ಸದ್ದಿಲ್ಲದೆ ಭಾರತದಲ್ಲಿ ಕ್ರಾಂತಿ ಮಾಡಿದ ನಾಯಕ : ಬಿ.ಪಿ. ಮಂಡಲ್

ಮಂಡಲ್ ವರದಿಯ ಮೂಲಕ ಭಾರತದ ಅಂಚಿನ ವರ್ಗಗಳನ್ನು ಒಟ್ಟಾಗಿ ಸೇರಿಸಿ ಒಂದೆ  ಚೌಕಟ್ಟಿನಲ್ಲಿ ತರುವಲ್ಲಿ  ಪ್ರಮುಖ ಪಾತ್ರ ವಹಿಸಿದ್ದು ಕ್ರಾಂತಿಕಾರಿ ಮತ್ತು ಉತ್ಸಾಹಿ ದಾರ್ಶನಿಕ  ಮಂಡಲ್. 30 ದಿನಗಳ ಕಾಲ ಬಿಹಾರದ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಬಿ. ಪಿ ಮಂಡಲ್ ಅವರನ್ನು ರಾಜಕಾರಣಿಗಳು , ಶಿಕ್ಷಣ ತಜ್ಞರು ಅಥವಾ ಮಾಧ್ಯಮಗಳು ಸ್ಮರಿಸಿಕೊಂಡಿದ್ದು ಕಡಿಮೆ. ಕಳೆದ ವರ್ಷ ಬಿ . ಪಿ ಮಂಡಲ್ ಅವರ 100 ನೇ ಹುಟ್ಟು ಹಬ್ಬ ಮತ್ತು ಐತಿಹಾಸಿಕ ಮಂಡಲ್ ವರದಿಯ ಅನುಷ್ಟಾನಕ್ಕೆ 25 ವರ್ಷಗಳು ಸಂದವು . ಆ ಸಂದರ್ಭದಲ್ಲಿ ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಬಹಿಷ್ಕಾರ ಗಳ ಕುರಿತಾದ ಅಧ್ಯಯನ ಕೇಂದ್ರ , ಜಾಮಿಯಾ ಮಿಲಿಯಾ ಇಸ್ಲಾಮಿಯಾ ಯೂನಿವರ್ಸಿಟಿಯಲ್ಲಿ ಉಪನ್ಯಾಸಕರಾಗಿರುವ ಅರ್ವಿಂದ್ ಕುಮಾರ್ ಬರೆದಿರುವ ಇಂಗ್ಲಿಷ್ ಲೇಖನದ ಕನ್ನಡಾನುವಾದ ಇಲ್ಲಿದೆ .

ಒಮ್ಮೆ ನಾನು ಬಿಹಾರದ ಮಾಧೇಪುರಕ್ಕೆ  ಕ್ಷೇತ್ರ ವೀಕ್ಷಣೆಗೆ ಹೋದಾಗ, ನನಗೆ ಸಿಕ್ಕ ತೀಕ್ಷ್ಣಗ್ರಾಹಿ ವೃದ್ಧರೋರ್ವರು,  ಮಂಡೆಲಾ ಮತ್ತು ಮಂಡಲ್ ಹೆಸರುಗಳು 1990ರ ವಿಶ್ವ  ಕ್ರಾಂತಿಯ ಪರಿಭಾಷೆಗಳಂತಿದ್ದರು ಎಂದು ಹೇಳಿದರು.  ಸಾಮಾಜಿಕ ತಾರತಮ್ಯವನ್ನು ಕೊನೆಗೊಳಿಸಲು ಹೋರಾಡಿದ ಈ ಇಬ್ಬರು  ವಿಚಾರವಾದಿಗಳು ಕಾಕತಾಳೀಯವೆಂಬಂತೆ  1918ರಲ್ಲಿ ಒಂದೇ ವರ್ಷದಲ್ಲಿ  ಜನಿಸಿದರು. ಹಾಗೆಯೆ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಜನರನ್ನು ಮೇಲಕ್ಕೆತ್ತುವ ತಮ್ಮ ಮಾದರಿಗಳನ್ನು  1990 ರ ದಶಕದಲ್ಲಿ ಪ್ರಚಾರ ಮಾಡಿದರು.

ಬಿಂಧೇಶ್ವರಿ ಪ್ರಸಾದ್ ಮಂಡಲ್ ಅವರು ಬೆಳೆದಿದ್ದು ತಮ್ಮ ಊರಾದ ಬಿಹಾರದ ಮಾಧೆಪುರದ ಮುರ್ಹೋ ಎಂಬ ಹಿಂದುಳಿದ  ಹಳ್ಳಿಯಲ್ಲಿ. ಹುಟ್ಟಿದ್ದು ಆಗಸ್ಟ್ 25 1918 ವಾರಣಾಸಿಯಲ್ಲಿ. ಭಾರತದಲ್ಲಿ ಸಾಮಾಜಿಕ ನ್ಯಾಯ ಆಂದೋಲನಕ್ಕೆ  ಒಂದು ‘ಸಾಂಕೇತಿಕ ಸ್ಥಾನಮಾನ ತಂದುಕೊಟ್ಟಿದ್ದೆ ಮಂಡಲ್. ಇಷ್ಟಾಗ್ಯೂ ಅವರ ಬಗ್ಗೆ ಜಾಸ್ತಿ ಮಾಹಿತಿ ಲಭ್ಯವಿರದಿರುವುದು ಆಶ್ವರ್ಯ ಎನಿಸುತ್ತದೆ.  ವಸಾಹತುಶಾಹಿ ನಂತರದ ಭಾರತದಲ್ಲಿ ಅಂಚಿಗೆ ತಳ್ಳಲ್ಪಟ್ಟ, ಅಂಚಿನಲ್ಲಿರುವ  ಜನಸಾಮಾನ್ಯರ ವಿಮೋಚನೆ ಬಯಸಿದ ನಾಯಕನ  ನಾಯಕತ್ವ ಮತ್ತು ಚಳುವಳಿಯನ್ನು ಉದ್ಧೇಶಪೂರ್ವಕವಾಗಿ ಹೊರಗಿಡುವ ಪ್ರಯತ್ನದಿಂದ ಮಂಡಲ್ ರ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ಜನರಿಗೆ ಲಭ್ಯವಾಗದಂತೆ ನೋಡಿಕೊಳ್ಳಲಾಗಿದೆ ಎಂದು ಅನಿಸುತ್ತದೆ.

ಕಾಲು ಶತಮಾನಕ್ಕೂ ಹೆಚ್ಚು ಕಾಲ ಭಾರತೀಯ ರಾಜಕಾರಣವು ಮಂಡಲ್-ಕಮಂಡಲ್  ಈ ಎರಡು ಕಮಿಷನ್ ನ ರೂಪುರೇಷೆಯ  ಮೇಲೆ  ಕೇಂದ್ರೀಕೃತವಾಗಿ ಯೋಜನೆ ರೂಪಿಸಿದ್ದು, ರಾಜಕಾರಣ ಮಾಡಿದ್ದು ಕಂಡುಬರುತ್ತದೆ. ಶೂದ್ರ, ಅತಿಶೂದ್ರ, ಆದಿವಾಸಿಗಳು ಮತ್ತು ಮುಸ್ಲಿಮರನ್ನು ಒಳಗೊಂಡಂತೆ ಸಾಮಾಜಿಕ ತುಳಿತಕ್ಕೊಳಗಾದ ಬಹು ಸಂಖ್ಯಾತರ ಒಗ್ಗೂಡುವಿಕೆಯನ್ನು ಮಂಡಲರ ಆದರ್ಶ ಪ್ರತಿನಿಧಿಸುತ್ತದೆ. ಇದು  ಅಂಚಿನಲ್ಲಿರುವ ಸಾಮಾಜಿಕ ಗುಂಪುಗಳ ಏಕತೆ ಸಂಕೇತ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಲು  ಸಂಖ್ಯಾತ್ಮಕ ಶಕ್ತಿ ಮತ್ತು ಆಡಳಿತ ಕ್ಷೇತ್ರದಲ್ಲಿ  ಪ್ರಾತಿನಿಧ್ಯದ ದೃಷ್ಟಿಯಿಂದಲೂ ಅವರು ಬಹುಸಂಖ್ಯಾತ ತಳ ಸಮುದಾಯವನ್ನು ಒಟ್ಟುಗೂಡಿಸಿದರು. ಮತ್ತೊಂದೆಡೆ, ಕಮಂಡಲ್  ನಂಬಿಕೆ ವ್ಯವಸ್ಥೆಯು ಬಲಪಂಥೀಯ ಹಿಂದುತ್ವದ ನಿಯಮಗಳ ಅಡಿಯಲ್ಲಿ ಮೀಸಲಾತಿ ಮತ್ತು ದೃಢೀಕರಣ ಕ್ರಿಯೆಗೆ ವಿರೋಧ ವ್ಯಕ್ತಪಡಿಸಿತು.ಆದರೆ ಅವರಿಗೆ ಸೆಡ್ಡು ಹೊಡೆದು ಅವರ ವಿರುದ್ದದ  ಸ್ಪರ್ಧಿಸುವ  ದಬ್ಬಾಳಿಕೆ ವಿರೋಧಿ ಐಕ್ಯತೆಯನ್ನು ಮಂಡಲ್ ರ ಆದರ್ಶ ಪ್ರದರ್ಶಿಸಿತು.

ಕಮಂಡಲ್ (ಬಲಪಂಥೀಯ ಹಿಂದುತ್ವ ನಂಬಿಕೆ) ವಿರೋಧದ ನಡುವೆಯು ಯುನೈಟೆಡ್ ಫ್ರಂಟ್ ಸರ್ಕಾರದ ಮುಖ್ಯಸ್ಥರಾಗಿದ್ದ ಅಂದಿನ ಪ್ರಧಾನ ಮಂತ್ರಿ ವಿಶ್ವನಾಥ್ ಪ್ರತಾಪ್ ಸಿಂಗ್ ಅವರು ಬಿ.ಪಿ. ಮಂಡಲ್ ಅಧ್ಯಕ್ಷತೆ ವಹಿಸಿದ್ದ ಮಂಡಲ್ ಕಮಿಷನ್ ಆಯೋಗದ ಶಿಫಾರಸುಗಳನ್ನು ಆಗಸ್ಟ್ 7 1990 ರಂದು  ಜಾರಿಗೆ ತಂದರು. ಅಂತಿಮವಾಗಿ 1993 ರಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪಿನೊಂದಿಗೆ ಆಯೋಗದ ಶಿಫಾರಸ್ಸು ಅನುಷ್ಠಾನಕ್ಕೆ ಹಸಿರು ನಿಶಾನೆ ನೀಡಿತು. ಇದು 1992 ರ ನವೆಂಬರ್  ‘ಇಂದ್ರ ಸಾಹ್ನಿ ತೀರ್ಪು’ ಎಂದು ಜನಪ್ರಿಯವಾಯಿತು. ಈ ನಿಟ್ಟಿನಲ್ಲಿ, 2018 ಮಂಡಲ್ ಆಯೋಗದ ವರದಿಯ ಅನುಷ್ಠಾನವಾಗಿ 25 ವರ್ಷ ಕಳೆಯಿತು.  ಆಗಸ್ಟ್ 2  2018 ರಂದು ಲೋಕಸಭೆಯು 123 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸುವ ಮೂಲಕ  ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡಿತು.

ಕ್ರಾಂತಿಕಾರಿ ಉತ್ಸುಕ  ದಾರ್ಶನಿಕ ಮಂಡಲ್, ಭಾರತದ ಅಂಚಿನಲ್ಲಿರುವ ವರ್ಗಗಳನ್ನು ಒಂದು ಚೌಕಟ್ಟಿನಲ್ಲಿ ತರುವಲ್ಲಿ  ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಹುಟ್ಟಿದ ಸಂದರ್ಭ ಭಾರತ ವಸಾಹತುಶಾಹಿ ಹಿಡಿತದಲ್ಲಿತ್ತು,  ಬ್ರಿಟಿಷ್ ಆಳ್ವಿಕೆಯಲ್ಲಿ ಪೂರ್ವಾಗ್ರಹ ಮತ್ತು ಅಧೀನತೆಗೆ ಒಳಗಾಯಿತಲ್ಲದೆ,  ಕೋಮು, ಜಾತಿ ಮತ್ತು ಲಿಂಗ ಪಕ್ಷಪಾತವನ್ನು  ಸಮಾಜದಲ್ಲಿ ಬೇರೂರಿತ್ತು. ರಾಷ್ಟ್ರೀಯ ಏಕತೆ ಮತ್ತು ಕೋಮು ಸೌಹಾರ್ದತೆಯ ಹೋರಾಟದಿಂದ ಜನರನ್ನು ಮತ್ತಷ್ಟು ದೂರವಿಡಲು ಇದು ಪ್ರಮುಖ ಕಾರಣವಾಗಿತ್ತು.

ಶೂದ್ರ ಕುಟುಂಬದಲ್ಲಿ ಜನಿಸಿದ ಮಂಡಲ್, ದರ್ಬಂಗಾದ ರಾಜ್ ನಲ್ಲಿ ಮಾಧ್ಯಮಿಕ ಶಿಕ್ಷಣದ ಎರಡನೆ ವರ್ಷದ ಸಮಯದಲ್ಲಿ ಮೊದಲ ಬಾರಿಗೆ ಜಾತಿ ತಾರತಮ್ಯಕ್ಕೆ ಒಳಗಾದರು. ಸವರ್ಣ ವಿದ್ಯಾರ್ಥಿಗಳ ಊಟ ಮುಗಿದ ನಂತರ ಉಳಿದ ಸಾಮಾಜಿಕ ವರ್ಗಕ್ಕೆ ಸೇರಿದ ಇತರ ವಿದ್ಯಾರ್ಥಿಗಳಿಗೆ ಊಟ ನೀಡಲಾಗುತ್ತಿತ್ತು . ಮಂಡಲ್ ರ ಬಿಸಿ ರಕ್ತ ಮತ್ತು  ಬಂಡಾಯದ ಮನೋಧರ್ಮವು ಅವರನ್ನು ಮೌನವಾಗಿರಲು ಬಿಡದೆ ಈ ಬಗ್ಗೆ ಪ್ರಶ್ನೆ ಎತ್ತುವಂತೆ ಮಾಡಿತು. ಈ ಅಭ್ಯಾಸವನ್ನು ಮೂಲದಲ್ಲೆ ಕಿತ್ತೆಸೆಯಬೇಕು ಎಂದು ಮಂಡಲ್ ಹೇಳಿದ್ದು ಮತ್ತು ಹಾಗೆ ಮಾಡಿಸಿದ್ದು ಶಾಲೆ ಮತ್ತು ಹಾಸ್ಟೆಲ್ ಆಡಳಿತ ಮಂಡಳಿಯನ್ನು ಬೆಚ್ಚಿಬೀಳಿಸಿತು.

ಮಂಡಲ್ ಆತ್ಮ ಗೌರವ ಮತ್ತು  ಬಲವಾದ ಸಾಕ್ಷಿ ಪ್ರಜ್ಞೆಯನ್ನು ಹೊಂದಿದ್ದರು.  ಪ್ರತಿಕೂಲ ಮತ್ತು ಅವ್ಯವಸ್ಥೆಯ ನಡುವೆ ಎದ್ದು ನಿಂತವರು ಮಂಡಲ್. ಅವರ ಹುಟ್ಟೂರು ಭಾರತದ ಇತರೆ ಹಳ್ಳಿಗಳಂತೆ  ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ  ಸಂಕಷ್ಟಕ್ಕೆ ಸಿಲುಕಿದ ಒಂದು ಹಳ್ಳಿಯಾಗಿತ್ತು. ಆದಾಗ್ಯೂ, ಕಲ್ಕತ್ತಾದ ಸಮೀಪವಿರುವ ಕಾರಣ ಬಂಗಾಳ ನವೋದಯ ಸುಧಾರಣಾ ಪ್ರಭಾವ  ಈ ಪ್ರದೇಶಕ್ಕೂ ಹಬ್ಬಿತಲ್ಲದೆ ಮಂಡಲ್ ರಲ್ಲಿ ಪ್ರಜ್ಞೆಯನ್ನು ಹುಟ್ಟುಹಾಕಿ ಸಾಮಾಜಿಕ ಅಭಿವೃದ್ಧಿಯತ್ತ ತಮ್ಮನ್ನು ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಿತು

ನುರಿತ ವಾಕ್ಚಾತುರ್ಯ ಮತ್ತು ತಾರ್ಕಿಕತೆಯು ಶೀಘ್ರದಲ್ಲೇ ಮಂಡಲ್ ರಿಗೆ ಬಿಹಾರ ರಾಜ್ಯ ವಿಧಾನಸಭೆಯಲ್ಲಿ ಸ್ಥಾನ ಗಳಿಸಿಕೊಟ್ಟಿತು. ತಾರತಮ್ಯದ ಯಾವುದೇ ನಡೆ ಮತ್ತು  ದಲಿತ ವರ್ಗಗಳಿಗೆ ಛೀಮಾರಿ ಹಾಕುವುದು, ಅವಹೇಳನ ಮಾಡುವುದನ್ನು ಅವರು ಸಹಿಸುತ್ತಿರಲಿಲ್ಲ.  ಅಂತಹ ಒಂದು ಘಟನೆಯೆಂದರೆ, ಮೇಲ್ವರ್ಗದ ಶಾಸಕರೊಬ್ಬರು ವಿಧಾನಸಭೆಯಲ್ಲಿ ತಮ್ಮ ಸಹವರ್ತಿಗಳನ್ನು ಅವಮಾನಿಸಲು, ‘ಗ್ವಾಲಾ’ ಎಂಬ ಪದವನ್ನು ಬಳಸಿದರು . ಇದರ ವಿರುದ್ಧ ಮಂಡಲ್ ಧ್ವನಿ ಎತ್ತಿದರು. ಬಿಹಾರ ವಿಧಾನಸಭೆಯ ಆಗಿನ ಸ್ಪೀಕರ್ ಆಗಿದ್ದ ವಿ.ಪಿ ವರ್ಮಾ ಅವರು ಈ ಪದವನ್ನು ಅಸಂಸದೀಯವೆಂದು  ಖಂಡಿಸಿ ನೋಟಿಸ್ ನೀಡುವ ತನಕ ಮಂಡಲ್ ಹೋರಾಟ ನಡೆಸಿದರು.

ರಾಜಕೀಯವಾಗಿ ಸಕ್ರಿಯ ಮತ್ತು ಸಾಮಾಜಿಕ ಜಾಗೃತವಾಗಿರುವ ಕೌಟುಂಬಿಕ ಹಿನ್ನೆಲೆಯನ್ನು ಮಂಡಲ್ ಹೊಂದಿದ್ದರು.  1941 ರಲ್ಲಿ ಭಾಗಲ್ಪುರ ಜಿಲ್ಲಾ ಮಂಡಳಿಯ ಅವಿರೋಧ ಸದಸ್ಯರಾದಾಗ ಮಂಡಲ್ ರ ವಯಸ್ಸು ಕೇವಲ 23. ಅವರ ತಂದೆ ರಾಸ್ಬಿಹಾರಿ ಲಾಲ್ ಮಂಡಲ್ ಸ್ವತಃ ಸಾಮಾಜಿಕ ಸುಧಾರಕರಾಗಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ಥಾಪಕ ಸದಸ್ಯರಲ್ಲಿ ರಾಸ್ಬಿಹಾರಿ ಲಾಲ್ ಮಂಡಲ್ ಕೂಡ ಒಬ್ಬರು. ಜಾತಿ ವ್ಯವಸ್ಥೆಗೆ ಸಂಬಂಧಿಸಿದಂತೆ ಮತ್ತು ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ಸಾಮಾಜಿಕವಾಗಿ ಎದುರಿಸುವ ಅವಮಾನಗಳನ್ನು ನಿರ್ಮೂಲನೆ ಮಾಡಲು ತುಳಿತಕ್ಕೊಳಗಾದವರನ್ನು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮೇಲೆತ್ತಲು ಕೆಲಸ   ಮಾಡಿದರು. 1952 ರಲ್ಲಿ ಬಿಹಾರದ ವಿಧಾನಸಭೆಗೆ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಭೂಪೇಂದ್ರ ನಾರಾಯಣ್ ಮಂಡಲ್ ರನ್ನು ಕಾಂಗ್ರೆಸ್ ನ ಅಭ್ಯರ್ಥಿಯಾಗಿದ್ದ ಬಿ.ಪಿ ಮಂಡಲ್ ಸೋಲಿಸುವ ಮೂಲಕ ಮಾಧೇಪುರ ವಿಧಾನಸಭಾ ಕ್ಷೇತ್ರದ ಶಾಸಕರಾದರು. ಭೂಪೇಂದ್ರ ನಾರಾಯಣ್ ವಿರುದ್ಧ ಮಂಡಲ್ ವಿಜಯಶಾಲಿಯಾಗಿದ್ದರೂ, ನಂತರದ ದಿನಗಳಲ್ಲಿ  ಮಾಧೇಪುರ ಕ್ಷೇತ್ರದಲ್ಲಿ ಸಮಾಜವಾದಿ ಕಲ್ಪನೆಗಳನ್ನು ರೂಪಿಸುವಲ್ಲಿ ಮತ್ತು ಮಾಧೇಪುರವನ್ನು ಸಮಾಜವಾದದ ಕಣವಾಗಿ ಪರಿವರ್ತಿಸುವಲ್ಲಿ ಮಂಡಲ್ ತೊಡಗಿಕೊಂಡರು. ಫುಲ್ಪುರ್   (ಅಲಹಾಬಾದ್ ಹತ್ತಿರ)  ಕ್ಷೇತ್ರದಿಂದ ನೆಹರೂ ವಿರುದ್ಧ ಸೋತ ಮತ್ತೊಬ್ಬ ಸಂಸತ್ ಸದಸ್ಯ ರಾಮ್ ಮನೋಹರ್ ಲೋಹಿಯಾ ಅವರು ಭೂಪೇಂದ್ರ ನಾರಾಯಣ್ ಅವರ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿದ್ದರು ಮತ್ತು ಅವರು ಪ್ರತಿಪಾದಿಸಿದ ಸಮಾಜವಾದದ ಮಾದರಿಗಳನ್ನು ಬೆಂಬಲಿಸಲು ಮಾಧೇಪುರಕ್ಕೆ  ಆಗಾಗ ಭೇಟಿ ನೀಡುತ್ತಿದ್ದರು. ಇದು ಮಂಡಲರ ರಾಜಕೀಯ ಮತ್ತು ಸಾಮಾಜಿಕ ನೀತಿಗಳ ಮೇಲೆ ಮತ್ತಷ್ಟು ಪ್ರಭಾವ ಬೀರಿತು.

ಪಾಮಾ ಪ್ರಕರಣದಲ್ಲಿ ಮಂಡಲ್ ತೋರಿದ ಧೈರ್ಯಕ್ಕಾಗಿ ಮಂಡಲ್ ರಾಷ್ಟ್ರದಾದ್ಯಂತ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾದರು. ಬಿಹಾರದ ಪಾಮಾ ಗ್ರಾಮದ ಸ್ಥಳೀಯ ರಜಪೂತ ಭೂಮಾಲೀಕರು ಕುರ್ಮಿ ಗ್ರಾಮವೊಂದರ ಮೇಲೆ ದಾಳಿ ಮಾಡಿದರು. ನಂತರ ಇದು  ಹಿಂದುಳಿದ ವರ್ಗದವರ ಮೇಲೆ ಪೊಲೀಸ್ ದೌರ್ಜನ್ಯಕ್ಕೆ ಕಾರಣವಾಯಿತು. ಬಿಹಾರ ವಿಧಾನಸಭೆಯ ಅಧಿವೇಶನದಲ್ಲಿ ಪೊಲೀಸರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಮಂಡಲ್ ಮಾಡಲಾಗಿದ್ದ ಮನವಿಯನ್ನು ಹಿಂತೆಗೆದುಕೊಳ್ಳುವಂತೆ ಮಂಡಲ್ ರಿಗೆ ಸರ್ಕಾರ ಒತ್ತಡ ಹೇರಿತು.  ತಕ್ಷಣ ಅವರು ಆಡಳಿತ ಪಕ್ಷದ  ಪೀಠವನ್ನು ತೊರೆದು ವಿರೋಧ ಪಕ್ಷದ  ಪೀಠಕ್ಕೆ ಸೇರಿಕೊಂಡು ನ್ಯಾಯಕ್ಕಾಗಿ ಹೋರಾಡಿದರು. ಇದು ನಿಷ್ಕ್ರೀಯ ಆಡಳಿತ ಪಕ್ಷವನ್ನು ಮತ್ತಷ್ಟು ಅವಮಾನಿಸಿತು. ಈ ಘಟನೆಯು ರಾಮ್ ಮನೋಹರ್ ಲೋಹಿಯಾ ಅವರ ಸಂಯುಕ್ತ ಸಮಾಜವಾದಿ ಪಕ್ಷದಲ್ಲಿ ರಾಜ್ಯ ಸಂಸದೀಯ ಮಂಡಳಿಯ ಅಧ್ಯಕ್ಷ ಸ್ಥಾನ ದೊರಕುವಂತೆ ಮಾಡಿತು. ನಂತರ ಅವರು ಬಿಹಾರದಿಂದ ಲೋಕಸಭಾ ಚುನಾವಣೆಯಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದ  ಮೂಲಕ ಜಯಗಳಿಸಿದರು. ನಂತರ ರಾಜ್ಯದಲ್ಲಿ  ಆರೋಗ್ಯ ಸಚಿವಾಲಯದ ಉಸ್ತುವಾರಿ ವಹಿಸಿಕೊಂಡರು.

ನಂತರ ಲೋಹಿಯಾ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ  ಪಕ್ಷವನ್ನು ತೊರೆದ ನಂತರ ಮಂಡಲ್ ಮಾರ್ಚ್ 1967 ರಲ್ಲಿ ಶೋಷಿತ್ ದಳ ಎಂಬ ಹೆಸರಿನ ಹೊಸ ಪಕ್ಷ  ರಚಿಸಿದರು.  ಫೆಬ್ರವರಿ 1, 1968 ರಂದು ರಾಜ್ಯದ ಏಳನೇ ಮುಖ್ಯಮಂತ್ರಿಯಾಗಿ ಮಂಡಲ್ ಪ್ರಮಾಣ ವಚನ ಸ್ವೀಕರಿಸಿದರು.  ಉತ್ತರ ಭಾರತದ ರಾಜಕೀಯದಲ್ಲಿ ಮೊದಲ ಬಾರಿ ಶೂದ್ರ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಯಾದ ಐತಿಹಾಸಿಕ ಕ್ಷಣ ಇದಾಗಿತ್ತು. ಅವರು ಲೋಕಸಭೆಯ ಚುನಾಯಿತ ಸದಸ್ಯರಾಗಿದ್ದರಿಂದ, ಮುಖ್ಯಮಂತ್ರಿ ಹುದ್ದೆಯನ್ನು ಸ್ವೀಕರಿಸಲು  ಬಿಹಾರ ವಿಧಾನಸಭೆಯ ಎರಡು ಸದನಗಳಲ್ಲಿ ಒಂದರ ಸದಸ್ಯರಾಗಬೇಕಿತ್ತು. ಮಂಡಲ್ ಶಾಸಕಾಂಗದ ಸದಸ್ಯರಾಗಿ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಅವರದೆ ಪಕ್ಷದ ಶಾಸಕರಾದ ಸತೀಶ್ ಸಿಂಗ್ ಅವರನ್ನು ನಾಲ್ಕು ದಿನಗಳ ಮಟ್ಟಿಗೆ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅವರ ಅಧಿಕಾರಾವಧಿಯಲ್ಲೆ ಉತ್ತರ ಭಾರತದ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ನಾಟಕೀಯ ಚಿತ್ರಣ ನಡೆಯಿತು. ಅದೇನೆಂದರೆ ಮಂಡಲ್ ರ ಸಚಿವಾಲಯವು ಹಿಂದುಳಿದ ವರ್ಗದವರನ್ನೆ ಬಹುಸಂಖ್ಯೆಯಲ್ಲಿ ಹೊಂದಿದ್ದು.  ಅಲ್ಪಾವಧಿಯ ಸರ್ಕಾರದಲ್ಲಿ ಪ್ರಾತಿನಿಧ್ಯ ಮಾದರಿಯಲ್ಲಿನ ತಂದ ಆಮೂಲಾಗ್ರ ಬದಲಾವಣೆಯಿಂದ ಇದು ಕೇವಲ 47 ದಿನಗಳ ಕಾಲ ಮಾತ್ರ ಉಳಿಯಿತು. ಭಾರತೀಯ ರಾಜಕೀಯದಲ್ಲಿ ಹೊಸ ಚೈತನ್ಯವನ್ನು ತಂದಿತು. ಮಂಡಲ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವ ಸಮಯದಲ್ಲಿ ಕನ್ಸಿರಾಮ್ ಅವರು, “ಯಾರಲ್ಲಿ ಎಷ್ಟು ಸಂಖ್ಯಾ ಬಲವಿದೆಯೊ, ಅವರಿಗೆ ಅಷ್ಟು ಸೀಟುಗಳು” ಎಂದು     ಹೇಳಿದರು.    ನಂತರ ವರದಿಯು ಸಂಖ್ಯಾಬಲದ ಆಧಾರದ ಮೇಲೆ ಪ್ರಾತಿನಿಧ್ಯ ನೀಡುವುದರ ಕುರಿತು ಒತ್ತಿ ಹೇಳಿದ್ದು ಮತ್ತು ಸಂಖ್ಯಾ ಬಲದಲ್ಲಿ ಕಡಿಮೆ ಇರುವ ಸವರ್ಣೀಯರು ಎಂದು ಕರೆಯಲ್ಪಡುವ ಮೇಲ್ವರ್ಗವು ರಾಜಕೀಯದಲ್ಲಿ ಹಿಡಿತ ಸಾಧಿಸುತ್ತಿರುವ ವಿರುದ್ಧ ಧ್ವನಿಯೆತ್ತಬೇಕಾಗಿರುವುದರ ಕುರಿತಾಗಿಯೂ ವರದಿ ಹೇಳಿದೆ.

ಹಲವಾರು ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ಮಂತ್ರಿಗಳ ಮೇಲಿನ ಭ್ರಷ್ಟಾಚಾರದ ಆರೋಪದ ತನಿಖೆ ಪೂರೈಸಲು ವಿಚಾರಣಾ  ಆಯೋಗವಾಗಿ ‘ಅಯ್ಯರ್ ಆಯೋಗ ‘ ವನ್ನು   ಟಿ.ಎಲ್  ವೆಂಕಟರಾಮ್ ಅಯ್ಯರ್  ಅವರ ನೇತರತ್ವದಲ್ಲಿ ನೇಮಿಸಲಾಗಿದ್ದು, ಕಾಂಗ್ರೆಸ್ ಈ ಆಯೋಗವನ್ನು ತೆಗೆದುಹಾಕಿತು. ಇದನ್ನು ವಿರೋಧಿಸಿ ಮಂಡಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ 1968 ರಲ್ಲಿ ಅವರು  ಮಾಧೇಪುರ ಸಂಸದೀಯ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಲೋಕಸಭಾ ಸದಸ್ಯರಾದರು. ಮತ್ತೆ 1974 ರಲ್ಲಿ ಜಯಪ್ರಕಾಶ್ ನಾರಾಯಣ್ ಅವರೊಂದಿಗೆ ಕೈಜೋಡಿಸಿ ಭ್ರಷ್ಟ ಕಾಂಗ್ರೆಸ್ ಆಡಳಿತವನ್ನು ವಿರೋಧಿಸಿ ವಿಧಾನಸಭೆಗೆ ರಾಜೀನಾಮೆ ನೀಡಿದರು. 1977 ರಲ್ಲಿ ಮಾಧೇಪುರ ಕ್ಷೇತ್ರದಿಂದ ಜನತಾ ಪಕ್ಷದ ಟಿಕೆಟ್ ಪಡೆದು ಮತ್ತೆ ಲೋಕಸಭಾ ಸದಸ್ಯರಾದರು.

ರಾಷ್ಟ್ರಪತಿ ಜೈಲ್ ಸಿಂಗ್ ಅವರಿಗೆ ಮಂಡಲ್ ಸಮಿತಿಯ ವರದಿಯನ್ನು ಸಲ್ಲಿಸುತ್ತಿರುವುದು

ಮಂಡಲ್ ಅವರ ದೀರ್ಘಕಾಲದ ವಿರೋಧಿ ನಿಲುವು ಮತ್ತು ತುಳಿತಕ್ಕೆ ಒಳಗಾದ ವರ್ಗಗಳಿಗೆ ಅವರು ನೀಡಿದ ಬೆಂಬಲದಿಂದಾಗಿ  ಡಿಸೆಂಬರ್ 20, 1978 ರಂದು ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಅಡಿಯಲ್ಲಿ, ಮಂಡಲ್ ರ ಅಧ್ಯಕ್ಷತೆಯಲ್ಲಿ ‘ಮಂಡಲ್ ಆಯೋಗ’ ಅಥವಾ ‘ಹಿಂದುಳಿದ ವರ್ಗಗಳ ಆಯೋಗ’ ರಚನೆಯಾಯಿತು. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಭಾರತೀಯ ಜನರನ್ನು ಮೇಲೆತ್ತುವುದು ಮತ್ತು ಜಾತಿ ಆಧಾರಿತ ತಾರತಮ್ಯ ಎದುರಿಸುತ್ತಿರುವವರ ಮೀಸಲಾತಿ ಸಮಸ್ಯೆಯನ್ನು ಪರಿಹರಿಸುವ ಉದ್ಧೇಶವನ್ನು ಆಯೋಗ ಹೊಂದಿತ್ತು.   1980 ರಲ್ಲಿ ಒ.ಬಿ.ಸಿಗಳು (ಇತರ ಹಿಂದುಳಿದ ವರ್ಗಗಳು) ಜಾತಿ, ಆರ್ಥಿಕ ಮತ್ತು ಸಾಮಾಜಿಕ  ಆಧಾರದ ಮೇಲೆ ತಾರತಮ್ಯದಿಂದ ವಿಮೋಚನೆ ಹೊಂದಿವೆಯೆ ಎಂದು ಗುರುತಿಸಬೇಕಾಯಿತು. ಆಗ ಭಾರತದ ಜನಸಂಖ್ಯೆಯ 52% ರಷ್ಟು ಹಿಂದುಳಿದವರಿದ್ದಾರೆ ಎಂದು ತಿಳಿದುಬಂದಿತು. ಆಯೋಗದ ವರದಿಯು ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ  27% ಉದ್ಯೋಗಗಳನ್ನು ಒ.ಬಿ.ಸಿ ಗಳಿಗೆ ಕಾಯ್ದಿರಿಸಲು ಸೂಚಿಸಿದೆ. ಎಸ್.ಸಿ, ಎಸ್.ಟಿ ಮತ್ತು ಒಬಿಸಿ ಎಲ್ಲವನ್ನು ಸೇರಿಸಿ  49% ಮೀಸಲಾತಿಯನ್ನು  ಸುಪ್ರೀಂ ಕೋರ್ಟ್ ನ ತೀರ್ಪಿನ ಮೂಲಕ ಜಾರಿಗೆ  ತರಲು ಒತ್ತಾಯಿಸಲಾಯಿತು.

ಮಂಡಲ್ ವರದಿಯನ್ನು 1980  ಡಿಸೆಂಬರ್ 31 ರಂದು ಅಂದಿನ ಭಾರತದ ರಾಷ್ಟ್ರಪತಿ ಜಿಯಾನಿ ಜೈಲ್ ಸಿಂಗ್ ಅವರಿಗೆ ಸಲ್ಲಿಸಲಾಯಿತು. ಅವಕಾಶದ ಸಮಾನತೆಯ ಬಗ್ಗೆ ವರದಿ ತನ್ನ ಜೀವಂತ ಸಾಕ್ಷಿಯನ್ನು ಅಂದು ದೃಢೀಕರಿಸಿಕೊಂಡಿತು:

—————————————————

ಒಂದು ಉದಾಹರಣೆಯನ್ನು ನೋಡೋಣ-

ಮೋಹನ್  ಮೇಲ್ಮಧ್ಯಮ ವರ್ಗದ ಕುಟುಂಬದಿಂದ ಬಂದವನಾಗಿದ್ದು ಅವನ ಪಾಲಕರಿಬ್ಬರೂ ಸುಶಿಕ್ಷಿತರು.  ನಗರದ ಉತ್ತಮ  ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.  ಈ ಶಾಲೆಯಲ್ಲಿ ಹೆಚ್ಚಿನ ಪಠ್ಯೇತರ ಚಟುವಟಿಕೆಗಳನ್ನು ಕಲಿಸಲಾಗುತ್ತದೆ. ಮನೆಯಲ್ಲಿ ಮೋಹನಿಗಾಗಿ ಪ್ರತ್ಯೇಕ ಕೋಣೆಯಿದ್ದು ಪಾಲಕರಿಬ್ಬರೂ  ಅವನ ಓದಿಗೆ ಸಹಾಯ ಮಾಡುತ್ತಾರೆ. ಮನೆಯಲ್ಲಿ ಟೆಲಿವಿಷನ್ ಮತ್ತು ರೇಡಿಯೊ ಸೆಟ್ ಇದೆ ಹಾಗೆ ಅವನ ತಂದೆ ಹಲವಾರು ನಿಯತಕಾಲಿಕೆಗಳಿಗೆ ಚಂದಾದಾರರಾಗಿದ್ದಾರೆ. ಅವನ ಅಧ್ಯಯನದ ಆಯ್ಕೆಯಲ್ಲಿ ಮತ್ತು ಅಂತಿಮವಾಗಿ ಅವನ ವೃತ್ತಿಜೀವನದಲ್ಲಿ  ಪೋಷಕರು ಮತ್ತು ಶಿಕ್ಷಕರು ನಿರಂತರವಾಗಿ ಮೋಹನನಿಗೆ ಮಾರ್ಗದರ್ಶನ ನೀಡುತ್ತಾರೆ. ಮೋಹನನ ಹೆಚ್ಚಿನ ಸ್ನೇಹಿತರು ಇದೇ ರೀತಿಯ ಹಿನ್ನೆಲೆಯುಳ್ಳವರಾಗಿದ್ದಾರೆ ಮತ್ತು  ಸ್ಪರ್ಧಾತ್ಮಕ ಜಗತ್ತಿನ ಸ್ವರೂಪದ ಬಗ್ಗೆ ಅವರಿಗೆ ಸಂಪೂರ್ಣ ಅರಿವಿದೆ.  ಅದರಲ್ಲಿ ಅವನು ತನಗೆ ಸೂಕ್ತವಾದ ಉದ್ಯೋಗ ಯಾವುದು ಎಂದು ಆಯ್ಕೆಮಾಡಿಕೊಳ್ಳುತ್ತಾನೆ. ಅವರ ಕೆಲವು ಸಂಬಂಧಿಕರು ಸಾಕಷ್ಟು ಪ್ರಭಾವಶಾಲಿ ವ್ಯಕ್ತಿಗಳು ಮತ್ತು ಅವರ  ಶಿಫಾರಸಿನ ಮೇರೆಗೆ ಅವನು ಅವಕಾಶಗಿಟ್ಟಿಸಿಕೊಳ್ಳಲು ಸಹಾಯ ಮಾಡುತ್ತಾರೆ…. ಮತ್ತೊಂದೆಡೆ, ಲಲ್ಲು ಹಳ್ಳಿಯ ಹುಡುಗ ಮತ್ತು ಅವನ ಪಾಲಕರು  ಜಾತಿ ಶ್ರೇಣಿಯಲ್ಲಿ ಕಡಿಮೆ ಸಾಮಾಜಿಕ ಸ್ಥಾನವನ್ನು ಹೊಂದಿದ್ದಾರೆ. ಅವನ ತಂದೆ 4 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಅವನ ಹೆತ್ತವರಿಬ್ಬರೂ ಅನಕ್ಷರಸ್ಥರು ಮತ್ತು  ಕುಟುಂಬದಲ್ಲಿ 8 ಜನರಿದ್ದು ಎರಡು ಕೋಣೆಗಳ ಗುಡಿಸಲಿನಲ್ಲಿ ಅವರ ವಾಸ. ತನ್ನ ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ಪ್ರೌ ಢ ಶಾಲೆಗಾಗಿ ಅವನು ಸುಮಾರು ಮೂರು ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಬೇಕು.  ಉನ್ನತ ವ್ಯಾಸಂಗ ಮಾಡಲು ಮುಂದಾಗಿದ್ದ ಅವನು ಪೇಟೆಯಲ್ಲಿರುವ ಚಿಕ್ಕಪ್ಪನ ಬಳಿಗೆ ತನ್ನನ್ನು ಕಳುಹಿಸುವಂತೆ ಪೋಷಕರನ್ನು ಮನವೊಲಿಸುತ್ತಾನೆ. ಅವನು ಏನನ್ನು ಓದಬೇಕು, ಅಧ್ಯಯನಕ್ಕಾಗಿ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು ಮತ್ತು  ವೃತ್ತಿಜೀವನದ ಬಗ್ಗೆ ಯಾವುದೇ ಮಾರ್ಗದರ್ಶನ ಕೂಡ  ಅವನಿಗಿಲ್ಲ.  ಅವನ ಹೆಚ್ಚಿನ ಸ್ನೇಹಿತರು ಮಾಧ್ಯಮಿಕ  ಶಾಲಾ ಹಂತವನ್ನು ಮೀರಿ ಅಧ್ಯಯನ ಮಾಡಲಿಲ್ಲ. ಯಾವುದೇ ಪ್ರೋತ್ಸಾಹಕ ಸಾಂಸ್ಕೃತಿಕ ವಾತಾವರಣಕ್ಕೆ ಅವನು ಎಂದಿಗೂ ಒಡ್ಡಿಕೊಳ್ಳಲಿಲ್ಲ ಮತ್ತು ಯಾವುದೇ ಮೂಲದಿಂದ ಹೆಚ್ಚಿನ ಪ್ರೋತ್ಸಾಹವಿಲ್ಲದೆ ಅವನು ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದನು. ಅವನ ಗ್ರಾಮೀಣ ಹಿನ್ನೆಲೆಯಿಂದಾಗಿ, ಅವರು ಹಳ್ಳಿಗಾಡಿನ ಬದುಕಿನ ನೋಟವನ್ನು  ಹೊಂದಿದ್ದಾನೆ. ಕಾಲೇಜು ಶಿಕ್ಷಣದ ಹೊರತಾಗಿಯೂ ಅವನ ಉಚ್ಚಾರಣೆ ಕಳಪೆಯಾಗಿದೆ. ಅವನ ನಡವಳಿಕೆ ನಗರಕ್ಕೆ ಹೊಂದಿಕೆಯಾಗಿಲ್ಲ ಮತ್ತು ಅವನಿಗೆ ಆತ್ಮ ವಿಶ್ವಾಸದ ಕೊರತೆಯಿದೆ. ವರದಿಯ ಉದ್ಧೇಶವೆ ಇವರಿಬ್ಬರನ್ನು ಸಮಾನರಾಗಿಸುವುದು

  —————————————————

ಸಮಾಜದ ಹಿಂದುಳಿದ ವರ್ಗಕ್ಕೆ ಸಂಬಂಧಿಸಿದಂತೆ ಹಾನಿಕಾರಕವಾದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ರಚನೆಗಳಲ್ಲಿನ ಲೋಪದೋಷಗಳನ್ನು ಗುರುತಿಸುವ ಮತ್ತು ಪರಿಹರಿಸುವ ಅಗತ್ಯವನ್ನು ಈ ವರದಿಯು ಒತ್ತಿಹೇಳುತ್ತದೆ. ಇದಲ್ಲದೆ, ಮಂಡಲ್ ಆಯೋಗದ ವರದಿಯ ಅನುಷ್ಠಾನವು ಆಕರ್ಷಕ ಆರಂಭಿಕ ಸಾಲುಗಳೊಂದಿಗೆ ಸಮಾನ ಅವಕಾಶದ ಕಲ್ಪನೆಯನ್ನು ಸಾರುತ್ತದೆ:  “There is equality only among equals. To equate unequals is to perpetuate inequality “

ಸಮೂಹ ಮಾಧ್ಯಮಗಳು ಸಾಮಾನ್ಯವಾಗಿ ಪ್ರಸ್ತುತಪಡಿಸಿದಂತೆ ಮಂಡಲ್ ಆಯೋಗದ ಶಿಫಾರಸು ಕೇವಲ ಮೀಸಲಾತಿಗಾಗಿ ಮಾತ್ರ ಆಗಿರಲಿಲ್ಲ. ಹೊರತಾಗಿ ಇದು ಬಹುಸಂಖ್ಯೆಯ ಶೂದ್ರರಲ್ಲಿ ತಾವು ನಿಷ್ಪ್ರಯೋಜಕರಲ್ಲ ಎಂಬ ವಿಶ್ವಾಸವನ್ನು ಮೂಡಿಸಿದೆ. ಇದು ಹೊಸ ಜಾಗೃತಿಯನ್ನು ಮೂಡಿಸಿತಷ್ಟೆ ಅಲ್ಲದೆ,  ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಈ ಜಾತಿ ಗುಂಪುಗಳಿಗೆ ಮೀಸಲು ಸ್ಥಾನ ಕಲ್ಪಿಸಿಕೊಟ್ಟಿತಲ್ಲದೆ, ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಭಾರೀ ಬದಲಾವಣೆಯನ್ನು ತಂದಿತು.  ಈ ಅನುಷ್ಠಾನದ ನಂತರ ರಾಜಕೀಯ ನಾಟಕೀಯವಾಗಿ ಬದಲಾಗಿದೆ. ಅಲ್ಲದೆ  ಹೊಸ ಪ್ರಜ್ಞೆ ಮೂಡಿದೆ. ಬಹುಶಃ ಇದೆ ಕಾರಣಕ್ಕಾಗಿ ಕ್ರಿಸ್ಟೋಫ್ ಜಾಫ್ರೆಲೋಟ್ ಮಂಡಲ್ ಚಳುವಳಿಯನ್ನು ಭಾರತದ ಸದ್ದಿಲ್ಲದ ಕ್ರಾಂತಿ ಎಂದು ಕರೆದರು.

ಮಂಡಲ್ ಆಯೋಗದ ಶಿಫಾರಸಿನ ಮತ್ತೊಂದು ಪ್ರಮುಖ ಸಾಧನೆಯೆಂದರೆ, ಮುಸ್ಲಿಂಮರಲ್ಲಿರುವ  ಬೇರೆ ಬೇರೆ ವರ್ಗಗಳನ್ನು ಗುರುತಿಸಿದ್ದು.  ಮುಖ್ಯವಾಗಿ ಕಮ್ಮಾರ, ಕ್ಷೌರಿಕ, ದೋಭಿ  ಮತ್ತು ಚಮ್ಮಾರಿಕೆಯಂತಹ ಉದ್ಯೋಗಗಳಲ್ಲಿ ತೊಡಗಿರುವವರನ್ನು ಒಬಿಸಿ ಎಂದು ಗುರುತಿಸುವುದು. ಮುಸ್ಲಿಂ ಜಾತಿ ಗುಂಪುಗಳನ್ನು ಒ.ಬಿ.ಸಿ ಗಳೆಂದು ವರ್ಗೀಕರಿಸಿದ್ದು ಭಾರತದಲ್ಲಿ ಚಾಲ್ತಿಯಲ್ಲಿರುವ ಕೋಮುವಾದಿ ವಿಭಾಜಕತೆಗೆ ಪೆಟ್ಟು ನೀಡಿತು. ಯಾವ ಮಟ್ಟಿಗೆಂದರೆ, ಮಂಡಲ್ ಆಯೋಗದ ಶಿಫಾರಸನ್ನು ವಿರೋಧಿಸಿ ಮೇಲ್ಜಾತಿಗಳು ಮಾಡುತ್ತಿದ್ದ ಪ್ರತಿಭಟನೆಯಲ್ಲಿ ಉದ್ಯೋಗದ ಮೀಸಲಾತಿಯ ಕುರಿತಂತೆ ಪೊರಕೆಗಳನ್ನು ಹಿಡಿದುಕೊಂಡು ಉದ್ಯೋಗದಲ್ಲಿ ಮೀಸಲಾತಿ ಗುಲಾಮಚಾಕರಿಕೆಯಲ್ಲಿ ಸಿಗುತ್ತದೆ ಮತ್ತು ಗುಲಾಮಚಾರಿಕೆಗೆ ನಿಮ್ಮನ್ನು ತಳ್ಳುತ್ತದೆ ಎಂದು ಅಣಕ ಮಾಡುತ್ತಿದ್ದರು. ಹೃದಯಾಘಾತದಿಂದಾಗಿ 1982 ರಲ್ಲಿ 64 ನೇ ವಯಸ್ಸಿನಲ್ಲಿ ಮಂಡಲ್ ಕೊನೆಯುಸಿರೆಳೆದಾಗ ಯುವ ರಾಷ್ಟ್ರಕ್ಕೆ ಅವರ ಅವಶ್ಯಕತೆ ಇನ್ನೂ ಇತ್ತು. 1990 ರ ದಶಕದಲ್ಲಿ ಭಾರತದಲ್ಲಿ ನಡೆದ ಈ ಆಂದೋಲನವು ಶೂದ್ರ ಜಾತಿಗಳಿಗೆ ಅಧಿಕಾರದ ಪಾಲನ್ನು ತಂದಿದೆ ಮತ್ತು ಅವರನ್ನು ರಾಜಕೀಯ ಪ್ರಜ್ಞಾವಂತರನ್ನಾಗಿ ಮಾಡಿದೆ ಎಂದು ವಿಲಿಯಂ ಡಾರ್ಲಿಂಪಲ್ ಸರಿಯಾಗಿ ಗಮನಿಸಿದ್ದಾರೆ:  1960 ರ ದಶಕದಲ್ಲಿ ಅಮೆರಿಕಾದ ಕಪ್ಪುಜನಾಂಗಕ್ಕೆ ನಾಗರಿಕ ಹಕ್ಕುಗಳ ಚಳುವಳಿ ಏನು ನೀಡಿತೊ ಅದನ್ನೆ ಮಂಡಲ್ ಆಯೋಗ ಇಲ್ಲಿ ತುಳಿತಕ್ಕೊಳಗಾದವರಿಗೆ ನೀಡಿತು.

ಈ ಲೇಖನದ ಸಂಶೋಧನೆಗೆ ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿಯು  ನೀಡಿದ ಆರ್ಥಿಕ ಸಹಾಯವನ್ನು ಲೇಖಕರು ಸ್ಮರಿಸಿಕೊಳ್ಳುತ್ತಾರೆ

ಅನುವಾದ :  ಚೈತ್ರಿಕಾ ನಾಯ್ಕ ಹರ್ಗಿ

ಸಾಗರದಲ್ಲಿ ಇಂಗ್ಲೀಷ್ ಐಚ್ಛಿಕ ವಿಷಯದಲ್ಲಿ ಪದವಿ ಮುಗಿಸಿರುವ ಚೈತ್ರಿಕಾ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ . ಈಗ ಡಿಜಿಟಲ್ ಕ್ರಿಯೇಟಿವ್ ಕಂಟೆಂಟ್ ಕ್ರಿಯೇಟರ್ ಆಗಿ ಕಾರ್ಯನಿರ್ವಹಿಸುತಿದ್ದು ಪ್ರಸ್ತುತ ದೆಹಲಿಯಲ್ಲಿ ನೆಲೆಸಿದ್ದಾರೆ .

ಸೌಜನ್ಯ : ವೈರ್

ಪ್ರತಿಕ್ರಿಯಿಸಿ