ಕೊರೋನಾ ಕಾಲದಲ್ಲಿ ಗ್ರಾಮೀಣ ಬದುಕು : ಮಳವಳ್ಳಿ

ಕೊರೊನಾ ಕಾಲದಲ್ಲಿನ ಗ್ರಾಮಿಣ ಬದುಕಿನ ಚಿತ್ರಗಳನ್ನ ಋತುಮಾನಕ್ಕಾಗಿ ಎ.ಆರ್.ವಾಸವಿ ಮತ್ತು ಕೆ.ಪಿ ಸುರೇಶ ಸಂಪಾದಿಸಿ ಕೊಟ್ಟಿದ್ದಾರೆ.ಇಂತಹ ನಾಡಿನ ಹತ್ತು ವಿವಿಧ ಹಳ್ಳಿಯ ಚಿತ್ರಗಳು ದಿನಕ್ಕೊಂದರಂತೆ ಕೊರೊನಾ ಕಾಲದಲ್ಲಿ ಗ್ರಾಮಿಣ ಬದುಕು ಅನ್ನುವ ಶೀರ್ಷಿಕೆಯಲ್ಲಿ ಋತುಮಾನದಲ್ಲಿ ಪ್ರಕಟವಾಗುತ್ತಿದೆ

ಲಾಕ್ ಡೌನ್ ನಿಂದಾಗ ಪರಿಣಾಮಗಳ ಕುರಿತಾಗಿ ವಿವರಕ್ಕಾಗಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಬ್ಬರು ಸಾಮಾನ್ಯ ರೈತರನ್ನು ( ಹನುಮೇಗೌಡ & ಸ್ವಾಮಿ) ಮಾತಾಡಿಸಿದಾಗ ಸಿಕ್ಕ ವಿಚಾರಗಳಿವು .

ಏಕಾಏಕಿ ಜಾರಿಗೆ ತಂದ ಲಾಕ್ ಡೌನ್ ವ್ಯವಸ್ಥೆಯಿಂದ ಗ್ರಾಮೀಣ ಭಾಗದ ಜನರಿಗೆ ಸರಕಿನ ಅಭಾವ, ಸಾರಿಗೆಯ ಅವ್ಯವಸ್ಥೆ. ಕೃಷಿ ಮಾರುಕಟ್ಟೆ ಕುಸಿತ, ಹೈನುಗಾರಿಕೆ, ರೇಷ್ಮೆ ಮತ್ತು ಮೀನುಗಾರಿಕೆ ಸೇರಿದಂತೆ ಕೃಷಿ ಮತ್ತು ಉಪಕಸುಬುಗಳ ಮೇಲೆ ಮತ್ತು ಅವುಗಳ ಮಾರಾಟದ ಮೇಲೆ ತೀರ ವ್ಯತಿರಿಕ್ತವಾದ ಪರಿಣಾಮವನ್ನುಂಟು ಮಾಡಿದೆ.

ಸರಕಿನ ಅಭಾವ : ತಳಗವಾದಿ ಗ್ರಾಮದಲ್ಲಿ ದಿನಸಿ ಅಂಗಡಿಗಳು ಇವೆ. ಸಾಕಷ್ಟು ಪೂರೈಕೆಯು ಸದ್ಯದವರೆಗೆ ಇದೆ. ಆದರೆ ದರಗಳು ದಿನದಿಂದ ದಿನಕ್ಕೆ ಏರುತ್ತಿದ್ದು  ಮುಂದಕ್ಕೆ ಸರಕಿನ ದಾಸ್ತಾನು ಕೊರತೆಯ ಆಗಬಹುದಾಗಿದೆ.. ಹೊಸ ರಾಜ್ಯಗಳಿಂದ ಬರಬೇಕಾದ ಹಲವು ಸಿದ್ದ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ಸಾಂಬಾರ ಪದಾರ್ಥಗಳು ಸಿಗದೇ ಲಭ್ಯವಿರುವ ಸರಕಿನ ಬೆಲೆಯು ದುಪ್ಪಟ್ಟು ಆಗುತ್ತಿದೆ. ಉದಾ : ಬಟ್ಟೆ ಸೋಪುಗಳು ಹೆಚ್ಚು ತಮಿಳುನಾಡಿನಿಂದ ನಮ್ಮಲ್ಲಿಗೆ ಬರುತ್ತವೆ. ಈಗ ಅಂತರಾಜ್ಯ ಸರಕು ಸಾಗಣೆ ವಾಹನಗಳು ಕಡಿಮೆಯಾಗಿರುವುದರಿಂದ ಮತ್ತು ಅಲ್ಲಿನ ಕೈಗಾರಿಕೆಗಳು ಕೂಡ ಮುಚ್ಚಿರುವುದರಿಂದ ಅವುಗಳ ಲಭ್ಯತೆ ಇಲ್ಲ. ಹಾಗೆಯೆ ಬೇಳೆ, ಕಾಳುಗಳು, ತರಕಾರಿ, ಸಿದ್ದ ಆಹಾರ ಪದಾರ್ಥಗಳು – ಇರುವ ಸರಕು ಖಾಲಿಯಾದಂತೆಲ್ಲ ಬೇಡಿಕೆ ಹೆಚ್ಚಿ ದುಪ್ಪಟ್ಟು ಬೆಲೆಯಾಗುತ್ತಿವೆ.

ಕೋಳಿ,ಮೀನು ಮತ್ತು ಮಾಂಸ ಮಾರಾಟಗಾರರು ಸಹ ವೈರಸ್ ಭೀತಿಯಿಂದ ಅಪಾರ ಪ್ರಮಾಣದ ನಷ್ಟ ಅನುಭವಿಸುತ್ತಿದ್ದಾರೆ. ಫಾರ್ಮ್ ಗಳಲ್ಲಿದ್ದ ಕೋಳಿಗಳನ್ನು ಜೀವಂತ ಹೂತಿದ್ದಾರೆ, ಕೆಲವರು ಸಿಕ್ಕ ಬೆಲೆಗೆ ಮಾರಿ ಕೈ ತೊಳೆದುಕೊಂಡಿದ್ದಾರೆ. ಕೆರೆಗಳಲ್ಲಿ ಹಿಡಿಯಬೇಕಾದ ಮೀನುಗಳನ್ನ ಹಾಗೆ ಬಿಡಲಾಗಿದೆ. ವದಂತಿಗಳ ಹಿನ್ನೆಲೆಯಲ್ಲಿ ಸರಬರಾಜು, ಮಾರಾಟ ಎಲ್ಲವು ಅಯೋಮಯವಾಗಿವೆ.

ಹೈನುಗಾರಿಕೆ : ಮಂಡ್ಯ ಬಹುತೇಕ ರೈತರ ಕೃಷಿ ಜೊತೆಗಿನ ಉಪಕಸುಬು ಹೈನುಗಾರಿಕೆ. ಲಾಕ್ ಡೌನ್ ಸಮಸ್ಯೆಯಿಂದ ಹಸುಗಳಿಗೆ ಕೊಡಬೇಕಾದ ಸಿದ್ದ ಆಹಾರ ( ವಿವಿಧ ರೀತಿಯ ಹಿಂಡಿ, ಬೂಸ  ಮೊದಲಾದ ಫೀಡ್ಸ್ ) ಸರಿಯಾಗಿ ದೊರಕುತ್ತಿಲ್ಲ, ಹಲವೆಡೆ ದಾಸ್ತಾನು ಇಲ್ಲ ಮತ್ತು ಅತಿಯಾದ ದರ ಏರಿಕೆ ಜನರನ್ನು ಬಾಧಿಸುತ್ತಿದೆ. ಫೀಡ್ಸ್ ಕೊಡದೇ ಬರಿ ಒಣ/ಹಸಿ ಹುಲ್ಲು ಕೊಟ್ಟರೆ ಕರೆವ ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ. ನಗರ ಪ್ರದೇಶದ ಸುತ್ತಮುತ್ತಲ ಹಳ್ಳಿಗಳಲ್ಲಿ ಹುಲ್ಲು ತರಲು ಆಚೆ ಹೋಗುವುದು ಕಷ್ಟವಾಗಿದೆ. ಇದಿಷ್ಟು ಒಂದು ತರಹದ ಕಷ್ಟವಾದರೆ ಈಗ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಲನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿವೆ. ಕಾರಣ ಹಲವರು ಡೈರಿಗಳು ಮತ್ತು ಅವುಗಳ ಮಾರಾಟ ಮಳಿಗೆಗಳು ಲಕ್ ಡೌನ್ ಕಾರಣದಿಂದ ಸರಿಯಾದ ಬೇಡಿಕೆ ಇಲ್ಲದೆ ನಷ್ಟ ಅನುಭವಿಸುತ್ತಿವೆ. ತಳಗವಾದಿ ಗ್ರಾಮದಲ್ಲಿ ಸ್ಥಳೀಯ ಹಾಲು ಉತ್ಪಾದಕರ ಸಂಘ ಮತ್ತು ಪಶು ಆಹಾರ ಮಾರಾಟ ಕೇಂದ್ರಗಳು ಇವೆ.

ರೇಷ್ಮೆ :    ಜಿಲ್ಲೆಯಲ್ಲಿ ರೇಷ್ಮೆ ಬೆಳೆಗಾರರ ಸಂಖ್ಯೆ ಕೂಡ ಬಹಳ ದೊಡ್ಡದಾಗಿದೆ. ಲಾಕ್ ಡೌನ್  ಸಮಯಕ್ಕೆ ಸರಿಯಾಗಿ ಬಿಡಿಸಿದ ರೇಷ್ಮೆ ಗೂಡುಗಳು ಮತ್ತು ಈಗಲೂ ಬಿಡಿಸುತ್ತಿರುವ ಗೂಡುಗಳು ಊರೂರುಗಳಲ್ಲಿ  ಇದ್ದಾವೆ. ಮೊದಮೊದಲಿಗೆ ರೇಷ್ಮೆ ಗೂಡು ಮಾರುಕಟ್ಟೆ ಕೂಡ ಬಂದ್ ಆಗಿತ್ತು. ಇಚೆಗೆ ಸರ್ಕಾರದ ಆದೇಶದನ್ವಯ ತೆರೆಯಲಾಗಿದೆ. ಆದರೆ ದರ ಬಹುತೇಕ ಬಿದ್ದುಹೋಗಿದೆ.  ಕೆಜಿಗೆ ೪೦೦+ ಇದ್ದ ದರವು ಕೆಜಿಗೆ ೧೮೦ -೨೦೦ + ಗೆ ಬಂದು ನಿಂತಿದೆ.  ರೇಷ್ಮೆ ನೂಲುವ ಕೈಗಾರಿಕೆಗಳು ಕೂಡ ವಹಿವಾಟು ಇಲ್ಲದೆ ನಿಂತಿವೆ. ಬೆಳೆದವರು ಕಂಗಾಲಾಗಿದ್ದಾರೆ. ರೇಷ್ಮೆ ಬೆಳೆಗಾರರಿಗೆ ಸಂಪೂರ್ಣ ನಷ್ಟವಾಗಿದೆ.  ವೈರಸ್ ಭೀತಿಯಿಂದ ಹಲವು ಕಡೆ ವ್ಯಾಪಾರಸ್ತರು ಕೂಡ ಜನರೊಡನೆ ವಹಿವಾಟಿಗೆ ಮುಂದಾಗುತ್ತಿಲ್ಲ.  ಮಳವಳ್ಳಿಯಲ್ಲಿ ಒಂದು ಕಿರು ಮಾರುಕಟ್ಟೆ ಇದೆ. ಆದರೆ ಸಮೀಪದಲ್ಲಿರುವ ಕೊಳ್ಳೇಗಾಲದ ರೇಷ್ಮೆ ಗೂಡು ಮಾರುಕಟ್ಟೆಯೇ ದೊಡ್ಡದು.

ತೋಟಗಾರಿಕೆ ಮತ್ತು ತರಕಾರಿ :

ಕೃಷಿ ಅತಿ ಹೆಚ್ಚು ನಷ್ಟಕ್ಕೆ ಒಳಗಾಗುತ್ತಿರುವವರು ತೋಟಗಾರಿಕೆ ಮತ್ತು ತರಕಾರಿ ಬೆಳೆಗಾರರು. ಇವು ತುಂಬಾ ಅಲ್ಪಾವಧಿಯ ಬೆಳೆಗಳಾಗಿದ್ದು ಕಟಾವಿಗೆ ಬಂದಿರುವಾಗ ಲಾಕ್ ಡೌನ್ ಎದುರಾಗಿದೆ. ಮಾರಲು ಮಾರುಕಟ್ಟೆ ಇಲ್ಲ. ಅವಕಾಶವಿರುವ ಮಾರುಕಟ್ಟೆಗೆ ಸಾಗಿಸಲು ಸಾರಿಗೆ ಇಲ್ಲ, ಕಡೆಗೆ ಸಾಗಿಸುವ ಹೊತ್ತಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ದರವಿಲ್ಲ. ( ಆದರೆ  ಗ್ರಾಹಕರಿಗೆ ಮಾರುವ ದರ ದಿನೇದಿನೇ ಹೆಚ್ಚುತ್ತಲೇ ಇದೆ) ಇದರ ಜೊತೆಗೆ ಕಟಾವು ಮಾಡಲು ಜನರು ಸಿಗುತ್ತಿಲ್ಲ  ಹಾಗಾಗಿ ಹಲವರು ಬಗೆಯ ತರಕಾರಿ ಸೊಪ್ಪು ಹಣ್ಣುಗಳು ಕಟಾವು ಮಾಡದೇ ತೋಟ ಗದ್ದೆಗಳಲ್ಲಿಯೇ ಕೊಳೆಯುತ್ತಿವೆ, ಇವನ್ನೇ ನಂಬಿದ ಕುಟುಂಬಗಳು ನಷ್ಟ ಹೊಂದುತ್ತಿವೆ.

ಹೊಸದಾಗಿ ಬೆಳೆಯಲು ಬೀಜ, ಗೊಬ್ಬರ, ಕೀಟನಾಶಕ ಮೊದಲಾದುವು ಸದ್ಯಕ್ಕೆ ಲಭ್ಯವಿಲ್ಲ. ಲಾಕ್ ಡೌನ್ ತೆರೆವಾಗುವವರೆಗೂ ಕಾಯಬೇಕು. ದುಡಿಯಬಹುದಾದ ಗಳಿಸಬಹುದಾದ ಹೊತ್ತನ್ನು, ಯಾವುದೇ ಗಳಿಕೆಯಿಲ್ಲದೇ ಶೂನ್ಯವಾಗಿ ಕಳೆಯಬೇಕಿದೆ. ಇಲ್ಲಿನ ರೈತರು ಉದ್ದದ ಬೀನ್ಸ್, ಟೊಮೋಟೋ, ಮೂಲಂಗಿ  ಸೇರಿದನಂತೆ ಕೆಲವು ತರಕಾರಿ ಬೆಳೆಯುತ್ತಾರೆ . ಇದೇ ರೀತಿ ಹೂವಿನ ಬೆಳೆಗಾರರು ಕೂಡ ಹೂವನ್ನು ಮಾರಲಾಗದೇ ನಷ್ಟಕ್ಕೆ ಒಳಗಾಗಿದ್ದಾರೆ.  ಇಲ್ಲಿ ಚೆಂಡು ಹೂವು ಮತ್ತು ಸೇವಂತಿಗೆ ಹೆಚ್ಚು ಬೆಳೆವ ಹೂಗಳು.

ಭತ್ತ, ರಾಗಿ, ಕಬ್ಬು ಬೆಳೆಗಳಿಗೆ ಅಂತಃ ಹಾನಿ ಆಗಿಲ್ಲದಿದ್ದರೂ ಅವರೆಲ್ಲರೂ ಬಹುತೇಕ ಸಣ್ಣ ಸಣ್ಣ ಹಿಡುವಳಿದಾರರು ಮತ್ತು ಈ ಮೇಲೆ ಹೇಳಿದ ಉಪಕಸುಬುಗಳನ್ನು ದಿನನಿತ್ಯದ ಬದುಕಿನ ಖರ್ಚುಗಳಿಗೆ ನಂಬಿಕೊಂಡಿದ್ದವರು. ಇದೀಗ ಅವರ ದಿನನಿತ್ಯದ ಬದುಕು ಖಾಲಿ ಕಿಸೆಯಿಂದ ನಡೆಯಬೇಕಿದೆ!

ಕೃಷಿ ಕಾರ್ಮಿಕರು : ಯಾವುದೇ ಸ್ವತಹ ಕೃಷಿ ಇಲ್ಲದ ಬರಿಯ ಕೃಷಿ ಕೂಲಿ, ನಗರದ ಕೂಲಿ ಕೆಲಸಗಳಲ್ಲಿ ನಿರತರಾಗಿದ್ದ ಇವರಿಗೆ ಯಾವ ಆದಾಯವೂ ಇಲ್ಲ, ಯಾವ ಉಳಿತಾಯವೂ ಇಲ್ಲ. ನಗರದ ವಲಸೆ ಕಾರ್ಮಿಕರ ಬಗ್ಗೆ ಬೇಕಾದಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಆದರೆ ವಲಸೆಹೋಗಲು ಸಾಧ್ಯವಾಗದೇ ಆಯಾ ಹಳ್ಳಿಗಳಲ್ಲೇ ಉಳಿದುಕೊಂಡವರಿದ್ದಾರೆ. ಅವರಿಗೆ ಬಹುತೇಕ ಸರ್ಕಾರದ ಪಡಿತರ ಸಿಕ್ಕಿದೆ. ನಗರಕ್ಕೆ ವಲಸೆ ಹೋಗಿದ್ದವರು ಈಗ ವಾಪಸು ಬಂದಿದ್ದಾರೆ. ಸದ್ಯಕ್ಕೆ ತೀವ್ರವಾದ ಪರಿಣಾಮಗಳು ಗೋಚರಿಸುತ್ತಿಲ್ಲ. ಆದರೆ ಎಲ್ಲರಿಗು ಮುಂದೆ ಏನು ಎಂಬ ಪ್ರಶ್ನೆ ದೊಡ್ಡದಾಗಿದೆ.

ಹಣದ ಚಲಾವಣೆ :   ಸಾಮಾನ್ಯ ಜನರಿಗೆ ಸಿಗುತ್ತಿದ್ದ ಹಣವು ಕೂಡ ಲಾಕ್ ಡೌನ್ ನಿಂದ ವಿಪರಿತ ಇಕ್ಕಟ್ಟಿಗೆ ಸಿಲುಕಿಕೊಂಡಿದೆ. ಜನರಲ್ಲಿ ಸಾವಕಾಶದ  ಹಣದ ಹರಿವು ಸಾಧ್ಯವಾಗುತ್ತಿಲ್ಲ. ಏಕಾಏಕಿ ಲಾಕ್ ಡೌನ್ ಆದ ಪರಿಣಾಮ ಬಹುತೇಕ ಕೆಳ ಮಧ್ಯಮ ವರ್ಗವು ಬರಿ ಕೈನದ್ದಾಗಿದೆ. ಸುಲಭಕ್ಕೆ ಕೈಸಾಲ, ಮುಂಗಡ, ಸಂಬಳಗಳು ಜನಕ್ಕೆ ಸಿಗುತ್ತಿಲ್ಲ. ತಳಗವಾದಿ ಗ್ರಾಮದಲ್ಲಿ ಕೆನರಾ ಬ್ಯಾಂಕಿನ ಶಾಖೆ ಇದೆ. ಲಾಕ್ ಡೌನ್ ಸಮಯದಲ್ಲೂ ಅದು ಕಾರ್ಯ ನಿವರ್ಹಿಸುತ್ತಿದೆ. ಇಲ್ಲಿ ಉಳಿತಾಯದ ಹಣ ಖಾತೆ ಇರುವವರು ವಹಿವಾಟು ನಡೆಸುತ್ತಿದ್ದಾರೆ. ಏಕಾಏಕಿ ಉಂಟಾದ ಲಾಕ್ ಡೌನ್ ಪರಿಣಾಮ ಬಹಳಷ್ಟು ಜನರಿಗೆ ಸಂಬಳ, ಪಾವತಿ ಇತ್ಯಾದಿಗಳು ಸಿಕಿಲ್ಲ. ಕ್ರಿಯಾಶೀಲವಾಗಿದ್ದ  ಸ್ವಸಹಾಯ ಸಂಘಗಳು ಕೂಡ  ಇಕ್ಕಟ್ಟಿಗೆ ಸಿಲುಕಿವೆ.

  • ರಾಜೇಂದ್ರ ಪ್ರಸಾದ್, ಕವಿ, ಮಂಡ್ಯ

ಪ್ರತಿಕ್ರಿಯಿಸಿ