ನಾತಿಚರಾಮಿ – ಒಂದು ಪ್ರತಿಕ್ರಿಯೆ.

ಋತುಮಾನದಲ್ಲಿ ದಿನಾಂಕ ೨೦.೦೨.೨೦೧೯ ರಂದು ಪ್ರಕಟವಾದ ನಾತಿಚರಾಮಿ ಚಿತ್ರ ವಿಮರ್ಶೆಗೆ ಕತೆಗಾರ್ತಿ ಅರ್ಪಣಾ ನಟರಾಜ್ ಪ್ರತಿಕ್ರಿಯಿಸಿದ್ದಾರೆ. ಈ ಚಿತ್ರ ಅಥವಾ ಇಲ್ಲಿ ಪ್ರಕಟವಾದ ಲೇಖನಕ್ಕೆ ಓದುಗರು ತಮ್ಮ ಪ್ರತಿಕ್ರಿಯೆಯನ್ನು [email protected] ಕ್ಕೆ ಕಳುಹಿಸಬಹುದು.

ನನ್ನ ಹಲವು ಸಿನಿಮಾಪ್ರಿಯ ಸ್ನೇಹಿತರಿಗೆ, ನಾನು ಸಿನಿಮಾ ವಿಷಯ ಬಂದಾಗ ಯಾರ ಅಭಿಪ್ರಾಯವನ್ನು ಗೌರವಿಸುತ್ತೇನೋ ಅಂತಹ ಸ್ನೇಹಿತರಿಗೆ ನಾತಿಚರಾಮಿ ಇಷ್ಟ ಆಗಿರಲಿಲ್ಲ. ಹೀಗಾಗಿ, ನಾನು ನಾತಿಚರಾಮಿ ನೋಡುವಾಗ ಬಹುತೇಕ ಸೊನ್ನೆ ನಿರೀಕ್ಷೆ ಇಟ್ಟುಕೊಂಡು ನೋಡಿದೆ ಎಂಬ ಸತ್ಯ ನಿವೇದನೆ ನಾನು ಮೊದಲಿಗೆ ಮಾಡಲೇಬೇಕು . ಆದರೆ, ಚಿತ್ರ ನನ್ನ ನಿರೀಕ್ಷೆಯನ್ನೂ ಮೀರಿ, ನನಗೆ ಇಷ್ಟ ಆಯ್ತು. ಆಮೇಲೆ ಯೋಚಿಸಿದಾಗ, ಆ  ಚಿತ್ರ ಇಷ್ಟವಾಗದ ಸಾಲಿನಲ್ಲಿದ್ದವರೆಲ್ಲಾ ಗಂಡಸರೇ ಎಂಬುದು ಇಲ್ಲಿ ಮುಖ್ಯವಾಗುತ್ತದೆಯೇ ಅನ್ನುವ ಪ್ರಶ್ನೆ ಕಾಡಿತು. ಕಿರಣ್ ಅವರ ವಿಮರ್ಶೆಯನ್ನು ಓದಿದಾಗ, ಆ ಸಂಶಯ ಮತ್ತೆ ಬಂತು. ನಾನು ಚಿತ್ರವನ್ನು ಅರ್ಥ ಮಾಡಿಕೊಂಡ ರೀತಿಗೂ, ಈ ವಿಮರ್ಶೆಯ ಆಯಾಮಕ್ಕೂ ತುಂಬಾ ವ್ಯತ್ಯಾಸ ಕಾಣುತ್ತಾ ಇದೆ. ಅತ್ಯಂತ ಪ್ರಮುಖವಾದ ಮತ್ತು ಇಲ್ಲಿನ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಬಹುದಾದ ಒಂದು ವ್ಯತ್ಯಾಸವೆಂದರೆ ಗೌರಿ ಗಂಡ ಸತ್ತ ಮೂರು ವರ್ಷಗಳ ನಂತರವೂ ಅವನ ನೆನಪಲ್ಲೇ ಇರುವುದಕ್ಕೆ, ಅವನ ಮೇಲಿನ ಗಾಢ ಪ್ರೀತಿ, ನಂಟು ಕಾರಣ ಅನ್ನುವ ದೃಷ್ಟಿಕೋನ.

ನನಗೆ ಅನ್ನಿಸಿದ ಮಟ್ಟಿಗೆ ಗೌರಿ ಮಾನಸಿಕವಾಗಿ ತನ್ನ ಸತ್ತ ಗಂಡನೊಂದಿಗೇ ಉಳಿದ ಬಿಡೋದಕ್ಕೆ ಕಾರಣ ಪ್ರೀತಿಗಿಂತ ಹೆಚ್ಚು ಅವನನ್ನು ಮರೆತು ಬಿಡುವ ಭಯ ಮತ್ತು ಹಾಗೆ ಮರೆತಾಗ ಹುಟ್ಟಬಹುದಾದ ಅಪರಾಧಿ ಭಾವ. ಹೆತ್ತವರಿಂದ ದೂರವಾಗಿ ಸಂಸಾರ ಕಟ್ಟಿಕೊಂಡ ಗೌರಿ ಮತ್ತು ಸುರೇಶನಿಗೆ ಪರಸ್ಪರ ಅವರಿಬ್ಬರೇ ಎಲ್ಲಾ. ಹೀಗೆ, ಬಾಳುತ್ತಿದ್ದವರಿಗೆ ಮತ್ತೊಬ್ಬರನ್ನು ಮರೆತು ಬದುಕುವುದು ಅಪರಾಧ ಅನ್ನಿಸೋದರಲ್ಲಿ ಆಶ್ಚರ್ಯ ಏನಿಲ್ಲ. ಇದಕ್ಕೆ ಪುಷ್ಟಿ ಕೊಡುವ ಘಟನೆಯಂದರೆ, ತನ್ನ ಗಂಡನ ಫೋಟೋಗೆ ಹೂವು ತರುವುದನ್ನ ಮರೆತಾಗ ಗೌರಿ ಎದುರಿಸುವವ ಆತಂಕ, ಭಯ. ಗಂಡನ ಬಗ್ಗೆ ಅವಳಿಗೆ ಇರೋದು ಪ್ರೀತಿಯೇ ಆದರೆ, ಒಂದು ದಿನ ಹೂವು ಮರೆತದ್ದು ಆ ರೀತಿ ಮತ್ತು ಆ ಮಟ್ಟಿಗೆ ಕಾಡುವ ಅಗತ್ಯ ಇಲ್ಲ. ಅವಳ ಆತಂಕ ಇರೋದೆ ಗಂಡನನ್ನು ಮರೀತಾ ಇದ್ದೇನೆ ಎಂಬ ಅಪರಾಧಿ ಭಾವದಲ್ಲಿ.

ಕೇವಲ ದೈಹಿಕ ಬಯಕೆ ತೀರಿಸಿಕೊಳ್ಳೋಕೆ ಮಾತ್ರ ಗಂಡು ಬೇಕು ಅನ್ನೋ ನಿರ್ಧಾರಕ್ಕೆ ಗೌರಿ ಬರೋದು ಅದೇ ಕಾರಣಕ್ಕೆ. ಅವಳು ಅಷ್ಟರಮಟ್ಟಿಗೆ ತನ್ನ ಗಂಡನ ಬಗೆಗಿನ ತನ್ನ ಲಾಯಲ್ಟಿ ಬಿಡೋದಕ್ಕೆ ಸಿದ್ಧಳಾಗುತ್ತಾಳೆ. ಇದೊಂದು ನೈಸರ್ಗಿಕ ಸಂಗತಿ. ನನ್ನ ಭಾವನೆಗಳ ಹಿಡಿತಕ್ಕೆ ಮೀರಿದ್ದು ಎಂಬ ಸಮಜಾಯಿಷಿ ಕೊಟ್ಟುಕೊಂಡು. ಆದರೆ, ಅವಳ ಮಾವ ಬಂದು ಗೌರಿ ತನ್ನ ಗಂಡನ ಬಗ್ಗೆ ಇಟ್ಟುಕೊಂಡಿರುವ ಅಗಾಧ “ಪ್ರೇಮ”ವನ್ನು ಹೊಗಳಿ ಹೋದಾಗ ಅವಳ ಮನಸ್ಸಿನೊಳಗಿನ ಆ ನೈತಿಕ ಭಾವಗಳು (ಅವಳು ನೈತಿಕತೆ ಅಂತ ಒಪ್ಪೋದಿಲ್ಲ) ಮತ್ತೆ ಯುದ್ಧ ನಡೆಸುತ್ತವೆ. ಆದರೆ, ಅವಳು ಅದರಲ್ಲಿ ಗೆದ್ದು ಸುರೇಶ್ ಜೊತೆ ರಾತ್ರಿ ಕಳೆಯುವ ನಿರ್ಧಾರಕ್ಕೆ ಬರ್ತಾಳೆ. ಮಾವ ಬಂದು ಮಾತಾಡಿ ಹೋಗೋದು ಇಲ್ಲಿ ತುಂಬಾ ಮುಖ್ಯ. ಎಂದಾದರೋ ಆಗಲೇ ಬೇಕಾಗಿದ್ದ ಆ ಮುಖಾಮುಖಿಯನ್ನು – ಹೊರಗೆ ಮತ್ತು ಮನಸ್ಸಿನ ಒಳಗೆ – ಅವಳು ಎದುರಿಸಿ ಒಂದು ನಿರ್ಧಾರ ತೆಗೆದುಕೊಳ್ಳಲು ಆ ಭೇಟಿ ತುಂಬಾ ಪ್ರಮುಖವಾಗುತ್ತದೆ. ವಾಸ್ತವದಲ್ಲಿ, ತನ್ನ ಅಗತ್ಯ ಅದಕ್ಕಿಂತ (ದೈಹಿಕ ಹಸಿವಿಗಿಂತ) ಹೆಚ್ಚಿನದ್ದು ಎಂಬುದು ಚಿತ್ರದ ಕೊನೆಯಲ್ಲಿ ಅವಳಿಗೇ ಅರ್ಥವಾದಾಗ ಮತ್ತು ಅವಳು ಅದನ್ನು ಒಪ್ಪಿಕೊಂಡಾಗ ತನ್ನ ಗಂಡನನ್ನು ಬಿಟ್ಟುಕೊಡಲು ಸಿದ್ಧವಾಗುತ್ತಾಳೆ ಮತ್ತು ಆ ಅಪರಾಧಿ ಭಾವದಿಂದ ಹೊರ ಬರುತ್ತಾಳೆ. ಅದು ವಿಮರ್ಶೆ ಹೇಳಿದಂತೆ ಯತಾಸ್ಥಿತಿವಾದವನ್ನು ಪೋಷಿಸುವುದಿಲ್ಲ. ನಿರಾಕರಿಸುತ್ತದೆ. ಪತ್ನಿ ತನ್ನ ಗಂಡನ ನೆನಪಲ್ಲೇ ಉಳಿಯುವುದು, ಮಾನಸಿಕ ಪಾತಿವೃತ್ಯ ಇಂತಹ ನಂಬಿಕೆಯೊಂದಿಗೆ ಆರಂಭವಾಗುವ ಸಿನಿಮಾ ಅದನ್ನು ಧಿಕ್ಕರಿಸಿ ಶಿ ಡಿಸೈಡ್ಸ್ ಟು ಮೂವ್ ಆನ್ ಎಂಬ ಅಂತ್ಯದೊಂದಿಗೆ ಕೊನೆಗೊಳ್ಳುವುದು ಯಾವ ರೀತಿಯ ಯಥಾಸ್ಥಿತಿವಾದ?

ಇನ್ನು ಸುರೇಶನೇ ಯಾಕೆ ಎಂಬ ಪ್ರಶ್ನೆಗೆ ಬರೋಣ. ಇದನ್ನು ಹಲವರು ಮತ್ತೊಂದು ರೀತಿಯಲ್ಲಿ ಕೇಳಿದ್ದಾರೆ. ದೈಹಿಕ ಸಂಪರ್ಕ ಮಾತ್ರ ಬೇಕು ಅಂತಾದರೆ ವೈ ನಾಟ್ ಹರ್ ಬಾಸ್ ಅಂತ. ಇದಕ್ಕಿಂತ ದೊಡ್ಡ ಹಿಪೋಕ್ರಸಿ, ಪುರುಷತ್ವವಾದ ಇನ್ನೊಂದಿಲ್ಲ. ತುಂಬಾ ಹಾರ್ಷ್ ಅನ್ನಿಸಬಹುದು. ಆದರೂ ಈ ಉದಾಹರಣೆ ಕೊಡ್ತೀನಿ. ಒಬ್ಬ ಗಂಡು ವೇಶ್ಯೆಯ ಬಳಿಗೆ ಹೋದಾಗ ಅಲ್ಲಿ ಇರೋದು ಕೂಡ ಕೇವಲ ದೈಹಿಕ ಸಂಪರ್ಕದ ಉದ್ದೇಶ. ಅದೂ ದುಡ್ಡು ಕೊಟ್ಟು ಅಲ್ಲಿಗೇ ಕೊನೆಗೊಳಿಸುವ ಸಂಬಂಧ. ಅಷ್ಟಿದ್ದೂ ಆತನಿಗೆ, ಅಲ್ಲಿ ಆಯ್ಕೆಗಳನ್ನು ನೀಡಲಾಗುತ್ತದೆ. ಹೆಣ್ಣುಗಳ ಪೆರೇಡ್ ಮಾಡಲಾಗುತ್ತದೆ. ತಪ್ಪಲ್ಲ, ದುಡ್ಡು ಕೊಡುವ ಆತನಿಗೆ ಆಯ್ಕೆಯ ಸ್ವಾತಂತ್ರ್ಯ ಇದೆ. ಅದು ಕೇವಲ ಸೌಂದರ್ಯದ ದೃಷ್ಟಿಯ ಆಯ್ಕೆ ಇರಬಹುದು. ಆದರೆ, ಗಮನಿಸಬೇಕಾದ ಅಂಶ ಅಂದ್ರೆ ಕೇವಲ ದೈಹಿಕ ಅಂತ ಅಂದುಕೊಂಡ್ರೂ ಮನಸ್ಸಿಗೆ ಒಪ್ಪಿತವಾಗಬೇಕು ಅನ್ನೋದು.   ಇದನ್ನು ಸಹಜ ಅಂತ ಒಪ್ಪಿಕೊಳ್ಳುವ ನಮಗೆ, ಗೌರಿ ಯಾಕೆ ಬಾಸನ್ನು ಒಪ್ಪಿಕೊಳ್ಳಲಿಲ್ಲ ಅನ್ನೋದು ಮಾತ್ರ ಪ್ರಶ್ನೆಯಾಗುತ್ತದೆ. ತನ್ನ ಬಾಸ್ ವಿರುದ್ಧ ಆಫೀಸಿಗೆ ಕೇಳುವಂತೆ ಆಕೆ ಏಕಾಏಕಿ ಕೂಗುವುದು ಅವಳ ರಕ್ಷಣಾ ತಂತ್ರ. ಇದರಲ್ಲಿ ಅಸಹಜ ಏನಿಲ್ಲ. ವೃತ್ತಿರಂಗದಲ್ಲಿ ಇಂತಹ ಸಮಸ್ಯೆಗಳನ್ನು ಎದುರಿಸುವ ಯಾವುದೇ ಹೆಣ್ಣು ಮಾಡುವ ಮತ್ತು ಮಾಡಲೇ ಬೇಕಾದ ಕೆಲಸ. ಅದು ಅಸಹಜ ಅನಿಸಿದೆ ಎಂದರೆ ಗೌರಿಯನ್ನು ಅವಳ ದೈಹಿಕ ಕಾಮನೆಗಳ ಹೊರತಾಗಿ ನೋಡಲು ಸಾಧ್ಯವಿಲ್ಲದ ನಮ್ಮ ದೌರ್ಬಲ್ಯ ಅಷ್ಟೇ. ಆಕೆ ಸೆಕ್ಸ್ ಡಿಪ್ರೈವಡ್ ಹೆಣ್ಣು ಮಾತ್ರವಲ್ಲ. ಆಫೀಸಿನಲ್ಲಿ ಹೇಗಿರಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅರಿತಿರುವ ಓರ್ವ ಯಶಸ್ವಿ ಉದ್ಯೋಗಸ್ಥ ಸ್ತ್ರೀ ಎಂಬುದನ್ನು ನಾವು ಯಾಕೆ ಮರೆಯುತ್ತೇವೆ?

ಈ ವಿಮರ್ಶೆ ಇದಕ್ಕಿಂತ ಕೊಂಚ ಭಿನ್ನವಾಗಿ ಸುರೇಶನೇ ಯಾಕೆ ಎಂಬ ಪ್ರಶ್ನೆ ಎತ್ತುತ್ತದೆ. ಸುರೇಶ ಗೌರಿಗಿಂತ ತುಂಬಾ ದುರ್ಬಲ. ಗೌರಿಗೆ ಗೋಜಲುಗಳಿಲ್ಲದ ಸಂಬಂಧ ಬೇಕಿದೆ. ತನಗೆ ಬೇಕಾದದ್ದು ಪಡೆದು ಅಲ್ಲಿಗೆ ನಿಲ್ಲಿಸಬೇಕು ಅದಕ್ಕಿಂತ ಹೆಚ್ಚು ಅಂಟುವ ಸಂಬಂಧ ಬೇಕಿಲ್ಲ. ಸುರೇಶನಿಗೆ ತನ್ನ ಬಯಕೆ ಹೇಳುವ ಮೊದಲು ಆಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾಳೆ. ಆತ ಸಿಕ್ಕವರ ಜೊತೆ ಎಲ್ಲಾ ಹೋಗುವವನಲ್ಲ ಎಂಬುದು ಅವಳ ಆತ್ಮಗೌರವವನ್ನು ಹೆಚ್ಚಿಸುವ ವಿಷಯ. ಹಾಗು ಸುರಕ್ಷತೆಯ ವಿಷಯ ಕೂಡ ಇರಬಹುದು. ಆಕೆ ಆತನೊಂದಿಗೆ ತನ್ನ ಬೇಡಿಕೆಯನ್ನು ಏಕಾಏಕಿ ಇಡುತ್ತಾಳೆ. ಮೊದಲು ಎಲ್ಲಿಯೂ ತೋರಿಸಿಕೊಳ್ಳುವುದಿಲ್ಲ ಎಂಬುದು ನಿಜ ಮತ್ತು ಸಹಜ. ಆಕೆ ತನ್ನ ಬಾಸ್ ರೀತಿ ಆಡಲು ಸಾಧ್ಯವಿಲ್ಲ. ಆಡಿದರೆ ಆಕೆಯ ವ್ಯಕ್ತಿತ್ವದ ಅಡಿಪಾಯವೇ ಉರುಳಿದಂತೆ. ತನ್ನ ಬಯಕೆಯನ್ನು ಆಕೆ ಆದಷ್ಟು ನೇರವಾಗಿ ಮತ್ತು ಗೌರವಯುತವಾಗಿ ಹೇಳುತ್ತಾಳೆ. ಸುರೇಶ ಅದಕ್ಕೆ ಒಪ್ಪದಾಗ ತನ್ನ ಬೇಡಿಕೆಯಿಂದ ದೂರ ಉಳಿಯುತ್ತಾಳೆ. ಹಾಗೆ, ನೋಡಿದರೆ ಇಲ್ಲಿ ಗೌರಿ ಸುರೇಶನನ್ನು ಉಪಯೋಗಿಸಿಕೊಳ್ಳುತ್ತಾಳೆ. ಏಕೆಂದರೆ, ಗೌರಿಯ ಅಗತ್ಯ, ಸುರೇಶನ ಅಗತ್ಯ ಅಲ್ಲ. ಇಲ್ಲಿ ಲಿಂಗಗಳು ಅದಲುಬದಲಾಗಿದ್ದರೆ ಶೋಷಣೆ ಅನ್ನಿಸುತ್ತಿತ್ತು ಅಲ್ಲವೇ? ಆದರೆ, ತನ್ನ ಹೆಂಡತಿ ತನ್ನನ್ನು ನಿರಾಕರಿಸಿದಾಗ ಸುರೇಶ ಈ ಸಂಬಂಧಕ್ಕೆ ಒಪ್ಪುತ್ತಾನೆ. ಅದು ಆತನ ಮಾನಸಿಕ ಅಗತ್ಯಕ್ಕೆ ಎಂಬುದು ಮುಖ್ಯ. ಅಲ್ಲಿ ಕಾಣುವುದು ನೀನೊಬ್ಬಳೇನಾ ಪ್ರಪಂಚಕ್ಕೆಲ್ಲಾ ಎಂಬ ಭಾವ, ಗಂಡನ ಅಹಂ.

ಸುರೇಶ ಮತ್ತು ಗೌರಿ ನಡುವೆ ಸಿನಿಮಾದಲ್ಲಿ ನಮಗೆ ಎದ್ದು ಕಾಣುವುದು ಲ್ಯಾಕ್ ಆಫ್ ಕೆಮಿಸ್ಟ್ರಿ. ನನ್ನ ಪ್ರಕಾರ ಅದು ಪ್ರಜ್ಞಾಪೂರ್ವಕವಾಗಿ ಮಾಡಿದ ಆಯ್ಕೆ ಎಂಬುದು ನನ್ನ ನಂಬಿಕೆ ಮತ್ತು ಅದು ಚೆನ್ನಾಗಿ ಕೆಲಸ ಮಾಡಿದೆ. ಗೌರಿಯಂತಹ ಹೆಣ್ಣು ಬಯಸುವ ಗಂಡಲ್ಲ ಸುರೇಶ. ಆರಾಮವಾಗಿ ಪ್ರೆಂಡ್ ಝೋನ್ ಗೆ ಸೇರಿಸಬಹುದಾದ ವ್ಯಕ್ತಿ. ಗೌರಿಗೆ ಡಿಸೈರೇಬಲ್ ಗಂಡು ಬೇಕಾಗೂ ಇಲ್ಲ. ಮುಂದೆ, ಆತನೊಂದಿಗೆ ಪ್ರೇಮ ಸಂಬಂಧ ಬೆಳೆಯಬಾರದು ಎಂಬ ಭಯವೇ ಇದಕ್ಕೆ ಕಾರಣ ಇರಬಹುದು. ಹೀಗಾಗಿ, ಗೌರಿ ಸುರೇಶನನ್ನು ಬಹಳ ಎಚ್ಚರಿಕೆಯಿಂದ ಆರಿಸಿಕೊಳ್ಳುತ್ತಾಳೆ ಅನ್ನುವುದು ನನ್ನ ಅನಿಸಿಕೆ.

ಇನ್ನು ಸುರೇಶ ಮತ್ತು ಗೌರಿಯ ನಡುವೆ ಏರ್ಪಡುವ ದೈಹಿಕ ಸಂಬಂಧ ಇಬ್ಬರನ್ನೂ ತೃಪ್ತಿಪಡಿಸುವುದಿಲ್ಲ ಎಂಬುದು ನಿಜ. ಅದು ಕಥೆಯ ಆಶಯದಂತೆಯೂ ಕಾಣುತ್ತದೆ. ಆದರೆ, ಇಟ್ ಲಿಬರೇಟ್ಸ್ ಗೌರಿ. ಹಾಗೆ, ಸುರೇಶನ ಭ್ರಮೆಯನ್ನೂ ಒಡೆಯುತ್ತದೆ. ತಾನು ಗಮಾರಿ ಎನ್ನುವ ತನ್ನ ಹೆಂಡತಿ ಮಾಡುವ ಮತ್ತು ಆಕೆ ಮಾಡಿದಾಗ ಗಮಾರತನ ಅನಿಸಿದ ಎಲ್ಲಾ ಕೆಲಸಗಳನ್ನು ಗೌರಿಯೂ ಮಾಡಿರುತ್ತಾಳೆ. ಅವಳ ಮನೆಯಲ್ಲೂ ವಿಂಡ್ ಚೈಮ್ಸ್ ಇದೆ, ಗೋಡೆ ತುಂಬಾ ಫೋಟೋ ಇದೆ, ಪಾಟ್ ನಲ್ಲಿ ಗಿಡ ಇದೆ. ಜೊತೆಗೆ ನನ್ನ ಪ್ರಕಾರ ಅವನನ್ನು ಕಾಡುವುದು ತಾನು ಬಳಸಲ್ಪಟ್ಟೆ ಎಂಬ ಭಾವ. ಮನೆ ತುಂಬಾ ಗಂಡನನ್ನೇ ತುಂಬಿಕೊಂಡಿರುವ ಗೌರಿ ತನ್ನನ್ನು ಬಳಸಿಕೊಂಡಳು ಎಂಬ ಭಾವ ಮೂಡುವುದು ಸಹಜ. ಏಕೆಂದರೆ, ಸುರೇಶನಿಗೆ ಬೇಕಾದದ್ದು ದೈಹಿಕ ತೃಪ್ತಿ ಅಲ್ಲ. ಅವನಿಗೆ, ಮುಂದೊಮ್ಮೆ ಅವಳ ಜೊತೆ ಜೀವನ ನಡೆಸಬೇಕೆಂಬ ಉದ್ದೇಶ ಇದೆ. ಅವನು ಮನೆಗೆ ಹೋಗಿ ಹೆಂಡತಿಯನ್ನು ತಬ್ಬಿ ಅಳುವುದರ ಹಿಂದೆ, ತಾನು ಹೆಂಡತಿಗೆ ಮೋಸ ಮಾಡಿದೆ ಎಂಬ ಅಪರಾಧ ಭಾವಕ್ಕಿಂತ ತಾನು ಮೋಸ ಹೋದ, ಮತ್ತು ತನ್ನ ಹೆಂಡತಿಯನ್ನು ಕೆಟ್ಟದಾಗಿ ನಡೆಸಿಕೊಂಡ ಅಪರಾಧ ಭಾವ ಇದೆ ಎಂಬುದು ನನ್ನ ಅಭಿಪ್ರಾಯ. ಆಳುವ ಮನಸ್ಥಿತಿಯ, ಪುರುಷಾಧಿಕಾರ ಪ್ರದರ್ಶಿಸುವ ಗಂಡಾದ ಸುರೇಶನಿಗೆ ತನ್ನ ತಪ್ಪಿನ ಅರಿವಾಗುವುದು ಯಥಾಸ್ಥಿತಿವಾದದ ಸಮರ್ಥನೆಯೇ?

ಕೊನೆಯದಾಗಿ, ಕಥೆ ಆಧುನಿಕವಾಗಿರಬೇಕು ಎಂಬ ಕಾರಣಕ್ಕಾಗಿ ಪಾತ್ರಗಳು ತಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ನಡೆದುಕೊಳ್ಳದಂತೆ ತಡೆಯುವುದು ಎಷ್ಟು ಸರಿ? ಆ ವ್ಯಕ್ತಿತ್ವ ನಾವು ಬೆಳೆದ ಮನೆ, ಪರಿಸರ, ಮೌಲ್ಯಗಳು, ಅನುಭವಗಳಿಂದ ರೂಪಿಸಲ್ಪಟ್ಟಿರುವಾಗ ಅದನ್ನು ಧಿಡೀರ್ ಎಂದು ಪೂರ್ತಿಯಾಗಿ ಧಿಕ್ಕರಿಸಿ ಅವುಗಳ ಕೈಯಲ್ಲಿ ಕ್ರಾಂತಿ ಮಾಡಿಸುವುದು ಎಷ್ಟು ಸಹಜವಾದೀತು? ಬದಲಾವಣೆಗಳು ಇಷ್ಟಿಷ್ಟೇ ನಡೆದಾಗ ಸಹಜವೆನಿಸುತ್ತವೆಯೇ ಹೊರತು ಅವುಗಳನ್ನು ಕ್ರಾಂತಿಯ ನೆಪದಲ್ಲಿ ತುರುಕಿದಾಗ ಅಲ್ಲ.

ಉಳಿದಂತೆ ಕರ್ವಾಲೋ ಪಾತ್ರ ಅನಗತ್ಯ ಎಂಬುದು ನಾನು ಹೇಳಿರುವ ಮಾತು, ಶೃತಿ ಹರಿಹರನ್ ಸೇರಿದಂತೆ ಹಲವರು ನಟನೆಯಲ್ಲಿ ಸೋತಿದ್ದಾರೆ ಎಂದು ನನಗೂ ಅನಿಸಿತು. ಚಿತ್ರ ದೃಶ್ಯಮಾಧ್ಯಮವಾಗಿ ಹೊಸದೇನನ್ನೂ ಪ್ರಯತ್ನಿಸುವುದಿಲ್ಲ. ಒಂದು ಕಥೆಯನ್ನು ಹಾಗೆಯೇ ತೆರೆಯ ಮೇಲೆ ತಂದಿದೆ ಮತ್ತು ಆ ನಿಟ್ಟಿನಲ್ಲಿ ಅಚ್ಟುಕಟ್ಟಾದ ಕೆಲಸ ಮಾಡಿದೆ. ಪ್ರಪಂಚದ ಚಿತ್ರಗಳೆಲ್ಲಾ ನಮ್ಮ ಕಂಪ್ಯೂಟರ್ ತೆರೆ ಮೇಲೆ ಈಗ ಮೂಡುತ್ತವೆ ಎಂಬ ಕಾರಣಕ್ಕೆ ನಮ್ಮ ಪ್ರಾದೇಶಿಕತೆಯನ್ನೂ ಸಂಪೂರ್ಣವಾಗಿ ನಿರ್ಲಕ್ಷಿಸಿ ಇದನ್ನು ವರ್ಲ್ಡ್ ಸಿನಿಮಾಗಳ ಸಾಲಿನಲ್ಲಿ ನಿಲ್ಲಿಸಿ ಹೋಲಿಸುವುದು ಸರಿಯಲ್ಲ. ಇರಾನಿನ, ಅರ್ಜೆಂಟೀನಾದ, ಕೊರಿಯಾದ ಹಾಗು ಭಾರತದ ಸತ್ಯಗಳು ಮತ್ತು ಪರಿಸ್ಥಿತಿಗಳು ಬೇರೆ ಬೇರೆಯಾಗಿರುತ್ತವೆ ಮತ್ತು ಅಲ್ಲಿಂದ ಬರುವ ಚಿತ್ರಗಳು ಆ ಸತ್ಯ ಮತ್ತು ಪರಿಸ್ಥಿತಿಗಳ ಮೇಲೆ ನಿಂತಿರುತ್ತವೆ ಎಂಬುದನ್ನು ನಾವು ಮರೆಯಬಾರದು.

4 comments to “ನಾತಿಚರಾಮಿ – ಒಂದು ಪ್ರತಿಕ್ರಿಯೆ.”
  1. ಕತೆಗಾರ ರಿಗೆ ಮಾತ್ರ ಹೊಳೆಯಬಹುದಾದ ಒಳನೋಟಗಳಿವೆ.ಸಾರ್ಥಕ ಓದು

  2. “ಗೌರಿ ಗಂಡ ಸತ್ತ ಮೂರು ವರ್ಷಗಳ ನಂತರವೂ ಅವನ ನೆನಪಲ್ಲೇ ಇರುವುದಕ್ಕೆ, ಅವನ ಮೇಲಿನ ಗಾಢ ಪ್ರೀತಿ, ನಂಟು ಕಾರಣ ಅನ್ನುವ ದೃಷ್ಟಿಕೋನ.” – ಇದು ಅತ್ಯಂತ ಅಥೆಂಟಿಕ್ ಆದ ಸ್ತ್ರೀ ದೃಷ್ಟಿಕೋನ ಅಂತ ನನಗನಿಸುತ್ತಿದೆ. ಕಡೆಯಲ್ಲಿ ತಾವಂದಂತೆ, ಕನ್ನಡದ ಪ್ರಸ್ತುತ ಬೆಳವಣಿಗೆಗಳೊಂದಿಗೆ ಥಳುಕು ಹಾಕಿ ವಿಮರ್ಶೆ ಮಾಡುವುದು ಹೆಚ್ಚು ಆಪ್ತವಾಗಬಲ್ಲುದು, ಲೇಖಕಿ ಪ್ರತಿಭಾ ನಂದಕುಮಾರರು ಎಂದಂತೆ ನಮ್ಮ ಕನ್ನಡದ್ದೇ `ಎಡಕಲ್ಲು ಗುಡ್ಡದ ಮೇಲೆ` ಪಕ್ಕ ಇಟ್ಟು ನೋಡಬಾರದೇಕೆ.

  3. ಕಿರಣ್ ಮಂಜುನಾಥ್ ಅವರು ಎತ್ತಿದ ಪ್ರಶ್ನೆಗಳಿಗೆ ಸರಿಯಾಗಿಯೇ ಉತ್ತರಿಸಿದ್ದೀರಿ ಮೇಡಂ. ಆದರೆ ನನ್ನ ತಕರಾರು ಇರುವುದು – “ಗೌರಿ ತನ್ನ ಬಾಸ್ ವಿರುದ್ಧ ಆಫೀಸಿಗೆ ಕೇಳುವಂತೆ ಏಕಾಏಕಿ ಕೂಗುವುದು ಅವಳ ರಕ್ಷಣಾ ತಂತ್ರ. ಇದರಲ್ಲಿ ಅಸಹಜ ಏನಿಲ್ಲ. ವೃತ್ತಿರಂಗದಲ್ಲಿ ಇಂತಹ ಸಮಸ್ಯೆಗಳನ್ನು ಎದುರಿಸುವ ಯಾವುದೇ ಹೆಣ್ಣು ಮಾಡುವ ಮತ್ತು ಮಾಡಲೇ ಬೇಕಾದ ಕೆಲಸ. ಅದು ಅಸಹಜ ಅನಿಸಿದೆ ಎಂದರೆ ಗೌರಿಯನ್ನು ಅವಳ ದೈಹಿಕ ಕಾಮನೆಗಳ ಹೊರತಾಗಿ ನೋಡಲು ಸಾಧ್ಯವಿಲ್ಲದ ನಮ್ಮ ದೌರ್ಬಲ್ಯ ಅಷ್ಟೇ” ಎಂದಿದ್ದೀರಿ.
    ಆದರೆ ಗೌರಿ ಸುರೇಶನ ಬಳಿ ತನ್ನ ಇಚ್ಛೆಯೇನೆಂದು ಹೇಳಿಕೊಂಡಾಗ ಅವನು ಪ್ರತಿಕ್ರಿಯಿಸಿದ್ದನ್ನೂ ನಾವು ಇದೇ ಕಾರಣ ಕೊಟ್ಟು ಸಮರ್ಥಿಸಿಕೊಳ್ಳಬಹುದಲ್ಲವೇ? ಇಷ್ಟಕ್ಕೂ ಗೌರಿಯ ಆಫೀಸ್ ಮ್ಯಾನೇಜರ್ ನ Approach ನೋಡಿದರೆ ಆತ ಸಂಭಾವಿತನೆಂದೇ ಅನಿಸುತ್ತದೆ. ಎಲ್ಲರ ಮುಂದೆ ಆತನನ್ನು ಅವಮಾನಿಸುವ ಅಗತ್ಯವೇ ಇರಲಿಲ್ಲ. ಸ್ಪಷ್ಟವಾಗಿ ನಿರಾಕರಿಸಿದರೆ ಅಷ್ಟೇ ಸಾಕಿತ್ತು.

ಪ್ರತಿಕ್ರಿಯಿಸಿ