ಅಧೋ ಲೋಕದ ಟಿಪ್ಪಣಿಗಳು – ಕಂತು ೧ (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ)

೧೮೬೪ರಲ್ಲಿ ಫ್ಯೊದರ್ ದಾಸ್ತೋವೆಸ್ಕಿ ಬರೆದ ಕಿರು ಕಾದಂಬರಿ “Notes from Underground” ಅನ್ನು ಗೌತಮ್ ಜೋತ್ಸ್ನಾ “ಅಧೋ ಲೋಕದ ಟಿಪ್ಪಣಿಗಳು” ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ . ಋತುಮಾನದಲ್ಲಿ ಮುಂದೆ ಇದು ಹಲವು ಕಂತುಗಳಲ್ಲಿ ಪ್ರಕಟವಾಗುತ್ತದೆ .

ಫ್ಯೊದರ್ ಮಿಖೈಲೋವಿಚ್ ದಾಸ್ತೋವೆಸ್ಕಿ …

ಚಿತ್ರ : ಮದನ್ ಸಿ.ಪಿ

ದಸ್ತಯೇವ್‍ಸ್ಕಿ ಹುಟ್ಟಿದ್ದು 1821ನೆಯ ಇಸವಿ, ಮಾಸ್ಕೋದಲ್ಲಿ. ಹದಿ ಹರೆಯದಲ್ಲಿಯೇ ತಮ್ಮ ತಂದೆಯವರು ಜೀತದಾಳುಗಳಿಂದ ಹತರಾದ ವಾಸ್ತವನ್ನು ಎದುರಿಸಿದ ಇವರನ್ನು, ಮುಂದೆ ಸ್ಪೇಷ್ನೆವ್ (Speshnev) ನಾಯಕತ್ವದ ಗುಪ್ತ ಸಂಘಟನೆಯನ್ನು ಸೇರಿಕೊಂಡಿದ್ದರೆಂಬ ಒಂದೇ ಕಾರಣಕ್ಕೆ 1849ರಲ್ಲಿ ಬಂಧಿಸಲಾಯಿತು. ಆಗ ಪ್ರಥಮ ನಿಕೋಲಾಸ್‍ನ ಕಾಲ. ಆಗಲೇ ದಸ್ತಯೇವ್‍ಸ್ಕಿ ಅಕ್ಷರಶಃ ಸಾವಿನ ಮನೆಯ ಹೊಕ್ಕು ಬಂದದ್ದು. ಇನ್ನೇನು ಒಂದೇ ನಿಮಿಷದಲ್ಲಿ ಸೈನಿಕರ ಬಂದೂಕುಗಳು ಇವರನ್ನು ಸಿಡಿಸಬೇಕಿಂದಿರುವಾಗ ಮರಣದಂಡನೆಯನ್ನು ನಾಲ್ಕು ವರ್ಷಗಳ ಕಠಿನ ಸಜೆಯಾಗಿ ಮಾರ್ಪಾಡಿಸುವಂತೆ ತ್ಸಾರ್ (Tsar) ಘೋಷಿಸಿದ್ದ. ಹಾಗಾಗಿ ಮೃತ್ಯುವನ್ನು ಮುಟ್ಟಿ ಬಚಾವಾದ ದಸ್ತಯೇವ್‍ಸ್ಕಿಯವರ ಸೈಬೀರಿಯಾದ ಸೆರೆವಾಸ ಅಲ್ಲಿಂದ ಆರಂಭವಾಯಿತು. ಈಗಾಗಲೇ ಇವರು “Poor Folks”, “Double”, “White Nights” ನೀಳ್ಗತೆಗಳಿಂದ ರಷ್ಯಾದ ಸಾಹಿತ್ಯ ಲೋಕದಲ್ಲಿ ತಮ್ಮ ಮುದ್ರೆಯ ಮೂಡಿಸಿದ್ದರು. ಕ್ರೂರ ಸೆರೆವಾಸದಿಂದ ಬಿಡುಗಡೆಯಾಗಿ 1859ರಲ್ಲಿ ಪೀಟರ್ಸ್ ಬರ್ಗ್‍ಗೆ ಮರಳಿದ ಬಳಿಕ ಅವರು ಇನ್ನೂ ಪಕ್ವವಾಗಿದ್ದರು, ಈ ಲೇಖಕರ ಶ್ರೇಷ್ಟ ಮಹಾ ಕೃತಿಗಳು “Crime and Punishment”, “The Idiot”, “The Possesed”, “Brothers Karamazov” ಜೀವ ತಳೆದದ್ದು ಈ ಅವಧಿಯಲ್ಲಿಯೇ. ಮೂರ್ಛೆ ರೋಗ ಇವರನ್ನು ಚಿಕ್ಕ ಮಯಸ್ಸಿಂದಲೇ ಹಿಂಸಿಸಿತ್ತು. ಅದರ ಜತೆ ಜತೆಗೆ ಉನ್ಮಾದ ರೋಗ, ಭಾವೋದ್ವೇಗಗಳು, ಜೂಜಾಟದ ಚಟಗಳು ಇವರನ್ನು ನಜ್ಜುಗುಜ್ಜು ಮಾಡಿತ್ತು. ಇಷ್ಟೆಲ್ಲಾ ಮನೋವೈಪರಿತ್ಯಗಳಿಂದ ಛಿದ್ರವಾಗಿರುವ ವ್ಯಕ್ತಿ, ಆತ್ಮಹತ್ಯೆ ಮಾಡಿಕೊಳ್ಳದೆ ಬದುಕುವುದೇ ಮಹಾ ಸಾಧನೆ! ಆದರೆ ದಸ್ತಯೇವ್‍ಸ್ಕಿ ಇವನ್ನೆಲ್ಲಾ ನಿಭಾಯಿಸುತ್ತಾ ಒಂದು ಯುಗವನ್ನು ತಲ್ಲಣಿಸುವ ಕಾದಂಬರಿಗಳನ್ನು ಸೃಷ್ಠಿಸಿದ್ದಲ್ಲದೆ, ರಷ್ಯಾದ ಮಹಾ ಕ್ರಾಂತಿಯ ಸಂಧರ್ಭದಲ್ಲಿ ಒಬ್ಬ ಚೈತನ್ಯ ತುಂಬಿದ ಪರಾಕ್ರಮಿ ಪತ್ರಕರ್ತರಾಗಿ ‘ವ್ರೇಮ್ಯ’(ಕಾಲ’), ‘ಎಪೋಖ’(‘ಯುಗ’), ‘ಗ್ರಜ್ದನೀನ್’(ಪೌರ’) ಪತ್ರಿಕೆಗಳನ್ನು ತಂದರು. ಆ ಮೂಲಕ ತಮ್ಮ ವಾದಗಳನ್ನು ಸಮಾಜಕ್ಕೆ ಪರಿಚಯಿಸಿದರು. ಜರ್ಮನಿ, ಸ್ವಿಟ್ಸರ್ಲೆಂಡ್, ಇಟಲಿ, ಇಂಗ್ಲೆಂಡ್, ಆಸ್ಟ್ರೋ- ಹಂಗೇರಿ ದೇಶಗಳ ಸುತ್ತಿ ತಮ್ಮ ವಿಚಾರಗಳ ಓದುಗರೆದುರು ಬಿಚ್ಚಿಟ್ಟರು. ಅರವತ್ತನೆಯ ವಯಸ್ಸಿಗೆ ಈ ಮನುಷ್ಯ ಸತ್ತಾಗ ನೂರು ದಶಕಗಳು ನಂತರ ಓದಿದರೂ, ಬೆಚ್ಚಿಸುವ ಯಾರೂ ಅರಿಯದ ಅಮರ ಲೋಕವನ್ನು ತಮ್ಮ ಬರವಣಿಗೆಯಲ್ಲಿ ಕಟ್ಟಿ, ಬಿಟ್ಟು ಹೋಗಿದ್ದರು. ಆ ಲೆಕ್ಕದಲ್ಲಿ ದಸ್ತಯೇವ್‍ಸ್ಕಿಗೆ ಇಟಲಿಯ ಮಹಾಪ್ರಭೆ ಡಾಂಟೆ(1265-1321) ಸಾಟಿ ಎನ್ನಬಹುದೇನೋ.

ಅಧೋಲೋಕಕ್ಕೆ ಇಳಿಯುವ ಮುನ್ನ…

ಬುದ್ಧನ ಕುತ್ತಿಗೆ ಪಟ್ಟಿ ಹಿಡಿದು, ಅವನ ತುಟಿಗೆ ಬಲವಾಗಿ ಮುತ್ತಿಟ್ಟು, “ನಿನ್ನ ಸಿದ್ಧಾಂತ ಶುದ್ಧ ಸತ್ಯ” ಎಂದು ಹೇಳುವ ಛಾತಿ ಇರುವುದು ದಸ್ತಯೇವ್‍ಸ್ಕಿಗೆ ಮಾತ್ರ. ಬದುಕುತ್ತಲೇ, ಅರಿದೋ ಅರಿಯದೆಯೋ ಬುದ್ಧನ ದಾರಿಯಲ್ಲೇ ನಡೆದವರು ಇವರು. ತನ್ನ ಆತ್ಮಕ್ಕಾದ ವೈರುಧ್ಯಮಯ ನಿರ್ದಾಕ್ಷಿಣ್ಯ ಪ್ರಹಾರವನ್ನು ಪ್ರಾಮಾಣಿಕವಾಗಿ ಹೃದಯದ ಕೋಣೆ-ಕೋಣೆಯಿಂದ ಕಿತ್ತೆಸೆದು ಬರೆಯುತ್ತಿದ್ದ ದಸ್ತೇಯವಸ್ಕಿ ಅಪ್ಪಟ ಪ್ರಾಮಾಣಿಕ. ಈ ಯುಗದಲ್ಲಿ ಲೋಕಾತೀತ ಪುರುಷ ಹುಟ್ಟಿದರೆ, ಆತನನ್ನು ಜಗತ್ತು ಒಂದು ಹುಳದಂತೆ ಕಾಣುತ್ತದೆ ಎಂಬುದು ದಸ್ತಯೇವ್‍ಸ್ಕಿಯ ವಾದ. ಹಾಗಿದ್ದೂ ಮನುಷ್ಯನು ದಿವ್ಯಪುರುಷನಾಗಲೇ ಬೇಕು. ಸತತವಾಗಿ ಹುಳವು ಚಿಟ್ಟೆಯಾಗಲು ಯತ್ನಿಸಿದಂತೆ, ಮನುಜನು ಪದೇ-ಪದೇ ದೇವನಾಗಲೆಂದೇ ರೂಪಾಂತರಗೊಳ್ಳುತ್ತಿರಲೇಬೇಕು. ಆ ಹೋರಾಟದಲ್ಲಿ ಆತನು ಸತ್ತರೂ ಸರೀ, ಆ ಸಾವನ್ನು ಖುಷಿಯಲ್ಲೇ ಒಪ್ಪಬೇಕು ವಿನಃ ತನ್ನ ಪಥದಿಂದ ವಾಲಬಾರದು, ಎಂದೇ ನಂಬಿದ್ದರು ಇವರು. ಅದಕ್ಕೆ “Crime and Punishment” ಎಂಬ ವಿಸ್ಮಯದಲ್ಲಿ ರಸ್ಕೋನಿಕೋಲವ್ ಕೊಂದು ಬಂಧಿಯಾದರೂ, “ನನ್ನಂತಹ ‘ದಿವ್ಯಪುರುಷನೂ’ ಸಾಮಾನ್ಯನಂತೆ ಸೆರೆಯಾದೆನಲ್ಲ” ಎಂದು ದುಃಖಿಸುತ್ತಾನೆ. ಆದರೆ ತಾನು ಪಾಪ ಮಾಡಿದೆ, ಎಂದು ಪಶ್ಚಾತಾಪ ಪಡುವುದಿಲ್ಲ! ಹೀಗೆ ಪ್ರತಿ ಮನುಷ್ಯನು ತಾನೇ ಕಂಡುಕೊಳ್ಳುವ ಸತ್ಯಕ್ಕೆ ಅಂಟಿಕೊಂಡಿದ್ದರೆ ನಿಧಾನಕ್ಕೆ ಆತ ಮನುಷ್ಯ ಆಯಾಮದ ಮುಂದಿನ ಘಟಕ್ಕೆ ಜಿಗಿಯುತ್ತಾನೆ ಎನ್ನುವ ತತ್ತ್ವವನ್ನು ಈ ಹತ್ತೊಂಭತ್ತನೆಯ ಶತಮಾನದ ಬುದ್ಧ ಪ್ರತಿಪಾದಿಸಿದ್ದರು. ಇಂತಹ ದಿವ್ಯಪುರುಷ, ರಾಸ್ಕೋನಿಕೋಲವ್ ಒಂದು ಬಡ ಕುಟುಂಬದ ನೊಂದ ಯುವಕ. ಆತನ ತೊಳಲಾಟ ಹ್ಯಾಮ್ಲೆಟ್‍ನಂತೆಯೇ ವಿಕ್ಷಿಪ್ತ; ಆ ರಾಜಕುಮಾರನಂತೆಯೇ ಈತನೂ ತಾನೆಗಿಸಿದ ಕೊಲೆಗಳನ್ನೂ, ತನ್ನ ಪುಕ್ಕಲುತನವನ್ನೂ ಮಹಾ ತತ್ತ್ವಸಿದ್ಧಾಂತಗಳ ಮೂಲಕ ಅದುಮಿ ಹಾಕುತ್ತಾನೆ. ಆದರೆ ಹ್ಯಾಮ್ಲೆಟ್‍ಗೆ ಇದ್ದ ರಾಜಸೌಕರ್ಯ ರಾಸ್ಕೋನಿಕೋಲವ್‍ಗಿಲ್ಲ! ಅಮ್ಮ ತಂಗಿ ದುಡಿದು ಕಳುಹಿಸುವ ಹಣದಲ್ಲಿ ಜೀವನ ದೂಡುವ ದುರ್ದೈವಿ ಈತ. ತಾನು ಟೊಳ್ಳು ಫಿಲಾಸಫಿ ಭಾಷಣ ಹೊಡೆಯುತ್ತ, ಮನೆಯವರನ್ನೂ ತನ್ನನ್ನೂ ನರಕಕ್ಕೆ ತಳ್ಳುತ್ತಿದ್ದೇನೆ ಎನ್ನುವ ಸಂಕಟದಲ್ಲಿ ಒದ್ದಾಡುತ್ತಲೇ ಆ ಹಿಂಸೆಯನ್ನು ಸಹಿಸಿಕೊಳ್ಳುತ್ತಾನೆ. ಮಾರ್ಕ್ಸ್ ವಾದವನ್ನೇ ಇಲ್ಲಿ ದಸ್ತಯೇವ್‍ಸ್ಕಿ ಮಾರ್ಕ್ಸ್ ವಾದಕ್ಕಿಂತ ಪ್ರಬಲವಾಗಿ ವ್ಯಾಖ್ಯಾನಿಸಿರುವುದು! ಅದಕ್ಕೆ ಈ ಶತಮಾನ ಕಂಡ ಅದ್ಭುತ ಜ್ಞಾನಿ ಆಲ್ಬರ್ಟ್ ಕಮೂ, “ಹತ್ತೊಂಬತ್ತನೆಯ ಶತಮಾನದ ನಿಜ ಪ್ರವಾದಿ ದಸ್ತಯೇವ್‍ಸ್ಕಿ, ಕಾರ್ಲ್ ಮಾರ್ಕ್ಸ್ ಅಲ್ಲ…!” ಎಂದು ಘೋಷಿಸಿರುವುದು. ಫ್ರಾನ್ಜ್ ಕಾಫ್ಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದಸ್ತಯೇವ್‍ಸ್ಕಿ ನನ್ನ ರಕ್ತ ಸಂಬಂಧಿ…!”ಎಂದಿದ್ದ. ಏಕೆಂದರೆ ಜಗತ್ತನ್ನು ದಿಗ್ಭ್ರಮೆಗೊಳಿಸಿದ ಕಾಫ್ಕನ “ರೂಪಾಂತರ (The Metamorphosis)” ದಸ್ತಯೇವ್‍ಸ್ಕಿಯವರ ಆಲೋಚನಾಲಹರಿಗಳಿಂದ ದಟ್ಟವಾಗಿ ಉಧ್ಬವಗೊಂಡಿತ್ತು.

ಇನ್ನು “ಅಧೋ ಲೋಕದ ಟಿಪ್ಪಣಿ” ದಸ್ತಯೇವ್‍ಸ್ಕಿ ಸೈಬೀರಿಯಾ ಎಂಬ ಸಾವಿನ ಮನೆಯ ಸೆರೆವಾಸದಿಂದ ಬಿಡುಗಡೆಯಾಗಿ ಬಂದ ಎರಡು ವರುಷದಲ್ಲಿ ಬರೆದದ್ದು. ಈ ಲೇಖಕರು ಮುಂದಿನ ಎರಡು ದಶಕಗಳಲ್ಲಿ ಸಾಹಿತ್ಯ ಲೋಕದಲ್ಲಿ ಸೃಷ್ಟಿಸಿದ ವಿಸ್ಮಯಗಳಿಗೆ ಈ ಪುಸ್ತಕವೇ ಮೂಲ ಧಾತು. ಇಲ್ಲಿ “Crime and Punishement”, “The Idiot”, “The Possesed”, ಮತ್ತು “Brothers Karamazov” ಈ ಎಲ್ಲಾ ಮಹಾ ಕಾವ್ಯಗಳ ಅಸ್ತಿಪಂಜರವಿದೆ. ಒಬ್ಬ ನೊಂದ ಮನುಷ್ಯ, ಮುಗ್ಧ ಮಗುವಿನ ಹೃದಯದ ವ್ಯಕ್ತಿ ಸುಮ್ಮನೆ ಹುಚ್ಚು ಹಿಡಿದ ಬೇವರ್ಸಿ ಮುದುಕನ ಹಾಗೆ ವಟ-ವಟಗುಡುತ್ತಿದ್ದಾನೆ. ಮೊದಲು ಇದೊಂದು ಯಾವ ಉಪಯೋಗಕ್ಕೂ ಬರದ ಮತಿಹೀನ ಪುಕ್ಕಲನ ಪೊಳ್ಳು ನಿರರ್ಥಕ ಮಾತುಗಳಂತೆ ಕಂಡರೂ ನಿಧಾನಕ್ಕೆ ಈ ನುಡಿಗಳು ನವಯುಗದ ಪ್ರವಾದಿಯ ಭವಿಷ್ಯವಾಣಿಯಂತೆ ಪ್ರತಿಧ್ವನಿಸುತ್ತದೆ. ಯಾವ ನಿರೀಕ್ಷೆಯೂ ಇಲ್ಲದೆ ಬಾಲ ಏಸುವಿನ ಹಾಗೆಯೋ, ಬಾಲಕೃಷ್ಣನಂತೋ, ಜಗತ್ತಿನ ಜನರನ್ನು ಮುಕ್ತಿಗೊಳಿಸಲು ಹುಟ್ಟಿದ ಈ ಪ್ರವಾದಿಯು ಈ ಶತಮಾನದಲ್ಲಿ ಸುಲಭವಾಗಿ ಮೂಲೆಗುಂಪಾಗುತ್ತಾನೆ, ನಗೆಪಾಟಲಿಗೀಡಾಗುತ್ತಾನೆ, ದಮನಿತನಾದ ಈ ಪ್ರವಾದಿ ತನಗೆ ಸಿಗಬೇಕಾದ ಬೆಂಬಲಿಗರೂ, ಹಿಂಬಾಲಕರೂ ಸಿಗುತ್ತಿಲ್ಲವಲ್ಲ ಎಂಬ ಹತಾಶೆಯಲ್ಲಿ ಸೋಮಾರಿಯಾಗುತ್ತಾನೆ. ಜಗತ್ತು ಇವನ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ಇವನ ತತ್ತ್ವಗಳು ಯಾರನ್ನೂ ಮುಟ್ಟದೆ ಪಾತಾಳ ಸೇರಿದೆ. ಈ ಜನಗಳ ಮಧ್ಯೆ ಹೇಗೆ ತಾನು ಬದುಕಬೇಕೆಂದು ಈ ಶುದ್ಧ ಹೃದಯಿಗೆ ಅರ್ಥವಾಗುವುದಿಲ್ಲ. ಆದರೂ ತನ್ನನ್ನು ನಿಂದಿಸಿದ, ಹಿಂಸಿಸಿದ, ತಿರಸ್ಕರಿಸಿದ, ಅವಮಾನಿಸಿದ ಸಮಾಜದ ವಿರುದ್ಧ ಇವನ ಮಿದುಳಿನಲ್ಲಿ ಹಗೆ ಹುಟ್ಟುತ್ತದೆ. ಆದರೂ ತನ್ನ ವೈರಿಗಳನ್ನು ‘ಕ್ಷಮಿಸು’ತ್ತಾನೆ. ಆದರೆ ಇವನು ಕ್ಷಮಿಸಿದನೆಂದು ಅವರ್ಯಾರು ಇವನನ್ನು ನೋಡಿ ಅಚ್ಚರಿ ಪಡುವುದಿಲ್ಲ. ಬದಲಾಗಿ ಇವನನ್ನು ತಿಪ್ಪೆಗೆಸೆದು ತಮ್ಮ ಬೂಟಾಟಿಕೆ ಬದುಕನ್ನು ಆನಂದದಿ ಬದುಕುತ್ತಾರೆ. ಮನುಷ್ಯ ದೇವರನ್ನು ಎಸೆದು ಬದುಕುವಂತೆ. ಆಗ ಏನಾಗಬಹುದು? ಇವನು ಕೂತು ಅಳುತ್ತಾನೆ. ಅವರನ್ನು ದ್ವೇಷಿಸುವ ಆಸೆಯಾಗುತಿದ್ದೆಯಲ್ಲಾ ಎಂದು ಪಾಪ ಪ್ರಜ್ಞೆಯಲ್ಲಿ ನಲುಗುತ್ತಾನೆ. “…ಆದರೂ ಸತ್ಯದ ಬೆಳಕಿನಲ್ಲಿ ಮುಗ್ಧವಾಗಿ ಹುಟ್ಟಿ, ಸ್ವಾಭಾವಿಕವಾಗಿಯೇ ದೈವತ್ವದ ಸನ್ನಿಧಿಯಲ್ಲಿ ಬೆಳೆಯುತಿದ್ದ ನನ್ನನ್ನು ಏಕೆ ಬಲಾತ್ಕಾರವಾಗಿ ಈ ಜಗತ್ತು ಹೊಸಕಿ ಹಾಕಿತು. ಏಕೆ ನನ್ನಿಂದ ನನ್ನ ಶುಭ್ರತೆಯನ್ನು ಕಿತ್ತುಕೊಂಡಿತು. ನನ್ನ ಸಹಜ ವಿಸ್ಮಯಗಳನ್ನು ಉರಿಸಿಹಾಕಿತು…” ಎಂದು ಶೂನ್ಯದ ವಿರುದ್ಧ ದಂಗೆ ಏಳುತ್ತಾನೆ. ಈಗ ಅವನಲ್ಲಿ ಅಚ್ಚರಿಯಿಲ್ಲ; ದಿಗ್ಮೂಢನಾಗಿ, ಬದುಕಿಗೆ ಹೆದರಿ ತನ್ನ ನೆಲಮಾಳಿಗೆಯಡಿ ಬಂಧಿಯಾಗಿದ್ದಾನೆ. ಮುಂಚೆಯಿದ್ದ ಅತಿಮಾನುಷ ಜ್ಞಾನದ ಬೆಡಗು ಈಗ ಇವನಲ್ಲಿ ಮಾಯವಾಗಿದೆ. ಆ ಅಲೌಕಿಕ ಕೌತುಕದ ಬೆರಗಿನ ಬದಲು ಬರೀ ಉನ್ಮಾದ ರೋಗದ ದಿಗಿಲಿದೆ. ಇಂತಹ ಕಂಗೆಟ್ಟ ಪುರುಷೋತ್ತಮ ಹೇಗೆ ಮತ್ತೆ ನಷ್ಟವಾಗಿರುವ ದೇವಲೋಕವನ್ನು, ತನ್ನ ಅಧೋಲೋಕದಲ್ಲಿ ಸೃಷ್ಟಿಸಬಹುದು? ಹಿಂದಿನ ಸ್ವಪ್ರಚೋದಿತ ಕ್ರಿಯಾಶೀಲತೆ, ಈಗ ಇವನಲ್ಲಿ ಸತ್ತಿದೆ. ಬರೀ ಅವಮಾನದ ಹತಾಶೆಯಿದೆ. ದಮ್ಮಡಿಗೂ ಮಾರಲಾಗದ ಭಿಕನಾಸಿ ಸೇಡಿದೆ!

ತಾನು ಊಹಿಸಿದ ಸೂತ್ರಗಳ ಬಗೆಗೆ ತನಗೆ ಹೇಸಿಗೆಯಿದೆ. ಇಷ್ಟೆಲ್ಲಾ ಆದರೂ ಮತ್ತೆ, ಪಟ್ಟು ಬಿಡದೆ, ಬಲವಂತವಾಗಿಯಾದರೂ ಬದುಕಿಗೆ ತನ್ನನ್ನು ತಾನು ಒಡ್ಡಿಕೊಂಡು, ಸಮಾಜದೊಳಗೆ ಧುಮುಕಿ ಮತ್ತೆ ಕೈ ಜಾರಿದ್ದ ನಂದನವನ್ನು ತಾನೇ ತನ್ನ ಹೃದಯದೊಳಗೆ ಸಹಜವಾಗಿಯಲ್ಲವಾದರೂ, ಕಠಿಣ ಪರಿಶ್ರಮದಿ ಕಟ್ಟುವ ಆಶಯ ಈ ಅನಾಮಧೇಯ ಪ್ರವಾದಿಯದು. ಅವನಲ್ಲಿ ಮಗುವಿನ ಜೀವನ ಪ್ರೀತಿಯಿದೆ, ಮೃಗೀಯ ಲಾಲಸೆಗಳಿವೆ, ಅಸೂಯೆಯಿದೆ, ಧಿಗ್ಭ್ರಾಂತಿಯೇ ಇವನ ಬಿಸಿ ಉಸಿರಾಗಿದೆ, “ನನಗೆ ಏಕೆ ಈ ಗತಿ ಬಂತು, ಇದು ಅನ್ಯಾಯ…!” ಎಂದು ಕೂಗುತ್ತಾನೆ. ಆದರೆ ಪ್ರಕೃತಿ ಮಾತ್ರ ನಿರುತ್ತರ. ಮೌನದಲ್ಲಿ ತನ್ನ ಪಾಡಿಗಿದೆ. ಆಗ ಮತ್ತೆ ಸಿಟ್ಟಿಗೇಳುತ್ತಾನೆ. ಗಲಿಬಿಲಿಗೊಳ್ಳುತ್ತಾನೆ. ಮತ್ತೆ ಏನೋ ನೆನಪಾಗಿ ಎಲ್ಲವನ್ನೂ ಕ್ಷಮಿಸುತ್ತಾನೆ. ಮುಂದಿನ ಕ್ಷಣವೇ ದೊಡ್ಡ ವೇದಾಂತಿಯಂತೆ ಅತಿ ಚಿಕ್ಕವಯಸ್ಸಿನ ವೇಶ್ಯೆಯೆದುದು ಮಹಾ ಬೋಧನೆಯ ಮಾತುಗಳನ್ನಾಡುತ್ತಾನೆ. ಆ ಹುಡುಗಿ ಪಾಪ, ಇವನಿಗೆ ಶರಣಾಗಿ, ಸಂಪೂರ್ಣವಾಗಿ ಈ ಮನುಷ್ಯನನ್ನು,ಈತನ ತತ್ವಗಳನ್ನು ನಂಬಿ, ಈ ಅಪರಿಚಿತನ ಬಾಗಿಲಿಗೆ ಬಂದಾಗ ಅವಳನ್ನು ಹೀನ ಜಂತುವಂತೆ ಕಂಡು, ಅವಮಾನಿಸಿ, ಕಡೆಗೆ ಉನ್ಮಾದದಲ್ಲಿ ಒರಟಾಗಿ ಭೋಗಿಸಿ, ಬೇಕೆಂದೇ ತಾತ್ಸರದಿಂದ ದುಡ್ಡೆಸೆದು ಹೊರದಬ್ಬುತ್ತಾನೆ. ಹೀಗೆ ಉನ್ಮಾದ ಆಟ ತಾರಮಾರಿಯಾದಗಲೂ ಆಕೆಯ ಮೇಲೆ ಉತ್ಕಟ ಪ್ರೀತಿಯೂ ಅವನಲ್ಲಿರುತ್ತದೆ. ಆದರೆ ಅವನ ಪ್ರಕಾರ ಮನುಷ್ಯನಿಗೆ ಮುಕ್ತಿ ಸಿಗುವುದು, ಆತನನ್ನು ದೈವವೂ ಕೈ ಬಿಟ್ಟಾಗ ಮಾತ್ರ. ಅದಕ್ಕೆ ಮನಃಪೂರ್ವಕವಾಗಿಯೇ ವಿನಾಶದ ಹಾದಿ ಹಿಡಿಯುತ್ತಾ, ದೇವರಿಗೆ ಸವಾಲೆಸೆಯುತ್ತಾನೆ.

‘ಅಧೋಲೋಕದ ಟಿಪ್ಪಣಿಗಳು’ ಬಿಡುಗಡೆಯಾದದ್ದು 1864ರಲ್ಲಿ. ಆಗಲೇ ತನ್ನ ಸುತ್ತಮುತ್ತಲಿನ ಸಮಾಜವನ್ನು ಭಯಂಕರವಾಗಿ ಕ್ಷೋಭೆಗೊಳಿಸಿದ ಕೃತಿಯಿದು. ಇದು ಎಲ್ಲರ ನೈತಿಕ ಪಜ್ಞೆಯನ್ನು ಭಂಗಗೊಳಿಸುತ್ತದೆ ಎಂದು ಆ ಕಾಲದ ದೊಡ್ಡಮನುಷ್ಯರೂ, ಮಡಿವಂತರೂ ಊಹಿಸಿದ್ದರು. ಅಷ್ಟೇ ಏಕೆ, ಸ್ವತಃ ದಸ್ತಯೇವ್‍ಸ್ಕಿಗೇ ತನ್ನ ಈ ನೀಳ್ಗತೆಯನ್ನು ಓದುಗ ತಪ್ಪಾಗಿ ಗ್ರಹಿಸಿಬಿಟ್ಟರೆ, ಎನ್ನುವ ಭೀತಿಯಿತ್ತು! ಆದರೆ ಕಾಲಕಳೆದಂತೆ ಅಸ್ತಿತ್ವವಾದವನ್ನು ಹುಟ್ಟುಹಾಕಿದ ಉಗ್ರ ಚೆಲುವಿನ ಟಿಪ್ಪಣಿಗಳಿವು ಎನ್ನುತ್ತಾ ಬಹಳಷ್ಟು ಜನ ಈ ಪುಸ್ತಕವನ್ನು ಕೊಂಡಾಡಿದರು. ಹಾಗೇ ನೋಡಿದರೆ, ಇದನ್ನು ಅಸ್ತಿತ್ವವಾದದ ಜತೆಗೆ ಜೋಡಿಸುವುದಕ್ಕಿಂತ, ಈ ಕಾಲದ ಸಾಹಿತ್ಯಿಕ ಬೈಬಲ್ ಎನ್ನುವುದೇ ಸೂಕ್ತ. ಕ್ರಿಸ್ತ ಶಿಲುಬೆಗೇರಿ ರಕ್ತ ಸುರಿಸಿ ದೇಹವನ್ನು ಚೂರುಗೊಳಿಸಿದಂತೆ ಇಲ್ಲಿನ ಅನಾಯಕ ಕ್ರಿಸ್ತನಂತೆ ಸ್ವಯಂಸ್ಫೂರ್ತಿಯಿಂದ ಅಧೋಲೋಕದಲ್ಲಿ ಧುಮುಕಿ ತನ್ನ ಆತ್ಮವನ್ನು ಜೀವಂತವಾಗಿಟ್ಟಿದ್ದಾನೆ. ಆ ನಿಟ್ಟಿನಲ್ಲಿ ಟಾಲ್‍ಸ್ಟಾಯ್ ಮಹರ್ಷಿಯ, “ನಿನ್ನ ವೈರಿಗಳನ್ನು ಕ್ಷಮಿಸಿ ಅವರ ಒಳಿತಿಗೆ ಪ್ರಾರ್ಥಿಸು…” ಎನ್ನುವ ಸರಳವಾದವನ್ನು ಒಪ್ಪಲಾಗದವರ ಗಲಿಬಿಲಿಗೊಂಡ ಗುಂಪಿಗೆ ದಸ್ತಯೇವ್‍ಸ್ಕಿ ಪ್ರವಾದಿಯಾಗಿದ್ದಾರೆ. ಏಕೆಂದರೆ ಈ ಕಾಲಮಾನದಲ್ಲಿ ಎಲ್ಲವೂ ಕ್ಲಿಷ್ಟವಾಗುತ್ತಿದೆ. ಎಲ್ಲವೂ ಬೂದು ಬಣ್ಣದಲ್ಲಿದೆ. ಕಡ್ಡಿಮುರಿದಂತೆ ಹೀಗೆ ಮಾಡುವುದು ಸರಿ, ಇದೇ ದೇವರಿಗೆ ಪ್ರೀತಿ ಎಂದು ಘೋಷಿಸಿ ಬಿಡುವುದು, ಅದೂ ಸೂಕ್ಷ್ಮ ಗೊಂದಲದ ಮನಸ್ಸುಗಳಿಗೆ ಕಷ್ಟಸಾಧ್ಯ. ಆಗ ನಮಗೆ ಅಲ್ಲಿ ಬೆಳಕಿನ ಕಿಂಡಿಯಂತೆ ದಸ್ತಯೇವ್‍ಸ್ಕಿ ಸಾರಥಿಯಾಗುತ್ತಾರೆ. ಈ ಪುಸ್ತಕದಿಂದ ಮಾನಸಿಕವಾಗಿ ದಮನಿತರಾಗುತ್ತಿದ್ದ ಮಹಾ ನಾಸ್ತಿಕವಾದಿಗಳು ಸಮ್ಯಕ್ ಹಾದಿಯ ಕಂಡುಕೊಂಡರು. ಜರ್ಮನಿಯ ತತ್ವ ಶಾಸ್ತ್ರದ ಗಾರುಡಿಗ ನೀಚ್ಚ (Friedrich Nietzsche), “…ಇನ್ನೂ ನಾನು ಕಲಿಯುವುದೇನಾದರೂ ಇದ್ದರೆ ಅದು ಈ ಜಗತ್ತಿನ ಏಕೈಕ ಮಾನಸಿಕ ತಜ್ಞನಾದ ದಸ್ತಯೇವ್‍ಸ್ಕಿ ಯಿಂದ…” ಎಂದು ಸಾರಿದ್ದು, ಇದಕ್ಕೇ. “God cannot exist” ಎನ್ನುವ ಸಾಕ್ಷಾತ್ಕಾರದ ಲಹರಿಯಲ್ಲಿ ದೇವರ ಆದಿಯನ್ನು ಕೆತ್ತಿದ್ದ “The Myth of Sisyphus” ಪುಸ್ತಕದಲ್ಲಿ ಆಲ್ಬರ್ಟ್ ಕಮೂ ನಿಸರ್ಗದ ಮೌನವನ್ನು ಪ್ರತಿಭಟಿಸಿ ಬದುಕ ಬಯಸುವ ಮನುಜರೆಲ್ಲಾ ದಂಗೆ ಏಳುವುದರಲ್ಲೇ ಮುಕ್ತಿಯ ಕಾಣಬೇಕು ಅಂದಿದ್ದ. ದಾಸ್ತೋವೆಸ್ಕಿ ಯಿಂದ ಬಹಳಷ್ಟು ಕಲಿತಿದ್ದ. ಕಮೂ , ದಸ್ತಯೇವ್‍ಸ್ಕಿಯ ಆರುನೂರು ಪುಟದ “Crime and Punishment”ಅನ್ನು, ತನ್ನ ತೊಂಬತ್ತು ಪುಟದ ಭೀಥೋವನ್ನನ symphony ಹೋಲುವಂತಿದ್ದ “The Stranger”ಕಾದಂಬರಿಯಲ್ಲಿ(ಅದನ್ನು ಕೇವಲ ಕಾದಂಬರಿಯನ್ನಬಾರದು…ಅದೊಂದು ದಿಗಿಲು, ಮತ್ತು ಜ್ಞಾನೋದಯ!) ಪ್ರತಿಫಲಿಸಿದ್ದ. ‘‘ಅಧೋಲೋಕದ ಟಿಪ್ಪಣಿಗಳು ಇದರ ಇಪ್ಪತ್ತನೆಯ ಶತಮಾನದ ಪ್ರತಿಫಲನ ಕಮೂವಿನ ಬೆರುಗುಗೊಳಿಸುವ ಕಿರು ಕಾದಂಬರಿ “The Fall.” ಇಲ್ಲಿಯೂ ಒಬ್ಬ ಅನಾಯಕ ತನ್ನ ಮಿತಿಯನ್ನು ಮೀರಿ ಬದಕನ್ನು ಗ್ರಹಿಸುವ ಸಾಧನೆಯಲ್ಲಿ ನಿರತವಾಗಿದ್ದಾನೆ. ಅದೇ ಅಲ್ಲಿ ಅಧೋಲೋಕದಲ್ಲಿ, ಅನಾಮಧೇಯ ನಿರೂಪಕನ ಅಪರಿಚಿತ ದ್ವಂದ್ವಗಳು, ಅವನ ಅರಿವಿನಲ್ಲಿ ಘಟಿಸುವ ಯುದ್ಧಗಳು; ಅವು ಆರಂಭವಾಗುವುದೂ ಇಲ್ಲ, ಮುಗಿಯುವುದೂ ಇಲ್ಲ -ಆತ್ಮಕ್ಕೆ ಹುಟ್ಟೂ ಇಲ್ಲ ಸಾವೂ ಇಲ್ಲ ಎಂಬಂತೆ!- ದಸ್ತಯೇವ್‍ಸ್ಕಿಯ ನಂತರವೂ ಅವನ ಕೃತಿಗಳಿಂದ ಅಸಂಗತ ಬದುಕಿನ ವಿರುದ್ಧ ಸಿಡಿದೇಳುವ ವೀರರು ಮತ್ತೆ-ಮತ್ತೆ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಮನಸ್ಸಿಗೆ ಸ್ವಲ್ಪ ಸಮಾಧಾನ ನೀಡುತ್ತದೆ.

ಅಧೋಲೋಕದ ಟಿಪ್ಪಣಿಗಳನ್ನು ಓದಿದ ತಕ್ಷಣವೇ ನನಗೆ ದಿಗ್ಭ್ರಮೆಯಾಗಿತ್ತು. ಆ ಅಮಲಲ್ಲೇ ಕಳೆದುಹೋಗಿದ್ದ ನನ್ನನ್ನು ಎಬ್ಬಿಸಿ, ಅದೇ ಕೃತಿಯನ್ನು ಅನುವಾದ ಮಾಡುವಂತೆ ಉತ್ತೇಜನ ನೀಡಿದ್ದು ಗುರುಗಳಾದ ಡಾ. ನಟರಾಜ್ ಹುಳಿಯಾರ್ ಅವರು. ಅವರೇನಾದರೂ ಈ ಅವಕಾಶ ಕೊಡದಿದ್ದಲ್ಲಿ ದಸ್ತಯೇವ್‍ಸ್ಕಿಯೊಳಗೆ ಇಷ್ಟು ಆಳವಾಗಿ ಮುಳುಗಿ ಹೋಗಲು ಖಂಡಿತಾ ನನಗೆ ಆಗುತ್ತಿರಲಿಲ್ಲ. ನನ್ನಂತಹ amatureಅನುವಾದಕನಿಗೆ ಇಂತಹ ಮಹಾ ಜವಾಬ್ದಾರಿ ನೀಡಿ, ಒಂದು ಭವ್ಯ ಅನುಭವಕ್ಕೆ ನನ್ನನ್ನು ಒಡ್ಡಿದ ಹುಳಿಯಾರ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಮೇಷ್ಟ್ರು ಪಟ್ಟಾಭಿರಾಮ ಸೋಮಯಾಜಿಯವರು, ನಾನು ಹೊತ್ತಲ್ಲದ ಹೊತ್ತಲ್ಲಿ ಈ ಟಿಪ್ಪಣಿಗಳಿಂದ ಕಂಗೆಟ್ಟು ಫೋನ್ ಮಾಡಿದಾಗಲೆಲ್ಲ ಸಹಕರಿಸಿ, ಈ ಟಿಪ್ಪಣಿಗಳಲ್ಲಿ ವ್ಯಕ್ತವಾಗಿರುವ ವಾದಗಳನ್ನು ನನ್ನ ಮನಸ್ಸಿಗೆ ಒಗ್ಗಿಸಿದರು. ನಿಜಕ್ಕೂ ಅವರು ಆಗಾಗ ಮಾತನಾಡಿ ನನ್ನ ಗೊಂದಲ ನಿವಾರಿಸಿದಕ್ಕೆ ಈ ಅನುವಾದ ಸಾಧ್ಯವಾಯಿತು. ಅವರಿಗೆ ನನ್ನ ನಮಸ್ಕಾರ. ಹಾಗೆಯೇ ಸಂವೇದನಶೀಲ ಬರಹಗಾರರಾದ ಗಂಗಾಧರಯ್ಯ ನನ್ನ ಮೊದಲ ಡ್ರಾಫ್ಟ್ನಲ್ಲಿದ್ದ ತಪ್ಪುಗಳನ್ನು ಮನದಟ್ಟು ಮಾಡಿ ನಾನು ಬರೆಯುವ ಬಗೆಯನ್ನು ಇನ್ನಷ್ಟು ತೀವ್ರವಾಗಿಸಿದರು. ಅನುವಾದದಲ್ಲಿ ಭಾಷೆಗೆ ಇರಬೇಕಾದ ವಿದ್ಯುತ್ ಸಿಂಚನದ ಸಾಮರ್ಥ್ಯವನ್ನು, “ದೊರೆ ಈಡಿಪಸ್”, “ಪಾಪದ ಹೂವುಗಳು”, ಈ ಭಾವಾನುವಾದಗಳಲ್ಲಿ, ಗಾಬರಿಯಿಂದ ಕುತ್ತಿಗೆ ಕುಯ್ದುಕೊಳ್ಳುವಷ್ಟು ಅದ್ಭುತವಾಗಿ ಪ್ರತಿಧ್ವನಿಸಿರುವ ಪಿ.ಲಂಕೇಶ್ ಇವರಿಗೆ, ಈ ನನ್ನ ಅಮೇಟರ್ ಯತ್ನವನ್ನು ಅರ್ಪಿಸುತ್ತಿದ್ದೇನೆ.

ಗೌತಮ್ ಜ್ಯೋತ್ಸ್ನಾ

ಅಧೋ ಲೋಕದ ಟಿಪ್ಪಣಿಗಳು (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಕಿರು ಕಾದಂಬರಿಯ ಅನುವಾದ ) | ಕನ್ನಡಕ್ಕೆ :  ಗೌತಮ್ ಜ್ಯೋತ್ಸ್ನಾ

ಭಾಗ ೧ – ಭೂಗತ 

(ಈ ಲೇಖಕ ಹಾಗೂ ಇವನ ಈ ಟಿಪ್ಪಣಿಗಳು ಕಾಲ್ಪನಿಕವೇ, ಆ ಬಗ್ಗೆ ಯಾವ ಗುಮಾನಿಗಳೂ ಬೇಡ. ಹಾಗಿದ್ದರೂ ನಮ್ಮ ಸಮಾಜವನ್ನು ಹೆಣೆದ ಸನ್ನಿವೇಶಗಳನ್ನು ಗಮನಿಸಿದಾಗ ಈ ಟಿಪ್ಪಣಿಗಳ ಲೇಖಕನಂತಹ ವ್ಯಕ್ತಿಗಳು ಇದೇ ಸಮಾಜದಲ್ಲಿ ಅಸ್ತಿತ್ವದಲ್ಲಿ ಇರಬಹುದು ಎಂದಷ್ಟೇ ಅಲ್ಲ, ನಿಜಕ್ಕೂ ಅಸ್ತಿತ್ವದಲ್ಲಿ ಇರಲೇಬೇಕು ಎನ್ನಲಡ್ಡಿಯಿಲ್ಲ. ಯಾವಾಗಲೂ ಹೇಳುವುದಕ್ಕಿಂತಲೂ ವಿಶಿಷ್ಟವಾಗಿ ಇಲ್ಲಿ, ಈ ಕಾಲಾಮಾನದ ಪಾತ್ರವೊಂದನ್ನು ನಮ್ಮ ಜನರಿಗಾಗಿ ಚಿತ್ರಿಸಲು ಇಷ್ಟಪಟ್ಟಿದ್ದೆ. ಈ ಪಾತ್ರವು ಇನ್ನೂ ನಮ್ಮ ಜತೆಯೇ ಜೀವಂತವಾಗಿರುವ ಒಂದು ಜನಾಂಗದ ಪ್ರತಿನಿಧಿಯೇ ಸರಿ. ‘ಭೂಗತ’ ಎಂಬ ಹಣೆ ಪಟ್ಟಿ ಇರುವ ಈ ಭಾಗದಲ್ಲಿ ಈ ಮನುಷ್ಯ ತನ್ನ ಪರಿಚಯ, ದೃಷ್ಟಿಕೋನ ಹಾಗೂ ಆಸೆಗಳನ್ನು ವಿವರಿಸುವನು, ಹಾಗೆ ಹೇಳಬೇಕೆಂದರೆ, ಈ ಚಿತ್ರಣವು ಈ ಮಹಾಶಯ ನಮ್ಮ ನಡುವೆ ಅವತರಿಸಲು ಕಾರಣವಾದ – ಮತ್ತು ಅವತರಿಸಲೇ ಬೇಕಾಗಿ ಬಂದ ಪರಿಸ್ಥಿತಿಯ ವಿವರಣೆಯೂ ಹೌದು. ಎರಡನೆಯ ಭಾಗದಲ್ಲಿ ಬರುವ ಟಿಪ್ಪಣಿಗಳು ಈತನ ಬದುಕಿನಲ್ಲಿ ನಿಜಕ್ಕೂ ಆದ ಕೆಲ ಪ್ರಸಂಗಗಳ ಬಗ್ಗೆ…)

– ಲೇಖಕನ ಟಿಪ್ಪಣಿ

-೧-

ನಾನೊಬ್ಬ ಅಸ್ವಸ್ಥ… ಸೇಡಿನ ಮನುಷ್ಯ… ಕುರೂಪಿ, ಅದೇ ನಾನು. ನನ್ನ ಯಕೃತ್ತು ಕೆಟ್ಟಿದೆ, ಎಂಬ ದಟ್ಟ ಗುಮಾನಿ ನನಗೆ. ಆದರೆ ನನ್ನ ಈ ಕಾಯಿಲೆಯ ಬಗೆಗೆ ನನಗೇ ಏನೂ ಗೊತ್ತಿಲ್ಲ. ಒಟ್ಟಿನಲ್ಲಿ ಏನಾಗಿದೆ ನನಗೆ…? ಅದೂ ಗೊತ್ತಿಲ್ಲ.  ಆದರೆ ಇಲ್ಲಿಯ ತನಕ ಯಾವ ರೋಗಕ್ಕೂ ನಾನು ಚಿಕಿತ್ಸೆ ಪಡೆದಿಲ್ಲ, ಹಾಗೆಯೇ ಗುಣಮುಖನಾಗಲು ಎಂದಿಗೂ ವೈದ್ಯರ ಬಾಗಿಲನ್ನೂ ತಟ್ಟಿಲ್ಲ. ಇದರರ್ಥ ನನಗೆ ವೈದ್ಯರೆಂದರೆ ಮತ್ತು ವೈದ್ಯಕೀಯ ವಿಜ್ಞಾನವೆಂದರೆ ಅಸಡ್ಡೆ ಎಂದಲ್ಲ. ಇವೆಲ್ಲದರ ಬಗ್ಗೆ ಬಹಳ ಗೌರವವಿದೆ ನನಗೆ. ಅದೂ ಅಲ್ಲದೆ ಮಾತ್ರೆಗಳನ್ನು ಅಪಾರವಾಗಿ ಗೌರವಿಸುವಷ್ಟಾದರೂ ಕಡು ಅಂಧವಿಶ್ವಾಸಿ ನಾನು. (ನಾನು ತಕ್ಕಮಟ್ಟಿಗೆ, ಅಂದರೆ ಮೂಢನಂಬಿಕೆಯನ್ನು ಬೆಂಬಲಿಸದೇ ಇರುವಷ್ಟು ಶಿಕ್ಷಿತನೇ, ಆದರೂ ನಾನು ಅಂಧವಿಶ್ವಾಸಿ) ನಾನೊಬ್ಬ ಸೇಡಿನ ಮನುಷ್ಯನಾಗಿರುವುದಕ್ಕೇ ನನಗೆ ಯಾವ ಚಿಕಿತ್ಸೆಯೂ ಬೇಡ. ಇದೇಕೆ ಹೀಗೆ ಎಂದು ಅರಿಯಲು ನೀವೇನು ವಿಶೇಷ ಒಲವು ತೋರುವುದಿಲ್ಲ ಬಿಡಿ, ಅದು ನನಗೂ ಗೊತ್ತು. ಒಳ್ಳೆಯದೇ…. ನನ್ನ ಈ ಸೇಡಿನಿಂದ ಯಾರನ್ನು ನೋಯಿಸುತ್ತೇನೆ ಎಂದು ನಿಮಗೆ ವಿವರಿಸಲು ಖಂಡಿತವಾಗಿ ನನಗೆ ಸಾಧ್ಯವಿಲ್ಲ. ಈಗ ಆಸ್ಪತ್ರೆಯಲ್ಲಿ ನಾನು ಚಿಕಿತ್ಸೆ ಪಡೆಯದಿದ್ದರೆ ವೈದ್ಯರಿಗೇನೂ ನಷ್ಟವಾಗುವುದಿಲ್ಲ, ಅದನ್ನೂ ನಾನು ಚೆನ್ನಾಗಿ ಬಲ್ಲೆ. ಈ ಹಠದಿಂದ ನನಗೇ ಅಪಾಯ, ಬೇರೇ ಯಾರಿಗೂ ಅಲ್ಲ, ಎಂಬ ವಿಷಯವನ್ನಂತೂ ಮಿಕ್ಕೆಲ್ಲರಿಗಿಂತಲೂ ಉತ್ತಮವಾಗಿಯೇ ಅರಿತಿದ್ದೇನೆ. ಹಾಗಿದ್ದೂ ನಾನು ಚಿಕಿತ್ಸೆ ಪಡೆಯದೇ ಇದ್ದರೆ, ಅದು ಕೇವಲ ಸೇಡಿನಿಂದ ಮಾತ್ರ. ನನ್ನ ಯಕೃತ್ತು ಕೆಟ್ಟಿದೆ- ಒಳ್ಳೆಯದೇ, ಇನ್ನೂ ಕೆಡಲಿ, ಹಾಳಾಗಲಿ!

ಬಹಳ ವರುಷಗಳಿಂದ, ಅಂದರೆ ಕಳೆದ ಇಪ್ಪತ್ತು ವರುಷಗಳಿಂದ ನಾನು ಹೀಗೇ ಬದುಕುತ್ತಿದ್ದೇನೆ. ಈಗ ನನಗೆ ನಲ್ವತ್ತು. ಒಂದಾನೊಂದು ಕಾಲದಲ್ಲಿ ನಾನು ಸರಕಾರಿ ಸೇವೆಯಲ್ಲಿದ್ದೆ. ಈಗ ಆ ಕೆಲಸವನ್ನು ಬಿಟ್ಟಿದ್ದೇನೆ, ಅದು ಬೇರೆ ವಿಷಯ. ಆ ದಿನಗಳಲ್ಲೂ ನಾನು ಸೇಡಿನ ಸರಕಾರಿ ನೌಕರನಾಗಿದ್ದೆ. ನಾನು ಕ್ರೂರಿಯಾಗಿದ್ದರೂ ನನ್ನ ಕ್ರೌರ್ಯದಲ್ಲೇ ಸುಖ ಕಾಣುತ್ತಿದ್ದೆ. ಒಮ್ಮೆಯೂ ಲಂಚ ಮುಟ್ಟದವನು ನಾನು ಸ್ವಾಮಿ! ಅಪ್ಪಿತಪ್ಪಿ ಯಾವತ್ತೋ ಒಮ್ಮೆ ಏನಾದರೂ ಮಾಹಿತಿಗಾಗಿ ನನ್ನ ಮೇಜಿನ ಹತ್ತಿರ ಯಾರಾದರೂ ಬಂದಾಗ ಅವರನ್ನು ನೋಡಿದ ತಕ್ಷಣ ಸಿಡುಕಿ ಗುರ್ರೆನ್ನುತ್ತಿದ್ದೆ. ಅವರು ನಿರಾಶರಾಗಿ, ಹ್ಯಾಪ ಮೋರೆಯಲ್ಲಿ ವಾಪಸ್ಸು ಹೋದಾಗಲೆಲ್ಲಾ ನನಗೆ ಗೆದ್ದ ಖುಶಿ! ಈ ಹೆದರಿಸುವ ಆಟದಲ್ಲಿ ಹೆಚ್ಚುಕಮ್ಮಿ ನಾನು ತಪ್ಪದೇ ಸದಾ ಗೆಲ್ಲುತ್ತಿದ್ದೆ, ಏಕೆಂದರೆ ಹೀಗೆ ಬಂದವರಲ್ಲಿ ಬಹಳಷ್ಟು ಮಂದಿ ಪುಕ್ಕಲು ಹೃದಯಿಗಳು -ಹೌದು ಅವರೆಲ್ಲ ಅರ್ಜಿದಾರರು.- ಅಲ್ಲಿಗೆ ಬಹು ದರ್ಪದ ಖುಳಗಳು ಆಗಾಗ ದಯಮಾಡಿಸುತ್ತಿದ್ದರು. ಈ ಜನರಲ್ಲಿ ವಿಶೇಷವಾಗಿ ಒಬ್ಬ ಸೊಕ್ಕಿನ ಸೈನ್ಯಾಧಿಕಾರಿಯನ್ನು ನಾನು ತೀಕ್ಷ್ಣವಾಗಿ ದ್ವೇಷಿಸುತ್ತಿದ್ದೆ. ತನಗೆ ಹೇಳಿದ್ದನ್ನು ಮಾಡಲು ಹಿಂದೇಟು ಹಾಕಿ ತನ್ನ ಖಡ್ಗವನ್ನು ಡಬಡಬನೆ ಅಸಹ್ಯವಾಗಿ ನನ್ನೆದೆದು ಅಲುಗಿಸಿದ್ದನವನು. ನನಗೆ ಉರಿಯಿತು. ಅವನ ಹಾಗೂ ಅವನ ಹೊಳೆಯುವ ಖಡ್ಗದ ಮೇಲೆ ಯುದ್ಧ ಸಾರಿದೆ. ಒಂದೂವರೆ ವರುಷಗಳ ಕಾಲ ನಮ್ಮ ಜಟಾಪಟಿ ಸಾಗಿತು. ಕೊನೆಗೂ ಅವನನ್ನು ನಾನು ಸೋಲಿಸಿದೆ. ಅವನು ಮತ್ತೆ ತನ್ನ ಕತ್ತಿಯನ್ನು ಅಲ್ಲಾಡಿಸಲಿಲ್ಲ.

ಇದಾಗಿದ್ದು ನಾನಿನ್ನೂ ಯುವಕನಾಗಿದ್ದಾಗ, ಇರಲಿ. ಸಜ್ಜನರೇ ನಿಮಗೆ ನನ್ನ ಹಗೆಯ ಅಸಲು ರೂಪ ಗೊತ್ತೇ? ಅದೊಂದು ಅತ್ಯಂತ ಜಿಗುಪ್ಸೆ ಹುಟ್ಟಿಸುವ ವಿಷಯ. ನನ್ನ ಪಿತ್ತ ನೆತ್ತಿಗೇರಿಗಿದ್ದಾಗಲೂ, ನಾನೊಬ್ಬ ಸೇಡಿನ ಮನುಷ್ಯ, ಮನಸ್ಸು ಕೆಡಿಸಿಕೊಂಡ ಮನುಷ್ಯ ಎಂದು ತುಂಬಾ ನಾಚಿಕೆಯಲ್ಲಿ ಅರಿತಿದ್ದೆ. ಅಷ್ಟೇ ಅಲ್ಲ, ಸುಮ್ಮನೆ ತಮಾಷೆಗಾಗಿ ಗುಬ್ಬಚ್ಚಿಗಳನ್ನು ಹೆದರಿಸುವ ವಿಚಿತ್ರ ಜೀವಿಯೂ ನಾನೇ ಎಂಬ ಸತ್ಯವನ್ನೂ ತಿಳಿದಿದ್ದೆ. ನನ್ನ ಬಾಯಿಯ ಮೂಲೆಯಲ್ಲಿ ನೊರೆ ಸುರಿಯುತ್ತಿರಬಹುದು, ಆದರೆ ನೀವು ನನಗೆ ಪುಟ್ಟ ಬೊಂಬೆ ತಂದರೆ, ಸಕ್ಕರೆಯ ಸ್ಪರ್ಶವಿರುವ ಚಹಾ ಕೊಟ್ಟರೆ, ನನಗೆ ಸಮಾಧಾನವಾಗುತ್ತದೆ, ಹಾಗೇ ಗಾಢವಾಗಿ ಮಿಡಿಯುತ್ತೇನೆ; ಆಮೇಲೆ ಯಾಕಪ್ಪಾ ಅಷ್ಟು ಮೃದುವಾದೇ… ಅಂತ ನನ್ನನ್ನು ನಾನೇ ಉಗಿಯುತ್ತಾ, ನಾಚಿಕೆಯಲ್ಲಿ ಹಲ್ಲು ಕಡಿದುಕೊಂಡು ತಿಂಗಳಾನುಗಟ್ಟಲೆ ನಿದ್ರಾಹೀನತೆಯಿಂದ ಒದ್ದಾಡುತ್ತೇನೆ. ನಾನು ವರ್ತಿಸುವುದೇ ಹಾಗ್.

ಈಗಷ್ಟೇ ನಿಮಗೆ ಸುಳ್ಳು ಹೇಳಿದೆ ನಾನು. ನಾನೊಬ್ಬ ಸೇಡಿನ ಸರಕಾರಿ ನೌಕರನಾಗಿದ್ದೆ ಎಂದೆನೆಲ್ಲ, ಅದು ಸುಳ್ಳು, ಸೇಡಿನಿಂದ ಹೇಳಿದ ಸುಳ್ಳು. ಅರ್ಜಿದಾರರು, ಸೈನ್ಯಾಧಿಕಾರಿಗಳು… ಇವರ ಖಯಾಲಿಯಲ್ಲೇ ಮೈ ಬಿಸಿ ಮಾಡಿಕೊಳ್ಳುತ್ತಿದ್ದೆ ಅಷ್ಟೇ. ಸೇಡುಗಾರನಾಗಲೂ ನನ್ನಿಂದ ಆಗದು. -ನನ್ನೊಳಗೆ ಎಷ್ಟೆಷ್ಟೋ ಭಾವನೆಗಳು ಈಗ ಹೇಳಿದ ಸತ್ಯದ ವಿರುದ್ಧ ದಿಕ್ಕಿನಲ್ಲಿ ಹರಿಯುತ್ತಿರುವುದನ್ನು ನಿರಂತರವಾಗಿ ಗ್ರಹಿಸಿದ್ದೆ. ಇವು ನನ್ನೊಳಗೆ ನುಗ್ಗಿ ಚಿಮ್ಮುತ್ತಿದ್ದವು, ಈ ವೈರುಧ್ಯ ಭಾವನೆಗಳು ನನ್ನ ಜೀವನವಿಡೀ ಬೆಳೆಯುತ್ತಾ, ಬೆಳೆಯುತ್ತಾ, ಆಸ್ಪೋಟಿಸಲು ಹಟ ಮಾಡುತ್ತಿದ್ದವು. ಆದರೆ ನಾನು ಮಾತ್ರ ಇವುಗಳನ್ನು ಒಳಗೆ ಅದುಮಿಟ್ಟಿದ್ದೆ, ಉದ್ದೇಶಪೂರ್ವಕವಾಗಿಯೇ. ನನ್ನನ್ನು ಈ ಭಾವನೆಗಳು ಹೇಗೆಲ್ಲ ಬೇಯಿಸಿದ್ದವು ಅಬ್ಬಾ! ನನ್ನ ಬಗ್ಗೆ ನನಗೇ ನಾಚಿಕೆಯಾಗಿ, ನಡುಗಿ-ನಡುಗಿ ಕೊನೆಗೆ ನಾನೇ ಇವುಗಳಿಂದ ಸುಸ್ತಾಗುವ ತನಕವೂ ಕಾಟ ಕೊಡುತ್ತಲೇ ಇದ್ದವು. “ ಮನ್ನಿಸಿ ನನ್ನನ್ನು ಸಜ್ಜನರೇ” ಎಂದು ನಿಮ್ಮನ್ನು ನಾನು ಕೇಳಿದಂತೆ ಭಾಸವಾಗುತ್ತಿಲ್ಲವೇ? ಅಂದರೆ ನೀವು ನನ್ನನ್ನು ಏತಕ್ಕೋ ಕ್ಷಮಿಸಬೇಕೆಂದು ನಾನು ಬೇಡಿದಂತೆ… ನನಗೆ ಖಂಡಿತಾ ಗೊತ್ತು, ನಿಮಗೆ ಇದೆಲ್ಲಾ ಹಾಗೆ ತೋರುತ್ತಿದೆ… ಆದರೆ ನಿಜ ಹೇಳಬೇಕೆಂದರೆ ಹಾಗೆ ನಿಮಗಿದು ತೋರದಿದ್ದರೂ ನಾನೇನು ತಲೆ ಕೆಡಿಸಿಕೊಳ್ಳುವುದಿಲ್ಲ.

ಸೇಡಿನ ಹಕ್ಕಿ ಬಿಡಿ, ಬೇರೇ ಏನೂ ಆಗದೇ ಹೋದೆ ನಾನು; ಹ್ಞಾ…! ಮತ್ತೆ ಏನಾದರೂ ಆಗುವುದು ಹೇಗೆ ಎಂದು ಅರಿಯದ ವಡ್ಡ ನಾನು. ಕಟುಕ ಅಥವಾ ವಿಶ್ವಮಾನವ; ಲಫಂಗ ಅಥವಾ ಸಜ್ಜನ, ಪುರೋಷತ್ತಮ ಅಥವಾ ಹುಳ. ಈಗ ನನ್ನ ದಿನಗಳನ್ನು ನನ್ನದೇ ಆದ ಈ ಮೂಲೆಯಲ್ಲಿ ಬಿದ್ದುಕೊಂಡು ಬದುಕುತ್ತಿದ್ದೇನೆ, ಹಾಗೇ ಒಂದು ನಿರರ್ಥಕ ಹಾಗೂ ದುಷ್ಟ ಸಾಂತ್ವನದಿಂದ ನನ್ನನ್ನು ನಾನೇ ಹಂಗಿಸುತ್ತಾ. ಹತ್ತೊಂಭತ್ತನೆಯ ಶತಮಾನದ ಬುದ್ಧಿವಂತ ಮನುಷ್ಯ ಗಂಭೀರವಾಗಿ ಪ್ರಯತ್ನಿಸಿ ಏನನ್ನೂ ಕಡಿದು ಹಾಕಿ ದೊಡ್ಡ ಮನುಷ್ಯನಗಲಾರ. ಹಾಗೇನೇದರೂ ಆಗುವುದಿದ್ದರೆ ಅದು ಈ ಕಾಲದ ಮೂರ್ಖರು ಮಾತ್ರ! ಏಕೆಂದರೆ ಈಗ ಮೂರ್ಖರೇ ಮಹಾ ಸಾಧಕರು. ಇದೇ ಆ ನನ್ನ ಸಾಂತ್ವನ. ಹೌದು ಸ್ವಾಮಿ, ಹತ್ತೊಂಭತ್ತನೆಯ ಶತಮಾನದ ಬುದ್ಧಿವಂತ ಮನುಷ್ಯ ಮೂಲತಃ- ಕಡೇ ಪಕ್ಷ ನೈತಿಕತೆಗೆ ಕಟ್ಟುಬಿದ್ದಾದರೂ- ಚಾರಿತ್ರ್ಯವಿಲ್ಲದ ಒಂದು ಜಂತುವಾಗಿರಲೇಬೇಕು. ಅದೇ ಚಾರಿತ್ರ್ಯವಿರುವ ಒಬ್ಬ ಪ್ರಸಿದ್ಧ ವ್ಯಕ್ತಿ, ಮೂಲತಃ ತನ್ನ ಮಿತಿಗಳಿಗೆ ಅಂಟಿಕೊಂಡಿರುವ ಇನ್ನೊಂದು ಜಂತು. ಇದೇ ನನ್ನ ನಲ್ವತ್ತು ವರುಷಗಳ ಬದುಕಿನಲ್ಲಿ ಕಟ್ಟಿದ ಧೃಢ ನಿರ್ಧಾರ. ಅಂದ್ ಹಾಗೆ ಈಗ ನನಗೆ ನಲತ್ತಾಯಿತು. ನಲ್ವತ್ತು ವರುಷವೇ ಪೂರ್ಣ ಬದುಕು. ಇದೇ ಮುಪ್ಪಿನ ಪರಾಕಾಷ್ಠೆ! ಅಷ್ಟು ವಯಸ್ಸಾದ ಮೇಲೂ ಬದುಕುವುದೇ ಅಸಭ್ಯತೆ, ಅಶ್ಲೀಲತೆ, ಅನೈತಿಕತೆ. ನಲವತ್ತಾದರೂ ಬದುಕುವವರು ಯಾರು? ಪ್ರಾಮಾಣಿಕವಾದ ನಿಷ್ಕಪಟ ಮನಸ್ಸಿನಲ್ಲಿ ಉತ್ತರಿಸಿ. ಬೇಡ, ನಾನೇ ಉತ್ತರಿಸುತ್ತೇನೆ, ನಲವತ್ತಾದರೂ ಬದುಕುವುದು, ಪೆದ್ದರು ಹಾಗೂ ಕಳ್ಳರು ಮಾತ್ರ. ಈ ಮಾತನ್ನು ಆ ಎಲ್ಲಾ ಗೌರವಾನ್ವಿತ ಮುದುಕರ ಮುಖಕ್ಕೆ ರಾಚುವಂತೆ ಹೇಳುವೆ! ಬೆಳ್ಳಿ ಕೂದಲಿನ ಸುವಾಸನೆ ಬೀರುವ ಹಿರಿಯರಿಗೂ, ಹೀಗೇ ಉಗಿಯುವೆ. ಹೌದು, ಇದೇ ನುಡಿಮುತ್ತನ್ನು ಜಗತ್ತಿನ ಮುಖದೆದುರೂ ಕೂಡ ಅರಚುವೆ ! ಈ ಮಾತು ಹೇಳಲು ನನಗೆ ಸಂಪೂರ್ಣ ಹಕ್ಕಿದೆ ಏಕೆಂದರೆ, ನಾನು ಅರವತ್ತಾದರೂ ಬದುಕಿರುತ್ತೇನೆ. ಎಪ್ಪತ್ತಾದರೂ… ಎಂಭತ್ತಾದರೂ… ಒಂದು ನಿಮಿಷ ತಾಳಿ, ಉಸಿರಾಡುತ್ತೇನೆ.

ಸಜ್ಜನರೇ ಬಹುಶಃ ನಾನು ನಿಮ್ಮನ್ನು ನಗಿಸಲು ಯತ್ನಿಸುತ್ತಿದ್ದೇನೆ ಎಂದೇ ನೀವು ಯೋಚಿಸುತ್ತಿರಬೇಕು. ನೀವು ಅಲ್ಲಿಯೂ ತಪ್ಪಿದಿರಿ. ನೀವು ಎಣಿಸಿದ ಅಥವಾ ಬಹುಶಃ ಊಹಿಸಿದ ಆ ಸೊಗಸುಗಾರ ಪುಟ್ಟಸ್ವಾಮಿ ನಾನಲ್ಲ. ಅದೆಲ್ಲಾ ಬಿಡಿ, ಈಗ ನನ್ನ ಬುಡುಬುಡಿಕೆ ನಿಮ್ಮನ್ನು ಕೆರಳಿಸಿದರೆ – ನೀವು ಇಷ್ಟು ಹೊತ್ತಿಗಾಗಲೇ ತುಂಬಾ ಕೆರಳಿದ್ದೀರಿ ಎಂದು ನನಗೆ ಅನ್ನಿಸುತ್ತಿದ್ದೆ- ನನ್ನನ್ನು ನೇರವಾಗಿ ಕೇಳಿ, “ಮಹಾರಾಯ ನಿಜಕ್ಕೂ ಯಾರಪ್ಪ ನೀನು” ಎಂದು. ಆಗ ನಾನು ಉತ್ತರಿಸುವೆ, ಕೇಳಿ. ನಾನು ಮೊದಲು ಗುಮಾಸ್ತನಾಗಿ ಸರಕಾರಿ ಸೇವೆಯಲ್ಲಿದ್ದೆ. ತಿನ್ನಲೆಂದೇ ಈ ಕೆಲಸ ಮಾಡುತಿದ್ದೆ. ಹೋದ ವರುಷ ಯಾರೋ ಒಬ್ಬರು ದೂರದ ಸಂಬಂಧಿಕರು ಅರವತ್ತು ಸಾವಿರ ರೂಬಲ್ಲುಗಳನ್ನು ನನಗಾಗಿ ಬಿಟ್ಟು ಹೋಗಿದ್ದರು. ಅಷ್ಟೂ ನನ್ನ ವಶಕ್ಕೆ ಬಂದ ತಕ್ಷಣವೇ ಕೆಲಸ ಬಿಟ್ಟು ನನ್ನ ಮೂಲೆಯಲ್ಲೇ ಬೀಡು ಬಿಟ್ಟೆ. ಹಿಂದೆಯೂ ಈ ಮೂಲೆಯಲ್ಲಿ ಬದುಕಿದ್ದೆ ನಾನು, ಆದರೆ ಈಗ ಇದೇ ನನ್ನ ನೆಲೆ. ಕೊಳಕು ಕೋಣೆಯಿದು, ಪೇಟೆಯ ಆಚೆಯಿರುವ ರೌದ್ರತೆ. ಹಳ್ಳಿ ಕಡೆಯ ಮುದುಕಿಯೇ ನನ್ನ ಮನೆಗೆಲಸಕ್ಕೆ ಬರುವ ಸೇವಕಿ. ಬರೀ ಸೇಡಿನಿಂದ ಕೂಡಿದ ಹೆಂಗಸದು, ಏಕೆಂದರೆ ಅದು ಸದಾ ನಾರುವ ಪೆದ್ದಿ. ಇದಕ್ಕಿಂತ ಜಾಸ್ತಿ ಕೇಳಲು ಆಸೆಯೆ ನಿಮಗೆ ಅವಳ ಬಗ್ಗೆ? ಇಲ್ಲ ತಾನೇ, ಸರಿ; ಅದೆಲ್ಲ ಬಿಡಿ. ಜನ ಹೇಳುತ್ತಾರೆ, ಪೀಟರ್ಸ್‍ಬರ್ಗ್‍ನ ಹವೆ ನನ್ನನ್ನು ಕೆಡಿಸುತ್ತಿದೆಯೆಂದು, ನನ್ನಂತಹ ಎಡೆಬಿಡಂಗಿಗೆ ಪೀಟರ್ಸ್‍ಬರ್ಗ್‍ನ ಬದುಕು ಬಹು ದುಬಾರಿಯೆಂದು. ಆದರೆ ನನಗೆ ಇದೆಲ್ಲಾ ಗೊತು… ಆ ಚುರುಕು ಬುದ್ಧಿಯ ಅನುಭವಿ ಮಂತ್ರಿಗಳಿಗಿಂತಲೂ, ತಲೆಹರಣೆ ಜಾಣರಿಗಿಂತಲೂ ಚೆನ್ನಾಗಿಯೇ ಗೊತ್ತು. ಆದರೂ ನಾನು ಇಲ್ಲೇ ಯಾವಾಗಲೂ! ಏನೇಆಗಲಿ ಪೀಟರ್ಸ್‍ಬರ್ಗನ್ನು ಮಾತ್ರ ಬಿಡುವುದಿಲ್ಲ. ! ಏಕೆ ಬಿಡುವುದಿಲ್ಲವೆಂದರೆ… ಆಹ್! ನಾನು ಇದನ್ನು ಬಿಡಲಿ, ಬಿಡದೆ ಇರಲಿ, ಅದರಿಂದ ಯಾರಪ್ಪನ ಅರಮನೆಯೂ ಹೊತ್ತಿ ಉರಿಯುವುದಿಲ್ಲ ಅಲ್ಲವೇ?. ಇರಲಿ, ಒಬ್ಬ ಪ್ರಾಮಾಣಿಕ ಮನುಷ್ಯ ಯಾರ ಬಗ್ಗೆ ಪರಮಾನಂದದಿಂದ ಮಾತನಾಡುತ್ತಾನೆ?

ಉತ್ತರ: ತನ್ನ ಬಗ್ಗೆ.

ಹಾಗಾಗೀ ನಾನು ಸಹ ನನ್ನ ಬಗ್ಗೆ ಮಾತ್ರ ಮಾತನಾಡುತ್ತೇನೆ.


ಋತುಮಾನ ಆಂಡ್ರಾಯ್ಡ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ .
http://bit.ly/2NlWnRP

 


-೨ –
ಸಜ್ಜನರೇ, ಈಗ ನಾನೇಕೆ ಕೀಟವಾಗಲಿಲ್ಲ ಎಂದು ನಿಮಗೆ ಹೇಳಲು ಇಚ್ಛಿಸುವೆ. ನಿಮಗೆ ಕೇಳಲು ಇಷ್ಟವಿರಲಿ ಇಲ್ಲದಿರಲಿ. ಹೌದು, ನನಗೆ ಕೀಟವಾಗುವ ಆಸೆಯಿತ್ತು, ಈ ಮಾತನ್ನು ಬಹಳ ಗಂಭೀರವಾಗಿಯೇ ಹೇಳುತ್ತಿದ್ದೇನೆ. ಆದರೆ ನನ್ನಿಂದ ಕೀಟವಾಗಿ ರೂಪಾಂತರವಾಗಲೂ ಆಗಲಿಲ್ಲ. ಸಜ್ಜನರೇ, ಪ್ರಮಾಣ ಮಾಡಿ ಹೇಳುತ್ತೇನೆ, ಎಲ್ಲ ವಿಷಯಗಳನ್ನು ಜಾಸ್ತಿ ಅರಿತಿರುವುದೇ ಒಂದು ಕಾಯಿಲೆ; ಶುದ್ಧ, ಅಪ್ಪಟ ಕಾಯಿಲೆ. ಈ ಜನರು, ತಮ್ಮ ಅನುದಿನದ ಕಾರುಬಾರುಗಳಿಗೆ, ಈ ದುಃಖಿತ ಹತ್ತೊಂಭತ್ತನೆಯ ಶತಮಾನದ ವಿಕಾಸಗೊಂಡ ವ್ಯಕ್ತಿಯಲ್ಲಿ ಯಥೇಚ್ಛವಾಗಿರುವ ಅರಿವಿನ ಅರ್ಧ ಅಥವಾ ಕಾಲು ಭಾಗ,(ಹೋಗಲಿ ಶೇಕಡಾ ಹತ್ತರಷ್ಟು) ಹೊಂದಿದ್ದರೆ ಅದೇ ಬೇಕಾದಷ್ಟು. ವಿಶೇಷವಾಗಿ ಈ ಪೀಟರ್ಸ್‍ಬರ್ಗಿನಲ್ಲಿ ಬೀಡು ಬಿಡುವ ದುರಂತ ಹಣೆಬರಹಕ್ಕೆ ಕತ್ತು ಕೊಟ್ಟ ಒಬ್ಬ ವಿಕಾಸಗೊಂಡ ವ್ಯಕ್ತಿಯ ಬಗ್ಗೆ ನಾನಿಲ್ಲಿ ಹೇಳುತ್ತಿರುವುದು. ಈ ಪೀಟರ್ಸ್‍ಬರ್ಗ್ ಇಡೀ ಭೂಮಂಡಲದಲ್ಲೇ ಅತ್ಯಂತ ತಾತ್ವಿಕವಾಗಿಯೂ, ಉದ್ದೇಶ ಪೂರ್ವಕವಾಗಿಯೂ ಇರುವ ನಗರ(ಹೌದು, ಜಗತ್ತಿನಲ್ಲಿ ಉದ್ದೇಶ ಪೂರ್ವಕವಾಗಿರುವ ಮತ್ತು ಉದ್ದೇಶ ಪೂರ್ವಕವಾಗಿಲ್ಲದ ನಗರಗಳಿವೆ.) ಈಗ, ದೃಢ ಮನಃಸ್ಥಿತಿಯ ಸ್ವಪ್ರಚೋದಿತ ವ್ಯಕ್ತಿಗಳು ಎಂಬ ಹಣೆಪಟ್ಟಿ ಹೊತ್ತ ಮನುಷ್ಯರಷ್ಟು ಎಲ್ಲರೂ ಪ್ರಜ್ಞಾವಂತರಾದರೆ ಅದೇ ಧಾರಾಳ. ಈಗ ನೀವು ಯೋಚಿಸುತ್ತಿದ್ದೀರಿ, ನಾನು ಇವನ್ನೆಲ್ಲಾ ಬರೆಯುತ್ತಿರುವುದು, ಈ ದೃಢ ಮನಃಸ್ಥಿತಿಯ ಸ್ವಪ್ರಚೋದಿತ ವ್ಯಕ್ತಿಗಳನ್ನು ಉಡಾಫೆಯಲ್ಲಿ ತಮಾಷೆ ಮಾಡಲು, ನನ್ನ ಬೆನ್ನನ್ನು ನಾನೇ ದುರಹಂಕಾರದಲ್ಲಿ ತಟ್ಟಿಕೊಳ್ಳಲು, ಆ ಅಧಿಕಾರಿಯಂತೆ ನನ್ನ ‘ಖಡ್ಗವನ್ನು’ ಜಳಪಿಸಲು, ಎಂದು. ಆದರೆ ತನ್ನ ದೌರ್ಬಲ್ಯಗಳನ್ನೇ ಹೊಗಳಿ, ಅವನ್ನೇ ವೈಭವೀಕರಿಸುವುದೆಲ್ಲ ಬಿಟ್ಬಿಡಿ ಗುರುಗಳೇ… ಯಾರು ತಾನೆ ಅವನ ದೌರ್ಬಲ್ಯಗಳನ್ನು ಅವನಾಗಿಯೇ ಒಪ್ಪಿಕೊಳ್ಳುತ್ತಾನೆ?

ಚಿತ್ರ : ಮದನ್ ಸಿ.ಪಿ

ಆದರೆ ನಾನೇ ಏಕೆ… ಎಲ್ಲರೂ ಮಾಡುವುದು ಇದನ್ನೇ; ಜನರಿಗೆ ತಮ್ಮ ದೌಬರ್ಲ್ಯಗಳೆಂದರೆ ಹೆಮ್ಮೆಯೇ, ಬಹುಶಃ ಆ ನಿಟ್ಟಿನಲ್ಲಿ ಎಲ್ಲರಿಗಿಂತಲೂ ಜಾಸ್ತಿ ನಾನು ನನ್ನ ದೌಬರ್ಲ್ಯಗಳ ಬಗ್ಗೆ ಹೆಮ್ಮೆ ಪಡುತ್ತೇನೆ. ಈ ವಿಚಾರದ ಬಗ್ಗೆ ವಾದ ಬೇಡ. ನನ್ನ ವಾದವೇ ಅಸಂಗತ. ಇವೆಲ್ಲವನ್ನೂ ಬದಿಗಿಟ್ಟು ನೋಡಿದಾಗಲೂ ನಾನು ಒತ್ತಿ ಹೇಳುವುದು ಇಷ್ಟೇ, ಅತಿಯಾದ ಅರಿವಿನ ಜತೆಜತೆಗೆ ಯಾವ ಬಗೆಯ ಅರಿವೂ ಕೂಡ ಸತ್ಯವಾಗಿಯೂ ಒಂದು ಕಾಯಿಲೆಯೇ. ನನಗಿದು ಖಾತ್ರಿಯಾಗಿದೆ. ಸ್ವಲ್ಪ ಹೊತ್ತು ಇದನ್ನು ಮರೆಯೋಣ. ಕೆಲವು ಸಲ ಹೀಗೆ ಆಗಿತ್ತು ನನಗೆ. ಎಲ್ಲ “ಅದ್ಭುತ ಚೆಲುವಿನ”*(ಒಂದಾನೊಂದು ಕಾಲದಲ್ಲಿ ಅವರು ಹೇಳುತ್ತಿದ್ದಂತೆ) ಶುದ್ಧತೆಯನ್ನು ಮೆಚ್ಚಲು ನಾನು ಶಕ್ತನಾಗಿದ್ದಾಗಲೇ ನನ್ನ ವಿಚಿತ್ರ ಮನಃಸ್ಥಿತಿಯ ಪರಿಚಯ ನನಗಾಗಿದ್ದು. ಈ “ಅದ್ಭುತ ಚೆಲುವನ್ನು” ಮೆಚ್ಚುವ ಶಕ್ತಿಯೇನೋ ನನ್ನಲ್ಲಿತ್ತು, ಆದರೆ ಆ ಸಂಧರ್ಭಕ್ಕೆ ಚೂರೂ ಹೊಂದದ ವಿಕಾರ ಕೃತ್ಯಗಳನ್ನು ಎಸಗಲೂ… ಅಂದರೆ, ಒಂದೇ ಪದದಲ್ಲಿ ಹೇಳುವುದಾದರೆ ಅಂತಹಾ ಕೃತ್ಯಗಳನ್ನು ಎಲ್ಲರೂ ಎಸಗುತ್ತಾರೆ ಬಿಡಿ, ಅದೆಲ್ಲ ಗೊತ್ತಿಲ್ಲದೆ… ಆದರೆ ನಾನು ಬೇಕು-ಬೇಕೆಂದೇ ಆ ಕ್ರಿಯೆಗಳನ್ನು ಆಗ ‘ನೆರೆವೇರಿಸುತ್ತಿದ್ದೆ’. ಆ ಘಳಿಗೆಯಲ್ಲೂ ನನಗೆ, ಇವೆಲ್ಲಾ ಈ ಸಮಯದಲ್ಲಿ ನನ್ನಿಂದ ಆಗಲೇಬಾರದು ಎಂಬ ಅರಿವೂ ಇತ್ತು. ಹಾಗೆಯೇ ಒಳಿತು ಮತ್ತು ಎಲ್ಲ ಅದ್ಭುತ ಚೆಲುವಿನ* ಬಗ್ಗೆ ನನ್ನ ಅರಿವು ಜಾಗೃತವಾದಷ್ಟು, ನನ್ನದೇ ರಾಡಿಯಲ್ಲಿ ಇನ್ನಷ್ಟು ಆಳಕ್ಕೆ ಜಾರಿದ್ದೆ; ಅಲ್ಲೇ ಸಂಪೂರ್ಣವಾಗಿ ಮುಳುಗಲು ಸಿದ್ಧನಾಗಿದ್ದೆ. ನಾನು ಹಾಗೆ ಮಾಡಿದ್ದು ಆಕಸ್ಮಿಕವಾಗಿಯಲ್ಲ; ಆದರೆ ಹಾಗಿರುವುದೇ ಸರಿ, ಇದೇ ಉಚಿತ ಎಂದು ನನಗೆ ತೋರಿತ್ತು, ಖಂಡಿತವಾಗಿಯೇ ಇದೇ ನನ್ನ ಸಹಜ ಸ್ಥಿತಿಯೇ ಹೊರತು ಯಾವ ಕಾಯಿಲೆಯೋ ಅಥವಾ ಪುಡಿಪುಡಿ ಮಾಡುವ ಚಟವಲ್ಲವೆಂಬಂತೆ. ಅಂತೂ ಕೊನೆಗೆ ಈ ಚಟದ ವಿರುದ್ಧ ಹೋರಾಡುವ ಹಂಬಲವೂ ಮಾಯವಾಯಿತು. ಹಾಗೆಯೇ ಕೊನೆಗೆ ಇದೇ ನನ್ನ ಸಹಜ ಸ್ಥಿತಿ ಎಂದು ನಾನು ಬಹುಶಃ ನಂಬಿದ್ದೆ, ಬಹುಶಃ ಏನು ಸಂಪೂರ್ಣವಾಗಿಯೇ ನಂಬಿದ್ದೆ. ಆದರೆ ಮೊದ-ಮೊದಲು ಈ ಹೆಣಗಾಟದಲ್ಲಿ ನಾನೆಷ್ಟು ಬೆಂದಿದ್ದೆ! ಬೇರೆ ಜನರಿಗೂ ಹೀಗೇ ಆಗಿತ್ತೋ ಇಲ್ಲವೋ ಎಂಬ ಗುಮಾನಿಯಿತ್ತು ನನ್ನಲ್ಲಿ. ಅದಕ್ಕೆ ಈ ವಿಷಯವನ್ನು ಜೀವನಪರ್ಯಂತ ನನ್ನೊಳಗೆ ಬಚ್ಚಿಟ್ಟೆ, ಒಂದು ರಹಸ್ಯವಾಗಿ. ಹಿಂದೆಲ್ಲಾ ನಾರುವ ಕೆಲವು ಪೀಟರ್ಸ್‍ಬರ್ಗ್ ರಾತ್ರಿಗಳಲ್ಲಿ, ನನ್ನ ಮೂಲೆಗೆ ಮರಳಿದಾಗ ನನ್ನೊಳಗಿನ ಅರಿವು ಜಾಗೃತವಾಗಿ, ಆ ದಿನ ಮತ್ತೆ ಮಾಡಿದ್ದ ಯಾವುದೋ ಹೇಸಿಗೆಯ ಕೆಲಸದ ನೆನಪು ಉರಿಸುತ್ತಿರುವಾಗ, ನನ್ನ ಕರ್ಮದ ನೆರಳನ್ನು ಇನ್ನೆಂದಿಗೂ ಅಳಿಸಲಾಗುವುದಿಲ್ಲ ಎಂದೂ ಚೆನ್ನಾಗಿ ತಿಳಿದಿರುತ್ತಿದ್ದೆ. ಆ ನಂತರ ರಹಸ್ಯವಾಗಿ, ಮೌನವಾಗಿ, ನನ್ನ ಹಲ್ಲನ್ನು ಕಡಿಯುತ್ತಾ ನನ್ನ ಮನಸ್ಸಿಗೆ ಸಾಕಷ್ಟು ಕಿರಿಕಿರಿ ಮಾಡಿ, ನನ್ನನ್ನು ನಾನೇ ಕಟುವಾಗಿ ನಿಂದಿಸಿ, ವಿಪರೀತವಾಗಿ ನೋವು ಉಣ್ಣುತ್ತಿದ್ದೆ. ಎಲ್ಲಿಯ ತನಕವೆಂದಿರಾ? ಆ ಕಹಿಭಾವನೆಯು ಲಜ್ಜಾಸ್ಪದ ಶಾಪಗ್ರಸ್ಥ ಮಾಧುರ್ಯವಾಗಿ ಬದಲಾಗಿ, ಕಟ್ಟಕಡೆಗೆ ನಿಖರ, ಗಂಭೀರ ಆನಂದವಾಗಿ ಪರಿವರ್ತನೆಯಾಗುವ ತನಕ. ಹೌದು, ಆನಂದವಾಗಿ! ಪರಮಾನಂದವಾಗಿ! ಅದನ್ನೇ ಇಲ್ಲಿ ಒತ್ತಿಹೇಳುತ್ತಿರುವುದು ನಾನು. ನನಗೆ ಇತರರೂ ಈ ಬಗೆಯ ಆನಂದವನ್ನು ಅನುಭವಿಸಿರುವರೋ ಎಂದು ತಿಳಿಯ ಬೇಕಾಗಿದೆ. ಹಾಗೆ ನೋಡಿದರೆ, ಈ ಸಂಭಾಷಣೆ ಶುರುವಾದದ್ದು ಇದಕ್ಕಾಗಿಯೇ! ತಾಳಿ ವಿವರಿಸುವೆ. ನಾನು ಸಂಪಾದಿಸಿದ ಆನಂದದ ಆಗಮನವಾದದ್ದೇ ಅಪರಿಮಿತ ಅರಿವಿನಿಂದ. ಈ ಅರಿವು ದಕ್ಕುವುದು ಕ್ರೂರವಾದ ಸ್ವನಿಂದನೆಯಿಂದ. ಒಂದು ವಿಚಿತ್ರ ತೊಳಲಾಟವೇ ಈ ನನ್ನ ಪ್ರಜ್ಞೆಯ ಮೂಲ. ಓಡುತ್ತಿರುವ ಹುಡುಗ, ಇದ್ದಕ್ಕಿದ್ದಂತೆಯೇ ಒಂದು ಮಹಾ ಗೋಡೆಯೆದುರು ನಿಲ್ಲುತ್ತಾನೆ. ಅದನ್ನು ಹತ್ತಿ ಹಾರಲು ಬೇರೆ ಮಾರ್ಗವಿಲ್ಲ. ಅದೇ ಅಂತ್ಯ, ಅದರ ನಂತರ ಬೇರೇನೂ ಇಲ್ಲ, ನಿಮಗೆ ಹಾಗೆ ಆಗಿದೆಯೇ? ಮಹಾಗೋಡೆಯ ಎದುರು ನಿಂತು ಅದನ್ನು ಕೊರೆದು ಮುಂದೆಯೂ ಹೋಗಲಾಗದೆ, ಅದೇ ಕೊನೆ ಎನ್ನುವ ಕಟು ಸತ್ಯವನ್ನು ಒಪ್ಪಿಕೊಳ್ಳಲೂ ಆಗದೆ ಗೋಳಾಡುವ ನೋವಿನ ತುದಿಯಿದು. ಮರಳಿ ಹಿಂದಕ್ಕೆ ನಿರ್ಗಮಿಸಲೂ ಯಾವುದೇ ದಾರಿಯಿಲ್ಲ. ನಿಮ್ಮ ಸುತ್ತಲೂ ಏಳುಸುತ್ತಿನ ಕೋಟೆ ಧುತ್ತನೆ ಹೆಡೆಗಳನ್ನು ಎದ್ದು ನಿಂತಿವೆ. ಈಗ ಒಪ್ಪಿಕೊಳ್ಳಿ, ನೀವು ಸಿಕ್ಕಿಬಿದ್ದಿರೆಂದು! ನಿಮ್ಮೆಲ್ಲಾ ಸಂಕಲ್ಪಗಳು, ನಿಮಗೆ ನೀವೇ ಇತ್ತ ವಚನಗಳು ಟೊಳ್ಳಾಗಿ ಚೂರು-ಚೂರಾಗಿವೆ. ಬದಲಾಗಲೂ ಮನಸಿಲ್ಲ(ಅಥವಾ ಬದಲಾಗಲು ಏನೂ ಉಳಿದಿಲ್ಲ). ಗುಣಮುಖನಾಗಲೂ ಹುಮ್ಮಸಿಲ್ಲ. ಅವೆಲ್ಲಾ ಬಿಡಿ! ಪರಿವರ್ತನೆಗೆ ಬೇಕಾದಷ್ಟು ಚೈತನ್ಯವೂ ನಿಮ್ಮಲ್ಲಿ ಉಳಿದಿಲ್ಲ. ಒಂದು ಪಕ್ಷ ಚೈತನ್ಯವಿದ್ದರೂ ಆಸೆಯಿಲ್ಲ. ಆಸೆ, ಚೈತನ್ಯಗಳಿದ್ದರೂ ಸುಮ್ಮನೆ ಸೋಮಾರಿತನದ ಚಿಪ್ಪು ನಿಮ್ಮನ್ನು ಆವರಿಸಿದೆ. ಈಗ ನಿಮ್ಮ ರೂಪಾಂತರದ ಆಸೆಗಳೆಲ್ಲಾ ನಾಶವಾಗಿವೆ.

ಆದರೆ ಅತಿ ಮುಖ್ಯ ಮತ್ತು ಅಂತಿಮ ವಿಷಯವೇನೆಂದರೆ ಇವೆಲ್ಲಾ ಆಗುವುದು ಈ ಸಹಜ, ಈ ಮಿತಿ ಮೀರಿದ ತೀಕ್ಷ್ಣಪ್ರಜ್ಞೆಯ ವಿಧಿಗಳಿಗೆ ಅನುಸಾರವಾಗಿಯೇ. ಆಗ ಹುಟ್ಟುವುದು ಜಡತ್ವ ನೋಡಿ, ಈ ವಿಧಿಗಳ ಪ್ರತಿಕ್ರಿಯೆಯಂತೆ. ಇದರ ಪರಿಣಾಮವಾಗಿ ನೀವು ಬದಲಾಗಲು ಮಾತ್ರ ಸೋಲುವುದಿಲ್ಲ, ಹೀಗಾದಾಗ ನಿಮ್ಮಿಂದ ಏನನ್ನೂ ಕಡಿದು ಗುಡ್ಡೆ ಹಾಕಲು ಆಗುವುದಿಲ್ಲ, ಎಂದೂ ಅರಿಯುತ್ತೀರಿ. ಖಳನಿಗೆ ತಾನು ಖಳನಾಗಿರುವುದರಲ್ಲಿ ಏನೂ ತಪ್ಪಿಲ್ಲ ಅನ್ನಿಸುವುದು ಕೂಡ ಈ ತೀಕ್ಷ್ಣಪ್ರಜ್ಞೆಯ ಫಲಿತಾಂಶವೇ. ಈ ಅರಿವೇ ಆತನಿಗೆ ಸಮಾಧಾನ! ಏಕೆಂದರೆ ಈಗ ಯಾವ ಧರ್ಮ-ಅಧರ್ಮದ ಗೊಂದಲಗಳಿಗೆ ಬೀಳದೆ ಸಚ್ಚಿದಾನಂದನಾಗಿ ಆತ ಹೇಳ ಬಲ್ಲ, ‘ಅದೆಲ್ಲಾ ಸರೀ ಗುರುವೇ, ಆದರೇ ನಾನು ಪರಮ ದುಷ್ಟ’ ಎಂದು. ಸಾಕು…ಸಾಕು… ಹೇಗೆ ವಿವರಿಸುವುದು ಆ ಆನಂದವನ್ನು? ಗೋಜಲು-ಗೋಜಲು ಮಾತುಗಳು ನನ್ನದು. ಏನನ್ನು ನೆಟ್ಟಗೆ ಹೇಳಲಿಲ್ಲ ಇಷ್ಟೊತ್ತು. ಆದರೂ ಒಮ್ಮೆ ವಿವರಿಸುವೆ. ಅದಕ್ಕಾಗಿಯೇ ಈ ಲೇಖನಿ… ಈ ಹಾಳೆಗಳು…ಈ ಪದಗಳು…

ನಾನು, ಉದಾಹರಣೆಗೆ, ಭಯಂಕರ ಸೂಕ್ಷ್ಮ. ನಾನೊಬ್ಬ ಅನುಮಾನದ ಪಿಶಾಚಿ ಮತ್ತು ಗೂನು ಬೆನ್ನಿನ ಕುಳ್ಳನಂತೆ ಬಹಳ ಬೇಗ ಕೆರಳುವವನು. ಆದರೆ ನನ್ನ ವಾಸ್ತವ ಬದುಕಿನ ಕೆಲವು ಘಳಿಗೆಯಲ್ಲಿ ನನ್ನ ಕಪಾಲಕ್ಕೆ ಯಾರಾದರೂ ಬಾರಿಸಿದರೆ ಆಗಲೂ ಬಹುಶಃ ಖುಷಿ ಪಡುತ್ತಿದ್ದೆ. ಅದು ಹತಾಶೆಯ ಆನಂದವೇ, ಗುಮಾನಿಯೇ ಬೇಡ. ಆದರೆ ಹತಾಶೆಯ ಘಳಿಗೆಗಳಲ್ಲಿ ಮಾತ್ರ ತೀಕ್ಷ್ಣವಾದ ಆನಂದವಿರಲು ಸಾಧ್ಯ, ವಿಶೇಷವಾಗಿ ನಿಮ್ಮ ಪರಿಸ್ಥಿತಿಯಿಂದ ಪಾರಾಗಲೂ ಬೇರೆ ದಾರಿಯೇ ನಿಮಗೆ ಕಾಣದಾಗ. ನಿಮಗೆ ತಪರಾಕಿ ಬಿದ್ದಾಗ ನೀವು ತಿಪ್ಪೆಯಷ್ಟು ಬಿದ್ದು ಹೋಗಿರುವ ಅರಿವು ನಿಮ್ಮನ್ನು ಪುಡಿಪುಡಿ ಮಾಡುತ್ತದೆ. ಆದರೆ ಮುಖ್ಯ ವಿಷಯವೆಂದರೆ ನೀವು ಹೇಗೇ ನೋಡಿದರೂ ಸಿಗುವ ಉತ್ತರ: ಮೊದಲು ದೂರಲ್ಪಡುವನು ನಾನೇ, ಹಾಗೂ ಇನ್ನೂ ಹಾಳಾದ ಸತ್ಯವೆಂದರೆ ತಪ್ಪೇ ಮಾಡದಿದ್ದರೂ ನಾನೇ ತಪ್ಪಿತಸ್ಥ; ಈ ಶಿಕ್ಷೆ, ನಾನು ಪ್ರಕೃತಿಯ ನಿಯಮಗಳನ್ನು ಒಪ್ಪಿ, ಅದಕ್ಕೆ ಅನುಸಾರವಾಗಿ ನಡೆದದಕ್ಕೆ.

ನನ್ನ ಸುತ್ತಮುತ್ತ ಇರುವ ಎಲ್ಲರಿಗಿಂತಲೂ ನಾನು ಬುದ್ಧಿವಂತನಾಗಿದ್ದಕ್ಕೆ, ಎಲ್ಲ ಕರ್ಮಗಳಿಗೂ ನಾನೇ ಹೊಣೆಯಾಗುತ್ತಿದ್ದೆ. (ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಅವರೆಲ್ಲರಿಗಿಂತ ನಾನೇ ಬುದ್ಧಿವಂತ ಎಂದೇ ನಂಬಿದ್ದೆ ಎಂದರೆ ನಂಬುತ್ತೀರ ನೀವು? ಕೆಲವೊಮ್ಮೆ ಈ ವಿಷಯ ನನಗೂ ನಾಚಿಕೆ ತರಿಸಿತ್ತು; ಕಡೇ ಪಕ್ಷ ನನ್ನ ಜೀವನಪರ್ಯಂತ ಯಾರ ಕಣ್ಣಲ್ಲಿ ಕಣ್ಣಿಟ್ಟೂ ನೋಡಲು ಆಗಿಲ್ಲ ನನ್ನಿಂದ). ಹಾಗಾಗಿ ಅಂತಿಮವಾಗಿ ನಾನೇ ಎಲ್ಲಕ್ಕೂ ಅಪರಾಧಗಳಿಗೂ ಕಾರಣವಾಗುತ್ತಿದ್ದೆ, ಅಪರಾಧ ನನ್ನದಲ್ಲದಿದ್ದರೂ: ಏಕೆಂದರೆ ಒಂದು ವೇಳೆ ನನಗೆ ಮಹತ್ತರವಾದ ಸ್ಫೂರ್ತಿ ಇದ್ದರೂ ಸಹ, ಅದರ ಅಸಂಬಧ್ದತೆಯನ್ನೂ ಅರಿತಿರುತ್ತಿದ್ದರಿಂದ ಇನ್ನೂ ವೇದನೆಯಲ್ಲಿ ಒದ್ದಾಡುತ್ತಿದ್ದೆ. ನನ್ನ ಮಹಾನುಭಾವತನದಿಂದಲೂ ನನಗೆ ಏನೂ ಸಾಧಿಸಲಾಗುತ್ತಿರಲಿಲ್ಲ ಎಂಬ ಜ್ಞಾನದಿಂದ ತೀವ್ರವವಾಗಿ ತಲ್ಲಣಿಸಿಯೂ ಇದ್ದೇನೆ. ಕೆಲವೊಮ್ಮೆ ನಾನೊಬ್ಬ ಮಹಾನುಭಾವ ತಾನೇ, ಹಾಗಾದರೆ ಎಲ್ಲರನ್ನು-ಅಂದರೆ ಸಕಲ ಜೀವ ಮಂಡಲವೆನ್ನಿ ಬೇಕಾದರೆ- ತಂದೇsssssssss ಕ್ಷಮಿಸು ಇವರನ್ನೆಲ್ಲ, ತಾವು ಏನು ಮಾಡುತ್ತಿದ್ದಾರೆಂದು ಅರಿಯದವರು ಇವರು…’ ಎಂದೇಕೆ ಕ್ಷಮಿಸಿ ಬಿಡಬಾರದು ಅನ್ನಿಸಿಯೂ ಇತ್ತು. ಹಾಗೇ ಕ್ಷಮಿಸಲೂ ಆಗುತ್ತಿರಲಿಲ್ಲ ಬಿಡಿ ನನ್ನಿಂದ; ಏಕೆಂದರೆ ಬಹುಶಃ ಅಪರಾಧಿಯು ಪ್ರಕೃತಿಯ ನಿಯಮಗಳಿಗೆ ಅನುಸಾರವಾಗಿ ನನ್ನ ಕಪಾಲಕ್ಕೇ ಬಾರಿಸಿದ್ದರೆ ನಾನು ಅವನನ್ನು ಕ್ಷಮಿಸುತ್ತಿದ್ದೇನೆಯೇ? ಆದರೆ ಪ್ರಕೃತಿನಿಯಮಗಳನ್ನು ನೀವು ಕ್ಷಮಿಸಲು ಸಾಧ್ಯವೇ ಸಜ್ಜನರೇ? ಇಲ್ಲ ತಾನೇ? ಹಾಗೆಂದು ನೀವು ಅವನ್ನು ಮರೆಯುವುದೂ ಆಗದ ಮಾತು, ಏಕೆಂದರೆ ಅವು ಪ್ರಕೃತಿಯ ನಿಯಮಗಳು ಹೌದೋ, ಅಲ್ಲವೋ ಆದರೆ ಆ ಬೇಗುದಿಯ ಅರಿವು ಹಾಗೇ ಉಳಿದಿರುತ್ತದೆ. ಕಡೆಯದಾಗಿ, ಒಂದು ಪಕ್ಷ ನನಗೆ ಮಹಾನುಭಾವನಾಗುವ ಯಾವ ಆಸೆ-ಆಕಾಂಕ್ಷೆಗಳು ಇಲ್ಲದೇ ಇದ್ದರೂ, ಆ ಅಪರಾಧಿಯ ಮೇಲಿದ್ದ ಹಗೆಯನ್ನಾದರೂ ತೀರಿಸಿಕೊಳ್ಳುತ್ತಿದ್ದೇನೆಯೇ? ಊಹ್ಞೂಂ…! ಏಕೆಂದರೆ ಒಂದು ವೇಳೆ ಆ ತಾಕತ್ತು ನನ್ನಲ್ಲಿದ್ದರೂ ಹಗೆಯ ಮುಗಿಸಲು ಬೇಕಾದ ಎದೆಗಾರಿಕೆ ನನ್ನಲ್ಲಿಲ್ಲ. ಅದ್ಯಾಕೆ ಹಾಗೇ? ಏಕೆಂದರೆ… ಹ್ಞಾ, ಈ ವಿಷಯದ ಬಗ್ಗೆ, ಒಂದೆರೆಡು ಜಾಸ್ತಿ ಮಾತುಗಳನ್ನು ಆಡಲು ಇಷ್ಟಪಡುವೆ ನನ್ನ ನೆಚ್ಚಿನ ಸೋದರ-ಸೋದರಿಯರೆ.

ಮುಂದುವರೆಯುವುದು … 

ಚಿತ್ರ : ಮದನ್ ಸಿ.ಪಿ


ಟಿಪ್ಪಣಿಗಳು
* ಅದ್ಭುತ ಚೆಲುವು (Beautiful and Sublime): ಎಡ್ಮಂಡ್ ಬರ್ಕ್ [1729-97] ಮತ್ತು ಇಮಾನ್ಯುಯೆಲ್ ಕಾಂಟ್ [1724-1804]. ಈ ಬರಹಗಾರರ ಬರವಣಿಗೆಯಲ್ಲಿ ಮೂಲಕಂಡುಕೊಂಡ ಈ ಸಾರವತ್ತಾದ ಸಣ್ಣ ನುಡಿಯನ್ನು ಷಿಲ್ಲರ್ [1789-1805] ಹತ್ತೊಂಭತ್ತನೆಯ ಶತಮಾನದ ಆದಿಯಲ್ಲಿ ಹೆಕ್ಕಿ ತೆಗೆದ. ಪ್ರಕೃತಿಯ ಸೌಂದರ್ಯ ವೀಮಾಂಸೆಯನ್ನು ಕೊಂಡಾಡಿ, ಆ ಪ್ರಜ್ಞೆಯ ಮುಖಾಂತರ ನೀತಿ ಪಾಠಕ್ಕೆ ಹೆಚ್ಚು ಒತ್ತು ನೀಡುವುದು, ಈ ನುಡಿಗಟ್ಟಿನ ಮೂಲಾಂಶ. ಹತ್ತೊಂಭತ್ತನೆಯ ಶತಮಾನದ ಉತ್ತರಾರ್ಧದಲ್ಲಿ, ಈ ನುಡಿಗಟ್ಟು ರಷ್ಯಾದಲ್ಲಿ ಬೆಡಗಿನ ಭಾವನೆಯಾಗಿ ಸ್ಲೇವೋಫೈಲ್ ಚಳುವಳಿಯ ಉಗಮದೊಂದಿಗೆ ಬೆರೆತು ಪ್ರಖ್ಯಾತವಾಯಿತು. ಆದರೆ 1860ನೆಯ ಇಸವಿಗೆಲ್ಲಾ ದಸ್ತಯೇವ್‍ಸ್ಕಿ ಈ ಆದರ್ಶಗಳನ್ನು ರಮ್ಯ ಕ್ಲೀಶೆಗಳೆಂದು ಟೀಕಿಸಲು ಆರಂಭಿಸಿದ್ದ. ಪ್ರಕೃತಿಯ ಬೆಳಕೇ ಹರಿಯದ ಮೂಲಗಳು ಭೂಮಿಯ ಮೇಲೆ ಅಸ್ತಿತ್ವದಲ್ಲಿರುವಾಗ, ಕೇವಲ ಚೆಲುವಿನ ಒಂದು ಆಯಾಮವನ್ನು ಮಾತ್ರ ಸ್ತುತಿಸಿ, ನೆಮ್ಮದಿ ಕಾಣುವ ನಿಲುವಿನ ವಿರುದ್ಧವಾದ ಕಡುಪ್ರಹಾರವಿದಾಗಿದೆ. ಇದಕ್ಕೆ ಸ್ವತಃ ದಸ್ತಯೇವ್‍ಸ್ಕಿಯ ಸೈಬೀರಿಯಾದ ಸಾವಿನ ಸೆರೆಮನೆಯಲ್ಲಿ, ಉಗ್ರ ಬದುಕಿನ ಮಜಲುಗಳನ್ನು ಕಂಡು ಹಿಡಿದದ್ದೂ ಒಂದು ಕಾರಣ.

*ಸತ್ಯ ಮತ್ತು ಪ್ರಕೃತಿಯ ಮನುಷ್ಯ, , L’homme de la nature et de la verite: ಇದು ರೂಸೋನ ಆತ್ಮಚರಿತ್ರೆಯಾದ “Confessions” ಆರಂಭದ ಸಾಲುಗಳು. ಇಲ್ಲಿ ಆತ ತನ್ನನ್ನು ತಾನು ಸತ್ಯ ಮತ್ತು ಪ್ರಕೃತಿಯ ಮನುಷ್ಯ ಎಂದೇ ಚಿತ್ರಿಸಲು ಇಷ್ಟಪಡುತ್ತಾನೆ. ದಸ್ತಯೇವ್‍ಸ್ಕಿ ಇಲ್ಲಿ ರೂಸೋನನ್ನು ವ್ಯಂಗ್ಯವಾಡಲು ಈ ಸಾಲನ್ನು ಬಳಸಿದ್ದಾನೆ. ಮನುಷ್ಯ ನ್ಯಾಯ ಮತ್ತು ಧರ್ಮದ ವಿವರಣೆಗಳ ಮೊರೆ ಹೋಗಿ ತನ್ನ ತೆವಲುಗಳನ್ನು ಸಮರ್ಥಸಿಕೊಳ್ಳುತ್ತಾನೆ ಎಂಬುದು ದಸ್ತಯೇವ್‍ಸ್ಕಿಯ ಅಭಿಪ್ರಾಯ.

*ಮಹಾ ಚಿತ್ರಕಾರ ನಿಕೊಲಾಯ್ ಗೇ: ರಷ್ಯಾದ ಮಹಾ ಕಲಾವಿದ ಫ್ರಾನ್ಸ್ ಮೂಲದವನು. ಸೈಂಟ್ ಪೀಟರ್ಸ್ಬರ್ಗನ ಜನತೆಯನ್ನು – ದಸ್ತಯೇವ್‍ಸ್ಕಿಯನ್ನೂ ಸೇರಿಸಿ- ತನ್ನ ಏಸುಕ್ರಿಸ್ತನ ಕಲಾಕೃತಿಯ ಮೂಲಕ ಬೆಚ್ಚಿಸಿದವನು. ಇಲ್ಲಿ ಕ್ರಿಸ್ತನನ್ನು ದೇವಮಾನವನಂತೆ ಬಿಂಬಿಸದೆ, ದಿವಾಳಿಯೆದ್ದ, ಭಿಕಾರಿಯಾದ ಕಡು ಸಾಮಾನ್ಯ ಮನುಷ್ಯನಂತೆ ಚಿತ್ರಿಸಿದ್ದ.
“ನೀವಿಚ್ಛಿಸಿದಂತೆ”- ಮಿಕೆಲ್ ಸಾಲ್ಟಿಕೊವ್ ಬರೆದಿದ್ದ ಲೇಖನವನ್ನು ದಸ್ತಯೇವ್‍ಸ್ಕಿ ಇಲ್ಲಿ ನೆನೆಪಿಸಿಕೊಂಡಿರುವುದು. ಈತ ಲೇಖಕರ ಬದ್ಧ ವೈರಿ.

4 comments to “ಅಧೋ ಲೋಕದ ಟಿಪ್ಪಣಿಗಳು – ಕಂತು ೧ (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ)”
  1. Dostovesky penetrates right into the chasm of human mind with all its sickness deviated desires bizzare caprice…and places us right in the middle of such currents I don think Tolstoy has ever given a single character whcih is as paradoxical as any of Dostovesky’s happy his highly thought provoking novel is happening in Kannada

  2. anuvada ಅದ್ಬುತ ಆದರೆ ಈ ಲೇಖನಕ್ಕೆ ಮೋಸ್ಟ್ಲಿ ಇಂಗ್ಲಿಷ್ ಭಾಷೆಯೇ ಸೂಕ್ತವೇನೋ

  3. Pingback: ಅಧೋಲೋಕದ ಟಿಪ್ಪಣಿಗಳು – ಕೊನೆಯ ಕಂತು (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ) – ಋತುಮಾನ

ಪ್ರತಿಕ್ರಿಯಿಸಿ