-7-
“ಬಿಡು ಬಿಡು, ಲೀಝಾ ಪುಸ್ತಕದ ಪ್ರಶ್ನೆಯೇ ಬರುವುದಿಲ್ಲ ಇಲ್ಲಿ. ಏಕೆಂದರೆ ನನ್ನಂತಹಾ ಅನ್ಯನನ್ನೇ ಈ ಜಾಗ ಹಾಗೂ ಈ ಸ್ಥಿತಿ-ಗತಿಗಳು ರೋಗಗ್ರಸ್ಥನನ್ನಾಗಿಸಿದೆ. ಇಲ್ಲಿಯ ವಾತಾವರಣದಿಂದ ನನಗೇ ರೇಜಿಗೆ ಯಾಗಿಬಿಟ್ಟಿದೆ. (ಅದೂ ನಾನು ಬಂದು ಎರಡು ಗಂಟೆಯೂ ಆಗಿಲ್ಲ, ಅಷ್ಟು ಬೇಗ!) ಇದು ರೋಗಗಳ ತಾಣ. ನನ್ನ ಮಾತು ಹೋಗಲಿ, ಯಾಕೆ ನಿನಗೆ ಅಸಹ್ಯವಾಗಲಿಲ್ಲವೇ ಈ ಜಾಗ ಹೇಳು…? ಇಲ್ಲ ನಿನಗೇನು ಅನ್ನಿಸಿಲ್ಲ, ಅಭ್ಯಾಸವಾಗಿ ಬಿಟ್ಟಿದೆ ನಿನಗೆ! ದೆವ್ವಕ್ಕೆ ಮಾತ್ರ ಗೊತ್ತು, ಈ ಅಭ್ಯಾಸದಿಂದ ಮನುಷ್ಯ ಹೇಗೆಲ್ಲಾ ಬದಲಾಗುತ್ತಾನೆ ಅಂತ. ನೀನು ಬಹುಶಃ ಹೀಗೇ ಎಳೆ ಹುಡುಗೀ ಥರ, ಚೆಂದ ಚೆಂದಕ್ಕೇ ಇರ್ತೀಯ… ನಿನಗೆ ವಯಸ್ಸೇ ಆಗೋದಿಲ್ಲ, ನೀನು ಮುದುಕಿಯಾಗೋ ಕಾಲ ಅಂತೂ ಬರೋದೇ ಇಲ್ಲ ಅನ್ನೋ ಭ್ರಮೆಗೆ ಬಿದ್ದಿದ್ದೀಯ ಪಾಪ! ಈಗ ಏನಪ್ಪ ನಿನ್ನ ಕಲ್ಪನೆ? ಇಲ್ಲಿ ಜನ ನಿನ್ನ ಕಡೇ ತನಕ ಇಲ್ಲೇ ಇಟ್ಕೋತಾರೇ ಎಂದೋ? ಈ ಸುಡುಗಾಡ್ ಜಾಗದಲ್ಲಿ… ಛೇ… ಛೇ… ಅದೂ ನಿನ್ನಂಥ ಶುದ್ಧಆತ್ಮದ, ಸುಂದರ ಹುಡುಗೀ… ಇಲ್ಲೀ?! ಬೇರೆಯವರನೆಲ್ಲ ಬಿಡೂ ಲೀಝಾ, ಇಲ್ಲಿಗೆ ಬಂದಾಗ ನನಗೇ ನಿನ್ನ ಪಕ್ಕ ನಿಲ್ಲಲೂ ಅಸಹ್ಯ ಆಗುತಿತ್ತು. ಅಷ್ಟು ಹೇಸಿಗೆಯ ಜಾಗ ಇದು. ಇಲ್ಲಿಗೇ ಬರೋರೆಲ್ಲ ಬರೀ ಕುಡುಕರು ಮತ್ತು ಮನೆಹಾಳರು. ನೀನು ಬೇರೆ ಕಡೆ, ಈ ಉತ್ತಮರ ಜತೆ ಚೆನ್ನಾಗಿಯೇ ಬದುಕಿ ಬಾಳುತ್ತಾ ಇದ್ದರೆ ನಿನ್ನ ಹಿಂದೆ ನಾನು ಬಿದ್ದಿರುತ್ತಿದ್ದೆ, ಪ್ರೇಮರೋಗಿಯಂತೆ! ಮಾತು ಬಿಡು, ನಿನ್ನ ಒಂದು ನೋಟ ಸಾಕಾಗಿತ್ತು ಆಗ ನನಗೆ; ನಿನ್ನೇ ಕಾಯುತ್ತಾ, ನೀನು ಹೆಜ್ಜೆ ಹಾಕೋ ಹಾದಿಯಲ್ಲಿ ಕಲ್ಲಾಗಿರುತ್ತಿದ್ದೆ. ನಿನ್ನ ಮುಂದೆ ಮಂಡಿಯೂರಿ ಪ್ರೇಮ ಭಿಕ್ಷೆ ಬೇಕಾದರೂ ಬೇಡುತಿದ್ದೆ; ಕೊನೆಗೂ ನನ್ನ ಕಾಟಕ್ಕೆ ಮನಸ್ಸು ಕೊಟ್ಟು, ನೀನೇನಾದಾರು ನನ್ನ ಅರ್ಧಾಂಗಿಯಾದರೆ ಅದೇ ನನಗೇ ಮಹಾ ಘನತೆ ಅನ್ನಿಸೋ ಕಾಲವದು; ಆಗ, ನಿನ್ನ ಬಗ್ಗೆ ಕೊಳಕಾಗಿ ಒಂದೇ ಒಂದು ಮಾತನಾಡಲು ನನಗೆ ಧೈರ್ಯ ಸಾಲುತ್ತಾ ಇರಲಿಲ್ಲ. ಆದರೆ ಇಲ್ಲಿ ನಿನಗಿಷ್ಟ ಇರಲಿ, ಇಲ್ಲದೇ ಇರಲಿ, ಒಂದು ಶಿಳ್ಳೆ ಹೊಡೆದರೆ ನೀನು ಕುಣಿಯುತ್ತಾ ಬಂದು ನನ್ನೆದುರು ಹಾಜರ್ರ್; ನಾನು ನಿನ್ನ ಗುಲಾಮ ಅಲ್ಲ, ಇಲ್ಲಿ ನೀನೇ ನನ್ನ ದಾಸಿ! ಒಬ್ಬ ಕತ್ತೆಹೊಡೆಯೋ ಕಾರ್ಮಿಕನೂ ದಿನಗೂಲಿಯಾಗಿ ದುಡಿದರೂ ಜೀವನಪೂರ್ತಿಯಾಗಿ ದಾಸನಾಗಿರುವುದಿಲ್ಲ. ಅವನದು ದಿನದ ಲೆಕ್ಕ, ಆ ಗಡುವು ಆದ ಮೇಲೆ ಅವನೂ ಸ್ವತಂತ್ರ ಜೀವಿ. ಆದರೆ ನೀನು ಸ್ವತಂತ್ರಳಾಗಲು ಇಲ್ಲಿ ಎಷ್ಟು ದಿನ ಬಿದ್ದಿರಬೇಕು? ಬಿಡು ಬಿಡು, ಇಲ್ಲಿ ಏಕೆ ನೀನು ತೊತ್ತಾಗಿರುವೆ ಅಂತಾದರೂ ಗೊತ್ತೇ ನಿನಗೆ? ನಿನ್ನ ಆತ್ಮ ಮತ್ತು ನಿನ್ನ ದೇಹ, ಈ ಎರಡನ್ನೂ ಜತೆಯಾಗಿ ಇಲ್ಲಿ ಒತ್ತೆ ಇಟ್ಟಿರುವುದಕ್ಕೆ! ಇಷ್ಟು ಸಾಲದು ಅಂತ ನಿನ್ನ ಪ್ರೀತಿಯನ್ನು ಕಂಡ-ಕಂಡ ಕುಡುಕ ನೀಚರಿಗೆಲ್ಲಾ ಧಾರೆ ಎರೆಯುತ್ತಿರುವೆ ಬೇರೆ! ಪ್ರೀತಿ ಒಂದು ಮಹೋನ್ನತ ವಜ್ರ, ಹೆಣ್ಣಿನ ನಿಜನಿಧಿ, ಅವಳಿಗೆ ಪ್ರೀತಿಯೇ ಎಲ್ಲ. ಈ ಪ್ರೀತಿಯ ಕೆಡದಂತೆ ತಡೆಯಲು ಎಷ್ಟೋ ಜನ ತಮ್ಮ-ತಮ್ಮ ಆತ್ಮಗಳನ್ನೇ ಬಲಿಕೊಡುತ್ತಾರೆ, ಬದುಕನ್ನೇ ಬಿಟ್ಟು ಬಿಡುತ್ತಾರೆ. ಆದರೆ ಇಲ್ಲಿ? ಯಾವ ಸೀಮೆ ಬೆಲೆ ಇದೆ ನಿನ್ನ ಪ್ರೀತಿಗೆ? ಮತ್ತೆ ಈ ನಿನ್ನ ಲೆಕ್ಕಕ್ಕೇ ಇಲ್ಲದೇ ಇರೋ ಪ್ರೀತಿಗೆ ಅಂತ ಯಾವ ಪರದೇಸಿ ತಾನೆ ಕಾಯುತ್ತಾನೆ? ಮತ್ತೆ ಯಾತಕ್ಕಾಗಿ ಕಾಯಬೇಕು? ಆ ನಿನ್ನ ಕೆಲಸಕ್ಕೆ ಬಾರದ ಪ್ರೀತಿಯಿಲ್ಲದೆ ಯಥಾಪ್ರಕಾರ ಮತ್ತೆಲ್ಲ ಬಿಟ್ಟಿಯಾಗಿಯೇ ಕೈಗೆ ಸಿಗುವಾಗ! ಹೇಗಿದ್ದರೂ ನಿನ್ನನ್ನು ಇಡಿ-ಇಡಿಯಾಗಿ ಖರೀದಿಸಬಹುದಲ್ಲ ಇಲ್ಲಿ. ಆದರೆ ನೋಡು ಯಾವುದೇ ಹುಡುಗಿಗೆ ಇದಕ್ಕಿಂತ ದೊಡ್ಡ ಅವಮಾನ ಇನ್ನೊಂದು ಖಂಡಿತಾ ಇಲ್ಲ. ನಾನು ಕೇಳಿದ ಹಾಗೇ ಅವರು ನಿನಗೆ ಸಮಾಧಾನ ಹೇಳುತ್ತಾರೆ; ನಿಮಗಿಷ್ಟ ಬಂದ ನಲ್ಲರನ್ನು ನೀವು ಇಟ್ಟುಕೊಳ್ಳಲು, ಅವಕಾಶ ಬೇರೆ ಕೊಡುತ್ತಾರಂತೆ. ಅದನ್ನೇನಾದರೂ ನಿಜ ಎಂದು ನಂಬಿದರೆ ನಿಮ್ಮಂಥ ಪೆದ್ದರು ಬೇರೆ ಇಲ್ಲ! ಬರಿ ಕೇವಲ ಆಟ, ವಂಚನೆ ಜನರು ನಿನ್ನ ಸಾಕೋರು. ಬೆಣ್ಣೆಯ ಮಾತುಗಳಲ್ಲಿ ಪುಸಲಾಯಿಸಿ ನಿಮ್ಮಿಂದಲೇ ತಮ್ಮ ದಂಧೆ ಕುದುರಿಸೋ ದುಷ್ಟರು. ಇಷ್ಟೆಲ್ಲ ಆದ ಮೇಲೆ ನಿಮ್ಮ ಬೆನ್ನ ಹಿಂದೇ ನಿಮ್ಮನೇ ಗೇಲಿ ಮಾಡಿ ಬಿದ್ದು ಬಿದ್ದು ನಗೋ ಮನುಷ್ಯರು ಇವರೆಲ್ಲ. ಆ ನಿನ್ನ ತಲೆಹಿಡುಕ ಇದ್ದಾನಲ್ಲ, ಹ್ಞೂಂ… ಅವನೇ ನಿನ್ನ ನಲ್ಲ ಆತ ನಿನ್ನ ಪ್ರೀತಿ ಮಾಡುತ್ತಾನೆ ಅಂತಾ ನಂಬೀದ್ದೀಯ? ನನಗಂತೂ ನಿನ್ನ ಆ ನಂಬಿಕೇಲಿ ಚೂರೂ ನಂಬಿಕೆ ಇಲ್ಲ. ಈ ಕ್ಷಣವೇ ನಿನ್ನನ್ನು ಬೇರೊಬ್ಬ ಎತ್ತಿ ಹಾಕಿಕೊಂಡು ಹೋಗುತ್ತಾನೆ ಅಂತ ತಿಳಿದಿದ್ದರೂ ಸುಮ್ಮನಿರೋ ಅವ ಖಂಡಿತ ಪ್ರೇಮಿಯೇ ಅಲ್ಲ! ಕೊಳಕು ಖದೀಮ ಅಷ್ಟೇ! ನಿನ್ನ ಮೇಲೆ ಅವನಿಗೆ ಇಷ್ಟಾದರೂ ಗೌರವವಿದೆಯೇ?! ನಿನಗೂ ಅವನಿಗೂ ಏನು ಸಾಮ್ಯತೆ ಇದೆ? ನಿನ್ನಿಂದ ದುಡ್ಡು ಹೊಡೆದು ನಿನ್ನೇ ಅಣಕಿಸುತ್ತಿದ್ದಾನೆ ಆತ. ಅದೇ ಅವನ ಪ್ರೀತಿ! ನಿನ್ನ ಬಡಿಯದಿದ್ದರೆ, ಅದೇ ನಿನ್ನ ಪುಣ್ಯ, ಆದರೆ ಬಹುಶಃ ಅವನು ಬಡಿಯುತ್ತಾನೇನೋ! ಮದುವೆಯಾಗುತ್ತಾನಾ ನಿನ್ನನ್ನು ಅವನು? ಕೇಳು, ಆಗುತ್ತೀಯ ಅಂತ, ಆಗ ಅವನು ನಿನ್ನ ಮುಖ ನೋಡಿ ಬಿದ್ದು ಬಿದ್ದು ನಗುತ್ತಾನೆ. ಯಾರಿಗೆ ಗೊತ್ತು ಉಗಳಬಹುದು ಅಥವಾ ನಾಲ್ಕು ಬಿಗಿಯಬಹುದು. ಅವನೇ ತಿರುಪೆಯಲ್ಲಿ ಹೆಕ್ಕಿ ತಿನ್ನುವ ತಿರುಬೋಕಿ, ಅದರ ಜತೆಗೆ ನಿನ್ನ ಮೇಲೆ ಅಧಿಕಾರ ಚಲಾಯಿಸುವ ದುರಹಂಕಾರಿ. ಇಂತಹ ಜನರಿಗೋಸ್ಕರ ನಿನ್ನ ಬಾಳನ್ನು ನಾಶಮಾಡಿಕೊಂಡೆಯಾ ನೀನು? ಅಲ್ಲಾ ನಿನಗೇ ಕುಡಿಯಲು ಕಾಫಿ, ತಿನ್ನಲು ಸರಿಯಾಗಿ ತಿಂಡಿಯಾದರೂ ನೀಡುತ್ತಾನ ಆ ತಲೆಹಿಡ್ಕ? ಹೊಟ್ಟೆಗೆ ಏನು ಹಾಕುತ್ತಾರೆ ಇಲ್ಲಿಯವರು? ಒಂದು ಪ್ರಾಮಾಣಿಕ ಹುಡುಗಿಗೆ ಇವರು ತರೋ ಚಂಪಾಕಲಿ-ಜಾಮೂನುಗಳನ್ನು ನುಂಗಕ್ಕೇ ಆಗಲಿಕ್ಕಿಲ್ಲ, ಆ ಹೆಣ್ಣಿಗೆ ಗೊತ್ತಿರುತ್ತೆ,ಇಷ್ಟೆಲ್ಲಾ ಮುದ್ದು ಮಾಡಿ,ತಿನ್ನಿಸಿ, ಕುಡಿಸಿ, ಕೊಬ್ಬಿಸಿ, ಅವಳ ದೇಹ ಮಾರಿ ಈ ಸೂಳೆಮಕ್ಕಳು ಮಜಾ ಉಡಾಯಿಸುತ್ತಾರೆ ಅಂತ. ನಿನ್ಗೇ ಗೊತ್ತಿಲ್ಲ ಅದೆಲ್ಲ ಅನ್ನಿಸುತ್ತೆ. ಈಗ ಸಾಲದ ನಂಜಲ್ಲಿ ದಿನ ತಳ್ಳುಇತ್ತಾ ಇದ್ದೀಯ ನೀನು, ಈ ಸಾಲದ ವಿಷ ನಿನ್ನ ಮೆಲ್ಲ-ಮೆಲ್ಲನೆ ಕೊಲ್ಲುತ್ತಿದೆ. ಒಂದಲ್ಲ ಒಂದು ದಿನ – ಅಂದರೆ ತುಂಬಾ ಬೇಗ- ಅಸಹ್ಯದಲ್ಲಿ ನಿನ್ನ ತಿರಸ್ಕರಿಸಿ, ಈ ಗಿರಾಕಿಗಳು ಗಂಟುಮೂಟೆ ಕಟ್ಟುತ್ತಾರೆ; ಆಮೇಲೆ ನೀನು ಸಾಲದ ಕೂಪ ಮಂಡೂಕ! ಒದ್ದಾಡುತ್ತೀಯ ನೀನು ಆಗ! ಈಗ ಏನಪ್ಪಾ ನಿನ್ನ ಊಹೆ? ಈ ತಾಜಾ ಯೌವ್ವನ ನಿನ್ನ ಕಾಪಾಡುತ್ತೇ ಅಂತಾನ? ಹಾಗೇನು ಆಗೋದಿಲ್ಲ. ಎಲ್ಲವೂ, ಕೈಯಿಂದ ಜಾರುವ ಮರುಳಿನ ಕಣಗಳಂತೆ ಕಳೆದುಹೋಗುತ್ತವೆ. ಆಮೇಲೆ ನಿನ್ನನ್ನು ತೆಗೆದು ಆಚೆಗೆ ಒಗೆಯುತ್ತಾರೆ ಈ ಜನ. ಅದಕ್ಕೂ ಬಹಳ ಮುಂಚೆಯಿಂದಲೇ ನಿನ್ನ ಕ್ಷುಲ್ಲಕ ಕಾರಣಗಳಿಗೆಲ್ಲಾ ಬೈಯಲು ಶುರುಮಾಡುತ್ತಾರೆ ನಿನ್ನಲ್ಲಿ ತಪ್ಪು ಹುಡುಕುತ್ತಾರೆ. ಈ ಜಾಗದ ಮಾಲಕಿಗಾಗಿ ನೀನು ಅಷ್ಟೆಲ್ಲಾ ತ್ಯಾಗ ಮಾಡಿರೋದನ್ನೇ ಮರೆತು ನಿನ್ನನ್ನೇ ಗಲೀಜು ಪದಗಳಲ್ಲಿ ಉಗಿಯುತ್ತಾರೆ. ನಿನ್ನ ತಾರುಣ್ಯ ಸುಮ್ಮನೆ ನಷ್ಟವಾಗಿ, ನಿನ್ನ ಆರೋಗ್ಯ ಉರಿದು ಹೋಗುತ್ತದೆ, ಅಯ್ಯೋ ಹುಡುಗೀ ನಿನ್ನ ಆತ್ಮವನ್ನ ನೀನೇ ಕಸದ ಬುಟ್ಟಿಗೆ ಬಿಸಾಕುತ್ತಿದ್ದಿಯಲ್ಲೇ! ಅದೂ ಈ ಜಾಗದ ಮಾಲಕಿಯ ಶೋಕಿ ಬದುಕಿಗಾಗಿ. ನಿನ್ನನ್ನು ಇಲ್ಲಿಂದ ಎಸೆಯುವ ಮುನ್ನ ನಿನ್ನ ಯಜಮಾನ್ತಿಯಂತೂ ನೀನೇ ಅವಳಲ್ಲಿ ಇದ್ದ ಎಲ್ಲವನ್ನೂ ದರೋಡೆ ಮಾಡಿದೆಯೆಂದೂ, ನೀನೇ ಅವಳನ್ನು ನಾಶ ಮಾಡಿ ಬೀದಿ-ಭಿಕಾರಿಯನ್ನಾಗಿಸಿದೆ ಎಂದೂ ಕೂಗಾಡುತ್ತಾಳೆ. ಇಲ್ಲಿರುವ ಬೇರೆ ಹುಡುಗಿಯರಿಂದ ನೆರವನ್ನು ನಿರೀಕ್ಷಿಸಲೇ ಬೇಡ… ತಮ್ಮ ಮಾಲಕಿಯ ಮೆಚ್ಚಿಸಲು, ನಿನ್ನ ಜತೆಗಾರ್ತಿಯರಿದ್ದಾರಲ್ಲಾ, ಅವರೇ ಚಿರತೆಗಳಂತೆ ನಿನ್ನ ಮೇಲೆ ಬೀಳುತ್ತಾರೆ. ದಾಸಿಯಾರಗಿಯೇ ದಿನಗಳನ್ನು ದೂಡಿ, ಇಲ್ಲಿಯೇ ಕೊಳೆತು ಅವರೆಲ್ಲರ ಆತ್ಮಸಾಕ್ಷಿ ಸತ್ತಿದೆ. ನಾಚಿಕೆಗೆಟ್ಟ, ಕುತ್ಸಿತ ಜಂತುಗಳವರು. ಜಗತ್ತಿನಲ್ಲಿ ಅವರ ಅಶ್ಲೀಲ ಆಕ್ರಮಣಕ್ಕೆ ಮೀರಿದ ಭಯಾನಕತೆ ಇನ್ನೊಂದಿಲ್ಲ. ನಿನ್ನ ಸೌಂದರ್ಯ, ನಿನ್ನ ಆತ್ಮ ವಿಶ್ವಾಸ, ನಿನ್ನ ಕನಸುಗಳು, ನಿನ್ನ ನಂಬಿಕೆ ಎಲ್ಲವನ್ನೂ ಈ ಹಾಳು ಮನೆಯಲ್ಲಿ ಕಳೆದುಕೊಂಡು ಇಪ್ಪತ್ತರೆಡನೆಯ ವಯಸ್ಸಿಗೆಲ್ಲಾ ಮೂವತ್ತೈದರ ಹಾಗೆ ಕಾಣುತ್ತೀಯ. ರೋಗ ಬರದಿದ್ದರೆ ಅದು ನಿನ್ನ ಅದೃಷ್ಟವಷ್ಟೇ! ಆಗ ನಿನಗೆ ಏನೂ ಆಗದಿರಲಿ ಎಂದು ಈಗಲೇ ದೇವರನ್ನು ಪ್ರಾರ್ಥಿಸು! ಬಹುಶಃ ನೀನು ಈಗ, ಆ ಬದುಕೇ ಬಹಳ ಮಜ ಏಕೆಂದರೆ ಆಗ ಮಾಡಲು ಯಾವ ಕೆಲಸವೂ ಇರುವುದಿಲ್ಲ ಎಂದು ಯೋಚಿಸುತ್ತಿದ್ದೀಯೇನೋ! ಹಾಗಿದ್ದರೂ ಯಾವ ಶಿಕ್ಷೆಯೂ ಈ ಕೆಲಸದಷ್ಟು ಘೋರವಾಗಿಯೂ, ಇಷ್ಟು ಕಷ್ಟದ ಯಾತನೆಯ ಹೊರೆಯ ಹೊರೆಸಲ್ಲ. ಅಂಥಹ ವೇದನೆಯೊಂದೇ ಸಾಕು, ನಿನ್ನ ಹೃದಯವನ್ನು ಅತ್ತು… ಅತ್ತು ಕಕ್ಕಲು! ಇಲ್ಲಿಂದ ಎಸೆದ ನಂತರ ಒಂದು ಶಬ್ದ ಪಠಿಸಲೂ ಹೆದರುತ್ತೀಯ ನೀನು. ನಿನ್ನನ್ನವರು ಬಿಸಾಡಿದ ಮೇಲೆ ಇಲ್ಲಿಂದ ಪಾಪಿಷ್ಟೆಯ ಹಾಗೆ ಇನ್ನೆಲ್ಲಿಗೋ ಹೋಗುವೆ, ಅಲ್ಲಿಂದ ಮತ್ತೆಲ್ಲಿಗೋ, ಬೇರೆಲ್ಲಿಗೋ, ಆಮೇಲೆ ಎಲ್ಲಿ-ಎಲ್ಲಿಗೋ! ಕಟ್ಟಕಡೆಗೆ ಹೇ ಮಾರ್ಕೆಟ್* ಸೇರಿಕೊಳ್ಳುವ ಕಾಲ ಬರುತ್ತದೆ. ಅಲ್ಲಿ ಮಾತ್ರ ನಿನಗೆ ಹೇಗೆ ಅವರು ಚಚ್ಚುತ್ತಾರೆ ಎಂದರೆ ಅಬ್ಬಾ…! ಬಹಳ ಕೆಟ್ಟದಾಗಿರುತ್ತದೆ ಆ ಸ್ಥಿತಿ. ಅಲ್ಲಿನ ಅತಿಥಿಗಳಿಗೆ ಅದೇ ಸಂಸ್ಕೃತಿ! ಅವರಿಗೆ ಮೊದಲು ಬಡಿಯದೆ ಪ್ರೀತಿಸುವ ಬಗೆ ತಿಳಿದಿಲ್ಲ. ನಿನಗಿನ್ನೂ ನಂಬಿಕೆ ಇಲ್ಲ ಅಲ್ಲವೇ ಆ ಜಗತ್ತಿನ ಕುತ್ಸಿತ ನಂಜಿನ ಕತ್ತಲೆಯ ಬಗ್ಗೆ? ಹಾಗಿದ್ದರೆ ಹೋಗಿ ನೀನೇ ನೋಡು… ಕೆಲ ಕಾಲವಾದ ಮೇಲೆ ಬಹುಶಃ ನಿನ್ನ ಕಣ್ಣಾರೆ ಅದನ್ನು ನೀನೇ ಕಾಣುತ್ತೀಯ ಅಂತ ಅನಿಸುತಿದೆ ಯಾಕೋ ನನಗೆ.
ಒಮ್ಮೆ, ಒಂದು ಹೊಸವರುಷದ ದಿನದಂದು, ಆ ಹೇ ಮಾರ್ಕೆಟ್ಟಿನಲ್ಲಿದ್ದ ಸೂಳೆಮನೆಯ ಬಾಗಿಲ ಬಳಿ ಬಿದ್ದಿದ್ದ ಒಂದು ಹುಡುಗಿಯನ್ನು ನೋಡಿದ್ದೆ. ಅವಳು ತುಂಬಾ ಕೂಗಾಡುತ್ತಿದ್ದಳಂತೆ ಅದಕ್ಕೇ ಆಕೆಗೆ ಹೊರಗಿನ ಕೊಳಕು ಹಿಮದ ರುಚಿ ತೋರಿಸಲು ಆಚೆ ಹಾಕಿದ್ದರು, ಅದೂ ಬರೀ ತಮಾಷೆಗೆಂದು. ಆದರೆ ತಕ್ಷಣವೇ ಬಾಗಿಲೆಳೆದು, ಚಿಲಕ ಕೂಡ ಜಡಿದಿದ್ದರು. ಬೆಳಗ್ಗೆ ಒಂಭತ್ತು ಘಂಟೆಯಾಗಿತ್ತು, ಅಷ್ಟೊತ್ತಿಗಾಗಲೇ ಅವಳು ತುಂಬಾ ಕುಡಿದಿದ್ದಳು. ಅವಳ ಕೂದಲು ಕೆದರಿತ್ತು, ಅರ್ಧ ಬೆತ್ತಲಾಗಿದ್ದಳು, ಹೊಡೆದಿದ್ದರಿಂದ ಮೈಯೆಲ್ಲಾ ನೀಲಿಗಟ್ಟಿತ್ತು. ಮುಖದ ತುಂಬಾ ಯಾವುದೋ ಪುಡಿ ಚೆಲ್ಲಿತ್ತು; ಒಂದು ಕಣ್ಣು ಕಪ್ಪಾಗಿತ್ತು; ಮೂಗು ಮತ್ತು ಹಲ್ಲುಗಳಿಂದ ರಕ್ತ ಚೊಟ್ಟುತಿತ್ತು. ಯಾರೋ ಜಟಕಾ ಸವಾರನೋ ಅಥವಾ ಇನ್ನೊಬ್ಬ ಸುಡುಗಾಡು ಸಿದ್ಧನೋ ಅವಳಿಗೆ ಹಾಗೆ ಚಚ್ಚಿದ್ದರೇನೋ. ಅವಳು ಚೀರಾಡಿ ಊಳಿಡುತ್ತಿದ್ದಳು, ಕಲ್ಲಿನ ಮೆಟ್ಟಲಲ್ಲಿ ಕೂತು, ಸತ್ತ ಉಪ್ಪು ಸವರಿದ್ದ ಮೀನಿಂದ ಆ ಮೆಟ್ಟಿಲನ್ನು ಜಜ್ಜುತ್ತಾ ತನ್ನ ಅದೃಷ್ಟದ ಬಗ್ಗೆ ಏನೋ ಗೊಣಗಿ ಗೋಳಾಡುತ್ತಿದ್ದಳು. ಆಗ ಬಾಗಿಲ ಬಳಿ ನಿಂತಿದ್ದ ಜಟಕಾ ಸವಾರರೂ, ಕುಡಿದ ಸೈನಿಕರೂ, ಸುತ್ತಾ ಗುಂಪು ಸೇರಿ, ಆಕೆಯನ್ನು ಕಿಚಾಯಿಸುತ್ತಿದ್ದರು. ನೀನು ಅವಳ ಹಾಗೆ ಆಗುವುದಿಲ್ಲ ಅಂತ ಏನು ಖಾತ್ರಿ ಇದೆ? ಈಗ ನಿನಗೂ ಹಾಗೆಯೇ ಆಗುತ್ತದೆ ಎಂದು ನಂಬಲು ನನಗೆ ಸ್ವಲ್ಪವೂ ಇಷ್ಟವಿಲ್ಲ; ಆದರೂ, ಸುಮಾರು ಎಂಟು ಹತ್ತು ವರುಷಗಳ ಕೆಳಗೆ, ಆ ಉಪ್ಪಿನ ಮೀನನ್ನು ಹಿಡಿದ ಹೆಣ್ಣು, ಈ ಜಾಗಕ್ಕೆ ಕಿನ್ನರಿಯಂತೆ ಬಂದಳೇನೋ. ಚೂರೂ ಕೇಡಿನ ಪರಿಚಯವಿಲ್ಲದೆ, ನಿನ್ನ ಹಾಗೇ ಮಾತು-ಮಾತಿಗೂ ನಾಚುವ ಮುಗ್ಧೆಯಾಗಿದ್ದಳೋ ಏನೋ. ತನ್ನ ಬಗ್ಗೆ ಅಭಿಮಾನ, ಬೇಗ ಬಿಗುಮಾನಕ್ಕಿಳಿಯುವ ಸೂಕ್ಷ್ಮ ಮನಃಸ್ಥಿತಿ, ಬೇರೆಯವರೆಲ್ಲರಿಗಿಂತ ಭಿನ್ನವಾಗಿ, ಯಾರೋ ಮಹಾರಾಜರ ಮಗಳಷ್ಟು ಚೆನ್ನಾಗಿದ್ದಳೋ ಏನೋ. ಒಬ್ಬ ರಾಜಕುಮಾರ ನನ್ನ ಆಳವಾಗಿ ಪ್ರೀತಿಸುತ್ತಾನೆ, ನಾನೂ ಅವನನ್ನು ಹಾಗೇ ಇಷ್ಟಪಡುತ್ತೇನೆ ಅನ್ನೋ ಹಂಬಲದಲ್ಲಿ ಕಾದಿದ್ದಳೋ ಏನೋ, ಆದರೆ ನೋಡಿದೆಯಾ ಇವೆಲ್ಲಾ ಹೇಗೆ ಕೊನೆಯಾಯಿತು? ಆಗ, ಕೆದರಿದ ಕೂದಲನ್ನೆಲ್ಲಾ ಹಾರಲು ಬಿಟ್ಟು, ಜರ್ಜರಿತವಾದ ದೇಹವನ್ನು ಎಳೆದುಕೊಂಡು, ಮೀನಿನಲ್ಲಿ ಮೆಟ್ಟಿಲ ಚಚ್ಚುತ್ತಾ ಕೂತಿದ್ದ ಹುಡುಗಿಗೆ, ಹಠಾತ್ತಾಗಿ ತಾನು ಶುದ್ಧ ಹುಡುಗಿಯಾಗಿದ್ದಾಗ, ಅಪ್ಪನ ಮನೆಯಿಂದ ಶಾಲೆಗೆ ಹೋಗುತ್ತಿದ್ದ ಆ ಹಳೆಯ ದಿನಗಳಲ್ಲಿ, ಆ ಪಕ್ಕದ ಮನೆಯ ಹುಡುಗ, ಇವಳ ಹಾದಿ ಕಾಯುತ್ತಾ, ‘ಸಾಯುವರೆಗೂ, ಸತ್ತ ಮೇಲೂ ನಾನು ನಿನ್ನೇ ಪ್ರೀತಿಸೋದು’ ಎಂದು ಆಣೆ ಮಾಡಿ ಅವಳ ಕೈಗೆ ಮುತ್ತಿಟ್ಟು ತಾವಿಬ್ಬರೂ, ಬೆಳೆಯುತ್ತಿದ್ದ ಹಾಗೆ ಮದುವೆಯಾಗುವ ಹೊಂಗನಸು ಕಂಡ ದಿನಗಳ ನೆನಪು ಮರುಕಳಿಸಿದ್ದರೆ!
ಲೀಝಾ…! ಆ ಹೇ ಮಾರ್ಕೆಟ್ ಬಿಟ್ಟು ಬೇರೊಂದು ಮನೆಯ ನೆಲಮಾಳಿಗೆಯಲ್ಲೇ ಅಥವಾ ಅಟ್ಟದಲ್ಲೋ ಕ್ಷಯರೋಗ ಬಂದು ಸತ್ತರೆ ಅದೇ ಮಹಾ ಭಾಗ್ಯ ನಿನಗೆ! ಆದರೆ ಆಗ ನಾನು ಮಾತಾಡಿದನೆಲ್ಲಾ, ಆ ಹುಡುಗಿಯಂತೆ ನೀನು ಅಲ್ಲೂ ಸಾಯದಿದ್ದರೆ…?! ಆಯಿತಮ್ಮ, ನಿನ್ನನ್ನು ಅವರು ಆಸ್ಪತ್ರೆಗೆ ಸೇರಿಸ್ತಾರೆ ಅಂತಾನೆ ಇಟ್ಟುಕೋ. ಆದರೆ ನಿನ್ನ ಯಜಮಾನಿಗೆ ನೀನು ಇನ್ನೂ ಬೇಕು ಎನಿಸಿದರೆ? ಕ್ಷಯ ಒಂದು ವಿಚಿತ್ರ ರೋಗ, ಅದು ಜ್ವರದಂತಲ್ಲ. ಕ್ಷಯವಿದ್ದವರು ಸಾಯುವ ಘಳಿಗೆಯ ತನಕವೂ ಬದುಕುಳಿಯುವ ಕನವರಿಕೆಯಲ್ಲೇ ಕಾಲಹರಣ ಮಾಡುತ್ತರೆ. ಅದಕ್ಕೋಸ್ಕರ ತಾವಿನ್ನೂ ಆರೋಗ್ಯವಂತರೇ, ಎಂದು ತಮಗೆ ತಾವೇ ಸುಳ್ಳು ಹೇಳುತ್ತಾರೆ. ಅದರಲ್ಲೇ ಆತ್ಮತೃಪ್ತಿ ಕಾಣುತ್ತಾರೆ. ಮತ್ತೆ ಅದೇ ನಿನ್ನ ಒಡತಿಗೂ ಬೇಕಿರುವುದು. ಗುಮಾನಿಯಿಟ್ಟುಕೊಳ್ಳಬೇಡ ಹೀಗೆಯೇ ಆಗುವುದು. ಏಕೆಂದರೆ ನೀನು ಆತ್ಮವನ್ನು ಮಾರಿಕೊಂಡವಳು… ಅದೂ ಅಲ್ಲದೆ ಇವರ ಅನ್ನದ ಋಣ ನಿನ್ನ ಮೇಲಿದೆ. ಹಾಗೆಂದರೆ, ನೀನು ‘ಕಾ…ಕಾ’ ಅಂತ ಚೀರಲೂ ನಿನಗೆ ಹಕ್ಕಿಲ್ಲ ಅಂತರ್ಥ! ಮತ್ತೆ ನೀನು ಸಾಯುತ್ತಿರುವಾಗ, ಎಲ್ಲರೂ ನಿನ್ನನ್ನು ದೂರ ತಳ್ಳಿ, ಬೆನ್ನು ತಿರುಗಿಸಿ ಓಡುತ್ತಾರೆ, ಏಕೆಂದರೆ ನಿನ್ನಿಂದ ಯಾರಿಗೂ ಸುಖವಿಲ್ಲ. ‘ಆ ಸೋಮಾರಿ ಹೆಣ್ಣು ಈ ಮನೆಯಲ್ಲಿ ದರಿದ್ರವಾಗಿ ಸುಮ್ಮನೆ ಬಿದ್ದಿದ್ದಾಳೆ, ಅಷ್ಟು ಜಾಗ ಹಾಳು..’ ಎಂದು ದೂರುತ್ತಾರೆ. ‘ಯಾವಾಗ ಸಾಯ್ತಾಳೋ ಇವ್ಳು… ಬೇಗ ಸತ್ತು ಪುಣ್ಯ ಕಟ್ಕೋ ತಾಯಿ…’ ಅಂತ ಜರಿಯುತ್ತಾರೆ. ಆಗ ನಿನಗೆ ಬ್ರೆಡ್ಡಿನ ಚಿಕ್ಕ ತುಂಡು ನುಂಗುವುದೂ ಕಷ್ಟವಾಗುತ್ತದೆ. ಒಂದು ಲೋಟ ನೀರನ್ನೂ ಅವರು ಶಾಪ ಹಾಕದೆ ನೀಡುವುದಿಲ್ಲ. ‘ಯಾವಾಗ ನಿನ್ನ ದೈಯ್ಯದ ಮುಖನಾ ಬಿಟ್ಟು ಸಾಯ್ತೀಯೇ ಸೂಳೆ ಮುಂಡೆ’ ಎನ್ನುತ್ತಾರವರು. ‘ಒಳ್ಳೇ ಪೀಡೆ ತರ ವಕ್ಕರಿಸಿದಿಯಾ ಈ ಮನೆಗೇ… ರಾತ್ರಿಯೆಲ್ಲಾ ನರಳಾಟ, ಒಬ್ರಿಗೂ ನಿದ್ರೆಯಿಲ್ಲ, ನಿನ್ನ ಹಾಳ್ ರೋಗದಿಂದ ಒಂದು ಗಿರಾಕಿನೂ ಈ ಕಡೆ ತಿರಗ್ತಿಲ್ಲ…’ ನಿಜವಿದು; ಇಂತಹಾ ಮಾತುಗಳನ್ನು ಕೇಳಿದ್ದೇನೆ ನಾನು.
ಇನ್ನೂ ನೀನು ಸೂಲು ಬಿಡುತ್ತಾ, ಗೂರಲು ಸ್ವರದಲ್ಲಿ ಕೊನೆಯ ಉಸಿರನ್ನು ಎಳೆಯುತ್ತಿರುವಾಗಲೇ ಅವರು ನಿನ್ನನ್ನು ತಳಕ್ಕೆ ನೂಕುತ್ತಾರೆ, ಗಬ್ಬುನಾತ ಹೊಡೆಯುವ ನೆಲಮಾಳಿಗೆಯ ಮೂಲೆಗೆ. ಒದ್ದೆ ಮತ್ತು ಕತ್ತಲ ತಳಕ್ಕೆ… ಆಗ ಏನೆಲ್ಲಾ ಯೋಚಿಸಬಹುದು ನೀನು, ಪಾಪ…! ಅಲ್ಲಿ ಒಬ್ಬಳೇ ಬೇರೆ ಬಿದ್ದಿರುತ್ತೀಯ… ಸತ್ತಾಗ ಗೊಣಗುವ ಅಪರಿಚಿತ ಕೈಗಳು, ತರಾತುರಿಯಾಗಿ, ತಾಳ್ಮೆಗೆಟ್ಟು ಎತ್ತೆಯೆಸುತ್ತಾರೆ ನಿನ್ನನ್ನು. ಯಾರು, ನಿನ್ನ ಆತ್ಮಕ್ಕಾಗಿ ಪ್ರಾರ್ಥಿಸುವುದಿಲ್ಲ. ಯಾರೂ ನಿನಗಾಗಿ ಉಸಿರೆತ್ತುವುದಿಲ್ಲ. ನಿನ್ನನ್ನು ಅಲ್ಲಿಂದ ಬೇಗ ಎತ್ತಂಗಡಿ ಮಾಡುವುದೊಂದೇ ಅವರ ಪ್ರಧಾನ ಲಕ್ಷ್ಯ. ಒಂದು ಅಗ್ಗದ ಶವಪೆಟ್ಟಿಗೆಯ ಖರೀದಿಸಿ, ನಿನ್ನನ್ನು ಸಹ ಇವತ್ತು ಬೆಳಗ್ಗೆ ಒಬ್ಬಳನ್ನು ಸಾಗಿಸಿದರಲ್ಲಾ ಹಾಗೇ ಹೊತ್ತು ಹೋಗುaತ್ತಾರೆ. ಮತ್ತೆ ನಿನ್ನ ನೆನಪನ್ನು ಶೇಂದಿ ಅಂಗಡಿಯಲ್ಲಿ ಆಚರಿಸುತ್ತಾರೆ. ರಾಡಿ, ಹಿಮ, ಒದ್ದೆ ಮಂಜಿನಲ್ಲಿ ಯಾವ ವಿಧಿ-ವಿಧಾನಗಳಿಲ್ಲದೆಯೇ ನಿನ್ನ ದೇಹ ಕೊಳೆಯುತ್ತದೆ. ‘ಇಳಿಸೋ… ಇಳಿಸೋ ಅವಳ್ನ.. ಆ ಹಗ್ಗನಾ ಸಣ್ಣದು ಮಾಡೋ ಬೇವರ್ಸಿ….’ ‘ಏನ್ ನಿನ್ನ ತಲೆ, ಸಣ್ಣ ಮಾಡೋದು ಖದೀಮ, ಅದ್ ಸರೀ ಇದೇ ಕಣೋ…’ ‘ಏನ್ ಸರೀ ಇರೋದು, ಅವ್ಳ್ನ ನೋಡಪ್ಪ ಕಾಲ್ಗಳು ಯದ್ವಾ ತದ್ವಾ ತೂರಾಡ್ತಿದ್ಯಯಲ್ಲ, ಮತ್ತ್ ಅವ್ಳ್ ಹೆಂಗೋ ತಿರ್ಗಿದ್ದಾಳ್ಳ್ ಬೇರೆ, ಪಾಪ ಕಣ್ರೋ ಹಸೀ ಹೆಂಗ್ಸೂ… ಅವ್ಳ್ನಾ…’ ‘ಅಯ್ಯೋ…! ಮುಚ್ಕಂಡ್ ಹಂಗೇ ಮಣ್ಣು ತುಂಬ್ಸಪ್ಪ ಸಾಕು ಕೊರೀ ಬೇಡ’ ನಿನಗಾಗಿ ಜಗಳವಾಡಲೂ ಅವರಲ್ಲಿ ಪುರುಸೊತ್ತಿಲ್ಲ. ಪಾಪ ಬೇಗ ಶೇಂದಿ ಅಂಗಡಿಗೆ ನುಗ್ಗೋ ಆಸೆ ಇರುತ್ತಲ್ಲ ಅವರಿಗೂ! ಅದಕ್ಕೆ ನೀನು ಹುಟ್ಟಿಯೇ ಇಲ್ಲವೆನ್ನುವಂತೆ, ನೀಲಿ ಜೇಡಿ ಮಣ್ಣನ್ನು ನಿನ್ನ ಮೇಲೆ ಗಡಿಬಿಡಿಯಲ್ಲಿ ಎಸೆದು ಮರೆಯಾಗುತ್ತಾರೆ; ಅದೇ ನಿನ್ನ ನೆನಪಿನ ಕೊನೆಯ ಆಚರಣೆ. ಬೇರೆ ಹೆಣ್ಣು ಮಕ್ಕಳು ಸತ್ತ ಮೇಲೆ ಮತ್ತೆ ಮತ್ತೆ ಸಮಾಧಿಗೆ ಭೇಟಿ ನೀಡಿ ಹೂಗಳನ್ನಿಟ್ಟು ಪ್ರಾರ್ಥಿಸಲು ಅವರ ಮಕ್ಕಳೋ, ಅಪ್ಪಂದಿರೋ, ಗಂಡಂದಿರೋ ಇದ್ದೇ ಇರುತ್ತಾರೆ. ಆದರೆ ನಿನಗೆ ಸಮಾಧಿಯೂ ಇಲ್ಲ, ಕಣ್ಣೀರು ಇಲ್ಲ, ತಿಥಿ-ಗಿತಿ ಏನೂ ಇಲ್ಲ. ನಿನ್ನ ಹೆಸರೇ ಈ ಭೂಮಿಯಿಂದ ಅಳಿಸಿ ಹೋಗುತ್ತದೆ ಅವತ್ತೇ. ಮಣ್ಣು ಮತ್ತೆ ಜೌಗು, ಅಷ್ಟೇ ನಿನ್ನ ಪಾಲಿಗೆ; ಗೋರಿಯಿಂದ ದೆವ್ವಗಳು ಏಳುವ ಹೊತ್ತಲ್ಲಿ ಶವಪೆಟ್ಟಿಗೆಯ ಬಾಗಿಲ ಒಳಗಿಂದ ಬಡಿದು ಕೂಗಾಡಲು ಅವಕಾಶವೊಂದು ಸಿಗುಬಹುದೇನೋ ನಿನಗೆ ಕೊನೆಗೆ ಅಷ್ಟೇ, ‘ನನ್ನ ಆಚೆ ಬಿಡಿ, ಸಜ್ಜನರೇ ಜಗತ್ತಿನಲ್ಲಿ ಇನ್ನೂ ಸ್ವಲ್ಪ ಬದುಕಬೇಕಾಗಿದೆ. ನಾನು ಜೀವಂತವಾಗಿದ್ದೆ, ಆದರೆ ನನಗೆ ಬದುಕೇ ಇರಲಿಲ್ಲ. ಮುಸುರೆ ಒರೆಸುವ ಬಟ್ಟೆಯಂತೆ ನನ್ನ ಬದುಕು ಸವೆದು ಹೋಗಿತ್ತು, ಅದನ್ನು ಆ ಹೇ ಮಾರ್ಕೆಟ್ಟಿನಲ್ಲಿ ಅವರೆಲ್ಲಾ ಕುಡಿದು ಕಕ್ಕಿದರು; ದಯಮಾಡಿ ಹೊರಗೆ ಬಿಡಿ ಸಜ್ಜನರೇ, ಇನ್ನೊಮ್ಮೆ ಬದುಕುತ್ತೇನೆ, ಆ ಜಗತ್ತಿನಲ್ಲಿ…’”
ನಾನೆಷ್ಟು ಮರುಕದಲ್ಲಿ ತಲ್ಲೀನನಾಗಿ ಬಡ-ಬಡಿಸಿದ್ದೆನೆಂದರೆ ನನ್ನ ಗಂಟಲೊಳಗೆ ಬೋರೆಯೊಂದು ಊದಿದಂತೆ ಅನಿಸಿತ್ತು, ನೋಡಿದರೆ ನಾನು ನಿಜಕ್ಕೂ ಗದ್ಗದಿತನಾಗಿದ್ದೆ… ಯಾಕೋ ನಾನು ನನ್ನ ಸುಡುಗಾಡು ಬದುಕಿನ ಕಥೆಯನ್ನೇ ಇಲ್ಲಿ ಮತ್ತೆ ಬೇರೆ ಥರ ಹೇಳುತ್ತಿದ್ದೇನೆ ಅಂತ ಅನ್ನಿಸಿ ಇದ್ದಕ್ಕಿದ್ದಂತೆ ಸುಮ್ಮನಾದೆ. ಎಷ್ಟೇ ಸೆಂಟಿಮೆಂಟಿನ ಮೇಣವನ್ನು ನನ್ನ ಕಥೆಯ ಕಾಮೆಂಟರಿಗೆ ಮೆತ್ತಿದ್ದರೂ, ಒಂದು ಗುಲಗಂಜಿಯಷ್ಟೂ ಅಪ್ಪಟವಾದ ಭಾವನೆಯನ್ನು ಇಲ್ಲಿ ಪ್ರತಿಧ್ವನಿಸಲು ಸೋತಿದ್ದೆ ನಾನು. ಹಿಂದೆ ಅಂದಂತೆ ಈ ನಿಜಬದುಕಿನ ಬಗ್ಗೆ ಏನೂ ಗೊತ್ತಿರಲಿಲ್ಲ ನನಗೆ. ಈ ಅನಕ್ಷರಸ್ಥತೆಯಿಂದಲೇ ಹೆದರಿ-ಹೆದರಿ ನೆಲಮಾಳಿಗೆಗೆ ನುಸುಳಿ ಬಿಡುತ್ತಿದ್ದ ಇಲಿ ನಾನು. ಅದಕ್ಕೇ ಈಗ ಆತಂಕವು ನನ್ನ ದೇಹವನ್ನು ಚೂರಾಗಿಸಿತ್ತು. ಪುಕ್ಕಲು-ಪುಕ್ಕಲಾಗಿ ತಲೆ ಬಗ್ಗಿಸಿ, ಉದ್ವೇಗದಲ್ಲಿ ಹೃದಯ ಹೊಡೆದುಕೊಳ್ಳುತ್ತಿರುವಾಗ ಅವಳ ಮಾತನ್ನು ಕೇಳಿಸಿಕೊಳ್ಳುವ ಮನಸ್ಸಾಯಿತು. ಗಾಬರಿಯಾಗಲು ಬೇಕಾದಷ್ಟು ಕಾರಣಗಳಿದ್ದವು.
ಏಕೋ ನಾನು ಅವಳ ಆತ್ಮವ ತಿರುಗಾ-ಮುರುಗಾ ಮಾಡಿದ್ದೇನೆ ಎನ್ನುವ ಅನಿಸಿಕೆ ಸ್ವಲ್ಪ ಹೊತ್ತಿನಿಂದ ತೀವ್ರವಾಗಿತ್ತು ನನ್ನಲ್ಲಿ. ಹಾಗೇ ಅವಳ ಹೃದಯವನ್ನು ಒಡೆದಿದ್ದೇನೆ ಎಂಬ ಯೋಚನೆಯೂ ನನ್ನ ಕಾಡಿತ್ತು. ಈ ಗುಮಾನಿಗಳು ಖಾತ್ರಿಯಾಗುತ್ತಿದ್ದ ಹಾಗೇ ನನ್ನ ಲಕ್ಷ್ಯವನ್ನು ಆದಷ್ಟು ವೇಗವಾಗಿ, ಅಷ್ಟೇ ಪರಿಣಾಮಕಾರಿಯಾಗಿ ಪೂರೈಸಲು ಹವಣಿಸಿದೆ. ಆಟಕ್ಕೆ ಒಳ್ಳೇ ಖಳೆ ಬಂದಿತ್ತು; ಆ ಆಟ ನನ್ನನ್ನು ಹೀರಿತ್ತು, ದಿಟದಲ್ಲಿ ಇದು ಆಟ ಮಾತ್ರವೇ ಅಲ್ಲ… ಬೇರೆ ಏನೋ…
ನಿಜ, ನಾನು ವಿಪರೀತವಾಗಿ ಮಾತನಾಡುತ್ತಿದ್ದೆ, ಪುಸ್ತಕದಿಂದ ಓದಿದಂತೆ ಸೃಷ್ಟಿಸಿದ್ದ ಮಾತುಗಳು; ಆದರೆ ಬೇರೆ ರೀತಿ ಆ ಮಾತುಗಳನ್ನು ಆಡುವುದು ಹೇಗೆ? ಅದೆಲ್ಲಾ ಗೊತ್ತಿಲ್ಲ ನನಗೆ. ಆದರೆ ಗ್ರಾಂಥಿಕವಾಗಿ ಮಾತನಾಡಿದರೆ, ನೋವು,ಜ್ವರ, ಸಾವನ್ನೆಲ್ಲ ಹೊಮ್ಮಿಸುವ ಭಾವದಲ್ಲಿ ಮಾತನಾಡಿದರೆ ನನ್ನ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ಲೆಕ್ಕ ಹಾಕೋ ಆಸಾಮಿ ನಾನು. ಆದರೆ ಈಗ, ನನಗೆ ಬೇಕಾದ್ದಂತೆ ಎಲ್ಲವೂ ಆದಾಗ, ಇದ್ದಕ್ಕಿದ್ದಂತೆ ಹೆದರಿದೆ. ಹಿಂದೆಂದಿಗೂ ಈ ಪರಿಯ ಹತಾಶೆಗೆ ನಾನು ಸಾಕ್ಷಿಯಾಗಿದ್ದೇ ಇಲ್ಲ. ಅವಳ ಮುಖವನ್ನು ಗಟ್ಟಿಯಾಗಿ ದಿಂಬಿಗೆ ಒತ್ತಿದ್ದಳು. ತನ್ನೆರಡು ಕೈಗಳಲ್ಲಿ ಅದನ್ನು ಬಿಗಿಯಾಗಿ ಹಿಡಿದಿದ್ದರು. ಅವಳ ಎಳೆ ತಾಜಾ ದೇಹ ಅದುರಿತ್ತು. ಆ ಹೃದಯ ಹರಿದಿತ್ತು. ಉನ್ಮಾದರೋಗಿಯಂತೆ ಊಳಿಡುತ್ತಿದ್ದಳು. ಅವಳ ಎದೆಯೊಳಗೆ ಬಂಧಿಯಾಗಿದ್ದ ಗಾಢ ದುಃಖ ಈಗ ಆಕೆಯೊಳಗೆ ಮಡುಗಟ್ಟಿತ್ತು; ಇದ್ದಕ್ಕಿದ್ದಂತೆ ಕಿರುಚಾಟ ಹಾಗೂ ಗೋಳಾಟಗಳು ಆಚೆಗೆ ಬಂದವು, ಮತ್ತೊಮ್ಮೆ ದಿಂಬನ್ನು ಒತ್ತಿದಳು. ಯಾವ ನರ ಪಿಳ್ಳೆಯೂ, ಆ ಆರ್ತನೋವನ್ನು, ಆ ಹತ್ತಿಕ್ಕಿದ್ದ ಕಣ್ಣೀರನ್ನು ಅರಿಯುವುದು ಬೇಡವಾಗಿತ್ತು, ಆಕೆಗೆ. ದಿಂಬನ್ನು ಕಚ್ಚಿದಳು; ಬೆರಳನ್ನೂ ಕಚ್ಚಿದಳು ಅಲ್ಲಿ ರಕ್ತವೂ ಬಂತು(ಇದನ್ನು ನಾನು ಆಮೇಲೆ ನೋಡಿದೆ). ಏದುಸಿರು ಬಿಡುತ್ತಿದ್ದಳು. ಕಟ-ಕಟನೆ ಹಲ್ಲು ಕಡಿದು, ಸಡಿಲಗೊಂಡಿದ್ದ ಅವಳ ಜಡೆಯಲ್ಲಿ ಬೆರಳಾಡಿಸಿದಳು. ಏನಾದರೂ ಹೇಳಿ, ಈ ಹುಡುಗಿಯನ್ನು ಸಮಾಧಾನಿಸುವ ಮನಸ್ಸಾಯಿತು. ಆದರೆ ಧೈರ್ಯ ಬರಲಿಲ್ಲ. ಇದ್ದಕ್ಕಿದಂತೆ ಭಯದಲ್ಲಿ ನಡುಗಿ ನನ್ನ ವಸ್ತುಗಳಿಗಾಗಿ ತಡಕಾಡಿ, ಹೇಗೋ ಅಲ್ಲಿಂದ ಪೇರಿ ಕೀಳಲು ಅಣಿಯಾದೆ. ಆದರೆ ತುಂಬಾ ಕತ್ತಲಿದ್ದರಿಂದ ಬೇಗೆ ಬಟ್ಟೆ ಹಾಕಿಕೊಳ್ಳಲು ಆಗಲಿಲ್ಲ. ಬೆಂಕಿಪೆಟ್ಟಿಗೆ ಕೈಗೆ ಸಿಕ್ಕಿತು. ಹೊಸ ಮೋಂಬತ್ತಿಯ ಹುಡುಕಿ, ತಡವರಿಸಿ ಹಚ್ಚಿದೆ. ಆ ಚಿನ್ನದ ಬೆಳಕಲ್ಲಿ ಕೋಣೆ ಮೆದುವಾಗಿ ಬೆಳಗುತ್ತಿದ್ದಂತೆಯೇ ಆಕೆ ತುಸು ಗಾಬರಿಯಾಗಿ ಮಂಚದಿಂದ ಜಿಗಿದಳು, ಮತ್ತೆ ಕೂತಳು, ಖಾಲಿ ನೋಟವನ್ನು ನನ್ನತ್ತ ಬೀರಿದಳು. ತಿರುಚಿ ಹೋದಂತಿದ್ದ ಅವಳ ಮುಖದಲ್ಲಿ ಹುಚ್ಚಿನ ಮಂದಹಾಸದ ಅಲ್ಪ ನಕ್ಷತ್ರ ಬೆಳಕು ಪಿಸುಗುಟ್ಟಿತು. ಅಲ್ಲೇ ಆಕೆ ಪಕ್ಕ ಕೂತೆ, ಆ ತಂಪಾದ ಕೈಗಳ ಅದುಮಿದೆ. ಅವಳು ಇನ್ನೇನು ನನ್ನ ಮೇಲೆ ಬೀಳುವುದರಲ್ಲಿದ್ದಳು, ಬಿದ್ದು ತಬ್ಬುವುದರಲ್ಲಿದ್ದಳು, ಆದರೆ ಏಕೋ ಹಾಗೆಲ್ಲ ಮಾಡಲಿಲ್ಲ. ನಿಶ್ಯಬ್ಧವಾಗಿ ನನ್ನೆದುರು ತಲೆಬಾಗಿದಳು.
“ಲೀಝಾ ನನ್ನ ಮುದ್ದು ಗೆಳತಿ, ನಾನು ತಪ್ಪಾಗಿ ಮಾತನಾಡಿದೆ… ನನ್ನನ್ನು ಕ್ಷಮಿಸು…” ಎನ್ನುತಿದ್ದಂತೆಯೇ ಅವಳು ತನ್ನ ಬೆರಳುಗಳಲ್ಲಿ ಹೂತಿದ್ದ ನನ್ನ ಕೈಗಳನ್ನು ಹಿಂಡಿದಳು, ಅದರ ಸೆಳೆತ ಗಾಢವಾಗಿತ್ತು. ಅದಕ್ಕೆ ನಾನು ಸಮಯಕ್ಕೆ ತಕ್ಕ ಮಾತನ್ನು ಆಡುತ್ತಿಲ್ಲ ಅನಿಸಿ ಸುಮ್ಮನಾದೆ.
“ತಗೋ… ಇದೇ ನನ್ನ ಮನೆಯ ವಿಳಾಸ, ಇಲ್ಲೀ ನಿನಗೇ ನಾನು ಸಿಗುತ್ತೇನೆ; ಬೇಕಾದರೆ ಬಂದು ನನ್ನ ಕಾಣು”
ಇನ್ನೂ ತಲೆಯನ್ನು ಬಗ್ಗಿಸಿಕೊಂಡೇ “ನಾನು ಬರ್ತೀನೀ ಒಂದು ದಿನ…” ಎಂದವಳು ಪಿಸುಗುಟ್ಟಿದಳು, ದಿಟವಾಗಿ.
“ಸರಿ ಈಗ ನಾನು ಹೋಗುವೆ, ಆದರೆ ಬೇಗ ನಿನ್ನ ಕಾಣುವೆ, ನಮಸ್ಕಾರ”
ನಾನು ಎದ್ದೆ; ಅವಳೂ ಸಹ ಎದ್ದಳು, ಒಮ್ಮೆಲೇ ನಾಚಿದಳು. ಮೂಲೆಯ ಕುರ್ಚಿಯಲ್ಲಿದ್ದ ಶಾಲುವನ್ನು ಹೆಗಲ ಮೇಲೆ ಎಸೆದುಕೊಂಡು, ಗಲ್ಲದ ತನಕ ಅದನ್ನು ಸುತ್ತಿ ಮತ್ತೆ ರೋಗಿಷ್ಟ ನಗುವನ್ನು ಚೆಲ್ಲಿದಳು, ಹಾಗೆ ನಾಚಿ ವಿಚಿತ್ರವಾಗಿ ನನ್ನ ನೋಡಿದಳು. ನನಗೆ ಕಸಿವಿಸಿಯಾಯಿತು; ತುರ್ತಾಗಿ ಆ ಜಾಗ ಬಿಡಲು, ಅಲ್ಲಿಂದ ಮಾಯವಾಗಲು ಹವಣಿಸಿದೆ.
“ತಾಳು…” ಎಂದಳು ಅವಳು, ಹಠಾತ್ತಾಗಿ; ಈಗಾಗಲೇ ಹಜಾರ ದಾಟಿದ್ದ ನನ್ನ ಓವರ್ ಕೋಟನ್ನು ಎಳೆದು ತಡೆದಳು, ಏನೋ ಜ್ಞಾಪಿಸಿಕೊಂಡಿದ್ದಳು, ನಾಚಿ ಹೋಗಿದ್ದರೂ ಅವಳ ಕಣ್ಣುಗಳು ಹೊಳೆದವು, ಅವಳ ತುಟಿಗಳು ನಕ್ಕವು, “ಏನಿರಬಹುದು?” ಕಾಯದೆ ಬೇರೆ ದಾರಿಯಿರಲಿಲ್ಲ. ಅದಕ್ಕೆ ಇಷ್ಟವಿಲ್ಲದಿದ್ದರೂ ಅಲ್ಲೇ ನಿಂತೆ. ಒಂದೇ ನಿಮಿಷದಲ್ಲಿ ಮಾಯವಾಗಿ ಮತ್ತೆ ವಾಪಾಸ್ಸು ಪ್ರತ್ಯಕ್ಷವಾದಳು, ಕ್ಷಮೆಯನ್ನು ಬೇಡಿ ಬಂದವಳಂತೆ. ಈಗ ಅವಳ ಆ ಹಳೆಯ ಮುಖವೇ ಅಳಿಸಿಹೋಗಿತ್ತು. ಆಗಿನಂತೆ ಖಿನ್ನಳಾಗಿ ಶಂಕೆಯಲ್ಲಿ ಹಠಮಾರಿಯಂತಿರಲಿಲ್ಲ. ಮೊರೆಯಿಡುವ ಮುಖಭಾವೀಗ ಹಬೆಯಾಡುತಿತ್ತು. ಮಮತೆಯಲ್ಲಿ ಮೃದುವಾಗಿ ಭರವಸೆಯಲ್ಲಿ ಅವಳು ಫಳಾರೆಂದಳು. ಮಕ್ಕಳು ತಾವು ಅತಿಯಾಗಿ ಇಷ್ಟಪಡುವ ವ್ಯಕ್ತಿಗಳನ್ನು ಏನೋ ಕೇಳುವ ಆಸೆಯಲ್ಲಿರುವಾಗ ಆ ಥರ ನೋಡುತ್ತಾರೆ. ಅವಳ ಕಣ್ಣು ತೆಳು ಕೆಂಚು ಬಣ್ಣದಲ್ಲಿತ್ತು, ಸುಂದರ ನಯನಗಳು, ಪ್ರೀತಿ ಹಾಗೂ ಖಿನ್ನ ಸೇಡನ್ನು ಪ್ರತಿಬಿಂಬಿಸಲು ಸೂಕ್ತವಾಗಿದ್ದ ಎರಡು ವಜ್ರಗಳು!
ನಾನೇನೋ ಎಲ್ಲವನ್ನೂ ವಿವರಣೆ ಇಲ್ಲದೆ ಅರಿಯುವ ಜ್ಞಾನಿಯೇನೋ ಎಂಬಂತೆ, ಏನೂ ಹೇಳದೆ ಒಂದು ಹಾಳೆಯ ಚೂರನ್ನು ನನ್ನ ಕೈಯಲಿತ್ತಳು. ಆಗ ಅವಳ ಇಡೀ ಮುಖವು ಬೆಳಕಲ್ಲಿ ಬೆಳಗಿತು. ಮಕ್ಕಳ ಗೆದ್ದ ನಗೆಯನ್ನು ಹೋಲುತಿದ್ದ ಮಂದಹಾಸವದು. ಅದೇನೆಂದು ನೋಡಿದೆ. ಯಾರೋ ವೈದ್ಯಶಾಸ್ತ್ರ ಓದುತ್ತಿದ್ದ ವಿದ್ಯಾರ್ಥಿ ಬರೆದ ಪ್ರೇಮ ಪತ್ರವದು. ಭಾಷೆ ಭವ್ಯವಾಗಿತ್ತು,ಆಡಂಬರವೂ ಜೋರಾಗಿತ್ತು. ಆದರೆ ಅತಿ ನಿಷ್ಠೆಯಲ್ಲಿ ಪವಿತ್ರ ಪ್ರೇಮವ ನಿವೇದಿಸುವ ಪತ್ರ ಆದಾಗಿತ್ತು. ಆ ಪದಗಳು ನನಗೆ ಈಗ ನೆನಪಾಗುತ್ತಿಲ್ಲ, ಆದರೆ ಆ ಎಲ್ಲಾ ಅಲಂಕಾರಗಳ ತಳದಲ್ಲಿ ಪ್ರಾಮಾಣಿಕ- ನಕಲಿ ಶ್ಯಾಮನಲ್ಲದ- ಪ್ರೇಮಿಯಿದ್ದ. ಅದನ್ನು ಓದಿ ಮುಗಿಸುವಷ್ಟರಲ್ಲಿ ಆಕೆಯ ನೋಟ ತಾಳ್ಮೆಗೆಟ್ಟು ಕೌತಕ ತುಂಬಿದ ಮುಗ್ಧತೆಯಲ್ಲಿ ತುಂಬಿ ನನ್ನತ್ತ ಹರಿದಿತ್ತು. ನನ್ನ ಅಭಿಪ್ರಾಯವನ್ನು ಆಲಿಸುವ ಅವಸರದಲ್ಲಿದ್ದಳು ಅವಳು. ಕೆಲವೇ ಶಬ್ಧಗಳಲ್ಲಿ ಹೇಳುವುದಾದರೆ ಬಹಳ ಗರ್ವದಲ್ಲಿ ಅಷ್ಟೇ ತ್ವರಿತವಾಗಿ, ಖುಷಿಯಲ್ಲಿ ನನಗೆ ಅವಳು ಅವನ ಕಥೆ ಹೇಳಿದ್ದಳು. ‘ತುಂಬಾ ತುಂಬಾ ಒಳ್ಳೆಯ ಸಂಸಾರಸ್ಥರ’ ಖಾಸಗೀ ಬಂಗಲೆಗೆ ಕುಣಿಯಲೆಂದು ಇವಳೊಮ್ಮೆ ಹೋಗಿದ್ದಳಂತೆ. ಆದರೆ ಅಲ್ಲಿನ ಜನಕ್ಕೆ ಇವಳ ‘ಈ ವಿಷಯಗಳ’ ಬಗೆಗೆ ಕಿಂಚಿತ್ತೂ ಮಾಹಿತಿ ಇರಲಿಲ್ಲ. ಮತ್ತೆ ಈ ಜಾಗದಲ್ಲಿ ಉಳಿಯುವ ಯಾವ ಇರಾದೆಯೂ ಈಕೆಗೆ ಇರದಿದ್ದರಿಂದ, ತನ್ನ ಸಾಲ ತೀರಿದ ತಕ್ಷಣ ಈ ಮನೆ ಬಿಡುವ ಯೋಚನೆ ಇವಳಿಗಿತ್ತಂತೆ. ಈ ವಿದ್ಯಾರ್ಥಿ ಸಿಕ್ಕಿದ್ದು ಅಲ್ಲಿ ಈಕೆಗೆ; ಇವಳ ಜತೆ ಚೆನ್ನಾಗಿ ಕುಣಿದು, ಇಡೀ ಸಂಜೆ ಮಾತನಾಡಿದ್ದಾನೆ. ಮತ್ತೆ ಆತ ಇವಳ ಚಿಕ್ಕವಯಸ್ಸಿನ ಗೆಳೆಯ ಬೇರೆಯಂತೆ! ರೀಗದಾಲ್ಲಿ ಇವರಿಬ್ಬರೂ ಜತೆಯಾಗಿಯೇ ಆಡಿದ್ದರಂತೆ. ನಂತರ ಅವನೆಲ್ಲೋ ಇವಳೆಲ್ಲೋ. ಅವನಿಗೆ ಈ ಹುಡುಗಿಯ ಪರಿಚಯವಿತ್ತು. ಆದರೆ ಈಕೆಯ ‘ಈ ವಿಷಯ’ ಮಾತ್ರ ಅವನಿಗೆ ಏನಂದರೆ… ಏನೂ…ಏನೇನೂ ಗೊತ್ತಿರಲಿಲ್ಲ. ಹಾಗೇ ಅಪ್ಪಿತಪ್ಪಿಯೂ ಅನುಮಾನದ ಅಲೆಗಳು ಅವನಲ್ಲಿ ಎದ್ದೂ ಇರಲಿಲ್ಲ. ಮಕ್ಕಳಂತೆ ನಕ್ಕರು, ಕುಣಿದರು, ಇವರಿಬ್ಬರು. ಒಂದು ದಿನ ಯಾರೋ ಸ್ನೇಹಿತನ(ಈಕೆ ಅವನ ಜತೆಯೇ ಆ ಪಾರ್ಟಿಗೆ ಹೋಗಿದ್ದು) ಮುಖಾಂತರ ಇವಳಿಗೆ ತಾನು ಬರೆದ ಒಲವಿನ ಓಲೆಯನ್ನು ತಲುಪಿಸಿದ್ದನಾತ. ಮತ್ತೆ… ಮತ್ತೆ… ಮತ್ತೇನು… ಅಷ್ಟೇ.
ಕಥೆ ಮುಗಿಸಿ, ಸಂಕೋಚದಲ್ಲಿ ಕರಗಿ, ಅವಳ ಮಿಂಚಿನ ದೃಷ್ಟಿಯನ್ನು ಕೆಳಗೆ ಚೆಲ್ಲಿದ್ದಳು. ಪಾಪದ ಹುಡುಗಿ, ಈ ಪ್ರೇಮದೋಲೆಯನ್ನು ಮುತ್ತಿನಂತೆ ಸಂರಕ್ಷಿಸಿಟ್ಟಿದ್ದಳು. ಹಾಗೇ ಅವಳಲ್ಲಿದ್ದ ಆ ಒಂದೇ ಒಂದು ವಜ್ರವನ್ನು ಈಗ ಎತ್ತಿ ತಂದಿದ್ದಳು, ತನ್ನನ್ನೂ ನಿಷ್ಕಪಟವಾಗಿ ಪ್ರೀತಿಸುವವರಿದ್ದಾರೆ, ತನ್ನನ್ನೂ ಗೌರವಿಸೋ ಜನರಿದ್ದಾರೆ ಎಂದು ಹೋಗುವ ಮೊದಲು ನನಗೆ ಮನವರಿಕೆ ಮಾಡಿಸಲು. ಆದರೆ ಭವಿಷ್ಯವೇ ಇಲ್ಲದೇ ಆ ಪೆಟ್ಟಿಗೆಯೊಳಗೆ ಬಿದ್ದಿರುವ ಭಾಗ್ಯ ಬಹುಶಃ ಆ ಪತ್ರದ್ದಾಗಿತ್ತು; ಇರಲಿ ಬಿಡಿ, ಅದನ್ನು ನಿಧಿಯಂತೆ ತನ್ನ ಗರ್ವದ ಸಮರ್ಥನೆಯ ಸಾಕ್ಷಿಯಾಗಿ ಇಟ್ಟುಕೊಂಡಿರುವ ಇವಳು, ಈಗ, ಇಂತಹ ಕ್ಷಣದಲ್ಲಿ ಆ ಪತ್ರದ ನೆನಪಾಗಿ ಮುಗ್ಧೆಯಂತೆ ನನಗೆ ಅದನ್ನು ತೋರಿಸುವುದೂ ಅಲ್ಲದೆ, ಮತ್ತೆ ಅವಳ ಬಗೆಗೆ ನನ್ನ ಮನಸ್ಸಿನಲ್ಲಿ ಭವ್ಯ ಭಾವನೆಗಳನ್ನು ಪುನಃ ಸ್ಥಾಪಿಸಲು ಯತ್ನಿಸುತ್ತಿದ್ದಾಳೆ. ಹೀಗಾದರೂ ನಾನು ಅವಳನ್ನು ಒಳ್ಳೇ ದೃಷ್ಠಿಯಲ್ಲಿ ಕಾಣುತ್ತೇನೆ ಎಂದು ನಂಬಿದ್ದಾಳೆ. ನಾನೇನು ಮಾತಾಡಲಿಲ್ಲ. ನನಗೆ ಅಲ್ಲಿಂದ ಜಾರಬೇಕಿತ್ತು, ಬೇಗ ಅವಳ ಕೈ ಕುಲುಕಿ ಹೊರಟೆ. ಆಚೆ ದಪ್ಪ-ದಪ್ಪ ಚಿಕ್ಕ ಹಿಮಗಡ್ಡೆಗಳು ಒದ್ದೆಯಾಗಿ ಬಿದ್ದು ಪುಟ ಹೊಡೆಯುತ್ತಿರುವುದನ್ನು ಲೆಕ್ಕಿಸದೆ ನಡೆದೆ. ನಿತ್ರಾಣನಾಗಿದ್ದೆ; ಪುಡಿ-ಪುಡಿಯಾಗಿ, ಅಪ್ರತಿಭನಾಗಿದ್ದೆ, ಆದರೆ ಸತ್ಯವು ನನ್ನ ಗೊಂದಲಗಳ ಸುಳಿಯ ನಟ್ಟ ನಡುವೆ ಪ್ರಜ್ವಲಿಸುತ್ತಿತ್ತು, ಶೋಚನೀಯ ಸತ್ಯ! ಹೊಟ್ಟೆ ಉರಿಸುತ್ತಿದ್ದ ಸತ್ಯ, ಆ ಹಾಳು ಹಸಿ ಸೂಳೆಗೂ ಸಿಗೋ ಮನುಷ್ಯಪ್ರೀತಿ, ನನಗೆ ಅಪ್ಪಿತಪ್ಪಿಯೂ ದಕ್ಕಲ್ಲ ಅನ್ನೋ ಸತ್ಯ! ಅಂತಹಾ ಅನ್ಯ ಸೂಳೆಮಗ ನಾನು ಅದಕ್ಕೇ ಸಹಜವಾಗಿ ಎಲ್ಲರಿಗೂ ಎಟಕೋ ಪ್ರೀತಿಪ್ರೇಮಗಳ ಅನುಕೂಲಗಳು ನನ್ನ ಬಾಗಿಲು ತಟ್ಟಲ್ಲ ಅನ್ನೋ ಸತ್ಯ! ನನ್ನ ಈ ಸಿಟಿ ಕಾರ್ಫೋರೇಶನ್ನಿನ ಕಸದ ರಾಶಿಯಂತಹ ನೆನಪಿನ ಗುಡ್ಡೆಯಲಿ, ಎಷ್ಟು ಹುಡುಕಿದರೂ ಕೈವಶವಾಗದ ಆ ನಿಧಿಯ ಸತ್ಯ! ಯಾವ ಹಾಳುಮುಂಡೆಯೂ ನನ್ನ ಪ್ರೀತಿಸಲ್ಲ, ಮತ್ತೆ ಅಂತಹ ಪ್ರೇಮಪ್ರಸಂಗ ಯಾವ ದರಿದ್ರರಿಗೂ ಬೇಕೂ ಇಲ್ಲ ಅನ್ನೋ ಇನ್ನೂ ದರಿದ್ರ ಸತ್ಯ!
-8-
ಈ ಸತ್ಯವನ್ನು ಒಪ್ಪಲು ಎಷ್ಟೋ ಹೊತ್ತು ಬೇಕಾಯಿತು. ಎರಡು-ಮೂರು ಗಂಟೆಗಳ ನಿಷ್ಕ್ರಿಯ, ಆಳ ನಿದ್ರೆಯ ಬಳಿಕ ಎದ್ದೆ. ಕೂಡಲೇ ನಿನ್ನೆ ಆದ ಘಟನೆಗಳೆಲ್ಲಾ ನನ್ನ ಮನಸ್ಸೊಳಗೆ ಯದ್ವಾತದ್ವಾ ಓಡಿದ್ದವು. ಲೀಝಾಳ ಜತೆ ಆದ ನನ್ನ ಆ ಭಾವಾತಿರೇಕಗಳೂ, ದಿಗಿಲು ಮತ್ತು ಕರುಣೆಯಲ್ಲಿ ಆಕೆಯನ್ನು ಎದುರಿಟ್ಟು ನಾನು ಕೂಗಾಡಿದ್ದು ನೆನಪಾಗಿ ಹುಚ್ಚಿನ ಅಚ್ಚರಿಯಲ್ಲಿ ಮುಳುಗಿದೆ. “ಥೂ…! ಹೆಡ್ಡ ಹೆಂಗಸಿನಂತೆ ಇಂತಹ ಉನ್ಮಾದ ರೋಗಗಳಿಗೂ, ಸೆಂಟಿಮೆಂಟುಗಳಿಗೂ ನಾನು ಕತ್ತುಕೊಡುತ್ತೇನೆ…” ಅನ್ನುತ್ತಾ ಆ ವಿಷಯವನ್ನು ಅಲ್ಲೇ ಬಿಟ್ಟೆ. “ಮತ್ತೆ ನನ್ನ ಮನೆಯ ವಿಳಾಸ ಯಾಕಾದರೂ ಕೊಟ್ಟೆ ಆಕೆಗೆ? ಒಂದು ವೇಳೆ ಏನಾದರು ಆ ಲೀಝಾ ಇಲ್ಲಿಗೆ ಬಂದು ಬಿಟ್ಟರೆ? ಬರೋ ಹಾಗಿದ್ದರೆ ಬರಲಿ, ಅದೇನು ಈ ಹೊತ್ತಲ್ಲಿ ತಲೆಕೆಡಿಸಿಕೊಳ್ಳೋ ಅಷ್ಟು ದೊಡ್ಡ ವಿಷಯ ಏನಲ್ಲ. ಖಚಿತವಾಗಿಯೇ, ಆ ಝ್ವರಕೋವ್ ಮತ್ತು ಸೈಮೊನವ್ನ ಎದುರು ನನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದು, -ಅದೂ ಅತೀ ಶೀಘ್ರವಾಗಿ- ಈಗ ಎಲ್ಲದಕ್ಕಿಂತಲೂ ಮುಖ್ಯವಾದ ಕಾಯಕ…” ಎನಿಸಿತು. ಆ ಗಡಿ-ಬಿಡಿಯಲ್ಲಿ ನನಗೆ ಲೀಝಾ ಮರೆತೇ ಹೋದಳು.
ಅತಿ ತುರ್ತಾಗಿ ಸೈಮೊನವ್ನಿಂದ ನಿನ್ನೆ ನಾನು ಪಡೆದ ಸಾಲವನ್ನು ಹಿಂದುರಿಗಿಸಬೇಕಿತ್ತು. ಅದಕ್ಕೆಂದು ಒಂದು ಹತಾಶ ಯತ್ನ ಮಾಡಿದೆ, ಅದೇ ಆ್ಯಂಟೋನ್ವಿಚ್ಯಿಂದ ಹದಿನೈದು ರೂಬಲ್ಲುಗಳನ್ನು ಎರವಲು ಪಡೆಯುವುದು. ನನ್ನ ಅದೃಷ್ಟ. ಆ್ಯಂಟೋನ್ವಿಚ್ ಸಿಕ್ಕಿದ. ಒಳ್ಳೇ ಲಹರಿಯಲ್ಲಿದ್ದ. ನಾನು ಹಣ ಕೇಳಿದ ತಕ್ಷಣ ಕೊಟ್ಟೇ ಬಿಟ್ಟ. ನನಗೆ ಎಷ್ಟು ಸಮಾಧಾನವಾಯಿತೆಂದರೆ, ಸಾಲದ ರಶೀತಿಗೆ ಯಾರಿಗೂ ಅಂಜದ ವೀರನ ಹಾಗೆ ಸಹಿ ಮಾಡಿ, ಬಹಳ ಆರಾಮಕ್ಕೆ ಹೇಳಿದೆ, “… ನಿನ್ನೆ ರಾತ್ರಿ ನಾನು ನನ್ನ ಆಪ್ತಮಿತ್ರರು ಹೋಟೆಲ್ ದಿ ಪ್ಯಾರಿಸ್ ಅಲ್ಲಿ ಮಜ ಮಾಡಿದೆವು. ಏನಾಯಿತು ಅಂದರೆ ನನ್ನ ಜೀವದ, ಗೆಳೆಯ, -ಚಿಕ್ಕವಯಸ್ಸಿಂದಲೂ ನನ್ನ ಗೆಳೆಯನೇ ಆತ, ವಿಪರೀತ ಲಂಪಟ, ದಿಕ್ಕಾಪಾಲಾಗಿ ಹಾಳಾದವ- ಅವನಿಗಾಗಿ ಫ಼ೇರ್ವೆಲ್ ಪಾರ್ಟಿ ಇಟ್ಟಿದ್ದವು, ಒಳ್ಳೇ ಫ಼್ಯಾಮಿಲಿ ಹುಡುಗ ಅವನು; ತುಂಬಾ ತುಂಬಾ ಆಸ್ತಿನೂ ಇದೆ, ಪ್ರತಿಭಾವಂತ, ಸುರಸುಂದರಾಂಗ, ಭಾರಿ-ಭಾರಿ ಪ್ರೇಮ ಸಲ್ಲಾಪಗಳು ಬೇರೆ ಅವನದು, ಚಾಣಾಕ್ಷ! ಐದಾರು ಬಾಟಲಿಗಳು ಕುಡಿದು ಬಿಸಾಡಿದ್ವಿ, ಜಾಸ್ತಿ ಆಯ್ತು, ಆದರೂ ಅವನಿಗೋಸ್ಕರ…”
ಹಾಗೆ ಎಲ್ಲವೂ ಕ್ಷೇಮವಾಗಿ ನೆರೆವೇರಿತು. ಸುಲಭವಾಗಿ, ನಿರರ್ಗಳವಾಗಿ, ನೆಮ್ಮದಿಯಲ್ಲಿ ಇಷ್ಟೆಲ್ಲವನ್ನೂ ಪಠಿಸಿದ್ದೆ. ಮನೆಗೆ ಬಂದ ತಕ್ಷಣವೇ ಸೈಮೋನವ್ಗೆ ಪತ್ರ ಬರೆಯಲು ಕೂತೆ.
ನನ್ನ ಸಜ್ಜನಿಕೆಯ, ನಿಷ್ಪಕ್ಷಪಾತ, ಸ್ವಚ್ಛ ಸ್ನೇಹದ ಆ ನನ್ನ ಪತ್ರವನ್ನು ಈಗಲೂ ನೆನಪಿಸಿಕೊಂಡು ಕೊಂಡಾಡುವ ಮನಸ್ಸಾಗುತ್ತದೆ. ಚುರುಕಾಗಿ, ಘನತೆಯಲ್ಲಿ ಎಲ್ಲಕ್ಕಿಂತ ಮಿಗಿಲಾಗಿ, ಯಾವ ಅನವಶ್ಯಕ ಪದಗಳನ್ನೂ ಬಳಸದೆ, ಮುಕ್ತವಾಗಿ ಬರೆದ ಪತ್ರವದು. ಎಲ್ಲ ತಪ್ಪನ್ನೂ ನನ್ನ ಮೇಲೆ ಹಾಕಿಕೊಂಡಿದ್ದರೂ ನನ್ನ ನಡವಳಿಕೆಯನ್ನು ಸಮರ್ಥಿಸಿದ್ದೆ -“ಸಮರ್ಥನೆಗೆ ಇನ್ನೂ ನಾನು ಅರ್ಹನಾಗಿದ್ದರೆ”- ನನ್ನ ಪತ್ರ ಹೀಗಿತ್ತು.
“ಐದರಿಂದ ಆರರತನಕ ಎಲ್ಲರಿಗೂ ಕಾಯುತ್ತ ಒಂದೆರೆಡು ಲೋಟ ವೈನ್ ಕುಡಿದಿದ್ದೆ; ಈ ನಶೆಯ ವ್ಯವಹಾರ ಗೊತ್ತಿಲ್ಲದ್ದ ಭೋಳೆ ಮನುಷ್ಯನಪ್ಪ ನಾನು! ಅದಕ್ಕೇ ಏನೋ ಚಿಕ್ಕ ಚಿಕ್ಕ ಗುಟುಕುಗಳನ್ನು ನುಂಗುತಿದ್ದ ಹಾಗೆಯೇ ನಶೆ ತಲೆಗೆ ಏರಿತ್ತು. ಆಮೇಲೇ ಏನೇನೋ ಆಗಿ ಹೋಯಿತು. ವಿಶೇಷವಾಗಿ ಸೈಮೊನವ್ ನೀನು ನನ್ನ ಕ್ಷಮಿಸ ಬೇಕು. ಬೇರೆಯವರಿಗೂ ನನ್ನ ಕ್ಷಮೆಯ ನಿವೇದನೆಯನ್ನು ರವಾನಿಸು. ಮುಖ್ಯವಾಗಿ ಝ್ವರ್ಕೋವ್ಗೆ ಇವೆಲ್ಲಾ ತಿಳಿಯಬೇಕು. ಅವನನ್ನು ನಾನು ಅವಮಾನಿಸಿದ್ದೆಲ್ಲಾ ಮಸುಕು-ಮಸುಕಾಗಿ, ಕನಸಲ್ಲಿ ಕಂಡಂತೆ ನೆನಪಿದೆ. ಎಲ್ಲರನ್ನೂ ನಾನೇ ಖುದ್ದಾಗಿ ಭೇಟಿಯಾಗಬೇಕೆಂದಿದ್ದೆ, ಆದರೆ ಕೆಟ್ಟ ತಲೆಸಿಡಿತ, ಅದರ ಜತೆಗೆ ನನಗಾದ ಮುಜುಗುರದ ಭಾರ…” ಹೀಗೆ ಸಾಗಿತ್ತು ನನ್ನ ಬರವಣಿಗೆ, ನನ್ನ ಬರವಣಿಗೆಯಲ್ಲಿ ವ್ಯಕ್ತವಾಗಿದ್ದ ಉಢಾಫೆ ವೈಖರಿಯನ್ನು(ಆದರೂ ಸಮಂಜಸವಾಗಿದ್ದ) ನಾನೇ ಮೆಚ್ಚಿದ್ದೆ. ಬೇರೆಲ್ಲಾ ಸೈದ್ಧಾಂತಿಕ ತರ್ಕಗಳಿಗಿಂತಲೂ ತೀಕ್ಷ್ಣವಾಗಿ ಅವರಿಗೆ, “ನಿನ್ನೆ ಘಟಿಸಿದ ಹೊಲಸು ಘಟನೆಗಳನ್ನು ನಾನು ನಿರ್ಲಿಪ್ತ ದೃಷ್ಟಿಯಲ್ಲಿ ನೋಡಿದ್ದೇನೆ, ನೀವೆಲ್ಲಾ ಅಂದುಕೊಂಡಂತೆ ನಾನೇನು ಅದರಿಂದ ಯದ್ವಾತದ್ವಾ ನಲುಗಿಯೂ ಇಲ್ಲ, ಉಡುಗಿಯೂ ಇಲ್ಲ, ಆದರೆ ಅದಕ್ಕೆ ವಿರುದ್ಧವಾಗಿಯೇ ನಾನು ಸ್ಥಿತಪ್ರಜ್ಞನಾಗಿಯೇ ಆ ಘಟನೆಗಳನ್ನೆಲ್ಲಾ ಸಮಾಧಾನ ಮನಃಸ್ಥಿತಿಯಲ್ಲಿ, ಸ್ವಾಭಿಮಾನಿ ಸಜ್ಜನನಂತೆ ಸ್ವೀಕರಿಸಿರುವೆ” ಎನ್ನುವ ಸತ್ಯವನ್ನು ಮನವರಿಕೆ ಮಾಡಿಸುವ ಶೈಲಿ ನನ್ನ ಪತ್ರದ್ದಾಗಿತ್ತು!
“ಹಾಗೆ ನೋಡಿದರೆ ಈ ದೊಡ್ಡ ಮನುಷ್ಯರು ಛೇಡಿಸಿ ಬರೆಯುತ್ತಾರಲ್ಲ, ಅಂತಹಾ ಶೈಲಿಯನ್ನೇ ನಾನು ಇಲ್ಲಿ ಅನುಸರಿಸಿದ್ದೇನೆ” ಎಂದು ಹಿಗ್ಗಿದೆ. ಅದನ್ನು ಹೊಗಳುತ್ತಾ, ಇನ್ನೊಮ್ಮೆ ಓದುತ್ತಿರುವಾಗ ನಾನೊಬ್ಬ ಬುದ್ಧಿವಂತ ಸುಶೀಲ ಸಜ್ಜನಾಗಿರುವುದಕ್ಕೆ ಹೀಗೆ ಬರೆಯಲಿಕ್ಕಾಯಿತು ಎನಿಸಿತು. ನನ್ನ ಜಾಗದಲ್ಲಿ ಬೇರೆಯವರಿದ್ದರೆ, ಈ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲಾಗದೆ ಪರದಾಡಬೇಕಿತ್ತು. ಆದರೆ ನಾನು ಬುದ್ಧಿವಂತ, ನನ್ನ ಕಾಲಮಾನದ ಬುದ್ಧಿವಂತ ಇರಲಿ. ಹೆಂಡವನ್ನೇ ದೂರಬೇಕು, ನಿನ್ನೆಯ ನನ್ನ ವರ್ತನೆಗೆ, ಹ್ಞ್ಮ್… ಒಳ್ಳೆದು! ಆದರೆ ಇಲ್ಲ… ಹೆಂಡದ ಮೇಲೆ ಗೂಬೆ ಕೂರಿಸಬಾರದು! ಅವರಿಗಾಗಿ ಐದರಿಂದ ಆರರ ತನಕ ಕಾಯುತ್ತಾ ಕೂರಿತುವಾಗ, ವೊಡ್ಕಾವನ್ನೂ ಸಹ ನಾನು ಹಾಕಿರಲಿಲ್ಲ! ಸೈಮೊನವ್ಗೆ ಆ ಪತ್ರದಲ್ಲಿ ಸುಳ್ಳು ಹೇಳಿದ್ದೆ. ನಾಚಿಕೆಯಿಲ್ಲದೆ ಸುಳ್ಳು ಹೇಳಿದ್ದೆ. ಆದರೂ ಸತ್ಯ ಹೇಳಬೇಕೆಂದರೆ, ಈಗಲೂ ಅವತ್ತು ನಾನು ಎಬ್ಬಿಸಿದ ದೊಂಬಿ ಬಗ್ಗೇ ನನಗೆ ಚೂರೇ ಚೂರೂ ಪಶ್ಚತಾಪವಿಲ್ಲ. ಎಲ್ಲ ಸಾಯಲಿ, ಒಟ್ಟಿನಲ್ಲಿ ಆ ಸಮಾಚಾರ ಅವತ್ತು ಅಲ್ಲಿಗೇ ಸಮಾಪ್ತಿಯಾಯಿತು.
ಆ ಪತ್ರದೊಂದಿಗೆ ಆರು ರೂಬಲ್ಸ್ಗಳನ್ನು ತುರುಕಿ, ಠಸ್ಸೆ ಹೊಡೆದು ಅಪೋಲ್ನನ್ನು ಕೂಗಿ ಸೈಮೊನವ್ಗೆ ಹೇಗಾದರೂ ಅದನ್ನು ತಲುಪಿಸಲು ಹೇಳಿದೆ. ಆತ ಬಹಳ ಮಾನಸ್ಥನಂತೆ ಧಿಮಾಕಾಡಿದ ಮೇಲೆಯೇ ಆ ಕೆಲಸಕ್ಕೆ ಒಪ್ಪಿದ್ದು! ಸಾಯಂಕಾಲವಾಗುತಿದ್ದ ಹಾಗೇ ಅಡ್ಡಾಡಲು ಹೊರಟೆ. ತಲೆಯಿನ್ನೂ ಸಿಡಿಯುತ್ತಿತ್ತು. ನಿನ್ನೆ ರಾತ್ರಿಯ ದೆಸೆಯಿಂದ ನನ್ನ ನರಗಳೆಲ್ಲಾ ತೂರಾಡುತ್ತಿದ್ದವು. ಆದರೆ ಸಂಜೆ ಬಂದು, ಮುಸ್ಸಂಜೆ ದಟ್ಟವಾಗಿ ಹಬ್ಬಿದಾಗ ನನ್ನ ಆಲೋಚನೆಗಳೆಲ್ಲ ರೂಪಾಂತರವಾಗಿ, ಇನ್ನೇನೋ ಆಗಿ ಬೆಳೆದು ಮನಸ್ಸೆಲ್ಲ ಗೊಂದಲಮಯವಾಯಿತು. ಒಳಗಡೆ ಏನೋ ಒಂದು ಸಾಯಲು ನಿರಾಕರಿಸುತ್ತಿತ್ತು. ಹೃದಯದಾಳದಲ್ಲಿ, ಅರಿವಿನ ತಳದೊಳಗೆ, ಮಹಾವೇದನೆಯಲ್ಲಿ ಉರಿಯುವ ವಿಷಣ್ಣತೆಯಾಗಿ ಅದು ಹುಟ್ಟಿತ್ತು. ಜನ ತುಂಬಿದ ರಸ್ತೆಗಳಲ್ಲಿ, ಕಾರ್ಖಾನೆಗಳಿದ್ದ ಬೀದಿಯಲ್ಲಿ ನಾನು ಅಲೆದಾಡುತ್ತಾ ಇದ್ದೆ. ಯಾವಾಗಲೂ ನನಗೆ ಇಲ್ಲಿ ಅಡ್ಡಾಡುವುದೇ ತುಂಬಾ ಇಷ್ಟ. ಅದೂ ಮುಸ್ಸಂಜೆಯ ದಿನ ಜನಜಂಗುಳಿಯ ನಡುವೆ ಥರದ ಥರದ ಪಾದಾಚಾರಿಗಳು ನೂಕಾಡುತ್ತ ಮನೆಗೆ ಓಡುವಾಗ, ಕಾರ್ಮಿಕರು, ಕುಶಲಕರ್ಮಿಗಳು, ಕೋಪ-ತಾಪದ ಮುಖದಲ್ಲಿ ಚದರುತ್ತಾ ತಮ್ಮ ದಿನಗೂಲಿ ನೌಕರಿಗಳಿಂದ ಮರಳಿ ಗೂಡಿಗೆ ಸಾಗುತ್ತಿರುವಾಗ ಅವರ ಮಧ್ಯೆ ನಡೆಯುವುದೇ ನನಗೆ ಮಜ. ಆ ಹೀನ ಗದ್ದಲ, ನಾಚಿಕೆಗೆಟ್ಟ ಅನುದಿನದ ಗಲಭೆಯನ್ನೇ ನಾನು ಜಾಸ್ತಿ ಇಷ್ಟಪಟ್ಟದ್ದು. ಆದರೆ ಇವತ್ತು ಏಕೋ ಆ Myeshtchansky ಬೀದಿಯ ಗದ್ದಲ-ಗಲಭೆಗಳು ನನ್ನನ್ನು ಗಾಢವಾಗಿಯೇ ಕಿರಿ-ಕಿರಿಗೊಳಿಸಿತು. ಇದ್ದಬದ್ದ ನಿಯಂತ್ರಣವೆಲ್ಲ ತಪ್ಪುತ್ತಿದ್ದಾಗ ಮಂಜುಕವಿದ ಸಂಜೆಯಾಗುತಿತ್ತು. ನನ್ನ ಆತ್ಮದೊಳಗೆ ಏನೋ ಒಂದು ಒದೆಯುತ್ತ, ಢಾಳದ ವೇದನೆಯಲ್ಲಿ ಬಿಡುವಿಲ್ಲದೆ ಏರುತ್ತಿತ್ತು. ಸಮಾಧಾನಗೊಂಡು ಪ್ರಶಾಂತ ಸ್ಥಿತಿಗೆ ಮರಳಲು ಹಿಂದೇಟು ಹಾಕುತ್ತಿತ್ತು. ತಳಮಳಗೊಂಡು ಮನೆಗೆ ಮರಳಿದೆ. ಅಪರಾಧದ ಹೊರೆ ನನ್ನ ಆತ್ಮದ ಮೇಲೆ ಉರುಳಿದೆ ಎಂಬಂತೆ.
ಲೀಝಾ ಬಂದು ಬಿಡುತ್ತಾಳೆ ಅನ್ನೋ ಯೋಚನೆಯಿಂದಳೇ ನಾನು ಅಷ್ಟು ನೋವಲ್ಲಿ ಬೆಂದದ್ದು. ಹೋದ ರಾತ್ರಿ ಆದದ್ದೆನ್ನೆಲ್ಲಾ ಮತ್ತೆ ನೆನೆಪಿಸಿಕೊಳ್ಳುತ್ತಿದ್ದಾಗ ಈ ಲೀಝಾಳ ಸ್ಮೃತಿಯೇ ನನ್ನನ್ನು ಹೆಚ್ಚು ಬೇಯಿಸಿದ್ದು, ನಿಜಕ್ಕೂ ವಿಚಿತ್ರವೇ. ಸಂಜೆಯಾಗುವಷ್ಟರಲ್ಲಿ ಉಳಿದ ನೆನೆಪುಗಳನ್ನೆಲ್ಲಾ ವಿಸರ್ಜಿಸಿದ್ದೆ; ಎಲ್ಲಕ್ಕಿಂತ ಹೆಚ್ಚಾಗಿ ಸೈಮೊನವ್ಗೆ ನಾನು ಬರೆದ ಪತ್ರವೂ ಮನಸ್ಸಿಗೆ ಸಂಪೂರ್ಣ ತೃಪ್ತಿ ಕೊಟ್ಟಿತ್ತು. ಆದರೆ ಲೀಝಾಳ ಕಥೆ ಮಾತ್ರ ನನಗೆ ಯಾವ ಜುಜುಬಿ ನೆಮ್ಮದಿಯನ್ನೂ ಕೊಟ್ಟಿರಲಿಲ್ಲ. ಈ ಎಲ್ಲಾ ವೇದನೆಯೇ ಅವಳು ಎನ್ನುವಂತೆ ನಾನು ತಲ್ಲಣಿಸಿದ್ದೆ “ ಈಗ ಅವಳೇನಾದರೂ ಬಂದರೆ?”ಎಂದು ಯೋಚಿಸುತ್ತಲೇ ಇದ್ದೆ, “ಓಹ್, ಬರ್ಲಿ… ಅದ್ಯಾವ ದೊಡ್ಡ ವಿಚಾರ… ಬರ್ಲಿ… ಬರ್ಲಿ… ಹ್ಞ್ಮ್…!” ಅವಳೇನಾದರು ಬಂದು ನಾನು ಹೀಗೆ, ಅಲೆಮಾರಿ ಥರ ಈ ಕೋಣೆಯಲ್ಲಿ ಬದುಕ್ಕಿದ್ದೇನೆಂದು ನೋಡಿಬಿಟ್ಟರೆ, ಎಂತಹಾ ದುರ್ದೈವ ಆಗ! ಹೋದ ರಾತ್ರಿ ತಾನೇ ಮಹಾರಾಜನಂತೆ ಅಲ್ಲಿ ಠೀವಿಯಲ್ಲಿ ಮೆರೆದು… ಈಗ… ಹ್ಞ್ಮ್! ನಿನ್ನೆ ಆಕೆಯ ಮುಂದೆ ನಾನು ಕುಣಿದ ಈ ಅಹಂಕಾರ ಕುಣಿತ ಯಾಕೋ ಚೂರು ಜಾಸ್ತಿಯೇ ಆಯಿತೇನೋ! ಆದರೆ ಈಗ ನನ್ನೀ ಮನೆಯೇ ಸಾಕು ನನ್ನ ನಿಜದ ಹೀನಸ್ಥಿತಿಯನ್ನು ಬಿಂಬಿಸಲು. ನಿನ್ನೆ ಡಿನ್ನರ್ಪಾರ್ಟಿಗೆಂದು ಭಾರಿ ಭಾರಿ ಬಟ್ಟೆ ಹಾಕಿದ್ದೆ; ಆದರೆ ಇಲ್ಲಿ, ನನ್ನ ಮುರುಕು ಫ಼್ಲಾಟಿನಲ್ಲಿ ಎಣ್ಣೆ ಮೆತ್ತಿಕೊಂಡ ಬಟ್ಟೆ ಸುತ್ತಿಕೊಂಡ ಈ ಅಮೇರಿಕಾದ ಲೆಥರ್ ಸೋಫಾದಿಂದ ಸ್ಪಂಜುಗಳು ಕತ್ತು ಹಾಕಿ ಇಣಕುತ್ತಿವೆ! ನನ್ನ ಜೋತು ಬಿದ್ದ ಕೊಳೇ ಗೌನು! ಈ ನನ್ನ ಚಿಂದಿ-ಚಿಂದಿ ದಿನದಿನದ ಜೀವನ… ಅವಳು ಎಲ್ಲವನ್ನೂ… ಕೊನೆಗೆ ಆ ಅಪೋಲನ್ನನ್ನೂ ನೋಡಿಬಿಡುತ್ತಾಳೆ. ಆ ಧೂರ್ತ ಅವಳನ್ನು ನಿಂದಿಸಬಹುದು. ನನ್ನ ಮೇಲೆ ಹಗೆ ಸಾಧಿಸಲಿಕ್ಕಾಗಿಯೇ ಅವಳನ್ನು ಉಗಿದರೂ ಉಗಿಯುತ್ತಾನೆ ಆ ಭೂತ. ಆಗ, ನಾನು ಯಾವಾಗಲು ಆಡುವಂತೆ ಧೈರ್ಯಗೆಟ್ಟು, ನಾಚಿಕೆಯಿಂದ ನನ್ನ ಗೌನಿನ ಸೆರಗನ್ನು ಎಳದಾಡುತ್ತಾ, ಅವಳ ಹಿಂದೆ ಅಲೆದಾಡಿ, ಹುಚ್ಚನ ಹಾಗೆ ನಕ್ಕು, ಮತ್ತೆ ಮತ್ತೆ ಸುಳ್ಳು ಬಿಟ್ಟು, ಸುಮ್ಮ್-ಸುಮ್ಮನೇ ಲೀಝಾಳ ಮುಂದೆ ತಲೆ ಬಗ್ಗಿಸಿ, ಮತ್ತೆ ಗಹಗಹಿಸಿ, ನನ್ನೊಳಗಿರುವ ನಯವಂಚಕನ ಮೊಗವಾಡವನ್ನು ಮತ್ತೆ-ಮತ್ತೆ ಹಾಕಿಕೊಳ್ಳಲೇ ಬೇಕಾಗುತ್ತದಲ್ಲ ಆಗ, ಇದು ಮಾತ್ರ ತುಂಬಾ ಭಯಂಕರ ಮತ್ತು ಭೀಭತ್ಸ.
ಆ ಯೋಚನೆ ಹತ್ತಿಕೊಳ್ಳುತ್ತಿದ್ದಂತೆ ಪಕ್ಕನೆ ಕೆರಳಿದೆ, “ಏನು ನಯವಂಚನೆ? ಎಂಥಾ ನಯ ವಂಚನೆ? ಹೋದ ರಾತ್ರಿ ನಾನು ಆಡಿದ ಮಾತುಗಳೆಲ್ಲ ಪ್ರಾಮಾಣಿಕವಾಗಿದ್ದವೇ… ಅದೂ ಅಪ್ಪಟ ಭಾವನೆಯಿಂದ ಮೂಡಿದ್ದು… ಅಂತಹ ಭವ್ಯಭಾವನೆಗಳನ್ನು ಅವಳಲ್ಲೂ ಉದ್ದೀಪನಗೊಳಿಸಲು ಇಷ್ಟಪಟ್ಟಿದ್ದೆ ನಾನು. ಆಕೆ ಸ್ವಲ್ಪ ಅತ್ತಿದರೂ ಅದು ಒಳ್ಳೆಯದೇ, ಇದರ ಪರಿಣಾಮವೂ ತುಂಬಾ ಒಳ್ಳೆಯದೇ…”
ಇಷ್ಟೆಲ್ಲ ಆದರೂ ನನ್ನ ಮನಸ್ಸಿನ ತಳಮಳಗಳನ್ನು ಹತ್ತಿಕ್ಕಲಾಗಲಿಲ್ಲ.
ಆವತ್ತು ಮನೆಗೆ ನುಸುಳಿದಾಗ ಇನ್ನೂ ಸಂಜೆಯಷ್ಟೇ. ಒಂಥರಾ ವಾಕರಿಕೆ ಬಂದಂತೆ… ಕಕ್ಕಸ್ಸಿಗೆ ಹೋಗಬೇಕೆಂದು ಅನಿಸಿದಂತೆ… ಆಮೇಲೆ ರಾತ್ರಿ ಒಂಭತ್ತು ಕಳೆಯುತ್ತಿದ್ದ ಹಾಗೇ ಲೀಝಾ ಬರಲಿಕ್ಕಿಲ್ಲ ಅನ್ನೋವಂತ ನಂಬಿಕೆ ಗಟ್ಟಿಯಾಗುತ್ತಿತ್ತು. ಹಾಗಿದ್ದೂ ಮತ್ತೆ ಮತ್ತೆ ಅವಳು ದೆವ್ವದಂತೆ ನನ್ನ ಮನಸ್ಸನ್ನು ಬೆಂಬತ್ತಿದ್ದಳು. ನಿನ್ನೆ ಬೆಳಕಾಗಲಿ ಎಂದು ನಾನು ಬೆಂಕಿಕಡ್ಡಿ ಗೀರಿದಾಗ ಇಡೀ ಕೋಣೆಯೇ ಮಬ್ಬಾಗಿ ಬೆಳಗಿದಾಗ ಈ ಲೀಝಾ ನನ್ನತ್ತ ಆತ್ಮಾಹುತಿಯ ನೋಟ ಬೀರಿದ್ದಳಲ್ಲ, ಆ ದೃಶ್ಯವಂತೂ ಧುತ್ತನೆ ಎದ್ದು ಬಂದು ನನ್ನ ಧಿಗ್ಮೂೀಢನನ್ನಾಗಿಸುತಿತ್ತು. ಎಂತಹಾ ಕರುಣಾಜನಕ, ಎಂತಹ ವಿಲಕ್ಷಣ ವಕ್ರ ನಗುವದು! ಆದರೆ ಹದಿನೈದು ವರುಷಗಳು ಖಾಲಿಯಾದ ಮೇಲೂ ನಾನು ಲೀಝಾಳನ್ನು ಅದೇ ವಕ್ರ, ಕರುಣಾಜನಕ ವಿಕ್ಷಿಪ್ತ ನಗುವಿನ ಜತೆ ನೆನೆಸಿಕೊಳ್ಳುವೆ, ಎಂದು ಆಗ ನನಗೆ ಗೊತ್ತಿರಲಿಲ್ಲ.
ಮುಂದಿನ ದಿನ, ನನ್ನನ್ನು ಕುದಿಸುತಿದ್ದ ಈ ಮೂರ್ಖ ವಿಚಾರಗಳು ನನ್ನ ಕಂಗೆಟ್ಟ ನರಗಳ ಫಲಿತಾಂಶವೆಂದೇ ನಿರ್ಧರಿಸಲು ಸಿದ್ಧನಾಗಿದ್ದೆ. ಇವೆಲ್ಲವೂ ಯಾಕೋ ತುಂಬಾ ಉತ್ಪ್ರೇಕ್ಷೆ ಅನ್ನಿಸಿತ್ತು. ಖಂಡಿತ ಇದು ನನ್ನ ದೌರ್ಬಲ್ಯವೇ ಮತ್ತು ನನಗೆ ಅದು ಗೊತ್ತಿತ್ತೂ ಕೂಡ. ಆದರೆ ಒಮ್ಮೊಮ್ಮೆ ಈ ನನ್ನ ಅತಿಉತ್ಪ್ರೇಕ್ಷಾರೋಗ ತುಂಬಾ ಹೆದರಿಸುತಿತ್ತು ಕೂಡ. “ ಯಾವಾಗಲೂ ಎಲ್ಲವನ್ನೂ ಉತ್ಪ್ರೇಕ್ಷಿಸೋ ಪಾಪಿ ನಾನು, ಅದೇ ನನ್ನ ಮಹಾ ದೌರ್ಬಲ್ಯ” ಮತ್ತೆ ಮತ್ತೆ ಇದನ್ನೇ ಪುನರಾವರ್ತಿಸಿದೆ ಮನಸ್ಸಲ್ಲಿ. “ಹಾಗಿದ್ದರೂ… ಹಾಗಿದ್ದರೂ ಲೀಝಾ ಬಂದೇ ಬರುವಳು, ಹೌದು ಬಂದೇ ಬರುತ್ತಾಳೆ ಏನೇ ಆದರೂ” ಈ ಹಾಳು ಸಾಲೇ ಆಗ ನನ್ನೊಳಗಿದ್ದ ವಾದ-ಪ್ರತಿವಾದಗಳನ್ನು ಖೈದುಗೊಳಿಸುತ್ತಿದ್ದ ಪಲ್ಲವಿ. ಕೆಲವೊಮ್ಮೆ ನಾನೆಷ್ಟು ಗಾಬರಿಯಾಗಿ ಬಿಡುತ್ತಿದ್ದೆನೆಂದರೆ, ಈ ಒತ್ತಡದಿಂದ ಕ್ರೋಧಿಕ್ತನಾಗಿ “ಅವಳು ಬರುವಳು ಬಂದೇ ಬರುತ್ತಾಳೆ!” ಎಂದು ಹಲ್ಲು ಮಸೆಯುತ್ತಾ ಕೋಣೆಯಲ್ಲಿ ಅತ್ತಿತ್ತ ಓಡಾಡುತ್ತ ಕೂಗುತ್ತಿದ್ದೆ. “ಇವತ್ತಲ್ಲದಿದ್ದರೆ ನಾಳೆ! ಅವಳು ಖಚಿತವಾಗಿಯೇ ನನ್ನನ್ನು ಹುಡುಕುತ್ತಾಳೆ! ಥೂ..! ಇದೇ ಈ ಪವಿತ್ರ ಹೃದಯಗಳ ಹಾಳಾದ ರೊಮ್ಯಾಂಟಿಸಿಸಮ್ಮು. ಓಹ್ ಎಷ್ಟು ಹೇಸಿಗೆಯ ಪೆದ್ದು ಪೆದ್ದು, ಸಂಕುಚಿತ ಮನಸ್ಸಿನ ದರಿದ್ರ ಭಾವಪರವಶ ಆತ್ಮಗಳಿವು! ಯಾಕೆ ಇವಕ್ಕೆ ಏನು ಅರ್ಥವಾಗುವುದಿಲ್ಲ…! ಹೇಗೆ ಅವು ಅರಿಯದೇ ಇರಲು ಸಾಧ್ಯ?” ಆದರೆ ಈ ಚಿಂತನೆಯ ಜತೆ ನನ್ನ ಅರಿವಿನ ಕಾಳಗ ಇದ್ದಕ್ಕಿದ್ದಂತೆ ನಿಲ್ಲುತಿತ್ತು, ಮಹಾ ಗೊಂದಲದಲ್ಲಿ.
“ಕೆಲವೇ-ಕೆಲವು ಪದಗಳ ಜರೂರತ್ತಿದೆ,” ಹಾಗೇ ಯೋಚಿಸುತ್ತಿದ್ದೆ. “ಅದ್ಭುತದ ಚಿಕ್ಕ ತುಂಡಿನ (ಊಹಿಸಿದ, ಹುಟ್ಟಿಸಿದ, ಗ್ರಂಥಗಳಿಂದ ಎದ್ದ ಅದ್ಭುತದ)ಮದ್ದು ಇದ್ದರೆ ಸಾಕು ತತ್ತ್ ಕ್ಷಣವೇ ಮನುಷ್ಯನಾತ್ಮವನ್ನು ರೂಪಾಂತರಿಸಿ, ಆ ನಂತರ ಅದನ್ನು ನನಗೆ ಬೇಕಾದಂತೆ ನುಡಿಸಿ ಬಿಡಬಹುದು. ಅದೇ ನಿಷ್ಕಳಂಕ ಚೆಲುವು, ಅದೇ ತಾಜಾ ಶುದ್ಧ ಮಣ್ಣು.”
ಕೆಲವೊಮ್ಮೆ ನಾನೇ ಆ ಜಾಗಕ್ಕೇ ಹೋಗಿ, ಅವಳ ಹತ್ತಿರ “ಎಲ್ಲವನ್ನೂ ತೋಡಿಕೊಂಡು ಬಿಡುವ ಆಸೆ” ಅತಿಯಾಗುತ್ತಿತ್ತು. ಈ ಲೀಝಾ ನನ್ನ ಮನೆಗೆ ಬರೋದೇ ಅಪಾಯ ಮತ್ತು ಕೆಟ್ಟದ್ದೂ ಅಂತ ಅವಳನ್ನು ಪ್ರೇರೇಪಿಸುವುದೂ ಒಳ್ಳೆಯದಲ್ಲವೇ? ಅನ್ನೋ ಯೋಚನೆಯೂ ಬರುತಿತ್ತು. ಆದರೆ ಈ ಗುಂಗಿನಿಂದ ಎಷ್ಟು ಸಿಟ್ಟು ಬರುತ್ತಿತ್ತೆಂದರೆ ಆ ಹೊತ್ತಿಗೆ ಸರಿಯಾಗಿ ಈ “ಹಾಳು” ಲೀಝಾ ಇಲ್ಲಿ ಪ್ರತ್ಯಕ್ಷವಾಗಿ ಬಿಡುತ್ತಿದ್ದರೆ ಅವಳ ಮಾನ ಕಳೆದು, ಅವಳ ಮುಖಕ್ಕೆಲ್ಲಾ ಉಗಿದು , ಅವಳ ಕೂದಲೆಳೆದು ಹೊರಗೆ ದಬ್ಬಿಯೇ ಬಿಡುತ್ತಿದ್ದೆನೇನೋ!
ಒಂದು ದಿನ ಕಳೆಯಿತು, ಮತ್ತೊಂದು, ಮಗದೊಂದು… ಅವಳು ಬರಲೇ ಇಲ್ಲ. ಸತ್ತಿದ್ದ ನನ್ನ ಮನಶ್ಯಾಂತಿ ಮತ್ತೆ ಹುಟ್ಟಿತು. ರಾತ್ರಿ ಒಂಭತ್ತಾದ ಮೇಲಂತೂ ಬಹಳ ನೆಮ್ಮದಿಯಲ್ಲಿರುತ್ತಿದೆ. ಆ ಅಪ್ಯಾಯಮಾನವಾದ ಮನಃಸ್ಥಿತಿಯಲ್ಲಿ, ನನ್ನ ಹಗಲುಗನಸಿನ ಚಾಳಿಯೂ ಮರುಕಳಿಸಿತ್ತು. ಈ ಲೀಝಾ ಬರಲೇ ಬಾರದೆಂದು ನಾನು ಪಟ್ಟು ಹಿಡಿದಿರುವ ನಿಜವನ್ನೇ ಮರೆತು, ಅವಳು ಇಲ್ಲಿಗೆ ಪಾದ ಬೆಳೆಸಿದಂತೆ, ನಾನು ಅವಳನ್ನು ಅಲ್ಲಿಂದ ಕಾಪಾಡಿದಂತೆ, ಅವಳ ಮನಸ್ಸಿಗೆ ಜ್ಞಾನವೆರದಂತೆ, ಅವಳಿಗೆ ವಿದ್ಯಾಬುದ್ಧಿಯನ್ನೆಲ್ಲ ದಯಪಾಲಿಸಿದಂತೆ, ಮತ್ತೆ ಕಟ್ಟ ಕಡೆಗೆ ಅವಳು ನನ್ನ ಪ್ರೀತಿಸುತ್ತಿರುವುದನ್ನು ನಾನು ಗಮನಿಸಿದಂತೆ! ಅದೂ ರಾಗೋನ್ಮತ್ತ ಪ್ರೀತಿ! ಹಾಗಿದ್ದರೂ ನಾನು ಆ ಪ್ರೇಮವ ಅರ್ಥವೇ ಮಾಡಿಕೊಳ್ಳದಂತೆ ನಟಿಸುತ್ತೇನೆ! (ಆದರೆ ಯಾಕೆ ಹಾಗೇ? ಗೊತ್ತಿಲ್ಲ ಬಹುಶಃ ಅದೂ ಒಂಥರಾ ಆಟ, ಒಳ್ಳೇ ಪರಿಣಾಮಕ್ಕೋಸ್ಕರ ಆಡೋ ಆಟ) ಅಂತೂ ತುಂಬಾ ಗೊಂದಲದಲ್ಲಿ ಈ ಲೀಝಾ ಕಕ್ಕಾಬಿಕ್ಕಿಯಾಗಿ ಬಿಕ್ಕಿ, ನಡುಗಿ, ನನ್ನ ಪಾದ ಚರಣಗಳತ್ತ, ಅವಳನ್ನ ಅವಳೇ ರಾಚಿ, ಪ್ರೇಮಭಿಕ್ಷೆ ಬೇಡುತ್ತಾ, ನಾನೇ ಅವಳ ಆಪ್ತರಕ್ಷಕನೆಂದು ಜಗತ್ತಿನಲ್ಲಿ ಯಾರನ್ನೂ ಯಾರೂ ಪ್ರೀತಿಸಿರದಷ್ಟು ನನ್ನನ್ನು ಅವಳು ಪ್ರೀತಿಸುತ್ತಾಳೆಂದು ಗೋಗರೆದು ಅಳುತ್ತಾಳೆ. ನಾನು ಆಶ್ಚರ್ಯದಲ್ಲಿ ಅದ್ದಿ ಹೋದಂತೆ ನಟಿಸಿದರೂ ಸ್ವಲ್ಪ ಮತ್ತೆ ‘ಲೀಝಾ’ ಅಂತ ಮೆದುವಾಗಿ ಅಂದು, “ಅಯ್ಯೋ ನಿನ್ನ ಪ್ರೇಮದ ಪರಿಯ ನಾನರಿಯೆ ಎಂದು ಭ್ರಮಿಸಿದ್ದೆಯಾ? ನನಗೆಲ್ಲಾ ಗೊತ್ತು ಕಣೇ ನಾನು ಯಾವತ್ತೋ ಊಹಿಸಿಯೂ ಇದ್ದೆ, ಅದರ ದಿವ್ಯ ಸ್ನಾನದಿ ನೆನೆದಿದ್ದೆ. ಆದರೆ ನಿನ್ನ ಹೃದಯವ ನನ್ನದು ಎಂದು ನಾನೇ ಮೊದಲು ಘೋಷಿಸಲು ಅಂಜಿದ್ದೆ. ನಾನು ನಿನಗೆ ಧಾರೆ ಎರೆದ ಪ್ರಭಾವಳಿಗೆ ಕೃತಜ್ಞಳಾಗಿ, ಪ್ರೀತಿ ಇರದೇ ಇದ್ದರೂ ಇದೆ ಎಂದು ಬಲವಂತವಾಗಿ ನೀನು ಒಪ್ಪಿಕೊಳ್ಳುವ ಭಯವಿತ್ತು ನನಗೆ. ಥೂ…! ನನಗದು ಇಷ್ಟವಿಲ್ಲ, ನಾಜೂಕಿಲ್ಲದ ಸರ್ವಾಧಿಕಾರವದು. ( ಅಂದರೆ ಈ ಯುರೋಪಿಯನ್ನರ ಹಾಗೇ, ಭವ್ಯವಾಗಿ, ಮೃದುವಾಗಿದ್ದರೂ ಅರ್ಥ ಆಗಲೇ ಬೇಕಾದ ಮಾತುಗಳಲ್ಲಿ ಬೇಕಾದರೆ George Sand ಥರ ಅನ್ಕೊಳೀ) ಆದರೆ ಈಗ ನೀನು ನನ್ನವಳು, ನೀನೇ ನನ್ನ ಸೃಷ್ಟಿಯು, ನೀನೇ ಪವಿತ್ರ, ನೀನೆ ಚೆಲುವು, ನೀನು – ನನ್ನ ಸುಂದರ ಸತಿ… ನಮ್ಮ ಖುಷಿಗಿನ್ನು ಕೊನೆಯಿಲ್ಲ. ನಿರಂತರವಾಗಿ ಆನಂದಲ್ಲಿ ಬಾಳೋಣ, ದೇಶ-ವಿದೇಶ ಸುತ್ತೋಣ, ಇತ್ಯಾದಿ… ಇತ್ಯಾದಿ…” ಒಂದೇ ಮಾತಲ್ಲಿ ಹೇಳುವುದಾದರೆ, ಈ ಭ್ರಾಂತ್ಯಾತ್ಮಕ ಕನಸಿನ ಕೊನೆಯಲ್ಲಿ ನನ್ನ ಬಗ್ಗೆ ನನಗೆ ರೇಜಿಗೆಯಾಯಿತು. ಹೀಗೆ ಊಹಿಸಿ ಸುಖಿಸಿದಕ್ಕೆ ನನ್ನ ನಾನೇ ವ್ಯಂಗ್ಯ ಮಾಡಿ ಉಗಿಯಬೇಕೆನ್ನಿಸಿತ್ತು.
“ಅದೂ ಅಲ್ಲದೆ ಆ ‘ಸೂಳೆ’ಯನ್ನು ಆ ಜನ ಆ ಜಾಗದಿಂದ ಆಚೆ ಕಳುಹಿಸೋದು, ಆ ಹುಡುಗಿ ಇಲ್ಲಿ ತನಕ ನನ್ನ ಮನೆ ಹುಡುಕುತ್ತಾ ಬರೋದೆಲ್ಲ ಆಗದ ಕಥೆ. ಅಷ್ಟಕ್ಕೆಲ್ಲ ಇವರಿಗೆ ಸಮಯ ಎಲ್ಲಿ ತಾನೇ ಇರುತ್ತದೇ? ಅದೂ ಸಂಜೆ ಆದ ಮೇಲಂತೂ ಈ ಗಿರಾಕಿಗಳ ಜತೆನೇ ಆಡಬೇಕು ಈ ಹುಡುಗಿರೂ ಮತ್ತೆಲ್ಲೂ ಆಚೆ ಕದಲೂ ಹಾಗಿಲ್ಲ(ಯಾವುದೋ ಒಂದು ಕಾರಣಕ್ಕಾಗಿ ಆಕೆ ಸರಿಯಾಗಿ ಏಳು ಗಂಟೆಗೆ ಇಲ್ಲಿಗೆ ಬರುತ್ತಾಳೆಂದು ಕಲ್ಪಿಸಿಕೊಂಡಿದ್ದೆ.) ಆದರೆ, ನಿಜ ವಿಷಯವೆಂದರೆ, ಅವಳು ತನಗೂ ಸ್ವಾತಂತ್ರ್ಯ ಇದೆಯೆಂದೂ, ತಾನೇನು ಸಂಪೂರ್ಣ ದಾಸಿಯಲ್ಲವೆಂದೂ ಹೇಳಿದ್ದಳಲ್ಲ. ಅಂದರೆ ಹ್ಞ್ಮ್ಮ್! ಹಾಳಾಗ ಎಲ್ಲಾ…! ಅಂದರೆ ಆಕೆ ಬರೋದನ್ನ ತಪ್ಪಿಸಕ್ಕೇ ಆಗೋದೇ ಇಲ್ಲ ಯಾರೂ… ಇಲ್ಲಿಗೇ ಆ ಲೀಝಾಳ ಆಗಮನ ಹಾಗಾದರೆ ಖಚಿತ…!”
ಆಗ ಅಪೋಲನ್ ನನ್ನ ಗಮನ ಸೆಳೆದ, ಆತನ ಎಂದಿನ ಉದ್ಧಟತನದಿಂದ. ಇದು ಒಳ್ಳೆಯದೇ, ಸಧ್ಯ…! ನನ್ನ ಮನಸ್ಸು ಅತ್ತ ತಿರುಗಿತಲ್ಲ. ಇರಲಿ, ಈ ಅಪೋಲನ್ ಓರ್ವ ದುಷ್ಟ ಜಂತು; ನನ್ನ ಬದುಕಿಗೆ ಎಗರಿದ ಶಾಪ, ನನ್ನ ಸಾಮ್ರಾಜ್ಯಕ್ಕಂಟ್ಟಿದ್ದ ಮಾರಿ ಇವೆಲ್ಲಾ ಇವನೇ. ನಾವಿಬ್ಬರೂ ನಿರಂತರವಾಗಿ, ವರ್ಷಾನುಗಟ್ಟಲೆ ಕಚ್ಚಾಡುತ್ತಿದ್ದೆವು. ಮತ್ತೆ, ದೇವರೇ ನಾನು ಇವನ್ನನ್ನು ಹೇಗೆಲ್ಲಾ ದ್ವೇಷಿಸುತ್ತಿದ್ದೆ! ಈಗ ನನಗನ್ನಿಸುತ್ತಿದೆ, ಈತನನ್ನು ದ್ವೇಷಿಸಿದಷ್ಟು ನನ್ನ ಜೀವಮಾನದಲ್ಲೇ ಬೇರ್ಯಾರನ್ನೂ ದ್ವೇಷಿಸಿಲ್ಲವೆಂದು. ಅದೂ ಕೆಲವು ಸಲವಂತೂ ಇವನನ್ನು ಓಡಿಸಿ ಒದೆಯುವಷ್ಟು ರೋಷ ನನ್ನಲ್ಲಿ ಜಿನುಗುತ್ತಿತ್ತು. ತಕ್ಕ ಮಟ್ಟಿಗೆ ವಯಸ್ಸಾಗಿದ್ದ ಇವನೊಬ್ಬ ಗಂಭೀರ ವ್ಯಕ್ತಿ. ಅಪರೂಪಕ್ಕೊಮ್ಮೆ ಬಟ್ಟೆ ಹೊಲೆಯುವ ದರ್ಜಿ ಕೆಲಸ ಮಾಡುತಿದ್ದ. ಏಕೆ ಅಂತ ಗೊತ್ತಿಲ್ಲ, ಇವನಿಗೆ ನಾನೆಂದರೆ ಅಸಡ್ಡೆ; ನನ್ನ ಮಾತು ಬಿಡಿ, ಎಲ್ಲರನ್ನೂ ಕೀಳಾಗಿ ಕಾಣುವ ದರಿದ್ರ ಬುದ್ಧಿ ಬೇರೆ ಇದೆ ಇವನಿಗೆ. ಅಂದವಾಗಿ ಸಿಂಗರಿಸಿ ಎಳೆದು ಕೂರಿಸುವ ಕೂದಲನ್ನು ಚೆನ್ನಾಗಿ ಸೂರ್ಯಕಾಂತಿಯೆಣ್ಣೆ ತಿಕ್ಕಿ ಬಾಚಿರಿರುವ ಈ ವ್ಯಕ್ತಿಯ ಗಜಗಾಂಭೀರ್ಯವನ್ನು, Vಯಂತೆ ಕಚ್ಚಿಕೊಂಡಿರುವ ಬಾಯಿ, ಶಂಖ ಊದಿದಷ್ಟು ಸ್ಪಷ್ಟವಾಗಿ, ಮಾತಿನ ಹಂಗೇ ಇಲ್ಲದೆ ಜಗತ್ತಿಗೆ ಸಾರುತ್ತದೆ. ಇವನನ್ನು ಸುಮ್ಮನೆ ಒಮ್ಮೆ ನೀವು ನೋಡಿದರೆ ಸಾಕು; ಕೂಡಲೇ ನೀವೇ ಅರಿಯುತ್ತೀರಿ, ತನ್ನ ಬಗ್ಗೆ ಅಲ್ಪವೂ ಶಂಕೆಯಿಲ್ಲದ ಮಹಾಪುರುಷನನ್ನು ಎದುರಿಸುತ್ತಿದ್ದೀರಿ ಎಂದು. ಮಹಾ ಪಾಂಡಿತ್ಯ ಪ್ರದರ್ಶಕನಾಗಿದ್ದನಿವನು; ಇಡೀ ಭೂಮಿಯಲ್ಲಿ ಇವನಿಗಿಂತ ಶ್ರೇಷ್ಠ ಒಣಪಂಡಿತನನ್ನು ನಾನು ಭೇಟಿಯೇ ಆಗಿಲ್ಲ. ಮ್ಯಾಸಿಡೋನಿಯಾದ ಅಲೆಕ್ಸಾಂಡರ್ ಮಹಾಪುರುಷನೊಬ್ಬ ಮಾತ್ರ ಇವನಿಗೆ ಅಹಂಕಾರದಲ್ಲಿ, ಆತ್ಮಾಭಿಮಾನದಲ್ಲಿ ಸಾಟಿಯಾಗಬಹುದೇನೋ. ಅದೇ ಸರ್ವಾಧಿಕಾರಿಯ ಮನೋಧರ್ಮದಲ್ಲಿಯೇ ನನ್ನ ಜತೆಯೂ ವರ್ತಿಸುತಿದ್ದ. ತನ್ನ ಅಂಗಿಯ ಗುಂಡಿಗಳನ್ನು, ತನ್ನದೇ ಉಗುರುಗಳನ್ನೇ ಪ್ರೀತಿಸುತ್ತಿದ್ದ ಈ ಮುಟ್ಠಾಳ. ಮಹಾ ಮಠಾಧೀಶರು ಮನಸ್ಸಾದಾಗ ಭಕ್ತಾದಿಗಳ ಮುಖ ನೋಡುತ್ತಾರಲ್ಲ ಹಾಗೇ ಯಾವಾಗಲೋ ಒಮ್ಮೆ ನನ್ನಾಚೆ ಹೀಗೆ ನೋಟ ಹರಿಸುತ್ತಿದ್ದ, ಅದೂ ವಕ್ರವಾಗಿ. ಸತತವಾಗಿ ವ್ಯಂಗ್ಯವೇ ತೊಟ್ಟಿಕ್ಕುತ್ತಿದ್ದ, ಆ ನೋಟದಿಂದ ನಾನು ಕೆಂಡಾ-ಮಂಡಲವಾಗುತಿದ್ದೆ. ಇವನ ದಿನದ ಕಾಯಕವನ್ನು ನನಗೇನೋ ಉಪಕಾರ ಮಾಡಿದಂತೆ, ನನಗೇ ದಾನವಿತ್ತ ಶೈಲಿಯಲ್ಲಿ ನಿರ್ವಹಿಸುತ್ತಿದ್ದ. ನನಗೋಸ್ಕರ ಏನೆಂದರೆ ಏನೂ ಮಾಡಿಲ್ಲದ ಈತ ಯಾವ ಕಟ್ಟುಪಾಡಿಗೂ ಬೀಳದ ಮನುಷ್ಯ. ನನ್ನನ್ನು ಈತ ಈ ಶತಮಾನದ ಮಹಾ ಮೂರ್ಖನೆಂದೇ ಬಗೆದಿರುವುದಲ್ಲಿ, ನನಗೇ ಚೂರೂ ಅನುಮಾನವಿಲ್ಲ. ಹಾಗೆಯೇ ನಾನೇ ಇವನ ಮನೆಗೆಲಸದವನೇನೋ ಎನ್ನುವಂತೆ ವರ್ತಿಸುವುದರಲ್ಲೂ ನಿಸ್ಸೀಮ ಈ ಪಾಪಿ. ತಿಂಗಳಿಗೆ ಬಿಟ್ಟಿಯಾಗಿ ಏಳು ರೂಬಲ್ಸ್ ತನ್ನ ಕಿಸೆಗೆ ಸೇರುತ್ತಲ್ಲಾ ಎಂಬ ಒಂದೇ ದುರುದ್ದೇಶದಿಂದ ನನ್ನಿವನು ಬಿಟ್ಟು ತೊಲಗಿರಲಿಲ್ಲ ಆಗೆಲ್ಲ ಅಷ್ಟೇ. ಹಾಗೆಯೇ ಇಷ್ಟು ಹಣ ತಿಂದರೂ, ಅದಕ್ಕೆ ತಕ್ಕ ಹಾಗೆ ದುಡಿಯದ ಈ ಮನೆಹಾಳನ ಜತೆ ಇಷ್ಟು ಕಾಲ ಬದುಕಿರುವುದೇ ನರಕದಲ್ಲಿ ದಿನ ಕಳೆದಂತೆ, ಈತನ ದೆಸೆಯಿಂದ ನಾನು ತಿಂದ ನೋವಿನಿಂದಾಗಿ ನನ್ನ ಎಲ್ಲ ಪಾಪಗಳಿಂದ ಖಂಡಿತವಾಗಿ ಈಗಾಗಲೇ ನಾನು ವಿಮೋಚಿತ. ನನ್ನ ಮಾತ್ಸರ್ಯವು ಒಮ್ಮೊಮ್ಮೆ ತುತ್ತತುದಿಗೆ ತಲುಪಿ, ಅವನನ್ನು ನೋಡಿದರೆ ಸಾಕು ನನ್ನ ದೇಹದಲ್ಲಿ ಕ್ರೋಧದ ನಡುಕ ಹುಟ್ಟುತ್ತಿತ್ತು. ನನಗೆ ವಿಶೇಷವಾಗಿ ಸಿಟ್ಟು ತರಿಸುತ್ತಿತ್ತದ್ದು ಇವನು ತೊದಲು ನುಡಿಗಳು. ಏನೆಂದರೆ ಅವನ ನಾಲಿಗೆ ಚೂರು ಜಾಸ್ತಿಯೇ ಉದ್ದವಿತ್ತು, ಅಥವಾ ಹಾಗೇ ಏನೋ. ಅದರ ಪರಿಣಾಮವೇ ಈತನ ಅಸ್ಪಷ್ಟ ಭುಸುಗುಟ್ಟುವ ಮಾತುಗಳು. ತನ್ನ ಈ ಬ್ಬೆ…ಬ್ಬೆ…ಬ್ಬೆ… ವಚನಗಳ ಕುರಿತೇ ಇವನಿಗೆ ಧಾರಾಳ ಹೆಮ್ಮೆ. ಅವೇ ಇವನ ವ್ಯಕ್ತಿತ್ವದ ಹಿರಿಮೆಗೆ ಗರಿಯಂತೆ ಎಂದೂ ಕಲ್ಪಿಸಿಕೊಂಡಿದ್ದನೇನೋ. ಕೈಗಳನ್ನು ಹಿಂದುಗಡೆ ಕಟ್ಟಿಕೊಂಡು, ಕಣ್ಣುಗಳನ್ನು ನೆಲದತ್ತ ತಿರುಗಿಸಿ ಮೆಲ್ಲಗೆ, ಎಷ್ಟು ಬೇಕೋ ಅಷ್ಟೇ ಮಾತನಾಡುತಿದ್ದ. ನನ್ನ ಕೋಪ ಹೊತ್ತಿಕೊಂಡು ಬರುತಿದ್ದುದ್ದು ಇವನ ಕೋಣೆಯ ಆ ಕಡೆಯ ಮೂಲೆಯಲ್ಲಿ ನಿಂತು ಪ್ರಾರ್ಥನೆಯ ಪುಸ್ತಕ ಪಠಿಸುತಿದ್ದಾಗ. ಈ ಪ್ರವಚನದ ಸಲುವಾಗಿಯೇ ನಮ್ಮಿಬ್ಬರ ನಡುವೆ ಮಹಾ ಕದನಗಳೇ ಆಗಿ ಹೋಗಿದ್ದವು. ಆದರೆ ಈ ಖದೀಮನಿಗೆ ಈ ತರ ಪಿಠಿ-ಪಿಠಿ ಮಂತ್ರವನ್ನು ಶಾಂತವಾಗಿ, ಲಯದಲ್ಲಿ ಸಂಜೆ ಹೊತ್ತಲ್ಲಿ ವಟಗುಟ್ಟುವುದೇ ತೀರ ಅಚ್ಚು-ಮೆಚ್ಚು. ನಿಧಾನಕ್ಕೆ ಸ್ಥಿರಸ್ವರದಲ್ಲಿ, ಸತ್ತವರಿಗಾಗಿ ಜಪಿಸುತ್ತಿದ್ದಂತೆ ಗೊಣಗುಟ್ಟುತಿದ್ದ ಸೈತಾನನೀತ. ಆಶ್ಚರ್ಯ ನೋಡಿ ಈಗ ಇವನಿಗೆ ಹೀಗೆ ಯಾರಾದರೂ ಸತ್ತಾಗ ಈ ಪವಿತ್ರ ಪುಸ್ತಕದದಿಂದ ಮಂತ್ರ ಜಪಿಸುವುದೇ ಕಸುಬಾಗಿ ಬಿಟ್ಟಿದೆ! ಇದರ ಜತೆಗೆ ಇಲಿಗಳನ್ನು ಹೊಡೆಯುವುದು, ಬೂಟು ತಿಕ್ಕುವ ಕಸುಬುಗಳನ್ನೂ ಮಾಡುತ್ತಿದ್ದಾನೆ ಅಂತ ಎಲ್ಲೋ ಕೇಳಿದೆ. ಇಷ್ಟಾದರೂ ಇವನನ್ನು ನಾನು ಆ ದಿನಗಳಲ್ಲಿ ಕೆಲಸದಿಂದ ಒದ್ದೋಡಿಸಿರಲಿಲ್ಲ; ಈ ಅಪೋಲನ್ನ ಅಸ್ತಿತ್ವವು ಯಾವುದೋ ರಾಸಾಯನಿಕ ಕ್ರಿಯೆಯ ಮೂಲಕ ನನ್ನದಕ್ಕೆ ಮಿಳಿತವಾಗಿದೆಯೆಂಬಂತೆ, ನಾನು ಇವನ ಜತೆ, ಇವನು ನನ್ನ ಜತೆ ಹೀಗೇ ಆಗ ದಿನ ದೂಕುತ್ತಿದ್ದೆವು. ಇಬ್ಬರೂ ಒಬ್ಬಂಟಿಗರು. ಮತ್ತೆ ಇವನು ಯಾವ ಸ್ಥಿತಿ ತಲುಪಿದರೂ ನನ್ನನ್ನು ಬಿಡಲು ಒಪ್ಪುತ್ತಿರಲಿಲ್ಲವೇನೋ. ಹಾಗೆ ಅಲಂಕಾರಗೊಂಡು, ಸಜ್ಜಾದ ಕೊಠಡಿಯಲ್ಲಿ ನನಗೂ ಬದುಕಲಾಗುತ್ತಿರಲಿಲ್ಲ. ನನ್ನ ಕೋಣೆಯೇ ನನ್ನ ತಾಣ. ನನ್ನ ಚಿಪ್ಪು… ನನ್ನ ಪೆಟ್ಟಿಗೆ… ಇಲ್ಲಿ ನಾನು ಮಾನವಕುಲದ ಕಣ್ ತಪ್ಪಿಸಿ ಸುಭದ್ರವಾಗಿ ಅವಿತಿರುತ್ತಿದ್ದೆ. ಈ ಅಪೋಲನ್ ಕೂಡ ಈ ಮನೆಗೇ ಸೇರಿದವನೆಂದು ನನಗೆ ಅನ್ನಿಸಿತ್ತು ಆಗೆಲ್ಲ. ನನಗೆ ಏಕೆ ಹಾಗೆ ಆ ದಿನಗಳಲ್ಲಿ ತೋರುತಿತ್ತೋ? ಆ ದೇವರಿಗೆ ಗೊತ್ತು! ಬರೋಬ್ಬರಿ ಏಳು ವರುಷಗಳವರೆಗೂ ಅವನನ್ನು ಇಲ್ಲಿಂದ ನನಗೆ ಒದ್ದೋಡಿಸಲಾಗಲಿಲ್ಲ.
ತಿಂಗಳು ಮುಗಿಯುತಿದ್ದ ಹಾಗೆಯೇ ಸಂಬಳ ತನ್ನ ಕೈ ಸೇರಬೇಕು. ತಡ ಮಾಡಿದರೆ- ಅದೂ ಕನಿಷ್ಟ ಪಕ್ಷ ಎರಡು-ಮೂರುದಿನಕ್ಕಾದರೂ-ರಾದ್ಧಾಂತ ಎಬ್ಬಿಸುತ್ತಿದ್ದ ಈ ನೀಚ. ಇವನು ಹಾಗೆಲ್ಲ ರಂಪಾಟ ಎಬ್ಬಿಸಿದಾಗ ನನಗೆ ಎಲ್ಲಿ ಓಡಿ ಅಡಗುವುದೋ ಗೊತ್ತಾಗುತ್ತಲೇ ಇರಲಿಲ್ಲ. ಆದರೆ ಆವತ್ತು ಮಾತ್ರ ನನಗೆ ಪ್ರತಿಯೊಬ್ಬರ ಮೇಲೂ ರೋಷ ಉಕ್ಕಿ, ಈ ಅಪೋಲನ್ನನ್ನು ಶಿಕ್ಷಿಸಲೇಬೇಕೆಂಬ ತೀರ್ಮಾನಕ್ಕೆ ಕಟ್ಟು ಬಿದ್ದೆ; ಅದಕ್ಕೇ ಒಂದು ದಿನ ಪೂರ್ತಿ ಸಂಬಳ ನೀಡದೆ ಇರೋಣ ಎಂದೂ ಯೋಚಿಸಿದ್ದೆ. ಕಳೆದ ಎರಡು ವರುಷಗಳಿಂದಲೂ ನಾನು ಈ ಪಾಪಿಗೆ ಪಾಠ ಕಲಿಸಲು ಹೊಂಚು ಹಾಕಿ ಸರಿಯಾದ ಸಮಯಕ್ಕೆ ಕಾಯುತ್ತಿದ್ದೆ. ಬೇರೇನೂ ಅಲ್ಲ, ನಾನೇ ಯಜಮಾನನೆಂಬ ಬಿಸಿ ಆ ಪಾಪಿಗೆ ತಟ್ಟಬೇಕಿತ್ತು. ನನಗಿಷ್ಟವಿದ್ದರೆ ನಾನೇ ಸಂಬಳ ಕೊಡುವೆ. ಆದರೆ ಅವನು ಗಾಂಚಾಲಿ ಆಡಿ, ತಾನೇ ದೊರೆಯಂತೆ ನನ್ನೆದುರು ಮಿಂಚದೆ, ಮುದುರಿಕೊಂಡು ನನಗೆ ಮರ್ಯಾದೆ ತೋರಿಸದಾಗ ಮಾತ್ರ… ಇಲ್ಲದಿದ್ದರೆ, ಯಾವ ಶಪ್ಪದ ಸಂಬಳನೂ ಇಲ್ಲ, ಕುಂಬ್ಳನೂ ಇಲ್ಲ. ಅವನೇ ಬಾಯಿಬಿಟ್ಟು, “ಧಣಿ… ಸಂಬಳಾ…” ಎಂದಾಗ ನಾನು “ನೋಡು… ಈ ಮೇಜಿನ ಬಾಯಿಯೊಳಗಿರುವ ಡಬ್ಬದೊಳಗೆ ಏಳು ರೂಬೆಲ್ಲುಗಳಿವೆ. ಅದು ನಿನ್ನದೇ ಕಮಾಯೀ… ಆದರೆ ದಾಸನ ಹಾಗೇ ನೀನು ಕೇಳೋ ತನಕ ನಿನಗೆ ಇದರಲ್ಲಿ ಒಂದು ಕಾಸೂ ಸಿಗಲ್ಲ” ಎಂದು ರೇಗಿ ಅದರ ಬೀಗ ಜಡಿಯುವೆ. ಅವನು ಮತ್ತೆ ದುರಂಹಕಾರದಾಟ ಆಡಿದರೆ, ಆತನು ಸಂಬಳಕ್ಕೆ ಇನ್ನೊಂದು ರಾತ್ರಿಯವರೆಗೂ ಕಾಯಬೇಕು. ಇಲ್ಲಾ ಇನ್ನೊಂದು ವಾರದ ತನಕ… ಇನ್ನೊಂದು ತಿಂಗಳ ತನಕ… ಆ ಕ್ರಿಮಿಗೆ ನಾನೇ ಧಣಿ ಅವನು ದಾಸ ಅಂತ ತಿಳಿಯೋ ತನಕ.
ಆವತ್ತೂ ಅದೆಷ್ಟೇ ನಾನು ಕೋಪಿಷ್ಟನಾಗಿದ್ದರೂ ಕೊನೆಗೂ ಗೆದ್ದವನು ಇವನೇ. ನಾಲ್ಕು ದಿನ ತಡೆಯಲಾಗಲಿಲ್ಲ ನನಗೆ. ಆ ಥರದ ಸನ್ನಿವೇಶಗಳಲ್ಲಿ ಯಾವಾಗಲೂ ಶುರು ಮಾಡುವಂತೆ ಅಂದೂ ಶುರುಮಾಡಿದ್ದ. ಈ ಹಿಂದೆಯೂ ಸುಮಾರು ಸಲ ಈ ಥರ ಅದೆಷ್ಟೋ ಘಟನೆಗಳು ಘಟಿಸಿದ್ದವು. ಈಗಾಗಲೇ ಸುಮಾರು ಸಲ ಈ ಪ್ರಯೋಗವನ್ನು ಪ್ರಯತ್ನಿಸಿಯೂ ಇದ್ದೆ ನಾನು(ಮತ್ತೆ ಒಂದು ಸಣ್ಣ ಟಿಪ್ಪಣಿ ಈತನ ಕೊಳೆತ ತಂತ್ರಗಳೆಲ್ಲ ನನಗೆ ತೀರ ಚಿರಪರಿಚಿತ; ಎಷ್ಟು ಚೆನ್ನಾಗಿ ಅಂದರೆ ಅವೆಲ್ಲ ಆಗೋ ಮೊದಲೆ ನಾನು ಊಹಿಸಿ ಹೇಳುವಷ್ಟು ಬಾಯಿಪಾಟ ಇವೆಲ್ಲ ನನಗೆ). ಯಾವಾಗ ಈತನ ದುಡ್ಡು ಕೈಗೆ ಸಿಗುವುದಿಲ್ಲವೋ ಆಗ ಈ ಪಾಪಿ ತೀರಾ ಕಠೋರ ನೋಟದಲ್ಲಿ ನನ್ನ ಇರಿಯುತ್ತಿದ್ದ. ಸುಮಾರು ನಿಮಿಷಗಳವರೆಗೂ ಹಾಗೆ ಆತ ನೋಡುತ್ತಿದ್ದಾಗ – ಇವೆಲ್ಲ ವಿಶೇಷವಾಗಿ ನಡೆಯುತ್ತಿದ್ದದು ನಾನು ಮತ್ತು ಇವನು, ಮನೆಯ ಒಳಗೋ ಹೊರಗೋ ಎದುರು-ಬದುರಾದಾಗ- ನಾನು ಅವನ ಅಸ್ತಿತ್ವಕ್ಕೆ ಬಿಡಿಗಾಸ ಬೆಲೆ ಕೊಡದೇ ಹೋಗಿದ್ದರೂ ಈ ದುರುಳ ನನ್ನನ್ನು ಬೇಯಿಸಲು ಬೇರೆ ಬೇರೆ ದಾರಿ ಹುಡುಕುತ್ತಿದ್ದ. ಅದೇ, ನಾನಿರೋ ಕೋಣೆಗೆ ಮೆಲ್ಲಗೆ ಬಂದು, ನಾನು ನಡೆಯುವುದೋ, ಓದುವುದೋ ಮಾಡುತ್ತಿದ್ದಾಗ, ಈತ ಅಲ್ಲಿ ಮೂಲೆಯಲ್ಲಿ ಆರಾಮದಲ್ಲಿ ನಿಂತು ಒಂದು ಕೈಯನ್ನು ಹಿಂದುಗಡೆ ಇಟ್ಟುಕೊಂಡು ನನ್ನನ್ನೇ ದಿಟ್ಟಿಸುವ ಕ್ರಿಯೆ. ಆ ಹಳೆಯ ಕಠೋರ ದೃಷ್ಟಿ ಅವನ ಕಣ್ಣಲ್ಲಿ ಮಾಯವಾಗಿ ತಾಜಾ ಪರಮ ನಿಂದನೆಯ ದೃಷ್ಟಿ ಉದ್ಭವವಾಗುತಿತ್ತು ಆಗ. “ಏನು ಬೇಕು?” ಎಂದೇನಾದರೂ ನಾನು ಕೇಳಿದರೆ, ಆತ ಉತ್ತರಿಸುತ್ತಿರಲಿಲ್ಲ. ಬದಲಾಗಿ ಅದೇ ನೋಟವನ್ನು ಕೆಲಕಾಲ ಮುಂದುವರೆಸಿ, ವಿಶೇಷ ಶೈಲಿಯಲ್ಲಿ ಅವನ ತುಟಿಗಳನ್ನು ಡೊಂಕುಮಾಡಿ, ನಿಧಾನಕ್ಕೆ ಗಂಭೀರವಾಗಿ ತಿರುಗಿ ಅವನ ಕೋಣೆಗೆ ಹೋಗುತ್ತಿದ್ದ. ಸುಮಾರು ಎರಡು ಗಂಟೆಗಳ ಬಳಿಕ ಮತ್ತೆ ಹೆಜ್ಜೆಯ ಮೇಲೊಂದು ಹೆಜ್ಜೆಯನಿಕ್ಕುತ್ತಾ, ಬಂದು ಅಲ್ಲೇ ನಿಂತು ನನ್ನ ಹೊಟ್ಟೆಯುರಿಸುತ್ತಿದ್ದ, ಇವನ ಮೌನ ದೃಷ್ಟಿ ದ್ವಂದ್ವ ಯುದ್ಧದಿಂದ. ಕೆಲವೊಮ್ಮೆ ಕೋಪದಲ್ಲಿ ಉರಿದು ಅವನಿಗೆ ಏನು ಬೇಕೆಂದು ನಾನು ಕೇಳದೇ, ತಲೆಯೆತ್ತಿ ಅವನನ್ನೇ ದುರ-ದುರನೆ ದಿಟ್ಟಿಸುತ್ತಿದ್ದೆ; ಆಗ ನಿಧಾನಕ್ಕೆ, ಗಜಗಾಂಭೀರ್ಯದಲ್ಲಿ ಬೆನ್ನು ಹಾಕಿ ಮತ್ತೆ ಎರಡು ಗಂಟೆಗಳ ಕಾಲ ಕಣ್ಮರೆಯಾಗುತ್ತಿದ್ದ.
ಇಷ್ಟೆಲ್ಲಾ ಆದ ಮೇಲೂ ನಾನು ಬಗ್ಗದೆ ನನ್ನ ದಂಗೆ ಮುಂದುವರೆಸಿದ್ದರೆ, ಈ ನಿರ್ಲಜ್ಜ ಬತ್ತಳಿಕೆಯಿಂದ ಎರಡನೆಯ ಅಸ್ತ್ರ ತೆಗೆಯುತಿದ್ದೆ, ಅದೇ ಅವನ ನೀಳ ನಿಟ್ಟುಸಿರು. ನನ್ನಿಂದ ಏನೂ ಪ್ರತ್ಯುತ್ತರ ಬರದಿದ್ದಾಗ ಆತ ಬಿಡುತ್ತಿದ್ದದ್ದು ಈ ದೀರ್ಘವಾದ ನಿಟ್ಟುಸಿರು. ನನ್ನ ನೈತಿಕ ಅಧಃಪತನದ ಆಳವನ್ನು ಆ ಉಸಿರಿನಿಂದ ಅಳೆಯುತ್ತಿದ್ದಾನೇನೋ ಎನ್ನುವಂತೆ! ಇಷ್ಟೆಲ್ಲ ಆದ ಮೇಲೆ, ಸ್ವಾಭಾವಿಕವಾಗಿಯೇ ಸಂಪೂರ್ಣ ಗೆಲುವಿನ ಅಧಿಪತಿ ಅವನಾಗಿ ಬಿಡುತ್ತಿದ್ದ. ನಾನು ಕ್ರೋಧಿಕ್ತನಾಗುತ್ತಿದ್ದೆ, ಕಿರುಚುತ್ತಿದ್ದೆ. ಆದರೂ ಅವನಿಗೆ ಸಲ್ಲಬೇಕಾದುದನ್ನು ತಲುಪಿಸುವ ನಿರ್ಭಂದಕ್ಕೆ ಕಟ್ಟು ಬೀಳುತ್ತಿದ್ದೆ.
ಆದರೆ ಈ ಸನ್ನಿವೇಶದಲ್ಲಿಯೂ ಅವನು ಹಾಗೇ ಆ ಕಾರ್ಕೋಟಕ ನೋಟದಲ್ಲೇ ನನ್ನ ಕಚ್ಚ ಬೇಕಿಂದಿರುವಾಗಲೇ ನಾನು “ನಿಲ್ಸೋ…” ಎಂದು ಕೆರಳಿ ಕೂಗಿದೆ. ಅವನಾಗ ಮೆಲ್ಲನೆ ತಿರುಗಿ ಒಂದು ಕೈಯನ್ನು ಹಿಂದಿಟ್ಟುಕೊಂಡು ಕೋಣೆಗೆ ವಾಪಾಸ್ಸು ಹೋಗುತ್ತಿದ್ದ. “ನಿಂತ್ಕೊಳೋ… ನಿಲ್ಲೋ ಅಲ್ಲೇ… ವಾಪಾಸ್ಸು ಬಾ! … ಏಯ್… ವಾಪಸ್ಸ್ ಬಾರೋ! ನಾನು ಕರಿತಾ ಇದ್ದೀನಿ!” ನಾನೆಷ್ಟು ವಿಚಿತ್ರವಾಗಿ ಬೊಗಳಿದ್ದೆನೆಂದರೆ ಅವನು ಆಘಾತದಲ್ಲಿ ತಿರುಗಿ, ನನ್ನನ್ನು ಕಣ್ಣಲ್ಲೇ ಪರಿಶೀಲಿಸಿದ. ಮತ್ತೆ ಏನೂ ಆಗಿಲ್ಲವೆಂಬಂತೆ ಎಂದಿನಂತೆ ನನಗೆ ಬೆನ್ನು ಹಾಕಿ, ಒಂದು ಪದವನ್ನು ಉಚ್ಛರಿಸದೆ, ಪುನಃ ಹೋಗಲು ಅಣಿಯಾದ. ಇದರಿಂದ ನಾನು ಕುದ್ದು ಹೋದೆ.
“ಎಷ್ಟೋ ಧೈರ್ಯ ನಿನಗೆ? ನನ್ನ ಕೋಣೆಗೆ, ಅದೂ ನನ್ನ ಅಪ್ಪಣೆಯಿಲ್ಲದೆನೇ ಒಳಗಡೆ ಬಂದು ನನ್ನೇ ಹಾಗೇ ದುರುಗುಟ್ಟುತ್ತೀಯಾ ಹ್ಞಾಂ ಯಾಕೆ? ಉತ್ತರ ಕೊಡು…” ಆದರೆ ಅವನು ಮಾತ್ರ ಶಾಂತಚಿತ್ತನಾಗಿ ನನ್ನ ಅರ್ಧ ನಿಮಿಷ ನೋಡಿ, ಮತ್ತೆ ನಿಧಾನಕ್ಕೆ ತಿರುಗಿದ.
“ನಿಲ್ಲೋ!” ನಾನು ಘರ್ಜಿಸಿದೆ, ಅವನ ಕಡೆ ಓಡುತ್ತಾ, “ಅಲ್ಲಾಡ್ಬೇಡ…! ಹೇಳು, ಹೇಳೋ ಏನ್ ನೋಡಕ್ಕೆ ಅಂತ ಅಲ್ಲಿಗೆ ಬಂದೆ!”
“ಕೆಲಸ ಹೇಳ್ತೀರೇನೋ ಅಂತ ಬಂದೆ. ಅದೇ ತಾನೇ ನನ್ನ ಕರ್ಮ, ನಿಮ್ಮ ಕೆಲ್ಸ ಮಾಡೋದು…” ತನ್ನ ವಿಶೇಷ ತೊದಲಿನಲ್ಲೇ ಉಗ್ಗುತ್ತಾ ನಿಧಾನಕ್ಕೆ ಅವನ ಹುಬ್ಬುಗಳನ್ನು ಎತ್ತಿ, ಮತ್ತೆ ಮತ್ತೆ ನಿರಾಳವಾಗಿ ಅವನ ತಲೆಯನ್ನು ಭುಜದಿಂದ ಭುಜದತ್ತ ಜಾರಿಸುತ್ತಾ ಪ್ರತ್ಯುತ್ತರ ನೀಡಿದ, ಅವನ ಎಂದಿನ ಕರಾಳ ನಿರಾಳತೆಯಲ್ಲಿ.
“ಅದಲ್ಲ … ಕಣೋ… ಅದರ ಬಗ್ಗೆನೇ ಅಲ್ಲ…. ಆ ವಿಷಯನಾ ನಾನಿಲ್ಲಿ ನಿನ್ನ್ ಹತ್ತಿರ ಕೇಳ್ತಾನೇ ಇಲ್ಲ! ತಿಳ್ಕಾ ಕಟುಕ ನನ್ನ ಮಗ್ನೆ…!” ಕೋಪದಲ್ಲಿ ನಡುಗುತ್ತಾ ಕಿರುಚಿದೆ. “ನಾನೇ ಹೇಳ್ತೀನಿ ನೀನ್ ಯಾಕ್ ಬಂದೆ ಇಲ್ಲಿಗೆ ಅಂತ ಕೇಳೋ ಕಟುಕ ನನ್ನ ಮಗ್ನೆ! ನಿನ್ಗೆ ಸಂಬ್ಳ ಸಿಕ್ಕಿಲ್ಲ, ತಲೆ ಬಗ್ಗಿಸಿ, ಗಾಂಛಾಲಿ ಮಾಡ್ದೆ, ಕೇಳಕ್ಕೆ ನಿನಗೆ ದುರಹಂಕಾರ. ಅದಕ್ಕೆ ಪೆದ್ದನ ತರ ನನ್ನ ಕಡೆ ದುರುಗುಟ್ಟಿ ನನ್ಗೇ ಹಿಂಸೆ ಮಾಡಿ, ಶಿಕ್ಷೆ ಕೊಡಕ್ಕೆ ಬಂದೀದ್ದೀಯಾ, ಕಟುಕ. ಲೇಯ್! ನೀನು ನನ್ನ ಹಾಗ್ ನೋಡೋದು ಹೇಗೆ ಪೆದ್ದು,ಪೆದ್ದು,ಪೆದ್ದಾಗಿದೆ, ಗೊತ್ತೆ…ಗೊತ್ತೇನೋ!”
ಅವನು ಮತ್ತೆ ಮೌನಿ ಮೂರ್ತಿಯಂತೆ ತಿರುಗುವುದರಲ್ಲಿದ್ದ ಆದರೆ ನಾನವನನ್ನು ಗಪ್ಪನೆ ಹಿಡಿದು, “ಕೇಳೋ,” ನಾನು ಮತ್ತೆ ಅರುಚಿದೆ. “ಅಲ್ಲಿ ದುಡ್ಡಿದೆ ಕಾಣುತ್ತಾ ನಿನಗೆ? (ಈಗ ಮೇಜಿನಿಂದ ದುಡ್ಡು ತಂದೆ) ಎಲ್ಲಾ ಏಳು ರೂಬೆಲ್ಲುಗಳು… ಆದರೆ ನಿನಗೆ ಇದು ಸಿಗಲ್ಲ ಇದು ಸಿಗೋ-ಗೋ-ದೆ-ದೇ ಇಲ್ಲ ಕಣೋ, ಮರ್ಯಾದೆ ತೋರ್ಸಿ, ‘ಅಣ್ಣಾವ್ರೆ ನನ್ನದೇ ತಪ್ಪು ಕ್ಷಮಿಸಿ ನನ್ನ…’ ಅಂದು ಕೈಮುಗಿದು ಬೇಡೋ ತನಕ ನಿನ್ಗಿದು ಸಿಗಲ್ಲ ಕೇಳಸ್ತಾ…?”
“ಅದು ಹೇಗೆ ಆಗತ್ತೆ ಮಾರಾಯರ್ರೇ?” ಎದುರುತ್ತರ ಕೊಟ್ಟ, ವಿಲಕ್ಷಣ ಆತ್ಮವಿಶ್ವಾಸದಲ್ಲಿ.
“ಅದೇ ಕಣೋ ಆಗೋದೀಗ ಮನೆ ಹಾಳ!” ನಾನು ಚೀರಿದೆ, “ಭಾಷೆ ಕೊಟ್ಟು ಪ್ರಮಾಣ ಮಾಡ್ತೀನಿ ನಿನಗೆ ಅದೇ ಆಗೋದೋ!’”
“ಆದರೆ ಕ್ಷಮೆ ಕೇಳೋ ಅಂತಹ ತಪ್ಪು ನಾನೇನು ಮಾಡೇ ಇಲ್ಲ ಅಲ್ಲ…” ಅವನು ಮುಂದುವರೆಸಿದ ನನ್ನ ಚೀರಾಟವನ್ನು ಕೇಳೇ ಇಲ್ಲವೇನೋ ಎನ್ನುವಂತೆ. “ಯಾಕಂದ್ರೆ ಹೇಗೂ ನೀವೇ ನನ್ನ ಕಟುಕ ಅಂತ ಕರೆದಿರೋದು, ಹಾಗಾಗಿ ಪೋಲಿಸ್ ಸ್ಟೇಷನ್‍ಗೆ ನಾನ್ ಯಾವಾಗ್ ಬೇಕಾದ್ರೂ ಹೋಗಿ, ನನ್ನ ನೀವು ನಿಂದಿಸಿದ್ದೀರಿ, ಈಗ ಅದಕ್ಕೆ ಬದಲಾಗಿ ನೀವೇ ಪರಿಹಾರ ಕೊಡಿ ಅಂತ ತಗಾದೆ ತೆಗೀಬಹುದಲ್ಲ.”
“ಹೋಗೋ, ಹೋಗೋ ಹೋಗಿ ದೂರು ಹಾಕು…” ನಾನು ಘರ್ಜಿಸಿದೆ. “ಹೋಗು ಈಗ್ಲೇ, ಈ ಕ್ಷಣನೇ, ಏನೇ ಆಗ್ಲಿ ನೀನು ಕಟುಕ, ಕಟುಕ, ಕಟುಕ!” ಆದರೆ ಆತ ಸುಮ್ಮನೆ ನನ್ನನ್ನು ನೋಡಿದ, ನನ್ನ ಕೂಗಾಟವನ್ನು ಆತ ಕೇಳುವುದನ್ನು ನಿಲ್ಲಿಸಿ, ನನ್ನತ್ತ ಕುಡಿನೋಟವನ್ನು ಬೀರದೆ ತನ್ನ ಕೋಣೆಗೆ ಹೋದ.
“ಎಲ್ಲ ಆದದ್ದು ಆ ಲೀಝಾಳಿಂದಲೇ” ಎಂದು ಒಳಗೇ ಊಳಿಟ್ಟೆ. ವ್ರತಾಚರಣೆಗಾಗಿ ನಿಂತಂತೆ ಸ್ವಲ್ಪ ಹಾಗೇ ನಿಂತೆ. ಆದರೆ ನನ್ನ ಹೃದಯ ನಿಧಾನಕ್ಕೆ ಉಗ್ರವಾಗಿ ಹೊಡೆದುಕೊಳ್ಳುತ್ತಿತ್ತು. ತಕ್ಷಣ ಪರದೆ ಹಿಂದುಗಡೆ ಇರುವ ಅವನನ್ನು ತರಾಟೆಗೆ ತೆಗೆದುಕೊಳಲೆಂದೇ ಅತ್ತ ಮತ್ತೆ ಓಡಿದೆ.
“ಅಪೋಲನ್!” ಮೆಲ್ಲಗೆ ಹೇಳಿದೆ, ಆದರೆ ಉಸಿರು ಎಳೆದುಕೊಳ್ಳದೆ ಪ್ರತಿಯೊಂದು ಶಬ್ದಗಳನ್ನು ಉಚ್ಛರಿಸುತ್ತಾ. “ಈಗ್ಲೇ ಹೋಗೋ, ಸಮಯ ಹಾಳ್ ಮಾಡ್ಬೇಡ ನಡಿ ಪೋಲಿಸ್ ಸ್ಟೇಷನ್ನೆಗೆ ಹ್ಞೂ” ಇಷ್ಟೊತ್ತಿಗಾಗಲೇ ಆತ ಮೇಜಿನ ಎದುರು ಕುಳಿತು ತೇಪೆ ಹೊಲೆಯುವ ಕಸುಬು ಶುರುಮಾಡಿದ್ದ. ನನ್ನ ಆಜ್ಞೆ ಕೇಳುತ್ತಿದ್ದಂತೆಯೇ ಇದ್ದಕ್ಕಿದ್ದಂತೆಯೇ ಗಹಗಹಿಸಿ ನಕ್ಕ.
“ತಕ್ಷಣ… ಈ ಕ್ಷಣನೇ ಹೋಗೋ! ಹೋಗು ಇಲ್ಲಾಂದ್ರೆ ಇಲ್ಲೇನ್ ನಡೆಯಿತ್ತೇ ಅಂತ ನಿನಗೇ ಗೊತ್ತಿಲ್ಲ!”
“ಸ್ವಾಮಿ ತಾವು ಮಂಡೆಬಿಸಿಮಾಡಿಕೊಂಡಿದ್ದೀರ” ಎನ್ನುತ್ತಾ ಅವನ ನೆಚ್ಚಿನ ತೊದಲು ನುಡಿಯಲ್ಲಿ, ತಲೆಯನ್ನು ಎತ್ತದೆ ಮತ್ತೆ ಸೂಜಿಯೊಳಗೆ ದಾರ ಸೇರಿಸಿವುದರತ್ತ ಗಮನ ಹರಿಸಿದ.
“ಅವರ ವಿರುದ್ಧ ಅವರೇ ಪೋಲಿಸ್ ಕೇಸ್ ಹಾಕಲಿ ಅಂತ ಹೇಳೋ ಮನುಷ್ಯನ ಇಲ್ಲಿಯವರೆಗೆ ನೋಡೇ ಇರ್ಲಿಲ್ಲ ಅಲ್ಲ ನಾನು! ಇರ್ಲಿ ಬಿಡಿ, ನನ್ನ ಹೆದ್ರಸಕ್ಕೆ ನೀವೇನು ಯಕ್ಷಗಾನ ಮಾಡೋದ್ ಬೇಡ, ಯಾಕಂದ್ರೆ ಅಂದ್ರಿಂದ ಏನೂ ಆಗೋದಿಲ್ಲ ಮಾರಾಯ್ರರ್ರೇ”
“ಈಗೇನು ಹೋಗ್ತ್ಯೋ ಇಲ್ವೋ…!” ಅವನ ತೋಳನ್ನು ಹಿಡಿದು ಅರುಚಿ, ಇನ್ನೇನು ಅವನಿಗೆ ಸರಿಯಾಗಿ ಬಿಗಿಯುವುದರಲ್ಲಿದ್ದೆ.
ಆಗ ಸದ್ದೇ ಇಲ್ಲದೇ ಮೆಲ್ಲಗೆ ಮನೆ ಬಾಗಿಲು ತೆರೆದಿತ್ತು. ಈ ಗಲಾಟೆಯಲ್ಲಿ ಆ ಶಬ್ಧವೂ ನನ್ನ ಕಿವಿಗೆ ಕೇಳಿಸಿಯೇ ಇರಲಿಲ್ಲ. ಅದರ ಮೂಲಕ ನಿಧಾನಕ್ಕೆ ಒಳಬಂದ ಆಕೃತಿಯು ಧಿಗ್ಬ್ರಾಂತಿಯಲ್ಲಿ ನಮ್ಮನ್ನು ನೋಡಿತು. ಅದು ನನ್ನ ಅರಿವನ್ನು ತಟ್ಟುತ್ತಿದ್ದಂತೇಯೇ, ಹಾಗೆಯೇ ನಾಚಿಕೆಯಲ್ಲಿ ಲಕ್ವಹೊಡೆದಂತಾಗಿ ಹುಚ್ಚು ಹಿಡಿದವರ ಹಾಗೆ ನನ್ನ ಕೋಣೆಗೆ ನುಗ್ಗಿದೆ. ಅಲ್ಲಿ ಕಂಗಾಲಾಗಿ, ಎರಡೂ ಕೈಗಳಿಂದ ನನ್ನ ಕೂದಲನ್ನು ಬಿಗಿಯಾಗಿ ಹಿಡಿದು, ತಲೆಯನ್ನು ಗೋಡೆಗೆ ಆನಿಸಿ ಅದೇ ಭಂಗಿಯಲ್ಲಿ ಹೆಪ್ಪುಗಟ್ಟಿದೆ.
ಎರಡು ನಿಮಿಷ ಕಳೆಯಿತು. ಆಗ ಅಪೋಲನ್ ಹೆಜ್ಜೆ ಸಪ್ಪಳ ಕೇಳಿಸಿತು. “ಒಂದು ಹುಡುಗಿ ಬಂದಿದೆ ಸ್ವಾಮೀ ನಿಮ್ಮನ್ನ ಹುಡುಕಿ” ಎಂದ, ಬೇಕುಬೇಕಂತಲೇ ನನ್ನನ್ನು ಇರಿಯುವಂತೆ ನೋಡುತ್ತಾ. ನಂತರ ಪಕ್ಕಕ್ಕೆ ಸರಿದು… ಲೀಝಾಳನ್ನು ಕೋಣೆಯ ಒಳಗೆ ಬರಲು ಅವಕಾಶ ಕೊಟ್ಟ; ಆದರೆ ಅವನಿಗೆ ಮಾತ್ರ ಅಲ್ಲಿಂದ ಅಲ್ಲಾಡಲೂ ಇಷ್ಟವಿರಲಿಲ್ಲ. ಅದಕ್ಕೇ ಅಲ್ಲೇ ನಿಂತು ನಾನು ಮತ್ತು ಅವಳು ಮಾತನಾಡುವುದನ್ನು ವ್ಯಂಗ್ಯಾತ್ಮಕವಾಗಿ ವೀಕ್ಷಿಸುತ್ತಿದ್ದ.
“ಹೋಗೋ ಆಚೆ! ಹೋಗ್ ಮಾರಾಯಾ!” ನನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡು ಆಜ್ಞಾಪಿಸಿದೆ. ಆಗ ನನ್ನ ಗಡಿಯಾರವು ಕಷ್ಟಪಟ್ಟು, ಏದುಸಿರು ಬಿಟ್ಟು, ಏಳು ಗಂಟೆಯೆಂದು ಹೊಡೆದುಕೊಂಡಿತು.
ಮುಂದುವರೆಯುವುದು…
ಅನುವಾದ : ಗೌತಮ್ ಜ್ಯೋತ್ಸ್ನಾ
ಚಿತ್ರ : ಮದನ್ ಸಿ.ಪಿ
Pingback: ಅಧೋಲೋಕದ ಟಿಪ್ಪಣಿಗಳು – ಕೊನೆಯ ಕಂತು (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ) – ಋತುಮಾನ