ಅನುವಾದ ೪ : ಧ್ಯಾನಸ್ಥ ಬುದ್ಧನ ಕೈಯಲ್ಲಿನ ಕಮಲ

ಮರಾಠಿ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಮಹಾರಾಷ್ಟ್ರದ ಪ್ರಮುಖ ಯುವ ದಲಿತ ಕವಿ. ಅನುವಾದಕ ಮತ್ತು ಪ್ರಕಾಶಕರೂ ಆಗಿರುವ ಯೋಗೇಶ್ ಮೈತ್ರೇಯ ಅವರ ಐವತ್ತೈದು ಕವನಗಳ ಕನ್ನಡಾನುವಾದ ಪುಸ್ತಕ ‘ಓದುವುದೆಂದರೆ ಸ್ಪರ್ಶಿಸಿದಂತೆ’ ಆಕೃತಿ ಪುಸ್ತಕ ಹೊರತಂದಿದೆ . ಈ ಕವಿತೆಗಳನ್ನು ಸಂವರ್ತ ಸಾಹಿಲ್ ಕನ್ನಡಕ್ಕೆ ತಂದಿದ್ದಾರೆ. ಈ ಕವನ ಸಂಕಲನಕ್ಕೆ ಶಶಿಕುಮಾರ್ ಅವರು ಬರೆದಿರುವ ಮುನ್ನುಡಿ ಋತುಮಾನದಲ್ಲಿ ಇಂದಿನ ಓದಿಗೆ ..

ಈ ಕವನ ಸಂಕಲನ ಋತುಮಾನ ಆಂಡ್ರಾಯ್ಡ್ ಮತ್ತು ಐಫೋನ್ ಮೊಬೈಲ್ ಆ್ಯಪ್ ನಲ್ಲಿ 15 % ರಿಯಾಯಿತಿ ದರದಲ್ಲಿ ಲಭ್ಯವಿದೆ . ಋತುಮಾನ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ .

ಋತುಮಾನ ಸ್ಟೋರ್ ಮಿಂದಾಣದ ಈ ಕೆಳಗಿನ ಕೊಂಡಿಯಲ್ಲೂ ನೀವಿದನ್ನು ಕೊಳ್ಳಬಹುದು . https://store.ruthumana.com/product/oduvdendare-spashisidanthe/

ಇಸವಿ 2012ರ ಮೇ ತಿಂಗಳು. ನಾನು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಕೆಲಸವನ್ನು ಬಿಟ್ಟು ಹೊಸದೆಹಲಿಯ ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್(ಇನ್ನು ಮುಂದೆ ‘ಪ್ರೆಸ್’) ನ ಭಾರತೀಯ ಶಾಖೆಯ ಮುಖ್ಯ ಕಚೇರಿಯನ್ನು ಸೇರಿಕೊಂಡೆ. 2013ರ ಡಿಸೆಂಬರ್ ವೇಳೆಗೆ ಪ್ರೆಸ್ ನ ಪ್ರತಿಷ್ಟಿತ ಅಕಡೆಮಿಕ್ ವಿಭಾಗದಲ್ಲಿ ಅನುವಾದಗಳ ಕಮಿಶನಿಂಗ್ ಎಡಿಟರ್ ಎಂಬ ಜವಾಬ್ದಾರಿಯನ್ನು ನಿರ್ವಹಿಸಿದ ಮೊದಲ ವ್ಯಕ್ತಿಯಾಗಿದ್ದೆ. ನಾನು ಸೇರುವುದಕ್ಕೆ ಮುಂಚೆ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಪ್ರೆಸ್ ನಲ್ಲಿ ಅನುವಾದಗಳನ್ನು ಸಂಪಾದಿಸಿ ಪ್ರಕಟಿಸುತ್ತಿದ್ದ ಒಬ್ಬ ಹಿರಿಯ ಸಂಪಾದಕಿಯೊಬ್ಬರಿಗೆ ನಾನು ಅಲ್ಲಿಗೆ ಸಂಪಾದಕನಾಗಿ ಸೇರಿಕೊಂಡಿದ್ದು ಆಗುತ್ತಿರಲಿಲ್ಲ. ಕಾರಣವೂ ಇಲ್ಲದಿರಲಿಲ್ಲ. ತನ್ನ ಜಾಗವನ್ನು ತನಗಿಂತ ಎರಡು ದಶಕಗಳಷ್ಟು ಕಿರಿಯವನಾದವನು ಆಕ್ರಮಿಸಿಕೊಂಡನಲ್ಲ ಎಂಬ ವೃತ್ತಿ ಸಹಜ ವೈಷಮ್ಯ ಅದು ಎಂಬುದು ನನ್ನ ದೃಢ ನಂಬಿಕೆ. ನಾನು ಪ್ರೆಸ್ ನ ಪೂರ್ಣ ಪ್ರಮಾಣದ ಸಂಪಾದಕನಾಗಿ ಸೇರಿದ ಮೇಲೆ ಆಕೆ ಅನಿವಾರ್ಯವಾಗಿ ಕನ್ಸಲ್ಟೆಂಟ್ ಆಗಿ ಮಾತ್ರ ಕಾರ್ಯನಿರ್ವಹಿಸಬೇಕಾಗಿ ಬಂದಿತ್ತು. ಎರಡು ಮೂರು ದಶಕಗಳ ಕಾಲ ಇಂಗ್ಲಿಶ್ ಅನುವಾದಗಳನ್ನು ಸಂಪಾದಿಸಿದ್ದ ಆಕೆಯಿಂದ ವೃತ್ತಿಗೆ ಸಂಬಂಧಿಸಿದಂತೆ ಏನನ್ನಾದರೂ ಕಲಿಯಬಹುದೆಂಬ ಆಸೆಯಿತ್ತು. ಅದು ಈಡೇರಲು ಸಾಧ್ಯವಿರಲಿಲ್ಲ. ಹುಟ್ಟು ಮಲಯಾಳಿಯಾದರೂ, ಆಕೆಗೆ ಇಂಗ್ಲಿಶ್ ಬಿಟ್ಟು ಬೇರಾವ ಭಾಷೆಯೂ ಸರಿಯಾಗಿ ತಿಳಿದಿರಲಿಲ್ಲ.

ಪ್ರೆಸ್ ನ ಚೆನ್ನೈ ಶಾಖೆಯಿಂದ ಕಾರ್ಯ ನಿರ್ವಹಿಸುತ್ತಿದ್ದ ಆಕೆ, ಒಂದು ದಿನ ನಮಗೆ ಕಳಿಸಬೇಕಾಗಿದ್ದ ಒಂದು ಒಡಿಯ ದಲಿತ ಕೃತಿಯ ಇಂಗ್ಲಿಶ್ ಅನುವಾದದ ಹಸ್ತಪ್ರತಿಯನ್ನು ಕಳಿಸಿಕೊಡುವ ವಿಷಯವಾಗಿ, ಮಿಂಚೆಯಲ್ಲಿ ಒಂದು ಮಾತು ಬರೆದಿದ್ದರು: ಈ ಕೃತಿಯ ಅನುವಾದಕ ಒಬ್ಬ ದಲಿತ. ಡೆಲ್ಲಿ ಯೂನಿವರ್ಸಿಟಿಯಲ್ಲಿ ಇಂಗ್ಲಿಶ್ ಪ್ರೊಫೆಸರ್. ಆತನ ಇಂಗ್ಲಿಶ್ ತಿದ್ದುವ ತನಕ ಸಾಕಾಗಿ ಹೋಯಿತು. ನಾನು ಬೇಕೆಂದೇ, ಕಾಂಚ ಐಲಯ್ಯನಂತಹ ಲೇಖಕರು ಚೆನ್ನಾಗೇ ಬರೆಯುತ್ತಾರಲ್ಲ ಎಂದೆ. ಅದಕ್ಕವರು ಐಲಯ್ಯನವರ ಇಂಗ್ಲಿಷ್ ಹೇಗಿದೆ ಎಂದು ಒಮ್ಮೆ ‘ನವಯಾನ’ ಆನಂದನನ್ನು ಕೇಳು ಎಂದು ಹೇಳಿದರು. ಆಕೆಯ ಧೋರಣೆ ಬಲ್ಲವನಾಗಿದ್ದರಿಂದ ನಾನು ಹಾಗೆ ಮಾಡಲು ಹೋಗಲಿಲ್ಲವೆನ್ನುವುದು ಬೇರೆ ಮಾತು.

ಅಂದಿನಿಂದ ದಲಿತರಿಗೆ “ಇಂಗ್ಲಿಶ್ ನಲ್ಲಿ ಬರೆಯಲು ಬರುವುದಿಲ್ಲ” ಎಂದು ಆಕೆ ಹೇಳಿದ ಮಾತು ರಿಂಗಣಿಸಲಾರಂಭಿಸಿತು. ದೇಶಕ್ಕೆ ಸಂವಿಧಾನ ರೂಪಿಸಿಕೊಟ್ಟ ಅಂಬೇಡ್ಕರ್ ಕೂಡ ಒಬ್ಬ ದಲಿತನೇ ತಾನೇ ಎಂಬ ಪ್ರಶ್ನೆ ಹುಟ್ಟಿಕೊಂಡಿತಾದರೂ, ಅದು ತಕ್ಷಣವೇ ನಿವಾರಣೆಯಾಗಿಬಿಟ್ಟಿತು. ಕಾರಣ, ಸಂವಿಧಾನದ ಕರಡು ಮಾಡಿಕೊಟ್ಟವರು ಸರ್ ಬೆನಗಲ್ ನರಸಿಂಗ ರಾವ್ ಅವರು. ಅಂಬೇಡ್ಕರ್ ಬರೀ ಅದನ್ನು ಅನುಮೋದಿಸಿದ್ದಷ್ಟೆ ಎಂಬ ಒಂದು ಸವರ್ಣೀಯ ವಾದ ಅಂದಿನಿಂದ ಇಂದಿನವರೆಗೂ ಹರಿದಾಡುತ್ತಿರುವುದನ್ನು ನಾವು ಕಂಡೇ ಇದ್ದೇವೆ. ಇಂತಹ ವಾದಗಳ ಹಿಂದೆ ಇರುವುದು ಎಂತಹ ಮನಸ್ಥಿತಿ ಎಂಬುದನ್ನು ಇಲ್ಲಿ ವಿಶೇಷವಾಗಿ ಹೇಳಬೇಕಾಗಿಲ್ಲ.

ಮೇಲೆ ಹೆಸರಿಸಲಾದ ಸಂಪಾದಕರು, ತಮ್ಮ ಮಾತನ್ನು ಅಲ್ಲಿಗೇ ಮುಗಿಸಿರಲಿಲ್ಲ. ‘ಕರುಕ್ಕು’(ತಾಳೆ ಎಲೆಗಳು) ಎಂಬ ಕೃತಿಯ ಮೂಲಕ ಹೆಸರಾದ ಭಾಮ ಎಂಬ ಕ್ಯಾಥೋಲಿಕ್ ಕ್ರೈಸ್ತ ಕುಟುಂಬದಿಂದ ಬಂದ ತಮಿಳು ದಲಿತ ಲೇಖಕಿಯ ಕುರಿತು ಕೂಡ ಟೀಕೆ ಮಾಡಿದ್ದರು. ನಿನ್ನ ಪುಸ್ತಕವನ್ನು ಇಂಗ್ಲಿಶ್ ಗೆ ಅನುವಾದ ಮಾಡಿಸಬೇಕೆಂದಿದ್ದೇನೆ, ನನ್ನನ್ನೊಮ್ಮೆ ಬಂದು ಕಾಣು ಎಂದು ಅವಳಿಗೆ ಹೇಳಿದ್ದೆ, ಅವಳ ಹತ್ತಿರ ಚೆನ್ನೈನ ನಮ್ಮ ಆಫೀಸಿಗೆ ಬರಲು ಕೂಡ ಹಣವಿರಲಿಲ್ಲ. ಆದರೆ, ನಾನು ಅವಳ ತಮಿಳು ಕೃತಿಯ ಇಂಗ್ಲಿಶ್ ಅನುವಾದ ಮಾಡಿಸಿದ್ದೇ ಮಾಡಿಸಿದ್ದು, ಇಂದು ವಿಶ್ವದ ಮೂಲೆಮೂಲೆಗಳಿಂದ ಅವಳಿಗೆ ಆಹ್ವಾನ ಬರುತ್ತದೆ. ಸಾಲದ್ದಕ್ಕೆ ಇಂಗ್ಲಿಶ್ ಅನುವಾದಕ್ಕೆ ಬಂದ ಹಣ, ಪ್ರಶಸ್ತಿ, ಪುರಸ್ಕಾರ, ಮನ್ನಣೆಗಳಿಂದ ಅವಳು ಸ್ವಂತ ಮನೆಯನ್ನೂ ಕಟ್ಟಿಕೊಂಡಿದ್ದಾಳೆ ಎಂದು ಹೇಳಿದ್ದರು.

ಈ ನನ್ನ ಸಂಪಾದಕ ಸಹೋದ್ಯೋಗಿ ಜಾತಿಯಿಂದ ಬ್ರಾಹ್ಮಣಳಲ್ಲದಿದ್ದರೂ, ಆಕೆಯ ಮಾತುಗಳ ಹಿಂದಿನ ಬ್ರಾಹ್ಮಣ್ಯದ ದನಿ ಗೊತ್ತಾಗದೆ ಇರಲಿಲ್ಲ. ಬ್ರಾಹ್ಮಣ್ಯವೆನ್ನುವುದು ನಮ್ಮ ಸಮಾಜದಲ್ಲಿ ಜಾತಿಕುಲಗಳೆಲ್ಲವನ್ನು ಮೀರಿ ಆಳವಾಗಿ ಬೇರೂರಿರುವುಂತಹದ್ದು.

ಭಾಮ, ಒಂದು ವೇಳೆ ತನ್ನ ಅನುಭವಗಳನ್ನು ತಮಿಳಿನಲ್ಲಿ ದಾಖಲಿಸಿಯೇ ಇರಲಿಲ್ಲವೆಂದಾದಲ್ಲಿ,..

ಒಂದು ವೇಳೆ ದಾಖಲಿಸಿದ್ದರೂ, ಅದನ್ನು ಇಂಗ್ಲಿಶ್ ಗೆ ಅನುವಾದಿಸಬೇಕೆನಿಸುವಷ್ಟು ಗಟ್ಟಿಯಾಗಿರಲಿಲ್ಲವೆಂದಾದಲ್ಲಿ…

***** 

ಇಸವಿ 2015ರ ಡಿಸೆಂಬರ್ ತಿಂಗಳು. ತಾರೀಕು 17-19, ಹೊಸದೆಹಲಿ. ಇಂಗ್ಲೆಂಡ್ ನ ನಾಟಿಂಗ್ ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯ, ಫ್ರಾನ್ಸ್  ನ  ಪಾಲ್ ವೆಲೆರಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ದೆಹಲಿ ವಿಶ್ವವಿದ್ಯಾಲಯ ಆಯೋಜಿಸಿದ್ದ ‘ದಲಿತ ಸಾಹಿತ್ಯ ಪ್ರಕಾಶನ ಹಾಗೂ ಪ್ರಚಾರ’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ. ನನ್ನನ್ನು ದಲಿತ ಸ್ತ್ರೀವಾದ ಪ್ರಕಾಶನ ಕುರಿತಂತೆ ಪ್ರಬಂಧ ಮಂಡಿಸಲು ಆಹ್ವಾನಿಸಲಾಗಿತ್ತು. ಮೂರು ದಿನಗಳ ಕಾಲ ನಡೆದ ಸಮ್ಮೇಳನದ ಒಂದು ಗೋಷ್ಠಿಯಲ್ಲಿ ತಮಿಳಿನ ಬರಹಗಾರರಾದ ಸೋ. ಧರ್ಮನ್ ಎಂದೇ ಹೆಸರಾಗಿರುವ ಎಸ್. ಧರ್ಮರಾಜ್, ತಾವು ಬರೆಹಗಾರರಾಗಿ ರೂಪುಗೊಂಡಿದ್ದು ಹೇಗೆ ಎಂಬುದನ್ನು ವಿವರಿಸುತ್ತಿದ್ದರು. ಇವರ ‘ಕೂಗೈ’(ಕನ್ನಡದಲ್ಲಿ ‘ಗೂಬೆ’) ಕಾದಂಬರಿಯ ಇಂಗ್ಲಿಶ್ ಅನುವಾದವನ್ನು ಅದೇ ತಾನೇ ಆಕ್ಸ್ ಫರ್ಡ್ ಯೂನಿವರ್ಟಿಸಿ ಪ್ರಕಟಿಸಿತ್ತು. ತನ್ನನ್ನು ದಲಿತ ಲೇಖಕ ಎಂದು ಗುರುತಿಸುವ ಬಗ್ಗೆ ಅವರು ತಕರಾರೆತ್ತಿದ್ದರು. ನಾನು ದಲಿತರ ಮೇಲಿನ ದೌರ್ಜನ್ಯ, ಕ್ರೌರ್ಯದ ಕುರಿತಾಗಿಯೇ ಬರೆಯುತ್ತೇನಾದರೂ, ಅಲ್ಲಿ ಎಲ್ಲ ಜಾತಿ, ಮತ, ಧರ್ಮಗಳವರೂ ಇದ್ದಾರೆ ಎಂಬುದನ್ನು ಮರೆಯಬಾರದು. ನಾನು ಎಲ್ಲರ ಬಗ್ಗೆಯೂ ಬರೆಯುವೆನಾದ್ದರಿಂದ ನಾನು ಕೇವಲ ದಲಿತ ಲೇಖಕನಾಗಲು ಹೇಗೆ ಸಾಧ್ಯ? ಎಂಬ ಪ್ರಶ್ನೆಯನ್ನೆತ್ತಿದ್ದರು. ಬ್ರಾಹ್ಮಣರು ಅಥವಾ ಮೇಲ್ಜಾತಿಗಳೆಂದು ಕರೆದುಕೊಳ್ಳುವವರ ಬದುಕಿನ ಬಗ್ಗೆ ಬರೆವ ಲೇಖಕರನ್ನು ಮಾತ್ರ ಸಾಹಿತಿ ಎಂದು ಕರೆಯುವುದೇಕೆ? ಅವರನ್ನು ಯಾಕೆ ಅವರ ಜಾತಿಗಳ ಮೂಲಕ ಗುರುತಿಸುವುದಿಲ್ಲ? ಮತ್ತೊಂದು ಗೋಷ್ಟಿಯಲ್ಲಿ ಬಂಗಾಳಿ ದಲಿತ ಲೇಖಕ ಮನೋರಂಜನ್ ಬ್ಯಾಪಾರಿ ಕೂಡ ಇಂತಹದ್ದೇ ಪ್ರಶ್ನೆಯನ್ನೆಸೆದಿದ್ದರು.

ಧರ್ಮನ್ ತಮ್ಮ ಗೋಷ್ಟಿಯಲ್ಲಿ ಮಾತು ಮುಗಿಸಿದ ಮೇಲೆ ಇಂಗ್ಲೆಂಡಿನಲ್ಲಿ ಪಿಎಚ್ಡಿ ಮಾಡುತ್ತಿದ್ದ ಕನ್ನಡ ಮೂಲದ ಹುಡುಗಿಯೊಬ್ಬಳು ಅವರನ್ನೊಂದು ಪ್ರಶ್ನೆ ಕೇಳಿದಳು: “ನಿಮ್ಮ ಟಾರ್ಗೆಟ್ ರೀಡರ್ ಯಾರು?” ಅವಳ ಹೆಸರಿನೊಂದಿಗೆ ಸೇರಿದ್ದ ಸರ್ ನೇಮ್, ಅವಳು ಬ್ರಾಹ್ಮಣಳು ಎಂಬುದನ್ನು ಸೂಚಿಸುತ್ತಿದ್ದರಿಂದ ಆ ಪ್ರಶ್ನೆಗೆ ವಿಶೇಷವಾದ ಅರ್ಥ ಸೇರಿಕೊಂಡಿತ್ತು…

*****

ಇದೇ ಸಮ್ಮೇಳನದಲ್ಲಿ ನಡೆದ ಮತ್ತೊಂದು ಘಟನೆಯನ್ನು ಇಲ್ಲಿ ಹೇಳಲೇಬೇಕು. ಶುರುವಿನಲ್ಲಿ ಹೆಸರಿಸಿದ ‘ನವಯಾನ’ ಅನಂದ್, ಇದುವರೆಗೆ ದಲಿತ ಅಧ್ಯಯನಕ್ಕೆ ಸಂಬಂಧಿಸಿದಂತೆ ಅತ್ಯುತ್ತಮವಾದ ಕೃತಿಗಳನ್ನು ಪ್ರಕಟಿಸಿರುವ ಅಗ್ಗಳಿಕೆ ಹೊಂದಿದ್ದಾರೆ. ಬಾಬಾಸಾಹೇಬರ Annihilation of Caste ಕೃತಿಗೆ ಅರುಂಧತಿ ರಾಯ್ ಅವರಿಂದ ವಿವಾದಾಸ್ಪದವಾದ ಸುದೀರ್ಘ ಪ್ರಸ್ತಾವನೆ ಬರೆಸಿದ್ದರ ಹಿಂದಿನ ರಾಜಕೀಯದ ಬಗ್ಗೆ ಹೇಳುವುದು ಇಲ್ಲಿ ಅಪ್ರಸ್ತುತವಾಗುವುದರಿಂದ ಇಲ್ಲಿ ಅದನ್ನು ಹೇಳಬೇಕಾದ ಅಗತ್ಯವಿಲ್ಲ. ಆದರೆ, ಆತ ಪ್ರಕಟಿಸಿದ ‘ಭೀಮಯಾನ’ ಕೃತಿಯಲ್ಲಿ ಬಾಬಾಸಾಹೇಬರ ಬದುಕನ್ನು ತಮ್ಮ ಕಲೆಯ ಮೂಲಕ ಅನಾವರಣಗೊಳಿಸಿದವರು ಮಧ್ಯಪ್ರದೇಶದ ಗೊಂಡ್ ಬುಡಕಟ್ಟಿನ ಕಲಾವಿದರು. ಅವರಿಗೆ ಇಂಗ್ಲಿಶ್ ಬರುವುದಿಲ್ಲ ಎಂಬುದನ್ನೇ ಫಾಯ್ದೆಯಾಗಿ ಮಾಡಿಕೊಂಡ ಆನಂದ್, ಇಡೀ ಕೃತಿಯನ್ನು ರೂಪಿಸಿದ್ದು ನಾನೇ ಎಂಬಂತೆ ಆ ಸಮ್ಮೇಳನದಲ್ಲಿ ಬಿಂಬಿಸತೊಡಗಿದ್ದು(ಇಂಗ್ಲಿಶ್ ನಲ್ಲಿ ಹೇಳುವುದಾದರೆ patronize ಮಾಡತೊಡಗಿದ್ದನ್ನು) ಅಲ್ಲಿ ನೆರೆದಿದ್ದವರಲ್ಲಿ ಕೆಲವರಿಗಾದರೂ ಕಾಣಿಸಿತ್ತು. ಆ ಕೆಲವರಲ್ಲಿ ದಲಿತ ಪ್ರೊಫೆಸರ್ ಗಳು ಕೂಡ ಸೇರಿದ್ದರಾದರೂ, ಅವರ ಪುಸ್ತಕಗಳನ್ನು ಆನಂದ್ ಪ್ರಕಟಿಸಿದ್ದರಿಂದ ಅದರ ಬಗ್ಗೆ ಅವರು ಸೊಲ್ಲೆತ್ತಲಿಲ್ಲ!

***********

ಯೋಗೇಶ್ ಮೈತ್ರೇಯ, ಇಂಗ್ಲಿಶ್ ಭಾಷೆಯಲ್ಲಿ ಬರೆಯುತ್ತಿರುವ ಮೊದಲ ದಲಿತ ಕವಿ? ಎಂದಿಟ್ಟುಕೊಳ್ಳೋಣ. ಆಗ, ಶುರುವಿನಲ್ಲಿ ಹೇಳಲಾದ ಸಂಪಾದಕಿಯ ಕೊಂಕಿಗೆ ಇದು ಉತ್ತರವಾಗುವುದೇ? ಅಲ್ಲಿಂದ ಎರಡನೇ ಪ್ರಶ್ನೆಗೆ ಬರೋಣ. ಇಂಗ್ಲಿಶ್ ನಲ್ಲಿ ಕವಿತೆ ಬರೆವ ಆತನ ‘ಟಾರ್ಗೆಟ್ ರೀಡರ್’ ಯಾರು? ಈತನ ಕವಿತೆಗಳನ್ನು ಓದುವವರಾರು? ಆತನ ಕವನ ಸಂಕಲನವನ್ನು ಕೊಂಡು ಓದುವರಾರು?

ಸವರ್ಣೀಯ ಧಾಟಿಯ ಒಂದು ಪ್ರಶ್ನೆ ಕೇಳುವುದಾದರೆ, ಆತ ಯಾಕಾದರೂ ತನ್ನದಲ್ಲದ ಇಂಗ್ಲಿಶ್ ನಲ್ಲಿ ಬರೆಯಬೇಕು? ತಾಯ್ನುಡಿಯಲ್ಲಷ್ಟೇ ತನ್ನ ಅನುಭವವನ್ನು ‘ಅಥೆಂಟಿಕ್’ ಆಗಿ ದಾಖಲಿಸಲು ಸಾಧ್ಯ ಎಂಬ ವಾದವಿರುವಾಗ, ಆತ ಇಂಗ್ಲಿಶ್ ನಲ್ಲಿ ಬರೆದು ಅದನ್ನು ಕನ್ನಡಕ್ಕೆ ಒಗ್ಗಿಸಿದರೆ ಅದರಲ್ಲಿ ಉಳಿಯುವುದಾದರೂ ಏನು?

ಈ ಪ್ರಶ್ನೆಗಳನ್ನು ಇಲ್ಲಿ ಯಾಕೆ ಕೇಳಿಕೊಳ್ಳಬೇಕಾಗಿದೆಯೆಂದರೆ, ಇಲ್ಲಿಯವರೆಗೆ, ಸಾಮಾನ್ಯವಾಗಿ ತಮ್ಮ ಅನುಭವಲೋಕವನ್ನು ಭಾರತೀಯ ಭಾಷೆಗಳಲ್ಲೇ ಕಾಣಿಸುತ್ತಾ ಬಂದಿರುವ ದಲಿತ ಸಾಹಿತ್ಯ, ಇದ್ದಕ್ಕಿದ್ದ ಹಾಗೆ ಇಂಗ್ಲಿಶ್ ನಲ್ಲಿ ವ್ಯಕ್ತಪಡಿಸಲಾರಂಭಿಸಿದರೆ, ತಮ್ಮ ಅನುಭವಕ್ಕೆ ದಕ್ಕದ್ದನ್ನು ಅನುವಾದಿಸುವ ಮೂಲಕ ತಮ್ಮದಾಗಿಸಿಕೊಳ್ಳುತ್ತಿರುವ ಸವರ್ಣೀಯರಿಗೆ ಹೇಗನ್ನಿಸಬೇಡ?.

ಭಾರತೀಯ ಭಾಷೆಗಳಲ್ಲಿ ಪ್ರಕಟವಾಗುವ ‘ದಲಿತ ಸಾಹಿತ್ಯ’ವನ್ನು ಇಂಗ್ಲಿಶ್ ಗೆ ಅನುವಾದಿಸಿಕೊಳ್ಳುವ ಮೂಲಕವಷ್ಟೇ ವಿಶ್ವವಿದ್ಯಾಲಯಗಳ ಅನೇಕ ವಿಭಾಗಗಳು, ವಿಶೇಷವಾಗಿ ಇಂಗ್ಲಿಶ್ ವಿಭಾಗಗಳು ಅಧ್ಯಯನ ಮಾಡುತ್ತಿವೆ. ಆಫ್ರಿಕನ್ ಅಮೆರಿಕನ್ ಬರೆಹಗಾರರ ಹಾಗೆ ಒಂದು ವೇಳೆ ದಲಿತರೆಲ್ಲರೂ  ಇಂಗ್ಲಿಶ್ ನಲ್ಲೇ ಮೊದಲು ಬರೆದು ಪ್ರಕಟಿಸಿದರೆ?

*****

ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯಾದ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ನಲ್ಲಿ ಪಿಎಚ್ಡಿ ಮಾಡುತ್ತಿರುವ ಯೋಗೇಶ್ ಮೈತ್ರೇಯ, ಅದರ ಜೊತೆಯಲ್ಲೇ ದಲಿತ ಸಾಹಿತ್ಯವನ್ನು ಪ್ರಕಟಿಸಿ, ಪ್ರಚುರಪಡಿಸಲೆಂದೇ  ಪ್ಯಾಂಥರ್ಸ್ ಪಾ ಪಬ್ಲಿಕೇಶನ್ ಎಂಬ ಪ್ರಕಾಶನ ಸಂಸ್ಥೆಯನ್ನೂ ಹುಟ್ಟಿಹಾಕಿದ್ದಾರೆ. ಜಾತಿತಾರತಮ್ಯ ಕುರಿತು ಪ್ರಮುಖ ಇಂಗ್ಲಿಶ್ ಆನ್ ಲೈನ್ ಪೋರ್ಟಲ್ ಗಳಲ್ಲಿ ನಿರಂತರವಾಗಿ ಅಂಕಣ ಲೇಖನಗಳನ್ನು ಕೂಡ ಪ್ರಕಟಿಸುತ್ತಾ ಜನಪ್ರಿಯರಾಗಿದ್ದಾರೆ ಕೂಡ.

ಯೋಗೇಶ್ ರ ಕವನಗಳ ಒಡಲಿಗೆ ಬರುವುದಾದರೆ, ಪ್ರತಿ ಕವನವನ್ನು ಓದುವಾಗಲೂ ಅಯ್ಯೋ ಮುಗಿದೇ ಹೋಯಿತಲ್ಲ ಎಂದೆನಿಸದಿರಲಾರದು. ಅಷ್ಟು ಚುಟುಕಾಗಿವೆ ಇಲ್ಲಿನ ಹೆಸರಿಲ್ಲದ ಕವನಗಳು. ಎಲ್ಲ ಕವನಗಳು ಗಟ್ಟಿಯಾಗಿವೆ, ಪರಿಣಾಮಕಾರಿಯಾಗಿವೆ ಎಂದಾಗಲಿ, ಈ ಕವನ ಸಂಕಲನ ಕನ್ನಡ ದಲಿತ ಸಾಹಿತ್ಯದ ದಿಕ್ಕು ಬದಲಿಸಬಲ್ಲದು ಎಂದು ಹೇಳಲಾಗದಿದ್ದರೂ, ಒಂದು ಹೊಸ ನುಡಿಗಟ್ಟನ್ನು ನೀಡುವಲ್ಲಿ ಸಫಲವಾಗಿದೆಯೆಂದೇ ಹೇಳಬಹುದು. ಇಂಗ್ಲಿಶ್ ನಲ್ಲೇ ಬರೆದಿದ್ದರೂ, ಕನ್ನಡಾನುವಾದದಲ್ಲಿ ಅದರ ಲಯ ಮಾತ್ರ ಉರ್ದುವಿನದು ಎಂದೆನಿಸಲು ಕಾರಣ, ಬಹುಶಃ, ಸಂವರ್ತ, ಉರ್ದು ಕವಿಯಾಗಿರುವುದೇನೋ ಎಂಬ ಅನುಮಾನ ನನಗೆ !

ಈ ಕವನ ಸಂಕಲನವನ್ನಿಲ್ಲಿ ಚರ್ಚಿಸಹೊರಟರೆ, ಒಂದು ನಿರ್ದಿಷ್ಟ ರೀತಿಯ ಓದಿಗೆ ಓದುಗರನ್ನು ಸಿಲುಕಿಸಿದಂತಾಗಿಬಿಡುತ್ತದೆ.  ಆ ಕಾರಣಕ್ಕೆ, ಶೀರ್ಷಿಕೆಯನ್ನೇ ಹೊಂದದೆ, ನೀವು ಕೊಟ್ಟಿದ್ದೇ ಶೀರ್ಷಿಕೆ ಎಂದು ಓದುಗರನ್ನು ಕೆಣಕುವಂತಿರುವ ಈ ಕವನಗಳು, ನನಗೆ ಯಾಕೆ ಮುಖ್ಯವೆನಿಸುತ್ತವೆ ಎಂದಷ್ಟೇ ಇಲ್ಲಿ ಹೇಳಬಲ್ಲೆ.

ಯೋಗೇಶ್ ಅವರ ಕವನಗಳಲ್ಲಿ ಕೇವಲ ‘ದಲಿತತ್ವ’ ಹುಡುಕವವರಿಗೆ ಕೊಂಚ ನಿರಾಸೆಯಾಗಬಹುದೇನೋ. ಏಕೆಂದರೆ, ಅವರು ಅದನ್ನು ಪರಿಭಾವಿಸಿರುವ ರೀತಿ ಬೇರೆ. ಅದನ್ನು ‘ಸ್ತ್ರೀ ಪ್ರೇಮತತ್ವ’ ಎಂದು ಕರೆಯಬಹುದೇನೋ. ಈ ತತ್ವ ಅವರ ಕವನಗಳಲ್ಲಿ ಎಷ್ಟರ ಮಟ್ಟಿಗೆ ಆಳವಾಗಿ ಬೇರೂರಿದೆ ಎಂದರೆ, ತನ್ನೊಳಗಿನ ಗಂಡುಸೊಕ್ಕಿಗೆ ಸವಾಲೆಸೆಯುತ್ತಲೇ ಹೆಣ್ಣುವಾದವನ್ನು ಮುಂದಿಡುತ್ತಾ ಹೋಗುತ್ತದೆ. ಹಾಗಾಗಿಯೇ, ಅವರು

          ನಮ್ಮ ಬಳಿ ಇರುವ ಎಲ್ಲಾ

          ಕಾಂಡೊಮ್

          ನಾನು ಬಳಸುವುದಿಲ್ಲ, ಖಾಲಿ ಮಾಡುವುದಿಲ್ಲ

          ನಾನಿಲ್ಲದಾಗ ನೀನು ಅವನ್ನು

          ಬಳಸಬೇಕು

ಎಂದು ಹೇಳುವಾಗ,

       ಶೋಷಣೆಯ ಲೋಕದಲ್ಲಿ

       ಎಲ್ಲಾ ಮಹಿಳೆಯರು ಸಮಾನದುಃಖಿಗಳು ಎಂದು ನಂಬಿದವರು

       ಅರ್ಜಿ ಸಲ್ಲಿಸಬೇಕಾಗಿಲ್ಲ

ಎಂದು ಹೇಳುವಾಗ,

       ನನ್ನಜ್ಜನ ಬಳಿ ಸುತ್ತಿಗೆ ಇತ್ತು

       ನನ್ನಪ್ಪನ ಕೈಯಲ್ಲಿ ಗಾಲಿ

       ನನ್ನ ಕೈಯಲ್ಲಿ ಲೇಖನಿ

       ಆದರೆ ನಾವು ಬರೆಯುತ್ತಿರುವುದು ಮಾತ್ರ ಅದನ್ನೇ…

       ನಮ್ಮ ತಾಯಿಯಿಂದ ಪಡೆದ ದನಿ

       ನಮ್ಮ ಬದುಕಿನ ಇತಿಹಾಸದಲ್ಲಿ ಕಾಣೆಯಾದ ದನಿ.

ಎಂದು ಹೇಳುವಾಗ, ಕೇಳಿಸುವ ದನಿ ಮಾತ್ರ ಹೆಣ್ಣಿನದೇ.

ಮೇಲೆ ‘ಸ್ತ್ರೀಪ್ರೇಮತತ್ವ’ದ ಮಾತಾಡಿದೆ. ಈಗ ಈ ಕವನವನ್ನೊಮ್ಮೆ ಓದಿ ನೋಡಿ:

                   ರಕ್ತ, ಬೆವರು ಮತ್ತು ಕ್ರೋಧದಿಂದ

                   ನಾವು ಸೃಷ್ಟಿಸಿದ ಪ್ರೀತಿಯ ಹೂವನ್ನು ಬಿಟ್ಟು

                  ನೀ ಹೊರನಡೆದಾಗ

                  ಧ್ಯಾನಸ್ಥ ಬುದ್ಧನ ಕೈಯಲ್ಲಿರುವ ಕಮಲವಾಗುವೆ

ಶತಶತಮಾನಗಳಿಂದಲೂ ಅವಮಾನ, ಅತ್ಯಾಚಾರ, ನಿಂದನೆ, ಹಿಂಸೆ, ದೌರ್ಜನ್ಯ, ಕೊಲೆ, ಸುಲಿಗೆ ಎಲ್ಲದಕ್ಕೂ ಒಳಗಾಗುತ್ತಲೇ ಬಂದಿದ್ದರೂ, ದಲಿತರು ಇಲ್ಲಿಯವರೆಗೆ ಯಾರ ಮೇಲೂ ಪ್ರತೀಕಾರ ತೀರಿಸಿಕೊಳ್ಳಲು ಹೋಗಿಲ್ಲ. ಹಾಗೆ ತೀರಿಸಿಕೊಳ್ಳಲು ಹೊರಟಿದ್ದರೆ ಇಂದು ಅವರನ್ನು ತುಳಿದವರಾರೂ ಉಳಿಯುತ್ತಿರಲಿಲ್ಲವೇನೋ. ಅವರ ಸಂಯಮ, ಶಾಂತಿ, ಸಹನೆ ಮತ್ತು ಮಾನವೀಯತೆಗೆ ಕಾರಣ. ಆದರ ಹಿಂದೆ ಇರುವುದು ಬುದ್ಧತತ್ವವಲ್ಲದೆ ಮತ್ತೇನು?

ವಿಮರ್ಶಕರಾದ ಸುರೇಶ್ ನಾಗಲಮಡಿಕೆಯವರು ಹೊಸ ತಲೆಮಾರಿನ ಕಾವ್ಯ ಕುರಿತು ಪ್ರಕಟಿಸಿರುವ ‘ಹಲವು ಬಣ್ಣದ ಹಗ್ಗ’(2018) ಕೃತಿಯಲ್ಲಿ ‘ದಲಿತ ಮೀಮಾಂಸೆ ಮತ್ತು ಈಚಿನ ಕಾವ್ಯದ ಒಲವುಗಳು’ ಬರೆಹದ ಅಡಿಯಲ್ಲಿ ಚರ್ಚಿಸುವ “ವೈಯುಕ್ತಿಕ ಸಂಬಂಧಗಳ ಮುಖೇನ ಸಾಮಾಜಿಕ ಮತ್ತು ರಾಜಕೀಯ ನೆಲೆಗಳಿಗೆ ಜಿಗಿತ” ಕಾಣುವ ಅನೇಕ ಕವನಗಳು ಈ ಸಂಕಲನದಲ್ಲಿ ಕಾಣಿಸುತ್ತವೆ. ಅಂತಹ ಕವನಗಳಲ್ಲೆಲ್ಲ ಕನ್ನಡದ ದಲಿತ ಕವಿಗಳಾದ ಎನ್ಕೆ, ಮಂಜುನಾಥ ವಿ.ಎಂ. ಕಂಡರೆ ಅಚ್ಚರಿಯೇನಿಲ್ಲ!

ದಲಿತನಾಗಿ ಹುಟ್ಟಿ ನೆಲದ ನುಡಿಯಲ್ಲಿ ಬರೆಯುವುದನ್ನು ಬಿಟ್ಟು ಇಂಗ್ಲಿಶ್ ನಲ್ಲಿ ಯಾಕೆ ಬರೆಯಬೇಕು? ಎಂಬ ಪ್ರಶ್ನೆ ಯಾರಿಗಾದರೂ ಬಂದಲ್ಲಿ ಅವರೊಮ್ಮೆ ಈ ಕವನ ಓದಲಿ.

ಅಪ್ಪ ನನಗಾಗಿ ಹಾಡು ಹಾಡುತ್ತಿದ್ದ

ಅವನಪ್ಪ ಅವನಿಗೆ ಕಲಿಸಿದ ಭಾಷೆಯಲ್ಲಿ

ಹಾಗಾಗಿ ಆ ಹಾಡಿನಲ್ಲಿ

ರೋಷಕ್ಕೊಂದು ಸ್ಪಷ್ಟತೆಯಿತ್ತು,

ಪ್ರೇಮಕ್ಕೆ ಬೆರಗು.

ನಾನೋ ಸ್ವಲ್ಪ ಲೋಭಿಯಾಗಿ ಬೆಳೆದೆ

ಇಂಗ್ಲಿಷ್ ಭಾಷೆಯಲ್ಲಿ ಬರೆದೆ, ಬರೆಯುತ್ತ ಹೋದೆ

ಕೊನೆಗೆ ಅಪ್ಪನ ಮಾತುಗಳ ಸ್ವರ ನನ್ನ ಮಟ್ಟಿಗೆ ಕೇಳಿಸದೇ ಹೋಯಿತು

ಆತನ ಹಾಡಿಗೆ ನಾ ಕಿವುಡನಾದೆ, ನಾನು ನಿಕೃಷ್ಟನಾದೆ

ಇಂದು ನಾನಂದುಕೊಳ್ಳುತ್ತೇನೆ,

ನನಗೊಂದು ವೇಳೆ ಮಗನೋ ಮಗಳೋ ಹುಟ್ಟಿದರೆ

ಅವರಿಗೆ ಯಾವ ಹಾಡ ಹಾಡಲಿ?

ಯಾವ ಭಾಷೆಯ ಹಾಡುಗಳನ್ನು ಹಾಡಲಿ?

ಮಹಾರ್ ಕುಟುಂಬದಲ್ಲಿ ಹುಟ್ಟಿ, ಮರಾಠಿ ಭಾಷೆಯನ್ನಾಡುತ್ತಾ ಬೆಳೆದು, ಇಂಗ್ಲಿಶ್ ಭಾಶೆಯಲ್ಲಿ ಬರೆಯುವ, ಯೋಗೇಶ್, ಅದರ ಬಗ್ಗೆ ತಮಗೇನನ್ನಿಸುತ್ತದೆಂಬುದನ್ನು ಈ ಕವನದಲ್ಲಿ ವ್ಯಕ್ತಪಡಿಸಿರುವುದನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಬೇಕು.

ನನಗಂತೂ ಕೆಲ ದಲಿತ ಸಾಹಿತಿಗಳು ತಮ್ಮ ಕೃತಿಗಳನ್ನು ಬ್ರಾಹ್ಮಣರಾರಾದರೂ(ಯಾಕೆಂದರೆ, ಬ್ರಾಹ್ಮಣರಿಗೆ ಮಾತ್ರ ಇಂಗ್ಲಿಶ್ ಬಲ್ಲರು ಎಂಬ ನಂಬಿಕೆ ಆಳವಾಗಿ ಬೇಳೂರಿರುವುದರಿಂದ) ಇಂಗ್ಲಿಶ್ ಗೆ ಅನುವಾದಿಸಿದರೆ ಸಾಕು ಎಂದು ಹಂಬಲಿಸುವುದನ್ನು ಕಂಡಾಗ ದಲಿತರಲ್ಲಿ ಕೆಲವರಾದರೂ ಇಂಗ್ಲಿಶ್ ನಲ್ಲಿ ಬರೆಯುವ ಮೂಲಕ ‘ಇಂಗ್ಲಿಶ್ ಬ್ರಾಹ್ಮಣಿಕೆ’ಗೆ ಒಂದು ದಿಟ್ಟ ಉತ್ತರ ನೀಡಲೆಂದೇ ಆಶಿಸುತ್ತೇನೆ.

****

ಯೋಗೇಶ್ ಮೈತ್ರೇಯ ಅವರ ಕವನಗಳನ್ನು ಗಮನಿಸುವಂತೆ ಕೇರಳ ಮೂಲದ, ಆದರೆ ಇಂಗ್ಲಿಶ್ ನಲ್ಲಿ ಬರೆಯುವ ಮತ್ತೊಬ್ಬ ದಲಿತ ಕವಿ ಚಂದ್ರಮೋಹನ್ ಸತ್ಯನಾಥನ್ ಎರಡು ಮೂರು ವರ್ಷಗಳ ಕೆಳಗೆ ಹೇಳಿದ್ದುಂಟು. ಅದರಂತೆ ನಾನೂ ಕೆಲವು ಪದ್ಯಗಳನ್ನು ಓದಿ, ಅನುವಾದಿಸಬೇಕೆಂದು ಯೋಚಿಸುತ್ತಿರುವಾಗಲೇ ಯೋಗೇಶ್ ರ ಕವನಗಳ ಕನ್ನಡಾನುವಾದವನ್ನು ಸಂವರ್ತ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರಿಂದಾಗಿ ನನ್ನ ಯೋಜನೆಯನ್ನು ಕೈಬಿಡಬೇಕಾಯಿತು. ಅದರಿಂದ ನನಗೆ ನಿರಾಸೆಗಿಂತ ಹೆಚ್ಚು ಸಂತಸವೇ ಆಯಿತು. ಕಾರಣ, ಸ್ವತಃ ಕವಿಯಾಗಿರುವ ಸಂವರ್ತ, ನನಗಿಂತಲೂ ಹೆಚ್ಚಿನ ನ್ಯಾಯವನ್ನು ಸಲ್ಲಿಸಬಲ್ಲರೆಂಬ ನಂಬಿಕೆ. ಆ ನಂಬಿಕೆಯನ್ನು ಸಂವರ್ಥ      ಈ ಅನುವಾದದಲ್ಲಿ ಉಳಿಸಿಕೊಂಡಿದ್ದಾರೆಂಬುದನ್ನು ಹೇಳಬಲ್ಲೆ.

ಇಲ್ಲಿರುವ ಎಲ್ಲ ಕವನಾನುವಾದಗಳ ಇಂಗ್ಲಿಶ್ ಮೂಲವನ್ನು ನಾನು ಓದಿಲ್ಲ. ಹಾಗೆ ಓದುವುದು ಬೇಕಿಲ್ಲ. ಅನುವಾದ ಒಂದು ಪ್ರತಿಸೃಷ್ಟಿ. ಅದನ್ನು ಸ್ವತಂತ್ರವಾಗಿಯೇ ಓದಬೇಕು ಅನ್ನುವುದು ನನ್ನ ವಾದ. ಹಾಗಾಗಿ, ಸಾಮಾನ್ಯವಾಗಿ ಅನುವಾದಗಳ ವಿಶಯದಲ್ಲಿ ಮಾಡಲಾಗುವ ಮೂಲದಲ್ಲಿ ಹಾಗಿತ್ತು, ಅನುವಾದದಲ್ಲಿ ಹೀಗಿದೆ, ಮುಂತಾದ ಸಂಗತಿಗಳನ್ನಿಲ್ಲಿ ಚರ್ಚಿಸಹೋಗುವುದಿಲ್ಲ. ಇಂಗ್ಲಿಶ್ ಮೂಲದೊಂದಿಗೆ ಹೋಲಿಸದೆ, ಇವು ಕನ್ನಡದ್ದೇ ಕವನಗಳು ಎಂದುಕೊಂಡು ಓದುವಾಗ ಹೇಗನ್ನಿಸಿತು ಎಂಬುದನ್ನಷ್ಟೆ ಇಲ್ಲಿ ಹೇಳಬಲ್ಲೆ,  ಈ ಕವನಗಳನ್ನು ಫೇಸ್ ಬುಕ್ ನಲ್ಲಿ ಓದಿದಾಗಲೂ, ಈಗ ಹಸ್ತಪ್ರತಿಯಲ್ಲಿ ಓದಿದಾಗಲೂ ಅನ್ನಿಸಿದ್ದು ಒಂದೇ: ಯೋಗೇಶರ ಕವನಗಳು ಸಂವರ್ತ ಅವರೇ ಕನ್ನಡದಲ್ಲಿ ಬರೆಯಬಹುದಾಗಿದ್ದ, ಆದರೆ ಬರೆಯಲು ಹೋಗದ ಕವನಗಳು. ಹಾಗಾಗಿಯೇ. ಸಂವರ್ತ ಅವರನ್ನು ಅನುವಾದಕನನ್ನಾಗಿ ಆರಿಸಿಕೊಂಡಿವೆ ಎಂದರೆ ತಪ್ಪಾಗಲಾರದೇನೋ. ಹಾಗೆಯೇ, ಈ ಕವನಗಳಲ್ಲಿರುವ ಒಂದು ರೀತಿಯ ‘ಸೂಫಿತನ’ದ ಉತ್ಕಂಠತೆ ಕೂಡ ಕಾರಣವಿರಬಹುದೇನೋ!

ಇಷ್ಟು ಮಾತುಗಳನ್ನು ಹೇಳಿ ಮುಗಿಸಬಹುದಿತ್ತೇನೋ. ಆದರೆ, ಜಾರ್ಜ್ ಸಿಮ್ಮೆಲ್ ನ ಪ್ರಬಂಧವಾದ “Bridge and Door” (1994) (ಸೇತುವೆಗಳು ಮತ್ತು ಬಾಗಿಲುಗಳು) ನಲ್ಲಿ ಅವು ಪ್ರತಿಮೆಯಾಗಿ ಏನನ್ನು ಹೇಳುತ್ತವೆ ಅನ್ನುವುದರ ಬಗ್ಗೆ ಸಂವರ್ತ, ತನ್ನ ಟಿಪ್ಪಣಿಯಲ್ಲಿ ಪ್ರಸ್ತಾಪಿಸಿರುವುದರಿಂದ, ಒಂದಷ್ಟು ಮಾತುಗಳನ್ನು ಹೇಳಿ ಮುಗಿಸೋಣ ಅನ್ನಿಸಿದ ಕಾರಣ ಮಾತು ಮುಂದುವರಿಸುತ್ತಿದ್ದೇನೆ. ಅಲ್ಲಿ “ಕಿಟಕಿ ಕೇವಲ ಕಣ್ಣಿಗೆ ಹಾದಿ, ಆದರೆ ಬಾಗಿಲು ಮನುಷ್ಯನಿಗೆ ಹಾದಿ ಆಗಿದೆ” ಎನ್ನುವ ಸಿಮ್ಮೆಲ್ ಬಾಗಿಲು ಇಲ್ಲದ ಗೋಡೆಯ ಕುರಿತು ಏನೂ ಹೇಳುವುದಿಲ್ಲ” ಎಂದು ಸಂವರ್ತ ಅಚ್ಚರಿ ವ್ಯಕ್ತಪಡಿಸುತ್ತಾರೆ. ಈಗ ನಾವು ಮಾತನಾಡಬೇಕಾಗಿರುವುದು ಆ “ಬಾಗಿಲು ಇಲ್ಲದ ಗೋಡೆ”ಯ ಬಗ್ಗೆಯೇ.

ಈ ಕವನ ಸಂಕಲನದ ಶೀರ್ಷಿಕೆಯನ್ನು ಯೋಗೇಶ್ ರ ಒಂದು ಕವನದಿಂದ ಆಯ್ದುಕೊಳ್ಳಲಾಗಿದೆ. ಆ ಕವನದ ಮೊದಲ ಮೂರು ಸಾಲುಗಳು ಹೀಗಿವೆ:

ಓದುವುದೆಂದರೆ ಸ್ಪರ್ಶಿಸಿದಂತೆ.

ಪ್ರೇಮಿಯ ಪ್ರತಿ ಸ್ಪರ್ಶವೂ

ಹೊಸ ಅಕ್ಷರಜ್ಞಾನದಂತೆ.

ಇದೇ ಕವನದ ನಡುವೆ ಬರುವ ಈ ಸಾಲುಗಳನ್ನು ಗಮನಿಸಿ.

ನನ್ನ ನಿನ್ನ ಇತಿಹಾಸ

ಬಗೆಬಗೆಯ ಗುಂಪಿನಲ್ಲಿ ಬಂಧಿಯಾಗಿದೆ:

ಗಂಡು-ಹೆಣ್ಣು

ಜಾತಿ-ವರ್ಗ

ಇತ್ಯಾದಿ ಇತ್ಯಾದಿ.

ಈ ವರ್ಗೀಕರಣ

ನಮ್ಮನ್ನು ಪ್ರೇಮಿಸದಂತೆ ಮಾಡಿದೆ

ಆದರೆ ಇತ್ತೀಚಿಗೆ ನಾವು

ಈ ಗೂಡಿಂದ ಪಾರಾಗುವ ಮಾರ್ಗ

ಕಂಡುಕೊಂಡಿದ್ದೆವು.

ಸ್ಪರ್ಶವೇ ಬಾಗಿಲು.

ಇಡೀ ಕವನ ತುಸು ವಾಚ್ಯವೆನಿಸಬಹುದೇನೋ. ಆದರೆ, ನನಗನ್ನಿಸುವುದು ಸಂವರ್ತನ ಔಚಿತ್ಯಪೂರ್ಣ ಕಮೆಂಟಾದ “ಬಾಗಿಲು ಇಲ್ಲದ ಗೋಡೆ”ಗೆ ಯೋಗೇಶ್ ರ “ಸ್ಪರ್ಶವೇ ಬಾಗಿಲು” ಎಂಬ ಸಾಲೇ ಸರಿಯಾದ ಉತ್ತರ. ಅಚ್ಚಕನ್ನಡದಲ್ಲಿ ಹೇಳುವುದಾದರೆ, ದಲಿತರನ್ನು ಕೀಳುಜಾತಿಯವರೆಂದು ಮುಟ್ಟದ, ಮುಟ್ಟಿಸಿಕೊಳ್ಳದ ಜಾತಿಯ ಜನರಿಗೆ, ಮುಟ್ಟಿನ ಕಾರಣಕ್ಕೆ ಹೆಣ್ಣನ್ನು ಮುಟ್ಟದ, ಮುಟ್ಟಿಸಿಕೊಳ್ಳದ ಗಂಡುಸೊಕ್ಕಿನ ಜನರಿಗೆ, ದಲಿತರು ಮತ್ತು ಹೆಣ್ಣು “ಅಸ್ಪಶ್ರ್ಯರು”. ಇಂತಹದೇ ಹತ್ತು ಹಲವು ಕಾರಣಗಳಿಗೆ ಮುಟ್ಟದ, ಮುಟ್ಟಿಸಿಕೊಳ್ಳದ ಜನರಿಗೆ ತಡೆಯಾಗಿರುವುದು “ಗೋಡೆಗಳು.” ಆ ಗೋಡೆಗಳಿಗೆ ಬಾಗಿಲುಗಳು ಯಾವುವೆಂದರೆ ಸ್ಪರ್ಶ. ಅಂತಹ ಜನರಿಗೆ ಇಲ್ಲಿಯ ಕವನಗಳು ತಮ್ಮನ್ನು ತಾವು ಮುಟ್ಟಿನೋಡಿಕೊಳ್ಳುವಂತೆ ಮಾಡಲಿ. “ಓದುವುದೆಂದರೆ ಸ್ಪರ್ಶಿಸಿದಂತೆ” ಎಂಬುದರ ಅರಿವನ್ನು ಮೂಡಿಸಲಿ ಎಂದು ಆಶಿಸುವೆ.

10 comments to “ಅನುವಾದ ೪ : ಧ್ಯಾನಸ್ಥ ಬುದ್ಧನ ಕೈಯಲ್ಲಿನ ಕಮಲ”
  1. ಬಾಮಾ ಅವರ ಕೃತಿ ಬಂದ ಹೊಸದರಲ್ಲಿ ನಾನು ಅವರದೊಂದು ಸಂದರ್ಶನ ಮಾಡಿ ಒಂದು ಭಾಗವನ್ನು ಕನ್ನಡಕ್ಕೆ ಭಾಷಾಂತರಿಸಿ ಅದು ಕನ್ನಡಪ್ರಭದಲ್ಲಿ ಪ್ರಕಟವಾಗಿತ್ತು. ಆಗ ವೈ ಎನ್ ಕೆ ಸಂಪಾದಕರಾಗಿದ್ದರು ಅನ್ನಿಸುತ್ತೆ

    • ಅದು ಸಿಕ್ಕರೆ ದಯಮಾಡಿ ಕಳಿಸಿ. ವೈಎನ್ಕೆ ಅವರ ವಂಡರ್ ಕಣ್ಣು ನನ್ನ ಕಣ್ಣು ತೆರೆಸಿದ ಕಾಲಂ. ಈಗ ಅಂತಹ ಕಾಲಂ ಬರೆವವರೇ ಇಲ್ಲದಂತಾಗಿದ್ದಾರೆ.

  2. Shashi Kumar – i read your foreword. I am glad you said this “ಇಂಗ್ಲಿಶ್ ನಲ್ಲೇ ಬರೆದಿದ್ದರೂ, ಕನ್ನಡಾನುವಾದದಲ್ಲಿ ಅದರ ಲಯ ಮಾತ್ರ ಉರ್ದುವಿನದು ಎಂದೆನಿಸಲು ಕಾರಣ, ಬಹುಶಃ, ಸಂವರ್ತ, ಉರ್ದು ಕವಿಯಾಗಿರುವುದೇನೋ ಎಂಬ ಅನುಮಾನ ನನಗೆ !” Because when I read Sahil’s translation of “steering wheel” as “ನನ್ನಪ್ಪನ ಕೈಯಲ್ಲಿ ಗಾಲಿ” I was totally disturbed. Steering wheel is NOT ಗಾಲಿ!! Especially when the poet is extremely specific about
    “My grandfather had a hammer
    My father had the steering wheel
    I have a pen”
    ನನ್ನಜ್ಜನ ಕೈಲಿ ಸುತ್ತಿಗೆ
    ಅಪ್ಪನ ಕೈಲಿ ಸ್ಟೀರಿಂಗ್ ವೀಲ್
    ನನ್ನ ಕೈಲಿ ಪೆನ್
    ನಾವು ಬರೆಯುತ್ತಿರುವ ಭಾಷೆ ಮಾತ್ರ ಒಂದೇ
    ನಮ್ಮ ತಾಯಿ ನುಡಿ
    ನಮ್ಮ ಅಸ್ತಿತ್ವದ ಚರಿತ್ರೆಯಿಂದ ಮರೆಯಾದ (ದನಿ)
    could be ಮರೆಯಾಗಿದೆ also.

    • ನೀವು ಓದಿ ಪ್ರತಿಕ್ರಿಯಿಸಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ.

  3. ನಿಮ್ಮ ಅನುಭವದ ಹಿನ್ನೆಲೆಯಲ್ಲಿ ದಲಿತ ತಾರತಮ್ಯದ ಬಗ್ಗೆ ನೀವಾಡಿದ ಮಾತುಗಳು ಹೆಚ್ಚು ಅಧಿಕೃತತೆಯನ್ನು ಪಡೆದಿವೆ.

    • ನೀವು ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು, ಸರ್.

  4. ತುಂಬಾ ಇಷ್ಟವಾಯಿತು….ಬಹಳ ವರ್ಷಗಳ ನಂತರ ಶಶಿಯ ಬರಹ ಓದಿ ಖುಷಿಯಾಯ್ತು. ಇ ಮೇಲ್ ಐಡಿ ಕೊಡಿ…

  5. ’ಸ್ಪರ್ಶವೇ ಬಾಗಿಲು’…ಅಲ್ಲವೇ??

    ಸಂವರ್ತರ ಕವನ ಸಂಕಲನದ ಅನುವಾದಕ್ಕೆ ಶಶಿಕುಮಾರ್ ರ ಈ ಅರ್ಥಪೂರ್ಣ ಬರಹ (ಮುನ್ನುಡಿ) ಓದುತ್ತಿದ್ದಾಗ, ಹಳೆಯ ಹಲವು ನೆನಪುಗಳು ಮರುಕಳಿಸಿದವು. ಇಂಗ್ಲಿಶ್ ವಿಚಾರದಲ್ಲಿನ ಮೇಲರಿಮೆ-ಕೀಳರಿಮೆಗಳಿಗೆ ಮತ್ತಷ್ಟು ಆಯಾಮಗಳಿವೆ ಎನಿಸಿತು. ಶಶಿಕುಮಾರ್ ಬರಹಕ್ಕೆ ಇಲ್ಲಿ ನೀಡಿರುವ ಪ್ರತಿಕ್ರಿಯೆ ‘out of context’ ಇರಲಾರದು ಎಂದು ಭಾವಿಸಿದ್ದೇನೆ.

    ೧೯೮೦-೮೨…ಹೊಸೂರಿನ (ಆಗ ಕೋಲಾರ ಜಿಲ್ಲೆ) ನ್ಯಾಷನಲ್ ಹೈಸ್ಕೂಲಿನಲ್ಲಿ ಕಲಿಯುತ್ತಿದ್ದ ಸಂದರ್ಭ. ಸುತ್ತಮುತ್ತಲಿನ ಗ್ರಾಮಗಳಾದ ಉಪ್ಪಾರಹಳ್ಳಿ, ಸೊನಗಾನಹಳ್ಳಿ, ಅನೂಡಿ, ಎರಪೋತನಹಳ್ಳಿ..ಮುಂತಾದ ಹಳ್ಳಿಗಳ ವಿದ್ಯಾರ್ಥಿಗಳೂ ಅಲ್ಲಿ ಕಲಿಯುತ್ತಿದ್ದರು. ಆ ಸಣ್ಣಪುಟ್ಟ ಹಳ್ಳಿಗಳ ಮಧ್ಯೆ ಹೊಸೂರು ಹೋಬಳಿ.. ಒಂದು ಮಾದರಿ ಗ್ರಾಮ. ಉಳಿದವು ಹೊಸೂರಿಗಿಂತ ವಿಸ್ತಾರದಲ್ಲಿ ಚಿಕ್ಕದಾದ ಹಳ್ಳಿಗಳು. ಈ ಪಟ್ಟಣದವರಿಗೆ, ಹಳ್ಳಿ ವಿದ್ಯಾರ್ಥಿಗಳ ಬಗ್ಗೆ ’ಹಳ್ಳಿ ಹುಡುಗ್ರು ಓದಲ್ಲಾ ಕಣ್ರೀ’ ಎಂಬ ಅಲಿಖಿತ, ಸಂಕುಚಿತ ನಿಲುವು. ಈ ಸಂಕುಚಿತ ನಿಲುವಿಗೆ ತೋರುತ್ತಿದ್ದ ಕಾರಣಗಳು ’ಅವರು ಇಂಗ್ಲಿಶ್, ಮ್ಯಾಥ್ಸ್ನಲ್ಲಿ ಬಹಳ ವೀಕ್ ಇರ್ತಾರೆ’. ಆಗ ಹೈಸ್ಕೂಲ್ ಇದ್ದದ್ದು ಹೊಸೂರಿನಲ್ಲಿ ಮಾತ್ರ. ಇಲ್ಲವಾದಲ್ಲಿ ೧೦ ಕಿ.ಮೀ. ದೂರದ ಗೌರೀಬಿದನೂರಿಗೆ ಹೋಗಬೇಕಿತ್ತು. ಗೌರೀಬಿದನೂರಿನಲ್ಲಿ ಇಂಗ್ಲೀಶ್ ಮಾಧ್ಯಮವೂ ಇತ್ತು. ’ಮ್ಯಾಥ್ಸ್’, ’ಇಂಗ್ಲಿಶ್’ ನ ಬಗ್ಗೆ ಇದ್ದ ’ಭೂತಶಮನ’ಕ್ಕಾಗಿ ಪ್ರತಿ ವಾರಾಂತ್ಯದಲ್ಲಿ ’ಬ್ರಿಡ್ಜ್’ (ಸೇತುವೆ) ಕೋರ್ಸ್ ಒಂದನ್ನು ಹೊಸೂರಿನ ಶಾಲೆಯಲ್ಲಿ ಆರಂಭಿಸಿದರು. ಮೊದಲನೆಯಾದಾಗಿ ಭಯ ನಿವಾರಣೆ..ಎರಡನೆಯದಾಗಿ ಇಂಗ್ಲಿಶ್ ಕೂಡಾ ಒಂದು ಭಾಷೆಯೇ..ಅದನ್ನು ಭಾಷೆಯಾಗಿ ಸ್ವೀಕರಿಸಿ ಎಂದು ಧೈರ್ಯ ತುಂಬುವುದು…ಬ್ರಿಡ್ಜ್ ಕೋರ್ಸ್ ಯಶಸ್ವಿಯಾಯಿತು.

    ಹೊಸೂರಿನ ಪ್ರಾಥಮಿಕ ಶಾಲೆಯಲ್ಲಿ ಕಲಿಸುತ್ತಿದ್ದ ಕೆ.ಎಚ್.ಕದರಪ್ಪ (ಕೆ ಎಚ್ ಕೆ) ಆಗಿನ ಕಾಲದ ನುರಿತ ಇಂಗ್ಲಿಶ್ ಮೇಷ್ಟ್ರಾಗಿದ್ದರು. ರೆನ್ ಮತ್ತು ಮಾರ್ಟಿನ್ ರ ಇಂಗ್ಲಿಶ್ ವ್ಯಾಕರಣವನ್ನು ನಮಗೆ ಪರಿಚಯಿಸಿದವರೇ ಕದರಪ್ಪ ಮತ್ತು ಎಚ್.ಎಸ್.ಎಸ್ (ಸುಬ್ರಮಣ್ಯಂ) ಮೇಷ್ಟ್ರುಗಳು. ಪದವೀಧರರೂ ಅಲ್ಲದ ಇವರಿಬ್ಬರಿಗೂ ಇಂಗ್ಲಿಶ್ ಭಾಷೆಯ ಮೇಲೆ ಒಳ್ಳೆಯ ಹಿಡಿತವಿತ್ತು. ಪ್ರಾಥಮಿಕ ಮಟ್ಟದಲ್ಲೇ ಇಂಗ್ಲಿಶ್ ಭಾಷೆಯ ಮೇಲೆ ವಿಶ್ವಾಸ ಮೂಡಿಸಿದ ಕದರಪ್ಪ, ಎಚ್ ಎಸ್ ಎಸ್ ನಮಗೆಲ್ಲಾ ಸದಾ ಸ್ಮರಣೀಯರು.

    ಇಷ್ಟೆಲ್ಲಾ ಹೇಳಲು ಕಾರಣಗಳಿವೆ. ಗ್ರಾಮ-ಹೋಬಳಿಯ ಮಟ್ಟದಿಂದ, ಬೆಂಗಳೂರು ಮಹಾನಗರಿಯವರೆಗೂ, ಈ ಇಂಗ್ಲಿಶ್ ಎಂಬ ಭಾಷೆಯ ಮೇಲಿನ ಜಡತೆ-ಸೆಳೆತ, ತಾತ್ಸಾರ-ಮಮಕಾರಗಳೆಂಬ ಪರಸ್ಪರ ವಿಭಿನ್ನಭಾವ-ನೋಟಗಳು ಹೇಗೆ ಬದಲಾಗುತ್ತಾ, ಏರುಪೇರಾಗುತ್ತಾ ಸಾಗುತ್ತವೆ ಎಂಬುದು ವಿಸ್ಮಯಕಾರಿ. ಪಿಯುಸಿ (ವಿಜ್ಞಾನ)ಗೆ ಇಂಗ್ಲಿಶ್ ಮಾಧ್ಯಮವೇ ಅನಿವಾರ್ಯವಾಗಿತ್ತು. ಗೌರೀಬಿದನೂರಿನ ಕಾಲೇಜಿನಲ್ಲಿ ಇಂಗ್ಲಿಶ್ ವಿಭಾಗದಲ್ಲಿ ಘಟಾನುಘಟಿಗಳಿದ್ದರು. ’ಸಮುದಾಯ’ದೊಂದಿಗೆ ಗುರುತಿಸಿಕೊಂಡಿದ್ದ ಗಂಗಾಧರಮೂರ್ತಿ (ಬಿಜಿಎಮ್), ನಗರಗೆರೆ ರಮೇಶ್ (ಎನ್ನಾರ್), ಪ್ರಾಂಶುಪಾಲರೂ ಆಗಿದ್ದ ಕೃಷ್ಣಮೂರ್ತಿರಾವ್ (ಎಮ್ಕೆಆರ್) ತಟ್ಟನೆ ನೆನಪಾಗುವ ಹೆಸರುಗಳು. ಇವರೆಲ್ಲಾ ಏಕೆ ಇಂಗ್ಲಿಶ್ ನಲ್ಲಿ ಬರೆಯಲಿಲ್ಲ ಎಂಬುದೇ ನನಗಿಂದಿಗೂ ಅಚ್ಚರಿ. ಇಂದು ’ಭಾರತೀಯ ಇಂಗ್ಲಿಶ್’ ಎಂಬ ಪರಿಕಲ್ಪನೆ ಹುಟ್ಟುಹಾಕಿ ಬರೆದು ತೇಗಿದ ಹಲವಾರು ಬರಹಗಾರರ ಇಂಗ್ಲಿಶ್ ಗಿಂತಲೂ ಉತ್ಕೃಷ್ಟವಾದ ಭಾಷಾ ಪ್ರೌಢಿಮೆ ಇದ್ದ ಇಂತಹ ಹಲವರು ಎಲೆಮರೆಯ ಕಾಯಿಗಳಾಗಿ ಕಳೆದುಹೋಗಿದ್ದಾರೆ.

    ’ತಾರತಮ್ಯ’ವಿರುವೆಡೆಯಲ್ಲಿ ನೈಜ ಪ್ರತಿಭೆ ಅರಳಲು ಸಾಧ್ಯವಿಲ್ಲ. ಹಾಗೆ ಅರಳಲೇ ಬೇಕಾದರೆ, ಅದು ಸತತ ಹೋರಾಟದಿಂದ ಮಾತ್ರ. ’ಹಳ್ಳಿಯವರು’ ಅಥವಾ ’ಹಳ್ಳಿಕಡೇವ್ರು’ ಎಂಬ ವಿಶೇಷಣದಲ್ಲಿ ಸುಪ್ತ ವ್ಯಂಗ್ಯವಿದೆ. ’ಅವಿದ್ಯಾವಂತರು’ ಅಥವಾ ಪ್ರಸಕ್ತ ಸಂದರ್ಭದಲ್ಲಿ ’ಇಂಗ್ಲಿಶ್ ಬಾರದವರು’ ಎಂಬ ಆಕ್ಷೇಪಣೆಗೆ ಪರ್ಯಾಯವಾಗಿ ಈ ವಿಶೇಷಣಗಳನ್ನು ಬಳಸಲಾಗುತ್ತದೆ. ನಾವು ಪಿಯುಸಿ ಯಲ್ಲಿದ್ದಾಗ, ಬಿಜಿಎಂ ಇಂಗ್ಲೀಶ್ ವ್ಯಾಕರಣ ಪಾಠಮಾಡುತ್ತಿದ್ದರು. ’can someone tell me an example of active voice?’ ಎಂದು ಕೇಳಿದರು. ಇಂಗ್ಲಿಶ್ ಮಾಧ್ಯಮದಲ್ಲಿ ಹೈಸ್ಕೂಲ್ ಓದಿ ಬಂದಿದ್ದ ವಿದ್ಯಾರ್ಥಿಗಳೇಕೋ ಅಸಡ್ಡೆಯಿಂದ ಕುಳಿತಿದ್ದರು. ಕನ್ನಡ ಮಾಧ್ಯಮದಿಂದ ಬಂದ, ’ಇಂಗ್ಲಿಶ್ ತರಗತಿ’ ಎಂಬ ವಿಚಿತ್ರ ಉತ್ಸಾಹದಲ್ಲಿದ್ದ ವಿದ್ಯಾರ್ಥಿಗಳು ಹಲವರು ಒಟ್ಟಿಗೇ ನಿಂತು ’Rama killed Ravana Sir’ ಎಂದರು. ಬಿಜಿಎಮ್ ಜೋರಾಗಿ ನಕ್ಕರು..ಪಕ್ಕದ ಬೆಂಚಿನ, ಇಂಗ್ಲಿಶ್ ಮಾಧ್ಯಮದಲ್ಲಿ ಓದಿದ್ದ ರಮಣಿಯೊಬ್ಬಳು ’ಇದಕ್ಕೆ ಅಲ್ವಾ ಇವರನ್ನೆಲ್ಲಾ ವಿಲೇಜ್ ನವರು ಅನ್ನೋದು’ ಎಂದದ್ದು ಸ್ಪಷ್ಟವಾಗಿ ಕೇಳಿಸಿತು. ರೆನ್-ಮಾರ್ಟಿನ್ ರನ್ನು ಕೆ.ಎಚ್.ಕೆ. ಪಾರಾಯಣ ಮಾಡಿದ್ದನ್ನು ಸ್ವತಃ ನೋಡಿ, ಕೇಳಿದ್ದ ಹೊಸೂರಿನ ನಾವೊಂದಿಬ್ಬರು ಮತ್ತಷ್ಟು ಉದಾಹರಣೆ ಕೊಟ್ಟೆವು. ’good..where did you find this’’ ಎಂದರು…ಹೇಳಿದೆವು..ಬಿಜಿಎಮ್ ಗೆ ಖುಷಿಯಾಯಿತು. ’ರಮಣಿ’ಯೊಡನೆ ಕುಳಿತಿದ್ದ ಮತ್ತಿಬ್ಬ ಸಹರಮಣಿಯರು ನಮ್ಮನ್ನು ಕೆಕ್ಕರಿಸಿ ನೋಡುವುದರೊಂದಿಗೆ ಆ ತರಗತಿ ಮುಕ್ತಾಯವಾಯಿತು.

    ಮತ್ತೊಮ್ಮೆ ಫಿಸಿಕ್ಸ್ ತರಗತಿಯಲ್ಲಿ ಇಂಗ್ಲಿಶ್ ಕಾರಣಕ್ಕೆ ವ್ಯಾಜ್ಯವಾಯಿತು. ಆಗ ನನಗೆ ಬಹಳ ಆಪ್ತರಾಗಿದ್ದವರಲ್ಲಿ ಪ್ರಭಾಕರ್ (ಎನ್ ಟಿ ಆರ್ ನ ಉತ್ಕಟ ಅಭಿಮಾನಿ, ತನ್ನನ್ನು ’ನಂದಮೂರಿ ಪ್ರಭಾಕರ್’ ಎಂದೇ ಬಣ್ಣಿಸಿಕೊಳ್ಳುತ್ತಿದ್ದಾತ), ಸಮೀಉಲ್ಲಾ (ಗೌರೀಬಿದನೊರಿನ ಹೊರವಲಯದಲ್ಲೆಲ್ಲಿಂದಲೋ ಹಳೆಯ ಸೈಕಲ್ ಒಂದರಲ್ಲಿ ಬರುತ್ತಿದ್ದಾತ. ತಂದೆ ಆಗ ಮರಣಾವಸ್ಥೆ ತಲುಪುತ್ತಿದ್ದ ಸಕ್ಕರೆ ಕಾರ್ಖಾನೆಯಲ್ಲಿ ನೌಕರರಾಗಿದ್ದರು. ತಾಯಿಗೆ ಉರ್ದು ಶಾಲೆಯೊಂದರಲ್ಲಿ ಚಾಕರಿ. ಅಣ್ಣ ಕ್ಯಾಂಟೀನ್ ಒಂದರಲ್ಲಿ ನೌಕರನಾಗಿದ್ದ),ಜೊತೆಗೆ ನಮ್ಮ ಹೊಸೂರಿನ ನಾಕೈದು ಜನ. ಅಂದಿನ ಫಿಸಿಕ್ಸ್ ತರಗತಿಯಲ್ಲಿ ‘Heat’ಗೆ ಸಂಬಂಧಿಸಿದ ಪ್ರಶ್ನೆ. ’ವಿಲೇಜ್’ ಗುಂಪಿನ ಸಮೀಉಲ್ಲಾಗೆ ಫಿಸಿಕ್ಸ್ ಮೇಷ್ಟ್ರ ಪ್ರಶ್ನೆ. ಸಮೀಉಲ್ಲಾ ತನ್ನ ಹೈಸ್ಕೂಲ್ ಜ್ಞಾನ ಬಳಸಿ ಸರಿಯಾಗಿಯೇ ಉತ್ತರಿಸಿದ್ದ. ಆದರೆ ಉತ್ತರ ಕನ್ನಡದಲ್ಲಿತ್ತು. ”Tell in English’ಎಂದು ಆಜ್ಞೆಯಾಯಿತು. ಹುಡುಗ ತಣ್ಣಗೆ ಹೇಳಿದ.’I don’t know sir’. ಮೇಷ್ಟ್ರ ಪ್ರತ್ಯಾಸ್ತ್ರ ಎರಗಿತು..’what do you mean??’..ಮೇಷ್ಟ್ರ ಪ್ರಶ್ನೆಯ ಆಂತರ್ಯ ತಿಳಿಯದ ಮುಗ್ಧ ಹುಡುಗ ಮತ್ತಷ್ಟು ತಣ್ಣಗೆ ಉತ್ತರಿಸಿದ. ‘Meaning of I don’t know is I do not know sir’..ಇಡೀ ತರಗತಿ ಬೊಬ್ಬಿರಿದು ನಕ್ಕಿತು. ಮೇಷ್ಟ್ರು ಕೆಂಡವಾದರು…’you know answer…but can’t able to tell in English?’ಎಂದು ಸಿಡಿದರು. ಈ ‘can’t able’ ಎಂಬುದನ್ನು ಹೇಗೆ, ಎಲ್ಲಿ ಕಲಿತರೋ? ವ್ಯಾಕರಣಾತ್ಮಕವಾಗಿ ಅದು ಸರಿಯಾದ ಪ್ರಯೋಗವಲ್ಲ ಎಂದು ಕೆ ಎಚ್ ಕೆ ಬಹಳ ಹಿಂದೆ ಹೇಳಿದ್ದರು. ’ಏಕೆ’ ಎಂದು ನಾವು ಪ್ರಶ್ನಿಸಿರಲಿಲ್ಲ. ಆದರೂ ಬಹಳಷ್ಟು ಮಂದಿ ಹೀಗೆ ಬಳಸುತ್ತಾರೆ. ಕೆ ಎಚ್ ಕೆ ಬಳಿ ಕಲಿತ ಇಂಗ್ಲಿಶ್ ನ ಪ್ರಭಾವ….ಎದ್ದು ನಿಂತು ಹೇಳಿದೆ..’sir, you should ask ‘are you not able to tell in English?’…or you may also ask ‘can’t you tell in English’…….ಹೊಸೂರಿನ ಜನತೆ “Yes Sir” ಎಂದು ದನಿಗೂಡಿಸಿತು……ಮೇಷ್ಟ್ರು ಅಪಮಾನದಿಂದ ಕುದ್ದುಹೋಗಿದ್ದು ಮನದಟ್ಟಾಯಿತು. ಆ ’ಟಾಪಿಕ್’ ಅಲ್ಲೇ ಬಿಟ್ಟರು. ನಾನು ಸುಮ್ಮನಿರಬೇಕಿತ್ತು ಎಂದೆನಿಸಿತು. ಬಿಜಿಎಂ ತರಗತಿಯಲ್ಲಿ ಒಮ್ಮೆ ವಿದ್ಯಾರ್ಥಿನಿಯೊಬ್ಬಳಿಂದ ಇಂತಹದೇ ತಪ್ಪು ತಿದ್ದುವ ಘಟನೆ ನಡೆಯಿತು. ಬಿಜಿಎಂ ಆಕೆಯನ್ನು ಮನಃಪೂರ್ವಕವಾಗಿ ಅಭಿನಂದಿಸಿದ್ದರು. ಎಲ್ಲಾ ಮೇಷ್ಟ್ರುಗಳೂ ಒಂದೇ ತರದವರಲ್ಲ..

    ಎರಡು ದಿನಗಳ ನಂತರ, ಇಂಗ್ಲಿಶ್ ವಿಚಾರದಲ್ಲಿ ಮೂದಲಿಕೆಯ ಅನುಭವ ಹೊತ್ತ ಬಸವರಾಜು ನಮ್ಮ ಗುಂಪು ಸೇರಿಕೊಂಡ. ನಾವು ಕ್ಯಾಂಟೀನ್ ಹೊಕ್ಕು ಕಾಫಿ ಕುಡಿಯುತ್ತಿದ್ದೆವು. ಮೇಷ್ಟ್ರು,ಕ್ಯಾಂಟೀನ್ ಒಳಗೆ ಬರಲಿಚ್ಚಿಸಿದವರು, ನಮ್ಮನ್ನು ನೋಡಿ ಹೊರಟೇ ಹೋದರು. ನಮಗೆ ಬೇಸರವಾಯಿತು. ’ can’t able to understand ಬ್ರದರೂ’ ಎಂದು ಪ್ರಭಾಕರ ಗಹಗಹಿಸಿದ…ನಾವೂ ದನಿಗೂಡಿಸಿದೆವು. ಕ್ಷಣಾರ್ಧದಲ್ಲಿ ವ್ಯಕ್ತಿಯೊಬ್ಬನ ಆಗಮನವಾಯಿತು. ಅವನ ದರ್ಶನ ಆಗಾಗ ನಮಗಾಗುತ್ತಿತ್ತು. ಆ ವರ್ಷ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಚಿಂತಾಜನಕವಾಗಿ ಸೋತು, ’ಸಮಾನಮನಸ್ಕರೊ’ಡನೆ ಲೇಡೀಸ್ ರೂಮಿನ ಮುಂದೆ, ಕಾರಿಡಾರುಗಳಲ್ಲಿ ಜೀವಂತ ಹುತಾತ್ಮನಂತೆ ತಿರುಗಾಡುತ್ತಿದ್ದಾತ. ಪದವಿಯ ಕಡೆಯ ವರ್ಷದಲ್ಲಿದ್ದ. ಒಮ್ಮೆಲೇ ಕೂಗಾಡಲಾರಂಭಿಸಿದ:

    ’ಇಂಗ್ಲಿಶ್ ನಲ್ಲಿ ಅಷ್ಟು ಸ್ಟ್ರಾಂಗ್ ಇದ್ರೆ ಆರ್ಟ್ಸ್ ತೊಗೊಬೌದಾಗಿತ್ತಲ್ವಾ? ನಿಮಗ್ಯಾಕೆ ಸೈನ್ಸ್?’..ಪ್ರಶ್ನೆ ಅಪ್ಪಳಿಸಿತ್ತು. ’ಪಾಂಡವರಿಗೇಕೆ ಅರ್ಧ ರಾಜ್ಯ’ ಎಂಬ ರೊಚ್ಚಿಗೆದ್ದ ಕೌರವನ ಪ್ರಶ್ನೆಯಂತಿತ್ತು. ಇವನಿಗೇಕೆ ಇದೆಲ್ಲಾ? ಇವನಿಗಾರು ಇದೆಲ್ಲಾ ಹೇಳಿದರು?. ಏನು ಉತ್ತರ ಕೊಡುವುದೆಂದು ಯೋಚಿಸುವಷ್ಟರಲ್ಲಿ:
    ’ಫಿಸಿಕ್ಸ್ ಕ್ಲಾಸ್ ನಲ್ಲಿ ಮುಚ್ಕೊಂಡು ಫಿಸಿಕ್ಸ್ ಮಾತ್ರ ಕಲೀಬೇಕು…’ ಎಂಬ ತತ್ವದರ್ಶನ ಮಾಡಲಾರಂಭಿಸಿದ. ಪ್ರಭಾಕರ ಘರ್ಜಿಸಿದ..’ವೀಡಿಕಿ ಫಿಸಿಕ್ಸ್ ಬಾಗ ತೆಲುಸಾ ಅಡಗ್ರಾ’ (ಫಿಸಿಕ್ಸ್ ಚೆನ್ನಾಗಿ ಗೊತ್ತಾ ಅವನಿಗೆ ಕೇಳು). ಕೆರಳಿದ ಅವ ಮತ್ತಷ್ಟು ಧ್ವನಿ ಎತ್ತರಿಸಿದ: ’ನಿಮಗೆಲ್ಲಾ ಜಾತಿಕೊಬ್ಬು ಕಣ್ರಯ್ಯಾ…ಹಳ್ಳಿಗಳಲ್ಲಿ ಕಲಿಯೋದೇ ಒಂದೋ ಎರಡೋ ಅಕ್ಷರ…ಇಂಗ್ಲಿಶ್ ನಮಗಾ ಹುಟ್ಟಿದ್ದು? ಬ್ರಿಟಿಶ್ ನನ್ಮಕ್ಕಳ ಭಾಶೇಗ್ ಇನ್ನೆಶ್ಟ್ ಮರ್ಯಾದಿ….’ ಎಂದು ಗುಟುರು ಹಾಕಲಾರಂಭಿಸಿದ. ’ಹಾಲ್ ಟಿಕೆಟ್ ಕೊಡ್ಸಲ್ಲಾ ನೋಡ್ತಾ ಇರಿ…’ ಎಂದು ಕಿರುಚಲಾರಂಭಿಸಿದ. ಹೀಗೆಲ್ಲಾ ’ಗೆರಿಲ್ಲಾ’ ಆಕ್ರಮಣ ಮಾಡಲಾರಂಭಿಸಿದ ಈತ ’ಕಾಮರ್ಸ್’ ವಿಭಾಗದವ. ಇವನಿಗೆ ನಮ್ಮ ಮೇಷ್ಟ್ರ ಪರಿಚಯ ಅಷ್ಟಕ್ಕಷ್ಟೇ…ಎರಡು ದಿನದ ಹಿಂದೆ ನಮ್ಮ ಫಿಸಿಕ್ಸ್ ತರಗತಿಯ ಘಟನೆ ಇವನವರೆಗೂ ಬಂದಿದ್ದಾದರೂ ಹೇಗೆ? ಆತ ಕಿರುಚಾಡುತ್ತಲೇ ಇದ್ದ. ಅಷ್ಟರಲ್ಲಿ ಅವನನ್ನು ಚುನಾವಣೆಯಲ್ಲಿ ಬಗ್ಗುಬಡಿದಾತ ತನ್ನ ವಂದಿಮಾಗಧರೊಂದಿಗೆ ಕ್ಯಾಂಟೀನ್ ಪ್ರವೇಶಿಸಿದ. ಕಿರುಚಾಡಿದ ವ್ಯಕ್ತಿ ದುರದುರನೇ ನಮ್ಮನ್ನು ನೋಡುತ್ತಾ ಮಾಯವಾದ. ‘any problems brothers?’ವಂದಿಮಾಗಧನೊಬ್ಬ ಕುಳಿತಲ್ಲೇ ಘರ್ಜಿಸಿದ. ’ಏನೂ ಇಲ್ಲ’ವೆಂದು ತಲೆಯಲ್ಲಾಡಿಸಿದೆವು. ಅಲ್ಲಿಂದ ಹೊರನಡೆದೆವು.

    ’ಎಂದುಕುರಾ ವೀಳ್ಲಿಕಿ ಇಂಗ್ಲಿಶ್ ಪಿಚ್ಚು ಪುಟ್ಟಿಂದಿ?’ (ಇವರಿಗೆಲ್ಲಾ ಯಾಕೊ ಇಂಗ್ಲಿಶ್ ಹುಚ್ಚು ಹಿಡಿದಿದೆ) ಪ್ರಭಾಕರ್ ಚಿಂತಾಕ್ರಾಂತನಾದ. ಸಮೀಉಲ್ಲಾ ಕಂಗಾಲಾಗಿಬಿಟ್ಟಿದ್ದ. ’ನಮ್ಮ ಮನೆಯಲ್ಲಿರೋ ಪರಿಸ್ಥಿತಿಯಲ್ಲಿ ನನ್ನ ಓದೋಕೆ ಕಳ್ಸಿರೋದೇ ಹೆಚ್ಚು’ ಎಂದು ದೈನ್ಯದಿಂದ ಹೇಳಿದ. ಬಹಳ ದುಃಖವಾಯಿತು. ’ಎಸ್ ಎಸ್ ಎಲ್ ಸಿ ಯಲ್ಲಿ ಇಂಗ್ಲಿಶ್ ನಲ್ಲಿ ೫೫ ಬಂದಿದೆ…ಅದರೂ ಉತ್ತರ ಕೊಡೋಕೆ ಆಗಲಿಲ್ಲ’ ಎಂದು ಪೇಚಾಡಿದ. ನಾನೆಂದೆ:”ಇಂಗ್ಲಿಶ್ ನಲ್ಲಿ ಮಾರ್ಕ್ಸ್ ತೆಗೆಯುವುದು, ಫಿಸಿಕ್ಸ್ ಪ್ರಶ್ನೆಗೆ ಇಂಗ್ಲಿಶ್ನಲ್ಲಿ ಉತ್ತರ ಕೊಡುವುದು ಬೇರೆ. ನಾವು ಎರಡನ್ನೂ ಪ್ಯಾರಲೆಲ್ (ಸಮಾನಾಂತರ)ವಾಗಿ ಓದುತ್ತಿದ್ದೇವೆ. ಒಂದನ್ನು ಇನ್ನೊಂದರಲ್ಲಿ apply ಮಾಡಿಕೊಳ್ಳುವುದನ್ನು ತಿಳಿದುಕೊಳ್ಳುವುದಿಲ್ಲ. ಇಂಗ್ಲಿಶ್ ತೀರಾ ಕಷ್ಟವಲ್ಲ. ನಾವು ಪ್ರಯತ್ನಿಸುತ್ತಿಲ್ಲ ಅಷ್ಟೇ’. ಸಮೀಉಲ್ಲಾ ಶೂನ್ಯ ದೃಷ್ಟಿಸಿ ನಿಂತಿದ್ದ. ಮನೆಯ ಪರಿಸ್ಥಿತಿ, ಕಾಲೇಜಿನ ವಾತಾವರಣಗಳೆರೆಡೂ ಅವನನ್ನು ಚಿಂತೆಗೆ ದೂಡಿದ್ದವು. ’ಹಾಲ್ ಟಿಕೆಟ್’ ವಿಚಾರದಲ್ಲಿ ಅವನಿಗೆ ಹೆಚ್ಚಿನ ಗಾಬರಿಯಾಗಿತ್ತು. ’ಅವನಿಗೇನೂ ಮಾಡಕಾಗಲ್ಲ. ಆ ಗ್ಯಾಂಗ್ ನೋಡಿದ ಕ್ಷಣ ಹೇಗೆ ಓಡೋದ ನೋಡು…ಇನ್ನು ಇವನ ಮಾತಿಗೆ ಬೆಲೆ ಕೊಟ್ಟು ಹಾಲ್ ಟಿಕೆಟ್ ಕೊಡದೇ ಇರಲ್ಲಾ’ ಎಂದೆ..ಸಮೀಉಲ್ಲಾಗೆ ಸ್ವಲ್ಪ ಸಮಾಧಾನವಾಯಿತು. ಮೆಷ್ಟ್ರನ್ನು ತಿದ್ದಲು ಹೋಗಬಾರದಿತ್ತು ಎಂದು ಮತ್ತೆ ಅನಿಸಿತು. ನಂತರ ತಿಳಿಯಿತು ಕಿರುಚಿ-ಅರಚಿದ ವ್ಯಕ್ತಿ, ನಮ್ಮನ್ನು ’ವಿಲೇಜ್’ ನವರು ಎಂದು ಕೊಂಡಾಡಿದ ರಮಣಿಯ ಸೋದರ.

    ಮೇಷ್ಟ್ರ ಜೊತೆ ಮತ್ತೆ ಯಾವ ವ್ಯಾಜ್ಯಕ್ಕೂ ಹೋಗಲಿಲ್ಲ. ಹೊಸೂರಿನಂತಹ ’ವಿಲೇಜ್’ನವರ ಇಂಗ್ಲಿಶ್ ಗಿಂತ ಈ ಮೇಷ್ಟ್ರ ಇಂಗ್ಲಿಶ್ ’ವೀಕ್’ ಎಂದು ಮನದಟ್ಟಾಗುತ್ತಲೇ ಇತ್ತು. ತಲೆಕೆಡೆಸಿಕೊಳ್ಳದೇ ಬಿಟ್ಟುಬಿಟ್ಟೆವು. ಒಮ್ಮೆ ಇಂಗ್ಲಿಶ್ ಪದವೊಂದಕ್ಕೆ ನಿಘಂಟಿನಲ್ಲಿ ಅರ್ಥ ಹುಡುಕಿದೆವು. ಸಮೀಉಲ್ಲಾಗೆ ಅದೊಂದು ಹೊಸ ಅನುಭವ. ತಕ್ಷಣ ನಮ್ಮ ಇಂಗ್ಲಿಶ್ ಪಠ್ಯದ ಅಧ್ಯಾಯವೊಂದನ್ನು ತೆಗೆದು, ಅದರಲ್ಲಿ ಒಂದೆಎಡು ಪದ ಹೆಕ್ಕಿ ತಾನೂ ಅದರ ಅರ್ಥ ಕಂಡುಹಿಡಿದು ಸಂಭ್ರಮಿಸಿದ. ಅಂದಿನಿಂದ ಬೆಳಗ್ಗೆ ಕಾಲೇಜಿಗೆ ಬಂದೊಡನೆ, ’ಬಾ ಲೈಬ್ರರಿಗೆ’ ಎಂದು ದೂಡಿಕೊಂಡು ಹೋಗಿ, ಅಲ್ಲಿ ಬಂದಿರುತ್ತಿದ್ದ ’ಡೆಕ್ಕನ್ ಹೆರಾಲ್ಡ್’ ಅಥವಾ ’ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಯನ್ನು ತೆಗೆದು ಒಂದಷ್ಟು ಪದಗಳನ್ನು ಗುರುತು ಹಾಕಿಕೊಂಡು, ನಿಘಂಟಿನಲ್ಲಿ ಅರ್ಥ ಹುಡುಕುತ್ತಿದ್ದ. ಅವನ ಆಸಕ್ತಿ ಅಚ್ಚರಿ ಮೂಡಿಸುತ್ತಿತ್ತು. ಇವನ ಇಂಗ್ಲಿಶ್ ’ಪ್ರೀತಿ’, ಮನೆಗೂ ಹಬ್ಬಿತ್ತು. ಮೂರು ಅಥವಾ ನಾಲ್ಕನೇ ತರಗತಿಯವರೆಗೂ ಮಾತ್ರ ಓದಿ, ಕ್ಯಾಂಟೀನ್ ಒಂದರಲ್ಲಿ ಬದುಕು ಕಾಣುತ್ತಿದ್ದ ಸಮೀಉಲ್ಲಾನ ಅಣ್ಣನ ಮೇಲೂ ಇದರ ಪ್ರಭಾವವಾಗಿತ್ತು. ಅವನು ಕೆಲಸದಲ್ಲಿದ್ದ ಕ್ಯಾಂಟೀನ್ ಗೆ ಹೊಸ ಬೋರ್ಡ್ ಬರೆಸಿದ್ದರು. ಕನ್ನಡ ಮತ್ತು ಇಂಗ್ಲಿಶ್ ಎರಡರಲ್ಲೂ ಕ್ಯಾಂಟೀನ್ ಹೆಸರಿತ್ತು. ಚೀಟಿಯೊಂದರಲ್ಲಿ ಅವನ ಕ್ಯಾಂಟೀನ್ ನ ಇಂಗ್ಲಿಶ್ ಹೆಸರನ್ನು ’ಕೊಂಕಣ ಸುತ್ತಿ ಮೈಲಾರ’ದ ವರೆಗೂ ಬರೆದುಕೊಂಡು ಬಂದು ’ಸರಿಯಾಗಿದೆಯಾ?’ ಎಂದು ಗಹಗಹಿಸಿ ನಗುತ್ತಾ ಕೇಳಿದ್ದ :-). ಮಾರನೇ ದಿನ ಅಣ್ಣನ ಅಕ್ಷರಗಳಿದ್ದ ಆ ಚೀಟಿಯನ್ನು ನನಗೆ ತೋರಿಸುತ್ತಾ ಸಮೀಉಲ್ಲಾ ಸಂಭ್ರಮಿಸಿದ್ದನ್ನು ನನಗೆ ಮರೆಯಲಾಗಿಲ್ಲ. ಮುಗ್ಧ, ನೇರ ಸ್ವಭಾವದಿಂದ ಸಮೀಉಲ್ಲಾ ಬಹಳ ಆತ್ಮೀಯನಾಗಿಬಿಟ್ಟ.

    ಪರೀಕ್ಷೆಗಳು ಮುಗಿದವು. ಫಲಿತಾಂಶಕ್ಕೆ ಮುನ್ನವೇ ನಮ್ಮ ಕುಟುಂಬ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ಫಲಿತಾಂಶ ಬಂದ ನಂತರ ಮಾರ್ಕ್ಸ್ ಕಾರ್ಡ್ ತರಲು ಗೌರೀಬಿದನೂರಿಗೆ ಹೋದೆ. ಕಾಲೇಜಿನ ಗೇಟಿನಲ್ಲೇ ಸಮೀಉಲ್ಲಾ, ಬಸವರಾಜು ಸಿಕ್ಕರು. ’ರಾಘ್ವ, ಇಂಗ್ಲಿಶ್ ನಲ್ಲಿ ಸಿಕ್ಸ್ಟೀ ಥ್ರೀ (೬೩) ಕಣೋ’ ಎಂದು ನನ್ನ ಹೆಗಲಮೇಲೆ ಕೈ ಹಾಕಿದ ಸಮೀಉಲ್ಲಾ, ಒಲಂಪಿಕ್ ಪದಕ ಗೆದ್ದವರಂತೆ ಸಂಭ್ರಮಿಸಿದ. ಒಟ್ಟಾರೆ ೫೪-೫೫ ಶೇಕಡಾ ಬಂದಿದ್ದಾರೂ, ಇಂಗ್ಲಿಶ್ ನಲ್ಲಿ ಬಂದ ಆ ’ಸಿಕ್ಸ್ಟೀಥ್ರೀ’ ಅವನಿಗೆ ರೋಮಾಂಚನ ಮಾಡಿಸಿತ್ತು. ಇಬ್ಬರನ್ನೂ ಹಾರ್ದಿಕವಾಗಿ ಅಭಿನಂದಿಸಿದೆ. ಡೊನೇಷನ್ ಕೊಟ್ಟಾದರೂ ಬಸವರಾಜನನ್ನು ಬಿ.ಇ. ಸೇರಿಸಲು ತಂದೆ ಆಗಾಗಲೇ ಸಿದ್ಧತೆ (ಬಸವರಾಜನ ಪ್ರಕಾರ ’ಷಡ್ಯಂತ್ರ’ 🙂 ) ನಡೆಸಿದ್ದರು. ಒಂದೆರೆಡು ತಿಂಗಳಿಗೊಮ್ಮೆಯಾದರೂ ಭೇಟಿಯಾಗುತ್ತಿರಬೇಕೆಂದು ಹಾರ್ದಿಕವಾಗಿ ಬೀಳ್ಕೊಂಡೆವು.

    ಕಂಪ್ಯೂಟರ್ ಹಾವಳಿ ಇನ್ನೂ ಆರಂಭವೇ ಇರಲಿಲ್ಲ. ಕಾಗದ-ಪತ್ರ ಬರೆಯುವ ಹವ್ಯಾಸ ಯಾರಲ್ಲೂ ಇರಲಿಲ್ಲ. ನಾನು ಬೆಂಗಳೂರು ಜೀವನಕ್ಕೆ ಸಂಪೂರ್ಣ ಹೊಂದಿಕೊಂಡೆ. ಗೌರೀಬಿದನೂರಿನ ಗುಂಗು ಸುಲಭಕ್ಕೆ ಬಿಡುವಂತಹದಲ್ಲ. ಒಂದು ವರ್ಷ ಕಳೆಯಿತು. ಆಪ್ತರೊಬ್ಬರ ಮದುವೆಗೆ ಗೌರೀಬಿದನೂರಿನಿಂದ ಆಹ್ವಾನ ಬಂದಾಗ ತಕ್ಷಣ ಒಪ್ಪಿದೆ. ಹಳೆಯ ಗ್ಯಾಂಗ್ ಒಮ್ಮೆ ಸೇರಬೇಕೆಂಬ ಮಹದಾಸೆಯಿಂದ. ಪ್ರಭಾಕರ-ಸಮೀಉಲ್ಲಾ ಬಿ.ಎಸ್ಸಿ ಸೇರಿರಬಹುದು. ಬಸವರಾಜ ತನ್ನ ತಂದೆಯ ’ಷಡ್ಯಂತ್ರ’ಕ್ಕೆ ಸಿಕ್ಕಿ ಬಿ.ಇ. ಸೇರಿರಬಹುದು ಎಂದೆಲ್ಲಾ ಲೆಕ್ಕಾಚಾರ ಮಾಡಿ ಗೌರೀಬಿದನೂರು ಸೇರಿದೆ.

    ಅಚ್ಚರಿಯಾಗುವಂತೆ ಬಸವರಾಜನೇ ಸಿಕ್ಕ. ವರನ ಕುಟುಂಬದವರೊಡನೆ ಅವನದ್ದು ಹಳೆಯ ಪರಿಚಯವಂತೆ. ಮಾತು ಅಪ್ರಯತ್ನಪೂರ್ವಕವಾಗಿ ಸಮೀಉಲ್ಲಾ ಕಡೆ ತಿರುಗಿತು. ’ಬಿ.ಎಸ್ಸಿ ಸೇರಿದನಾ…ಊಟದ ಸಮಯದಲ್ಲಿ ಹೋಗಿ ನೋಡೊಣ’ ಎಂದೆ. ಬಸವರಾಜ ಒಂದು ಕ್ಷಣ ಮೌನವಾದ. ’ಏನಾಯಿತು?’ ಕುತೂಹಲ ತಡೆಯಲಾರದೇ ಕೇಳಿದೆ:
    “ಸಮೀಉಲ್ಲಾ ಕುಟುಂಬ ಗೌರೀಬಿದನೂರು ಬಿಟ್ಟು ಹೊರಟುಹೋದರು”..ಬಸವರಾಜ ಹೇಳುತ್ತಾ ಹೋದಂತೆ ನಾನು ನಿಶ್ಚಲನಾದೆ. ಬಾಲ್ಯದಿಂದಲೂ ಆರೋಗ್ಯವಿರದ ಸಮೀಉಲ್ಲಾನ ಅಣ್ಣ ತೀರಿಕೊಂಡಿದ್ದ. ಕ್ಯಾಂಟೀನ್ ಚಾಕರಿ ಮುಗಿಸಿ ಮನೆಗೆ ರಾತ್ರಿ ಮರಳುತ್ತಿದ್ದಾಗ ರಸ್ತೆಯಲ್ಲೆಲ್ಲೋ ಕುಸಿದುಬಿದ್ದವ ಮತ್ತೆ ಮೇಲೇಳಲೇ ಇಲ್ಲ. ತನ್ನ ಅಲ್ಪ-ಸ್ವಲ್ಪ ಸಂಪಾದನೆಯನ್ನು ನಿಸ್ಪೃಹವಾಗಿ ಮನೆಗೆ ಕೊಡುತ್ತಿದ್ದ ಅಣ್ಣನ ಆಸರೆಯಿಂದ ಸಂಸಾರ ವಂಚಿತವಾಗಿತ್ತು. ತಾಯಿಗೂ ಕೆಲಸ ಹೋಗಿತ್ತು. ದೂರದ ಬಂಧುವೊಬ್ಬರಾರೋ ತಮ್ಮ ವರ್ಕ್ ಶಾಪ್ ನಲ್ಲಿ ಕೆಲಸಕೊಡಿಸಿದ್ದರಿಂದ, ಎರಡು ಮಾತಾಡದೇ ಸಮೀಉಲ್ಲಾ ಸಂಸಾರದ ನೊಗ ಹೊತ್ತ. ಪೆನುಕೊಂಡ ಬಳಿಯೆಲ್ಲೋ ಇಡೀ ಸಂಸಾರ ಹೊರಟು ಹೋಯಿತು. ಕೇಳುತ್ತಾ ಬಾಯಿ ಕಟ್ಟಿಹೋಗಿತ್ತು. ತನ್ನ ಹಳೆಯ ಸೈಕಲ್ ನ ಕ್ಯಾರಿಯರ್ ನಲ್ಲಿ ಪ್ರಾಕ್ಟಿಕಲ್ ರೆಕಾರ್ಡ್ ಜೊತೆ ಒಂದಷ್ಟು ನೋಟ್ ಪುಸ್ತಕ ಹೇರಿಕೊಂಡು, ಹಲವು ಬಾರಿ ಅನವಶ್ಯಕವಾಗಿ ಬೆಲ್ ಟ್ರಿಂಗಣಿಸುತ್ತಾ, ಹಿಂದೂಪುರ ರಸ್ತೆಯಲ್ಲಿ ’ಗಡಾರಿ’ ತುಳಿಯುತ್ತಾ ಕಾಲೇಜಿಗೆ ಬರುತ್ತಿದ್ದ ಸಮೀಉಲ್ಲಾ, ಮತ್ತೆ ಸಿಗದಾದ. ಅಣ್ಣನ ಅಕ್ಷರಗಳನ್ನು ತೋರಿಸಿ ಭಾವಪರವಶನಾಗಿದ್ದ ಸಮೀಉಲ್ಲಾನ ಅಸ್ಪಷ್ಟ ಮುಖ ಆಗಾಗ ಕಣ್ಣಮುಂದೆ ಬರುತ್ತದೆ. ಆದರೆ, ’ಇಂಗ್ಲಿಶ್ ನಲ್ಲಿ ಸಿಕ್ಸ್ಟೀಥ್ರೀ ಕಣೋ’ ಎಂದು ಸಂಭ್ರಮಿಸಿದ ಆ ಧ್ವನಿ ಸ್ಪಷ್ಟವಾಗಿ ಕೇಳುತ್ತಿರುತ್ತದೆ.

    ಭಾವನಾತ್ಮಕ ಎನಿಸುವ ಅಂಶಗಳನ್ನು ಬದಿಗಿರಿಸಿ ಇಲ್ಲಿ ನಡೆದ ಘಟನೆಗಳತ್ತ ಒಮ್ಮೆ ನೋಡೊಣ. ಶ್ರೇಷ್ಟತೆಯ ವ್ಯಸನ, ಅತಿಕರ್ಮಠತೆ ಗಳು ಒಂದು ಭಾಷೆಯನ್ನು ಜನಸಾಮಾನ್ಯರಿಂದ ದೂರವೊಯ್ಯುವ ಪರಿ ಆತಂಕಕಾರಿ.() ಇಲ್ಲಿ ಕದರಪ್ಪ, ಬಿಜಿಎಮ್, ರಮೇಶ್ ತರದ ಮೇಷ್ಟ್ರುಗಳು ನಿರ್ವಂಚನೆಯಿಂದ ಕಲಿಸುವ ಕಾಯಕವೇ ಒಂದು ಸ್ಪರ್ಶವಾಗಬಹುದು. ಜನಸಾಮಾನ್ಯ-ಇಂಗ್ಲಿಶ್ ನಡುವಿನ ಅದೃಶ್ಯ ಬಾಗಿಲೊಂದು ತೆರೆಯಲು ಬೇಕಿರುವುದು ಇಂತಹ ಪ್ರೀತಿಯ ಸ್ಪರ್ಶ. ತನ್ನದಲ್ಲ ಎಂದು ತಿಳಿದಿದ್ದ ಇಂಗ್ಲಿಶ್ ಗೆ ಸಮೀಉಲ್ಲಾ ನೀಡಿದ್ದು ಈ ಪ್ರೀತಿಯ ಸ್ಪರ್ಶ. ಶಿಕ್ಷಣದ ಕೊರತೆಯಿದ್ದ ಮನೆಯ ವಾತಾವರಣದೊಳಗೆ ಇಂಗ್ಲಿಶ್ ಅನ್ನು ಅಣ್ಣನ ವರೆಗೆ ತಲುಪಿಸಿದ್ದೂ ಇದೇ ಪ್ರೀತಿಯ ಸ್ಪರ್ಶ. ನಿಘಂಟು ತೆರೆಯುತ್ತಿದ್ದಂತೆಯೇ, ಇಂಗ್ಲಿಶ್ ನ ಬಾಗಿಲೂ ತೆರೆಯಿತು. ಅವ ಇನ್ನೂ ದೂರ ಕ್ರಮಿಸಲಾಗಲಿಲ್ಲ.

    ಶಶಿಕುಮಾರ್ ಗುರುತಿಸುವ ದಲಿತ ತಾರತಮ್ಯದಂತೆಯೇ, ಭಾಷೆಯ ವಿಚಾರದಲ್ಲಿಯೂ ಪಟ್ಟಣ-ಹಳ್ಳಿಗಳ ನಡುವೆ ಇಂತಹ ಕೀಳು ಭಾವನೆಗಳಿವೆ. ಇವು ಗೋಡೆಗಳಂತೆ ಪ್ರತ್ಯೇಕತೆಯನ್ನು ಹೇರುತ್ತವೆ. ರಮಣಿಯ ಸೋದರನ ಅರಚಾಟದಲ್ಲಿ ಅವನ ಹುಂಬತನ ಅನಾವರಣಗೊಂಡರೂ, ಅದರ ಮೂಲದಲ್ಲಿರುವುದು ಶ್ರೇಷ್ಟತೆಯ ವ್ಯಸನವೇ. ತಾರತಮ್ಯದ ಭಾವವೇ. ’ಇಂಗ್ಲಿಶ್ ಪಟ್ಟಣದ ಸ್ವತ್ತು..ಅಥವಾ ’ಆರ್ಟ್ಸ್’ನವರ ಸ್ವತ್ತು’ ಎಂಬ ಅಪ್ರಬುದ್ಧ ಅನಿಸಿಕೆಯೇ ಬಾಗಿಲನ್ನು ಮುಚ್ಚಿಬಿಡುತ್ತದೆ. ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ವಿದ್ಯಾರ್ಥಿಯೊಬ್ಬ ಸಂಕೋಚಿಸುತ್ತಲೇ ತೋರುವ ದಿಟ್ಟತನದಲ್ಲಿ ಅಂತರ್ಗಾಮಿಯಾಗಿರುವ ಮುಗ್ಧತೆಯನ್ನು ಗುರುತಿಸುವ ಸೂಕ್ಷ್ಮತೆ, ’ಓದಿ’ನಿಂದ ಮಾತ್ರ ಬೆಳೆಯುತ್ತದೆ..ನಿಜ..ಓದುವುದೆಂದರೆ ಸ್ಪರ್ಶಿಸಿದಂತೆ. ಇಂಗ್ಲಿಶ್ ಪ್ರತಿಷ್ಟೆ-ಹಮ್ಮಿನ ಸಂಕೇತವಾಗಿಯೇ ಹೆಚ್ಚು ಗ್ರಹಿಸಲ್ಪಟ್ಟಿತು(ದೆ). ಆ ತಪ್ಪು ಗ್ರಹಿಕೆ, ಠೇಂಕಾರದ ದನಿಯಲ್ಲಿ ವ್ಯಕ್ತಗೊಳ್ಳಲಾರಂಭಿಸಿದಾಗ, ಸಂಪರ್ಕ ಭಾಷೆ ಇಂಗ್ಲಿಶ್, ಪರಕೀಯಗೊಳ್ಳುತ್ತಾ ಸಾಗಿತು(/ಸಾಗುತ್ತದೆ). ಆ ಪರಕೀಯತೆಯನ್ನು ಮೆಟ್ಟಿಮುರಿಯುವ ಸವಾಲು ಸ್ವೀಕರಿಸಿದವರಿಗೆ ಇಂಗ್ಲಿಶ್ ಒಲಿದಿದೆ.

    ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದ ಬರಹಕ್ಕಾಗಿ ಶಶಿಕುಮಾರ್, ಕವನ ಸಂಕಲನದ ಅನುವಾದಕ ಸಂವರ್ತರಿಗೆ ಧನ್ಯವಾದಗಳು.

ಪ್ರತಿಕ್ರಿಯಿಸಿ