ಜಗಪದ : ಬ್ರೆಜಿಲ್ ದೇಶದ ಜನಪದ ಕಥೆ – ಬುದ್ಧಿವಂತಿಕೆಯ ಅನ್ವೇಷಣೆ

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದನು ಅವನಿಗೆ ಒಬ್ಬ ಮೂರ್ಖನಾದ ಮಗನಿದ್ದನು. ಅವನು ಏನಾದರೂ ಕಲಿಯಬಹುದೆಂಬ ಆಸೆಯಿಂದ ಅವನ ತಂದೆಯು ಅವನನ್ನು ಬಹಳ ವರ್ಷಗಳ ಕಾಲ ಶಾಲೆಗೆ ಕಳುಹಿಸುತ್ತಿದ್ದನು. ಆದರೆ ಅವನ ಎಲ್ಲ ಗುರುಗಳು “ಈ ಹುಡುಗನಿಗೆ ಪುಸ್ತಕಗಳಿಂದ ಕಲಿಸುವುದು ಸಾಧ್ಯವಿಲ್ಲ, ಆ ರೀತಿ ಕಲಿಸುವುದರಿಂದ ನಮ್ಮ ಅಮೂಲ್ಯವಾದ ಸಮಯವು ಹಾಳಾಗುತ್ತದೆ” ಇವನೊಬ್ಬ ಶತಮೂರ್ಖ ಎಂದು ಅವನಿಗೆ ಕಲಿಸಲು ನಿರಾಕರಿಸಿದರು.

ಕೊನೆಗೆ, ಆ ರಾಜನು ಅವನ ರಾಜ್ಯದಲ್ಲಿನ ಎಲ್ಲ ಬುದ್ದಿವಂತ ವಿದ್ವಾಂಸರುಗಳನ್ನು ಕರೆಸಿ ಆ ರಾಜಕುಮಾರನನ್ನು ಚತುರ ಹಾಗು ಬುದ್ದಿವಂತನನ್ನಾಗಿ ಮಾಡಬಹುದಾದ ಉಪಾಯವನ್ನು ತಿಳಿಸಬೇಕೆಂದು ಕೇಳಿಕೊಂಡನು. ಅವರೆಲ್ಲರೂ ಈ ವಿಷಯವನ್ನು ಒಂದು ವರ್ಷದ ಮೇಲೆ ಒಂದು ದಿನ ಚರ್ಚೆ ಮಾಡಿದರು. ನಂತರ ಅವರೆಲ್ಲರು ಒಮ್ಮತದಿಂದ ಆಹುಡುಗನು ಬೇರೆ ಬೇರೆ ಸ್ಥಳಗಳನ್ನು ಸುತ್ತಿ ಬಂದರೆ ಅವನು ಶಾಲೆಯಲ್ಲಿ ಪುಸ್ತಕಗಳಿಂದ ಕಲಿಯಲಾಗದ ಪಾಠಗಳನ್ನು ಕಲಿಯಬಹುದು ಎಂದು ರಾಜನಿಗೆ ತಿಳಿಸಿದರು.

ಅದರಂತೆ, ಅವನಿಗೆ ತೊಡಲು ಬೇಕಾದ ನಯವಾದ ವಸ್ತ್ರಗಳು, ಸವಾರಿ ಮಾಡಲು ಬೇಕಾದ ಭವ್ಯವಾದ ಸುಂದರ ಕಪ್ಪು ಕುದುರೆ, ಮತ್ತು ಒಂದು ದೊಡ್ಡ ಚೀಲದತುಂಬ ಹಣ ಇವೆಲ್ಲವನ್ನು ಪಡೆದ ರಾಜಕುಮಾರನು ಸಂಚಾರ ಹೊರಡಲು ತಯಾರಾದನು. ಈರೀತಿ ತಯಾರಾದ ಅವನು ದೇಶದ ರಾಜನಾದ ಅವನ ತಂದೆ ಹಾಗು ಎಲ್ಲಾ ವಿದ್ವಾಂಸರುಗಳ ಆಶೀರ್ವಾದ ಪಡೆದು ಒಂದು ಸುಂದರ ಪ್ರಕಾಶಮಾನವಾದ ಬೆಳಿಗ್ಗೆ ಅರಮನೆಯಿಂದ ಹೊರಟನು.

ರಾಜಕುಮಾರನು ಅನೇಕ ದೇಶಗಳ ಮೂಲಕ ಪ್ರಯಾಣ ಮಾಡಿದನು. ಒಂದು ದೇಶದಲ್ಲಿ ಒಂದು ಪಾಠ, ಮತ್ತೊಂದರಲ್ಲಿ ಇನ್ನೊಂದು ಬಗೆಯ ಪಾಠ ಹೀಗೆ ಪ್ರತಿಯೊಂದು ದೇಶದಲ್ಲೂ ಒಂದೊಂದು ಪಾಠ ಕಲಿಯುತ್ತಾ ರಾಜಕುಮಾರನು ಮುಂದುವರೆದನು. ಪುಸ್ತಕಗಳಿಂದ ಪಾಠಕಲಿಯುವಾಗ ಶತಮೂರ್ಖನಂತೆ ಇದ್ದ ರಾಜಕುಮಾರನು ಈಪ್ರಯಾಣದಲ್ಲಿ ತೆರೆದ ಮನಸ್ಸಿನಿಂದ ಹೋದ ಪ್ರತಿಯೊಂದು ಕಡೆಯೂ ಜೀವನದ ಪಾಠಗಳನ್ನು ಕಲಿತನು.

ಬಹಳಷ್ಟು ಧೀರ್ಘ ಸುತ್ತಾಟದ ನಂತರ ಆ ರಾಜಕುಮಾರನು ಒಂದು ನಗರಕ್ಕೆ ಬಂದನು, ಅಲ್ಲಿ ಒಂದು ಹರಾಜು ನಡೆಯುತ್ತಾ ಇತ್ತು. ಒಂದು ಹಾಡು ಹಕ್ಕಿಯನ್ನು ಹರಾಜಿಗೆ ಇಡಲಾಗಿತ್ತು. “ಈ ಹಾಡು ಹಕ್ಕಿಯ ವಿಶೇಷ ಪ್ರಯೋಜನ ಏನು?” ಎಂದು ರಾಜಕುಮಾರನು ವಿಚಾರಿಸಿದನು. ಅದಕ್ಕೆ,”ಈ ಹಕ್ಕಿಯು ತನ್ನ ಯಜಮಾನನು ಆಜ್ಞೆ ಮಾಡಿದಾಗ ಹಾಡುತ್ತದೆ, ಯಾರು ಆಹಾಡನ್ನು ಆಲಿಸುತ್ತಾರೋ ಅವರು ನಿದ್ದೆ ಹೊಗುತ್ತಾರೆ” ಎಂಬ ಉತ್ತರ ಅವನಿಗೆ ದೊರಕಿತು. ಈ ಹಕ್ಕಿಯನ್ನು ಕೊಳ್ಳುವುದು ಲಾಭಕರ ಎಂದು ರಾಜಕುಮಾರನು ನಿರ್ಧರಿಸಿದನು.

ಹರಾಜಿನಲ್ಲಿ ಮಾರಾಟಕ್ಕಿದ್ದ ಇನ್ನೊಂದು ವಸ್ತು ಒಂದು ‘ಜೀರುಂಡೆ’. ಈ ಜೀರುಂಡೆಯ ವಿಶೇಷತೆಯೇನು? ರಾಜಕುಮಾರನು ಪ್ರಶ್ನಿಸಿದನು ಆಗ “ಇದು ಪ್ರಪಂಚದಲ್ಲಿರುವ ಯಾವುದೇ ಗೋಡೆಯನ್ನು ಕೊರೆದು ದಾರಿ ಮಾಡಬಲ್ಲದು” ಎಂಬ ಉತ್ತರ ಬಂದಿತು. ರಾಜಕುಮಾರನು ಜೀರುಂಡೆಯನ್ನು ಕೊಂಡನು.

ನಂತರ ಒಂದು ಚಿಟ್ಟೆಯನ್ನು ಹರಾಜಿಗೆ ಇಡಲಾಯಿತು. ರಾಜಕುಮಾರನು ಪ್ರಶ್ನಿಸಿದನು “ಈ ಚಿಟ್ಟೆಯನ್ನು ಕೊಂಡರೆ ಆಗುವ ಲಾಭವೇನು?” ಈ ಚಿಟ್ಟೆಯ ರೆಕ್ಕೆಯ ಮೇಲೆ ಯಾವುದೇ ವಸ್ತುವನ್ನು ಇಟ್ಟರು ಅದು ಅದರ ಭಾರವನ್ನು ತಡೆಯುವಷ್ಟು ಬಲಶಾಲಿ ರೆಕ್ಕೆಗಳನ್ನು ಹೊಂದಿದೆ” ಎಂಬ ಉತ್ತರ ರಾಜಕುಮಾರನಿಗೆ ದೊರಕಿತು.

ರಾಜಕುಮಾರನು ಚಿಟ್ಟೆಯನ್ನು ಸಹ ಕೊಂಡನು. ತನ್ನ ಹಕ್ಕಿ,ಜೀರುಂಡೆ ಮತ್ತು ಚಿಟ್ಟೆಗಳೊಂದಿಗೆ ರಾಜಕುಮಾರನು ತನ್ನ ಪಯಣಿಸುತ್ತಾ, ಪಯಣಿಸುತ್ತಾ ಒಂದು ದಟ್ಟ ಅಡವಿಯಲ್ಲಿ ದಾರಿ ತಪ್ಪಿದನು. ಅಲ್ಲಿದ್ದ ದಟ್ಟವಾದ ಮರ ಗಿಡಗಳಿಂದಾಗಿ ಅವನಿಗೆ ಅವನ ದಾರಿ ಕಾಣದಾಯಿತು, ಆಗ ಅವನು ಅಲ್ಲಿ ಕಂಡ ಅತಿ ಎತ್ತರದ ಮರವನ್ನು ಏರಿ ಸುತ್ತಲೂ ನೋಡಿದನು. ಆ ಮರದ ತುದಿಯಿಂದ ನೋಡಿದಾಗ ಪರ್ವತದಂತೆ ಕಂಡ ಜಾಗಕ್ಕೆ ಅವನು ಹೋದನು;ಅಲ್ಲಿಗೆ ಹೋದ ನಂತರ ಅವನಿಗೆ ಅದು ಪರ್ವತವಲ್ಲ ದೈತ್ಯ ಜನರ ವಾಸಿಸುತ್ತಿರುವ ನಾಡನ್ನು ಸುತ್ತುವರೆದಿರುವ ಒಂದು ದೊಡ್ಡ ಗೋಡೆ ಎಂದು ಅರಿವಾಯಿತು.
ಮೋಡಗಳಿಗೆ ತಲೆ ತಾಕುವಷ್ಟು ಎತ್ತರವಿರುವ ಒಬ್ಬ ದೈತ್ಯನು ಆ ಗೋಡೆಯ ಮೇಲೆ ನಿಂತು ಅಲ್ಲಿನ ಕಾವಲು ಕಾಯುತ್ತಿದ್ದನು. ಹಾಡು ಹಕ್ಕಿ ಹಾಡಿದ ಒಂದು ಹಾಡಿನಿಂದ ಆದೈತ್ಯನು ತತ್‍ಕ್ಷಣ ನಿದ್ದೆ ಹೋದನು. ಆ ಕೂಡಲೆ ಜೀರುಂಡೆಯು ಆಗೋಡೆಯನ್ನು ಕೊರೆದು ಒಳಹೋಗಲು ದಾರಿ ಮಾಡಿತು. ಜೀರುಂಡೆಯು ಕೊರೆದ ರಂಧ್ರದ ಮೂಲಕ ರಾಜಕುಮಾರನು ದೈತ್ಯರ ನಾಡನ್ನು ಪ್ರವೇಶಿಸಿದನು.

ಅಲ್ಲಿ ಬಂಧನದಲ್ಲಿ ಇದ್ದ ಒಬ್ಬ ಸುಂದರ ರಾಜಕುಮಾರಿಯು ಒಳಗಡೆ ಹೋಗುತ್ತಿದ್ದಂತೆಯೇ ರಾಜಕುಮಾರನ ಕಣ್ಣಿಗೆ ಮೊದಲು ಕಂಡಳು. ಜೀರುಂಡೆಯು ಕೊರೆದ ರಂಧ್ರವು ಆ ರಾಜಕುಮಾರಿಯನ್ನು ಬಂಧಿಸಿ ಇಟ್ಟಿದ್ದ ಕತ್ತಲಕೋಣೆಗೆ ನೇರವಾಗಿ ಕರೆದುಕೊಂಡು ಹೋಗಿತ್ತು.
ರಾಜಕುಮಾರನು ತನ್ನ ಪ್ರವಾಸದಲ್ಲಿ ಅನೇಕ ಪಾಠಗಳನ್ನು ಕಲಿತಿದ್ದನು ಅದರಲ್ಲಿ ಒಂದು ” ಯಾವಾಗಲೂ, ತೊಂದರೆಯಲ್ಲಿರುವ ಸುಂದರ ಕನ್ಯೆಯನ್ನು ಮೊದಲು ರಕ್ಷಣೆ ಮಾಡಬೇಕು” ಎಂಬ ಪಾಠ. ಅವನು ತಕ್ಷಣವೇ ಬಂಧನದಲ್ಲಿ ಇದ್ದ ಆಸುಂದರ ರಾಜಕುಮಾರಿಯನ್ನು ರಕ್ಷಿಸಲು ಏನು ಮಾಡಬೇಕೆಂದು ಕೇಳಿದನು.

ಈ ಅರಮನೆಯ ಹೊರಬಾಗಿಲಿನಲ್ಲಿ ಕಾವಲು ಕಾಯುತ್ತಿರುವ ದೈತ್ಯನು ಎಂದಿಗೂ ನಿದ್ರಿಸುವುದಿಲ್ಲ, ಅವನಿಂದ ನೀನು ನನ್ನನ್ನು ರಕ್ಷಿಸುವುದು ಸಾಧ್ಯವಿಲ್ಲ ಎಂದು ರಾಜಕುಮಾರಿಯು ಭಯದಲ್ಲಿ ಉತ್ತರಿಸಿದಳು.
“ಯೋಚಿಸಬೇಡ ನಾನು ಅವನನ್ನು ನಿದ್ರಿಸುವಂತೆ ಮಾಡುತ್ತೇನೆ ” ಎಂದು ರಾಜಕುಮಾರನು ಅವಳಿಗೆ ಧೈರ್ಯ ಹೇಳಿದನು.
ಅವರಿಬ್ಬರು ಮಾತನಾಡುತ್ತಿರುವಾಗಲೇ ಅವರ ಧ್ವನಿಗಳನ್ನು ಕೇಳಿದ ದೈತ್ಯನು ಆಕತ್ತಲಕೋಣೆಗೆ ಬಂದನು. ಕೂಡಲೆ, ರಾಜಕುಮಾರನು ತನ್ನ ಹಕ್ಕಿಗೆ “ಹಾಡು ಪುಟ್ಟ ಹಕ್ಕಿಯೇ ಹಾಡು” ಎಂದು ಆಜ್ಞೆ ಮಾಡಿದನು.

ಹಕ್ಕಿಯು ಹಾಡಲು ಶುರು ಮಾಡುತ್ತಿದ್ದಂತೆಯೆ ಅದರ ಮಾಧುರ್ಯಕ್ಕೆ ಜೀವನದಲ್ಲಿ ಎಂದೂ ನಿದ್ದೆ ಮಾಡದ ಆ ದೈತ್ಯನು ಅಲ್ಲಿ ಆ ಕತ್ತಲಕೋಣೆಯಲ್ಲಿಯೇ ಮಲಗಿ ನಿದ್ದೆ ಹೋದನು. 
ಆಗ ರಾಜಕುಮಾರನು ಆರಾಜಕುಮಾರಿಗೆ “ಈ ನನ್ನ ಜೀರುಂಡೆಯು ಗೋಡೆಯಲ್ಲಿ ಕೊರೆದಿರುವ ರಂಧ್ರದಿಂದ ನಾವು ಗೋಡೆಯನ್ನು ಹತ್ತದೆಯೇ ಹೊರಹೋಗಬಹುದು” ಎಂದು ತಿಳಿಸಿದನು.
ಆದರೆ ಹೊರಗಡೆ ಗೋಡೆಯ ಮೇಲೆ ನಿಂತು ಕಾವಲು ಕಾಯುತ್ತಿರುವ ಮೋಡಗಳಿಗೆ ತಲೆ ತಾಕುವ ಆ ದೈತ್ಯನ ಕಥೆ ಏನು? ಅವನು ನಮ್ಮನ್ನು ಹಿಡಿಯುವುದಿಲ್ಲವೇ? ರಾಜಕುಮಾರಿಯು ಪ್ರಶ್ನಿಸಿದಳು.
ನನ್ನ ಹಾಡು ಹಕ್ಕಿಯು ಅವನಿಗೂ ನಿದ್ದೆ ಬರಿಸಿದೆ, ನಾವು ಈಗಲೇ ಹೊರಟರೆ ಅವನು ಎಚ್ಚರಗೊಳ್ಳುವುದರಲ್ಲಿ ತಪ್ಪಿಸಿಕೊಳ್ಳಬಹುದು ಎಂದು ರಾಜಕುಮಾರನು ಉತ್ತರಿಸಿದನು.
ಆಗ ರಾಜಕುಮಾರಿಯು, ನಾನು ಈ ಕತ್ತಲೆಕೋಣೆಯಲ್ಲಿ ಬಹಳದಿನದಿಂದ ಬಂಧಿತಳಾಗಿ ನನಗೆ ನಡೆಯುವುದು ಮರೆತುಹೋಗಿದೆ ಎಂದು ಭಯಪಡುತ್ತಾ ಹೇಳಿದಳು.

“ಯೋಚನೆ ಇಲ್ಲ, ನನ್ನ ಚಿಟ್ಟೆಯು ನಿನ್ನನ್ನು ತನ್ನ ರೆಕ್ಕೆಗಳ ಮೇಲೆ ಹೊತ್ತು ಕರೆದುಕೊಂಡು ಹೋಗುತ್ತದೆ ಎಂದು ಹೇಳಿದ ರಾಜಕುಮಾರನು ಅವಳನ್ನು ಚಿಟ್ಟೆಯ ಮೇಲೆ ಕೂರಿಸಿ ಬಹಳ ವೇಗವಾಗಿ ಆ ಗೋಡೆಯಿಂದ ತಪ್ಪಿಸಿಕೊಂಡು ಹೊರಬಂದನು. ಹೊರಬಂದಾಗ, ನಿದ್ದೆಯಲ್ಲಿ ಆಕಳಿಸುತಾ ್ತಮಲಗಿದ್ದ ದೈತ್ಯನು ಅವರ ಕಣ್ಣಿಗೆ ಬಿದ್ದನು. ಅವನನ್ನು ನೋಡಿದ ರಾಜಕುಮಾರನ “ಇವನು ಇನ್ನು ಒಂದು ಘಂಟೆಗಳ ಮಲಗುವನು” ಎಂದು ಹೇಳಿ ಮುಂದುವರೆದನು.

ಆ ದಟ್ಟ ಅರಣ್ಯದಿಂದ ಹೊರಬರಲು ದಾರಿ ಸಿಕ್ಕಿದ ತಕ್ಷಣವೇ ರಾಜಕುಮಾರನು ಆ ಸುಂದರ ರಾಜಕುಮಾರಿ, ಹಾಡುಹಕ್ಕಿ, ಗೋಡೆಕೊರೆಯುವ ಜೀರುಂಡೆ, ಶಕ್ತಿಶಾಲಿ ರೆಕ್ಕೆಯ ಚಿಟ್ಟೆ ಇವುಗಳೊಂದಿಗೆ ತನ್ನ ತಂದೆಯ ರಾಜ್ಯಕ್ಕೆ ವಾಪಸ್ಸಾದನು. ಅವನ ತಂದೆ ಹಾಗು ರಾಜ್ಯದ ಜನರೆಲ್ಲರೂ ಅವನನ್ನು ಬಹಳ ಸಂತೋಷದಿಂದ ಸ್ವಾಗತ ಮಾಡಿದರು. ಅವನ ಸಾಹಸಗಳ ಕಥೆಯನ್ನು ಕೇಳಿದ ರಾಜ್ಯದ ವಿದ್ವಾಂಸರೆಲ್ಲರೂ, “ಸುಂದರ ರಾಜಕುಮಾರಿ, ಹಾಡುಹಕ್ಕಿ, ಗೋಡೆಕೊರೆಯುವ ಜೀರುಂಡೆ, ಶಕ್ತಿಶಾಲಿ ರೆಕ್ಕೆಯ ಚಿಟ್ಟೆ ಇವುಗಳನ್ನು ಹೊಂದಿರುವ ನಮ್ಮ ರಾಜಕುಮಾರನು ರಾಜ್ಯದಲ್ಲೇ ಅತ್ಯಂತ ಚತುರನಾಗಿದ್ದಾನೆ ಆದುದರಿಂದ ಇನ್ನು ಮುಂದೆ ಯಾವತ್ತೂ ನಮ್ಮ ರಾಜಕುಮಾರನನ್ನು ಮೂರ್ಖನೆಂದು ಯಾರೂ ಕರೆಯಬಾರದು” ಎಂದು ಘೋಷಿಸಿದರು.

ಅನುವಾದ : ಸುಮ ಅನಿಲ್

ಪ್ರತಿಕ್ರಿಯಿಸಿ