇದಗೊಳಿಸುವ ಸಂಗತಿ. ಸಾಕಿನ್ನು, ನಿಮ್ಮನ್ನು ಇಷ್ಟೊಂದು ರಂಜಿಸುತ್ತಿರುವ ಈ ವಿಷಯದ ಬಗೆಗೆ ತುಟಿಕ್-ಪಿಟಿಕ್ ಎನ್ನದಿರಿ.

ಒಂದು ನಿಶ್ಚಿತ ನಾಜೂಕಾದ ಆನಂದವನ್ನು ಅರ್ಥೈಸಲು ಸೋಲುವ, ಧಮ್ಮಿರುವ ವ್ಯಕ್ತಿಗಳನ್ನು ಉದ್ದೇಶಿಸುತ್ತಾ, ಸಮಾಧಾನದಲ್ಲಿ ಮುಂದುವರೆಸುತ್ತೇನೆ, ನಾನು. ಕೆಲವು ಸಂಧರ್ಭಗಳಲ್ಲಿ ಮಾತ್ರ ಅಬ್ಬರಿಸುವ ಗೂಳಿಗಳಿವರು.   ಆ ಥರ ಅಬ್ಬರ, ಪ್ರತಿಭಟನೆಯ ಶೋಕಿಗಳೆಲ್ಲ ಈ ಜನಕ್ಕೆ ಬಲು ಶ್ರೇಯಸ್ಸೆ ಬಿಡಿ. ಆದರೆ ಈ ಜೀವಿಗಳು ಅಸಂಭವ ಅಡ್ಡ ಬರುತಿದ್ದಂತೆಯೇ  ತಮ್ಮ ಬೊಬ್ಬೆ, ವಿರೋಧವನ್ನೆಲ್ಲಾ ಬದಿಗೊತ್ತಿ ಮುಚ್ಚಿಕೊಂಡಿರುತ್ತಾರೆ. ಹೀಗೆ ಅಸಂಭವದ ಜತೆ ಮುಖಾಮುಖಿಯಾಗುತ್ತಿದ್ದಂತೆಯೇ  ಶಾಂತರಾಗಿ ಶರಣಾಗುವ ಶರಣರ ಬಗ್ಗೆ ಆಗಲೇ ಹೇಳಿದ್ದೆ. ಈ ಅಸಂಭವವೆಂದರೆ ಕಲ್ಲಿನ ಗೋಡೆ!  ಹಾಗಾದರೆ ಕಲ್ಲಿನ ಗೋಡೆ ಎಂದರೇನು? ಏನು… ಗೊತ್ತಿಲ್ಲವೇ? ಅಯ್ಯೋ…! ನೈಸರ್ಗಿಕ ನಿಯಮಗಳು, ಪ್ರಕೃತಿ ವಿಜ್ಞಾನದ ವಿಯೋಜನೆ, ಗಣಿತ ಶಾಸ್ತ್ರ ಇವೆಲ್ಲಾ. ಈಗ, ಉದಾಹರಣೆಗೆ, ಅವರು ನೀವೆಲ್ಲಾ ಮಂಗಗಳ ವಂಶಜರು ಎಂದು ಸಾಬೀತು ಪಡಿಸುತ್ತಿದ್ದಂತೆಯೇ  ನೀವು ಆ ವಾದವನ್ನು ತೆಪ್ಪಗೆ ಪರಮ ಸತ್ಯವೆಂದು ಒಪ್ಪಿಕೊಳ್ಳಲೇ ಬೇಕು; ಮೋರೆ ತಿರುಗಿಸುವುದು, ಸಿಡುಕುವುದು ಇವೆಲ್ಲಾ ವ್ಯರ್ಥ.  ನೀವು ತುಂಬಾ ಪ್ರೀತಿಸುವುದು ನಿಮ್ಮ ಬೊಜ್ಜಿನ ಪುಟ್ಟ ಅಣುವನ್ನೇ  ಹೊರತು ನಿಮ್ಮ ಸಂಗಡಿಗರಾಗಿರುವ ನೂರು ಸಾವಿರ ಜೀವಿಗಳನ್ನಲ್ಲ  ಎಂದು ಅವರು ನಿರೂಪಿಸಿ, ನೀತಿಶಾಸ್ತ್ರ ಧರ್ಮ ಕರ್ಮ ಎಂಬ ಕಲ್ಪನೆಗಳೆಲ್ಲಾ  ಬರೀ ಪೂರ್ವಾಗ್ರಹ… ಅಸಂಬಧ್ದ ಪ್ರಲಾಪಗಳೆಂದರೆ ಆಗಲೂ ನೀವು  ಅದನ್ನು ಒಪ್ಪಿಕೊಳ್ಳಲೇ ಬೇಕು ಸ್ವಾಮೀ! ಬೇರೆ ಉಪಾಯವಿಲ್ಲ, ಏಕೆಂದರೆ  ಎರೆಡೆರಡಲ ನಾಲ್ಕು, ಅದೇ ಗಣಿತ, ಅಲ್ಲವೇ? ಅದನ್ನು ಖಂಡಿಸಿ ನೋಡೋಣ.

“ಅಯ್ಯೋ ಶಿವನೇ” ನಿಮ್ಮನ್ನು ನೋಡಿ ಅವರು ಕಿರುಚುತ್ತಾರೆ. “ವಿರೋಧಿಸಿ ಏನೂ ಗಿಟ್ಟುವುದಿಲ್ಲ, ಎರೆಡೆರಡಲ ನಾಲ್ಕು! ಪ್ರಕೃತಿಗೆ ನಿನ್ನ ಅಭಿಪ್ರಾಯಗಳು ಬೇಕಾಗಿಲ್ಲ. ನಿನ್ನ ಆಸೆಗಳು ಅದಕ್ಕೆ ಇರುವೆಯ ಹೇಲಿನಷ್ಟೇ ನಿಕೃಷ್ಟ. ನಿನಗೆ ಅದರ ನಿಯಮಗಳು ಇಷ್ಟವಾಗಲಿ, ಬಿಡಲಿ ಆದರೆ ನೀನು, ಪ್ರಕೃತಿ ಹೇಗಿದೆಯೋ ಹಾಗೇ ಒಪ್ಪಿ  ಶರಣಾಗಬೇಕು, ಒಮ್ಮೆ ಹಾಗೆ ಶರಣಾದ ಮೇಲೆ,  ಆಕೆಯ ಎಲ್ಲ  ನಿರ್ಣಯ- ತೀರ್ಮಾನಗಳನ್ನೂ ನೀನು ಒಪ್ಪಲೇ ಬೇಕು. ಅದರರ್ಥ  ಗೋಡೆಯೆಂದರೆ ಗೋಡೆಯಷ್ಟೇ…” ಇತ್ಯಾದಿ, ಇತ್ಯಾದಿ.

ಅಯ್ಯೋ ದೇವ್ರೇ! ಆ ವಿಧಿಗಳು  ಮತ್ತೆ ಈ ಎರೆಡೆರಡಲ ನಾಲ್ಕು ಪ್ರಮೇಯಗಳೆಲ್ಲ ನನಗೆ ಹಿಡಿಸುವುದೇ ಇಲ್ಲ, ವಿಷಯ ಹೀಗಿರುವಾಗ ಈ ಪಕೃತಿ ನಿಯಮ ಅಂಕಗಣಿತಗಳ ಬಗ್ಗೆ ನಾನ್ಯಾಕ್ರೀ ತಲೆ ಕೆಡಿಸಿಕೊಳ್ಳಲಿ? ನಿಸ್ಸಂಶಯವಾಗಿಯೇ ಹೇಳುವೆ, ನನ್ನ ತಲೆಯನ್ನು ಗೋಡೆಗೆ ಚಚ್ಚಿ ಅದನ್ನು ಪುಡಿ-ಪುಡಿ ಮಾಡುವ ಶಕ್ತಿ ನನಗಿಲ್ಲ. ಹಾಗೆಂದು ಯಾವತ್ತೂ ನಾನು, ಅದು ಕಲ್ಲಿನ ಗೋಡೆ ಮತ್ತು ನನಗೆ ತಾಕತ್ತಿಲ್ಲ ಎಂಬ ವಾದವನ್ನು ಒಪ್ಪಿ ನೆಮ್ಮದಿ ಗಿಟ್ಟಿಸಿಕೊಳ್ಳುವುದಿಲ್ಲ.

ಅಂದರೆ ಕಲ್ಲಿನ ಗೋಡೆಯೇ ಸಾಂತ್ವನವೆಂಬಂತೆ! ಅಂದರೆ ಇದೂ ಸಹ ಎರೆಡೆರಡಲ ನಾಲ್ಕು ನಾಲ್ಕೇ ಎನ್ನುವಷ್ಟು ನಿಜವಾಗಿರುದಕ್ಕೆ, ಇಲ್ಲೂ ನಿಜವಾದ ಶಾಂತಿ ಇದೆ ಎಂದಂತೆ! ಓಹ್! ಅಸಂಗತ ದೊಂಬರಾಟಗಳಿವು! ಎಲ್ಲಾ ಕಲ್ಲಿನ ಗೋಡೆಗಳನ್ನೂ, ಅಸಾಧ್ಯತೆಗಳನ್ನೂ ನಾವು ಅರಿಯುವುದೇ ಉತ್ತಮವೇನೋ; ರಾಜಿಯಾಗುವ ಐಡಿಯಾವೇ ನಿಮ್ಮನ್ನು ರೇಗಿಸುತ್ತದೆ ಎಂದಾದರೆ ಈ ಅಸಂಭವ ಮತ್ತು ಕಲ್ಲಿನಗೋಡೆಗಳ ಜತೆ ರಾಜಿಯಾಗಬೇಡಿ ಮಾರ್ರಾಯ್ರೇ ಅದೂ ಒಳ್ಳೆಯದೇ;  ತಪ್ಪಿಸಲಾಗದ, ತರ್ಕಕೂಟದ ಮಾರ್ಗದಲ್ಲಿ ಸಾಗಿ, ಈ ಚಿರಂತನ ವಿಷಯದ ಬಗ್ಗೆ  ಅತ್ಯಂತ ಜಿಗುಪ್ಸೆ ಹುಟ್ಟಿಸುವ ತೀರ್ಮಾನಕ್ಕೆ ನೀವು ಇಳಿದು ಬಿಡುವುದೇ ಇನ್ನೂ ಲೇಸು. ಅಂದರೆ ಆ ಕಲ್ಲಿನ ಗೋಡೆಯೂ ಕೂಡ, ಒಂದು ರೀತಿಯಲ್ಲಿ ನಿಮ್ಮ ತಪ್ಪಿನಿಂದಲೇ ಎದ್ದು ನಿಂತಿರುವುದು ಎಂಬ ಅಂತಿಮ ತೀರ್ಪು -ಸಂಶಯವೇ ಬೇಡ. ಖಂಡಿತಾ ಅದು ನಿಮ್ಮ ತಪ್ಪಲ್ಲ ಆದರೂ– ಅದರ ಪರಿಣಾಮವೆಂಬಂತೆ ಇಂದಿರಗಳನ್ನು ಕೆರಳಿಸುವ ಜಡತ್ವದೊಳಗೆ ಮುಳುಗುವಿರಿ. ತೆಪ್ಪಗೆ ನರಸತ್ತವರಂತೆ ಹಲ್ಲು ಕಡಿಯುವಿರಿ, ಜಗಳ ಮಾಡಲೂ ನಿಮ್ಮ ಹತ್ತಿರ ಯಾರೂ ಇಲ್ಲ ಎಂಬ ಸತ್ಯಕ್ಕೆ ಆಗಾಗ ಕಾವು ಕೊಡುವಿರಿ. ನಿಮ್ಮ ಕೋಪಕ್ಕೆ ಕೇಂದ್ರವೇ ಇಲ್ಲ, ಬಹುಶಃ ಎಂದೆಂದಿಗೂ ಇರುವುದೇ ಇಲ್ಲ. ಈ ಕೇಂದ್ರವೆನ್ನುವುದೇ ಒಂದು ಮೋಡಿ ಮಾಡುವ ನಕಲಿ ಶ್ಯಾಮ; ಮಂಕು ಬೂದಿ ಎರಚಿ ಎಕ್ಕ ಎಗರಿಸುವ ನಿಪುಣ ಜೂಜುಕೋರ;  ಬರೀ ಗೋಜಲು… ಗೋಜಲು… ಯಾರು, ಏನು, ಎತ್ತ, ಏನ್ ಕಥೆ, ಈ ಯಾವ   ಪರಿಜ್ಞಾನವೂ ನಿಮಗಿಲ್ಲ. ಇಷ್ಟೆಲ್ಲ ಅಜ್ಞಾತ ಭ್ರಾಂತಿಗಳಿದ್ದರೂ ನೀವು ಮಾತ್ರ ನಿಜವಾಗಿಯೂ ನೋವುಣ್ಣುತ್ತಿದ್ದೀರಿ.  ಅರಿವು ಕಡಿಮೆಯಾದಷ್ಟು    ನಿಮ್ಮ ನೋವು ಜಾಸ್ತಿ ಜಾಸ್ತಿ ಏರುತ್ತಿದೆ.

“ಹ್ಹ… ಹಾ…. ಹಾ… ಇಷ್ಟೆಲ್ಲಾ ಆದ ಮೇಲೆ, ಹಲ್ಲು ನೋವಲ್ಲೂ ನೀನು ಮುಂದೆ ಸುಖ ಕಾಣುವೆ!” ಎಂದು ನೀವು ಗಹ-ಗಹಿಸಬಹುದು.

“ಹ್ಞ್‍ಮ್… ಹೌದು ಹಲ್ಲು ನೋವಿನಲ್ಲೂ ಸುಖವಿದೆ…” ಎಂದು ನಾನು ಪ್ರತ್ಯುತ್ತರಿಸುವೆ.  ಪೂರ್ತಿ ಒಂದು ತಿಂಗಳು ಹಲ್ಲು ನೋವಲ್ಲಿ ದಣಿದಿರುವೆ ನಾನು. ಇಂತಹ ಸಮಯದಲ್ಲಿ ಜನರು  ಮೌನವಾಗಿ ನೋವಲ್ಲಿ ಬೇಯುವುದಿಲ್ಲ.   ಆದರೆ ನರಳಾಟವಿರುತ್ತದೆ. ಆದರೆ ಇದೇನು ನೇರ ನರಳಾಟವೂ ಅಲ್ಲ.  ಕೇಡಿನ ಆರ್ತನಾದ. ಈ ಕೇಡಿನ ಛಾಯೆಯೇ ಖಚಿತವಾಗಿ ಅತಿಮುಖ್ಯವಾದ ವಿಷಯ. ನೋವಿನರುಚಾಟವೇ ಸಂತ್ರಸ್ತರಾನಂದದ ಅಭಿವ್ಯಕ್ತಿ; ಅಲ್ಲಿ, ಆ ಹಿಂಡುವ ತಳಮಳದಲ್ಲಿ ಮಜವಿದೆ; ಇಲ್ಲದಿದ್ದರೆ ಆತ ನರಳುತ್ತಿರಲಿಲ್ಲ. ಗೆಳೆಯರೇ, ಒಳ್ಳೇ ನಿದರ್ಶನವಿದು ಅಲ್ಲವೇ? ಇದನ್ನು ಕೊಂಚ ಬೆಳೆಸುವೆ. ಆ ನರಳಾಟ ನಿಮ್ಮ ನೋವಿಗೆ ಯಾವ ಗೊತ್ತು-ಗುರಿಯೂ ಇಲ್ಲವೆಂಬ ತಣ್ಣಗಿನ ವಾಸ್ತವವನ್ನು, ಯಾವ ಹಂಗಿಲ್ಲದೆ ಸಾರುತ್ತದೆ. ಹೀಗಾದ್ದರಿಂದ ನಿಮ್ಮ ಆತ್ಮಸಾಕ್ಷಿ ತೀವ್ರವಾಗಿ ಅವಮಾನಿತವಾಗಿದೆ. ಈ ಪ್ರಕೃತಿ ವಿಧಿವಿಧಾನಗಳಿಗೆ ನೀವು ಕವಡೆಕಾಸಿನ ಬೆಲೆ ಕೊಡುವುದಿಲ್ಲ, ನಿಜ. ಆದರೆ ಅದರ ಪರಿಣಾಮವೆಂಬಂತೆ ಆ ಬೇಯುವ ನೋವಿನಲ್ಲಿ ಒದ್ದಾಡುವುದು ನೀವು ಮಾತ್ರ; ಅವಳಲ್ಲ. ಅದಕ್ಕೆ ಈ ಅರ್ಥಹೀನ ನೋವಿನಿಂದ ನಿಮ್ಮ ಆತ್ಮಸಾಕ್ಷಿ ಕಿರುಚುತ್ತಿದೆ, “ನಿನಗೆ   ಯಾವ ಶತ್ರುಗಳು ಇಲ್ಲ, ಆದರೆ ಈ ನೋವು ನಿನ್ನಲ್ಲಿದೆ.  ಹಾಗಾದರೆ ,ಈ ನೋವಿನ ಮೂಲ ಯಾವುದಯ್ಯ?   ಕೊಳೆತ ಹಲ್ಲುಗಳನ್ನು ಕೀಳುವ  ದಂತವೈದ್ಯರಿದ್ದರೂ ನೀನು ಮಾತ್ರ ನಿನ್ನ ಹಲ್ಲುಗಳ ಸಂಪೂರ್ಣ ದಾಸ; ಯಾರಾದರೂ ಬಯಸಿದರೆ  ನಿನ್ನ ಯಾತನೆಯನ್ನು ಮುಗಿಸಬಹುದು, ಅಳಿಸಬಹುದು, ಇಲ್ಲದಿದ್ದರೆ ನಿನ್ನ ಹಲ್ಲುಗಳು ನೋವಿನ ವೇದನೆಯನ್ನು ಮುಂದಿನ ಮೂರು ತಿಂಗಳ ತನಕವೂ ಉತ್ಪತ್ತಿಸುತ್ತಲೇ ಇರುತ್ತದೆ. ನೀನು ಇನ್ನೂ ಈ ವಾದವನ್ನು ಮನಗಾಣದೆ ನೋವಿನ ಅತಿಥಿಯಾಗಿಯೇ, ಪ್ರತಿಭಟಿಸುತ್ತಿರುವೆಯಾ? ಹಾಗಾದರೆ ಎಲ್ಲಿದೆ ನಿನಗೆ ನೆಮ್ಮದಿ… ಏನು ಮಾಡುತ್ತೀಯ ಈಗ?” ನಾನು ಹೇಳುವೆ. ಒಂದೋ ಅಂಗಿ ಕಿತ್ತೆಸೆದು ಚಾವಟಿ ಎತ್ತಿ ಬೆನ್ನಿನ ಚರ್ಮ ಕಿತ್ತೇ ಹೋಗುವಂತೆ ಹೊಡೆದುಕೊಳ್ಳುತ್ತೀಯ; ಅಥವಾ ಮುಷ್ಟಿ ಬಿಗಿಗೊಳಿಸಿ, ಗೋಡೆಯ ಗುದ್ದುತ್ತೀಯ ಅಷ್ಟೇ! ಮತ್ತೇನು ಕಿಸಿಯಕ್ಕಾಗಲ್ಲ ಕಂದ ನಿನ್ನಿಂದ…! ಹ್ಞೂಂ… ಒಂದು ಸಲ, ಹ್ಞೂಂ… ಎರಡು ಸಲ, ಹ್ಞೂಂ ಮೂರು … ಹೊಡ್ಕೋ ಮುಷ್ಠಿಲೀ… ಜೋರ್ರ್ ಜೋರ್‍ರಾಗಿ ಹೊಡ್ಕೋ ಕಂದಾ… ಹ್ಞಾ ಈಗ ನಿನ್ನ ಮುಷ್ಟಿಗೂ ಪೆಟ್ಟು ಬಿದ್ದಿದೆ. ಅದೂ ಘಾಸಿಯಾಗಿದೆ. ನೋವನ್ನು ಅಪ್ಪಿದೆ. ಈಗ ನಾವು ಮರ್ತ್ಯ ಮುಖಭಂಗಗಳ ಜೊತೆಯಲ್ಲಿ, ಅನಾಮಿಕ ಅಣುಕು ಮಾತುಗಳ ಸಹವಾಸದೊಂದಿಗೆ, ಕೊನೆಗೂ ಆ ಆನಂದದ ಮೂಲವ ತಲುಪಿದ್ದೇವೆ. ಹಲವು ಸಾರಿ, ಈ ಪರಿಯ ಆನಂದವು ನಮ್ಮನ್ನು ಭೋಗಲಾಲಸೆಯ ತುದಿಗೆ ಕರೆದೊಯ್ದು ತೇಲಿಸುತ್ತದೆ. ಸಜ್ಜನರೇ, ಈ ಶತಮಾನದ ಜ್ಞಾನಿ ಹಲ್ಲು ನೋವಿನಲ್ಲಿ ಕಿರುಚುತ್ತಾನಲ್ಲ, ಅವನ ಆ ಆಘಾತದ ಆಕ್ರಂದನವನ್ನು ಎರಡನೆಯ ಅಥವಾ ಮೂರನೆಯ ದಿನದಿಂದ  ಆಲಿಸಿ. ಆ ಶಬ್ಧ ಮೊದಲನೆಯ ದಿನವಿದ್ದಂತೆ-ಅಂದರೆ ಸುಮ್ಮನೇ ಹಲ್ಲು ನೋವಿದೆ ಎಂದು ಅರಚುವ ವಡ್ಡ ರೈತನೊಬ್ಬನ ಕೂಗಿನಂತೆ- ಇರುವುದೇ ಇಲ್ಲ. ಆದರೆ ಅದು ಕೇಳುವುದು ಯುರೋಪಿನ ಸಿವಿಲೈಝೇಷನ್ನಿನ ಪರಿಣಾಮಕ್ಕೆ ಸಿಲುಕಿದ ಮನುಷ್ಯನ ಬೊಬ್ಬೆಯಂತೆ, ಈಗಿನ ಮಂದಿ ಹೇಳುವ ಹಾಗೆ ‘ತನ್ನ ಮಣ್ಣಿನ ಸಂಸ್ಕೃತಿಯಿಂದ ವಿಛ್ಚೇಧಿತನಾದವನ ಪ್ರಲಾಪದಂತೆ*. ಅವನ ಗೋಳು ಅಸಹ್ಯವಾಗಿದೆ. ಬರು-ಬರುತ್ತಾ ಕ್ರೂರವಾಗಿ ಏರುತ್ತಿದೆ. ಕೇಡಿನಲ್ಲಿ ಅದ್ದಿ ಹೋಗಿದೆ. ಅವನಿಗೆ ಅರಿವಿದೆ, “ಈ ಕಿರುಚಾಟ, ನರಳಾಟಗಳಿಂದ ನನಗೆ ಏನು ಗಿಟ್ಟುವುದಿಲ್ಲ, ಸುಮ್ಮನೇ ನನ್ನನ್ನೂ, ನನ್ನ ಸುತ್ತಲೂ ಇರುವವರನ್ನೂ ನಾನೇ ಗೋಳಾಡಿಸುತ್ತಿದ್ದೇನೆ. ಸಿಟ್ಟಿಗೆಬ್ಬಿಸುತ್ತಿದ್ದೇನೆ. ನನ್ನ ಹೊರ ಜಗತ್ತಿಗೂ,-ಅದನ್ನು ಮೆಚ್ಚಿಸಲು ಅದೆಷ್ಟು ಕೋತಿಕುಣಿತ ಕುಣಿದಿಲ್ಲ ನಾನು!- ನನ್ನ ಮನೆಯವರಿಗೂ ಈ ಕೂಗಾಟಗಳು ಹೊಸದೇನಲ್ಲ. ಅವರಿಗೆ ನಾನೆಂದರೆ, ನನ್ನ ಆಕ್ರಂದನವೆಂನ್ನುವುದೇ ಒಂದು ಕ್ಷುದ್ರ ಪಿಡುಗು , ದ್ವೇಷ ಜಿಗುಪ್ಸೆ. ನನ್ನ ಮೇಲೆ ಅವರಿಗೆ ಚೂರೂ ನಂಬಿಕೆ ಇಲ್ಲ. ಅವರಿಗೂ ಗೊತ್ತು, ನಾನು ಮೆಲ್ಲಗೆ ಎಲ್ಲರಂತೆ ನರಳಾಡಬಹುದು, ಅಲಂಕಾರಮಯವಾದ ಸೋಗಿಲ್ಲದೆಯೇ, ಆದರೆ ಅವರೂ ಬಲ್ಲರು ಈ ಕೊಂಕು ಕ್ಲೇಷಾರ್ತನಾದದಿಂದ ನಾನು ಕೇಡಿನ ಮಜ ಅನುಭವಿಸುತ್ತಿದ್ದೇನೆಂದು! ನಾನು ನಿಮ್ಮ ಶಾಂತಿಯನ್ನು ಭಂಗಗೊಳಿಸುತ್ತಿದ್ದೇನೆ. ನನ್ನ ಈ ದೊಂಬಿ ನಿಮ್ಮ ಹೃದಯಗಳನ್ನು ಛೇಧಗೊಳಿಸುತ್ತಿದೆ. ನಿಮ್ಮ ಸಕ್ಕರೆ ನಿದಿರೆಯನ್ನು ಚದುರಿಸುತ್ತಿದ್ದೆ. ಬಹಳ ಒಳ್ಳೆಯದು, ಮಲಗಬೇಡಿ! ನಿಮಗೂ ಗೊತ್ತಿರಲಿ ನನಗೆ ಹಲ್ಲು ನೋವು ಎಂದು.   ಇಲ್ಲ, ನಾನು ಆ ಪುರೊಷೋತ್ತಮನಲ್ಲ, ಹಿಂದೆ ನಿಮ್ಮೆದುರು ಆ ಪುರೊಷೋತ್ತಮನ ಹಾಗೆ ಇರಲು   ಶ್ರಮಿಸಿದ್ದೆ ಅಷ್ಟೇ.    ನಾನೊಬ್ಬ ಕೇವಲ  ಅಶ್ಲೀಲ ಮಾನವ ಅಷ್ಟೇ; ಬೇಕಾದರೆ ಠಕ್ಕ ನಕಲಿ ಶ್ಯಾಮನೆನ್ನಿ ನನ್ನ. ಸಧ್ಯ, ಈಗಲಾದರೂ ನಾನು ಯಾರೆಂದು ತಿಳಿದಿರಲ್ಲ, ತುಂಬಾ ಖುಷಿಯಾಯಿತು.  ನನ್ನ ತುಚ್ಛ ಕಿಚಿಪಿಚಿಗಳು ನಿಮಗೆ ಸೇರುವುದಿಲ್ಲ. ಸೇರದಿದ್ದರೆ ನಿಮ್ಮ ಹಣೆ ಬರಹ, ನನ್ನನ್ನು ಇನ್ನೂ ದ್ವೇಷಿಸಿ; ಆಗ ನಾನು ಇನ್ನೂ ನೀಚವಾಗಿರುವ ಅಟ್ಟಹಾಸವನ್ನು ಈ ಕ್ಷಣದಲ್ಲಿ ನಿಮತ್ತ ಬಿಸಾಕುವೆ…” ಈಗಲೂ ನೀವು ಅರ್ಥಮಾಡಿಕೊಳ್ಳುತ್ತಿಲ್ಲ, ಅಲ್ಲವೇ ಸಜ್ಜನರೇ…?! ನಮ್ಮ ಪ್ರಜ್ಞೆ ಮತ್ತು ಬೆಳವಣಿಗೆ ಇವೆರೆಡೂ ತುಂಬಾ ವಿಕಾಸವಾದಾಗ ಮಾತ್ರ ಮನುಷ್ಯನು ಈ ವಿಲಾಸದ ಗಹನತೆಯನ್ನು ಅರಿಯಬಹುದು. ಏನು, ನಗುತ್ತಾ ಇದ್ದೀರ? ಅಬ್ಬಾ…! ತುಂಬಾ ಖುಷಿಯಾಯಿತು ನನಗೆ. ನನ್ನ ಹಾಸ್ಯ ಚಟಾಕಿಗಳು ಕೀಳುಮಟ್ಟದ್ದು; ಪೆದ್ದುಪೆದ್ದು;  ಆತ್ಮವಿಶ್ವಾಸ ಹೀನವಾಗಿರುವ ಬುಡುಬುಡಿಕೆಗಳು. ಏಕೆಂದರೆ ನನಗೆ ಆತ್ಮಾಭಿಮಾನವಿಲ್ಲ. ನಿಜವಾದ ಪ್ರಜ್ಞಾವಂತನಿಗೆ ಒಂಚೂರಾದರೂ ಆತ್ಮಾಭಿಮಾನವಿರುತ್ತದೆಯೇ?

 

– ೪ –

ಹೇಳಿ, ತನ್ನ ಅಧೋಗತಿಯಲ್ಲೇ ಆನಂದವನ್ನು ಕಾಣಲು ಪ್ರಯತ್ನಿಸುವ ಮನುಷ್ಯನಲ್ಲಿ ಆತ್ಮಾಭಿಮಾನದ ಕಿಡಿಯಿರಲು ಸಾಧ್ಯವೇ…? ಕುತ್ಸಿತವಾದ ಪಶ್ಚಾತಾಪದಲ್ಲಿ ನಾನು ಈ ಮಾತುಗಳನ್ನು ಆಡುತ್ತಿಲ್ಲ. ಮತ್ತೆ, “ತಪ್ಪಾಯ್ತು ಅಪ್ಪಾ… ಇನ್ನೊಂದ್ಸಲಾ ಹಾಗೆ ಮಾಡಲ್ಲ…” ಎಂದು ಹೇಳುವುದನ್ನು ತಾಳಿಕೊಳ್ಳಲೂ ನನ್ನಿಂದಾಗದು. (ಹಾಗೆ ಹೇಳುವುದು ನನಗಾವುದಿಲ್ಲ ಎಂದಲ್ಲ ಅದೊಂದೇ ಚೆನ್ನಾಗಿ ಹೇಳಲು ಬರುವುದು ನನಗೆ!). ಅದೆಲ್ಲಾ ಬದಿಗಿಡಿ. ವಿಧಿಯ ಲೀಲೆಯೆಂಬಂತೆ ನನ್ನ ತಪ್ಪೇ ಇಲ್ಲದಿದ್ದರೂ ನಾನೇ ಕಷ್ಟದಲ್ಲಿ ಸಿಲುಕಿಕೊಳ್ಳುತ್ತಿದ್ದೆ. ಅದೇ ಅತೀ ಹೊಲಸಿನ ವಿಷಯ. ಹಾಗಿದ್ದೂ ಅದೇ ಸಮಯದಲ್ಲಿ ನಾನು ಅಪ್ಪಟವಾಗಿಯೇ ಭಾವವೋದ್ವೇಗದಲ್ಲಿ ಕಣ್ಣೀರು ಸುರಿಸುತ್ತಿದ್ದೆ, ಅದೂ ನನ್ನನೂ ನಾನೇ ಮೋಸಗೊಳಿಸಿ. ಆದರೆ ನಾನೇನು ಚೂರೂ ನಾಟಕ ಮಾಡುತ್ತಿರಲಿಲ್ಲ. ಇದರ ಜತೆ-ಜತೆಗೇ ಹೃದಯದಲ್ಲೊಂದು ರೋಗಿಷ್ಟ ಭಾವವಿರುತಿತ್ತು… ನನ್ನ ಆ ಸ್ಥಿತಿಗೆ ನಾನೇ ಕಾರಣ, ಅದಕ್ಕೆಲ್ಲಾ ಪ್ರಕೃತಿ ವ್ಯವಸ್ಥೆಯ ಮೇಲೆ ಗೂಬೆ ಕೂರಿಸಬಾರದು. ಹಾಗೆ ನೋಡಿದರೆ ನಿಸರ್ಗ ವಿಧಿಗಳೂ ನನ್ನನ್ನು ರೇಗಿಸಿವೆ. ಜೀವನದುದ್ದಕ್ಕೂ ಇವು ನನ್ನನ್ನು ಕಾಡಿಸಿವೆ. ಮತ್ತೆ ಇವನ್ನೆಲ್ಲಾ ಯೋಚಿಸುವುದೇ ನನಗೆ ವಾಕರಿಕೆ, ಹಿಂದೆಯೂ ಹೀಗೇ ಅನ್ನಿಸಿತ್ತು, ಈಗಲೂ ಅಷ್ಟೇ! ಇದ್ದಕ್ಕಿಂದತೆಯೇ ಸಿಟ್ಟಿಗೆದ್ದು ಮುಂದಿನ ಕ್ಷಣದಲ್ಲಿಯೇ ಈ ಸಮಂಜಸ ನಿರ್ಧಾರಗಳು, ಈ ಭಾವನೆಗಳು, ನನಗೆ ನಾನೇ ಇತ್ತ  ಸುಧಾರಣೆಯ ವಚನಗಳು ಇವೆಲ್ಲವನ್ನೂ ಸುಳ್ಳು, ಖೋಟಾ ಬುರುಡೆ ಎನ್ನುವ ಅರಿವು ನನ್ನಲ್ಲಿ ಹುಟ್ಟುತಿತ್ತು, ಒಂದೇ ಏಟಿಗೆ ಎಲ್ಲದಕ್ಕೂ ಖಂಡಿತವಾಗಿಯೂ ಆಗಲೇ ಮಂಗಳ ಹಾಡಿಬಿಡಬಹುದಿತ್ತು; ಹಾಗಾದರೆ ಹೇಳಿ ಸಹೃದಯರೇ, ಏಕೆ ಈ ಪುರಾತನ ಯಮಹಿಂಸೆಯಲ್ಲಿ ನಾನು ಸ್ವಇಚ್ಛೆಯಿಂದಲೇ ಬೇಯುತ್ತಿರುವೆ?

ಉತ್ತರ: ಏಕೆಂದರೆ, ಆಕಳಿಸಿ, ಕಾಲಗಲಿಸಿ, ಕುರ್ಚಿಯಲ್ಲಿ ಬಿದ್ದುಕೊಂಡು ಮೇಲ್ಛಾವಣಿ ನೋಡುವ ಕ್ರಿಯೆ, ಚಿಟ್ಟು ಹಿಡಿಸುತ್ತದೆ, ಅಷ್ಟೇ. ನಿಮ್ಮ ಸ್ವಭಾವವನ್ನು ನೀವೆ ನಿಗಾಯಿಟ್ಟು ಗಮನಿಸಿ ಸಜ್ಜನರೇ ಆಗ ನಿಮಗೆ ಅರ್ಥವಾಗುತ್ತದೆ ನಾನು ಈಗ ಹೇಳಿದ್ದೇ ಸತ್ಯವೆಂದು. ನನ್ನಲ್ಲಿ ಜೀವಕಳೆಯಿದೆಯೋ ಎಂದು ಪತ್ತೆ ಹಚ್ಚಲೆಂದೇ ಈ ವಿಕ್ಷಿಪ್ತ ಸಾಹಸಗಳ ಆವಿಷ್ಕರಿಸಿದ್ದು; ಹ್ಞಾ… ಹೇಗಾದರೂ ಬದುಕಲೇ ಬೇಕೆಂದು ಕೂಡ. ಎಷ್ಟೋ ಸಲ ಹೀಗಾಗಿದೆ ನನಗೆ – ನಿಮಗೆ ಸಿಟ್ಟಿದೆ, ಆದರೆ ಸಿಟ್ಟೇ ಬೇಕಾಗಿರದ ವಿಷಯಕ್ಕೆ ಸಿಟ್ಟಿದೆ; ನಿಮಗೆ ಚೆನ್ನಾಗೇ ಗೊತ್ತು, ಈ ಸಿಟ್ಟೇ ಬೇಕಿಲ್ಲ ಎಂದು; ಆದರೂ ಸಿಟ್ಟಿನ ಪರಿಣಾಮಕ್ಕೆ ಸಿಲುಕಿ, ಕೊನೆಯಲ್ಲಿ ನಿಜಕ್ಕೂ ಸಿಟ್ಟಿಗೇಳುತ್ತೀರಿ. ಬದುಕು ಪೂರ್ತಿ ಇಂತಹ  ಪೆದ್ದುಪೆದ್ದು ಆಟಗಳನ್ನು ಆಡಿ ಕಾಲದ ಜತೆ ಈ ಐಲುಗಳು ಜಾಸ್ತಿಯಾಗಿ ನನ್ನನ್ನು ನಾನೇ ಕೊನೆಗೆ ನಿಗ್ರಹಿಸನಾದೆ. ಇನ್ನೊಮ್ಮೆ, ಅಂದರೆ ಒಂದೆರೆಡು ಸಲ ಪ್ರೀತಿಸಲೂ ಯತ್ನಿಸಿದ್ದ ಉದಾಹರಣೆಗಳೂ ಇವೆ.

ಸಹೃದಯರೇ, ನಾನು ತೀವ್ರವಾಗಿ ನರಳಿದ್ದೇನೆ; ನೀವು ನಂಬದೇ ಇರಬಹುದು ನನ್ನ ವೇದನೆಯನ್ನು; ನೀವು ಬಿಡಿ, ನನ್ನ ಹೃದಯಾಂತರಾಳದಲ್ಲಿ ನನ್ನ ವೇದನೆಯ ಬಗ್ಗೆ ನನಗೇ ಕಿಂಚಿತ್ತೂ ನಂಬಿಕೆ ಇರಲಿಲ್ಲ. ಆದರೆ ನಾನು ನೊಂದದ್ದು ಮಾತ್ರ ಸತ್ಯ; ಶುದ್ಧವಾದ ನಿಷ್ಕಳಂಕ, ಸಂಪ್ರದಾಯಕ ನರಳಾಟ ನನ್ನದು; ಜಡತೆ ನನ್ನನ್ನು ಆವರಿಸಿತ್ತು. ಸ್ವಪ್ರಜ್ಞೆಯ ತತ್‍ಕ್ಷಣದ, ನೇರವಾದ, ಪಕ್ಕಾ ಫಲಿತಾಂಶವೇ ಈ ಜಡತ್ವ, ಅಂದರೆ  ಆಕಳಿಸಿ, ಕಾಲಗಲಿಸಿ, ಕುರ್ಚಿಯಲ್ಲಿ ಬಿದ್ದುಕೊಂಡು ಮೇಲ್ಛಾವಣಿ ನೋಡುವ ಕ್ರಿಯೆ. ನಾನು ಮತ್ತೆ ಮತ್ತೆ ಒತ್ತಿ-ಒತ್ತಿ ಹೇಳುತ್ತಿದ್ದೇನೆ: ಸ್ವಪ್ರಚೋದಿತ, ದೃಢ ಮನಃಸ್ಥಿತಿಯ ಜನರು ಕ್ರಿಯಾಶೀಲರು. ಏಕೆಂದರೆ ಅವರೆಲ್ಲಾ ಬಂಡೆಯಂತಹ ಮಿದುಳುಳ್ಳ ಮೂರ್ಖರು, ಒಂದು ಚೌಕಟ್ಟನ್ನು ಮೀರಿ ಯೋಚಿಸಲಾಗದವರು.

ಇದನ್ನು ಹೇಗೆ ವಿವರಿಸಲಿ, ನಾನು? ಹೀಗೆ ನೋಡಿ, ಸೀಮಿತರವರು. ಏಕೆಂದರೆ ಜುಜುಬಿ ಚಿಲ್ಲರೆ ವಿಷಯಗಳನ್ನೇ ಅವರು ಮೂಲಕಾರಣವೆಂದು  ಕಲ್ಪಿಸಿ, ತಮ್ಮತಮ್ಮ ಕ್ರಿಯೆಗಳೆನ್ನೆಲ್ಲಾ ಸಮರ್ಥಿಸುವ ಪ್ರಶ್ನಾತೀತ ತಾರ್ಕಿಕಾಧಾರ ತಮಗೆ ದಕ್ಕಿದೆ ಎಂಬ ಭ್ರಮೆಯಲ್ಲಿ, ಇತರರಿಗಿಂತ ಬೇಗನೆ, ಹಾಗೇ ಸುಲಭವಾಗಿ ಸಮಾಧಾನ ಪಡೆದು ಚಿಂತಿಸುವುದನ್ನೇ ನಿಲ್ಲಿಸುವ ಜನರು. ಇದು ಬಹುಮುಖ್ಯ ಸಂಗತಿ. ಒಂದು ಕ್ರಿಯೆಗೆ ಸಿದ್ಧನಾಗುವ ಮುನ್ನ ನೀವು ತಲ್ಲಣಿಸುವುದನ್ನೇ ಮರೆಯಬೇಕು ಹಾಗೂ ನಿಮ್ಮೆಲ್ಲಾ ಗುಮಾನಿಗಳನ್ನು ಬಿಟ್ಟುಬಿಡಬೇಕು. ಹಾಗಾದರೆ ನಾನು ಹೇಗೆ ತಲ್ಲಣಿಸದಿರಲಿ…? ನಾನು ನಂಬಲರ್ಹವಾದ ಮೂಲಕಾರಣಗಳನ್ನು ಎಲ್ಲಿ ಹುಡುಕಲಿ? ಆ ಮೂಲಗಳ ಮೂಲವೆಲ್ಲಿ? ಎಲ್ಲಿ ಹುಡುಕಲಿ ನಾನು ಈ ಮೂಲಗಳ ಮೂಲವನ್ನು? ಹೀಗೆ ಆಳಕ್ಕಿಳಿಯುತ್ತಾ ಯೋಚಿಸುವುದೇ ನನ್ನ ಜಾಯಮಾನ. ಇದರ ಪರಿಣಾಮ ನನ್ನ  ಪ್ರತಿ ಮೂಲ ಕಾರಣವು ತಕ್ಷಣವೇ ಇನ್ನೂ ಆಳವಾಗಿ ಬೇರಿನಂತೆ ಬೆಸೆದುಕೊಂಡಿರುವ ಆದಿ ಮೂಲಗಳತ್ತ ನನ್ನನ್ನು ಒಯ್ಯುವುದು… ಮತ್ತೆ ಆ ಆದಿಗೂ ಒಂದು ಮೂಲವಿದೆ, ಈ ಅನಂತ ಮೂಲಗಳ ಮೂಲವೆಲ್ಲಿ? ಎಲ್ಲಾ ರೀತಿಯ ಪ್ರಜ್ಞೆ ಹಾಗೂ ಪ್ರತಿಫಲನಗಳ ನಿಜವಾದ ಸಾರವಿಷ್ಟೇ. ಮತ್ತೆ ನಾವು ಅದೇ ಪ್ರಕೃತಿಯ ವಿಧಿಗಳ ಬುಡಕ್ಕೇ ಬಂದೆವು. ಹಾಗಾದರೆ ಇವೆಲ್ಲ ವಿಧಿಗಳ ಫಲಿತಾಂಶ ಏನಾಗಿರಬಹುದು? ಏನೂ ಇಲ್ಲ, ಅದೇ ಹಳೆಯ ಕಥೆ. ಆ ದಿನ ನಾನು ಹಗೆಯ ಬಗ್ಗೆ ಮಾತನಾಡುತ್ತಿದ್ದೆ, ನೆನೆಪಿದೆಯೇ? ಒಬ್ಬ ಇನ್ನೊಬ್ಬನ ಮೇಲೆ ಹಗೆ ತೀರಿಸಿಕೊಳ್ಳುತ್ತಾನೆ ಏಕೆಂದರೆ ಅವನಿಗೆ ಅದೇ ನ್ಯಾಯ; ಎಲ್ಲರೂ ಸಾಮಾನ್ಯವಾಗಿ ನಂಬಿರುವ ವಾದವಿದು. ಇಲ್ಲಿ ನ್ಯಾಯವೇ ಆ ಮೂಲಕಾರಣ, ಆ ತಾರ್ಕಿಕಾಧಾರ. ಅವನಿಗೀಗ ಗೊಂದಲಗಳಿಲ್ಲ, ನಿಶ್ಯಬ್ಧವಾಗಿ, ಸ್ಥಿತಪ್ರಜ್ಞನಾಗಿ ತನ್ನ ಸೇಡಿನಾಟದಲ್ಲಿ ಗೆಲ್ಲುತ್ತಾನೆ. ಈ ನಿರ್ಧಾರ ಆತನಿಗೆ ಉಚಿತವಾಗಿಯೂ, ಪ್ರಾಮಾಣಿಕವಾಗಿಯೂ ಕಾಣುತ್ತದೆ. ಆದರೆ ಇದರಲ್ಲಿ ನನಗೆ ಯಾವ ಸೀಮೆಯ ನ್ಯಾಯವೂ ಕಾಣುತ್ತಿಲ್ಲ! ಅಥವಾ ಶ್ರೇಷ್ಠತೆಯ ಕುರುಹುಗಳೂ ಇಲ್ಲಿಲ್ಲ. ಎಂದಾದರೂ ನಾನು ಹಗೆಗಾಗಿ ಹೊಂಚು ಹಾಕಿದರೆ, ಅದು ಕೇವಲ ಸೇಡಿನಿಂದ ಮಾತ್ರ! ಈ ಸೇಡು ಎಲ್ಲವನ್ನೂ ಮೀರಿಸಬಲ್ಲದು. ನನ್ನ ಎಲ್ಲಾ ಗುಮಾನಿಗಳನ್ನು ಕಿತ್ತು, ಅಸಲಿಗೆ, ಅದೊಂದು ಯಾವ ಕಾರಣವೂ ಅಲ್ಲದಿದ್ದರೂ ತಾನೇ ಮೂಲ ಕಾರಣವೆಂದು ಥಳಕು ಹಾಕಿ, ಉಪಕರಿಸಬಲ್ಲದು. ಆದರೆ ನನಗೆ ಈ ಸೇಡು ಕೂಡ ಇಲ್ಲದಿದ್ದರೆ ಆಗ…?(ಸ್ವಲ್ಪ ಹೊತ್ತಿನ ಮುಂಚೆ ಇಲ್ಲಿಂದಲೇ ಶುರುಮಾಡಿದ್ದೆ). ನನ್ನೊಳಗಿನ ಸೇಡು ಈ ಸುಡುಗಾಡು  ಪ್ರಜ್ಞೆಯ ವಿಧಿಗಳ ಫಲಿತಾಂಶವಾದ್ದರಿಂದ, ಇದರ ಹುಟ್ಟಿರುವುದು ರಾಸಾಯನಿಕ ವಿಘಟನೆಯ ಸ್ವಾಧೀನದಲ್ಲಿ. ಇದು ನನ್ನ ಅವಸ್ಥೆ.   ಆಗ ವಿವಾದಗಳು ಆಕಾರ ರಹಿತ ಗಾಳಿಯೊಳಗೆ ಅಂತರ್ಧಾನವಾಗುತ್ತದೆ. ವಾದಗಳು ಆವಿಯಾಗುತ್ತವೆ. ಇದಕ್ಕೆಲ್ಲಾ ಹೊಣೆಯಾದ ಮನುಷ್ಯನೇ ನಾಪತ್ತೆಯಾಗುತ್ತಾನೆ. ಕಡೆಗೂ ಆ ಕಳ್ಳ ಕೈಗೆ ಸಿಕ್ಕುವುದಿಲ್ಲ. ನಿಂದನೆ, ನಿಂದನೆಯಾಗಿರದೆ ಅದೇ ವಿಧಿಬರಹವಾಗುತ್ತದೆ. ಹಲ್ಲು ನೋವಿನಂತೆ, ಅದಕ್ಕೆ ಯಾರನ್ನೂ ದೂರಲಾಗುವುದಿಲ್ಲ. ನಿಮಗಿನ್ನು ಆ ಗೋಡೆಗುದ್ದುವ ಹಳೆಯ ವಿಧಾನವೇ ಗತಿ. ಗುದ್ದಿ,ಗುದ್ದಿ ಮುಷ್ಠಿ ಜಜ್ಜುವ ತನಕ, ಆಮೇಲೆ ಎಲ್ಲ ಪ್ರಯತ್ನವನ್ನು ಬಿಟ್ಟು ಬಿಡುವಿರಿ, ಏಕೆಂದರೆ ನಿಮ್ಮಿಂದ ಆ ಮೂಲಕಾರಣವ ಪತ್ತೆ ಹಚ್ಚಲಾಗಲಿಲ್ಲ. ಅಶಕ್ತ ಸ್ಥಿತಿಯಲ್ಲಿ ಹಾಗೆ ಮಲಗಿರುವಾಗ, ಪ್ರಬಲ ಭಾವನೆಗಳು ನಿಮ್ಮನ್ನು ತರಗೆಲೆಯಂತೆ ತೇಲಿಸುತ್ತದೆ. ಖಾಲಿ ಮನಸ್ಸಲ್ಲಿ ನಿಮ್ಮ ಪ್ರಜ್ಞೆಯನ್ನು  ಒಂದು ಕ್ಷಣಕ್ಕಾದರೂ ಆಚೆಗಟ್ಟಿ, ಪ್ರೀತಿಸಲೋ, ದ್ವೇಷಿಸಲೋ ಶುರುಮಾಡುವಿರಿ- ಕುರ್ಚಿಯ ಮೇಲೆ, ಕಾಲಗಲಿಸಿ ಬಿದ್ದುಕೊಂಡು ಬಾಯಗಲಿಸಿ ಮೇಲ್ಛಾವಣಿಯನ್ನು ಶೂನ್ಯ ದೃಷ್ಟಿಯಲ್ಲಿ, ಎವೆಯಿಕ್ಕದೆ ನೋಡುವ ಕ್ರಿಯೆಯೊಂದನ್ನು ಬಿಟ್ಟು, ಮಿಕ್ಕೆಲ್ಲಾ ತಲ್ಲಣ ತರುವ ಚಟುವಟಿಕೆಯಲ್ಲಿ ನೀವಾಗ ಮಗ್ನ. ಎರಡು ದಿನಗಳ ಬಳಿಕ, ನಿಮ್ಮನ್ನು ನೀವೇ ಮೋಸಗೊಳಿಸಿರುವ ಅರಿವಾಗಿ, ಅಸಹ್ಯ ಪಡುತ್ತೀರಿ. ಇದರ ಫಲಿತಾಂಶ: ಒಂದು ಸಾಬೂನಿನ ಗುಳ್ಳೆ ಮತ್ತು ಜಡತ್ವ. ಆಹ್, ಸಜ್ಜನರೇ ಬಹುಶಃ ನನ್ನನ್ನು ನಾನು ಬುದ್ಧಿಜೀವಿಯೆಂದು  ನಂಬಿರುವುದು ಏಕೆಂದರೆ, ಈ ಇಡೀ ಬದುಕಿನಲ್ಲಿ  ಏನನ್ನೂ ಶುರು ಮಾಡಲೂ ಅಥವಾ ಮುಗಿಸಲು ನಾನು ಅಶಕ್ತನಾಗಿರುವುದರಿಂದ. ಇಲ್ಲ ಸರಿ, ಸರಿ ಒಪ್ಪಿಕೊಳ್ಳುತ್ತೇನೆ, ನಾನೊಬ್ಬ ಬಾಯಿಬಡುಕನೆಂದು. ನಾವೆಲ್ಲರೂ ಅಪಾಯಕಾರಿಯಲ್ಲದ, ಕೊರೆಯುವ  ವಟಗುಟುಕರು; ಆದರೆ ಎಲ್ಲ ಬುದ್ಧಿಜೀವಿಗಳ ನೇರ, ಏಕಮಾತ್ರ ಕಸುಬು ವಟಗುಟ್ಟುವುದೇ ಆಗಿದ್ದರೆ ಆಗ ನಾನು   ಏನು ಮಾಡಲಿ ಸ್ವಾಮಿ? – ಅಂದರೆ ಖಾಲಿ ಹೂಜಿಗೆ ಬೇಕುಬೇಕಂತಲೇ ಖಾಲಿಯಾದ ಸೀಸೆಯಿಂದ ಖಾಲಿ ಪದಾರ್ಥಗಳನ್ನು ಸುರಿದಂತೆ.

-೫ –

ಒಂದು ವೇಳೆ ಆಲಸ್ಯದಿಂದ, ನಾನು ಈ ತಟಸ್ಥ ಸ್ಥಿತಿ ತಲುಪಿದ್ದರೆ, ಆಗ ನಿಜಕ್ಕೂ ನನಗೆ ಖುಷಿಯಾಗುತಿತ್ತು. ಆಲಸ್ಯವೆಂಬ ಗುಣವಿಶೇಷದ ಮಾಲಕನಾದರೂ ಆಗ ನಾನಾಗಬಹುದಿತ್ತು. ನನಗೆ ಆತ್ಮವಿಶ್ವಾಸ ತರುವ ಪುರೋಷತ್ತಮನ ಒಂದು ಗುಣವಾದರೂ ನನ್ನಲ್ಲಿರುತ್ತಿತ್ತು ಆಗ.

ಪ್ರಶ್ನೆ: ಯಾರವನು?

ಉತ್ತರ: ಸೋಮಾರಿ

ಕಿವಿಗೆ ಇಂಪು ಕೊಡುವ ಉತ್ತರವಿದು. ಸೋಮಾರಿಯೆಂದರೆ ಏನಂದುಕೊಂಡಿರಿ? ಅದೊಂದು ಘನತೆಯುಳ್ಳ ಸ್ಥಾನ,  ಮಹಾ ಪದವಿ, ನಗಬೇಡಿ, ಇದೇ ನಿಜ ಸ್ವಾಮೀ.   ಆಗ ನಾನು ಸಂಭಾವಿತ ಕ್ಲಬ್ಬಿನ ಮೆಂಬರಾಗಿರುತ್ತಿದೆ; ನಿರಂತರವಾಗಿ ನನ್ನನ್ನು ನಾನೇ ಗೌರವಿಸುವುದೇ ನನ್ನ ಕುಲಕಸುಬಾಗುತಿತ್ತು. ನನಗೆ  ಒಬ್ಬ ದೊಡ್ಡ ಮನುಷ್ಯನ ಪರಿಚಯವಿತ್ತು. ಆತ ಶತೂ ಲಫ಼ೀತ್ ವೈನಿನ ಮಹಾ ರಸಿಕ; ತನ್ನ ರುಚಿಯ ಬಗ್ಗೇ ಆತನಿಗೆ ಎಗ್ಗಿಲ್ಲದ ಹೆಮ್ಮೆ; ಅದೇ ಸದಾಚಾರ ಮತ್ತು ಮಹಾಗೌರವ. ಅಪ್ಪಿತಪ್ಪಿಯೂ ಆತ ತನ್ನ ಆತ್ಮಸಾಕ್ಷಿಯನ್ನು ಶಂಕಿಸಿದ್ದ ಪ್ರಮೇಯಗಳೇ ಇರಲಿಲ್ಲ. ಸತ್ತಾಗಲೂ ಶುಭ್ರವಾಗಿದ್ದ ಅವನ ಆತ್ಮಸಾಕ್ಷಿ ವಿಜಯೋತ್ಸಾಹದಲ್ಲಿ  ವಿಜೃಂಭಿಸುತ್ತಿತ್ತು. ಅವನು ನಂಬಿದ್ದು ನೂರಕ್ಕೆ ನೂರು ಸರಿ ಗೆಳೆಯರೆ. ಅದಕ್ಕೆ ನಾನೂ ಸಹ ಸೋಮಾರಿಯಾಗಿದ್ದರೆ, ಹೊಸ  ಕರಿಯರ್ರನ್ನು ನನಗಾಗಿ ಆಯ್ದುಕೊಳ್ಳುತ್ತಿದ್ದೆ. ಆಗ, ನಾನೊಬ್ಬ ಅಂತಿಂಥ ಆಲಸಿಯಾಗಿರದೆ,   ಎಲ್ಲ “ಅದ್ಭುತ ಚೆಲುವಿನತ್ತ” ಕರುಣೆ ತೋರುವ ಹೊಟ್ಟೆಬಾಕ ಸೋಮಾರಿಯಾಗಿರುತ್ತಿದ್ದೆ(ಇದಕ್ಕೆ ಏನಂತೀರ ಸ್ವಾಮೆ!) ಈ ಪರ್ವದ ಸ್ವಪ್ನದರ್ಶನ ಎಂದೋ ಆಗಿದೆ ನನಗೆ.  ಈ ನಲವತ್ತನೆಯ ವಯಸ್ಸಿಗೆ ಅದ್ಭುತ ಚೆಲುವಿನ ತೂಕದ ಹೊರೆ ನನ್ನ ಮನಸ್ಸಿನ ಮೇಲಿರುತ್ತಿತ್ತು,  ಅದೆಲ್ಲ   ನಲವತ್ತಾದಗ ಬಿಡಿ ; ಆದರೆ ಆಗ- ಓಹ್, ಆಗ  ಈ ಬದುಕಿನ ಕಥೆಯೇ ಬೇರೆಯಾಗಿರುತಿತ್ತು!  ಆಗ ನನಗೆ ತಕ್ಕ  ಕಸುಬನ್ನು ಹುಡುಕಿಯೇ ಬಿಡುತ್ತಿದ್ದೆ: ಕರಾರುವಕ್ಕಾಗಿ ಹೇಳುವುದೆಂದರೆ ಕುಡಿಯುತ್ತಿದ್ದೆ, ಅದ್ಭುತ ಚೆಲುವಿನ ಆರೋಗ್ಯಕ್ಕೋಸ್ಕರ ಕುಡಿಯುತ್ತಿದ್ದೆ. ನನ್ನ ವೈನ್‍ಲೋಟದಲ್ಲಿ ಕಣ್ಣೀರು ಚೆಲ್ಲಿ, ಎಲ್ಲ ಅದ್ಭುತ ಚೆಲುವಿನ ಹೆಸರಿನಲ್ಲಿ  ಕುಡಿಯುವ ಒದೊಂದು ಅವಕಾಶವನ್ನು ಲಪಟಾಯಿಸುತ್ತಿದ್ದೆ. ಆಮೇಲೆ ಜಗತ್ತಿನಲ್ಲಿ ಇರುವುದನ್ನೆಲ್ಲಾ ಅದ್ಭುತ ಚೆಲುವಾಗಿ ರೂಪಾಂತರಗೊಳಿಸಿ, ಅದ್ಭುತ ಚೆಲುವನ್ನು ಗಬ್ಬಿನಲ್ಲಿಯೂ, ತಿಪ್ಪೆಗುಂಡಿಯಲ್ಲಿಯೂ, ಕೊಳೆತ ಹೆಣಗಳಲ್ಲಿಯೂ ಹೆಕ್ಕುತ್ತಿದೆ. ಮತ್ತೆ ಒದ್ದೆಯಾದ ಸ್ಪಂಜಿನಂತೆ ನಾನು ಕಣ್ಣೀರಲ್ಲೇ ಊದಿಹೋಗುತ್ತಿದ್ದೆ. ಒಂದು ವೇಳೆ ಆಗ   ಕಲಾವಿದನೊಬ್ಬ ಮಹಾ ವರ್ಣಚಿತ್ರಕಾರ ನಿಕೊಲಾಯ್ ಗೇನ* ಚಹರೆಯಲ್ಲಿ ಒಂದು ಚಿತ್ರ ಬಿಡಿಸಿದನಪ್ಪ, ಆಗ ದಂತಕಥೆ ನಿಕೊಲಾಯ್ ಗೇ ಮಹಾಶಯ ಬಾಳಲಿ, ಎಂದು ಕುಡಿಯುತಿದ್ದೆ, ಏಕೆಂದರೆ ನನಗೆ ಅದ್ಭುತ ಚೆಲುವೆಂದರೆ ತುಂಬಾ ತುಂಬಾ ಪ್ರೀತಿ. ಯಾರೋ ಒಬ್ಬ ಸಾಹಿತಿ “ನೀವು ಹೇಗೇ ಇಚ್ಛಿಸಿದರೂ”* ಎಂದೇನಾದರೂ ಬರೆದಿದ್ದರೆ ಆಗ ನಾನು “ನೀನ ಇಚ್ಛಿಸಿದ ಯಾವನದ್ದೋ” ಆರೋಗ್ಯಕಾಗಿ   ಕುಡಿಯುತ್ತಿದ್ದೆ ಏಕೆಂದರೆ ನನಗೆ ಅದ್ಭುತ ಚೆಲುವೆಂದರೆ ತುಂಬಾ ತುಂಬಾ ಪ್ರೀತಿ. ಹೀಗೆ ನಾನು ಮಾಡಿದ ಘನಂಧಾರಿ ಕಾರ್ಯಗಳಿಗೆಲ್ಲಾ ಎಲ್ಲರೂ ಸಲಾಂ ಹೊಡೆಯಲೇ ಬೇಕು;  ಯಾರಾದರೂ ಹೊಡೆಯದಿದ್ದರೆ ಅವರನ್ನು ಆಜನ್ಮಪರ್ಯಂತ ಗೋಳಾಡಿಸುತ್ತಿದ್ದೆ. ನನಗಾಗ  ಆತಂಕದಿಂದ ಮುಕ್ತಿ! ನನ್ನ ಸಾವೇ ಆ ಕಾಲದಲ್ಲಿ ವಿಜಯದ ಅದ್ದೂರಿ ಉತ್ಸವ! ಎಂಥ ಚೆಂದ! ಎಂಥ ಚೆಲುವು! ಎಂತಹ ಅಗಲ ಹೊಟ್ಟೆಯನ್ನು ನಾನಾಗ ಬೆಳೆಸಿರುತ್ತೇನೆಂದರೆ, ಎಂತಹ ಮಮ್ಮಡಿ ಗಲ್ಲವನ್ನು ನಾನಾಗ ಅರಳಿಸಿರುತ್ತೇನೆಂದರೆ, ಎಂತಹ ಅರವತ್ತಾರಿಂಚಿನ ಎದೆಯನ್ನು ನಾನು ಅಗಲಿಸಿರುತ್ತೇನೆಂದರೆ, ಎಂತಹ ಮಾಣಿಕ್ಯದ ಮೂಗನ್ನು ನಾನು ಗಳಿಸಿರುತ್ತೇನೆಂದರೆ, ನೋಡಿದವರೆಲ್ಲಾ ಪುನೀತರಾಗಿ ಕರಗಿ, “ಎಂಥಾ ಬಂಗಾರದ ಮನುಷ್ಯ! ಅವನೇ ಖರೇ ಪುಣ್ಯ ಪುರುಷ…” ಎನ್ನಲೇ ಬೇಕು. ನೀವೇನು ಬೇಕಾದರೂ  ಹೇಳಿ ಸಜ್ಜನರೇ ಈ ತಿಕ್ಕಲು ಯುಗದಲ್ಲಿ, ಇಂತಹ ಅಭಿಪ್ರಾಯಗಳನ್ನು ಕೇಳುವುದೇ  ತುಂಬಾ ಉಲ್ಲಾಸ ಪೂರ್ಣ.

-೬ –

ಅಯ್ಯೋ ಕತೆ…! ಅದೆಲ್ಲಾ ಕನಸುಗಳು ಸ್ವಾಮಿ; ಈಗ ಮತ್ತೊಂದು ಪ್ರಶ್ನೆ, ಮನುಷ್ಯ ನೀತಿಗೆಟ್ಟ ಕೃತ್ಯಗಳಲ್ಲೇ ಮುಳುಗುವುದು ಏಕೆಂದರೆ ಅವನಿಗೆ ತನ್ನ ನಿಜವಾದ ಹಿತಾಸಕ್ತಿಗಳ ಬಗ್ಗೆ ಕೊಂಚವೂ ಪರಿಜ್ಞಾನವಿಲ್ಲದೆ… ಹೀಗೆಂದು ಮೊದಲು ಸಾರಿದ ಮಹಾತ್ಮ ಯಾರು ಸ್ವಾಮಿ? ಒಮ್ಮೆ ಮನುಷ್ಯನ ಕಣ್ತೆರೆಯಿರಿ, ಅವನ ಸಹಜ ಆಸಕ್ತಿಯ ಹುಡುಕಿ ಕೊಡಿ, ಆಮೇಲೆ ನೋಡಿ, ಅವನು ಹೇಗೆ ಥಟ್ಟನೆ ರೂಪಾಂತರಗೊಳ್ಳುವನು; ಅವನಿಗೆ ಅನಿವಾರ್ಯವಾಗಿ ಬೇಕಾಗಿರುವುದು ಒಳ್ಳೆ ಮಾರ್ಗದಲ್ಲೇ ಸಾಗಿದಾಗ ಮಾತ್ರ ದಕ್ಕುವುದು ಎಂದು ಅರಿಯುತ್ತಿದ್ದ ಹಾಗೆಯೇ, ಒಂದು ಯಂತ್ರದಂತೆ   ಕರಾರುವಕ್ಕಾಗಿ ಆತ ಒಳ್ಳೆಯ  ಮನುಷ್ಯನಾಗಲೇಬೇಕು, ಬೇರೆ ದಾರಿ ಇಲ್ಲ;  ಇದು ಎಲ್ಲರಿಗೂ ಗೊತ್ತಿರುವ ವಿಷಯಗಳು ಅಲ್ಲವೆ? ಒಳ್ಳೆಯತನದಿಂದ ಭಾರಿ ಫಾಯಿದೆ ಇರುವಾಗ, ಮನುಷ್ಯ ಆ ಅವಕಾಶವನ್ನು ಕೈಚೆಲ್ಲಿ, ತನ್ನ ಹಿತಾಸಕ್ತಿಗೇ ವಿರುದ್ಧವಾಗಿ ವರ್ತಿಸುತ್ತಾನೆಯೇ? ನೀವೇ ಹೇಳಿ…

ಓಹ್ ಮರುಳೇ…? ಓಹ್ ಮುಗ್ಧ ಮರುಳು ಮಗುವೇ! ಮೊದಲು ಹೇಳು ಸಾವಿರಾರು ವರ್ಷಗಳ ಇತಿಹಾಸದಲ್ಲೆಲ್ಲಿ ಮನುಷ್ಯ ತನ್ನ ಒಳಿತಿಗಾಗಿ ಪ್ರಾಮಾಣಿಕವಾಗಿ ದುಡಿದಿದ್ದಾನೆ? ಅದೆಷ್ಟೋ ಮಂದಿ ತಮ್ಮ        ಹಿತವನ್ನೇ ಗೊತ್ತಿದ್ದು-ಗೊತ್ತಿದ್ದು ಅಲಕ್ಷಿಸಿ,  ಹಠಕ್ಕೆ ಬಿದ್ದು, ತೀರ ಗಂಡಾತರದ, ಅಸಂಗತ ಹಾದಿಯನ್ನು ಕತ್ತಲಲ್ಲಿ ಹುಡುಕಲು ಶ್ರಮಿಸಿರುವ  ಲಕ್ಷ-ಲಕ್ಷ ನಿದರ್ಶನಗಳಿವೆ.  ಯಾವ ಶಕ್ತಿಯ ಪ್ರೇರಣೆಯಿಲ್ಲದೇ,  ಈ ಸ್ವೇಚ್ಛಾಚಾರಿ ಹಠಮಾರಿಗಳು  ಬೇರೊಂದು ಹೊಸ ಅರ್ಥಹೀನ ಅಪಾಯಕಾರಿ ಹಾದಿಯನ್ನು ಆಯ್ದುಕೊಳ್ಳುತ್ತಾರೆ; ಇವರ ಸ್ವಹಿತಕ್ಕೆಂದೇ ಹುಟ್ಟಿರುವ, ಎಲ್ಲರೂ ನಡೆದು-ನಡೆದು ಸವೆದು ಹೋಗಿರುವ ಆ ಮಾಮೂಲಿ ಹಾದಿಯ ಬಗ್ಗೆ ಅಷ್ಟು ತಿರಸ್ಕಾರ ಈ ಜನಕ್ಕೆ. ಹಾಗಾದರೆ ಇವರಿಗೆ ನಿಜಕ್ಕೂ ತಮ್ಮ ಹಠ ಮತ್ತು ಸ್ವೇಛ್ಛಾಚಾರವೇ ಬೇರೆಲ್ಲ ಅನುಕೂಲಗಳಿಗಿಂತ ಹಿತವೆಂದಾಯಿತಲ್ಲ!

ಅನುಕೂಲ…!, ಹಿತಾಸಾಕ್ತಿ…! ಸ್ವಾಮಿ ದಯಮಾಡಿ ನನಗೆ ಈ ಪದಗಳ ನಿಜವಾದ ಅರ್ಥಗಳನ್ನು ತಿಳಿಸುತ್ತೀರ? ಹಾಗೆಯೇ ಮನುಷ್ಯನ ಹಿತಾಸಕ್ತಿ ಎಲ್ಲಿ ಅಡಗಿದೆ ಎಂದು   ಕರಾರುವಕ್ಕಾದ ಮಾಹಿತಿ ಕೊಡ್ಬಹುದ? ಈಗ ಅಪರೂಪಕ್ಕೊಮ್ಮೆ, ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಮನುಷ್ಯನ ಹಿತಾಸಕ್ತಿ, ಆತನಿಗೆ ಕೇಡು ಬಗೆಯುವ, ಆತನ ಅನುಕೂಲಗಳಿಗೆ ಬೆಂಕಿ ಹಚ್ಚುವ ಕಾಮನೆಗಳಲ್ಲಿ ಅಡಗಿರುವುದಿಲ್ಲವೇ? ಏನು? ಅಡಗಿರಬಹುದು ಎಂದಿರಾ? ಬಹುದು ಅಲ್ಲ ಗುರುಗಳೇ, ಅಲ್ಲೇ ಅಡಗಿರಲೇಬೇಕು! ಒಂದು ಪಕ್ಷ  ಇಂತಹ ಪ್ರಸಂಗ ಒಂದೇ ಒಂದು ಸಾರಿಯಾದರು ಘಟಿಸಿದ್ದರೂ, ಈ ಪ್ರಕರಣ ಒಂದೇ ಒಂದು ನಿಜದ ಮೂಲವಾಗಿದ್ದರೂ, ನೀವೆಲ್ಲ ಮನುಷ್ಯನ ಪರಮ ಅನುಕೂಲಗಳು, ಹಿತಾಸಕ್ತಿಗಳ ಬಗ್ಗೆ ಕಡಿದು ಗುಡ್ಡೆ ಹಾಕಿದ ಅಷ್ಟೂ ಸೂತ್ರ-ಸಿದ್ಧಾಂತಗಳು ಸೆಗಣಿಯ ದೊಡ್ಡಿಯಾಗುತ್ತವೆ ಅಷ್ಟೇ. ಏನಂತೀರ ಈಗ? ಅಂತಹಾ ಪ್ರಕರಣಗಳು ನಿಜಕ್ಕೂ ಅಸ್ತಿತ್ವದಲ್ಲಿವೆಯೇ? ಓಹ್! ನೀವು ನಗ್ತಾ ಇದ್ದೀರ; ಪರ್ವಾಗಿಲ್ಲ ನಗ್ರಪ್ಪ! ಆದರೆ ನನಗೆ ಉತ್ತರ ಕೊಡಿ: ಮನುಷ್ಯನ ಹಿತಾಸಕ್ತಿಗಳನ್ನು ಪರಿಪೂರ್ಣವಾಗಿ, ಯಾವ ಲೋಪದೋಷಗಳಿಲ್ಲದೆ ಎಣಿಕೆ ಮಾಡಿ, ನಿರೂಪಿಸಿದ್ದಾರ? ಹಾಗಾದರೆ ಯಾವ ವರ್ಗೀಕರಣಕ್ಕೂ, ಯಾವ ಎಣಿಕೆಗೂ ಸೇರದ, ನಿಲುಕದ ಕೆಲವು ವಿಚಿತ್ರ ಪ್ರಕರಣಗಳು ಇಲ್ಲವೋ? ವೈಜ್ಞಾನಿಕ, ಆರ್ಥಿಕ, ಸಾಮಾಜಿಕ, ಜಾಗತಿಕ ಇಂತಹ ಕೆಲವು ‘…ಕ’ಗಳ ಅಂಕಿ-ಅಂಶಗಳಿಂದ ಆಧಾರದಿಂದ ನೀವು ಮನುಷ್ಯನ ಹಿತಾಸಕ್ತಿಗಳ ತಾಳೆ  ನೋಡುತ್ತಿರುವಿರಿ. ನಿಮ್ಮ ಪ್ರಕಾರ ಹಿತಾಸಕ್ತಿಯೆಂದರೆ, ಸುಸ್ಥಿತಿ, ಐಶ್ವರ್ಯ, ಸ್ವಾತಂತ್ರ್ಯ, ಶಾಂತಿ ಇತ್ಯಾದಿ. ಆದರೆ ಈ ನಿಮ್ಮ ಲೆಕ್ಕಾಚಾರಗಳನ್ನೆಲ್ಲಾ ತಲೆಬುಡ ಮಾಡಿ ಬೇರೆ ಹಾದಿಯ ಆರಿಸುವ ಮಾನವನು ನಿಮ್ಮ ದೃಷ್ಟಿಯಲ್ಲಿ, ಹಾಗೆಯೇ ನನ್ನ ದೃಷ್ಟಿಯಲ್ಲೂ, ಒಬ್ಬ ಹುಚ್ಚ ಮತ್ತು ಅಪರಿಚಿತ, ಹೌದು ತಾನೆ? ಆದರೆ ಗಮ್ಮತ್ತು ನೋಡಿ, ಮಾನವಕುಲದ ಹಿತಾಸಕ್ತಿಯನ್ನು ನಿರೂಪಿಸುವ ಭರದಲ್ಲಿ ಈ ಅಂಕಿ-ಅಂಶ ತಜ್ಞರೂ ಬುದ್ಧಿವಂತರೂ, ಮನುಷ್ಯಕುಲದ ಪ್ರೇಮಿಗಳೂ ಒಂದು ಹಿತಾಸಕ್ತಿಯನ್ನು ಮರೆತಿರುವರು. ಯಾರೂ ಅದನ್ನು ಪರಿಗಣಿಸಬೇಕಾದ   ರೀತಿಯಲ್ಲಿ ಪರಿಗಣಿಸದೆ ಜಾಣಮರೆವಿನಲ್ಲಿ ಬಿಟ್ಟುಬಿಡುತ್ತಾರೆ. ಆದರೆ ಈ ಇಡೀ ಲೆಕ್ಕಾಚಾರದ ಬುಡ ಅವಲಂಬಿಸಿರುವುದೇ ಈ ಹಿತಾಸಕ್ತಿಯನ್ನು.

ಆ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಂಡು ಅದನ್ನು ಈ ಪಟ್ಟಿಗೆ ಸೇರಿಸುವುದರಲ್ಲೇನು ಅಂತಹ ಮಹಾ ಅಪಾಯವೇನೂ ಇಲ್ಲ.  ಆದರೆ ಸಮಸ್ಯೆ ಇರುವುದು ಅಲ್ಲಿಯೇ: ಯಾವ ವರ್ಗಕ್ಕೂ ಹೊಂದದ, ಯಾವ ಪಟ್ಟಿಗೂ ಸೇರದ ಒಂದು ಅತಿ ಮುಖ್ಯ, ಪ್ರಖ್ಯಾತ ಹಿತಾಸಕ್ತಿಯದು. ನನ್ನ ಸ್ನೇಹಿತನೊಬ್ಬ- ಅವನು ನಿಮಗೂ ಸ್ನೇಹಿತನೇ ; ಅವನ ಸ್ನೇಹ ಮಾಡದವರ್ಯಾರೂ ಇಲ್ಲ ಬಿಡಿ- ಯಾವ ವ್ಯಾಪರ-ವಹಿವಾಟೇ ಇರಲಿ, ಈತ ನಿಮಗೇ ಅತೀ ಅಚ್ಚುಕಟ್ಟಾಗಿ, ಸ್ಪಷ್ಟವಾಗಿ, ಕರಾರುವಕ್ಕಾಗಿ, ಹೇಗೆ ಮನುಷ್ಯರು ತರ್ಕ ಮತ್ತು ಸತ್ಯದ ವಿಧಿಗಳಿಗೆ ಅನುಗುಣವಾಗಿ ವರ್ತಿಸಬೇಕೆಂದು ವಿವರಿಸುತ್ತಾನೆ. ಅಷ್ಟೇ ಅಲ್ಲ; ಈತ ಅತೀ ಉತ್ಸುಕನಾಗಿ, ಒಳ್ಳೇ ಹುಕ್ಕಿಯಲ್ಲಿ ನಿಜವಾದ ಸಹಜ ಮನುಷ್ಯನ ಸಹಜ ಆಸಕ್ತಿಗಳ ಬಗೆ ಗಂಟೆಗಟ್ಟೆಲೆ ಮಾತನಾಡಬಲ್ಲ. ಸದಾಚಾರದ ಪ್ರಾಮುಖ್ಯತೆಯನ್ನು ಅರಿಯದೆ, ತಮ್ಮ-ತಮ್ಮ ಹಿತಾಸಕ್ತಿಗಳನ್ನೂ ತಿಳಿಯದ ನೀರಸ ಪೆದ್ದರನ್ನು, ಚೆನ್ನಾಗಿ ನಿಂದಿಸಿ ಉಗಿಯುವ ಅಭ್ಯಾಸವೂ ಈತನಿಗಿದೆ. ಆದರೆ ಇವೆಲ್ಲ ಸರಿಯಾಗಿ ಹದಿನೈದು ನಿಮಿಷಗಳು ಕಳೆಯುವ ತನಕ ಅಷ್ಟೇ; ಆಮೇಲೆ ಅವನ ಅವತಾರವೇ ಬದಲಾಗುತ್ತದೆ. ಯಾವ ಬಾಹ್ಯ ಪ್ರಚೋದನೆಗೂ ಬಲಿಯಾಗದೆ, ಇದ್ದಕ್ಕಿದ್ದಂತೆ ಉದ್ರೇಕಗೊಳ್ಳದೆ, ಒಳಗಿನ ಇಚ್ಛೆಯಿಂದ ಕೆರಳಿ, ತಾನು ಇಷ್ಟೊತ್ತು ಕೊಡುತ್ತಿದ್ದ ಪ್ರವಚನಕ್ಕೇ ಸಂಪೂರ್ಣವಾಗಿ ಬೆನ್ನು ಹಾಕಿ ತೀರ ವಿರುದ್ಧವಾಗಿರುವ ಹಾದಿ ಹಿಡಿಯುತ್ತಾನೆ;  ಈತ ಹೇಳುತಿದ್ದ ತಾರ್ಕಿಕ ವಿಧಿಗಳು ಮತ್ತು ತನ್ನ  ಹಿತಾಸಕ್ತಿಗಳ ವಿರುದ್ಧ, ಅಂದರೆ ಪ್ರತಿಯೊಂದರ ವಿರುದ್ಧ.  ಇಲ್ಲಿ ನಾನು ‘ಈತ’, ‘ಅವನು’,  ಎಂದು ಸಂಭೋದಿಸುತ್ತಿರುವ ವ್ಯಕ್ತಿಯಲ್ಲಿ ತಪ್ಪು ಹುಡುಕಲೇ ಬೇಡಿ, ಏಕೆಂದರೆ ಅವನ ಅಸ್ತಿತ್ವ ಇರುವುದು ಸಮುದಾಯದಲ್ಲಿ.  ಸಜ್ಜನರೇ ಇಲ್ಲಿ ನೀವು ಗಮನಿಸ ಬೇಕಾಗಿರುವ ವಿಷಯವಿಷ್ಟೇ: ಸತ್ಯವಾಗಿಯೂ ಎಲ್ಲ ವ್ಯಕ್ತಿಗಳಿಗೂ ತೀರ ಆಪ್ತವಾದ ಏನೋ ಒಂದು   ಖಂಡಿತವಾಗಿಯೂ  ಅಸ್ತಿತ್ವದಲ್ಲಿರಲೇ ಬೇಕು. ಆ ಏನೋ ಒಂದಿಗೋಸ್ಕರ ಈ ಮನುಷ್ಯ ತನ್ನ ಹಿತವನ್ನೇ ಬಲಿ ಕೊಡಲೂ ಹಿಂಜರಿಯಲಾರ. ನೀವೇ ಹೇಳಿ, ಅಂತಹ ಒಂದು ತೀರ ಅನುಕೂಲಕರವಾದ, ಯಾವ ನಿರೂಪಣೆಗೂ, ವರ್ಗೀಕರಣಕ್ಕೂ ನಿಲುಕದ, ಎಲ್ಲಕ್ಕಿಂತ ಮುಖ್ಯವಾದ, ಒಂದು ಹಿತಾಸಕ್ತಿಯಿಲ್ಲವೇ?(ಸದಾ ವಿಸರ್ಜಿಸಲ್ಪಡುವ ಹಿತಾಸಕ್ತಿಯದು; ಈಗ ಸ್ವಲ್ಪ ಹೊತ್ತಿನ ಮುಂಚೆಯಷ್ಟೇ ಅದರ ಬಗ್ಗೆ ಮಾತಾಡಿದ್ದೆವು). ಅದನ್ನು ದಕ್ಕಿಸಿಕೊಳ್ಳಲು ಮನುಷ್ಯ ಸಿಪಾಯಿಯಂತೆ ಹಠಾತ್ ಆಗಿ ಸಿದ್ಧನಾಗಬಲ್ಲ, ವಿವೇಚನೆಯ ವಿರುದ್ಧ ಸಾಗಬಲ್ಲ, ಯಾವ ರೀತಿರಿವಾಜುಗಳನ್ನೂ ಚಿಂದಿ ಮಾಡಬಲ್ಲ, ಮಾನಸಿಕ ಶಾಂತಿಯ ಕೊಲ್ಲಬಲ್ಲ, ಘನತೆ, ಸುಯೋಗಗಳ ತ್ಯಜಿಸಬಲ್ಲ. ಒಂದೇ ಪದದಲ್ಲಿ ಹೇಳುವುದಾದರೆ ಸೊಗಸು ಸೌಕರ್ಯಗಳನ್ನು, ಅನುಕೂಲಗಳನ್ನು, ಉಪಯುಕ್ತವಾದ ಪದಾರ್ಥಗಳನ್ನೆಲ್ಲ  ಬಿಟ್ಟುಕೊಟ್ಟು ಕೇವಲ ತನ್ನ ಆ ಮೂಲ ಹಿತಾಸಕ್ತಿಯನ್ನು ಸಂಪಾದಿಸಲು ಕಾತರನಾಗಿ ಭಗೀರಥ ಯತ್ನದಲ್ಲಿ ಮುಳುಗ ಬಲ್ಲ. ಅದೇ ಅವನಿಗೆ ಆಪ್ತವಾದ ಕರುಳುಬಳ್ಳಿ.

ಮುಂದುವರೆಯುವುದು … 

ಅನುವಾದ :  ಗೌತಮ್ ಜ್ಯೋತ್ಸ್ನಾ

ಚಿತ್ರ : ಮದನ್ ಸಿ.ಪಿ


ಟಿಪ್ಪಣಿಗಳು

*ಸತ್ಯ ಮತ್ತು ಪ್ರಕೃತಿಯ ಮನುಷ್ಯ, , L’homme de la nature et de la verite: ಇದು  ರೂಸೋನ ಆತ್ಮಚರಿತ್ರೆಯಾದ “Confessions” ಆರಂಭದ ಸಾಲುಗಳು. ಇಲ್ಲಿ ಆತ ತನ್ನನ್ನು ತಾನು ಸತ್ಯ ಮತ್ತು ಪ್ರಕೃತಿಯ ಮನುಷ್ಯ ಎಂದೇ ಚಿತ್ರಿಸಲು ಇಷ್ಟಪಡುತ್ತಾನೆ. ದಸ್ತಯೇವ್ಸ್ಕಿ ಇಲ್ಲಿ ರೂಸೋನನ್ನು ವ್ಯಂಗ್ಯವಾಡಲು ಈ ಸಾಲನ್ನು ಬಳಸಿದ್ದಾನೆ. ಮನುಷ್ಯ ನ್ಯಾಯ ಮತ್ತು ಧರ್ಮದ ವಿವರಣೆಗಳ ಮೊರೆ ಹೋಗಿ ತನ್ನ ತೆವಲುಗಳನ್ನು ಸಮರ್ಥಸಿಕೊಳ್ಳುತ್ತಾನೆ ಎಂಬುದು ದಸ್ತಯೇವ್ಸ್ಕಿಯ ಅಭಿಪ್ರಾಯ.

*ಮಹಾ ಚಿತ್ರಕಾರ ನಿಕೊಲಾಯ್ ಗೇ: ರಷ್ಯಾದ ಮಹಾ ಕಲಾವಿದ ಫ್ರಾನ್ಸ್ ಮೂಲದವನು. ಸೈಂಟ್ ಪೀಟರ್ಸ್ಬರ್ಗನ ಜನತೆಯನ್ನು – ದಸ್ತಯೇವ್ಸ್ಕಿಯನ್ನೂ ಸೇರಿಸಿ- ತನ್ನ ಏಸುಕ್ರಿಸ್ತನ ಕಲಾಕೃತಿಯ ಮೂಲಕ ಬೆಚ್ಚಿಸಿದವನು. ಇಲ್ಲಿ ಕ್ರಿಸ್ತನನ್ನು ದೇವಮಾನವನಂತೆ ಬಿಂಬಿಸದೆ, ದಿವಾಳಿಯೆದ್ದ, ಭಿಕಾರಿಯಾದ ಕಡು ಸಾಮಾನ್ಯ ಮನುಷ್ಯನಂತೆ ಚಿತ್ರಿಸಿದ್ದ.

“ನೀವಿಚ್ಛಿಸಿದಂತೆ”- ಮಿಕೆಲ್ ಸಾಲ್ಟಿಕೊವ್ ಬರೆದಿದ್ದ ಲೇಖನವನ್ನು ದಸ್ತಯೇವ್ಸ್ಕಿ ಇಲ್ಲಿ ನೆನೆಪಿಸಿಕೊಂಡಿರುವುದು. ಈತ ಲೇಖಕರ ಬದ್ಧ ವೈರಿ.


ಕಂತು ೧ : http://ruthumana.com/2018/10/14/notes-from-underground-part-1/

ಪ್ರತಿಕ್ರಿಯಿಸಿ