ಅಧೋಲೋಕದ ಟಿಪ್ಪಣಿಗಳು – ಕೊನೆಯ ಕಂತು (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ)

ಕಂತು ೧ : http://ruthumana.com/2018/10/14/notes-from-underground-part-1/
ಕಂತು ೨ : http://ruthumana.com/2018/10/14/notes-from-underground-part-2/
ಕಂತು ೩ : http://ruthumana.com/2018/10/14/notes-from-underground-part-3/
ಕಂತು ೪ : https://ruthumana.com/2018/11/04/notes-from-underground-part-4/
ಕಂತು ೫ : https://ruthumana.com/2018/11/11/notes-from-underground-part-5/
ಕಂತು ೬ : https://ruthumana.com/2018/11/18/notes-from-underground-part-6/
ಕಂತು ೭ : https://ruthumana.com/2018/12/02/notes-from-underground-part-7/
ಕಂತು ೮ : https://ruthumana.com/2019/01/12/notes-from-underground-part-8/
ಕಂತು ೯ : https://ruthumana.com/2019/01/27/notes-from-underground-part-9/
ಕಂತು ೧೦ : https://ruthumana.com/2019/05/09/notes-from-underground-part-10/

9

*ದಿಟ್ಟಳಾಗಿ, ಕೆಚ್ಚಲಿ, ಮುಕ್ತವಾಗಿ, ನನ್ನ ಧರ್ಮ ಸಮ್ಮತವಾದ ಪತ್ನಿಯಾಗಿ,

ಈಗ, ಆ ಹೊಸ್ತಿಲದಾಟಿ ನನ್ನ ಮನೆಯೊಳಗೆ ಬಾ

ನನ್ನ ಹರಿದ ಉಡುಪಿನ ಅಂಚನ್ನು ಅಡಗಿಸಲು ಇನ್ನಿಲ್ಲದ್ದಂತೆ ಪ್ರಯತ್ನಿಸಿ, ಸ್ತಂಭೀಭೂತನಾಗಿ, ಹಲ್ಲು ಕಿರಿಯುತ್ತಾ, ಕರಾಳತೆಯ, ಮುಜುಗರದಲ್ಲಿ ಮುಳುಗಿಬಿಟ್ಟು ನನ್ನ ಗಿಡ್ಡ ಕರುಣಾಜನಕ, ಸುರುಳಿ ಸುತ್ತಿದ ನಿಲುವಂಗಿಯಲ್ಲಿ, ಅವಳೆದುರು ಇತ್ತೀಚೆಗಷ್ಟೇ ಕಲ್ಪಿಸಿಕೊಂಡಿದ್ದ ಹಾಗೆಯೇ ನಿಂತಿದ್ದೆ. ಅಪೋಲನ್  ನಮ್ಮ ಪಕ್ಕ ಸ್ವಲ್ಪ ಹೊತ್ತು ನಿಂತು ಹೊರಟು ಹೋದ. ಆದರೆ ಇದರಿಂದ ನನಗೇನು ಸಮಾಧಾನವಾಗಲಿಲ್ಲ. ದುರದೃಷ್ಟವಶಾತ್,  ನನ್ನ ಗ್ರಹಚಾರ  ಆ ನನ್ನ ನೋಟದಿಂದ ಆಕೆಯೂ ವಿಪರೀತವಾಗಿ ಸಂಕೋಚಗೊಂಡಳು- ನಾನು ನಿರೀಕ್ಷಿಸಿದ್ದಕ್ಕಿಂತ ಜಾಸ್ತಿಯೇ.

“ಕೂತುಕೋ…” ಎಂದೆ ಯಾಂತ್ರಿಕವಾಗಿ ಅವಳಿಗಾಗಿ ಕುರ್ಚಿಯನ್ನು ಎಳೆಯುತ್ತಾ. ಅವಳು ವಿಧೇಯಳಾಗಿ ಕೂತಳು. ನಾನು ಸೋಫಾದಲ್ಲಿ ಕೂತೆ. ನನ್ನಿಂದ ಏನೇನನ್ನೋ ನಿರೀಕ್ಷಿಸುತ್ತಾ ನೋಡಿದಳು ಅದು ಮಾತ್ರ ನಿಜ. ಅವಳ ಈ ಬೆಪ್ಪ ನಿರೀಕ್ಷೆಯೇ ನನ್ನ ಸಿಟ್ಟಿಗೆಬ್ಬಿಸಿತ್ತು. ಆದರೆ ನನ್ನನ್ನು ನಾನು ತಡೆದುಕೊಂಡೆ.

ಅವಳು ಏನನ್ನೂ ಗಮನಿಸದಂತೆ ನಟಿಸಬೇಕಿತ್ತು. ಎಲ್ಲವೂ ಎಂದಿನಂತೆಯೇ ಇದೆ ಎನ್ನುವಂತಾದರೂ ಇರಬೇಕಿತ್ತು. ಆದರೆ ಇವಳು… ಇದಕ್ಕೆಲ್ಲಾ ಇವಳಿಂದಲೇ ಬಡ್ಡಿ ವಸೂಲು ಮಾಡಬೇಕು ಎಂದು ನನಗೆ ಒಳಗೆಲ್ಲೋ ಅಸ್ಪಷ್ಟವಾಗಿ ಅನ್ನಿಸಿತು.

“ಒಳ್ಳೆಯ ವಿಚಿತ್ರ ಸಮಯದಲ್ಲಿ ನನ್ನನ್ನು ಹಿಡಿದೆ ನೀನು ಲೀಝಾ,” ನಾನು ತಡವರಿಸುತ್ತಾ ಶುರುಮಾಡಿದೆ, ಈ ರೀತಿ ಆರಂಭಿಸುತ್ತಿರುವುದು ಸರಿಯಾದ ಮಾರ್ಗವಲ್ಲ ಎಂದು ತಿಳಿದಿದ್ದರೂ.

“ಬೇಡ,ಬೇಡ, ಏನನ್ನೂ ಕಲ್ಪಿಸಿಕೊಳ್ಳಲೇ ಬೇಡ,” ಅವಳು ಇದ್ದಕ್ಕಿದಂತೆ ನಾಚಿದ್ದನ್ನು ಗಮನಿಸುತ್ತಲೇ ನಾನು ಕೂಗಿದೆ. “ಬಡತನದ ಬಗ್ಗೆ ನನಗೆ ಲಜ್ಜೆಯಿಲ್ಲ, ಬದಲಾಗಿ ಅಲ್ಲೇ ನನಗೆ ಹೆಮ್ಮೆ ಇದೆ. ಬಡತನವಿದ್ದರೂ ಘನತೆಯುಳ್ಳ ಧೀಮಂತ ನಾನು, ಬಡವನಾದರೇನು ಲೀಝಾ   ಘನತೆಯಲ್ಲಿ ಬದುಕಬಾರದೆಂದೇನು ಇಲ್ಲವಲ್ಲ” ಮೆಲುದನಿಯಲ್ಲಿ ಉಚ್ಛರಿಸಿದೆ. “ಇರಲಿ ಚಹಾ ಏನಾದರೂ ಕುಡಿತೀಯಾ?”

“ಇಲ್ಲ, ಅದೂ…” ಎಂದು ಅವಳು ಶುರುಮಾಡುತ್ತಿದ್ದಳು.

“ಇರು ಒಂದು ನಿಮಿಷ…”

ನಾನು ನೆಗೆದು ಅಪೋಲನ್ ಕೋಣೆಗೆ ಓಡಿದೆ, ನನಗೂ ಎಲ್ಲಿಗಾದರೂ ಪಲಾಯನ ಮಾಡಲೇಬೇಕಿತ್ತು.

“ಅಪೋಲನ್ …!”ನಾನು ಕೆರಳಿ ಯದ್ವಾತದ್ವ ಅವನಾಚೆ ಏಳು ರೂಬಲ್‍ಗಳನ್ನು ಎಸೆಯುತ್ತಾ ಪಿಸುಗುಟ್ಟಿದೆ, (ಇಷ್ಟೊತ್ತು ಅವನ್ನ ನನ್ನ ಮುಷ್ಟಿಯಲ್ಲಿ ಒತ್ತಿ ಹಿಡಿದಿದ್ದೆ) “ತಕೋ ನಿನ್ನ ಸಂಬ್ಳಾ… ಆದರೆ ನೀನು ಈ ಹಣ ತಿಂದದಕ್ಕಾದರೂ ನೀನು ನನ್ನ್ ಜೀವ ಉಳಿಸ್ಲೇ ಬೇಕ್ ಕಣೋ; ಆ ಚಾ ಅಂಗಡಿಗೆ ಓಡಿ ಒಂದಷ್ಟು ರಸ್ಕು ಮತ್ತೆ ಒಂದು  ಸೀಸೆ ಚಹಾ ತಕ್ಕ್‍ಂಡ್ ಬೇಗ್ ಬಾ. ಈಗ ನೀನ್  ಹೋಗಲ್ಲ ಅಂದ್ರ್ ಸತ್ತೇ ಹೋಗ್ತೀನಿ ಕಣೋ ನಾನು! ಈಗ ಬಂದೀದಾಳಲ್ಲ, ಅವಳ ಬಗ್ಗೆ ನೀನ್ ಏನೇನೋ ಅಂದ್ಕಂಡಿರ್ಬಹ್ದು; ಆದರೆ ನಿನಗೆ ಅವಳು ಎಂತಹವಳೂ ಅಂತ ಗೊತ್ತಿಲ್ಲ… ಏನೂ ಗೊತ್ತಿಲ್ಲ ನಿಂಗೆ ಅವಳ ಬಗ್ಗೆ!….”

ಈಗಾಗಲೇ ಹೊಲೆಯಲೆಂದು ಕೂತಿದ್ದ ಅಪೋಲನ್ , ಕನ್ನಡಕ ಹಾಕಿಕೊಂಡು ಮೌನವಾಗಿ ಓರೆಗಣ್ಣಲ್ಲಿ ಆ ಹಣವನ್ನು ನೋಡಿದ, ಇನ್ನೂ ಸೂಜಿಯನ್ನು ಕೈಯಲ್ಲೇ ಹಿಡಿದು. ನಂತರ, ನನ್ನನ್ನು ಇಡಿಯಾಗಿ ನಿರ್ಲಕ್ಷಿಸಿ ಸೂಜಿಯನ್ನು ಎತ್ತಿ ಮತ್ತೆ ಆ ದಾರವನ್ನು ಅದರೊಳಗೆ ತೂರಿಸುವ ಅವನ ಕಸುಬಲ್ಲಿ ಮಗ್ನನಾದ. ನಾನು ಅವನ ಪಕ್ಕವೇ ನೆಪೋಲಿಯನ್ನ ಹಾಗೆ ಕೈ ಕಟ್ಟಿಕೊಂಡು ನಿಂತಿದ್ದೆ. ನನ್ನ ಹಣೆಯಲ್ಲಿ ಬೆವರು ಹನಿಗೂಡಿತ್ತು. ತುಂಬಾ ಅಂದರೆ ನಾನೇ ಅನುಭವಿಸುವಷ್ಟು ಕಳೆಗುಂದಿದ್ದೆ. ಆದರೆ ನನ್ನ ಪುಣ್ಯ ನನ್ನ ಬಗೆಗೆ ಮರುಕ ಹುಟ್ಟಿಯೋ ಏನೋ ಅವನು ನಿಧಾನಕ್ಕೆ ಎದ್ದು, ನಿಧಾನಕ್ಕೆ ಸೂಜಿಯ ಕೆಳಗಿಟ್ಟು, ನಿಧಾನಕ್ಕೆ ಕನ್ನಡಕ ತೆಗೆದು, ನಿಧಾನಕ್ಕೆ ಹಣ ಎಣಿಸಿ, ಕೊನೆಗೆ ಅಷ್ಟೂ ಹಣವೂ ಅವನಿಗೆ ತಾನೆ ಎಂದು ನನ್ನ ಬಳಿ ಕೇಳಿ ಖಾತ್ರಿ ಆದ ಮೇಲೆ ನಿಧಾನಕ್ಕೆ ಕೋಣೆ ಬಿಟ್ಟು ಹೊರಟ. ಮರಳಿ, ಲೀಝಾಳಿದ್ದ ಕೋಣೆಯ ಕಡೆ ನಡೆಯುವಾಗ ಅಲ್ಲಿಂದ ಕಾಡು ಕುದುರೆಯ ವೇಗದಲ್ಲಿ ನಾನು ತೊಟ್ಟಿದ್ದ ದೀನ ಡ್ರಸಿಂಗ್ ಗೌನಿನಲ್ಲೇ ಪೇರಿ ಕೀಳುವ ಹಂಬಲವಾಯಿತು. “ಎಲ್ಲಿಯಾದರೂ ಓಡಲೇ…? ಆಮೇಲೆ ಏನಾದರೂ ಆಗಲಿ…”

ಆದರೆ ನಾನು ಅವಳಲ್ಲಿದ್ದ ಕೋಣೆಗೆ ಹೋಗಿ ಮತ್ತೆ ಕೂತೆ, ಅವಳು ಆತಂಕದಲ್ಲಿ ನನ್ನನ್ನು ನೋಡುತ್ತಿದ್ದಳು. ನಾವಿಬ್ಬರೂ ಕೆಲ ಕಾಲ ಮೌನವಾಗಿದ್ದೆವು.

“ಕೊಂದು ಹಾಕ್ತೀನಿ ಅವನನ್ನ!” ನಾನು ಇದ್ದಕ್ಕಿದ್ದಂತೆ ಕೂಗಿ, ನನ್ನ ಮುಷ್ಠಿಯಿಂದ ಮೇಜನ್ನು ಗುದ್ದಿದೆ. ಅದೆಷ್ಟು ಪ್ರಬಲವಾಗಿತ್ತೆಂದರೆ ,ಅಲ್ಲಿದ್ದ ಕುಪ್ಪಿ ಕೆಳಗೆ ಬಿದ್ದು,  ಶಾಹಿಯು ಚೆಲ್ಲಿತ್ತು.

“ಓಹ್! ಯಾಕೆ… ಯಾಕೆ… ಏನಾಯಿತು!” ಎಂದು ಕೂಗಿದವಳು ಬೆದರಿ..

“ಅವನನ್ನ ಕೊಂದೇ ಕೊಲ್ತಿನೀ, ಕೊಂದೇೀ… ಕೊಲ್ತೀನೀೀೀ…”ಎಂದು ನಾಯಿಯಂತೆ ಊಳಿಟ್ಟೆ; ಉನ್ಮಾತ್ತನಾಗಿ ಮೇಜನ್ನು ಡಬ-ಡಬನೇ ಅಪ್ಪಳಿಸುತ್ತಾ. ಆದರೂ ಈ ಉನ್ಮಾದವು ಎಷ್ಟು ಪೆದ್ದು- ಪೆದ್ದಾಗಿದೆ ಎಂದೂ ಚೆನ್ನಾಗಿ ಅರಿತಿದ್ದೆ. “ಲೀಝಾ ನಿನಗೆ ಗೊತ್ತಿಲ್ಲ…. ಈ ಚಂಡಾಲ… ಈ ಕಟುಕ, ನನಗೆ ಯಾವ ಥರ ಕಾಣ್ತಾನೆ ಅಂತ, ನನ್ನ ಬಲಿ ತೆಗೆಯೋ ಕಟುಕ, ಈಗ ರಸ್ಕು ತರಕ್ಕೆ ಹೋಗಿದ್ದಾನೆ, ಅವನು… ಅವನು…”

ಆಗ ಇದ್ದಕ್ಕಿದ್ದಂತೆ ನನ್ನ ಹೆಪ್ಪುಗಟ್ಟಿದ್ದ ಶೋಕದ ಜೀವಕೋಶ ಒಡೆದು, ಕಣ್ಣೀರು ಸ್ರಾವವಾಯಿತು. ಗಳ-ಗಳನೆ ಅತ್ತೆ, ಉನ್ಮಾದ ರೋಗದ ಉದ್ವೇಗವದು. ನನ್ನ ಬಿಕ್ಕುವ ಅಳುವಿನ ಮುಧ್ಯೆ ಅದೆಷ್ಟು ಮುಜುಗರಪಟ್ಟೆ! ಆದರೆ  ಇನ್ನು ನನಗೆ ಅದನ್ನು ಹಿಡಿದಿಡಿಯಲು ಆಗದೇ ಹೋಗಿತ್ತು.

ಅವಳು ದಿಗಿಲುಗೊಂಡಳು, “ಏನಾಯಿತು, ಏನಾಯಿತು ನಿನಗೆ?! ಯಾಕೆ ಹೀಗೆ ಅಳ್ತೀದ್ದೀಯ” ಎಂದು ನನ್ನ ಸುತ್ತಲೂ ಗಡಿಬಿಡಿಯಲ್ಲಿ ಸುತ್ತುತ್ತಿದ್ದಳು.

“ನೀರು, ಸ್ವಲ್ಪ ನೀರು, ಅಲ್ಲಿ… ಅಲ್ಲಿದೆ.” ಎಂದು ನಿತ್ರಾಣನಾಗಿ ಗೊಣಗಿದೆ. ನಾನು ನೀರು ಕುಡಿಯದೆ ಇರಬಹುದು, ನಿತ್ರಾಣನಾಗದೇ ಮಾತನಾಡಬಹುದು ಎಂದು ರಹಸ್ಯವಾಗಿ ಅರಿತಿದ್ದೆ; ಆದರೆ ಕೆಲವರು ಸೋಗಿಗೆಂದು ವೇಷ ಹಾಕುತ್ತಾರಲ್ಲ, ಹಾಗೇ ಇಲ್ಲಿ ನಾನು ಸಹ ತೋರಿಕೆಗೆಂದು ಬಿಕ್ಕಿ-ಬಿಕ್ಕಿ ಅತ್ತಿದ್ದೆ. ಆದರೆ ಆ ಉನ್ಮಾದ ರೋಗದ ಆಕ್ರಮಣ ಮಾತ್ರ ಅಪ್ಪಟ.

ಯಾವ ಕುರುಹೂ ಇಲ್ಲದಂತೆ ಕಳೆದು ಹೋದ ಅವಳು ನನ್ನನ್ನು ನೋಡಿ, ನೀರು ಕೊಟ್ಟಳು. ಆಗಲೇ ಅಪೋಲನ್ ಚಹಾ ತಂದ. ಆಕರ್ಷಣೆಯಿಲ್ಲದ ಆ ಮಾಮೂಲಿ ಚಹಾ ಈ ಪರಿಸ್ಥಿತಿಯಲ್ಲಿ ಬಹು ಕೆಟ್ಟದಾಗಿಯೂ ಅಸಮಂಜಸವಾಗಿಯೂ ಕಾಣುತ್ತಿತ್ತು. ಶುದ್ಧ ಭಯದಿಂದ ನಾನು ನಾಚಿದ್ದೆ. ಲೀಝಾಳು ಅಪೋಲನ್ನ್ನನ್ನು ನೋಡುತ್ತಿದ್ದಳು. ಅವನು ನಮ್ಮಿಬ್ಬರತ್ತ ಓರೆ ನೋಟವನ್ನೂ ಬೀರದೆ ಹೋದ.

 “ಲೀಝಾ, ನೀನು ನನ್ನನ್ನು ಕೀಳಾಗು ನೋಡುತ್ತೀಯ?” ಎಂದು ನೇರವಾಗಿ ಅವಳ ಕಣ್ಣಿನಲ್ಲಿ ಕಣ್ಣಿಟ್ಟು ನಡುಗುತ್ತಾ, ಅವಳೇನು ಯೋಚಿಸುತ್ತಿದ್ದಾಳೋ ಎಂದು ತಿಳಿಯುವ ತವಕದಲ್ಲಿ ತಾಳ್ಮೆಗೆಟ್ಟು ಕೇಳಿದೆ.

ಅವಳು ಸಂಕೋಚದಲ್ಲಿ ಮೌನವಾಗಿದ್ದಳು. ಹೇಗೆ ಉತ್ತರಿಸುವುದೋ ಅರಿಯದೆ ಮುಜುಗರದಿಂದ ಒದ್ದೆ ಆಗಿದ್ದಳು. “ನಿನ್ನ ಚಹಾ ಕುಡಿ,” ಎಂದೆ ನಾನು ಕೋಪದಲ್ಲಿ. ನನ್ನ ಮೇಲೆ ನನಗೆ ರೇಜಿಗೆ, ಸಿಟ್ಟು ಬಂದಿತ್ತು. ಆದರೆ ನಿಸ್ಸಂಶಯವಾಗಿಯೇ ಪರಿಣಾಮಗಳನ್ನು ಎದುರಿಸಬೇಕಾದದ್ದು ಆಕೆಯೇ! ಉಗ್ರವಾದ ಸೇಡಿನ ಕಿಡಿ ನನ್ನ ಎದೆಯಲ್ಲಿ ಎದ್ದು, ಅದರಲ್ಲಿ ಅವಳನ್ನು ಉರಿಸುವಂತೆ ನನ್ನ ಆಗ್ರಹಿಸಿತು. ಹಗೆಯಲ್ಲಿ ಅವಳನ್ನು ಕೊಂದೇ ಬಿಡುತ್ತಿದ್ದೇನೋ  ಏನೋ! “ನಾನು ಇವಳ ಜತೆ ಮಾತೇ ಆಡುವುದಿಲ್ಲ,” ಎಂದು ನನಗೇ ನಾನೇ ಆಣೆ ಕೊಟ್ಟೆ. ಇಷ್ಟೆಲ್ಲಾ ಆದದ್ದು ಇವಳಿಂದಲೇ, ಇವಳೇ ಇದಕ್ಕೆಲ್ಲಾ ಮೂಲ ಕಾರಣ.

ಐದು ನಿಮಿಷದ ತನಕ ನಮ್ಮ ಮೌನ ಮುಂದುವರೆಯಿತು. ಬೇಕುಬೇಕೆಂತಲೇ ನಾನು ಚಹಾ ಕುಡಿಯಲಿಲ್ಲ. “ಅವಳೇ ಮೊದಲು ಚಹಾ ಕುಡಿದರೆ ಅದು ಅವಲಕ್ಷಣ ತಾನೇ?! ಹಾಗಾದರೂ ಅವಳೇ ಪೇಚಿಗೆ ಸಿಲುಕಲಿ” ಸುಮಾರು ನಿಮಿಷಗಳು ಆಕೆ ನನ್ನನ್ನು ದುಃಖಭರಿತ ಆಘಾತದಲ್ಲಿ ವೀಕ್ಷಿಸಿದಳು. ನಾನೂ ಪಟ್ಟು ಬಿಡದೆ ಮೌನವಾಗಿದ್ದೆ. ಆದರೆ ಪ್ರಧಾನವಾಗಿ ನೋವುಂಡವನು ಸಹಜವಾಗಿ ನಾನೇ ಆಗಿದ್ದೆ. ಏಕೆಂದರೆ ನನ್ನ ಅಸಹ್ಯಕರ ದುರ್ನೀತಿಯ ಅರಿವು ನನಗೇ ದಟ್ಟವಾಗಿಯೇ ಇತ್ತು. ಹಾಗಿದ್ದೂ ನನ್ನನ್ನು ನಾನೇ ಯಾವ ವಿಧಾನದಲ್ಲಿಯೂ ನಿಗ್ರಹಿಸಲಾಗಲಿಲ್ಲ.

“ಪೂರ್ತಿ ಮುಕ್ತಿಬೇಕು ನನ್ಗೇ ಆ ಜಾಗ್ದಿಂದ” ಮೌನವನ್ನು ಹೇಗಾದರು ಒಡೆಯಲೆಂದು ಆಕೆ ಶುರುಮಾಡಿದ್ದಳು.  ಪಾಪದ ಹುಡುಗಿ! ಈ ವಿಷಯವನ್ನು ಇಂತಹಾ ಪೆದ್ದು ಘಳಿಗೆಯಲ್ಲಿ ಅದೂ ನನ್ನಂತಹ ಪೆದ್ದು ವ್ಯಕ್ತಿ ಹತ್ತಿರ ಅವಳು ಹೇಳಬಾರದಿತ್ತು. ನಿಜಕ್ಕೂ ನನ್ನ ಹೃದಯ ಅವಳ ಅನಗತ್ಯ ಸರಳತೆ ಹಾಗೂ ಚತುರತೆಯನ್ನು ನೋಡಿ ಕರುಣೆಯಲ್ಲಿ ಗುಣಾತ್ಮಕವಾಗಿ ನೊಂದಿತು. ಆದರೆ ವಿಕಾರವಾದಂತಹುದ್ದೇನೋ ನನ್ನಲ್ಲಿದ್ದ ಕರುಣೆಯನ್ನೆಲ್ಲಾ ಪುಡಿ-ಪುಡಿ ಮಾಡಿ, ಒಳಗಿನ ಕಾವನ್ನೇರಿಸಿತು. “ಎಲ್ಲವೂ ನರಕಕ್ಕೇ ಹೋಗ…!” ಅಂದುಕೊಂಡೆ. ಮತ್ತೆ ಐದು ನಿಮಿಷ ಕಳೆಯಿತು.

“ಕೆಲಸವಾಗಿದ್ದೀರ? ನಾನೇದರೂ ಮಧ್ಯೆ ಬಂದೆನೆ? ಅಡ್ಡಿಯಾಯಿತೆ?” ಹೆದರಿ, ಹೆಚ್ಚು-ಕಮ್ಮಿ ಮೌನದಲ್ಲೇ ಆಕೆ ಮಾತನಾಡಲು ಆರಂಭಿಸಿ, ನಿಧಾನಕ್ಕೆ ಏಳತೊಡಗಿದಳು.

 ಆದರೆ ಭಂಗಗೊಂಡ ಘನತೆಯ ಕಿಡಿಯು ನನ್ನೊಳಗೆ ಹುಟ್ಟುತ್ತಿದ್ದಂತೆಯೇ ಸಿಡಿದೆ. “ಏನಕ್ಕೆ ಬಂದೆ ಇಲ್ಲಿಗೆ? ಹೇಳ್ತೀಯ… ದಯವಿಟ್ಟು…?’ ಏದುಸಿರು ಬಿಟ್ಟು ನನ್ನ ಪದಗಳಲ್ಲಿಯೇ ತರ್ಕ ಕಾಣದೆ ಆತುರದಲ್ಲಿ ತಡವರಿಸಿದೆ; ತಟ್ಟನೇ ಒಳಗಿದ್ದ ಎಲ್ಲವನ್ನೂ ಖಾಲಿಮಾಡಬೇಕಾಗಿತ್ತು. ಹೇಗೆ ಶುರುಮಾಡುತ್ತಿದ್ದೇನೆಂದು ತಲೆಯೇ ಕೆಡಿಸಿಕೊಳ್ಳದೆ ನಾನು ಮುಂದುವರೆಸಿದೆ.

“ಯಾಕೆ ಬಂದೆ? ಉತ್ತರ… ಕೊಡು ನನಗೆ! ನಾನು ಕಿರುಚುತ್ತಲೇ ಇದ್ದೆ. “ನಾನು ಹೇಳ್ತೀನಿ ನನ್ನ ಮುದ್ದು ಹುಡುಗಿ ನೀನ್ಯಾಕೆ ಬಂದೆ ಅಂತ. ಕನಿಕರ ಪದಗಳಲ್ಲಿ ಕಟ್ಟಿದ್ದ ಕಥೆಯನ್ನು ಒದರಿದ್ದೆ ನಿನ್ನ ಮುಂದೆ ಅವತ್ತು;  ಈಗ ನೀನು ಬಹಳ ಕೋಮಲವಾಗಿದ್ದೀಯ; ಈಗ ಇನ್ನೂ ಜಾಸ್ತಿ ಕನಿಕರ ಇರೋ ಪದಗಳನ್ನ ಕೇಳೋ ಆಸೆ ನಿನಗೆ! ಅದಕ್ಕೆ ವಕ್ಕರಿಸಿದ್ಯಾ ಇಲ್ಲಿಗೆ. ನಿನ್ನ ವ್ಯಂಗ್ಯ ಮಾಡಿದ್ದು ನಾನು ಆವತ್ತು…! ಅದನ್ನು ತಿಳಿ ಮೊದಲು. ಈಗಲೂ ನಿನ್ನ ವ್ಯಂಗ್ಯನೇ ಮಾಡ್ತಿರೋದು! ಯಾಕೆ ನಡುಗುತ್ತಿದ್ದೀಯಾ. ಹೌದು ಅದೆಲ್ಲಾ ವ್ಯಂಗ್ಯನೇ ಆ ಸಂಜೆ ನನಗೂ ಮುಂಚೆ ಬಂದ ಕೆಲ ಜನರಿಂದ ಡಿನ್ನರ್‍ಪಾರ್ಟಿಯಲ್ಲಿ ಅವಮಾನವಾಗಿತ್ತು ನನ್ಗೇ. ಅದಕ್ಕೆ ಅವರನ್ನೆಲ್ಲಾ ಚಚ್ಚಕ್ಕೆ ಅಂತ ಅಲ್ಲಿಗೆ ಬಂದಿದ್ದೆ!   ಒಬ್ಬ ಆಫೀಸರ್‌ನ ಕಪಾಲಕ್ಕೆ ಬಿಗಿಯಕ್ಕೆ ಅಲ್ಲಿಗೆ ಬಂದಿದ್ದೆ. ಆದರೆ ಆಗಲಿಲ್ಲ. ನಾನು ಬರೋದು ತುಂಬಾ ತಡವಾಗಿತ್ತು, ಅವರೆಲ್ಲಾ ಆ ಜಾಗದಿಂದ ಖಾಲಿಯಾಗಿದ್ದರು. ಆಗ ಹಗೆಯಲ್ಲಿ ಕುದಿದ್ದೆ ನಾನು;  ಮತ್ತೆ ನಾನು ನಾನಾಗಲು ನನ್ನಲ್ಲಿದ್ದ ರೋಷವನ್ನೆಲ್ಲಾ ತೂತು ಮಾಡಿ ಹೊರಗಡೆ ಹಾರಿಸಬೇಕಿತ್ತು. ಅದಕ್ಕೇ ಕೈಗೆ ಸಿಕ್ಕ ನಿನ್ನ ಮೇಲೆ ನನ್ನೆಲ್ಲಾ ವೈರತ್ವವನ್ನು ಕಾರಿ, ಕೊನೆಗೆ ನಿನ್ನನ್ನೇ ಪೆದ್ದಿಯಾಗಿಸಿದ್ದೆ ನಾನು. ನನಗೆ ಅವಮಾನವಾಗಿತ್ತು, ಅದಕ್ಕೆ ನನಗೂ ಅವಮಾನಿಸೋ ಮನಸ್ಸಾಗಿತ್ತು! ನನ್ನ ಅವರು ಚಿಂದಿಯಾಗಿಸಿದ್ದರು. ಅದಕ್ಕೇ ನನ್ನ ಶಕ್ತಿ ಪ್ರದರ್ಶನ ಮಾಡೋ ಆಸೆ ಆಗಿತ್ತು ಅಷ್ಟೇ! ಆದರೆ  ನಾನು ಆ ಜಾಗಕ್ಕೆ ಬಂದಿದ್ದು ನಿನ್ನ ಕಾಪಾಡಕ್ಕೆ ಅಂತ ನೀನು ಯೋಚಿಸಿದ್ದೆ ಅಲ್ಲವೇ? ಹಾಗೇ ಅಂದುಕೊಂಡಿರೋದು ನೀನು ತಾನೇ?”

ಪ್ರತಿ ವಿಷಯವನ್ನು ನಿಖರವಾಗಿ ತಿಳಿಯಲು ಆಕೆ ವಿಫಲಳಾದರೂ,  ಇದರ ಸಾರಂಶವನ್ನು ಅವಳು ಗ್ರಹಿಸಿಯೇ ಗ್ರಹಿಸುತ್ತಾಳೆ ಎಂದು ಅರಿತಿದ್ದೆ. ಖರಾರುವಕ್ಕಾಗಿ ಹಾಗೇ ಆಯಿತು. ಕೊಡಲಿಯಲ್ಲಿ ಕೊಚ್ಚಿಹೋದಂತೆ, ಹಾಳೆಯಷ್ಟು ಬಿಳಿಚಿಕೊಂಡು ಏನೋ ತಡವರಿಸಿ, ತುಟಿಗಳನ್ನು ವಕ್ರಗೊಳಿಸಿ, ಅಸ್ವಸ್ಥ ನಗೆ ಚೆಲ್ಲಿ ಕುರ್ಚಿಯ ಮೇಲೆ ಕುಸಿದಳು. ಆನಂತರ ಅವಳು ಕಣ್ಣು ಬಾಯಿ ಬಿಟ್ಟುಕೊಂಡು, ಭಯದಲ್ಲಿ ಅದರುತ್ತಾ ನನ್ನ ಮಾತನ್ನು ಕೇಳಿಸಿಕೊಂಡಳು. ನನ್ನ ಪದಗಳಲ್ಲಿದ್ದ ಸಿನಿಕತನವು ಆಕೆಯನ್ನು ಜಜ್ಜಿ ಹಾಕಿತ್ತು.

“ನಿನ್ನ ನಾನು ಕಾಪಾಡೋದ!” ನಾನು ಕುರ್ಚಿಯಿಂದ ಹಾರಿ, ಅವಳ ಮುಂದೆ ಎರಗಿ ಘರ್ಜಿಸಿ, “ಯಾವುದರಿಂದ ಕಾಪಾಡೋದು ನಿನ್ನ! ಬಹುಶಃ ನಿನ್ನಕ್ಕಿಂತ ಹಾಳಾದವನು ನಾನೇ. ಅವತ್ತು ನನಗೆ ಏಕೆ ನೀನು ತಿರುಗಿಸಿ ಉಗಿಯಲಿಲ್ಲ? ನಾನು ನಿನಗೆ ಪ್ರವಚನ ನೀಡುತಿದ್ದಾಗ  ನೀನೇ, ‘ಅಲ್ಲಪ್ಪಾ ರಣಧೀರ ಮತ್ಯಾಕೆ ನಮ್ಮ ಜಾಗಕ್ಕೆ ನೀನೂ ಬಂದೆ? ಏನು ನಮಗೆ ನೀತಿಪಾಠ ಹೇಳಲಿಕ್ಕಾ?” ಅನ್ನಬಹುದಿತ್ತು.  ಶಕ್ತಿ, ಶಕ್ತಿಯ ಹುಡುಕಿ   ನಾನಲ್ಲಿಗೆ  ಬಂದಿದ್ದೆ. ಆಟ ಆಡೋ ಮನಸ್ಸಲ್ಲಿ ಅಲ್ಲಿಗೆ ಆಗಮಿಸಿದ್ದೆ. ನಿನ್ನ ಕಣ್ಣೀರ ನೋಡ ಬೇಕಿತ್ತು ನನಗೆ, ನಿನ್ನ ಉನ್ಮಾದತೆ, ನಿನ್ನ ಅವಮಾನದ ಅಳು ಇವೆಲ್ಲವನ್ನು ನೋಡುವ ಆಸೆಯಾಗಿತ್ತು ಅಂದು. ಖಂಡಿತಾ ನನ್ನಿಂದಲೇ ಅವನ್ನೆಲ್ಲಾ ಸಹಿಸಲು ಅಸಾಧ್ಯ. ಏಕೆಂದರೆ ನಾನೊಂದು ತಿಪ್ಪೆ! ಅವತ್ತು ತಲೆಕೆಟ್ಟು, ನಿನಗೆ ನನ್ನ ವಿಳಾಸವನ್ನಿತ್ತೆ, ಮಹಾ ಮೂರ್ಖ ನಾನು. ಆ ರಾತ್ರಿ ಮನೆಗೆ ಬರುತಿದ್ದ ಹಾಗೆಯೇ ನಿನಗೆ ಏಕಾದರೂ ವಿಳಾಸ ಹೇಳಿದೆನೋ  ಎಂದು ನಿನಗೆ ಶಾಪ ಹಾಕಿದ್ದೆ. ಅವತ್ತು ನಿನಗೆ ಸುಳ್ಳು ಹೇಳಿದೆನಲ್ಲಾ ಎಂದು ನಿನ್ನನ್ನೇ ದ್ವೇಷಿಸಿದ್ದೆ. ಏಕೆಂದರೆ ನನ್ನಿಂದ ಸಾಧ್ಯವಿರುವುದು, ಹಗಲುಗನಸುಗಳಲ್ಲಿ ಮೈ ಮರೆಯುವುದು, ನನ್ನ ಪದಗಳ ಜತೆ  ಆಟ ಆಡುವುದು ಮಾತ್ರ. ಆದರೆ ನನಗೆ ನಿಜಕ್ಕೂ  ಏನು ಬೇಕು ಎಂದು ನಿನಗೆ ಗೊತ್ತೇ? ನೀವೆಲ್ಲಾ ನರಕಕ್ಕೆ ಹೋಗಿ ಆದರೆ ನನಗೆ ಶಾಂತಿ ಕೊಡಿ, ಅದೇ ನನಗೆ ಬೇಕಾಗಿರುವುದು.  ನಾನು ಶಾಂತಿಯಲ್ಲಿ ಇರಲು ಸಾಧ್ಯವಾಗುವುದಾದರೇ ಯಾವುದೇ ಅಳುಕಿಲ್ಲದೆ ಇಡೀ ಜಗತ್ತನ್ನು ಒಂದೇ ಒಂದು ಕೊಪೆಕ್‍ಗೆ ಮಾರಿಬಿಡುತ್ತೇನೆ.  ಒಂದೋ  ಜಗತ್ತು ಮಾಯವಾಗುವುದು ಅಥವಾ ನಾನು ಚಹಾ ಕುಡಿಯಬಹುದು ಎಂಬ ಸನ್ನಿವೇಶ ಬಂದರೆ ಆಗಲೂ ನಾನು ನನ್ನ ಚಹಾವನ್ನು ಆಸ್ವಾದಿಸಿ ಚಪ್ಪರಿಸುತ್ತೇನೆ, ಬೇಕಾದರೆ ಜಗತ್ತು ಚರಂಡಿಯಲ್ಲಿ ಹರಿದು ಮಾಯವಾಗಲಿ. ಇದೆಲ್ಲಾ ನಿನಗೆ ಗೊತ್ತಿದೆಯಾ? ನಾನು ಇರೋದೇ ಹಾಗೆ.  ನಾನೊಬ್ಬ ಖದೀಮ ಸೂಳೆಮಗ, ದುರಹಂಕಾರಿ, ಸೋಂಬೇರಿ. ಈಗ ಕಳೆದ ಮೂರು ದಿನಗಳಿಂದ ನಾನು,  ‘ಈ ಲೀಝಾ ಏನಾದರೂ ಇಲ್ಲಿ, ನನ್ನ ಮನೆಯಲ್ಲಿ ಪ್ರತ್ಯಕ್ಷವಾದರೆ.’ ಎಂದು ಹೆದರಿ ನಡುಗಿದ್ದೆ, ಏಕೆ ಗೊತ್ತಾ?! ಮಹಾವೀರನ ಹಾಗೇ ನಿನ್ನೆದುರು ಅಂದು ಮೆರೆದಿದ್ದ ನನ್ನನ್ನು, ಇಲ್ಲಿ ನೀನು ಈ ಕರುಣಾಜನಕ ಹರಿದ ಡ್ರೆಸಿಂಗ್‍ಗೌನ್‍ನಲ್ಲಿ ಕ್ಷುಧ್ರ ಭಿಕ್ಷುಕನ ಹಾಗಿರುವಾಗ, ನೋಡಿ ಬಿಟ್ಟರೆ ಎಂಬ ತಲ್ಲಣದಲ್ಲಿ… ಬಡತನದ ಬಗ್ಗೆ ನಾನು ನಾಚುವುದಿಲ್ಲ ಅಂತೆಲ್ಲಾ ಬೀಗಿದ್ದೆನಲ್ಲಾ, ಆದರೆ ಈಗ ನಿಜ ಮಾತಾಡುವೆ. ಬಡತನ, ಆಹ್, ಅದೇ ನನ್ನ ಮಹಾನಾಚಿಕೆ, ಬಡವನಾಗಲು  ಎಲ್ಲರಿಗಿಂತ ಹೆಚ್ಚು ನಾಚುವೆ ನಾನು,  ಬಡತನ ಎಂದರೆ ಮಿಕ್ಕೆಲ್ಲರಿಗಿಂತಾ ಅತಿಯಾಗಿ ಬೆಚ್ಚಿ ಹೆದರುವವನು ನಾನೇ. ನಾನೊಬ್ಬ ಕಳ್ಳ ಎಂದಾದರೂ ನನ್ನ ಗುರುತಿಸಲಿ, ನಾನಾಗ ಖುಷಿ ಪಡುವೆ. ಆದರೆ ಬಡವ ನಾನು ಎನ್ನುವ ಸತ್ಯ ಪರರು ಅರಿತರೆ, ನನ್ನ ದೇಹದ ಚರ್ಮವನ್ನು  ಸುಲಿದರೆ ಹೇಗೇ ಮಾಮೂಲಿ ತಂಗಾಳಿಯೂ ನನಗೆ ಚಿತ್ರಹಿಂಸೆ ಕೊಡುತ್ತದೋ ಅಂತಹಾ  ವೇದನೆ ನನ್ನ ಮನಸ್ಸಿಗಾಗುತ್ತದೆ.   ಈ ಮರುಕ ತರುವ ಚಿಂದಿ ಬಟ್ಟೆಯಲ್ಲಿ, ಕ್ರೂರ ಮುಳ್ಳುಹಂದಿಯ ಹಾಗೆ ಆ ಅಪೆÇೀಲನ್‍ನ ಮೇಲೆ ನಾನು ಎರಗುವಾಗ ನೀನಿಲ್ಲಿಗೆ ಒಕ್ಕರಿಸಿದೆಯಲ್ಲಾ ನಿನ್ನ ಕ್ಷಮಿಸುತ್ತೀನಿ ಎಂದುಕೊಂಡೆಯಾ? ನೀನು ಬಂದದ್ದು, ಆ ಆಪತ್ಭಾಂಧವ, ಮಾಜಿ ಮಹಾ ಪುರುಷ, ಈಗ ತಲೆ ಕೆದರಿಕೊಂಡು, ಬೆರಕೆ ನಾಯಿಯಂತೆ ಅವನ ನೌಕರನ ಮೇಲೆ ಎರಗುವಾಗ; ಅದೂ ಆ ನೌಕರ ಇವನ ಕೋಪತಾಪವನ್ನು ನೋಡಿ ಹೆದರದೆ ಬಿದ್ದು-ಬಿದ್ದು ನಗುವಾಗ! ಇವೆಲ್ಲದರಿಂದ ಹತಾಶನಾಗಿ ನಾನು ಬಿಕ್ಕಿಬಿಕ್ಕಿ ನಿನ್ನ ಎದುರೇ ಅತ್ತೆ, ದಡ್ಡ ಕೂಲಿ ಹೆಂಗಸು ನಾಚಿಕೆಯಲ್ಲಿ ಕಣ್ಣೀರು ಹರಿಸಿದಂತೆ. ಈಗ ಇಷ್ಟನ್ನೆಲ್ಲಾ ನಿನ್ನೆದುರು ನಿವೇದಿಸಿದೆನಲ್ಲಾ ನಾನು, ಈ ಹೀನ ಗತಿಗೂ ನೀನೇ ಸಾಕ್ಷಿಯಾದೆಯಲ್ಲ, ಅದಕ್ಕೂ ನಿನ್ನ ನಾನು ಕ್ಷಮಿಸುವುದಿಲ್ಲ. ನೀನೇ, ನೀನೇ ಹೊಣೆ, ಇವಕ್ಕೆಲ್ಲಾ. ಹೌದು ನೀನೊಬ್ಬಳೇ! ಏಕೆಂದರೆ ನೀನು ಈಗ ಇಲ್ಲಿ ಇರುವೆ; ಏಕೆಂದರೆ ನಾನೊಬ್ಬ ಧೂರ್ತ,  ಪೆದ್ದ ವಿಕೃತ, ಪ್ರಗಾಢ ಹೀನ, ಮಾತ್ಸರ್ಯ ತುಂಬಿದ ಹುಳುಗಳಲ್ಲೇ ಅತ್ಯಂತ ಮೂರ್ಖವಾದ ಹುಳು. ಹಾಗೆಂದು ಮಿಕ್ಕ ಹುಳುಗಳು ನನಗಿಂತ ಶ್ರೇಷ್ಠರಲ್ಲ, ಆದರೂ ಅವರಿಗ್ಯಾಕೆ ನನಗಾದ ಹಾಗೆ ಚೂರು ನಾಚಿಕೆಯಾಗುವುದಿಲ್ಲ, ಆ ದೆವ್ವಕ್ಕ ಮಾತ್ರ ಆ ವಿಷಯ ಗೊತ್ತೇನೋ; ಆದರೆ ನನ್ನನ್ನೇ ಎಲ್ಲಾ ಹೆಗ್ಗಣಗಳು ನಿಂದಿಸುತ್ತವೆ, ಜರಿಯುತ್ತವೆ. ಮತ್ತೆ ನನ್ನ ಪಾತಾಳಕ್ಕೆ ತಳ್ಳಲ್ಪಟ್ಟ ವ್ಯಕ್ತಿತ್ವವೇ ಅಂತಹುದು. ನಿನಗಿವೆಲ್ಲಾ ಅರ್ಥವಾಗಲಿ ಬಿಡಲಿ, ನನಗೇನಾಗಬೇಕು ಅದರಿಂದ? ನೀನು ಆ ಜಾಗದಲ್ಲಿ ಕೊಳೆತು ಸತ್ತರೆ ನನಗೇನಾಗಬೇಕು ಅದರಿಂದ? ನಿಜಕ್ಕೂ   ಆ ತಾಪತ್ರಯಗಳ ಬಗ್ಗೆ ನನಗೆ ಯಾವ ಕಾಳಜಿಯಿಲ್ಲ. ಆದರೆ  ಎಲ್ಲವನ್ನೂ  ನೀನು ಇಲ್ಲಿಯೇ ನಿಂತು ಕೇಳಿಸಿಕೊಂಡೆಯಲ್ಲಾ,  ಇದಕ್ಕೆ ನಿನ್ನನ್ನು ಎಷ್ಟು ದ್ವೇಷಿಸುತ್ತೇನೆ ಗೊತ್ತೇ? ಮನುಷ್ಯ ಅವನ ಜೀವಮಾನದಲ್ಲಿ ಒಮ್ಮೆ ಮಾತ್ರ ಈ ರೀತಿಯ ವಿಷಯಗಳನ್ನು ನಿವೇದಿಸುವನು… ಇಲ್ಲವೇ ಆತ ಉನ್ಮಾದನಾಗಿ ಥರುಗುಟ್ಟುವಾಗ ಹೀಗೆಲ್ಲಾ ಬಡಬಡಿಸುವನು…!  ಇನ್ನೇನು ಬೇಕು ನಿನಗೆ? ಹ್ಞಾಂ? ಏಕೆ ಇನ್ನೂ ನನಗೇ ಅಂಟಿಕೊಂಡಿರುವಂತೆ ನನ್ನನ್ನೆದುರುಸುತ್ತಿದ್ದೀಯ? ಏಕೆ ಈ ಚಿತ್ರ ಹಿಂಸೆಕೊಡುತ್ತಿದ್ದೀಯ ನನಗೆ? ಏಕೆ ತೊಲಗ್ತಿಲ್ಲ ನೀನು?

ಆದರೆ ಈ ಸಂದರ್ಭದಲ್ಲಿ ಒಂದು ವಿಚಿತ್ರ ನಡೆಯಿತು.

 ಗ್ರಾಂಥಿಕವಾಗಿ ಯೋಚಿಸುವುದು, ಮಾತನಾಡುವುದು, ನನ್ನ ಹಗಲುಗನಸಿನಲ್ಲಿ ಸೃಷ್ಟಿಸಿದ ಹಾಗೇ ಜಗತ್ತನ್ನು ಕಲ್ಪಿಸಿಕೊಳ್ಳುವುದು ನನಗೆಷ್ಟು ಅಭ್ಯಾಸವಾಗಿಬಿಟ್ಟಿತ್ತೆಂದರೆ, ಆ ತಬ್ಬಿಬ್ಬಾಗುವ ಸನ್ನಿವೇಶವನ್ನು ಅರ್ಥೈಸಲು ಸೋತಿದ್ದೆ. ನನ್ನಿಂದ ಅವಮಾನಿತಳಾಗಿ ಜರ್ಜರಿತಳಾದ ಲೀಝಾ, ನಾನು ಊಹಿಸಿದ್ದಕ್ಕಿಂತ ಹೆಚ್ಚೇ ಅರ್ಥಮಾಡಿಕೊಂಡಿದ್ದಳು. ಅಪ್ಪಟ ಪ್ರೀತಿಯನ್ನು ಗ್ರಹಿಸುವ ಹೆಣ್ಣಿನಂತೆ ಈ ಲೀಝಾ, ನಾನೊಬ್ಬ ದುಃಖಾರ್ತ ಎಂಬ ಕಪಟವಿಲ್ಲದ ಸತ್ಯವನ್ನು ಕೂಡಲೇ ಗ್ರಹಿಸಿದ್ದಳು.

ದಿಗಿಲು, ಗಾಬರಿಯಿಂದ ಭಂಗವಾಗಿದ್ದ ಆಕೆಯ ಮೋರೆ  ಮೊದಲು ದುಃಖದಲ್ಲಿ ನಂತರ ಆಶ್ಚರ್ಯದಲ್ಲಿ ಅದ್ದಿಹೋಗಿತ್ತು. ನನ್ನನ್ನು ನಾನೇ ‘ಫಟಿಂಗ…ಸೂಳೆಮಗ…’ ಎಂದು ಕಣ್ಣೀರು ಕಚ್ಚುತ್ತಾ ಜರಿಯುತ್ತಿದ್ದಾಗ( ನನ್ನ ಆ ಧೀರ್ಘವಾದ ಉದ್ರೇಕಕಾರಿ ಭಾಷಣವನ್ನು ಕಣ್ಣೀರಿಡುತ್ತಾ ಒಪ್ಪಿಸಿದ್ದೆ.) ಆಗ  ಆಕೆಯ ಮುಖವು ರಭಸದಿಂದ ಅಲುಗಾಡಿತ್ತು. ‘ಇಲ್ಲಿಂದ ಯಾಕೆ ತೊಲಗಿಲ್ಲ ನೀನು?’ ಎನ್ನುವ ನನ್ನ ಅರುಚಾಟಕ್ಕೆ ಆಕೆ ಚೂರೂ ಗಮನ ಕೊಡಲಿಲ್ಲ. ಆದರೆ ನಾನು ಆ ಮಾತನ್ನು ತುಂಬಾ ಕಷ್ಟದಲ್ಲಿ ಹೇಳುತ್ತಿದ್ದೆ, ಎಂಬುದನ್ನು ಆಕೆ ಅರಿತಿದ್ದಳು. ಪಾಪ! ದಬ್ಬಾಳಿಕೆಗೆ ಒಳಗಾದವಳವಳು; ಅವಳೇ ಅವಳನ್ನು ನನಗಿಂತಲೂ ಮಹಾ ಕೀಳು ಜೀವಿ, ಎಂದೇ ಖಚಿತವಾಗಿ ನಂಬಿದ್ದಳು.  ವಿಷಯ ಹೀಗಿರುವಾಗ ಈ ಜೀವಿ ನನ್ನ ಬಗ್ಗೆ ಹೇಗೆ ತಾನೆ ಕೋಪಗೊಳ್ಳುತ್ತಾಳೆ. ಇದ್ದಕ್ಕಿದ್ದಂತೆಯೇ ಹತ್ತಿಕ್ಕಲಾಗದ ಉದ್ವೇಗದಿಂದ ಆಕೆ ಚಂಗನೆ ಕುರ್ಚಿಯಿಂದ ನೆಗೆದು, ನನ್ನ ಹತ್ತಿರ ಬರಲು ಹಂಬಲಿಸಿದಳು. ಆದರೆ ಅದಕ್ಕೂ ಅಂಜಿದ್ದಳು. ಮುನ್ನುಗಲು ಹೆದರಿ ನನ್ನತ್ತ ಕೈ ಚಾಚಿದಳು… ನನ್ನ ಹೃದಯದಲ್ಲಾಗ  ಶೂಲ ಚುಚ್ಚಿದ ಅನುಭವವಾಯಿತು.  ನಂತರ ಆಕೆ ನನ್ನ ಕಡೆಗೆ ನುಗ್ಗಿದಳು. ನನ್ನನ್ನು ತಬ್ಬಿದಳು, ಜೋರಾಗಿ ಕಣ್ಣೀರಲ್ಲಿ ಆಸ್ಫೋಟಗೊಂಡಳು. ನನಗೂ ತಡೆಯಲಾಗಲಿಲ್ಲ, ಆದರೆ  ಬಿಕ್ಕಿ-ಬಿಕ್ಕಿ ಹಿಂದೆಂದೂ ಅಳದಂತೆ ಅತ್ತೆ…

“ನನಗಾಗ್ತಾಯಿಲ್ಲಾ, ಆಗ್ತಾನೇಯಿಲ್ಲ, ನನ್ನಿಂದ… ಅವ್ರರ್ಯಾರೂ ಬಿಡ್ತಾಯಿಲ್ಲ ನಾನ್ ಒಳ್ಳೆಯವನಾಗಕ್ಕೇೀೀೀೀ…” ಅಷ್ಟು ಹೇಳಿ ಹಾಸಿಗೆಯಲ್ಲಿ ಮುಖಮೊಗಚಿ ಬಿದ್ದೆ. ನನ್ನನ್ನು ಬಿಗಿಯಾಗಿ ಅಪ್ಪಿದಳು ಅವಳು. ಆ ಅಪ್ಪುಗೆಯಲ್ಲೇ ನಾವಿಬ್ಬರೂ ಹೆಪ್ಪುಗಟ್ಟಿದ್ದೆವು. ನಂತರ ಕಾಲುಗಂಟೆಯ ಕಾಲ ನಾನು ಪ್ರಾಮಾಣಿಕ ಉನ್ಮಾದದೊಳಗೆ ಅಡಗಿ, ಮಡುಗಟ್ಟಿದ್ದ ಶೋಕವನ್ನು ಕಣ್ಣೀರ ಮೂಲಕ ಪತನಗೊಳಿಸಿದ್ದೆ.

ಆದರೆ, ಆ ಉನ್ಮಾದತೆಯ ಸನ್ನಿಯೂ ಕಳೆಯಿತು. ಆಗ ನಾನು (ನಾನೀಗ ತಲೆ ಎತ್ತಿ ಆ ಕೊಳಕು ಸತ್ಯವ ಬರೆಯುತ್ತಿರುವೆ) ಒಂದೇ ಭಂಗಿಯಲ್ಲಿ ಆ ಸೋ¥sóÁದ ಮೇಲಿದ್ದ ನನ್ನ ಕೀಳುದರ್ಜೆಯ ಚರ್ಮದ  ಕುಷನ್‍ಗೆ ಮೊಗವೊತ್ತಿ ಬಿದ್ದಿದೆ. ಈಗ ತಲೆಯೆತ್ತಿ ಲೀಝಾಳನ್ನು ನೋಡುವುದೇ  ತೀರ ಅಭಾಸ ಎಂಬ ಹತ್ತಿಲಾಗದ ಭಾವನೆಯು ನನ್ನ ಮನಸ್ಸಿನಲ್ಲಿ ಎದ್ದಿತ್ತು. ನಾನೇಕೆ ನಾಚಿದ್ದೆ? ಗೊತ್ತಿಲ್ಲ ಆದರೆ ನಿಜಕ್ಕೋ ನಾಚಿದ್ದೆ. ಆದರೆ ನನ್ನ ಕದಡಿದ್ದ ಮಿದುಳು, ನಾಲ್ಕು ದಿನಗಳ ಹಿಂದೆ ಅವಳಿದ್ದಂತೆ ನಾನಿರುವೆ, ಈಗ ನಮ್ಮಿಬ್ಬರ ಪಾತ್ರಗಳು ಅದಲುಬದಲಾಗಿವೆ ಎಂಬ  ಸತ್ಯವನ್ನು ಪತ್ತೆ ಹಚ್ಚಿತ್ತು. ಈಗ ಈಕೆಯೇ ಆ ವೀರ ನಾರಿ, ನಾನು ಅಂದು ಮುದುಡಿ, ಛಿದ್ರವಾಗಿ ಅವಮಾನಿತಗೊಂಡ ಜಂತು… ಈ ಎಲ್ಲಾ ವಿಷಯಗಳು, ಆ ಸೋಫಾದಲ್ಲಿ ಮುಖ ಮುಚ್ಚಿಕೊಂಡು ಕೆಲವು ನಿಮಿಷಗಳ ಕಾಲ ಬಿದ್ದಿರುವಾಗ ನನ್ನೊಳಗೆ ಸಂಭವಿಸಿತ್ತು.

   “ಓಹ್ ದೇವರೇ! ಹಾಗಾದರೆ ಅಂದು ನಾನು ನಿಜಕ್ಕೂ ಅವಳ ಬಗ್ಗೆ ಕರುಬುತ್ತಿದ್ದೆನಾ?!”

  ಇದುವರೆಗೂ ಈ ಪ್ರಶ್ನೆಗೆ ಕರಾರುವಕ್ಕಾದ ಉತ್ತರ ನನಗೆ ಸಿಕ್ಕಿಲ್ಲ. ಆಗ ಅವಳ ಜತೆ, ಆ ಸಮಯದಲ್ಲಿ, ಎಂದಿನಂತೆ ಸಹಜವಾಗಿಯೇ ಯೋಚಿಸಲೂ ನನಗೆ ಆಗಿರಲಿಲ್ಲ. ಅಂದರೆ, ಒಬ್ಬರ ಮೇಲೆ ಅಧಿಕಾರ ಚಲಾಯಿಸದೆ, ಅವರನ್ನು ದಬ್ಬಾಳಿಕೆಗೆ ಒಳಪಡಿಸದೆ ನನಗೆ ಬದುಕಲು ಬರುವುದಿಲ್ಲ… ಆದರೆ…ಆದರೆ, ಇಷ್ಟೆಲ್ಲಾ ಆದ ಮೇಲೆ, ತರ್ಕವೂ ಏನನ್ನೂ ವಿವರಿಸುವುದಿಲ್ಲ, ಹಾಗಾಗಿ ತರ್ಕವನ್ನು ಹುಡುಕುವುದರಲ್ಲಿ ಅರ್ಥವಿಲ್ಲ.

ಹಾಗಿದ್ದರೂ ಮೆಲ್ಲಗೆ ನನ್ನನ್ನು ನಾನೇ ಎಳೆದುಕೊಂಡು, ಸ್ವಲ್ಪ ತಲೆಯೆತ್ತಿದ್ದೆ; ಯಾವಾಗಲಾದರೂ ಎತ್ತಲೇ ಬೇಕಲ್ಲ… ಅಂದು ನಾನು ಅವಳ ಕಣ್ಣಲ್ಲಿ, ನನ್ನ ಕಣ್ಣಿಡಲು ಹಿಂಜರಿದದಕ್ಕೇ ಆಗ ಇನ್ನೊಂದು ವಿಭಿನ್ನ ಭಾವನೆ ನನ್ನ ಹೃದಯದಲ್ಲಿ ಭುಗ್ಗನೇ ಹತ್ತಿಕೊಂಡದ್ದು; ಇದು ನನ್ನ ವಶದ್ದು, ಇದರ ಮಾಲಿಕ ನಾನೇ ಎನ್ನುವಂತಹ ಭಾವನೆಯದು. ಆಗ ನನ್ನ ಕಂಗಳು ಉದ್ರೇಕದ ಮದದಲ್ಲಿ ಉರಿದವು. ಅವಳು ನನ್ನ ವಶದಲ್ಲಿದ್ದಾಳೆನ್ನುವಂತೆ, ನಾನವಳ ಯಜಮಾನ ಎನ್ನುವಂತೆ, ನನ್ನೆಲ್ಲಾ ಶಕ್ತಿ ಹಾಕಿ ಅವಳ ಕೈಗಳನ್ನು ಬಿಗಿಯಾಗಿ ಹಿಡಿದೆ. ಆ ಕ್ಷಣದಲ್ಲಿ ಅವಳನ್ನು ಎಷ್ಟು ದ್ವೇಷಿಸುತ್ತಿದ್ದೆ ನಾನು! ಎಂತಹಾ ಸೇಡಿನ ಹಿಡಿತವದು! ಹಾಗೂ ಎಷ್ಟು ವೇಗವಾಗಿ ಅವಳಾಚೆ ಸೆಳೆಯಲಟ್ಟಿದ್ದೆ ಆ ದಿನ! ಒಂದು ಭಾವನೆ ಇನ್ನೊಂದು ಭಾವನೆಯನ್ನು ಒದ್ದೋಡಿಸಿ, ಭಾವನೆಗಳ ಮಹಾ ಪ್ರವಾಹವೇ ನನ್ನೊಳಗೆ ಧುಮ್ಮಿಕುತ್ತಿತ್ತು. ಹೆಚ್ಚುಕಮ್ಮಿ ಇದೂ ಸೇಡನ್ನೇ ಹೋಲುತಿತ್ತು!… ಮೊದಲು ಆಕೆಯ ಮುಖದಲ್ಲಿ ದಿಗ್ಭ್ರಾಂತಿ ಇತ್ತು, ಹಾಗೆಯೇ ಅಲ್ಲಿ ಭಯವೂ ಇದ್ದಂತಿತ್ತು. ಆದರೆ ಅವೆಲ್ಲಾ ಒಂದು ಘಳಿಗೆಯಷ್ಟೇ… ನಂತರ ಭಾವಾವೇಶದಲ್ಲಿ ಪ್ರಖರವಾಗಿ ನನ್ನನ್ನು ಆಲಂಗಿಸಿದಳು.

10

ಮುಕ್ಕಾಲುಗಂಟೆಯ ಕಳೆಯಿತು. ಕ್ರೋಧಿಕ್ತನಾಗಿ ತಾಳ್ಮೆಗೆಟ್ಟು, ನಾನು ಆ ಕೋಣೆಯಲ್ಲಿ ಶತಪಥ ಹಾಕಿದ್ದೆ. ಆ ಪರದೆಯ ಹತ್ತಿರ ಬಂದಾಗಲೆಲ್ಲಾ, ಆಚೆ ಇದ್ದ ಲೀಝಾಳ ಕಡೆ  ಇಣುಕುತಿದ್ದೆ. ನೆಲದಲ್ಲಿ ಕೂತಿದ್ದ ಅವಳು ತಲೆ ಬಗ್ಗಿಸಿದ್ದಳು. ಬಹುಶಃ ಅಳುತ್ತಿರಬೇಕು. ಆದರೆ ಅವಳಿನ್ನೂ ಅಲ್ಲೇ ಇದ್ದಳು, ಮನೆಬಿಟ್ಟು ಹೋಗಿರಲಿಲ್ಲ.   ಇದರಿಂದಲೇ ನನಗೆ ಕಿರಿ-ಕಿರಿಯಾಗಿತ್ತು. ಈ ಸಲ ಮಾತ್ರ ಅವಳಿಗೆ ಎಲ್ಲವೂ ಅರ್ಥವಾಯಿತು. ಕಟ್ಟ ಕಡೆಯ ಮುಖಭಂಗದ ಹಾರವನ್ನು ಅವಳ ಕೊರಳಿಗೆ ನಾನೇ ಎಸೆದಿದ್ದೆ. ಆದರೆ ಅದನ್ನೆಲ್ಲ ವಿವರಿಸುವ ಗೋಜಿಗೆ ನಾನು ಹೋಗುವುದಿಲ್ಲ. ಕೆಲ ಕ್ಷಣಗಳ ಹಿಂದಿನ ಆ ಭಾವೋದ್ರೇಕದ ಉನ್ಮಾದವು ನನ್ನ ಮುಯ್ಯಿಯ  ಇನ್ನೊಂದು ಮುಖ, ಎಂಬ ಸತ್ಯವನ್ನು ಕಡೆಗೂ ಅರಿತಿದ್ದಳು ಅವಳು. ಇದು ಅವಳಿಗೆ ಮತ್ತೊಂದು ಅವಮಾನದ ಗರಿ ಎಂಬ ಕಟುವಾಸ್ತವವನ್ನೂ, ಹಾಗೆಯೇ ಅವಳ ಮೇಲೆ ನನಗಿದ್ದ ಅಮೂರ್ತ ಸ್ವರೂಪದ ಹಗೆಯ ಜತೆ, ಈಗ ನನ್ನ ವೈಯಕ್ತಿಕ ದ್ವೇಷವೂ ಮಿಳಿತವಾಗಿರುವ ಆಘಾತಕಾರಿ ಸ್ಥಿತಿಯನ್ನು ಊಹಿಸಿದ್ದಳು… ಆಕೆಗೆ ಎಲ್ಲವೂ ಈಗ ತಿಳಿಯಾಗಿಯೇ ಮನವರಿಕೆಯಾಗಿತ್ತು, ನಾನೊಬ್ಬ ನೀಚನೆಂದೂ… ಅವಳನ್ನು ಪ್ರೀತಿಸಲು ನಾನು ಅಶಕ್ತನೆಂದು… ಇದನ್ನು ಮತ್ತೆ ಮತ್ತೆ ನಾನು ಒತ್ತಿ ಹೇಳಲು ಇಷ್ಟಪಡುವುದಿಲ್ಲ.

 ನಂಬುವುದು ಕಷ್ಟ… ನನ್ನಂತಹ ಹಗೆಯಲ್ಲಿ ಮುಳುಗಿರುವ ಬೆಪ್ಪ ಇದ್ದಾನೆ ಎಂದರೆ ನಂಬುವುದು ಕಷ್ಟವೇ ಬಿಡಿ. ಅವಳನ್ನು ನಾನು ಪ್ರೀತಿಸದೇ ಇರುವುದಷ್ಟೇ ಅಲ್ಲದೆ, ಕಡೇ ಪಕ್ಷ ಅವಳ ಶುದ್ಧ ಪ್ರೀತಿಯನ್ನು ಕೊಂಡಾಡುವುದಕ್ಕೂ ನಾನು ಅಸಮರ್ಥ ಎಂದರೆ, ಅದು ಅಸತ್ಯ ಎಂದು ನೀವು ಹೇಳಬಹುದು. ಏಕೆ ಈ ಸಂಗತಿಯನ್ನು ಯಾರೂ ತಕ್ಷಣ ನಂಬುವುದಿಲ್ಲ?  ನಾನು ಮತ್ತೆ ಮತ್ತೆ ಹೇಳುತ್ತೇನೆ, ಮೊದಲನೆಯದಾಗಿ ನಾನು ಯಾರನ್ನೂ ಪ್ರೀತಿಸಲಾಗದವನು; ಏಕೆಂದರೆ ನನ್ನ ಪ್ರಕಾರ ಪ್ರೀತಿ ಎಂದರೆ, ದಬ್ಬಾಳಿಕೆ ನಡೆಸುವುದು. ಈ ಮೂಲಕ ತನ್ನ ಋಜತ್ವದ ಮೇಲ್ಮೆಯನ್ನು ಇನ್ನೊಬ್ಬರ ಮೇಲೆ ಸ್ಥಾಪಿಸುವುದು, ಅಥವಾ ಹೇರುವುದು. ನನ್ನ ಜೀವನಪೂರ್ತಿ ಇದನ್ನು ಬಿಟ್ಟು ಬೇರೆ ಬಗೆಯ ಪ್ರೀತಿಯನ್ನು ಊಹಿಸಲೂ ನನ್ನಿಂದಾಗುವುದಿಲ್ಲ! ಈಗೀಗ ನನಗೆ ಪ್ರೀತಿಯೆಂದರೆ    ಘರ್ಷಣೆ, ತಿಕ್ಕಾಟ ಅಷ್ಟೇ!   ಪ್ರೀತಿಸಲ್ಪಟ್ಟ ವಸ್ತುವು  ಮುಕ್ತವಾಗಿ ಕರುಣಿಸಿರುವ ದಬ್ಬಾಳಿಕೆಯ ಹಕ್ಕು. ನನ್ನ ನೆಲಮಾಳಿಗೆಯ ಕೆಳಗೆ ಕಂಡ ಕನಸುಗಳಲ್ಲಿಯೂ, ಪ್ರೀತಿಯೆಂದರೆ ಹಗೆಯಲ್ಲಿ ಶುರುವಾಗುವ ಹೆಣಗಾಟ; ಈ ಹೆಣಗಾಟವು ಅಂತಿಮವಾಗಿ ಋಜತ್ವದ ವಿಜಯದೊಂದಿಗೆ ಸಮಾಪ್ತಿಯಾಗುತ್ತದೆ. ಈ ಎಲ್ಲಾ ಯುದ್ಧಗಳ ತರುವಾಯ ಸಿಗುವ ಆ ವಿಜಯದ ಪದಾರ್ಥವನ್ನಿಟ್ಟುಕೊಂಡು ನಾನು ಮಾಡುವುದಾದರೂ ಏನು? ನನ್ನ ಕಲ್ಪನೆಗೂ ಇದು ಮೀರಿದ್ದು.

  ನಾನು ನೈಜ ಜಗತ್ತಿನಿಂದ ಕಳಚಿಕೊಂಡು, ಯಶಸ್ವಿಯಾಗಿ ನೈತಿಕೆತೆಯನ್ನೇ ಕಳೆದುಕೊಂಡ ಪರಮ ಭ್ರಷ್ಟನಾಗಿ, ವಾಸ್ತವದ ಸ್ಪರ್ಶವನ್ನು  ಹೇಗೆ ಮರೆತಿದ್ದೆನೆಂದರೆ ಆ ಘಳಿಗೆಯಲ್ಲೂ ನನಗೆ  ಅವಳನ್ನು ನಿಂದಿಸಿ, “ನೀನು ಇಲ್ಲಿಗೆ ಬಂದದ್ದು   ಕನಿಕರ ಪದಗಳಲ್ಲಿ ಕಟ್ಟಿದ್ದ ಕಥೆಯನ್ನು ಮತ್ತೆ-ಮತ್ತೆ ಕೇಳಲು…” ಎಂದು ಉಗಿದು ಅವಮಾನಿಸುವ ಎದೆಗಾರಿಕೆ ಇತ್ತು. ಆದರೆ ಅವಳು  ಇಲ್ಲಿಗೆ ಬಂದದ್ದು ನನ್ನನ್ನು ಪ್ರೀತಿಸಲು, ಖಂಡಿತವಾಗಿ   ಕನಿಕರದ ಪದಗಳ ಕಥೆ ಕೇಳಲಲ್ಲ. ಏಕೆಂದರೆ ಹೆಣ್ಣಿಗೆ ಪ್ರೀತಿಯೇ ಪುನರುತ್ಥಾನ. ವಿಮೋಚನೆ,  ನಾಶದಿಂದ ಸಿಗುವ ಮುಕ್ತಿ, ಪುನರ್ಜನ್ಮ, ಎಲ್ಲವೂ ಪ್ರೀತಿಯಲ್ಲೇ… ಕಳ್ಳನಂತೆ ಅವಳತ್ತ ಇಣುಕಿ, ಅಂದು ಶತಪಥ ಹಾಕುತಿದ್ದಾಗ ನಾನೇನು ಅವಳನ್ನು ದ್ವೇಷಿಸುತ್ತಿರಲಿಲ್ಲ. ಅವಳು ಇನ್ನೂ ಅಲ್ಲಿ ಇರುವ ಸತ್ಯವೇ ನನಗೆ ಸಹಿಸಲಾಗದ ವಿಷಯವಾಗಿತ್ತು. ನನ್ನಿಂದ ಯಾವ ಸಮಾಧಾನ, ವಿವರಣೆ, ಏನನ್ನೂ  ಕೇಳ ಬಯಸದೆ ಅವಳು ಅಲ್ಲಿಂದ ಮಾಯವಾಗಲಿ ಎಂದೇ ಬಯಸಿದ್ದೆ ನಾನು; ಶಾಂತಿಯಲ್ಲಿ ನನ್ನ ಪಾಡಿಗೆ, ನನ್ನ ನೆಲಮಾಳಿಗೆಯಡಿ  ಬದುಕುವುದು ಮಾತ್ರ ನನಗೆ ಬೇಕಿತ್ತು, ಯಾವ ಬಾಹ್ಯ ಜಗತ್ತಿನ ಹಸ್ತಕ್ಷೇಪವಿಲ್ಲದೆ. ವಾಸ್ತವದ ಬದುಕಿಗೆ ನಾನು ಚೂರೇ ಚೂರು ಒಗ್ಗಿರಲಿಲ್ಲ. ಅದಕ್ಕೇ ಆ ಕ್ಷಣದಲ್ಲಿ ಅದು ನನ್ನನ್ನು ಪುಡಿ-ಪುಡಿಯಾಗಿಸಿತ್ತು;   ಉಸಿರಾಟವೂ   ಕ್ಲಿಷ್ಟವಾಗಿತ್ತು ಆಗ.

ಕೆಲವು ನಿಮಿಷಗಳು ಸರಿಯಿತು. ಅರ್ಧ ಜ್ಞಾನ ಇದ್ದಂತೆ ಅಲ್ಲೇ ಹೊರಳಾಡುತ್ತಿದ್ದಳು ಅವಳು. ಆಗ, ಈ ಮನಸ್ಸು ಹೇಗೆ ಜಡ್ಡುಗಟ್ಟಿತ್ತೆಂದರೆ, ಆ ಪರದೆಯನ್ನು ಮೆಲ್ಲಗೆ ತಳ್ಳಿ ಅವಳನ್ನು ಎಚ್ಚರಿಸಲೂ ನಾನು ಹೇಸಲಿಲ್ಲ. ಗರಬಡಿಸಿ ನೆಗೆದು ತನ್ನ ಶಾಲು ಮತ್ತು ತನ್ನ ಟೊಪ್ಪಿಗೆ ಹಾಗೂ ಕೋಟನ್ನು ತಡಕಾಡಿ, ನನ್ನಿಂದ ತಪ್ಪಿಸಿಕೊಳ್ಳಲು ಹವಣಿಸಿದಂತೆ ಎದ್ದಳು. ಎರಡು ನಿಮಿಷಗಳ ಆದ ಮೇಲೆ ನಿಧಾನಕ್ಕೆ ಪರದೆಗಳಾಚೆ ಬಂದು ಭಾರವಾಗಿ ನನ್ನನ್ನು ನೋಡಿದಳು. ನಾನು ಮುಯ್ಯಿಯ ನಗೆಯ ಬೀರಿದೆ- ಶಿಷ್ಟಾಚಾರಕ್ಕೆಂದು ಕಷ್ಟಪಟ್ಟು ಮೂಡಿಸಿಕೊಂಡಿದ್ದ ಸೋಗಿನ ನಗುವದು. ಮತ್ತೆ ಬೇರೆಡೆ ತಿರುಗಿ, ಅವಳ ದೃಷ್ಟಿಯಿಂದ   ತಪ್ಪಿಸಿಕೊಂಡೆ.

“ಹೋಗುತ್ತಿದ್ದೇನೆ… ನಮಸ್ಕಾರ” ಎಂದಳು, ಬಾಗಿಲ ಕಡೆ ಚಲಿಸುತ್ತಾ.

ಇದ್ದಕ್ಕಿದ್ದಂತೆ ಅವಳತ್ತ ಓಡಿ, ಅವಳ ಕೈಹಿಡಿದು ಬಲವಂತವಾಗಿ ಬೆರಳುಗಳ ಬಿಡಿಸಿ, ‘ಅದನ್ನು’ ಒಳಗೆ ಇರಿಸಿ, ಅದುಮಿ ಮತ್ತೆ ಮುಚ್ಚಿದೆ. ಮತ್ತೆ ವೇಗವಾಗಿ ತಿರುಗಿ, ಕಡೇಪಕ್ಷ ಅವಳ ನೋಟದಿಂದಾದರೂ ಬಚಾವಾಗಲು ವಿರುದ್ಧ ದಿಕ್ಕಿನಲ್ಲಿದ್ದ ಮೂಲೆಗೆ ಓಡಿದೆ.

    ತಲೆ ಕೆಟ್ಟು, ಮನಸ್ಸಿಗೆ ಮಬ್ಬು ಹಿಡಿದು, ಆಕಸ್ಮಿಕವಾಗಿ ಬೆಪ್ಪನಂತೆ ಹಾಗೆ ಮಾಡಿದೆ ಎಂದು ಇಲ್ಲಿಯೂ ಸುಳ್ಳು- ಸುಳ್ಳುಬರೆಯುವ ಮನಸ್ಸಾಗಿತ್ತು. ಆದರೆ ಇಲ್ಲಿ ಸುಳ್ಳಾಡಲು ನನಗಾಗದು. ಅದಕ್ಕೆ   ನೇರವಾಗಿ ಹೇಳುವೆ, ನಾನು ಮಾತ್ಸರ್ಯದಲ್ಲಿ ಅವಳ ಬೆರಳುಗಳ ನಡುವೆ ‘ಅದನು’ ತುರುಕಿದ್ದು ಎಂದು. ಆ ಕೋಣೆಯಲ್ಲಿ ಅವಳು ಮತಿಭ್ರಾಂತಳಂತೆ ಒರಗಿದ್ದಾಗ,   ಹೊರಗೆ ಶತಪಥ ಹಾಕುತ್ತಿದ್ದ ನನ್ನ ತಲೆಯಲ್ಲಿ ಈ ವಿಚಾರ   ಹೊಕ್ಕಿತ್ತು. ಆದರೆ ಒಂದು ವಿಷಯ ಮಾತ್ರ ಈಗ ಖಾತ್ರಿಯಾಗಿದೆ. ಈ ಕ್ರೂರ ಕ್ರಿಯೆಯು ನನ್ನ ಹೃದಯದ ತುಡಿತವಾಗಿರದೇ, ನನ್ನ ಕೇಡು ಮಿದುಳಿನಿಂದ ಪ್ರೇರಣೆಯಾಗಿತ್ತು. ಇದೆಷ್ಟು ಕೃತಕ, ಗ್ರಾಂಥಿಕ ಮತ್ತು ಎಷ್ಟು ಉದ್ದೇಶಪೂರ್ವಕವಾಗಿಯೇ ಮಿದುಳಿನಿಂದ ರೂಪುಗೊಂಡಿತ್ತೆಂದರೆ, ನಾನೇ ಒಂದು ಕ್ಷಣವೂ ಈ ನನ್ನ ಅವತಾರವನ್ನು ಸಹಿಸಲಾಗದೇ  ಚಂಗನೆ   ಮೂಲೆಗೆ ನೆಗೆದೆ, ಅವಳಿಂದ ತಪ್ಪಿಸಿಕೊಳ್ಳುವಂತೆ, ಆದರೆ ಮತ್ತೆ  ಹತಾಶೆಯಲ್ಲಿ ಛಿಧ್ರನಾಗಿ, ನೆಗೆದು ಲೀಝಾಳನ್ನು ಹುಡುಕುತ್ತಾ ಓಡಿದೆ. ಹಜಾರದ ಬಾಗಿಲ ತೆರೆದು, ಏನಾದರೂ ಕೇಳಿಸುವುದೋ ಎಂದು ಹಾಗೇ ಆಲಿಸುತ್ತಾ ನಿಂತೆ.

“ಲೀಝಾ, ಲೀಝಾ”  ಅಳುಕಿನಲ್ಲಿ ಮೆಲ್ಲಗೆ ಕರೆದೆ.

ಅಲ್ಲಿಂದ ಉತ್ತರ ಬರಲಿಲ್ಲ. ಅವಳ ಹೆಜ್ಜೆ ಸಪ್ಪಳವು ಕೆಳಗಿನ ಮೆಟ್ಟಿಲ ಕಡೆಯಿಂದ ಹರಿದಂತಾಯಿತು.

“ಲೀಝಾ!” ಎಂದೆ, ಈ ಸಲ ಜೋರಾಗಿತ್ತು ನನ್ನ ಸ್ವರ. ಆದರೆ ಉತ್ತರವಿಲ್ಲ. ಆಗ ಕೆಳಗಿನ ಬಳಕುವ ಗಾಜಿನ ಬಾಗಿಲು ಕೀರುತ್ತಾ ತೆರೆದುಕೊಂಡು, ಮತ್ತೆ ಭದ್ರವಾಗಿ ಸ್ಥಿರವಾದ ಶಬ್ದ ಕೇಳಿಸಿತು. ಆ ಶಬ್ದ ಎಲ್ಲೆಡೆ ಪ್ರತಿಧ್ವನಿಯಾಯಿತು.

ಅವಳು ಮರೆಯಾಗಿದ್ದಳು. ನಾನು ನನ್ನ ಕೋಣೆಗೆ ಮರಳಿದೆ. ಯೋಚನೆಯಲ್ಲೇ ಕಳೆದು ಹೋಗಿ, ಭಯಾನಕವಾಗಿ ಖಿನ್ನನಾಗಿ ಹೋಗಿದ್ದೆ.

ಅವಳು ಕೂತಿದ್ದ ಮೇಜಿನ ಹತ್ತಿರ ಗಕ್ಕನೇ ನಿಂತೆ. ಈಗ, ಕೆಲವೇ ಕ್ಷಣಗಳ ಹಿಂದೆ ನಾನವಳ ಬೆರಳುಗಳೊಳಗೆ   ತುರುಕಿದ್ದ ಐದು ರೂಬೆಲ್ಲುಗಳು ಮುದುಡಿ ಹೋಗಿ  ಅಲ್ಲಿ ಮಲಗಿದ್ದವು. ಅಂದರೆ ನಾನು ಆ ಮೂಲೆಗೆ ಓಡಿದ್ದಾಗ ಬರುವಷ್ಟರಲ್ಲಿಯೇ ಅವಳು ಹೇಗೋ  ಆ ಹಣವನ್ನು ಅಲ್ಲಿ ಎಸೆದು ಹೋಗಿದ್ದಾಳೆ. ಅದೇ ಇದು ಇವು ಬೇರ್ಯಾವ ರೂಬಲ್ಲುಗಳಾಗಲು ಸಾಧ್ಯವಿಲ್ಲ  ಏಕೆಂದರೆ ಮನೆಯಲ್ಲಿ ಬೇರೇ ದುಡ್ಡೇ ಇಲ್ಲ.

      ಮುಂದೇನು? ಅವಳು ಹಾಗೇ ಮಾಡುವಳೆಂದು ನೀರಿಕ್ಷಿಸಿದ್ದೆ ನಾನು. ಅಲ್ಲ… ಅವತ್ತು ನಿಜಕ್ಕೂ ನಿರೀಕ್ಷಿಸಿದ್ದೇನೆಯೇ? ಇಲ್ಲ! ನನ್ನೊಳಗಿನ ಅಹಂನಲ್ಲಿ ನಾನೇ ಹೇಗೆ ಇಂಗಿ ಹೋಗಿದ್ದೇನೆಂದರೆ ವಾಸ್ತವದಲ್ಲಿ ನಾನು ಇತರರನ್ನು ಗೌರವಿಸಲು ಸಂಪೂರ್ಣವಾಗಿ ವಿಫಲವಾಗಿದ್ದೆ. ಇದು ಎಂತಹ ತುದಿಗೇ ಹೋಗಿತ್ತು! ಅಬ್ಬಾ…! ಅವಳು ಆ ಹಣವನ್ನು ಮರಳಿ ಇಡುವವಳು, ಎಂದೂ ನಾನು ಊಹಿಸದೇ ಹೋದೆ! ನನ್ನಿಂದೀಗ ಇದನ್ನು ಸಹಿಸಲಾಗಲಿಲ್ಲ. ಮರು ಘಳಿಗೆಯೇ ಹುಚ್ಚನಂತೆ, ಕೈಗೆ ಸಿಕ್ಕ ಬಟ್ಟೆ ಹಾಕಿ, ವೇಗವಾಗಿ ಹೊರನುಗ್ಗಿ, ಅವಳ ಬೆನ್ನು ಹತ್ತಿದೆ. “ಇನ್ನೂರು ಹೆಜ್ಜೆಯೂ ದೂರ ಹೋಗಿರಲಾರಳವಳು, ಅಷ್ಟು ಸಮಯವಾಗಿಲ್ಲ…” ಅದೇ ಬೀದಿಯಲ್ಲೇ ಓಡಿದೆ.

ಎಲ್ಲವೂ ಮೌನವಾಗಿತ್ತು. ಲಂಬವಾಗಿ ಹಿಮ ಉದುರುತ್ತಿತ್ತು. ದಪ್ಪ…ದಪ್ಪ ಮಂಜು, ಖಾಲಿ ಬೀದಿಯ ಕಲ್ಲು ಹಾಸಿನ ಮೇಲೆಲ್ಲ ಹಿಮದ ದಿಂಬು ಹಬ್ಬುತಿತ್ತು.  ಬೀದಿ ದೀಪಗಳು ಮಸುಕಾಗುತ್ತಿದ್ದವು, ಖಿನ್ನ, ನಿರುಪಯೋಗಿ  ದೀಪಗಳು. ಇನ್ನೂರು ಹೆಜ್ಜೆ ಓಡಿ ಮೂರುದಾರಿ ಸೇರುವಲ್ಲಿಗೆ ಬಂದು ನಿಂತೆ.

“ಎಲ್ಲಿ ಹೋದಳವಳು…? ಮತ್ತೆ ನಾನ್ಯಾಕೆ ಅವಳ ಹಿಂದೆ ಓಡುತ್ತಿರುವೆ?’”

“ಏಕೆಂದರೆ… ನನ್ನನ್ನು ನಾನೇ ಅವಳ ಪಾದಗಳತ್ತ ಎಸೆದುಬಿಟ್ಟು, ಅಲ್ಲೇ ಬಿದ್ದು ಅವಳ ಕಾಲಿನ ಬೆರಳಿಗೆ ಮುತ್ತಿಡುತ್ತಾ ಕ್ಷಮೆಗಾಗಿ ಬೇಡಲು…! ಅದೇ ತಾನೇ ನನಗೆ ಈಗ ಬೇಕಿರುವುದು; ನನ್ನ ಎದೆಯು ಯಾವುದೋ ಹಬೆಯಾಡುವ ಗರಗರಸದಲ್ಲಿ ಕತ್ತರಿಸಿದಂತೆ  ಒದ್ದಾಡುತಿತ್ತು. ಈ ಘಳಿಗೆಯನ್ನು ಎಂದೆಂದಿಗೂ ಸಮಚಿತ್ತದಲ್ಲಿ ನೆನಪಿಸಿಕೊಳ್ಳಲು ನನ್ನಿಂದಾಗುವುದಿಲ್ಲ. ಆದರೆ ಏಕೆ? ನಾನು ಯೋಚಿಸಿದೆ. ಇಂದು ಅವಳ ಪಾದಗಳಿಗೆ ಮುತ್ತಿಟ್ಟೆ ಎಂಬ ಕಾರಣಕ್ಕಾಗಿಯೇ ನಾಳೆ ಮತ್ತೆ ಅವಳನ್ನು ದ್ವೇಷಿಸುವುದಿಲ್ಲವೇ ನಾನು? ನಿಜಕ್ಕೂ ಅವಳಿಗೆ ನಾನು ಸಂತಸ ತರುವೆನೆ? ನನ್ನ ಯೋಗ್ಯತೆ ಏನು ಎಂಬುದನ್ನು ನಾನು ಇಂದಿಗೆ ನೂರನೆಯ ಸಲವಾದರೂ, ಕಲಿಯಲಿಲ್ಲವೇ? ಮತ್ತೆ ಚಿತ್ರಹಿಂಸೆ ಕೊಟ್ಟು-ಕೊಟ್ಟು ನಾನು ಅವಳನ್ನು ಕೊಲ್ಲುವುದಿಲ್ಲವೇ?!”

ಆ ಹಿಮದಲ್ಲಿ ನಿಂತು, ಆ ಮಂಕಾದ ಕತ್ತಲೆಯನ್ನು ದಿಟ್ಟಿಸಿ ನೋಡುತ್ತಾ ಇದರ ಬಗ್ಗೆ ಯೋಚಿಸಿದೆ.

“ಮತ್ತೆ  ಇದೇ ಒಳ್ಳೆಯದು ಅಲ್ಲವೇ…?” ನನ್ನ ಹೃದಯದಲ್ಲಿ ಬದುಕುತ್ತಿರುವ ಯಾತನಾಮಯ ಅಮಾನುಷ ಕಲ್ಪನಾ ಸೃಷ್ಟಿಯಲ್ಲಿ ಕುಂಠಿತನಾಗಲು ಯತ್ನಿಸುತ್ತಾ ಕಡೆಗೂ ಮರಳಿ ಮನೆಗೆ ಬಂದಿದ್ದೆ. “…ಹೋಗುವುದೇ… ಅವಳು ಶಾಶ್ವತವಾಗಿ ಹೊರಟು ಹೋಗುವುದೇ, ಒಳ್ಳೆಯದು… ತನಗೆ ಅವಮಾನವಾಯಿತೆಂದು ಕ್ರೋಧದಲ್ಲಿ   ಸೇಡಿನ ಕೆಂಡವನ್ನು ಹೃದಯದೊಳಗೆ ಇಟ್ಟುಕೊಂಡು ಹೋದರೆ ಆಕೆಗೆ ಒಳ್ಳೆಯದಾಗುತ್ತದೆ. ಈ ಅವಮಾನ ಮುಖಭಂಗ,  ಖಂಡಿತವಾಗಿಯೂ ಅದೇ ಶುದ್ಧೀಕರಣ ಅಲ್ಲವೇ?! ಆ ಕುಟುಕುವ ಬೇಗುದಿಯೇ  ಜ್ಞಾನದ ರೂಪವೇ! ಈಗ ನಾನವಳ ಮತ್ತೆ ಭೆಟ್ಟಿಯಾಗಿದ್ದರೆ ಮುಂದಿನ ದಿನವೇ ಆಕೆಯ ಆತ್ಮವನ್ನು ಉದ್ವಿಗ್ನಗೊಳಿಸಿ ಅವಳ ಹೃದಯವನ್ನು ಸುಸ್ತಾಗಿಸುತಿದ್ದೆ.   ಆದರೆ ಈ ಮುಖಭಂಗದ ಮುದ್ರೆ ಅವಳ ಎದೆಯಲ್ಲಿ ಸದಾ ಚಿರಾಯು, ಅದೆಷ್ಟೇ ನೀಚವಾಗಿರುವ ಧೂರ್ತ ಭವಿಷ್ಯ  ಅವಳ ದಾರಿ ಕಾದರೂ, ಈ  ಮುಖಭಂಗವು ಅವಳನ್ನು ಶ್ರೇಷ್ಠಳನ್ನಾಗಿರಿಸಿ, ದ್ವೇಷದಿಂದ ಅವಳನ್ನು ಶುದ್ಧೀಕರಿಸುತ್ತದೆ… ಹ್ಞ್‍ಮ್…. ಆಆಆಆ…  ಮತ್ತು… ಬಹುಶಃ ಕ್ಷಮೆಯೂ ಕೂಡ…   ಆದರೆ ಇವೆಲ್ಲವೂ ಅವಳ ಬಾಳನ್ನು ಹಗುರಗೊಳಿಸುತ್ತವೆಯೇ?”

ಮತ್ತೆ ಒಂದು ಆಲಸಿ, ಮೈಗಳ್ಳ ಪ್ರಶ್ನೆಯನ್ನು ನನ್ನ ಸಮಾಧಾನಕ್ಕೆಂದು ಕೇಳುವೆ “ಯಾವುದು ಉತ್ತಮ? ಕೀಳು ಖುಷಿಯೇ? ಅಥವಾ ಶ್ರೇಷ್ಠವಾದ ವೇದನೆಯೇ? ಹೇಳಿ… ಯಾವುದು  ಉತ್ತಮ”

ಆ ಮಂಜು ಮುಸುಕಿದ ಸಂಜೆಯ ಹೊತ್ತಲ್ಲಿ ಅಸ್ಪಷ್ಟವಾಗಿ ಈ ಅಶರೀರ ಪ್ರತಿಧ್ವನಿಗಳು ನನ್ನ ಮನಸ್ಸಿನಲ್ಲಿ  ಹೊಳೆಯುವಂತೆ ಮೂಡುತ್ತಿದ್ದವು. ಆಗ   ಆ ಸಾಯಂಕಾಲ ನನ್ನ ಆತ್ಮದ ವೇದನೆಯಿಂದ ಹೆಚ್ಚು ಕಮ್ಮಿ ಸತ್ತು ಕಷ್ಟದಲ್ಲಿ ಬದುಕಿದ್ದೆ. ಹಿಂದೆಂದೂ ನಾನು ಈ ಪ್ರಮಾಣದ ಚಿತ್ರಹಿಂಸೆಯನ್ನೂ, ಪಶ್ಚಾತಾಪವನ್ನೂ ಅನುಭವಿಸಿರಲಿಲ್ಲ. ಆದರೆ ಕೋಣೆಯಿಂದ ಹೊರ ಓಡುತ್ತಿರುವಾಗ  ಅರ್ಧದಾರಿ ಕ್ರಮಿಸುವಷ್ಟರಲ್ಲೇ ವಾಪಾಸ್ಸಾಗುವೇ ಎಂಬ ಗುಮಾನಿ ಏನಾದರೂ ನನಗಿತ್ತೆ…?! ಆ ನಂತರ ಲೀಝಾಳನ್ನು ನಾನು ಭೇಟಿಯಾಗಲೇ ಇಲ್ಲ. ಅವಳ ಯಾವ ವಿಷಯಗಳೂ ನನ್ನ ಕಿವಿಗೆ ಬೀಳಲಿಲ್ಲ. ಇನ್ನೊಂದು ವಿಷಯವನ್ನು ಸೇರಿಸುತ್ತೇನೆ ಸುಮಾರು ಕಾಲಾವಧಿಯವರೆಗೂ ಸ್ವತಃ ನಾನೇ ಹೀನ ಹತಾಶೆಯಿಂದ ರೋಗಗ್ರಸ್ಥನಾಗಿದ್ದರೂ, ಮುಖಭಂಗ ಮತ್ತು ಹಗೆಯ ಭಾವನೆಗಳೇ ಮುಂದೆ  ಒಳ್ಳೆಯ ದಿನಗಳನ್ನು ತರುತ್ತವೆ, ಎಂಬ ಸೂಕ್ತಿಯಿಂದ ತೃಪ್ತಿಗೊಳ್ಳುತ್ತಲೇ ಇದ್ದೆ.

ಈಗಲೂ, ಇಷ್ಟೆಲ್ಲಾ ವರುಷಗಳಾದ ಮೇಲೂ, ಆ ನೆನಪು ಹೆಡೆಯೆತ್ತಿದಾಗಲೆಲ್ಲಾ   ಪಶ್ಚಾತಾಪವಾಗುತ್ತದೆ.  ನನ್ನ ಬಹಳಷ್ಟು ನೆನೆಪುಗಳನ್ನು ನಾನು ಪಶ್ಚಾತಾಪದಲ್ಲೇ ಜ್ಞಾಪಿಸಿಕೊಳ್ಳುತ್ತೇನೆ. ಈ ಕೇಡಿನ ನೆನಪಿನ ಜತೆ ಇನ್ನೂ ಸಾವಿರ ಕೇಡಿನ ನೆನಪುಗಳು ಬೆರೆತಿವೆ. ಆದರೆ ಇಲ್ಲಿಗೆ ನನ್ನ ಟಿಪ್ಪಣಿಗಳನ್ನು ಮುಗಿಸಬಹುದಲ್ಲವೇ? ಈಗನ್ನಿಸುತ್ತೆ, ಇದನ್ನು ನಾನು ಬರೆಯಲೇಬಾರದಿತ್ತು ಎಂದು. ಬರೆಯುವಾಗೆಲ್ಲಾ ನಾನು ಅವಮಾನಿತನಾಗಿಯೇ ಇದ್ದೆ. ಹೀಗಾಗಿ ಇದು ಸಾಹಿತ್ಯವಲ್ಲ, ದಂಡನೆ. ಧೀರ್ಘ ಕಥೆಯೊಂದರಲ್ಲಿ ನನ್ನ ಬದುಕನ್ನೆಲ್ಲಾ   ಈ ನೆಲದಡಿಯ ಮೂಲೆಯಲ್ಲಿ ನೈತಿಕವಾಗಿ ಕೊಳೆಯುತ್ತಾ, ಭಂಗಗೊಂಡ ಪರಿಸರವನ್ನೇ ಆರಿಸಿ, ಅಲ್ಲೇ ಬದುಕಿ ವಾಸ್ತವಕ್ಕೆ ಅನ್ಯನಾಗಿದ್ದು ಆತ್ಮರತಿಯ ಮತ್ಸರದಲ್ಲಿ ಹೇಗೆ ಆನಂದಿಸಿದ್ದೆ, ಎಂದು ಬರೆಯಲೇ? ಬೇಡ ಬಿಡಿ ಸಾಕು, ಇದು ಖಂಡಿತವಾಗಿಯೇ ಯಾರಿಗೂ ಆಸಕ್ತಿ ತರುವುದಿಲ್ಲ. ಕಾದಂಬರಿಗೆ ನಾಯಕನಿರಬೇಕು. ಆದರೆ ಇಲ್ಲಿ ಬೇಕು ಬೇಕಂತಲೇ ಸಂಗ್ರಹಿಸಿದ, ಅನಾಯಕನ ಗುಣ-ಸ್ವಭಾವಗಳ ಚಿತ್ರಣವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ತೀರ ಅಸ್ವಸ್ಥಗೊಳಿಸುವ ಅನಿಸಿಕೆ.    ಏಕೆಂದರೆ ಬದುಕುವ ಚಟವನ್ನೇ ಕಳೆದುಕೊಂಡು, ನಾವೆಲ್ಲರೂ ಒಂದಲ್ಲ ಒಂದು ಥರದ ಕುಂಟರಾಗಿದ್ದೇವೆ. ಬದುಕಿನಿಂದ ನಾವೆಷ್ಟು ವಿಛ್ಚೇಧಿತರಾಗಿದ್ದೇವೆಂದರೆ ಅಪರೂಪಕ್ಕೆಲ್ಲೋ ಒಂದು ಸಲ ನಮ್ಮ ಅಸಲಿ ಬದುಕಿನ ಬಗ್ಗೆ ಅಸಹ್ಯ ಪಡುತ್ತೇವೆ, ನಂತರ ಇದರ  ಯಕಃಶ್ಚಿತ್ ಸ್ಮರಣೆಯನ್ನೂ ಸಹಿಸಲು ನಾವು ಸಿದ್ಧರಿರುವುದಿಲ್ಲ.  ಕೊನೆಗೆ ನಾವು ಅಸಲಿ ಬದುಕೆಂದರೆ ಶ್ರಮ, ಕಡ್ಡಾಯ ಸೇವೆ ಎನ್ನುವ ತೀರ್ಮಾನಕ್ಕೆ ಬಂದಿದ್ದೇವೆ. ಹಾಗೆ   ಪುಸ್ತಕಗಳು ಚಿತ್ರಿಸುವ   ಬದುಕೇ ಎಷ್ಟೋ ಚೆನ್ನ ಎನ್ನುವದನ್ನು ನಾವೆಲ್ಲರೂ ಖಾಸಗಿಯಾಗಿ ಒಪ್ಪುತ್ತೇವೆ. ಅದಕ್ಕೋಸ್ಕರವೇ ಪಾಠ ಶಾಲೆ… ವಿದ್ಯಾಲಯಗಳು… ವೃತ್ತಿಯ ಭಢ್ತಿ… ಹಣದ ಮಳೆ… ಪ್ರಶಸ್ತಿಗಳ ಫಲಕಗಳು, ಮಹಾಮನೆಗಳು, ಸಜ್ಜನ ನಗುವಿನ ತೋರಿಕೆಗಳು, ಶುಭ್ರ ದುಬಾರಿ ಉಡುಗೆಗಳು, ವಿನಯದ ಮೊಗವಾಡಗಳು,  ಬೂಟಾಟಿಕೆಯ ಭಾಷಣಗಳು, ಸಾಹಿತ್ಯದ ತೆವಲುಗಳು, ಮಹಾ ಮೇಧಾವಿಯಂತೆ, ಎಲ್ಲ ಬಲ್ಲವರಂತೆ, ಆಡುವ ಮುತ್ತಿನ ಹಾರದಂತಹ ನುಡಿಮುತ್ತುಗಳ ಚಪಲಗಳು… ಇವೆಲ್ಲವೂ ಹೊತ್ತಿಗೆಯಲ್ಲಿರುವ ಧರ್ಮ ಸಮ್ಮತವಾದ, ರಂಜನೆಯ ಬದುಕೆಂಬ ಭ್ರಮೆಯನ್ನು ಸವಿಯಲು ನಮಗೆ ನಾವೇ ಸೃಷ್ಠಿಸಿರುವ ಗುರಿಯಿರದ ಅನಂತ ದೊಂಬರಾಟ…  ಏತಕ್ಕಾಗಿ ಅಲೆದಾಟ, ಜಂಜಾಟ ಎಲ್ಲಾ? ಏನು ಬೇಕು ನಮಗೆ? ಅದನ್ನೂ ನಾವು ತಿಳಿದಿಲ್ಲ. ನಮ್ಮೆಲ್ಲಾ ಪೆದ್ದು ಕೋರಿಕೆಗಳು ಈಡೇರಲ್ಪಟ್ಟರೇ ಅದೇ ನಮಗೆ ದೊಡ್ಡ ಕಂಟಕ. ಆದರೆ ಮುಂದುವರೆದು, ನಮ್ಮಲ್ಲೊಬ್ಬನು ಎಲ್ಲ ಕಟ್ಟುಪಾಡುಗಳಿಂದ ಮುಕ್ತನಾಗಿ,  ಆತನ ಕ್ರಿಯಾವಳಿಗಳ ವ್ಯಾಪ್ತಿಯನ್ನು ಹಿಗ್ಗಿಸಿ, ಇರುವ ಹಿಡಿತವನ್ನು ಸಡಿಲಗೊಳಿಸಿ ನಾವು ಸ್ವೇಛ್ಚೆಯಲ್ಲಿರುವ ವಾತವರಣ ಸೃಷ್ಠಿಸಿದರೆ, ಆಗ ನಮ್ಮ ಸ್ಥಿತಿ…! ಪ್ರಮಾಣ ಮಾಡಿ ಹೇಳುತ್ತೇನೆ  ನಿಮಗೆ,  ಕ್ಷಣಕ್ಕೇ   ನಾವು ತಕ್ಷಣವೇ ಮತ್ತೆ ಹಿಡಿತಕ್ಕೆ ಒಳಪಡಲು ತುದಿಗಾಲಲ್ಲಿ ನಿಲ್ಲುತ್ತೇವೆ! ನನಗೆ ಗೊತ್ತು, ಈಗ ನೀವೆಲ್ಲರೂ ನನ್ನ ಮೇಲೆ ಕೋಪಮಾಡಿಕೊಂಡೀದ್ದೀರಿ, ಕಿರುಚಾಡುತ್ತಿದ್ದೀರಿ, ಕಾಲಲ್ಲಿ ನೆಲವನ್ನು ರಪ-ರಪನೇ ಮೆಟ್ಟುತ್ತಾ ನನ್ನನ್ನು ಉಗಿಯುತ್ತಿದ್ದೀರಿ: “ನಿನಗಾಗಿ ನೀನು ಮಾತನಾಡು,” ನೀವನ್ನುವಿರಿ, “ನೆಲಮಾಳಿಗೆಯಲ್ಲಿ ಕಳೆದ  ನಿನ್ನ ಅನಿಷ್ಟ ಸಮಯದ ಬಗ್ಗೆ ನೀನು ಏನಾದರೂ ವಟಗುಟ್ಟು, ಆದರೆ ‘ನಾವೆಲ್ಲಾ’ ಎಂದು ಹೇಳುವ ಭಂಡ ಧೈರ್ಯ ಮಾಡಿದರೆ ಹುಷಾರ್!” ತಾಳಿ, ಒಂದು ನಿಮಿಷ ಸಜ್ಜನರೇ ನನ್ನನ್ನು ನಾನು ಈ ‘ನಾವೆಲ್ಲರೂ’ ಎಂಬ ಪದ ಸೇರಿಸಿ ಸಮರ್ಥಿಸಿಕೊಳ್ಳುತ್ತಿಲ್ಲ. ಯಾವ ಅನುಭದಲ್ಲಿ ನೀವು ಅರ್ಧದಷ್ಟು ಬದುಕಲೂ ಸೋತಿದ್ದಿರೋ ನಾನು ಅದೇ ಅನುಭವವನ್ನು  ಅತಿಯಾಗಿ ಎಳೆದು ಉಗ್ರವಾಗಿ ಬದುಕಿದ್ದೇನೆ. ಅದೂ ಅಲ್ಲದೆ ಹೇಡಿಗಳಂತೆ ಬದುಕುತ್ತಾ, ಅದೇ ವಿವೇಕವೆಂದು ಗ್ರಹಿಸಿ ಆತ್ಮವಂಚನೆಯಲ್ಲೇ ಸಮಾಧಾನ ಕಾಣುವ ಧೀರರು ನೀವು. ನಿಟ್ಟಿನಲ್ಲಿ ಬಹುಶಃ ನಾನು ನಿಮ್ಮಕ್ಕಿಂತ ಹೆಚ್ಚೇ ಜೀವಂತ. ಆದರೂ ಈ ದಿನಗಳಲ್ಲಿ ಈ ಜೀವಂತ ಮನುಷ್ಯ ಎಲ್ಲಿ ಜೀವಿಸುತ್ತಾನೆ? ಹಾಗೆ  ಈ ‘ಜೀವಂತ’ಎಂದರೆ? ಅದಕ್ಕೊಂದು ಹೆಸರಿದೆಯೇ? ಅದೂ ಸಹ ನಮಗೆ ಗೊತ್ತಿಲ್ಲ ಬಿಡಿ,  ಈ ‘ಜೀವ’ವನ್ನೇ ದೃಷ್ಟಿಯಲ್ಲಿಟ್ಟು ಇನ್ನೂ ತೀಕ್ಷ್ಣವಾಗಿ ನೋಡಿದರೆ  ಮನುಷ್ಯರ ಅರಿವು ಎಷ್ಟು ನಿಕೃಷ್ಟ ಎಂದು ನಿಮಗೆ ಅರ್ಥವಾಗುತ್ತದೆ! ಪುಸ್ತಕದ ಹಂಗಿಲ್ಲದೆಯೇ ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಟ್ಟರೇ ಗೊಂದಲದಲ್ಲಿ ನಾವು ಕಳೆದೇ ಹೋಗುತ್ತೇವೆ. ನಾವು ಎಲ್ಲಿಗೆ ಸೇರಿದವರು, ನಮಗಿರುವ ಆಸರೆಯಾವುದು, ಏನನ್ನು ಪ್ರೀತಿಸುವುದು, ಏನನ್ನು ದ್ವೇಷಿಸುವುದು, ಯಾವುದನ್ನು ಗೌರವಿಸುವುದು, ಯಾವುದನ್ನು ತಿರಸ್ಕರಿಸುವುದು, ಈ ಪ್ರಶ್ನೆಗಳಿಗೆ ಉತ್ತರಗಳನ್ನೇ ಅರಿಯದೆ ಮೂಕರಾಗುತ್ತೇವೆ. ನಿಜ ನಾವು ಮನುಷ್ಯರು, ಅಸಲಿ ವ್ಯಕ್ತಿಯ ರಕ್ತ ಮತ್ತು ಮಾಂಸವಿರುವ ಮನುಷ್ಯರು. ಆದರೆ ಹೀಗೆ ಮನುಷ್ಯರಾಗಿರುವುದೇ ನಮಗೆ ದಣಿವೆನಿಸಿದೆ. ಇದೇ  ನಮಗೆ  ನಾಚಿಕೆ, ಇದೇ ನಮ್ಮ ಶಾಪ; ಈ ಗತಿಯನ್ನು ಮೀರಲು  ಅಸ್ತಿತ್ವರಹಿತ ದಿವ್ಯ ಮಾನವರಾಗಲು ನಾವು ಹೆಣಗುತ್ತಿದ್ದೇವೆ. ಹಡೆದು ಹುಟ್ಟದ ಆತ್ಮಗಳು ನಾವು, ಬಹಳಷ್ಟು ಕಾಲವಾದರೂ ಜೀವಂತ ಅಪ್ಪಂದಿರಿಂದ ಹುಟ್ಟಲ್ಪಡದವರು. ಆದರೆ  ಈ ಸ್ಥಿತಿಯನ್ನೇ ನಾವು   ಹೆಚ್ಚು-ಹೆಚ್ಚು ಪ್ರೀತಿಸುತ್ತಿದ್ದೇವೆ. ಇದರ ರುಚಿ ನಮಗೆ ಹತ್ತುತ್ತಾ ಇದೆ. ಆದಷ್ಟು ಬೇಗನೇ ಒಂದು ಮನೋಭಾವನೆಯಿಂದ ಹುಟ್ಟುವುದು ಹೇಗೆ  ಎಂದು ನಾವು ಪತ್ತೆ ಹಚ್ಚಲಿದ್ದೇವೆ.* ಆದರೆ ಸಧ್ಯಕ್ಕೆ ಇಷ್ಟು ಸಾಕು; ನೆಲಮಾಳಿಗೆಯಡಿಯಿಂದ ಹೆಚ್ಚು ಬರೆಯಲು ನನಗಿಷ್ಟವಿಲ್ಲ.

                                *****

ಹೀಗಿದ್ದೂ ಈ ವಿರೋಧಾಭಾಸಿಯ ಈ ಟಿಪ್ಪಣಿಗಳು ಇಲ್ಲಿಗೇ ಮುಗಿಯುವುದಿಲ್ಲ. ಈತ ತನ್ನನ್ನು ತಾನು  ಹತೋಟಿಯಲ್ಲಿಟ್ಟುಕೊಳ್ಳಲಾಗಲಿಲ್ಲ, ಹಾಗೆಯೇ ಅವನ ಕಥೆ ಮುಂದೆ ಸಾಗಿತು. ಏನೇ ಇರಲಿ ನಾವು ಈ ಕಥೆಯನ್ನು ಇಲ್ಲಿಯೇ ನಿಲ್ಲಿಸೋಣ.

ಮುಕ್ತಾಯ.


ಅನುವಾದ :  ಗೌತಮ್ ಜ್ಯೋತ್ಸ್ನಾ

ಚಿತ್ರ : ಮದನ್ ಸಿ.ಪಿ

 

ಪ್ರತಿಕ್ರಿಯಿಸಿ